ಜೋಗಿ ಬರೆದಿದ್ದಾರೆ: ಚಳಿ..ಚಳಿ..

ಚಳಿಗಾಲದ ಮೈಗೊಂದು ಕಲರ್ ಕಲರ್ ಟೀ ಶರ್ಟ್


jogi2

ಚಳಿಗಾಲದ ಒಳಗೆ ಕಾಲಿಟ್ಟಿದೆ. ಮುಂಜಾನೆದ್ದು ತುಟಿ ಸವರಿಕೊಂಡರೆ ಬಿರುಕು. ವಾಕಿಂಗ್ ಹೊರಟರೆ ಲಾಲ್ ಬಾಗಿನ ಆ ತುದಿಯಲ್ಲಿ ತಲೆಯಿಲ್ಲದ ತೆಂಗಿನ ತೋಟ ಲಾಲ್ ಬಾಗ್ ಕೆರೆಯಿಂದ ಏಳುತ್ತಿರುವ ಹೊಗೆ. ವಿರಹಿಗಳಿಗೆ ರಾತ್ರಿಪೂರ ಧಗೆ. ಮೊನ್ನೆ ಮುಂಜಾನೆ ಲಾಲ್ ಬಾಗ್ ಸುತ್ತುತ್ತಾ ಆಮೇಲೆ ಹೊರಗೆ ಬರುವ ಹೊತ್ತಿಗೆ ಪುಟ್ಟ ಹುಡುಗನೊಬ್ಬ ಫ್ಲಾಸ್ಕಿನಲ್ಲಿ ಮಾರುತ್ತಿದ್ದ ಟೀ ಕುಡಿದರೆ ಆಹಾ ಅನ್ನಿಸಿತು. ಚಳಿಗೂ ಟೀಗೂ ಜನ್ಮ ಜನ್ಮದ ಅನುಬಂಧ. ಚಳಿಗೆ ವಾಕಿಂಗ್ ಹೋಗುವುದೇ ಒಂದು ಹಿಂಸೆ ಎನ್ನುವವರು ಒಂದು ಮುಂಜಾನೆ ಎದ್ದು ಹೊರಟು ನೋಡಿ. ಅದರ ಸೊಗಸೇ ಬೇರೆ. ಚುರುಕು ನಡಿಗೆಯ ತರುಣ ತರುಣಿಯರು, ಅಲ್ಲಲ್ಲೇ ಕೂತು ಹರಟುವ ಹಿರಿಯರು ನಚ್ಚಗೆ ಇಷ್ಟವಾಗುತ್ತಾರೆ.

ಲಾಲ್ ಬಾಗಿನಲ್ಲಿ ಇಬ್ಬರು ಮುದುಕರು ಕೂತು ಹರಟುತ್ತಿದ್ದಾರೆ. ಅವರಲ್ಲೊಬ್ಬ ಮಹಾ ಕಿಲಾಡಿ. ಅವನ ಜೀವನೋತ್ಸಾಹ ಅಡಗಿರುವುದೇ ಆ ತುಂಟತನ, ಸುಳ್ಳಾಟ ಮತ್ತು ತರಲೆಯಲ್ಲ್ಲಿ. ತನ್ನ ಸಕಲ ತಕರಾರುಗಳಿಂದಲೇ  ಆಪ್ತವಾಗುವ ಪಾತ್ರವೊಂದನ್ನಿಟ್ಟುಕೊಂಡು ಸೂರಿ ಸೊಗಸಾದ ನಾಟಕವೊಂದನ್ನು ಬರದಿದ್ದಾರೆ. ಹೆಸರು “ನಾ ತುಕಾರಾಂ ಅಲ್ಲ ” ಆ ನಾಟಕದ ಕುರಿತು ಮುಂದಿನ ವಾರ ನೋಡೋಣ . ಇದೀಗ ಟೀ ಕುರಿತ ಒಂದು ಪುಟ್ಟ ಬರಹ.

ನಾವು, ಕರ್ನಾ­ಟ­ಕದ ಮಂದಿ, ಕಾಫಿ ಪ್ರಿಯರು. ಬಿಸಿಲ ಝಳ ಜೋರಾ­ಗಿ­ರುವ ದಕ್ಪಿಣ ಕನ್ನಡ, ಬಳ್ಳಾ­ರಿ­ಗ­ಳಲ್ಲಿ ಚಹ ಕುಡಿ­ಯು­ವ­ವರು ಹೆಚ್ಚಾ­ಗಿ­ದ್ದಾ­ರಾ­ದರೂ ಕಾಫಿ ಸಜ್ಜನ ಕನ್ನ­ಡಿ­ಗರ ಫ್ಯಾಮಿಲಿ ಪೇಯ! ಮೈಸೂ­ರಿ­ನಲ್ಲಿ ಟೀ ಕುಡಿ­ಯು­ವುದೇ ಅಪ­ರಾಧ. ಹಾಸ­ನ­ದಲ್ಲೋ ಚಿಕ್ಕ­ಮ­ಗ­ಳೂ­ರಲ್ಲೋ ಚಹಾ ಕುಡಿ­ಯು­ವ­ವನು ಸಜ್ಜ­ನ­ನಲ್ಲ ಎಂಬ ನಂಬಿ­ಕೆಯೇ ಇದೆ. ಚಹಾ ಕುಡಿ­ಯು­ವ­ವನು ಶ್ರಮ­ಜೀವಿ ಎಂದೂ ನಿರ್ಧಾ­ರ­ವಾಗಿ ಹೋಗಿದೆ. ಅದ್ಯಾಕೋ ಆರಂಭದಿಂ­ದಲೂ ಚಹಾಕ್ಕೆ ಉಳ್ಳ­ವರ ಮನೆಯ ಕಣ್ಮ­ಣಿ­ಯಾ­ಗುವ ಪುಣ್ಯ ಒದ­ಗಿ­ಬ­ರಲೇ ಇಲ್ಲ. ಅದೇ­ನಿ­ದ್ದರೂ ಬೀದಿ ಬದಿಯ ಕೂಸು. ತಳ್ಳು­ಗಾ­ಡಿ­ಗ­ಳಲ್ಲಿ ಮಾರು­ವು­ದಕ್ಕೆ ಅರ್ಹ­ವಾ­ದದ್ದು. ರಸ್ತೆ­ಬ­ದಿ­ಯಲ್ಲಿ ನಿಮಗೆ ಸಾಮಾ­ನ್ಯ­ವಾಗಿ ಕಾಫಿ ಸಿಗು­ವು­ದಿಲ್ಲ!

a
ಟೀ ಮಾಡು­ವುದು ಕಾಫಿ­ಯಷ್ಟು ಸುಲ­ಭ­ವಲ್ಲ. ಕಾಫಿ ಡಿಕಾ­ಕ್ಷ್ ಮಾಡಿ­ಟ್ಟು­ಕೊಂಡು ಹಾಲು ಬೆರೆಸಿ ಯಾವಾಗ ಬೇಕಾ­ದರೂ ಕುಡಿ­ಯ­ಬ­ಹುದು. ಆದರೆ ಟೀ ಹಾಗಲ್ಲ. ಅದನ್ನು ಚೆನ್ನಾಗಿ ಕುದಿಸಿ, ಬಿಸಿ­ಬಿ­ಸಿ­ಯಾ­ಗಿ­ರು­ವಾ­ಗಲೇ ಕುಡಿ­ಯ­ಬೇಕು. ಸ್ವಲ್ಪ ಹೊತ್ತು ಇಟ್ಟು­ಬಿ­ಟ್ಟರೂ ಅದರ ಮೇಲೊಂದು ತೆಳ್ಳ­ನೆಯ ಕೆನೆ­ಪ­ರದೆ ಕಟ್ಟಿ­ಕೊ­ಳ್ಳು­ತ್ತದೆ. ರುಚಿ­ಗೆ­ಡು­ತ್ತದೆ. ಆದರೆ ಟೀಯನ್ನು ಸಂಭಾ­ವಿ­ತರು ಧಿಕ್ಕ­ರಿ­ಸು­ವು­ದಕ್ಕೆ ಇದೊಂದೇ ಕಾರಣ ಇರ­ಲಾ­ರದು. ಅದ­ಕ್ಕೊಂದು ಧಾರ್ಮಿ­ಕ­ವಾದ, ಸಾಂಸ್ಕೃ­ತಿ­ಕ­ವಾದ, ನೈತಿ­ಕ­ವಾದ ಕಾರ­ಣವೂ ಇರ­ಬ­ಹುದೋ ಏನೋ? ಸಂಶೋ­ಧ­ಕರು ಪತ್ತೆ ಮಾಡ­ಬೇಕು.

ನೀವು ಗಮ­ನಿ­ಸಿ­ರ­ಬ­ಹುದು; ಹೆಣ್ಣು­ಮ­ಕ್ಕಳು ಸಾಮಾ­ನ್ಯ­ವಾಗಿ ಚಹಾ ಕುಡಿ­ಯು­ವು­ದಿಲ್ಲ. ಅವ­ರ­ದೇ­ನಿ­ದ್ದರೂ ಕಾಫಿ ರಾಗ. ಚಹಾ ಕುಡಿ­ಯುವ ಮಹಿ­ಳೆ­ಯರೂ ಸಾಮಾ­ನ್ಯ­ವಾಗಿ ಶ್ರಮ­ಜೀ­ವಿ­ಗಳೇ. ಹೀಗಿ­ರು­ವಾಗ ಶ್ರಮಕ್ಕೂ ಚಹಾಕ್ಕೂ ಏನಾ­ದರೂ ಸಂಬಂಧ ಇರ­ಬ­ಹುದೇ? ಅದೂ ಸಂಶೋ­ಧ­ನೆಗೆ ಅರ್ಹ ವಸ್ತು.

ಟೀ ಕುಡಿ­ಯು­ವು­ದ­ಕ್ಕೊಂದು ಧಾರ್ಮಿ­ಕ­ವಾದ ಆಧ್ಯಾ­ತ್ಮಿ­ಕ­ವಾದ ಕಾರ­ಣವೂ ಇರ­ಬ­ಹುದು ಎಂದು ಅನ್ನಿ­ಸಿ­ದ್ದಕ್ಕೆ ಕಾರಣ ಚೀನಾ ಮತ್ತು ಜಪಾ­ನಿನ ಕತೆ­ಗ­ಳಲ್ಲಿ ಬರುವ ಚಹಾದ ಪ್ರಸ್ತಾ­ಪವೂ ಇರ­ಬ­ಹುದು. ಶ್ರೀಲಂ­ಕಾ­ದಲ್ಲೂ ಚಹಾಕ್ಕೇ ಪ್ರಾಧಾನ್ಯ. ಅಚಾ­ನ­ಕ್ಕಾ­ಗಿಯೋ ಏನೋ ಬುದ್ಧ­ನಲ್ಲಿ ನಂಬಿಕೆ ಇಟ್ಟ ದೇಶ­ಗ­ಳೆಲ್ಲ ಚಹಾದ ಬಗ್ಗೆಯೂ ಪ್ರೀತಿ ಇಟ್ಟು­ಕೊಂ­ಡಿವೆ. ಅಲ್ಲಿಯ ಸಾಹಿ­ತ್ಯ­ದಲ್ಲೂ ಚಹಾದ ಪ್ರಸ್ತಾಪ ಮತ್ತೆ ಮತ್ತೆ ಬರು­ತ್ತದೆ. ಥಟ್ಟನೆ ನೆನ­ಪಾ­ಗುವ ಎರಡು ಪ್ರಸಂ­ಗ­ಗಳು ಹೀಗಿವೆ;

ಒಬ್ಬ ಗುರು. ಅವನ ಹತ್ತಿರ ಶಿಷ್ಯತ್ವ ಸ್ವೀಕ­ರಿ­ಸು­ವು­ದಕ್ಕೆ ಒಬ್ಬ ಬರು­ತ್ತಾನೆ. ಗುರು ಏನನ್ನೂ ಹೇಳಿ­ಕೊ­ಡ­ಬಾ­ರದು. ಶಿಷ್ಯ ಸ್ವಯಂ­ಸ್ಪೂ­ರ್ತಿ­ಯಿಂದ ಕಲಿ­ಯ­ಬೇಕು ಅನ್ನು­ವುದು ನಿಯಮ. ಹೀಗಾಗಿ ಶಿಷ್ಯ ಗುರು­ವಿನ ಪ್ರತಿ­ಯೊಂದು ನಡ­ವ­ಳಿ­ಕೆ­ಯನ್ನೂ ಗಮ­ನಿ­ಸುತ್ತಾ ಇರು­ತ್ತಾನೆ.
ಹೀಗಿ­ರು­ವಾಗ ಒಮ್ಮೆ ಗುರು­ವನ್ನು ನೋಡು­ವು­ದಕ್ಕೆ ಒಬ್ಬ ಶ್ರೀಮಂತ ಬರು­ತ್ತಾನೆ. ಗುರು­ವಿಗೆ ತನ್ನೆಲ್ಲ ಸಂಪ­ತ್ತನ್ನೂ ಸಮ­ರ್ಪಿ­ಸು­ವು­ದಾಗಿ ಹೇಳು­ತ್ತಾನೆ. ಆತ ಮಾತು ಶುರು­ಮಾ­ಡು­ತ್ತಿ­ದ್ದಂತೆ ಗುರು `ಇ­ವ­ನಿ­ಗೊಂದು ಕಪ್ ಟೀ ಕೊಟ್ಟು ಕಳು­ಹಿಸಿ’ ಅನ್ನು­ತ್ತಾನೆ.
ಅದಾದ ಮೇಲೆ ಮತ್ತೊಬ್ಬ ನಾಸ್ತಿಕ ಬರು­ತ್ತಾನೆ. ಗುರು­ವನ್ನು ಬೈಯಲು ಶುರು­ವಿ­ಡು­ತ್ತಾನೆ. ಆತ ಮಾತು ಶುರು­ಮಾ­ಡು­ತ್ತಿ­ದ್ದಂತೆ ಗುರು `ಇ­ವ­ನಿ­ಗೊಂದು ಕಪ್ ಟೀ ಕೊಟ್ಟು ಕಳು­ಹಿಸಿ’ ಅನ್ನು­ತ್ತಾನೆ.
ಆಮೇ­ಲೊ­ಬ್ಬಳು ವಿಧವೆ ಬರು­ತ್ತಾಳೆ. ಗಂಡ ತೀರಿ­ಕೊಂಡ ದುಃಖ­ದ­ಲ್ಲಿ­ದ್ದಾಳೆ. ಅವಳು ಗೋಳು ಹೇಳಿ­ಕೊ­ಳ್ಳು­ತ್ತಿ­ದ್ದಂತೆ ಗುರು ಮತ್ತೆ ಅದೇ ಮಾತು ಹೇಳು­ತ್ತಾನೆ; `ಈ­ಕೆ­ಗೊಂದು ಕಪ್ ಟೀ…’.
ಇದ­ನ್ನೆಲ್ಲ ನೋಡು­ತ್ತಿದ್ದ ಶಿಷ್ಯ­ನಿಗೆ ಚೋದ್ಯ­ವೆ­ನಿ­ಸು­ತ್ತದೆ. ಗುರು­ವನ್ನು ಕೇಳು­ತ್ತಾನೆ. ನೀವು ನಿಮ್ಮನ್ನು ನೋಡಲು ಬಂದ­ವ­ರಿ­ಗೆಲ್ಲ ಒಂದು ಕಪ್ ಟೀ ಕೊಟ್ಟು ಕಳು­ಹಿ­ಸು­ತ್ತೀ­ರಲ್ಲ. ಅವ­ರಿಗೆ ಅದ­ರಲ್ಲೇ ಸಮಾ­ಧಾನ ಸಿಕ್ಕ­ವ­ರಂತೆ ಹೊರಟು ಹೋಗು­ತ್ತಾ­ರಲ್ಲ. ಇದರ ರಹಸ್ಯ ಏನು?
ಗುರು ಹೇಳು­ತ್ತಾನೆ;
`ಯಾ­ರಲ್ಲಿ… ಈತ­ನಿ­ಗೊಂದು ಕಪ್ ಟೀ ಕೊಟ್ಟು ಕಳು­ಹಿಸಿ’.

ಇದನ್ನು ವಿವ­ರಿ­ಸಿ­ದರೆ ಕೆಡು­ತ್ತದೆ. ಇಂಥದ್ದೇ ಇನ್ನೊಂದು ಕತೆ ಕೇಳಿ;
ಗುರು­ವಿನ ಬಳಿಗೆ ಒಬ್ಬ ಶಿಷ್ಯತ್ವ ಸ್ವೀಕ­ರಿ­ಸಲು ಬರು­ತ್ತಾನೆ. ಬಂದು ತನ್ನ ಬಗ್ಗೆ ಹೇಳಿ­ಕೊ­ಳ್ಳಲು ಆರಂ­ಭಿ­ಸು­ತ್ತಾನೆ. `ಗು­ರು­ಗಳೇ.. ನಾನು ಅನೇಕ ಧರ್ಮ­ಗ್ರಂ­ಥ­ಗ­ಳನ್ನು ಓದಿ­ದ್ದೇನೆ. ಶಾಸ್ತ್ರ­ಪು­ರಾ­ಣ­ಗ­ಳನ್ನು ಅರ್ಥ­ಮಾ­ಡಿ­ಕೊಂ­ಡಿ­ದ್ದೇನೆ. ತರ್ಕ­ಶಾ­ಸ್ತ್ರ­ದಲ್ಲಿ ಪರಿ­ಣತಿ ಇದೆ. ಎಲ್ಲ­ಕ್ಕಿಂತ ಹೆಚ್ಚಾಗಿ ವೇದಾಂ­ತದ ವಿವಿಧ ಶಾಖೆ­ಗ­ಳನ್ನು ಆಳ­ವಾಗಿ ಅಧ್ಯ­ಯನ ಮಾಡಿ­ದ್ದೇನೆ…. ತಾವು ನನಗೆ ಮಹ­ತ್ತ­ರ­ವಾದ ವಿದ್ಯೆ ಕಲಿ­ಸ­ಬೇಕು. ನನ್ನನ್ನು ಜ್ಞಾನಿ­ಯಾಗಿ ಮಾಡ­ಬೇಕು’.
ಗುರು ಮಾತಾ­ಡು­ವು­ದಿಲ್ಲ. ಒಂದು ಜಾಡಿ ಚಹಾ ತರಿ­ಸು­ತ್ತಾನೆ. ಶಿಷ್ಯತ್ವ ಸ್ವೀಕ­ರಿ­ಸಲು ಬಂದ­ವನ ಮುಂದೆ ಒಂದು ಕಪ್ ಇಟ್ಟು `ಮೊ­ದಲು ಚಹಾ ಕುಡಿ. ನಂತರ ಮಾತಾ­ಡೋಣ’ ಅನ್ನು­ತ್ತಾನೆ. ಶಿಷ್ಯ ನೋಡು­ತ್ತಿ­ರು­ವಂ­ತೆಯೇ ಜಾಡಿ­ಯಿಂದ ಕಪ್ಪಿಗೆ ಚಹಾ ಸುರಿ­ಯು­ತ್ತಾನೆ. ಕಪ್ ತುಂಬಿ ಚಹಾ ಹರಿ­ದು­ಹೋ­ಗು­ತ್ತಿ­ದ್ದರೂ ಸುರಿ­ಯು­ತ್ತಲೇ ಇರು­ತ್ತಾನೆ.
ಶಿಷ್ಯ ಎಚ್ಚ­ರಿ­ಸು­ತ್ತಾನೆ; ಗುರು­ಗಳೇ ಕಪ್ ತುಂಬಿ­ಹೋಗಿ ಚಹಾ ಚೆಲ್ಲು­ತ್ತಿದೆ. ಇನ್ನೂ ಸುರೀತಾ ಇದ್ದೀ­ರಲ್ಲ.
`ನೀನೂ ಅಷ್ಟೇ. ಈಗಾ­ಗಲೇ ತುಂಬಿ­ಕೊಂ­ಡಿ­ದ್ದೀಯ. ನನಗೆ ಗೊತ್ತಿ­ರು­ವು­ದನ್ನು ನಾನೆಲ್ಲಿ ತುಂಬಲಿ. ಮೊದಲು ಖಾಲಿ­ಯಾಗಿ ಬಾ. ಅಮೇಲೆ ನೋಡೋ­ಣಂತೆ’.

**­*­*­*­**

ಜಾರ್ಜ್ ಆರ್ವೆಲ್ ಹೆಸ­ರಿ­ನಲ್ಲಿ ಬರೆ­ಯು­ತ್ತಿದ್ದ ಎರಿಕ್ ಬ್ಲೇರ್ ಚಹಾದ ಬಗ್ಗೆ ಒಂದು ಕುತೂ­ಹ­ಲ­ಕರ ಪ್ರಬಂಧ ಬರೆ­ದಿ­ದ್ದಾನೆ. ಒಬ್ಬ ಲೇಖಕ ಇಂಥ ಸಂಗ­ತಿ­ಗಳ ಬಗ್ಗೆ ಬರೆ­ಯು­ತ್ತಾನೆ ಅನ್ನು­ವು­ದನ್ನು ಇವತ್ತು ನಮ್ಮಲ್ಲಿ ಊಹಿ­ಸಿ­ಕೊ­ಳ್ಳು­ವು­ದಕ್ಕೂ ಕಷ್ಟ. ಬಿಜಿ­ಎಲ್ ಸ್ವಾಮಿ, ಡಿವಿಜಿ, ಗೊರೂರು ಮುಂತಾ­ದ­ವರು ಇಂಥ ತರ­ಹೇ­ವಾರಿ ಸಂಗ­ತಿ­ಗಳ ಕುರಿತು ಬರೆ­ಯು­ತ್ತಿ­ದ್ದರು. ಲಂಕೇ­ಶರ ಟೀಕೆ ಟಿಪ್ಪ­ಣಿ­ಯಲ್ಲಿ ಅಂಥ ವೈವಿಧ್ಯ ಇತ್ತು. ಡಿ. ಆರ್. ನಾಗ­ರಾ­ಜ್ ಗೆ ಆ ಪರಿಯ ವಿಸ್ತಾರ ಸಾಧ್ಯ­ವಿತ್ತು. ಆದರೆ ಶ್ರೇಷ್ಠ­ತೆಯ ವ್ಯಸ­ನಿ­ಗ­ಳಾ­ದ­ವರು ಮತ್ತು ಸಾಹಿತ್ಯ ಎಂದರೆ ಸೃಷ್ಟಿ, ಅದೊಂದು ದೈವಿ­ಕ­ವಾದ ಕ್ರಿಯೆ ಎಂದು­ಕೊಂ­ಡ­ವರು ಕೇವಲ ಘನ­ಗಂ­ಭೀರ ಸಂಗ­ತಿ­ಗಳ ಕುರಿತು ಬರೆ­ಯುತ್ತಾ ನಿಜಕ್ಕೂ ಖುಷಿ­ಕೊ­ಡುವ ಮತ್ತು ಓದಿ­ಸಿ­ಕೊ­ಳ್ಳುವ ಇಂಥ ವಿಷ­ಯ­ಗ­ಳನ್ನು ಮುಟ್ಟು­ವು­ದಕ್ಕೂ ಹೋಗ­ಲಿಲ್ಲ.

ಆರ್ವೆಲ್ ಪ್ರಬಂ­ಧ­ವನ್ನು ಗ್ರಹಿಸಿ ಬರೆದ ಹತ್ತಾರು ಸಾಲು­ಗಳು ಇಲ್ಲಿವೆ. ಇದು ನಿಮಗೂ ಕುತೂ­ಹ­ಲ­ಕರ ಅನ್ನಿ­ಸಿ­ದರೆ ಒಂದು ಕಪ್ ಚಹಾ ಕುಡಿದು ಸಂಭ್ರ­ಮಿಸಿ.

-ಚಹಾ ಮಾಡು­ವುದು ಹೇಗೆ ಅನ್ನುವ ಬಗ್ಗೆ ಯಾರೂ ಯಾವ ಮಾಹಿ­ತಿ­ಯನ್ನೂ ನೀಡಿ­ದಂ­ತಿಲ್ಲ.ಚಹಾ ಅನೇಕ ದೇಶ­ಗಳ ನಾಗ­ರೀ­ಕ­ತೆಯ ಜೊತೆ ಬೆಳೆದು ಬಂದ ಪೇಯ. ಐರ್ಲೆಂಡ್, ಆಸ್ಟ್ರೇ­ಲಿಯಾ ಮತ್ತು ನ್ಯೂಜಿ­ಲ್ಯಾಂ­ಡು­ಗ­ಳಲ್ಲಿ ಇದಕ್ಕೆ ಯಾವುದೂ ಸರಿ­ಸಾ­ಟಿ­ಯಿಲ್ಲ ಎನ್ನು­ವು­ದರ ಜೊತೆಗೆ ಒಳ್ಳೆಯ ಚಹಾ ಮಾಡೋದು ಹ್ಯಾಗೆ ಎಂಬ ವಿಚಾ­ರದ ಕುರಿತು ಸಾಕಷ್ಟು ಕಲ­ಹವೂ ನಡೆ­ದು­ಹೋ­ಗಿದೆ.

ನಾನು ನನ್ನದೇ ಅನು­ಭ­ವ­ದಿಂದ ಒಳ್ಳೆಯ ಶ್ರೇಷ್ಠ ಚಹಾ ಮಾಡೋದು ಹೇಗೆ ಅಂತ ಕಂಡು­ಕೊಂ­ಡಿ­ದ್ದೇನೆ. ಆ ಬಗ್ಗೆ ಹನ್ನೊಂದು ಗಮ­ನಾರ್ಹ ಅಂಶ­ಗ­ಳನ್ನು ಗುರು­ತಿ­ಸಿ­ದ್ದೇನೆ. ಇವು­ಗ­ಳಲ್ಲಿ ಒಂದ­ರೆಡು ಎಲ್ಲರೂ ಒಪ್ಪ­ಬ­ಹು­ದಾದ ಸಾಮಾನ್ಯ ಹೇಳಿ­ಕೆ­ಗಳು, ನಾಲ್ಕೈ­ದಂತೂ ಖಂಡಿತಾ ವಿವಾ­ದಾ­ಸ್ಪದ ಅಂಶ­ಗಳು.

1. ಮೊದ­ಲ­ನೆ­ಯ­ದಾಗಿ ಒಳ್ಳೆಯ ಚಹಾ ಬೇಕೆಂ­ದಿ­ದ್ದರೆ ಭಾರ­ತೀಯ ಅಥವಾ ಶ್ರೀಲಂಕಾ ಮೂಲದ ಚಹಾ­ಪು­ಡಿ­ಯನ್ನೇ ಬಳ­ಸ­ಬೇಕು. ಚೀನಾದ ಟೀಪು­ಡಿಗೂ ಕೆಲವು ಹೆಗ್ಗ­ಳಿ­ಕೆ­ಗ­ಳಿವೆ ನಿಜ. ಅದು ಅಗ್ಗ, ಹಾಲು ಬೆರೆ­ಸದೇ ಕುಡಿ­ಯ­ಬ­ಹುದು ಎನ್ನು­ವು­ದರ ಹೊರ­ತಾ­ಗಿಯೂ ಚೀನಾ ಟೀಪು­ಡಿಗೆ ನಿಮ್ಮನ್ನು ಕೆರ­ಳಿ­ಸುವ ಶಕ್ತಿ­ಯಿಲ್ಲ. ಅದನ್ನು ಕುಡಿದ ನಂತರ ವಿವೇ­ಕಿ­ಯಾದೆ, ಬಲ­ಶಾ­ಲಿ­ಯಾದೆ ಅಥವಾ ಆಶಾ­ವಾ­ದಿ­ಯಾದೆ ಅಂತಂ­ದು­ಕೊ­ಳ್ಳಲು ಸಾಧ್ಯವೇ ಇಲ್ಲ. ಯಾರಾ­ದರೂ ಒಳ್ಳೆಯ ಚಹಾ ಕುಡಿದೆ ಕಣಯ್ಯಾ ಎಂದರೆ ಅದು ಇಂಡಿಯನ್ ಟೀಯೇ ಆಗಿ­ರ­ಬೇಕು.

2. ಚಹಾ­ವನ್ನು ಸಣ್ಣ ಪ್ರಮಾ­ಣ­ದಲ್ಲಿ ಮಾಡ­ಬೇಕು. ದೊಡ್ಡ ಹಂಡೆ­ಯಲ್ಲೋ ತಪ್ಪ­ಲೆ­ಯಲ್ಲೋ ಕಾಯಿ­ಸಿಟ್ಟ ಟೀಗೆ ರುಚಿ­ಯಿಲ್ಲ. ಮದು­ವೆ­ಮ­ನೆ­ಯಲ್ಲೋ, ಸಾರ್ವ­ಜ­ನಿಕ ಸಮಾ­ರಂ­ಭ­ಗ­ಳಲ್ಲೋ ಮಾಡುವ ಚಹಾ ಕಲ­ಗ­ಚ್ಚಿ­ನಂ­ತಿ­ರು­ತ್ತದೆ. ಸುಣ್ಣದ ನೀರು ಕುಡಿ­ದಂ­ತಿ­ರು­ತ್ತದೆ. ಚಹಾ ಮಾಡುವ ಪಾತ್ರೆ ಚೀನಾದ್ದೇ ಆಗಿ­ದ್ದರೆ ಒಳ್ಳೆ­ಯದು. ಸ್ಟೀಲು ಅಥವಾ ಅಲ್ಯೂ­ಮಿ­ನಿಯಂ ಪಾತ್ರೆ­ಯಲ್ಲಿ ಮಾಡೋ ಟೀಗೆ ಅಂಥ ಸ್ವಾದ ಬರು­ವು­ದಿಲ್ಲ.

3. ಟೀ ತಯಾ­ರಿ­ಸುವ ಮುಂಚೆಯೇ ಟೀಪಾ­ಟನ್ನು ಬಿಸಿ ಮಾಡಿ­ಕೊ­ಳ್ಳ­ಬೇಕು. ಬಿಸಿ­ನೀ­ರಲ್ಲಿ ಅದ್ದಿ ಬೆಚ್ಚ­ಗಾ­ಗಿ­ಸು­ವು­ದ­ಕ್ಕಿಂತ ಹಬೆಯ ಮೇಲಿಟ್ಟು ಬಿಸಿ­ಮಾ­ಡು­ವುದು ಉತ್ತಮ.

4. ಚಹಾ ಸ್ಟ್ರಾಂಗ್ ಆಗಿ­ರ­ಬೇಕು. ಒಂದು ಕಪ್ ಚಹಾಕ್ಕೆ ಒಂದು ತುಂಬಿದ ಚಮಚ ಟೀಪೌ­ಡ್ ಸರಿ. ಇಪ್ಪತ್ತು ಪೇಲವ ಚಹಾ­ಕ್ಕಿಂತ ಒಂದು ಸ್ಟ್ರಾಂಗ್ ಟೀ ಮೇಲು. ವಯ­ಸ್ಸಾ­ಗುತ್ತಾ ಹೋದ ಹಾಗೆ ಚಹಾ ಪ್ರೇಮಿ­ಗಳು ಹೆಚ್ಚು ಹೆಚ್ಚು ಸ್ಟ್ರಾಂಗ್ ಆದ ಚಹಾ ಕುಡಿ­ಯ­ವು­ದಕ್ಕೆ ಆರಂ­ಭಿ­ಸು­ತ್ತಾರೆ.

5. ಚಹಾ­ವನ್ನು ಸೋಸ­ಬಾ­ರದು. ಟೀಪಾಟ್­ನಿಂದ ನೇರ­ವಾಗಿ ಕಪ್ ಗೆ ಸುರಿ­ಯ­ಬೇಕು. ಒಂದೆ­ರಡು ಚಹಾ ಸೊಪ್ಪು ಟೀಯೊ­ಳಗೆ ಬಿದ್ದರೂ ಪ್ರಮಾ­ದ­ವೇ­ನಿಲ್ಲ. ಆದರೆ ಸೋಸು­ವು­ದಿದೆ ನೋಡಿ; ಮಹಾ­ಪ­ರಾಧ.

6. ಚಹಾ ಪಾತ್ರೆ­ಯನ್ನು ಕುದಿ­ಯುವ ನೀರಿನ ಬಳಿಗೆ ಒಯ್ಯ­ಬೇಕೇ ಹೊರತು, ಕುದಿ­ಸಿದ ನೀರನ್ನು ಚಹಾ­ಪಾ­ತ್ರೆಯ ಬಳಿಗೆ ತರ­ಕೂ­ಡದು. ಟೀಪಾ­ತ್ರೆ­ಯೊ­ಳಗೆ ಸುರಿ­ಯುವ ನೀರು ಕೊನೆಯ ಕ್ಪಣದ ತನ­ಕವೂ ಕುದಿ­ಯು­ತ್ತಲೇ ಇರ­ಬೇಕು. ಒಮ್ಮೆ ಕುದಿ­ಸಿದ ನೀರನ್ನು ಮತ್ತೆ ಕುದಿಸಿ ಬಳ­ಸ­ಬಾ­ರದು ಅನ್ನು­ವುದು ಒಂದು ಮತ. ನನ­ಗ­ದ­ರಲ್ಲಿ ನಂಬಿ­ಕೆ­ಯಿಲ್ಲ.

7. ಟೀಪಾ­ತ್ರೆಗೆ ಟೀಪುಡಿ ಹಾಕಿ ಕುದಿ­ಯುವ ನೀರು ಹಾಕಿದ ನಂತರ ಅದನ್ನು ಕದ­ಡ­ಬೇಕು. ಪಾತ್ರೆ­ಯನ್ನು ಅಲ್ಲಾ­ಡಿ­ಸಿ­ದರೂ ಸರಿಯೇ. ಆಮೇಲೆ ಚಹಾ ಎಲೆ­ಗಳು ತಳ­ದಲ್ಲಿ ನೆಲೆ­ಗೊ­ಳ್ಳಲು ಬಿಡ­ಬೇಕು.

8. ಆಳ­ವಿ­ಲ್ಲದ, ಕುಳ್ಳ­ಗಿನ ಕಪ್ಪಿನಲ್ಲಿ ಟೀ ಕುಡಿ­ಯ­ಬಾ­ರದು. ಆಳದ ಬ್ರೇಕ್ ಫಾಸ್ಟ್ ಕಪ್ ವಾಸಿ. ಇದ­ರಲ್ಲಿ ಹೆಚ್ಚು ಚಹಾ ಹಿಡಿ­ಸು­ತ್ತದೆ. ಸಣ್ಣ ಕಪ್ಪು­ಗ­ಳಲ್ಲಿ ಚಹಾ ಕುಡಿ­ಯು­ವು­ದಕ್ಕೆ ಶುರು­ಮಾ­ಡುವ ಮೊದಲೇ ಅರ್ಧ ತಣ್ಣ­ಗಾ­ಗಿ­ರು­ತ್ತದೆ.

9. ಹಾಲು ಬೆರೆ­ಸುವ ಮುನ್ನ ಕೆನೆ ತೆಗೆ­ದಿ­ರ­ಬೇಕು. ಕೆನೆ­ಯಿ­ರುವ ಹಾಲಿ­ನಿಂ­ದಾಗಿ ಚಹಾ ಅಂಟಂ­ಟಂ­ಟಾ­ಗು­ತ್ತದೆ.

10. Tea potನಿಂದ ಮೊದಲು ಟೀಯನ್ನು ಕಪ್ ಗೆ ಸುರಿ­ಯ­ಬೇಕು. ವಿವಾ­ದಾ­ತ್ಮಕ ಅಂಶ­ವೆಂ­ದರೆ ಇದೇ. ಹಲ­ವಾರು ಮಂದಿ ಮೊದಲು ಹಾಲು ಹಾಕಿ­ಕೊಂಡು ಅದರ ಮೇಲೆ ಚಹಾ ಸುರಿ­ಯ­ಬೇಕು ಎಂದು ವಾದಿ­ಸು­ತ್ತಾರೆ. ನನ್ನ ವಾದವೇ ಸರಿ ಯಾಕೆಂ­ದರೆ ಮೊದಲು ಚಹಾ ಸುರಿ­ದು­ಕೊಂ­ಡರೆ ಆಮೇಲೆ ಎಷ್ಟು ಬೇಕೋ ಅಷ್ಟು ಹಾಲು ಸುರಿ­ಯ­ಬ­ಹುದು. ಮೊದಲು ತುಂಬಾ ಹಾಲು ಸುರಿ­ದಿ­ಟ್ಟರೆ ಚಹಾ ಕೆಟ್ಟು ಹೋಗು­ತ್ತದೆ.

11. ಕೊನೆ­ಯ­ದಾಗಿ, ಎಲ್ಲ­ಕ್ಕಿಂತ ಮುಖ್ಯ­ವಾಗಿ, ರಷ್ಯನ್ ಶೈಲಿಯ ಚಹಾ­ವೊಂ­ದನ್ನು ಬಿಟ್ಟು ಉಳಿ­ದೆಲ್ಲ ಟೀಯನ್ನೂ ಸಕ್ಕರೆ ಬೆರೆ­ಸದೆ ಕುಡಿ­ಯ­ಬೇಕು. ಈ ಮಟ್ಟಿಗೆ ನಾನು ಅಲ್ಪ­ಸಂ­ಖ್ಯಾ­ತನೇ ಇರ­ಬ­ಹುದು. ಆದರೆ, ಸಕ್ಕರೆ ಬೆರೆಸಿ ಚಹಾದ ಸ್ವಾದ­ವನ್ನು ಕೆಡಿ­ಸು­ವ­ವ­ರನ್ನು ಚಹಾ­ಪ್ರಿ­ಯ­ರೆಂದು ನಾನು ಹೇಗೆ ಕರೆ­ಯಲಿ? ಚಹಾ ಕಹಿ­ಯಾ­ಗಿಯೇ ಇರ­ಬೇಕು, ಬಿಯ­ರಿ­ನಂತೆ. ಅದಕ್ಕೆ ಸಕ್ಕರೆ ಬೆರೆ­ಸಿ­ಕೊಂ­ಡಿರೋ ನೀವು ರುಚಿ­ಸು­ವುದು ಟೀಯ­ನ್ನಲ್ಲ, ಸಕ್ಕ­ರೆ­ಯನ್ನು. ಅದರ ಬದಲು ಬಿಸಿ­ನೀ­ರಿಗೆ ಸಕ್ಕರೆ ಬೆರೆಸಿ ಕುಡಿ­ಯೋದು ವಾಸಿ.

ಕೆಲ­ವರು, ತಮಗೆ ಚಹಾ ಇಷ್ಟವೇ ಇಲ್ಲ­ವೆಂದೂ, ಅದರ ಶಮ­ನ­ಕಾರಿ ಗುಣ­ಗ­ಳಿ­ಗಾಗಿ ಕುಡಿ­ಯು­ತ್ತೇ­ವೆಂದು ಹೇಳ­ಬ­ಹುದು. ಅಂಥ­ವರು ಸಕ್ಕರೆ ಬೆರೆ­ಸಿ­ಕೊಂಡೇ ಕುಡಿ­ಯಲಿ ಬಿಡಿ. ಆದರೆ, ದಾರಿ­ತ­ಪ್ಪಿದ ಚಹಾ­ಪ್ರಿ­ಯ­ರಿ­ಗೊಂದು ಕಿವಿ­ಮಾತು; ಒಮ್ಮೆ ಸಕ್ಕರೆ ಹಾಕದೆ ಚಹಾ ಕುಡಿದು ನೋಡಿ. ಮುಂದೆಂದೂ ಚಹಾ­ವನ್ನು ಸಕ್ಕರೆ ಬೆರೆಸಿ ನೀವು ಕೆಡಿ­ಸು­ವು­ದಕ್ಕೆ ಹೋಗ­ಲಾ­ರಿರಿ.

ಇಷ್ಟು ಅಂಶ­ಗಳು ಮುಖ್ಯ. ಉಳಿ­ದಂತೆ ಅತಿ­ಥಿ­ಗ­ಳಿಗೆ ಎಂಥ ಪರಿ­ಸ­ರ­ದಲ್ಲಿ ಚಹಾ ಕೊಡು­ತ್ತೀರಿ, ನೀವು ಎಂಥಾ ಪರಿ­ಸ­ರ­ದಲ್ಲಿ ಚಹಾ ಕುಡಿ­ಯು­ತ್ತೀರಿ ಅನ್ನು­ವುದೂ ಮುಖ್ಯ. ಸಾಸ­ರ್­ನಲ್ಲಿ ಚಹಾ ಕುಡಿ­ಯು­ವುದು ಅಶ್ಲೀಲ ಎಂದು ಭಾವಿ­ಸು­ವು­ದ­ರಿಂದ ಹಿಡಿದು ಚಹಾ­ಸೊ­ಪ್ಪಿನ ವರ್ತ­ನೆ­ಯಿಂ­ದಲೇ ಅತಿ­ಥಿ­ಗಳ ಆಗ­ಮನ ಕಂಡು­ಹಿ­ಡಿ­ಯುವ ನಿಗೂಢ ನಂಬಿ­ಕೆ­ಗಳೂ ನಮ್ಮ­ಲ್ಲಿವೆ. ಅದೆಲ್ಲ ನಮಗೆ ಬೇಕಾ­ಗಿಲ್ಲ.

ಆದರೆ ಒಂದಂತೂ ನಿಜ. ನೀವು ಚಹಾ ಪ್ರಿಯರೇ ಆಗಿ­ದ್ದರೆ, ಸಾಲ ಮಾಡಿ­ಯಾ­ದರೂ ನಿಮ್ಮ ಮನೆ­ಯ­ಲ್ಲಿರು ಸ್ಟೀಲು ಲೋಟ­ಗ­ಳನ್ನು ಕಟ್ಟಿ ಅಟ್ಟಕ್ಕೆ ಹಾಕಿ, ಒಂದು ಡಜ್ ಒಳ್ಳೆಯ ಚೈನಾ­ವೇರ್ ಟೀಕ­ಪ್ಪು­ಗ­ಳನ್ನು ತಂದಿ­ಟ್ಟು­ಕೊಳ್ಳಿ.
ಎಲ್ಲವೂ ಹೇಗೆ ಬದ­ಲಾ­ಗು­ತ್ತದೆ, ನೋಡಿ!

‍ಲೇಖಕರು avadhi

November 10, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

2 ಪ್ರತಿಕ್ರಿಯೆಗಳು

  1. malathi S

    I have plans of starting a small tea parlour. Your article is perfectly timed. But I think I have read this article before and added my comments too. (Cannot recall though)A friend sent this link to me since I am a cha- haa –priye ( meaning I always love a good laugh, and was hooked to tea since I was an year old) The ‘T’- shirt will read ‘Change your aTEAtude’. What says??
    🙂
    Malathi S

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: