ಜೋಗಿ ಬರೆದಿದ್ದಾರೆ: ಚಿರವಿರಹಿಯ ಸುಡುಹಾಡು

ತಾನು ಅತ್ಯಂತ ಏಕಾಂಗಿ ಎಂದು ಭಾವಿಸುವ ಗಂಡು ಆ ಏಕಾಂತವನ್ನು ಮೀರುವುದಕ್ಕೆಂದೇ ಒಬ್ಬ ಗೆಳತಿಯನ್ನು ಕಂಡುಕೊಳ್ಳುತ್ತಾನೆ. ಕೊನೆಗೆ ಅವಳೇ ಅವನನ್ನು ಅತ್ಯಂತ ಅಸಹನೀಯ ಏಕಾಂತಕ್ಕೆ ದೂಡುತ್ತಾಳೆ. ತನ್ನ ಜೊತೆಗೂ ತಾನಿರದಂತೆ ಮಾಡುತ್ತಾಳೆ. ಮನಸೇ ಮನಸಿನ ಮನಸ ನಿಲ್ಲಿಸುವುದು.

ಹೊರಗೆ ಬೇಸಗೆಯ ಸುಡುಗಾಳಿ. ಆ ಗಾಳಿಗೇನು ಗೊತ್ತು ಅಂತರಂಗದ ಗೀಳು, ಗೋಳು ಮತ್ತು ತಳಮಳ. ಹೊಸಿಲ ಮೇಲಿಟ್ಟ ದೀಪದ ಹಾಗೆ ಎರಡೂ ಕಡೆಗೆ ಬೆಳಕು ಬೀರುತ್ತಿರುವುದು ಕಷ್ಟದ ಕೆಲಸವೇನಲ್ಲ. ಹಾಗೆ ಬದುಕಬೇಕು ಎಂದು ಕಲಿತಿದ್ದೇನೆ. ಆದರೆ ಬೆಳಕು ಕೊಡುವ ನಿಡುಬತ್ತಿಯಾಗಿರಲು ನಂಗಿಷ್ಟ ಇಲ್ಲ. ಮುಂಜಾವದ ಎಳೆಬಿಸಿಲಿಗೆ ಹರಡಿಕೊಂಡ ಅವಳ ಕೇಶರಾಶಿಯ ಹಾಗೆ ಪ್ರಜ್ವಲಿಸಬೇಕು, ಧಗಧಗಿಸುತ್ತಿರಬೇಕು. ಹೊತ್ತಿ ಉರಿಯುವುದು ಕೂಡ ಒಂದು ಪ್ರವೃತ್ತಿ. ಹಾಗೆ ಉರಿದು ಬೂದಿ ಕೂಡ ಉಳಿಯದಂತೆ ಕರಗಿ ಹೋದಾಗಲೇ ಅದು ಪ್ರೇಮಾಗ್ನಿ ಎನ್ನುವ ಮಾತುಗಳಲ್ಲೂ  ಅಪನಂಬಿಕೆ. ಪ್ರೇಮ ಉರಿದೂ ಉಳಿಯಬೇಕು. ಉಳಿದು ಉರಿಯುತ್ತಿರಬೇಕು. ಅದು ನಂದಾದೀಪವಲ್ಲ. ಮತ್ತೇನು? ಮುಂಗೈಗೆ ಯಾರೋ ಕೆತ್ತಿಹೋದ ಹಚ್ಚೆ. ಹುಟ್ಟಿನಿಂದಲೇ ಬಂದ ತೊಡೆಯಲಾಗದ ಮಚ್ಚೆ.

ಚಿತ್ರ: ಸೃಜನ್

ಅವಳಿಗೆ ಎಣ್ಣೆಸ್ನಾನದ ಸುಖ. ನೆತ್ತಿಗೆ ಹಾಕಿದ ಎಣ್ಣೆ ಎಡಗಿವಿಯ ಸನಿಹದಲ್ಲೇ ಸಾಗಿ, ಕೆನ್ನೆಗಿಳಿದು, ತೊಟ್ಟು ತೊಟ್ಟಾಗಿ ಭುಜಕ್ಕೆ ಬೀಳುತ್ತಿದ್ದರೆ ಉನ್ಮಾದ. ಆ ಕಚಗುಳಿಗೆ ಮತ್ತೊಂದು ಲೋಕದ ದರ್ಶನ. ಮನಸ್ಸಿಗೂ ಎಣ್ಣೆ ಹಚ್ಚಿಕೊಂಡಿದ್ದಾಳೆ ಎಂದು ಇವನಿಗೆ ಗುಮಾನಿ. ಅವಳು ಪುಸಕ್ಕನೆ ಜಾರಿಕೊಳ್ಳುತ್ತಾಳೆ. ತೆಕ್ಕೆಗೆ ಬಂದಂತೆ ಮಾಡಿ ಪಾರಾಗುತ್ತಾಳೆ. ಮುನಿಸು ತೋರಿದರೆ ಮಾತು ಮಾತಲ್ಲೂ ಮಂದಹಾಸ. ನೋಡಿದೆಯಾ ಅಮ್ಮ ಇವಳ ಧಿಮಾಕು!

ಬೇಸಗೆಯ ರಾತ್ರಿಗಳಲ್ಲಿ ದೂರದಲ್ಲಿ ಯಾರೋ ಹಚ್ಚಿದ ದೀಪ. ಹುಲಿಯ ಕಣ್ಣಿನ ಹಾಗೆ ಅದು ಹೊಳೆಹೊಳೆದು ಆತಂಕ. ಕತ್ತಲೆಗೊಂದು ಮುಖ, ಕತ್ತಲೆಗೊಂದು ಸುಖ. ಸುಡುಹಗಲಲ್ಲಿ ಕಾಣಿಸದೇ ಹೋದದ್ದು ಕತ್ತಲಲ್ಲಿ ಕಾಣಿಸೀತು ಎಂಬ ಆಸೆ. ಕತ್ತಲಿಗೂ ಅದೇ ಭರವಸೆ. ಹಗಲು ಕಾಣಿಸಿದ್ದನ್ನು ತಾನು ಚಂದಗಾಣಿಸುತ್ತೇನೆ ಎಂಬ ಹಮ್ಮು. ಇರುಳು ಹಗಲಿನ ನಡುವೆ ಜೇಡ ನೇಯುವ ನೂಲು. ಆ ಜೇಡನ ಹೆಸರು, ಬೇಡ. ಬೇಟೆಯಾಡುತ್ತಾನೆ ಅವನು.

ಪುಸ್ತಕಗಳಿಗೆ ನಿರಂತರ ನಿದ್ದೆ. ಯಾವ ಪುಟ ತೆರೆದರೂ ಅಲ್ಲೊಂದು ರಂಪಾಟ, ತಳಮಳ. ಅವನು ಕೇಳುವ ಪ್ರಶ್ನೆ, ಅವಳು ಕೊಡದ ಉತ್ತರ. ಸಿಗದ ಕೆಲಸ. ರಾಮಾಯಣದ ಎಲ್ಲಾ ಪುಟಗಳಲ್ಲೂ ಒಂದಿಲ್ಲೊಂದು ವಿರಹ. ಊರ್ಮಿಳೆಯ ವಿರಹಕ್ಕೆ ಮಾತ್ರ ಶೃಂಗಾರದ ಸುಖವಿಲ್ಲ, ತ್ಯಾಗದ ತೋರಣವೂ ಇಲ್ಲ. ಪಂಚಪಾಂಡವರನ್ನು ಆಪೋಶನ ತೆಗೆದುಕೊಂಡು ದಿಟ್ಟಳಂತೆ ನಿಂತ ದ್ರೌಪದಿಯ ಸೊಂಟದ ನಿರಿಗೆಯಲ್ಲಿ ಬೆವರಹನಿ.

ಹಾಡು ಊಳಿಟ್ಟಹಾಗೆ ಕೇಳಿಸಿದರೆ ಮುಂಜಾವದಲ್ಲಿ ಸುಪ್ರಭಾತ. ಮಾದೇಶ್ವರಾ ದಯೆಬಾರದೇ ಎಂಬ ಹಾಡಿನ ನಡುವೆ ನೀನಿಲ್ಲದೇ ನನಗೇನಿದೆ ಎಂಬ ರಾಗ. ಈ ಸಾರಿ ಮಾವಿನ ಮರ ಹೂಬಿಟ್ಟಿಲ್ಲ. ಆಲದ ಮರ ಚಿಗುರಿದರೂ ಅದರ ತಳಿರಿಗೆ ಕೆಂಬಣ್ಣವಿಲ್ಲ. ಗೆಳೆಯನ ಕಾರಿನೊಳಗೆ ಹಳೆಯ ಟೇಪ್‌ರೆಕಾರ್ಡಿರಿನಲ್ಲಿ ಬಂತದೋ ಶೃಂಗಾರಮಾಸ ಹಾಡು. ಎಷ್ಟು ಅಲವತ್ತುಕೊಂಡರೂ ನಿಲ್ಲದ ಕಾಲದ ಕ್ರೌರ್ಯದಿಂದಾಗಿ ಅವನಿಗೆ ನಲವತ್ತು.

ನೆತ್ತಿ ಬೋಳಾಗುತ್ತಿರುವುದು ಸುಳ್ಳೆ? ಹೀರೆಕಾಯಿ ಗಿಡದ ತುಂಬ ಹಳದಿ ಹಳದಿ ಹೂವು. ಹಳದಿಯೆಂದರೆ ಮಾತ್ಸರ್ಯದ ಬಣ್ಣ ಎಂದು ಅವಳು ಹೇಳಿದ ನೆನಪು. ಅವಳು ಸೈಕಾಲಜಿಯಲ್ಲಿ ಡಾಕ್ಟರೇಟ್.  ಒಳಗೊಳಗಿನ ಗುಟ್ಟನ್ನೆಲ್ಲ ಅರ್ಥ ಮಾಡಿಕೊಳ್ಳುತ್ತಾಳೆ. ಮೌನಕ್ಕೂ ಮಾತಿಗೂ ಅವಳ ಪದಕೋಶದಲ್ಲಿ ಬೇರೆಯೇ ಅರ್ಥ. ಮಾತಿಗೆ ಎರಡರ್ಥ, ಮೌನಕ್ಕೆ ಸಾವಿರ.

ಆಕಾಶ ನೀಲಿ ಎಂದು ಓದಿದ್ದೆಲ್ಲ ಸುಳ್ಳು  ಅದಕ್ಕೆ ಬಣ್ಣವಿಲ್ಲ. ಹೊತ್ತಿಗೊಂದು ಬಣ್ಣ. ಖುಷಿಯಾಗಿದ್ದಾಗ ನೀಲಿ, ಬೇಸರವಿದ್ದರೆ ಬೂದಿಬಿಳುಪು, ಬದುಕುವ ಅದಮ್ಯ ಉತ್ಸಾಹಕ್ಕೆ ನಸುನೇರಳೆ, ಉದಯಕ್ಕೂ ಅಸ್ತಕ್ಕೂ ಕಡುಕೆಂಪು. ಸುರಿಯಹೊರಟರೆ ಶ್ಯಾಮವರ್ಣ. ನುಗ್ಗೆ ಮರದ ಕೊಂಬೆ ಕೊಂಬೆಯಲ್ಲೂ ಜೋತುಬಿದ್ದ ಮದನಮಿತ್ರ. ನೋಡಿ ನುಗ್ಗೆ, ಮನಸ್ಸು ಕಿಕ್ಕಿರಿದ ರಥೋತ್ಸವದ ರಾತ್ರಿ.

ಪುಟ್ಟ ಹುಡುಗಿಯ ಕೈಲಿ ನೀಲಿ ಬಲೂನು. ಯಾರೋ ಊದಿ ಉಬ್ಬಿಸಿಕೊಟ್ಟ ಬಲೂನಿಗೆ ಅವಳ ಬೆರಳೇ ತಾಕಿ ಶೂನ್ಯಸಂಪಾದನೆ. ಅರಚಾಡಿ ಅತ್ತ ಬಾಲಕಿಗೆ ಒಂದು ಚಾಕಲೇಟು ಸಾಂತ್ವನ. ಬಾಲ್ಯದ ಬೇಸರ ಕ್ಷಣಿಕ, ಸಂಭ್ರಮ ನಿರಂತರ. ಜೋಳದ ತೆನೆಯ ಹಾಗೆ ಒಳಗಿಂದ ಏನೋ ಚಿಮ್ಮಿ ಬಂದೀತೆಂಬ ಆಸೆ. ಜೋಳದ ಹೊಲಕ್ಕೆ ಮಾತ್ರ ಗಿಣಿಹಿಂಡು ಬರುತ್ತದೆ ಎಂಬುದು ಬರೀ ಮೂಢನಂಬಿಕೆ. ಬತ್ತದ ಹೊಲಕ್ಕೇನಿದ್ದರೂ ಗುಬ್ಬಚ್ಚಿಗಳ ದಾಳಿ. ಒಂದೊಂದು ರಾತ್ರಿಯೂ ಒಬ್ಬೊಬ್ಬರ ಪಾಳಿ, ನಿನ್ನೆ ಸಂಭ್ರಮ, ಇವತ್ತು ವಿರಹ, ನಾಳೆ ಭರವಸೆ, ನಾಡಿದ್ದು ಸಲ್ಲಾಪ. ನೆಲಕ್ಕೆ ಬಿದ್ದ ಮಾವಿನಹಣ್ಣನ್ನು ಪತಿವ್ರತೆ ಮಾತ್ರ ಮರಳಿ ಕಳಚಿ ಬಿದ್ದ ತೊಟ್ಟಿಗೆ ಜೋಡಿಸಬಲ್ಲಳು ಎಂಬ ಶ್ರೀಕೃಷ್ಣನ ತಮಾಷಿ.

ಮಳೆ ಬಿದ್ದ ನೆಲದಲ್ಲಿ ಗರಿಕೆ ಚಿಗುರಿ, ಕಾಲಿಗೆ ಪುಳಕ. ಅವಳ ನೆನಪಿನ ಗರಿಕೆ ಆಗಾಗ ಚಿಗುರೊಡೆದು ಅಂಗಾಲಿಗೆ ಕಚಗುಳಿ ಇಡುತ್ತದೆ. ಅದನ್ನು ಯಾವ ಕಾರಣಕ್ಕೂ ತುಳಿಯದೇ ಓಡಾಡುವ ಆಸೆ. ಆಗೆಲ್ಲ ಅಹಂಕಾರದ ಆಡು ಕಣ್ಮುಚ್ಚಿಕೊಂಡು ಗರಿಕೆ ಮೇಯುತ್ತದೆ. ಮುಂಗಾಲೆತ್ತಿ ಕುಣಿದು ಕುಪ್ಪಳಿಸುತ್ತದೆ. ಇಂಟರ್‌ನೆಟ್ ಆನ್ ಮಾಡಿ ಕೂತರೆ ಪದೇ ಪದೇ ಒಂದೇ ಮೆಸೇಜು: ಪಾಸ್‌ವರ್ಡ್ ಮತ್ತು ಯೂಸರ್‌ನೇಮ್ ಹೊಂದಾಣಿಕೆ ಆಗುತ್ತಿಲ್ಲ.  ಆಕ್ಸೆಸ್ ಡಿನೈಡ್. ಒಳಹೋಗದೆ ಪಾಸ್‌ವರ್ಡ್ ಬದಲಾಯಿಸುವ ಹಾಗಿಲ್ಲ. ಪಾಸ್‌ವರ್ಡ್ ಇಲ್ಲದೆ ಒಳಗೆ ಹೋಗುವ ಹಾಗಿಲ್ಲ. ಕೊಟ್ಟ ಕ್ಲೂ ಮೊದಲ ಗೆಳತಿಯ ಹೆಸರು. ಅದು ಯಾವತ್ತೋ ಮರೆತೇಹೋಗಿದೆ.

ಸಿಗರೇಟು ಅಂಗಡಿಯ ಮುಂದೆ ನಿಂತರೆ ಹೊಗೆಹೊಗೆ ಮುಂಜಾನೆ. ಅವಳ ಪ್ರೀತಿಗೆ, ದ್ವೇಷಕ್ಕೆ, ನಿಟ್ಟುಸಿರಿಗೆ,ನಿರಾಕರಣೆಗೆ ಸಿಗರೇಟು ಪರಿಹಾರ. ಅವಸರದಲ್ಲಿ ಪುಸುಪುಸು ಸೇದುವವರು, ವಿರಾಮದಲ್ಲಿ ನಿಸೂರಾಗಿ ಉಸಿರೆಳೆದುಕೊಳ್ಳುವವರು, ಯಾರೋ ಬರುವುದಕ್ಕೆ ಕಾಯುತ್ತಿರುವವರು, ಯಾರೋ ಹೋಗುವುದಕ್ಕೆ ಕಾಯುವವರು,ತೆಂಗಿನಕಾಯಿಗೆ ಚಿಕ್ಕನಾಯ್ಕನಹಳ್ಳಿಯಲ್ಲಿ ಮೂರೇ ರುಪಾಯಿ ಎಂಬ ದೂರದಾಸೆಗೆ ಇಲ್ಲಿ ಅಡ್ಡಗಾಲು.

ಒಂದೇ ಮೊಬೈಲು ಸೆಟ್ಟಲ್ಲಿ ಎರಡು ಸಿಮ್ ಹಾಕಬಹುದು. ಎರಡೂ ನಂಬರಿನಿಂದಲೂ ಫೋನ್ ಮಾಡಬಹುದು. ಎರಡಕ್ಕೂ ಸಂದೇಶ ಬರುತ್ತದೆ. ಅದರಿಂದ ಯಾರಿಗೆ, ಇದರಿಂದ ಯಾರ್‍ಯಾರಿಗೆ ಎಂದು ಮೊದಲೇ ನೆನಪಿಟ್ಟುಕೊಳ್ಳದೇ ಹೋದರೆ ಹಯವದನ. ಮತ್ತೂ ಏರುಪೇರಾದರೆ, ತುಘಲಕ್. ದೆಹಲಿಯಿಂದ ದೌಲತಾಬಾದ್‌ಗೆ ಪ್ರಯಾಣ ಹೊರಟವರಿಗೆಲ್ಲ ನಡುದಾರಿಯಲ್ಲಿ ನೀರುಮಜ್ಜಿಗೆ.

ಆರೂ ಮೂವತ್ತದಿಂದ ಧಾರಾವಾಹಿ ಶುರು. ಬದುಕು ಜೋಗುಳ ಜೋಕಾಲಿ ಮನೆ ಮಗಳು ಕುಲಗೌರವ ಆಮೇಲೆ ಮನೆಯೊಂದು ಮೂರು ಬಾಗಿಲು, ಒಂದೊಂದು ಬಾಗಿಲಿಗೂ ಮುತ್ತಿನ ತೋರಣ, ಮುಂಜಾವದಲ್ಲಿ ಮುಕ್ತ ಮುಕ್ತ ಮುಕ್ತ. ನಡುರಾತ್ರಿಗೆ ಅರುಂಧತಿ. ರಥಸಪ್ತಮಿಯ ನಡುವೆ ಮಹಾನವಮಿ. ಬದುಕು ಜಟಕಾಬಂಡಿ. ಸ್ವಾಮಿ, ಇದು ಕತೆಯಲ್ಲ,ಜೀವನ. ಹಾಡಲ್ಲ, ಸುಡುಗಾಡು. ಇಸ್ಕಾನಿನಲ್ಲಿ ಪದೇ ಪದೇ ಬ್ರಹ್ಮಕಲಶೋತ್ಸವ. ಪ್ರವೇಶ ಉಚಿತ, ಖಚಿತವೇನಲ್ಲ.

ಸಾನಿಯಾ ಗಂಡನಿಗೆ ಮೊದಲೇ ಮದುವೆಯಾಗಿದೆ ಎಂದು ಒಳಗೊಳಗೇ ಖುಷಿ. ಸಾನಿಯಾ ಪಾಕಿಸ್ತಾನಕ್ಕೆ ಹೋಗುವಂತಿಲ್ಲ ಎಂದು ತಕರಾರು. ಮದುವೆಯೇ ಆಗೋಲ್ಲ ಅಂತ ಅವಳ ಕರಾರು. ನಡೆದದ್ದೆಲ್ಲವನ್ನು ಕರಾರುವಾಕ್ಕು ದಾಖಲಿಸಿದರೆ,ಅವಳದು ಬರಿ ಟೆನ್ನಿಸ್ಸೇ. ಗಾಳಿಗೆದ್ದ ತುಂಡುಲಂಗಕ್ಕೆ ಜೋತುಬಿದ್ದವರಿಗೆ ಬಾಳಿನರ್ಥ ಬೇಕೇ?

ಅವಳು ಬಸ್ಸು ಹತ್ತಿದ್ದಾಳೆ. ಬಸ್ಸು ಹೊರಟಿದೆ. ಕಿಟಕಿ ಬಾಗಿಲು ಮುಚ್ಚಲಾಗುತ್ತಿಲ್ಲ. ಸುಳಿದು ಬರುವ ಗಾಳಿಗೆ ಮಾತುಗಳು ಕೇಳಿಸುತ್ತಿಲ್ಲ. ಬಸ್ಸು ನಿಂತಾಗೆಲ್ಲ ನಾಲ್ಕು ಮಾತು. ಮನಸ್ಸು ತೂತು ತೂತು. ಘಾಟಿ ರಸ್ತೆಗಳಲ್ಲಿ ಸುಳಿಸುಳಿದು ಬಳಸಿ ಬರುವ ಬಸ್ಸಿನೊಳಗೆ ಕೂತ ಸುಂದರಿಯರ ಹೊಟ್ಟೆತೊಳಸುತ್ತದೆ. ಮನಸ್ಸು ಕೂಡ ತಳಮಳಿಸೀತು ಎಂದು ತರುಣರು ಹಳಹಳಸಿ ಕಾಯುತ್ತಾರೆ.

ಬಿಸಿಲೆಂಬುದು ಬೆಂಬಲಬೆಲೆ ಇಲ್ಲದ ಟೊಮ್ಯಾಟೋ. ಚಳಿಯೆಂಬುದು ಮನೆಬಿಟ್ಟು ಓಡಿಹೋದ ಮಗ. ಸೆಕೆ ಮತ್ತೆ ಮತ್ತೆ ಮುತ್ತಿಕೊಳ್ಳುವ ಕಾಡುನೊಣ. ನೆನಪು ನೆತ್ತಿಯ ಮೇಲೆ ಹಾರಾಡುವ ಸೊಳ್ಳೆ. ಮುಂಜಾವ ಎರಡೋ ಮೂರೋ ಕಿಲೋಮೀಟರ್ ನಡೆದುಕೊಂಡು ಹೋಗಿ ಅವಳನ್ನು ನೋಡಿದರೆ, ಒಳಗೊಳಗೇ ಲಂಕಾದಹನ. ಮನಸು ಪುಷ್ಪಕವಿಮಾನ.

ಅಣ್ಣಪ್ಪ ನಿಂತು ಹೋದ ಜಾಗದಲ್ಲಿ ನಾವೂ ನಿಂತು ಹೋಗಬೇಕಂತೆ. ಹಾಗಂತ ಘಾಟಿರಸ್ತೆಯ ಪೂಜಾರಿಯ ಅಹವಾಲು ಮತ್ತು ವಿನಂತಿ. ಅಲ್ಲಿ ಬೆಳೆದ ಹೆಸರಿಲ್ಲದ ಮರಕ್ಕೆ ಹೆರಿಗೆ ಸಂಭ್ರಮ. ಆ ಸುವಾಸನೆಗೆ ಕಾಡೆಲ್ಲ ಘಮಘಮ. ನಾಳೆ ನಾಡಿದ್ದರಲ್ಲಿ ಮತ್ತೊಂದು ಮಳೆ ಸುರಿದೀತೆಂದು ಕಾಯುತ್ತಿರುವ ರೆಪ್ಪೆಹುಳಕ್ಕೆ, ಅಖಂಡವಾಗಿ ನಿದ್ರಿಸುವ ಆಸೆ. ಗಂಟೆ ಹನ್ನೆರಡೂ ಐವತ್ತು.

ಇನ್ನು ಹತ್ತೇ ನಿಮಿಷದಲ್ಲಿ, ಒಂದರಿಂದ ಹನ್ನೊಂದಕ್ಕೇರಿದ್ದು ಮತ್ತೆ ಒಂದಕ್ಕಿಳಿದು ಎಲ್ಲ ಸಿಸಿಫಸ್ಸನ ಕರ್ಮಕಾಂಡ. ಪುನರಪಿ ಜನನಂ ಪುನರಪಿ ಮರಣಂ. ಪುನರಪಿ ಪುನರಪಿ ಅಧರಂ ಮಧುರಂ

‍ಲೇಖಕರು avadhi

April 6, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

13 ಪ್ರತಿಕ್ರಿಯೆಗಳು

 1. venkatakrishna.k.k.

  ನಾನು ಓದಿದ ನಿಮ್ಮ ಇತ್ತೀಚಿನ ಬರೆಹಗಳಲ್ಲಿ,
  ತುಂಬಾ ತುಂಬಾ ಇಷ್ಟವಾಯಿತು.
  ಸವಿದಷ್ಟೂ
  ಪುನರಪಿ ಪುನರಪಿ ಮಧುರಂ..ಮಧುರಂ

  ಪ್ರತಿಕ್ರಿಯೆ
 2. Santhosh Ananthapura

  Excellent one Sir.
  ಹಲವು ದಿನಗಳ ಬಳಿಕ ಹೊರಹೊಮ್ಮಿದ ಒಂದು ಉತ್ತಮ ಕಾವ್ಯ ಗುಣವಿರುವ ಗದ್ಯ. ಇಷ್ಟವಾದ ಹಲವು ಸಾಲುಗಳು ನೆನಪಿನಂಗಳದಲ್ಲಿ ಭದ್ರವಾಗಿವೆ. ಇಂತಹವಿನ್ನೂ ಮೂಡಿಬರಲಿ.

  ಪ್ರತಿಕ್ರಿಯೆ
 3. Netravathi Abbokkaraka Ubar

  endre jogi idhu.ninu kande pole alla aava.nee baari usar ayire.enum usar aati eldonu aava.

  ಪ್ರತಿಕ್ರಿಯೆ
 4. Sandhya

  ಮಾತಿಗೆ ಎರಡರ್ಥ, ಮೌನಕ್ಕೆ ಸಾವಿರ …loved this 🙂

  ಪ್ರತಿಕ್ರಿಯೆ
 5. ಪರಾ೦ಜಪೆ

  ಚೆನ್ನಾಗಿದೆ, ಕಾವ್ಯಮಯ ಗದ್ಯ. ನಿಮ್ಮ ಇತ್ತೀಚಿನ ಬರಹಗಳಲ್ಲಿ ನನಗಿದು ತು೦ಬ ಇಷ್ಟವಾಯಿತು.

  ಪ್ರತಿಕ್ರಿಯೆ
 6. ವಾಣಿಶ್ರೀ

  ಮನ ಮಿಡಿಯುವಂತಿದೆ ನಿಮ್ಮ ಈ ಬರವಣಿಗೆ..
  ಮನಸೇ ಮನಸಿನ ಮನಸ ನಿಲ್ಲಿಸುವುದು… ಅಧ್ಭುತ ಅಧ್ಭುತ …
  ಧನ್ಯವಾದಗಳು ಸರ್ ….

  ಪ್ರತಿಕ್ರಿಯೆ
 7. hneshakumar@gmail.com

  ನಿಮ್ಮ ಸೃಜನತೆಗೆ ಪ್ರತಿ ಪದದ ಸಾಲಿನ ಪಲುಕು ಸಾಕ್ಷಿ..ಜೋಗಿಯವರೇ ಧನ್ಯವಾದಗಳು…

  ಪ್ರತಿಕ್ರಿಯೆ
 8. D.M.Sagar,Dr.

  “ತಾನು ಅತ್ಯಂತ ಏಕಾಂಗಿ ಎಂದು ಭಾವಿಸುವ ಗಂಡು ಆ ಏಕಾಂತವನ್ನು ಮೀರುವುದಕ್ಕೆಂದೇ ಒಬ್ಬ ಗೆಳತಿಯನ್ನು ಕಂಡುಕೊಳ್ಳುತ್ತಾನೆ. ಕೊನೆಗೆ ಅವಳೇ ಅವನನ್ನು ಅತ್ಯಂತ ಅಸಹನೀಯ ಏಕಾಂತಕ್ಕೆ ದೂಡುತ್ತಾಳೆ” – Isn’t it the eternal and ubiquitious truth in India?. Now telle me Jogi, isn’t it a scoundral mannerism to textualize a piece of my personal life so beautifully?. D.M.Sagar

  ಪ್ರತಿಕ್ರಿಯೆ
 9. ಸಿರಿ

  stream of consciousness…

  beautiful..
  ‘ಹೊಸಿಲ ಮೇಲಿಟ್ಟ ದೀಪದ ಹಾಗೆ ಎರಡೂ ಕಡೆಗೆ ಬೆಳಕು ಬೀರುತ್ತಿರುವುದು ಕಷ್ಟದ ಕೆಲಸವೇನಲ್ಲ.’
  ಕಷ್ಟದ ಕೆಲಸ ಅಲ್ಲದಿರಬಹುದು.ಆದರೆ ಯಾವ ಕಡೆಯನ್ನೂ ಸಂಪೂರ್ಣವಾಗಿ ಬೆಳಗಲು ಸಾಧ್ಯವಾಗದೆ ಸೋಲೋದಿಲ್ಲವ?

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: