ಜೋಗಿ ಬರೆದಿದ್ದಾರೆ: ನಾ ತುಕಾರಾಂ ಅಲ್ಲ!

untitled1ಜೋಗಿ

ದೈನಿಕದ ಬೇಸರಗಳನ್ನು ಮೀರುವುದಕ್ಕೆ ಜೀವ ಏನೇನು ಕಸರತ್ತುಗಳನ್ನು  ಮಾಡುತ್ತದೆ, ಎಂತೆಂಥಾ ಅಟಗಳನ್ನು ಅಡುತ್ತದೆ ಎಂದು ಹೇಳುವುದಕ್ಕೆ ಕಷ್ಟ. ಜೀವಕ್ಕೆ ಬೇಸರವಾಗುತ್ತದೆ. ದಣಿವಾಗುತ್ತದೆ. ದೇಹಕ್ಕಾದ ದಣಿವು ಒಂದು ಸಣ್ಣ ನಿದ್ದೆಯಿಂದಲೋ ವಿಶ್ರಾಂತಿಯಿಂದಲೋ ಮಾಯವಾಗುವ ಹಾಗೆ ಜೀವಕ್ಕೆ ಜೋಮು ಹಿಡಿದರೆ ಅಷ್ಟು ಸುಲಭವಾಗಿ ನಿವಾರಿಸಿಕೊಳ್ಳಲಾಗುವುದಿಲ್ಲ. 

tuk

ಆಗ ಮನಸ್ಸು ಉಪಾಯಗಳನ್ನು ಹುಡುಕತೊಡಗುತ್ತದೆ. ಕೆಲವರು ಆಧ್ಯಾತ್ಮದತ್ತ ಹೊರಳುತ್ತಾರೆ. ಕೆಲವರು ಆ ಬೇಸರವನ್ನೇ ಎಂಜಾಯ್ ಮಾಡಲು ಆರಂಭಿಸುತ್ತಾರೆ. ಮತ್ತೊಂದಷ್ಟು ಮಂದಿ ಹೊಸ ಹವ್ಯಾಸಗಳತ್ತ ಹೊರಳಿಕೊಳ್ಳುತ್ತಾರೆ. ವಯಸ್ಸಲ್ಲದ ವಯಸ್ಸಲ್ಲಿ ಪ್ರೀತಿಸಲು ಶುರುಮಾಡುವುದರಿಂದ ಹಿಡಿದು ಕಂಡ ಕಂಡವರ ಜೊತೆ ಜಗಳ ಆಡುವುದು ಕೂಡ ಬೇಸರವನ್ನು ನೀಗಿಕೊಳ್ಳುವ ಹುನ್ನಾರಗಳೇ ಇರಬಹುದು. ಅಪರ ವಯಸ್ಸಲ್ಲಿ  ಡಾಕ್ಟರೇಟ್ ಮಾಡಲು ಹೊರಡುವುದು. ಕಟ್ಟೆ ಬಳಗದಲ್ಲಿ ಕೂತು ಹರಟುವುದು, ಹಳೆ ಕಾಲವನ್ನು ನೆನೆನೆನೆದು ಕೊರಗುವುದು, ಸೊಸೆಯ ವರ್ತನೆಯನ್ನು ಖಂಡಿಸುತ್ತಾ ಓಡಾಡುವುದು, ಗಸಿಪ್ಪು ಮಾಡುವುದೆಲ್ಲ ಅಂಥದ್ದೇ ಉಪಾಯಗಳು.

ನಾನು ನಾನಲ್ಲ ಎಂದು ನಂಬಿಸಿಕೊಳ್ಳುವುದು ಕೂಡ ಸುಪ್ತ ಮನಸ್ಸಿನ ಪಿತೂರಿಯೇ ಇರಬಹುದಾ? ಇಳಿವಯಸ್ಸು ಸಮೀಪಿಸುವ ತನಕ ಒಂದೇ ವೃತ್ತಿಗೆ ಅಂಟಿಕೊಂಡು ಅದನ್ನೇ ಮಾಡುತ್ತಾ ಇದ್ದು ಬಿಟ್ಟವರಿಗೆ, ಒಂದು ಹಂತದಲ್ಲಿ ಹಿಂತಿರುಗಿ ನೋಡಿದಾಗ ನಡೆದು ಬಂದ ದಾರಿ ನೀರಸ ಅನ್ನಿಸಬಹುದು. ಅಷ್ಟೂ ವರುಷದ ಬದುಕನ್ನು ಹಾಗೇ ಕಳೆದುಬಿಟ್ಟೆನಾ ಎಂಬ ಹಳಹಳಿಕೆ ಕಾಡಬಹುದು. ಅದಕ್ಕಿಂತ ಭಿನ್ನವಾದ ಹಾದಿ ತಮ್ಮ ಮುಂದಿತ್ತೇ ಎಂದು ಯೋಚಿಸಿ ನೋಡಿದರೆ ಇರಲಿಲ್ಲ ಅನ್ನುವುದನ್ನು ಸ್ಪಷ್ಟವಾಗಿ ಗೊತ್ತಾಗುತ್ತದೆ. ಹಾಗೆ ನೋಡಿದರೆ ಎಲ್ಲಾ ವೃತ್ತಿಗಳೂ ಬರಬರುತ್ತಾ ನೀರಸವಾಗುತ್ತಾ ಹೋಗುತ್ತವೆ. ಅದನ್ನು ಆಸಕ್ತಿ ಪೂರ್ಣ ಆಗಿಸಿಕೊಳ್ಳುವುದು ಅವರವರ ಕೈಯಲ್ಲೇ ಇದೆ. passion ಕಳಕೊಂಡ ದಿನ ಅದೆಂಥಾ ರೋಚಕ ವೃತ್ತಿಯೂ ಬೋರು ಹೊಡೆಸುತ್ತದೆ. ಪುಟ್ಟದೊಂದು ಕೆಲಸ ಮಾಡಿಕೊಂಡು ಅದರಲ್ಲೇ ಖುಷಿಪಡುತ್ತಾ ಇರುವವರು ಎಷ್ಟೋ ಮಂದಿ ನಮಗೆ ಕಣಿಸುತ್ತಾರೆ. 

ನಮಗೆ ಸಾಮಾನ್ಯವಾಗಿ ಕಣ್ಣಿಗೆ ಕಾಣಿಸುವುದು ಎಪ್ಪತೈದು ದಾಟಿದ ನಂತರವೂ ಸುಖವಾಗಿ ಓಡಾಡಿಕೊಂಡಿರುವ ಹಿರಿಯರು. ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ಅವರ ಬಗ್ಗೆ ನಮಗೆ ಗೊತ್ತಿರುತ್ತದೆ. ಹುಬ್ಬಳ್ಳಿ ಹಾವೇರಿಯ ನಡುವಿರುವ ಪುಟ್ಟ ಹಳ್ಳಿಯಲ್ಲೊಬ್ಬ ಹಿರಿಯರು ಇತ್ತೀಚೆಗೆ ಸಿಕ್ಕಿದ್ದರು. ಅವರ ವಯಸ್ಸು ಎಂಬತ್ತು ಮೀರಿತ್ತು. ಊರ ಜಾತ್ರೆಗೆಂದು ಬಿಸಿಲಲ್ಲಿ ನಡೆದು ಹೋಗುತ್ತಿದ್ದರು. ಕಾರಿಗೆ ಹತ್ತಿಸಿಕೊಂಡು ಪೂರಾ ಇಪ್ಪತ್ತು ನಿಮಿಷ ತಮ್ಮೂರಿನ ಬಗ್ಗೆ ಹೇಳಿಕೊಂಡರು. ಜಾತ್ರೆಯಲ್ಲಿ ನಡೆಯುವ ಕೌತುಕದ ಬಗ್ಗೆ, ಅಲ್ಲಿಗೆ ಮೂವತ್ತು ವರುಷದಿಂದ ಬಲೂನು ಮಾರಲು ಬರುವವನ ಬಗ್ಗೆ, ನೆತ್ತಿಯ ಮೇಲೆ ಎಪ್ಪತ್ತು ಕೇಜಿ ಭಾರದ ದೇವರ ಮೂರ್ತಿಯನ್ನಿಟ್ಟುಕೊಂಡು ಕೈ ಬಿಟ್ಟು ಪೂರಾ ಮೂರೂವರೆ ಗಂಟೆ ಕುಣಿಯುವ ಅರವತ್ತು ವರ್ಷದ ಪೂಜಾರಿಯ ಬಗ್ಗೆ, ಅದನ್ನು ಸಾಧ್ಯವಾಗಿಸಿದ ದೈವದ ಕಾರಣಿಕದ ಬಗ್ಗೆ ಮಾತಾಡಿದರು. ಅಂಥ ಬಯಲುಸೀಮೆಯಲ್ಲೂ ಕಳೆದ ತಿಂಗಳು ಮರಿ ಚಿರತೆಯೊಂದು ಬಂದು ಜನರನ್ನು ಕಂಗೆಡಿಸಿದ್ದನ್ನು, ಅದನ್ನು ಅವರ ಮನೆಯ ನಾಯಿಯೇ ಕೊನೆಗೆ ಕೊಂದು ಹಾಕಿದ್ದನ್ನು ಉತ್ಸಾಹದಿಂದ ವಿವರಿಸಿದರು. ನಾವ್ಯಾರೆಂದು ಗೊತ್ತಿಲ್ಲದೇ ಇದ್ದಾಗಲೂ ಅಷ್ಟೊಂದು ಅಕ್ಕರೆಯಿಂದ ಅದನ್ನೆಲ್ಲ ನಮಗೆ ಹೇಳುತ್ತಿದ್ದದನ್ನು ಕೇಳುತ್ತಿದ್ದರೆ ನನಗೆ ನಮ್ಮ ಹಿರಿಯ ಕತೆಗಾರರು ನೆನಪಾಗುತ್ತಿದ್ದರು. ಅವರ ಮಾತಲ್ಲಿ ಎದ್ದು ಕಾಣುತ್ತಿದ್ದ ಉತ್ಪ್ರೇಕ್ಷೆಯೂ ಇಷ್ಟವಾಗುತ್ತಿತ್ತು. ಆ ಉತ್ಪ್ರೇಕ್ಷೆಯಲ್ಲೂ ಪ್ರೀತಿ ಆ ಊರಿನ ಬಿಸಿಲಿನ ಹಾಗೆ ಹರಡಿಕೊಂಡಿತ್ತು. 

ಗೆಳೆಯ ಸೂರಿ ಇಂಥ ತುಂಟತನ ಚಿಮ್ಮುವ, ಒಳಗಿರುವ ಸಾವಿರ ಸಂಕಟಗಳನ್ನು ಅದುಮಿಟ್ಟುಕೊಂಡು ಜೀವನೋತ್ಸಾಹದಿಂದ ನಳನಳಿಸುವ ತಮ್ಮ ಅಸ್ತಿತ್ವವನ್ನು ಮರೆಯಲು ತಾವೇ ಕತೆ ಕಟ್ಟಿಕೊಳ್ಳುವ ಮುದುಕರನ್ನಿಟ್ಟುಕೊಂಡು ಒಂದು ಸೊಗಸಾದ ನಾಟಕ ಬರೆದಿದ್ದಾರೆ. 

ಎಂಬತ್ತಾರರ ಗುರುನಾಥ ಮತ್ತು ಎಂಬತ್ತಮೂರರ ಕೃಷ್ಣಸ್ವಾಮಿಯ ಕತೆಯಿದು. ಅದರಲ್ಲಿ ಗುರುನಾಥ ಬಹುರೂಪಿ. ಕ್ಷಣಕ್ಕೊಂದು ಸುಳ್ಳು ಹೇಳುತ್ತಾ, ಹೊಸ ಹೊಸ ಅವತಾರಗಳನ್ನು ಎತ್ತುತ್ತಾ ಹೋಗುತ್ತಾನೆ. ಅವನ ಮಾತನ್ನು ನಂಬಿದಂತೆ ನಟಿಸುತ್ತಾನೆ ಗುರುನಾಥ. ಸುಳ್ಳು ಹೇಳುವುದು ಗುರುನಾಥನನ್ನು ಜೀವಂತವಾಗಿರಿಸಿದ ಹಾಗೇ, ಆ ಸುಳ್ಳುಗಳನ್ನು ಕೇಳುತ್ತಾ ಸಂಭ್ರಮಿಸುವುದು ಕೃಷ್ಣಸ್ವಾಮಿಯಲ್ಲಿ ಲವಲವಿಕೆ ತುಂಬುತ್ತದೆ. ತನ್ನ ಊಹೆಯಲ್ಲಿ ಬದುಕುತ್ತಾ, ತನ್ನ ಕಲ್ಪನೆಗಳನ್ನು ತನ್ನ ಮೇಲೆ ಆವಾಹಿಸಿಕೊಳ್ಳುತ್ತಾ ಬದುಕುವ ಕೃಷ್ಣಸ್ವಾಮಿಯ ನಡುವಿನ ಮುಖಾಮುಖಿಯಲ್ಲಿ ನಾವು ನಮ್ಮ ಬದುಕಿನ ಸಂಭ್ರಮವನ್ನು ನಿರುತ್ಸಾಹವನ್ನು ನಿರರ್ಥಕತೆಯ ನಡುವೆಯೂ ಮಿರುಗುವ ಸಾರ್ಥಕತೆಯನ್ನು ಕಂಡುಕೊಳ್ಳುತ್ತಾ ಹೋಗುತ್ತೇವೆ:

ತಮಾಷೆಯಾಗಿ ಶುರುವಾಗುವ ನಾಟಕ ಕ್ರಮೇಣ ಗಂಭೀರವಾಗುತ್ತಾ ಹೋಗುತ್ತದೆ. ಮುದುಕರ ಬವಣೆಯನ್ನು ಹೇಳುತ್ತದೆ. ಕಾರ್ಪೊರೇಟ್ ಜಗತ್ತನ್ನು ಗೇಲಿ ಮಾಡುತ್ತಲೇ ಸತ್ಯವನ್ನು ಬಿಚ್ಚಿಡುತ್ತದೆ. ಮುದುಕರನ್ನು ಎಲ್ಲರೂ ಹೇಗೆ ನೋಡುತ್ತಾನೆ ಅನ್ನುವುದನ್ನು ಸೂರಿ ತುಂಬ ನೇರವಾಗಿಯೇ ಹೇಳುತ್ತಾರೆ:

tuk1

ಗುರುನಾಥ್:ಫೈನ್. ನಾಯೇನಂತಿದ್ದೆ.(ಕೃಷ್ಣಸ್ವಾಮಿಯ ಉತ್ತರವಿಲ್ಲ)ಸುಡುಗಾಡು ನಾಯಲ್ಲಿದ್ದೆ. ನಾವೇನು ಮಾತಾಡ್ತಿದ್ವೀ.(ಉತ್ತರವಿಲ್ಲ) ಏನೋ ಒಂದು ಇಂಪಾರ್ಟೆಂಟ್ ಪಾಯಿಂಟ್ ಹೇಳೋನಿದ್ದೆ. ನಾವೇನು ಮಾತಾಡ್ತಿದ್ವೀ?

ಕೃಷ್ಣಸ್ವಾಮಿ:(ಓದುವುದನ್ನು ನಿಲ್ಲುಸುವುದಿಲ್ಲ) ನಾವು ಮಾತಾಡ್ತಿರ್ಲಿಲ್ಲ. ನೀವು ಮಾತಾಡ್ತಿದ್ರಿ. ನಾನಲ್ಲ. 

ಗುರುನಾಥ: ಓಕೇ . ನಾಯೇನು ಮಾತಾಡ್ತಿದ್ದೆ. 

ಕೃಷ್ಣಸ್ವಾಮಿ: (ಪುಟ ತಿರುವಿ ಹಾಕುತ್ತಾ) ನಾಯಲ್ಲಿ ಕೇಳ್ತಿದ್ದೆ. ನನ್ಪಾಡಿಗೆ ನಾನಿದ್ದೆ. ಆಡೋದೂ ಕೇಳೋದು ಯರಡೂ ನೀವೇ ಮಾಡ್ತಿದ್ರಿ. 

ಗುರುನಾಥ: ಯಾಕೆ ಕೇಳ್ತಿರಲಿಲ್ಲ?

ಕೃಷ್ಣಸ್ವಾಮಿ: (ಓದುವುದನ್ನು ಮುಂದುವರೆಸುತ್ತಾ) ಅದೇನ್ರೀ ನೀವನ್ನದು.

ಬರೀ ಹಸೀ ಸುಳ್ಳು ನೀವನ್ನಾದನ್ನ ಕೇಳಾದು ಬಿಟ್ಟು ಯರಡು ದಿನ ಆದ್ವು. 

ಗುರುನಾಥ:ಓದಾ ನಾಟ್ಕಾ ನಿಲ್ಲುಸ್ರೀ. ಒಂದಕ್ಷರ ಕಾಣಂಗಿಲ್ಲ ನಿಮಗೆ. ಪ್ರಿಂಟಾಗಿರ ಫೋಟೋ ದೇವೆಗೌಡಂದೋ ಶ್ರೀದೇವಿದೋ ಅಂತಾನೂ ತಿಳಿಯಂಗಿಲ್ಲ ನಿಮಗೆ. ಓದೋ ನಾಟಕ ಬೇರೆ…

ಕೃಷ್ಣಸ್ವಾಮಿ: (ಸಿಟ್ಟಿನಲ್ಲಿ ಪೇಪರ್ ಅನ್ನು ಮಡಚುತ್ತಾ) ನನ್ ಜೀವಾ ಯಾಕ್ರೀ ತಿಂತೀರೀ. ಬಿಟ್ಟು ಬಿಡರೀ ನನ್ನ ಪಾಡಿಗೆ ನನ್ನ ಅತ್ಲಾಗೆಲ್ಲರ ಹೋಗ್ರಿ ಅಲ್ಲಿ-ಅಲ್ಲಿ ಅತ್ಲಗೆ ಆ ಕಟ್ಟೇ ಮೇಲೆ ನಿಮ್ಮಂಥೋರು ನೂರಾರು ಜನ ಕೂತಿರಬೇಕು. ಅಲ್ಲಿ ಹೋಗಿ. ಅವರ ಹತ್ರ ನಿಮ್ ಪುರಾಣ ತಗೀರಿ. ನೋಡ್ರೀ. ಕೊನೇ ಸರ್ತಿ ಹೇಳ್ತಿನಿ. ನಿಮ್ಮತ್ರ ಮಾತಾಡಕೆ ನಂಗಿಷ್ಟಯಿಲ್ಲ. ನಾ ಮಾತಾಡಲ್ಲ ನಿಮಗೆ ಮಾತಾಡಲೇ ಬೇಕಂತಿದ್ರೆ ಆ ಮರದ ಜೋಡಿ ಮಾತಾಡಿ.

ಗುರುನಾಥ್: ಮರ ಅಲ್ಲ ಕಂಬ 

2

ಗುರುನಾಥನ ಸುಳ್ಳುಗಳಿಂದ ಸೃಷ್ಟಿಯಾಗುವ ನರಕ, ಅದರಲ್ಲಿ ಬಿದ್ದು ಒದ್ದಾಡುವ ಗುರುನಾಥ ಮತ್ತು ಕೃಷ್ಣಸ್ವಾಮಿ, ನಾಳೆ ಬೆಳಿಗ್ಗೆ ತಿಂಡಿಗೇನು ಗತಿ ಎಂಬ ಶೇಷ ಪ್ರಶ್ನೆ, ಮಕ್ಕಳ ನೋಟದಿಂದ ಪಾರಾಗಿ ಘನತೆಯಿಂದ ಬದುಕುವುದು ಹೇಗೆ ಎಂಬ ಸಂಕಟದ ನಡುವೆಯೇ ಗುರುನಾಥ ಕೊನೆಗೆ ಸತ್ಯ ಹೇಳುತ್ತಾನೆ. ಆ ಸತ್ಯ ಕೃಷ್ಣಸ್ವಾಮಿಗೆ ಬೇಕಿಲ್ಲ. ಅವನಿಗೆ ಸುಳ್ಳುಗಳು ಬೇಕು. ಗುರುನಾಥ ತನ್ನ ಹಾಗೇ ಒಬ್ಬ ಎಕ್ಸ್ಟ್ರಾಆರ್ಡಿನರಿ,  ಆರ್ಡಿನರಿ ಮುದುಕ ಎಂಬ ಸತ್ಯ ಬೇಕಾಗಿಲ್ಲ. ಅದಕ್ಕೇ ಅವನು ಆ ಸತ್ಯವನ್ನು ನಿರಾಕರಿಸುತ್ತಾ ಹೋಗುತ್ತಾನೆ. ಅಸೀಮ ರೂಪಕಗಳನ್ನು ಅಸಂಖ್ಯ ಅವತಾರಗಳನ್ನೂ ಎತ್ತಿದ ಗುರುನಾಥ ಮತ್ತೊಂದು ಅವತಾರಕ್ಕೆ ಸಿದ್ಧನಾಗುತ್ತಾನೆ. 

ನಾಟಕ ಮತ್ತೆ ಶುರುವಾಗುತ್ತದೆ. 

ವೈಕುಂಠ ಏಕಾದಶಿಯ ದಿನ ತೆರೆದುಕೊಳ್ಳುವ ಸ್ವಗೃದ ಬಾಗಿಲಿಗೆ ಬೆನ್ನು ಹಾಕಿ ಅವರಿಬ್ಬರೂ ಮತ್ತೆ ಈ ಜಗತ್ತಿನತ್ತ ನಡೆಯತೊಡಗುತ್ತಾರೆ. ಗುರುನಾಥನ ತತ್ತರಿಸುವ ಹೆಜ್ಜೆಯಲ್ಲಿ, ಕೃಷ್ಣಸ್ವಾಮಿಯ ಮಂಜುಗಣ್ಣಲ್ಲಿ ನಮಗೆ ನಮ್ಮ ನಾಳೆಗಳು ಪ್ರಖರವಾಗಿ ಸೊಗಸಾಗಿ ಸಹನೀಯವಾಗಿ ಕಾಣಿಸತೊಡಗುತ್ತವೆ. ನಿಮಗೆ ಹಳೇ ಕುರ್ಚಿ, ಮೇಜು, ಮಂಚ ಹಳೇ ಕಾರು ಬೇಕು. ಹಳೇ ಪೋಟೋಗಳು ಬೇಕು. ಹಳೇ ನಾಣ್ಯ ಬೇಕು. ಹಳೇ ಸಸ್ಟಾಂಪು ಬೇಕು. ಹಳೇ ಮುದುಕರನ್ನು ಹಳೇ ಜೀವಗಳನ್ನ ಬಿಟ್ಟು ಹಳೇ ದು ಎಲ್ಲಾ ಬೇಕು ನಿಮಗೆ. ಅವು ಚಲಾವಣೆಯಲ್ಲಿರಲೀ ಬಿಡಲೀ ಅವು ಬೇಕು. ಆದ್ರೆ ಮುದಿ ಜೀವಗಳು ಮಾತ್ರ ಬೇಡ. ಯಾಕಂದ್ರೆ ಅವು ಸುಡುಗಾಡು ಸ್ಮಾರಕಗಳು. ವಿರೀತ ಮಾತಾಡ್ತಾವೆ ಬಾಯಿ ಮುಚ್ಕೊಂಡಿದ್ರು ಮಾತಾಡಿ ಬಿಡ್ತವೆ. ಎಲ್ಲಿಡ್ತೀರಾ ಅವುನ್ನ? ರೂಮಲ್ಲಿಡ್ತೀರಾ? ಡ್ರಾಯಿಂಗ್ ರೂಮಲ್ಲಿಡ್ತೀರಾ? ಬೆಡ ರೂಮಲ್ಲಿಡ್ತೀರಾ/ ಎಲ್ಲಿಟ್ಟರೂ ದೃಷ್ಟಿ ಬೋಟುಗಳು ಅವು. ಇಟ್ಟ ಜಾಗದ ಅಂದ ಕೆಡಿಸಿ ಬಿಡ್ತಾವೆ. ನಾಳೆ ಬರೋ ನಿಮ್ಮ ನಾಳೆಗಳ ಹಾಗೆ ಕಾಣ್ತಾವೆ. ನಿಮಗೆ ಆ ನಾಳೆಗಳೇ ಬೇಡ. ಯಾಕಂದ್ರೆ ನೀವು ಇವತ್ತಿನ ಸುಖದಲ್ಲಿ ಮಾತ್ರ ಬದುಕೋರು. ಅಂದ ಹಾಗೇ ಯಾರಿವರು? ಯಾರು ಈ ಮುದಿ ಜೀವಗಳ? ಇದ್ಯಾವ ಸಂತತಿ? ಇವು ನನ್ನ ಹಾಗಂತೂ ಕಾಣ್ತಾಯಿಲ್ಲ. ಇವುನ್ನೆಲ್ಲಾ ಒಟ್ಟಿಗೇ ಒಂದು ಕೂಡಿ ಹಾಕಿಬಿಡಿ. ಒಂದು ರೂಮಲ್ಲೋ, ಒಂದು ಮನೇನಲ್ಲೋ, ಒಂದು ಹಳ್ಳೀನಲ್ಲೋ, ಒಂದು ಊರಲ್ಲೋ ಎಲ್ಲೊ ಒಂದು ಕಡೆ ಇವುನ್ನೆಲ್ಲಾ ಕೂಡಿ ಹಾಕಿಬಿಡಿ. (ನರಸೀಪುರ ಕಡೆಗೆ ನಡೆದು ಹೋಗುತ್ತಾರೆ.) ಅಯ್ಯೋ ಮುಂಡೇವಾ, ನಿಮಗ್ಗೊತ್ತಿಲ್ವಾ? ನಾಳೆ ನೀವೂ ಈ ವಿಚಿತ್ರ ತಳಿಗೆ ಸೇರ್ಕೋಂಡು ಬಿಡ್ತೀರಾ. ಇವತ್ತಿನವರೆಗೂ ನೇರವಾಗಿರೋ ನಿಮ್ಮ ಹಣೇ ಮೇಲಿನ ಗೆರೆಗಳಿಗೂ ಸುಕ್ಕು ಬಂದು ಬಿಡುತ್ತೆ ಯೆಸ ಮಿಸ್ಟರ್ ನರಸೀಪುರ್, ನಿಂಗೂ ವಯಸ್ಸಾಗುತ್ತೆ. ಈಗ ನಿಂಗೆ ಆ ಯೋಚನೆಯಿಂದಾನೇ ಗಾಬರಿಯಾಗ್ತಾ ಇದ್ರೆ ನಾಳೆ ಕನ್ನಡಿ ನೋಡಿಕೊಂಡಾಗ ನಿನ್ನ ಎದೆ ಒಡೆದು ಹೋಗತ್ತೆ. ಬದುಕು ಚಿಕ್ಕದಗಿರೋದು ಸಮಸ್ಯೆ ಅಲ್ಲ ಕಂದಾ, ಬದುಕು ಅಗತ್ಯಕ್ಕಿಂತ ಉದ್ದವಾಗಿರೋದೇ ಸಮಸ್ಯೆ. ನಡೆದಷ್ಟೂ ಮುಗೀದಷ್ಟು ಉದ್ದವಾಗಿರೋದು, ನಮ್ಮನ್ನ ನೋಡು. ಶೀಘ್ರದಲ್ಲೇ ಬೆಳ್ಳಿತೆರೆಯ ಮೇಲೆ ಕಾಣೋ ನಿಮ್ಮ ಮುಂದಿನ ದೇಖಾವೆಗಳು ನಾವು. ನಮ್ಮನ್ನು ನೋಡಿ ನಿಮಗೆ ಹೆದರಿಕೆಯಾಗತ್ತೆ. ನಮ್ಮ ನೆರಳು ಕಾಣುವ ಹಾಗೆ ನಮ್ಮನ್ನ ಮುಚ್ಚುಟ್ಟುಬಿಡ್ತೀರಾ. ಅಥವಾ ನಮ್ಮ ಕಣ್ಣಿಗೆ ಬೇಳದ ಹಾಗೆ ನೀವೇ ಬಚ್ಚಿಟ್ಟುಕೊಳ್ತೀರಾ. (ನರಸೀಪುರ ಕೈಯನ್ನು ಗಟ್ಟಿಯಾಗಿ ಹಿಡಿದು) ಅಯ್ಯೋ ಧಡ್ಡಾ, ನಿಂಗಿನ್ನೂ ಅರ್ಥ ಆಗಿಲ್ವೇನೋ. ಈ ಮುದೀ ಜೀವಗಳೇ ಬಾಳಿ ಉಳಿದವರು. ಬದುಕು ಅಂದ್ರೆ ಏನೂಂತ ಅವ್ರಿಗೆ ಗೊತ್ತು ಎಷ್ಟು ಹಗಲು ಕಂಡಿದ್ದಾರೋ ಅಷ್ಟೇ ರಾತ್ರಿನೂ ನೋಡಿದ್ದಾರೆ. ನಿಮ್ಮ ಬದುಕಿಗೆ ಹುಳಿ ಹಿಂಡೋಕೆ ಅವ್ರು ಉಳಕೊಂಡಿಲ್ಲ. ಅವ್ರು ಮಾಡಿರಾ ಒಂದೇ ತಪ್ಪು ಅಂದ್ರೆ ಮುಗಿಯದ ದಾರಿಯಲ್ಲಿ ನಿಧಾನವಾಗಿ ಹೆಜ್ಜೆಯಿಡ್ತಾಯಿದಾರೆ. ಈ ವಯಸ್ಸಾದ ಜೀವಗಳು ಈಗಷ್ಟೇ ಹುಟ್ಟಿದ ಮಗುವಿನ ಹಾಗೇ ಈ ಸೃಷ್ಠಿಯ ಚಮತ್ಕಾರಗಳು. ಹುಟ್ಟಿನ ಸಾಮೀಪ್ಯ ಎಷ್ಟು ಅಮೂಲ್ಯವೋ ಸಾವಿನ ಸಾಮೀಪ್ಯವೂ ಅಷ್ಟೇ ಅಮೂಲ್ಯ ನೋಡದೀಯೇನೂ, ಈ ಆರಂಭಕ್ಕೂ ಅಂತ್ಯಕ್ಕೂ ಒಂದೇ ನಗು ಇರೋದು, ಬೊಚ್ಚ ಬಾಯಿ ನಗು.

‍ಲೇಖಕರು avadhi

January 22, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

5 ಪ್ರತಿಕ್ರಿಯೆಗಳು

 1. ಚಂದಿನ

  ಜೋಗಿ ಸಾಹೇಬರೆ,

  ಇತ್ತೀಚೆಗೆ ನಿಮ್ಮ ಬ್ಲಾಗ್ ಬರಹ ವಿರಳ,

  ಕಾರಣ ಗೊತ್ತಾಗ್ಲಿಲ್ಲ್ರೀ ಸರ.

  ನಾ ತುಕಾರಾಂ ಅಲ್ಲ ನೋಡ್ತೇವ್ರಿ,

  ಛಲೋ ಇಲ್ಲಾಂದ್ರ ಹಣ ವಾಪಸ್ ಕೊಡಸ್ಬೇಕ್ರಿ ಮತ್ತ.

  – ಚಂದಿನ

  ಪ್ರತಿಕ್ರಿಯೆ
 2. Sushrutha Dodderi

  ನಾನೂ ನಿನ್ನೆಯೇ ನೋಡಿದೆ. ಅದ್ಭುತ ನಾಟಕ. ತಪ್ಪದೇ ನೋಡಿ. ಫೆಬ್ರವರಿ 2ರ ವರೆಗೆ ದಿನಾ ಸಂಜೆ 7.30ಕ್ಕೆ ಇದೆ ರಂಗಶಂಕರದಲ್ಲಿ. ಹಾಗೇ ಭಾನುವಾರ 3.30ಕ್ಕೂ ಒಂದು ಶೋ ಇದೆ.

  ಪ್ರತಿಕ್ರಿಯೆ
 3. adiga

  I have not read this before watching the play.
  was there any preview of play? because the show stated only stated from 25th. but really a good review

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ basuhongalCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: