ಜೋಗಿ ಬರೆದಿದ್ದಾರೆ: ಕಾಡಿನ ಕತ್ತಲಲ್ಲಿ ಒಂದು ನಿವ್ವಳ ರಾತ್ರಿ!

 
jogijpg
-ಜೋಗಿ  
ನೋಡನೋಡುತ್ತಿದ್ದಂತೆ ಕತ್ತಲಾಯಿತು.
ಅಂಥ ಕತ್ತಲನ್ನು ನಾನು ನೋಡಿಯೇ ಇರಲಿಲ್ಲ. ಪಕ್ಕದಲ್ಲಿ ಕೂತಿದ್ದ ಬೆಳ್ಳಗಿನ ಶರ್ಟು ತೊಟ್ಟಿದ್ದ ಶಿವ ಕೂಡ ಕಾಣಿಸುತ್ತಿರಲಿಲ್ಲ. ನಮ್ಮದನಿಯನ್ನೂ ಕತ್ತಲು ಕಸಿದುಕೊಂಡಿತೇನೋ ಎಂಬಂತೆ ಮಾತು ಕೂಡ ಕ್ಷೀಣವಾಗಿ ಕೇಳಿಸುತ್ತಿತ್ತು. ಇಷ್ಟು ಹೊತ್ತು ಇದ್ದ ಬೆಳಕು ಎಲ್ಲಿ ಹೋಯಿತು ಎಂದು  ನಾನು ಅಚ್ಚರಿಪಡುತ್ತಾ ಆ ಕತ್ತಲಿಗೆ ಕಣ್ಣನ್ನು ಹೊಂದಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿದೆ.
darkjpg
ಅದು ದೋಣಿಗಾಲ್ ಮತ್ತು ಯಡಕುಮೇರಿ ನಡುವಿನ ಕಾಡು. ಆ ಕಾಡಲ್ಲಿ ರಾತ್ರಿಯನ್ನು ಕಳೆಯುವುದು ನಮಗೆ ಎಷ್ಟು ಕಷ್ಟವಾಯಿತೆಂದರೆ ಕುಳಿತಲ್ಲಿಂದ ಅಲ್ಲಾಡುವುದಕ್ಕೂ ಸಾಧ್ಯವಿರಲಿಲ್ಲ. ನಮ್ಮ ಕೈಯಲ್ಲಿದ್ದ ಬೆಂಕಿಪೊಟ್ಟಣದ ಬೆಳಕು ಕೂಡ ಕತ್ತಲೆಯೆದುರು ಸೋಲೋಪ್ಪಿಕೊಂಡು ಶರಣಾಗಿತ್ತು.
ಕಾಡಲ್ಲಿ ಬೆಂಕಿ ಉರಿಸೋದಕ್ಕೆ ಹೋಗಬೇಡಿ. ಅದು ಎಲ್ಲಿಂದ ಎಲ್ಲಿಗೆ ಹಬ್ಬುತ್ತೋ ಗೊತ್ತಾಗಲ್ಲ. ಈಗಷ್ಟೇ ಚಳಿಗಾಲ ಶುರುವಾಗಿದೆ. ಮರಗಳೆಲ್ಲ ಎಲೆ ಉದುರಿಸಿಕೊಂಡಿರುತ್ತವೆ. ಒಂದು ಕಿಡಿ ಸೋಕಿದರೂ ಸಾಕು ಅದು ಒಳಗೊಳಗೇ ಹಬ್ಬತೊಡಗಿ ನೀವು ಅದರ ಮಧ್ಯೆ ಸಿಕ್ಕಿಹಾಕಿಕೊಳ್ಳುತ್ತೀರಿ ಎಂದು ಗಾರ್ಡ್ ಕೃಷ್ಣಪ್ಪ ಬೇರೆ ಹೆದರಿಸಿದ್ದ.
ಅಷ್ಟು ಬೇಗ ಕತ್ತಲೆ ಆವರಿಸಿಕೊಂಡದ್ದು ಹೇಗೆ ಅನ್ನುವುದು ಮಾತ್ರ ನನಗೆ ಅರ್ಥವಾಗಲಿಲ್ಲ. ಇನ್ನೂ ಇಳಿಮಧ್ಯಾಹ್ನದಂತೆ ಅಲ್ಲಿ ಸ್ವಚ್ಛಂದ ಬೆಳಕಿತ್ತು. ಕತ್ತಲಾಗುವ ಮುಂಚೆ ಏನಿಲ್ಲವೆಂದರೂ ಆರೇಳು ಕಿಲೋಮೀಟರ್ ನಡೆಯಬಹುದು ಅಂದುಕೊಂಡಿದ್ದೆ ನಾನು. ಶಿವ ಕೈಲಿರುವ ಕಂಪಾಸನ್ನೇ ನೋಡುತ್ತಾ ನಾವು ಹೋಗಬೇಕಾದ ದಿಕ್ಕನ್ನು  ಪದೇ ಪದೇ ಸೂಚಿಸುತ್ತಿದ್ದ.
ಅವರು ಕಾಣೆಯಾದದ್ದು ಇಲ್ಲೇ ಎಲ್ಲೋ ಇರಬೇಕು ಅಂದ ಶಿವ.  ಅವನ ಊಹೆ ಅಷ್ಟೇ ಅದು. ಆದರೆ ಆ ಕತ್ತಲಲ್ಲಿ ಸಿಕ್ಕಿಹಾಕಿಕೊಂಡವರಿಗಷ್ಟೇ ಅಲ್ಲಿಂದ ಪಾರಾಗುವುದು ಸಾಧ್ಯವೇ ಇಲ್ಲ ಅನ್ನುವುದು ಗೊತ್ತಾಗುವುದಕ್ಕೆ ಸಾಧ್ಯ. ನಮ್ಮೂರಲ್ಲಿ ಸಂಜೆ ನಿಧಾನವಾಗಿ ಮುಸ್ಸಂಜೆಯಾಗುವುದನ್ನು ನೋಡಿದ ನನಗೆ ಇದ್ದಕ್ಕಿದ್ದ ಹಾಗೆ ಲೈಟ್ ಆಫ್ ಮಾಡಿದ ಹಾಗೆ ಕತ್ತಲಾಗಿದ್ದಕ್ಕೆ ತಕ್ಷಣ ಕಾರಣ ಸಿಗಲಿಲ್ಲ. ಶಿವ ಏನೇನೋ ಲೆಕ್ಕಾಚಾರ ಹಾಕಿ ಸೂರ್ಯ ಎದುರಿಗಿರುವ ಬೆಟ್ಟದ ಹಿಂದೆ ಮರೆಯಾಗಿದ್ದಾನೆ. ಹೀಗಾಗಿ ಕಾಡಿನಲ್ಲಿ ಕತ್ತಲೆ ಆವರಿಸಿದೆ. ಕಾಡಿನಾಚೆಗೆ ಇನ್ನೂ ಸಂಜೆ ಜೀವನಂತವಾಗಿರುತ್ತದೆ ಎಂದ. ನನಗೆ ಅದರಲ್ಲೇಕೋ ನಂಬಿಕೆ ಬರಲಿಲ್ಲ. ಯಾಕೆಂದರೆ ಆ ಕಾಡಿನಾಚೆಗೆ ಎಲ್ಲೋ ಬೆಳಕಿದೆ ಎಂದು ನಂಬುವುದಕ್ಕೆ ನಾನಂತೂ ತಯಾರಿರಲಿಲ್ಲ. ಅಂಥ ಯಾವ ಸೂಚನೆಯೂ ಅಲ್ಲಿರಲಿಲ್ಲ.
ಆ ರಾತ್ರಿಯನ್ನು ಅಲ್ಲೇ ಕೂತು ಕಳೆಯುವುದು ಎಂದು ತೀರ್ಮಾನಿಸಿದೆವು. ಅದು ಬೆಟ್ಟದ ತಪ್ಪಲಿನ ಕಾಡಾದ್ದರಿಂದ ಕಾಡು ಪ್ರಾಣಿಗಳ ಭೀತಿ ಇರಲಿಲ್ಲ. ಸಮತಟ್ಟಾದ ಹುಲ್ಲುಗಾವಲಿನಲ್ಲಷ್ಟೇ ಜಿಂಕೆಗಳು ಓಡಾಡುತ್ತವೆ. ಹೀಗಾಗಿ ಅಂಥ ಪ್ರದೇಶದಲ್ಲಿ ಮಾತ್ರ ಹಿಂಸ್ರಪ್ರಾಣಿಗಳಿರುತ್ತವೆ ಎಂದು ಗೊತ್ತಿತ್ತು. ಆನೆಗಳಂತೂ ಅಲ್ಲಿಗೆ ಬರುವ ಸಾಧ್ಯತೆಯೇ ಇರಲಿಲ್ಲ. ಮರಗಳು ತುಂಬಾ ಎತ್ತರ ಬೆಳದದ್ದರಿಂದ ಆನೆಗಳಿಗೆ ತಿನ್ನುವುದಕ್ಕೆ ಅಲ್ಲಿ ಸೊಪ್ಪು ಕೂಡ ಸಿಗುವಂತಿರಲಿಲ್ಲ. ಹತ್ತಿರದಲ್ಲಿ ಕೊಳಗಳೂ ನೀರಿನ ಆಸರೆಯೂ ನದಿಯೂ ಇಲ್ಲದೇ ಇರೋದರಿಂದ ಕೆಂಪು ಹಳ್ಳದ ಜೌಗು ನೆಲದ ಕಾಡಲ್ಲಷ್ಟೇ ಆನೆಗಳ ಓಡಾಟ ಎಂದು ಕೃಷ್ಣಪ್ಪ ಧೈರ್ಯ ತುಂಬಿದ್ದ.
ಗಡಿಯಾರ ನೋಡಿಕೊಳ್ಳುವುದಕ್ಕೂ ಸಾಧ್ಯವಿರಲಿಲ್ಲ. ಶಿವ ಅದಕ್ಕೊಂದು ಉಪಾಯ ಇದೆ ಎಂಬಂತೆ ಜೇಬಿನಿಂದ ಮೊಬೈಲು ತೆಗೆದು ಅದನ್ನು ಸ್ವಿಚಾನ್ ಮಾಡಿದ. ನನ್ನ ಮೊಬೈಲು ಕೋಮಾದಲ್ಲಿತ್ತು. ಇನ್ನೂ ಆರೂವರೆ. ಇಲ್ಲಿ ಬೆಳಕಾಗುವುದು ಬೆಳಗ್ಗೆ ಒಂಬತ್ತಕ್ಕೆ ಅಂತ ಕಾಣುತ್ತದೆ. ಈಗೇನು ಮಾಡೋದು ಅಂತ ಆತಂಕದಲ್ಲಿ ಕೇಳಿದ
ಸರದಿಯ ಪ್ರಕಾರ ಕಾವಲು ಕಾಯೋಣ. ಒಬ್ಬರು ನಿದ್ದೆ ಮಾಡೋದು. ಇನ್ನೊಬ್ಬರು ಕಾಯ್ತಿರೋದು ಅಂದೆ. ಅಯ್ಯೋ ಈ ಕಾಡಲ್ಲಿ ನಿದ್ದೆ ಎಲ್ಲಿಂದ ಬರಬೇಕು. ನನಗೆ ನಾಲ್ಕು ಗೋಡೆಗಳ ಮಧ್ಯೆ ಇಲ್ಲದೇ ಹೋದರೆ ಒಂಥರ ಅಭದ್ರ ಅನ್ನಿಸುತ್ತೆ ಅಂದ.
ನನಗೆ ಕಾಡಲ್ಲಿ ಮಲಗಿ ಅಭ್ಯಾಸ ಇತ್ತು. ನಮ್ಮೂರಲ್ಲಿ ಪರೀಕ್ಷೆಗೆ ಓದಲೆಂದು ಕಾಡಿಗೆ ಹೋಗಿ ಎಷ್ಟೋ ಸಾರಿ ಅಲ್ಲೇ ಯಾವುದಾದರೂ ಮರದ ಕೆಳಗೆ ಗಡದ್ದಾಗಿ ನಿದ್ದೆ ಹೊಡೆಯುತ್ತಿದ್ದೆವು. ತುಂಟ ಕೋತಿಗಳು ಎಷ್ಟೋ ಸಾರಿ ನಮ್ಮ ಪುಸ್ತಕಗಳನ್ನೆಲ್ಲ ಎತ್ತಿಕೊಂಡು ಹೋಗಿರುತ್ತಿದ್ದವು. ಎಷ್ಟೋ ರಾತ್ರಿ ಸಂಜೆ ಮಲಗಿ ಏಳುವ ಹೊತ್ತಿಗೆ ಎಂಟೋ ಒಂಬತ್ತೋ ಗಂಟೆ ಆಗಿರುತ್ತಿತ್ತು.
ಆದರೆ ಇದು ಅಪರಿಚಿತ ಕಾಡು ಎಂಬ ಭಯವಿತ್ತು. ನನಗಂತೂ ನಿದ್ದೆ ಬರುತ್ತಿರಲಿಲ್ಲ. ಸುಮ್ಮನೆ ಕೂತಿರೋಣ ಅಂದೆ. ಮಾತಾಡುವುದು ಕೂಡ ಅಪಾಯಕಾರಿ ಅನ್ನಿಸತೊಡಗಿತು. ಇಬ್ಬರೂ ನಮ್ಮ ಅಸ್ತಿತ್ವೇ ಇಲ್ಲವೇನೋ ಎಂಬಂತೆ ಆ ಕಾಡಲ್ಲಿ ಕುಕ್ಕರಗಾಲಲ್ಲಿಚಕ್ಕಳಮಕ್ಕಳ ಹಾಕಿ ಮಲಗಿದ ಭಂಗಿಯಲ್ಲಿ ಬ್ಯಾಗಿಗೆ ಒರಗಿಕೊಂಡು ಕೂತೇ ಕೂತೆವು. ಆಗಾಗ ಶಿವ ಗಡಿಯಾರ ತೆಗೆದು ಎಂಟಾಯಿತುಒಂಬತ್ತಾಯಿತು ಅನ್ನುತ್ತಿದ್ದ. ಹೊತ್ತು ಏರುತ್ತಿದ್ದದ್ದು ಚಳಿಯಿಂದ ಗೊತ್ತಾಗುತ್ತಿತ್ತು. ಮಧ್ಯರಾತ್ರಿಯ ಹೊತ್ತಿಗೆ ಮೈ ನಡುಗುವಷ್ಟು ಚಳಿ ಶುರುವಾಯಿತು. ನಮ್ಮ ಅದೃಷ್ಟಕ್ಕೆ ಅಲ್ಲಿ ಸೊಳ್ಳೆಗಳೇ ಇರಲಿಲ್ಲ.
ಹಾಗೇ ಕೂತವರಿಗೆ ಸಣ್ಣ ನಿದ್ದೆ ಬಂದಿರಬೇಕು. ಇದ್ದಕ್ಕಿದ್ದಂತೆ ಜೋರು ದನಿಯಲ್ಲಿ ಶಿವ ಕೂಗುವುದು ಕೇಳಿಸಿತು. ಜೊತೆಗೇ ಅವನು ನನ್ನನ್ನು ಅಲ್ಲಾಡಿಸುತ್ತಿದ್ದ. ನಾನು ಗಾಬರಿಯಿಂದ ಕಣ್ತೆರೆದು ನೋಡಿದರೆ ನನ್ನ ಕಣ್ಮುಂದಿನ ಕಾಡು ಹಗಲಿನಂತೆ ಹೊಳೆಯುತ್ತಿತ್ತು.
ಮುಳಿ ಹುಲ್ಲುಗಳ ಮೇಲೆ ತರಗೆಲೆಗಳ ಮೇಲೆ ನಾನು ಎಂದೂ ಕಂಡಿರದಂಥ ಬಂಗಾರದ ಬೆಳಕು. ಯಾವುದೋ ವಜ್ರದಿಂದ ಹೊಳೆಯುತ್ತಿರುವ ಬೆಳಕಿನಂತೆ ಅದು ಪ್ರತಿಫಲಿಸುತ್ತಿತ್ತು. ಕ್ರಮೇಣ ಅದು ಒಂದೇ ಕಡೆ ನಿಲ್ಲದೇ ಅತ್ತಿತ್ತ ಹರಿದಾಡಿತು. ನಾವಿದ್ದ ಕಡೆಗೂ ಬರತೊಡಗಿತು.
ಇದ್ದಕ್ಕಿದ್ದಂತೆ ಸ್ವರ್ಗದಿಂದ ಇಳಿದು ಬಂದಂತೆ ಕಾಣುತ್ತಿದ್ದ ಆ ಬೆಳಕಿನ ಸೌಂದರ್ಯಕ್ಕೇ ನಮ್ಮ ಗಾಬರಿ ಅರ್ಧ ಮಾಯವಾಯಿತು. ಗಂಟೆ ಎಷ್ಟು ಅಂತ ಶಿವನನ್ನು ಪಿಸುಮಾತಲ್ಲಿ ಕೇಳಿದೆ. ಅವನು ಒಂದೂವರೆ ಅಂದ. ಸೂರ್ಯೋದಯವಂತೂ ಅಲ್ಲ. ಎಲ್ಲೋ ಕಾಡಿಗೆ ಬೆಂಕಿ ಬಿದ್ದಿರಬೇಕು. ಅದರ ಬೆಳಕು ಇಲ್ಲಿ ಕಾಣಿಸುತ್ತಿದೆ ಎಂದು ನಾವು ಊಹಿಸಿ ಆ ಚಳಿಯಲ್ಲೂ ಗಡಗಡ ನಡುಗಿದೆವು. ಆ ಬೆಂಕಿ ನಾವು ಕುಳಿತ ಕಡೆ ಹಬ್ಬಿದರೆ ಎಂದು ಆತಂಕವಾಯಿತು.
ಕುದುರೆಮುಖದ ಕಾಡುಗಳಿಗೆ ಬೆಂಕಿ ಬೀಳುವುದನ್ನು ನಾನು ನೋಡಿದ್ದೆ. ನಮ್ಮೂರು ಗುರುವಾಯನಕೆರೆಯ ರಸ್ತೆಯಲ್ಲಿ ನಿಂತರೆ ಲಾಳದಾಕಾರದಲ್ಲಿ,ಚಕ್ರಾಕಾರದಲ್ಲಿಯಾರೋ ಗೀಚಿದಂತೆ ಕಾಡು ಉರಿಯುವುದು ಕಾಣಿಸುತ್ತಿತ್ತು.  ಕಾಡಿನ ಬೆಂಕಿ ನೇರವಾಗಿ ಸರಳ ರೇಖೆಯಲ್ಲಿ ಸಾಗುವುದಿಲ್ಲ ಎಂದೂ ಅದು ಗುಡ್ಡಗಳ ಸೊಂಟವನ್ನು ಬಳಸಿಕೊಂಡು ವಿಚಿತ್ರ ಆಕಾರದಲ್ಲಿ ಹಬ್ಬುತ್ತದೆ ಎಂದು ಸತ್ಯನಾರಾಯಣ ಮೇಷ್ಟ್ರು ವಿವರಿಸಿದ್ದು ನೆನಪಾಯಿತು.
ನಾವು ಗರಬಡಿದವರಂತೆ ಆ ಬೆಳಕನ್ನೇ ನೋಡುತ್ತಾ ಕೂತೆವು. ಮನಸ್ಸು ಅಲ್ಲಿಂದ ತಪ್ಪಿಸಿಕೊಂಡು ಎಲ್ಲಿಗೆ ಹೋಗುವುದು ಎಂದು ಲೆಕ್ಕ ಹಾಕುತ್ತಿತ್ತು. ಇದ್ದಕ್ಕಿದ್ದ ಹಾಗೆನಮ್ಮ ಭ್ರಮೆಯೋ ಏನೋ ತಣ್ಣಗೆ ಬೀಸುತ್ತಿದ್ದ ಗಾಳಿ ಕೂಡ ಬೆಚ್ಚಗಿನ ಅನುಭವ ನೀಡತೊಡಗಿತು. ಬೆಂಕಿಯ ಝಳ ಇಲ್ಲಿಗೂ ತಲುಪುತ್ತಿದೆ ಎಂದು ಶಿವ ಕಿವಿಯಲ್ಲಿ ಉಸುರಿದ್ದು ಮರಣಶಾಸನದಂತೆ ನನಗೆ ಕೇಳಿಸಿತು.
ಹಾಗೇ ಎಷ್ಟು ಹೊತ್ತು ಕೂತಿದ್ದೆವೋ ಏನೋ. ಆ ಬೆಳಕು ಇದ್ದಕ್ಕಿದ್ದ ಹಾಗೆ ಕಣ್ಮರೆಯಾಯಿತು. ಪುರಾಣಗಳಲ್ಲಿ ಓದಿದ್ದ ದೇವಕನ್ನಿಕೆಯರುಗಂಧರ್ವರೂ ಕಿನ್ನರ ಕಿಂಪುರುಷರೂ ಭೂಲೋಕಕ್ಕೆ ಬಂದು ಜಲಕ್ರೀಡೆ ಆಗಿ ಹೋಗುತ್ತಾರೆ
ಎನ್ನುವ ಪ್ರಸಂಗ ನೆನಪಾಯಿತು. ಅಚ್ಚೋದ ಸರೋವರನ್ನು ಕವಿ ವರ್ಣಿಸಿದ್ದು ಕಣ್ಮುಂದೆ ಬಂತು.
ಹಾಗೇ ಕೂತು ಬೆಳಗು ಮಾಡಿದೆವು. ಬೆಳಕಿನ ರಹಸ್ಯ ಮಾತ್ರ ಬಗೆಹರಿಯಲೇ ಇಲ್ಲ. ಏಳೂವರೆಗೆ ನಮ್ಮೆದುರಿನ ಹಾದಿ ನಿಧಾನವಾಗಿ ತೆರೆದುಕೊಳ್ಳುತ್ತಾ ಹೋಯಿತು. ಕುಳಿತು ಕುಳಿತು ಜೋಮು ಹಿಡಿದಿದ್ದ ಕಾಲುಗಳನ್ನು ತಿಕ್ಕಿ ತಿಕ್ಕಿ  ರಕ್ತ ಸಂಚಾರ ಸುಗುಮಗೊಳ್ಳುತ್ತಿದ್ದಂತೆ ಅಲ್ಲಿಂದ ಎದ್ದು ನಡೆದವು.
ಒಂಬತ್ತೂವರೆ ಹೊತ್ತಿಗೆ ನಡೆದೂ ನಡೆದೂ ಶಿರಿವಾಗಿಲು ಎಂಬ ಸ್ಟೇಷನ್ನು ತಲುಪುನ ಹೊತ್ತಿಗೆ ಬಿಹಾರದಿಂದ ಬಂದಿದ್ದ ಸ್ಚೇಷನ್ ಮಾಸ್ಟರ್  ತನ್ನ ಚೇಬಲ್ಲಿನ ಮೇಲೆ ತಲೆಯಿಟ್ಟು ಮಲಗಿ ನಿದ್ದೆ ಹೊಡೆಯುತ್ತಿದ್ದ. ಆರು ಗಂಟೆಗೆಲ್ಲ ಬರಬೇಕಾದ ಟ್ರೇನಿಗೆ ಹಸಿರು ನಿಶಾನೆ ತೋರಿಸುವುದಕ್ಕೆ ರೇಲ್ವೇ ಹಳಿಯ ಬಳಿಯೇ ಹಾಸಿಗೆ ಹಾಸಿಕೊಂಡು ಕಾಯುತ್ತಿದ್ದ ಗಾರ್ಡು ನಿದ್ದೆಗಣ್ಣಲ್ಲೇ ನಕ್ಕ. ಆ ಕಾಡಿನಿಂದ ಹಾಗೆ ಇಳಿದು ಬಂದ ನಮ್ಮನ್ನು ನೋಡಿ ಅವನಿಗೆ ಭಯಂಕರ ಗಾಬರಿಯಾಗಿತ್ತು. ಅದಕ್ಕಿಂತ ಹೆಚ್ಚು ಅಚ್ಚರಿಯಾಗಿತ್ತು.
ಗುಂಡ್ಯ ತಲುಪುವ ಹೊತ್ತಿಗೆ ಸಿಕ್ಕಾಪಟ್ಟೆ ಹಸಿವಾಗಿತ್ತು. ಮಲಯಾಳಿಯ ಹೊಟೆಲಲ್ಲಿ ಕೂತು ಪುಂಡಿ ಸಾಂಬಾರ್ ತಿನ್ನುವ ಹೊತ್ತಿಗೆ ಕೃಷ್ಣಪ್ಪ ಬಂದ. ಅವನಿಗೆ ರಾತ್ರಿ ನಡೆದ ಘಟನೆಯ ಬಗ್ಗೆ ಹೇಳಿದೆವು. ಅಯ್ಯೋ ಅದು ಬೆಂಕೀನೂ ಅಲ್ಲದೆವ್ವಾನೂ ಅಲ್ಲ. ಹೇಳ್ತೀನಿತಿಂಡಿ ತಿಂದು ಆಫೀಸ್ ಹತ್ರ ಬನ್ನಿ ಎಂದು ಹೊರಟು ಹೋದ.
ನಾನು ಅವನೇನು ಹೇಳಬಹುದು. ಅದು ವಿಜ್ಞಾನದ ಮತ್ತೊಂದು ರಹಸ್ಯವಾಗಿರಬಹುದೇಅವನು ಅದನ್ನು ಹೇಗೆ ವಿವರಿಸಬಹುದು ಎಂದು ಅಚ್ಚರಿಪಡುತ್ತಾ ಮತ್ತೊಂದು ಪ್ಲೇಂಟ್ ಪುಂಡಿ ಸಾಂಬಾರಿಗೆ ಆರ್ಡರ್ ಮಾಡಿದೆವು.

‍ಲೇಖಕರು avadhi

December 14, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

12 ಪ್ರತಿಕ್ರಿಯೆಗಳು

 1. malathi S

  how come u forgot ‘THE TORCH’.
  i think it was the UFO that u saw.
  :-):-) 🙂
  malathi S

  ಪ್ರತಿಕ್ರಿಯೆ
 2. jogimane

  ಕ್ಷಮಿಸಿ ಹೇಳುವುದಕ್ಕೆ ಮರೆತಿದ್ದೆ.
  ಇದು ನನ್ನ ಹೊಸ ಕಾದಂಬರಿಯ ಮೊದಲ ಅಧ್ಯಾಯ. ಹೀಗಾಗಿ ಅಪೂರ್ಣ ಅನ್ನಿಸುತ್ತದೆ. ಮುಂದಿನ ಅಧ್ಯಾಯಗಳಲ್ಲಿ ಆ ವಿವರಗಳೆಲ್ಲ ಬರುತ್ತವೆ.
  ಜೋಗಿ

  ಪ್ರತಿಕ್ರಿಯೆ
 3. sundaranadu

  Namaskara Jogiyavarige,
  Naneega nimma ‘Rayabhagada rahasya ratri’ kathegalanna oduttiddene. Nimma kathegalu thumba ishtavagive.
  Neevu Sagarada ondu kathe kooda barediddiri. Nanu sagarada sameepada pradeshadavanaddarinda nimma parichaya tilidukolluvase, andare nimage sagara hege parichaya anta?
  Nimma Abhimani,
  Rajanna

  ಪ್ರತಿಕ್ರಿಯೆ
 4. jogi

  ಪ್ರಿಯ ರಾಜಣ್ಣನವರೇ
  ನಿಮ್ಮ ಈಮೇಲ್ ವಿಳಾಸ ಕೊಡಿ. ಅದಕ್ಕೆ ಉತ್ತರಿಸುತ್ತೇನೆ.
  ಅಂದಹಾಗೆ ನನಗೆ ಸಾಗರ ಹೊಸತೇನಲ್ಲ. ನಾನು ಹೆಗ್ಗೋಡಿಗೆ ಹೋಗುತ್ತಿದ್ದವನು. ಸಾಗರದ ಆಸುಪಾಸಲ್ಲಿ ನನ್ನ ಸಂಬಂಧಿಕರೂ ಮಿತ್ರರೂ ಇದ್ದಾರೆ. ಹೊಸಳ್ಳಿಯಲ್ಲಿ ನನ್ನ ಗೆಳೆಯನಿದ್ದಾನೆ. ಸಾಗರದಲ್ಲಿ ನನ್ನ ಗೆಳೆಯ ದಂತಿಯವರ ಪುಸ್ತಕದಂಗಡಿಯಿದೆ. ಇಕ್ಕೇರಿ ಮತ್ತು ಕೆಳದಿಗಳಲ್ಲಿ ತುಂಬಾ ಸುತ್ತಾಡಿದ್ದೇನೆ.

  ಪ್ರತಿಕ್ರಿಯೆ
 5. Godlabeelu Parameshwara

  ಸರ್ ನಮಸ್ತೆ, ತುಂಬಾ ಇಷ್ಟವಾಯ್ತು.
  – ಗೊದ್ಲಬೀಳು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: