ಜೋಗಿ ಬರೆದಿದ್ದಾರೆ: ಗಡಿಯಾರ ನಿಂತುಹೋದವರ ಜಗತ್ತಿನಲ್ಲಿ ..

n697974940_6202

ಮೊನ್ನೆ ಹಿರಿಯ ವಿಮರ್ಶಕರೊಬ್ಬರು ಸಂಪಾದಿಸಿದ ವಿಮರ್ಶಾ ಸಂಕಲನವೊಂದನ್ನು ನೋಡುತ್ತಿದ್ದೆ. ಸಮಕಾಲೀನ ಕನ್ನಡ ಸಾಹಿತ್ಯ ಎಂಬ ವಿಚಾರವನ್ನಿಟ್ಟುಕೊಂಡು ಅವರು ತುಂಬ ಪ್ರಬುದ್ಧವಾಗಿ ಮತ್ತು ವಿಸ್ತೃತವಾಗಿ ಬರೆದಿದ್ದರು. ಹೊಸಗನ್ನಡ ಸಣ್ಣ ಕಥಾ ಜಗತ್ತಿನ ಪರಿಚಯವಾದ ಹಾಗೂ ಆಗುತ್ತದೆ, ನಾನು ಓದುತ್ತಿರುವ ಕತೆಗಾರರ ಬಗ್ಗೆ ತಿಳಿದುಕೊಂಡ ಹಾಗೂ ಆಗುತ್ತದೆ ಎಂದು ಓದಲು ಆರಂಭಿಸಿದರೆ ಮೊದಲ ಸಾಲುಗಳೇ ಆಘಾತಕಾರಿಯಾಗಿದ್ದವು. ಅವರು ಸಮಕಾಲೀನ ಎಂದು ಭಾವಿಸಿದ್ದು ೧೯೭೦ರಲ್ಲಿ ಬರೆಯುತ್ತಿದ್ದ ಬರಹಗಾರರನ್ನು. ಅವರ ವಿಮರ್ಶೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಹೊರಬಂದ ಕಥಾಸಂಕಲನಕ್ಕೆ ನಿಂತು ಹೋಗಿತ್ತು. ಅದು ಮೊದಲ ಮುದ್ರಣ ಕಂಡದ್ದು ೨೦೦೮ರಲ್ಲಿ. ಅಂದರೆ ಮೂವತ್ತೆಂಟು ವರುಷಗಳ ಹಿಂದೆ ಅವರ ವಾಚು ನಿಂತು ಹೋಗಿದೆ!

stopped_clock_mount_pelee

ರಾಘವೇಂದ್ರ ಪಾಟೀಲರ ಕಥಾಸಂಕಲನಕ್ಕೆ ಪ್ರಸ್ತಾವನೆ ಬರೆಯುತ್ತಾ ಜಿ ಎಸ್ ಆಮೂರರು ೧೯೮೦ರ ಆಸುಪಾಸಿನಲ್ಲಿ ತಮ್ಮ ಪ್ರಥಮ ಕಥಾಸಂಗ್ರಹವನ್ನು ಪ್ರಕಟಿಸಿದ ಕತೆಗಾರರನ್ನು ನಾನು ಹೊಸ ಕತೆಗಾರರೆಂದು ಪರಿಗಣಿಸಿದ್ದೇನೆ’ ಎಂದು ಅವರು ಆರಂಭದಲ್ಲೇ ಬರೆದುಕೊಂಡಿದ್ದಾರೆ. ೨೦೦೯ರಲ್ಲಿ ಬರೆಯುತ್ತಿರುವ ಪ್ರಸ್ತಾವನೆಯಲ್ಲಿ ಎಲ್ಲೂ ಈ ಕಾಲದ ಕತೆಗಾರರ ಪ್ರಸ್ತಾಪವೇ ಇರಲಿಲ್ಲ. ರಾಮಚಂದ್ರ ಶರ್ಮರು ಸಂಪಾದಿಸಿದ ಸಮಕಾಲೀನ ಕನ್ನಡ ಸಣ್ಣಕತೆಗಳು’ ಸಂಕಲನವೇ ಅವರಿಗೆ ದಿಕ್ಸೂಚಿಯಾಗಿತ್ತು. ತಮಾಷೆಯೆಂದರೆ ಮೂರುನಾಲ್ಕು ದಶಕಗಳ ಹಿಂದೆ ಪ್ರಕಟವಾದ ಕಥಾ ಸಂಕಲನವೊಂದು ಮರುಮುದ್ರಣ ಕಾಣುವಾಗಲೂ ಸಮಾಕಾಲೀನ ಕತೆ, ಕಾವ್ಯ ಎಂಬ ಹೆಸರಿನಲ್ಲೇ ಪ್ರಕಟವಾಗುತ್ತದೆ. ಲಂಕೇಶರು ಅಕ್ಷರ ಹೊಸಕಾವ್ಯ’ವನ್ನು ಎರಡನೇ ಸಾರಿ ಪರಿಷ್ಕರಿಸಿ ಹೊರತಂದು, ಹೊಸಬರ ಕವಿತೆಗಳನ್ನೂ ಸೇರಿಸಿ ಮರುಮೌಲ್ಯಮಾಪನ ಮಾಡಿದ್ದು ನೆನಪಾಗುತ್ತಿದೆ. ಅಂಥ ಪ್ರಯತ್ನ ಈಗ ನಡೆಯುತ್ತಿಲ್ಲ.

ಇವೆಲ್ಲವನ್ನೂ ನೋಡುತ್ತಿದ್ದರೆ ಈ ಕಾಲದಲ್ಲಿ ಬರೆಯುತ್ತಿರುವವರು ಚರಿತ್ರೆ ಹೀನರೆಂದೇ ಹೇಳಬೇಕು. ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗುವ ಆಸಕ್ತಿ ಕತೆಗಾರರಿಗೆ ಇಲ್ಲವೋ ಅಥವಾ ವಿಮರ್ಶಕರ ಪಾಲಿಗೆ ಅವರು ಮಹತ್ವದ ಕತೆಗಾರರಾಗಿ ಕಾಣಿಸುತ್ತಿಲ್ಲವೋ ಎಂಬ ಅನುಮಾನದಲ್ಲೇ ಈ ಮಾತನ್ನು ಹೇಳಬೇಕಾಗಿದೆ. ಹಾಗೆ ನೋಡಿದರೆ, ದೇಶಕಾಲ’ದಲ್ಲಿ ವಿವೇಕ ಶಾನಭಾಗ ಹೊಸ ಲೇಖಕರ ಕುರಿತು ಬರೆಸುತ್ತಿರುವ ಮಾಲಿಕೆ, ಮಯೂರ’ದಲ್ಲಿ ರಘುನಾಥ ಸಾಹಿತ್ಯದ ಪ್ರೇರಣೆಯ ಬಗ್ಗೆ ಹೊಸಬರಿಂದ ಬರೆಸುತ್ತಿರುವುದು, ಈ ಕಾಲದ ಬರಹಗಾರರನ್ನು ಒಂದೆಡೆ ಸೇರಿಸಿ ನಾನೇಕೆ ಬರೆಯುತ್ತೇನೆ?’ ಎಂಬ ಪ್ರಶ್ನೆಗೆ ಅವರು ಕೊಟ್ಟ ಉತ್ತರಗಳನ್ನು ರಹಮತ್ ತರೀಕೆರೆ ಪುಸ್ತಕ ರೂಪದಲ್ಲಿ ತಂದದ್ದು, ಶೂದ್ರ ಶ್ರೀನಿವಾಸ್ ಸಾಹಿತ್ಯದ ತಲ್ಲಣಗಳ ಬಗ್ಗೆ ತಂದ ಹೊಸ ಸಂಚಿಕೆಗಳಲ್ಲಿ ಮಾತ್ರ ನಮ್ಮ ಕಾಲದ ಲೇಖಕರು ಕಾಣಿಸಿಕೊಳ್ಳುತ್ತಿದ್ದಾರೆ.

broken clock1

ಪರಂಪರೆಯೊಂದಿಗೆ ಈ ಕಾಲದ ಲೇಖಕರು ಮುಖಾಮುಖಿ ಆಗುತ್ತಿಲ್ಲ ಎಂಬ ಆಕ್ಷೇಪವನ್ನು ಬಹಳಷ್ಟು ವಿಮರ್ಶಕರು ವ್ಯಕ್ತಪಡಿಸಿದ್ದಾರೆ. ಈ ಕಾಲದ ಸಾಹಿತ್ಯವನ್ನು ಪ್ಲಾಸ್ಟಿಕ್ ಸಾಹಿತ್ಯ’ ಎಂದು ತಳ್ಳಿಹಾಕುವುದು ಅನೇಕರಿಗೆ ಬಹು ಪ್ರೀತಿಯ ಕೆಲಸ. ಏಕಕಾಲಕ್ಕೆ ಎರಡು ವಿರುದ್ಧ ನಿಲುವುಗಳೊಂದಿಗೆ ಹಾಜರಾಗುವ ವಿಮರ್ಶಕರೂ ನಮ್ಮಲ್ಲಿ ಸಿಗುತ್ತಾರೆ. ನಗರ ಜೀವನದ ಬಗ್ಗೆ ಬರೆಯುವ ಕತೆಗಾರರಿಲ್ಲ ಎಂಬ ಆಕ್ಷೇಪ ಹಾಗೂ ಗ್ರಾಮೀಣ ಪ್ರದೇಶದ ವಸ್ತುವನ್ನು ಎತ್ತಿಕೊಂಡಾಗ ಮಾತ್ರ ಒಬ್ಬ ಲೇಖಕ ಪರಂಪರೆಯನ್ನು ಮುಂದುವರಿಸುತ್ತಾನೆ ಎಂಬ ನಿಲುವು- ಇವೆರಡರ ನಡುವೆ ಇಂದಿನ ವಿಮರ್ಶೆ ತೊಳಲಾಡುತ್ತಿದೆ.

ಇವತ್ತಿಗೂ ನಮ್ಮ ವಿಮರ್ಶಕರಿಗೆ ನಗರ ಎಂದರೆ ಮುಂಬೈ. ಎಪ್ಪತ್ತರ ದಶಕದ ಅನೇಕರ ಲೇಖಕರು ಕಟ್ಟಿಕೊಟ್ಟ ಮುಂಬಯಿಯ ಚಿತ್ರಣವೇ ನಗರಪ್ರಜ್ಞೆಗೆ ಮಾದರಿ. ಬೆಂಗಳೂರನ್ನು ನಗರ’ ಎಂದು ಅವರು ಒಪ್ಪುವುದಕ್ಕೂ ಸಿದ್ಧರಿಲ್ಲ. ಬೆಂಗಳೂರು ಸಾಹಿತ್ಯಕ್ಕೆ ತಕ್ಕ ಭೂಮಿಕೆ ಆಗಲಾರದು ಎಂದು ನಂಬಿರುವ ಅನೇಕರ ಪಾಲಿಗೆ, ಬೆಂಗಳೂರನ್ನು ಕೇಂದ್ರವನ್ನಾಗಿ ಇಟ್ಟುಕೊಂಡ ಕತೆಗಳು ಪೋಸ್ಟ್ ಮಾಡರ್ನ್’ ಆಗಿ ಕಾಣಿಸುತ್ತವೆ. ನವ್ಯೋತ್ತರ’ ಸಾಹಿತ್ಯದ ನೆಲೆಗಳ ಕುರಿತು ಯೋಚಿಸುವ, ವಿಶ್ಲೇಷಿಸುವ ತಾಳ್ಮೆಯಾಗಲೀ, ಅಗತ್ಯವಾಗಲೀ ಅವರಿಗೆ ಕಾಣಿಸುತ್ತಿಲ್ಲ. ಬಹುಶಃ ಅವರ ವಿಮರ್ಶಾ ಪರಿಕರಗಳಾಚೆ ಈ ಕತೆಗಳು ಹಬ್ಬಿಕೊಂಡಿರುವುದೂ ಅದಕ್ಕೆ ಕಾರಣ ಇರಬಹುದು.

ನಾಸ್ಟಾಲ್ಜಿಯಾ ಎಂಬುದು ಕೇವಲ ಲೇಖಕರನ್ನು ಕಾಡುವ ಸಮಸ್ಯೆಯಾಗಿ ಉಳಿದಿಲ್ಲ. ಅಂಥದ್ದೊಂದು ಹಳಹಳಿಕೆಯ ಜಗತ್ತಿನಲ್ಲಿ ವಿಮರ್ಶಕರೂ ಪಳಯುಳಿಕೆಗಳಾಗಿ ಉಳಿದುಬಿಟ್ಟಿದ್ದಾರೇನೋ ಎಂದು ಗುಮಾನಿ ಹುಟ್ಟಿಸುವಷ್ಟರ ಮಟ್ಟಿಗೆ ಇವತ್ತಿನ ವಿಮರ್ಶಕರು ಪೂರ್ವಾರ್ಜಿತ ಕರ್ಮ’ಕ್ಕೆ ಅಂಟಿಕೊಂಡು ಬಿಟ್ಟಿದ್ದಾರೆ.

-೨-

ಇದನ್ನು ಇನ್ನೊಂದು ಬಗೆಯಲ್ಲೂ ನೋಡಬಹುದೇನೋ? ಇವತ್ತು ಕನ್ನಡ ಎದುರಿಸುತ್ತಿರುವ ಪ್ರತಿರೋಧಗಳ ಸ್ವಷ್ಪ ಕಲ್ಪನೆ ನಮ್ಮ ವಿಮರ್ಶಕರಿಗಿಲ್ಲ. ಅವರು ಹಳೆಯ ಆಯುಧಗಳನ್ನು ಬಗಲಿಗೇರಿಸಿಕೊಂಡು ಹೊಸ ಸಾಹಿತ್ಯವನ್ನು ಎದುರಿಸಲು ಸಜ್ಜಾಗುತ್ತಿದ್ದಾರೆ. ಸಣ್ಣ ಸಣ್ಣ ಗುಂಪುಗಳಲ್ಲಿ ನಡೆಯುವ ಸಂವಾದ, ವಾಗ್ವಾದ ಮತ್ತು ಸಂವಹನಗಳು ವಿಸ್ತಾರವಾದ ನೆಲೆಯನ್ನು ಕಂಡುಕೊಳ್ಳಲು ಹಿಂಜರಿಯುತ್ತಿವೆ. ಇಡೀ ಸಾಹಿತ್ಯ ಜಗತ್ತನ್ನು ಒಳಗೊಳ್ಳಲು ನಿರಾಕರಿಸುತ್ತಿವೆ. ಇನ್ನೂ ಅವರು ಕಾದು ನೋಡುವ’, ನಿರೀಕ್ಷಿಸುವ’ ಮತ್ತು ಭರವಸೆ ಇಟ್ಟುಕೊಳ್ಳುವ ಹಳೇ ಚಾಳಿಯನ್ನು ಬಿಟ್ಟಿಲ್ಲ. ರಾಜೇಂದ್ರ ಚೆನ್ನಿ ಅದನ್ನು ಮೀರಿದ ಅನುಭವಗಳನ್ನು ನಿಭಾಯಿಸಿಕೊಂಡು ತಮ್ಮ ಕಥನ ಪ್ರಪಂಚವನ್ನು ಹೇಗೆ ಹಿಗ್ಗಿಸಿಕೊಳ್ಳುತ್ತಾರೆಂದು ಕಾದು ನೋಡಬೇಕಿದೆ’ ಎಂದೂ ಆಮೂರರು ಅವರಿಂದ ಕಥನ ಕ್ಷೇತ್ರದಲ್ಲಿ ಶ್ರೇಷ್ಠಮಟ್ಟದ ಸಾಧನೆಯನ್ನು ಖಂಡಿತವಾಗಿಯೂ ನಿರೀಕ್ಷಿಸಬಹುದಾಗಿದೆ’ ಎಂದೂ ಹಳೆಯ ಶೈಲಿಯಲ್ಲಿ ಬರೆದು ಸುಮ್ಮನಾಗುತ್ತಾರೆ. ಇದು ಬರೆಯಲು ಆರಂಭಿಸಿದ ತರುಣ ಲೇಖಕನ ಕುರಿತು ಆಡಿದ ಮಾತಲ್ಲ. ಅರವತ್ತರ ಗಡಿಯಲ್ಲಿರುವ ರಾಘವೇಂದ್ರ ಪಾಟೀಲರ ಕುರಿತ ಅನಿಸಿಕೆಗಳು.

ಇವತ್ತಿನ ಸಾಮಾಜಿಕ ತಲ್ಲಣಗಳನ್ನೂ ರಾಜಕೀಯದ ಪ್ರಭಾವಗಳನ್ನೂ ಗುರುತಿಸುವಲ್ಲಿ ನಮ್ಮ ವಿಮರ್ಶಕರು ಎಷ್ಟು ಯಶಸ್ವಿಯಾಗಿದ್ದಾರೆ ಎಂದು ಗಮನಿಸಿ ನೋಡಿ. ಸಾಹಿತ್ಯವನ್ನು ಅವರು ಈಗಲೂ ಇವೆಲ್ಲದರಿಂದ ಪ್ರತ್ಯೇಕಿಸಿಯೇ ನೋಡುತ್ತಾರೆ. ಅದೊಂದು ಸರ್ವಸ್ವತಂತ್ರ ಸಂಗತಿಯೆಂದೂ ಅದರ ಮೇಲೆ ಅನ್ಯ ಪ್ರಭಾವಗಳಿರುವುದಕ್ಕೆ ಸಾಧ್ಯವೇ ಇಲ್ಲವೆಂದೂ ತೀರ್ಮಾನಕ್ಕೆ ಬಂದೇ ಕೃತಿ ವಿಮರ್ಶೆ ಶುರುವಾಗುತ್ತದೆ. ಅಭಿಜಾತ ಸಾಹಿತ್ಯ ವಿಮರ್ಶೆಯೆಂಬುದು ಕೂಡ ಒಂದು ಕಾಯಿಲೆಯೇ. ಕಳೆದ ಹತ್ತಿಪ್ಪತ್ತು ವರುಷಗಳಲ್ಲಿ ಆಗಿರುವ ತೀವ್ರಸ್ವರೂಪದ ಬದಲಾವಣೆಗಳನ್ನು ಅರಗಿಸಿಕೊಳ್ಳುವ ಶಕ್ತಿಯಾಗಲೀ ಪ್ರೌಢಿಮೆಯಾಗಲೀ ಬಹುತೇಕ ವಿಮರ್ಶಕರಲ್ಲಿ ಕಾಣಿಸುತ್ತಿಲ್ಲ.

ಓದುಗ ಲೇಖಕರಿಗಿಂತ ಒಂದು ಹೆಜ್ಜೆ ಮುಂದಿರುತ್ತಾನೆ ಎನ್ನುವ ಮಾತಿದೆ. ಇವತ್ತಿನ ಲೇಖಕರು ವಿಮರ್ಶಕರಿಗಿಂತ ಮೈಲಿ ಮುಂದಿದ್ದಾರೆ. ನವ್ಯಕ್ಕೆ ಅಂಟಿಕೊಂಡು ಅದು ಪ್ರತಿಪಾದಿಸಿದ ಸತ್ಯವೇ ಪರಮಸತ್ಯ ಎಂದು ನಂಬಿರುವ ಅನೇಕರಿಗೆ ಅದನ್ನು ಬಿಟ್ಟು ಬರುವ ಧೈರ್ಯವೂ ಇಲ್ಲ. ಈ ಅಧೈರ್ಯ ಮತ್ತು ಅಪನಂಬಿಕೆಗೆ ಕಾರಣ ಓದಿನ ಕೊರತೆ. ಅವರು ಕಳೆದ ಹತ್ತು ಹನ್ನೆರಡು ವರುಷಗಳಿಂದ ಬರೆಯುತ್ತಿರುವ ಲೇಖಕರನ್ನು ಓದಿಲ್ಲ. ಎರಡನೆಯದಾಗಿ ಅವರಿಗೆ ಎರವಲು ತರುವುದಕ್ಕೆ ಯುರೋಪಿನಲ್ಲಾಗಲೀ, ಇಂಗ್ಲೆಂಡಿನಲ್ಲಾಗಲೀ ಹೊಸ ಸಾಹಿತ್ಯ ಸಿದ್ಧಾಂತಗಳು ಸೃಷ್ಟಿಯಾಗುತ್ತಿಲ್ಲ. ಹೀಗಾಗಿ ಹಳೆಯ ಹತಾರಗಳನ್ನು ಬಿಡುವ ಧೈರ್ಯ ಅವರಿಗೆ ಇದ್ದಂತಿಲ್ಲ. ಅದರಿಂದೀಚೆ ಬಂದರೆ ಎಲ್ಲಿ ಅನಾಥರಾಗುತ್ತೇವೋ ಎಂಬ ಭಯ

ಅವರನ್ನು ಕಾಡುತ್ತಿದ್ದಂತೆ ಅನ್ನಿಸುತ್ತದೆ.

-೩-

ಇದು ಹೊಸ ಮಾಧ್ಯಮಗಳ ಕಾಲ. ಸಣ್ಣ ಸಾಹಿತ್ಯ ಪತ್ರಿಕೆಗಳೇ ಸಾಹಿತ್ಯಕ್ಕೆ ಜೀವಾಳ ಎಂದು ಕೆ ಸತ್ಯನಾರಾಯಣ ಬರೆದಿದ್ದರು. ದೊಡ್ಡ ಪತ್ರಿಕೆಗಳು ಸಾಹಿತ್ಯವನ್ನು ಕಡೆಗಣಿಸುತ್ತಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಪತ್ರಿಕೋದ್ಯಮದ ನಿಲುವು, ಅಗತ್ಯಗಳು ಬದಲಾಗಬೇಕಾಗಿರುವ ಅನಿವಾರ್ಯತೆ ಲೇಖಕರಿಗೆ ಕಾಣಿಸುತ್ತಿಲ್ಲ. ಇವತ್ತು ಕೂಡ ಈ ಶೇಕಡಾ ಏಳರ’ ಪಾಲಿಗೆ ಪತ್ರಿಕೆಗಳು ವಿಮರ್ಶೆಗಳನ್ನು ಪ್ರಕಟಿಸುತ್ತಾ, ಉದ್ದುದ್ಧದ ಕತೆಗಳಿಗೂ ಕವಿತೆಗಳಿಗೂ ಜಾಗ ಮಾಡಿಕೊಡುತ್ತಾ, ಒಣ ವಿಮರ್ಶೆಗಳನ್ನು ಅಚ್ಚು ಮಾಡುತ್ತಾ ಇರಬೇಕು.

ಇಂಗ್ಲಿಷ್ ಪತ್ರಿಕೆಗಳತ್ತ ಒಮ್ಮೆ ನೋಡಿ. ಜಗತ್ತಿನ ಯಾವ ದಿನ ಪತ್ರಿಕೆಯೂ ಇವತ್ತು ಕತೆಗಳನ್ನು ಪ್ರಕಟಿಸುವುದಿಲ್ಲ. ಕವಿತೆಗೆ ಜಾಗ ಕೊಡುವುದಿಲ್ಲ. ವಿಮರ್ಶೆಗಳತ್ತ ತಿರುಗಿಯೂ ನೋಡುವುದಿಲ್ಲ. ಒಳ್ಳೆಯ ಪುಸ್ತಕಗಳು ಬಂದಾಗ ಕೆಲವು ಪತ್ರಿಕೆಗಳು ಅವುಗಳ ಬಗ್ಗೆ ಒಂದೆರಡು ಪ್ಯಾರಾ ಬರೆಯುತ್ತವೆ.

ಹಾಗೇ ಇವತ್ತಿನ ಅತ್ಯಂತ ಪ್ರಭಾವಶಾಲೀ ಮಾಧ್ಯಮವಾದ ಟೀವಿಯಲ್ಲೂ ಸಾಹಿತ್ಯಕ್ಕೆ ಜಾಗವಿಲ್ಲ. ಸಂಗೀತ, ಚಿತ್ರಕಲೆಯ ಹಾಗೆ ಅದು ಸಾಹಿತ್ಯವನ್ನೂ ದೂರ ಇಟ್ಟಿದೆ. ನಾವಿವತ್ತು ತುಂಬ ಪ್ರೀತಿಯಿಂದ ಓದುವ ಬಹುತೇಕ ಪಾಶ್ಚಾತ್ಯ ಲೇಖಕರು ಕನ್ನಡದ ಲೇಖಕರ ಹಾಗೆ ಪತ್ರಿಕೆಗಳನ್ನೆ ನೆಚ್ಚಿಕೊಂಡಿಲ್ಲ.

ವಸುಧೇಂದ್ರ, ನಾಗರಾಜ ವಸ್ತಾರೆ, ಮಂಜುನಾಥ್, ಅಶೋಕ ಹೆಗಡೆ,. ಸಚ್ಚಿದಾನಂದ ಹೆಗಡೆ, ಜಿ ಎನ್ ಮೋಹನ್, ಕಾರ್ಪೆಂಟರ್, ತೂಲಹಳ್ಳಿ, ರಾಜಲಕ್ಷ್ಮಿ, ರಘುನಾಥ್, ಕಾಗಿನೆಲೆ, ವಿವೇಕ್, ಸುರೇಂದ್ರನಾಥ್, ತಮ್ಮಾಜಿರಾವ್, ಜ್ಯೋತಿ, ಅಕ್ಷತಾ- ಹೀಗೆ ಹಲವರು ತೀವ್ರತೆಯಿಂದ ಬರೆಯುತ್ತಿದ್ದಾರೆ. ಅವರು ಓದುಗರನ್ನು ನೇರವಾಗಿ ತಲುಪುತ್ತಿದ್ದಾರೆ ಅನ್ನುವುದು ಕೂಡ ಸಂತೋಷದ ಸಂಗತಿ. ಇವರ ಕತೆಗಳು ಕವಿತೆಗಳು ಪ್ರಕಟವಾದಾಗ ಅದರ ಬಗ್ಗೆ ಗೊತ್ತಿರುವ ಗೊತ್ತಿಲ್ಲದ ವಲಯದಿಂದ ಪ್ರಶಂಸೆಗಳೂ ಆಕ್ಷೇಪಗಳೂ ಟೀಕೆಗಳೂ ತಿದ್ದುಪಡಿಗಳೂ ವ್ಯಕ್ತವಾಗುತ್ತವೆ. ಈ ಕಾಲದ ಸಾಹಿತ್ಯ ಜಗತ್ತು ಜೀವಂತವಾಗಿರುವುದು ಇಂಥ ಸಂಗತಿಗಳ ಮೂಲಕ. ಶ್ರೀವತ್ಸ ಜೋಶಿಯವರ ಇತ್ತೀಚಿನ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳನ್ನು ನೋಡಿದಾಗ ನಾನು ದಂಗಾಗಿ ಹೋದೆ. ಅವರ ವಿದ್ವತ್ತಿನ ಪರಿಚಯ, ಕನ್ನಡದ ಕುರಿತ ಆಸಕ್ತಿ ಮತ್ತು ಜೀವನಪ್ರೀತಿಯ ಬಗ್ಗೆ ಗೊತ್ತಿದ್ದ ನನಗೆ ಅವರಿಗಿರುವ ಅಪಾರ ಓದುಗ ಬಳಗದ ಪರಿಚಯ ಇರಲಿಲ್ಲ.

ಸದ್ಯಕ್ಕೆ ತಟಸ್ಥವಾಗಿರುವ ಹಾಗೆ ಕಾಣುವ ‘ಬ್ಲಾಗ್’ ಜಗತ್ತೇ ಈ ಕಾಲದ ಸಾಹಿತ್ಯಿಕ ವಿದ್ಯಮಾನಗಳಿಗೆ ನೆಲಮನೆಯಾಗಬೇಕು ಎನ್ನುವ ಅಗತ್ಯವನ್ನು ಈ ಎಲ್ಲಾ ಸಂಗತಿಗಳೂ ಸ್ಪಷ್ಟಪಡಿಸುತ್ತವೆ ಎಂದುಕೊಂಡಿದ್ದೇನೆ. ಇವತ್ತಿನ ನಮ್ಮ ಚರ್ಚೆ, ವಾಗ್ವಾದ ಮತ್ತು ಸಂವಾದಗಳಲ್ಲಿ ಒಡೆದು ಹೋದ ಸಾಹಿತ್ಯ ಲೋಕ, ಮತ್ತೆ ಸಮಗ್ರವನ್ನೂ ಒಳಗೊಳ್ಳುವುದಕ್ಕೆ ನಾವೇನು ಮಾಡಬಹುದು ಎಂಬುದು ಮಾತ್ರ ಸ್ಪಷ್ಟವಾಗುತ್ತಿಲ್ಲ. ಆದರೆ, ಇವರು ನಮ್ಮನ್ನು ಗುರುತಿಸುತ್ತಾರೆ, ತಿದ್ದುತ್ತಾರೆ ಮತ್ತು ಪರಾಂಬರಿಸುತ್ತಾರೆ ಎಂದು ನಂಬಿಕೊಂಡ ವಿಮರ್ಶಕ’ರ ಗಡಿಯಾರ ಎಂದೋ ನಿಂತುಹೋಗಿದೆ ಎಂಬ ಅರಿವಿನೊಂದಿಗೆ ನಾವು ಬರೆವಣಿಗೆಯಲ್ಲಿ ತೊಡಗಿಕೊಳ್ಳಬೇಕಾದ, ಸ್ವವಿಮರ್ಶೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಮಾತ್ರ ಅಲ್ಲಗಳೆಯುವಂತಿಲ್ಲ.

‍ಲೇಖಕರು avadhi

August 2, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

3 ಪ್ರತಿಕ್ರಿಯೆಗಳು

 1. minchulli

  ಬಿಡಿ ಸಾರ್… ನಮ್ಮಂಥ ಪಾಮರರ ಬದುಕೇ ಆನಂದಮಯ… ಯಾವ ವಿಮರ್ಶೆಗಳ ಗೊಡವೆಯಿಲ್ಲದೆ ವಿಮರ್ಶಕರ ಹಂಗಿಲ್ಲದೆ ನಮ್ಮ ಮನೆ ಗಡಿಯಾರ ಮಾತ್ರ ನೋಡಿಕೊಂಡು ಪುರುಸೊತ್ತು ಮಾಡಿಕೊಂಡು ಎಲ್ಲಾರು ಬರೆದಿದ್ದನ್ನು ನಮ್ಮ ಪಾಡಿಗೆ ನಾವು ಓದುತ್ತಾ ಖುಷಿಯಾಗಿದ್ದೇವೆ… ಅವನ್ನೆಲ್ಲ ಓದುವ ಬದಲು ನೀವೂ ಯಾಕೆ ಇದನ್ನೇ ಟ್ರೈ ಮಾಡಬಾರದು ? ಇಷ್ಟರ ಮೇಲೆ ನಿಮ್ಮಿಷ್ಟ !!!!

  ಪ್ರತಿಕ್ರಿಯೆ
 2. ಸುಪ್ತದೀಪ್ತಿ

  ಜೋಗಿ ಸರ್,
  ಯಾರದೇ ಯಾವುದೇ ಬರವಣಿಗೆಗೆ ಓದುಗರ ಪ್ರತಿಕ್ರಿಯೆ ಸಾಲದೆ?
  ವಿಮರ್ಶಕರ ಮುದ್ರೆ ಬೇಕೇ ಬೇಕಾ? ಯಾಕೆ?

  ಪ್ರತಿಕ್ರಿಯೆ
 3. AVLRAO

  ಬ್ಲಾಗ್ ಜಗತ್ತೇ ಈ ಕಾಲದ ಸಾಹಿತ್ಯಕ ವಿದ್ಯಮಾನಗಳಿಗೆ ನೆಲಮನೆಯಾಗಬೇಕು ಎಂದು
  ಬರೆದ ಇಂಕು ಆರುವ ಮೊದಲೇ ಬ್ಲಾಗ್ ಜಗತ್ತನ್ನೇ ಬಿಡುತ್ತೇನೆ ಎಂಬ ನಿರ್ಧಾರ
  ಮಾಡಿದ್ದು ಸರಿಯೇ?

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಸುಪ್ತದೀಪ್ತಿCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: