ಜೋಗಿ ಬರೆದಿದ್ದಾರೆ: ಮಳೆಗಾಲದಲ್ಲಿ ಕಾಡಿಗೆ ಕಾಲಿಡಬಾರದು

n697974940_6202

ಮಳೆಗಾಲದಲ್ಲಿ ಕಾಡಿಗೆ ಕಾಲಿಡಬಾರದು.

ಮೊನ್ನೆ ಸುಬ್ರಹ್ಮಣ್ಯ, ಬಿಸಲೆ ಘಾಟಿ ಮತ್ತು ಸುಳ್ಯದ ಕಾಡುಗಳಿಂದ ಹಾಗೊಂದು ನಿರ್ಧಾರ ಮಾಡಿಕೊಂಡೇ ಹೊರಬಿದ್ದೆ. ಟ್ರಾಕ್ಟರ್ ಹತ್ತಿ ಮೂವತ್ತೋ ಮೂವತ್ತೈದೋ ಕಿಲೋಮೀಟರ್ ಒಳನುಗ್ಗಿ, ಮತ್ತೊಂದೆಂಟು ಕಿಲೋಮೀಟರ್ ಅಲೆದು ಮರಳುವ ಹೊತ್ತಿಗೆ ಕಾಲ್ತುಂಬ ಜಿಗಣೆ. ಒಂದೊಂದು ಕಾಲಿಗೆ ತಲಾ ಡಜನ್ ಜಿಗಣೆಗಳು ಅಂಟಿಕೊಂಡು ಕಿರುಬೆರಳಿನಷ್ಟು ಊದಿಕೊಂಡಿದ್ದವು. ಒಂದು ರಕ್ತದಾನ ಶಿಬಿರ.

ಗುಂಡ್ಯದ ಪಕ್ಕದ ಕಾಡು ನಾಶವಾಗುತ್ತಿದೆ. ಪರಿಸರ ಪ್ರೇಮಿ ಅಶೋಕ್ ವರ್ಧನ್ ಅದರ ವಿರುದ್ಧ ಸಿಡಿದು ನಿಂತಿದ್ದಾರೆ. ಹೋರಾಟಗಳೂ ಪ್ರತಿಭಟನೆಗಳೂ ನಡೆಯುತ್ತಿದೆ. ಅದರ ನಡುವೆಯೇ ಏನಾಗಬಾರದೋ ಅದೇ ಆಗುತ್ತಿದೆ. ಮೊನ್ನೆ ಶಿರಾಡಿ ಘಾಟಿಯಲ್ಲಿ ಬರುತ್ತಾ ಇದ್ದರೆ ಅಕ್ಕಪಕ್ಕದ ಕಾಡುಗಳೆಲ್ಲ ನಿಧಾನವಾಗಿ ಬೋಳಾಗುತ್ತಿರುವುದು ಕಾಣಿಸಿತು. ಅಲ್ಲಲ್ಲಿ ಅಣೆಕಟ್ಟುಗಳೂ, ಕಟ್ಟಡಗಳೂ ತಲೆಯೆತ್ತಿವೆ.

ಕಾಡು ಕಾಡಿನಂತಿಲ್ಲ. ನಮಗೆಲ್ಲ ಕಾಡಿನ ಪರಿಚಯವಾದದ್ದು ರಾಮಾಯಣದಿಂದ. ರಾಮನ ವನವಾಸ, ಅಲ್ಲಿನ ಸರಯೂ ನದಿ, ದಂಡಕಾರಣ್ಯ, ಅಲ್ಲೊಂದು ಪರ್ಣಕುಟಿ ಮತ್ತು ಕಾಡುಮನುಷ್ಯರು ಎಂದು ನಾವು ಈಗ ಊಹಿಸುವ ರಾಕ್ಷಸರು. ವಿಚಿತ್ರ ಹೆಸರಿನ ಕಾಡುಗಳು. ಅಲ್ಲೊಂದು ಕೊಳ, ಪಕ್ಕದಲ್ಲೇ ಹುಲ್ಲುಗಾವಲು. ಅಲ್ಲಿ ಮೇಯುತ್ತಿರುವ ಜಿಂಕೆ.

[wallcoo.com]_2560x1600_Widescreen_GreenLeaves_wallpaper_da035019eಮಹಾಭಾರತವನ್ನು ಓದುತ್ತಿದ್ದರೂ ಕಾಡಿನದೇ ಚಿತ್ರ. ಪಾಂಡವರ ವನವಾಸ, ವೈಶಂಪಾಯನ ಸರೋವರ, ಸೌಗಂಧಿಕಾ ಪುಷ್ಪ, ಮತ್ತಾವುದೋ ಸರೋವರದಲ್ಲಿ ಧುತ್ತೆಂದು ಪ್ರತ್ಯಕ್ಷನಾಗುವ ಯಕ್ಷ, ಕಾಡಿನಲ್ಲಿ ಹಿಡಿಂಬಿಯೆಂಬ ಸುಂದರಿ, ಅಲ್ಲಿ ಎದುರಾಗುವ ಬೇಡ, ಅವನೊಡನೆ ಕಾದಾಡಿ ಪಾಶುಪತಾಸ್ತ್ರ ಪಡೆಯುವ ಅರ್ಜುನ. ಆಗಲೇ ಅವನು ಶಿವನೆಂದು ಗೊತ್ತಾಗುವ ಅಚ್ಚರಿ.

ಕಾಡಿನ ಕತೆಗಳನ್ನು ಬರೆಯಲು ಕುಳಿತಾಗಲೆಲ್ಲ ಇದೇ ನೆನಪು. ನಾವೀಗ ಕಾಡಿನ ಬಗ್ಗೆ ಗಾಢವಾಗಿ ಚಿಂತಿಸಿ ಕತೆ ಬರೆಯುತ್ತೇವೆ, ಕಾದಂಬರಿ ಬರೆಯುತ್ತೇವೆ ಎಂದು ಸಂಭ್ರಮಿಸುವ ಹೊತ್ತಲ್ಲೇ ಹೇಗೆ ಕಾಡು ಅನಾದಿ ಕಾಲದಿಂದ ನಮ್ಮ ಸಾಹಿತ್ಯದಲ್ಲಿ ಬಂದು ಹೋಗಿದೆ ಎಂದು ನೆನೆದು ಖುಷಿಯಾಗುತ್ತದೆ. ಕ್ರಮೇಣ ನಗರಗಳು ಹುಟ್ಟಿಕೊಂಡು ಕಾಡೆಂದರೆ ವನವಾಸ, ವನವಾಸ ಎಂದರೆ ಕಷ್ಟ ಎಂದು ನಂಬಲು ಶುರುವಾಗಿ ಕಾಡಿನ ಕುರಿತು ನಾವು ಹೊಸ ಹೊಸ ಪದಪುಂಜಗಳಲ್ಲಿ ಬರೆಯುತ್ತಿದ್ದಾಗಲೇ ಕಾಡು ಕಣ್ಮರೆಯಾಗುತ್ತಿದೆ.

ಶಿರಾಡಿ ಘಾಟಿನ ರಸ್ತೆಯನ್ನೇ ತೆಗೆದುಕೊಳ್ಳಿ. ಅಲ್ಲಿ ದೊಡ್ಡ ದೊಡ್ಡ ಯಂತ್ರಗಳು ಬಂದು ರಸ್ತೆಯನ್ನು ಅಗೆಯುತ್ತಿವೆ. ಅಲ್ಲೊಂದು ನಾಗರಿಕತೆ ಶುರುವಾಗಿದೆಯೇನೋ ಎಂಬಂತೆ ಮೂರೂ ಹೊತ್ತು ಜನಜಂಗುಳಿ. ಹತ್ತು ವರುಷದ ಕೆಳಗೆ ಆ ರಸ್ತೆಯಲ್ಲಿ ಹೋಗುತ್ತಿದ್ದರೆ ನಿರ್ಜನಹಾದಿ, ನಿರ್ಮಮ ಮೌನ. ಮರಗಳ ಮರ್ಮರ, ಬಿದಿರು ಮೆಳೆಗಳು ಮೈಮರೆಯುವ ಸದ್ದು ಬಿಟ್ಟರೆ ಬೇರೇನೂ ಇಲ್ಲದ ಹಾದಿ. ಇವತ್ತು ಹಾಗಲ್ಲ, ಹೆಜ್ಜೆಗೊಂದು ಹೊಟೆಲ್ಲು, ಮಾರಿಗೊಂದು ಮನೆ. ಕಾಡಿನ ನಿಜವಾದ ಚಿತ್ರ ಬೇಕಿದ್ದರೆ ಮತ್ತೆಲ್ಲಿಗೋ ಹೋಗಬೇಕು.

ಆರ್ ಕೆ ನಾರಾಯಣ್ ಕತೆಗಳಲ್ಲೂ ವಿಚಿತ್ರವಾದ ಕಾಡುಹಾದಿಗಳು ಎದುರಾಗುತ್ತಿದ್ದವು. ಕಾಡಿನ ರಸ್ತೆಯಲ್ಲಿ ಕಾರಲ್ಲಿ ಹೋಗುತ್ತಿದ್ದಾಗ ದಾರಿಯಲ್ಲಿ ಒಬ್ಬ ಸಿಕ್ಕಿ ಹಾದಿ ಕೇಳುತ್ತಾನೆ. ಕಾರಿನಲ್ಲಿ ಕುಳಿತವನು ಹಾದಿ ಹೇಳಿ ಮುಂದೆ ಹೋದರೂ ಆ ವ್ಯಕ್ತಿ ಕಿಟಕಿಯ ಪಕ್ಕದಲ್ಲೇ ಕಾರಿನ ವೇಗದಲ್ಲಿ ಬರುತ್ತಿರುತ್ತಾನೆ. ಅದು ದೆವ್ವ ಎಂದು ಗೊತ್ತಾಗುವ ಹೊತ್ತಿಗೆ, ನಾರಾಯಣ್ ಅದೊಂದು ಕಲ್ಪನೆಯೋ ನಿಜವೋ ಎಂಬ ಗೊಂದಲದಲ್ಲಿ ಕತೆ ನಿಲ್ಲಿಸುತ್ತಾರೆ.

ಮಲೆನಾಡಿನ ಒಂದು ಪಿಶಾಚ ಕತೆಯನ್ನು ಇತ್ತೀಚಿಗೆ ಟಿ ಎನ್ ಸೀತಾರಾಮ್ ಓದಿಸಿದರು. ಅದರಲ್ಲೂ ಅಷ್ಟೇ. ಮಲೆನಾಡಿನ ಹಳ್ಳಿಯೊಂದರ ಚಿತ್ರಣ ಕೊಟ್ಟು, ಅಲ್ಲಿ ಕಾಣಿಸಿಕೊಳ್ಲುವ ಬಾಣಂತಿ ದೆವ್ವವೊಂದನ್ನು ಸೃಷ್ಟಿಸಿ, ಕೊನೆಗೆ ಅದನ್ನು ನಂಬಬೇಡಿ ಎಂದು ಮಾಸ್ತಿ ಕತೆ ಮುಗಿಸುತ್ತಾರೆ. ನಂಬಬೇಡಿ ಅನ್ನುವ ಮಾತಲ್ಲೇ ನಂಬಿಕೆಯಿದೆ. ನಂಬಿ ಅಂದರೆ ಬಹುಶಃ ನಂಬುತ್ತಿರಲಿಲ್ಲವೇನೋ. ಮಾತಿಗಿರುವ ಶಕ್ತಿ ಅದು. ನಂಬಿಕೆಯಾಚೆಗೂ ಭಯ ಹುಟ್ಟಿಸುವ ಚಿತ್ರವನ್ನು ಮಾಸ್ತಿ ಮುಂದಿಡುತ್ತಾರೆ. ಹೆಂಡತಿ ದೆವ್ವದಂತೆ ಕಾಣುವುದು ಈಗ ತಮಾಷೆಯಾಗಿ ಕಂಡರೂ, ಆಕೆಯಲ್ಲಾಗುತ್ತಾ ಹೋಗುವ ಬದಲಾವಣೆ, ಪಕ್ಕದಲ್ಲಿ ಮಲಗಿದ್ದು ದೆವ್ವವೋ ಹೆಂಡತಿಯೋ ಎಂಬ ಅನುಮಾನ ಮತ್ತು ಆಕೆ ರಾತ್ರೋರಾತ್ರಿ ಊರಾಚೆಯ ಪಾಳುಗುಡಿಗೆ ಹೋಗಿ ನಾಲಗೆಯಲ್ಲಿ ದೀಪದ ಬತ್ತಿ ಸರಿಪಡಿಸಿ ಬರುವ ಭಯಾನಕ ಸನ್ನಿವೇಶಗಳು ಆ ಕಾಲಕ್ಕೆ ಎಷ್ಟೊಂದು ರೋಚಕತೆ ಹುಟ್ಟಿಸಿರಬಹುದು ಎಂದು ಅಚ್ಚರಿಯಾಗುತ್ತದೆ.

-2-

10ನನಗೆ ಕಾಡು ಇಷ್ಟವಾಗುವುದು ಬೇರೆ ಕಾರಣಕ್ಕೆ. ಕಾಡು ನಮಗೆ ಪ್ರೀತಿ ಮತ್ತು ವೈರಾಗ್ಯದ ಸಂಕೇತ. ವಾನಪ್ರಸ್ಥಾಶ್ರಮಕ್ಕೆಂದು ಕಾಡಿಗೆ ಹೋದವರು ಅಲ್ಲೇ ಪ್ರೀತಿಸಿ ಜೀವ ಕಳಕೊಂಡ ಪ್ರಸಂಗಗಳಿವೆ. ಕಾಡು ಬಅನ್ನುತ್ತದೆ, ಊರು ಹೋಗು ಅನ್ನುತ್ತದೆ ಎಂಬುದೊಂದು ಹಳೆಯ ಗಾದೆ. ಕಾಡು ಅಂದರೆ ಸಾವು, ಕಾಡು ಅಂದರೆ ಅಂತ್ಯ. ಕಾಡು ಅಂದರೆ ಬದುಕಿನ ಕೊನೆಯ ದಿನಗಳನ್ನು ಕಳೆಯುವ ಜಾಗ.

ಆದರೆ ಆ ಕಾಡಲ್ಲೇ ವಿಶ್ವಾಮಿತ್ರ-ಮೇನಕೆ ಒಂದಾಗುತ್ತಾರೆ. ದುಷ್ಯಂತ ಶಕುಂತಲೆಯನ್ನು ಸಂಧಿಸುತ್ತಾನೆ. ವಸಿಷ್ಠರ ಆಶ್ರಮದಲ್ಲಿ ನಾರುಬಟ್ಟೆ ತೊಟ್ಟುಕೊಂಡಿದ್ದ ಶಕುಂತಲೆ, ರಾಜವೈಭೋಗದ ದುಷ್ಯಂತನನ್ನು ಆಕರ್ಷಿಸಿದ್ದೇ ಒಂದು ಪವಾಡ. ಕಾಡಲ್ಲಿದ್ದ ಶಕುಂತಲೆ ದುಂಬಿಗೆ ಹೆದರಿದ್ದು ಕೂಡ ಅಪೂರ್ವ ನಟನೆಯಾ ಎಂಬ ಅನುಮಾನ.

ಇನ್ನು ಕಾಡಿನ ಬಗ್ಗೆ ಬರೆಯುವುದಿಲ್ಲ ಎಂದು ಕೂತಿರಬೇಕಾದರೆ ಇತ್ತೀಚೆಗೆ ಮತ್ತೆ ಕಾಡು ಕರೆಯಿತು. ಕೇವಲ ಕಾಡುಕೋಣ, ಮೊಲ ಮತ್ತು ನವಿಲುಗಳಿರುವ ಸುಳ್ಯ ಸುಬ್ರಹ್ಮಣ್ಯದ ನಡುವಿನ ಕಾಡಿನೊಳಗೆ ಸುತ್ತಾಡಿ ಬಂದಾಗ ಅನ್ನಿಸಿದ್ದು- ಕಾಡಿನ ಕತೆಗಳಿಗೆ ಕೊನೆಯಿಲ್ಲ. ಆ ಕಾಡೊಳಗೇ ಹಬ್ಬಿದ ವಿದ್ಯುತ್ ತಂತಿ, ಟೆಲಿಫೋನು ವೈರು, ಅಂಥ ಕಾಡನಡುವಿನಲ್ಲೂ ತಣ್ಣಗೆ ಕೆಲಸ ಮಾಡುವ ಇಂಟರ್ನೆಟ್ಟು, ಬೆಂಗಳೂರಲ್ಲಿ ಎಲ್ಲೋ ಕೂತವನು ಕಳುಹಿಸಿದ ಸಂದೇಶ ಅಲ್ಲಿಗೆ ರವಾನೆಯಾಗುವ ತಂತ್ರಜ್ಞಾನ, ಮರಗಳಿಗಿಂತ ಎತ್ತರ ಎದ್ದು ನಿಂತ ಟೆಲಿಫೋನ್ ಟವರ್. ಕಾಡೊಳಗೂ ಒಂದು ನಾಡು.

ನಾವಿಲ್ಲಿ ನಾಡೊಳಗೆ ಕಾಡು ಹುಡುಕಾಡುತ್ತಿರುತ್ತೇವೆ. ಸಣ್ಣ ಸಣ್ಣ ಮನೆಗಳ ಪಕ್ಕ ಗಿಡಗಳನ್ನು ಬೆಳೆಸಿ ಕಾಡುವಾಸಿಗಳಾಗಲು ನೋಡುತ್ತೇವೆ. ವೃದ್ಧಾಪ್ಯಕ್ಕೆ ಸಂಗಾತಿಯಾಗುವುದು ಮರಗಿಡಗಳೇ ಇರಬೇಕು. ಗಿಡಗಳೊಂದಿಗೆ ಮಾತಾಡುವ ಹುಡುಗನ ಬಗ್ಗೆ ಚಿತ್ತಾಲರೊಂದು ಕತೆ ಬರೆದಿದ್ದರು. ಕಾಡ ಮೂಲಕವೆ ಪಥ ಆಗಸಕ್ಕೆ ಎಂದು ಅಡಿಗರು ಬರೆದದ್ದು ಕ್ರಮೇಣ ನಿಜವಾಗುತ್ತದೆ. ಆಕಾಶಕ್ಕೆ ಕಾಡಿನ ಮೂಲಕವೇ ಹಾದಿ. ನಾಡಿನಲ್ಲಿ ಕವುಚಿಕೊಂಡ ಆಕಾಶಕ್ಕೆ ಆ ಸೊಗಸಿಲ್ಲ. ಇದು ಆಕಾಶವೋ ಹೊಗೆಯ ರಾಶಿಯೋ ಎಂದು ನೋಡುವುದಕ್ಕೂ ನಮಗೆ ಪುರುಸೊತ್ತಿಲ್ಲ.

ಕಾಡಿನಲ್ಲಿ ಕೂತು ವೃದ್ಧಾಪ್ಯ ಮತ್ತು ಪ್ರೀತಿಯ ಬಗ್ಗೆ ಚಿಂತಿಸುತ್ತೇನೆ. ಇದ್ದಕ್ಕಿದ್ದಂತೆ ಮಾರ್ಕೆಸ್ ಹೇಳಿದ ಸಾಲೊಂದು ನೆನಪಾಗುತ್ತಿದೆ. ನಾವು ವಯಸ್ಸಾದ ಹಾಗೆ ಪ್ರೀತಿಸುವುದನ್ನು ನಿಲ್ಲಿಸುತ್ತೇವೆ ಅಂತಲ್ಲ, ಪ್ರೀತಿಸುವುದನ್ನು ನಿಲ್ಲಿಸಿದ ದಿನ ನಮಗೆ ವಯಸ್ಸಾಗುತ್ತದೆ. ಇದನ್ನು ವಿವರಿಸುವುದು ಕಷ್ಟ. ಪ್ರೀತಿಸುವುದು ಅಂದರೇನು ಎಂಬುದು ಒಂದೊಂದು ವಯೋಮಾನಕ್ಕೂ ಬದಲಾಗುತ್ತಾ ಹೋಗುವ ಸಂಗತಿ. ಕಾಡಿನ ಪ್ರೀತಿಯೇ ನಿಜವಾದ ಪ್ರೀತಿ ಎಂದು ಉಡಾಫೆಯಾಗಿ ಹೇಳಿಕೆ ಕೊಡುವ ಹೊತ್ತಿಗೇ, ಪಕ್ಕದಲ್ಲಿ ಎಲ್ಲವನ್ನೂ ಸುಮ್ಮನೆ ಅರ್ಥ ಮಾಡಿಕೊಳ್ಳುವ ಸಂಗಾತಿಯಿದ್ದರೆ ಕಾಡು ಮತ್ತಷ್ಟು ಸೊಗಸಾಗಿ ಕಾಣಿಸುತ್ತಿತ್ತೇನೋ ಅನ್ನುವ ಭ್ರಮೆ. ಅಥವಾ ನಂಬಿಕೆ.

ಹಾಗಿದ್ದರೆ ಸೌಂದರ್ಯ ಇರುವುದು ಎಲ್ಲಿ? ನಾವು ಅಪರೂಪಕ್ಕೊಮ್ಮೆ ಕಾಡಿಗೆ ಹೋಗಿ ಜಿಗಣೆ ಕಚ್ಚಿಸಿಕೊಂಡು ಮಳೆಗೆ ಒದ್ದೆಯಾಗಿ ಬಂದು ಪುಳಕಗೊಳ್ಳುತ್ತೇವೆ ನಿಜ. ಆದರೆ ಕಾಡಲ್ಲೇ ವಾಸಿಸುವ ಮಂದಿಗೆ ಹಾಗನ್ನಿಸುತ್ತಾ. ಹಾಗಿದ್ದರೆ ಅಲ್ಲಿದ್ದವರು ನಮಗಿಂತ ಹೆಚ್ಚು ಸುಖಿಗಳಾ. ಸುಖವೆಂಬುದು ಅಲ್ಲಿದೆಯಾ ಇಲ್ಲಿದೆಯಾ.ನಾವಿಲ್ಲಿ ಹಳ್ಳಿಮನೆ, ಹಳ್ಳಿ ತಿಂಡಿ, ಜೋಪಡಿ ಅಂತ ಹೆಸರಿಟ್ಟುಕೊಂಡು ಐಷಾರಾಮದಲ್ಲಿ ಬದುಕುವುದು, ಹಳ್ಳಿಯಲ್ಲಿ ಕಟ್ಟಿಸುವ ಹಾಗೆ ಇಟ್ಟಿಗೆ ಮನೆ ಕಟ್ಟಿಸಿ, ಅದನ್ನು ಹಾಗೇ ಬಿಟ್ಟು ಮನೆಮುಂದೆ ಕನಕಾಂಬರ ಸಂಪಿಗೆ ಮರ ನೆಟ್ಟು ಆಹಾ ಎಂದುಕೊಳ್ಳುವುದು, ಹಳ್ಳಿಯಲ್ಲಿದ್ದವರು ಸಾಕಪ್ಪಾ ಸಾಕು ಎಂದು ನಗರಕ್ಕೆ ಬರಲು ಹಾತೊರೆಯುವುದು ಇದೆಲ್ಲ ಏನು. ನಮ್ಮ ಸತತ ಅತೃಪ್ತಿಯನ್ನು ತೋರಿಸುತ್ತದಾ. ನಾವು ನಿಜಕ್ಕೂ ಬರೀ ಅತೃಪ್ತರಾ. ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಎಂಬ ಸಂಕಟದಲ್ಲಿ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುತ್ತಿದ್ದೇವೆ ಎಂಬ ನೆಮ್ಮದಿಯಲ್ಲಿ ನಾವಿದ್ದೇವಾ.

ಬದುಕು ಏಕತಾನತೆ ಅಂದರು. ಅದೆಷ್ಟು ಒಳ್ಳೆಯ ಪದ ನೋಡಿ. ಏಕತಾನತೆ ಅನ್ನಿಸುವುದೂ ಕೂಡ ಒಂಥರ ಖುಷಿ ಕೊಡುತ್ತದೆ. ಏಕತಾನತೆ ಎಂದು ಯಾವ ಕಾಲದಿಂದ ಹೇಳತೊಡಗಿದ್ದೇವೆ ಎಂದರೆ ಅದೇ ಒಂದು ಸಂಭ್ರಮದ ಸ್ಥಿತಿ. ಯಾಂತ್ರಿಕ ಬದುಕು ಎನ್ನುವುದೂ ಒಂದು ನೆಮ್ಮದಿಯ ಸ್ಥಿತಿ. ಬದುಕು ಯಾಂತ್ರಿಕ ಆಗಿರದೇ ಹೋಗಿದ್ದರೆ ಹೇಗಿರುತ್ತಿತ್ತು. ಮೂರು ಹೊತ್ತೂ ಕೆಲಸ ಅಂತ ಒದ್ದಾಡುವವನ್ನು ನಾಳೆಯಿಂದ ಏನೂ ಮಾಡಬೇಡ, ಸುಮ್ಮನಿರು ಎಂದರೆ ಸುಖಿಯಾಗಿರುತ್ತಾನಾ.

ಅಲ್ಲಿ ಮತ್ತೊಂದು ಭಯ. ಸುಮ್ಮನಿರುವುದು ಎಲ್ಲಕ್ಕಿಂತ ಕಷ್ಟ. ಅದಮ್ಯವಾದ ಜೀವನೋತ್ಸಾಹಕ್ಕೆ ಅದು ವಿರುದ್ಧ ಪದ. ನಾವು ಹೀಗೇ ಏನೇನೋ ಮಾಡುತ್ತಾ, ಯಾರನ್ನೋ ಟೀಕಿಸುತ್ತಾ, ಯಾರನ್ನೋ ಮೆಚ್ಚಿಕೊಳ್ಳುತ್ತಾ, ಯಾರನ್ನೋ ಪ್ರೀತಿಸುತ್ತಾ ಸುಮ್ಮಗೆ ಬದುಕಿರುತ್ತೇವೆ. ಹಾಗೆ ಬದುಕುವುದರಲ್ಲೇ ಸುಖವಿದೆ. ಅದ್ಯಾವುದೂ ಇಲ್ಲದ ಶೂನ್ಯ ಸ್ಥಿತಿಗೆ ತಲುಪಿದರೆ ಅದು ಸನ್ಯಾಸ. ಈ ಲೋಕದ ಆಸಕ್ತಿಗಳನ್ನು ತೊರೆದು ಮತ್ಯಾವುದಕ್ಕೋ ತುಡಿಯುತ್ತಾ ಕಾಯುತ್ತಾ ಕೂರುವ ಸ್ಥಿತಿ. ಮೋಕ್ಷಗಾಮಿ ಪ್ರವೃತ್ತಿ.

ಕ್ರಿಯಾಶೀಲತೆ ನಮ್ಮ ನಮ್ಮ ನೆಮ್ಮದಿಗಳನ್ನು ನಮಗೆ ಕೊಟ್ಟಿದೆ. ಏನಾದರೂ ಬರೆಯುತ್ತಾ ಓದುತ್ತಾ ದುಡಿಯುತ್ತಾ ಸಿನಿಮಾ ನೋಡುತ್ತಾ ಪ್ರೀತಿಸುತ್ತಾ ಜಗಳಾಡುತ್ತಾ ನಾವು ಸುಖವಾಗಿದ್ದೇವೆ. ಫಲಾಫಲಗಳನ್ನು ನನಗೆ ಬಿಡು. ನೀನು ಸುಮ್ಮನೆ ದುಡಿಯುತ್ತಿರು ಎಂಬುದೇ ಅಂತಿಮ ಸತ್ಯವಾ ಹಾಗಿದ್ದರೆ. ಅದೂ ಕೂಡ ಕಷ್ಟ. ಹಂಬಲ ಮತ್ತು ಫಲಾಪೇಕ್ಷೆ ಇರಬೇಕು. ಅದನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡಿರಬೇಕು.

ಇದ್ದಕ್ಕಿದ್ದಂತೆ ಒಂದು ಪ್ರಶ್ನೆ ಎದುರಾಯಿತು. PASSION ಅಂದರೇನು? ತೀವ್ರ ವ್ಯಾಮೋಹ ಅಂದೆ ನಾನು. ಯಾಕೆ ತೀವ್ರ ವ್ಯಾಮೋಹ ಹುಟ್ಚುತ್ತದೆ ಎಂಬ ಮತ್ತೊಂದು ಪ್ರಶ್ನೆ ಬಂತು. ಅದಕ್ಕೆ ಉತ್ತರ ಇರಲಿಲ್ಲ.

ಬದುಕಿನ ಮೂಲ ಪ್ರೇರಣೆಯಲ್ಲಿ ಅದೂ ಒಂದೇನೋ. ತೀವ್ರವಾಗಿ ತೊಡಗಿಸಿಕೊಳ್ಳದೇ ಹೋದರೆ ನಾವು ಜಡವಾಗುತ್ತಾ ಹೋಗುತ್ತೇವೇನೋ. ಮರ ವರುಷಕ್ಕೊಮ್ಮೆ ಎಲೆಯುದುರಿಸಿಕೊಂಡು ಮತ್ತೆ ಚಿಗುರಿ ಹೂವಾಗಿ ಕಾಯಿಬಿಟ್ಟು ಮತ್ತೆ ಎಲೆಯುದುರಿಸಿಕೊಳ್ಳುವ ಹಾಗೆ ನಾವೂ.

ಒಮ್ಮೊಮ್ಮೆ ಖಿನ್ನ, ಮತ್ತೊಮ್ಮೆ ಭಿನ್ನ. ಆಗೊಂದು ನಗೆ, ಈಗೊಂದು ದಿಗಿಲು. ಒಂದು ಹರ್ಷೋದ್ಗಾರ, ಮತ್ತೊಂದು ನಿಟ್ಟುಸಿರು. ಕಾಡು ನಮ್ಮೊಳಗೇ ಇದೆ. ಅಲ್ಲಿ ನಾವು ಅಜ್ಞಾತವಾಸ, ವನವಾಸ ಮತ್ತು ಸುದೀರ್ಘ ಹಾದಿಯಲ್ಲಿ ನಿನ್ನೆಗಳೆಂಬ ತರಗೆಲೆಗಳನ್ನು ತುಳಿಯುತ್ತಾ ಸಾಗುತ್ತಿರುತ್ತೇವೆ.

ಎಳೆಬಿಸಿಲು, ಚುಮುಚುಮು ಚಳಿ, ಸುಡುಬಿಸಿಲು ಮತ್ತು ಬಿರುಮಳೆ ನಮ್ಮನ್ನು ಅರಳಿಸುತ್ತಾ ಮಾಗಿಸುತ್ತಾ ಕಾಯಿಸುತ್ತಾ ಸಾಯಿಸುತ್ತಾ ಬದುಕಿಸುತ್ತಾ ..

ನಾಳೆಯೆಂಬುದು ನಿಗೂಢ ಮತ್ತು ಜಗಜ್ಜಾಹೀರು

(ಎಂದೋ ಬರೆದದ್ದು ಮತ್ತೆ ನಿಮ್ಮ ಮುಂದೆ)

‍ಲೇಖಕರು avadhi

August 14, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

4 ಪ್ರತಿಕ್ರಿಯೆಗಳು

 1. Harish Kera

  ಪ್ರಿಯ ಜೋಗಿ,
  ‘ಎಂದೋ ಬರೆದದ್ದಾ’ದರೂ ಮತ್ತೆ ಓದಿಕೊಂಡೆ. ‘ಕೇವಲ ಕಾಡುಕೋಣ, ಮೊಲ ಮತ್ತು ನವಿಲುಗಳಿರುವ ಸುಳ್ಯ ಸುಬ್ರಹ್ಮಣ್ಯದ ನಡುವಿನ ಕಾಡು’ ಅಂದಿದ್ದೀರಿ. ಇದು ನಾನು ಹುಟ್ಟಿ ಬೆಳೆದ ಪ್ರದೇಶ. ಇಪ್ಪತ್ತು ವರ್ಷಗಳ ಹಿಂದೆ, ನಾನು ಚಿಕ್ಕವನಾಗಿದ್ದಾಗ ಇಲ್ಲಿಗೆ ಬಿಸಿಲೆ ಹಾಗೂ ಸಂಪಾಜೆಯ ಆನೆಗಳು ಸರ್ಕೀಟು ಬರುತ್ತಿದ್ದುದು ನೆನಪಿದೆ. ನನ್ನ ಮನೆಯ ಪಕ್ಕದ ಬಂಟಮಲೆ ಗುಡ್ಡದಲ್ಲೇ ಚಿಟ್ಟೆ ಹುಲಿಯ ಸೀಳುಕೂಗು ಕೇಳಿದ್ದೇನೆ. ಕಡವೆಗಳು ಈಗಲೂ ಅಲ್ಲಿ ಕೆಮ್ಮುತ್ತ ಓಡಾಡುತ್ತವೆ. ಇದನ್ನೆಲ್ಲ ನೆನಪಿಸಿಕೊಂಡು, ಮತ್ತೆ ಉಜ್ಜೀವಿಸುವಂತೆ ಮಾಡಿರುವುದೇ ನಿಮ್ಮ ಬರಹದ ಶಕ್ತಿ ಎನ್ನಬಹುದು.
  ‘ಹೆಜ್ಜೆಗೊಂದು ಹೊಟೆಲ್ಲು, ಮಾರಿಗೊಂದು ಮನೆ. ಕಾಡಿನ ನಿಜವಾದ ಚಿತ್ರ ಬೇಕಿದ್ದರೆ ಮತ್ತೆಲ್ಲಿಗೋ ಹೋಗಬೇಕು…’ ನಿಜ, ಆದರೆ ಎಲ್ಲಿಗೆ ಹೋಗಬೇಕು ? ಎಲ್ಲವೂ ಬದಲಾಗುತ್ತವೆ, ನಾವೂ ಕೂಡ. ನಮ್ಮ ನಂತರ ಹುಟ್ಟಿದವರಿಗೆ ಈ ಹಳವಂಡ ಕೂಡ ಇಲ್ಲ. ಅಷ್ಟರ ಮಟ್ಟಿಗೆ ನಾವು ‘ಭೂತಕಾಲದ ಭ್ರೂಣಗೂಢಗಳು’.
  – ಹರೀಶ್ ಕೇರ

  ಪ್ರತಿಕ್ರಿಯೆ
  • ರಂಜಿತ್

   ಜೋಗಿ,

   ಬರಹ, ಅದರೊಳಗಿನ ಚಿಂತನೆ ಇಷ್ಟವಾಯ್ತು. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ನಾನು (ವೃತ್ತಿಯ ನಿಟ್ಟಿನಿಂದ) ಇಂಥ ಕಾಡುನಾಶಕ್ಕೆ ಪರೋಕ್ಷವಾಗಿ ಕಾರಣವೇನೋ ಎಂಬ ಗಿಲ್ಟ್ ಮನದ ಮೂಲೆಯಲ್ಲಿದೆ. ಒಂದು ಕಡೆ ಕಾಡಿನೆಡೆಗೆ ತುಡಿತ, ಭಾವುಕ ಪ್ರೀತಿ ಇನ್ನೊಂದು ಕಡೆ ವೃತ್ತಿ ಎರಡನ್ನೂ ಸಂಯೋಜಿಸಿ ಆಲೋಚಿಸುವುದನ್ನು ಕಲಿತಿಲ್ಲ.

   ಎಲ್ಲದಕ್ಕೂ ಜನಸಂಖ್ಯೆ ಹೆಚ್ಚಳ ಕಾರಣ; ನನ್ನ ವೃತ್ತಿಯಲ್ಲ ಅಂತ ಮನಕ್ಕೆ ನಂಬಿಸಿದ ದಿನ ಸ್ವಲ್ಪ ಮನಶಾಂತಿ.

   ಪ್ರತಿಕ್ರಿಯೆ
 2. prakash hegde

  ಜೋಗಿ…

  ದಟ್ಟ ಕಾಡಿನ ತಪ್ಪಲಲ್ಲಿ ಹುಟ್ಟಿ ಬೆಳೆದು..
  ಇಂದಿನ ನನ್ನೂರಿನ ಚಿತ್ರಣ ಕಣ್ಣೆದುರಿಗೆ ಬಂತು…
  ನನ್ನೂರಿಗೆ ಸೂರ್ಯನ ಮೊದಲ ಕಿರಣ ಈಗಲೂ ಬೆಳಿಗ್ಗೆ ಹತ್ತು ಗಂಟೆಯ ಮೇಲೆ..
  ನಾಲ್ಕು ಗಂಟೆಗೆ ಸೂರ್ಯ ಮುಳುಗುತ್ತಾನೆ…
  ಕವಿಗಳ ಕೆಂಪು ಸೂರ್ಯನನ್ನು ಕಂಡಿದ್ದು ನಾನು ಹೈಸ್ಕೂಲ್ ಹೋಗುವಾಗ…

  ಅಲ್ಲಿನ ವೈರುಧ್ಯಗಳು…
  ಆಧುನಿಕತೆ ಗಾಳಿ….
  ಕಾಡುವ ಕಾಡಿನ ಸೆಳೆತ…

  ಇಷ್ಟವಾಯಿತು ನಿಮ್ಮ ಬರಹ…

  ಪ್ರತಿಕ್ರಿಯೆ
 3. ವಿಜಯರಾಜ್ ಕನ್ನಂತ

  nimma ella kaaDina kuritaada barahagaLanate idoo thumbaa ishta aaytu…
  kaaDu haLeyadaadarenu… anubhava navanaveena

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: