ಜೋಗಿ ಬರೆದಿದ್ದಾರೆ: ಒಂದು ಸಿಗರೇಟಿನ ಕುರಿತು!

jogi1
ಸಿಗರೇಟು ಬಿಟ್ಟುಬಿಡಿ ಅಂದರು.
ಇಲ್ಲ, ಬಿಡೋಲ್ಲ ಅಂದೆ.
ಅವರು ಸಿಗರೇಟು ಹೇಗೆ ಹಾನಿಕರ ಅಂತ ವಿವರಿಸುತ್ತಾ ಹೋದರು. ನಾನು ಸುಮ್ಮನೆ ಕೇಳಿಸಿಕೊಳ್ಳುತ್ತಾ ಕೂತೆ. ಅವರ ಮನೆಯ ಅಂಗಳದಲ್ಲಿ ಮಾವಿನ ಮರ ಜೊಂಪೆ ಜೊಂಪೆ ಮಾವಿನ ಕಾಯಿಗಳನ್ನು ಬಿಟ್ಟು ಮೈತುಂಬಿಕೊಂಡು ನಿಂತಿತ್ತು. ಎಳೆಬಿಸಿಲಿಗೆ ಮಾವಿನ ಕಾಯಿ ನಳನಳಿಸುತ್ತಿತ್ತು. ಕಲ್ಲೆಸೆದು ಮಾವಿನ ಕಾಯಿ ಕಿತ್ತು ಅದರ ಪರಿಮಳಕ್ಕೆ ಮೈಮರೆಯಬೇಕು ಅನ್ನಿಸಿತು. ಆದರೆ ಅವರ ಭಾಷಣ ಕೇಳುತ್ತಾ ಕೂತಿದ್ದೆ.

ಅವರಂತೂ ನನ್ನ ಸಿಗರೇಟು ಚಟ ಬಿಡಿಸಲೇಬೇಕು ಎಂದು ಪಣತೊಟ್ಟಂತಿತ್ತು. ಸಿಗರೇಟು ಸೇದೋದರಿಂದ ನಿಮಗೇನು ಸಿಗುತ್ತೆ? ಕೇಳಿದರು. ಬೂದಿ ಅಂದೆ. ಗಹಗಹಿಸಿ ನಕ್ಕರು. ನಗುವಾಗಲೂ ಅವರು ತಮ್ಮ ದುರುದ್ದೇಶದಿಂದ ಒಂದಿಷ್ಟೂ ಸರಿದಂತೆ ನನಗೆ ಅನ್ನಿಸಲಿಲ್ಲ.
ಅಷ್ಟು ಹೊತ್ತಿಗೆ ಕಡುಬು ಬಂತು. ಹಲಸಿನ ಎಲೆಯನ್ನು ಪೊಟ್ಟಣ ಕಟ್ಟಿ ಮಾಡಿದ ಬಿಸಿಬಿಸಿ ಕಡುಬು. ಅದಕ್ಕೆ ರುಚಿಕಟ್ಟಾದ ಮಾವಿನಕಾಯಿ ಚಟ್ನಿ. ನಾನೊಂದು ತುಂಡು ಮುರಿದು ಬಾಯಿಗಿಡುತ್ತಿದ್ದಂತೆ ಅವರು ಮತ್ತೆ ಬಾಯಿಹಾಕಿದರು.
ಸಿಗರೇಟು ಸೇದುವುದರಿಂದ ಟೇಸ್ಟ್ ಬಡ್ಸ್ ಮುರುಟಿಹೋಗುತ್ತೆ. ರುಚಿಯೇ ಹತ್ತೋದಿಲ್ಲ. ಒಂದು ವಾರ ಸಿಗರೇಟು ಬಿಟ್ಟು ನೋಡಿ ಬೇಕಿದ್ರೆ. ನಿಮ್ಮ ರುಚಿಯೇ ಬದಲಾಗುತ್ತೆ.
ಗೊತ್ತು ಅಂದೆ. ಅದಕ್ಕೇ ಸಿಗರೇಟು ಬಿಟ್ಟವರು ದಪ್ಪಗಾಗುತ್ತಾ ಹೋಗುತ್ತಾರೆ. ಇದ್ದಕ್ಕಿದ್ದ ಹಾಗೆ ಅವರಿಗೆ ರುಚಿ ಸಿಕ್ಕಿ ಜಾಸ್ತಿ ತಿನ್ನೋದಕ್ಕೆ ಶುರುಮಾಡ್ತಾರೆ. ಸಿಗರೇಟು ಸೇದಿದ್ದರಿಂದ ಆಗುವಷ್ಟೇ ಅಪಾಯ ದಪ್ಪಗಾಗುವುದರಿಂದಲೂ ಆಗುತ್ತದೆ ಅಂತ ನಿಮ್ಮ ವಿಜ್ಞಾನ ಹೇಳುತ್ತದಲ್ಲ?
ಅವರು ಮೌನವಾದರು. ಕಾಫಿ ಬಟ್ಟಲು ಕೈಗೆತ್ತಿಕೊಂಡರು. ಮನೆಯಲ್ಲಿ ಪುಡಿಮಾಡಿದ ಕಾಫಿಬೀಜ. ಕಾಫಿ ಘಮಘಮಿಸುತ್ತಿತ್ತು. ಕಾಫಿ ಕುಡಿಯೋದೂ ಆರೋಗ್ಯಕ್ಕೆ ಹಾನಿಕರ ಅಲ್ವೇ ಅಂದೆ. ಊಹೂಂ ಅಂದರು. ನಿಕೋಟಿನ್ ಮಾಡುವ ಪರಿಣಾಮವೇ ಬೇರೆ, ಕೆಫಿನ್ ಮಾಡುವ ಪರಿಣಾಮವೇ ಬೇರೆ. ನಿಕೋಟಿನ್ ರಕ್ತನಾಳಗಳನ್ನು ಬ್ಲಾಕ್ ಮಾಡುತ್ತದೆ.
ನಿಕೋಟಿನ್ ಅಲ್ಲ ಆ ಕೆಲಸ ಮಾಡೋದು, ನಿಕೋಟಿನ್‌ನಿಂದಾಗಿ ರಕ್ತನಾಳ ಬ್ಲಾಕ್ ಆಗುತ್ತೆ ಅಂತ ಯಾರೂ ಪ್ರೂವ್ ಮಾಡಿಲ್ಲ. ತೋರಿಸಿ ನೋಡೋಣ ವರದಿ ಅಂದೆ. ನಾಳೆ ಇಂಟರ್‌ನೆಟ್‌ನಲ್ಲಿ ಹುಡುಕೋಣ ಅಂದರು.
ಸಿಗರೇಟಿನಿಂದ ಆಗುವ ದುಷ್ಪರಿಣಾಮಗಳ ಕುರಿತ ಬೊಬ್ಬೆಯೆಲ್ಲ ಸುಳ್ಳು ಎಂದು ಅವರಿಗೆ ಸಾಕ್ಷೀಸಮೇತ ತೋರಿಸಬೇಕು ಅನ್ನಿಸಿತು. ಕಾಫಿ ಕುಡೀಬೇಡಿ ಅಂದರೆ ಕಾಫಿ ಬೆಳೆಗಾರರೆಲ್ಲ ಕಂಗಾಲಾಗುತ್ತಾರೆ. ಇಲ್ಲ., ಕಾಫಿ ಒಳ್ಳೇದು ಅನ್ನುತ್ತಾರೆ. ಮೊಟ್ಟೆ ಕೆಟ್ಟದ್ದು ಅಂದರೆ ಕೋಳಿ ಸಾಕಣೆಯ ಆರ್ಥಿಕತೆ ಕುಸಿದು ಬೀಳುತ್ತದೆ. ಅದಕ್ಕೆ ಸರ್ಕಾರವೇ ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಎನ್ನುತ್ತದೆ. ಟೀ ಕೆಟ್ಟದ್ದೋ ಒಳ್ಳೆಯದೋ ಎಂದು ಯಾರೂ ಯೋಚಿಸಲಿಕ್ಕೇ ಹೋಗುವುದಿಲ್ಲ. ಹೊತ್ತು ಹೊತ್ತಿಗೆ ಹೊಟ್ಟೆಗೆ ಟೀ ಸುರಿದುಕೊಂಡು ಕೋಟ್ಯಂತರ ಜನ ಸುಖವಾಗಿದ್ದಾರೆ.
ಗುಟ್ಕಾ ಅಪಾಯಕಾರಿ ಅಂತ ಬೊಬ್ಬೆ ಹೊಡೆದದ್ದೇ ಬಂತು. ಅದು ಬೇರೆ ಬೇರೆ ಹೆಸರಿನಲ್ಲಿ ಹಾಜರಾಗಿದೆ. ಅದೇನಾದರೂ ಪೂರ್ತಿ ನಿಂತು ಹೋದರೆ ಅಡಕೆ ಬೆಳೆಗಾರ ಕಂಗಾಲಾಗುತ್ತಾನೆ. ಹೀಗೆ ಆರ್ಥಿಕತೆಯ ಮೂಲಕ ಅವರನ್ನು ಅಲ್ಲಾಡಿಸಲು ಯತ್ನಿಸಿದೆ. ತಂಬಾಕು ಬೆಳೆಗಾರನ ಕಷ್ಟ, ಅವನೂ ಹೇಗೆ ಟೊಮ್ಯಾಟೋ ಬೆಳೆಯುವ ರೈತನ ಹಾಗೇ ದುರ್ಬಲ ಎಂದು ವಿವರಿಸಿದೆ. ಅದೆಲ್ಲ ಸರಿ, ಆದ್ರೆ ನೀವು ಸಿಗರೇಟು ಸೇದಬೇಡಿ ಅಂದರು.
******
ಸಿಗರೇಟು ಸೇದುವವರಲ್ಲಿ ಎರಡು ರೀತಿಯ ಮಂದಿಯಿದ್ದಾರೆ. ಮೊದಲನೆಯ ಗುಂಪಿಗೆ ಸೇರಿದವರು ನಾನು ಸಿಗರೇಟು ಸೇದಬೇಕು ಎಂದುಕೊಂಡು ಸೇದುವವರು. ಅವರಿಗೆ ಸಿಗರೇಟು ಬಿಡಲಿಕ್ಕೆ ಗೊತ್ತಿದೆ. ಆದರೆ ಬಿಡೋದಕ್ಕೆ ಇಷ್ಟವಿಲ್ಲ. ಸಿಗರೇಟನ್ನು ಅಂಥವರು ಇಷ್ಟಪಟ್ಟು ಸೇದುತ್ತಾರೆ. ಅದರಿಂದಾಗುವ ಪರಿಣಾಮ, ಜನಾಪವಾದ, ಕಳಂಕ, ಸಾಮಾಜಿಕ ಹಾನಿಗಳನ್ನು ಅವರು ಲೆಕ್ಕ ಹಾಕುವುದಿಲ್ಲ. ಸಿಗರೇಟು ಅವರಿಗೆ ಅತ್ಯಂತ ಸಂತೋಷಕೊಡುವ ಒಂದು ಕ್ರಿಯೆ. ಓದಿನಂತೆ, ಸಂಗೀತ ಕೇಳಿದಂತೆ, ಒಳ್ಳೆಯ ಊಟದಂತೆ ಸಿಗರೇಟು.
ಎರಡನೆಯ ಗುಂಪಿನವರ ಪಾಲಿಗೆ ಸಿಗರೇಟೆಂದರೆ ಕೆಡುಕಿನ ಪರಮಾವಧಿ. ಅವರಿಗೆ ಅದನ್ನು ಕಂಡರಾಗದು. ಆದರೆ ಅವರೂ ಸಿಗರೇಟು ಸೇದುತ್ತಾರೆ. ಇಷ್ಟಪಟ್ಟು ಸೇದುವವರಿಗಿಂತ ಜಾಸ್ತಿ ಸೇದುತ್ತಾರೆ. ಪ್ರತಿ ಸಿಗರೇಟು ಸೇದುವಾಗಲೂ ಇದೇ ಕೊನೆ ಅಂದುಕೊಳ್ಳುತ್ತಾರೆ. ಪ್ರತಿ ರಾತ್ರಿ ನಾಳೆಯಿಂದ…. ಎಂದು ಪ್ರತಿಜ್ಞೆ ಮಾಡುತ್ತಾರೆ. ಹುಟ್ಟುಹಬ್ಬ, ಜನವರಿ ಒಂದು, ಯುಗಾದಿ, ಸಂಕ್ರಾಂತಿಗಳಂದು ಕೂಡ ಇನ್ನು ಮೇಲೆ ಸಿಗರೇಟು ಸೇದುವುದಿಲ್ಲ ಅಂತ ಪ್ರಮಾಣ ಮಾಡಿ ಅದನ್ನು ತಾವೇ ಮುರಿದು, ಆ ಪಶ್ಚಾತ್ತಾಪ ಮತ್ತು ಪಾಪಪ್ರಜ್ಞೆಯಲ್ಲಿ ಮತ್ತಷ್ಟು ಸಿಗರೇಟು ಸೇದುತ್ತಾರೆ.
ಮೊದಲ ಗುಂಪಿಗೆ ಸೇರಿದವರ ಸಂಖ್ಯೆ ತೀರಾ ಕಡಿಮೆ. ಅವರು ಅಲ್ಪಸಂಖ್ಯಾತರು. ಸಿಗರೇಟಿಗೆ ಘನತೆಯನ್ನು ಉಳಿಸಿದವರು ಅವರೇ. ನಾವು ಸೇದುವ ಸಿಗರೇಟನ್ನು ನಾವೇ ಪ್ರೀತಿಸದಿದ್ದರೆ, ಮತ್ತಿನ್ಯಾರು ಪ್ರೀತಿಸಬೇಕು ಹೇಳಿ? ಹೆಂಡತಿಯನ್ನು ಸದಾ ಆಡಿಕೊಂಡು, ಅವಳ ಬಗ್ಗೆ ಬೇಸರ ಪಟ್ಟುಕೊಂಡು ಸಂಸಾರ ಮಾಡುವುದನ್ನು ಸುಖ ಸಂಸಾರ ಎನ್ನಲಾದೀತೇ?
ಸಿಗರೇಟನ್ನು ಘನತೆಯಿಂದ ಸೇದುವವರನ್ನು ನೀವು ಖಂಡಿತಾ ಮೆಚ್ಚಿಕೊಳ್ಳುತ್ತೀರಿ. ಅವರು ಎರಡನೆ ಗುಂಪಿಗೆ ಸೇರಿದವರ ಹಾಗೆ ಚಡಪಡಿಸುವುದಿಲ್ಲ. ಇವತ್ತು ಜಾಸ್ತಿ ಸೇದಿದೆ ಎಂದು ಮರುಗುವುದಿಲ್ಲ, ಬೆಳಗ್ಗೆಯಿಂದ ಒಂದೇ ಒಂದು ಸೇದಿದೆ ಎಂದು ಸಂಭ್ರಮಿಸುವುದಿಲ್ಲ. ಹಾಗೇ ನೋಡಿದರೆ ಅವರಿಗೆ ಸಿಗರೇಟು ಸೇದುವುದು ಒಂದು ಪ್ರತ್ಯೇಕ ಪ್ರಕ್ರಿಯೆಯೇ ಅಲ್ಲ. ಅದು ಕೂಡ ಉಸಿರಾಟದಷ್ಟೇ ಸಹಜ, ಆಕಳಿಸಿದಷ್ಟೇ ಸರಾಗ. ನಿದ್ದೆ ಹೋದಷ್ಟೇ ಸರಳ. ಇವರು ಎಲ್ಲರೂ ಇರುವಾಗ ಕದ್ದು ಹೋಗಿ ಪುಸಪುಸ ಎಂದು ಎರಡು ದಮ್ಮು ಹೊಡೆದು ಬರುವುದಿಲ್ಲ. ಸಿಗರೇಟು ಸೇದಬಾರದ ಜಾಗಕ್ಕೆ ಹೋದಾಗ ಅದಕ್ಕಾಗಿ ಹಂಬಲಿಸಿ ಹೇಗಾದರೂ ಒಂದು ಸೇದಿಬಿಡೋಣ ಎಂದು ವಿಲವಿಲ ಒದ್ದಾಡುವುದಿಲ್ಲ. ಒಳ್ಳೆಯ ಏಕಾಂತ ಸಿಕ್ಕಾಗ, ಮನಸ್ಸು ಪ್ರಪುಲ್ಲವಾಗಿದ್ದಾಗ ಜಗತ್ತನ್ನೇ ಮರೆಯುವ ಹಾಗೆ ಸಿಗರೇಟು ಸೇದುತ್ತಾರೆ. ಅದರಲ್ಲಿ ತನ್ಮಯರೂ ಆಗುತ್ತಾರೆ. ಆ ತನ್ಮಯತೆಯಲ್ಲೇ ಅವರ ಶ್ರದ್ಧೆ ಗೋಚರಿಸುತ್ತದೆ. ಅಂಥವರು ಜಗತ್ತಿನಲ್ಲಿ ಯಾವ ಕೆಲಸವನ್ನು ಬೇಕಾದರೂ ಮಾಡಿ ಮುಗಿಸಬಲ್ಲರು.
ಅದೇ ಪಾಪಪ್ರಜ್ಞೆಯಿಂದ ನರಳುತ್ತಾ ಸಿಗರೇಟು ಸೇದುವವರನ್ನು ಯಾವತ್ತೂ ನಂಬಬೇಡಿ. ಅವರು ಸಿಗರೇಟು ಬಿಡುವುದೂ ಇಲ್ಲ , ಸೇದುವುದೂ ಇಲ್ಲ. ಒಂಥರ ತ್ರಿಶಂಕು ಸ್ಥಿತಿ ಅವರದು. ಅಂಥವರೇ ಯಾವ ಕಾಯಿಲೆ ಬಂದರೂ ಸಿಗರೇಟಿನಿಂದ ಬಂತು ಎಂದು ದೂರುತ್ತಾರೆ. ಸಿಗರೇಟು ಸೇದಿದ್ದರಿಂದಲೇ ಹೀಗಾಗಿದೆ ಎಂದು ಅನುಮಾನಿಸುತ್ತಾರೆ. ಎಲ್ಲಾ ಕಷ್ಟನಷ್ಟಗಳಿಗೂ ಹೊಸದಾಗಿ ಮದುವೆಯಾದ ಹೆಂಡತಿಗ ಕಾಲ್ಗುಣವೇ ಕಾರಣ ಎಂದು ನಂಬುವಷ್ಟೇ ಕೌರ್ಯ ಇದು.
ನನ್ನ ಗೆಳೆಯನೊಬ್ಬನಿದ್ದ. ಅವನು ಕೆಮ್ಮಿದಾಗಲೆಲ್ಲ ಅವನ ಹೆಂಡತಿ ಹಾಳು ಸಿಗರೇಟಿನಿಂದಾನೇ ಹೀಗಾಗಿರೋದು ಅಂತ ಬೈಯುತ್ತಿದ್ದರು. ಕೊನೆಗೊಂದು ದಿನ ಆತ ಸಿಗರೇಟು ಸೇದುವುದು ಬಿಟ್ಟೇ ಬಿಟ್ಟ. ಅದಕ್ಕವನು ಕೊಟ್ಟ ಕಾರಣ ನನ್ನನ್ನು ಭಾವುಕನನ್ನಾಗಿಸಿತ್ತು. ಆತ ಬೇಸರದಿಂದ ಹೇಳಿದ್ದ : ನಾನು ಇಷ್ಟಪಟ್ಟು ಸಿಗರೇಟು ಬಿಡಲಿಲ್ಲ ಕಣೋ. ನನ್ನ ಹೆಂಡ್ತಿ ನನ್ನ ಪ್ರತಿ ಕಾಯಿಲೆಗೂ ಸಿಗರೇಟೇ ಕಾರಣ ಎಂದು ಹೇಳಿ ಸಿಗರೇಟಿನ ಮೇಲೆ ಸಿಕ್ಕಾಪಟ್ಟೆ ಆರೋಪ ಹೊರಿಸುತ್ತಿದ್ದಳು. ಸಿಗರೇಟನ್ನು ದಿನಾ ಬೈಯುತ್ತಿದ್ದಳು. ಆ ಬೈಗಳು ಕೇಳಲಾರದೇ ಬಿಟ್ಟುಬಿಟ್ಟೆ. ನನಗೆ ಬೈದಿದ್ದರೆ ಅಷ್ಟೇನೂ ದುಃಖವಾಗುತ್ತಿರಲಿಲ್ಲ. ಆದರೆ ನಿಷ್ಪಾಪಿ ಸಿಗರೇಟನ್ನು ಯಾಕೆ ದೂರಬೇಕು?
ಇಂಗ್ಲೆಂಡಿನಲ್ಲಿ ಅಂಥ ಶ್ರದ್ಧಾವಂತ ಧೂಮಪಾನಿಗಳಿದ್ದರು ಎಂದು ಕೇಳಿದ್ದೇನೆ. ನನ್ನ ಮಿತ್ರರಲ್ಲೂ ಅಂಥ ಒಂದಿಬ್ಬರು ಇದ್ದಾರೆ. ಸಿಗರೇಟಿನ ವಿಚಾರದಲ್ಲಿ ಅತ್ಯಂತ ಹಾನಿ ಮಾಡಿದವರು ಸಾಹಿತಿಗಳು. ಅವರಿಗೆ ಬರೆಯುವುದಕ್ಕೆ ಪೆನ್ನು ಪೇಪರು ಸಿಕ್ಕಿದರೆ ಸಾಕು, ಆತ್ಮಸಾಕ್ಷಿಯಿಲ್ಲದೆಯೇ ಬರೆಯುತ್ತಾರೆ. ನಾನು ಹೇಗೆ ಸಿಗರೇಟು ಬಿಟ್ಟೆ ಎಂದು ಶಿವರಾಮ ಕಾರಂತರಿಂದ ಲಂಕೇಶರ ತನಕ ಎಲ್ಲರೂ ಬರೆದುಕೊಂಡಿದ್ದಾರೆ. ಆದರೆ ಸಿಗರೇಟು ಸೇದುವಾಗ ಪಟ್ಟ ಸಂತೋಷದ ಬಗ್ಗೆ ಬರೆಯಲಿಲ್ಲ. ಸಿಗರೇಟನ್ನು ಮೆಚ್ಚಿಕೊಂಡು, ಸಮರ್ಥಿಸಿಕೊಂಡು ಬರೆಯುವುದಕ್ಕೆ ಎಲ್ಲರಿಗೂ ಮುಜುಗರ. ಎಲ್ಲರೂ ತಮ್ಮನ್ನು ತಪ್ಪು ತಿಳಿಯುತ್ತಾರೆ ಎಂಬ ಭಯ.
ಸಿಗರೇಟು ಸೇದುವುದು ಎಂದರೆ ಎಲ್ಲರಿಗೂ ತೊಂದರೆಯಾಗುವಂತೆ ಹೊಟೆಲಲ್ಲೋ, ಬಸ್ಸಲ್ಲೋ ರೇಲ್ವೇ ನಿಲ್ದಾಣದಲ್ಲೋ ನಾಲ್ಕು ಮಂದಿಯ ಎದುರಿಗೋ ಸೇದುವುದಲ್ಲ. ದಿನಕ್ಕೆ ಹತ್ತೋ ಇಪ್ಪತ್ತೋ ಸೇದಬೇಕು ಎಂಬ ಹಠದಲ್ಲಿ ಪ್ಯಾಕೆಟ್ಟು ಮುಗಿಸುವುದೂ ಅಲ್ಲ. ತುಂಬ ಚಿಂತೆಯಾದಾಗ ಸೇದುವ ಚಿಂತಾಹಾರಿ ಔಷಧವೂ ಅದಲ್ಲ, ಒತ್ತಡಕ್ಕೂ ಅದು ಮದ್ದಲ್ಲ. ತುಂಬಾ ಸಂತೋಷದಲ್ಲಿದ್ದಾಗ, ಏಕಾಂತದಲ್ಲಿದ್ದಾಗ, ತುಂಬ ಬಿಡುವಿದ್ದಾಗ, ಒಂದು ಹೊಂಗೆ ಮರದ ನೆರಳಲ್ಲೋ ಮಾವಿನ ಮರದ ನೆರಳಲ್ಲೋ ಕುಳಿತುಕೊಂಡು ಬೇರೆ ಯಾವ ಚಿಂತೆಯೂ ಇಲ್ಲದೆ ಒಂದು ಸಿಗರೇಟು ಸೇದಿ. ರಾತ್ರಿ ಮಹಡಿಯ ಮೇಲೆ ಮಲಗಿಕೊಂಡು ಆಕಾಶ ನೋಡುತ್ತಾ ಸಿಗರೇಟು ಸೇದಿ. ಬೆಳದಿಂಗಳು, ನದಿತೀರ, ಕಾಡಿನ ಅಂಚು, ಸ್ವಂತ ಕಾರು, ಹಳ್ಳಿದಾರಿಯ ಕಲ್ಲು ಸೇತುವೆ, ಕಣ್ಣುದ್ದಕ್ಕೂ ಹಬ್ಬಿದ ಹುಲ್ಲುಗಾವಲು,ಎರಡೂ ತುದಿಗಳೂ ಅನಂತದಲ್ಲಿ ಕಣ್ಮರೆಯಾಗಿರುವ ರೇಲ್ವೇ ಹಳಿ- ಇವೆಲ್ಲ ಸಿಗರೇಟು ಸೇದುವುದಕ್ಕೆ ದೈವದತ್ತವಾದ ತಾಣಗಳು. ಅಲ್ಲಿ ಏಕಾಂತದಲ್ಲಿ ಸೇದಿದ ಸಿಗರೇಟು ಜನ್ಮಾಂತರದ ತನಕ ನೆನಪುಳಿಯುತ್ತದೆ.
ಗೂಡಂಗಡಿಯ ಮುಂದೆ ನಿಂತು ಭಸಭಸ ಸೇದಿ ಎಸೆದು, ಅಡಕೆಪುಡಿ ಹಾಕಿಕೊಂಡು ಹೋಗಿ ಗುಮ್ಮನ ಗುಸಕರಂತೆ ವರ್ತಿಸುವ ಧೂಮಪಾನಿಗಳ ಬಗ್ಗೆ ನನಗೂ ಗೌರವ ಇಲ್ಲ. ಅಯ್ಯೋ ಬಿಡೋಕ್ಕಾಗಲ್ಲ, ಕಣ್ರೀ, ಕರ್ಮ ಎಂದು ಪೇಚಾಡುವವರ ಬಗ್ಗೆ ಪ್ರೀತಿಯಿಲ್ಲ. ಆದರೆ ನನಗೆ ಸಿಗರೇಟು ಇಷ್ಟ. ಅದನ್ನು ನಾನು ಪ್ರೀತಿಸುತ್ತೇನೆ, ಅದಕ್ಕೋಸ್ಕರ ಸೇದುತ್ತೇನೆ ಎನ್ನುವವರು ಮೆಚ್ಚುಗೆಯಾಗುತ್ತಾರೆ.
*******
ಮಧ್ಯಾಹ್ನದ ತನಕ ಸಿಗರೇಟು ಯಾಕೆ ಬಿಡಬೇಕು, ಯಾಕೆ ಸೇದಬಾರದು ಅಂತ ಉಪದೇಶ ಮಾಡಿದ ಗೆಳೆಯರಿಗೆ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದೆ:
I smoke therefor I am. ನಾನು ಸಿಗರೇಟು ಸೇದುತ್ತೇನೆ, ಆದ್ದರಿಂದ ನಾನು ಇದ್ದೇನೆ. ನಾನು ಸಿಗರೇಟು ಸೇದುವುದಕ್ಕೆಂದೇ ಬದುಕಿದ್ದೇನೆ. ಬದುಕಿರುವ ತನಕವೂ ಸಿಗರೇಟು ಸೇದುತ್ತಲೇ ಇರುತ್ತೇನೆ. ಅದರ ಬಗ್ಗೆ ಮಾತಾಡಿ ಸಿಗರೇಟು ಸೇದುವ ನನ್ನ ಸಮಯವನ್ನು ಕಡಿಮೆ ಮಾಡಬೇಡಿ.
ಅವರು ಆಕಾಶ ನೋಡಿದರು. ಮೋಡ ಕಟ್ಟಿಕೊಂಡಿತ್ತು. ಇನ್ನೇನು ಮಳೆ ಬರುವ ಹಾಗಿತ್ತು. ದೂರದಲ್ಲೆಲ್ಲೋ
ಮಳೆಬಿದ್ದ ಸೂಚನೆಯೆಂಬಂತೆ ಗಾಳಿ ತಣ್ಣಗಾಗುತ್ತಿತ್ತು. ಮಣ್ಣಿನ ವಾಸನೆ ಮೂಗಿಗೆ ಅಡರುತ್ತಿತ್ತು. ಸಿಗರೇಟು ಸೇದುವುದಕ್ಕೆ ಇದು ಸುಮುಹೂರ್ತ ಎಂದು ನಾನು ಎದ್ದು ನಿಂತೆ.
ಮನೆಯಿಂದ ಅಷ್ಟು ದೂರದಲ್ಲಿದ್ದ ದನದ ಹಟ್ಟಿಯ ಮೆಟ್ಟಿಲಲ್ಲಿ ಕೂತು ಸಿಗರೇಟು ಹಚ್ಚಿಕೊಳ್ಳುತ್ತಿದ್ದಂತೆ ಮಳೆ ಧಾರೆಯಾಯಿತು.

‍ಲೇಖಕರು avadhi

April 11, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

39 ಪ್ರತಿಕ್ರಿಯೆಗಳು

 1. ಸಂದೀಪ್ ಕಾಮತ್

  ಸಿಗರೇಟು ಸೇದದ ಕೆಟ್ಟ ಸ್ವಭಾವದ ವ್ಯಕ್ತಿಗಿಂತ ಸಿಗರೇಟು ಸೇದುವ ಒಳ್ಳೆಯ ವ್ಯಕ್ತಿತ್ವ ಉಳ್ಳವನು/ಳು ಎಷ್ಟೋ ವಾಸಿ.
  ಜಗತ್ತಿನಲ್ಲಿ ಕೆಟ್ಟ ಅಭ್ಯಾಸಗಳು ಅನ್ನೋದು ಇಲ್ಲ ಕೆಟ್ಟ ಜನರಷ್ಟೇ ಇರೋದು.

  ಪ್ರತಿಕ್ರಿಯೆ
 2. keshav

  ಜೋಗಿ,
  ನೀವು ಸೇದುತ್ತೀರೋ ಇಲ್ಲವೋ ಗೊತ್ತಿಲ್ಲ, ಆದರೆ ಪ್ರೀತಿಯಿಂದ ಸೇದುವವರ ಸಿಗರೇಟು ವಾಸನೆಯನ್ನು ಮಾತ್ರ ಅದೇ ತಾನೆ ಮಳೆಹನಿ ಬಿದ್ದ ಮಣ್ಣಿನ ವಾಸನೆಯಂತೆ ಘಮ್ಮೆನಿಸಿದ್ದೀರಾ! “ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ” ಎನ್ನುವ ಸರಕಾರದ ಕಟ್ಟಪ್ಪಣೆಯನ್ನು ಅಡಿಯಲ್ಲಿ ಚಿಕ್ಕದಾಗಿ ಹಾಕುವುದನ್ನು ಮರೆತಿದ್ದೀರಾ! 😉
  – ಕೇಶವ (www.kannada-nudi.blogspot.com)

  ಪ್ರತಿಕ್ರಿಯೆ
 3. PRAKASH HEGDE

  ಜೋಗಿ ಸರ್…
  ನಾನು ಮೊದಲು ಸಿಗರೇಟು ಸೇದುತ್ತಿದ್ದೆ…
  ಬಿಟ್ಟು ಬಿಟ್ಟೆ…
  ಯಾಕೋ ಗೊತ್ತಿಲ್ಲ… ಏನೂ ಪ್ರತಿಜ್ಞೆ, ಪಾಪಪ್ರಜ್ಞೆಯಿಂದಲ್ಲ….
  ಹೀಗೇ ಸುಮ್ಮನೆ…ಬಿಟ್ಟು ಬಿಟ್ಟೆ…
  ನಿಮ್ಮ ಲೇಖನ ಓದಿದ ಮೇಲೆ ಒಂದು ದಮ್ ಎಳೆಯೋಣ ಅನಿಸುತ್ತಿದೆ….
  ಖುಷಿಯಾಗುತ್ತದೆ ನಿಮ್ಮ ಬರವಣಿಗೆ…

  ಪ್ರತಿಕ್ರಿಯೆ
 4. Anil

  ಸಕತ್ ಲೇಖನ! ಬೆಳದಿಂಗಳು, ನದೀ ತೀರ ಇತ್ಯಾದಿಗಳಷ್ಟೇ ಅಲ್ಲದೆ ಸುಂದರ ಮುಂಜಾನೆಯ ಶುದ್ಧ ಗಾಳಿಯಲ್ಲಿ ತೇಲಿ ಬರುವ ಸಿಗರೇಟಿನ ಹೊಗೆಗೆ ಮುಖ ಸಿಂಡರಿಸಿ ದೂರ ಹೋಗುವ ಮುಂಚೆ ಈ ಲೇಖನ ನೆನಪಾಗಿ ಆ ಹೊಗೆ ಕಳಿಸಿದವರಿಗೆ ಇದ್ದಿರಬಹುದಾದ ಸಿಗರೇಟ್ ಪ್ರೀತಿಯ ಅರಿವಾಗಿ ಅವರ ಮೇಲಿನ ಕೋಪ ಸ್ವಲ್ಪ ಕಡಿಮೆ ಆಗಬಹುದೇನೋ ಇನ್ನು ಮೇಲೆ 🙂
  – ಅನಿಲ

  ಪ್ರತಿಕ್ರಿಯೆ
 5. h n eshakumar

  ದೂಮ ಲೀಲೆಯಲು ಅಘೋಶಿತವಾಗಿ ಕಾಡುತ್ತಿದ್ದ
  ಪಾಪ ಪ್ರಜ್ಞೆಯನು ನಿಮ್ಮ ಲೇಖನ ದೂರ ಮಾಡಿತು
  ದನ್ಯವಾದಗಳು ಜೋಗಿಯವರೇ…….ಈಶಕುಮಾರ್

  ಪ್ರತಿಕ್ರಿಯೆ
 6. madhu

  jogi sir ,adbutha anubava bicchittidiri hage yaradru gundu bagge lecturing kottidre barithira……..

  ಪ್ರತಿಕ್ರಿಯೆ
 7. ವಿಕಾಸ್ ಹೆಗಡೆ

  ಸಿಗರೇಟು ಸೇದುವುದು ಎಂದರೆ ಎಲ್ಲರಿಗೂ ತೊಂದರೆಯಾಗುವಂತೆ ಹೊಟೆಲಲ್ಲೋ, ಬಸ್ಸಲ್ಲೋ ರೇಲ್ವೇ ನಿಲ್ದಾಣದಲ್ಲೋ ನಾಲ್ಕು ಮಂದಿಯ ಎದುರಿಗೋ ಸೇದುವುದಲ್ಲ. ದಿನಕ್ಕೆ ಹತ್ತೋ ಇಪ್ಪತ್ತೋ ಸೇದಬೇಕು ಎಂಬ ಹಠದಲ್ಲಿ ಪ್ಯಾಕೆಟ್ಟು ಮುಗಿಸುವುದೂ ಅಲ್ಲ. ತುಂಬ ಚಿಂತೆಯಾದಾಗ ಸೇದುವ ಚಿಂತಾಹಾರಿ ಔಷಧವೂ ಅದಲ್ಲ, ಒತ್ತಡಕ್ಕೂ ಅದು ಮದ್ದಲ್ಲ. ತುಂಬಾ ಸಂತೋಷದಲ್ಲಿದ್ದಾಗ, ಏಕಾಂತದಲ್ಲಿದ್ದಾಗ, ತುಂಬ ಬಿಡುವಿದ್ದಾಗ, ಒಂದು ಹೊಂಗೆ ಮರದ ನೆರಳಲ್ಲೋ ಮಾವಿನ ಮರದ ನೆರಳಲ್ಲೋ ಕುಳಿತುಕೊಂಡು ಬೇರೆ ಯಾವ ಚಿಂತೆಯೂ ಇಲ್ಲದೆ ಒಂದು ಸಿಗರೇಟು ಸೇದಿ. ರಾತ್ರಿ ಮಹಡಿಯ ಮೇಲೆ ಮಲಗಿಕೊಂಡು ಆಕಾಶ ನೋಡುತ್ತಾ ಸಿಗರೇಟು ಸೇದಿ. ಬೆಳದಿಂಗಳು, ನದಿತೀರ, ಕಾಡಿನ ಅಂಚು, ಸ್ವಂತ ಕಾರು, ಹಳ್ಳಿದಾರಿಯ ಕಲ್ಲು ಸೇತುವೆ, ಕಣ್ಣುದ್ದಕ್ಕೂ ಹಬ್ಬಿದ ಹುಲ್ಲುಗಾವಲು,ಎರಡೂ ತುದಿಗಳೂ ಅನಂತದಲ್ಲಿ ಕಣ್ಮರೆಯಾಗಿರುವ ರೇಲ್ವೇ ಹಳಿ- ಇವೆಲ್ಲ ಸಿಗರೇಟು ಸೇದುವುದಕ್ಕೆ ದೈವದತ್ತವಾದ ತಾಣಗಳು. ಅಲ್ಲಿ ಏಕಾಂತದಲ್ಲಿ ಸೇದಿದ ಸಿಗರೇಟು ಜನ್ಮಾಂತರದ ತನಕ ನೆನಪುಳಿಯುತ್ತದೆ.
  This para is very very true. ಬಹಳ ಸೇದಿದರೆ ಆರೋಗ್ಯ ಒಂದು ಹಾಳಾಗತ್ತೆ(ಹಾಳಾಗುತ್ತಂತೆ!) ಅನ್ನೋದು ಬಿಟ್ರೆ ಸಿಗರೇಟ್ ಕೊಡುವ ಅನುಭೂತಿಯೇ ಬೇರೆ ಕಣ್ರೀ.. 🙂

  ಪ್ರತಿಕ್ರಿಯೆ
 8. mahesh

  mr. jogi
  nimma sigaretige mula dravya tambaku. ee beleya bagge nimage gottirabahudu. andrapradhesha, karnatakada phalavattada bhumiyannu banjaragiside. tambaku hada maadalu kattigegaagi nuraaru ekare kaadu naashamaadalagide.
  kotyantara mandi cancer peeditaraagiddare. sigarateninda sarakarakke baruva aadayakkintha cancer rogigala chikitsege halavu pattu adhika hana vechhavaguttide. prastuta WHO tamaku bele sampurana illavagisalu kramakke mundaagide. bharatadallu tamaku bele kadime maadlu siddate nadedide. tambaku belegaararige prati byaran(tambaku hadamaaduva mane)ge Rs. 2.5 laksha parihara nidalu nirdarisalaagide.
  che.. tambaku beleye illavaadalli nimma sigarate sevane sukha konegolluvudalla..
  mr. jogi nimma lekhanavanna kendra sachiva Dr.Ramdass avarige forward maadi. olle charchege avakasha aagabahudu.

  ಪ್ರತಿಕ್ರಿಯೆ
 9. ಸುಶ್ರುತ

  ಟಿಪ್: ಹುಣ್ಣಿಮೆಯ ರಾತ್ರಿ ನಿಮ್ಮ ಲ್ಯಾಪ್‍ಟಾಪನ್ನು ತೆಗೆದುಕೊಂಡು ಟೆರೇಸಿಗೆ ಹೋಗಿ. ಈ ರೈಟಪ್ ಓದುತ್ತಾ, ಬೆಳದಿಂಗಳೊಳಗೆ ಸೇರಿ ಮಾಯವಾಗುವ ಹೊಗೆಯ ಬಿಳಿ ಬಣ್ಣ ನೋಡುತ್ತಾ, ಒಂದೊಂದೇ ಧಮ್ ಎಳೆಯುತ್ತಾ ಹೋದಿರೆಂದರೆ… ಆಹಾ!

  ಪ್ರತಿಕ್ರಿಯೆ
 10. Gowreesh Kapani

  nimma baravanige odi kushi aithu. Batthi bagge idde keelirime hoithu. jothege… summa summane seeduva bagge chadi etaithu. innu munde summnane seduvudilla. seduva prathi cigaretannu anubhavisuve. thank you

  ಪ್ರತಿಕ್ರಿಯೆ
 11. ಆಲಾಪಿನಿ

  ಹೌದಪ್ಪಾ ಹೌದೋ ನೀನೇ ದೇವರಾ.
  ನಿನ್ನ ನೀ ತಿಳಿದರ ನಿನಗಿಲ್ಲೋ ದೂರ…. ಶರೀಫರ ತತ್ವಪದ ಅರ್ಧಂಬರ್ಧ ನೆನಪಿಗೆ ಬರ್‍ತಿದೆ.
  ಬತ್ತಿ ಸೇದಿರಬೇಕ. ತಂಬಾಕಿಲ್ಲದ ಬತ್ತಿ ಸೇದಿರಬೇಕ….
  ಸೆರೆಯ ಕುಡಿಯದೆ ಮತ್ತ ನಿಶೆಯೇರಬೇಕ…
  ಜೋಲ್ಹೋಗಿ ಗೋವಿಂದನ ಪಾದಕ ಬಿದ್ದಿರಬೇಕ…

  ಪ್ರತಿಕ್ರಿಯೆ
 12. praveen

  Yes ,Its true ,sigratu Ontharaa thannane bhaavaneyanna hada maadO substace idda hAge, I love sigrate but there should be limit of our own. Adre sigrate sedi halhaliso haagagutte enmAdli papapragne

  ಪ್ರತಿಕ್ರಿಯೆ
 13. ಶಾಂತಲಾ ಭಂಡಿ

  ಪ್ರಿಯ ಜೋಗಿ…
  ನಿಮ್ಮ ಬರಹ ಇಷ್ಟವಾಗುತ್ತದೆ ಎಂದಿನಂತೆ. ನಿಮ್ಮ ಬರಹಗಳೆಡೆ ಜನರು ಮರುಳಾದಂತೆಯೇ ಸಿಗರೇಟಿನಂಥಹ ದ್ರವ್ಯಗಳೆಡೆ ನಿಮ್ಮ ನೆಚ್ಚಿನ ಓದುಗರಾರಾದರೂ ಆಕರ್ಷಿತರಾದಾರು. ನಿಮ್ಮನ್ನು ಓದುವ ಬೃಹತ್ ಯುವಗುಂಪಿದೆ. ಬರೆಯುವಾಗ ಅವರ ಹಿತವನ್ನೂ ಗಮನದಲ್ಲಿಟ್ಟುಕೊಂಡು ಬರೆಯಿರಿ ದಯವಿಟ್ಟು.
  ಪ್ರೀತಿಯಿಂದ,
  -ಶಾಂತಲಾ ಭಂಡಿ

  ಪ್ರತಿಕ್ರಿಯೆ
 14. sunil

  ಶಾಂತಲಾಜಿ,
  ಸಧ್ಯ ನೀವೊಬ್ಬರಾದರೂ ಹೀಗೆ ಪ್ರತಿಕ್ರಿಯಿಸಿದ್ದು ಸಮಾಧಾನ ತಂದಿದೆ.
  ಅನಿಕೇತನ ಸುನಿಲ್

  ಪ್ರತಿಕ್ರಿಯೆ
 15. ರಾಧಾಕೃಷ್ಣ ಬಿ ಪಿ

  ಶಾಂತಲಾಜೀ,
  ಯುವ ಚೇತನ ಸಿಗರೇಟು ಸೇದುವುದರಿಂದ ಹಾಳಾಗ್ತಾರೆ ಎಂಬುದು ಸುಳ್ಳು. ಅದೇಕೋ ಗ್ರಾಮೀಣ ಪ್ರದೇಶದಿಂದ ಬಂದ ಮಹಿಳೆಯರಿಗೆ ಸಿಗರೇಟಿನ ಬಗ್ಗೆ ಸುಮ್ಮನೆ ಸಿಟ್ಟು. ಅದೊಂಥರಾ ಸ್ಯೂಡೋ ಪ್ಯೂರಿಟನ್ ಧೋರಣೆ. ಮಧ್ಯಮ ವರ್ಗದ ಹುಸಿ ಭ್ರಮೆಗಳಲ್ಲಿ ಅದೂ ಒಂದು.

  ಪ್ರತಿಕ್ರಿಯೆ
 16. ಶಾಂತಲಾ ಭಂಡಿ

  ರಾಧಾಕೃಷ್ಣ ಬಿ ಪಿ ಅವರೆ,
  ಸಿಗರೇಟು ಸೇದಿಯೇ ಯುವಜನಾಂಗ ಹಾಳಾಗುತ್ತದೆ ಅಂತ ನಾನು ಹೇಳಿದ್ದಲ್ಲ. ಸಿಗರೇಟು ಸಹ ಒಂದು ಕಾರಣವಾಗಬಹುದು ಅಂತ ಮಾತ್ರ ಹೇಳಿದ್ದೇನೆ. ಅಥವಾ ಜೋಗಿಯವರ ಈ ಬರಹದಿಂದಲೇ ಯುವಗುಂಪೆಲ್ಲ ಸಿಗರೇಟ್ ಎಡೆಗೆ ಆಕರ್ಷಿತವಾಗಿಯೇ ಬಿಡುತ್ತದೆ ಅಂತಲೂ ಹೇಳಿದ್ದಲ್ಲ. ಸಿಗರೇಟ್ ದೇಹಕ್ಕೆ ಹಾನಿಕಾರಕ ಅನ್ನುವುದು ಜೋಗಿಯವರಿಗೆ ಗೊತ್ತಿಲ್ಲ ಅನ್ನುವ ದೃಷ್ಟಿಯಲ್ಲೂ ನಾನು ಹೇಳಿದ್ದಲ್ಲ. ಅಥವಾ ನನ್ನ ಸಲಹೆಯ ಅಳವಡಿಕೆ ಮುಂಬರುವ ಬರಹಗಳಲ್ಲಿ ಕಾಣುವ ಅನವಶ್ಯಕ ನಿರೀಕ್ಷೆಯೂ ನನಗಿಲ್ಲ.
  ಈಜುಗೊತ್ತಿರದವನು ಆಳದನೀರಿಗೆ ಬಿದ್ದಲ್ಲಿ ಸಾಯುತ್ತಾನೆ ಎಂಬುದು ಎಲ್ಲ ಪ್ರದೇಶದಿಂದ ಬಂದ ಎಲ್ಲಾವರ್ಗದ ಪ್ರತಿಯೊಬ್ಬರಿಗೂ ಗೊತ್ತಿರುವ ಸಾಮಾನ್ಯ ಜ್ಞಾನ. ಇಲ್ಲ, ನಾವು ನೀರಿಗೆ ಧುಮುಕಿ ಅಲ್ಲಿಯೇ ಸುಖಕಾಣುತ್ತೇವೆ, ನಮಗೆ ಈಜುವುದೂ ಸಹ ಗೊತ್ತಿದೆ ಎನ್ನುವವರಿಗೆ ನಮ್ಮದೊಂದು ಶುಭಹಾರೈಕೆ.
  ಕೇವಲ ಒಂದು ಸಿಗರೇಟಿನ ಬಗ್ಗೆ ಇಷ್ಟುಚೆಂದವಾಗಿ, ಭಾವುಕರಾಗಿ ಬರೆಯಲು ಜೋಗಿಯವರಿಗೆ ಮಾತ್ರ ಸಾಧ್ಯ. ‘ಜಗತ್ತನ್ನೇ ಮರೆತು ಪ್ರಾಮಾಣಿಕವಾಗಿ, ಅತ್ಯಂತ ಸುಂದರವಾಗಿ ಬರೆದಿದ್ದಾರೆ ಜೋಗಿ’ ಎಂದಷ್ಟೇ ಬರಹ ಓದಿದ ಮೇಲೆ ಅಂದುಕೊಂಡು ಸುಮ್ಮನಿದ್ದುಬಿಡುವ ಪ್ರಬುದ್ಧ ಯುವಚೇತನಗಳೂ ಇವೆ. ‘ಜೋಗಿ ಹೇಳಿದಂತೆ ಮಾಡಿನೋಡಿದರೆ ಹೇಗೆ?’ ಅಂದುಕೊಳ್ಳುವ ಒಂದು ಮುಗ್ಧಮನಸ್ಸಿದ್ದಲ್ಲಿ!
  ಬರಹಗಾರನಲ್ಲಿರುವ ಪ್ರಭುದ್ಧತೆ ಓದುಗನಲ್ಲೂ ಇರಬೇಕೆಂದೇನಿಲ್ಲವಲ್ಲ!
  ಅತೀಪ್ರೀತಿಸುವ ವಸ್ತುವಿನ ಬಗ್ಗೆ ಭಾವುಕರಾದಾಗ ಎಲ್ಲ ಅಂಶಗಳನ್ನು ನೆನಪಲ್ಲಿಟ್ಟುಕೊಂಡು ಬರೆಯುವುದು ಅಸಾಧ್ಯವಿರಬಹುದು. ಅಂಥಹ ಸಂದರ್ಭದಲ್ಲಿ ಓದುಗರಾದ ನಾವು ಇಂಥಹ ಅಂಶಗಳನ್ನು ನೆಚ್ಚಿನ ಲೇಖಕರಿಗೆ ನೆನಪಿಸಿದಲ್ಲಿ ತಪ್ಪೇನಿಲ್ಲ ಅಂತ ನನ್ನ ಭಾವನೆ.
  ನಮ್ಮೆಲ್ಲರ ಇಷ್ಟದ ಇದೇ ಜೋಗಿಯವರು ನಾಲ್ಕಾರು ಕವಿಗಳು ಬರೆದ ಚೆಂದದ ಸಾಲುಗಳ ಬಗ್ಗೆಯೋ ಅಥವಾ ಇನ್ನಾವುದೋ ಚೆಂದದ ಬರಹವನ್ನು ಕೊಟ್ಟಾಗ ಇಲ್ಲಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸುವ ನಾವು ಆಗ ಎಲ್ಲಿಹೋಗುತ್ತೇವೆ? ಇದು ಉತ್ತರವಿರದ ಪ್ರಶ್ನೆ.

  ಪ್ರತಿಕ್ರಿಯೆ
 17. Dr. BR. Satyanarayana

  ಈ ಲೇಕನ ಬರೆದು ಜೋಗಿ ಗಿಟ್ಟಿಸಿದ್ದೇನು? ನಾಲ್ಕು ಮಂದಿ ಮಾಗಧರ ಹೊಗಳಿಕೆ. ಇದರಿಂದ ಇನ್ನೇನು ಉಪಯೋಗವಿಲ್ಲ. ಹೊಗಳುವ, ಸಿಗರೇಟನ್ನ ಸೇದುವ, ಮಂದಿಗೇ ಕ್ಯಾನ್ಸರ್ ಇತ್ಯಾದಿ ಬಂದಾಗಲೇ ಅದರ ಭಯಂಕರತೆಯ ಅರಿವಾಗುವುದು. ಜೋಗಿ ಇದನ್ನು ಬರೆಯುವ ಬದಲು ಯಾವುದಾದರು ಪುಸ್ತಕ ಓದಿ ಅದರ ಬಗ್ಗೆ ಬರೆದಿದ್ದರೆ ಆಗುತ್ತಿದ್ದ ನಷ್ಟವೇನು? ಜೋಗಿ ಯೋಚಿಸಲಿ.

  ಪ್ರತಿಕ್ರಿಯೆ
 18. jogi

  ನಾ ಸುಟ್ಟ ಸಿಗರೇಟುಗಳ ಲೆಕ್ಕ
  ಯಮ ನೋಡಿ ನಕ್ಕ

  ಪ್ರತಿಕ್ರಿಯೆ
 19. ಉಮೇಶ ದೇಸಾಯಿ

  ಈ ಸಿಗರೇಟಿನ ಬಗ್ಗೆ ಬಹಳ ಚರ್ಚೆ ಆಗುತ್ತಿದೆ..ಇದು ತೀರ ವೈಯುಕ್ತಿಕ ವಿಚಾರ,
  ನಾನೂ ಸೇದತಿದ್ದೆ ಯಾಕೋ ಬ್ಯಾಸರಾತು ಬಿಟ್ಟೂ ಬಿಟ್ಟೆ…ಹದಿನೈದು ವರ್ಷಆತು
  ಬೇಕು ಅಂತ ಅನ್ನಿಸಿಲ್ಲ…

  ಪ್ರತಿಕ್ರಿಯೆ
 20. ಉಮೇಶ ದೇಸಾಯಿ

  ಈ ಸಿಗರೇಟಿನ ಬಗ್ಗೆ ಬಹಳ ಚರ್ಚೆ ಆಗುತ್ತಿದೆ..ಇದು ತೀರ ವೈಯುಕ್ತಿಕ ವಿಚಾರ,
  ನಾನೂ ಸೇದತಿದ್ದೆ ಯಾಕೋ ಬ್ಯಾಸರಾತು ಬಿಟ್ಟೂ ಬಿಟ್ಟೆ…ಹದಿನೈದು ವರ್ಷಆತು
  ಬೇಕು ಅಂತ ಅನ್ನಿಸಿಲ್ಲ…

  ಪ್ರತಿಕ್ರಿಯೆ
 21. ಉಮೇಶ ದೇಸಾಯಿ

  ಈ ಸಿಗರೇಟಿನ ಬಗ್ಗೆ ಬಹಳ ಚರ್ಚೆ ಆಗುತ್ತಿದೆ..ಇದು ತೀರ ವೈಯುಕ್ತಿಕ ವಿಚಾರ,
  ನಾನೂ ಸೇದತಿದ್ದೆ ಯಾಕೋ ಬ್ಯಾಸರಾತು ಬಿಟ್ಟೂ ಬಿಟ್ಟೆ…ಹದಿನೈದು ವರ್ಷಆತು
  ಬೇಕು ಅಂತ ಅನ್ನಿಸಿಲ್ಲ…

  ಪ್ರತಿಕ್ರಿಯೆ
 22. ಉಮೇಶ ದೇಸಾಯಿ

  ಈ ಸಿಗರೇಟಿನ ಬಗ್ಗೆ ಬಹಳ ಚರ್ಚೆ ಆಗುತ್ತಿದೆ..ಇದು ತೀರ ವೈಯುಕ್ತಿಕ ವಿಚಾರ,
  ನಾನೂ ಸೇದತಿದ್ದೆ ಯಾಕೋ ಬ್ಯಾಸರಾತು ಬಿಟ್ಟೂ ಬಿಟ್ಟೆ…ಹದಿನೈದು ವರ್ಷಆತು
  ಬೇಕು ಅಂತ ಅನ್ನಿಸಿಲ್ಲ…

  ಪ್ರತಿಕ್ರಿಯೆ
 23. ಉಮೇಶ ದೇಸಾಯಿ

  ಈ ಸಿಗರೇಟಿನ ಬಗ್ಗೆ ಬಹಳ ಚರ್ಚೆ ಆಗುತ್ತಿದೆ..ಇದು ತೀರ ವೈಯುಕ್ತಿಕ ವಿಚಾರ,
  ನಾನೂ ಸೇದತಿದ್ದೆ ಯಾಕೋ ಬ್ಯಾಸರಾತು ಬಿಟ್ಟೂ ಬಿಟ್ಟೆ…ಹದಿನೈದು ವರ್ಷಆತು
  ಬೇಕು ಅಂತ ಅನ್ನಿಸಿಲ್ಲ…

  ಪ್ರತಿಕ್ರಿಯೆ
 24. narayan hegde

  nimma ,jaanaki column, na nirantara oduganagidde. nimma barahada abimaani. nimma ,jogi,tana nanagista. sadya ,paradeshi,(videshavaasi) yaddarinda nimma blog barahagalige nanna odu seemita .
  nanage tea ,coffe kudiyuva abyasa kuuda ella.
  ” vodka kudeedidre ee chali tadiyokaagde sattogtiya” emba nanna ellina ,hitaishi,gala kaalajipuurvaka !aagrahavannu, salaheyannu sampuurnavagi dikkarisiyuu sukha santoshadindale badukiddene .
  nimma ee barahavannu odida mele sigarrate yaake sedabaradu omme anisitu. nivendanta eekaanta nanage dubhariyeenalla elli .
  odida takshanavee hagannisitu. marukshanave pratikriyisabekendukonde.aadare nannalli antargatavaagiddirabahudaada bayake(or chata!) teerisikollalu nimma barahavannu nepavaagisikolluttiddineno anno samshayadinda summanaade.
  pratinitya ,nannalige consultation ge baruva patient galige ,you should not, anta heluttalee eeruttiruva vaidyakeeya padaveedara naada nanage hegannisalu kaarana-nimma barahada preraka shaktiya prabhava estondu prabalavaa? atavaa nimma bagge nanagirabahuda andaabimaanadinda hagandukondenaa gottilla.
  ee baraha kuuda nimma ,jogi,tva kkondu uudaaharaneyenoo. aagaaga nimma abimanigala manassinalli aaradanaapuurvakavaagi huttikolluva eentippa jogi…… emba pratimeyannu bagngolisuttale eradiddare nimmolagina jogi ge samadanavaguvadillavenoo?
  saahiti, cinema nata, ankanakaara modalada saamaajika vyakti(public personlity)gala abipraya mandane , nadavalike.gala kuritada saamajika baddate, javaabdaarigala bagge nimma abhipraya tilisuttiraa? yaakendare nannantaha samaanya yuva odugana mele ,endoo aagihoda mahatma gaandi modalada, samajika image, gala prabavakkinta namma samakaalina ,jivanta pratimegala, sahradayi barahagaarara , prabavave jaasti antannisuttade nanage.
  nimma pramaanika abhiprayada niriksheyalliddene.dayavittu ennondu kittale hannina kateyalli maatu maresabedi .

  ಪ್ರತಿಕ್ರಿಯೆ
 25. pranoo

  ಯಾವ ಪಾಪ ಪ್ರಜ್ಞೆಗೂ ಈಡಾಗದೆ, ಸುಖ ಕೊಡುತ್ತೆಂದು ವೇಶ್ಯೆ ಸಂಗ ಮಾಡುವುದನ್ನೂ ಸಮರ್ಥಿಸಿಕೊಂಡು ಒಂದು ಲೇಖನ ಬರಲಿ ನಿಮ್ಮ ಬತ್ತಳಿಕೆಯಿಂದ….

  ಪ್ರತಿಕ್ರಿಯೆ
 26. bala chandra

  http://www.vismayanagari.com/node/3934
  ಪ್ರಿಯ ಜೋಗಿ,
  ನಾನೂ ಕೂಡ ನಿಮ್ಮಂತೆ ಮೊದಲನೇ ಜಾತಿಗೆ ಸೇರಿದ ಸೇದುಗ.
  ದಯವಿಟ್ಟು ಗೋಪಾಲ ಕೃಷ್ಣ ಅಡಿಗರು ಸಿಗರೇಟಿನ ಬಗ್ಗೆ ಬರೆದ ಕವನವನ್ನು ತಿಳಿಸುವಿರಾ?
  ಸಸ್ನೇಹ,
  ಬಾಲ ಚಂದ್ರ

  ಪ್ರತಿಕ್ರಿಯೆ
  • ಜೋಗಿ

   ಸಿಗರೇಟಿನ ಹೊಗೆ ವರ್ತುಲ ವರ್ತುಲ
   ಧೂಪಧೂಮ ಮಾಲೆ
   ವಿವಿಧ ರೂಪಗಳು ವಿಹ್ವಲ ಆಲಾಪಗಳು
   ಗಾಳಿಯಲೆಯ ಮೇಲೆ
   ಎಂದು ಆರಂಭವಾಗುವ ಕವಿತೆ..

   ಪ್ರತಿಕ್ರಿಯೆ
 27. sritri

  ಈ ಲೇಖನ ಸಿಗರೇಟಿನ ಜಾಹಿರಾತಿನಂತೆ ಕಾಣಿಸುವ ಅಪಾಯವಿದೆ 🙂
  ಜೋಗಿ ನನ್ನ ಇಷ್ಟದ ಲೇಖಕರೂ ಅಗಿರುವುದರಿಂದ,ಆವರ ಆರೋಗ್ಯ, ಆಯಸ್ಸಿನ ಬಗೆಗೆ ನನಗೂ ಕಾಳಜಿ ಇದೆ. ಸಿಗರೇಟಿನ ಬಗ್ಗೆ ಇರುವ ಮೋಹಕ ಭ್ರಮೆಗಳೆಲ್ಲ ಬೇಗ ಹರಿಯಲಿ ಎಂಬ ಹಾರೈಕೆ.

  ಪ್ರತಿಕ್ರಿಯೆ
 28. ಕುಮಾರ ರೈತ

  @ಜೋಗಿ, ನಿಮ್ಮ ಈ ಲೇಖನ ಎಷ್ಟು ಘಮತ್ತಾಗಿದೆ ಅಂದ್ರೆ ಅಭ್ಯಾಸವಿಲ್ಲದಿದ್ದವರೂ ಸಿಗರೇಟು ಸೇದಲು ಆರಂಭಿಸುವಷ್ಟು…

  ಪ್ರತಿಕ್ರಿಯೆ
 29. CHANDRA SHEKAR

  i like the spot which you have told that made for somke.
  i like it kaantha
  i like it 🙂

  ಪ್ರತಿಕ್ರಿಯೆ
 30. Shivanand

  Jogi samaaja drohina . . I am not asking . . Jogi himself asked this question to himself in Ankita book release program, when I told Jogi that I started enjoying smoking after reading Jogi’s article . . Yen heltera jogi

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: