ಜೋಗಿ ಬರೆದಿದ್ದಾರೆ: ಮಲ್ಲಿಗೆ ತರುವವನ ತಕರಾರು

untitled1ಜೋಗಿ

ಅಲ್ಲಿಂದ ಮಲ್ಲಿಗೆ ತರುವವನ ತರಾವರಿ ತಕರಾರು
 
ನನ್ನ ಕೈಯ ಹಿಡದಾಕಿ
ಅಳು ನುಂಗಿ ನಗು ಒಮ್ಮೆ
ನಾನೂನೂ ನಕ್ಕೇನS.
ಬೇಂದ್ರೆ ಬರೆದರು, ನಾವು ಓದಿದೆವು, ನಾವೂ ನಕ್ಕೆವು.
ಅತ್ತಾರೆ ಅತ್ತುಬಿಡು
ಹೊನಲು ಬರಲಿ
ನಕ್ಯಾಕ ಮರಸತೀ ದುಃಖ
ಬೇಂದ್ರೆ ಬರೆದರು, ನಾವು ಓದಿದೆವು, ನಾವೂ ಅತ್ತೆವು.
          
12
******
ಯಾರೋ ನಗಿಸುತ್ತಾರೆ, ಯಾರೋ ಅಳಿಸುತ್ತಾರೆ. ಯಾರೋ ನೋಯಿಸುತ್ತಾರೆ, ಯಾರೋ ಮಾಯಿ’ಸುತ್ತಾರೆ. ಯಾರೋ ಹುಟ್ಟಿಸುತ್ತಾರೆ, ಯಾರೋ ಬಾಳಿಸುತ್ತಾರೆ. ಯಾರೋ ಗೆಲ್ಲಿಸುತ್ತಾರೆ, ಯಾರೋ ತೇಲಿಸುತ್ತಾರೆ. ಯಾರೋ ಸೋಲಿಸುತ್ತಾರೆ, ಇನ್ಯಾರೋ ಮುಳುಗಿಸುತ್ತಾರೆ. ಬದುಕು ಮಾಯೆಯ ಮಾಟ. ಬದುಕು ನೊರೆತೆರೆಯಾಟ!
ಇನ್ನೊಬ್ಬರು ಯಾಕೆ ಮುಖ್ಯವಾಗುತ್ತಾರೆ ಜೀವನದಲ್ಲಿ? ಎಲ್ಲರ ಬದುಕಲ್ಲೂ ಇದು ಹೀಗೇನಾ? ಅದು ನಿಸ್ವಾರ್ಥ ಸುಖವಾ? ಅಹಂಕಾರವಾ? ಪ್ರೀತಿಯಾ? ಹತೋಟಿಯಾ? ಬಂಧನವಾ ಅಥವಾ ಸ್ಪಂದನವಾ?
ಗಂಡ ಸಿಗರೇಟು ಸೇದಿದರೆ ಹೆಂಡತಿಗೆ ಸಿಟ್ಟು ಬರುತ್ತದೆ. ಅದು ಕೇವಲ ಆರೋಗ್ಯದ ಪ್ರಶ್ನೆ ಅಲ್ಲ ಅನ್ನುವುದು ಆಕೆಗೂ ಗೊತ್ತು. ಒಂದು ಸಿಗರೇಟಿಗಿಂತ ಅಪಾಯಕಾರಿಯಾದ ಮಸಾಲೆದೋಸೆಯನ್ನೂ ಆಕೆಯೇ ಮಾಡಿಕೊಟ್ಟಿರುತ್ತಾಳೆ. ಆದರೆ ಸಿಗರೇಟು ಸೇದಿದರೆ ರೇಗುತ್ತಾಳೆ. ಅದೇ ಥಿಯೇಟರಲ್ಲಿ ಕೂತು ರಜನೀಕಾಂತ್ ಸಿಗರೇಟು ಸೇದುವ ಶೈಲಿಯನ್ನು ಮೆಚ್ಚುತ್ತಾಳೆ. ಪಕ್ಕದ ಮನೆಯ ಹುಡುಗ ಮಹಡಿಯಲ್ಲಿ ನಿಂತು ಸಿಗರೇಟು ಸೇದುತ್ತಿದ್ದರೆ  ಅದೆಷ್ಟು ಸಿಗರೇಟು ಸೇದ್ತಾನ್ರೀ ಹುಡುಗ’ ಅನ್ನುತ್ತಾಳೆ. ಆ ದನಿಯಲ್ಲಿ ಮೆಚ್ಚುಗೆಯಿದ್ದಂತೆ ಅನ್ನಿಸಿ ಗಂಡ ಗೊಣಗುತ್ತಾನೆ. ಅಯ್ಯೋ ಬಿಡೇ. ಅವನ ವಯಸ್ಸಲ್ಲಿ ನಾವು ಅದಕ್ಕಿಂತ ಜಾಸ್ತಿ ಸೇದ್ತಾ ಇದ್ವಿ’.
ಅಲ್ಲಿಗೆ ಆ ಮಾತು ಮಗಿಯುತ್ತದೆ. ಅದೇ ಜೊತೆಗೆ ಗೆಳೆಯನಿದ್ದರೆ ಮಾತು ಮುಂದುವರಿಯುತ್ತಿತ್ತು. ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಸಿ ವಾಪಸ್ಸು ಹೋಗುತ್ತಾ ದಾರಿಯಲ್ಲಿ ಕದ್ದು ಸಿಗರೇಟು ಸೇದಿದ್ದು. ಬಾಯಿ ವಾಸನೆ ಬಂದೀತೆಂದು ಅಂಜುತ್ತ ಮನೆಗೆ ಹೋದದ್ದು. ಆಮೇಲಾಮೇಲೆ ಗೆಳೆಯರಿಗೆಲ್ಲ ಗೊತ್ತಾಗುವ ಹಾಗೆ ಗುಟ್ಟಾಗಿ ಸಿಗರೇಟು ಸೇದುತ್ತಿದ್ದದ್ದು. ಆಗಿನ ಹಳೇ ಬ್ರಾಂಡುಗಳು. ಹಳೇ ಮೈಸೂರು ಮಂದಿಗೆ ನೇವಿಬ್ಲೂ, ಬೆಂಗಳೂರಿನ ಹುಡುಗರಿಗೆ ಪಾಸಿಂಗ್ ಷೋ, ದಕ್ಷಿಣ ಕನ್ನಡಿಗರಿಗೆ ಬ್ರಿಸ್ಟಾಲ್, ಹಾಸನದ ಹುಡುಗರಿಗೆ ಬರ್ಕ್‌ಲೀ, ಹುಬ್ಬಳ್ಳಿಯಲ್ಲಿ ಗೋಲ್ಡ್‌ಫ್ಲೇಕ್ ಸ್ಮಾಲ್, ಭಯಸ್ತರಿಗೆ ಮೆಂಥಾಲ್, ಶೋಕಿಲಾಲರಿಗೆ ಮೋರ್, ಒರಟರಿಗೆ ವಿಲ್ಸ್… ಹೀಗೆ ಒಂದೊಂದು ಬ್ರಾಂಡಿನ ಜೊತೆಗೂ ಒಂದೊಂದು ನೆನಪು. ಬ್ರಾಂಡು ಬದಲಾಯಿಸಿ ಕೆಮ್ಮಿದ್ದು, ಬೀಡಿ ಸೇದಿ ಸುಖಿಸಿದ್ದು, ತುಂಡು ಸಿಗರೇಟು ಹೆಕ್ಕಿ ಸೇದಿದ ಅನಂತ ರಾತ್ರಿಗಳು, ಮೂರು ಮೈಲು ನಡೆದುಹೋಗಿ ಸುಡುಬಿಸಿಲಲ್ಲಿ ಸಿಗರೇಟು ತಂದದ್ದು.
ದುರದೃಷ್ಟವಶಾತ್ ಬಹುತೇಕ ಹೆಣ್ಣುಮಕ್ಕಳಿಗೆ ಇಂಥ ವೈವಿಧ್ಯಮಯ ನೆನಪುಗಳಿಲ್ಲ. ಯಾಕೆಂದರೆ ಅವರಿಗೆ ಹವ್ಯಾಸಗಳೂ ಇಲ್ಲ. ಅವರು ಕದ್ದು ಮುಚ್ಚಿ ಏನನ್ನೂ ಮಾಡುವುದಿಲ್ಲ. ಕದ್ದು ಮುಚ್ಚಿ ಮಾಡದ ಹೊರತು ಅದೊಂದು ರಸಾನುಭವ ಆಗಲಾರದು.
ಮತ್ತೆ ಅದೇ ಹಳೆಯ ಪ್ರಶ್ನೆಗೆ ಬರೋಣ; ಇನ್ನೊಬ್ಬರು ನಮಗೆ ಯಾಕೆ ಮುಖ್ಯವಾಗುತ್ತಾರೆ? ಬೆಳಗ್ಗೆ ಎದ್ದೊಡನೆ ಫೋನ್ ಮಾಡುವ ವ್ಯಕ್ತಿಗೆ ನಾವೇಕೆ ನೇರವಾಗಿ ನನಗೆ ನಿಮ್ಮ ಜೊತೆ ಮಾತಾಡುವುದಕ್ಕೆ ಇಷ್ಟವಿಲ್ಲ, ಇನ್ನು ಫೋನ್ ಮಾಡಬೇಡಿ’ ಅಂತ ಹೇಳಲಾಗುವುದಿಲ್ಲ. ನಡುರಾತ್ರಿ ಕವಿ ಫೋನ್ ಮಾಡಿ ಕವಿತೆ ಓದುತ್ತೇನೆ ಎಂದರೆ ನಗೆ ಕವಿತೆಯೂ ಇಷ್ಟವಿಲ್ಲ, ನಿಮ್ಮ ದನಿಯನ್ನೂ ಕೇಳಲಾರೆ’ ಅಂತ ಫೋನ್ ಕುಕ್ಕಲಾಗುವುದಿಲ್ಲ. ಕೈತುಂಬ ಕೆಲಸ ಇದ್ದಾಗಲೂ ಯಾಕೆ ನಗು ನಟಿಸುತ್ತಾ ಮಾತಾಡುತ್ತೇವೆ. ಸಾಮಾನ್ಯವಾಗಿ ನಾವೇಕೆ ಸಿಟ್ಟು ಮಾಡಿಕೊಳ್ಳುವುದಿಲ್ಲ? ಸಿಟ್ಟು ಬಂದಾಗ ಶಾಂತಿ ನಟಿಸುತ್ತಾ, ಶಾಂತಿಯಿಂದಿರಬೇಕಾದ ಹೊತ್ತಲ್ಲಿ ಸಿಟ್ಟಾಗುತ್ತಾ, ಪ್ರೀತಿಸಬೇಕಾದ ಹೊತ್ತಲ್ಲಿ ದ್ವೇಷಿಸುತ್ತಾ, ದ್ವೇಷಿಸಬೇಕಾದವರನ್ನು ಪ್ರೀತಿಸುವಂತೆ ನಟಿಸುತ್ತಾ ಯಾಕೆ ಕಾಲ ಕಳೆಯುತ್ತೇವೆ?
ಅದು ಸಮಾಜಮುಖಿ ನಿಲುವು ಅನ್ನುತ್ತದೆ ಇತಿಹಾಸ. ಜಗತ್ತಿನಲ್ಲಿ ಎರಡೇ ಎರಡು ಥರದ ಜನ. ಸುಖಪಡುವವರು ಮತ್ತು ಸುಖವಾಗಿಡುವವರು. ಒಂದು ಬೆಳಗ್ಗೆಯಿಂದ ಸಂಜೆ ತನಕ ನೀವು ಆಡುವ ಪ್ರತಿಯೊಂದು ಮಾತನ್ನೂ ಬರೆದಿಡಿ. ಮಾಡುವ  ಒಂದೊಂದು ಕೆಲಸಕ್ಕೂ ಲೆಕ್ಕ ಇಡಿ. ಅದರಲ್ಲಿ ನಿಮಗೋಸ್ಕರ ಏನೇನು ಮಾಡಿದ್ದೀರಿ ಅಂತ ಲೆಕ್ಕಹಾಕಿ. ನೋಡುತ್ತಾ ಹೋದರೆ ನಾವು ನಮಗಾಗಿ ಏನನ್ನೂ ಮಾಡಿರುವುದಿಲ್ಲ. ನಮಗಾಗಿ ಮಾಡುವುದನ್ನೂ ಬೇರೆಯವರಿಗಾಗಿ ಮಾಡಿರುತ್ತೇವೆ. ಅತ್ತೆ ಏನನ್ನುತ್ತಾರೋ ಅಂತ ಸೊಸೆ ಒಳ್ಳೆಯ ಅಡುಗೆ ಮಾಡುತ್ತಾಳೆ. ಬಾಸ್ ಏನನ್ನುತ್ತಾನೋ ಅನ್ನುತ್ತಾ ಟೈಪಿಸ್ಟ್ ಕೊನೆಯ ಲೆಟರನ್ನು ಎಂಟೂವರೆ ತನಕ ಕೂತು ಟೈಪ್ ಮಾಡಿರುತ್ತಾಳೆ. ಗಿರಾಕಿ ಕೈ ಬಿಟ್ಟು ಹೋಗುತ್ತಾನೇನೋ ಅನ್ನುವ ಭಯಕ್ಕೆ ಟೀವಿ ಅಂಗಡಿಯವನು ಸರ್ವೀಸ್ ಇಂಜಿನಿಯರನ್ನು ಕಳುಹಿಸಿಕೊಡುತ್ತಾನೆ. ಪ್ರತಿಯೊಂದು ದಾಕ್ಷಿಣ್ಯಕ್ಕೆ ನಡೆಯುವ ವ್ಯವಹಾರಗಳು.
ಯಾವ ಲೆಕ್ಕಾಚಾರವೂ ಇಲ್ಲದ, ಲಾಭವೂ ಇಲ್ಲದ ಒಳ್ಳೇತನಗಳು ಮತ್ತೊಂದಷ್ಟಿವೆ. ಜೊತೆಗಿರುವವರು ಏನನ್ನುತ್ತಾರೋ ಅನ್ನುವ ಭಯಕ್ಕೆ ನಾವೊಂದಷ್ಟು ಸಾಮಾಜಿಕ ನಡವಳಿಕೆಗಳನ್ನು ರೂಪಿಸಿಕೊಳ್ಳುತ್ತೇವೆ. ಹಾಗೆ ಮಾಡದೇ ಹೋದರೆ ಒಂಟಿಯಾಗುತ್ತೇವೇನೋ ಅನ್ನುವ ಭಯಕ್ಕೆ ಬೀಳುತ್ತೇವೆ. ಏನೇ ಮಾಡಿದರೂ ಮನುಷ್ಯ ಒಂಟಿ ಅನ್ನುವುದನ್ನು ಮರೆಯುತ್ತೇವೆ.
*******
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು’ ಅನ್ನುವುದು ನಮ್ಮ ಪಾಲಿಗೆ ಜನಪ್ರಿಯ ವಾಕ್ಯ. ಬಹುಶಃ ಅದರ ಅರ್ಥ ಇಷ್ಟೇ. ಎಲ್ಲರಿಗೂ ಇಷ್ಟವಾಗುವಂತಿರು. ಹಾಗೇಕೆ ಇರಬೇಕು ಅನ್ನುವುದನ್ನು ನಾವು ಕೇಳಿಕೊಳ್ಳುವುದೇ ಇಲ್ಲ. ನಮ್ಮ ಮುಂದಿನ ಉದಾಹರಣೆ ನೋಡಿದರೆ ಗೊತ್ತಾಗುತ್ತದೆ; ಯಾರೂ ಯಾರ ಅಪ್ಪಣೆಗಾಗಲೀ, ಮಾತಿಗಾಗಲೀ, ಟೀಕೆಗಾಗಲೀ ಅಂಜದೇ ಇದ್ದರೋ ಅವರು ಅತ್ಯಂತ ಸುಖವಾಗಿಯೂ ಇದ್ದರು. ಉದಾಹರಣೆಗೆ ಶಿವರಾಮ ಕಾರಂತ.
ಹಾಗಿದ್ದವರು ನಟಿಸುವುದಿಲ್ಲ. ಪ್ರಾಣಿಗಳೂ ನಟಿಸುವುದಿಲ್ಲ. ನಾವು ದ್ವೇಷಿಸುತ್ತಾ ಪ್ರೀತಿಸುವಂತೆ ನಟಿಸುತ್ತೇವೆ. ಪ್ರೀತಿಸುವಂತೆ ನಟಿಸುತ್ತಾ ದ್ವೇಷಿಸುತ್ತೇವೆ. ಮೆಚ್ಚಿಕೊಳ್ಳುತ್ತಾ ಅಸಹ್ಯಪಡುತ್ತೇವೆ. ಅಸಹ್ಯ ಪಡುತ್ತಾ ಮೆಚ್ಚಿಕೊಳ್ಳುತ್ತೇವೆ. ಬಹುಶಃ ಈ ವೈವಿಧ್ಯ ಮನುಷ್ಯರಿಗಷ್ಟೇ ಸಾಧ್ಯ. ಅದು ಸಾಧ್ಯ ಆಗಿದ್ದರಿಂದಲೇ ನಮ್ಮಲ್ಲಿ ಕತೆಯಿದೆ, ಕವಿತೆಯಿದೆ, ನಾಟಕವಿದೆ, ಸಿನಿಮಾ ಇದೆ. ಲಲಿತ ಕಲೆಗಳಿವೆ. ಇದ್ದದ್ದನ್ನು ಇದ್ದ ಹಾಗೆ ಹೇಳುತ್ತಾ ಹೋದರೆ ಅಲ್ಲಿ ಕತೆಯೆಲ್ಲಿ ಹುಟ್ಟುವುದಕ್ಕೆ ಸಾಧ್ಯ?
ಹಾಗಿದ್ದರೆ ಮುಚ್ಚಿಡುವುದು ಸರಿಯಾ?
ಮುಚ್ಚಿಟ್ಟಾಗಲೇ ಬದುಕು. ಇನ್ನೊಬ್ಬರನ್ನು ಅರಿಯುವ ಪ್ರಯತ್ನವೇ ಬದುಕು. ನಮ್ಮನ್ನು ಅರ್ಥಮಾಡಿಕೊಳ್ಳುತ್ತಾ ಹೋಗುವುದೇ ಜೀವನ. ಬದುಕೆಂದರೆ ಪರಿಪೂರ್ಣತೆ ಅಲ್ಲ, ಶಿಸ್ತಲ್ಲ, ಪ್ರಾಮಾಣಿಕತೆ ಅಲ್ಲ. ಬದುಕು ಸರಿತಪ್ಪುಗಳ ಮೊತ್ತ.
ನಾವು ಆ ಕ್ಷಣಕ್ಕೆ ಪ್ರತಿಕ್ರಿಯಿಸಿದ ರೀತಿ ಅಷ್ಟೇ. ಅಮ್ಮನನ್ನು ತುಂಬ ಪ್ರೀತಿಸುವ ಹುಡುಗನಿಗೆ ಅಮ್ಮನೇ ಶತ್ರು ಅನ್ನಿಸಬಹುದು. ಕುಡಿಯುವ ಗಂಡನನ್ನು ಕಂಡಾಗ ಹೆಂಡತಿಗೆ ಇವನನ್ನು ಮದುವೆ ಆಗಬಾರದಿತ್ತು ಅನ್ನಿಸಬಹುದು. ಮತ್ತೊಬ್ಬ ಸುಂದರಿಯನ್ನು ಕಂಡಾಗ ಗಂಡನಿಗೆ, ಛೇ ಅವಸರಪಟ್ಟೆ ಅನ್ನಿಸೀತು. ಅವೆಲ್ಲವೂ ಸರಿಯೇ? ಏನು ಅನ್ನಿಸುತ್ತದೆ ಅನ್ನುವುದು ಗೌಣ. ಅನುಸರಿಸಿಕೊಂಡು ಹೋದದ್ದು ಜೀವನ.
ಮತ್ತೆ ಒಳ್ಳೇತನ!
ಅದೊಂದು ಬೊಗಳೆ ಮಾತು. ಗುರು ಹೇಳಿದ ಹಾಗೆ ಕೇಳಿದರೆ ಶಿಷ್ಯ ಒಳ್ಳೆಯವನು; ಗುರುವಿನ ಪಾಲಿಗೆ.. ಅಪ್ಪ ಹೇಳಿದ ಹಾಗೆ ಕೇಳಿದರೆ ಮಗ ಒಳ್ಳೆಯವನು; ಅಪ್ಪನ ಪಾಲಿಗೆ. ಆದರೆ ಮಗ ತನ್ನ ಪಾಲಿಗೆ ಒಳ್ಳೆಯವನಾಗುವುದು ಯಾವಾಗ? ಹೆಂಡತಿಗೆ ಸಿಟ್ಟು ಬರುತ್ತದೆ ಅಂತ ಗೆಳೆಯರ ಜೊತೆ ಸೇರಿದಾಗ ಸುಮ್ಮನುಳಿಯುವ ಆಶೆಪುರುಕ ಬ್ರಾಹ್ಮಣರ ಹುಡುಗ ಅಂತಿಮವಾಗಿ ತನಗೇ ತಾನೇ ಮೋಸ ಮಾಡಿಕೊಂಡಿರುತ್ತಾನೆ. ತನಗೇ ತಾನೇ ಮೋಸ ಮಾಡಿಕೊಂಡವನು ಪರಮಕ್ರೂರಿ.
ಅಹಂ ಬ್ರಹ್ಮಾಸ್ಮಿ ಅನ್ನುವುದರ ಅಂತರಂಗದ ಅರ್ಥ ಇದೇ. ನಾನು’ ಮುಖ್ಯ, ಉಳಿದವರೆಲ್ಲ ಅನಂತರ. ನಾನುಂಟೋ ಮೂರು ಲೋಕವುಂಟು. ನಾನು ತಪ್ಪೇ ಮಾಡುತ್ತಿರಬಹುದು, ಆದರೆ ಅದನ್ನು ಖುಷಿಯಿಂದ ಸ್ವಸಂತೋಷದಿಂದ ಮಾಡುತ್ತಿದ್ದೇನೆ. ಇನ್ನೊಬ್ಬನ ಸಂತೋಷಕ್ಕಾಗಿ ಸರಿದಾರಿಯಲ್ಲಿ ನಡೆಯುವುದಕ್ಕಿಂತ ತನ್ನ ಸಂತೋಷಕ್ಕಾಗಿ ತಪ್ಪು ದಾರಿಯಲ್ಲಿ ನಡೆಯುವುದು ಒಳ್ಳೆಯ ನಿರ್ಧಾರ.
********
ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು..
ಹಾಗಂತ ಕವಿ ಹಾಡಿದ. ಆ ಮಾತಲ್ಲಿ ಎಲ್ಲರ ಬದುಕಿಗೂ ಅನ್ವಯಿಸುವ ಒಂದು ಅರ್ಥಪೂರ್ಣ ತಿಳುವಳಿಕೆಯಿದೆ.
ಅದನ್ನು ಪ್ರಶ್ನೆಗಳಲ್ಲಿ ಹೀಗೆ ವಿವರಿಸುತ್ತಾ ಹೋಗಬಹುದು.
ಇಲ್ಲೇ ಇರು ಅಂತ ಆತ ಯಾಕೆ ಹೇಳಿದ. ಆಕೆಯನ್ನೂ ಜೊತೆಗೆ ಕರೆದುಕೊಂಡು ಹೋಗಬಹುದಿತ್ತಲ್ಲ?
ಮಲ್ಲಿಗೆಯನು ತರುವೆನು ಅಂತ ಹೋದದ್ದೇನೋ ಸರಿ, ಆದರೆ ಆಕೆಗೆ ಮಲ್ಲಿಗೆ ಯಾರಿಗೆ ಇಷ್ಟ? ಅವನಿಗೋ ಅವಳಿಗೋ? ಅವಳಿಗಿಷ್ಟ ಇದೆಯೋ ಇಲ್ಲವೋ ಅಂತ ಆತ ಕೇಳಿದ್ದಾನಾ?
ಅವಳಿಗೆ ಮಲ್ಲಿಗೆ ಇಷ್ಟವಾ? ಆತ ತನ್ನನ್ನು ಒಂಟಿಯಾಗಿ ಬಿಟ್ಟು ಹೋಗಿಯಾದರೂ ಮಲ್ಲಿಗೆ ತರಲಿ ಅನ್ನುವ ಆಸೆಬುರುಕಿಯಾ? ಅಥವಾ ಆಕೆಗೆ ಅವನು ತರುವ ಮಲ್ಲಿಗೆ ಇಷ್ಟವಾ?
ಅವನು ಮಲ್ಲಿಗೆ ತರುತ್ತೇನೆ ಅಂತ ಹೋಗಿದ್ದು ಅವಳಿಗಾಗಿಯಾ? ಅವನಿಗಾಗಿಯಾ?
ಗೊತ್ತಿಲ್ಲ.
ಆದರೆ ಅಲ್ಲಿಗೆ ಹೋಗಿ ಅವಳಿಗಾಗಿ ಮಲ್ಲಿಗೆ ತರುತ್ತೇನೆ ಅನ್ನುವ ನಿರ್ಧಾರದ ಹಿಂದಿನ ಸುಖವಷ್ಟೇ ಅವನದು.
ಅಷ್ಟೇ.
 
 
ಒಂದು ಮಾರೋಲೆ:

ಕಳೆದ ವಾರದ ಅಂಕಣದಲ್ಲಿ ಬರೆದ ಸಾಲು: ಪ್ರೀತಿ ಬರಬೇಕು, ಜ್ವರದಂತೆ. ಬೆವರಿದಾಗ ಹೋಗಿ ಬಿಡಬೇಕು ಅನ್ನುವ ಸಾಲಿನ ಬಗ್ಗೆ  ಆಕ್ಷೇಪ, ಅಸಮಾಧಾನ, ಟೀಕೆ, ವಿರೋಧ ಮತ್ತು ಮೆಚ್ಚುಗೆ ಬಂದಿದೆ. ಫೋನ್ ಮಾಡಿದವರಿಗೆ ನಾನೇ ಅದೇನೆಂದು ವಿವರಿಸಿದ್ದೇನೆ.
ಅಲ್ಲಿ ನಾನು ಹೇಳಲಿಚ್ಚಿಸಿದ್ದು ಇಷ್ಟೇ: ಪ್ರೀತಿ ನಮ್ಮ ಮೈಬಿಸಿಯಂತೆ. ಸದಾ ಇರುತ್ತದೆ ನಮ್ಮೊಳಗೆ. ಒಂದು ವಯಸ್ಸಿನಲ್ಲಿ, ಒಂದು ಕಾಲಘಟ್ಟದಲ್ಲಿ ಆ ಬಿಸಿ ಏರಿ ಜ್ವರದಂತೆ ನಮ್ಮನ್ನು ಕಾಡುತ್ತದೆ. ಆಮೇಲೆ ಅದು ಬೆವರಿ ಬೆವರಿ ಜ್ವರ ಕಡಿಮೆ ಆಗುವ ಹಾಗೆ ಮತ್ತೆ ಯಥಾಸ್ಥಿತಿಗೆ ಬರುತ್ತದೆ.
ಜ್ವರದಂಥ ಪ್ರೀತಿ ಜೀವನಪೂರ್ತಿ ಇದ್ದರೆ ವ್ಯಾನ್ ಗಾಗ್ ಥರ ಆಗುತ್ತೇವೆ. ಯೇಟ್ಸ್ ಥರ ಪ್ರೀತಿಸಂತರಾಗುತ್ತೇವೆ. ಬೋಧಿಲೇರ್ ಥರ ಅತಿರೇಕಕ್ಕೆ ಏರುತ್ತೇವೆ. ಅಂಥ ಶಕ್ತಿ ನಮಗೆ ಖಂಡಿತಾ ಇಲ್ಲ. ನಮ್ಮದು ನಾರ್ಮಲ್ ಬಾಡಿ ಟೆಂಪರೇಚರ್; ೯೮.೬ ಡಿಗ್ರಿ ಫ್ಯಾರನ್‌ಹೀಟ್. ಯೌವನದ ಉತ್ಕಟತೆಯಲ್ಲಿ ಅದು ೧೦೩ ಡಿಗ್ರಿಗೆ ಏರಬಹುದು ಅಷ್ಟೇ. ಜ್ವರ ಇಳಿದಾಗ ಮತ್ತೆ ನಾರ್ಮಲ್ ಆಗುತ್ತೇವೆ.

‍ಲೇಖಕರು avadhi

May 3, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

4 ಪ್ರತಿಕ್ರಿಯೆಗಳು

 1. ಶ್ರೀ

  ಜೋಗಿ ಸರ್,
  “ಮುಚ್ಚಿಟ್ಟಾಗಲೇ ಬದುಕು. ಇನ್ನೊಬ್ಬರನ್ನು ಅರಿಯುವ ಪ್ರಯತ್ನವೇ ಬದುಕು. ನಮ್ಮನ್ನು ಅರ್ಥಮಾಡಿಕೊಳ್ಳುತ್ತಾ ಹೋಗುವುದೇ ಜೀವನ. ಬದುಕೆಂದರೆ ಪರಿಪೂರ್ಣತೆ ಅಲ್ಲ, ಶಿಸ್ತಲ್ಲ, ಪ್ರಾಮಾಣಿಕತೆ ಅಲ್ಲ. ಬದುಕು ಸರಿತಪ್ಪುಗಳ ಮೊತ್ತ…” ಇದು ನಾನು ನೂರಕ್ಕೆ ನೂರು ಒಪ್ಪುವ ಮಾತು… ಥ್ಯಾಂಕ್ಸ್.

  ಪ್ರತಿಕ್ರಿಯೆ
 2. c k mahendra

  sari ide. preeti haggene. jvara banua illiada mele jvarada bgge matanadidante.
  ck mahendra

  ಪ್ರತಿಕ್ರಿಯೆ
 3. hemapowar123

  ನಿಮ್ಮ ಒಂದು ಮಾರೋಲೆಗೆ: ಈ ವಿವರಣೆ ಬೇಡವಿತ್ತು, ಓದಿದವರು ಅವರಿಗೆ ದಕ್ಕಿದಷ್ಟು ಅರ್ಥಮಾಡಿಕೊಂಡು ಸುಮ್ಮನಿರುತ್ತಿದ್ದರು.
  (’ಪ್ರೀತಿ ಬರಬೇಕು, ಜ್ವರದಂತೆ. ಬೆವರಿದಾಗ ಹೋಗಿ ಬಿಡಬೇಕು’ ಆ ಲೇಖನದಲ್ಲಿ ನನಗೆ ಮೆಚ್ಚುಗೆಯಾದ ಸಾಲು, ಅದನ್ನು ವಿವರಿಸಿ ಅಂದಕೆಡಿಸಿದಿರಿ ಎಂಬ ಆತಂಕವಾಯ್ತು!)

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: