ಜೋಗಿ ಬರೆದಿದ್ದಾರೆ: ಇಂಗ್ಲಿಷ್ ಗೀತೆಯ ಕನ್ನಡ ಮಾತೆ?

jogi22ಜೋಗಿ
ಸುಡುಬೇಸಗೆಯ ಇಳಿಸಂಜೆಯ ಹಾಗೆ, ಚಳಿಗಾಲದ ಎಳೆಬಿಸಿಲಿನ ಹಾಗೆ ಖುಷಿಕೊಡುವ ಸಾಹಿತ್ಯಪ್ರಕಾರ ಎಂದರೆ ಕಾವ್ಯ. ಈಗ ತುಂಬ ಜನಪ್ರಿಯವಾಗಿರುವ ಕಾದಂಬರಿ, ಸಣ್ಣಕತೆ, ಪ್ರಬಂಧದಂಥ ಪ್ರಕಾರಗಳು ಹುಟ್ಟಿಕೊಂಡದ್ದು ತೀರಾ ಇತ್ತೀಚೆಗೆಆರಂಭಿಕ ಸಾಹಿತ್ಯವನ್ನು ನೋಡಿದರೆ ಎಲ್ಲಾ ಭಾಷೆಯಲ್ಲೂ ಅದು ಕಾವ್ಯದ ರೂಪದಲ್ಲೇ ಇರುವುದನ್ನು ಕಾಣಬಹುದು. ನಮ್ಮಲ್ಲೂ ಆದಿಕವಿ ಪಂಪ, ನಂತರದ ಮಹಾಕವಿಗಳೆಲ್ಲ ಕಾವ್ಯವನ್ನೇ ಬರೆದರು. ಕಾವ್ಯದ ರೂಪದಲ್ಲೇ ಕತೆಯನ್ನೂ ಹೇಳಿದವರು.
ರಾಮಾಯಣ, ಮಹಾಭಾರತದಂಥ ಕಥನಗಳೂ ಕಾವ್ಯದ ರೂಪದಲ್ಲಿ ಏಕಿದ್ದವು ಎಂಬ ಪ್ರಶ್ನೆಗೆ ಉತ್ತರ ಸರಳವಾಗಿದೆ. ನಮ್ಮದು ಶ್ರುತಿ ಮತ್ತು ಸ್ಮೃತಿ ಸಂಸ್ಕೃತಿ. ಕೇಳಿ ಮನನ ಮಾಡಿಕೊಂಡು ನೆನಪಿಟ್ಟುಕೊಂಡು ಒಪ್ಪಿಸಬೇಕಾಗಿದ್ದ ಕಾಲ ಅದು. ಕೇಳಿ ನೆನಪಿಟ್ಟುಕೊಳ್ಳುವುದಕ್ಕೆ ಕಾವ್ಯದಷ್ಟು ಸುಲಭವಾದ ಪ್ರಕಾರ ಮತ್ತೊಂದಿಲ್ಲ. ಲಯಬದ್ಧವಾಗಿ, ರಾಗಬದ್ಧವಾಗಿ ಹಾಡಲ್ಪಟ್ಟದ್ದು ನೆನಪಿನಲ್ಲಿ ಉಳಿಯುವುದು ಸುಲಭ.
 
poetry1ಯಾರು ಅಂಕುಶವಿಟ್ಟರೂ ನನ್ನ ಮನಸ್ಸು ಬನವಾಸಿಯನ್ನು ನೆನೆಯುತ್ತದೆ ಎಂಬ ಸಾಲು ಓದಿದಾಗ ಅರ್ಥಪೂರ್ಣವಾಗಿಯೇ ಕೇಳಿಸುತ್ತದೆ. ಆದರೆ ಅದು ಕವಿಯ ಮಾತಾಗಲಾರದು. ಅದನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಬಹುದುಯಾರೇ ಅಂಕುಶ ಇಟ್ಟರೂ ಬನವಾಸಿಯನ್ನು ನನ್ನ ಮನಸ್ಸು ನೆನೆಯುತ್ತದೆ ಎಂದೋ ಯಾರೇ ಅಡ್ಡಿಪಡಿಸಿದರೂ ನಾನು ಬನವಾಸಿಯನ್ನು ಸ್ಮರಿಸುತ್ತೇನೆ ಎಂದರೂ ಅರ್ಥದಲ್ಲಿ ವ್ಯತ್ಯಾಸ ಆಗುವುದಿಲ್ಲ. ಆದರೆ ಅದು ಕವಿಯ ಮಾತಾಗಿ ಉಳಿಯುವುದಿಲ್ಲ.

ಹೇಳುವವನ ಹೇಳಿಕೆಯಾಗಷ್ಟೇ ನಮ್ಮನ್ನು ತಲುಪುತ್ತದೆ. ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ, ಬನವಾಸಿ ದೇಶಮಂ ಎಂದಾಗಲೇ ಅದು ಕವಿವಾಣಿ. ಅದನ್ನು ಬೇರೆ ರೀತಿಯಲ್ಲಿ ಹೇಳುವುದು ಕಷ್ಟ. ಹೀಗಾಗಿ ಅದಕ್ಕೊಂದು ಅನನ್ಯತೆ ಬರುತ್ತದೆ. ಅಂಥ ಅನನ್ಯತೆ ಬರಬೇಕಾದರೆ ಕಾವ್ಯದಲ್ಲೇ ಅದನ್ನು ಹೇಳಬೇಕು ಎಂಬುದನ್ನು ಸಂಸ್ಕೃತ ಮತ್ತು ಹಳೆಗನ್ನಡದ ಕವಿಗಳು ಅರ್ಥ ಮಾಡಿಕೊಂಡಿದ್ದರು.

ಯಾವುದೇ ಕಾವ್ಯವನ್ನು ತೆಗೆದುಕೊಂಡರೂ ಅರ್ಥ ಮತ್ತು ಭಾವಕ್ಕಿಂತ ಮುಖ್ಯವಾಗುವುದು ಕವಿಯ ಮಾತಲ್ಲೇ ಅದನ್ನು ಕೇಳುವ ಖುಷಿ. ಅದನ್ನು ಮೂಲಕ್ಕಿಂತ ಚೆನ್ನಾಗಿ ವಿಶ್ಲೇಷಿಸಬಲ್ಲ ಟೀಕಾಕಾರನೋ ಅರ್ಥಧಾರಿಯೋ ನಮಗೆ ಸಿಗಬಹುದು. ಆದರೆ ಅರ್ಥಸ್ಪುರಣ ಆಗುವುದು ಮೂಲಕಾವ್ಯದ ಸಾಲುಗಳಿಂದ ಎನ್ನುವುದನ್ನು ಮರೆಯುವಂತಿಲ್ಲ. ಉದಾಹರಣೆಗೆ ರಾಮಾಯಣದ ಬಾಲಕಾಂಡದಲ್ಲಿ ಬರುವ ಶ್ಲೋಕವನ್ನೇ ನೋಡು:
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ
ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಂ
ಶ್ಲೋಕ ಅರ್ಥವಾಗುವುದಿಲ್ಲ ಎಂದು ನೀನು ಹೇಳುತ್ತಿ ಎಂದು ನನಗೆ ಗೊತ್ತು. ಅದನ್ನು ಅನುವಾದಿಸಿದರೆ ಅದರ ಅರ್ಥವಷ್ಟೇ ನಮಗೆ ದಕ್ಕುತ್ತದೆ. ಕಾವ್ಯದ ಸೊಬಗು ಮಾಯವಾಗುತ್ತೆ. ಹೀಗಾಗಿ ಕಾವ್ಯವನ್ನು ಭಾಷೆ ಕಲಿತಾದರೂ ಮೂಲದಲ್ಲೇ ಓದುವುದು ಒಳ್ಳೆಯದು.

ಕವಿತೆ ಅರ್ಥವಾಗುವುದಿಲ್ಲ ಎಂಬ ಎಂಬ ಮಾತಿಗೆ ಅರ್ಥವಿಲ್ಲ ಎಂದು ನನಗೆ ಅನ್ನಿಸುವುದು ಅದೇ ಕಾರಣಕ್ಕೆ. ನಾನು ತಾಜ್ಮಹಲ್ ನೋಡಿ ಬಂದು ಅದು ಹೇಗಿದೆ, ಎಷ್ಟು ಸುಂದರವಾಗಿದೆ ಎಂದು ವರ್ಣಿಸಿದ ಹಾಗೆ ಅನುವಾದ. ತಾಜ್ಮಹಲ್ ಹೀಗಿದೆ ಎಂಬ ಕಲ್ಪನೆ ನಿನಗೆ ಬರಬಹುದೇ ವಿನಾ ಪರಿಸರ, ಅಲ್ಲಿನ ಗಾಳಿ, ಬೆಳಕು, ಘಮ, ಅದನ್ನು ಕಂಡಾಗ ಮೂಡುವ ನೆನಪು, ಅನುಭೂತಿ ಎಲ್ಲವೂ ಅದರೆದುರು ನಿಂತಾಗಲೇ ಮನಸ್ಸನ್ನು ಮುದಗೊಳಿಸಬೇಕು.

ಆಗಲೇ ಅದು ನಮ್ಮನ್ನು ತಟ್ಟುವುದು. ಇನ್ನು ತುಂಬಾ ಒಳ್ಳೆಯ ಅನುವಾದ ತಾಜಮಹಲ್ಲಿನ ಫೋಟೋ ನೋಡಿದಷ್ಟು ಸೊಗಸಾಗಿರಬಹುದು ಅಷ್ಟೇ. ತಾಜಮಹಲ್ಲಿನ ಮುಂದೆ ನಿಂತ ಅನುಭವವನ್ನು ಅದು ಕೊಡಲಾರದುಆದರೆ, ಪ್ರತಿಯೊಂದು ಕವಿತೆಯೂ ನಮಗೆ ಗೊತ್ತಿರುವ ಭಾಷೆಯ ಮೂಲಕವೇ ನಮಗೆ ಅರ್ಥವಾಗುತ್ತಾ ಹೋಗುತ್ತದೆ ಎಂದು ನೀನು ವಾದಿಸಬಹುದು. ಅದೂ ನಿಜವೇ ಆದರೂ, ಅರ್ಥವಾಗುವುದು ಬೇರೆ, ಅನುಭವವಾಗುವುದೇ ಬೇರೆ. ಪರಮಹಂಸರು ತಲೆಯ ಮೇಲೆ ಕೈಯಿಟ್ಟಾಗ ವಿವೇಕಾನಂದರಿಗೆ ಏನನ್ನಿಸಿತು ಅನ್ನುವುದನ್ನು ನಾವು ಓದಿ ಅರ್ಥಮಾಡಿಕೊಂಡಷ್ಟೇ ನಮಗದು ಸತ್ಯ. ಅವರಿಗೆ ಆಗ ಅನಿರ್ವಚನೀಯ ಅನುಭವ ಆಗಿರಬಹುದು. ಹೇಳಲಾಗದ ಅನುಭವವನ್ನು ಮಾತಿನ ಮೂಲಕ ದಾಟಿಸಿದಾಗ ದಕ್ಕುವುದು ಮಾತಿಗೆ ಬಲವಿದ್ದಷ್ಟು ಮಾತ್ರ.

ಇತ್ತೀಚೆಗೆ ಸಂಧ್ಯಾದೇವಿ ಬೆಂಕಿಬೆರಳುಎಂಬ ಪದಪುಂಜವನ್ನು ಬಳಸಿದಾಗ ನನಗೆ ತುಂಬಾ ಖುಷಿಯಾಯಿತು. ಬೆಂಕಿಗೆ ಒಡ್ಡಿದ ಬೆರಳೋ ಬೆಂಕಿಬೆರಳೋ ಎಂಬ ಅನುಮಾನ ಇನ್ನೂ ಉಳಿದುಕೊಂಡಿರುವ ಪದ ಅದು. ಅಡಿಗರ ಕಾವ್ಯದಲ್ಲಿ ಸುಟ್ಟಲ್ಲದೆ ಮುಟ್ಟೆನೆಂಬ ಉಡಾಫೆಎಂಬ ಸಾಲು ಬರುತ್ತದೆ. ಕಾವ್ಯಕ್ಕೆ ಸರಿಯಾಗಿ ಹೊಂದಿಕೆಯಾಗುವ ಸಾಲು ಅದು. ಕವಿತೆಯದ್ದೂ ಅಂಥದ್ದೇ ಉಡಾಫೆ. ಸುಟ್ಟಲ್ಲದೆ ಮುಟ್ಟೆ ಎಂಬಂತೆ ಅದು ಅಹಂಕಾರದಿಂದಲೇ ಎದುರಾಗುತ್ತದೆ. ನಮ್ಮನ್ನು ವಿನಯವಂತರನ್ನಾಗಿಸುತ್ತದೆ.
ಇದು ನೀನು ಕೇಳಿದ ಪ್ರಶ್ನೆಗೆ ಮುನ್ನುಡಿ ಮಾತ್ರ. ಹಳೆಗನ್ನಡದ ಬಗ್ಗೆ ಬೇಡ, ಹೊಸಗನ್ನಡದ ಕವಿತೆಯ ಬಗ್ಗೆ ಮಾತ್ರ ಹೇಳು ಎಂದು ನೀನಂದಾಗ ನನಗೆ ಬೇಜಾರಾಯಿತು. ಕಾಲಕ್ರಮೇಣ ಕಾವ್ಯ ಅವನತಿಯತ್ತ ಸಾಗಿದೆ ಎಂದೇನೂ ನಾನು ನಂಬಿಲ್ಲ. ಆದರೆ ಅದು ತನ್ನ ನಿಷ್ಠುರತೆಯನ್ನೂ ಅಖಂಡತೆಯನ್ನೂ ಅನನ್ಯತೆಯನ್ನೂ ಕಳಕೊಂಡಿದೆ ಎಂದು ಅನೇಕ ಸಲ ಅನ್ನಿಸುತ್ತದೆ. ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ, ಪದವಿಟ್ಟಳುಪದೊಂದ್ದಗಳಿಕೆಎಂಬ ಸಾಲುಗಳನ್ನು ಮೊದಲ ಸಾರಿ ಓದಿದಾಗ ಆಗುವ ಸಂತೋಷವನ್ನು ಹೇಳುವುದು ಕಷ್ಟ. ತುಂಟ ಹುಡುಗ್ಯಾರಿಲ್ಲಿ ನೆಪ ಹೇಳಿ ಬರುತಾರೆ, ಹರೆಯದ ಬಲೆಯಲ್ಲಿ ಸಿಕ್ಕ್ಹಾಂಗದ ಎಂದು ಲಂಕೇಶರು ಬರೆದದ್ದನ್ನು ಓದುವಾಗ ಆಗುವ ಸಂತೋಷ ಇನ್ನೊಂದು ಬಗೆಯದು. ಅದೇ ಸಂತೋಷವನ್ನು ಗದ್ಯವೂ ಕೊಡುತ್ತದೆ ಎಂದು ನಿರೀಕ್ಷಿಸುವುದು ತಪ್ಪು.

ಹಳೆಗನ್ನಡವನ್ನು ಮರೆತು ನೋಡಿದರೆ, ನಮ್ಮ ಕವಿತೆ ಹೊಸಗನ್ನಡಕ್ಕೆ ಹೊರಳಿಕೊಂಡದ್ದು ಇಂಗ್ಲಿಷ್ ಗೀತಗಳುಸಂಕಲನದಿಂದ. ಕಾಲಕ್ಕೂ ಮುಂಚೆಯೇ ಇಂಗ್ಲಿಷ್ ಕವಿಗಳು ಪ್ರಕೃತಿಯನ್ನು ಹೊಗಳಿ ಹೊಗಳಿ ಕವಿತೆ ಬರೆದಿದ್ದರು. ಕೋಗಿಲೆ, ಲಂಡನ್ನಿನ ಸೇತುವೆ, ಮಂಜಿನಲ್ಲಿ ಮರೆಯಾದ ಕುರಿಕಾಯುವ ಹುಡುಗಿ, ಬೇಸಗೆಯ ಹುರುಪು, ಸಮ್ಮರ್ ಇಳಿಹಗಲು, ಕಾಡಿನ ಚೆಲುವುಇವೆಲ್ಲದರ ಕುರಿತೂ ಪದ್ಯ ಬರೆದರು. ಕಾರಿಹೆಗ್ಗಡೆಯ ಮಗಳು, ಕರುಣಾಳು ಬೆಳಕು, ದೊರೆಗಳ ಔದಾರ್ಯ, ತುಂಟ ಹುಡುಗಿಯ ಚೆಲುವು ಎಲ್ಲವೂ ಕಾವ್ಯವಾಗಿ ಮೂಡಿ ಬಂತು. ಅದನ್ನೇ ಸರಳ ಕನ್ನಡದಲ್ಲಿ ಬಿಎಂಶ್ರೀ ಕನ್ನಡಕ್ಕೆ ತಂದರು.

ಅಲ್ಲಿಂದ ನವೋದಯ ಕಾವ್ಯ ಶುರುವಾಯಿತಾದರೂ, ಅದು ಕಥನ ಸ್ವರೂಪದಿಂದ ತಕ್ಷಣ ಹೊರಗೆ ಬರಲಿಲ್ಲ. ನಾವು ಕತೆಹೇಳಲು ಕಾವ್ಯವನ್ನು ಬಳಸುತ್ತಿದ್ದುದರಿಂದ ಭಾವಗೀತೆಗಳಲ್ಲಿ ಒಂದು ಭಾವವನ್ನು ಸೆರೆಹಿಡಿಯುವುದು ಕೊಂಚ ಕಷ್ಟಕರವೂ ಆಗಿತ್ತು. ಒಂದು ಸಣ್ಣ ಭಾವವನ್ನು ಸುಳಿನೆನಪನ್ನು ಕವಿತೆಯಲ್ಲಿ ಹಿಡಿದಿಡುವುದು ಕಾವ್ಯಕ್ಕೆ ಮಾಡುವ ಅಪಚಾರ ಎಂಬ ಭಾವನೆ ಕಾಲದ ಕವಿಗಳಲ್ಲಿತ್ತೋ ಏನೋ? ಧೀಮಂತವಾದ ಸಂಗತಿಗಳನ್ನು ಮಾತ್ರ ಕವಿತೆಯಲ್ಲಿ ಹೇಳಬೇಕು ಎಂದು ಅವರು ನಿರ್ಧರಿಸಿದಂತೆ ಕಾಣಿಸುತ್ತದೆ.

ಹಾಗೆ ನೋಡಿದರೆ ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು ಅನ್ನುವುದು ಕೂಡ ಒಂದರ್ಥದಲ್ಲಿ ತಮಸೋಮಾ ಜ್ಯೋತಿರ್ಗಮಯ ಎಂಬ ಭಾವದಲ್ಲೇ ಮೂಡಿದ್ದನ್ನು ನಾವು ನೋಡಬಹುದು.

ಆರಂಭದ ಕಾವ್ಯವನ್ನು ನೋಡುತ್ತಾ ಹೋದರೆ ನಮಗೆ ಪಂಜೆ ಮಂಗೇಶರಾಯರೂ, ಗೋವಿಂದ ಪೈಗಳೂ ಕಣ್ಮುಂದೆ ಬರುತ್ತಾರೆ. ಗೊಲ್ಗೊಥಾದಂಥ ಪದ್ಯದಲ್ಲೂ ಉದಾತ್ತತೆಯನ್ನು ನಾವು ಕಾಣಬಹುದು. ಉದಾತ್ತ ಭಾವವನ್ನು ನೀಗಿಕೊಂಡು ಸರಳ ಭಾವವನ್ನು ಕವಿತೆಯ ಮೂಲಕ ಹಿಡಿಯಲು ಯತ್ನಿಸಿದವರು ಕುವೆಂಪು. ಅವರ ಆರಂಭದ ಕವನಗಳನ್ನು ನೋಡಿದರೆ ಕುವೆಂಪು ಎಂಥಾ ಉದಾರವಾದಿಯಾಗಿದ್ದರು ಎನ್ನುವುದು ಗೊತ್ತಾಗುತ್ತದೆ.

ಇಂಗ್ಲಿಷ್ ಕಾವ್ಯ ಕಾಲಕಾಲಕ್ಕೆ ಹೊಸ ಹೆಸರನ್ನಿಟ್ಟುಕೊಂಡು ಬೆಳೆಯುತ್ತಾ ಬಂದದ್ದನ್ನು ನಾವು ನೋಡಬಹುದು. ಇದು ಕನ್ನಡ ಕಾವ್ಯವನ್ನು ಪ್ರಭಾವಿಸುತ್ತಾ ಬಂದದ್ದನ್ನೂ ನೀನು ಗಮನಿಸಿರಬಹುದು. ಹಾಗೆ ನೋಡಿದರೆ, ಕಾವ್ಯ ಸಮೃದ್ಧಿಯ ವರ್ಷಗಳಲ್ಲಿ ನವೋದಯ, ನವ್ಯದ ದಿನಗಳಲ್ಲಿ ನಮ್ಮಲ್ಲಿ ಬಂದ ಕವಿತೆಯಲ್ಲಿ ಅಂಥ ಹೊಸತನವೇನೂ ಇರಲಿಲ್ಲ. ಇದು ಅಪಾಯಕಾರಿ ಹೇಳಿಕೆ ಎಂದು ನನಗೆ ಗೊತ್ತಿದೆ. ಆದರೆ ಕಾವ್ಯದ ಬೇರುಗಳಿದ್ದದ್ದು ಇಂಗ್ಲಿಷ್ ಕವಿತೆಯಲ್ಲಿ.

ಅದನ್ನು ನೀಗಿಕೊಂಡು ಅಚ್ಚಕನ್ನಡದ ಕವಿತೆಯೆಂಬಂತೆ ಮೂಡಿದ್ದು ಬಂಡಾಯ ಮತ್ತು ದಲಿತ ಕಾವ್ಯ. ನಮ್ಮ ನೆಲದ ಕಾವ್ಯ ಅನ್ನಿಸಿಕೊಂಡದ್ದು ನವ್ಯೋತ್ತರದ ಕವಿತೆಯೇ. ಆಶ್ಚರ್ಯವೆಂದರೆ, ಕಾಲಮಾನದ ಸ್ಪಷ್ಟ ಕಲ್ಪನೆಯಿಲ್ಲದ ಜನಪದ ಕಾವ್ಯ ಮತ್ತು ಹನ್ನೆರಡನೆಯ ಶತಮಾನದ ವಚನಗಳು ಆಮೇಲೆ ಬಂದ ದಾಸರ ಪದಗಳುನವೋದಯ ನವ್ಯ ಕಾವ್ಯಕ್ಕಿಂತಲೂ ಮೊದಲೇ ನಮ್ಮ ಕಾವ್ಯಪರಂಪರೆ ಶ್ರೀಮಂತವಾಗುವಂತೆ ಮಾಡಿದವು.

ಬೆರಗನ್ನು ಮುಂದಿನ ಪತ್ರದಲ್ಲಿ ಹೇಳುತ್ತೇನೆ. ಮೊನ್ನೆ ಮಮತಾ ಸಾಗರ್ ಮಾತಾಡುತ್ತಾ, ಕೆ ಎಸ್ ಬರೆದ ಕವಿತೆಯೊಂದರ ಬಗ್ಗೆ ಹೇಳಿದರು. ರಾತ್ರಿಯಲ್ಲಿ ದೂರದಲಿ ಎಲ್ಲೋ ಓಲಗಎಂಬ ಕವಿತೆ ಅದು. ದಾಂಪತ್ಯಕ್ಕೆ ನಿಷ್ಠರಾಗಿದ್ದ ಕೆ ಎಸ್ ಕವಿತೆಯಲ್ಲಿ ಒಂದು ಸಣ್ಣ ಪ್ರೇಮದ ಸುಳಿವೊಂದನ್ನು ನೀಡುತ್ತಾರೆ. ಅದನ್ನು ಮುಂದಿನ ವಾರ ನೋಡೋಣ.

‍ಲೇಖಕರು avadhi

March 12, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

4 ಪ್ರತಿಕ್ರಿಯೆಗಳು

 1. ವಿ.ಎಲ್.ಪ್ರಕಾಶ

  ಕಾವ್ಯಪ್ರೀತಿ ಬೆಳೆಸುವ ಬರಹ

  ಪ್ರತಿಕ್ರಿಯೆ
 2. rj

  ಕನ್ನಡದಲ್ಲಿ ಕಂದಪದ್ಯಗಳಿದ್ದಂತೆ
  ನಿಮ್ಮದು
  ಗದ್ಯಕಾವ್ಯ!
  -ರಾಘವೇಂದ್ರ ಜೋಶಿ.

  ಪ್ರತಿಕ್ರಿಯೆ
 3. krishnaprakasha bolumbu

  ದ್ವಿತೀಯ ಪುರುಷದಲ್ಲಿ ಯಾರನ್ನು ಇಟ್ಟುಕೊಳ್ಳಲಾಗಿದೆ?

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: