ಜೋಗಿ ಬರೆದಿದ್ದಾರೆ: ಜ್ವರದಂಥ ಪ್ರೀತಿಗಾಗಿ ಹಂಬಲಿಸಿ ಹದಗೊಂಡು..images2
 
 
 
ಜೀವನದಲ್ಲಿ ಒಂದೇ ಸಾರಿ ಪ್ರಾಮಾಣಿಕವಾಗಿ ಪ್ರೀತಿ ಮಾಡೋದಕ್ಕೆ ಸಾಧ್ಯ. ಆಮೇಲಾಮೇಲಿನ ಪ್ರೀತಿಯೆಲ್ಲ ಮೊದಲ ಪ್ರೀತಿಯ ಪಡಿಯಚ್ಚು. ಅದರ ನೆರಳು ಮಾತ್ರ
ಈ ಮಾತನ್ನು ನಲುವತ್ತರ ಆಸುಪಾಸಿನಲ್ಲಿರುವ ಯಾರೂ ಕೂಡ ನಂಬುವುದಿಲ್ಲ. ಪ್ರತಿ ಪ್ರೀತಿ ಕೂಡ ಹೊಸದು. ಪ್ರೀತಿ ನದಿಯ ಹಾಗೆ. ಕ್ಷಣಕ್ಷಣವೂ ಹೊಸ ನೀರು. ಹಳೆಯ ಪ್ರೀತಿ ಹರಿದು ಹೋಗುತ್ತದೆ. ಹರಿದು ಹೋಗುವುದನ್ನು ಕಟ್ಟಿಹಾಕಿದರೆ ಕೊಳೆಯುತ್ತದೆ ಅಥವಾ ಆವಿಯಾಗುತ್ತದೆ. ಆದ್ದರಿಂದ ಹರಿಯೋದನ್ನು ಹರಿಯೋದಕ್ಕೆ ಬಿಡಬೇಕು ಎಂದು ಅನೇಕರು ವಾದಿಸುತ್ತಾರೆ. ವಾದಿಸುವುದಕ್ಕೆ ಹಿಂಜರಿಯುವವರು ಹಾಗಂದಕೊಂಡಿರುತ್ತಾರೆ.
5ಹಾಗೇ ಇನ್ನೊಂದು ಥರದ ಜನರಿದ್ದಾರೆ. ಅವರಿಗೆ ಪ್ರೀತಿಯಲ್ಲಿ ಯಾವ ನಂಬಿಕೆಯೂ ಇಲ್ಲ. ಪ್ರೀತಿಯನ್ನು ಕರ್ತವ್ಯ ಅಂದುಕೊಂಡಿರುವ ಅವರ ಡೈಲಾಗುಗಳು ಸಾಮಾನ್ಯವಾಗಿ ಹೀಗಿರುತ್ತವೆನಮ್ಮೋರನ್ನು ನಾವು ಪ್ರೀತಿ ಮಾಡ್ದೇ ಬೇರೆ ಯಾರು ಮಾಡೋಕೆ ಸಾಧ್ಯ?ಇದನ್ನೇ ಮತ್ತೆ ಮತ್ತೆ ಕೇಳಿದಾಗ ನಮ್ಮ ರೋಗಕ್ಕೆ ನಾವು ಔಷಧಿ ತಗೊಳ್ಳದೇ ಬೇರೆ ಯಾರು ತಗೊಳ್ಳೋಕೆ ಸಾಧ್ಯ ಅಂತಲೋನಮ್ಮ ಮನೆ ನಾವು ಕಟ್ಟದೇ ಬೇರೆ ಯಾರು ಕಟ್ಟೋಕೆ ಸಾಧ್ಯಅಂತಲೋ ಧ್ವನಿಸತೊಡಗಿ ಭಯವಾಗುತ್ತದೆ. ಪ್ರೀತಿಯೂ ಕರ್ತವ್ಯವೇ ಆಗಿಬಿಟ್ಟರೆ ಕರ್ತವ್ಯ ಚ್ಯುತಿ ಆರೋಪ ಎಷ್ಟೆಲ್ಲ ಮಂದಿಯ ಮೇಲೆ! ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಪ್ರೀತಿಗೆ ಚ್ಯುತಿಯಾದವರೇ?
ಹಾಗೆ ನೋಡಿದರೆ ನಮ್ಮ ಪುರಾಣದಲ್ಲೇ ಪ್ರೀತಿಗೆ ಪ್ರತೀಕಗಳಿಲ್ಲ.  ರಾಮ-ಸೀತೆಯರು ನಿಜಕ್ಕೂ ಪ್ರೀತಿಸುತ್ತಿದ್ದರೋ ಅನ್ನುವ ಅನುಮಾನ ಮೂಡುತ್ತದೆ. ಸೀತೆಯನ್ನು ಗೆಲ್ಲುವುದಕ್ಕೆ ರಾಮ ಶಿವಧನಸ್ಸು ಎಂಬ ಬಿಲ್ಲು ಮುರಿಯಬೇಕಾಗಿತ್ತು ಅಷ್ಟೇ. ಕೈಯಲ್ಲಿ ಹೂವಿನ ಮಾಲೆ ಹಿಡಿದು ನಿಂತ ಸೀತೆಗೆ ರಾಮನಿಗಿಂತ ಮುಂಚೆ ಅನೇಕರು ಬಂದು ಬಿಲ್ಲು ಮುರಿಯುವ ಯತ್ನ ಮಾಡಿದಾಗ ಈ ಹುಡುಗ ಮುರಿದುಬಿಡಲಿ ಅಂತ ಯಾರ ಬಗ್ಗೆಯೂ ಅನ್ನಿಸಿರಲೇ ಇಲ್ಲವೇ?ಆಮೇಲಾದರೂ ರಾಮ ಮತ್ತು ಸೀತೆ ಆದರ್ಶದಂಪತಿಗಳ ಥರ ಬಾಳಿದರೇ ಹೊರತುಅನನ್ಯ ಪ್ರೇಮಿಗಳ ಥರ ಬದುಕಲೇ ಇಲ್ಲವಲ್ಲ. ಆತ ಕಾಡಿಗೆ ಹೊರಟಾಗ ಈಕೆಯೂ ಹೊರಟಳು. ಆಕೆ ಅಪಹರಣಗೊಂಡಾಗ ಈತ ಹುಡುಕಾಡಿ ಕಾದಾಡಿ ಆಕೆಯನ್ನು ಗೆದ್ದ. ಗೆದ್ದ ಮೇಲೆ ಕೂಡ ಅವರು ಹಿಂದಿ ಸಿನಿಮಾಗಳಲ್ಲಿ  ಬಹುದಿನಗಳ ವಿರಹದ ನಂತರ ಒಂದಾಗ ಪ್ರೇಮಿಗಳ ಹಾಗೆದಂಪತಿಯ ಹಾಗೆ ಸ್ಲೋ ಮೋಷನ್ನಿನಲ್ಲಿ ಬಂದು ಒಬ್ಬರನ್ನೊಬ್ಬರು ತಬ್ಬಲಿಲ್ಲ. ರಾಮ ಬೆಂಕಿಗೆ ಹಾರು ಅಂದ. ಸೀತೆ ಹಾರಿದಳು. ನನ್ನ ಹೆಂಡತಿ ಪರಿಶುದ್ಧೆ ಅಂದ. ಯಾವತ್ತೂ ರಾಮ ಸೀತೆಯನ್ನು ಸುಂದರಿ ಅನ್ನಲೇ ಇಲ್ಲ. ಕೊನೆಗೂ ಸೀತೆ ದೂರಾದ ನಂತರ ರಾಮ ಅವಳ ಸುವರ್ಣ ಪುತ್ಥಳಿ ಮಾಡಿಸಿಟ್ಟುಕೊಂಡಿದ್ದನಂತೆ. ರಾಮ ಪ್ರೀತಿಸುತ್ತಿದ್ದದ್ದು ಸೀತೆಯನ್ನೋ ಬಂಗಾರವನ್ನೋ ಅನುಮಾನ!
ಸುಮ್ಮನೆ ನೋಡುತ್ತಾ ಹೋಗಿ. ಪ್ರೇಮಿಗಳ ಪ್ರಸ್ತಾಪ ಬಂದಾಗೆಲ್ಲ ನಾವು ಲೈಲಾ ಮಜ್ನೂ ಅನ್ನುತ್ತೇವೆ. ರೋಮಿಯೋ ಜೂಲಿಯಟ್ ಅನ್ನುತ್ತೇವೆ. ಗ್ರೀಕ್ ಪ್ರೇಮದೇವತೆಯಾದ ವೀನಸ್ಸು ಇವತ್ತು ಭಾರತಕ್ಕೂ ಬಂದಿದ್ದಾನೆ. ಆದರೆ ನಮ್ಮ ಪುರಾಣಗಳಲ್ಲಿ ಪ್ರೇಮ ಪ್ರಕರಣಗಳೇ ಇಲ್ಲ. ಕೃಷ್ಣನನ್ನು ಅಪ್ಪಟ ಪ್ರೇಮಿ ಅನ್ನೋಣವೆಂದರೆ ಅದನ್ನು ಭಾರತದ ಅಸಂಖ್ಯಾತ ಗೃಹಿಣಿಯರು ಒಪ್ಪುವುದಿಲ್ಲ. ಅವರಿಗೆ ಗಂಡ ಶ್ರೀರಾಮಚಂದ್ರನ ಹಾಗಿರಬೇಕು. ಪ್ರೀತಿಸಬಾರದು,ಪೋಷಿಸಬೇಕು. ಪ್ರೇಮಿಸಬಾರದು ರಕ್ಷಿಸಬೇಕು. ಹೆಂಡತಿಯ ಸುವರ್ಣ ಪುತ್ಥಳಿ ಮಾಡಿ ಅದನ್ನು ಮನಸ್ಸಿನ ಮೂಲೆಯಲ್ಲಿ ಪ್ರತಿಷ್ಠಾಪಿಸಿ ದಿನಾ ಅದನ್ನೇ ನೋಡುತ್ತಾ ಕೂತಿರಬೇಕು. ಅಪ್ಪಿ ತಪ್ಪು ಕಣ್ಣು ಅತ್ತಿತ್ತ ಸುಳಿದಾಡಿದರೆ ಕಣ್ಣಿಗೆಲ್ಲಿ ಬಂಗಾರದ ಜಿಂಕೆ ಬಿದ್ದೀತೋ ಅನ್ನುವ ಭಯ.
ಪುರಾಣದ ಪುಟ ತೆರೆಯುತ್ತಾ ಹೋದರೆ ಅಲ್ಲಿ ಸಿಗುವ ಪ್ರೇಮಿಗಳೆಲ್ಲ ದುಷ್ಟರೇಖಳನಾಯಕರೇ. ಪ್ರೀತಿಗಾಗಿ ಹಂಬಲಿಸಿದ ರಾವಣಪ್ರೀತಿಗಾಗಿ ಕಾತರಿಸಿದ ಶಿಶುಪಾಲಸುಭದ್ರೆಯನ್ನು ಮೆಚ್ಚಿದ ದುರ್ಯೋಧನದ್ರೌಪತಿಯನ್ನು ಮೋಹಿಸಿದ ಕೀಚಕ- ಹೀಗೆ ಪ್ರೇಮಿಸಿದವರೆಲ್ಲ ಕೆಟ್ಟವರೇ. ಹಾಗಂತ ಮದುವೆಯಾದವರು ಪ್ರೇಮಿಸಿದ ಒಂದೇ ಒಂದು ಉದಾಹರಣೆಯೂ ಅಲ್ಲಿಲ್ಲ. ಅರ್ಜುನ ಮತ್ತು ದ್ರೌಪದಿಯ ಪ್ರಣಯ ಪ್ರಸಂಗದ ಒಂದು ಅಧ್ಯಾಯ ತೆಗೆದು ತೋರಿಸಿ ನೋಡೋಣ.
ಹಾಗಂತದುಷ್ಟರಷ್ಟೇ  ಪ್ರೇಮಿಸಬಲ್ಲರು ಅನ್ನುವ ತೀರ್ಮಾನಕ್ಕೇನೂ ಬರಬೇಕಾಗಿಲ್ಲ. ಸಜ್ಜನರ ಸಮಸ್ಯೆಯೆಂದರೆ ಅವರು ಪ್ರೇಮಿಸುವುದಕ್ಕೂ ಬಾರದಷ್ಟು ಸಜ್ಜನರು. ಪ್ರೀತಿ ಮಾಡುವುದೂ ಅವರ ಕಣ್ಣಿಗೆ ಅಪರಾಧವಾಗಿ ಕಾಣಿಸುತ್ತದೆ. ಭಾರತೀಯ ಸಂಸ್ಕೃತಿ ಗಂಡು ಮತ್ತು ಹೆಣ್ಣುದೀಪವಾರಿದ ನಂತರ ಶಯ್ಯಾಗೃಹದ ಕತ್ತಲಲ್ಲಿ ಮಾತ್ರ ಸೇರಬೇಕು ಅನ್ನುತ್ತದೆ. ರಜನೀಶ್ ಹೇಳುತ್ತಾರೆಪ್ರೀತಿ ಮಾಡುವುದೆಂದರೆ ಸಾಯುವುದು. ಸಾಯುವುದು ಅಂದರೆ ಕತ್ತಲು. ಆದ್ದರಿಂದ ಪ್ರೀತಿ ಮಾಡುವುದೂ ಕತ್ತಲಲ್ಲಿ ನಡೆಯಬೇಕು. ಕತ್ತಲಲ್ಲಿ ಪ್ರೇಮಿಸಿದಷ್ಟು ನಿರಾಳವಾಗಿ ನೀವು ಬೆಳಕಿನಲ್ಲಿ ಪ್ರೇಮಿಸಲಾರಿರಿ.
ಅದಕ್ಕೆ ವೈಜ್ಞಾನಿಕ ಕಾರಣಗಳೂ ಉಂಟಂತೆ. ಕತ್ತಲೆಂದರೆ ಅನೂಹ್ಯ. ಕತ್ತಲೆಂದರೆ ಕಲ್ಪನೆ. ಅಲ್ಲಿ ಜೊತೆಗಿರುವ ಸಂಗಾತಿ ಇನ್ಯಾರೋ ಆಗಿ ರೂಪುತಳೆಯುವ ಸಾಧ್ಯತೆಗಳೂ ಇರುತ್ತವೆ. ಇದನ್ನೆಲ್ಲ ಕೇಳುತ್ತಿದ್ದರೆ ವೈಜ್ಞಾನಿಕ ಅನ್ನುವ ಪದದ ಬಗ್ಗೆಯೇ ಅಸಹ್ಯ ಅನ್ನಿಸುತ್ತದೆ. ಕಾರಣಗಳು ಕೇಳುವುದು ಮತ್ತು ಕೊಡುವುದು ವಿಜ್ಞಾನ. ಕಾರಣವಿಲ್ಲದೆಯೇ ಪೊರೆಯುವುದು ಪ್ರಕೃತಿ. ಕಾರಣಗಳನ್ನು ತಿಳಿದುಕೊಳ್ಳುವುದರಿಂದ ನಿಜಕ್ಕೂ ಲಾಭವಿದೆಯಾ?

******

4ಪ್ರೀತಿ ನಮ್ಮನ್ನು ಮೆದುಗೊಳಿಸುತ್ತದೆಹದಗೊಳಿಸುತ್ತದೆ ಮತ್ತು ಮುದಗೊಳಿಸುತ್ತದೆ ಅನ್ನುತ್ತಾರೆ. ಅದಕ್ಕೇ ಪ್ರೀತಿಯೆಂಬುದು ವಾಂಛೆ ಮತ್ತು ಭಾವುಕತೆಯ ಅಪೂರ್ವ ಸಂಗಮದಂತಿದೆ. ಅಂತಿಮ ಉದ್ದೇಶದ ಅರಿವಿದ್ದೂ ಅದನ್ನು ನಗಣ್ಯ ಎಂಬಂತೆ ನಿರಾಕರಿಸಬಲ್ಲ ಶಕ್ತಿಯಿರುವುದು ಪ್ರೀತಿಗಷ್ಟೇ. ಆ ಅರ್ಥದಲ್ಲಿ ಪ್ರೀತಿಯೆಂಬುದು ನಮ್ಮ ಮೂಲಭೂತ ಆಸೆಗೆ ನಾವು ಕೊಟ್ಟುಕೊಂಡ ದಿವ್ಯವಾದ ಹೆಸರು.
ಪ್ರೀತಿಗೂ ಮದುವೆಗೆ ಸಂಬಂಧ ಯಾಕಿರಬೇಕುಪ್ರೀತಿ ಮದುವೆಯಾಗು ಅಂತ ಯಾವತ್ತಾದರೂ  ಹೇಳಿದೆಯಾಪ್ರತಿ ಪ್ರೀತಿಯೂ ಮದುವೆಯಲ್ಲೇ ಕೊನೆಗೊಳ್ಳುತ್ತದೆಕೊನೆಗೊಳ್ಳಬೇಕು ಅನ್ನುವುದಾದರೆ ನಮ್ಮ ಪ್ರೀತಿ ಅಷ್ಟು ಸಂಕುಚಿತವಾಒಂದು ಉದಾಹರಣೆ ತಗೊಳ್ಳಿಕೃಷ್ಣಾನಂದ ಎಂಬ ಹುಡುಗ ನಂದಿನಿ ಎಂಬ ಹುಡುಗಿಯನ್ನು ಪ್ರೀತಿಸುತ್ತಾನೆ ಅಂತಿಟ್ಟುಕೊಳ್ಳೋಣ. ಇಲ್ಲಿ ಪ್ರೀತಿಸುತ್ತಾನೆ ಅನ್ನುವ ಪದದ ಅರ್ಥ ಎಷ್ಟು ವಿಸ್ತಾರವಾಗಿದೆ ನೋಡಿ. ಪ್ರೀತಿಸುತ್ತಾನೆ ಅಂತ ಗೊತ್ತಾದ ತಕ್ಷಣ ಕೃಷ್ಣಾನಂದ ಮತ್ತು ನಂದಿನಿ ಒಂದೇ ಜಾತಿಯಾ ಅನ್ನುವ ಪ್ರಶ್ನೆ ಮೂಡುತ್ತದೆ. ಅವರಿಬ್ಬರ ಅಂತಸ್ತಿನ ಪ್ರಶ್ನೆ ಬರುತ್ತದೆ. ಆಮೇಲೆ ಅವರಿಬ್ಬರೂ ಮದುವೆಯಾಗುತ್ತಾರಾ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಮದುವೆಯಾಗುವುದು ನಿಜ ಅಂತ ಗೊತ್ತಾದ ತಕ್ಷಣ ಅವರಿಬ್ಬರ ಪ್ರೀತಿಸುವ ಸ್ವಾತಂತ್ರ್ಯ ನಶಿಸುತ್ತದೆ. ಆಮೇಲೆ ಕೃಷ್ಣಾನಂದ ಮತ್ತು ನಂದಿನಿ ಪರಸ್ಪರರನ್ನು ಬಿಟ್ಟು ಬೇರೆ ಯಾರನ್ನೂ ಪ್ರೀತಿಸುವಂತಿಲ್ಲ. ಒಂದು ವೇಳೆ ಪ್ರೀತಿಸಿದರೆ ಅದು ಅಪರಾಧಅನೀತಿಅನ್ಯಾಯ. ಪ್ರೀತಿಯೇ ಪ್ರೀತಿಸುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ವೈಚಿತ್ರ್ಯಕ್ಕಿದು ಉದಾಹರಣೆ.
ಹಾಗಿದ್ದರೆ ಪ್ರೀತಿ ಅಂದರೇನುಅದು ಬಿಡುಗಡೆಯಾ ಬಂಧನವಾಮಿತಿಯಾ ಮಿತಿಯಿಲ್ಲದ ಸ್ಥಿತಿಯಾಯಾಕೆ ಎರಡನೆಯ ಸಲ ಪ್ರೀತಿಸುವ ಹೊತ್ತಿಗೆ ಅಪರಾಧಿ ಪ್ರಜ್ಞೆ ಕಾಡುತ್ತದೆಮೊದಲನೆಯ ಸಲ ಪ್ರೀತಿಸುವಾಗ ಭಯ ಕಾಡುತ್ತದೆ. ಪ್ರೀತ್ಸೋದ್ ತಪ್ಪಾ?
ಪ್ರೀತಿಯ ಉತ್ಕಟ ಸ್ಥಿತಿ ಭಕ್ತಿ. ಭಕ್ತಿಯ ಉತ್ಕಟ ಸ್ಥಿತಿ ಸಾಯುಜ್ಯ. ಸಾಯುಜ್ಯ ಅಂದರೆ ಮೋಕ್ಷ. ಮೋಕ್ಷವೆಂದರೆ
ಬಿಡುಗಡೆ. ಪ್ರೀತಿ ಹೀಗೆ ನಿರಾಕಾರದತ್ತ ತಿರುಗಿದಾಗ ಬಿಡುಗಡೆ. ಆಕಾರದತ್ತ ತಿರುಗಿದರೆ ಬಂಧನ.
ಭಕ್ತಿಯ ಒಂಬತ್ತು ವಿಧಾನಗಳನ್ನು ನೋಡಿ. ಪ್ರೀತಿಗೂ ಭಕ್ತಿಗೂ ಎಂಥ ಹತ್ತಿರದ ಸಂಬಂಧ ಅನ್ನುವುದು ಹೊಳೆಯುತ್ತದೆ. ಶ್ರವಣಕೀರ್ತನಸ್ಮರಣ,ಪಾದಸೇವನಅರ್ಚನವಂದನದಾಸ್ಯಸಖ್ಯಆತ್ಮನಿವೇದನಾ ಎಂಬ ನವವಿಧ ಭಕ್ತಿಯ ಬಗ್ಗೆ ದಾಸರು ಹಾಡಿದ್ದಾರೆ. ದೇವದಾಸರದೂ ಹೆಚ್ಚೂ ಕಮ್ಮಿ ಇದೇ ಸ್ಥಿತಿ. ಶ್ರವಣ ಅಂದರೆ ಅವಳ ಬಗ್ಗೆ ಕೇಳುವುದುಕೀರ್ತನ ಅಂದರೆ ಅವಳನ್ನು ಹೊಗಳುವುದುಸ್ಮರಣ ಅಂದರೆ ಅವಳ ಬಗ್ಗೆ ಚಿಂತಿಸುವುದು. ಪಾದಸೇವನ ಅಂದರೆ ಅವಳ ಸೇವೆ ಮಾಡುವುದುಅರ್ಚನ ಅಂದರೆ ಅವಳನ್ನು ಪೂಜಿಸುವುದು.. ಸ್ಥಿತಿ ಹೀಗೆ ಮುಂದುವರಿಯುತ್ತದೆ. ದಾಸ್ಯದಿಂದ ಸಖ್ಯವೂ ಸಖ್ಯದಿಂದ ಆತ್ಮನಿವೇದನೆಯೂ ಲಭಿಸುತ್ತದೆ. ಮುಂದೇನಾಗುತ್ತದೆ ಅನ್ನುವುದು ಅವರವರ ಭಾವಕ್ಕೆ ಬಿಟ್ಟದ್ದು.

*******

ಹುಷಾರು.
ಪ್ರೀತಿ ಅನ್ನುವುದು ಕೂಡ ಅತ್ಯಂತ ಕಮರ್ಷಿಯಲ್. ಇವತ್ತು ಜಗತ್ತಿನಲ್ಲಿ ತಯಾರಾಗುವ ಎಲ್ಲಾ ಸಿನಿಮಾಗಳ ವಸ್ತುವೂ ಪ್ರೀತಿ. ಪ್ರೀತಿಯ ಕುರಿತ ಕತೆ,ಕಾದಂಬರಿಸಿನಿಮಾ ಸಂಪಾದಿಸಿದಷ್ಟು ದುಡ್ಡನ್ನು ಯಾವ ಕಥಾವಸ್ತುವೂ ಸಂಪಾದಿಸಿಲ್ಲ. ಯಾವ ಉದ್ಯಮವೂ ಸಂಪಾದಿಸಿಲ್ಲ.
ಅಷ್ಟೇ ಅಲ್ಲಮತ್ತೊಂದು ಕಾರಣಕ್ಕೂ ಪ್ರೀತಿ ಕಮರ್ಷಿಯಲ್ಲು. ಪ್ರೀತಿಸುತ್ತಲೇ ಇರುವ ಹುಡುಗಿಗೆ ಹುಡುಗನ ಆಸ್ತಿಯಲ್ಲಿ ಪಾಲಿಲ್ಲ. ಅದೇ ಮದುವೆಯಾದರೆ ಆಸ್ತಿ ಆಕೆಯದು. ಆದ್ದರಿಂದ ಪ್ರೀತಿಸಿದವರು ಮದುವೆ ಆಗಲೇಬೇಕು. ಮದುವೆ ಆದ ಮೇಲೆ ಯಥಾಪ್ರಕಾರಆಸ್ತಿಸಂಪತ್ತುಮನೆಮಕ್ಕಳುಸಂಸಾರ,ಸ್ವಾರ್ಥ ಎಲ್ಲವೂ ಶುರುವಾಗುತ್ತದೆ. ಜಗತ್ತಿನ ಎಲ್ಲಾ ಜಗಳಗಳಿಗೂ ಕೌಟುಂಬಿಕ ಕಲಹಗಳಿಗೂ ಪ್ರೀತಿಯೇ ಮೂಲ.
ಅಷ್ಟೇ ಅಲ್ಲಪ್ರೀತಿ ತೀರಾ ಸಂಕುಚಿತ. ಒಬ್ಬರನ್ನಲ್ಲದೆ ಇನ್ನೊಬ್ಬರನ್ನು ಪ್ರೀತಿಸಿದರೆ ಅಲ್ಲಿ ಹಾಹಾಕಾರ. ಇಬ್ಬರನ್ನು ಮದುವೆಯಾಗುತ್ತೇನೆ ಅಂದರೆ ರಣರಂಗ. ಮದುವೆಯಾದರೆ ಜಗತ್ತೇ ಮುಳುಗಿ ಹೋದಂತೆಆಕಾಶವೇ ಕಳಚಿ ಬಿದ್ದಂತೆ ಗಾಬರಿಗಲಭೆಕುರುಕ್ಷೇತ್ರ. ಮೊದಲ ಹೆಂಡತಿನಂತರ ಬಂದವಳನ್ನೇಕೆ ಪ್ರೀತಿಸಬಾರದು. ಇಬ್ಬರೂ ಒಬ್ಬರನ್ನೇ ಯಾಕೆ ಮೆಚ್ಚಬಾರದು. ಇಬ್ಬರಿಗೂ ಬದನೆಕಾಯಿ ಎಣ್ಣೆಗಾಯಿ ಇಷ್ಟವಾದರೆಒಬ್ಬನೇ ಹುಡುಗನನ್ನು ಯಾಕೆ ಪ್ರೀತಿಸುವಂತಿಲ್ಲ.
ಅಲ್ಲಿ ಮತ್ತೆ ಆಸ್ತಿಪಾಸ್ತಿಯ ಪ್ರಶ್ನೆ ಬರುತ್ತದೆ. ಹಂಚಿಕೆಯ ಮಾತು ಬರುತ್ತದೆ. ಲೆಕ್ಕಾಚಾರ ಶುರುವಾಗುತ್ತದೆ. ಪ್ರೀತಿ ಯಾವ ಹಂತದಲ್ಲಿ ಪ್ರೀತಿಯ ಗುಣಗಳನ್ನು ಕಳೆದುಕೊಂಡು ಲೆಕ್ಕಾಚಾರ ಆಗುತ್ತದೆ ಅಂತ ಹೇಳೋದು ಕಷ್ಟ.
ಪ್ರೀತಿಸುವುದು ಅಭ್ಯಾಸ ಆಗಿಬಿಟ್ಟರೆ ಮತ್ತೂ ಅಪಾಯ. ಅಭ್ಯಾಸ ಆಗದಿದ್ದರೂ ಅಪಾಯ. ಪ್ರೀತಿಯನ್ನು ಅಂತಸ್ಪೂರ್ತಿ ಅಂದರೂ ತಪ್ಪುಮೂಲಗುಣ ಅನ್ನುವುದೂ ತಪ್ಪು. ಪ್ರೀತಿ ಹಸಿವೆಯ ಹಾಗೆಆಗುತ್ತದೆ. ನೋವಿನ ಹಾಗೆನೋಯುತ್ತದೆ. ಅಜೀರ್ಣದ ಹಾಗೆಅತಿಯಾದರೆ ತೊಂದರೆ ಮಾಡುತ್ತದೆ. ಬೆಳಕಿನ ಹಾಗೆಕಡಿಮೆಯಿದ್ದರೂ ಕತ್ತಲೆಅತಿಯಾದರೂ ಕಣ್ಣುಕುಕ್ಕಿ ಕತ್ತಲೆ.
ಹಾಗಿದ್ದರೆ ಎಂಥ ಪ್ರೀತಿ ಒಳ್ಳೇದು?
ಜ್ವರದಂಥ ಪ್ರೀತಿ! ಬರಬೇಕುಬೆವರಿದಾಗ ಹೋಗಿಬಿಡಬೇಕು.
 

‍ಲೇಖಕರು avadhi

April 26, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

 1. hmd

  ರಾಮನನ್ನು ಹಂಗಿಸಿದರೆ ಪ್ರೀತಿ ಸತ್ಯವಾಗಿ ಬಿಡುತ್ತದೆಯೇ? ಹೋಗಲಿ ಬಿಡಿ, ಒಬ್ಬನೇ ಹುಡುಗ ಇಬ್ಬರು ಹೆಂಡಿರನ್ನು ಪ್ರೀತಿಸುವಂತೆ, ಒಬ್ಬಳು ಇಬ್ಬರು ಗಂಡಂದಿರನ್ನು ಯಾಕೆ ಹೊಂದಬಾರದು? ನಂತರ ಬಂದ ಗಂಡ ಮೊದಲ ಗಂಡನನ್ನು ಪ್ರೀತಿಸಬಹುದಲ್ಲವೇ? ಇದು ಸುಮ್ಮನೆ ನನ್ನ ಅನುಮಾನ ಅಷ್ಟೆ. ತಿಳಿದವರು ತಿಳಿ ಹೇಳಬಹುದು.
  ರಮೇಶ್‌ ಮಂಜೇಶ್ವರ್‌

  ಪ್ರತಿಕ್ರಿಯೆ
 2. Srikanth

  ಏನೇ ಬರೆದರೂ “ವಾಹ್” ಎನಿ್ನಸಿಕೊಂಡು ಅದರಿಂದ ಬರುವ ಮತ್ತಿನಿಂದ ಬರೆದ ಹಾಗಿದೆ ಈ ಬರಹ! ಲಘುಹಾಸ್ಯದ ಹೆಸರಿನಲಿ್ಲ ಇದನ್ನು ಬರೆದಿದ್ದೀರಿ, ನಿಜ — ಆದರೆ ಖಂಡಿತಾ ಯೋಚನೆ ಮಾಡಿ ಬರೆದಂತಿಲ್ಲ ಇದನ್ನು. ನಿಮ್ಮ ಬರವಣಿಗೆಯನ್ನು ಮೆಚ್ಚುವವರಲ್ಲಿ ನಾನೂ ಒಬ್ಬ. ನಿಮ್ಮ “ಜಾನಕಿ ಕಾಲಂ”-ಅನ್ನು ಕೊಂಡು, ಅಮೇರಿಕಾಗೆ ತರಿಸಿಕೊಂಡು ಓದುವಷ್ಟು ಅಭಿಮಾನಿ ಕೂಡಾ! ಆದರೆ ಪ್ರೀತಿಯ ಬಗ್ಗೆ ಹೀಗೆ ಉಡಾಫೆಯಿಂದ ಬರೆದದ್ದನ್ನು ಮೆಚ್ಚಲಾರೆ. ಯಾರನ್ನೂ ಮೆಚ್ಚಿಸಲು ನೀವು ಬರೆದಿಲ್ಲ ಸರಿ. ಆದರೂ….
  ಮೊದಲನೆಯದಾಗಿ, “ಎಂಥ ಪ್ರೀತಿ ಒಳ್ಳೇದು? ಜ್ವರದಂಥ ಪ್ರೀತಿ! ಬರಬೇಕು, ಬೆವರಿದಾಗ ಹೋಗಿಬಿಡಬೇಕು” ಅನ್ನುವ ಮಾತು ಪ್ರೀತಿಗಲ್ಲ ಸ್ವಾಮಿ, ಕಾಮಕ್ಕೆ ಸರಿಹೊಂದುವ ಮಾತು!
  ರಾಮ ಸೀತೆಯನ್ನು ಪ್ರೀತಿಸುತ್ತಿದ್ದನೋ ಇಲ್ಲವೋ ಗೊತ್ತಿಲ್ಲ, ಆದರೆ ನಮ್ಮ ಪುರಾಣಗಳಲ್ಲಿ ಪ್ರೀತಿಗೆ ಪ್ರತೀಕಗಳೇ ಇಲ್ಲ ಅನ್ನುವುದು ನಿಮ್ಮ ಬರಹದ ಸಮರ್ಥನೆಗೋಸ್ಕರ ನೀವು ಸಲೀಸಾಗಿ ಹೇಳಿಕೊಂಡ ಸುಳ್ಳು. ನೀವೇ ಹಿಂದೊಮ್ಮೆ ಹೇಳಿದಂತೆ ಸತ್ಯವಾನನನ್ನು ಬದುಕಿಸಿಕೊಳ್ಳುವುದು ಸಾವಿತ್ರಿಗೆ ಕರ್ತವ್ಯವಾಗಿರಲಿಲ್ಲ. “ಗೆಲುವಿನ ಬಗ್ಗೆಯೇ ನಂಬಿಕೆಯಿಲ್ಲದೆ ಆರಂಭವಾದ ಪರಿಣಾಮದ ಸ್ಪಷ್ಟ ಕಲ್ಪನೆಯಿಲ್ಲದ ಹೋರಾಟ” ಪ್ರೀತಿಯ ಒಂದು ಆಯಾಮವೇ ಅಲ್ಲವೆ? ಅಪ್ಪಟ ಪ್ರೀತಿಯ ಉದಾಹರಣೆಗಳಿಗೆ ಭಾರತೀಯ ಇತಿಹಾಸದಲ್ಲಾಗಲೀ ಪುರಾಣಗಳಲ್ಲಾಗಲೀ ಕೊರತೆಯಿಲ್ಲ ಅನ್ನೋದು ಚೆನ್ನಾಗಿ ಓದಿಕೊಂಡಿರುವ ನಿಮಗೂ ಗೊತ್ತು. ಭಾರತೀಯ ವೈಶಿಷ್ಟ್ಯ ಇರೋದು ಪ್ರೀತಿಯ ಜೊತೆಗೆ ಬರುವ ಕರ್ತವ್ಯ ನಿಭಾಯಿಸುವುದರಲ್ಲಿ.
  “ಭಾರತದ ಅಸಂಖ್ಯಾತ ಗೃಹಿಣಿಯರಿಗೆ ಗಂಡ ಶ್ರೀರಾಮಚಂದ್ರನ ಹಾಗಿರಬೇಕು. ಪ್ರೀತಿಸಬಾರದು,ಪೋಷಿಸಬೇಕು. ಪ್ರೇಮಿಸಬಾರದು ರಕ್ಷಿಸಬೇಕು” ಅನ್ನೋ ಮಾತು ಸುಳ್ಳು. ಯಾವ ಹೆಣ್ಣನ್ನೇ ಕೇಳಿನೋಡಿ. ಪೋಷಿಸುವುದು ಗಂಡನ ಸ್ಥಾನದ್ದು, ಪ್ರೀತಿಸುವುದು ಪ್ರೇಮಿಯ ಸ್ಥಾನದ್ದು. ಪ್ರತಿಯೊಬ್ಬ ಹೆಣ್ಣೂ ತನ್ನ ಗಂಡನಿಂದ ಇವೆರಡನ್ನೂ ಬಯಸುತ್ತಾಳೆ. ಎರಡರಲ್ಲಿ ಒಂದು ಮಾತ್ರ ಸಿಗುವುದು ಅವಳ ದುರ್ದೈವವಷ್ಟೇ ಹೊರತು ಅವಳ ಬಯಕೆಯಲ್ಲ ಅದು!
  ನಿಮ್ಮ ಕೃಷ್ಣಾನಂದ ಮತ್ತು ನಂದಿನಿ ಪರಸ್ಪರರನ್ನು ಪ್ರೀತಿಸಿದರೆ ಬೇರೆಯವರನ್ನು ಪ್ರೀತಿಸುವ ಪ್ರಮೇಯವಾದರೂ ಏಕೆ? ಮತ್ತೊಬ್ಬರನ್ನೂ ಪ್ರೀತಿಸಬೇಕು ಅಂತ ಅವರಿಗನ್ನಿಸಿದರೆ ಅವರ ನಡುವಣ ಪ್ರೀತಿ ಪರಿಪೂರ್ಣ ಅಲ್ಲವೆಂದ ಹಾಗಾಯ್ತು! ಸಂಪೂರ್ಣವಾಗಿ ಪ್ರೀತಿಸುವ ಸಂಗಾತಿ ಇದ್ದಾಗಲೂ ಮತ್ತೊಬ್ಬರನ್ನು ಪ್ರೀತಿಸಬೇಕು ಅನ್ನಿಸಿದರೆ ಅದು ವಿಷಯಲಂಪಟತನವೇ ಆಗಿರಬೇಕು. ಅಥವಾ ಅವನಾಗಲೀ, ಅವಳಾಗಲೀ ಬಯಸುವುದು ಪ್ರೀತಿಯನ್ನಲ್ಲ, ಹೊಸ ಪ್ರೀತಿ ಕೊಡುವ ಥ್ರಿಲ್-ಅನ್ನು ಮಾತ್ರ! ತನ್ನ ಪ್ರೀತಿಯನ್ನೆಲ್ಲಾ ಸಂಪೂರ್ಣವಾಗಿ ಒಬ್ಬ ವ್ಯಕ್ತಿಯಲ್ಲಿ ಕೇಂದ್ರೀಕೃತಗೊಳಿಸಬಲ್ಲ ಅದೃಷ್ಟ ಬಂದಾಗ ಅದು ಬಂಧನವಲ್ಲ, ಮತ್ಯಾರನ್ನೂ ಪ್ರೀತಿಸುವ ಪ್ರಮೇಯ ಇಲ್ಲದ ಸ್ವಾತಂತ್ರ್ಯ ಆಗತ್ತೆ. ಯಾವುದೇ ಮಿತಿಯಿಲ್ಲದ, ಭಯವಿಲ್ಲದ ಉತ್ಕಟ ಸ್ಥಿತಿ ಅದು.
  ಪ್ರೀತಿ ಅಜೀರ್ಣದ ಹಾಗೇನಲ್ಲ, ಅತಿಯೆನ್ನುವ ಮಾತೇ ಅದರಲ್ಲಿಲ್ಲ. ಅದರಲ್ಲಿರುವುದು ಎರಡೇ ಸ್ಥಿತಿ: ಪರಿಪೂರ್ಣ ಮತ್ತು ಅಪರಿಪೂರ್ಣ. ತೊಂದರೆಯಾಗುವುದು ಪ್ರೀತಿಯಿಂದಲ್ಲ, ಅದನ್ನು ಹಕ್ಕಾಗಿ ಮಾರ್ಪಡಿಸಹೊರಟಾಗ. ದಾಂಪತ್ಯ ಒಂದು ಬಂಧನವಾಗುವುದು ಪ್ರೀತಿಯ ತಪ್ಪಲ್ಲ, ಪ್ರೀತಿಯನ್ನು ಮರೆಯುವ ದಂಪತಿಗಳದ್ದು.

  ಪ್ರತಿಕ್ರಿಯೆ
 3. santhosh

  “ಪ್ರೀತಿಸುವುದು ಅಭ್ಯಾಸ ಆಗಿಬಿಟ್ಟರೆ ಮತ್ತೂ ಅಪಾಯ. ಅಭ್ಯಾಸ ಆಗದಿದ್ದರೂ ಅಪಾಯ. ಪ್ರೀತಿಯನ್ನು ಅಂತಸ್ಪೂರ್ತಿ ಅಂದರೂ ತಪ್ಪು, ಮೂಲಗುಣ ಅನ್ನುವುದೂ ತಪ್ಪು. ಪ್ರೀತಿ ಹಸಿವೆಯ ಹಾಗೆ; ಆಗುತ್ತದೆ. ನೋವಿನ ಹಾಗೆ; ನೋಯುತ್ತದೆ. ಅಜೀರ್ಣದ ಹಾಗೆ; ಅತಿಯಾದರೆ ತೊಂದರೆ ಮಾಡುತ್ತದೆ. ಬೆಳಕಿನ ಹಾಗೆ; ಕಡಿಮೆಯಿದ್ದರೂ ಕತ್ತಲೆ, ಅತಿಯಾದರೂ ಕಣ್ಣುಕುಕ್ಕಿ ಕತ್ತಲೆ.
  ಜ್ವರದಂಥ ಪ್ರೀತಿ! ಬರಬೇಕು, ಬೆವರಿದಾಗ ಹೋಗಿಬಿಡಬೇಕು.”
  —- wonderful….what an insight…! as usual pakka Jogi’s Punch…good one Sir, Keep rocking…
  -Santhosh Ananthapura

  ಪ್ರತಿಕ್ರಿಯೆ
 4. preethi

  nanna magaLu preethiyalli biddiddaaLe dactor,
  bevaralikke ondu injection kodi please.

  ಪ್ರತಿಕ್ರಿಯೆ
 5. ಜೋಗಿ

  ಒಂದು ಮಾರೋಲೆ:
  ಈ ಅಂಕಣದಲ್ಲಿ ಬರೆದ ಸಾಲು: ಜ್ವರದಂಥ ಪ್ರೀತಿ! ಬರಬೇಕು, ಬೆವರಿದಾಗ ಹೋಗಿಬಿಡಬೇಕು.ಅನ್ನುವ ಸಾಲಿನ ಬಗ್ಗೆ ಆಕ್ಷೇಪ, ಅಸಮಾಧಾನ, ಟೀಕೆ, ವಿರೋಧ ಮತ್ತು ಮೆಚ್ಚುಗೆ ಬಂದಿದೆ. ಫೋನ್ ಮಾಡಿದವರಿಗೆ ನಾನೇ ನನ್ನ ಆಶಯ ಏನಿತ್ತೆಂದು ವಿವರಿಸಿದ್ದೇನೆ. ಅಲ್ಲಿ ನಾನು ಹೇಳಲಿಚ್ಚಿಸಿದ್ದು ಇಷ್ಟೇ: ಪ್ರೀತಿ ನಮ್ಮ ಮೈಬಿಸಿಯಂತೆ. ಸದಾ ಇರುತ್ತದೆ ನಮ್ಮೊಳಗೆ. ಒಂದು ವಯಸ್ಸಿನಲ್ಲಿ, ಒಂದು ಕಾಲಘಟ್ಟದಲ್ಲಿ ಆ ಬಿಸಿ ಏರಿ ಜ್ವರದಂತೆ ನಮ್ಮನ್ನು ಕಾಡುತ್ತದೆ. ಆಮೇಲೆ ಅದು ಬೆವರಿ ಬೆವರಿ ಜ್ವರ ಕಡಿಮೆ ಆಗುವ ಹಾಗೆ ಮತ್ತೆ ಯಥಾಸ್ಥಿತಿಗೆ ಬರುತ್ತದೆ. ಜ್ವರದಂಥ ಪ್ರೀತಿ ಜೀವನಪೂರ್ತಿ ಇದ್ದರೆ ವ್ಯಾನ್ ಗಾಗ್ ಥರ ಆಗುತ್ತೇವೆ. ಯೇಟ್ಸ್ ಥರ ಪ್ರೀತಿಸಂತರಾಗುತ್ತೇವೆ. ಬೋಧಿಲೇರ್ ಥರ ಅತಿರೇಕಕ್ಕೆ ಏರುತ್ತೇವೆ. ಅಂಥ ಶಕ್ತಿ ನಮಗೆ ಖಂಡಿತಾ ಇಲ್ಲ. ನಮ್ಮದು ನಾರ್ಮಲ್ ಬಾಡಿ ಟೆಂಪರೇಚರ್; ೯೮.೬ ಡಿಗ್ರಿ ಫ್ಯಾರನ್‌ಹೀಟ್. ಯೌವನದ ಉತ್ಕಟತೆಯಲ್ಲಿ ಅದು ೧೦೩ ಡಿಗ್ರಿಗೆ ಏರಬಹುದು ಅಷ್ಟೇ. ಜ್ವರ ಇಳಿದಾಗ ಮತ್ತೆ ನಾರ್ಮಲ್ ಆಗುತ್ತೇವೆ.
  ಅಷ್ಟೇ.
  ಕೆ ಎಸ್ ನ ಬರೆಯುತ್ತಾರೆ- ನಿನ್ನಿಂದ ನಾನೆಂದು ಕಾಮದಲಿ ಕನವರಿಸಿ
  ಕಣ್ಣಚುಂಬಿಸಿ ಕೆನ್ನೆಕೆನ್ನೆಯೊತ್ತಿ
  ನಳಿನಾಕ್ಷಿ ನೀನೆಂದು ಚಪಲತೆಯೇ ನಾನಾಗಿ
  ಅಧರಾಮೃತದ ಮಧುರ ಪಾನ ಬಯಸಿ.
  – ನಂತರ ನಂತರದಲ್ಲಿ ಇದು ಬದಲಾಗಿ ತಿಳಿಗೊಂಡು ಕನವರಿಕೆ ಕಡಿಮೆಯಾಗಿ
  ಮಿಂಚಿಳಿದರೇನಂತೆ ತಾರೆಯಿದೆ ತುಂಬ ದೂರ ಎನ್ನುತ್ತಾರೆ.
  ಅದನ್ನೇ ನಾನು ಹೇಳಹೊರಟದ್ದು. ನೂರು ಮಿಂಚು ಒಂದು ತಾರೆ.

  ಪ್ರತಿಕ್ರಿಯೆ
 6. manjunath chand

  jogi ellavannu qoute maadi chennagi
  bareyuttare embudakke namma munde aneka
  saakshigalive bidi, naa helodadre preeti
  annodu modala male bidda nelada gamatu,
  gaaredda nelakke male biddaga moogige adaruva
  mannu-male militada vaasane pratiyondu
  jeeviyannu kaaduttade. aadre adara
  madhuranubhooti, gandha teedidanta anubhava,
  bhava sampannate, jeevadolage aaguva
  pulakavannu eshtu jana anubhavisalu saadhya?
  Haagage preeti ellarige dakkuvadilla, maduveya
  gantige sikka halavarige, kattalalli
  biddukondavarigoo, tili tili belakanalli
  mindavarigooo, hani hani maleyalli
  nenedavarigoo sikkuvadilla… alwa?
  chand

  ಪ್ರತಿಕ್ರಿಯೆ
 7. vimala.ks

  love is love.do not relate with lust.yes it is ಹರಿಯೊ ನದಿ need not relate it to family relationship
  vimmi

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: