ಜೋಗಿ ಬರೆದಿದ್ದಾರೆ: ತಿನ್ನಬೇಕು,ತಿಂತಿರಬೇಕು,ಥಿನ್ನಾಗಬೇಕು!


ವೈಯೆನ್ಕೆ ಊಟ ತಿಂಡಿ ಹೀಗಿತ್ತು:
ಬೆಳಗ್ಗೆ ಶಂಕರಪುರಂನ ರಾಧಾಕೃಷ್ಣ ಅಡಿಗರ ಹೊಟೆಲಿನಲ್ಲಿ ಒಂದು ಇಡ್ಲಿ, ಬೆಣ್ಣೆ. ಭಾನುವಾರ ಆ ಹೊಟೆಲ್ಲಿಗೆ ರಜಾ ಆದ್ದರಿಂದ ವಿವಿಪುರಂನ ಜನತಾದಲ್ಲೋ, ಗಾಂಧೀಬಜಾರಿನ ವಿದ್ಯಾರ್ಥಿ ಭವನದಲ್ಲೋ ಅರ್ಧ ಮಸಾಲೆದೋಸೆ. ಮಿನಿ ಎಂಟಿಆರ್ ಅಂತಲೇ ಪ್ರಸಿದ್ಧವಾಗಿರೋ ಮಹಾಲಕ್ಷ್ಮಿ ಟಿಫಿನ್‌ರೂಮಿನಲ್ಲಿ ಕಾಫಿ, ಮಧ್ಯಾಹ್ನಕ್ಕೆ ಮೂರು ಬಾದಾಮಿ, ಎರಡು ಗೋಡಂಬಿ ಮತ್ತು ಒಂದಿಷ್ಟು ಒಣದ್ರಾಕ್ಷಿ, ಒಂದು ಗ್ಲಾಸು ಸಕ್ಕರೆ ಹಾಕದ ಕಾಂಪ್ಲಾನು, ಸಂಜೆ ಏಳಕ್ಕೆ ಸರಿಯಾಗಿ ಮೂರು ಪೆಗ್ಗು ಸ್ಕಾಚ್ ವಿಸ್ಕಿ, ನೆಂಚಿಕೊಳ್ಳಲು ಮನೆಯಲ್ಲಿದ್ದರೆ ಚೀಸು ಮತ್ತು ಬ್ರಾಹ್ಮಿನ್ಸ್ ಬೇಕರಿಯ ಕಾಂಗ್ರೆಸ್ ಕಡ್ಲೆ ಬೀಜ,ಹೊರಗಿದ್ದರೆ ತರಕಾರಿ, ಕಡ್ಲೆಬೀಜ,  ಗುಂಡು ಹಾಕುವಾಗ ಎರಡೋ ಮೂರೋ ಸಿಗರೇಟು. ಸಿಟ್ಟಿಗೆದ್ದರೆ ಏಳೋ ಎಂಟೋ ಸಿಗರೇಟು ಮತ್ತು ಮತ್ತೊಂದು ಪೆಗ್ ವಿಸ್ಕಿ. ರಾತ್ರಿ ಹತ್ತುಗಂಟೆಗೆ ಮನೆಯಲ್ಲಿ ಭೂರಿಬೋಜನ. ಊಟ ಮುಗಿಸಿದ ನಂತರ ಗಾಢನಿದ್ದೆ.

ಇದನ್ನು ಹೇಳುತ್ತಿದ್ದಂತೆ ಉದಯ ಮರಕಿಣಿ ತಮಗೆ ಗೊತ್ತಿರುವ ಮಲಯಾಳಿಯೊಬ್ಬನ ಉದಾಹರಣೆ ಕೊಟ್ಟರು: ಆ ಮನುಷ್ಯ ಏನೂ ತಿನ್ನೋಲ್ಲ. ಬರೀ ಮೀನು ಮತ್ತು ರಮ್ಮು. ದಿನಕ್ಕೆ ಅರ್ಧ ಬಾಟಲ್ ರಮ್ ಕುಡೀತಾನೆ ಮತ್ತು ಹುರಿದ ಮೀನು ತಿನ್ನುತ್ತಾನೆ.
ಮತ್ತೊಂದು ದಿನ  ಮಾತಿಗೆ ಕುಳಿತಾಗ ಸೂರಿ ಹೇಳಿದ್ದರು: ಚಿಕನ್ ಡಯಟ್ ಅಂತ ಒಂದಿದೆ. ಅದರಲ್ಲಿ ಬರೀ ಚಿಕನ್ ತಿನ್ನಬೇಕು. ಅನ್ನ, ಚಪಾತಿ ಮುಟ್ಟೋ ಹಾಗೇ ಇಲ್ಲ. ಮೂರು ಹೊತ್ತೂ ಚಿಕನ್. ಅದರಲ್ಲಿ ಪ್ರೊಟೀಸ್ ಜಾಸ್ತಿ ಇರುತ್ತೆ. ಮಸಲ್ ಬೆಳೆಯುತ್ತೆ.
ನಾನು ದಿನಕ್ಕೆ ಎರಡು ಸಾರಿ ಮಜ್ಜಿಗೆ ಕುಡೀತೀನಿ. ಬೆಳಗ್ಗೆ ಎದ್ದು ಒಂದು ಗ್ಲಾಸ್ ಹಾಲು ಕುಡಿದು ವಾಕಿಂಗ್ ಹೊರಡುತ್ತೇನೆ. ಬಂದ ನಂತರ ಆರು ಗ್ಲಾಸು ನೀರು. ನಂತರ ಮೂರು ಇಡ್ಲಿ, ಮಧ್ಯಾಹ್ನ ತರಕಾರಿ. ಆಮೇಲೆ ಮಜ್ಜಿಗೆ, ರಾತ್ರಿ ಬರೀ ಮಜ್ಜಿಗೆ ಎಂದು ನನಗೆ ಗೊತ್ತಿರುವ ದಢೂತಿ ಸೇಟ್‌ಜಿ ಹೇಳಿದ್ದ. ಅವನ ಆಕಾರ ನೋಡಿದರೆ, ಅದು ಕರಗುವುದಕ್ಕೆ ಏನಿಲ್ಲವೆಂದರೂ ೧೩೦೦ ವರ್ಷಗಳಾದರೂ ಬೇಕು ಅನ್ನಿಸುವಂತಿತ್ತು.
ಥು..ಥು..ಥೂ.. ನೀವೆಲ್ಲ ಹಂದಿ ಥರ ಬೆಳ್ಕೊಂಡಿರೋದಕ್ಕೆ ಕಾರಣ ತಿನ್ನೋದು ಮಾತ್ರ ಅಲ್ಲ. ಒತ್ತಡ ಕಣ್ರೀ, ನಾನು ನೋಡಿ ಪಟ್ಟಾಗಿ ಹೊಡಿತೀನಿ, ಕರಗಿಸ್ತೀನಿ. ಆರೋಗ್ಯ ಅಂದ್ರೆ ತಿನ್ನದೇ ಇರೋದಲ್ಲ. ತಿಂದು ಜೀರ್ಣಿಸಿಕೊಳ್ಳೋದು. ನಿಮ್ಮಂಥ ಪೇಟೆಯೋರ ಕೈಲಿ ಆಗೋಲ್ಲ ಅದೆಲ್ಲ’ ಎಂದು ತೇಜಸ್ವಿ ರೇಗಿದ್ದರು. ಅವರ ಸಿಟ್ಟಿಗೆ ಕಾರಣ ಮಟನ್ ಕೊಬ್ಬು ಅಂತ ನಾನು ಹೇಳಿಕೆ ಕೊಟ್ಟದ್ದು. ಅತ್ಯುತ್ತಮ ಆಹಾರ ಯಾವುದು ಗೊತ್ತಾ? ನೀವೇ ಮಾಡ್ಕೊಳ್ಳೋ ಅಡುಗೆ. ಯಾವಾಗ ಈ ಅಡುಗೆಭಟ್ಟರು ಅಂತ ಶುರುವಾದ್ರೋ ಆವತ್ತು ಬಂತು ಪೀಡೆ. ಮನೇಲಿ ಅಡಿಗೆಯವರನ್ನಿಟ್ಕೋತಾರೆ. ಅವರ ಕೆಲಸ ಏನು ಹೇಳಿ, ಇಡೀ ದಿನ ಅಡುಗೆ ಮಾಡೋದು. ಆದ್ದರಿಂದ ರುಚಿರುಚಿಯಾಗಿ ಬೇಯಿಸಿ ಇಡ್ತಾರೆ. ಖರ್ಚೂ ಅವರದಲ್ಲ,ಟೈಮೂ ಅವರದ್ದಲ್ಲ. ಅದನ್ನು ತಿಂದ್ರೆ ದಪ್ಪ ಆಗದೇ ಇನ್ನೇನಾಗ್ತಾರೆ. ನೀವೇ ಬೇಯಿಸ್ಕೊಂಡು ತಿನ್ನಿ ನೋಡೋಣ’ ಎಂದು ಸವಾಲು ಹಾಕಿದ್ದರು.
ಕಾರಂತರು ಏನು ತಿನ್ನುತ್ತಿದ್ದರು ಅಂತ ಹುಡುಕಾಡಿದರೆ ಅಂಥ ವಿಶೇಷವೇನೂ ಅಲ್ಲಿರಲಿಲ್ಲ. ಹಸಿವಾದಾಗ ಏನೋ ತಿನ್ನುತ್ತಿದ್ದರೇ ಹೊರತು, ತಿನ್ನುವುದನ್ನು ಒಂದು ಆಚರಣೆ ಮಾಡಿಕೊಂಡಿರಲಿಲ್ಲ ಅವರು. ಮಲೆನಾಡಿನಲ್ಲಿ ಆತಿಥ್ಯ ಜೋರಾದರೂ, ತಿನ್ನುವ ವಿಚಾರಕ್ಕೆ ಅವರು ಅಷ್ಟೊಂದು ಪ್ರಾಧಾನ್ಯ ಕೊಟ್ಟಂತೆ ಕಾಣುವುದಿಲ್ಲ.
ಅದೆಲ್ಲ ಬೆಂಗಳೂರು, ಮೈಸೂರು ಸೀಮೆಯ ಕವಿಗಳ ಕರಾಮತ್ತು. ಮಾಸ್ತಿ ಕತೆಗಳಲ್ಲಿ ಘಮಘಮಿಸುವ ಅಡುಗೆಯ ಪ್ರಸ್ತಾಪ. ನವರತ್ನರಾಮರಾಯರೂ ಅಷ್ಟೇ, ಗೌಡ ತಂದುಕೊಟ್ಟ ಅಡುಗೆ ಸಾಮಾನುಗಳ ಬಗ್ಗೆ ಬರೆಯುತ್ತಿದ್ದರೆ ಹೊಟ್ಟೆಯೊಳಗೆ ಕಬಡ್ಡಿಯಾಟ. ಡಿವಿಜಿ, ರಾಜರತ್ನಂ, ಗೊರೂರು, ಎ ಎನ್ ಮೂರ್ತಿರಾವ್ ಬರಹಗಳಲ್ಲೂ ರುಚಿಕಟ್ಟಾದ ಪುಳಿಯೋಗರೆಯ ಪರಿಮಳ.  ಎಕೆ ರಾಮಾನುಜನ್‌ಗೆ ಮಜ್ಜಿಗೆ ಹುಳಿ ಅಂದರೆ ಪಂಚಪ್ರಾಣ. ಬಿಸಿಬೇಳೆ ಬಾತ್ ಮಾಡುವುದು ಮತ್ತು ತಿನ್ನುವ ಕ್ರಮವನ್ನು ಸಿ ಅಶ್ವತ್ಥರು ಸೊಗಸಾಗಿ ವಿವರಿಸುತ್ತಿದ್ದರು. ಅವರ ಮನೆಗೆ ಹೋದಾಗೆಲ್ಲ ಒಂದೋ ಬಿಸಿಬೇಳೆ ಬಾತು,ಇಲ್ಲದಿದ್ದರೆ ಆಲೂಗಡ್ಡೆ ಈರುಳ್ಳಿ ಹುಳಿ.
ಅಡುಗೆಯ ವಿಚಾರದಲ್ಲಿ ಶ್ರೀಪತಿರಾಯರ ಅಭಿರುಚಿ ಮೆಚ್ಚಲೇಬೇಕು. ಅವರು ಪಾರ್ಟಿಯಿಟ್ಟರೆ ನೀವು ಯಾವೂರಿನವರು,ಯಾವ ಪ್ರದೇಶದವರು ಅನ್ನುವುದನ್ನು ಗಮನಿಸಿ ನಿಮಗೆ ಒಪ್ಪುವ ಅಡುಗೆಯನ್ನೇ ಮಾಡಿಸಿರುತ್ತಾರೆ. ನಮ್ಮಲ್ಲಿ ಬಹಳಷ್ಟು ಮಂದಿ ದಕ್ಷಿಣ ಕನ್ನಡವರು ಅಂತ ಗೊತ್ತಾದರೆ ಹಾಲುಶಾವಿಗೆ, ನೀರುದೋಸೆ- ಹೀಗೆ ಅವರವರಿಗೊಪ್ಪುವ ತಿಂಡಿಯನ್ನೇ ಮಾಡಿಸಿಟ್ಟಿರುತ್ತಾರೆ. ಅಲ್ಲಿ ಹೋಗಿ ಬಂದರೆ, ಮಾರನೇ ದಿನ ಒಂದೂವರೆ ಕೇಜಿ ನಿವ್ವಳ ಆದಾಯ. ಒಮ್ಮೆ ಅವರನ್ನು ಕೇಳಿದ್ದೆ: ಈ ಅಡುಗೆ ತಿಂದರೆ ಸಮಸ್ಯೆಯಾಗುವುದಿಲ್ವಾ? ಕೊಬ್ಬಿನ ಅಂಶ ಸಿಕ್ಕಾಪಟ್ಟೆ ಇರುತ್ತಲ್ಲ?
ತೆಂಗಿನ ಕಾಯಿ ಮತ್ತು ತೆಂಗಿನೆಣ್ಣೆಯಲ್ಲಿ ಕೊಬ್ಬಿನಂಶ ಇದೆ ಅನ್ನೋದೇ ಸುಳ್ಳು. ಅದರಲ್ಲಿ ಗುಡ್ ಕೊಲೆಸ್ಟರಾಲ್ ಇದೆ. ಕೇರಳದಲ್ಲೂ ದಕ್ಷಿಣ ಕನ್ನಡದಲ್ಲೂ ಕೊಬ್ಬರಿ, ಕೊಬ್ಬರಿ ಎಣ್ಣೆ ಬಳಸುತ್ತಾರೆ. ಅಲ್ಲಿ ಹೃದಯಾಘಾತದ ಪ್ರಮಾಣ ಎಷ್ಟು ಕಡಿಮೆ ನೋಡಿ. ಅಲ್ಲೆಲ್ಲಾದರೂ ದಪ್ಪದವರನ್ನು ನೋಡಿದ್ದೀರಾ ಎಂದು ಅವರ ಗೆಳೆಯರೊಬ್ಬರು ಜಗಳಕ್ಕೇ ಬಂದಿದ್ದರು.
******
ನಮ್ಮ ಆಸಕ್ತಿಗಳೇ ಹಾಗೆ. ಮತ್ತೊಬ್ಬರು ಏನು ತಿನ್ನುತ್ತಾರೆ ಮತ್ತು ಹೇಗೆ ಬದುಕುತ್ತಾರೆ ಎಂಬ ವಿಚಾರದಲ್ಲಿ ಆಸಕ್ತಿ. ಹೀಗೆ ಹುಡುಕುತ್ತಾ ಹೊರಟಾಗ ವಿಚಿತ್ರ ಆಹಾರಪದ್ಧತಿಯ ಅನೇಕರು ಸಿಕ್ಕಿದ್ದಾರೆ. ನನಗೆ ಗೊತ್ತಿರುವ ವ್ಯಕ್ತಿಯೊಬ್ಬರು ಅನುಸರಿಸುವ ಆಹಾರ ಕ್ರಮ ಇವತ್ತಿಗೂ ಕುತೂಹಲ ಹುಟ್ಟಿಸುವಂತಿದೆ. ಆದರೆ ಪಾಲಿಸುವುದು ಕಷ್ಟ. ಅವರು ಬೆಳಗ್ಗೆ ಎದ್ದ ತಕ್ಷಣ ಹತ್ತೋ ಹನ್ನೆರಡೋ ಇಡ್ಲಿ ತಿನ್ನುತ್ತಾರೆ. ಆಮೇಲೆ ಇಡೀ ದಿನ ಏನನ್ನೂ ಮುಟ್ಟುವುದಿಲ್ಲ. ಪ್ರತಿ ಹದಿನೈದು ದಿನಕ್ಕೊಂದು ದಿನ ಉಪವಾಸ ಮಾಡುತ್ತಾರೆ ಮತ್ತು ವರ್ಷಕ್ಕೊಂದು ಬಾರಿ ೨೧ ದಿನ ಉಪವಾಸ ಇರುತ್ತಾರೆ. ಉಪವಾಸದ ವೇಳೆಯಲ್ಲಿ ಕೇವಲ ನೀರು ಮಾತ್ರ ಕುಡಿಯುತ್ತಾರೆ. ಹಸಿ ತರಕಾರಿ ಮುಟ್ಟಿಯೂ ನೋಡುವುದಿಲ್ಲ, ಹಣ್ಣು ಹಂಪಲು ಅವರಿಗೆ ಅಲರ್ಜಿ. ಹಾಲು ಕುಡಿಯುವುದಿಲ್ಲ. ಅವರು ಇಡ್ಲಿಯನ್ನು ಬಿಟ್ಟು ಬೇರೇನೂ ತಿಂದಿಲ್ಲ ಅಂತ ಅವರ ಹೆಂಡತಿ ಆಶ್ಚರ್ಯಪಡುತ್ತಿರುತ್ತಾರೆ.
ಮೊನ್ನೆ ಯಾರೋ ಜಿಎಂ ಡಯಟ್‌ನ ಚಾರ್ಟ್ ಕಳಿಸಿಕೊಟ್ಟಿದ್ದರು. ಅದರಲ್ಲಿ ಬೆಳಗ್ಗೆ ಒಂದು ಆಪಲ್ ಎರಡು ಗ್ಲಾಸು ನೀರು. ಮಧ್ಯಾಹ್ನ ಒಂದು ಆಲೂಗಡ್ಡೆ ಮೂರು ಗ್ಲಾಸು ನೀರು ಇತ್ಯಾದಿ ವಿವರಗಳಿದ್ದವು. ಅದನ್ನು ಓದಿ ಪಾಲಿಸುವುದೇ ಒಂದು ಸವಾಲಿನಂತಿತ್ತು.
ಹೊಟ್ಟೆ ತುಂಬ ತಿನ್ನುತ್ತಾ ಬೇಕಾದಷ್ಟು ಬಿಯರ್ ಕುಡಿಯುತ್ತಾ, ರಾತ್ರಿಗಳಲ್ಲಿ ಮಾತ್ರ ವಿಸ್ಕಿ ಹೀರುತ್ತಿದ್ದ ಹೆಮ್ಮಿಂಗ್‌ವೇ ನೆನಪಾಗುತ್ತಾನೆ. ಅವನ ಹತ್ತಿರ ಯಾರೋ ಡಯಟ್ ಬಗ್ಗೆ ಕೇಳಿದಾಗ ಅವನಂದಿದ್ದು: ಇಂಗ್ಲೆಂಡಿನಲ್ಲಿ ಸರಿಯಾಗಿ ತಿಂಡಿ ಆಗಿದೆ ಅಂತ ಹೇಳಿಕೊಳ್ಳಬೇಕಿದ್ದರೆ ಕನಿಷ್ಟ ಮೂರು ಸಲ ಉಪಹಾರ ಮಾಡಬೇಕು. ಅಮೆರಿಕಾದಲ್ಲಿ ಆರು ಸಾರಿ ಮಾಡಬೇಕು.
ಮೊನ್ನೆ ನಮ್ಮ ತರಲೆ ಮಾಧ್ವ ಗೆಳೆಯನೊಬ್ಬ ಅದ್ಭುತ ಡಯಟಿಂಗ್ ಹೇಳಿಕೊಡ್ತೀನಿ ಅಂದ. ಇದನ್ನು ಪಾಲಿಸಿದರೆ
ಎರಡೇ ತಿಂಗಳಲ್ಲಿ ಹತ್ತು ಕೇಜಿ ಕಡಿಮೆ ಆಗುತ್ತೆ, ಆರೋಗ್ಯವೂ ಚೆನ್ನಾಗಿರುತ್ತೆ ಅಂತ ಇದನ್ನು ಹೇಳಿದ:
ದೇಹಕ್ಕೆ ಬೇಕಾದ ಪ್ರೊಟೀನ್, ಕಾರ್ಬೋಹೈಡ್ರೇಟ್, ವಿಟಮಿನ್, ಬೇಕು ಬೇಕಾದ ಲವಣ ಮತ್ತು ಖನಿಜಾಂಶಗಳನ್ನು ಕೊಡುವ ಏಕೈಕ ಅಡುಗೆ ಹೇಗೆ ಮಾಡೋದು ಅಂತ ಹೇಳ್ತೀನಿ. ಇದಕ್ಕಿಂತ ಒಳ್ಳೇದು ಮತ್ತೊಂದಿಲ್ಲ’ ಎಂದವನೇ ವಿವರಿಸತೊಡಗಿದ.
ನಾಲ್ಕು ಮುಷ್ಟಿ ಹುಣಸೇಹಣ್ಣು ತಗೊಂಡು ಬಿಸಿನೀರಲ್ಲಿ ಕೊಂಚ ನೆನೆಸು. ಅದನ್ನು ಮಿಕ್ಸಿಯಲ್ಲಿ ರುಬ್ಬಿ ಸೋಸಿಟ್ಟುಕೋ. ಆಮೇಲೆ ಅರ್ಧಕೇಜಿ ಬೆಲ್ಲವನ್ನು ಒಂದು ಲೋಟ ನೀರಿಗೆ ಹಾಕಿ ಬಿಸಿ ಮಾಡಿ ಕರಗಿಸಿಟ್ಟುಕೋ, ಅದನ್ನೂ ಸೋಸಿಕೊಳ್ಳಬೇಕು ಮತ್ತೆ, ಬೆಲ್ಲದಲ್ಲಿ ಮರಳಿರುತ್ತೆ. ಆಮೇಲೆ ಬಾಣಲೆಗೆ ಒಂಚೂರು ಎಣ್ಣೆ ಹಾಕಿ, ಸಾಸಿವೆ ಹಾಕಿ, ಆಮೇಲೆ ಹುಣಸೇ ರಸ, ಬೆಲ್ಲದ ರಸ ಹಾಕಿ ಕುದಿಸಿ. ಅದು ಗಟ್ಟಿಯಾಗ್ತಿದ್ದ ಹಾಗೇ ಎಂಟು ಚಮಚ ಮೆಣಸಿನಪುಡೀನ ಹಾಕಿ, ನಂತರ ಉಪ್ಪು ಹಾಕಿ ಸರಿಯಾಗಿ ಮಗುಚಿಟ್ಟುಕೊಳ್ಳಿ. ಬೇರೊಂದು ಬಾಣಲೆಯಲ್ಲಿ ಕಡ್ಲೆಬೀಜ, ಕರಿಬೇವಿನ ಸೊಪ್ಪು ಹುರಿದುಕೊಳ್ಳಿ. ತಣ್ಣಗಾದ ಮೇಲೆ ಅವರೆಡನ್ನೂ ಮಿಕ್ಸ್ ಮಾಡಿ..
ಪುಳಿಯೋಗರೇ ಮಾಡೋದು ಹೇಳ್ಕಡ್ತಿದ್ದೀಯಾ?’
ಅಲ್ಲ, ಇನ್ನೂ ಮುಗಿದಿಲ್ಲ ತಡಿ. ಆಮೇಲೆ ಒಂಚೂರು ಅರಿಶಿನ ಮತ್ತು ಎಣ್ಣೆ ಹಾಕಿ ಆ ನೀರಿಗೆ ಅಕ್ಕಿ ಹಾಕಿ ಅನ್ನ ಮಾಡಿ. ಸಾಮಾನ್ಯವಾಗಿ ಇಡೋದಕ್ಕಿಂತ ಅರ್ಧ ಲೋಟ ಕಡಿಮೆ ನೀರಿಟ್ಟರೆ ಅನ್ನ ಉದುರುದುರು ಆಗುತ್ತೆ. ನಂತರ ಜರಡಿ ಹಿಡಿದ ಕಪ್ಪು ಎಳ್ಳು ಒಂದು ಚಮಚ, ಜೊತೆಗೆ ಒಂಚೂರು ಸಕ್ಕರೆ ಸೇರಿಸಿ ಹುರಿದು, ಪುಡಿ ಮಾಡಿಟ್ಟುಕೊಳ್ಳಿ.  ಜೊತೆಗೆ ಕೊಬ್ಬರಿ ತುರಿದಿಟ್ಟುಕೊಳ್ಳಿ. ಆಮೇಲೆ ಕಡ್ಲೆಬೀಡ, ಕಡ್ಲೆಬೇಳೆ, ಕರಿಬೇವು, ಇಂಗು ಒಗ್ಗರಣೆ ಮಾಡಿ ಅನ್ನಕ್ಕೆ ಇವೆಲ್ಲವನ್ನೂ ಬೆರೆಸಿ,ರುಚಿಗೆ ತಕ್ಕಷ್ಟು ಮೊದಲೇ ಮಾಡಿಟ್ಟುಕೊಂಡ ಗೊಜ್ಜು ಬೆರೆಸಿರಿ’
ಪುಳಿಯೋಗರೆ ತಿನ್ನಿಸೋಕೆ ಇಷ್ಟೊಂದು ಕತೇನಾ?’ ಎಂದು ಹುಟ್ಟಿದಾರಭ್ಯ ಪುಳಿಯೋಗರೆ ತಿನ್ನುತ್ತಿದ್ದ, ನೂರೆಂಟು ಕೇಜಿಯ ರಂಗಣ್ಣ ರೇಗಿದ.
ಪೂರ್ತಿ ಹೇಳೋದು ಕೇಳೋ. ಇದನ್ನು ಹೀಗೆ ರುಚಿಕಟ್ಟಾಗಿ ಮಾಡಿ, ಒಂದು ಪಾತ್ರೆಯಲ್ಲಿ ಹಾಕಿ, ಅದರ ಮೇಲೊಂದು ಬಾಳೆ ಎಲೆ ಮುಚ್ಚಿ, ಪಕ್ಕದ ಮನೆಯವರಿಗೆ ಕೊಡಬೇಕು. ಕೊಟ್ಟು ಬಂದು ಎರಡು ಗ್ಲಾಸು ಮಜ್ಜಿಗೆ ನೀರು ಕುಡಿದು ಮಲಕ್ಕೋಬೇಕು. ಪುಣ್ಯಕ್ಕೆ ಪುಣ್ಯವೂ ಆಯ್ತು, ಆರೋಗ್ಯಕ್ಕೆ ಆರೋಗ್ಯವೂ ಆಯ್ತು’ ಎಂದು ಗಹಗಹಿಸಿದ.
ಅಯ್ಯಂಗಾರರ ಮೇಲೆ ಮಾದ್ವರಿಗೆ ಅಷ್ಟೊಂದು ಸಿಟ್ಟಿಗೆ ಅಂತ ನನಗೆ ಆಗಲೇ ಗೊತ್ತಾದದ್ದು

‍ಲೇಖಕರು avadhi

May 12, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

8 ಪ್ರತಿಕ್ರಿಯೆಗಳು

 1. RJ

  “ಇದನ್ನು ಹೀಗೆ ರುಚಿಕಟ್ಟಾಗಿ ಮಾಡಿ, ಒಂದು ಪಾತ್ರೆಯಲ್ಲಿ ಹಾಕಿ, ಅದರ ಮೇಲೊಂದು ಬಾಳೆ ಎಲೆ ಮುಚ್ಚಿ, ಪಕ್ಕದ ಮನೆಯವರಿಗೆ ಕೊಡಬೇಕು. ಕೊಟ್ಟು ಬಂದು ಎರಡು ಗ್ಲಾಸು ಮಜ್ಜಿಗೆ ನೀರು ಕುಡಿದು ಮಲಕ್ಕೋಬೇಕು. ಪುಣ್ಯಕ್ಕೆ ಪುಣ್ಯವೂ ಆಯ್ತು, ಆರೋಗ್ಯಕ್ಕೆ ಆರೋಗ್ಯವೂ ಆಯ್ತು..”
  ಹೀಗೆ ಮಾಡಿಮಾಡಿಯೇ ಆರು ತಿಂಗಳಲ್ಲಿ ಹತ್ತು ಕೆಜಿ ಇಳಿಸಿದ್ದಾಯ್ತು!
  -RJ

  ಪ್ರತಿಕ್ರಿಯೆ
 2. ಡಿ.ಎಸ್.ರಾಮಸ್ವಾಮಿ

  ಪ್ರಿಯ ಜೋಗಿ ನೀವಿಷ್ಟವಾಗುವುದೇ ಈ livelinessನಲ್ಲಿ, ಅಪರೂಪಕ್ಕೆ ವೆಬ್ಬಿನಲ್ಲಿ ಕನ್ನಡ ಓದುವ ನನ್ನ ಮಗಳೂ ಸಕತ್ತಾಗಿದೆ ಅಂತಿದಾಳೆ.

  ಪ್ರತಿಕ್ರಿಯೆ
 3. armanikanth

  ರುಚಿಕಟ್ಟಾಗಿ aduge maadisi,adannu ಒಂದು ಪಾತ್ರೆಯಲ್ಲಿ ಹಾಕಿ, ಅದರ ಮೇಲೊಂದು ಬಾಳೆ ಎಲೆ ಮುಚ್ಚಿ, namma ಮನೆಗೆ ಕೊಡಬೇಕು.nantara jogi avaru ಎರಡು ಗ್ಲಾಸು ಮಜ್ಜಿಗೆ ನೀರು ಕುಡಿದು ಮಲಕ್ಕೋಬೇಕು. astu maadidre avara paalige ಪುಣ್ಯಕ್ಕೆ ಪುಣ್ಯವೂ ಆಯ್ತು, ಆರೋಗ್ಯಕ್ಕೆ ಆರೋಗ್ಯವೂ ಆಯ್ತು’!!!!!!
  jogi saar,istu maadi saar….
  uta maadoke naaviddeve!!!
  manikanth.

  ಪ್ರತಿಕ್ರಿಯೆ
 4. b.k sumathi

  jogi sir… nimma endina bareha idalla… nammanege ootakke banni…. hosa vichaara heltini…..

  ಪ್ರತಿಕ್ರಿಯೆ
 5. NilGiri

  “ಪಕ್ಕದ ಮನೇಲಿ ಯಾರೂ ಇಲ್ದೆ ಇದ್ರೆ ಏನ್ ಮಾಡ್ಬೇಕು ಅಂತಾ ಹೇಳೇ ಇಲ್ವಲ್ಲಾ??!!”

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: