ಜೋಗಿ ಬರೆದಿದ್ದಾರೆ: ತಿರುಮಲೇಶ್ ಎಂಬ ‘ಪಾಪಿಯೂ’

ಕನ್ನಡದ ಕೆಲಸವನ್ನು ಸದ್ದಿಲ್ಲದೆ ಮಾಡಿಕೊಂಡು ಬರುತ್ತಿರುವ ಅನೇಕರು ಎಷ್ಟೋ ಸಾರಿ ಮುಂಚೂಣಿಗೆ ಬರುವುದೇ ಇಲ್ಲ. ಎಲ್ಲೋ ಕುಳಿತುಕೊಂಡು ತಮ್ಮ ಪಾಡಿಗೆ ತಾವು ಅನ್ನಿಸಿದ್ದನ್ನು ಬರೆಯುತ್ತಾ ಇದ್ದುಬಿಡುತ್ತಾರೆ. ಅಂಥ ಪಂಡಿತರನ್ನು ಸಾಹಿತ್ಯಲೋಕ ಗುರುತಿಸುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಓದುಗರ ಪಾಲಿಗೆ ಅವರು ಅಷ್ಟಾಗಿ ಒದಗಿಬರುವುದಿಲ್ಲ. ಅಂಥವರ ಪೈಕಿ ಇವತ್ತು ಕೂಡ ಸಕ್ರಿಯವಾಗಿ ಕೆಲಸ ಮಾಡುತ್ತಿರುವವರು ಕೆ ವಿ ತಿರುಮಲೇಶ್.

ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದಿನ ಮಾತು. ನಾವೆಲ್ಲ ಬಳ್ಳಾರಿಯಲ್ಲಿ ನಡೆದ ಸಣ್ಣಕಥಾ ಕಮ್ಮಟಕ್ಕೆ ಹೋಗಿದ್ದೆವು. ಆಗೆಲ್ಲ ಸಣ್ಣಕಥಾ ಕಮ್ಮಟಗಳಿಗೆ ಒಂಥರದ ಗಮ್ಮತ್ತಿತ್ತು. ಆ ಸಣ್ಣಕಥಾ ಕಮ್ಮಟದ ನಿರ್ದೇಶಕರಾಗಿದ್ದವರು ಜಿ ಎಸ್ ಸದಾಶಿವ ಮತ್ತು ರಾಜಶೇಖರ ನೀರಮಾನ್ವಿ. ಅಲ್ಲಿಗೆ ವಿಶೇಷ ಉಪನ್ಯಾಸ ನೀಡಲು ಬರುತ್ತಿದ್ದವರು ಕುಂವೀ, ಎಂಪಿ ಪ್ರಕಾಶ್,ಶಂಕರ್‌ನಾಗ್ ಮುಂತಾದವರು. ಅವರೆಲ್ಲ ಬಂದಾಗ ಸಹಜವಾಗಿಯೇ ನಮ್ಮ ಉತ್ಸಾಹ ಹೆಚ್ಚಾಗುತ್ತಿತ್ತು. ನಾವು ಕತೆಗಳ ಬಗ್ಗೆ ಕೇಳಿಸಿಕೊಳ್ಳುತ್ತಾ, ರಾತ್ರಿ ಹೊತ್ತಲ್ಲಿ ನಮಗೆ ತೋಚಿದ ಕತೆಗಳನ್ನು ಬರೆಯುತ್ತಾ ದೊಡ್ಡ ಕತೆಗಾರರಾಗುವ ಹುಮ್ಮಸ್ಸಿನಲ್ಲಿದ್ದೆವು. ಹೀಗಿದ್ದಾಗ ಒಂದು  ಮಟ ಮಟ ಮಧ್ಯಾಹ್ನ ಅಲ್ಲಿಗೆ ಬುಲ್ಗೇನಿಯನ್ ಗಡ್ಡದ, ಜುಬ್ಬಾ ತೊಟ್ಟುಕೊಂಡ ಚೂಪುಕಣ್ಣಿನ ವ್ಯಕ್ತಿಯೊಬ್ಬರು ಬಂದರು. ಅವರನ್ನು ಜಿ ಎಸ್ ಸದಾಶಿವ ಪರಿಚಯಿಸಿದಾಗ ನಮಗೆಲ್ಲ ವಿಚಿತ್ರ ಖುಷಿ. ಆಗಷ್ಟೇ ಅವರ ಒಂದಷ್ಟು ಕತೆಗಳನ್ನು ಓದಿಕೊಂಡಾಗಿತ್ತು. ತಿರುಮಲೇಶ್ವರ ಭಟ್ಟ ಎಂಬ ಹೆಸರಿನ ಅವರು ಕಾಸರಗೋಡಿನವರು ಎಂಬುದು ಗೊತ್ತಿತ್ತು. ಆದರೆ ಅವರನ್ನು ಕಣ್ಣಾರೆ ನೋಡಿರಲಿಲ್ಲ.

ಚಿತ್ರ: ಎಂ ಎಸ್ ಶ್ರೀರಾಂ

ನಾವು ಉತ್ಸಾಹದಿಂದ ಅವರಿಗೆ ನಾವು ಬರೆದ ಕತೆಗಳನ್ನು ತೋರಿಸಿದೆವು. ಅವುಗಳ ಮೇಲೆ ಕಣ್ಣಾಡಿಸಿ ಅವರು ಮೆಚ್ಚುಗೆಯ ನೋಟ ಬೀರುತ್ತಿದ್ದರು. ಕೊನೆಗೆ ಎಲ್ಲರ ಕತೆಗಳನ್ನೂ ಉದ್ದೇಶಿಸಿ ನಾಲ್ಕು ಮಾತಾಡಿದರು. ಆಗ ಅವರು ಹೇಳಿದ ಮಾತೊಂದು ಇವತ್ತಿಗೂ ಕತೆ ಬರೆಯುವ ಹೊತ್ತಿಗೆ ನೆನಪಾಗುತ್ತಲೇ ಇರುತ್ತದೆ:

ಕತೆಯೆಂದರೆ ಕತೆಯಲ್ಲ ಅಂದುಕೊಂಡು ಬರೀರಿ. ಹಾಗಂತ ಅದು ವರದಿ ಕೂಡ ಅಲ್ಲ. ಒಂದು ಕ್ಷಣವನ್ನು ಹಿಡಿದಿಡುವ ಪ್ರಯತ್ನ ಅದು. ಇಡೀ ಕತೆ ಓದಿದ ನಂತರ ನಮಗೆ ಆ ಒಂದು ಕ್ಷಣದ ತಲ್ಲಣ ಮನಸ್ಸಿನಲ್ಲಿ ಉಳಿದುಬಿಡಬೇಕು. ಅಂಥ ಒಂದು ಸಂದಿಗ್ಧ ಅಲ್ಲಿ ಎದುರಾಗಬೇಕು’.

ಅಂಥ ಸಂದಿಗ್ಧವನ್ನು ನಾನು ಕಂಡದ್ದು ಅವರ ಇನ್ನೊಬ್ಬ’ ಕತೆಯಲ್ಲಿ. ಅಲ್ಲಿ ಮುಷ್ಟಿಯಲ್ಲಿ ಒಂದು ನೊಣವನ್ನು ಹಿಡಿದುಕೊಂಡು ಸ್ವಾಮೀಜಿ ಕೇಳುತ್ತಾರೆ; ಈ ನೊಣ ಬದುಕಿಯೋ ಸತ್ತಿದೆಯೋ ಹೇಳು. ಉತ್ತರಿಸಬೇಕಾದವನಿಗೆ ಸ್ವಾಮೀಜಿಯ ತಂತ್ರ ಗೊತ್ತು. ಸತ್ತಿದೆ ಅಂದರೆ ನೊಣವನ್ನು ಹಾರಲು ಬಿಡುತ್ತಾರೆ. ಬದುಕಿದೆ ಎಂದರೆ ಹಿಚುಕಿ ಸಾಯಿಸುತ್ತಾರೆ.

ನಂತರದ ದಿನಗಳಲ್ಲಿ ಸೂಫಿ ಕತೆಗಳನ್ನು ಓದುತ್ತಿರಬೇಕಾದರೆ, ಅಲ್ಲೂ ಇಂಥದ್ದೊಂದು ಸಂದಿಗ್ಧ ಎದುರಾದದ್ದನ್ನು ನೋಡಿದ್ದೆ. ಗುರುವಿನ ಪ್ರಶ್ನೆಗೆ ಅಲ್ಲಿ ಶಿಷ್ಯ ಉತ್ತರಿಸುತ್ತಾನೆ: ಅದು ನಿನ್ನ ಕೈಯಲ್ಲಿದೆ. ಇದನ್ನು ಓದುವ ತನಕ ಇಂಥದ್ದೊಂದು ಉತ್ತರ ಹೊಳೆದಿರಲೂ ಇಲ್ಲ.

ಹೀಗೆ ಅನೂಹ್ಯ ಸಂಗತಿಗಳನ್ನು ಥಟ್ಟನೆ ಎದುರಾಗಿಸಿ ನಮ್ಮ ಅರಿವನ್ನು ಹೆಚ್ಚಿಸುತ್ತಾ ಬಂದವರು ತಿರುಮಲೇಶ್. ಅದಾಗಿ ಆರೇಳು ವರ್ಷಗಳ ನಂತರ ಅವರ ಅವಧ’ ಸಂಕಲನ ಓದಿ ಪ್ರೇರಿತನಾಗಿ ಅದರ ಮೇಲೊಂದು ವಿಮರ್ಶೆ ಬರೆಯುತ್ತೇನೆ. ಪುಸ್ತಕ ಕಳಿಸಿಕೊಡಿ. ನಾನು ಕೊಂಚ ಸೋಮಾರಿ ಎಂದೇನೇನೋ ಕೊಂಚ ಉಡಾಫೆಯಿಂದಲೇ ಅವರಿಗೆ ಪತ್ರ ಬರೆದಿದ್ದೆ. ಅದಕ್ಕೆ ಅವರು ಎರಡೇ ಸಾಲಿನ ಮಾರೋಲೆ ಬರೆದಿದ್ದರು: ಸಾಹಿತಿಗೆ ಸೋಮಾರಿತನ ಶತ್ರು.

ತಿರುಮಲೇಶ್ ಎಂದೂ ಸೋಮಾರಿಯಾಗಿರಲೇ ಇಲ್ಲ ಅನ್ನುವುದು ಈಗ ಹೊಳೆಯುತ್ತಿದೆ. ಏನೇನನ್ನೋ ಬರೆಯುತ್ತಾ ಹೊಸದೇನಾದರೂ ನೀಡಬೇಕು ಎಂದು ನಿರ್ಧರಿಸಿದವರಂತೆ ನಮ್ಮನ್ನು ಮತ್ತೊಂದು ಜಗತ್ತಿಗೆ ಕರೆದೊಯ್ಯುತ್ತದ್ದವರು ಅವರು. ಅವರ ಕವಿತೆಗಳನ್ನು ಕಾಣಿಸುವ ಇತಿಹಾಸ ಪ್ರಜ್ಞೆ ಮತ್ತು ಕಳೆದುಹೋದ ಜಗತ್ತಿನಲ್ಲಿ ಕಳೆದುಹೋಗಿಬಿಡುವ,ಅಲ್ಲಿಂದೇನನ್ನೋ ಹುಡುಕಿಕೊಂಡು ಬರುವ ಪ್ರತಿಭೆ ಬಹುಶಃ ಎಕೆ ರಾಮಾನುಜನ್ ಒಬ್ಬರಲ್ಲಿ ಮಾತ್ರ ಇತ್ತೆಂದು ನನ್ನ ನಂಬಿಕೆ. ಪ್ರತಿಯೊಂದು ಅಕ್ಷರವನ್ನು ಮೂಡಿಸುವ ಹೊತ್ತಿಗೂ, ಅದು ಮತ್ತೇನನ್ನೋ ಧ್ವನಿಸುತ್ತಿರಬೇಕು ಎಂಬ ಆಸೆ,ಭಾಷೆಗಿರುವ ವಿಚಿತ್ರ ಲಯವನ್ನು ಹಿಡಿಯುವ ಅದಮ್ಯ ಬಯಕೆ ಮತ್ತು ಅದರಿಂದ ಹೊಸ ಅರ್ಥ ಸೃಷ್ಟಿಯಾದೀತು ಎಂಬ ಭರವಸೆಯಲ್ಲಿ ಬರೆಯುವ ಕವಿ ತಿರುಮಲೇಶ್. ಭಾಷಾಶಾಸ್ತ್ರಜ್ಞರು ಸಾಮಾನ್ಯವಾಗಿ ಒಣ ಭಾಷೆಯಲ್ಲಿ ಬರೆಯುತ್ತಾರೆ ಎಂಬ ನಂಬಿಕೆಯನ್ನೂ ಸುಳ್ಳಾಗಿಸಿದವರು ತಿರುಮಲೇಶ್. ಅವರ ಅಂಕಣಗಳನ್ನೂ ಇಂಥ ಹುಡುಕಾಟವನ್ನು ನಾವು ಕಾಣಬಹುದು. ಶಂಕರ ಬಟ್ಟರು ಕನ್ನಡದ ನುಡಿಗಟ್ಟ’ನ್ನು ಬದಲಾಯಿಸಲು ಹೊರಟಾಗ ಅದನ್ನು ವೈಜ್ಞಾನಿಕವಾಗಿ ತಾರ್ಕಿಕವಾಗಿ ವಿರೋಧಿಸಿದವರು ತಿರುಮಲೇಶ್. ಅವರ ಪಾಂಡಿತ್ಯಕ್ಕೆ ಅದು ಮತ್ತೊಂದು ಸಾಕ್ಷಿ.

ಒಮ್ಮೆ ಬೆಳ್ಳಂಬೆಳಗ್ಗೆ ತಿರುಮಲೇಶ್ ಹೇಳದೇ ಕೇಳದೇ ವೈಎನ್‌ಕೆ ಮನೆಗೆ ಬಂದುಬಿಟ್ಟಿದ್ದರು. ಆವತ್ತು ವೈಎನ್‌ಕೆಗೆ ಸಣ್ಣಗೆ ಜ್ವರ, ಜೋರು ನೆಗಡಿ. ಬಾಗಿಲು ತೆರೆಯುತ್ತಿದ್ದಂತೆ ವೈಎನ್‌ಕೆ ಕೆಂಪು ಮೂಗು, ನೀರು ತುಂಬಿಕೊಂಡ ಕಣ್ಣು ನೋಡಿದ ತಿರುಮಲೇಶ್ ಗಾಬರಿಬಿದ್ದು ಏನ್ ವೈಯನ್ಕೆ, ಹೀಗಾಗಿಬಿಟ್ಟಿದ್ದೀರಿ, ಹುಷಾರಿಲ್ವೇ?’ ಎಂದು ಆತಂಕದಿಂದ ಕೇಳಿದ್ದರು. ವೈಎನ್‌ಕೆಗೆ ಆರೋಗ್ಯ ಕೆಟ್ಟರಂತೂ ವಿಪರೀತ ಭಯ. ಅದರ ಬಗ್ಗೆ ಮಾತಾಡಿದರೆ ರಣಕೋಪ. ತಿರುಮಲೇಶ್ ಹಾಗೆ ಕೇಳಿದ್ದೇ ತಡ ಏನ್ರೀ ಆಗಿದೆ ನಂಗೆ. ಏನಾಗಿದೆ.. ಹುಷಾರಿಲ್ಲ, ನೀವು ಔಷಧಿ ಕೊಡ್ತೀರಾ.. ಹೋಗ್ರೀ ಸುಮ್ನೆ’ ಎಂದು ಅವರನ್ನು ಒಳಗೂ ಕರೆಯದೇ ಹಾಗೇ ಕಳಿಸಿಬಿಟ್ಟಿದ್ದರು. ಅದಾಗಿ ಕೆಲವು ದಿನಗಳ ನಂತರ ಜಾಸ್ತಿ ಬೈದೆ ಅಲ್ವಾ.. ಹೆದರಿಸಿಬಿಟ್ಟಿದ್ದ, ಪೂರ್ತಿ ಹೆದರಿಸಿಬಿಟ್ಟಿದ್ದ, ಘಾ.. ಘಾ’ ಎಂದು ಹೇಳಿಕೊಂಡು ಪಶ್ಚಾತ್ತಾಪ ಮಿಶ್ರಿತ ಸಂತೋಷದಿಂದ ಅಡ್ಡಾಡುತ್ತಿದ್ದರು. ಕೊನೆಗೇ ತಾವೇ ಅವರಿಗೆ ಫೋನ್ ಮಾಡಿ ಏನಾದರೂ ಬರೆದುಕೊಡುವಂತೆ ಕೇಳಿಕೊಂಡಿದ್ದರು.

+++

ನವೋದಯದಿಂದ ಕಾವ್ಯ ನವ್ಯಕ್ಕೆ ದಾಟಿಕೊಂಡ ಸಂಕ್ರಮಣ ಕಾಲದಲ್ಲಿ ಬರೆಯಲು ಆರಂಭಿಸಿದವರೆಲ್ಲ ಅಡಿಗರ ಹಾಗೆ ಬರೆಯಲು ಶತಪ್ರಯತ್ನ ಮಾಡುತ್ತಿದ್ದರು. ಹೀಗಾಗಿಯೇ ಒಂದು ಕವಿತೆಯನ್ನು ಓದಿಗ ತಕ್ಷಣವೇ ಇದು ನವ್ಯ ಕವಿತೆ ಎಂದು ಅದರ ಶೈಲಿ, ಲಯ ಮತ್ತು ವಸ್ತುವಿನ ಆಯ್ಕೆಯಿಂದಲೇ ಆಗಷ್ಟೇ ಓದಲು ಆರಂಭಿಸಿದವನಿಗೂ ಗೊತ್ತಾಗುತ್ತಿತ್ತು. ಕನ್ನಡದಲ್ಲಿ ಈ ಸಿದ್ಧಶೈಲಿಯನ್ನು ಮೀರಲು ಯತ್ನಿಸಿದವರು ಎಕೆ ರಾಮಾನುಜನ್ ಮತ್ತು ತಿರುಮಲೇಶ್. ಎಕೆ ರಾಮಾನುಜನ್ ಅದನ್ನು ಪ್ರಜ್ಞಾಪೂರ್ವಕವಾಗಿ ಮಾಡಿದರೆ, ತಿರುಮಲೇಶ್ ತೀರ ಸಹಜವೆಂಬಂತೆ ಬರೆಯತೊಡಗಿದರು.

ತಿರುಮಲೇಶರ ಕವಿತೆಗಳನ್ನು ನೋಡುತ್ತಾ ಹೋಗೋಣ:

ಮಸಾಲೆ ಕಡ್ಲೆ ಜಗಿಯುತ್ತಾ

ಸೌತೆ ಚೂರು ಮೆಲ್ಲುತ್ತಾ

ಕಾಲೆಳೆಯುತ್ತಾ ಉಸುಕಿನಲ್ಲಿ

ಮೂರು ಸಂಜೆಯ ಬೆಳಕಿನಲ್ಲಿ

ಕವಿಯಿದ್ದಾನೆ ಎಲ್ಲರ ಹಾಗೆ

ಕವಿಗಳಿರೋದೇ ಹಾಗೆ

ಹೀಗೆ ಸರಳವಾಗಿ ಬರೆಯುವಲ್ಲಿ ತಿರುಮಲೇಶ್ ಇನ್ನೇನೋ ಹೇಳುತ್ತಿದ್ದಾರೆ ಅನ್ನಿಸುತ್ತದೆ. ಮೂರು ಸಂಜೆಯ

ಬೆಳಕಿನಲ್ಲಿ ಎಂದಾಗ ನಮಗೆ ಕೆ ಎಸ್ ನರಸಿಂಹಸ್ವಾಮಿಯವರ ತೆರೆದ ಬಾಗಿಲು’ ನೆನಪಾಗುತ್ತದೆ. ಅಲ್ಲಿ ಮೂರು ಕಾಲಗಳಂತೆ, ಮೂರು ಬೆಂಕಿಗಳಂತೆ ಬಂದ ಆಗಂತುಕರು ನೆನಪಾಗುತ್ತಾರೆ. ಮೂರು ಸಂಜೆ ಮುಸ್ಸಂಜೆಯೂ ಹೌದು. ಮೂರು ಬೇರೆ ಬೇರೆ ಸಂಜೆಗಳೂ ಇರಬಾರದೇಕೆ ಅನ್ನಿಸುತ್ತದೆ.

ಮುಖವಾಡ, ವಠಾರ, ಮಹಾಪ್ರಸ್ಥಾನ,  ಮುಖಾಮುಖಿ, ಅವಧ, ಪಾಪಿಯೂ ಹೀಗೆ ಆರೋ ಏಳೋ ಕವಿತಾ ಸಂಕಲನಗಳನ್ನೂ ಒಂದೆರಡು ಕಥಾಸಂಕಲನಗಳನ್ನೂ ಬರೆದು ನಂತರ ಕತೆಕವಿತೆ ಸಾಕು ಎಂದು ನಿಟ್ಟುಸಿರಿಟ್ಟವರಂತೆ ಸುಮ್ಮನಾಗಿದ್ದಾರೆ ತಿರುಮಲೇಶ್. ಯಾವ ಕಳ್ಳಬೆಕ್ಕು ಅವರಿಗೆ ಮುಖಾಮುಖಿಯಾಯಿತೋ ಎಂದು ಅಚ್ಚರಿಪಡುವಂತೆ ಮೌನವಾಗಿದ್ದಾರೆ. ಮುಖಾಮುಖಿ’ ಕವಿತೆಯಲ್ಲಿ ಬರುವ ಸಾಲುಗಳನ್ನು ಗಮನಿಸಿ. ಇದ್ದಕ್ಕಿದ್ದಂತೆ ಅವರಿಗೆ ಒಂದು ಬೆಕ್ಕು ಮುಖಾಮುಖಿಯಾಗುತ್ತದೆ. ಬೆಕ್ಕೂ ಕವಿಯೂ ಪರಸ್ಪರ ದಿಟ್ಟಿಸಿ ನೋಡುತ್ತಾರೆ. ಯಾರೂ ಕಣ್ಣು ಕೀಲಿಸುವುದಿಲ್ಲ. ಆ ಕ್ಷಣಕಾಲದ ಮುಖಾಮುಖಿಗೆ ಮೂರು ಭಾವಗಳನ್ನು ಕೊಡುತ್ತಾರೆ ತಿರುಮಲೇಶ್:

ಒಂದು ಬೆಕ್ಕಿನ ಕಣ್ಣುಗಳು ಇಷ್ಟು ನಿಶ್ಚಲವಾಗಿರುತ್ತವೆ

ಎಂದು ನನಗೆ ಗೊತ್ತಿರಲಿಲ್ಲ.

ಒಂದು ಬೆಕ್ಕಿನ ಕಣ್ಣುಗಳು ಇಷ್ಟು ಅನಾಥವಾಗಿರುತ್ತವೆ

ಎಂದು ನನಗೆ ಗೊತ್ತಿರಲಿಲ್ಲ

ಒಂದು ಬೆಕ್ಕಿನ ಕಣ್ಣುಗಳಲ್ಲಿ ಇಷ್ಟೊಂದು ವಿಷಾದವಿರುತ್ತದೆ

ಒಂದು ನನಗೆ ಗೊತ್ತಿರಲಿಲ್ಲ.

ತಿರುಮಲೇಶ್ ಕನ್ನಡನಾಡಿನಿಂದ ತುಂಬ ದೂರವೇ ಉಳಿದುಬಿಟ್ಟವರು. ಈಗ ಅದ್ಯಾವುದೋ ಕೇಳರಿಯದ ದೇಶದಲ್ಲಿದ್ದಾರೆ ಎಂದಷ್ಟೇ ಗೊತ್ತು. ಈಗಲೂ ಅಲ್ಲಿ ಮಕ್ಕಳಿಗೆ ಪಾಠ ಹೇಳುತ್ತಾ, ವಾರ ವಾರ ಅಂಕಣ ಬರೆಯುತ್ತಾ, ಹುಮ್ಮಸ್ಸು ಬಂದರೆ ತಮಗಿಷ್ಟವಾದ ಕಾದಂಬರಿ ಅನುವಾದಿಸುತ್ತಾ ಇದ್ದುಬಿಡುತ್ತಾರೆ. ತನ್ನದೇ ಆದ ವಠಾರವೊಂದಿಲ್ಲದೇ, ಕವಿ ಇರುವುದು ಕಷ್ಟ. ಕನ್ನಡನಾಡು ಅವರಿಗೀಗ ಅವಧ’ದ ಥರ ಕಾಣಿಸುತ್ತಿರಬಹುದು.

ಒಮ್ಮೆ ಕೂಗಿದ ಸದ್ದು ಕೇಳಿಸುವುದು ಅನೇಕ ದಿನಗಳವರೆಗೆ

ಎದ್ದ ಸ್ವಂತದ ನೆರಳೆ ಕವಿಯುವುದು ಕತ್ತಲ ಹಾಗೆ

ಪ್ರತಿಯೊಬ್ಬರೂ ಹುಡುಕುವರು ತಮ್ಮ ಕಾಣದ ವಿಧಿಯ

ಯಾವ ಬಾಗಿಲೋ ಮುಚ್ಚಿಟ್ಟ ಬೆಳಕಿನ ನಿಧಿಯ

ಗೆದ್ದರೆ ಗೆಲ್ಲಬೇಕು ಬಿಟ್ಟುಕೊಡುವುದರಿಂದ ಎಂಬ ಸಾಲು ಅವರ ಮುಖಾಮುಖಿ’ ಕವಿತೆಯಲ್ಲಿ ಬರುತ್ತದೆ.  ತುಂಬ ನಿರ್ಲಕ್ಷ್ಯಕ್ಕೆ ಒಳಗಾದ ತಿರುಮಲೇಶ್ ಹಾಗೆ ಬಿಟ್ಟುಕೊಟ್ಟು ಗೆದ್ದರು ಎಂದು ಖುಷಿಯಾಗುತ್ತದೆ. ಅದೇ ಹೊತ್ತಿಗೆ ಒಬ್ಬ ಕವಿಯ ಕಣ್ಣುಗಳಲ್ಲಿ ಇಷ್ಟೊಂದು ವಿಷಾದವಿರುತ್ತದೆ ಎಂದು ನನಗೆ ಗೊತ್ತಿರಲಿಲ್ಲ ಎಂದೂ ಅನ್ನಿಸುತ್ತದೆ.

ಇವತ್ತಿಗೂ ನೆನಪಾಗುವುದು, ಮತ್ತೆ ಮತ್ತೆ ಓದಬೇಕು ಅನ್ನಿಸುವುದು ಅವರ ಪಾಪಿಯೂ’ ಸಂಕಲನದ ಕತೆಗಳು. ಅವುಗಳ ಗಮ್ಮತ್ತೇ ಬೇರೆ. ಸುಮ್ಮನೆ ಆ ಸಾಲುಗಳನ್ನು ಓದುತ್ತಾ ಸುಖಿಸಿ:

ಸಂತೆಯಿಂದ ಯೂಸುಫನ

ಕೊಂಡುತಂದ ದಿನದಿಂದ

ಜುಲೇಖ ಅವನ ಪ್ರೀತಿಯಲ್ಲಿ

ನಾವು ಅವಳ ರೀತಿಯಲ್ಲಿ..

ತಿರುಮಲೇಶರ ಪದ್ಯಗಳೂ ಹಾಗೆಯೇ. ಅವರ ಪದ್ಯ ಓದಿದಂದಿನಿಂದ ನಾವು ಅದರ ಪ್ರೀತಿಯಲ್ಲಿ, ಅವರು ನಮ್ಮ ರೀತಿಯಲ್ಲಿ…..


‍ಲೇಖಕರು avadhi

April 20, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

4 ಪ್ರತಿಕ್ರಿಯೆಗಳು

  1. ಮುರಳೀಧರ ಸಜ್ಜನ.

    ನಿಜ… ತಿರುಮಲೇಶರವರು ದೊಡ್ಡ ತಿಮಿಂಗಲು ಏಕೆಂದರೆ ಯಾವುದೇ ವಿಷಯವಾಗಲಿ ಅದನ್ನು ವಿವರಿಸುವ ಬಗೆ ತುಂಬಾ ಚೆನ್ನಾಗಿರುತ್ತೆ. ತಮ್ಮ ಲೇಖನಗಳ ಮೂಲಕ ನಮ್ಮ ವಿಚಾರಧಾರೆ ಶಕ್ತಿಯನ್ನು ಹೆಚ್ಚಿಸುತ್ತಾರೆ ಮತ್ತು ಬುದ್ಧಿಯನ್ನು ಹಿಗ್ಗಿಸುತ್ತಾರೆ (ಆಳ ನಿರಾಳ). ಜೋಗಿಯವರೆ ನಿಮ್ಮ ಬರಹ ಚೆನ್ನಾಗಿದೆ. ನಾನು ಇನ್ನಷ್ಟು ಅವರ ಬಗ್ಗೆ ತಿಳಿದುಕೊಳ್ಳಬೇಕು ಸ್ವಲ್ಪ ಸಹಾಯ ಮಾಡುವಿರಾ ? ನನ್ನ ಮಿಂಚಂಚೆ :[email protected] ದಯವಿಟ್ಟು……

    ಪ್ರತಿಕ್ರಿಯೆ
  2. na.damodara shetty

    niivu baredudu vimarsheyannuu miirida aatmiiya bareha.thirumalesharu nanage paata maadida gurugalu endu helikollalu hemme… anduu induu …naada

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: