ಜೋಗಿ ಬರೆದಿದ್ದಾರೆ ಪ್ರೇಮದ ಬಗ್ಗೆ


ಏನನ್ನೂ ಉಳಿಸಿಕೊಳ್ಳದ ಕನ್ನಡಿಯಂತೆ ಈ ಪ್ರೇಮ


ಸಂಬಂಧದ ಬಗ್ಗೆ ಬರೆಯಲು ಕುಳಿತಾಗಲೆಲ್ಲ ಥಟ್ಟನೆ ನೆನಪಾಗುವುದು ಎಚ್ ಎಸ್ ವೆಂಕಟೇಶಮೂರ್ತಿ ಬರೆದ ನಾಲ್ಕಾರು ಸಾಲು: ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ, ಅರಿತೆವೇನು ನಾವು ನಮ್ಮ ಅಂತರಾಳವ? ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ, ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ?
ಅವರಿಬ್ಬರೂ ಕಿತ್ತಾಡಿಕೊಂಡಿದ್ದರು. ಇಬ್ಬರ ಮಧ್ಯೆ ಅಪಾರ ಪ್ರೀತಿ. ಹಾಗಿದ್ದರೂ ಜಗಳ. ಅವನು ಅಷ್ಟಾಗಿ ಪ್ರೀತಿಸುತ್ತಿಲ್ಲ ಅಂತ ಅವಳು. ಅವಳಿಗೆ ಕಾಳಜಿಯೇ ಇಲ್ಲ ಅಂತ ಅವನು. ಒಂದೊಂದು ದಿನ ಒಂದೊಂದು ಕಾರಣಕ್ಕೆ ಇಬ್ಬರೂ ಮೌನಕ್ಕೆ ಶರಣು. ಮೌನ ಮುರಿಯುವ ಮುಂತೆ ಒಂದು ಕಲಹ. ಇನ್ನು ಮೇಲೆ ಜಗಳ ಆಡಬಾರದು ಅಂತ ಆಣೆಭಾಷೆ. ಮತ್ತೆ ಮಾರನೆಯ ದಿನ ಅದೇ ಏಕಾಂತವಾಸ.
ಅವನು ಹತ್ತಿರವಿದ್ದರೂ ದೂರವಿದ್ದರೂ ಮಾತಾಡಿದರೂ ಮಾತಾಡದೇ ಇದ್ದರೂ ಅದೇ ಯಾತನೆ. ಮನಸ್ಸು ಭವಿಷ್ಯದತ್ತ ಪ್ರಯಾಣ ಮಾಡುತ್ತದೆ. ಭೂತಕಾಲದ ಹಳವಂಡಗಳಿಂದ ಏನನ್ನೋ ಪಾತಾಳಗರಡಿ ಹಾಕಿ ಹುಡುಕಿ ತರುತ್ತದೆ. ಆವತ್ತು ಅವನು ಹಾಗಂದಿದ್ದ ಅಲ್ಲವಾ ಎಂದು ನಿಡುಸುಯ್ಯುತ್ತದೆ. ಅವಳು ಯಾರನ್ನೋ ಮೆಚ್ಚಿಕೊಂಡು ಮಾತಾಡಿದ್ದು ನೆನಪಾಗಿ ಅವನು ಕಂಗೆಡುತ್ತಾನೆ.
ನಾನೇ ಬೇಕಿತ್ತಾ ಅವಳಿಗೆ?

ಅದು ಅವನ ಪ್ರಶ್ನೆ. ಅವಳದೂ ಅದೇ ಪ್ರಶ್ನೆ. ನಾನಲ್ಲದೇ ಯಾರಿದ್ದರೂ ಅವಳನ್ನು ಅವನು ಇಷ್ಟೇ ಪ್ರೀತಿಸುತ್ತಿದ್ದ ಅಲ್ವಾ?ಹಾಗಿದ್ದರೆ ನನ್ನ ಅನನ್ಯತೆ ಏನು? ನೀನು ನನ್ನ ಜಗತ್ತನ್ನೇ ಬದಲಾಯಿಸಿದೆ ಎಂದು ಅವಳು ಹೇಳಿದಾಗ ಅವಳಿಗೂ ಅದು ಸುಳ್ಳೆಂದು ಗೊತ್ತು? ಮಾತುಗಳೆಲ್ಲ ಬರೀ ಮಾತಷ್ಟೇ ಆಗಿಬಿಡುವ ಆತಂಕ. ಓಲೈಸುವ ಪದಗಳು, ಅನುನಯನ ರೀತಿ,ಮೆಚ್ಚಿಸುವ ಹುನ್ನಾರ ಬಲ್ಲವರಿಗೆ ಎಲ್ಲವೂ ಎಷ್ಟು ಸುಲಭ? ಮಾತೆಲ್ಲ ಮುಗಿದ ಮೇಲೆ ತಾನು ಆಡಿದ್ದೆಲ್ಲ ಬರೀ ಮಾತು ಅನ್ನಿಸಿ ಮನಸ್ಸು ಖಾಲಿಖಾಲಿ. ಯಾಕೆ ಹೀಗಾಗುತ್ತದೆ?
ಇಬ್ಬರೂ ನಟಿಸುತ್ತಿದ್ದಾರಾ? ನಟನೆಯ ಮೂಲಕ ನಿಜವಾಗುವ ಪ್ರಯತ್ನವಾ? ಪ್ರೀತಿಯ ಆರಂಭದಲ್ಲಿ ಹೀಗಾಗುತ್ತದಾ?ಅವಳಲ್ಲಿ ಬೇರೆ ಯಾರನ್ನೋ ಅವನು ಹುಡುಕುತ್ತಿದ್ದಾನಾ? ತಾನು ಪೆಪ್ಪರಮೆಂಟಿನಂತೆ ಸವಿದ ಇನ್ಯಾವುದೋ ಪ್ರೀತಿಗಾಗಿ ಅವಳು ಹಂಬಲಿಸುತ್ತಿದ್ದಾಳಾ?
ಒಂದು ಸಂಬಂಧದಿಂದ ನೀನು ಏನನ್ನು ನಿರೀಕ್ಷಿಸುತ್ತಿದ್ದೀಯಾ? ಅವನನ್ನು ನೇರವಾಗಿ ಕೇಳಿದೆ. ಅವನಿಗೆ ಗೊತ್ತಿರಲಿಲ್ಲ. ಎಲ್ಲವೂ ಸರಿಹೋಗುತ್ತಿಲ್ಲ. ಬರೀ ಟೊಳ್ಳು ಅನ್ನಿಸುತ್ತಿದೆ. ಕೆಲವು ದಿನಗಳಿಂದ ನಾವು ಆಪ್ತವಾಗಿ ಮಾತಾಡಿಲ್ಲ. ಅವಳು ನನ್ನನ್ನು ಪ್ರೀತಿಸುತ್ತಿಲ್ಲ ಅನ್ನಿಸುತ್ತಿದೆ. ರಂಗ ಮೇಲೆ ಯಾರೋ ಬರೆದುಕೊಟ್ಟ ಮಾತುಗಳನ್ನು ತೀವ್ರವಾಗಿ ಅಭಿನಯಿಸಿ ಪಕ್ಕಕ್ಕೆ ಸರಿದುಹೋಗುವ ಹಾಗೆ. ಆ ಮಾತು ನಮ್ಮದೇ ಆಗುವುದು ಯಾವಾಗ?
ಅವಳದ್ದೂ ಅದೇ ಪ್ರಶ್ನೆ. ಅವನಿಗೆ ನನ್ನ ಮೇಲೆ ಅಂಥ ಆಸಕ್ತಿಯಿಲ್ಲ. ಅವನದು ಪ್ರೀತಿಯಲ್ಲ, ಹುಡುಕಾಟ. ಅಕ್ಕರೆಯಲ್ಲ ಬರಿ ಕುತೂಹಲ. ನಾನು ಹಾಗಿರಬೇಕು ಹೀಗಿರಬೇಕು ಎಂಬ ಕಡ್ಡಾಯ. ಇದ್ದಹಾಗೇ ನಿನ್ನ ಒಪ್ಪಿಕೊಳ್ಳುತ್ತೇನೆ ಎಂಬುದಿಲ್ಲ. ನಾನು ಬದಲಾಗಬೇಕಾ? ಎಷ್ಟಂತ ಅವನಿಗಾಗಿ ನನ್ನ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಬೇಕು. ನನ್ನನ್ನು ನಾನು ಕಳೆದುಕೊಳ್ಳಬೇಕು. ಕೂಡೋದು ಅಂದರೆ ಕಳೆದುಕೊಳ್ಳೋದಾ?
ಹೀಗೆ ಪ್ರಶ್ನಾರ್ಥಕ ಚಿನ್ಹೆಯ ಮುಂದೆ ನಾವೇಕೆ ನಿಂತ್ಕೋತೇವೆ. ಅಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಬೇರಾಗಿಯೇ ಉಳಿಸುವ ಶಕ್ತಿ ಯಾವುದು?
ಎಲ್ಲಾ ಪ್ರೇಮಿಗಳ ಸಮಸ್ಯೆಯಿದು. ಯಾಕೋ ಸರಿಹೋಗ್ತಿಲ್ಲ ಅಂತ  ಕನ್ನಡದಲ್ಲಿ ಮಾತಾಡುವವರೂ, ಹೀ ಈಸ್ ನಾನ್ ಕಂಪ್ಯಾಟಿಬಲ್ ಅಂತ ಇಂಗ್ಲಿಷು ಬಲ್ಲವರೂ, ಇಬ್ಬರ ಮಧ್ಯೆ ಏನೋ ಮಿಸ್ ಆಗ್ತಿದೆ ಅಂತ ಏನೆಂದು ಗೊತ್ತಾದವರೂ ಮಾತಾಡುತ್ತಾರೆ. ಹಾಗೆ ಕಳೆದುಹೋಗುವಂಥದ್ದು ಏನದು? ಅಷ್ಟಕ್ಕೂ ಅವನೋ ಅವಳೋ ಇನ್ನೊಬ್ಬರಿಂದ ಏನನ್ನು ಪಡೆದುಕೊಳ್ಳೋದಕ್ಕೆ ಬಯಸಿದ್ದರು? ಒಂದಾಗುವುದು ಎಂದರೆ ಪೂರ್ಣವಾಗುವುದು ಅಂತಾನಾ? ಅವನ ಅಪೂರ್ಣತೆಯೂ ಅವಳ ಅಪೂರ್ಣತೆಯೂ ಸೇರಿದಾಗ ಪೂರ್ಣತ್ವ ಪ್ರಾಪ್ತಿಯಾಗುತ್ತದೆ ಎಂದು ಪ್ರೀತಿಸುತ್ತಾರಾ? ಅಪೂರ್ಣವನ್ನು ಅಪೂರ್ಣ ಸೇರಿದರೆ ಅಪೂರ್ಣವೇ ಆಗುತ್ತದಾ?
ಅವನು ನನ್ನನ್ನು ಇನ್ನಿಲ್ಲದಂತೆ ಪ್ರೀತಿಸಬೇಕು. ಆ ಪ್ರೀತಿಯಲ್ಲಿ ನಾನು ಕರಗಿಬಿಡಬೇಕು. ಬೆಚ್ಚಗಿರಬೇಕು. ಆ ಪ್ರೀತಿ ನನ್ನನ್ನು ಸಂತೋಷವಾಗಿಡಬೇಕು ಎನ್ನುವ ಹಂಬಲಕ್ಕೆ ನಿಜಕ್ಕೂ ಅರ್ಥವಿದೆಯಾ? ಇಬ್ಬರೂ ಸುಖಿಗಳು, ತಮ್ಮತಮ್ಮ ಸಾಮರ್ಥ್ಯದಲ್ಲಿ, ಪ್ರತಿಭೆಯಲ್ಲಿ ನಂಬಿಕೆ ಇರುವವರು ಒಂದಾದಾಗ ಮಾತ್ರ ಆ ಸಂಬಂಧ ಕಳೆಗಟ್ಟುತ್ತದಾ? ಸಮಾನ ಸುಖಿಗಳು ಸೇರಿದಾಗ ಅಲ್ಲಿ ಸುಖ ನೆಲೆಸುತ್ತದೆ, ಸಮಾನ ದುಃಖಿಗಳು ಸೇರಿದಾಗ ದುಃಖವೇ ಸೇತುವೆಯಾಗುತ್ತದೆ ಅಲ್ಲವೇ?
ಹಯವದನ’ ಮತ್ತೆ ಮತ್ತೆ ನೆನಪಾಗುತ್ತಾನೆ. ಕಪಿಲ ಮತ್ತು ದೇವದತ್ತರ ಮಧ್ಯೆ ಸಿಕ್ಕಿ ನಲುಗುವ ಪದ್ಮಿನಿಯ ದ್ವಂದ್ವವೇ ಎಲ್ಲರನ್ನೂ ಕಾಡುತ್ತಿರುವಂತಿದೆ. ಪ್ರೀತಿಯಲ್ಲಿ ಪೂರ್ಣವಾಗುವ ಆಶಯ ಕೇವಲ ಆಶೆಯಾದಾಗ ಹಾಗಾಗುತ್ತಾ? ಅತಿಯಾದ ನಿರೀಕ್ಷೆ ನಮ್ಮನ್ನು ಅಷ್ಟೊಂದು ಹಪಹಪಿಸುವಂತೆ ಮಾಡುತ್ತದಾ?
ಇವೆಲ್ಲದರಿಂದ ಬಿಡುಗಡೆ ಹೇಗೆ?
ನಮ್ಮ ನಮ್ಮ ಜಗತ್ತನ್ನು ನಾವೇ ಕಂಡುಕೊಳ್ಳುವ ಮೂಲಕ. ನಮ್ಮ ಸಂತೋಷಗಳನ್ನು ನಾವೇ ಹುಡುಕಿಕೊಳ್ಳಬೇಕು. ಕ್ರಿಯೆಯ ಮೂಲಕ, ನಮ್ಮ ಕಾರ್ಯಕ್ಷೇತ್ರದಲ್ಲಿ ತೊಡಗಿಕೊಳ್ಳುವ ಮೂಲಕ, ನಮ್ಮ ಪ್ರತಿಭೆಯ ಮೂಲಕವೇ ನಮ್ಮ ಲೋಕವನ್ನು ಕಾಣುವ ಮೂಲಕ. ಅದು ಯಾವುದಾದರೂ ಆಗಿರಬಹುದು. ಬರೆವಣಿಗೆ, ಹಾಡು, ರಂಗೋಲಿ, ಕ್ರಿಕೆಟ್, ನಾವು ಮಾಡುವ ಕೆಲಸದಲ್ಲಿ ತೋರುವ ಶ್ರದ್ಧೆ, ಒಂದು ಒಳ್ಳೆಯ ನಿದ್ದೆ, ನಾನು ಇನ್ನೊಬ್ಬರಿಗೋಸ್ಕರ ಏನನ್ನೂ ಮಾಡುತ್ತಿಲ್ಲ,ನಾನು ಮಾಡುತ್ತಿರುವುದು ನನಗೆ ಸಂತೋಷ ಕೊಡುತ್ತಿದೆ, ಇನ್ನೊಬ್ಬರಿಗೂ ಅದು ಸಂತೋಷ ಕೊಟ್ಟರೆ ಅದು ಬೋನಸ್ ಎಂದು ತಿಳಿದುಕೊಳ್ಳುವ ಮೂಲಕ.
ನಂದಿನಿ ಎಂಬ ಇಪ್ಪತ್ತಾರರ ಹುಡುಗಿ ತನ್ನ ಜಗತ್ತನ್ನು ವಿಸ್ತಾರಗೊಳಿಸಿಕೊಂಡ ಕತೆ ಹೇಳುತ್ತೇನೆ. ಆಕೆಗೆ ೨೩ನೇ ವಯಸ್ಸಿಗೆ ಮದುವೆಯಾಯಿತು. ಮದುವೆಯ ಬಗ್ಗೆ ಅವಳಲ್ಲಿ ಅಪ್ರಬುದ್ಧ ಕನಸುಗಳಿದ್ದವು. ಅವನ ಜೊತೆಗಿನ ಬದುಕು ಹೀಗಿರುತ್ತೆ ಎಂದು ಅವಳು ತನ್ನ ಕಲ್ಪನೆಯಲ್ಲೇ ಒಂದು ಕುಟುಂಬವನ್ನು ಕಟ್ಟಿಕೊಂಡಿದ್ದಳು. ಮದುವೆಯ ನಂತರ ಅದು ಹಾಗಿಲ್ಲ ಅನ್ನುವುದು ಗೊತ್ತಾಗಿ ಆಕೆಗೆ ಭ್ರಮನಿರಸನವಾಯಿತು.
ಆ ಸಂಬಂಧವನ್ನು ಬಿಟ್ಟು ಬರಬೇಕು ಎಂದು ಆಕೆ ಅಂದುಕೊಳ್ಳುತ್ತಿರುವಾಗಲೇ, ಅವಳಿಗೊಂದು ವಿಚಿತ್ರ ಸತ್ಯ ಗೊತ್ತಾಯಿತು. ಯಾವ ಸಂಬಂಧ ಕೂಡ ತನಗೆ ಬೇಕಾದ್ದನ್ನು ಒದಗಿಸಲಾರದು. ಇನ್ನೊಬ್ಬರಿಂದ ಅದನ್ನು ನಿರೀಕ್ಷಿಸುವುದೇ ತಪ್ಪು. ಅದು ತಾನೇ ಕಟ್ಟಿಕೊಳ್ಳಬೇಕಾದ ಲೋಕ. ತನ್ನ ಕೋಣೆಯನ್ನು ತಾನೇ ಸಿಂಗರಿಸಿಕೊಳ್ಳಬೇಕು, ತನ್ನ ಮನೆಗೆ ತಾನೇ ತೋರಣ ಕಟ್ಟಿಕೊಳ್ಳಬೇಕು ಎಂದು ಅರ್ಥಮಾಡಿಕೊಂಡಳು.
ಆವತ್ತಿನಿಂದ ಅವಳ ಧೋರಣೆ ಬದಲಾಯಿತು. ಎಂದೂ ಇಲ್ಲದ ಎಲ್ಲೂ ಇಲ್ಲದ ಉಲ್ಲಾಸ ತನ್ನನ್ನು ತುಂಬಿಕೊಂಡಂತೆ ಅವಳು ಹುಮ್ಮಸ್ಸಿನಿಂದ ಎಲ್ಲದರಲ್ಲೂ ತೊಡಗಿಸಿಕೊಂಡಳು. ಗೆಳತಿಯರ ಜೊತೆ ಟ್ರೆಕಿಂಗ್ ಹೊರಟಳು. ತಾನು ನೋಡಬೇಕೆಂದುಕೊಂಡ ಜಾಗಗಳಿಗೆ ಪ್ರವಾಸ ಹೋದಳು. ಒಂಟಿಯಾಗಿ ಕೂತು ಸಿಗರೇಟು ಸೇದಿದಳು. ಗೆಳೆಯನ ಮದುವೆಯಲ್ಲಿ ಉತ್ಸಾಹದಿಂದ ಓಡಾಡಿದಳು. ಮನೆಯಲ್ಲೊಂದು ಪುಟ್ಟ ಲೈಬ್ರರಿ ಮಾಡಿಕೊಂಡಳು. ತಾನು ಕೇಳಿ
ಸುಖಿಸಬಲ್ಲ ಹಾಡುಗಳನ್ನು ಕೇಳುತ್ತಾ, ಒಳ್ಳೆಯ ಕಾಫಿ ಮಾಡುತ್ತಾ, ರುಚಿರುಚಿಯಾದ ತಿಂಡಿ ಮಾಡುತ್ತಾ, ಮನೆಯನ್ನು ಒಪ್ಪವಾಗಿಡುತ್ತಾ ಯಾವ ನೋವೂ ತನಗಿಲ್ಲ ಎಂಬಂತೆ ಬದುಕತೊಡಗಿದಳು. ಆಫೀಸು, ಮನೆ, ಗೆಳೆಯರ ಬಳಗ, ಅವಳಿದ್ದ ಕೇರಿ ಎಲ್ಲವೂ ಅವಳ ದಿವ್ಯ ತೇಜಸ್ಸಿನಿಂದ ನಳನಳಿಸತೊಡಗಿತು. ನೋಡನೋಡುತ್ತಿದ್ದಂತೆ ನಂದಿನಿಯ ಜಗತ್ತೇ ಬದಲಾಯಿತು. ಅವನ ನಿರುತ್ಸಾಹ, ಉದಾಸೀನ, ಉಡಾಫೆ, ಅಹಂಕಾರ ಎಲ್ಲವನ್ನೂ ಅವಳು ಮೀರಿದವಳಂತೆ ಕಾಣಿಸತೊಡಗಿದಳು. ತನ್ನ ಹಾಡು, ಚಿತ್ತಾರದ ಕಾಫಿ ಕಪ್ಪು, ನಿನ್ನೆಯಷ್ಟೇ ಮಾರುಕಟ್ಟೆಗೆ ಬಂದ ಕಾದಂಬರಿ, ರಣಬೀರ್ ಕಪೂರ್‌ನ ಸಿನಿಮಾ, ಪಕ್ಕದ ಮನೆ ಪುಟಾಣಿಗೆ ಕೊಡಿಸಿದ ಶೂ, ಲಾಲ್‌ಬಾಗ್‌ನಿಂದ ತಂದ ಗುಲಾಬಿಗಿಡ- ಇವುಗಳಲ್ಲೇ ಸಂತೋಷ ಕಾಣತೊಡಗಿದಳು. ತನ್ನ ಧೋರಣೆ, ನಿಲುವು, ಒತ್ತಾಯ, ಅಸಹನೆ ಮತ್ತು ಹೊಟ್ಟೆಕಿಚ್ಚು ಅವಳ ಸಂತೋಷವನ್ನು ಕಿತ್ತುಕೊಳ್ಳಲಾರವು ಎಂಬುದು ಅವನಿಗೂ ಗೊತ್ತಾಗಿಹೋಯಿತು.
ಅದು ಅವನನ್ನೋ ಅವಳನ್ನೋ ವಿರೋಧಿಸುವ ಪ್ರತಿಭಟಿಸುವ ಧೋರಣೆ ಆಗಬೇಕಾಗಿಲ್ಲ. ತನ್ನನ್ನು ತಾವು ಕಾಪಿಟ್ಟುಕೊಳ್ಳುವ, ಪೊರೆದುಕೊಳ್ಳುವ, ಸ್ಥಿಮಿತವನ್ನು ಕಾಪಾಡಿಕೊಳ್ಳುವ ನಿಲುವಷ್ಟೇ ಆದಾಗಷ್ಟೇ ಆ ಸಂತೋಷ ಉಳಿಯುತ್ತದೆ. ಇನ್ನೊಬ್ಬರಿಗಾಗಿ ತಾನು ಏನನ್ನೂ ಮಾಡುತ್ತಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಾಗ ಎಲ್ಲರೂ ಬದಲಾಗುತ್ತಾರೆ. ಎಲ್ಲವೂ ಬದಲಾಗುತ್ತದೆ.
ಕಡಲಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿದೋಣಿಗೆ?
ಬೇಡ, ನೀರಿನ ಆಳ ಯಾಕಾದರೂ ತಿಳಿಯಬೇಕು? ಕಡಲ ಮೇಲೆ ಸಾವಿರಾರು ಮೈಲಿ ಸಾಗುವ ಖುಷಿಯನ್ನಷ್ಟೇ ಹಾಯಿದೋಣಿ ಅನುಭವಿಸಲಿ. ಬೀಸುತ್ತಿರುವ ಗಾಳಿ, ಆಹ್ಲಾದಕರ ಪರಿಸರ, ದೂರ ಪ್ರಯಾಣದ ಪುಲಕ- ಅವಷ್ಟೇ ಉಳಿಯಲಿ. ಉಳಿದುದೆಲ್ಲ ವ್ಯರ್ಥ, ನಿರರ್ಥಕ ಮತ್ತು ಕ್ಷಣಿಕ.

‍ಲೇಖಕರು avadhi

December 15, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

14 ಪ್ರತಿಕ್ರಿಯೆಗಳು

 1. Radhika

  This article seems like addendum to ‘Yaamini’. How Smitha in ‘Yaamini’ could have lived her life better! All from the man’s view point.

  ಪ್ರತಿಕ್ರಿಯೆ
 2. ಹೆಚ್.ವಿ.ವೇಣುಗೋಪಾಲ್

  ಚೆನ್ನಾಗಿದೆ. ‘ನಾನೇ ಹೊಣೆಗಾರ’ಎಂಬುದನ್ನು ಬಿಡಿಸಿ ತೋರಿಸಿದ್ದೀರಿ
  ಇಂದಿನ ಬೆಳಿಗ್ಗೆಯ ನನ್ನ ಒಳ್ಳೆಯ ಓದು ಇದು
  —————ಡಾ.ಹೆಚ್.ವಿ.ವೇಣುಗೋಪಾಲ್

  ಪ್ರತಿಕ್ರಿಯೆ
 3. Pradyumna

  “Life is a continuous learning process…”
  Nice to See you Both….NNNJJJJJOYYY….

  ಪ್ರತಿಕ್ರಿಯೆ
 4. gaurish akki

  its really good……..jogi jogi jogi……….eneedu maye?…….yavudee avahane…..?

  ಪ್ರತಿಕ್ರಿಯೆ
 5. Hema

  Nimma article ….nanna manassige mudha neeDuvudashte alla, badukina ondu hosa satya’da arivu moodisidhe.
  Thanks antha ashte hElaballe,….

  ಪ್ರತಿಕ್ರಿಯೆ
 6. ಅನಿಕೇತನ ಸುನಿಲ್

  ಜೋಗಿ ಸರ್,
  “ತನ್ನನ್ನು ತಾವು ಕಾಪಿಟ್ಟುಕೊಳ್ಳುವ, ಪೊರೆದುಕೊಳ್ಳುವ, ಸ್ಥಿಮಿತವನ್ನು ಕಾಪಾಡಿಕೊಳ್ಳುವ ನಿಲುವಷ್ಟೇ ಆದಾಗಷ್ಟೇ ಆ ಸಂತೋಷ ಉಳಿಯುತ್ತದೆ. ಇನ್ನೊಬ್ಬರಿಗಾಗಿ ತಾನು ಏನನ್ನೂ ಮಾಡುತ್ತಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಾಗ ಎಲ್ಲರೂ ಬದಲಾಗುತ್ತಾರೆ. ಎಲ್ಲವೂ ಬದಲಾಗುತ್ತದೆ”.
  ಸತ್ಯವಾದ ಮಾತುಗಳು ಅನ್ನಿಸಿದ್ವು ……ಆದ್ರೆ ಇದು ಮದುವೆ ಆಗಿರೋರಿಗ ಅಥವಾ ಆಗದೆ ಇರೋರಿಗೂ ಅನ್ವಯಿಸುತ್ತದ? ಎಲ್ಲರಿಗೂ ತಮ್ಮಷ್ಟಕ್ಕೆ ಸಂತೋಷವಾಗಿರೋದು ಗೊತ್ತಾದ ಮೇಲೆ ಮದುವೆ ಮೂಲಕ ಸಂತೋಷ ಹುಡುಕೋದ್ರಲ್ಲಿ ಅರ್ಥ ಇದೇನಾ? ಅಷ್ಟಕ್ಕೋ ಮದುವೆ ಯಾಕೆ ಆಗ್ತಾರೆ ಅಂತ ಹೇಳೋಕಾಗುತ್ತಾ ? ದಯವಿಟ್ಟು ಹೇಳಿ….

  ಪ್ರತಿಕ್ರಿಯೆ
 7. ಚಿನ್ನಸ್ವಾಮಿವಡ್ಡಗೆರೆ

  ತುಂಬಾ ಚೆನ್ನಾಗಿದೆ.ನಮ್ಮ ಖುಶಿ,ಆನಂದ ನಮ್ಮೊಳಗೆ ಇದೆ.ಬೇರೆಯವರಿಂದ ಅದನ್ನು ನಿರೀಕ್ಷಿಸಿ ಸೋತು ಬಸವಳಿದು ದುಃಖಿತರಾಗುವುದು ಸರಿಯಲ್ಲ.ಸಣ್ಣ, ಸಣ್ಣ ವಿಷಯಗಳಲ್ಲಿ ಆಸಕ್ತರಾದಂತೆ ಜೀವನ ಪ್ರೀತಿ ಉಕ್ಕಿ ಹರಿಯುತ್ತದೆ.ನಮ್ಮಗೆ ನಾವೇ ಎನ್ನುವುದು ಸತ್ಯ.ಉಳಿದದ್ದೆಲ್ಲ ಮಿಥ್ಯ.
  ಚಿನ್ನಸ್ವಾಮಿವಡ್ಡಗೆರೆ

  ಪ್ರತಿಕ್ರಿಯೆ
 8. sharadabooks

  ಬದುಕಿನ ಸ೦ಕೀರ್ಣತೆ ಯನ್ನು ಬಿಡಿಸುವ,
  ಸ೦ಭ್ರಮದ ಪ್ರಯತ್ನ.
  “ತಾನು ಸಾಯಬೇಕು,ಸ್ವರ್ಗ ಪಡೆಯಬೇಕು”
  ಇದು ಎಲ್ಲ ಕಾಲಕ್ಕೂ ಸತ್ಯ.
  ಮಾನವ ಸಹಜವಾಗಿ ಓಬ್ಬ೦ಟಿ.
  ಅರ್ಥವಾಗದ ಇದು.ಅರ್ಥವಾದರೆ ಗೆದ್ದ೦ತೆ.

  ಪ್ರತಿಕ್ರಿಯೆ
 9. JM

  SIR,,,,, hats off to you …… u opened my eyes….to some extent i realised that our expectations are more… not realistic… i read this article 25 times and settled my mind..nanna manassu badalaagide…. thanks to u….wonderful article….. article realises many many things and thought provoking …..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: