ಜೋಗಿ ಬರೆದಿದ್ದಾರೆ: ಇದು ಬರಿ ಬೆರಗಲ್ಲೋ ಅಣ್ಣಾ!

img_04911ನಮ್ಮೂರಲ್ಲೊಂದು ಪುಟ್ಟ ಮನೆಯಿದೆ. ಹೊಸದಾಗಿ ಕಟ್ಟಿಸಿದ ಮನೆ. ಆ ಮನೆಯೊಳಗೆ ಕಾಲಿಟ್ಟರೆ ವಿಚಿತ್ರವಾದ ಅನುಭವಗಳಾಗುತ್ತವೆ. ಇದ್ದಕ್ಕಿದ್ದಂತೆ ಬಾದಾಮಿ ಎಣ್ಣೆಯ ಪರಿಮಳ ಮೂಗಿಗೆ ಅಡರುತ್ತದೆ. ಸ್ವಲ್ಪ ಹೊತ್ತು ಅಲ್ಲೇ ನಿಂತರೆ ತುಂಬ ಅಸ್ಪಷ್ಟವಾದ ಯೋಚನೆಗಳು ಬರತೊಡಗುತ್ತವೆ. ಬೇರೆ ಯಾವುದೋ ಲೋಕದಲ್ಲಿ ಇದ್ದೀವೇನೋ ಅನ್ನಿಸತೊಡಗುತ್ತದೆ. ಮತ್ತೂ ಸ್ವಲ್ಪ ಹೊತ್ತು ಅಲ್ಲಿದ್ದರೆ ನಾವು ಆಡುವ ಮಾತುಗಳು ಎದುರಿಗೆ ಕುಳಿತವರಿಗೆ ಅರ್ಥವೇ ಆಗುವುದಿಲ್ಲ. ಅವರ ಮಾತು ನಮಗೂ ಅರ್ಥವಾಗುವುದಿಲ್ಲ. ವಿಚಿತ್ರವಾದ ಭಾಷೆಯಲ್ಲಿ ನಾವು ಮಾತಾಡುವುದಕ್ಕೆ ಶುರು ಮಾಡುತ್ತೇವೆ. ರಾತ್ರಿಯೇನಾದರೂ ಅಲ್ಲಿ ಮಲಗಿದಿರೋ, ಬೆಳಗ್ಗೆ ಏಳುವ ಹೊತ್ತಿಗೆ ನೀವು ಅಂಗಳದಲ್ಲಿ ಮಲಗಿರುತ್ತೀರಿ. ಅದಕ್ಕಾಗಿಯೇ ಆ ಮನೆಯನ್ನು ಕಟ್ಟಿಸಿದವರು ಅದನ್ನು ಬಿಟ್ಟು ಹೋಗಿದ್ದಾರೆ. ಅವರು ತುಂಬ ಆಸೆಪಟ್ಟು ಕಟ್ಟಿಸಿದ ಮನೆ ಅದು. ಆದರೆ ಅಲ್ಲಿ ವಾಸಿಸುವ ಭಾಗ್ಯ ಅವರಿಗಿಲ್ಲ.
ಹಾಗಂತ ನನಗೆ ಗೊತ್ತಿರುವ ಗೆಳೆಯರೊಬ್ಬರು ಫೋನ್ ಮಾಡಿ ಹೇಳಿದರು. ಅಂಥದ್ದರಲ್ಲಿ ನನಗೆ ನಂಬಿಕೆ ಇರಲಿಲ್ಲ. ಆದರೆ ಅವರ ಮಾತಲ್ಲಿ ನನಗೆ ನಂಬಿಕೆ ಇತ್ತು. ಹೀಗಾಗಿ ಅದು ನಿಜವಿದ್ದರೂ ಇರಬಹುದು ಅಂದುಕೊಂಡು ಸುಮ್ಮನಾದೆ.
ಮೊದಲಿನಿಂದಲೂ ನನಗೆ ಇಂಥ ಅಲೌಕಿಕ ಸಂಗತಿಗಳಲ್ಲಿ ಆಸಕ್ತಿ ಹೆಚ್ಚು. ಹಾಗೇಕೆ ಆಗುತ್ತದೆ ಎಂದು ಹುಡುಕುತ್ತಾ ಹೊರಟಾಗ ಎಷ್ಟೋ ಸಾರಿ ನಮಗೂ ಅಂಥ ಅನುಭವಗಳಾಗಿವೆ. ಅವುಗಳು ಆ ಕ್ಷಣಕ್ಕೆ ಬೆಚ್ಚಿ ಬೀಳಿಸಿದರೂ, ಅದರ ಮೂಲ ಹುಡುಕುತ್ತಾ ಹೋದಾಗ ಅವು ತೀರ ಸಹಜ ಸಂಗತಿಗಳು ಅನ್ನಿಸಿವೆ. ಕ್ರಮೇಣ ಅವುಗಳ ಹಿಂದಿನ ವೈಜ್ಞಾನಿಕ ಸತ್ಯವನ್ನು ಹುಡುಕುವುದನ್ನು ಬಿಟ್ಟು ಅವನ್ನು ನಾನು ಕೂಡ ಸವಿಯಲು ಆರಂಭಿಸಿದೆ.
ನಾವು ಹೆಚ್ಚು ಹೆಚ್ಚು ತಿಳಿದುಕೊಳ್ಳುತ್ತಾ ಹೋದ ಹಾಗೆ, ಹೆಚ್ಚು ಹೆಚ್ಚು ಅಜ್ಞಾನಿಗಳಾಗುತ್ತೋ ಹೋಗುತ್ತೇವೋ ಏನೋ? ಉದಾಹರಣೆಗೆ ಚಂದ್ರಗ್ರಹಣ ಹೇಗಾಗುತ್ತದೆ ಅನ್ನುವುದನ್ನು ನಮಗೆ ನಮ್ಮ ವಿಜ್ಞಾನದ ಮೇಷ್ಟ್ರು ಒಂದು ಉದಾಹರಣೆಯೊಂದಿಗೆ ವಿವರಿಸಿದರು. ಸೂರ್ಯ. ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಅಂತಲೂ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರಗ್ರಹಣ ಅಂತಲೂ ಅವರು ಹೇಳಿದ ನೆನಪು. ಅಲ್ಲಿಗೆ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ಕುರಿತು ನಮಗಿರುವ ಆಸಕ್ತಿಯೆಲ್ಲ ಸತ್ತೇ ಹೋಯಿತು. ರಾಹು ಕೇತುಗಳ ಕುರಿತು ಕೇಳಿದ ಕತೆ, ಅಮೃತ ಕುಡಿಯಲು ಬಂದ ರಾಹುವನ್ನು ಸೌಟಿನಿಂದ ಮೋಹಿನಿ ರೂಪದ ವಿಷ್ಣು ಹೊಡೆದು ಎರಡಾಗಿಸಿದ್ದು, ರಾಹು ಚಂದ್ರನನ್ನು ನುಂಗುವ ಕತೆಯೆಲ್ಲ ನಮಗೆ ಕಟ್ಟು ಕತೆ ಎಂದು ಗೊತ್ತಾಯಿತು.
cincinnati_writing_job_3
ಹೀಗೆ ಗೊತ್ತಾದ ತಕ್ಷಣ ನಮ್ಮ ಕೌತುಕಗಳು ಕೊನೆಗೊಂಡವು. ನಮ್ಮ ಮುಂದೆ ಮ್ಯಾಜಿಕ್ ಮಾಡುತ್ತಾ ಟೋಪಿಯಿಂದ ಮೊಲ ಹೊರಗೆ ತೆಗೆಯುವ ಜಾದೂಗಾರನ ತಂತ್ರ ಗೊತ್ತಾದ ತಕ್ಷಣ ಅದರ ಕುರಿತ ನಮ್ಮ ಕುತೂಹಲ, ಬೆರಗು ಮಾಯವಾಗುತ್ತದೆ. ರಹಸ್ಯಗಳನ್ನು ತಿಳಿದುಕೊಂಡ ಹಾಗೇ ನಾವು ಅದರಲ್ಲಿ ಆಸಕ್ತಿ ಕಳೆದುಕೊಂಡು ಮತ್ತೊಂದು ರಹಸ್ಯ ಸಂಗತಿಯತ್ತ ಮನಸ್ಸು ಹೊರಳಿಸಿಕೊಳ್ಳುತ್ತೇವೆ.
ಬೆರಗನ್ನು ಕಳಕೊಳ್ಳುವಷ್ಟು ದುಃಖದ ಸಂಗತಿ ಮತ್ತೊಂದಿಲ್ಲವೇನೋ? ಮೊದಲ ಬಾರಿಗೆ ಸಿನಿಮಾ ನೋಡಿದಾಗ ಆದ ಖುಷಿಯನ್ನು ನೆನಪಿಸಿಕೊಳ್ಳಿ. ಈಗ ಸಿನಿಮಾ ಹೇಗೆ ಮಾಡುತ್ತಾರೆ, ಅದರ ತಂತ್ರಜ್ಞಾನ ಏನು, ನಟನೆ ಅಂದರೇನು, ಒಂದು ಹಾಡನ್ನು ಎಷ್ಟು ಹೊತ್ತು ಚಿತ್ರೀಕರಿಸಿಕೊಳ್ಳುತ್ತಾರೆ, ಸೆಲ್ಯುಲಾಯ್ಡ್ ಅಂದರೇನು, ಎಚ್‌ಡಿ ಫಾರ್ಮಾಟ್ ಅಂದರೇನು, ಟೆಲಿ ಸಿನಿ, ಗ್ರಾಫಿಕ್ ಇಂಟರ್‌ಮೀಡಿಯೇಟ್ ಎಲ್ಲವೂ ತಿಳಿದ ನಂತರ ಕೇವಲ ಕತೆಯಲ್ಲಷ್ಟೇ ಆಸಕ್ತಿ.
ಅರ್ಥವಾಗುತ್ತಾ ಹೋದ ಎಂಥಾ ಅದ್ಭುತ ದೃಶ್ಯ ಕೂಡ ಕಣ್ಮುಂದೆ ಒಂದು ಮಾಯಾಲೋಕವನ್ನು ಸೃಷ್ಟಿಸುವಲ್ಲಿ ಸೋಲುತ್ತದೆ. ವ್ಯಕ್ತಿಗಳೂ ಅಷ್ಟೇ. ದೂರದಿಂದ ನೋಡುತ್ತಿದ್ದಾಗ ಬೆರಗಿನ ಮೂಟೆಯಂತೆ ಕಾಣಿಸುತ್ತಿದ್ದ ಲೇಖಕ, ಚುರುಕಿನ ನಡಿಗೆಯ ನಟ, ತಮಾಷೆಯಾಗಿ ಮಾತಾಡುವ ಭಾಷಣಕಾರ- ಎಲ್ಲರೂ ಕೊಂಚ ದಿನ ಜೊತೆಗಿದ್ದಾಗ ಇಷ್ಟೇನಾ ಅನ್ನಿಸತೊಡಗುತ್ತಾರೆ ಅನ್ನುವುದೂ ನಮ್ಮೆಲ್ಲರಿಗೂ ಗೊತ್ತು.
ಅದೇ ಕಾರಣಕ್ಕೆ ನನಗೆ ಪವಾಡಗಳನ್ನು ನಿರಾಕರಿಸುವುದರಲ್ಲಿ ಆಸಕ್ತಿಯಿಲ್ಲ. ಮೊನ್ನೆ ಮೊನ್ನೆ ಇನ್ನೋವೇಟಿವ್ ಸಿಟಿಯ ರಿಪ್ಲೆಯ ನಂಬಿದರೆ ನಂಬಿ ಬಿಟ್ಟರೆ ಬಿಡಿ ಜಗತ್ತಿನಲ್ಲಿ ಯಾವುದೇ ಆಧಾರವಿಲ್ಲದೇ ನೀರು ಸುರಿಸುತ್ತಾ ನಿಂತ ಬೃಹದಾಕಾರದ ನಲ್ಲಿಯನ್ನು ಕಂಡಾಗ ಅಚ್ಚರಿಯಾಯಿತು. ಅದು ಹೇಗೆ ಎಂಬ ಪ್ರಶ್ನೆಗೆ ಇಂಟರ್‌ನೆಟ್‌ನಲ್ಲಿ ಉತ್ತರ ಸಿಗುತ್ತೆ ಎಂದು ಪಕ್ಕದಲ್ಲಿದ್ದ ಗೆಳೆಯ ವಿವರಿಸಲು ಆರಂಭಿಸಿದಾಗ ಸಿಟ್ಟು ಬಂತು. ನನಗೆ ಆ ವಿವರಣೆ ಬೇಕಾಗಿಲ್ಲ ಎಂದು ಎದ್ದು ಬಂದೆ.
ಅರಿವು ಶ್ರೇಷ್ಠವೋ ಅಜ್ಞಾನ ಶ್ರೇಷ್ಠವೋ ಎಂಬ ಪ್ರಶ್ನೆ ಎದುರಾದದ್ದು ಆಗಲೇ. ಅರಿಯುತ್ತಾ ಹೋಗುವುದೇ ಬದುಕು ಎಂದುಕೊಂಡಿದ್ದ ನನಗೆ, ಜ್ಞಾನದ ಬೆಳಕು ಕೂಡ ನಮ್ಮನ್ನು ನಿರಾಸೆಗೊಳಿಸಬಲ್ಲದು ಅನ್ನಿಸತೊಡಗಿತು. ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ, ಚಕ್ಷುರ್ ಉನ್ಮೀಲಿತಂ ಯೇನ… ಎಂಬ ಮಾತು ಒಂದು ಕಾಲಕ್ಕೆ ಪರಮ ಸತ್ಯದ ಹಾಗೆ ಕೇಳಿಸುತ್ತಿತ್ತು. ಈಗ ಅಜ್ಞಾನದ ಕತ್ತಲು ಮತ್ತು ಜ್ಞಾನದ ಬೆಳಕಿನ ಪೈಕಿ ಯಾವುದು ನಿಜಕ್ಕೂ ನನ್ನನ್ನು ಕ್ರಿಯಾಶೀಲನನ್ನಾಗಿಯೂ ಸೃಜನಶೀಲನನ್ನಾಗಿಯೂ ಮಾಡೀತು ಎಂದು ಯೋಚಿಸುತ್ತಿದ್ದೇನೆ.
ಮತ್ತೆ ನನ್ನ ಗೆಳೆಯ ಹೇಳಿದ ಮನೆಯ ಮಾತಿಗೆ ಬಂದರೆ, ಆ ಮನೆಯಲ್ಲಿ ಯಾರಿಗೂ ಆದ ಅನುಭವಗಳು ನಿಜವೋ ಸುಳ್ಳೋ ಅನ್ನುವುದು ಬೇರೆ ಮಾತು. ಅದರ ಹಿಂದಿನ ಸತ್ಯವನ್ನು ತಿಳಿಯಲು ಹೊರಡುವುದು ಬೇರೆಯೇ ಕತೆ. ಆದರೆ ಆ ನಿಗೂಢದಲ್ಲಿ, ಬೆಚ್ಚಿ ಬೀಳಿಸುವ ಸಂಗತಿಯಲ್ಲಿ ಒಂಥರ ಖುಷಿಯಿದೆ ನೋಡಿ. ಕೀ ಕೊಟ್ಟಾಗ ಕುಣಿದಾಡುವ ಪುಟ್ಟ ಗೊಂಬೆಯನ್ನು ಕೈಗೆ ಕೊಟ್ಟರೆ ಪುಟ್ಟ ಮಕ್ಕಳು ಚಪ್ಪಾಳೆ ತಟ್ಟಿ ಖುಷಿಪಡುವ ಹಾಗೆ ಅಂಥ ಸಂಗತಿಗಳು ಎದುರಾದಾಗ ನಮಗೂ ಖುಷಿಯಾಗುತ್ತದೆ. ಅದು ನಿಜಕ್ಕೂ ಸತ್ಯವಾ ಎಂದು ಹುಡುಕುತ್ತಾ ಹೊರಟಾಗ ನಿರಾಸೆಯಾಗುತ್ತದೆ.
ಆ ಮನೆಯ ಒಳಗೆ ಮಲಗಿದವರು ಯಾಕೆ ಏಳುವ ಹೊತ್ತಿಗೆ ಅಂಗಳದಲ್ಲಿರುತ್ತಾರೆ. ಅವರಿಗೆ ನಿದ್ರೆಯಲ್ಲಿ ನಡೆಯುಲ ಸೋಮ್ನಾಂಬುಲಿಸಮ್ ಕಾಯಿಲೆಯಿದೆಯಾ ಅಥವಾ ಆ ಮನೆ ಗುರುತ್ವಾಕರ್ಷಣ ಶಕ್ತಿಯ ವಿಚಿತ್ರ ಕೇಂದ್ರದಲ್ಲಿದೆಯಾ? ಸುತ್ತುತ್ತಿರುವ ಭೂಮಿಯ ನೇರ ಪರಿಣಾಮ ಆ ಮನೆಯ ಮೇಲೆ ಆಗುತ್ತದಾ? ಕೇವಲ ಬಾಗಿಲು ಮುಚ್ಚಿದ್ದರಷ್ಟೇ ಒಳಗಿದ್ದವರು ಹೊರಗಿರುತ್ತಾರಾ? ಯಾರಾದರೂ ರಾತ್ರಿ ಪೂರ್ತಿ ಕಾದು ಕುಳಿತು ಆ ಮನೆಯಲ್ಲಿ ನಡೆಯುವ ವಿದ್ಯಮಾನಗಳನ್ನು ಗಮನಿಸಿದ್ದಾರಾ? ಮನೆಯಲ್ಲಿ ಮಲಗಿದ ಯಾರೋ ಒಬ್ಬರು ಮಾತ್ರ ಅಂಗಳಕ್ಕೆ ಸ್ಥಾನಾಂತರ ಹೊಂದಿದ್ದರಾ ಅಥವಾ ಎಲ್ಲರೂ ಹೊರಗಿದ್ದರಾ?
ಇಂಥ ಹಲವಾರು ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರ ಇಲ್ಲ. ನನಗೆ ಆ ಉತ್ತರವೂ ಬೇಕಿಲ್ಲ. ಇತ್ತೀಚೆಗೆ ದಾಂಡೇಲಿಯ ರೆಸಾರ್ಟ್‌ಗೆ ಹೋಗಿದ್ದ ಗೆಳೆಯ ವಿಚಿತ್ರವಾದ ಅನುಭವವೊಂದನ್ನು ಹೇಳಿಕೊಂಡ. ಅವನು ರಾತ್ರಿ ಹನ್ನೊಂದೂವರೆಯ ತನಕ ಹೊರಗೆಲ್ಲ ಸುತ್ತಾಡಿ, ನಂತರ ರೂಮಿಗೆ ಬಂದು ಸ್ವಲ್ಪ ಹೊತ್ತು ಟೀವಿ ನೋಡಿ ಮಲಗುವ ಸಿದ್ಧತೆ ನಡೆಸಿದ. ಸರಿಯಾಗಿ ಹನ್ನೆರಡು ಗಂಟೆಗೆ ಮಲಗಿಕೊಂಡ. ರೂಮಿನಲ್ಲಿ ಎರಡು ಮಂಚಗಳಿದ್ದವು. ಅವೆರಡನ್ನೂ ಜೋಡಿಸುವ ತೊಂದರೆ ತೆಗೆದುಕೊಳ್ಳದೇ ಆತ ಒಂದು ಮಂಚದಲ್ಲಿ ಮಲಗಿದ. ಒಂದು ಮಗ್ಗುಲಲ್ಲಿ ಮಲಗಿದವನು ಸ್ವಲ್ಪ ಹೊತ್ತಿನ ನಂತರ ಮಗ್ಗಲು ಬದಲಾಯಿಸಲು ಬಲಕ್ಕೆ ಹೊರಳಿಕೊಳ್ಳಲು ನೋಡಿದರೆ, ಪಕ್ಕದಲ್ಲಿ ಯಾರೋ ಮಲಗಿದ ಅನುಭವವಾಯಿತಂತೆ. ಏನು ಮಾಡಿದರೂ ಬಲಕ್ಕೆ ಹೊರಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಕ್ಕದಲ್ಲಿ ಯಾರೋ ಮಲಗಿದ ಹಾಗೆ ಅನುಭವವಾಗಿ
ಎದ್ದು ಲೈಟ್ ಹಾಕಲೂ ಭಯವಾಗಿ ಹಾಗೇ ಮಲಗಿದ್ದನಂತೆ. ಗೊತ್ತಿದ್ದ ಮಂತ್ರವನ್ನೆಲ್ಲ ಜಪಿಸುತ್ತಾ ರಾತ್ರಿ ಪೂರ ಹಾಗೇ ಮಲಗಿದ್ದು ಬೆಳಗ್ಗೆ ಎದ್ದು ನೋಡಿದರೆ ಪಕ್ಕದಲ್ಲಿ ಯಾರೂ ಇಲ್ಲ. ಆ ಕಾಟೇಜು ನೋಡಿಕೊಳ್ಳುತ್ತಿದ್ದ ಮೇಟಿಯ ಹತ್ತಿರ ಇದನ್ನು ಹೇಳಿಕೊಂಡಾಗ ಅವನು ಮೂರು ತಿಂಗಳ ಹಿಂದೆ, ಆ ಕಾಟೇಜಿಗೆ ಗಂಡ ಹೆಂಡತಿ ಬಂದಿದ್ದರೆಂದೂ ಅವರ ಪೈಕಿ ಹೆಂಡತಿ ಕೊಲೆಯಾದಳೆಂದೂ ಹೇಳಿದನಂತೆ. ಹಾಗಿದ್ದರೆ ಹಾಸಿಗೆಯಲ್ಲಿ ಬಂದು ಮಲಗಿದ್ದ ಆ ಹೆಂಗಸಿನ ದೆವ್ವವೇ ಎಂದು ನನ್ನ ಗೆಳೆಯ ಖಚಿತವಾಗಿ ನಂಬಿಕೊಂಡಿದ್ದ. ವಾಪಸ್ಸು ಬಂದ ನಂತರ ಆತ ಉಕ್ಕಡ ಗಾತ್ರಿಗೆ ಹೋಗಿ ತಾಯಿತ ಕಟ್ಟಿಸಿಕೊಂಡು ಬಂದಿದ್ದೂ ಆಯ್ತು.
ಒಂದು ಕಾಲದಲ್ಲಿ ನಮಗೆ ತಿಳಿದುಕೊಳ್ಳುವ ಕುತೂಹಲ ಇತ್ತು. ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ, ಅದರ ಹಿಂದಿನ ವೈಜ್ಞಾನಿಕತೆಯನ್ನು ತಿಳಿದುಕೊಳ್ಳುವ ಆಸಕ್ತಿಯಿತ್ತು. ಅದು ಹೇಗೆ? ಎಂಬ ಪ್ರಶ್ನೆ ಮೂಡುತ್ತಿತ್ತು. ಪ್ರಶ್ನಿಸದೇ ಒಪ್ಪಬೇಡಿ ಎಂಬ ನರಸಿಂಹಯ್ಯನವರ ವೈಜ್ಞಾನಿಕ ಧೋರಣೆ ಇಷ್ಟವಾಗುತ್ತಿತ್ತು. ಅವರು ವೈಜ್ಞಾನಿಕ ಮನೋಭಾವದವರು ಎಂದರೆ ಭಯಂಕರ ಖುಷಿಯಾಗುತ್ತಿತ್ತು.
ಈಗ ಅದೇ ಖುಷಿ ಉಳಿದಿಲ್ಲ. ದೂರದಲ್ಲೆಲ್ಲೋ ನಿಗೂಢವಾದ ದಟ್ಟವಾದ ಕಾಡಿದ್ದರೆ ಅಲ್ಲಿಗೆ ಹೋಗೋಣ ಅನ್ನಿಸುತ್ತದೆ. ಪಾಳು ಬಿದ್ದ ಮನೆ, ಬೆಟ್ಟದ ತಪ್ಪಲಲ್ಲಿ ಸಿಗುವ ಹಳೆಯ ಕೊಡ, ಬಾವಿ ತೋಡುತ್ತಿರುವಾಗ ಸಿಗುವ ಹಳೆಯ ನಾಣ್ಯ, ಕೊಳದ ತಡಿಯಲ್ಲಿ ಬಿದ್ದುಕೊಂಡಿರುವ ಆರೆಂಟು ಅಡಿ ಉದ್ದದ ಕಾಳಿಂಗ ಸರ್ಪ, ಕಾಶಿಗೆ ಒಯ್ಯುತ್ತದೆ ಎಂದು ಕತೆ ಹೇಳುವ ಸುರಂಗಮಾರ್ಗ, ಹಳೆಯ ಕೋಟೆಯ ತುದಿಯಲ್ಲಿರುವ ಆಳವೇ ಸಿಗದ ಕಲ್ಯಾಣಿಕೆರೆ, ಜಮಲಾಬಾದ್ ಕೋಟೆಯಲ್ಲಿ ಅಚಾನಕ ಕಾಣಿಸಿಕೊಂಡು ಬೆಚ್ಚಿ ಬೀಳಿಸಿದ ಅವಧೂತ, ಮಂಜರಾಬಾದ್ ಕೋಟೆಯ ತುದಿಯಲ್ಲಿರುವ ಗುಹೆ ಎಲ್ಲವೂ ವಿಚಿತ್ರ ಆಸಕ್ತಿ ಹುಟ್ಟಿಸುತ್ತದೆ.
ಮತ್ತೆ ನಿಗೂಢ ಜಗತ್ತಿನತ್ತ ಹೊರಡುವ ಆಸೆಯಾಗುತ್ತಿದೆ. ಅರ್ಥ ಮಾಡಿಕೊಳ್ಳುವ, ಅರಿಯುವ, ಜ್ಞಾನಿ ಅನ್ನಿಸಿಕೊಳ್ಳುವ ಬಯಕೆ ನಶಿಸುತ್ತಿದೆ. ದೂರದಲ್ಲೆಲ್ಲೋ ಸುಮ್ಮನೆ ಸುಳಿದುಹೋಗುವ ಗಾಳಿಯಲ್ಲಿ, ಗುಪ್ತ ಚೇತನವೊಂದು ಸರಿದುಹೋಗುತ್ತಿರಬಹುದೇ ಎಂದು ಯೋಚಿಸುತ್ತಾ ಮನಸ್ಸು ಮುದಗೊಳ್ಳುತ್ತದೆ.

‍ಲೇಖಕರು avadhi

November 10, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

4 ಪ್ರತಿಕ್ರಿಯೆಗಳು

 1. ಅನಿಕೇತನ ಸುನಿಲ್

  ನಮಸ್ಕಾರ,
  ಜೋಗಿ ಸರ್, ಹಲವು ಕಾರಣಗಳಿಂದ ಈ ಲೇಖನ ಇಷ್ಟ ಆಯ್ತು. 🙂
  ಬಹುಷಃ ಇತ್ತೀಚಿಗೆ ನಂಗೂ ಹಾಗೆ ಅನ್ನಿಸ್ತಿರೋದಕ್ಕೋ ಏನೋ…….ಛೆ ಇದೇನಿದು ರಾತ್ರಿ ಎಲ್ಲ ರಾಮಾಯಣ ಕೇಳಿ ಬೆಳಿಗ್ಗೆ ಯಾರು ರಾಮ ಅಂದಂತೆ…..ನಾನು ಅದಕ್ಕೆ ಇಷ್ಟ ಆಗಿರಬೇಕು…..ಇದಕ್ಕೆ ಅಂತ ಯಾಕೆ ನನ್ನೊಳಗೆ ನೋಡ್ಕೊಳ್ಳೋದು ಅಲ್ಲವಾ? 🙂 ಸುಮ್ನೆ ನಿಮ್ಮ ಲೇಖನದತ್ತ ಕಣ್ಣಾಡಿಸಿ ಸವಿದುಬಿದುವೆ 😉
  ನಿಜಕ್ಕೂ……..ತುಂಬಾ ತಿಳಿಯುತ್ತ ಗಳಿಸಿಕೊಳ್ಲೋದಕ್ಕಿಂತ ಕಳೆದುಕೊಳ್ಳೋದು ಹೆಚ್ಚೇನೋ ಅನ್ನಿಸ್ತಿದೆ…..ಬಹುಶ ಯಾವುದರ ಬಗ್ಗೆ ತಿಳ್ಕೊಬೇಕು, ಯಾವುದರ ಬಗ್ಗೆ ತಿಳ್ಕೊಬಾರದು ಅನ್ನೋದೊಂದು ತಿಳುವಳಿಕೆ ಸಾಕು ಅನ್ನ್ಸುತ್ತೆ ಅಲ್ಲವಾ?
  ಆದ್ರೆ ಮತ್ತೆ ಅದನ್ನು ತಿಲ್ಯೋದ್ರಲ್ಲಿ ಎಲ್ಲ ಗೊತ್ತಾಗ್ಬಿಟ್ರೆ ಅಂತ ಅವ್ಯಕ್ತ ಭಯ 🙂
  ಧನ್ಯವಾದ ಸರ್ ಈ ಸುಂದರ ಲೇಖನಕ್ಕೆ,
  ಸುನಿಲ್.

  ಪ್ರತಿಕ್ರಿಯೆ
 2. Gowri dattu

  ಆಶ್ಚರ್ಯ ವಾಯಿತು ನಿಮ್ಮ ಲೇಖನ ಓದಿ, ನಿಮ್ಮ ಅಭಿಪ್ರಾಯ ತಿಳಿದು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: