ಜೋಗಿ ಬರೆದಿದ್ದಾರೆ: ಊರುಕೇರಿಯ ನಡುವೆ ಸಿದ್ಧಸಾಧಕ

ಜೋಗಿ

ಅವಮಾನವನ್ನು ಸಿಟ್ಟಿನ ಮೂಲಕ ಮೀರಲು ಹೊರಟಾಗ ಮತ್ತಷ್ಟು ಅವಮಾನ ಆಗುತ್ತದೆ ಎಂದು ಕ್ರಮೇಣ ನಂಬುತ್ತ ಬಂದವರ ಹಾಗೆ ಕಾಣಿಸುವ ಸಿದ್ದಲಿಂಗಯ್ಯ, ನಂತರದ ದಿನಗಳಲ್ಲಿ ಕಂಡುಕೊಂಡ ಹಾದಿ ಬಹುಶಃ ಅತ್ಯುತ್ತಮವಾದದ್ದೇ ಇರಬೇಕು. ಇಕ್ರಲಾ ವದೀರ್‍ಲಾ ಹಳೆಯದಾಗದು, ನಲವತ್ತೇಳರ ಸ್ವಾತಂತ್ರ್ಯ ಸಾಕಾಗದು’ ಎಂದು ಈಗಲೂ ನಂಬಿದವರಂತೆ ನಟಿಸುವ ಸಿದ್ಧಲಿಂಗಯ್ಯ ಅಂತರಾಳದಲ್ಲಿ ಅದನ್ನು ಮೀರಿದ್ದಾರೆ ಎಂದು ಅವರ ಇತ್ತೀಚಿನ ಕವಿತೆಗಳನ್ನು ಓದಿದಾಗ ಅನ್ನಿಸುತ್ತದೆ. ಹೀಗೆ ನಾಳೆಯ ಪತ್ತೆ ಹತ್ತದ ಹಾಗೆ ಬರೆಯುವುದು ಒಬ್ಬ ಕವಿಗೆ ಅವಶ್ಯ ಮತ್ತು ಅನಿವಾರ್ಯ. ಅದನ್ನು ಬಹುಬೇಗ ಕಂಡುಕೊಂಡವರು ಸಿದ್ಧಲಿಂಗಯ್ಯ.
ಒಂದು ಅನನ್ಯ ವ್ಯತ್ಯಾಸವನ್ನು ಗಮನಿಸಿ: ಬೇಂದ್ರೆ ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೊಯ್ದ’ ಎಂದು ಬರೆದು ಬೆರಗುಗೊಳಿಸಿದ ನಂತರ ಸೂರ್ಯೋದಯವನ್ನು ಮತ್ತೂ ಹೇಗೆ ವರ್ಣಿಸಬೇಕು ಎಂಬ ಸಖೇದಾತಂಕ ಅನೇಕರನ್ನು ಕಾಡಿದ್ದು ಸುಳ್ಳಲ್ಲ. ಆ ಬೆಳಗು ನಿಜಕ್ಕೂ ಬೆಳಗಲ್ಲ ಎಂಬಂತೆ ಸಿದ್ಧಲಿಂಗಯ್ಯ ಸೂರ್ಯೋದಯವನ್ನು ಹೊಸ ಬೆಳಗಾಗಿ ಮಾಡಿದರು;

ಕನ್ನಡ ವಿಕಿಪೀಡಿಯಾ


ಗಗನ ಸಾಗರದಲ್ಲಿ ಮುಗಿಲ ದೋಣಿಯ ಸಾಲು
ಎಣಿಸಿದಷ್ಟೂ ಮಿಗುವ ಜನಸಂದಣಿ
ಕೆಂಪುಸೂರ್ಯನು ಹುಟ್ಟಿ ಮೆರವಣಿಗೆ ಬರುವಾಗ
ಕಪ್ಪು ಕಾಡಿನ ಹಾಡು ಮೊಳಗುತ್ತಿತ್ತು.
ಇಂಥ ಸಿದ್ಧಲಿಂಗಯ್ಯನವರ ಕವಿತೆಗಳನ್ನೂ ಆತ್ಮಕತೆಯನ್ನೂ ಗ್ರಾಮದೇವತೆಗಳ ಕುರಿತ ಅಧ್ಯಯನವನ್ನೂ ಮುಂದಿಟ್ಟು ಕೂತಾಗ, ಸಿದ್ಧಲಿಂಗಯ್ಯನವರ ನಿಜವಾದ ಸತ್ವ ಕಿಂಚಿತ್ತೂ ಕೈಗೆ ಸಿಗುವುದಿಲ್ಲ. ಅವರ ಕವಿತೆಗಳನ್ನಾಗಲೀ, ಆತ್ಮಕತೆಯನ್ನಾಗಲೀ ಉಳ್ಳವರು ಕುತೂಹಲಭರಿತ ತಮಾಷೆಯಿಂದ ಓದುವುದನ್ನು ನಾನು ನೋಡಿದ್ದೇನೆ. ಅವರು ನೋವಿನಿಂದ ಹೇಳಿಕೊಂಡ ಸಂಗತಿಗಳನ್ನು ಉಲ್ಲೇಖಿಸುವ ಮೂಲಕ ಸಿದ್ಧಲಿಂಗಯ್ಯನವರನ್ನು ಅನೇಕರು ಭಾಷಣಗಳಲ್ಲಿ ಕಟ್ಟಿಕೊಡುವುದೂ ಇದೆ. ಇತ್ತೀಚೆಗೊಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರನ್ನು ಲೇಖಕರೊಬ್ಬರು ಅಭಿನವ ಅಂಬೇಡ್ಕರ್ ಎಂದು ಕರೆದಾಗ ಸಿದ್ಧಲಿಂಗಯ್ಯ ಅದನ್ನು ಹೇಗೆ ಸ್ವೀಕರಿಸಿರಬಹುದು ಎಂಬುದು ನಿಗೂಢವೇ.
ಮೇಲ್ನೋಟಕ್ಕೆ ಇದನ್ನೆಲ್ಲ ಇಷ್ಟಪಡುವಂತೆ ಕಾಣಿಸುವ ಸಿದ್ಧಲಿಂಗಯ್ಯ, ಒಳಗೊಳಗೇ ಎಲ್ಲವನ್ನೂ ನಿರಾಕರಿಸುವ ಶಕ್ತಿಯನ್ನೂ ಉಳಿಸಿಕೊಂಡವರಂತೆ ಕಾಣುತ್ತಾರೆ. ತನ್ನನ್ನು ಮೆಚ್ಚಿದ, ಆರಾಧಿಸದ ಸಮುದಾಯವನ್ನು ಬೆಚ್ಚಿಬೀಳಿಸುವ ಹಾಗೆ ಅವರು ಪ್ರೇಮಗೀತೆಗಳನ್ನು ಬರೆದವರು. ತನ್ನ ಆತ್ಮಕತೆ ಊರುಕೇರಿ’ಯನ್ನು ರಾಮಕೃಷ್ಣ ಹೆಗಡೆಗೆ ಅರ್ಪಿಸಿದವರು. ಹೆಗಡೆ ತೀರಿಕೊಂಡಾಗ ದೇವಲೋಕದ ಪಕ್ಷಿ’ ಎಂದು ಕರೆದು ಪದ್ಯ ಬರೆದವರು.
ರಾಜಕೀಯ ಒಳನೋಟ ಮತ್ತು ಕಾವ್ಯದ ನಿಲುವು ಎರಡೂ ಹದವಾಗಿ ಬೆರೆಯುವುದು ಅಪರೂಪ. ಕವಿತೆಗಳು ಎಷ್ಟೋ ಸಾರಿ ಪ್ರಣಾಳಿಕೆಗಳಂತೆ ಕೇಳಿಸುತ್ತವೆ. ಎಷ್ಟೋ ಪ್ರಣಾಳಿಕೆಗಳು ಕಾವ್ಯದಷ್ಟೇ ಸುಳ್ಳಾಗಿರುತ್ತವೆ. ಅಡಿಗರ ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು’  ಕವಿತೆಯನ್ನೂ ಸಿದ್ಧಲಿಂಗಯ್ಯನವರ ಕ್ರಾಂತಿಪದ’ವನ್ನೂ ಸುಮ್ಮನೆ ಅಕ್ಕಪಕ್ಕದಲ್ಲಿಟ್ಟು ನೋಡಿದಾಗ ವಿಭಿನ್ನ ಗತಿ-ಸ್ಥಿತಿಗಳು ಸ್ಪಷ್ಟವಾಗುತ್ತವೆ. ಅಡಿಗರ ಕಾವ್ಯದಲ್ಲಿ ಕಟ್ಟುವುದಷ್ಟೇ ಮುಖ್ಯ, ಕೆಡಹುವುದಲ್ಲ. ನಿಮ್ಮೆಲ್ಲರನ್ನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ಹೊಸ ನಾಡೊಂದನು ಎಂದು ಅಡಿಗರು ಗರ್ಜಿಸುತ್ತಾರೆ.
ಸಿದ್ಧಲಿಂಗಯ್ಯ ಹಾಗೆ ಕಟ್ಟಿದ ನಾಡನ್ನೇ ನಿರಾಕರಿಸುತ್ತಾರೆ. ಅದು ನಮ್ಮ ನಾಡಲ್ಲ. ಅದು ನಮ್ಮ ಹಾಡಲ್ಲ. ಎಲ್ಲೆಲ್ಲಿಯೂ ಮೊಳಗುತ್ತಿದೆ ನವಕ್ರಾಂತಿಯ ಗಾನ’ ಎನ್ನುವುದರ ಜೊತೆಗೆ ಸುಲಿದವರನು ಸುಲಿವ ದಿನ ಬಂದಿತೆಂದು ಹಿಗ್ಗುತಿದೆ, ಸುಡುಗಾಡಿನ ಬಿರುಗಾಳಿಯು ಕ್ರಾಂತಿಗೀತೆ ಹಾಡಿ’ ಎಂದು ಘೋಷಿಸುತ್ತಾರೆ. ಕಟ್ಟಿದ ನಾಡನ್ನು ನಿರಾಕರಿಸಿ ಬೇರೊಂದು ನಾಡನ್ನು ಕಟ್ಟುವ ಉತ್ಸಾಹಕ್ಕಿಂತ ಹೆಚ್ಚಾಗಿ ಇಲ್ಲಿ ಕಾಣಿಸುವುದು ದಾಳಿಕಾರರ ಆಕ್ರೋಶ. ಯುದ್ಧಕ್ಕೆ ನಿಂತವರ ರಣಕಹಳೆ. ನಾನ್ ಹ್ಯಣ, ನನ್ ಸುಟ್ಬುಡಿ ಎನ್ನುವ ಮಾತಲ್ಲೂ ಅದೇ ಸಿಟ್ಟು. ಪ್ರೇಮಗೀತೆ ಬರೆಯಲು ಹೊರಟರೂ ಅವರಿಗೆ ನೆನಪಾಗುತ್ತಿದ್ದದ್ದು ಕ್ರಾಂತಿಕನ್ಯೆಯೇ.
ಕ್ರಾಂತಿಕನ್ಯೆ ಮೋಹಜನ್ಯೆ
ನಿನ್ನ ಮದುವೆ ಆಗುವೆ
ಕ್ರಾಂತಿ ಕಿಡಿಯ ಸಿಡಿಸುವಾಗ
ನಾನು ನಿನ್ನ ತಬ್ಬುವೆ.
*******

ದಿ ಸಂಡೆ ಇಂಡಿಯನ್


ಅದು ಹೋರಾಟದ ಯುಗ. ಪ್ರತಿಯೊಂದು ದೇಶಕ್ಕೂ ಅಂಥ ಎರಡು ಸ್ಥಿತಿಗಳುಂಟು ಎನ್ನುತ್ತದೆ ರಾಜ್ಯಶಾಸ್ತ್ರ. ಒಂದು fighting period. ಮತ್ತೊಂದು grabbing period. ಹೋರಾಟದ ಅವಧಿ ಮುಗಿದ ನಂತರ ಬಾಚಿಕೊಳ್ಳುವ ದಿನ ಬಂದೇ ಬರುತ್ತದೆ ಎನ್ನುವ ಖಾತ್ರಿಯಿಲ್ಲ. ಅಂಥ ದಿನಗಳು ಬಂದರೂ, ಅದರ ಲಾಭ ಹೋರಾಡಿದ ವ್ಯಕ್ತಿಗೆ ಸಿಗಲೇಬೇಕು ಅಂತೇನಿಲ್ಲ. ಒಂದು ಸಮುದಾಯಕ್ಕೆ ಸಿಗಬಹುದು. ಹಾಗೊಂದು ಸಮುದಾಯಕ್ಕಾಗಿ ಬರೆದವರು ಸಿದ್ಧಲಿಂಗಯ್ಯ.
ಕತೆ, ಕಾವ್ಯಗಳು ಬಿಡುವಿನ ವೇಳೆಯಲ್ಲಿ ಕೇಳುವ, ರಂಜನೆಯ ಮಾಧ್ಯಮವಷ್ಟೇ ಆಗಿದ್ದ ಕಾಲದಲ್ಲಿ, ನೈತಿಕತೆಯನ್ನು ತುಂಬುವುದಕ್ಕೆ, ನೀತಿಪಾಠ ಹೇಳುವುದಕ್ಕೆ ಬಳಕೆ ಆಗುತ್ತಿದ್ದ ಕಾಲದಲ್ಲಿ, ಅದನ್ನು ಅಸ್ತ್ರವನ್ನಾಗಿ, ಅರಿವನ್ನು ತೋರುವ ದೊಂದಿಯನ್ನಾಗಿ ಬಳಸಿದವರು ಸಿದ್ಧಲಿಂಗಯ್ಯ. ಅವರ ಹೊಲೆ ಮಾದಿಗರ ಹಾಡು’ ಬಿಡುಗಡೆಯಾಗಿ ಮೂವತ್ತೈದು ವರ್ಷ ಕಳೆದಿವೆ. ಪರಂಪರೆಯ ಅರಿವಿದ್ದುಕೊಂಡೇ ಬರೆಯಬೇಕು, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಒಂದು ಎಳೆಯಾದರೂ ಸಾಹಿತ್ಯದಲ್ಲಿರಬೇಕು ಎಂದು ಸಾಹಿತ್ಯ ಪರಂಪರೆಯ ವಕ್ತಾರರು ಹೇಳುತ್ತಿರುವ ದಿನಗಳಲ್ಲಿ, ಅವೆಲ್ಲದರಿಂದ ಕಳಚಿಕೊಂಡು ರಸಸಿದ್ಧಾಂತದ ಎಲ್ಲೆಗಳನ್ನು ದಾಟಿ ಸಿಡಿದು ನಿಂತದ್ದು ಸಿದ್ಧಲಿಂಗಯ್ಯನವರ ಕವಿತೆ. ಕೊಬ್ಬಿದವರ ಕರುಳ ಕಿತ್ತು ಮುಡಿಗೆ ಹೂವ ಮುಡಿಸುವೆ, ಹೀರಿದವರ ರಕ್ತದಿಂದ ಮೈಗೆ ನೀರನುಯ್ಯವೆ’ ಎಂದು ತ್ರಿಶೂಲ ಝಳಪಿಸಿದ್ದು ಅವರ ಸಾಧನೆ.
ಕಾವ್ಯಕ್ಕೇ ಇರುವ ಶಕ್ತಿಯನ್ನು ಅರ್ಥ ಮಾಡಿಕೊಂಡಿದ್ದರು ಸಿದ್ಧಲಿಂಗಯ್ಯ. ಅವರಿಗೆ ತನ್ನ ಮಾತಿನ ಮೇಲೆ ನಂಬಿಕೆಯಿತ್ತಾ ಎಂಬ ಪ್ರಶ್ನೆ ಈಗ ಬೇಡವೆಂದರೂ ಎದುರಾಗುತ್ತದೆ. ಇವರು ಬಾಯಿ ಬಿಟ್ಟೊಡನೆ ಅವರ ಬಾಯಿ ಕಟ್ಟಿತು, ಇವರ ಕಂಠ ಕೇಳಿದೊಡನೆ ಅವರ ಧ್ವನಿ ಇಂಗಿತು, ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು’  ಎಂದು ಅಬ್ಬರಿಸುವ ಕವಿಗೆ ಭವಿಷ್ಯದಲ್ಲಿ ನಂಬಿಕೆ ಇರಬೇಕಾಗುತ್ತದೆ. ದೊಡ್ಡ ದನಿಯಲ್ಲಿ ಈ ಮಾತನ್ನು ಹೇಳುವ ಹೊತ್ತಿಗೆ, ತನ್ನ ಸಮುದಾಯದ ಮೇಲೂ ನಂಬಿಕೆ ಇರಬೇಕಾಗುತ್ತದೆ. ಸಣ್ಣದೊಂದು ಸೈನ್ಯ ಇಟ್ಟುಕೊಂಡು, ದೊಡ್ಡದೊಂದು ಪಡೆಯನ್ನು ಎದುರಿಸಲು ಹೊರಟ ದೊರೆಯ ಆತ್ಮವಿಶ್ವಾಸ ಅವನಲ್ಲಿ ತುಂಬಿರಬೇಕಾಗುತ್ತದೆ.
ನಾವು ನಮ್ಮನ್ನು ಆಳಿಕೊಳ್ಳುತ್ತೇವೆ, ನಮ್ಮ ಕೈಗೆ ಅಧಿಕಾರ ಕೊಡಿ, ದೇಶ ಕೊಡಿ ಎಂಬ ಬೇಡಿಕೆಯೊಂದಿಗೆ ಶುರುವಾದ ಸ್ವಾತಂತ್ರ್ಯಹೋರಾಟಕ್ಕಿಂತ ಕಷ್ಟಕರವಾಗಿದ್ದದ್ದು ಅವರ ದಾರಿ. ತಮ್ಮವರ ಕೈಯಿಂದಲೇ ಕಿತ್ತುಕೊಳ್ಳಬೇಕಾದ ಅನಿವಾರ್ಯ.  ದಲಿತರು ಬರುವರು ದಾರಿಬಿಡಿ, ದಲಿತರ ಕೈಗೆ ರಾಜ್ಯಕೊಡಿ, ಬೆಳಗಾಯಿತು ಬಡವರಿಗೆ ಎನ್ನುವಾಗ ಅಲ್ಲಿದ್ದದ್ದು ವ್ಯಂಗ್ಯವಲ್ಲ, ಸುಡುಸುಡು ರೋಷ.
*********
ಕಾವ್ಯ ವೈಯಕ್ತಿಕ ಅನಿವಾರ್ಯತೆಯೋ ಸಾಮಾಜಿಕ ಅನಿವಾರ್ಯತೆಯೋ ಎಂಬ ದ್ವಂದ್ವ ಸಿದ್ಧಲಿಂಗಯ್ಯನವರನ್ನು ಕಾಡಿತ್ತಾ? ಕನ್ನಡದ ಬಹುತೇಕ ಕವಿಗಳನ್ನು ಅದು ಕಾಡಲಿಲ್ಲ. ನೆಮ್ಮದಿಯ ಸ್ಥಿತಿಯಲ್ಲಿದ್ದಾಗ ಕಾವ್ಯ ಹೊರಹೊಮ್ಮುತ್ತದೆ ಎಂದು ನಂಬಿ ಬರೆದವರು ಸಾಕಷ್ಟಿದ್ದರು. ಪರವಶತೆ, ಪರಕಾಯ ಪ್ರವೇಶ, ಪ್ರಕೃತಿಯೊಂದಿಗೆ ಅನುಸಂಧಾನ, ಧ್ಯಾನ, ಒಳಗಿರುವ ಕವಿ ಬರೆಸುತ್ತಾನೆ ಮುಂತಾದವುಗಳೆಲ್ಲ ಆ ಕಾಲದ ಜನಪ್ರಿಯ ನಂಬಿಕೆಗಳು. ಅವನ್ನೆಲ್ಲ ಒಂದೇ ಏಟಿಗೆ ಧಿಕ್ಕರಿಸಿ ಬರೆದವರು ಸಿದ್ಧಲಿಂಗಯ್ಯ.
ತನ್ನ ಆರಂಭದ ಆಕ್ರೋಶವನ್ನು ತಣ್ಣನೆಯ ಹಾಸ್ಯದ ಮೂಲಕ ಸಿದ್ಧಲಿಂಗಯ್ಯ ಮೀರುವುದಕ್ಕೆ ಯತ್ನಿಸಿದವರು. ಅವಮಾನವನ್ನು ಕೂಡ ತಮಾಷೆಯಾಗಿಯೇ ನಿರೂಪಿಸುತ್ತಾ ಹೋದವರು. ಅವರ ಊರುಕೇರಿ’ ಓದಿದರೆ ಅದರಲ್ಲಿ ಕೊಂಚ ಕಲ್ಪನೆಯೂ ಇರಬಹುದೇನೋ ಎಂದು ಅನುಮಾನವಾಗುತ್ತದೆ. ಅಂದಹಾಗೆ, ಆತ್ಮಚರಿತ್ರೆಯನ್ನೂ ಅವರು ಎರಡು ಭಾಗಗಳಲ್ಲಿ ಬರೆದರು. ಮೊದಲನೆಯ ಭಾಗದ ಶೈಲಿಯಿಂದ ಅವರಿಗೆ ಬಿಡಿಸಿಕೊಳ್ಳುವುದಕ್ಕೆ ಸಾಧ್ಯವಾಗಲೇ ಇಲ್ಲ.
ಸಿದ್ಧಲಿಂಗಯ್ಯನವರ ಆತ್ಮಕತೆಯ ಕುರಿತು ಬರೆಯುತ್ತಾ ಡಿ ಆರ್ ನಾಗರಾಜ್ ಹೇಳಿರುವ ಮಾತು ಅರ್ಥಪೂರ್ಣ: ಯಾವುದರ ಬಗ್ಗೆಯೂ ತೀವ್ರ ರಾಗಾವೇಶ ಸಾಧ್ಯವಾಗದೇ ಸದಾ ತುಂಟತನ, ಕೊಂಕುನಗು, ಸಂಶಯದಲ್ಲೇ ಸುತ್ತಿಬೆಳೆದ ತಲೆಮಾರು ಅದು. ನಾವು ಅರ್ಧ ನಂಬಿಕೆ, ಅರ್ಧ ಸಂಶಯದಲ್ಲಿ ಹೇಳುತ್ತಿದ್ದುದನ್ನು ಅನೇಕ ಹುಂಬರು ಪೂರ್ಣ ಆವೇಶದಿಂದ ಸ್ವೀಕರಿಸಿ ಕಳೆದೆರಡು ದಶಕಗಳಲ್ಲಿ ಅನೇಕ ಅನಾಹುತಗಳನ್ನು ಮಾಡಿದರು. ಕೆಲವು ದೊಡ್ಡ ಗಂಟಲಿನ ಮುಗ್ಧ ಗುಗ್ಗುಗಳು ಮುಂದೆ ಸಾಹಿತ್ಯ ಕಂಟಕರಾಗಿ ಪರಿವರ್ತನೆ ಆದದ್ದೂ ನಮ್ಮ ಸಹವಾಸದಿಂದಲೇ. ಅವರು ಸಿದ್ಧಾಂತಗಳಿಂದ ಚಿತ್ತಾಗಿ ಹುಚ್ಚುಹುಚ್ಚಾಗಿ ಕುಣಿದು ವಿಕಟವಿಟಗಣದಂತೆ ಮೆರೆಯುವಾಗಲೇ ಸಿದ್ಧಲಿಂಗಯ್ಯ ಅದರಿಂದ ಹೊರಗೆ ಬಂದು ಊರುಕೇರಿ ಬರೆದಿದ್ದಾರೆ’.
ಸಿದ್ಧಲಿಂಗಯ್ಯ ಹೊರಗೆ ಬಂದಿದ್ದಾರೆ ಅನ್ನುವುದಂತೂ ನಿಜ. ಮುಂದೇನು ಅನ್ನುವ ಪ್ರಶ್ನೆ ಅವರ ಮುಂದೆ ಹೇಗೋ, ಹಾಗೇ ನಮ್ಮ ಮುಂದೆಯೂ. ನಮ್ಮ ಸಿನಿಮಾ ನಟರು ಒಂದು ಇಮೇಜಿಗೆ ಕಟ್ಟು ಬಿದ್ದು ತೊಳಲಾಡುವ ಹಾಗೆ ಸಿದ್ಧಲಿಂಗಯ್ಯನವರೂ ಒದ್ದಾಡುತ್ತಿರಬಹುದೇ?
ಈ ಪ್ರಶ್ನೆಗೆ ಕಾರಣವಿದೆ. ಸಿದ್ಧಲಿಂಗಯ್ಯ ಪ್ರೇಮಗೀತೆ ಬರೆದಾಗ ಅವರು ಇಂಥದ್ದೆಲ್ಲ ಬರೆಯಬಾರದು’ ಎಂದು ಅನೇಕರು ಗದ್ದಲ ಮಾಡಿದರು.  ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ’ ಕವಿತೆ ಬರೆದಾಗಲೂ ಕೆಲವರು ಅಪಸ್ವರ ಎತ್ತಿದರು. ಒಬ್ಬ ಹೋರಾಟಗಾರ ವಿಶ್ರಮಿಸಬಾರದು, ಕೊನೆಯ ತನಕವೂ ಹೊಡೆದಾಡುತ್ತಲೇ ಇರಬೇಕು ಎಂದು ಬಯಸುವ ನಮ್ಮ ಕಣ್ಮುಂದೆ, ಕ್ರಮೇಣ ಆತ ತನ್ನ ನಿಲುವನ್ನು ಸಡಿಲಗೊಳಿಸುತ್ತಾ ಹೋಗುವವನಂತೆ ಕಾಣಿಸುತ್ತಾನೆ. ತತ್ವಗಳಿಂದ ಹೊರಗೆ ಬಂದವನಂತೆ ಕಾಣುತ್ತಾನೆ.
ಆದರೆ ಹೋರಾಟ ಕೂಡ ಒಂದು ಸ್ಥಿತಿ ಮಾತ್ರ. ಅದರಿಂದ ಹೊರಗೆ ಬರದೇ ಹೋದರೆ ಆತ ಅಲ್ಲಿಯೇ ಬಂದಿಯಾಗಿರಬೇಕಾಗುತ್ತದೆ ಹಾಗೂ ಆತ ಬಿಡುಗಡೆಗಾಗಿ ಮಾಡುವ ಹೋರಾಟವೇ ಅವನ ಪಾಲಿಗೆ ಸೆರೆಮನೆಯಾಗುತ್ತದೆ ಎಂಬುದನ್ನು ನಾವು ಅನೇಕ ಸಲ ಕಂಡುಕೊಂಡಿದ್ದೇವೆ. ಅದಕ್ಕೆ ಒಳ್ಳೆಯ ಉದಾಹರಣೆ ಕಯ್ಯಾರ ಕಿಂಙಣ್ಣ ರೈ. ಕಾಸರಗೋಡು ಕರ್ನಾಟಕಕ್ಕೆ ಸೇರುತ್ತಿಲ್ಲ, ಅವರು ಹೋರಾಟ ನಿಲ್ಲಿಸುವಂತಿಲ್ಲ.
ಸಿದ್ಧಲಿಂಗಯ್ಯ ಬಿಡುಗಡೆ ಹೊಂದಿದ್ದಾರೆ ಎಂಬ ಕಾರಣಕ್ಕೇ ನಾವು ಅವರನ್ನು ಬೆರಗು ಭರವಸೆಗಳಿಂದ ನೋಡಬಹುದಾಗಿದೆ
ವಿಜಯ ಕರ್ನಾಟಕದ ‘ರೂಪ ರೇಖೆ’ ಅಂಕಣ .

‍ಲೇಖಕರು avadhi

March 19, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

೧ ಪ್ರತಿಕ್ರಿಯೆ

  1. naresha

    bjp antha moolabhoothavadi pakshadavara krupapathraagi sthana gittisikonda namma sidda lingayya avarallave yivau, jogiyavare?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: