ಜೋಗಿ ಬರೆದಿದ್ದಾರೆ: ಜೆಫ್ರಿಯೆಂಬ ರೂಪಕ!

images1
 
 
ನಮ್ಮೊಳಗಿನ ಸ್ವಾತಂತ್ರ್ಯಪ್ರಿಯತೆಗೆ ಜೆಫ್ರಿಯೆಂಬ ರೂಪಕ!
‘ನಂಗೆ ಪ್ರಕಾಶಕರೊಬ್ಬರು ಆತ್ಮಚರಿತ್ರೆ ಬರೆಯೋದಕ್ಕೆ ಹೇಳಿದ್ದಾರೆ. ಬರೀಬೇಕೂಂತಿದ್ದೀನಿ. ದಯವಿಟ್ಟು ಯಾರಾದ್ರೂ ಓದುಗರು ೧೯೫೪ರಿಂದ ೧೯೬೨ರ ತನಕ ನಾನೇನು ಮಾಡ್ತಿದ್ದೆ ಅಂತ ಹೇಳಿ.’
ಹಾಗಂತ ಬರಕೊಂಡವನು ಜೆಫ್ರಿ ಬರ್ನಾರ್ಡ್. ಮಹಾನ್ ಕುಡುಕ, ಮಹಾ ಅಲೆಮಾರಿ, ತುಂಟ ಪತ್ರಕರ್ತ. ಅವನು ಸ್ಪೆಕ್ಟೇಟರ್ ಪತ್ರಿಕೆಗೆ ಬರೆಯುತ್ತಿದ್ದ ‘ಲೋ ಲೈಫ್’ ಅಂಕಣ ಜನಪ್ರಿಯವಾಗಿ ರಾತ್ರೋರಾತ್ರಿ ಪ್ರಸಿದ್ಧನಾದವನು ಜೆಫ್ರಿ ಬರ್ನಾರ್ಡ್. ಅವನು ಕಾಯಿಲೆ ಬಿದ್ದಾಗ ‘ಜೆಫ್ರಿ ಬರ್ನಾರ್ಡ್ ಈಸ್ ಅನ್‌ವೆಲ್’ ಎಂಬ ನಾಟಕವೂ ಬಂತು. ಅದೂ ಸಿಕ್ಕಾಪಟ್ಟೆ ಜನಪ್ರಿಯವಾಯಿತು.
jeffrey_bernard1ಜೆಫ್ರಿ ಬರ್ನಾರ್ಡ್ ಪತ್ರಕರ್ತ. ಮನೆಯಲ್ಲಿದ್ದದ್ದಕ್ಕಿಂತ ಹೆಚ್ಚು ಕಾಲ ದಿ ಕೋಚ್ ಅಂಡ್ ಹಾರ್ಸಸ್ ಪಬ್‌ನಲ್ಲಿ ಕಾಣಿಸಿಕೊಂಡವನು. ಯಾರೋ ಅಡ್ರೆಸ್ ಕೇಳಿದ್ದಕ್ಕೆ ಪಬ್ ವಿಳಾಸವನ್ನೇ ಕೊಟ್ಟು ಬಿಟ್ಟಿದ್ದ. ಅವನ ಕುರಿತು ಅಸಂಖ್ಯಾತ ದಂತಕತೆಗಳಿದ್ದವು. ಅವನು ಕುಡಿಯುತ್ತಿದ್ದ ಮನೆಗೂ ಪಬ್ಬಿಗೂ ಹದಿನೇಳು ಮೈಲಿ ದೂರ. ಎಂದೂ ಕಾರು ಓಡಿಸದ ಜೆಫ್ರಿ, ಮನೆಯಿಂದ ಪಬ್‌ಗೆ ಬರಲು ಬಾಡಿಗೆ ಕಾರಿಗೆ ಐನೂರು ರುಪಾಯಿ ಕೊಡಬೇಕಾಗಿತ್ತು. ಅದನ್ನು ಉಳಿಸುವುದಕ್ಕೆ ಜೆಫ್ರಿ ಕುಡಿದು ಮನೆಗೆ ಹೋಗುವಾಗ ತನ್ನ ಹೆಸರಿಗೇ ಒಂದು ಇಪ್ಪತ್ತು ಪೈಸೆಯ ಪೋಸ್ಟ್ ಕಾರ್ಡ್ ಪೋಸ್ಟ್ ಮಾಡುತ್ತಿದ್ದ. ಅದನ್ನು ಡೆಲಿವರಿ ಮಾಡಲು ತನ್ನ ವಾಹನದಲ್ಲಿ ಹದಿನೇಳು ಮೈಲಿ ದೂರ ಬರುತ್ತಿದ್ದ ಪೋಸ್ಟ್‌ಮ್ಯಾನ್ ಜೊತೆಗೆ ವಾಪಸ್ಸು ಬರುತ್ತಿದ್ದ ಎಂಬುದು ಅಂಥದ್ದೊಂದು ದಂತಕತೆ.
ತುಂಬ ಚುರುಕಾಗಿ ಬರೆಯುತ್ತಿದ್ದ ಜೆಫ್ರಿ ತಮಾಷೆಯಾಗಿಯೇ ಗಂಭೀರ ಸಂಗತಿಗಳನ್ನು ಹೇಳುತ್ತಿದ್ದ. ಇಂಗ್ಲೆಂಡನ್ನು ಗೇಲಿ ಮಾಡುತ್ತಿದ್ದ. ಇಂಗ್ಲೆಂಡಿನ ಜನ ಎಲ್ಲಕ್ಕಿಂತ ಹೆಚ್ಚು ದ್ವೇಷಿಸುತ್ತಿದ್ದ ಇನ್‌ಕಮ್ ಟ್ಯಾಕ್ಸ್ ವ್ಯವಸ್ಥೆಯನ್ನು ಅವನಷ್ಟು ಗೇಲಿ ಮಾಡಿದವರು ಮತ್ತೊಬ್ಬರು ಸಿಗಲಿಕ್ಕಿಲ್ಲ.
ಅವನ ಪಂಚ್‌ಲೈನ್‌ಗಳು ಹೇಗಿರುತ್ತಿದ್ದವು ನೋಡಿ:
-ತುಂಬ ವೇಗವಾಗಿ ಓಡೋ ಕುದುರೆ ನಿಧಾನವಾಗಿ ಓಡೋ ಹಾಗೆ ಮಾಡೋದು ಹೇಗೆ?
ಅದರ ಮೇಲೆ ಬೆಟ್ ಕಟ್ಟಿ!
ಜೆಫ್ರಿ ಸಂದರ್ಶನದಲ್ಲಿ ಆಡಿದ ಮಾತುಗಳು ವಿಕ್ಷಿಪ್ತವಾಗಿವೆ. ಎಷ್ಟೋ ಸಲ ಅರ್ಥ ಹೀನ ಅನ್ನಿಸುತ್ತವೆ. ಆ ಅರ್ಥಹೀನತೆಯಲ್ಲೇ ದೊಡ್ಡದೊಂದು ಸತ್ಯವನ್ನು ಹೇಳುತ್ತಿದ್ದಾನೇನೋ ಎಂಬ ಅನುಮಾನವನ್ನೂ ಹುಟ್ಟಿಸುವಂತಿವೆ. ಆ ಕಾರಣಕ್ಕೇ ಜೆಫ್ರಿ ಲಂಡನ್ನಿನ ಮಂದಿಗೆ ಅಷ್ಟೊಂದು ಇಷ್ಟವಾಗಿರಬಹುದಾ?
ನಿಂಗೇ ಏನೂ ಮಾಡದೇ ಇರೋದೇ ಇಷ್ಟವಂತೆ?
– ಕರ್ತವ್ಯವೇ ದೇವರು ಅನ್ನೋದೆಲ್ಲ ಸುಳ್ಳು. ಕೆಲಸ ಮಾಡೋದು ಒಂದು ಸದ್ಗುಣ ಏನಲ್ಲ. ಡಿಎಚ್ ಲಾರೆನ್ಸ್ ಥರದವರು ಕಂಡು ಹಿಡಿದ ಸುಳ್ಳು ಅದು. ಕಠಿಣ ಪರಿಶ್ರಮ ಅತ್ಯಂಕ ರೋಚಕವೂ ಭಾವುಕವೂ ದೈವಿಕವೂ ಆದ ಅನುಭವ ಎಂದು ತನ್ನ ಪಾತ್ರಗಳ ಮೂಲಕ ಸುಳ್ಳು ಹೇಳಿದವನು ಅವನು.
ದುಡ್ಡಿರೋರು ಬಡವರ ಹತ್ರ ಕೆಲಸ ಮಾಡಿಸಿಕೊಳ್ಳೋದಕ್ಕೆ ಕರ್ತವ್ಯವೇ ದೇವರು ಅಂತ ಹೇಳಿರಬಹುದಲ್ವಾ?
– ಎಲ್ಲಾ ಕೆಲಸಕ್ಕೂ ಅದರದ್ದೇ ಆದ ಘನತೆ ಇದೆ. ಸಣ್ಣ ಕೆಲಸವನ್ನೂ ಶ್ರದ್ಧೆಯಿಂದ ಮಾಡು ಅನ್ನೋದೆಲ್ಲ ಬೋಗಸ್, ಬೊಗಳೆ. ಮನುಷ್ಯ ಹುಟ್ಟಿರೋದು ದುಡಿಯೋದಕ್ಕಲ್ಲ. ಶಾಂಪೇನ್ ಕುಡ್ಕೊಂಡು ವೇಟರ್‌ಗಳ ಕೈಲಿ ಸೇವೆ ಮಾಡಿಸಿಕೊಳ್ಳುತ್ತಾ ಪಬ್‌ನಲ್ಲಿ ಇಡೀ ದಿನ ಕೂತಿರೋದು ಅಂಥಾ ಘನತೆಹೀನ ಕೆಲಸವೇನೂ ಅಲ್ಲ.
ನಿನಗೆ ದುಡಿಮೆ ಅಂದ್ರೆ ಕಷ್ಟಾನಾ?
-ಹೂಂ. ಈಗ ನನ್ನ ಕೈಲಿ ಕೆಲಸ ಮಾಡೋಕೇ ಆಗೋಲ್ಲ. ಎಷ್ಟು ಕಡಿಮೆ ಸಾಧ್ಯವೋ ಅಷ್ಟು ಕಡಿಮೆ ದುಡೀತೀನಿ ನಾನು.
ಹಿಂದೆ ಯಾಕೆ ದುಡೀತಿದ್ರಿ. ಅದಕ್ಕೇನಾದ್ರೂ ಪ್ರೇರಣೆ, ಸ್ಪೂರ್ತಿ?
-ದುಡ್ಡಿರಲಿಲ್ಲ , ದುಡೀತಿದ್ದೆ. ಜರ್ನಲಿಸ್ಚ್ ಆಗಿದ್ದೆ. ಅದರಷ್ಟು ಹಿಂಸೆಯ ಕೆಲಸ ಮತ್ತೊಂದಿಲ್ಲ. ಬರೆದು ಬರೆದೂ ಸಾಕಾಗ್ತಿತ್ತು. ಕೊನೆಗೆ ಬಿಟ್ಟು ಬಿಟ್ಟೆ..
ಬರೀತಿದ್ದ ದಿನಗಳಲ್ಲಿ, ಆದಷ್ಟು ಬೇಗ ಬರೆದು ಎಸೀತಿದ್ರಂತೆ ಹೌದಾ? ಅದನ್ನು ಮತ್ತೊಂದು ಸಾರಿ ಓದೋಕೂ ಹೋಗ್ತಿರಲಿಲ್ಲವಂತೆ?
-ಹೂಂ.. ಈಗ ಬರೆಯೋದಕ್ಕೂ ಹೋಗೋಲ್ಲ, ಡಿಕ್ಟೇಟ್ ಮಾಡ್ತೀನಿ. ಆಗ್ಲೂ ಅಷ್ಟೇ. ಎಷ್ಟೋ ಸಾರಿ ಪುಸ್ತಕ ವಿಮರ್ಶೇನ ಫೋನಲ್ಲಿ ಓದಿ ಹೇಳಿದ್ದೀನಿ. ಮೊದಲೇ ಬರೆದಿಟ್ಟುಕೊಂಡೋರ ಥರ. ಆದ್ರೆ ನಿಜವಾಗ್ಲೂ ಏನೂ ಬರೆದಿಟ್ಟಿರ್ತಿರಲಿಲ್ಲ. ಆ ಕ್ಷಣಕ್ಕೆ ಏನು ತೋಚುತ್ತೋ ಹೇಳ್ತಿದ್ದೆ. ತುಂಬ ರಿಸ್ಕಿ ಕೆಲಸ. ಎಷ್ಟೋ ಸಾರಿ ವರದಿಗಾರರು ಒಂದೇ ಪದಾನ ಮೂರು ಮೂರು ಸಾರಿ ಕೇಳೋರು, ಮೂರು ಸಾರಿ ಮೂರು ಬೇರೆ ಪದ ಹೇಳಿರ್ತಿದ್ದೆ. ಅವರಿಗೆ ತಲೆ ಕೆಟ್ಟು ಹೋಗೋದು..
ಅಟ್‌ಲೀಸ್ಚ್, ಪುಸ್ತಕ ಆದ್ರೂ ಓದಿರ್ತಿದ್ರಿ ತಾನೇ?
-ಮತ್ತೆ, ಓದದೇ ಹೇಳೋಕ್ಕಾಗುತ್ತಾ?
ಯಾವತ್ತಾದ್ರೂ, ಯಾವುದರ ಬಗ್ಗೆ ಆದ್ರೂ ಪಾಪಪ್ರಜ್ಞೆ?
-ನೆನಪಾಗ್ತಿಲ್ಲ. ಆದ್ರೆ ಎಷ್ಟೋ ಸಾರಿ ಕೆಲವರ ಬಗ್ಗೆ ಹೊಟ್ಟೆಕಿಚ್ಚು ಪಟ್ಟಿದ್ದೀನಿ. ಯಾಕೆಂದ್ರೆ ಅವರಿಗೆ ಮಾಡೋದಕ್ಕೆ ನನ್ನಷ್ಟು ಕೆಲಸಾನೂ ಇರ್ಲಿಲ್ಲ. ಇಡೀ ದಿನ ದುಡೀತಾ ಇರೋರ ಬಗ್ಗೆ ನನಗೆ ನಂಬಿಕೆ ಇಲ್ಲ. ಯಾಕೆಂದ್ರೆ ಅವರು ಜೀವನಾನ ನೋಡಿರೋದೇ ಇಲ್ಲ. ಮೂಗಿಗೆ ಕವಡೆ ಕಟ್ಕೊಂಡು ದುಡೀತಾನೇ ಇರ್ತಾರೆ.
ನೀವು ಯಾವತ್ತಾದ್ರೂ ಕುಡಿಯೋದು ಬಿಟ್ಟಿದ್ರಾ?
-ಒಂದ್ಸಾರಿ ಬ್ರೇನ್ ಹ್ಯಾಮರೇಜ್ ಆಗಿತ್ತು. ಆಗ ಬಿಡಲೇಬೇಕಾಯ್ತು ಬಿಟ್ಟಿದ್ದೆ.
ಕುಡೀದೇ ಇರೋ ಸ್ಥಿತಿ ಹೇಗಿರುತ್ತೆ?
-ನರಕ, ಬೋರಿಂಗ್, ಮಿಸರೇಬಲ್. ಅಸಾಧ್ಯ ಒಂಟಿತನ. ಅರ್ಧ ಸತ್ತ ಹಾಗೆ.
ಕುಡಿಯೋದರಿಂದ ಏನು ಸಿಗುತ್ತೆ?
-ಮಿದುಳಿಗೊಂದು ಕಿಕ್, ಒಂದು ಲಿಫ್ಟ್, ಎಂಥದ್ದೊ ಆತ್ಮವಿಶ್ವಾಸ. ನನಗೆ ಕುಡೀದೇ ಇರೋದು ಅಂದ್ರೆ ಸತ್ತ ಹಾಗೆ. ಕುಡೀದೇ ಇದ್ರೆ ನಾನು ಭೂತಕಾಲದ ಓಣಿಯಲ್ಲಿ ಪ್ರಯಾಣ ಮಾಡೋಕೆ ಶುರು ಮಾಡ್ತೀನಿ. ಅದರಷ್ಟು ಬೋರಿಂಗ್ ಮತ್ತೊಂದಿಲ್ಲ.
ಕುಡಿತ ನಿಮ್ಮ ದೈನಂದಿನ ಜೀವನಕ್ಕೆ ಅಡ್ಡಿಯಾಗಿಲ್ವಾ?
-ಅದಕ್ಕೊಂದು ಮಿತಿ ಹಾಕ್ಕೊಂಡ್ರೆ ಅಡ್ಡಿಯಾಗುತ್ತೆ. ನಾನು ಮಿತಿ ಹಾಕ್ಕೊಂಡವನೇ ಅಲ್ಲ. ಕುಡುಕರು ತುಂಬಾ ನಾಟಕ ಮಾಡ್ತಾರೆ. ಕುಡಿಯೋದು ರೋಮ್ಯಾಂಟಿಕ್ ಅಂದ್ಕೋತಾರೆ, ಗಂಡಸ್ತನ ಅಂದ್ಕೋತಾರೆ. ಸರಿಯಾಗಿ ತಿನ್ನೋದಿಲ್ಲ. ನಾನು ಹಾಗಲ್ಲ, ಕುಡೀತೀನಿ, ಚೆನ್ನಾಗಿ ತಿಂತೀನಿ. ದಿನಕ್ಕೆ ಮೂರು ಸಲ ಊಟ ಮಾಡ್ತೀನಿ. ಬಾರ್ ಬಿಲ್ ಕರೆಕ್ಟಾಗಿ ಕೊಡ್ತೀನಿ. ನಾನೇನು ಮಾಡ್ತಿದ್ದೀನಿ, ನಾನೇನು ಅನ್ನೋದು ನಂಗೆ ಚೆನ್ನಾಗಿ ಗೊತ್ತು. ಕುಡಿದು, ಎಲ್ಲಾ ಮರೆತು, ತೂರಾಡ್ಕೊಂಡು, ಗಟಾರದಲ್ಲಿ ಬಿದ್ದು.. ಅದೆಲ್ಲ ನಂಗಿಷ್ಟ ಆಗೋಲ್ಲ.
ಯಾವತ್ತೂ ನಿಮಗೆ ಹಾಗಾಗಿರ್ಲಿಲ್ವಾ?
-ನಾನು ಕುಡಿದಿದ್ದೀನಿ ಅನ್ನೋ ಮಾತೇ ಇಲ್ಲ. ನಾನು ಕುಡೀತಿದ್ದೀನಿ.. ಅದೇ ಸರಿಯಾದ ಪದ. ಆದ್ರೆ ಈಗ ಮೊದಲಿನ ಥರ ಇಲ್ಲ. ಅದ್ಭುತವಾದ ಪಬ್‌ಗಳೇ ಮಾಯವಾಗಿವೆ. ಅಲ್ಲಿ ಹೋದರೆ ಹಿತವಾದ ಸಂಗೀತ ಇಲ್ಲ. ಸಿಗರೇಟು ಸೇದೋಕೆ ಬಿಡೋಲ್ಲ. ಒಳ್ಳೇ ಬೀರ್ ಸಿಗೋಲ್ಲ, ಹೋಗ್ಲಿ ನಿಯತ್ತಿನ ಕುಡುಕರೂ ಇಲ್ಲ. ನನಗೆ ಪಬ್ ಅಂದ್ರೆ ಆಸಕ್ತಪೂರ್ಣ ವ್ಯಕ್ತಿಗಳನ್ನು ಭೇಟಿಯಾಗೋ ಜಾಗ. ಬರೀ ಕುಡಿದು ಹೋಗೋ ಜಾಗ ಅಳ್ಲ. ಈಗ ಅಂಥ ಮಾತುಕತೆಯೂ ಇಲ್ಲ. ನಿಮ್ಮಂಥ ಯುವಕರೆಲ್ಲ ಕುಡಿಯೋಕೆ ಶುರುಮಾಡಿ ಪಬ್‌ಗಳನ್ನು ಹಾಳು ಮಾಡಿಬಿಟ್ರಿ. ಅಲ್ಲಿ ಕೂತು ಆರೋಗ್ಯದ ಬಗ್ಗೆ, ಕುಡಿಯೋದನ್ನು ಬಿಡೋದರ ಬಗ್ಗೆ,. ಸಿಗರೇಟು ಕಮ್ಮಿ ಸೇದಬೇಕು ಅನ್ನೋ ಬಗ್ಗೆ ಮಾತಾಡ್ತಾ ಮಾತಾಡ್ತಾ.. ಛೇ.
ಏನಾದ್ರೂ ಬೇಸರ?
-ಹೇಳಿದ್ರೆ ಸುಮ್ನೆ ಹೆಸರು ಹೇಳ್ತೀನಿ ಅಂತಾರೆ. ಆದ್ರೂ ಪ್ರಾನ್ಸಿಸ್ ಬೇಕನ್ ಜೊತೆಗೋ ಡಿಲಾನ್ ಥಾಮಸ್ ಜೊತೆಗೋ ಕಾಲ ಕಳೆಯೋದೊಂದು ಸಂತೋಷ. ನಾನು ಅದ್ಭುತ ವ್ಯಕ್ತಿಗಳನ್ನು ಭೇಟಿಯಾದದ್ದು ಪಬ್‌ನಲ್ಲಿ. ನನ್ನ ಸಂತೋಷ ಇರೋದು ಜನರ ಮಧ್ಯೆ. ಕುಡಿಯೋದು, ತಿನ್ನೋದು, ಮಾತಾಡೋದು, ಅಷ್ಟೇ..
ನೀನು ಬರೆಯೋದರ ಬಗ್ಗೆ ಮಾತಾಡ್ತೀಯಾ?
-ಇಲ್ಲ, ಯಾವತ್ತೂ ಮಾತಾಡೋಲ್ಲ. ನಾನು ಏನು ಯೋಚಿಸ್ತಿದ್ದೀನಿ ಅಂತಾನೂ ಹೇಳೋಲ್ಲ. ಅದು ನನ್ನ ಕರ್ಮ. ಲೇಖಕನಾಗಿರೋದಕ್ಕಿಂತ ಹಿಂಸೆಯ ಕೆಲಸ ಮತ್ತೊಂದಿಲ್ಲ. ಆದ್ರೆ ನನಗೆ ಬೇರೆ ದಾರಿ ಇಲ್ಲ.
ಹೀಗೆ ವಿಕ್ಷಿಪ್ತವಾಗಿ ಮಾತಾಡುತ್ತಾ ಬದುಕಿದ ಜೆಫ್ರಿ ಬರ್ನಾರ್ಡ್ ಕಾಯಿಲೆ ಬಿದ್ದಾಗ ಬಂದ ನಾಟಕ ಜೆಫ್ರಿ ಬರ್ನಾರ್ಡ್ ಈಸ್ ಅನ್‌ವೆಲ್’. ಅದು ಎಷ್ಟು ಜನಪ್ರಿಯವಾಯಿತು ಎಂದರೆ ಜೆಫ್ರ್ ಸತ್ತ ಮೇಲೂ ಅದು ಪ್ರದರ್ಶನ ಕಾಣುತ್ತಲೇ ಇತ್ತು. ಸ್ಪೆಕ್ಟೇಟರ್ ಓದುಗರು ಜೆಫ್ರಿಯ ಲೋ ಲೈಫ್’ ಅಂಕಣವನ್ನು ಈಗಲೂ ಮಿಸ್ ಮಾಡಿಕೊಳ್ಳುತ್ತಾರೆ.
ಯಾವ ಪೂರ್ವಗ್ರಹವೂ ಇಲ್ಲದೇ, ಕುಡಿಯುತ್ತಾ, ಸಿಗರೇಟು ಸೇದುತ್ತಾ, ಸುಮ್ಮನೆ ಜೀವಿಸಿದ ಜೆಫ್ರಿ ಬರ್ನಾರ್ಡ್ ಎಂಬ ಪತ್ರಕರ್ತ, ಬರಹಗಾರನ ಬಿಡುಬೀಸು ಬದುಕು, ಉಡಾಫೆ, ನಿನ್ನೆ ನಾಳೆಗಳ ಚಿಂತೆಯಿಲ್ಲದ ವರ್ತಮಾನದ ತವಕಗಳು ಒಂದಿಷ್ಟಾದರೂ ಪ್ರೇರಣೆಯಾದವು ಎಂದು ಅವನು ಬರೆದ ಲೋ ಲೈಫ್’ ಅಂಕಣಬರಹಗಳ ಸಂಗ್ರಹವನ್ನು ಓದುತ್ತಾ ಕೂತಿದ್ದೇನೆ.
ಹೊರಗೆ ಬಿಸಿಲು ಎಲ್ಲವನ್ನೂ ಹುರಿದು ಮುಕ್ಕುತ್ತಿದೆ.

‍ಲೇಖಕರು avadhi

April 20, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

6 ಪ್ರತಿಕ್ರಿಯೆಗಳು

 1. minchulli

  ತುಂಬಾ ಚಂದ ಇದೆ ಎನ್ನಲೂ ಹೊಟ್ಟೆಕಿಚ್ಚು ಪಡುತ್ತಾ..
  ಶಮ, ನಂದಿಬೆಟ್ಟ

  ಪ್ರತಿಕ್ರಿಯೆ
 2. malathi S

  His drinking habit played havoc with his health and most often the note ‘Jeffrey Bernard is unwell’ appeared in place of his famously infamous column. I think this was the inspiration for the play ‘Jeffrey is unwell’
  Very well written da.
  🙂
  malathi S

  ಪ್ರತಿಕ್ರಿಯೆ
 3. ಅನಿಕೇತನ

  ನಮಸ್ತೆ,
  ತುಂಬಾ ತುಂಬಾ ಚೆಂದದ ಲೇಖನ,
  ಧನ್ಯವಾದ ಜೋಗಿಯವರೇ.
  ಸ್ವಾತಂತ್ರ್ಯಕ್ಕೂ ಸ್ವೇಚ್ಚೆಗೂ ಇರುವ ವ್ಯತ್ಯಾಸ ಸಹೃದಯಿ ಓದುಗರಿಗೆ ತಿಳಿದಿರುವುದು ಸಂತೋಷದ ಸಂಗತಿ.
  ಅನಿಕೇತನ ಸುನಿಲ್.

  ಪ್ರತಿಕ್ರಿಯೆ
 4. jogi

  ನಂಗಿಷ್ಟವಾದ ಜೆಫ್ರಿಯ ಮತ್ತೊಂದು ಸಾಲು-
  one of the fringe benefits of dying is that the journey to heaven is not via heathrow.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: