ಜೋಗಿ ಬರೆದಿದ್ದಾರೆ: ಕಾವ್ಯ ಕುತೂಹಲಿಯ ಕೊನೆಯ ಸಂದರ್ಶನ
ಮೂರು ಮುಕ್ಕಾಲರ ಹೊತ್ತಿಗೆ ಕವಿಗಳನ್ನು ನೋಡುವುದಕ್ಕೆ ಗೋವಿಂದಪ್ಪ ಬಂದ. ಕವಿಗಳು ಆಗಷ್ಟೇ ಸಣ್ಣ ನಿದ್ದೆ ಮುಗಿಸಿ ಎದ್ದಿದ್ದರು. ಗೋವಿಂದಪ್ಪ ಮೊದಲೇ ಬರುವುದಾಗಿ ತಿಳಿಸಿದ್ದರಿಂದ ತಾನೇನು ಮಾತಾಡಬೇಕು ಅನ್ನುವುದನ್ನೂ ಕವಿಗಳು ಮೊದಲೇ ಯೋಚಿಸಿದ್ದರು.
ಗೋವಿಂದಪ್ಪ ಕವಿಗಳನ್ನು ಸಂದರ್ಶಿಸುವುದು ಅದೇ ಮೊದಲು. ಅವನು ಪೊಲಿಟಿಕಲ್ ರಿಪೋರ್ಟರ್ ಆಗಿದ್ದವನು. ಅದಕ್ಕೂ ಮುಂಚೆ ಕ್ರೈಮ್ ರಿಪೋರ್ಟರ್ ಆಗಿದ್ದ. ಆಗೀಗ ಬಿಸಿನೆಸ್ಸಿಗೆ ಸಂಬಂಧಪಟ್ಟ ಪತ್ರಿಕಾಗೋಷ್ಠಿಗಳಿಗೆ ಹೋಗುತ್ತಿದ್ದ. ಕವಿ, ಸಾಹಿತಿಗಳ ಬಗ್ಗೆ ಅವನಿಗೆ ಅಂಥ ಗೌರವವಾಗಲೀ, ಪ್ರೀತಿಯಾಗಲೀ ಇರಲಿಲ್ಲ. ಅವರದು ಒಂದು ಸಣ್ಣ ಕಮ್ಯೂನಿಟಿ. ಅವರ ಬಗ್ಗೆ ಬರೆದರೆ ಯಾರೂ ಗಮನ ಕೊಡುವುದಿಲ್ಲ. ಸೆನ್ಸೇಷನಲ್ ಸುದ್ದಿ ಅಲ್ಲಿ ಹುಟ್ಟುವುದಕ್ಕೆ ಸಾಧ್ಯವೇ ಇಲ್ಲ ಎಂದು ಅವನು ನಂಬಿಕೊಂಡಿದ್ದ.
ಹಾಗಿದ್ದರೂ ಅವನು ಕವಿಗಳ ಸಂದರ್ಶನ ಮಾಡಲು ಹೊರಟಿದ್ದಕ್ಕೆ ವಿಶೇಷ ಕಾರಣಗಳಿದ್ದವು. ಗೋವಿಂದಪ್ಪನಿಗೂ ಅವನ ಸಹೋದ್ಯೋಗಿ ಬ್ರಹ್ಮಾನಂದನೂ ಎಂದಿನಂತೆ ಪ್ರೆಸ್ ಕ್ಲಬ್‌ನಲ್ಲಿ ಕುಳಿತಾಗ ಕವಿಗಳಿಗೆ ಯಾವುದೋ ಪ್ರಶಸ್ತಿ ಬಂದ ಸುದ್ದಿ ಬಂದಿತ್ತು. ಅಯ್ಯೋ ಬಿಟ್ಹಾಕ್ರೀ, ಅದಕ್ಕೆ ನ್ಯೂಸ್ ವ್ಯಾಲ್ಯೂ ಇಲ್ಲ’ ಎಂದು ಗೋವಿಂದಪ್ಪ ನಿರ್ಲಕ್ಷ್ಯ ಮಾಡಿದ್ದ. ಬ್ರಹ್ಮಾನಂದ ಕಾವ್ಯಾಸಕ್ತ. ಸಾಹಿತ್ಯದಲ್ಲಿ ವಿಪರೀತ ಆಸಕ್ತಿ ಉಳಿಸಿಕೊಂಡಿದ್ದ. ಗೋವಿಂದಪ್ಪ ತನ್ನ ಆಸಕ್ತಿಯನ್ನು ಸಾರಾಸಗಟು ತಳ್ಳಿಹಾಕಿದ್ದು ನೋಡಿ ಅವನಿಗೆ ಸಿಟ್ಟು ಬಂತು.

ಅವರಿಬ್ಬರೂ ಸುಮಾರು ಒಂದೂವರೆ ಗಂಟೆ ಜಗಳ ಆಡಿದ್ದರು. ಕೊನೆಗೆ ಬ್ರಹ್ಮಾನಂದ ಅವನಿಗೊಂದು ಸವಾಲು ಹಾಕಿದ್ದ. ನೀನು ಅಷ್ಟೊಂದು ಬುದ್ಧಿವಂತನಾದರೆ ಒಂದು ಕವಿಯ ಸಂದರ್ಶನ ಮಾಡು ನೋಡೋಣ. ಅವರು ಏನು ಮಾತಾಡುತ್ತಾರೆ ಅನ್ನುವುದು ನಿನಗೆ ಅರ್ಥವಾದರೆ, ನಾನು ನಿನ್ನನ್ನು ಜಾಣ ಎಂದು ಒಪ್ಪಿಕೊಳ್ಳುತ್ತೇನೆ. ನಿನಗೆ ಸಂವೇದನೆಗಳೇ ಇಲ್ಲ. ಬರೀ ರಾಜಕಾರಣಿಗಳ ಹಿಂದೆ ಓಡಾಡಿಕೊಂಡಿರ್ತೀಯ ಅಷ್ಟೇ. ರಾಜಕಾರಣಿಗಳು ಕ್ಷಣಿಕ. ಮೂವತ್ತು ವರ್ಷದ ಹಿಂದೆ ನಮ್ಮ ರಾಜ್ಯದ ಅರ್ಥಸಚಿವ ಯಾರಾಗಿದ್ದರು, ಅವರು ಏನು ಮಾತಾಡಿದ್ದರು ಅಂತ ನಿನಗೆ ಗೊತ್ತಿದೆಯಾ ಹೇಳು. ಐವತ್ತು ವರ್ಷದ ಹಿಂದೆ ಸಾಹಿತ್ಯ ಸಮ್ಮೇಳನದಲ್ಲಿ ಕುವೆಂಪು ಏನು ಮಾತಾಡಿದ್ದರು ಅಂತ ನಾನು ಹೇಳ್ತೇನೆ ಬೇಕಿದ್ರೆ. ಅದಕ್ಕೂ ಮುಂಚೆ ಬಿಎಂಶ್ರೀ ಕನ್ನಡ ಸಾಹಿತ್ಯ ತಲೆಯೆತ್ತುವ ಬಗೆ’ ಅಂತ ಮಾತಾಡಿದ್ರು. ಅದರ ಬಗ್ಗೆ ಕೇಳು, ಹೇಳ್ತೀನಿ. ನಿಮ್ಮ ರಾಜಕಾರಣ, ಕ್ರೈಮ್ ಎಲ್ಲಾ ತಕ್ಷಣ ಹುಟ್ಟಿ, ಮರುಕ್ಷಣ ಸಾಯೋವಂಥದ್ದು’ ಎಂದು ಗೋವಿಂದಪ್ಪನ ಅಸ್ತಿತ್ವವನ್ನೇ ಅಲ್ಲಾಡಿಸುವ ಮಾತಾಡಿದ್ದ.
ಗೋವಿಂದಪ್ಪನಿಗೂ ಸಿಟ್ಟು ಬಂದಿತ್ತು. ತನಗೆ ಸಾಹಿತ್ಯ ಪ್ರಜ್ಞೆ ಇಲ್ಲ ಅಂತ ಹೀಯಾಳಿಸಿ ಮಾತಾಡಿದ ಬ್ರಹ್ಮಾನಂದನಿಗೆ ಬುದ್ಧಿ ಕಲಿಸಲೇಬೇಕು ಎಂದು ನಿರ್ಧಾರ ಮಾಡಿಯೇ ಬಿಟ್ಟಿದ್ದ. ನೀನು ಅಷ್ಟೆಲ್ಲ ಕೇವಲವಾಗಿ ಮಾತಾಡಬೇಡ. ಕವಿಗಳ ಜೊತೆ ಮಾತಾಡುವ ಯೋಗ್ಯತೆಯೇ ನಂಗಿಲ್ಲ ಅನ್ನಬೇಡ. ನಾಳೆ ಕವಿಗಳ ಸಂದರ್ಶನ ನಾನೇ ಮಾಡ್ತೀನಿ, ನೋಡ್ತಿರು. ನಿಮ್ಮ ಇಡೀ ಸಾಹಿತ್ಯ ಲೋಕ ಬೆಚ್ಚಿಬೀಳಬೇಕು. ಹಾಗೆ ಮಾತಾಡಿಸ್ತೀನಿ’ ಎಂದು ಸಿಟ್ಟಿನಿಂದ ಹೊರಟು ಬಿಟ್ಟಿದ್ದ. ಬೆಳಗ್ಗೆ ಎದ್ದವನೇ ಕವಿಗಳಿಗೆ ಫೋನ್ ಮಾಡಿ ಸಂದರ್ಶನದ ವೇಳೆಯನ್ನೂ ನಿಗದಿಪಡಿಸಿದ್ದ.
********
ಗೋವಿಂದಪ್ಪ ಬರುವ ಹೊತ್ತಿಗೆ ಕವಿಗಳು, ತಾವು ಬರೆದ ಕವಿತಾ ಸಂಕಲನಗಳನ್ನು ಮುಂದಿಟ್ಟುಕೊಂಡು ಕೂತಿದ್ದರು. ಅದನ್ನು ನೋಡಿಯೇ ಗೋವಿಂದಪ್ಪನಿಗೆ ಗಾಬರಿ ಶುರುವಾಯಿತು. ಅದರ ಬಗ್ಗೆ ಏನಾದರೂ ಕೇಳಿದರೆ ಏನು ಹೇಳೋದು, ತಾನು ಯಾವುದನ್ನೂ ಓದಿಲ್ಲವಲ್ಲ ಎಂಬ ಕೀಳರಿಮೆಯಲ್ಲೇ ಅವರ ಮುಂದೆ ಕುಳಿತುಕೊಂಡ.
ನಿಮ್ಮ ಹೆಸರೇನಂದ್ರೀ?
ಕವಿಗಳು ಎತ್ತರದ ದನಿಯಲ್ಲಿ ಕೇಳಿದರು. ಅವರ ಮಾತಿನಲ್ಲಿದ್ದ ಆತ್ಮವಿಶ್ವಾಸ ಕಂಡು ಗೋವಿಂದಪ್ಪ ಮತ್ತಷ್ಟು ಕುಗ್ಗಿಹೋದ. ಸಣ್ಣ ದನಿಯಲ್ಲಿ ಗೋವಿಂದಪ್ಪ’ ಅಂದ. ಶೆಟ್ಟರೋ’ ಕೇಳಿದರು ಕವಿಗಳು. ಸುಮ್ನೆ ಕೇಳ್ದೆ, ನನಗೆ ಜಾತಿಯಲ್ಲಿ ನಂಬಿಕೆ ಇಲ್ಲ. ಬೆಣ್ಣೆ ಮಾರೋ ಶೆಟ್ಟರು ಗೋವಿಂದ ಅಂತ ಹೆಸರಿಟ್ಟುಕೋತಾರೆ. ಯಾದವರು ಕೃಷ್ಣ, ಬಲರಾಮ ಅಂತ ಹೆಸರಿಟ್ಕೋತಾರೆ. ಮಾಧ್ವರು ವಾಸುದೇವ ಅಂತ ಇಟ್ಕೋತಾರೆಯೇ ಹೊರತು, ಬಲರಾಮ ಅಂತಿಟ್ಕೊಳ್ಳೋದಿಲ್ಲ, ಗಮನಿಸಿದ್ದೀರಾ ನೀವು. ಇದೆಲ್ಲ ಸಮಾಜೋ-ಸಾಂಸ್ಕೃತಿಕ ಚಿಂತನೆ’ ಅಂದರು. ಅದನ್ನೆಲ್ಲ ಮಾತಾಡುತ್ತಾ ಕೂತರೆ ಮತ್ತಷ್ಟು ಗೊಂದಲವಾಗುತ್ತೆ ಅನ್ನಿಸಿ ನೇರವಾಗಿ ಸಂದರ್ಶನಕ್ಕೆ ಜಿಗಿದ ಗೋವಿಂದಪ್ಪ.
ಪ್ರಶಸ್ತಿ ಬಂದಿದ್ದಕ್ಕೆ ಏನನ್ನಿಸಿತು?’
ಸಂತೋಷವಾಗಿದೆ. ನಾಡಿನ ಜನತೆ ನನ್ನ ಕವಿತೆಯನ್ನು ಮೆಚ್ಚಿದ್ದರು. ತೀರ್ಪುಗಾರರಿಗೆ ನನ್ನ ಸಾಹಿತ್ಯ ಇಷ್ಟವಾದದ್ದಕ್ಕೆ ಖುಷಿಯಾಗಿದೆ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ ಎಂದು ಕವಿಗಳು ಉತ್ತರಿಸುತ್ತಾರೆ ಎಂದು ಲೆಕ್ಕ ಹಾಕಿಕೊಂಡೇ ಗೋವಿಂದಪ್ಪ ಅದನ್ನು ಬರೆದುಕೊಳ್ಳಲು ಸಿದ್ಧನಾಗಿ ಕೂತಿದ್ದ. ಅಥವಾ ಅವರು ಪ್ರಶಸ್ತಿಯನ್ನು ನಿರಾಕರಿಸಬಹುದು. ಪ್ರಶಸ್ತಿ ತಡವಾಗಿ ಬಂದಿದೆ ಎನ್ನಬಹುದು. ಆ ಪ್ರಶಸ್ತಿಯನ್ನು ಕೊಟ್ಟದ್ದು ತನಗೆ ಬೇಸರ ತಂದಿದೆ ಎನ್ನಬಹುದು ಎಂದು ಎಲ್ಲಾ ಸಾಧ್ಯತೆಗಳನ್ನೂ ಗೋವಿಂದಪ್ಪ ಊಹಿಸಿಕೊಂಡು ಅಂಥದ್ದೊಂದು ಉತ್ತರಕ್ಕೆ ಕಾಯುತ್ತಾ ಕೂತ.
ಕವಿಗಳು ಅದ್ಯಾವುದನ್ನೂ ಹೇಳಲಿಲ್ಲ. ಬದಲಾಗಿ ತಾವು ಬರೆದ ಕವಿತೆಯ ಸಾಲುಗಳನ್ನು ಓದಿದರು. ಈರುಳ್ಳಿ ಎಂಬ ಹೆಸರಿನ ಪದ್ಯ ಅದು. ಆ ಪದ್ಯದಲ್ಲಿ ಗೋವಿಂದಪ್ಪನಿಗೆ ಕೇವಲ ಪದಗಳಷ್ಟೇ ಅರ್ಥವಾದವು. ಅವನಿಗೆ ಗೊತ್ತಿರುವ ಪದಗಳೇ ಅದರಲ್ಲಿದ್ದರೂ ಒಟ್ಟಾರೆಯಾಗಿ ಅದು ಏನು ಎಂಬುದು ಕಿಂಚಿತ್ತೂ ಅವನಿಗೆ ಗೊತ್ತಾಗಲಿಲ್ಲ. ಈರುಳ್ಳಿ, ಕಣ್ಣೀರು, ವಿಯೆಟ್ನಾಮ್, ಹಿಂಸೆ, ದಳ್ಳುರಿ, ದೀರ್ಘದಂಡ, ಬೆನ್ನು ಹುರಿ, ಕುಂಡಲಿ ಮುಂತಾದ ಪದಗಳು ಕಿವಿಗೆ ಅವ್ಯಾಹತವಾಗಿ ಬೀಳುತ್ತಿದ್ದವು. ಅವರು ಈರುಳ್ಳಿಯ ಬಗ್ಗೆ ಹೇಳುತ್ತಿದ್ದಾರೋ, ತನ್ನ ಬಗ್ಗೆ ಹೇಳುತ್ತಿದ್ದಾರೋ ಜಗತ್ತಿನ ಬಗ್ಗೆ ಹೇಳುತ್ತಿದ್ದಾರೋ ಎಂದು ಅವನು ಯೋಚಿಸುತ್ತಾ ಕಂಗಾಲಾಗತೊಡಗಿದ. ಅದರ ಅರ್ಥವೇನು ಎಂದು ಕೇಳಿದರೆ ಏನು ಹೇಳುವುದು ಗೊತ್ತಾಗದೇ, ತಾನಿಲ್ಲಿಗೆ ಬರಲೇಬಾರದಿತ್ತು ಅನ್ನಿಸತೊಡಗಿತು.
ಕವಿಗಳು ಕವಿತೆ ಓದಿ ಮುಗಿಸಿದರು. ಹೇಗಿದೆ ಎಂಬಂತೆ ಮುಗುಳ್ನಕ್ಕರು. ಗೋವಿಂದಪ್ಪ ಬೆಕ್ಕಸ ಬೆರಗಾಗಿ ಅವರನ್ನೇ ನೋಡುತ್ತಿದ್ದ. ಆಮೇಲೆ ಅವರೇನು ಮಾತಾಡಿದರು, ತಾನೇನು ಕೇಳಿದೆ ಎಂಬ ಎಚ್ಚರವೇ ಇಲ್ಲದಂತೆ ಗೋವಿಂದಪ್ಪ ತುಂಬ ಹೊತ್ತು ಅವರ ಮುಂದೆ ಕುಳಿತುಬಿಟ್ಟಿದ್ದ. ಕೊನೆಯಲ್ಲಿ ಇಷ್ಟು ಸಾಕು’ ಎಂದು ಹೇಳಿ ಕವಿಗಳು ಗೋವಿಂದಪ್ಪನ ಬೆನ್ನುತಟ್ಟಿ ಕಳಿಸಿಕೊಟ್ಟರು.
*******
ಆನಂತರ ಬ್ರಹ್ಮಾನಂದನಿಗೆ ಗೋವಿಂದಪ್ಪ ಸಿಗಲಿಲ್ಲ. ಗೋವಿಂದಪ್ಪನನ್ನು ಹುಡುಕಿಕೊಂಡು ಅವನ ಮನೆಯ ತನಕವೂ ಹೋಗಿ ಬಂದ ಬ್ರಹ್ಮಾನಂದ. ಅವರಿಗೂ ಗೋವಿಂದಪ್ಪನ ಪತ್ತೆ ಗೊತ್ತಿರಲಿಲ್ಲ. ಎಷ್ಟು ಹೊತ್ತಿಗೋ ಹೋಗಿ, ಎಷ್ಟು ಹೊತ್ತಿಗೋ ಬರುತ್ತಿದ್ದ ಗೋವಿಂದಪ್ಪನ ಮೇಲೆ ಅವರಿಗೂ ನಿಗಾ ಇರಲಿಲ್ಲ.
ಬ್ರಹ್ಮಾನಂದನಿಗೆ ಗೋವಿಂದಪ್ಪನ ನಿಗೂಢ ಕಣ್ಮರೆ ಒಗಟಾಗಿಯೇ ಉಳಿಯಿತು. ಅವನು ಕವಿಯ ಮನೆಗೆ ಹೋಗಿ ಸಂದರ್ಶನ ಮಾಡಿದನೋ ಇಲ್ಲವೋ ಅನ್ನುವುದೂ ಬ್ರಹ್ಮಾನಂದನಿಗೆ ತಿಳಿಯಲಿಲ್ಲ. ಹೋಗಿರಬಹುದು, ನಾಳೆ ಬರಬಹುದು ಅಂತ ಬ್ರಹ್ಮಾನಂದ ಒಂದು ವಾರ ಕಾದ. ವಾರದ ನಂತರ ಕವಿಯ ಸಂದರ್ಶನ ಮತ್ತೊಂದು ಪತ್ರಿಕೆಯಲ್ಲಿ ಪ್ರಕಟವಾಯಿತು. ನಮ್ಮ ಪೇಪರಲ್ಲೇಕೆ ಬಂದಿಲ್ಲ’ ಎಂದು ಸಂಪಾದಕರು ಬ್ರಹ್ಮಾನಂದನ ಮೇಲೆ ಕೂಗಾಡಿದರು.
ಬ್ರಹ್ಮಾನಂದ ಆ ಕೆಲಸವನ್ನು ಗೋವಿಂದಪ್ಪ ಮಾಡ್ತೀನಿ ಅಂತ ಹೋಗಿದ್ದರು ಎಂದು ಹೇಳಿ ಸಂಪಾದಕರಿಂದ ಮತ್ತಷ್ಟು ಬೈಸಿಕೊಂಡ. ಅವರಿಗೇನ್ರೀ ಗೊತ್ತು, ಕವಿಗಳ ಬಗ್ಗೆ. ಪೊಲಿಟಿಕಲ್ ರಿಪೋರ್ಟರ್‌ಗೆ ಅದನ್ನೆಲ್ಲ ಯಾಕೆ ಹೇಳ್ತೀರಿ’ ಅಂತ ಸಂಪಾದಕರು ಕೂಗಾಡಿದ್ದರು.
ಬೇರೆ ದಾರಿಯಿಲ್ಲದೆ ಕವಿಗಳ ಸಂದರ್ಶನ ಮಾಡುವುದಕ್ಕೆಂದು ಬ್ರಹ್ಮಾನಂದನೇ ವಾರದ ನಂತರ ಕವಿಗಳ ಮನೆಗೆ ಹೋದ. ಅಲ್ಲಿ ಕವಿಗಳು ಗಂಭೀರ ಚಿತ್ತರಾಗಿ ಕೂತಿದ್ದರು. ಬ್ರಹ್ಮಾನಂದ ತನ್ನನ್ನು ಪರಿಚಯಿಸಿಕೊಂಡ. ನಿಮ್ಮ ಪತ್ರಿಕೆಯಿಂದ ಆಗಲೇ ಒಬ್ಬರು ಬಂದಿದ್ದರಲ್ಲ. ತುಂಬಾ ಚೆನ್ನಾಗಿ ಪ್ರಶ್ನೆ ಕೇಳಿದರು. ನಾನು ತುಂಬ ಮುಖ್ಯವಾದ ಸಂಗತಿಗಳನ್ನು ಅವರ ಜೊತೆ ಮಾತಾಡಿದ್ದೀನಿ. ಆಧ್ಯಾತ್ಮದ ಬಗ್ಗೆ ಹೇಳಿದ್ದೀನಿ. ಪೌರಲೌಕಿಕ ಅನುಭವಗಳನ್ನು ಹಂಚಿಕೊಂಡಿದ್ದೀನಿ. ಯಾರವರು, ತುಂಬಾ ಜ್ಞಾನಿಗಳ ಥರ ಕಾಣ್ತಿದ್ದರು. ತುಂಬ ಗಂಭೀರವಾದ ಪ್ರಶ್ನೆಗಳನ್ನು ಎತ್ತಿದ್ದಾರೆ ಅವರು’ ಎಂದು ಕವಿಗಳು ಸಿಕ್ಕಾಪಟ್ಟೆ ಹೊಗಳಿದರು. ಬ್ರಹ್ಮಾನಂದನಿಗೆ ಅವರು ಯಾರ ಬಗ್ಗೆ ಹೇಳುತ್ತಿದ್ದಾರೆ ಎಂದು ಒಂದು ಕ್ಷಣ ಗಲಿಬಿಲಿಯಾಯಿತು. ಗೋವಿಂದಪ್ಪ ಅಂಥದ್ದನೆಲ್ಲ ಕೇಳಲು ಸಾಧ್ಯವೇ ಇಲ್ಲ ಅನ್ನಿಸಿತು.
ನಮ್ಮ ಪತ್ರಿಕೆಯಿಂದ ಯಾರೂ ಬಂದಿರಲಿಲ್ಲವಲ್ಲ, ಏನವರ ಹೆಸರು ಹೇಳಿ’ ಎಂದ. ಕವಿಗಳು ತಮ್ಮ ಟೇಬಲ್ಲಿನ ಮೇಲೆ ಜತನದಿಂದ ಎತ್ತಿಟ್ಟಿದ್ದ ಒಂದು ವಿಸಿಟಿಂಗ್ ಕಾರ್ಡ್ ತೆಗೆದು ಅದನ್ನು ಬ್ರಹ್ಮಾನಂದನ ಕೈಗೆ ಕೊಟ್ಟರು. ಬ್ರಹ್ಮಾನಂದ ಅದನ್ನು ಹಿಂದೂ ಮುಂದೂ ತಿರುಗಿಸಿ ನೋಡಿದ.
ಅದರ ಮೇಲೆ ಏನೂ ಇರಲಿಲ್ಲ. ಹಿಂಬದಿಯೂ ಮುಂಬದಿಯೂ ಇನ್ನೂ ಏನೂ ಅಚ್ಚಾಗದಿರುವ ವಿಸಿಟಿಂಗ್ ಕಾರ್ಡ್‌ನಂತೆ ಖಾಲಿಯಿತ್ತು.
ಇದರ ಮೇಲೆ ಯಾರ ಹೆಸರೂ ಇಲ್ವಲ್ಲ ಕವಿಗಳೇ’ ಅಂದ ಬ್ರಹ್ಮಾನಂದ.
ಅದೇ ಅವರ ಹೆಸರು’ ಅಂತ ಕವಿಗಳು ಮಾರ್ಮಿಕವಾಗಿ ನಕ್ಕರು.

‍ಲೇಖಕರು avadhi

March 3, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  • Tina

   ಈರುಳ್ಳಿ ಎಂಬ ಕವಿತೆ ನನ್ನ ಮನಸ್ಸಿಗೆ ನಾಟಿತು. ಕವಿಗಳೆಲ್ಲ ಈ ರೀತಿಯ ಗಹನವಾದ ವಿಷಯಗಳ ಕುರಿತು ಬರೆದರೆ ಒಳ್ಳೆಯದು ಎಂಬುದು ನನ್ನ ಭಾವನೆ.

   ಪ್ರತಿಕ್ರಿಯೆ
 1. ಶಾರದಾ ನಾಯ್ಕ

  ಬ್ಯೂಟಿಪುಲ್…ಸ್ಟೋರಿ.ನಾನೂ ಈಟಿವಿ ಸೇರಿದ ಹೊಸತರಲ್ಲಿ ಎಸ್.ಎಲ್.ಭೈರಪ್ಪ ಅವರ ಸಂದರ್ಶನ ಮಾಡೋ ಪರಿಸ್ಥಿತಿ ಬಂದಿತ್ತು…ನೆನಪಿಸಿಕೊಂಡರೆ ಈಗಲೂ ಗಾಬರಿಯಾಗುತ್ತದೆ..ಆದ್ರೂ ನನ್ನ ವಿಸಿಟಿಂಗ್ ಕಾರ್ಡಿನಲ್ಲಿ ಹೆಸರು ವಿಳಾಸ ಇತ್ಯಾದಿ ಸಾಕಷ್ಟು ಮಾಹಿತಿಗಳಿದ್ದವು. ಇಂಥ ಕಥೆ ಐಡಿಯಾಗಳೆಲ್ಲ ನಿಮಗೆ ಮಾತ್ರ ಬರ್ತಾವಲ್ಲ..ಹ್ಯಾಟ್ಸ್ ಆಪ್ ಟು ಯುವರ್ ಇಮ್ಯಾಜಿನೇಶನ್…

  ಪ್ರತಿಕ್ರಿಯೆ
 2. ಜೆಕೆ

  ಯಾವುದೋ ಕವಿಯನ್ನು ಮನದಲ್ಲಿ ಇಟ್ಟುಕೊಂಡು ಬರೆದಂತೆ ಅನ್ನಿಸಿತು. ಏನೇ ಆದರೂ, ಯಾರಿಗೆ ಏನು ಹೇಳಬೇಕು ಎಂದಿದ್ದೀರೋ ಅದನ್ನು ಹೇಳಿದ ರೀತಿ, ನಿಮ್ಮ ಬರವಣಿಗಾಶಕ್ತಿಗೆ ನಮೋನ್ನಮಃ.

  ಪ್ರತಿಕ್ರಿಯೆ
  • Kallare

   ಗೋವಿಂದಪ್ಪ ಮನಸಾರೆ ಮೂವಿ ಹೀರೋ ಜೊತೆ ಕೈ ಕೈ ಹಿಡ್ಕೊಂಡು ಹೋಗ್ತಿದಾರೆ ಅನ್ನೋ ಸುದ್ದಿಯಿದೆ…

   ಪ್ರತಿಕ್ರಿಯೆ
   • ಜೆಕೆ

    Kallare, ಹಾ ಹ್ಹಾ…ಕವಿ ಯಾರು, ಸಂದರ್ಶಕ ಯಾರು ಎಂದು ಕಂಡು ಹಿಡಿದ ಓದುಗ ಮಹಾಶಯರಲ್ಲಿ ನೀವೂ ಒಬ್ಬರು. congrats !

    ಪ್ರತಿಕ್ರಿಯೆ
 3. Amase Manjunath

  ಪ್ರಬಂಧದ ಶೈಲಿಯಲ್ಲಿರೋ ಕಥೆ(ಕಥೆನಾ?) ಚೆನ್ನಾಗಿದೆ.
  ಆದರೆ ಗೋವಿಂದಪ್ಪ ಹಾಗಿರ್ತಾನೆ ಅಂತ ಲೇಖಕರು ಹೇಗೆ ಭಾವಿಸಿದರು?
  ಅರ್ಥವಾಗಲಿಲ್ಲ.
  -ಅಮಾಸೆ ಮಂಜುನಾಥ್

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: