ಜೋಗಿ ಬರೆದಿದ್ದಾರೆ: ಪುಸ್ತಕದ ನೆಪದಲ್ಲಿ ಮತ್ತೊಂದಿಷ್ಟು ಮಾತು


ಪುಸ್ತಕಗಳ ಬಗ್ಗೆ ಬರೆಯದೆ ಎಷ್ಟು ದಿನವಾಯಿತು ಎಂದು ಯೋಚಿಸಿದರೆ ಆಶ್ಚರ್ಯವಾಯಿತು. ಕಂಪ್ಯೂಟರಿನಲ್ಲಿ ಹಳೆಯ ಫೈಲುಗಳನ್ನೆಲ್ಲ ತೆರೆದು ನೋಡಿದರೆ, ಸುಮಾರು ಎರಡು ವರ್ಷದಿಂದ ಯಾವ ಪುಸ್ತಕದ ಕುರಿತೂ ಬರೆದಿರಲಿಲ್ಲ. ಒಳ್ಳೆಯ ಪುಸ್ತಕ ಬಂದಿಲ್ಲ ಹಾಗಾಗಿ ಬರೆದಿಲ್ಲ ಎಂದು ಹೇಳಿ ತಪ್ಪಿಸಿಕೊಳ್ಳುವುದು ಸುಲಭ. ಒಳ್ಳೆಯ ಪುಸ್ತಕಗಳೇ ಬಂದಿಲ್ಲ ಅನ್ನುವುದೂ ತಪ್ಪಾಗುತ್ತದೆ.
ಹೊಸ ಪುಸ್ತಕಗಳನ್ನೆಲ್ಲ ಹುಡುಕಿ ಮುಂದೆ ತಂದಿಟ್ಟುಕೊಂಡೆ. ಕಾರಿನಲ್ಲೇ ಸುಮಾರು ಇಪ್ಪತ್ತು ಪುಸ್ತಕಗಳಿದ್ದವು. ರಸ್ತೆಯಲ್ಲಿ ಯಾವುದೋ ಮೆರವಣಿಗೆ ಎದುರಾದಾಗ, ಗಂಟೆಗಟ್ಟಲೆ ಟ್ರಾಪಿಕ್ ಜಾಮ್ ಆದಾಗ ಪುಸ್ತಕಗಳೇ ಒಳ್ಳೆಯ ಸಂಗಾತಿ. ಹೊತ್ತು ಹೋದದ್ದೇ ಗೊತ್ತಾಗದಂತೆ ಮಾಡುತ್ತವೆ ಅವು. ತುಂಬ ಒಳ್ಳೆಯ ಪುಸ್ತಕ ಸಿಕ್ಕರೆ, ಇನ್ನೂ ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಇರಬಾರದಿತ್ತೇ ಅಂತಲೂ ಅನ್ನಿಸುವುದಿದೆ.
ಕಾರಿನಲ್ಲಿ ದೂರ ಪ್ರಯಾಣ ಹೊರಟಾಗಂತೂ ಪುಸ್ತಕಗಳು ಒಳ್ಳೆಯ ಕಂಪೆನಿ. ಇಷ್ಟೇ ಹೊತ್ತಿಗೆ ಊರು ಸೇರಬೇಕು ಎಂಬ ಧಾವಂತವಿಲ್ಲದೆ ಹೊರಟವರ ಪಾಲಿಗಂತೂ ಅದು ವರದಾನ. ಊರು ದಾಟಿ, ಹೈವೇಗೆ ಬಿದ್ದ ನಂತರ ತುಂಬಾ ದೂರ ಸಾಗಿದ ಮೇಲೆ ಯಾಕೋ ಸುಸ್ತಾಗಿದೆ ಅನ್ನಿಸಿದರೆ, ಒಂದಷ್ಟು ಹಗುರಾಗೋಣ ಅನ್ನಿಸಿದರೆ, ಕೈಲೊಂದು ಡ್ರಾಫ್ಟ್  ಬಿಯರ್ ಟಿನ್ ಹಿಡಕೊಂಡು, ಹಾದಿಯಲ್ಲಿ ಸಿಗುವ ಯಾವುದೋ ಹಳ್ಳಿಯ ಸಮೀಪದ ಮರದ ಬುಡದಲ್ಲಿ ಆರಾಮಾಗಿ ಕಾದಂಬರಿ ಓದುತ್ತಾ ಕೂತುಬಿಡಬಹುದು. ಆಗಾಗ ಕಣ್ಣೆತ್ತಿ ದೂರದ ಬೆಟ್ಟ ಗುಡ್ಡಗಳತ್ತ ಕಣ್ಣುಹಾಯಿಸಬಹುದು. ನೀವು ಒಂದು ದಿಂಬು ಜೊತೆಗೆ ಒಯ್ದರೆ, ಅದೇ ನೆರಳಲ್ಲಿ ನಿದ್ದೆ ಹೊಡೆಯಬಹುದು.

ಪುಸ್ತಕಗಳಿಗಿಂತ ಟೇಪ್‌ರೆಕಾರ್ಡರ್ ವಾಸಿ ಅನ್ನುವವರಿದ್ದಾರೆ. ನನಗಂತೂ ಕಾರಲ್ಲಿ ಹೋಗುವಾಗ ಪುಸ್ತಕವೇ ಒಳ್ಳೆಯದು ಅನ್ನಿಸುತ್ತದೆ. ಇಷ್ಟು ವರ್ಷಗಳೂ ಹಾಡು ಕೇಳಿ ಕೇಳಿ, ಯಾವ ಹಾಡು ಹಾಕಿದರೂ ಮೊದಲು ಕೇಳಿದ್ದೇ ಅಲ್ವಾ ಅನ್ನಿಸುತ್ತದೆ. ಕೇಳಿದ ಹಾಡನ್ನೇ ಮತ್ತೆ ಮತ್ತೆ ಸವಿಯುವುದು ಸಂತೋಷದ ಸಂಗತಿಯೇ. ಆದರೆ ಕೇಳುವ ಮೊದಲೇ ಆ ಹಾಡು ನಮ್ಮೊಳಗಿಂದ ಕೇಳಲಾರಂಭಿಸುತ್ತದೆ. ಹಳೆಯದಾದ, ನೀವು ತುಂಬ ಸಲ ಕೇಳಿರುವ, ಮೆಚ್ಚಿರುವ ಗೀತೆಯನ್ನು ಮ್ಯೂಸಿಕ್ ಸಿಸ್ಟಮ್‌ನಲ್ಲೇ ಕೇಳಬೇಕಾಗಿಲ್ಲ. ಅದನ್ನು ನೆನಪಿಸಿಕೊಂಡರೂ ಸಾಕು, ಇಡೀ ಹಾಡು ಕಿವಿತುಂಬುತ್ತದೆ. ಅದಕ್ಕಿಂತ ಹೆಚ್ಚಾಗಿ ಮನತುಂಬುತ್ತದೆ. ಬೇಕಿದ್ದರೆ ಗಮನಿಸಿ ನೋಡಿ, ನೀವು ನಿಮ್ಮ ಮೆಚ್ಚಿನ ಗೀತೆಯನ್ನು ನಿಜಕ್ಕೂ ಕೇಳಿಸಿಕೊಳ್ಳುತ್ತಿರುವುದಿಲ್ಲ, ಮೆಲುಕು ಹಾಕುತ್ತಿರುತ್ತೀರಿ.
ಎಫ್ಫೆಮ್ ಚಾನಲ್ಲುಗಳಂತೂ ಹಿಂಸೆ ಕೊಡುತ್ತವೆ. ರ್‍ಯಾಪಿಡ್ ರಶ್ಮಿ, ಸ್ಟುಪಿಡ್ ಸುಶ್ಮಾ ಎಂಬ ವಿಚಿತ್ರ ಹೆಸರಿಟ್ಟುಕೊಂಡ ಹೆಣ್ಮಕ್ಕಳ ಮಾತು ಮೊದಲೆರಡು ಲವಲವಿಕೆಯಿಂದ ತುಂಬಿದೆ ಅನ್ನಿಸಿದರೂ ಆಮೇಲಾಮೇಲೆ ಯಾತನೆ ಕೊಡಲಾರಂಭಿಸುತ್ತವೆ. ಅವುಗಳಲ್ಲಿ ಬರುವ ಹಾಡುಗಳನ್ನು ಕೇಳಿದರೆ, ಇವತ್ತಿನ ಸಿನಿಮಾ ಸಂಗೀತ ಎಂಥ ಏಕತಾನತೆಗೆ ಬಿದ್ದಿದೆ ಎಂದು ಗೊತ್ತಾಗುತ್ತದೆ. ಮನೋಮೂರ್ತಿಯಂತೂ ತಮ್ಮ ರಾಗಗಳನ್ನು ತಾವೇ ಕದಿಯುತ್ತಿದ್ದಾರೆ. ಗೀತರಚನಕಾರರು ಮಳೆಯ ಬೆನ್ನು ಹತ್ತಿದ್ದಾರೆ. ಸುಮ್ಮನೆ ಕೇಳುತ್ತಾ ಹೋದರೆ ಕವಿರಾಜ್, ನಾಗೇಂದ್ರಪ್ರಸಾದ್, ಕಲ್ಯಾಣ್ ಮುಂತಾದವರೇ ಈಗೀಗ ಇಷ್ಟವಾಗುತ್ತಿದ್ದಾರೆ.
ಕಾರುಗಳಲ್ಲಿ ಪುಟ್ಟದೊಂದು ವೀಡಿಯೋ ಪ್ಲೇಯರ್ ಹಾಕಿಕೊಂಡು ಸಿನಿಮಾ ನೋಡುವವರೂ ಇದ್ದಾರೆ. ನನಗಂತೂ ಅದು ಸರಿಹೋಗುವುದಿಲ್ಲ. ಮೊನ್ನೆ ಸಿರ್ಸಿಗೆ ಹೋಗಿ ಬರುವಷ್ಟರಲ್ಲಿ ಗೆಳೆಯರೆಲ್ಲ ಮೂರೋ ನಾಲ್ಕೋ ಸಿನಿಮಾ ನೋಡಿ ಮುಗಿಸಿದ್ದರು. ಸಿನಿಮಾಗಳನ್ನು ಥೇಟರಿನಲ್ಲೇ ನೋಡಬೇಕು ಎಂಬುದು ನನ್ನ ಖಾಸಗಿ ನಂಬಿಕೆ. ಆಗಲೇ ಏಕಾಗ್ರತೆ,ಸಂವಹನ, ತನ್ಮಯತೆ ಸಾಧ್ಯವಾಗುತ್ತದೆ. ಮನೆಯಲ್ಲಿ ಕೂತು ನೋಡಬಹುದಾದದ್ದೆಂದರೆ ಟೀವಿ ಸೀರಿಯಲ್ಲು ಮತ್ತು ನ್ಯೂಸ್ ಮಾತ್ರ.
ಕಾರುಗಳಲ್ಲಿ ಪುಸ್ತಕ ಇಟ್ಟುಕೊಂಡು ಹೋಗುವುದನ್ನು ನನಗೆ ಕಲಿಸಿದ್ದು ಸೂರಿ. ಒಮ್ಮೆ ಹೈದಾರಾಬಾದ್‌ಗೆ ಹೋಗಿದ್ದಾಗ ಅವರ ಕಾರಿನ ಹಿಂಬದಿಯ ಸೀಟಲ್ಲಿ ನಾಲ್ಕಾರು ಕಾದಂಬರಿಗಳಿರುವುದನ್ನು ನೋಡಿದ್ದೆ. ಅದ್ಯಾಕೋ ಕಾರಲ್ಲಿ ಓದುವುದು ಅಸಾಧ್ಯ ಅನ್ನಿಸುತ್ತಿತ್ತು. ಕೆಲವೇ ದಿನಗಳಲ್ಲಿ ಅದು ಅನಿವಾರ್ಯ ಎನ್ನಿಸುವಷ್ಟು ರೂಢಿಯಾಯಿತು. ಈಗಂತೂ ಪುಸ್ತಕಗಳಿಲ್ಲದ ಪ್ರಯಾಣವನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.
ದೂರ ಪ್ರಯಾಣದ ಮಧ್ಯದ ಊಟ ಕೂಡ ಖುಷಿ ಕೊಡುತ್ತದೆ. ಯಾವುದೋ ಹೊಟೆಲ್ ಹತ್ತಿರ ಕಾರು ನಿಲ್ಲಿಸಿ, ಆ ಗಿಜಿಗಿಡುವ ಹೊಟೆಲಿನಲ್ಲಿ ಏನಾದರೂ ತಿನ್ನುವ ಬದಲು, ಬೇಕಾದ್ದನ್ನೆಲ್ಲ ಕಟ್ಟಿಸಿಕೊಂಡು ಪುಟ್ಟ ಹಳ್ಳಿಯ ಕೆರೆಯ ಬದಿಯಲ್ಲಿ ಕಾರು ನಿಲ್ಲಿಸಿ, ಅಲ್ಲಿರುವ ಹೊಂಗೆ ಮರದಡಿಯಲ್ಲಿ ಬೆಡ್‌ಶೀಟ್ ಹಾಸಿಕೊಂಡು ಕೂತು ಸೊಗಸಾಗಿ ಊಟ ಮಾಡಬಹುದು. ಪ್ರಯಾಣದ ಜೊತೆಗೆ ಮತ್ತೊಂದು ಖುಷಿಯೂ ನಿಮ್ಮದಾಗುತ್ತದೆ. ಹಾಗೇ, ಕಾರಲ್ಲಿ ಸದಾ ಎರಡು ಬ್ಯಾಡ್ಮಿಂಟನ್ ಬ್ಯಾಟ್,ಶಟಲ್‌ಕಾಕ್, ಒಂದು ಕ್ರಿಕೆಟ್ ಬ್ಯಾಟ್ ಮತ್ತು ಬಾಲ್ ಇರಲಿ. ಎಲ್ಲೆಂದರಲ್ಲಿ ಕಾರು ನಿಲ್ಲಿಸಿ ಒಂದರ್ಧಗಂಟೆ ಆಟ ಆಡಿ ಪ್ರಯಾಣ ಮುಂದುವರಿಸಬಹುದು.
ಸರ್ರನೆ ಹೋಗವ್ವ, ಭರ್ರನೆ ಬಾರವ್ವ.. ಎಂಬ ಸಾಲು ಕೆರೆಗೆ ಹಾರ’ ಜನಪದ ಕಾವ್ಯದಲ್ಲಿ ಬರುತ್ತದೆ. ನಾವೂ ಕೂಡ ಪಯಣದ ವೇಳೆ ಹಾಗೇ ಮಾಡುತ್ತೇವೆ. ಸರ್ರನೆ ಹೋಗಿ ಭರ್ರನೆ ಬರುತ್ತೇವೆ. ಅದರಿಂದ ಪ್ರಯಾಣ ಕೇವಲ ಸುಸ್ತು ಮೈಗೂಡಿಸುವ ಕಸರತ್ತಷ್ಟೇ ಆಗುತ್ತದೆ. ಆದರೆ ನಿಧಾನವಾಗಿ ಕಂಡದ್ದೆಲ್ಲವನ್ನೂ ಸವಿಯುತ್ತಾ ಹೋಗುವ ಪ್ರಯಾಣ ನಿಜಕ್ಕೂ ಸಂತೋಷ ಕೊಡುತ್ತದೆ. ದಾರಿಬದಿಯಲ್ಲಿ ಕಾಣುವ ನವಿಲು, ಬಯಲುಸೀಮೆಯ ಸೂರ್ಯಾಸ್ತ, ಕಾಡು ಹಾದಿಯ ನೆರಳ ಚಿತ್ತಾರ, ಬತ್ತದ ಗದ್ದೆಯ ಕಂಪು, ಕಬ್ಬಿನ ಗದ್ದೆಯ ವಿಸ್ತಾರ, ಕಾಡಬದಿಯಲ್ಲಿ ನೀಲಿ ನೀಲಿ ಹೂ ಬಿಟ್ಟು ನಿಂತ ಗುರುಗಿ ಹೂವಿನ ಗಿಡಗಳು… ಪಯಣಕ್ಕೆ ಕೊನೆಯೆಲ್ಲಿ?
******
ಇತ್ತೀಚೆಗೆ ಬಂದ ಪುಸ್ತಕಗಳ ಪೈಕಿ ತುಂಬಾ ಇಷ್ಟವಾದದ್ದು ವೈಎನ್‌ಕೆ  ಕೊನೆಸಿಡಿ’. ಅವರು ಅಷ್ಟೊಂದು ಕೊನೆ ಸಿಡಿ ಬರೆದಿದ್ದಾರೆ ಎಂಬ ಕಲ್ಪನೆಯೂ ನನಗಿರಲಿಲ್ಲ. ಅವರಿಗೆ ಎಷ್ಟೋ ಕೊನೆಸಿಡಿಗಳನ್ನು ನಾನೂ ಕೊಟ್ಟಿದ್ದೆ. ಒಮ್ಮೊಮ್ಮೆ ಚೆನ್ನಾಗಿಲ್ಲದ್ದನ್ನು ಕೊಟ್ಟಾಗ ಇದು ಚೆನ್ನಾಗಿಲ್ಲ . ನೀವು ಕೊಟ್ಟಿದ್ದು ಅಂತ ಬರೀತೀನಿ’ ಅನ್ನುತ್ತಿದ್ದರು. ಅದೀಗ ಅಂಕಿತ ಪುಸ್ತಕದಿಂದ ಪ್ರಕಟವಾಗಿದೆ. ಒಂದು ಸ್ಯಾಂಪಲ್ ತಗೊಳ್ಳಿ:
ಸಾಹಿತ್ಯ ಸಭೆಯಲ್ಲಿ ಹಿರಿಯ ಸಾಹಿತಿ ಮಾತಾಡುತ್ತಾ, ಬಳಸಿ ಬರೆಯಲು ಕಂಠಪತ್ರದ ಉಲುಹು ಕೆಡದ ಅಗ್ಗಳಿಕೆ’ ತಮ್ಮದು. ತಾವು ಕುಮಾರವ್ಯಾಸನಂತೆ ಎಂದೆಲ್ಲ ಹೊಗಳಿಕೊಂಡರು. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ನಾನು ಏನೇ ಬರೆದ್ರೂ ಅದನ್ನು ಮತ್ತೆ ಓದೋದಿಲ್ಲ’ ಎಂದರು.
ಅದಕ್ಕೆ ಶ್ರೀಮಾನ್ ಘಾ ಟೀಕೆ: ನೀವಷ್ಟೇ ಅಲ್ಲ, ಯಾರೂ ಓದೋದಿಲ್ಲ’.
ಇದೇ ಹೊತ್ತಲ್ಲಿ ಮತ್ತೊಂದು ಜೋಕ್: ಅದು ಬರಹಗಾರರ ಕುಟುಂಬ. ತಾಯಿ ಪದ್ಯ ಬರೀತಾಳೆ, ಯಾರೂ ಓದೋಲ್ಲ. ಮಗ ಅಪ್ಲಿಕೇಷನ್ ಬರೀತಾನೆ, ಕೆಲಸ ಸಿಗೋಲ್ಲ. ಮಗಳು ಕಾದಂಬರೀ ಬರೀತಾಳೆ, ಪಬ್ಲಿಷ್ ಆಗೋಲ್ಲ. ಅಪ್ಪ
ಚೆಕ್ ಬರೀತಾನೆ; ಕ್ಯಾಶ್ ಆಗೋಲ್ಲ.’
ಬರಗೂರು ರಾಮಚಂದ್ರಪ್ಪನವರ ಮರ್ಯಾದಸ್ತ ಮನುಷ್ಯರಾಗೋಣ’ ಎಂಬ ಲೇಖನಗಳ ಸಂಗ್ರಹ ಓದಿ ಖುಷಿಯಾಯಿತು. ಬರಗೂರು ಅತ್ಯಂತ ಸ್ಪಷ್ಟವಾಗಿ ಮಾತಾಡುವವರು, ಬರೆಯುವವರು. ಅವರ ವಿಚಾರಧಾರೆಯಲ್ಲಿ ಗೊಂದಲ ಇಲ್ಲ. ಅದನ್ನು ನೀವು ಒಪ್ಪುತ್ತೀರೋ ಬಿಡುತ್ತೀರೋ ಎಂಬುದು ಬೇರೆ ಪ್ರಶ್ನೆ. ಆದರೆ ತಾನು ಹೇಳಬೇಕಾದ್ದನ್ನು ನಿಖರ ಮತ್ತು ಪ್ರಖರ ಮಾತುಗಳಲ್ಲಿ ಅವರು ಹೇಳಬಲ್ಲರು.
ಈ ಲೇಖನ ಸಂಗ್ರಹದಲ್ಲಿ ಅವರ ಬಂಡಾಯದ ಒಳದನಿಗಳಿವೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಹೈದರಾಬಾದ್ ಕರ್ನಾಟಕಗಳ ಜೊತೆಗೇ ಹಸಿವಿನ ಕರ್ನಾಟಕವೂ ಇದೆ. ಯಾರೂ ಅದನ್ನು ಗಮನಿಸುತ್ತಿಲ್ಲ ಅಂತಾರೆ ಬರಗೂರು. ಭೈರಪ್ಪನವರಿಗೆ ಬರೆದ ಪತ್ರದಲ್ಲಿ ಮರ್ಯಾದಸ್ತ ಮನುಷ್ಯರಾಗೋಣ ಎನ್ನುತ್ತಾರೆ. ಈ ಶೀರ್ಷಿಕೆ ನೋಡುತ್ತಿದ್ದಂತೆ ಎಷ್ಟೋ ಸಾಹಿತಿಗಳು ಇದು ತಮ್ಮಿಂದಾಗದ ಕೆಲಸ ಎಂದು ಕಾರ್ಯಕ್ರಮಕ್ಕೇ ಬರಲಿಲ್ಲವಂತೆ! ಹಿಂದೆ ಸಿದ್ಧಯ್ಯ ಪುರಾಣಿಕ  ಏನಾದರೂ ಆಗು,ಮೊದಲು ಮಾನವನಾಗು’ ಎಂದು ಬರೆದಿದ್ದರು. ಅದನ್ನೂ ಪಾಲಿಸುವುದು ಅನೇಕರಿಗೆ ಕಷ್ಟವಾಗಿತ್ತಂತೆ. ಈಗ ಬರಗೂರು ಆ ಸೂಚನೆಯನ್ನೇ ವಿಸ್ತರಿಸಿದ್ದಾರೆ. ಮರ್ಯಾದಸ್ತ ಮನುಷ್ಯರಾಗೋಣ ಅಂದಿದ್ದಾರೆ. ಕಷ್ಟ ಕಷ್ಟ.
ಶ್ರೀವತ್ಸ ಜೋಶಿ ನಲಿವಿನ ಟಚ್ ಮತ್ತು ಒಲವಿನ ಟಚ್ ಎಂಬೆರಡು ಪುಸ್ತಕಗಳನ್ನು ಹೊರತಂದಿದ್ದಾರೆ. ಎರಡೂ ಸೊಗಸಾಗಿ ಓದಿಸಿಕೊಳ್ಳುತ್ತವೆ. ಜೋಶಿಯವರಿಗೆ ಓದಿನ ಅನುಭವಕ್ಕಿಂತ ನೋಡಿದ ಅನುಭವಗಳೇ ಜಾಸ್ತಿ. ಅವರ ಎಲ್ಲಾ ಲೇಖನಗಳಲ್ಲೂ ಸಿನಿಮಾ ಹಾಡುಗಳು ಪ್ರಾಸಕ್ಕಾಗಿ, ಹೋಲಿಕೆಗಾಗಿ ಬಳಕೆಯಾಗುತ್ತವೆ. ಭಾವಗೀತೆಗಳು ಅಷ್ಟಾಗಿ ಪ್ರಸ್ತಾಪ ಆಗುವುದಿಲ್ಲ.
ನನಗೆ ಗೊತ್ತಿರುವ ಗೆಳೆಯರೊಬ್ಬರು ಚೇತನ್ ಭಗತ್ ಪುಸ್ತಕಳನ್ನು ಓದಲೇಬೇಕು ಅನ್ನುತ್ತಿದ್ದರು. ಅವರ ಒತ್ತಾಯಕ್ಕೆ ಮಣಿದು ಚೇತನ್‌ನ ಮೂರು ಪುಸ್ತಕಗಳನ್ನು ತಂದರೆ, ಒಂದನ್ನೂ ಪೂರ್ತಿಯಾಗಿ ಓದುವುದಕ್ಕೆ ಸಾಧ್ಯವಾಗಲೇ ಇಲ್ಲ. ಯಾವುದೇ ಒಳನೋಟಗಳಿಲ್ಲದ, ಹೊಸ ಸಂಗತಿಗಳಿಲ್ಲದ, ಇವತ್ತಿನ ಮೇಲ್ಮಟ್ಟದ ಬದುಕನ್ನು ಸುಮ್ಮನೆ ಚಿತ್ರಿಸುವ ಕಾದಂಬರಿಗಳು ಅವು.
ಸದ್ಯಕ್ಕೆ ಇಸ್ತಾಂಬುಲ್‌ನ ಲೇಖಕ Orhan Pamukನ ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಕೈಯಲ್ಲಿದೆ. ಅದನ್ನು ಓದಲಾ,ಮತ್ತೊಂದು ಕತೆ ಬರೆಯಲಾ ಎಂಬ ಗೊಂದಲದಲ್ಲಿ ಎರಡನ್ನೂ ಮಾಡಲಾಗುತ್ತಿಲ್ಲ. ಓದು ಮತ್ತು ಬರಹಗಳ ಮಧ್ಯೆ ಸಿಕ್ಕಿಬಿದ್ದ ಲೇಖಕನನ್ನು ಯಾರು ಕಾಪಾಡುತ್ತಾರೆ?
ವಿಮರ್ಶಕ!

‍ಲೇಖಕರು avadhi

January 27, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

22 ಪ್ರತಿಕ್ರಿಯೆಗಳು

 1. ಕೃಷ್ಣಮೂರ್ತಿ

  ನೀವು ಹೇಳಿದ್ದು ನಿಜ. ಚೇತನ್ ಭಗತ್ ನ ಯಾವ ಪುಸ್ತಕಗಳೂ ಚೆನ್ನಾಗಿಲ್ಲ. ಅದು ಎಂಜಿ ರಸ್ತೆಯಲ್ಲಿ ಚಡ್ಡಿ ಹಾಕಿ ತಿರುಗುವ ಹೆಣ್ಣು ಮಕ್ಕಳು ಓದಿ ಖುಷಿ ಪಡಬಹುದಾದ ಪುಸ್ತಕ ಅಷ್ಟೇ!

  ಪ್ರತಿಕ್ರಿಯೆ
 2. ಶೆಟ್ಟರು (Shettaru)

  ಜೋಗಿ,
  “ದೂರ ಪ್ರಯಾಣ ಹೊರಟಾಗಂತೂ ಪುಸ್ತಕಗಳು ಒಳ್ಳೆಯ ಕಂಪೆನಿ”, ಇವತ್ತಿಗೂ ಆಫೀಸಿಗೆ ಹೋರಡುವಾಗಲೂ ೨ ಪುಸ್ತಕಗಳು ನನ್ನೊಂದಿಗಿರುತ್ತಾವೆ.
  ಛಂದದ ಲೇಖನ. ‘ಕೊನೆಸಿಡಿ’ಗಳು ಛಲೋ ಅದಾವ್ರಿ.
  ಚೇತನ್ ಭಗತರ ಪುಸ್ತಕಗಳ ಬೆಗ್ಗೆ ನೀವು ಬರೆದಿದ್ದನ್ನು ಒಪ್ಪಲಾರೆ.
  ಇವತ್ತಿನ ಮೇಲ್ಮಟ್ಟದ ಬದುಕನ್ನು ಸುಮ್ಮನೆ ಚಿತ್ರಿಸುವ ಇವೇ ಕಾದಂಬರಿಗಳು ನಾಳೆ ನಮ್ಮ ಇತಿಹಾಸದ ಶಾಸನಗಳಾಗ್ಯಾವು, ಯಾರಿಗೆ ಗೋತ್ತು. ಆದರೂ ಇವತ್ತಿನ ಬಾಹುಪಾಲು ಯುವಜನಾಂಗದ ಹಲವಾರು ಸವಾಲು, ಸಮಸ್ಯೆ ಇತ್ಯಾದಿ ಇತ್ಯಾದಿ ನಮ್ಮ ಮನದ ಬೆಗುದಿಗಳನ್ನು ‘ಹಾಗೆ ಸುಮ್ಮನೆ’ಚೆನ್ನಾಗಿಯೇ ಚಿತ್ರಿಸಿದ್ದಾರೆ ಎನ್ನುವುದು ನನ್ನ ಅನಿಸಿಕೆ.
  -ಶೆಟ್ಟರು

  ಪ್ರತಿಕ್ರಿಯೆ
 3. Santhosh Ananthapura

  “ಕೈಲೊಂದು ಡ್ರಾಫ್ಟ್ ಬಿಯರ್ ಟಿನ್ ಹಿಡಕೊಂಡು, ಹಾದಿಯಲ್ಲಿ ಸಿಗುವ ಯಾವುದೋ ಹಳ್ಳಿಯ ಸಮೀಪದ ಮರದ ಬುಡದಲ್ಲಿ ಆರಾಮಾಗಿ ಕಾದಂಬರಿ ಓದುತ್ತಾ ಕೂತುಬಿಡಬಹುದು.” Excellent Sir…ಅಂದಹಾಗೆ ನೀವು ಓದುವುದನ್ನು ನಿಲ್ಲಿಸಿ ಹೊಸ ಕತೆ ಬರೆಯಿರಿ…ಗೊಂದಲ ನಿವಾರಣೆ ಆಯ್ತು…!!! 🙂

  ಪ್ರತಿಕ್ರಿಯೆ
 4. ಸುಬ್ರಹ್ಮಣ್ಯ ಶರ್ಮ

  ಚೇತನ್ ಭಗತ್ ರವರ ಪುಸ್ತಕದ ಬಗೆಗಿನ ನಿಮ್ಮ ಧೋರಣೆ ನನಗೆ ಸರಿ ಕಾಣಲಿಲ್ಲ. He writes in such that they can relate the story to themselves.
  ಲೇಖನವೂ ಯಾಕೋ ಗೊಂದಲಮಯವಾಗಿದ್ದಂತೆ ಕಂಡಿತು.

  ಪ್ರತಿಕ್ರಿಯೆ
 5. Prasad

  ಚೇತನ್ ಬಗತ್ ಪುಸ್ತಕ ಡ ಬಗ್ಗೆ ನೀವು ಹಾಗೆ ಬರೆಯಬಾರದಿತ್ತು. ಹಿಂದೆ ಒಂದು ಅಂಕಣದಲ್ಲಿ ವೈದೇಹಿ ಯವರು ಎಷ್ಟು ಸಿಂಪಲ್ ಆಗಿ ಬರೀತಾರೆ ಅನ್ನೋದನ್ನ ಹೇಳಿದ್ರಿ. ಅದೇ ರೀತಿ ಚೇತನ್ ಕೊಡ ಯುವಜನರ ಸಮಸ್ಯೆಗಳನ್ನ ತುಂಬಾ ಸಿಂಪ್ಲ್ ಇಂಗ್ಲೀಷ್ ನಲ್ಲಿ ಓದುಗನಿಗೆ ಮನ ಮುಟ್ಟೋ ತರ ಬರೀತಾರೆ.

  ಪ್ರತಿಕ್ರಿಯೆ
 6. ಕೃಷ್ಣಮೂರ್ತಿ

  ಪ್ರಿಯರೆ, ಜೋಗಿ ಹೇಳಿದ್ದಕ್ಕೆ ನನ್ನ ಸಹಮತವಿದೆ. ಚೇತನ್ ಭಗತ್ ರ ಪುಸ್ತಕಗಳು ನಿಜಕ್ಕೂ ಚೆನ್ನಾಗಿಲ್ಲ. ತುಂಬಾ shallow . shallow ಅನ್ನುವುದಕ್ಕಿಂತ ಏನೂ ಹುರುಳಿಲ್ಲದ್ದು ಅಂದರೂ ತಪ್ಪಾಗೋಲ್ಲ. ಯಾವುದೇ ಇಂಜಿನಿಯರಿಂಗ್ ಕಾಲೇಜು ಹುಡುಗನ ಡೈರಿಯನ್ನು ಸ್ವಲ್ಪ ಫೈನ್-ಟ್ಯೂನ್ ಮಾಡಿ ಕಾದಂಬರಿ ಮಾಡಿದರೆ ಅದು ಚೇತನ್ ಭಗತ್ ನ ಪುಸ್ತಕಗಳಿಗಿಂತ ಚೆನ್ನಾಗಿರುತ್ತದೆ! ವೈದೇಹಿಯ ಸರಳತೆಗೂ ಭಗತ್ ನ ಸರಳತೆಗೂ ವ್ಯತ್ಯಾಸವಿದೆ.

  ಪ್ರತಿಕ್ರಿಯೆ
  • ಶಿವ

   ಎಂಜಿನಿಯರಿಂಗ್ ಹುಡುಗನ ಜೀವನದ ಕಥೆಯು ಕಾದಂಬರಿಯಾಗಬಾರದು ಅಂತೇನಾದ್ರೂ ಇದೆಯಾ?ಅದು ಒಳ್ಳೆಯ ಸಾಹಿತ್ಯ ಅನಿಸಿಕೊಳ್ಳುವುದಿಲ್ಲವಾ? ಏಕೆ? ಫೈನ್ ಟ್ಯೂನ್ ಮಾಡಿದರೆ ಇನ್ನೂ ಚೆನ್ನಾಗಿರುತ್ತದೆ ಅನ್ನುವುದಾದರೆ ನಮ್ಮ ಕನ್ನಡದ ಲೇಖಕರು ಅದನ್ನೇ ಮಾಡಬಹುದಿತ್ತಲ್ಲ.

   ಪ್ರತಿಕ್ರಿಯೆ
 7. ಜೀಕೆ

  “ಗೀತರಚನಕಾರರು ಮಳೆಯ ಬೆನ್ನು ಹತ್ತಿದ್ದಾರೆ” ಎಂದು ಜಯಂತರನ್ನು ಪರೋಕ್ಷವಾಗಿ ತೆಗಳಿದ್ದು ಸರಿಯಿಲ್ಲ. ಕನ್ನಡ ಚಿತ್ರ ಗೀತೆಗಳು ಈ ಮೊದಲಿಗಿಂತ ಹೆಚ್ಚು ಜನಪ್ರಿಯವಾಗುತ್ತಿರಲು ಜಯಂತರ ಕವಿತೆಗಳೇ ಕಾರಣ. ಅತಿ ವಿರಳ ಹಾಗೂ ಸರಳ ಎನ್ನಿಸುವ ಪದಗಳ ಅವರ ಪದ್ಯಗಳು ಕೇಳುಗರನ್ನು ಉಲ್ಲಸಿತ ಹಾಗೂ ರೋಮಾಂಚನ ಗೊಳಿಸುತ್ತಿರುವುದರಲ್ಲಿ ಸಂದೇಹವಿಲ್ಲ. …ಎಡಿಟ್ ಮಾಡಲಾಗಿದೆ…ಅವರ ಕವನಗಳು ಗದ್ಯದ ಭಾರಕ್ಕೆ ಬಾಗುತ್ತವೆ ಅಂತ ನೀವು ಹಿಂದೆ ಬರೆದದ್ದು ನೆನಪಿದೆ. ಅರ್ಥವಾಗದ, ಸಾಮಾನ್ಯ ಜನರನ್ನು ತಲುಪದ, (ಏನೋ ಹೇಳ ಹೊರಟಿದ್ದೇನೆ ಎಂದು ಬರೆವ ಪದ್ಯದಲ್ಲಿ ಹೇಳಿದ್ದೇನು ಎಂಬುದು ಬರೆದವನಿಗೆ ಮಾತ್ರ ತಿಳಿದರೆ ಆ ಪದ್ಯದ ಸಾರ್ಥಕತೆ ಏನು?) …ಎಡಿಟ್ ಮಾಡಲಾಗಿದೆ….

  ಪ್ರತಿಕ್ರಿಯೆ
 8. ರಾಧಿಕಾ

  Fact remains that youth of India is drawn to reading simply because of Chetan Bhagat’s books. Atleast part of that crowd may continue to be serious readers in the long run.

  ಪ್ರತಿಕ್ರಿಯೆ
 9. Jogi

  The comment was not on Jayanth. Many Many lyricists started imitating him. Most of them started using MALE, for no reason. If u listen to the latest songs, u will know.

  ಪ್ರತಿಕ್ರಿಯೆ
 10. ಶಿವ

  ಚೇತನ್ ಭಗತರ ಬಗ್ಗೆ ಟೀಕೆ ಮಾಡುವುದರ ಜೊತೆಗೆ ಆ ’ಒಳ ನೋಟ’ ಎಂದರೆ ನಿಮ್ಮಭಿಪ್ರಾಯದಲ್ಲ್ಲಿ ಏನು? ಅದು ಏಕೆ ಅಗತ್ಯ,ಪುಸ್ತಕದಲ್ಲಿ ಅದನ್ನು ಯಾವ ರೀತಿ ಅಳವಡಿಸಬೇಕು ಎಂಬುದನ್ನೂ ಹೇಳಬೇಕಿತ್ತು.
  ಇಲ್ಲದಿದ್ದರೆ ಒಬ್ಬ ಲೇಖಕ ಇನ್ನೊಬ್ಬನ ಬಗ್ಗೆ ಹೀಗೆ passing comment ಹಾಕುವುದು ಸರಿಯಿರುವುದಿಲ್ಲ. ಬರೀ ಕರ್ನಾಟಕವನ್ನೇ ತೆಗೆದುಕೊಂಡರೂ ಚೇತನ ಭಗತರ ಪುಸ್ತಕ ಮಾರಾಟವಾದಷ್ಟು ಕನ್ನಡ ಪುಸ್ತಕಗಳು ಮಾರಾಟವಾಗುವುದಿಲ್ಲ. ಹಾಗಿದ್ದರೆ ಓದುಗರಿಗೆ ಬೇಡವಾದ ಆ ’ಒಳನೋಟ’ ಏನು? ಜೋಗಿಯವರು ಉತ್ತರಿಸುವರಾ?

  ಪ್ರತಿಕ್ರಿಯೆ
 11. Anu

  ಕೈಲೊಂದು ಡ್ರಾಫ್ಟ್ ಬಿಯರ್ ಟಿನ್ ಹಿಡಕೊಂಡು — haagidre “dont drink and drive” traffic rule na gathiyenu? Please ee thara salahe galannu kottu, adanne ondu style thara madbedi. Yuva jananga modale haadi thapputhide.

  ಪ್ರತಿಕ್ರಿಯೆ
 12. Siri

  ಚೇತನ್ ಭಗತ್ ತುಂಬಾ ಆಕರ್ಷಕವಾಗಿ ಬರೀತಾನೆ ಅನ್ನೋದಂತೂ ಹೌದು ಆದರೆ
  ಆಕರ್ಷಕವಾದದ್ದೆಲ್ಲಾ ಸತ್ವಯುತವಾದದ್ದು ಅನ್ನಿಸಿಕೊಳ್ಳಬೇಕಾಗಿಲ್ಲ. ಕಾಮುವಿನ ’ದಿ ಔಟ್ಸೈದಎರ್
  ಜೆ.ಎಂ. ಕೋಟ್ಜೀನ ’ದಿ ಡಿಸ್ ಗ್ರೇಸ್’ ಪೌಲ್ ಆಸ್ಟರ್ ನ ’ಮ್ಯಾನ್ ಇನ್ ದಿ ಡಾರ್ಕ್’
  ನಮ್ಮವನೇ ಆದ ಅಮಿತಾವ್ ಘೋಷ್ ನ’ಸೀ ಆಫ್ ಪೋಪೀಸ್’ ಅರುಣ್ ಜೋಷಿಯ
  ’ಸ್ಟ್ರೇಂಜ್ ಕೇಸ್ ಆಫ್ ಬಿಲ್ಲಿ ಬಿಸ್ವಾಸ್’ ಕಾದಂಬರಿಗಳನ್ನ ಓದಿ ಎಷ್ಟು ದಿನಗಳಾದರೂ
  ನಮಗೇನೋ ಅರ್ಥವಾಗದೆ ಉಳಿದದ್ದು, ನಮ್ಮ ಅಳವನ್ನು ಮೀರಿದ್ದು ಏನೋ ಇದೆ ಅನ್ನಿಸಿ
  ಆ ಕಾದಂಬರಿಗಳನ್ನ ಮತ್ತೆ ಮತ್ತೆ ಓದುವಂತೆ ಮಾಡುತ್ತವೆ. ಆದರೆ ಚೇತನ್ ಭಗತ್ ಹಾಗೂ ಆ ಥರದ ಕಾದಂಬರೀಕಾರರು ಬರೆಯುವ ಕಾದಂಬರಿಗಳು ಕೆಲವು ಕಮರ್ಷಿಯಲ್ ಸಿನಿಮಾಗಳಂತೆ ಇರುತ್ತವೆ. ಓದಿದ ನಂತರ ಅವು ನಮ್ಮನ್ನು ಕಾಡುವುದಿಲ್ಲ, ನನಗರ್ಥವಾಗದ್ದು ಅಲ್ಲಿ ಮತ್ತೇನೋ ಇದೆ ಅನ್ನಿಸುವುದಿಲ್ಲ.
  ಅದಲ್ಲದೆ ಅವನ ಎಲ್ಲಾ ಕಾದಂಬರಿಗಳನ್ನ ಓದಿದವರಿಗೆ ಗೊತ್ತಾಗುತ್ತೆ, ಅವನ ಕಾದಂಬರಿಯ
  ಪ್ರೊಟಾಗನಿಸ್ಟ್ ನ ಸ್ವಭಾವ ಒಂದೇ ತರಹದ್ದು. ಫೈವ್ ಪಾಯಿಂಟ್ ಸಮ್ ವನ್ ನ ಹರಿ, ವನ್ ನೈಟ್ ಅಟ್ ಕಾಲ್ ಸೆಂಟರ್ ನ ಶ್ಯಾಮ್, ತ್ರೀ ಮಿಸ್ಟೇಕ್ಸ್ ಆಫ್ ಮೈ ಲೈಫ್ ನ ಗೋವಿಂದ್ ಪಟೇಲ್, ಟೂ ಸ್ಟೇಟ್ಸ್ ನ ಕ್ರಿಷ್, ಎಲ್ಲರೂ ಒಂದೇ ರೀತಿ. ಅವರ ಸ್ವಭಾವ ರೀತಿ ನೀತಿಗಳಲ್ಲಿ ಒಂಚೂರೂ ವ್ಯತ್ಯಾಸವೇ ಇಲ್ಲ. ಅವನ ಹುಡುಗಿಯರೆಲ್ಲಾ ಬೋಲ್ಡ್ ಅಂಡ್ ಡೇರಿಂಗ್. ಯಾರೊಬ್ಬರೂ ಕೂಡಾ ಹಿಂಜರಿಕೆ ಸ್ವಭಾವದವರೇ ಅಲ್ಲ. ಸನ್ನಿವೇಷಗಳೂ ಪುನರಾವರ್ತನೆ. ಉದಾಹರಣೆಗೆ ತ್ರೀ ಮಿಸ್ಟೇಕ್ಸ್ ನಲ್ಲಿ ಗೋವಿಂದ್ ಪಟೆಲ್ ಟ್ಯೂಶನ್ ಹೇಳಿಕೊಡುತ್ತಾನೆ, ಟೂ ಸ್ಟೇಟ್ಸ್ ನಲ್ಲೂ ಕ್ರಿಷ್ ಅದನ್ನೇ ಮಾಡುತ್ತಾನೆ. ವೈವಿಧ್ಯತೆಯೇ ಇಲ್ಲ. ಕಾದಂಬರೀಕಾರನು ಸೃಷ್ಟಿಸುವ ಪಾತ್ರಗಳು ಅವನು ಜನರನ್ನು ಅರ್ಥ ಮಾಡಿಕೊಂಡ ರೀತಿಯನ್ನ ತೋರಿಸುತ್ತದೆ. ಟಾಲ್ ಸ್ಟಾಯ್, ಅನ್ನಾ ಕರೇನಿನಾ ಒಂದರಲ್ಲೇ ನಮಗೆ ಆಶ್ಚರ್ಯವಾಗುವಷ್ಟು ಪಾತ್ರಗಳನ್ನು ಸೃಷ್ಟಿಸುತ್ತಾ ಹೋಗುತ್ತಾನೆ, ಎಷ್ಟು ಪಾತ್ರಗಳೋ ಅಷ್ಟೂ ರೀತಿಯ ಸ್ವಭಾವಗಳು. ಅವನ ಪಾತ್ರ ಚಿತ್ರಣ ನಮ್ಮನ್ನು ದಂಗುಬಡಿಸುತ್ತದೆ. ಆದರೆ ನಾಲ್ಕು ಕಾದಂಬರಿಗಳನ್ನ ಬರೆದರೂ ಚೇತನ್
  ಅದೇ ಪ್ಪಾತ್ರಗಳನ್ನ ಮತ್ತೆ ಮತ್ತೆ ತರುತ್ತಾನೆ.
  ಆದರೂ ಅವನು ಬೋರ್ ಮಾಡದೆ, ಸರಳವಾದ ಇಂಗ್ಲೀಷ್ ನಲ್ಲಿ ಕಥೆ ಹೇಳುತ್ತಾನಾದ್ದರಿಂದ ಎಲ್ಲರೂ ಓದುತ್ತಾರೆ ಅನ್ನಿಸುತ್ತೆ ನಂಗೆ. ಎಲ್ಲರೂ ಓದಿದ ಮಾತ್ರಕ್ಕೆ ಅದು ಚನ್ನಾಗಿದೆ ಅಂದುಕೊಳ್ಲಬೇಕಾಗಿಲ್ಲ.

  ಪ್ರತಿಕ್ರಿಯೆ
  • ಶಿವ

   //ಆದರೆ ನಾಲ್ಕು ಕಾದಂಬರಿಗಳನ್ನ ಬರೆದರೂ ಚೇತನ್ ಅದೇ ಪ್ಪಾತ್ರಗಳನ್ನ ಮತ್ತೆ ಮತ್ತೆ ತರುತ್ತಾನೆ.ಎಲ್ಲರೂ ಓದಿದ ಮಾತ್ರಕ್ಕೆ ಅದು ಚನ್ನಾಗಿದೆ ಅಂದುಕೊಳ್ಳಬೇಕಾಗಿಲ್ಲ.//
   ಪಾತ್ರಗಳನ್ನು ಮತ್ತೆ ಮತ್ತೆ ತಂದರೂ ಓದುಗರೇಕೆ ಇಷ್ಟಪಡುತ್ತಾರೆ? ಹೆಚ್ಚು ಜನ ಓದಿದ ಮಾತ್ರಕ್ಕೆ ಚೆನ್ನಾಗಿದೆ ಅಲ್ಲದಿದ್ದರೆ ’ಚೆನ್ನಾಗಿದೆ’ ಅನ್ನುವುದಕ್ಕೆ ಮಾನದಂಡಗಳೇನು? ಓದಿದ್ದು ಒಂದೇ ಸಲಕ್ಕೆ ಅರ್ಥವಾಗದಿದ್ದರೆ ಅದು ’ಚೆನ್ನಾಗಿದೆ’ ಅನ್ನಿಸಿಕೊಳ್ಳುತ್ತದಾ? ಅರ್ಥವಾಗದೇ ಮತ್ತೆ ಮತ್ತೆ ಓದಬೇಕು ಅನಿಸಿದರೆ ಅದರಲ್ಲಿ ’ಒಳನೋಟ’ ಇದೆ ಅನಿಸುತ್ತದಾ? ಇದರ ಬಗ್ಗೆ ಒಂದು ವಿಸ್ತೃತ ಚರ್ಚೆ ಅಗತ್ಯವಿದೆ. ಕನ್ನಡ ಸಾಹಿತ್ಯದ ಹಿತದೃಷ್ಟಿಯಿಂದ ಇದು ಅಗತ್ಯ ಕೂಡ.

   ಪ್ರತಿಕ್ರಿಯೆ
 13. ರಾಧಿಕಾ

  This discussion is like comparing C.Ashwath’s singing with that of any famous classical music singer. While Ashwath is a crowd puller (like Chetan), classical singer has his/her own audience. Why label that this is better than that?
  Both have their own distinguished audience. Same goes with readers and their likings. For IIM Grad Chetan, writing is his career and he means business any day. Obviously he tries to hit the chords of the young crowd and has managed it quite well.
  Let’s not compare apple with an orange to trigger a virtual fight here 🙂

  ಪ್ರತಿಕ್ರಿಯೆ
 14. Siri

  ಭೈರಪ್ಪನವರ ವಂಶವೃಕ್ಷದಲ್ಲಿ ಶ್ರೀನಿವಾಸ ಶ್ರೋತ್ರಿಗಳು ಹೇಳುವಂತೆ “ಮೂಲ ದೃಷ್ಟಿಯಲ್ಲೇ ಭಿನ್ನತೆ ಇರುವಾಗ ಚರ್ಚೆಯಿಂದ ಯಾವ ಪ್ರಯೋಜನವೂ ಇಲ್ಲ”.
  🙂 🙂

  ಪ್ರತಿಕ್ರಿಯೆ
 15. ಶೆಟ್ಟರು (Shettaru)

  ಸಿರಿ ಅವರೆ,
  ನಾನು ನಿಮ್ಮ ಲೇಖನಗಳನ್ನು ಓದಿ ಮೆಚ್ಚುತ್ತಾ ಬಂದ ಒಬ್ಬ ಓದುಗ,
  ನಿಮ್ಮ ಮೊದಲ ಕಮೆಂಟಿನಲ್ಲಿ “ಕಾದಂಬರಿಗಳನ್ನ ಓದಿ ಎಷ್ಟು ದಿನಗಳಾದರೂ ನಮಗೇನೋ ಅರ್ಥವಾಗದೆ ಉಳಿದದ್ದು, ನಮ್ಮ ಅಳವನ್ನು ಮೀರಿದ್ದು ಏನೋ ಇದೆ ಅನ್ನಿಸಿ ಆ ಕಾದಂಬರಿಗಳನ್ನ ಮತ್ತೆ ಮತ್ತೆ ಓದುವಂತೆ ಮಾಡುತ್ತವೆ” ಎಂಬ ಸಾಲುಗಳನ್ನು ಓದುತ್ತಿದ್ದರೆ ನನಗೇಕೂ ನನ್ನ ಅಜ್ಜಿ ನೆನಪಾಗುತ್ತಾರೆ.
  ಅವರ ಪ್ರಕಾರ ‘ಯಾವ ಅಂಗಡಿಯಲ್ಲಿ ವಸ್ತುಗಳ ಬೆಲೆ ದುಬಾರಿಯೋ ಆ ಅಂಗಡಿಯಲ್ಲಿ ಒಳ್ಳೆಯ ವಸ್ತುವೇ ದೊರೆಯುತ್ತದೆ’, ಹಾಗೂ ನಿಮ್ಮ ಪ್ರಕಾರ “ಯಾವ ಸಾಹಿತ್ಯ ಓದಿದಾಗ ಸುಮ್ಮನೆ ಅರ್ಥವಾಗುವುದಿಲ್ಲವೋ ಅದು ಒಳ್ಳೆಯ ಸಾಹಿತ್ಯ, ಹಾಗೆ ಸುಮ್ಮನೆ… ಅರ್ಥವಾದರೆ ಅದು ಒಳ್ಳೆಯ ಸಾಹಿತ್ಯ ಅಲ್ಲ 🙂 ”
  ನೀವು ಹೆಸರಿಸಿದ ಲೇಖಕರು ಓಳ್ಳೆಯ ಸಾಹಿತ್ಯವನ್ನೆ ರಚಿಸಿರಬಹುದು (ಯಾಕೆಂದರೆ ನಾನಿನ್ನು ಓದಿಲ್ಲ), ಆದರೆ ಚೇತನ ಭಗತ ಇವತ್ತು ಭಾರತದಲ್ಲಿ ಅತಿ ಹೆಚ್ಚು ಓದಿಸಿಕೊಂಡ ಲೇಖಕ, ನಮ್ಮ ಯುವಕರನ್ನು ಮತ್ತೆ ಓದಿನ ಗೀಳಿಗೆ ಕೋಂಡೊಯ್ದವನು ಎನ್ನುವುದು ಮಾತ್ರ ಸುಳ್ಳಲ್ಲ, ಇದನ್ನು ನೀವು ಒಪ್ಪುತ್ತಿರಿ.
  -ಶೆಟ್ಟರು

  ಪ್ರತಿಕ್ರಿಯೆ
 16. ಸಿರಿ

  ನಾನಿರೋದು ಹಾಸ್ಟೆಲಲ್ಲಿ. ನಂಗೆ ಗೊತ್ತಿರೋದನ್ನು ಹೇಳ್ತೀನಿ. ಚೇತನ್ ಪುಸ್ತಕಗಳು ಬಂದಾಗ ಹಾಸ್ಟೆಲಿನ ಕೆಲವು ಸ್ನೇಹಿತೆಯರು ಬಂದು ಅವನ ಪುಸ್ತಕ ಇದೆಯಾ, ಇದ್ರೆ ಕೊಡು ಅಂತ ಕೇಳ್ಕೊಂಡು ಹೋಗ್ತಾರೆ. ಹಾಗೆ ಓದಿದವರು ಅದು ಓದಿದ ನಂತರ ಬೇರೆ ಯಾವುದಾದರೂ ಲೇಖಕನ ಪುಸ್ತಕವನ್ನು ಕೇಳುತ್ತಾರಾ.. ಇಲ್ಲಿ ತನಕ ಕೇಳಿಲ್ಲ. ಅವರ ಓದು ಚೇತನ್ ಭಗತ್ ಕಾದಂಬರಿಗಳಿಗಷ್ಟೇ ಸೀಮಿತ. ಚೇತನ್ ಅವರನ್ನು ಓದಿನ ಗೀಳಿಗೆ ಹಚ್ಚುತ್ತಿಲ್ಲ. ಅವನನ್ನು ಮಾತ್ರ ಓದುವಂತೆ ಮಾಡುತ್ತಾನೆ.
  ಹಾಗೇ, ಅರ್ಥವಾಗದ್ದು ಶ್ರೇಷ್ಠ ಎಂದು ನಾನು ಹೇಳುತ್ತಿಲ್ಲ. ಆದರೆ ಮತ್ತೆ ಮತ್ತೆ ಓದಿದಾಗ ಬೇರೆ ಬೇರೆ ಅರ್ಥವನ್ನು ಕೊಡುವಂಥದ್ದು
  ಒಳ್ಳೆಯ ಕೃತಿ ಅನಿಸಿಕೊಳ್ಳುತ್ತೆ. ಉದಾಹರಣೆಗೆ ಶಿವರಾಮ ಕಾರಂತರ ಮೂಕಜ್ಜಿಯ ಕನಸು ಕಾದಂಬರಿಯನ್ನು ಒಂದೆರಡು ವರ್ಷ ಮೊದಲು ಓದಿದಾಗ ನನಗೆ ಅರ್ಥವಾಗುತ್ತಿದ್ದ ಪರಿಯೇ ಬೇರೆ, ಈಗ ಅದು ಕೊಡುವ ಅರ್ಥವೇ ಬೇರೆ. ಆದರೆ ಫೈವ್ ಪಾಯಿಂಟ್ ಸಮ್ ವನ್ ನ ಇನ್ನು ಹತ್ತು ವರ್ಷ ಬಿಟ್ಟು ಓದಿದರೂ ಈಗ ಅನ್ನಿಸಿದ್ದು ಬಿಟ್ಟು ಬೇರೆ ಅನ್ನಿಸುವುದಕ್ಕೆ ಸಾಧ್ಯವಿಲ್ಲ.
  ಹಾಗೇ, ‘ಕಣ್ಣೀರು ಬಂದು ಮಾತೇ ಹೊರಡಲಿಲ್ಲ’, ಬಾಯಿ ಕಟ್ಟಿಹೋಯಿತು ಅನ್ನುವುದಕ್ಕೂ ‘ಕಣ್ಣಲೇನೋ ಬಂದು ತುಟಿಯಲೇನೋ ನಿಂದು’ ಎನ್ನುವುದಕ್ಕೂ ಇರುವ ವ್ಯತ್ಯಾಸವೇ ಸಾಹಿತ್ಯದ ಬೆರಗಿಗೆ ಸಾಕ್ಷಿ.
  @ರಾಧಿಕಾ,
  “This discussion is like comparing C.Ashwath’s singing with that of any famous classical music singer.”
  You took me wrong. The discussion is like comparing an item song to light music/classical music. Ofcourse, Item songs are crowd pullers. And if somebody says, there is no stuff in item song, you gotta agree.

  ಪ್ರತಿಕ್ರಿಯೆ
 17. ಶಿವ

  ಅವಧಿಯವರು ಚಾರ್ಲಿಚಾಪ್ಲಿನ್ ಮೂರ್ತಿ ಬಗ್ಗೆ ಚರ್ಚೆ ಮಾಡಲು ಅವಕಾಶ ಕೊಟ್ಟಷ್ಟು ಈ ವಿಷಯದ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದರೆ ಬಹಳ ಒಳ್ಳೆಯ ಚರ್ಚೆಯಾಗುತ್ತಿತ್ತು.

  ಪ್ರತಿಕ್ರಿಯೆ
 18. ಶೆಟ್ಟರು (Shettaru)

  ಇಂದಿನ ಕಾನ್ವೆಂಟ್ ಕಂದಗಳಿಗೆ ನೀವೇ ಹೇಳಿದ ಸಾಲುಗಳು ‘ಕಣ್ಣಲೇನೋ ಬಂದು ತುಟಿಯಲೇನೋ ನಿಂದು’ ಎಂಬ ಸಾಲುಗಳು ಹೇಗರ್ಥವಾದಿತು.
  “ಕಣ್ಣಲ್ಲೇನೋ ಬಂದ್ರೆ ತುಟಿ ಯಾಕೆ ನಿಂದು?” ಎಂದು ಕೇಳಿಯಾರು.
  ಮೊದಲು ನಾವು ಅವರಿಗೆ ಓದಲು ಕಲಿಸೋಣ, ನಂತರ ಎನನ್ನೊದುವುದು ಎಂದು ಅವರೇ ನಿರ್ಧರಿಸಲಿ. ಈ ತರದ ಬೆರಗುಗಳೆ ಶ್ರೇಷ್ಠ ಸಾಹಿತ್ಯ ಎನ್ನುವುದಾದರೆ ಅಂದು ಹನ್ನೆರಡನೆಯ ಶತಾಮನದಲ್ಲಿ ಜನರ ನುಡಿಗಳಿಂದಲೇ, ಜನರ ನಡುವೆಯೇ ಹುಟ್ಟಿದ ವಚನಗಳು ಕನ್ನಡ ಸಾಹಿತ್ಯದ ಶ್ರೇಷ್ಠ ಪ್ರಕಾರಗಳಾಗುತ್ತಿದ್ದಿಲ್ಲ.
  ಉಳ್ಳವರು ಶಿವಾಲಯ ಮಾಡುವರಯ್ಯ, ನಾನೇನು ಮಾಡಲಿ ಬಡವನಯ್ಯ…
  -ಶೆಟ್ಟರು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: