ಜೋಗಿ ಬರೆದಿದ್ದಾರೆ: ಭುವನೇಶ್ವರಿಯ ಸನ್ನಿಧಿಯಲ್ಲಿ ಒಂದು ಮೋಹಕ ರಾತ್ರಿ

img_0491 (1)ಆ ರಾತ್ರಿ ಭುವನಗಿರಿಯ ತುತ್ತತುದಿಯ ಕಲ್ಲಿನ ಮೇಲೆ ಕುಳಿತಿದ್ದೆ. ನಡುರಾತ್ರಿ ಕಳೆದಿತ್ತು. ಸ್ವಲ್ಪ ಹೊತ್ತಿಗೆ ಮುಂಚೆ ಬೆಟ್ಟವನ್ನೇ ಕಿತ್ತೆಸೆಯುವಂತೆ ಬೀಸಿದ್ದ ಗಾಳಿ ನಿಂತು ಹೋಗಿತ್ತು. ಕತ್ತಲು ಎಂಬ ಕದಡಿದ ಕಪ್ಪು ನೀರಲ್ಲಿ ಮುಳುಗಿದಂತೆ ಸುತ್ತಲಿನ ಮರಗಿಡಬಳ್ಳಿಗಳೂ ಬೆಟ್ಟ ಸಾಲುಗಳೂ ಕಾಣಿಸುತ್ತಿದ್ದವು.
ನಾವಿದ್ದದ್ದು ಸಿದ್ಧಾಪುರ ಎಂಬ ಪುಟ್ಟದೂ ಅಲ್ಲದ ದೊಡ್ಡದೂ ಅಲ್ಲದ ಊರಲ್ಲಿ. ಅದು ತಾಲೂಕು ಕೇಂದ್ರವಾಗಿದ್ದರೂ ಕಳೆದ ಐವತ್ತು ವರ್ಷಗಳಲ್ಲಿ ಯಾವ ಬದಲಾವಣೆಯನ್ನೂ ಕಾಣದ ಹಾಗೆ ಮೇಲ್ನೋಟಕ್ಕೆ ಕಾಣಿಸುತ್ತಿತ್ತು. ಮುಂಜಾನೆ ಐದು ಗಂಟೆಗೆಲ್ಲ ಸರ್ಕಲ್ಲಿನಲ್ಲಿ ರಾಶಿ ರಾಶಿ ಸೇವಂತಿಗೆ ಹೂವುಗಳನ್ನು ಗುಡ್ಡೆ ಹಾಕಿಕೊಂಡು ಕೂತ ರೈತರು ಅವುಗಳನ್ನು ಒಂದಕ್ಕೆರಡು ಬೆಲೆಗೆ ಮಾರಲು ವಿಫಲ ಯತ್ನ ನಡೆಸುತ್ತಿದ್ದರು. ಇಡೀ ರಾತ್ರಿ ತೆರೆದಿರುವ ಕಾಮತರ ಟೀ ಅಂಗಡಿಯ ಮುಂದೆ ಅಹೋ ರಾತ್ರಿ ವಾಹನಗಳು ನಿಂತಿರುತ್ತಿದ್ದವು. ನನಗ್ಯಾಕೋ ಸಿದ್ಧಾಪುರ ಸದಾ ನಿದ್ದೆಗಣ್ಣಿನಲ್ಲಿರುವ ಮಂಕು ಹುಡುಗನ ಹಾಗೆ ಕಾಣಿಸುತ್ತಿತ್ತು. ಅಲ್ಲಿನ ವ್ಯಾಪಾರಿಗಳಿಗೆ ಕೂಡ ಗ್ರಾಹಕರನ್ನು ಸೆಳೆದು ವ್ಯಾಪಾರ ಮಾಡುವ ಉತ್ಸಾಹ ಇದ್ದಂತೆ ಕಾಣಲಿಲ್ಲ. ಅಂಥ ನಿರಾಳವಾದ ಬದುಕೂ ಎಷ್ಟೋ ಸಾರಿ ಆಪ್ತ ಎನ್ನಿಸುತ್ತದೆ.
ಆದರೆ ನನ್ನನ್ನು ನಿಜಕ್ಕೂ ಸೆಳೆದಿಟ್ಟದ್ದು ಸಿದ್ಧಾಪುರದಿಂದ ನಾಲ್ಕು ಮೈಲಿ ದೂರದ ಭುವನಗಿರಿ. ರಸ್ತೆ ಬದಿಯಲ್ಲೇ ಒಂದೂಕಾಲೆಕರೆ ಚಾಚಿಕೊಂಡಿರುವ ಪುಷ್ಕರಿಣಿ. ಅದು ಹತ್ತೋ ಇಪ್ಪತ್ತೋ ಅಡಿ ಆಳವಿದೆಯಂತೆ. ಎಂದೂ ಬತ್ತದ ಕಲ್ಯಾಣಿ ಎಂದು ಅದರ ಪಕ್ಕ ನಿಂತು ಸೈಕಲ್ ಹೊಡೆಯುತ್ತಿದ್ದ ಹುಡುಗರು ಹೆಮ್ಮೆಯಿಂದ ಹೇಳಿಕೊಂಡರು. ಇನ್ನೂ ಎರಡೋ ಮೂರೋ ವರುಷಕ್ಕೆ ಊರು ಬಿಟ್ಟು ಬೆಂಗಳೂರಿಗೋ ದೆಹಲಿಗೋ ಹೋಗುವ ಹುಮ್ಮಸ್ಸಿನ ಹುಡುಗರು. ಅವರ ತಾರುಣ್ಯ ಚಿಮ್ಮುತ್ತಿದ್ದ ದೇಹ ಎಲ್ಲವನ್ನೂ ಮೆಚ್ಚುತ್ತಾ ಅವರು ಗುಡ್ಡದ ಕಡಿದಾದ ರಸ್ತೆಯಲ್ಲಿ ಸೈಕಲ್ ತುಳಿಯುತ್ತಾ ಹೋಗುವುದನ್ನು ನೋಡುತ್ತಿದ್ದೆ. ನಮ್ಮ ಬಾಲ್ಯದ ದಿನಗಳು ಕಣ್ಮುಂದೆ ಬಂದವು.
Time_Unfolding_55x48_oil_beeswax_panel_400
ನಾವು ನೋಡುನೋಡುತ್ತಿದ್ದ ಹಾಗೆ ರಾತ್ರಿಯಾಯಿತು. ದೇವಾಲಯ ಝಗ್ಗನೆ ಬೆಳಗಿತು. ಕಡಿದಾದ, ಹಳೆಯದಾದ,ಕಲ್ಲಿನಿಂದ ಮಾಡಿದ ಮುನ್ನೂರು ಮೆಟ್ಟಿಲು ಹತ್ತಿದರೆ ವಿಶಾಲವಾದ ಗುಡ್ಡದ ಮೇಲೆ ಭುವನೇಶ್ವರಿಯ ದೇವಸ್ಥಾನವಿದೆ. ಆ ಗುಡ್ಡದ ತುದಿಯಿಂದ ಸುತ್ತಲಿನ ಹತ್ತೂರು ಕಾಣಿಸುತ್ತದೆ. ಮುತ್ತಿಗೆ, ಬೇಡ್ಕಣಿ, ಬಿಳಲಿಗೆ ಅಂತೆಲ್ಲ ನನ್ನೊಂದಿಗಿದ್ದ ಉತ್ಸಾಹಿ ಹುಡುಗರು ಊರಿನ ಪರಿಚಯ ಮಾಡಿಕೊಟ್ಟರು.
ಸ್ವಲ್ಪ ಹೊತ್ತಿಗೆಲ್ಲ ನನ್ನ ಪಕ್ಕ ಅರುವತ್ತು ದಾಟಿದ ತೆಳ್ಳಗಿನ ದೇಹದ ಹಿರಿಯರೊಬ್ಬರು ಬಂದು ಕುಳಿತರು. ಮಾತು ಶುರು ಮಾಡಿದರು. ಇಬ್ಬರು ಗಂಡು ಮಕ್ಕಳು. ಒಬ್ಬಳು ಹೆಣ್ಮಗಳ ತಂದೆ. ಒಬ್ಬ ಮಗ ಬೇರೆ ಮನೆ ಮಾಡಿಕೊಂಡಿದ್ದಾನೆ. ಮತ್ತೊಬ್ಬ ಮನೆಯಲ್ಲಿದ್ದಾನೆ. ಮಗಳು ಮದುವೆಯಾಗಿ ಗಂಡನನ್ನು ಕಳಕೊಂಡು ಮನೆಗೆ ಮರಳಿ ಬಂದಿದ್ದಾಳೆ. ಅವಳಿಗೆ ಮಕ್ಕಳಿಲ್ಲ. ಇಷ್ಟೂ ಕತೆಯನ್ನು ಒಂದೇ ಏಟಿಗೆ ಹೇಳಿ ಮುಗಿಸಿ ಮಾತು ಮುಗಿಯಿತೆಂಬಂತೆ ಸುಮ್ಮನೆ ಕೂತರು. ನಾನು ಅವರ ಮುಖವನ್ನೇ ನೋಡಿದೆ. ಅಲ್ಲಿ ಪಶ್ಚಾತ್ತಾಪವಾಗಲೀ, ನಿರುತ್ಸಾಹವಾಗಲೀ, ನೋವಾಗಲೀ, ಆಲಸ್ಯವಾಗಲೀ ಇರಲಿಲ್ಲ. ಬದುಕು ಇರುವುದೇ ಹೀಗೆ, ಬದುಕುತ್ತಾ ಹೋಗುವುದೇ ಸರಿ. ಅದಕ್ಕಿಂತ ದೊಡ್ಡ ತಪಸ್ಸಿಲ್ಲ ಎಂಬ ನಿರ್ಧಾರ ಕಾಣಿಸುತ್ತಿತ್ತು ಎಂದು ನಾನು ಊಹಿಸಿಕೊಂಡೆ. ಅದು ನನ್ನ ಕಲ್ಪನೆಯೂ ಇರಬಹುದೇನೋ? ನಮ್ಮ ಎದುರಿಗಿರುವವರನ್ನು ಅಳೆಯುವ ಶಕ್ತಿ, ನಮ್ಮ ವಯಸ್ಸು, ಅನುಭವ, ಮನಸ್ಥಿತಿ ಎಲ್ಲವನ್ನೂ ಅವಲಂಬಿಸಿರುತ್ತದೆ. ಹಾಗೆ ಅಳೆಯುವುದು ಕೂಡ ಒಂದು ರೀತಿಯಲ್ಲಿ ಅನವಶ್ಯಕ ಅಹಂಕಾರ. ಅದು ಎಲ್ಲೋ ನಮ್ಮನ್ನು ಅವರೊಂದಿಗೆ ಹೋಲಿಸಿಕೊಂಡು ನೆಮ್ಮದಿ ಅನುಭವಿಸುವ ಮನಸ್ಸಿನ ಹುನ್ನಾರವೋ ಎಂದನ್ನಿಸುತ್ತದೆ.
ಆ ರಾತ್ರಿ ನನ್ನನ್ನು ಸೆಳೆದದ್ದು ದೇವಾಲಯದ ದೀಪಗಳಲ್ಲ, ರತ್ನಮಾಲಾ ಪ್ರಕಾಶ್ ಹಾಡಿದ ದೀಪವೂ ನಿನ್ನದೆ, ಗಾಳಿಯೂ ನಿನ್ನದೆ’ ಹಾಡೂ ಅಲ್ಲ. ಆ ಹಾಡು ಕೇಳಿಕೇಳಿ ತನ್ನ ಅರ್ಥ ಕಳಕೊಂಡಿದೆ. ಅಲ್ಲದೇ ಆ ಹಾಡಲ್ಲಿ ನಾನು ತುಂಬಾ ಮೆಚ್ಚುವ ಸಾಲಾದ ಬೆಟ್ಟವೂ ನಿನ್ನದೆ ಬಯಲೂ ನಿನ್ನದೆ, ಹಬ್ಬಿ ನಗಲಿ ಪ್ರೀತಿ’ಯನ್ನು  ರತ್ನಮಾಲಾ ಹಾಡಲಿಲ್ಲ. ಹಾಡುಗಳು ಕೇಳುತ್ತಾ ಕೇಳುತ್ತಾ ಸವಕಲಾಗುತ್ತಾ ಹೋಗುತ್ತವೆ. ಹೊಸ ಪ್ರೀತಿ, ಹೊಸ ಸಂಬಂಧ, ಹೊಸ ಸವಾಲು, ಹೊಸ ಪರಿಸರ ಆ ಹಾಡನ್ನು ಮತ್ತೆ ಬದುಕಿಸುತ್ತದೆ ಎಂದು ಎಷ್ಟೋ ಸಾರಿ ಅನ್ನಿಸುತ್ತದೆ. ಒಂದು ಅಪರಾತ್ರಿಯಲ್ಲಿ ನಿದ್ದೆಗಣ್ಣಿನಲ್ಲಿ ಏನೋ ಬರೆಯುತ್ತಾ ಕೂತಿದ್ದಾಗ ಕೇಳಿದ ಮರುಳು ಮಾಡಕ ಹೋಗಿ ಮರಳು ಸಿದ್ಧನ ನಾರಿ, ಮರುಳಾದಳೋ ಜಂಗಮಯ್ಯಗ…’ಎಂಬ ಬೇಂದ್ರೆ ಸಾಲುಗಳು ಕನಸಿನಂತೆ ಮೋಡಿ ಮಾಡಿದ್ದವು.
ನನ್ನನ್ನು ಆಕರ್ಷಿಸಿದ್ದು ಗುಡ್ಡದ ತುದಿಯ ಬದಿಯ ಕಲ್ಲಲ್ಲಿ ಕೂತಾಗ ಕಾಣಿಸಿದ ಪ್ರಕೃತಿ. ಅದಾದ ಸ್ವಲ್ಪ ಹೊತ್ತಿಗೇ ಬೀಸಿದ ಅಚಾನಕ ಗಾಳಿ. ಅಂಥದ್ದೊಂದು ಗಾಳಿ ಆ ಅಪರಾತ್ರಿ ಸುಳಿದೀತು ಎಂಬ ಸುಳಿವೇ ಇರಲಿಲ್ಲ. ಅದು ಬಯಲಿಂದಾಚೆ ನುಗ್ಗಿ ಬರುವ ಹುಲಿಯ ಹಾಗೆ ಬರಲಿಲ್ಲ. ಕಾಡು ಮೇಡುಗಳನ್ನು ದಾಟಿ ಬರುವ ಸುಗಂಧದ ಹಾಗೂ ಸುಳಿಯಲಿಲ್ಲ. ನೋಡ ನೋಡುತ್ತಿರುವ ಹಾಗೆ ಸಮೀಪಿಸುವ ಕಪ್ಪು ಮೋಡದ ಹಾಗೆ ದಟ್ಟೈಸಲಿಲ್ಲ. ಇದ್ದಕ್ಕಿದ್ದ ಹಾಗೆ, ನಮಗೆ ಅದು ಎಲ್ಲಿಂದ ಬಂದಿದೆ ಅಂತ ಗೊತ್ತಾಗದ ಹಾಗೆ, ದೇವಾಲಯದ ಮುಂದೆ ಸಹಸ್ರ ಬಿಳಲುಗಳನ್ನು ಬಿಟ್ಟುಕೊಂಡು ನಿಂತಿದ್ದ ಮರದ ಬುಡದಿಂದ ಟಿಸಿಲೊಡೆಯಿತು. ಅಲ್ಲಿಂದಲೇ ಅದು ವ್ಯಾಪಿಸಿತೇನೋ ಎಂಬಂತೆ ನೆಲವನ್ನು ಗುಡಿಸಿಕೊಂಡು ಹೋಗಿ,ಮರದ ಎಲೆಗಳನ್ನು ಆಕಾಶಕ್ಕೆ ಚಿಮ್ಮಿಸಿ, ಸುಂಟರಗಾಳಿಯಾಗಿ ಸುಳಿದು ಅರ್ಧ ಗಂಟೆಯ ಕಾಲ ಹೂಂಕಾರದೊಂದಿಗೆ ನಮ್ಮನ್ನು ಕಂಗೆಡಿಸಿತು. ಅರ್ಧ ಗಂಟೆಯ ನಂತರ ಏನೂ ಆಗಿಲ್ಲವೇನೋ ಎಂಬಂತೆ ನಿಂತೇ ಹೋಯಿತು. ಅಲ್ಲೊಂದು ಬಿರುಗಾಳಿ ಎದ್ದು ಹೋದ ಸುಳಿವು ಕೂಡ ಉಳಿದಿರಲಿಲ್ಲ.
ಅಂಥ ನಿಗೂಢವೊಂದನ್ನು ನಾನು ಕಲ್ಲಡ್ಕ ಎಂಬ ಊರಿನ ಸಮೀಪದಲ್ಲಿರುವ ಗೆಳೆಯರೊಬ್ಬರ ಮನೆಯ ತೋಟದಲ್ಲಿ ನೋಡಿದ್ದೆ. ಅಲ್ಲೊಂದು ದೊಡ್ಡ ಹಲಸಿನ ಮರ. ಆ ಹಲಸಿನ ಮರದ ತುಂಬ ನಾನು ಹೋದ ಕಾಲಕ್ಕೆ, ಹಲಸಿನ ಹಣ್ಣುಗಳು. ಆದರೆ ಅವೆಲ್ಲ ಹಣ್ಣಾಗಿ ಬಿದ್ದು ಹೋಗುವ ಸ್ಥಿತಿಯಲ್ಲಿದ್ದವು. ಅವನ್ನು ಯಾಕೆ ಹಾಗೇ ಬಿಟ್ಟಿದ್ದೀರಿ. ಯಾಕೆ ಯಾರೂ ಅ ಮರದ ಹಣ್ಣು ಕೀಳುವುದಿಲ್ಲ ಎಂದು ಕೇಳಿದರೆ ಸಿಕ್ಕ ಉತ್ತರ ಮೈ ನವಿರೇಳಿಸುವಂತಿತ್ತು. ಆ ಹಲಸಿನ ಮರದ ಬುಡದಲ್ಲಿ ಒಂದು ಹುತ್ತವಿದೆ. ಆ ಹುತ್ತದಲ್ಲಿ ಎಷ್ಟೋ ಸಂಖ್ಯೆಯ ಸರ್ಪಗಳಿವೆ. ಅವು ಆ ಮರದ ತುಂಬಾ ಹತ್ತಿ ಓಡಾಡಿಕೊಂಡಿರುತ್ತವೆ.  ಮರದ ಹತ್ತಿರ ಯಾರನ್ನೂ ಅದು ಸುಳಿಯುವುದಕ್ಕೇ ಬಿಡುವುದಿಲ್ಲ. ಮರದ ಹತ್ತಿರ ಬಿಡಿ, ಮರದಿಂದ ಐವತ್ತು ಮೀಟರ್ ದೂರ ನಿಂತರೂ ಸಾಕು ಹಾವು ಬುಸುಗುಡುವ ಸದ್ದು ಕೇಳಿಸುತ್ತದೆ ಎಂದಿದ್ದರು ಆ ತೋಟದ ಒಡೆಯರು. ಆ ಮರವನ್ನು ನೋಡುತ್ತಿದ್ದರೇ ಭಯವಾಗುವಂತಿತ್ತು. ಅದಕ್ಕೆ ನೂರಾರು ಬಿಳಲುಗಳು ಸುತ್ತಿಕೊಂಡು ಯಾವುದು ಹಾವು, ಯಾವುದು ಬೇರು ಅನ್ನುವುದೇ ಗೊತ್ತಾಗುತ್ತಿರಲಿಲ್ಲ. ಅದು ಸಾಲದೆಂಬಂತೆ ಅದರ ಬುಡದಲ್ಲಿ ಹುತ್ತ ಎದ್ದು ಪೊದೆಗಳು ಬೆಳೆದು, ಇಡೀ ಪರಿಸರಕ್ಕೆ ಒಂದು ವಿಚಿತ್ರವಾದ ರೂಪ ಕೊಟ್ಟಿದ್ದವು.
ಅಸ್ಪಷ್ಟವಾಗಿರುವುದು ಆಕರ್ಷಿಸುತ್ತದೆ ಎಂದು ನನಗೆ ಅನ್ನಿಸಿದ್ದು ಆವತ್ತೇ. ಅದೇ ಅಸ್ಪಷ್ಟತೆಯ ಕುರುಹು ಭುವನಗಿರಿಯಲ್ಲೂ ಕಾಣಿಸಿತು. ಬೆಟ್ಟದ ತುದಿಗೆ ಏರಿ ನೋಡಿದಾಗ ಕಾಣಿಸಿದ ಕಾಡು, ಎಲ್ಲೋ ಮರೆಯಾಗುವ ಹಾದಿ, ಅಲ್ಲಿನ ಕಲ್ಲು ಬಂಡೆಗಳು,  ರಾತ್ರಿ ಅರೆಬೆಳಕಲ್ಲಿ ಮಸುಕಾಗಿ ಕಾಣುತ್ತಿದ್ದ ಹಾದಿ, ದೂರದಿಂದೆಲ್ಲೋ ಕಾಣಿಸುತ್ತಿದ್ದ ಬೆಳಕು- ಎಲ್ಲವನ್ನೂ ನೋಡುತ್ತಾ ನೋಡುತ್ತಾ ಇದೆಲ್ಲವನ್ನೂ ಸೂರ್ಯ ನಿಚ್ಚಳವಾಗಿಸುತ್ತಾನಲ್ಲ ಎಂದು ಬೇಸರವೂ ಆಯ್ತು. ಯಾವುದು ನಿಚ್ಚಳವಾಗಿರುತ್ತದೋ ಅಲ್ಲಿ ಯಾವ ಕುತೂಹಲವೂ ಉಳಿದಿರುವುದಿಲ್ಲ. ಯಾವುದು ಅರೆಬರೆಯಾಗಿ ಕಾಣುತ್ತದೋ ಅದರ ಬಗ್ಗೆ ಅಸಾಧ್ಯ ಆಕರ್ಷಣೆ.
ಸಾಹಿತ್ಯದಲ್ಲೂ ಅಷ್ಟೇ. ಕಾವ್ಯದಲ್ಲೂ ಅಷ್ಟೇ. ಪ್ರಕೃತಿಯಲ್ಲೂ ಅಷ್ಟೇ.  ಮೊನ್ನೆ ಯಾವುದೋ ವಿಜ್ಞಾನದ ಪುಸ್ತಕ ತಿರುವಿಹಾಕುತ್ತಿದ್ದಾಗ ದೂರದಲ್ಲಿರುವ ನಕ್ಷತ್ರದ ಬೆಳಕು ನಮ್ಮನ್ನು ತಲುಪುವುದಕ್ಕೆ ಎಷ್ಟೋ ಜ್ಯೋತಿರ್ವರ್ಷಗಳು ಬೇಕು ಎಂದು ಗೊತ್ತಾಯಿತು. ಅಂದರೆ ನಮ್ಮ ಆಯುರ್ಮಾನದಲ್ಲಿ ಆ ನಕ್ಷತ್ರವನ್ನು ಎಷ್ಟೇ ವೇಗದಲ್ಲಿ ಸಂಚರಿಸಿದರೂ ತಲುಪುವುದು ಸಾಧ್ಯವೇ ಇಲ್ಲ. ಎಷ್ಟೋ ನೂರೋ, ಸಾವಿರವೋ ವರ್ಷ ಹಿಂದೆ ಆ ನಕ್ಷತ್ರದಿಂದ ಹೊರಟ ಬೆಳಕು ಈಗ ನಮ್ಮನ್ನು ತಲುಪುತ್ತಿರುತ್ತದೆ. ಹೀಗಾಗಿ ಆ ಬೆಳಕು ನಮ್ಮನ್ನು ತಲುಪುವ ಹೊತ್ತಿಗೆ ಆ ನಕ್ಷತ್ರ ಅಲ್ಲಿ ಅಸ್ತಿತ್ವದಲ್ಲಿ ಇರುತ್ತದೋ ಇಲ್ಲವೋ ಅನ್ನುವುದೇ ಅನುಮಾನ ಎಂದು ತೇಜಸ್ವಿ ಬರೆದು ತಲೆ ಹಾಳು ಮಾಡಿದ್ದರು.
ಅಸ್ಪಷ್ಟವಾಗಿರುವುದು ಹೇಗೆ ಖುಷಿ ಕೊಡುತ್ತದೆ ಎನ್ನುವುದಕ್ಕೆ ಒಂದೆರಡು ಉದಾಹರಣೆಗಳನ್ನು ಯೋಚಿಸಿದೆ; ಅಡಿಗರು ಬರೆದ ಸಾಲುಗಳೇ ನೆನಪಾದವು: ಗುಪ್ತಗಾಮಿನಿಯೊಂದು ಹರಿಯುತಿದೆ ಮಾನವನ ಎದೆಯಿಂದ ಎದೆಗೆ ಸತತ ಎಂಬ ಸಾಮಾನ್ಯ ಸಾಲುಗಳ ನಂತರ ಅಡಿಗರು ಬರೆಯುತ್ತಾರೆ: ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ: ಭತ್ತ ಗೋಧುವೆ ಹಣ್ಣು ಬಿಟ್ಟ ವೃಂದಾವನ, ಗುಡಿಗೋಪುರಗಳ ಬಂಗಾರ ಶಿಖರ. ಇದು ಕಟ್ಟಿಕೊಡುವ ಚಿತ್ರ ಕಣ್ಣಿಗೆ ನಿಲುಕುವುದಿಲ್ಲ,ಒಳಗಣ್ಣಿಗಷ್ಟೇ ಕಾಣುತ್ತದೆ. ಹಾಗೇ, ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ, ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೆ ಹಾಯಿತೇ ಎನ್ನುವುದು ಪಂಚೇಂದ್ರಿಗಳಿಗೆ ನಿಲುಕುವುದಿಲ್ಲ, ಭಾವಕ್ಕಷ್ಟೇ ತಾಕುತ್ತದೆ. ಹೀಗೆ ಒಳಗಷ್ಟೇ ತಾಕುವ ಸಂಗತಿಗಳನ್ನು ನಾವು ಮರೆಯುತ್ತಿದ್ದೇವಾ?
ನಮ್ಮ ಒಳಜಗತ್ತು ನಿಧಾನವಾಗಿ ನಶಿಸುತ್ತಿದೆಯಾ? ಬರೆಯುವ ಹುಮ್ಮಸ್ಸಿನಲ್ಲಿ ನಾವು ಒಳಗಿನ ಲೋಕವನ್ನು ಸೂರೆ ಮಾಡುತ್ತಿದ್ದೇವಾ? ಕಲ್ಪನೆಯ, ಕನಸಿನ, ವ್ಯಾಮೋಹದ, ನಾವಷ್ಟೇ ಸುಖವಾಗಿರಬಲ್ಲ ಜಗತ್ತಿನಿಂದ ಆಚೆ ಬರುವುದಕ್ಕೆ ಹವಣಿಸುತ್ತಿದ್ದೇವಾ?
ಒಂದೂ ಆರ್ಥವಾಗದೇ ಆ ರಾತ್ರಿ ಸುಮ್ಮನೆ ಕೂತೆ. ಹಾಗೆ ಸುಮ್ಮನೆ ಕೂತಿದ್ದಕ್ಕೇ ಇದನ್ನೆಲ್ಲ ಬರೆಯಲು ಸಾಧ್ಯವಾಯಿತು ಎಂದು ಈಗ ಅನ್ನಿಸುತ್ತಿದೆ

‍ಲೇಖಕರು avadhi

November 2, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

9 ಪ್ರತಿಕ್ರಿಯೆಗಳು

 1. ಸುಪ್ತದೀಪ್ತಿ

  ಜೋಗಿ,
  ನಾವು ಎಷ್ಟೊಂದು ಸಲ ಬೌತಿಕವಾಗ ಸುಮ್ಮನೇ ಕೂತಿದ್ದಾಗಲೇ ಮಾನಸಿಕವಾಗಿ ಕ್ರಿಯಾಶೀಲರಾಗುತ್ತೇವಲ್ಲ. ಆಗಿನ ಕರ್ತೃತ್ವ ಶಕ್ತಿ ಬೇರೆ ಸಮಯಕ್ಕಿಂತ ಹೆಚ್ಚಿನದಾಗಿರುತ್ತಲ್ಲ. ಅಂಥ ಅಲೌಕಿಕ ಶಕ್ತಿಗಾಗಿ ಅಲೌಕಿಕ ಮೌನಗಳೂ ಅನಿವಾರ್ಯವೇ ಮತ್ತು ಅವುಗಳು ಈಗಿನ ಕಾಲಮಾನದಲ್ಲಿ ಅಗತ್ಯವೂ ಕೂಡಾ. ಬರಹ ಇಷ್ಟವಾಯ್ತು.

  ಪ್ರತಿಕ್ರಿಯೆ
 2. umesh desai

  ಜೋಗಿ ಅವರೆ ಲೇಖನ ಚೆನ್ನಾಗಿದೆ ಹೊರಗಿನ ಜಗತ್ತು ಈಗೀಗ ಕುತೂಹಲ ಹುಟ್ಟಿಸೋದಿಲ್ಲ ನಾವು ಓದಿದ ತಿಳಿದ ವಿಷಯಗಳ
  ಪ್ರಭಾವದ ಕೆಲಸ ಇದು ಇನ್ನು ನಮ್ಮ ಒಳಗು ನೀವನ್ನುವ ಹಾಗೆ ಯಾವುದೋ ಸೆಲೆ ತಟ್ಟುತ್ತದೆ ಎಲ್ಲಿಯೋ ಸುಪ್ತ ಇದ್ದ ಭಾವನೆಗಳಿಗೆ ಅದ್ರ ನವಿರು ಸ್ಪರ್ಶ ಆಗುತ್ತದೆ ನೀವು ಮಾಡಿದ ಹಾಗೆ ಆ ಕ್ಷಣವನ್ನು ಅನುಭವಿಸಬೇಕು ನಿಶ್ಚಲವಾಗಿ…
  ಆದರೆ ಅದು ಸಾಧ್ಯಆಗುತ್ತಿಲ್ಲ ಇದು ನನ್ನಂತಹದವರ ಕೊರಗು….!

  ಪ್ರತಿಕ್ರಿಯೆ
 3. ಬಿ.ಸುರೇಶ

  ’ನಮ್ಮ ಒಳಜಗತ್ತು ನಿಧಾನವಾಗಿ ನಶಿಸುತ್ತಿದೆಯಾ? ಬರೆಯುವ ಹುಮ್ಮಸ್ಸಿನಲ್ಲಿ ನಾವು ಒಳಗಿನ ಲೋಕವನ್ನು ಸೂರೆ ಮಾಡುತ್ತಿದ್ದೇವಾ? ಕಲ್ಪನೆಯ, ಕನಸಿನ, ವ್ಯಾಮೋಹದ, ನಾವಷ್ಟೇ ಸುಖವಾಗಿರಬಲ್ಲ ಜಗತ್ತಿನಿಂದ ಆಚೆ ಬರುವುದಕ್ಕೆ ಹವಣಿಸುತ್ತಿದ್ದೇವಾ?’
  ಜೋಗಣ್ಣಾ, ಈ ಸಾಲುಗಳಲ್ಲಿಯೇ ಎಲ್ಲವೂ ಇರುವುದು. ಅಲ್ಲವೇ?

  ಪ್ರತಿಕ್ರಿಯೆ
  • jogi

   ನೀವು ಹಾಗಂದ ಮೇಲೆ ಮತ್ತಷ್ಟು ಗೊಂದಲ.

   ಪ್ರತಿಕ್ರಿಯೆ
 4. aalapini

  ‘ಒಂದೂ ಆರ್ಥವಾಗದೇ ಆ ರಾತ್ರಿ ಸುಮ್ಮನೆ ಕೂತೆ. ಹಾಗೆ ಸುಮ್ಮನೆ ಕೂತಿದ್ದಕ್ಕೇ ಇದನ್ನೆಲ್ಲ ಬರೆಯಲು ಸಾಧ್ಯವಾಯಿತು ಎಂದು ಈಗ ಅನ್ನಿಸುತ್ತಿದೆ’ its really true n superb

  ಪ್ರತಿಕ್ರಿಯೆ
 5. Gowri dattu

  ಜೋಗಿ ಅವರೆ,
  ಒಂದು ಅನುಮಾನ
  ಮೊರೆಯದಲೆಗಳ ನೋ ಅಥವಾ ಮೊಳೆಯದಲೆಗಳ ನೋ ?

  ಪ್ರತಿಕ್ರಿಯೆ
 6. jogi

  ನೀವು ಕೇಳಿದ ಮೇಲೆ ಅನುಮಾನವಾಯಿತು. ಆದರೆ ನನಗೆ ಮೊಳೆಯದಲೆಗಳ ಅನ್ನುವುದೇ ಇಷ್ಟ ಅಂದುಕೊಂಡು ಅಡಿಗರ ಸಮಗ್ರ ಎತ್ತಿಕೊಂಡು ನೋಡಿದೆ. ಅವರು ಮೊಳೆಯದಲೆಗಳ ಎಂದೇ ಬರೆದಿದ್ದರು. ಮೊಳೆಯದ ಅಲೆಗಳ ಮೂಕಮರ್ಮರ ಎಂಬ ಸಾಲಿನಲ್ಲಿ ಇನ್ನೂ ಮೊಳೆಯದ ಅಲೆಗಳು, ಇನ್ನೂ ಹುಟ್ಟದ ಅಲೆಗಳ ಮೂಕ ಮರ್ಮರ ಎಂಬುದು ಧ್ವನಿಸಿರುವುದು ನನ್ನನ್ನು ಮತ್ತೆ ಮತ್ತೆ ರೋಮಾಂಚನಗೊಳಿಸುತ್ತದೆ.

  ಪ್ರತಿಕ್ರಿಯೆ
 7. kiran kumari

  ಸರ್,
  ಹಾಗೇ ಸುಮ್ಮನೇ ಕುಳಿತಾಗಲೂ ನಮ್ಮ ಅ೦ತರ೦ಗ – ಹೇಗೆ ಸೃಜನಶೀಲತೆಯಿ೦ದಲೂ..ಕ್ರಿಯಾಶೀಲತೆಯಿ೦ದಲೂ ಪ್ರತಿಕ್ರಿಯಿಸಬಲ್ಲದು ಎ೦ಬುದಕ್ಕೆ ನಿಮ್ಮ ಈ ಬರಹವೇ ಸಾಕ್ಶಿ. ಮನಸ್ಸಿಗೆ ಮುದನೀಡುತ್ತವೆ ನಿಮ್ಮ ಶೈಲಿ..ಬರಹ. ಮೊಳೆಯದಲೆಗಳ ಮೂಕ ಮರ್ಮರ..ಎ೦ಬುದು ಅಡಿಗರ ಸಾಲನ್ನೇ ಬಳಸಿಕೊ೦ಡಿರುವುದು – ತಾತ್ವಿಕತೆಯಿ೦ದ ಕೂಡಿದ ಸೂಕ್ತತೆ ಮತ್ತು ಸೂಕ್ಷ್ಮತೆ ಎ೦ದೇ ನನ್ನ ಭಾವನೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: