ಜೋಗಿ ಬರೆದಿದ್ದಾರೆ: ಊರು ಕೇರಿಯ ಹೆಸರೂ…

ಊರು ಕೇರಿಯ ಹೆಸರೂ ಗಿಡಮರಬಳ್ಳಿಯ ಹಸಿರೂ

images
-ಜೋಗಿ
ಓದುಗ ಅದೃಷ್ಟವಂತನಾದರೆ ಒಳ್ಳೆಯ ಲೇಖಕರು ಹುಟ್ಟುತ್ತಾರೆ!
ಹಾಗೊಂದು ಫಿನ್ನಿಶ್ ನಾಣ್ಣುಡಿಯಿದೆ. ಅದನ್ನೇ ಕೊಂಚ ಬದಲಾಯಿಸಿ ಲೇಖಕ ಅದೃಷ್ಟವಂತನಾದರೆ ಒಳ್ಳೆಯ ಓದುಗರು ಹುಟ್ಟಿಕೊಳ್ಳುತ್ತಾರೆ ಅಂತಲೂ ಹೇಳಬಹುದು. ಆದರೆ ಒಳ್ಳೆಯ ಬರಹ ಹೊರಹೊಮ್ಮಬೇಕಿದ್ದರೆ ಒಳ್ಳೆಯ ಓದುಗನಂತೂ ಬೇಕೇ ಬೇಕು. ಬರಹ ಮತ್ತು ಓದುಗನ ಸಂಬಂಧವನ್ನು ಕವಿಯೊಬ್ಬ ಸಕ್ಕರೆ ಮತ್ತು ನಾಲಗೆಗೆ ಹೋಲಿಸುತ್ತಾನೆ. ಸಕ್ಕರೆ ಸಿಹಿಯಾಗಿಯೇ ಇರುತ್ತದೆ. ಆದರೆ ಅದರ ಸಿಹಿ ವ್ಯಕ್ತವಾಗಬೇಕಿದ್ದರೆ ಅದು ರಸಿಕನ ನಾಲಗೆಯ ತುದಿಯಲ್ಲಿ ಕರಗಬೇಕು. ಅಂಥ ಅಮೃತಘಳಿಗೆಯಲ್ಲೇ ಶ್ರೇಷ್ಠವಾದದ್ದು , ಅತ್ಯುತ್ತಮವಾದದ್ದು ಹುಟ್ಟುತ್ತದೆ.
ಸಿನಿಮಾದಲ್ಲೂ ಅಷ್ಟೇ; ಪ್ರೇಕ್ಷಕ ಸದಭಿರುಚಿಯುಳ್ಳವನೂ ಸೌಮ್ಯ ಸ್ವಭಾವದವನೂ ಆಗಿದ್ದಾಗ ಬಂಗಾರದ ಮನುಷ್ಯ, ಎಡಕಲ್ಲು ಗುಡ್ಡದ ಮೇಲೆ, ಬೆಳ್ಳಿಮೋಡ ಮುಂತಾದ ಸಿನಿಮಾಗಳು ಬಂದವು. ಆತನ ಅಭಿರುಚಿ ಕೊಂಚ ಕಲಾತ್ಮಕವೂ ವಾಸ್ತವವಾದಿಯೂ ಆಗಿದ್ದಾಗ ಸಂಸ್ಕಾರ, ಘಟಶ್ರಾದ್ಧ, ಕಾಡು, ಒಂದಾನೊಂದು ಕಾಲದಲ್ಲಿ ಮುಂತಾದ ಚಿತ್ರಗಳು ನಿರ್ಮಾಣವಾದವು. ಈಗಿನ ಪ್ರೇಕ್ಷಕರು ಮೆಂಟಲ್ ಮಂಜ, ಡೆಡ್ಲಿ ಸೋಮದಂಥ ಚಿತ್ರಗಳನ್ನೇ ಮೆಚ್ಚಿಕೊಳ್ಳುತ್ತಿದ್ದಾರೆ. ಅಂಥ ಚಿತ್ರಗಳೇ ಅತ್ಯುತ್ತಮ ಅಂತ ನಂಬಬೇಕಾದ ಪರಿಸ್ಥಿತಿಯಿದೆ. ಹಾಗಂತ ನಂಬಿಸಲಾಗುತ್ತಿದೆ.
Fingerpaint-782238
ಅದು ಆಯಾ ಕಾಲಘಟ್ಟದ ಮಹಿಮೆ. ಇದರಲ್ಲಿ ಸರಿತಪ್ಪುಗಳ ಪ್ರಶ್ನೆಗಿಂತ ಹೆಚ್ಚಾಗಿ ಆಯಾ ಕಾಲದ ಮನಸ್ಸುಗಳು ಹೇಗೆ ಯೋಚಿಸುತ್ತವೆ ಅನ್ನುವುದನ್ನಷ್ಟೇ ನೋಡಬೇಕು. ಓದು ಕೂಡ ಫ್ಯಾಷನ್ನಿನ ಹಾಗೆ, ಮಕ್ಕಳ ಆಟದ ಹಾಗೆ. ನೀವು ಗಮನಿಸಿ ನೋಡಿ; ಒಂದೊಂದು ಸೀಸನ್ನಿನಲ್ಲಿ ಮಕ್ಕಳು ಒಂದೊಂದು ಆಟ ಆಡುತ್ತಿರುತ್ತವೆ. ಆಶ್ಚರ್ಯವೆಂದರೆ ಎಲ್ಲಾ ಮಕ್ಕಳೂ ಅದೇ ಆಟ ಆಡುತ್ತಿರುತ್ತವೆ. ಕಳೆದ ವರ್ಷ ಬುಗುರಿ, ಅದರ ಹಿಂದಿನ ವರುಷ ಗಾಳಿಪಟ, ಈ ವರುಷ ಬ್ಮಾಡ್ಮಿಂಟನ್..ಹೀಗೆ.
ಓದೂ ಅಷ್ಟೇ. ಒಂದು ಕಾಲದಲ್ಲಿ ತ್ರಿವೇಣಿ, ಎಂ. ಕೆ. ಇಂದಿರಾ, ಅನುಪಮಾ ನಿರಂಜನ ಇಷ್ಟವಾಗುತ್ತಿದ್ದರು. ಆಮೇಲೆ ಟಿ. ಕೆ. ರಾಮರಾವ್, ಜಿಂದೆ ನಂಜುಂಡಸ್ವಾಮಿ, ಭಾರತೀಸುತರ ಕಾದಂಬರಿಗಳು ಬಂದವು. ಅದಾದ ಮೇಲೆ ಒಂದಷ್ಟು ವರುಷ ಯಂಡಮೂರಿ ವೀರೇಂದ್ರನಾಥ್ ರಾಜ್ಯಭಾರ ನಡೆಯಿತು. ಸದ್ಯದ ಪ್ರಸಿದ್ಧ ಕಾದಂಬರಿಕಾರ ಯಾರು ಅನ್ನುವ ಪ್ರಶ್ನೆಯೇ ಅಪ್ರಸ್ತುತ. ಕಾದಂಬರಿಗಳನ್ನ ಮಾರಾಟಕ್ಕೋಸ್ಕರವೇ ಬರೆಯುವವರ ಸಂಖ್ಯೆ ಕಮ್ಮಿಯಾಗಿದೆ. ಈಗಿನ ಓದುಗನ ಏಕೈಕ ಆಸಕ್ತಿ; ವಿಜಯಕ್ಕೆ ಐದು ಮೆಟ್ಟಿಲು. ತಮಾಷೆಯೆಂದರೆ ಯಂಡಮೂರಿ ವೀರೇಂದ್ರನಾಥ್ ಆರಂಭದಲ್ಲಿ ವಿಜಯಕ್ಕೆ ಐದು ಮೆಟ್ಟಿಲು ಬರೆದರು. ಆಮೇಲೆ ವಿಜಯಕ್ಕೆ ಆರು ಮೆಟ್ಟಿಲು ಬರೆದರು. ಮೆಟ್ಟಿಲುಗಳ ಸಂಖ್ಯೆ ಬಹುಶಃ ಇನ್ನೂ ಹೆಚ್ಚಾಬಹುದು. ಇನ್ನೊಂದು ಇಪ್ಪತ್ತು ವರುಷದ ನಂತರ ವಿಜಯ’ ಮತ್ತೂ ಎತ್ತರಕ್ಕೆ ಹೋಗಿ ವಿಜಯಕ್ಕೆ ನೂರಿಪ್ಪತ್ತು ಮೆಟ್ಟಿಲು ಅಂತಲೂ ಬರೆಯಬೇಕಾಗಿ ಬರಬಹುದು.
 ++++
 
ಓದುಗರ ಪುಣ್ಯದ ಫಲವಾಗಿ ಹೊರಹೊಮ್ಮಿದ ಕೆಲವೇ ಕೆಲವು ಪುಸ್ತಕಗಳಲ್ಲಿ ಬಿಜಿಎಲ್ ಸ್ವಾಮಿ ಅವರ ‘ಹಸುರು ಹೊನ್ನು’ ಕೂಡ ಒಂದು. ಮತ್ತೆ ಮತ್ತೆ ಓದಿಸಿಕೊಳ್ಳುವ, ಮತ್ತೆ ಮತ್ತೆ ತನ್ನತ್ತ ಆಕರ್ಷಿಸುವ, ಕಾಡಿನ ಕಿರುಹಾದಿಯ ಸುದೀರ್ಘ ಪ್ರಯಾಣದಂತೆ ಖುಷಿಕೊಡುವ ಈ ಕೃತಿ ಕಳೆದ ಮೂವತ್ತು ವರ್ಷಗಳಲ್ಲಿ ಮೂರು ಮುದ್ರಣಗಳನ್ನಷ್ಟೇ ಕಂಡಿದೆ. ಮೇಲ್ನೋಟಕ್ಕೆ ಸಸ್ಯಶಾಸ್ತ್ರದ ನೀರಸ ಕೃತಿಯಂತೆ ಕಾಣುವ ಹಸುರು ಹೊನ್ನು’ ಅಂತರಂಗದಲ್ಲಿ ಕಾಡಿನ ಸಕಲ ಸಿರಿಸಂಪತ್ತನ್ನೂ ಅಡಕ ಮಾಡಿಕೊಂಡಿದೆ.
ಬಿಜಿಎಲ್ ಸ್ವಾಮಿ ಕೂಡ ಕಾಲಾನುಕಾಲದಿಂದ ನಮ್ಮ ಬದುಕಿನೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಒಡನಾಡಿಗಳಾಗಿ ಬೆಳೆದುಬಂದಿರುವ ಕೆಲವು ಗಿಡಮರಗಳ ಪರಿಚಯ ಮಾಡಿಕೊಡುವುದು ಈ ಬರವಣಿಗೆಯ ಪ್ರಯತ್ನ ಅಂತಷ್ಟೇ ಹೇಳಿದ್ದಾರೆ.
ಆದರೆ ಹಸುರುಹೊನ್ನು’ ಇದಷ್ಟೇ ಅಲ್ಲ. ಅದೊಂದು ಅಪಾರ ಹಾಸ್ಯಪ್ರಜ್ಞೆಯ ಕೃತಿ. ಗಿಡಮರಗಳ ಪರಿಚಯದ ಜೊತೆ ಅದು ಮನುಷ್ಯ ಸ್ವಭಾವದ ಪರಿಚಯವನ್ನೂ ಮಾಡಿಕೊಡುತ್ತದೆ. ಸಲೀಂ ಆಲಿ ಹಕ್ಕಿಗಳ ಪರಿಚಯ ಮಾಡಿಕೊಟ್ಟಷ್ಟೇ ಉತ್ಸಾಹದಿಂದ ಸ್ವಾಮಿ, ಗಿಡಗಳ ಬಗ್ಗೆ ಹೇಳುತ್ತಾರೆ. ಜೊತೆಗೇ ಸಾಹಿತ್ಯದ ಸಾಲುಗಳನ್ನೂ ಕಾವ್ಯಚಿತ್ರಗಳನ್ನೂ ನೀಡುತ್ತಾರೆ. ಉದಾಹರಣೆಗೆ ನೆಲ್ಲಿ;
ಆಗುಂಬೆ ಹಳ್ಳಿಗೆ ಹತ್ತು ಮೈಲಿ ದೂರದಲ್ಲಿ ಎಮ್ಮೆ ಕಲ್ಕೆರೆ ಎಂಬ ಪ್ರದೇಶವಿದೆ. ಬಿಡದಿಯಿಂದ ಹೊರಟಾಗಲೇ ಬಿಸಿಲು ಅಧಿಕವಾಗಿತ್ತು. ಅರ್ಧ ಮೈಲಿ ನಡೆಯುವುದರೊಳಗೇ ವಿದ್ಯಾರ್ಥಿಗಳು ಸೊರಗಿ ಒಣಗಿದರು. ಎರಡು ಮೂರು ನೆಲ್ಲಿ ಮರಗಳು ಕಲ್ಪವೃಕ್ಷದಂತೆ ಎದುರುಗೊಂಡವು. ವಿದ್ಯಾರ್ಥಿಗಳಿಗೆ ಸತ್ತು ಬದುಕಿದಷ್ಟು ಸಂತೋಷ. ಒಂದು ಹೀಚುಗಾಯಿಯೂ ಇಲ್ಲದಂತೆ ಮರಗಳನ್ನು ಕ್ಷಣಮಾತ್ರದಲ್ಲಿ ಬೋಳಿಸಿದರು.
ನೆಲ್ಲಿಕಾಯಿ ತಿಂದು ನೀರು ಕುಡಿದಾಗ ಅನುಭವವಾಗುವ ಸಿಹಿ ಎಳೆ ಮಗುವಿಗೆ ತಾಯಿಯಾಡುವ ಮುದ್ದು ಮಾತುಗಳಂತೆ ಇನಿದಾಗಿರುತ್ತದೆಂದು ಸಂಘಕವಿಗಳು ಹೇಳಿದ್ದು ಇಂದಿನ ಅನುಭವದಲ್ಲಿ ನಿಂತಿರುವುದೇ ಆಗಿದೆ. ನೆಲ್ಲಿಯ ಒಗರು ರುಚಿಯನ್ನು ಅವರೂ ಕಂಡಿದ್ದವರೇ. ಬಂಡೆಗಳ ಮೇಲೆ ಉದುರಿಬಿದ್ದ ನೆಲ್ಲಿಕಾಯಿಗಳನ್ನು ಸ್ಪಟಿಕದ ನೆತ್ತಕ್ಕೆ ಹೋಲಿಸಿದರು. ಹೀಚುಕಾಯಿಗಳು ಮೊಲದ ಕಣ್ಣುಗಳಂತೆ ಕವಿಗಳಿಗೆ ಕಂಡವು.
ಋಗ್ವೇದಕಾಲದಿಂದ ಅಮಲಾ, ಅಮಲಕಾ ಎಂದು ಪರಿಚಿತವಾಗಿರುವ ಅಂಗೈಯ ನೆಲ್ಲಿಕಾಯಿ’ ಆಗಿರುವ ಮರ ಇದು. ಬೌದ್ದರ ಕಾಲದಲ್ಲಿ ಬೇನೆಯಿಂದ ನರಳುತ್ತಿದ್ದ ಭಿಕ್ಷುಗಳಿಗೆ ನೆಲ್ಲಿಕಾಯಿಯ ಪಥ್ಯಾಹಾರ. ಈಗಲೂ ಪಥ್ಯದ ಉಣಿಸಾಗಿ ನೆಲ್ಲಿಚೆಟ್ಟು ಉಪಯೋಗದಲ್ಲಿದೆ. ಆಯುರ್ವೇದದ ಚರಕ ಸಂಹಿತೆಯಲ್ಲಿ ನೆಲ್ಲಿಕಾಯಿ ಮುಖ್ಯ ಸ್ಥಾನ. ಕಾಯಕಲ್ಪ ಚಿಕಿತ್ಸೆಗೆ ಒದಗುವ ಮೂಲವಸ್ತುಗಳಲ್ಲಿ ಇದೂ ಒಂದು. ತ್ರಿಫಲಾಚೂರ್ಣದ ಒಂದು ಅಂಶ ಇದು. ಸಾಲಾಮಿಶ್ರಿ ಮುರಬ್ಬ ತಯಾರಿಕೆಗೆ ಮೂಲವಸ್ತು. ವಿಟಮಿನ್ ಸಿ ಶೇಖೃತವಾಗಿರುವ ಗುಳಿಗೆ. ದಿನಕ್ಕೆ ಎರಡು ದೊಡ್ಡ ಕಿತ್ತಳೆ ಹಣ್ಣು ತಿನ್ನುವುದೂ ಒಂದೇ; ಒಂದೇ ಒಂದು ನೆಲ್ಲಿಕಾಯಿ ತಿನ್ನುವುದೂ ಒಂದೆ.
ಕಾಡೇ ಹೊತ್ತಿ ಉರಿಯುತ್ತಿರುವಂತೆ ಕಾಣಿಸುವ ಬೂರುಗ, ಮುದುರಿ ಕೂತ ಚಿಟ್ಟೆಯಂತೆ ಕಾಣಿಸುವ ಮಾಧವೀಲತೆ, ತೇವ ಆರಿದಾಗ ಬಗ್ಗಿ ಡೊಂಕಾಗದ ತೇಗ, ನಿಂಬೆಹಣ್ಣಿನ ವಾಸನೆ ಸೂಸುವ ಮಜ್ಜಿಗೆ ಹುಲ್ಲು, ರೇಲ್ವೇ ಕಂಬಿಗಳ ಕೆಳಗೆ ಅಡ್ಡಡ್ಡವಾಗಿ ಮಲಗಿರುವ ಹಾಸುಗಳಿಗೆ ಬಳಕೆಯಾಗುವ, ಕಂಪನ ಮತ್ತು ಭಾರವನ್ನು ತಡೆಯುವ ಶಕ್ತಿಯಿರುವ ಧೂಮ-ಹೀಗೆ ಮರಗಿಡಗಳ ಉಪಯೋಗ, ಗುಣಲಕ್ಷಣಗಳನ್ನೂ ಏಕಕಾಲಕ್ಕೆ ವಿವರಿಸುತ್ತಾ ಹೋಗುತ್ತಾರೆ. ಅವು ಎಲ್ಲಿ ಬೆಳೆಯುತ್ತವೆ ಅನ್ನುವ ವಿವರಣೆಯನ್ನೂ ನೀಡುತ್ತಾರೆ. ಕಾಡಿನಲ್ಲಿ ಅಲೆದಾಡುವವರು ಈ ಕೃತಿಯನ್ನು ಓದಿಕೊಂಡಿದ್ದರೆ, ನೆನಪಿಟ್ಟುಕೊಂಡಿದ್ದರೆ ಚಾರಣವನ್ನು ಮತ್ತಷ್ಟು ಸೊಗಸಾದ ಅನುಭವವಾಗಿ ಪರಿವರ್ತಿಸಿಕೊಳ್ಳಬಹುದು.
 ++++
ಯಾವ ಕೃತಿಗಳು ಯಾವ ಕಾರಣಕ್ಕೆ ಖುಷಿ ಕೊಡುತ್ತವೆ ಅಂತ ಹೇಳುವುದೂ ಕಷ್ಟ. ಕೆಲವರು ಅತ್ಯಂತ ಪ್ರೀತಿಯಿಂದ ಓದುವುದು ಪದಕೋಶವನ್ನು. ಮತ್ತೆ ಕೆಲವರಿಗೆ ಪಾವೆಂ ಆಚಾರ್ಯರ ಪದಾರ್ಥ ಚಿಂತಾಮಣಿ ಇಷ್ಟವಾಗಬಹುದು. ಇಗೋ ಕನ್ನಡದ ವಿವರಗಳು ಆಸಕ್ತಿ ಹುಟ್ಟಿಸಬಹುದು.
ಅದರ ಹಾಗೇ ತುಂಬ ಕುತೂಹಲ ಮೂಡಿಸುವ ಮತ್ತೊಂದು ಪುಸ್ತಕವಿದೆ. ಅದರ ಹೆಸರು ‘ಕರ್ನಾಟಕ ಗ್ರಾಮಸೂಚಿ’. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹೊರತಂದ ಹಳೆಯ ಪ್ರಜಾಮತ ಸೈಜಿನ ಮುನ್ನೂರು ಪುಟಗಳ ಪುಸ್ತಕದ ಬೆಲೆ ಹದಿನಾರು ರುಪಾಯಿ ಎಪ್ಪತ್ತೈದು ಪೈಸೆ.
ಇದು ಕರ್ನಾಟಕದ ಗ್ರಾಮಗಳ ಜಿಲ್ಲಾ ಹಾಗೂ ತಾಲೂಕುವಾರು ಪಟ್ಟಿ. ಇದನ್ನು ಸಂಗ್ರಹಿಸಿದವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶ್ರೀನಿವಾಸ ರಿತ್ತಿ. ಇದರಲ್ಲಿ ಜಿಲ್ಲಾವಾರು ಗ್ರಾಮಗಳ ವಿವರಗಳು ಬರುತ್ತವೆ. ಉದಾಹರಣೆಗೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕನ್ನು ತೆಗೆದುಕೊಳ್ಳಿ. ಅಲ್ಲಿ ಬರುವ ಗ್ರಾಮಗಳನ್ನು ವರ್ಣಾನುಕ್ರಮದಲ್ಲಿ ನೀಡಲಾಗಿದೆ.
ಅಗಸೂರು, ಅಗ್ಗರಗೋಣ, ಅಚ್ಚೆ, ಅಡಿಗೋಣ, ಅಡ್ಲೂರು, ಅಂಕೋಲಾ, ಅಲಗೇರಿ, ಅವರ್ಸಾ, ಅಂದ್ಲೆ, ಉಳುವರೆ, ತಳಗದ್ದೆ, ನದೀಬಾಗ, ನವಗಡ್ಡೆ, ಮೊಗಟಾ.. ಹೀಗೆ ಪ್ರತಿಯೊಂದು ಸಣ್ಣ ಊರಿನ ಹೆಸರನ್ನೂ ಬಿಟ್ಟಿಲ್ಲ ಶ್ರೀನಿವಾಸ ರಿತ್ತಿ.
ತುಂಬ ಕುತೂಹಲದಿಂದ ಓದಿಸಿಕೊಳ್ಳುವ ಕೃತಿ ಇದು. ಇಂಥ ಅನೇಕ ಕೃತಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಭಂಡಾರದಲ್ಲಿದೆ. ಅವುಗಳನ್ನು ಹುಡುಕುವುದೇ ಒಂದು ಸಮಸ್ಯೆ. ಬೆಂಗಳೂರಿನ ಕನ್ನಡ ಭವನದ ತಳಮನೆಯಲ್ಲಿರುವ ಸಂಸ್ಕೃತಿ ಇಲಾಖೆಯ ಗೋಡೌನಿಗೆ ಹೋದರೆ ಒಂದು ಜೀವಮಾನಕ್ಕಾಗುವಷ್ಟು ಒಳ್ಳೆಯ ಪುಸ್ತಕಗಳನ್ನು ಅತ್ಯಂತ ಕಡಿಮೆ ಬೆಲೆಗೆ ಕೊಂಡು ತರಬಹುದು.
ಹಳ್ಳಿ ಮತ್ತು ಪಟ್ಟಣಗಳ ಹೆಸರುಗಳು ಕಾಲಕಾಲಕ್ಕೆ ಬದಲಾಗುತ್ತಾ ಬರುವ ಪ್ರಕ್ರಿಯೆಯೂ ಗಮನಾರ್ಹ. ಆಳುವ ಅರಸ ಬದಲಾದಾಗ, ಸರ್ಕಾರ ಬದಲಾದಾಗ ಊರುಗಳ ಹೆಸರು ಬದಲಾಗಿದ್ದಿದೆ. ಹಳೆಯ ಊರು ಹಾಳಾಗಿಯೋ, ಮುಳುಗಡೆಯಾಗಿಯೋ ಹೋದಾಗ ಹಳೆ ಹೆಸರೂ ಮಾಯವಾಗಿ ಹೊಸೂರು’ , ಹೊಸಹಳ್ಳಿ ಹುಟ್ಟಿಕೊಳ್ಳುತ್ತದೆ. ಎಷ್ಟೋ ಸಂದರ್ಭದಲ್ಲಿ ಹೆಸರುಗಳು ವಿರೂಪಗೊಂಡು ಮೂಲ ಸ್ವರೂಪವನ್ನೇ ಕಳಕೊಳ್ಳುವುದಿದೆ. ಹಲಸೂರು ಕ್ರಮೇಣ ಅಲಸೂರು ಆದಂತೆ!
ಇವನ್ನೆಲ್ಲ ಈ ಕೃತಿಯಲ್ಲಿ ಗುರುತಿಸಬಹುದು.

‍ಲೇಖಕರು avadhi

May 10, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

4 ಪ್ರತಿಕ್ರಿಯೆಗಳು

 1. ಟೀನಾ

  ಜೋಗಿಯವರೆ,
  ತಮಾಷೆ ಅಂದರೆ ನಾನು ಈಗ ತಾನೆ ’ಹಸುರು ಹೊನ್ನು’ ಅನ್ನ ಸುಮಾರು
  ಹತ್ತು ವರುಷದ ಬಳಿಕ ಪುನಹ ಓದಿ ಮುಗಿಸಿದೆ!! ಅಗಲೆ ನಿಮ್ಮ ಬರಹ ಇಲ್ಲಿದೆ.
  ಅಂತಹ ಪುಸ್ತಕಗಳು ಬರೆಯಲ್ಪಟ್ಟಿರೋದು ನಮ್ಮ ಪುಣ್ಯ.

  ಪ್ರತಿಕ್ರಿಯೆ
 2. G N Mohan

  ‘ಹಸುರು ಹೊನ್ನು’ ನನ್ನ ಮೆಚ್ಚಿನ ಕೃತಿಗಳಲ್ಲೊಂದು. ಅಷ್ಟೇ ಅಲ್ಲ ಅವರ ‘ಅಮೆರಿಕದಲ್ಲಿ ನಾನು’ ಪ್ರವಾಸ ಕಥನಗಳ ಸಾಲಿನಲ್ಲಿಯೇ ಭಿನ್ನವಾಗಿ ಸೆಳೆಯುವ ಕೃತಿ. ‘ನಮ್ಮ ಹೊಟ್ಟೆಯಲ್ಲೊಂದು ದಕ್ಷಿಣ ಅಮೇರಿಕಾ’ ಬರವಣಿಗೆ ಹೇಗಿರಬೇಕು ಎಂದು ಕಲಿಸಿದ ಕೃತಿ. ‘ತಮಿಳು ತಲೆಗಳ ನಡುವೆ’ ಕಾಲೇಜು ರಂಗ ಎಲ್ಲವೂ ಬಿ ಜಿ ಎಲ್ ಟಚ್ ಇರುವ ಕೃತಿಗಳು. ಓದಲೇಬೇಕು ಮತ್ತೆ ಮತ್ತೆ…

  ಪ್ರತಿಕ್ರಿಯೆ
 3. tumkurnaveed

  ಜೋಗಿಯವರೇ,
  ಬಿಜಿಎಲ್ ಸ್ವಾಮಿ ಅವರ ಪುಸ್ತಕಗಳೇ ಬಾಟನಿ ವಿದ್ಯಾರ್ಥಿಗಳಿಗೆ ಬೈಬಲ್ ಇದ್ದ ಹಾಗೆ. ಬಾಟನಿ ವಿದ್ಯಾರ್ಥಿ ಅಲ್ಲದ ನನ್ನಂಥವನು ಕುತೂಹಲಕ್ಕಾಗಿ ಪ್ರಾರಂಭಿಸಿದ ಅವರ ಪುಸ್ತಕಗಳು ಎಲ್ಲವನ್ನು ಕೊಂಡು ನನ್ನಲ್ಲಿ ಇಂದಿಗೂ -೨೫ ವರ್ಷಗಳಿಂದ ಜೋಪಾನವಾಗಿ ನನ್ನ ಅಮೂಲ್ಯ ಆಸ್ತಿ ಎಂಬಂತೆ ಇಟ್ಟಿದ್ದೇನೆ. ಪುನಃ ಲಹರಿಗೆ ಕೊಂಡೋಯ್ದಕ್ಕಾಗಿ ಥ್ಯಾಂಕ್ಸ್.
  ತುಮಕೂರ್ ನವೀದ್

  ಪ್ರತಿಕ್ರಿಯೆ
 4. ಅನಿಕೇತನ

  “ಬರಹ ಮತ್ತು ಓದುಗನ ಸಂಬಂಧವನ್ನು ಕವಿಯೊಬ್ಬ ಸಕ್ಕರೆ ಮತ್ತು ನಾಲಗೆಗೆ ಹೋಲಿಸುತ್ತಾನೆ. ಸಕ್ಕರೆ ಸಿಹಿಯಾಗಿಯೇ ಇರುತ್ತದೆ. ಆದರೆ ಅದರ ಸಿಹಿ ವ್ಯಕ್ತವಾಗಬೇಕಿದ್ದರೆ ಅದು ರಸಿಕನ ನಾಲಗೆಯ ತುದಿಯಲ್ಲಿ ಕರಗಬೇಕು. ಅಂಥ ಅಮೃತಘಳಿಗೆಯಲ್ಲೇ ಶ್ರೇಷ್ಠವಾದದ್ದು , ಅತ್ಯುತ್ತಮವಾದದ್ದು ಹುಟ್ಟುತ್ತದೆ.” thats the thinking….really nice article.
  Thank you.
  Sunil.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: