ಜೋಗಿ ಬರೆದಿದ್ದಾರೆ: ದಯವಿಟ್ಟು ಕ್ಷಮಿಸಿ

ಮನೆಯೊಳಗೀಗ ಎಳ್ಳೆಣ್ಣೆಯ ಕಿರುದೀಪ, ಮನಸಿನಲ್ಲಿ ಕುರುಡುಗತ್ತಲೆ!
jogi222
ದಯವಿಟ್ಟು ಕ್ಷಮಿಸಿ.
ನನ್ನ ಅಜ್ಞಾನಕ್ಕೆ. ಗಮನಿಸದೇ ಇದ್ದಿದ್ದಕ್ಕೆ. ಆ ವಿಚಾರವಾಗಿ ಯೋಚಿಸದೇ ಉಳಿದದ್ದಕ್ಕೆ. ಹಿಂದುವಾಗಿ ಹಿಂದುಸ್ತಾನದ ಪ್ರಜೆಯಾಗಿ ದಕ್ಷಿಣ ಕನ್ನಡದಲ್ಲಿ ಹುಟ್ಟಿದ್ದಕ್ಕಾಗಿ ಹಾಗೆಲ್ಲ ಯೋಚಿಸದೇ ಇದ್ದದ್ದು ಎಂಥ ದೊಡ್ಡ ತಪ್ಪು ಎಂದು ಈಗ ಅರ್ಥವಾಗುತ್ತಿದೆ.
ಎಷ್ಟು ಸರಳ ಸಂಗತಿ ನೋಡಿ. ಚಾರ್ಲಿ ಚಾಪ್ಲಿನ್ ಅವನು ನಗಿಸಿದಷ್ಟು ಯಾರೂ ನಗಿಸಿಲ್ಲ. ಅವನು ಅಳಿಸುತ್ತಲೇ ನಗಿಸುತ್ತಿದ್ದ. ಮಾತಿಲ್ಲದೆ ನಗಿಸುತ್ತಿದ್ದ. ಸರ್ವಾಧಿಕಾರದ ವಿರುದ್ಧ ಸಿಡಿದೇಳುತ್ತಿದ್ದ. ಮೂಲಭೂತವಾದಿ ಗುಣವನ್ನು ಖಂಡಿಸುತ್ತಿದ್ದ. ನಮಗೆಲ್ಲ ಇಷ್ಟವಾಗುತ್ತಿದ್ದ. ನಾವೆಲ್ಲ ಅವನನ್ನು ಪ್ರೀತಿಸುತ್ತಿದ್ದೆವು. ಮೆಚ್ಚಿಕೊಳ್ಳುತ್ತಿದ್ದೆವು. ಆರಾಧಿಸುತ್ತಿದ್ದೆವು.
image
ಛೇ, ಎಂಥಾ ತಪ್ಪಾಗಿ ಹೋಯಿತು. ಅವನು ಕ್ರಿಶ್ಚಿಯನ್ ಎಂದು ನಮಗೆ ಹೊಳೆದಿರಲೇ ಇಲ್ಲ. ಒಂದು ವೇಳೆ ಹೊಳೆದಿದ್ದರೆ ಅವನನ್ನು ದ್ವೇಷಿಸಬಹುದಿತ್ತು. ಅವನ ಜೋಕುಗಳಿಗೆ ಬಿಮ್ಮನೆ ಕೂತು  ಪ್ರತಿಕ್ರಿಯಿಸದೇ ಉಳಿಯಬಹುದಾಗಿತ್ತು. ಆತನ ಸಿನಿಮಾಗಳನ್ನು ನೋಡಿ ನಗುವವರ ಮೇಲೆ ರೇಗಬಹುದಾಗಿತ್ತು. ನಾಚಿಕೆ ಆಗಬೇಕು ನಿಮ್ಮ ಜನ್ಮಕ್ಕೆ. ಒಬ್ಬ ಕ್ರಿಶ್ಚಿಯನ್ ಮಾಡಿದ ಸಿನಿಮಾಗಳನ್ನು ನೋಡಿ ನಗುತ್ತಿದ್ದೀರಲ್ಲ’ ಎಂದು ಹೀಯಾಳಿಸಬಹುದಿತ್ತು. ಶಕ್ತಿಯಿದ್ದರೆ ತೋಳೇರಿಸಿ ಮೂತಿಗೆರಡು ತಪರಾಕಿ ಕೊಟ್ಟು ಇನ್ನು ಚಾಪ್ಲಿನ್ ಸಿನಿಮಾ ನೋಡಿದರೆ ಜೋಕೆ ಎಂದು ಎಚ್ಚರಿಕೆ ನೀಡಬಹುದಾಗಿತ್ತು.
ಇದರಲ್ಲಿ ನಮ್ಮ ತಪ್ಪೇನಿಲ್ಲ ಬಿಡಿ. ನಮಗೆ ಪಾಠ ಕಲಿಸಿದ ಮೇಷ್ಟ್ರುಗಳೂ ಹಾಗೇ ಇದ್ದರು. ಅವರು ಯಾವತ್ತೂ ಚಾರ್ಲಿ ಚಾಪ್ಲಿನ್ ಕ್ರಿಶ್ಚಿಯನ್ ಎಂದು ಹೇಳಲಿಲ್ಲ. ಅವನ ಜಾತಿಯ ಬಗ್ಗೆ ನಮಗೆ ಹೇಳಿಕೊಡಲೇ ಇಲ್ಲ. ಆಗ ನಾವಿನ್ನೂ ಚಿಕ್ಕವರು. ಎಳೆಯ ಮನಸ್ಸುಗಳಿಗೆ ಇಂಥ ವಿಚಾರಗಳನ್ನು ತಿಳಿಸಿಕೊಡುವುದು ಗುರುಗಳ ಕರ್ತವ್ಯ. ಗುರುದೇವೋ ಮಹೇಶ್ವರ ಎಂದು ನಂಬಿದವರು ನಾವು. ನಮಗೇ ಗುರುಗಳು ಮೋಸ ಮಾಡಿದರೇ? ಅವರನ್ನು ಗುರುಗಳೆಂದು ಹೇಗೆ ಕರೆಯುವುದು.
ಹೋಗಲಿ, ಮೊದಲ ಗುರು ಎಂದು ನಾವು ಕರೆಯುವ ಅಮ್ಮನೂ ಆ ಬಗ್ಗೆ ಹೇಳಲಿಲ್ಲ. ಚಾಪ್ಲಿನ್ ಜಾತಿ ಯಾವುದೆಂದು ಅವಳಿಗೆ ಗೊತ್ತಿತೋ ಇಲ್ಲವೋ? ಗೊತ್ತಿಲ್ಲದೇ ಇದ್ದರೆ ಅವಳ ತಪ್ಪಲ್ಲ. ಗೊತ್ತಿದ್ದೂ ಹೇಳದೇ ಹೋದರೆ ಅದು ಅಪರಾಧವೇ ಸರಿ. ನನ್ನ ಅಜ್ಞಾನದಲ್ಲಿ ಅವಳದೂ ಪಾಲಿದೆ.
ಹೋಗಲಿ, ನಮ್ಮೂರಿನ ಮಂದಿಯಾದರೂ ಹೇಳಿದರೇ? ಮಂಗಳೂರಿನ ನ್ಯೂಚಿತ್ರಾ ಥೇಟರಿನಲ್ಲಿ ಚಾಪ್ಲಿನ್ ಸಿನಿಮಾ ನೋಡಲು ಹೋಗುತ್ತಿದ್ದಾಗ ಅಲ್ಲಿಗೆ ಬರುತ್ತಿದ್ದ  ನಮ್ಮೂರ ಮಂದಿಯಾದರೂ ಹೇಳಬಾರದಿತ್ತೇ? ಎಂಥವರ ಮಧ್ಯೆ ನಾನಿದ್ದೆ ಎಂದು ನೆನೆದರೆ ಪಶ್ಚಾತ್ತಾಪವಾಗುತ್ತದೆ.
ಬೆಂಗಳೂರಿಗೆ ಬಂದ ಮೇಲೂ ಯಾರೂ ಈ ಬಗ್ಗೆ ನನ್ನ ತಿಳುವಳಿಕೆಯನ್ನು ವಿಸ್ತರಿಸಲೇ ಇಲ್ಲ. ಗೆಳೆಯ ಸಿ ಆರ್ ಸಿಂಹ ಮನೆಗೆ ಹೋದಾಗ ಮನೆಯ ಒಂದು ಕಂಬದಲ್ಲೇ ಚಾಪ್ಲಿನ್ ಮೂರ್ತಿ ಕೆತ್ತಿದ್ದರು. ಅವರಿಗೂ ಚಾಪ್ಲಿನ್ ಕ್ರಿಶ್ಚಿಯನ್ ಎಂದು ಗೊತ್ತಿರಲಿಲ್ಲ ಎಂದು ಕಾಣುತ್ತದೆ. ಅವರಿಗೂ ನನಗೆ ಸಿಕ್ಕಂಥ ಗುರುಗಳೇ ಸಿಕ್ಕಿರಬೇಕು. ಮೇಷ್ಟರು ಎಲ್ಲಾ ಊರುಗಳಲ್ಲೂ ಒಂದೇ ಥರ ಇರುತ್ತಾರೆಂದು ಕಾಣುತ್ತದೆ. .
ಸಾಹಿತಿಗಳೂ ಸಮಾಜದ ಕಣ್ತೆರೆಸಬೇಕು ಎನ್ನುತ್ತಾರೆ. ನಾನು ಬಹುವಾಗಿ ಮೆಚ್ಚಿದ ಸಾಹಿತಿಗಳೂ ಈ ಕೆಲಸ ಮಾಡಲಿಲ್ಲ. ಕುಂ. ವೀರಭದ್ರಪ್ಪನವರ ಅನೇಕ ಕತೆ ಕಾದಂಬರಿಗಳ ಅಭಿಮಾನಿಯಾಗಿದ್ದ ನಾನು ಅವರು ಬರೆದ ಚಾರ್ಲಿ ಚಾಪ್ಲಿನ್ ಪುಸ್ತಕವನ್ನು ಓದಿದ್ದೆ. ಅದರಲ್ಲೂ ಅವರು ಈ ಅಂಶವನ್ನು ಮುಚ್ಚಿಟ್ಟಿದ್ದಾರೆ.
ಮೊನ್ನೆ ಮೊನ್ನೆ ದಕ್ಷಿಣ ಕನ್ನಡದ ಒತ್ತೆನೆಣೆ ಎಂಬಲ್ಲಿ ಚಾರ್ಲಿ ಚಾಪ್ಲಿನ್ ಮೂರ್ತಿಯನ್ನು ಸ್ಥಾಪಿಸಲು ಹೊರಟ ಗೆಳೆಯ ನಿರ್ದೇಶಕ ಹೇಮಂತ್ ಹೆಗಡೆಯವರನ್ನು ತಡೆದು ನಿಲ್ಲಿಸಿ ಕೆಲವು ಸನ್ಮಿತ್ರರು ಬುದ್ಧಿವಾದ ಹೇಳಿದ್ದಾರೆ. ಚಾಪ್ಲಿನ್ ಕ್ರಿಶ್ಚಿಯನ್ ಮತಕ್ಕೆ ಸೇರಿದವನು. ಅವನ ಪ್ರತಿಮೆ ಸ್ಥಾಪಿಸಬೇಡಿ ಎಂದಿದ್ದಾರೆ. ಜೊತೆಗೇ ಅವನು ಭಾರತಕ್ಕೆ ಏನ್ರೀ ಮಾಡಿದ್ದಾನೆ ಎಂದು ಕೇಳಿದ್ದಾರೆ.
ಎಂಥಾ ಒಳ್ಳೆಯ ಪ್ರಶ್ನೆ? ಎಂಥಾ ತಿಳುವಳಿಕೆ? ಈ ಕಾಲದಲ್ಲಿ ಜ್ಞಾನದ ಹಂಚಿಕೆ ಎಷ್ಟು ಸಮಗ್ರವಾಗಿ ಆಗುತ್ತಿದೆ. ನಾವು ಎಷ್ಟು ಆಧುನಿಕವಾಗುತ್ತಿದ್ದೇವೆ ಎಂದು ಸಂತೋಷವಾಗುತ್ತಿದೆ. ಅಂಥವರು ನಮ್ಮ ಬಾಲ್ಯ ತಾರುಣ್ಯ ಕಾಲದಲ್ಲೂ ಯಾಕಿರಲಿಲ್ಲ ಎಂದು ಬೇಸರವಾಗುತ್ತದೆ. ನಮ್ಮ ಜೊತೆಗಿದ್ದವರೆಲ್ಲ ಶತದಡ್ಡರೆಂಬ ತೀರ್ಮಾನಕ್ಕೆ ಬಂದಿದ್ದೇನೆ. ಇನ್ನು ಮೇಲೆ ಇಂಥ ಪ್ರಕಾಂಡ ಪಂಡಿತರ ಜೊತೆಗೆ ಓಡಾಡಲು  ನಿರ್ಧರಿಸಿದ್ದೇನೆ. ಆಗಲಾದರೂ ನನ್ನ ಜ್ಞಾನದಿಗಂತ ವಿಸ್ತರಿಸಲಿ. ತಮಸೋಮಾ ಜ್ಯೋತಿರ್ಗಮಯ.
ಜ್ಯೋತಿರ್ಗಮಯ ಎಂದಾಗ ನೆನಪಾಯಿತು. ಇದನ್ನು ರಾತ್ರಿ ಲೈಟ್ ಹಾಕಿಕೊಂಡು ಕಂಪ್ಯೂಟರಿನಲ್ಲಿ ಟೈಪ್ ಮಾಡುತ್ತಿದ್ದೆ. ಅರೇ, ವಿದ್ಯುತ್ ಕಂಡು ಹಿಡಿದವನು ಬೆಂಜಮಿನ್ ಫ್ರಾಂಕ್ಲಿನ್. ಬಲ್ಬ್ ಸಂಶೋಧನೆ ಮಾಡಿದವನು ಥಾಮಸ್ ಆಲ್ವಾ ಎಡಿಸನ್. ಅವರಿಬ್ಬರೂ ಕ್ರಿಶ್ಚಿಯನ್ ಎಂದು ಗೊತ್ತಾಯಿತು. ಇಷ್ಟಾದ ಮೇಲೂ ಬುದ್ಧಿ ಬರದಿದ್ದರೆ ಹೇಗೆ? ತಕ್ಷಣ ಲೈಟ್ ಆರಿಸಿದೆ. ಬಲ್ಬುಗಳನ್ನೆಲ್ಲ ಕಿತ್ತಿಟ್ಟೆ. ಎಳ್ಳೆಣ್ಣೆಯ ದೀಪ ಹಚ್ಚಿ ಕೂತಿದ್ದೇನೆ. ಆ ದೀಪದ ಕುರುಡುಗತ್ತಲಲ್ಲಿ ಬರೆಯಲು ಕುಳಿತಾಗ ಪೆನ್ನು ಕಂಡುಹಿಡಿದವನೂ ಕ್ರಿಶ್ಚಿಯನ್ ಆಗಿದ್ದರೆ ಎಂದು ಗಾಬರಿಯಾಯಿತು. ಯಾಕೆ ಬೇಕು ರಿಸ್ಕು? ಒಂದಷ್ಟು ತಾಳೆಗರಿಗಳಿಗೆ ಹೇಳಿಕಳಿಸಿದ್ದೇನೆ. ಕಂಠಪತ್ರವನ್ನು ತರಿಸುತ್ತಿದ್ದೇನೆ. ತಾಳೆಗರಿಯ ಓಲೆಯಲ್ಲಿ ಕಂಠಪತ್ರವನ್ನು ಶಾಯಿಗೆ ಅದ್ದಿ ಬರೆಯುತ್ತಿದ್ದರೆ ನನ್ನ ಹಿಂದುತ್ವದ ಬಗ್ಗೆ ಆಹಾ ಸಂತೋಷವಾಗುತ್ತಿದೆ. ನಾನು ನಿಜಕ್ಕೂ ಸನಾತನಿಯಾದೆ. ಸತ್ಯಂ ವಧ! ಧರ್ಮಂ ಚರ!
ಇನ್ನು ಮೇಲೆ ರೇಲುಗಾಡಿಗಳಲ್ಲಿ ಹೋಗುವಂತಿಲ್ಲ. ಬಸ್ಸುಗಳಲ್ಲಿ ಪ್ರಯಾಣಿಸುವಂತಿಲ್ಲ. ಕಾರುಗಳಲ್ಲಿ ಚಲಿಸುವಂತಿಲ್ಲ. ಮರದ ಚಪ್ಪಲಿಗಳನ್ನೇ ಹಾಕಿಕೊಂಡು ಓಡಾಡಬೇಕು. ಎಲ್ಲಕ್ಕಿಂತ ಧರ್ಮ ಮುಖ್ಯ. ಅದನ್ನು ಉಳಿಸುವುದೇ ನಮ್ಮ ಗುರಿಯಾಗಬೇಕು. ನಮ್ಮತನವನ್ನು ಕಳಕೊಂಡು ಬದುಕುವುದಾದರೂ ಏಕೆ?
ಅಷ್ಟಕ್ಕೂ ಚಾರ್ಲಿ ಚಾಪ್ಲಿನ್ ಕರ್ನಾಟಕಕ್ಕೆ ಏನು ಮಾಡಿದ್ದಾನೆ? ಮಂಗಳೂರಿಗೆ ಏನು ಮಾಡಿದ್ದಾನೆ? ಮಂಗಳೂರು ಉಡುಪಿ ರಸ್ತೆ ಮಾಡಿಸಿದ್ದಾನಾ? ರಸ್ತೆ ರಿಪೇರಿ ಮಾಡಿಸಿದ್ದಾನಾ? ಆಸ್ಪತ್ರೆ ಕಟ್ಟಿಸಿದ್ದಾನಾ? ಸ್ಕೂಲು ಕಟ್ಟಿಸಿದ್ದಾನಾ? ಏನೂ ಮಾಡಿಲ್ಲ. ಒಂದಷ್ಟು ಸಿನಿಮಾ ಮಾಡಿ ನಗಿಸಿರಬಹುದು? ಅದನ್ನೂ ಅವನು ಉಡುಪಿಯಲ್ಲಿ ಚಿತ್ರೀಕರಿಸಿಲ್ಲ. ಉಡುಪಿ ಕೃಷ್ಣನ ಬಗ್ಗೆ ಸಿನಿಮಾ ಮಾಡಿಲ್ಲ. ಶ್ರೀರಾಮನ ಬಗ್ಗೆ ಸೀರಿಯಲ್ ಮಾಡಿಲ್ಲ? ಅವನ ಮೂರ್ತಿ ಯಾಕೆ ಸ್ಥಾಪಿಸಬೇಕು.
ನಮ್ಮ ಶಿಕ್ಷಣ ಬದಲಾಗಬೇಕು ಅನ್ನುವುದರಲ್ಲಿ ಅರ್ಥವಿದೆ. ಷೇಕ್ಸ್‌ಪಿಯರ್ ಶ್ರೇಷ್ಠ ನಾಟಕಕಾರ ಅನ್ನುವ ಕಾರಣಕ್ಕೆ ಅವನ ನಾಟಕಗಳನ್ನು ಪಠ್ಯ ಮಾಡಿದ್ದಾರೆ. ಅವರಿಗಾದರೂ ಪ್ರಜ್ಞೆಯಿಲ್ಲವೇ? ಷೇಕ್ಸ್‌ಪಿಯರ್ ಕೂಡ ಕ್ರಿಶ್ಟಿಯನ್ ಆಗಿದ್ದ. ಬರ್ನಾರ್ಡ್ ಷಾ, ಆಡೆನ್, ಟಾಲ್‌ಸ್ಟಾಯ್ ಮುಂತಾದವರೂ ಅದೇ ಧರ್ಮದವರು. ಅವರ ಕಾದಂಬರಿಗಳನ್ನೆಲ್ಲ ಕಟ್ಟಿಟ್ಟಿದ್ದೇನೆ. ನಾಳೆಯೋ ನಾಡಿದ್ದೋ ರದ್ದಿಗೆ ಹಾಕಬೇಕು. ಅದರಿಂದ ಬಂದ ಹಣವನ್ನು ದೇವರ ಹುಂಡಿಗೆ ಹಾಕಬೇಕು. ಅಲ್ಲಿಗೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡ ಹಾಗೆ.
ಛೇ, ಎಂಥ ತಪ್ಪು ಮಾಡುತ್ತಿದ್ದೇವೆ ನಾವೆಲ್ಲ? ಈ ವಿಚಾರದಲ್ಲಿ ಹೆಣ್ಮಕ್ಕಳೂ ಬುದ್ಧಿ ಕಲಿಯಬೇಕು. ಇನ್ನು ಮೇಲೆ ಮಿಕ್ಸಿ, ಗ್ರೈಂಡರ್ ಬಳಸುವಂತಿಲ್ಲ. ಟೀವಿ, ಫ್ರಿಜ್ಜು ಉಪಯೋಗಿಸುವಂತಿಲ್ಲ. ಅದೆಲ್ಲವನ್ನೂ ಕಂಡು ಹಿಡಿದದ್ದು ಕ್ರಿಶ್ಚಿಯನ್ನರೇ. ಸರ್ಕಾರ ತಕ್ಷಣವೇ ಕಿಟೆಲ್ ಕನ್ನಡ ಪದಕೋಶವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು? ಅವನದೂ ಅದೇ ಜಾತಿ.
ರಾಜ್‌ಕುಮಾರ್ ಏನು ಮಾಡಿದ್ದಾರೆ ಎಂದು ಅನೇಕರು ಕೇಳಿದ್ದರು. ಅವರು ಅತ್ಯುತ್ತಮ ನಟನಾಗಿರಬಹುದು. ಸೊಗಸಾದ ಚಿತ್ರಗಳನ್ನು ನೀಡಿರಬಹುದು. ಚಿತ್ರರಂಗವನ್ನು ಉಳಿಸಿದ ಧೀಮಂತನಾಗಿರಬಹುದು. ಸಾಮಾಜಿಕ ಸಂಬಂಧ, ಸೌಹಾರ್ದ, ಪ್ರೀತಿ, ಕರುಣೆ, ತ್ಯಾಗಗಳನ್ನು ಪ್ರತಿಬಿಂಬಿಸುವಂಥ ಸಿನಿಮಾಗಳನ್ನು ನೀಡಿ ವರ್ಷಾನುಗಟ್ಟಲೆ ನೆನಪಲ್ಲಿ ಉಳಿಯುವ ಗೀತೆಗಳನ್ನು ಹಾಡಿರಬಹುದು. ನಮ್ಮಲ್ಲಿ ಹೊಸ ಉತ್ಸಾಹ, ಟೈತನ್ಯ ತುಂಬಿರಬಹುದು. ಎಲ್ಲರೊಂದೇ ಎಂದು ಸಾರಿರಬಹುದು. ನಮ್ಮ ಸಂಕಷ್ಟದ ಗಳಿಗೆಯಲ್ಲಿ ನೆನಪಾಗಿ ಸಾಂತ್ವನ ನೀಡಿರಬಹುದು.
ಕುವೆಂಪು ಕೂಡ ಅಷ್ಟೇ. ತಮ್ಮ ಪಾಡಿಗೆ ಕತೆ ಬರೆದುಕೊಂಡು, ವಿಶ್ವಮಾನವ ಸಂದೇಶವನ್ನು ಸಾರಿ, ನಮ್ಮ ತವಕ ತಲ್ಲಣಗಳಿಗೆ ದನಿಯಾಗಿರಬಹುದು? ಆದರೆ ಉಡುಪಿಗೆ ಅವರು ಏನು ಮಾಡಿದ್ದಾರೆ. ಒಂದು ದೇವಸ್ಥಾನ, ಆಸ್ಪತ್ರೆ ಕಟ್ಟಿಸಿಲ್ಲ. ರಸ್ತೆಗೆ ಟಾರು ಹಾಕಿಸಿಲ್ಲ. ಉಡುಪಿಯ ಅಭಿವೃದ್ಧಿಗೆ ಏನೇನೂ ಮಾಡಿಲ್ಲ. ಅವರನ್ನು ರಾಷ್ಟ್ರಕವಿ ಎಂದೇಕೆ ಕರೆಯಬೇಕು ಎಂಬ ಪ್ರಶ್ನೆಯನ್ನೂ ನಾಳೆ ಈ ವಿವೇಕವಂತರು ಕೇಳಬಹುದು. ಆ ಅರಿವೂ ಅವರಲ್ಲಿ ಮೂಡಲಿ ಎಂದು ಹಾರೈಸೋಣ.
ಗೆಳೆಯರೇ, ಎಚ್ಚರಿಕೆ. ಚಾಪ್ಲಿನ್, ಐನ್‌ಸ್ಟೀನ್ , ಕಿಟೆಲ್, ಷೇಕ್ಸ್‌ಪಿಯರ್, ಎಡಿಸನ್ ಮುಂತಾದವರ ಬಗ್ಗೆ ಹೇಳುವ ಬರೆಯುವ ಅವರ ಮೂರ್ತಿ ಸ್ಥಾಪಿಸುವ, ಅವರನ್ನು ಪಠ್ಯ ಪುಸ್ತಕದಲ್ಲಿ ಸೇರಿಸುವ ಜನಶತ್ರುಗಳು ಸುತ್ತಲೂ ಇದ್ದಾರೆ. ಅವರ ಬಗ್ಗೆ ಎಚ್ಚರದಿಂದಿರಿ. ಸರ್ಕಾರ ತಕ್ಷಣವೇ ಒಂದು ಸಮಿತಿ ಸ್ಥಾಪಿಸಬೇಕು. ಆ ಸಮಿತಿ ಜಾತೀವಾರು ಪಟ್ಟಿಯನ್ನು ತಯಾರು ಮಾಡಬೇಕು. ಯಾವ ಸಾಹಿತಿ. ಕಲಾವಿದ, ಗಾಯಕ, ಕವಿ, ಸಮಾಜಸೇವಕ ಯಾವ ಜಾತಿ ಎಂಬ ಪಟ್ಟಿ ಎಲ್ಲರಿಗೂ ದೊರಕಬೇಕು. ಯಾರನ್ನು ಓದಬೇಕು, ಯಾರನ್ನೂ ಬಹಷ್ಕರಿಸಬೇಕು ಎಂದು ನಿರ್ಧಾರ ಆಗಬೇಕು. ಆಗಲೇ ಸಮಾಜಕ್ಕೆ ನೆಮ್ಮದಿ.
ನಮ್ಮಲ್ಲಿ ಬುದ್ಧಿಜೀವಿಗಳೆಂದು ಕರೆಸಿಕೊಳ್ಳುವ ಮಂದಿ ಇಂಥ ಕೆಲಸ ಮಾಡಬೇಕು. ನನ್ನಂಥ ಸಾಮಾನ್ಯರಿಗೆ ತಿಳುವಳಿಕೆ ನೀಡಿ ಅರಿವನ್ನು ಹೆಚ್ಚಿಸಬೇಕು. ದಯವಿಟ್ಟು ಇಂಥ ಕಾರ್ಯ ಮೊದಲಾಗಲಿ. ಎಲ್ಲರಲ್ಲೂ ಸದ್ಭುದ್ಧಿ ಮೂಡಲಿ. ಧರ್ಮ ಶಾಶ್ವತವಾಗಿ ಉಳಿಯಲಿ. ಈ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸೋಣ.
ಈ ವಿಚಾರದಲ್ಲಿ ಅಲ್ಪಸ್ವಲ್ಪ ವಿವೇಕ ಇರುವುದು ಪತ್ರಕರ್ತರಿಗೇ. ಹೇಮಂತ್ ಚಾರ್ಲಿ ಚಾಪ್ಲಿನ್ ಮೂರ್ತಿ ಸ್ಥಾಪಿಸುತ್ತೇನೆ ಎಂದು ಹೇಳಿದಾಗ ಪತ್ರಕರ್ತರೊಬ್ಬರು ಯಾಕ್ರೀ ಕನ್ನಡದವರು ಯಾರೂ ಸಿಗ್ಲಿಲ್ವಾ? ನರಸಿಂಹರಾಜು ಮೂರ್ತಿ ಸ್ಥಾಪಿಸಿ’ ಎಂದಿದ್ದರಂತೆ. ಅವರ ವಿವೇಕ ಎಲ್ಲರಿಗೂ ಬರುತ್ತಿದೆ. ಚಾಪ್ಲಿನ್ ಮೂರ್ತಿ ಯಾಕೆ, ವಿವೇಕಾನಂದರ ಮೂರ್ತಿ ಸ್ಥಾಪಿಸಿ ಎಂದು ಯುವಕರು ಹೇಮಂತ್ ಹೆಗಡೆಗೆ ಸಲಹೆ ಮಾಡಿದ್ದಾರಂತೆ.
ಯಾರು ಏನೇ ಮಾಡಲಿ, ನಾನಂತೂ ಕರೆಂಟು ಆರಿಸಿ, ಬಲ್ಬು ಎಸೆದು, ಪೆನ್ನು ಪೇಪರು, ಕಂಪ್ಯೂಟರ್ ಪಕ್ಕಕ್ಕಿಟ್ಟು, ಹರಳೆಣ್ಣೆಯ ದೀಪ ಹಚ್ಚಿಕೊಂಡು ಗಲ್ಲಕ್ಕೆ ಕೈ ಕೊಟ್ಟು ಮಹಾನ್ ಚಿಂತಕನಂತೆ ಕೂತಿದ್ದೇನೆ.
ಕುರುಡುಗತ್ತಲಲ್ಲಿ ಹೊಸ ಜಗತ್ತು ಅತ್ಯಂತ ಸುಂದರವೂ ಸೌಹಾರ್ದಯುತವೂ ಸನಾತನವೂ ಆಗಿ ಕಂಗೊಳಿಸುತ್ತಿದೆ. ಇಂಥ ಜ್ಞಾನೋದಯಕ್ಕೆ ಕಾರಣರಾದ ಎಲ್ಲರಿಗೂ ನನ್ನ ಸಾಷ್ಟಾಂಗ ನಮಸ್ಕಾರ.

‍ಲೇಖಕರು avadhi

March 14, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

50 ಪ್ರತಿಕ್ರಿಯೆಗಳು

 1. ಹೇಮಶ್ರೀ

  ಹ ಹ್ಹ ಹ್ಹ ! … ಹ ಹ್ಹ ಹ್ಹ !
  ಅಯ್ಯೋ ! ಮರ್ತೇ ಹೋಯ್ತು ಸಾರ್.
  ನಾವು ಹೆಣ್ಮಕ್ಳು. ಹೀಗೆ ಗಟ್ಟಿಯಾಗಿ ನಗ್ಲೂ ಬಾರ್ದು. ಅಲ್ವಾ !
  ನೋಡಿ. ಎಷ್ಟೊಂದೆಲ್ಲಾ ಜ್ಞಾನೋದಯ ಆಗೋದಕ್ಕೆ ಶುರು ಆಯ್ತು !

  ಪ್ರತಿಕ್ರಿಯೆ
 2. rj

  ಉಡುಪಿಯತ್ತ ಮುಖ ಮಾಡಿ
  ಹ್ಹಾ ಹ್ಹಾ ಹ್ಹಾ!
  ಅಂತ ಎಂದಿನಂತೆ ಗಲ್ಲ ಉಬ್ಬಿಸಿಕೊಂಡು ನಮ್ಮೆಲ್ಲರ
  ನಗೆಪೈಲ್ವಾನ್ ಚಾರ್ಲಿ ಮನದಲ್ಲೇ ನಗುತ್ತಿದ್ದಾನೆಯೇ…?
  -ರಾಘವೇಂದ್ರ ಜೋಶಿ.

  ಪ್ರತಿಕ್ರಿಯೆ
 3. Gopikavallabha

  ಈ ವ್ಯಂಗ್ಯವೇನೋ ಚೆನ್ನಾಗಿದೆ. ಭೈರಪ್ಪನವರ ವಿಚಾರದಲ್ಲಿ ಆದಂತೆ ದಕ್ಷಿಣ ಕನ್ನಡದ ಧರ್ಮಾಂಧತೆಯ ಬಗ್ಗೆ ಇದೀಗ ಜೋಗಿಯವರಿಗೆ ಜ್ಞಾನೋದಯವಾಗಿದೆ. ಅದೆಲ್ಲ ಸರಿ, ‘ಹಾಯ್ ಬೆಂಗಳೂರ್’ಗೆ ಮಂಗಳೂರು- ಉಡುಪಿಯಲ್ಲಿ ಸಾಕಷ್ಟು ಪ್ರಸಾರ ಇದೆ. ಹಿಂದೂ ಕಾರ್‍ಯಕರ್ತರು ಇದನ್ನು ಭಗವದ್ಗೀತೆಯಂತೆ ಓದುತ್ತಾರೆ. ಜೋಗಿ ಯಾಕೆ ಈ ಬರಹವನ್ನು ಅವರ ‘ಜಾನಕಿ ಕಾಲಂ’ ಅಂಕಣದಲ್ಲಿ ಬರೆಯಬಾರದು ? ಈ ವಾರ ಅವರು ಇದನ್ನು ಬರೆದಂತಿಲ್ಲ.
  -ಗೋಪಿಕಾವಲ್ಲಭ

  ಪ್ರತಿಕ್ರಿಯೆ
 4. gurubaliga

  ಇನ್ನು ಊರಿಗೆ ಹೋಗಬೇಕಾದರೆ ನಡ್ಕೊಂಡು ಹೋಗಬೇಕಲ್ಲ ಎಂದು ಯೋಚನೆಯಾಗ್ತಾ ಇದೆ. ಆದರೂ ಸಮಗ್ರ ಹಿಂದುಸ್ತಾನದ ಸೌಂದರ್ಯವನ್ನು ಸವಿಯುವ ಅವಕಾಶ ಸಿಕ್ಕರೆ ಅದಕ್ಕಿನ್ತಿನ್ನಾವ ಭಾಗ್ಯವಿದೆ.
  ಜ್ಞಾನ ಜ್ಯೋತಿ ನನ್ನೊಳಗೂ ಹಚ್ಚಿದ್ದಕ್ಕೆ ನಿಮಗೂ ಸಾಷ್ಟಾಂಗ.
  ಗುರು ಬಾಳಿಗ
  ನವ ದೆಹಲಿ.

  ಪ್ರತಿಕ್ರಿಯೆ
 5. Subbanna Patil

  ಎತ್ತಣ ಚಾರ್ಲಿ ಚಾಪ್ಲಿನ್, ಎತ್ತಣ ಮರವಂತೆ?
  ಎಲ್ಲದಕ್ಕೂ “ಹಿಂದೂ ಮತಾಂಧತೆ”ಯನ್ನು ಟೀಕಿಸುವ ಬದಲು, ಜೋಗಿಯವರು ತನ್ನ ಮಿತ್ರನಿಗೆ ಚಾಪ್ಲಿನ್ ಪ್ರತಿಮೆಯನ್ನು ಒಂದು ದೇವಸ್ಥಾನದ ಎದುರು ಸ್ಥಾಪಿಸುವ ಔಚಿತ್ಯವನ್ನು ಪ್ರಶ್ನಿಸಬೇಕು. ನಾಳೆ ಯಾರೋ ಒಬ್ಬ ವಿಧಾನಸೌಧ ಅಥವಾ ನೇತ್ರಾವತಿ ತೀರದಲ್ಲಿ ಬಾಕ್ಸರ್ ಮೊಹಮ್ಮದ್ ಆಲಿ ಪ್ರತಿಮೆಯನ್ನು ಸಿನೆಮಾಕ್ಕೆಂದು, ವಿಶ್ವ ದಾಖಲೆಯೆಂದು ಸ್ಥಾಪಿಸಲು ಹೊರಟರೆ ಇದೇ ಜೋಗಿಯವರು “ಪರಿಸರ ನಾಶ”ವೆಂದು ಬೊಬ್ಬೆ ಹೊಡೆಯುತ್ತಾರೆ.
  ಸಿ.ಆರ್.ಜ಼ೆಡ್.ಜಾಗದಲ್ಲಿರುವುದರಿಂದ ಸರಕಾರದಿಂದ ಅನುಮತಿಯನ್ನೂ ಪಡೆಯದೆ ಜೋಗಿಯವರ ಮಿತ್ರರು ದೇವಸ್ಥಾನದ ಎದುರು ಚಾಪ್ಲಿನ್ ಪ್ರತಿಮೆ ಹಾಕಲು ಹೊರಟಿದ್ದಾರೆ. ಉಡುಪಿಯ ಜಿಲ್ಲಾಧಿಕಾರಿಗಳು ಈ ಪ್ರತಿಮೆಗೆ ಅಧಿಕೃತ ಪರವಾನಿಗೆಯನ್ನು ನೀಡಿಲ್ಲ ಎಂದು ನಿನ್ನೆ ಸ್ಪಷ್ಟಪಡಿಸಿದ್ದಾರೆ. ಗ್ರಾಮ ಪಂಚಾಯಿತಿನಿಂದಲೂ ಏನೂ ಅನುಮತಿ ಪಡೆಯದೆ ಪ್ರಾಯಶ: “ಹಳ್ಳಿ ಗುಗ್ಗುಗಳು” ಇವರೇನು ಮಾಡುತ್ತಾರೆಯೆಂದು ಸ್ಥಳೀಯ ಪತ್ರಕರ್ತ ಜನಾರ್ಧನ ಮರವಂತೆ ಸಹಾಯದಿಂದ ರಮಣೀಯ ಜಾಗದಲ್ಲಿ ಬೃಹತ್ ಪ್ರತಿಮೆ ಸ್ಥಾಪಿಸಲು ಇವರು ಹೊರಟಿದ್ದಾರೆ.
  ಚಾಪ್ಲಿನ್ ಬೇಕು ಆದರೆ ಶಿವರಾಮ ಕಾರಂತರು ಬೇಡವಂತೆ ಜೋಗಿಯ ಮಿತ್ರರಿಗೆ. ಯಾವುದೋ ತೋಪಾಗುವ ಕನ್ನಡ ಚಿತ್ರಕ್ಕೆ ಬಿಟ್ಟಿ ಪ್ರಚಾರ ಒದಗಿಸಲು ತಥಾಕಥಿತ “ಹಿಂದೂ ಮತಾಂಧರ” ಮೇಲೆ ಗೂಬೆ ಕೂರಿಸಲು ಜೋಗಿಯ ಮಿತ್ರರು ಹೊರಟಿರುವುದು ವಿಷಾಧನೀಯ.

  ಪ್ರತಿಕ್ರಿಯೆ
 6. vishwa sunkasal

  ನಿಮ್ಮ ಓತಪ್ರೋತವಾದ ಬರವಣಿಗೆಯನ್ನು ನಾನು ಯಾವತ್ತೂ ಮೆಚ್ಚುತ್ತೇನೆ. ಕಣ್ಣು ತೆರೆಸುವ ಬರಹವಿದು.

  ಪ್ರತಿಕ್ರಿಯೆ
 7. chandrashekhar aijoor

  no doubt, ಇಲ್ಲಿನ ಸನಾತನಿಗಳು ‘ನಾವು ತಾಲಿಬಾನಿಗಳ ಅಪ್ಪಂದಿರು’ ಅನ್ನುವುದನ್ನು ತೋರಿಸಿಕೊಳ್ಳಲು ಹೊರಟಂತಿದೆ. ಬುದ್ಧ, ಕನಕ, ಚಾಪ್ಲಿನ್, ಜಲಗಾರ, ಜಾಡಮಾಲಿಗಳನ್ನು ಮುಟ್ಟುವ ಮುಟ್ಟಿಸಿಕೊಳ್ಳುವ ತಾಕತ್ತಿನ್ನು ಈ ದೇಶದ ಗೊಡ್ಡು ಸನಾತನಿಗಳ ಎದೆಗಳಲ್ಲಿ ಹುಟ್ಟಿಕೊಂಡಿಲ್ಲ. ಬಿಟ್ಟಿ ತಿಂದು ಉಡುಪಿಯ ಮಠದ ಹಂದಿಗಳು ಮಾತ್ರ ಕೊಬ್ಬಿವೆ ಅಂದುಕೊಂಡಿದ್ದೆ, ಆದರೆ ಮಠದ ಗಟಾರದ ಪರಮ ಪವಿತ್ರ ತೀರ್ಥ ಕುಡಿದವರು ಇಷ್ಟು ವಿಕೃತರಾಗಬೇಕೆ? ಜಾತಿಗೂ, ಮೈಬಣ್ಣಕ್ಕೂ , ಪ್ರತಿಭೆಗೂ ಒಂದಕ್ಕೊಂದು ಸಂಬಂಧವೇ ಇಲ್ಲ ಅನ್ನುವ ತಿಳಿವಳಿಕೆಯೇ ಈ ದೊಡ್ಡ ದೇಶಕ್ಕಿನ್ನು ಬಂದಿಲ್ಲ. ಯಾವತ್ತೋ ಶಿಲುಬೆಗೇರಿದ ಯೇಸು ಕ್ರಿಸ್ತನನ್ನೇ ಬಿಡದೆ ಶಿಲುಬೆಯಿಂದ ಎಳೆತಂದು ಮತ್ತೆ ಮತ್ತೆ ಕೊಂದವರಿಗೆ ಚಾಪ್ಲಿನ್ ಯಾವ ಲೆಕ್ಕ. ಜೋಗಿಯವರಿಗೆ ಲೇಖನದ ಜೊತೆಗೆ ತಮ್ಮ ಹಿಂದೂ ಐಡೆಂಟಿಟಿಯನ್ನು ಅಷ್ಟು ಉತ್ಸಾಹದಿಂದ ಹೇಳಿಕೊಳ್ಳುವ ಅಗತ್ಯವಿತ್ತೇ?
  ಕೆ.ಎಲ್.ಚಂದ್ರಶೇಖರ್ ಐಜೂರ್

  ಪ್ರತಿಕ್ರಿಯೆ
 8. ಕಂಡಕ್ಟರ್ ಕಟ್ಟಿಮನಿ 45 E

  ಹಾ ಹಾ ಹಾ.ಈ ನಿಮ್ಮ ಬರಹ ಓದಲು ಅವಕಾಶ ಕಲ್ಪಿಸಿದ ‘ಬಾಬೆಜ್’ನನ್ನು, ನನ್ನ ಪರವಾಗಿ ದಯವಿಟ್ಟು ಕ್ಚಮಿಸಿ ಗುರುಗಳೇ!!!

  ಪ್ರತಿಕ್ರಿಯೆ
 9. Purushotham Bilimale

  ದಕ್ಷಿಣ ಕನ್ನಡ ಎತ್ತ ಸಾಗುತ್ತಿದೆ ಮತ್ತು ಹೀಗೆ ಸಾಗಿದರೆ ಏನಾಗಬಹುದು ಎಂಬುದನ್ನು ಚಾಪ್ಲಿನ್ ಶೈಲಿಯ ವ್ಯಂಗ್ಯದಲ್ಲಿ ಹೇಳಿದ್ದಿರಿ. ಹೀಗೆ ಹೇಳುತ್ತಿರುವಂತೆ ಅತ್ತ ಹಿಂದೂ ಸಮಾಜೋತ್ಸವದ ತಯಾರಿ ನಡೆಯುತ್ತಿದೆ, ಇಂತಹ ಕೆಲಸಗಳು ತಾನಾಗಿಯೇ ಕುಸಿಯಲಿ ಅಂತ ಬಿಟ್ಟು ಬಿಡುವುದೋ ಅಥವಾ ಸಾಂಘಿಕ ಹೋರಾಟಕ್ಕೆ ತಯರಾಗುವುದೋ ಎಂಬ ಗೊಂದಲದಲ್ಲಿ ನಾವೆಲ್ಲಾ ಇದ್ದಂತಿದೆ. ಇವರನ್ನು ಇದಿರಿಸುವ ಶಕ್ತಿ ನಮ್ಮಲ್ಲಿ ಇಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಬೇಕೇ? ಬೌದ್ಹಿಕವಾಗಿ ನಾವೆಲ್ಲ ಬರೆಯುವುದು, ಚರ್ಚಿಸುವುದು ಇದ್ದದ್ದೇ. ಆದರೆ ಬೆಳೆಯುವ ಕೋಮುವಾದವನ್ನು ತಡೆಗಟ್ಟುವುದು ಹೇಗೆ? ಕರಾವಳಿ ಕರ್ನಾಟಕದ ಜನ ನಾಯಕರು ಅನಿಸಿಕೊಂಡ ಶ್ರೀ, ಮೊಯಿಲಿ, ಆಸ್ಕರ್, ಪೂಜಾರಿ ಮೊದಲಾದವರ ಪ್ರತಿಕ್ರಿಯೆ ಇದಕ್ಕೆ ಏನು?
  ಹೆಳವನ ಹೆಗಲ ಮೇಲೆ ಕುರುಡ ಕುಳಿತರೆ ಏನಾಗಬಹುದು? ನನಗಂತೂ ತಲೆ ಕೆಟ್ಟು ಹೋಗಿದೆ.

  ಪ್ರತಿಕ್ರಿಯೆ
 10. ಟೀನಾ

  ಜೋಗಿಯವರೆ,
  ಚಾಪ್ಲಿನ್ ಘಟನೆ ನಾಚಿಕೆಗೇಡು. ತಲೆತಗ್ಗಿಸುವ ಹಾಗಾಗಿದೆ.
  ದಯವಿಟ್ಟು ಇನ್ನೂ ಹೆಚ್ಚಿಗೆ ಬರೀರಿ ಇಂಥದರ ಬಗ್ಗೆ.
  ಹಯ್ಯೊ, ಈಗಲೆ ಹಿಟ್ಲರನ ಮಕ್ಕಳು ಎಲ್ಲ ಕಡೆ ತಲೆಯೆತ್ತಿ ಅಬ್ಬರಿಸೋಕೆ ಶುರುಹಚ್ಚಿದಾರೆ. ಇನ್ನುಹೀಗೇ ಮುಂದುವರೆದರೆ ನಾವೆಲ್ಲ ಯಹೂದಿಗಳಿಗೆ ಇಶ್ಯೂ ಮಾಡಿದ ಸ್ಟಾರ್ ಬ್ಯಾಡ್ಜುಗಳ ಥರೆ ಜಾತಿವಾರು ಐಡೆಂಟಿಫಿಕೇಶನ್ ಬ್ಯಾಡ್ಜುಗಳನ್ನ ಧರಿಸಿ ಓಡಾಡಬೇಕಾಗಿ ಬಂದರು ಆಶ್ಚರ್ಯ ಏನಿಲ್ಲ. ಇದನ್ನು ನಾವೆ ವೋಟು ಹಾಕಿ ಕುರ್ಚಿ ಏರಿದವರು ಸುಮ್ಮನೆ ಕೂತು ನೋಡುತ್ತಾರೆ. ಎಲ್ಲ ಢಮಾಕ್ರಸಿಯ ಲೀಲೆಗಳು!! ನೀವು ಹೇಳಿದ ಹಾಗೆ ನಾವು ತಣ್ಣಗೆ ಶಿಲಾಯುಗಕ್ಕೆ ಮರಳಿದರೇ ಒಳ್ಳೆಯದು ಅಂತ ಕಾಣತ್ತೆ. ವಿ ಡಿಸರ್ವ್ ಇಟ್.
  ಖೇದವಾಗುತ್ತಿದೆ.

  ಪ್ರತಿಕ್ರಿಯೆ
 11. keshav

  ಜೋಗೀ,
  ಇದೇನಿದು? ಕಂಪ್ಯೂಟರಿನಲ್ಲಿ ಟೈಪ್ ಮಾಡಿ ಕಳಿಸಿದ್ದೀರಾ? ನಾನು ಕೂಡ ಕಂಪ್ಯೂಟರಿನಲ್ಲಿ ಓದುತ್ತಿದ್ದೇನೆ? ಜ್ಙಾನ ಮಸ್ತಕದಿಂದ ಮಸ್ತಕಕ್ಕೆ ಹರಿಯಬೇಕೇ ಹೊರತು, ಮಸ್ತಕದಿಂದ ಕಂಪ್ಯೂಟರಿಗೆ, ಕಂಪ್ಯೂಟರಿನಿಂದ ಮಸ್ತಕಕ್ಕೆ ಬರಕೂಡದು. ಇದೇ ಕೊನೆ, ನನಗೆ ಗೊತ್ತು, ನೀವಿನ್ನೆಂದೂ ಕಂಪ್ಯೂಟರಿಗೆ ನಿಮ್ಮ ಬರಹ ಕಳಿಸಲಾರಿರಿ, ನಾನೂ ಕೂಡ ಕಂಪ್ಯೂಟರಿನಲ್ಲಿ ಓದುವ ಮಾತೇ ಇಲ್ಲ. ಏಕೆಂದರೆ ನಿಮ್ಮ ಬರಹ ನನ್ನ ಕಣ್ಣನ್ನು ಪೂರ್ತಿ ತೆರೆಸಿದೆ, ನಾನು ನಿಮಗೆ ಚಿರಋಣಿಯಾಗಿರುತ್ತೇನೆ. ಏನು ಗುರುದಕ್ಷಿಣೆ ಬೇಕೋ ಕೇಳಿ, ಕೊಡುತ್ತೇನೆ. ಚಾಪ್ಲಿನ್ನ ನೆಪದಲ್ಲಿ ನಿಮ್ಮ ಕಣ್ಣು ತೆರೆಸಿದ ಈ ಮಹನೀಯರುಗಳಿಗೆ, ಅವರ ದೆಸೆಯಿಂದ ನಮ್ಮ ಕಣ್ಣು ತೆರೆಸಿದ ನಿಮಗೆ ನಮೋನಮಃ. ನನ್ನ ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಹೇಗೆ ಎಂದು ಅಳುತ್ತ ಕೂತಿದ್ದೇನೆ.
  – ಕೇಶವ

  ಪ್ರತಿಕ್ರಿಯೆ
 12. sritri

  ಚಾರ್ಲಿ ಚಾಪ್ಲಿನ್ ಕ್ರಿಶ್ಚಿಯನ್ ಎಂದು ನನಗೂ ಈಗಲೇ ಗೊತ್ತಾಗಿದ್ದು. ಜೋಗಿಯವರೇ ನಿಮಗೆ ವ್ಯಂಗ್ಯವನ್ನು ಸಮರ್ಥವಾಗಿ ಬಳಸುವುದು ಹೇಗೆಂದು ನಿಮ್ಮಿಂದ ಕಲಿಯಬೇಕು 🙂
  ಈಗಲೇ ಗಲ್ಲಿಗೊಂದರಂತೆ ಕೈಕಾಲು ಮುರಿದುಬಿದ್ದಿರುವ ಮೂರ್ತಿಯ ನಡುವೆ ಚಾರ್ಲಿ ಚಾಪ್ಲಿನ್ ಮೂರ್ತಿಯು ಸೇರಬೇಕೆ? ಅದರ ಬದಲು ಚಾಪ್ಲಿನ್ನನ್ನು ಸದಾಕಾಲ ನೆನಪಿಟ್ಟುಕೊಳ್ಳಲು ಇದ್ದಕ್ಕಿಂತ ಬೇರೆ ಉಪಾಯವೇ ಇಲ್ಲವೇ?

  ಪ್ರತಿಕ್ರಿಯೆ
 13. sritri

  (ತಿದ್ದುಪಡಿ) ಜೋಗಿಯವರೇ, ವ್ಯಂಗ್ಯವನ್ನು ಸಮರ್ಥವಾಗಿ ಬಳಸುವುದು ಹೇಗೆಂದು ನಿಮ್ಮಿಂದ ಕಲಿಯಬೇಕು .

  ಪ್ರತಿಕ್ರಿಯೆ
 14. ಶಾಂತಲಾ ಭಂಡಿ

  ಪ್ರಿಯ ಜೋಗಿ…
  ಆಳದ ಅಳಲುಗಳನ್ನು ಅರ್ಥೈಸಿಕೊಳ್ಳಬಹುದಾದ ವ್ಯಂಗ್ಯವನ್ನಾಗಿಸುವಲ್ಲಿಯೂ ನೀವು ಬಳಸುವ ಹದವಾದ ಪದಗಳು ಮರಳಿ ನಮ್ಮನ್ನು ಹಿಡಿದಿಡುತ್ತವೆ. ಇಂಥದೇ ಇನ್ನಷ್ಟು ಬರಹಗಳನ್ನು ದಯಪಾಲಿಸಿ.
  ಪ್ರೀತಿಯಿಂದ,
  -ಶಾಂತಲಾ ಭಂಡಿ.

  ಪ್ರತಿಕ್ರಿಯೆ
 15. manjunatha ms

  ತುಂಬಾ ಚೆನ್ನಾಗಿ ಬರೆದಿದ್ದೀರಿ ಜೋಗಿಯವರೆ,ಈ ಲೇಖನ ಓದಿದ ಮೇಲಾದರೂ ಇಂಥ ಜನಗಳಿಗೆ ಬುದ್ದಿ ಬರಲಿ.ರಾಜಕಾರಣಿಗಳು ಬಿತ್ತಿದ ವಿಷದ ಬೀಜ ಎಂಥ ಫಲ ಬಿಟ್ಟಿದೆ ನೋಡಿ.ಜಾತಿ,ಜಾತ್ಯಾತೀತತೆ ಎರಡೂ ಅಸಹ್ಯ ಹುಟ್ಟಿಸುವಷ್ಟು ಮಲಿನವಾಗಿವೆ.ಕಲೆ ಕೊಳೆಯಾಗುವುದಕ್ಕೆ ತುಂಬಾ ಸಮಯ ಬೇಕಿಲ್ಲ.

  ಪ್ರತಿಕ್ರಿಯೆ
 16. ಸುಪ್ತದೀಪ್ತಿ

  ಅಯ್ಯೋ ರಾಮ ರಾಮಾ… ದೇವರೇ…. ನಾನು ಇನ್ನು ಮೇಲೆ ಕಿರಿಸ್ತಾನರ ಈ ಸಮೃದ್ಧ ದೇಶದಲ್ಲೇ ಸಿಕ್ಕಿಬಿದ್ದೆನೆ? ನಡೆದುಕೊಂಡು ಊರು ಸೇರಲೂ ಸಾಧ್ಯವಿಲ್ಲವೆ? ಭಗವಂತಾ ಹನುಮಂತಾ, ಒಮ್ಮೆ ಬಂದು ನನ್ನನ್ನೂ ನನ್ನ ಗಂಡನನ್ನೂ ಈ ದೇಶದಿಂದ ಹೊತ್ತುಕೊಂಡು ಹೋಗಿ ನಮ್ಮ ಭರತ ಭೂಮಿಯ ಪುಣ್ಯನೆಲದಲ್ಲಿ ಇಳಿಸಿಬಿಡಪ್ಪಾ. ಅಲ್ಲಿಗೆ ಸೇರಿದ ಮೇಲೆ, ಅಲ್ಲಿಯ ಮಣ್ಣಿನಲ್ಲೇ ಬೆಳೆದ ನೂರೆಂಟು ಬಾಳೆಹಣ್ಣುಗಳನ್ನು ನಿನಗೆ ಅರ್ಪಿಸುತ್ತೇನೆ.
  ಈ ಜ್ಞಾನೋದಯ ನೀಡಿದ ಗುರುಃಬ್ರಹ್ಮ ಜೋಗಿಯವರೇ, ನಿಮ್ಮಡಿಗೂ ಹೊಸದೊಂದು ಪಾದುಕೆ ಅರ್ಪಿಸುತ್ತೇನೆ.

  ಪ್ರತಿಕ್ರಿಯೆ
 17. ಸುಸಂಕೃತ

  ಹೆ ಹೆ ಹೆ…ವ್ಯಂಗ್ಯದ ಪರಮಾವಧಿಯಿದು…
  ಸಾರ್..ನಿಮ್ಮ ಲೇಖನ ನೋಡಿದ ಉಡುಪಿಯ ಆ ಕೆಲ ‘ಜನ’ಹಿತ ಸಂರಕ್ಷಕರು ಮುಟ್ಟಿನೋಡ್ಕೋತಿದಾರಂತೆ!

  ಪ್ರತಿಕ್ರಿಯೆ
 18. ravi

  ಆದರೆ ಜೋಗಿಯವರೆ,
  ಆದೊಂದು ಪಬ್ಲಿಸಿಟಿ ಸ್ಟಂಟ್
  ಅದೊಂದು ನಿಷೇಧಿತ ಪ್ರದೇಶ. ಮೂರ್ತಿ ಸ್ಥಾಪಿಸಲು ಅವರಿಗೆ ಪರ್ಮಿಶನ್ ಕೊಟ್ಟಿಲ್ಲ.
  ಈಗ ಹೇಗೂ ಧಾರ್ಮಿಕ ಅಸಹನೆ ದ.ಕ., ಉಡುಪಿಯಲ್ಲಿದೆಯಲ್ಲ. ಬಿಳಿಮಲೆಯಂಥವರು ಇದಕ್ಕೆ ಉಪ್ಪು ಖಾರ ಹಾಕುತ್ತರೆಂದು ನಿಮ್ಮ ಸನ್ಮಿತ್ರ ಹೇಮಂತ್ ಹೆಗಡೆಗೂ ಗೊತ್ತು. ಪ್ರಚಾರ ತಂತ್ರದಿಂದಾಗಿಯೇ ಅಲ್ಲವೇ ನೀವೂ ಬರೆದದ್ದು

  ಪ್ರತಿಕ್ರಿಯೆ
 19. Chetan Shetty

  ಏನು ಸಾರ್ ಜೋಗಿಯವರೇ – ಇಡೀ ಚಾರ್ಲೀ ಚಾಪ್ಲಿನ್ ನಾಟಕದ ಸೂತ್ರಧಾರರು ತಾವೆಂದು ಯಾರೋ ಬ್ಲಾಗಿಸಿದ್ದಾರೆ ನೋಡಿ http://kshakirana.blogspot.com

  ಪ್ರತಿಕ್ರಿಯೆ
 20. ರಾಧಾಕೃಷ್ಣ ಆನೆಗುಂಡಿ

  ಎಂಥಾ ದುರಂತ. ಪತ್ರಿಕೆಯಲ್ಲಿ ಸುದ್ದಿ ಓದಿದಾಗ ನನಗೂ ನೋವಾಯಿತು.
  ಮಂಗಳೂರಿನ ಅಲೋಶಿಯಸ್,ಆನ್ಸ್ ಇವೆಲ್ಲಾ ಪೊರ್ಬುಗಳದ್ದು ಅಂತಾ ದೇಶ ಭಕ್ತರಿಗೆ
  ಗೊತ್ತಿಲ್ಲ ಅನ್ನಿಸುತ್ತೆ.

  ಪ್ರತಿಕ್ರಿಯೆ
 21. ಜೈಕುಮಾರ್

  ಈ ಲೇಖನ ಜೀವ ವಿರೋಧಿಗಳಿಗೊಂದು ಒಳ್ಳೆಯ ಪಾಠವಾಗಬೇಕಿತ್ತು. ಆದರೆ ನೀವು ತೂರಿದ ಎಕ್ಕಡ ಎಲ್ಲ ಬಿಟ್ಟು ಭಂಗಿ ನೆಡುವ ನರ ರಾಕ್ಷಶರಿಗೆ ತಾಗಿದರೂ ಅದೇನೂ ಅಲ್ಲ. ಇವತ್ತು ಮೂರು ಬಿಟ್ಟ ದೊಡ್ದೊರಿಗೆ ಅದೂ ತಾಗದಿದ್ದರೂ ಸಂವೆದನಾಶೀಲರಿಗೆ ತಾಗುವಂತಿದೆ.
  ಬಾಯಿ ಚಪ್ಪರಿಸುವಂತೆ ಬರೆದಿದ್ದಕ್ಕೆ ಥ್ಯಾಂಕ್ಸ್ ಜೋಗಿ.

  ಪ್ರತಿಕ್ರಿಯೆ
 22. shama

  ನಿಮ್ಮ ಹಿಂದೂ ಪುಣ್ಯ ಪಾದಕ್ಕೆ ವಂದೇ.. ನನ್ನ ಕಣ್ಣು ತೆರೆಸಿ ತಪ್ಪು ಮಾಡಿದಿರಿ.. ನಾನು ಓದಿದ್ದು ಕ್ರಿಶ್ಚಿಯನ್ ಶಾಲೆಯಲ್ಲಿ.. ನಿಮ್ಮಿಂದಾಗಿ ಈಗ ಮತ್ತೆ ಹಿಂದೂ ಶಾಲೆಗೆ ಒಂದನೇ ಕ್ಲಾಸಿಗೆ ಸೇರುವಂತಾಗಿದೆ.. ಅಕಟಕಟಾ ನಿಮ್ಮ ಬರಹದ ಪರಿಣಾಮವೇ..
  _ಶಮ, ನಂದಿಬೆಟ್ಟ

  ಪ್ರತಿಕ್ರಿಯೆ
 23. ಮಧುಸೂದನ್.ವಿ

  ವಿದ್ಯೆ ಬುದ್ದಿ ಹಾಗೂ ಹಣಕಾಸಿನಲ್ಲಿಯೂ ಶ್ರೀಮಂತ ಜಿಲ್ಲೆ ಎನಿಸಿದ್ದ ದಕ್ಷಿಣ ಕನ್ನಡದ ಕೆಲ ವಿಚಾರವಂತಿಕೆಯ ಕೊರತೆ ಏಕೆ ಕಾಡುತ್ತಿದೆಯೊ ಗೊತ್ತಿಲ್ಲ. ಮೂಲಭೂತವಾದ ಎಂಬುದು ಎಷ್ಟು ಕ್ರೌರ್ಯ ಎಂಬುದನ್ನು ಈ ವಿದ್ಯಾಮಾನಗಳಿಂದಲಾದರೂ ತಿಳಿದುಕೊಳ್ಳಬೇಕು. ಸಾಂಸ್ಕೃತಿಕವಾಗಿಯೂ ಶ್ರೀಮಂತ ಎನಿಸಿದ ಜಿಲ್ಲೆಗೆ ಆಗ್ಗಿಂದಾಗ್ಗೆ ಇಂತಹ ಕಪ್ಪು ಚುಕ್ಕೆಗಳು ಅಂಟಿಕೊಳ್ಳುತ್ತಲೇ ಇವೆ. ಈಗಲಾದರೂ ಮೂಲಭೂತವಾದಿಗಳು ಈ ಕುರಿತು ಆಲೋಚಿಸಬೇಕು ಹಾಗೂ ಮರಕ್ಕೆ ಕೊಡಲಿ ಕಾವೇ ಮೂಲ ಎಂಬುದನ್ನು ತಪ್ಪಿಸುವ ಪ್ರಯತ್ನ ಮಾಡಬೇಕು.

  ಪ್ರತಿಕ್ರಿಯೆ
 24. varsa sagar

  How the district administartion allowed the structure to come up with in 200 mtrs of sea? are they not aware of coastal zone regulation act – CZR? why fuss about the statue of chaplin or vivekanada or musuri krishnamoorthy? do not allow any stucture for that matter with in 200 meters op sea.

  ಪ್ರತಿಕ್ರಿಯೆ
 25. ದೇವು

  ಇನ್ನು ಮುಂದೆ ಮನೆಯಲ್ಲಿ ಯಾರೂ ಟೊಮೆಟ್ಯೋ ಮತ್ತು ಈರುಳ್ಳಿ ಬಳಸುವ ಹಾಗಿಲ್ಲ. ಅವೆಲ್ಲ ದಕ್ಷಿಣ ಅಮೆರಿಕಾದಿಂದ ಬಂದವು ಎಂದು ಬಿ.ಜಿ.ಎಲ್‌.ಸ್ವಾಮಿ ಬರೆದಿದ್ದಾರಲ್ಲ. ಯಾರಾದರೂ ತಪ್ಪಿ ಈರುಳ್ಳಿ, ಟೊಮೆಟ್ಯೋ ಬಳಸಿದರೆ ಅವರ ಮನೆಯೊಳಗೆ ಹೊಕ್ಕು ಹೊಡೆಯುವ ದಿನಗಳು ದೂರವಿಲ್ಲ ಅನ್ನಿಸುತ್ತಿದೆ. ಯಾಕೋ ಭಯವಾಗುತ್ತಿದೆ.
  ದೇವು

  ಪ್ರತಿಕ್ರಿಯೆ
 26. Prashanth davanagere

  idella yaake aaguttide! jagattu gramada parikalpanege teredukondiruvaga identha asabhya tarale. Jogi anna nimma vishadakke nannadu matavide. nimma satvika sittige nannadondu kopada ‘cheee!’ ide.

  ಪ್ರತಿಕ್ರಿಯೆ
 27. Prashanth davanagere

  sadya! bengalurina kela rastegalige christian hesarugalu yaake endu innu tante takararu shuruvagilla! aa kaalavu doora illa endu kaansutte.

  ಪ್ರತಿಕ್ರಿಯೆ
 28. kaligananath Gudadur

  ಪಾಠ ಕಲಿಸುವ ಸಮಯ…
  ಜೋಗಿ ಸರ್, ಬಲು ಜೋರು ಬರೆದಿದ್ದೀರಿ. ಇನ್ನೂ ನಾವೆಲ್ಲಾ ಒಂದಾಗಿ ಈ ಸನಾತನಿ ಸುಡೋ ಹಿಂದೂವಾದಿಗಳಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಕಲಾವಿದ, ಸಾಹಿತಿ, ಹೋರಾಟಗಾರ, ಪತ್ರಕರ್ತರನ್ನು ಅಷ್ಟಾಗಿಯೂ ಜನಸಾಮಾನ್ಯರು ಅವನ ಜಾತಿಯಿಂದ ಗುರುತಿಸಲು ಇಷ್ಟಪಡಲಾರರು. ಅದರಲ್ಲೂ ಲೆಜೆಂಡ್ಗಳನ್ನು ಅದ್ಹೇಗೆ ಜಾತಿ, ಜನಾಂಗ, ಬಣ್ಣ, ಪ್ರದೇಶ, ಧರ್ಮ, ದೇಶ ಎಂದು ಗುರುತಿಸಲಾದೀತು. ಈ ಮೂರ್ಖರು ಕೇವಲ ದಕ್ಷಿಣ ಕನ್ನಡದಲ್ಲಷ್ಟೆ ಅಲ್ಲ; ಅಂಥವರನ್ನು ಪೋಷಿಸುವ ಪಕ್ಷ, ಸಕರ್ಾರಗಳೇ ಇರುವಾಗ ಇವರು ಇಲ್ಲದ ಜಾಗೆಯಿಲ್ಲ. ಕೆಲವೇ ದಿನಗಳಲ್ಲಿ ಮಹಾನ್ ರಾಷ್ಟ್ರ ನಾಯಕರ ಸಾಲಿನಲ್ಲಿ ಯಡಿಯೂರಪ್ಪ, ಅಡ್ವಾಣಿ, ವಾಜಪೇಯಿ, ಮೋದಿ, ಬಾಳಠಾಕ್ರೆ, ಮುತಾಲಿಕ್, ತೊಗಾಡಿಯಾ ಸೇರಿದಂತೆ ಸಂಘ ಪರಿವಾರದ ಮುಖಂಡರ ಫೋಟೊಗಳನ್ನು ಎಲ್ಲಾ ಸಕರ್ಾರಿ ಮತ್ತು ಸಾರ್ವಜನಿಕ ಕೇಂದ್ರ ಹಾಗೂ ಕಚೇರಿಗಳಲ್ಲಿ ಕಡ್ಡಾಯವಾಗಿ ಜೋತುಬೀಳಿಸಬೇಕು ಎಂಬ ಆರ್ಡರ್ ಬಂದರೂ ಅಚ್ಚರಿಪಡಬೇಕಿಲ್ಲ. ನಿಮ್ಮ ನೇರ, ಇರಿಯುವ ಬರೆಹದಿಂದ ನಮ್ಮೆಲ್ಲರಲ್ಲೂ ಚೈತನ್ಯ ತುಂಬಿದೆ. ಕೇವಲ ಬರೆಹದ ಮೂಲಕ ಸಾವಿರ ಪುಟಗಳಲ್ಲಿ ಬರೆದರೂ ಇಂಥಹ ಮೂಢರ ಮನಸ್ಸು ಬದಲಾದೀತು ಎಂದು ಬಯಸುವುದೂ ತಪ್ಪು. ಸಾಧ್ಯವಿದ್ದರೆ ನಾವೆಲ್ಲರೂ ಬೀದಿಗಿಳಿದು ಸನಾತನಿಗಳ ಕಿವಿಹಿಂಡುವ ಕಾಲ ಸನ್ನಿಹಿತವಾಗಿದೆ. ಇಲ್ಲದಿದ್ದರೆ ಕೇವಲ ಹೇಮಂತ ಹೆಗಡೆಗೆ ಕೇಳಿದ ಪ್ರಶ್ನೆ ನಮ್ಮ ಪ್ರತಿ ಮಾತಿಗೂ, ಅಕ್ಷರ, ಸೀನು, ಉಗುಳು ಏನೆಲ್ಲಾ ಕ್ರಿಯೆಗಳಿಗೂ ಅನ್ವಯಿಸಿದರೂ ಅಚ್ಚರಿಪಡಬೇಕಿಲ್ಲ. ನೋಡಿ, ಆಕ್ಟಿವಿಸ್ಟ್ ರೀತಿಯಲ್ಲಿ ಕೆಲಸ ಮಾಡಿದರೆ ಮಾತ್ರ ಏನಾದರೂ ಸಾಧ್ಯವಾದೀತು. ಇಲ್ಲವಾದರೆ ನಮ್ಮನ್ನೆಲ್ಲಾ ಏನೋ ಬರೆತಾವೆ… ಬೊಗಳ್ತಾವೆ… ನಮಗೇನೂ ಆಗಲ್ಲ ಎಂದು ಉಗುಳಿದರೂ ಮುಖ ಒರೆಸಿಕೊಳ್ಳುವ ಭಂಡರು ಭಾವಿಸುವುದರಲ್ಲಿ ಅನುಮಾನವಿಲ್ಲ.
  ಅನ್ನಿಸಿದ್ದನ್ನೆಲ್ಲಾ ಬರೆದುಬಿಟ್ಟೆ…
  -ಕಲಿಗಣನಾಥ ಗುಡದೂರು

  ಪ್ರತಿಕ್ರಿಯೆ
 29. Vishwanath

  @Varsha –
  CRZ issure is raked up only after the issue became public. But the public who opposed the statue did say that chaaplin was a christian, which isn’t justified. Why club religion, if you don’t want something to happen? Give proper reasons justified under law, and none will disobey that.

  ಪ್ರತಿಕ್ರಿಯೆ
 30. ಬಸವರಾಜ ಹಳ್ಳಿ

  ತಾವು ಹಿಡಿಸಿಕೊಂಡ ಧರ್ಮದ ಹುಚ್ಚು ಇತರರಿಗೆ ಹಚ್ಚಿ ಮನಸುಗಳನ್ನು ಒಡೆಯುತ್ತಿರುವ ಆ ಮೂಲಕ ಸಮಾಜದಲ್ಲಿ ಬೆಂಕಿ ಹೊತ್ತಿಸುತ್ತಿರುವವರಿಗೆ ತಕ್ಕ ಪಾಠ ಕಲಿಸಲು ಸಾಮೂಹಿಕ ಹೋರಾಟ ಅವಶ್ಯಕವಿದೆ. ಕೇವಲ ಚಚರ್ೆಯಲ್ಲಿ ನಮ್ಮ ಅಭಿಪ್ರಾಯಗಳಲ್ಲಿ ಮಾತ್ರ ಖಂಡಿಸುವುದಷ್ಟೆ ಅಲ್ಲ ನಮ್ಮ ಸುತ್ತಮುತ್ತಲೂ ಇರುವ ಇಂತಹ ಕೊಳಕು ಜೀವಿಗಳ ವಿರುದ್ದ ಚಾಟಿ ಬೀಸಬೇಕು. ‘
  – ಬಸವರಾಜ ಹಳ್ಳಿ

  ಪ್ರತಿಕ್ರಿಯೆ
 31. ಅಜಯ್

  ಚೆನ್ನಾಗಿದೆ ಜೋಗಿಯವರ ಪ್ರಲಾಪ ಮತ್ತು ಭಟ್ಟಂಗಿಗಳ ಕಾಮೆಂಟ್ ಪ್ರತಾಪ 🙂

  ಪ್ರತಿಕ್ರಿಯೆ
 32. varsa sagar

  Mr. Vuiswanath, are there when the so called people said that Chaplin was a christian? I distanced from hindu or christiann issue. I raised costal regulation rules. ok then i will leave this topic, bye

  ಪ್ರತಿಕ್ರಿಯೆ
 33. S,N,Hebbar

  Why this fuss? I do not know who are you. Somebody directed me to this blog. Is this a publicity stunt started on behalf of an unknown film man to get an oscar? Because, so far as awards in respect of Indian topics, only an anti-Hindu line can get close to an Oscar or a Booker.Has anybody demanded for erecting a statue of Chaplin? If it was for film shooting who prevents the man from making setiings of the statue be it for 1000 feet. The trouble started only when people came to know the statue is permanent. It is the problem of the locals. There was no necessity of internationalising the issue just because the hapless BJP is ruling in this part of the country. I hope this comment will see the light of the day in this blog.

  ಪ್ರತಿಕ್ರಿಯೆ
 34. ಶಂಕರ

  ಜೋಗಿಯ ವಾದ ತೀರಾ ಮಕ್ಕಳ ವಾದದಂತೆ ಬಾಲಿಶವಾಗಿದೆ. ಟೀಕಿಸುವುದರಲ್ಲೂ ಬಾಲಿಶತನವೆ? ಚಾಪ್ಲಿನ್ ಸಿನಿಮಾ ನಾನು ನೋಡಿಲ್ಲ. ಅದು ನನ್ನ ತಪ್ಪಲ್ಲ. ನೋಡಬೇಕಾಗಿಯೂ ಇಲ್ಲ. ಎಂದೂ ನೋಡದಿದ್ದವರ ಪ್ರತಿಮೆಯನ್ನು ನಿಲ್ಲಿಸಿದರೆಷ್ಟು ಬಿಟ್ಟರೆಷ್ಟು? ಯಾರೋ ನಾಲ್ಕೈದು ಅತಿ ಜ್ಞಾನಿಗಳು ಚಾಪ್ಲಿನ್ ಅಥವ ಷೇಕ್ಸ್‍ಪೀಯರನ ಪ್ರತಿಮೆ ನಿಲ್ಲಿಸುತ್ತಾರೆ ಮತ್ತು ಉಳಿದ ಒಂದಿಷ್ಟು ಮಂದಿ ಅದು ಬೇಡ ನರಸಿಂಹರಾಜು, ವಿವೇಕಾನಂದರ ಪ್ರತಿಮೆ ನಿಲ್ಲಿಸಿ ಎಂದು ಹೇಳುತ್ತಾರೆ ಅಂದರೆ ಅವನ್ನೆಲ್ಲಾ ಎಲ್ಲಾ ತಿಳಿದವರ ಹಾಗೆ…ಎಲ್ಲವನ್ನೂ ಖಂಡಿಸುವ ಬುದ್ದಿ(ರಾಜಕಾರಣಿ?)ಜೀವಿಗಳಂತೆ ಆಡುವುದು ಜೋಗಿಗೂ ತರವಲ್ಲ. ಮುಖ್ಯವಾಗಿ ಬರಹಗಾರನಿಗೆ.

  ಪ್ರತಿಕ್ರಿಯೆ
 35. Dr. BR. Satyanarayana

  ಸಿಂಹ ಅವರ ಮನೆಗೆ ಹೋಗಿದ್ದಾಗ, ಚಾಪ್ಲಿನ್ ಕಂಬವನ್ನು ಹತ್ತಾರು ಬಾರಿ ಮುಟ್ಟಿ ಮುದಗೊಂಡಿದ್ದೆ. ಚಾಪ್ಲಿನ್ ಕಂಬವೇ ಏಕೆ? ಎಂದು ಸಿಂಹ ಹೇಳುತ್ತಿದ್ದ ವಿವರಣೆ ಕೇಳಿ ನಕ್ಕಿದ್ದೆ. ಆಗಲೂ ನನಗೆ ಚಾಪ್ಲಿನ್ ಕ್ರಿಶ್ಚಿಯನ್ ಎಂದು ಗೊತ್ತಾಗಲೇ ಇಲ್ಲ! ನಮ್ಮ ಮೇಷ್ಟ್ರುಗಳು ತಿಳಿಸಲಿಲ್ಲ. ಛೇ! ಎಂಥಾ ಅನ್ಯಾಯವಾಯಿತು? ಪ್ರಾಯಶ್ಚಿತ್ತಕ್ಕೇನು ಮಾಡುವುದೆಂದು ಕರಾವಳಿಯ ಮಂದಿಯನ್ನೇ ಕೇಳಬೇಕು, ಅಷ್ಟೆ!

  ಪ್ರತಿಕ್ರಿಯೆ
 36. Siri

  ಚಿತ್ರರಂಗದಲ್ಲಿ ಅಷ್ಟೆಲ್ಲಾ ಹಣವಿದೆಯಾ , ಚಾಪ್ಲಿನ್ ಮೂರ್ತಿಯಿಂದ ಏನಾದರೂ ಲಾಭ ಇದೆಯಾ ಅನ್ನುವುದೆಲ್ಲ ಮುಖ್ಯವಲ್ಲ. ಆ ಮೂರ್ತಿಯನ್ನು ಸ್ಫಾಪಿಸುವುದಕ್ಕೆ ಪರಿಸರದ ಕಾರಣಗಳಿದ್ದರೆ ಅದು ತಪ್ಪೇ. ಆದರೆ ಜಾತಿಯ ಕಾರಣವನ್ನು ಮುಂದಿಟ್ಟಿರುವುದನ್ನು ಒಪ್ಪುವುದಕ್ಕಾಗುವುದಿಲ್ಲ. ಇದು ಅನಗತ್ಯ ವಿವಾದ ಎಂದೂ ಅನ್ನಿಸುವುದಿಲ್ಲ. ಜಾತಿಯ ಕಾರಣಕ್ಕೆ ಜನ ನಿರಾಕರಿಸಿದರು ಎಂದು ಸುಮ್ಮನೆ ಹೇಳುವಂಥ ಯೋಚನೆ ಯಾರಿಗೂ ಬರುವುದಕ್ಕೆ ಸಾಧ್ಯವಿಲ್ಲ. ಯಾವ ಸೃಜನಶೀಲ ವ್ಯಕ್ತಿಗೂ ಚಾಪ್ಲಿನ್ ಜಾತಿ ನೆನಪಾಗದು ಎಂಬುದೂ ಸತ್ಯ.

  ಪ್ರತಿಕ್ರಿಯೆ
 37. jithunidle

  jogiyavara lekhanadalli madugattidda vishada novu manamuttuvanthittu naavu da.kadavuru antha hemme paduthidda diagalu kaleduhodavu.
  -jithunidle, Shivamogga

  ಪ್ರತಿಕ್ರಿಯೆ
 38. bharath raj

  prashne iruvudu chaplin hindu’na christian’a annuvudalla……. ondu devaalayada hattira ‘inthaha’ ondu moorthy’yannu sthapisalu horatiruvudu bhaalisha. kevala ‘chaplin’ maatra’valla alli kannada’da Dr.Rajkumar’a prathime sthapisalu horataru adakke prathibhatane iruttade. kalaavidarannu kale’indale guruthisabeku,gouravisabeku…. moorthy,prathime’galu avrigeke……….

  ಪ್ರತಿಕ್ರಿಯೆ
 39. malathi S

  Charlie Chaplin? christian??
  ….and All this while i thought he was a human being.
  what an eye-opener
  malathi S

  ಪ್ರತಿಕ್ರಿಯೆ
 40. ಚಂದ್ರಕಾಂತ

  ಜೋಗಿಯವರೆ
  ಮೊದಲಿನಿಂದಲೂ ನಿಮ್ಮ ಬರಹಗಳನ್ನು ಮೆಚ್ಚಿದವಳು ನಾನು. ಈ ಬರಹವಂತೂ ಅದೆಷ್ಟು ಸಂಯಮ, ವಿಡಂಬನೆಸಮತೂಕ ಕಾಯ್ದುಕೊಂಡಿದೆ ಎಂದು ಹೇಳಲು ಸಾಧ್ಯವಿಲ್ಲ. ಇನ್ನೂ ಯಾವುದಾದರೂ ಕ್ರಿಶ್ಚಿಯನ್ನರು ಕಂಡುಹಿಡಿದಿರುವುದನ್ನು ಮರೆತಿದ್ದೇವೆಯೇ ಎಂದು ಯೋಚಿಸುತ್ತಿದ್ದೆ.!!

  ಪ್ರತಿಕ್ರಿಯೆ
 41. arunjoladkudligi

  ,,sir adbutavaagi baredidderi, e dharmika mataandara avivekakke nageyu barutide nanage. manushyrannu manushyarannagi noduvudannu mareyuttiruva e hottalli nimma baraha nannantaha asankyta janara dvani kuda.nimma hindina barahadalli mulabhutavaadavannu neravaagi virodisada raksanatmaka aata embantaha dhorane eruvudannu gamanisidde. ega estu katu vyangyadalli barediruva baraha nodidare nimmolagina nijada barahagaara ecchettiddane endu khushiyaaguttide. nimage nanna namana.

  ಪ್ರತಿಕ್ರಿಯೆ
 42. aprameya

  ಇವತ್ತು ಇದನ್ನ ನೋಡಿದೆ …. ಕಾಮೆಂಟ್ಸ್ ಕೂಡ ಓದಿದೆ ….ಎಲ್ಲರೂ ಓದಿರೋರೆ ಹಿಂಗೆ ಮಾತಾಡಿದ್ರೆ ಇನ್ನಾ “ಹಳ್ಳಿ ಗುಗ್ಗುಗಳು ” ನಾವ್ ಹೆಂಗ್ ಹೇಳಬೇಕೋ /ಮಾತಾಡಬೇಕೋ ….. ಗೊತ್ತಾಗ್ತಾಇಲ್ಲಾ ಅಣ್ಣಾ …..
  ನಾನು ಕೂಡ ಧರ್ಮ/ಜಾತಿ ನಮ್ಬಿರೋನೆ … ಆದ್ರೆ ಮನಿಂದ ಹೊರಗೆ ಕಾಲಿಟ್ ಮೇಲೆ ನಾನು ಒಬ್ಬ ಭಾರತೀಯ ಅನ್ನಕೊಂಡಿದ್ದೆ …. ಆದ್ರೆ ಇಂತ So called ಬುದ್ದಿಜೀವಿಗಳು ಹೇಳೋದ್ನ …ಕೇಳಿದ್ರೆ ನಾಳೆ ಬಗ್ಗೆ ನಾನು ಯೋಚನೆ ಮಾದಬೇಕದಿದ್ದೆ … ಪರಿಸರ ಹಾಳ್ ಆಗತೈತೆ ಅನ್ನೋ ….common sense ಬೇಡ್ವ …ನಮ್ಮ STAR director ಹೇಮಂತ್ ಅವರಿಗೆ & supporters ಗೆ!!??? ಇಲ್ಲಾ ಅಲ್ಲೇ ಆಯಪ್ಪಂದು ಮೂರ್ತಿ ಬೇಕು ಅಂದ್ರೆ ಬುದ್ದಿ ಜೀವಿಗಳೆಲ್ಲ..ಪ್ರತಿಭಟನೆ ಮಾಡ್ಲಿ…ಆಮೆಗೆ ಇನ್ನೊಂದು ಸಮಸ್ಯೆ ಬರತೈತೆ ಬುದ್ದಿಜೀವಿಗಳೆಲ್ಲ ಅಲ್ಲಿಗೆ Jump
  ನಮ್ಮ ದೋಸ್ತ್ ಹೇಳ್ತಾ ಇದ್ದ ಈ (ಬುದ್ದಿ)ಜೀವಿಗಳು ” ಆರ್ ಕೊಟ್ರೆ ಅತ್ತೆ ಕಡೆ ಮೂರ್ ಕೊಟ್ರೆ ಸೊಸೆ ಮಾತಡ್ತ್ಹರಂತೆ” ದಿಟವೇ??
  ಆ ಜಾಗದಾಗೆ ಚಾಪ್ಲಿನ್ ಬಂದರೇನು ಸ್ವಾಮಿ ವಿವೇಕಾನಂದ ಬಂದರೇನು…ನಾವ್ ದುಡ್ಕೊಂಡು ತಿನ್ನೊಂದು ತಪ್ಪಲ್ಲ…. ” ಹೋಗಿ ಒಟ್ಟಿಗೆ ಕೆಲಸ ಮಾಡ್ರಲ್ಲಾ ,ಎಲ್ಲರ್ಗೂ ಒಳ್ಳೇದು ಆತೈತೆ ” ಅನ್ನೋ ನಮ್ಮ ಮೇಸ್ತ್ರಿಗೆ ಬುದ್ದಿಲ್ಲ…( ಇದನ್ನೇ ನಂಬ್ಕೊಂಡು ಇರೋರ್ ಬಗ್ಗೆ ಕನಿಕರ ಬೇಡ್ವೆ)
  ಅಮೆಗೆ ಸಿಗ್ತೀನಿ ಬಿಡಣ್ಣಾ…. ಟೈಮ್ ಆಯಿತು ………

  ಪ್ರತಿಕ್ರಿಯೆ

Trackbacks/Pingbacks

 1. ಕೇಳಿಲ್ಲಿ ಜೋಗಿ ಹಾಡುವ ಹಾಡ… « ನಗೆ ನಗಾರಿ ಡಾಟ್ ಕಾಮ್ - [...] ಅರ್ಥವಾಗಲಿಲ್ಲವೇ? ಬುದ್ಧಿಯ ಬೀಗ ತೆರೆಯಲಿಲ್ಲವೇ? ಬೆಳಕು ಕಾಣಲಿಲ್ಲವೇ? ಕೇಳಿಲ್ಲಿ ಜೋಗಿ ಹಾಡುವ ಹಾಡ… [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: