ಜೋಗಿ ಬರೆದಿದ್ದಾರೆ: ಯಾವ ವಾಹನ ಮೋಹ ಕರೆಯಿತು..


ಜೀಪು ರಸ್ತೆ ಮಧ್ಯ ಅಡ್ಡಡ್ಡ ನಿಂತೇ ಬಿಟ್ಟಿತು. ಮುಂದಕ್ಕೂ ಚಲಿಸುತ್ತಿರಲಿಲ್ಲ, ಹಿಂದಕ್ಕೂ. ಮುಂದಕ್ಕೆ ಹೋಗುವಂತೆಯೇ ಇರಲಿಲ್ಲ. ರಿವರ್ಸ್ ತೆಗೆದುಕೊಳ್ಳದೇ ಅಲ್ಲಾಡುವ ಹಾಗಿರಲಿಲ್ಲ. ನೋಡುತ್ತೇನೆ, ಆ ಜೀಪಿಗೆ ರಿವರ್ಸ್ ಗೇರ್ ಇಲ್ಲವೇ ಇಲ್ಲ.
ಹಾಗೆ ಒದ್ದಾಡುತ್ತಾ ಸುಮಾರು ಒಂದೂವರೆ ಗಂಟೆ ಕಳೆದದ್ದಾಯಿತು. ಅಷ್ಟು ಹೊತ್ತಿಗೆ ಒಂದು ಲಾರಿ ಬಂತು. ಆ ಕತ್ತಲಲ್ಲಿ ಮಿಣ ಮಿಣ ದೀಪ ಹಾಕಿಕೊಂಡು ಬರುತ್ತಿದ್ದ ಅವನಿಗೆ ನನ್ನ ಕಪ್ಪು ಜೀಪು ಕಂಡದ್ದೇ ಆಶ್ಚರ್ಯ. ಕಂಡದ್ದೇ ತಡ, ಹೆಡ್‌ಲೈಟು ಆನ್ ಆಫ್ ಮಾಡಿ, ಹಾರ್ನ್ ಒತ್ತಿ ಗದ್ದಲ ಶುರು ಮಾಡಿದ. ನಾನು ಜೀಪಿನಿಂದ ಇಳಿದು, ಇದು ಕೆಟ್ಟು ಹೋಗಿದೆ ಎಂಬಂತೆ ಕೈ ಮಾಡಿದೆ. ಅವನು ಬೈಯುತ್ತಾ ಕೆಳಗಿಳಿದು ಬಂದು ಜೀಪು ಸ್ಟಾರ್ಟ್ ಮಾಡಿ ಪಕ್ಕಕ್ಕೆ ನಿಲ್ಲಿಸಿದ. ಯಾಕ್ರೀ ನಮ್ಮ ಜೀವ ತಿಂತೀರಿ ಅಂತ ಗೊಣಗಾಡುತ್ತಾ ಹೊರಟು ಹೋದ.

ಮಾರನೆಯ ಮುಂಜಾನೆಯಿಂದಲೇ ಶುರುವಾಯಿತು ನನ್ನ ರಿವರ್ಸ್ ಗೇರ್ ಕಾರ್ಯಾಚರಣೆ. ನನ್ನ ಪುಟ್ಟ ಅಂಗಡಿಯ ಮುಂದೆ ಜೀಪು ನಿಲ್ಲಿಸಿ ರಿವರ್ಸ್ ತೆಗೆಯುವುದನ್ನು ಅಭ್ಯಾಸ ಮಾಡುವುದು. ಜೀಪು ಹಿಂದಕ್ಕೆ ಚಲಿಸುತ್ತಿದ್ದಂತೆ ಗಾಬರಿ ಶುರುವಾಗುತ್ತಿತ್ತು. ಅಲ್ಲದೇ ಅದು ನನಗೆ ಬೇಕಾದ ವೇಗದಲ್ಲಿ ಹಿಂದಕ್ಕೆ ಚಲಿಸುತ್ತಿರಲಿಲ್ಲ. ನನಗೆ ಸಹಾಯ ಮಾಡುವುದಕ್ಕೆ ನನ್ನ ಅಂಗಡಿ ಪಕ್ಕದಲ್ಲಿ ಗಣೇಶ ಬೀಡಿಯ ಬ್ರಾಂಚ್ ಇಟ್ಟುಕೊಂಡಿದ್ದ ಯಾಕೂಬ್ ಇದ್ದ. ಅವನು ಹಿಂದೆ ನಿಂತುಕೊಂಡು ರೈಟ್ ಬಲೇ’ ಅಂತ ಇಂಗ್ಲಿಷ್ ಮಿಶ್ರಿತ ತುಳುವಿನಲ್ಲಿ ಹೇಳುತ್ತಿದ್ದ. ಅವನ ಮೇಲೆ ಜೀಪಿಗೆ ಅದ್ಯಾವ ಸಿಟ್ಟಿತ್ತೋ ಏನೋ? ಅವನು ಸರಿಯಾಗಿ ಜೀಪಿನ ಹಿಂಭಾಗಕ್ಕೆ ಬರುತ್ತಿದ್ದಂತೆ ಜೀಪು ಅತಿವೇಗದಲ್ಲಿ ಹಿಂದಕ್ಕೆ ಧಾವಿಸಿತು. ಅವನೇನಾದರೂ ಸಮಯಸ್ಪೂರ್ತಿಯಿಂದ ಪಕ್ಕಕ್ಕೆ ಹಾರಿ ತಪ್ಪಿಸಿಕೊಳ್ಳದೇ ಹೋಗಿದ್ದರೆ, ನಾನು ಜೈಲಿನಲ್ಲಿರುತ್ತಿದ್ದೆ.  ಆ ಕ್ಷಣ ನನಗೆ ಕೇಳಿಸಿದ್ದು ಯಾ ಅಲ್ಲಾ’ ಎಂಬ ಕೂಗು ಮತ್ತು ದಢ್ ಎಂಬ ಸದ್ದು. ಜೀಪು ರಸ್ತೆಯ ಬದಿಯ ಮೈಲುಕಲ್ಲಿಗೆ ಬಡಿದಿತ್ತು. ಅದರ ರಿಪೇರಿಗೆ ಆ ಕಾಲದಲ್ಲಿ ಖರ್ಚಾದದ್ದು ಒಂಬತ್ತು ಸಾವಿರ ರುಪಾಯಿ.
ವಾಹನಗಳ ಪ್ರಪಂಚ  ಅಷ್ಟೊಂದು ವೈವಿಧ್ಯಮಯವೂ ವಿಚಿತ್ರ ಆಕರ್ಷಣೆಯುಳ್ಳದ್ದೂ ಆಗಿರುತ್ತದೆ ಎಂಬುದು ನನಗೆ ಆಮೇಲೆ ಗೊತ್ತಾಗುತ್ತಾ ಬಂತು. ಪದ್ಮುಂಜ ಎಂಬ ಪುಟ್ಟ ಊರಲ್ಲಿ ಹಳೇ ಪಟೇಲರೊಬ್ಬರಿದ್ದರು. ಅವರ ಬಳಿ ಅವರಿಗಿಂತ ಹಳೆಯ ಕಾರೊಂದಿತ್ತು. ಕೆಂಪು ಬಣ್ಣದ ಆ ಕಾರನ್ನು ಅವರು ಓಡಿಸಿದ್ದನ್ನು ನಾನಂತೂ ನೋಡಿಲ್ಲ. ಕಾರಿನ ಮುಂಭಾಗಕ್ಕೆ ಒಂದು ಹ್ಯಾಂಡಲ್ ಹಾಕಿ ತಿರುವಿ ಅದನ್ನು ಸ್ಟಾರ್ಟ್ ಮಾಡಬೇಕಾಗಿತ್ತು. ಅದ್ಯಾವುದೋ ಹಳೇ ಕಾಲದ, ಕಿತ್ತು ಹೋದ ಕಾರು ಅಂತ ನಾನಂದುಕೊಂಡಿದ್ದೆ. ಆದರೆ ಒಮ್ಮೆ ಹತ್ತಿರದಿಂದ ನೋಡಿದಾಗ ಅದರ ಹೆಸರು ಓದಿ ರೋಮಾಂಚನವಾಯಿತು. ಅದು ಇಂಗ್ಲೆಂಡಿನ ಕಾರು. ಅದರ ಬೆನ್ನಲ್ಲಿ ಆಸ್ಟಿನ್ ಆಫ್ ಇಂಗ್ಲೆಂಡ್ ಎಂದು ಬರೆದದ್ದು ಅಷ್ಟು ವರ್ಷಗಳಾದ ಮೇಲೂ ಹೊಳೆಹೊಳೆಯುತ್ತಿತ್ತು. ಆ ಮಾಡೆಲ್ಲಿನ ನಿರ್ಮಾಣ ನಿಂತುಹೋಗಿಯೇ ಐವತ್ತೋ ಅರುವತ್ತೋ ವರ್ಷಗಳಾಗಿದ್ದಿರಬೇಕು. ಅದರ ಸ್ಪೇರ್ ಪಾರ್ಟ್‌ಗಳೊಂದೂ ಸಿಗುತ್ತಲೇ ಇರಲಿಲ್ಲ. ನಮ್ಮೂರಿನ ದಾಸ ಎಂಬ ಮೆಕ್ಯಾನಿಕ್ ಮಾತ್ರ ಅದನ್ನು ರಿಪೇರಿ ಮಾಡಬಲ್ಲವನಾಗಿದ್ದ. ಯಾವ ಪಾರ್ಟ್ ಕಳಚಿಹೋದರೂ ಅವನು ಮತ್ಯಾವುದೋ ಬಿಡಿಭಾಗವನ್ನು ತಂದು, ಅದನ್ನು ತಿಕ್ಕಿ,ತೇದು, ಸಾಣೆ ಹಿಡಿದು ಇದಕ್ಕೆ ಒಪ್ಪುವ ಹಾಗೆ ಮಾಡಿ ಪಟೇಲರನ್ನು ಸಂತೋಷಪಡಿಸುತ್ತಿದ್ದ. ಅದಕ್ಕೆ ಪ್ರತಿಯಾಗಿ ಅವನಿಗೆ ಸಿಗುತ್ತಿದ್ದದ್ದು, ಯಾವತ್ತೂ ನಗದ ಪಟೇಲರ ಧಾರಾಳ ನಗು ಮತ್ತು ಕೈತುಂಬ ಮೆಚ್ಚುಗೆ. ಅವನಿಗೆ ಪಟೇಲರ ಕಾರು ರಿಪೇರಿ ಮಾಡಬಲ್ಲೆ ಹಾಗೂ ಫಾರಿನ್ ಕಾರು ರಿಪೇರಿ ಮಾಡುತ್ತೇನೆ ಎಂಬ ಹೆಮ್ಮೆ. ಅಂಬಾಸಡರ್ ಕಾರುಗಳನ್ನು ರಿಪೇರಿಗೆ ತಂದವರು ನಿನ್ನ ಕೈಲಾಗುತ್ತಾ’ ಅಂತ ಕೇಳಿದರೆ ಆತ ಹೋಗ್ರೀ, ಇದ್ಯಾವ ಲೆಕ್ಕ, ಫಾರಿನ್ ಕಾರೇ ರಿಪೇರಿ ಮಾಡಿಕೊಟ್ಟಿದ್ದೀನಿ’ ಎಂದು ಗತ್ತಿನಿಂದ ಹೇಳಿಕೊಳ್ಳುತ್ತಿದ್ದ.
ಅದಕ್ಕೂ ಮುಂಚೆ ನಮ್ಮೂರಿನ ಶೆಟ್ಟರೊಬ್ಬರು ಬುಲೆಟ್ ಓಡಿಸುತ್ತಿದ್ದರು. ಆ ಕಾಲಕ್ಕೆ ಅದೇ ಬೈಕುಗಳ ರಾಜ. ಅದರಲ್ಲಿ ಕುಳಿತುಕೊಂಡು ಅವರು ಡಗ್.ಡಗ್..ಡಗ್’ ಸದ್ದು ಮಾಡುತ್ತಾ ನಿಧಾನವಾಗಿ ಹೊರಟರೆಂದರೆ ಅದು ಜಂಬೂಸವಾರಿ. ಅದನ್ನು ಹೇಗಾದರೂ ಓಡಿಸಬೇಕು ಎಂಬ ಹಟ ನಮಗೆ. ಆ ಶೆಟ್ಟರೋ ಅದನ್ನು ಮುಟ್ಟುವುದಕ್ಕೂ ಕೊಡುತ್ತಿರಲಿಲ್ಲ. ನಮ್ಮ ಗೆಳೆಯರ ಪೈಕಿ ಕೆಲವರು ಶೆಟ್ರ ಬುಲೆಟ್ ನೋಡಿದೆ, ಇವತ್ತು ಅದರ ಹ್ಯಾಂಡಲ್ ಮುಟ್ಟಿದೆ’ ಅಂತ ಹೇಳಿಕೊಂಡು ನಮ್ಮ ಹೊಟ್ಟೆ ಉರಿಸುತ್ತಿದ್ದರು.
ಕೊನೆಗೂ ಅದನ್ನು ಮುಟ್ಟುವ ಅವಕಾಶ ಸಿಕ್ಕಿದ್ದು ನಮ್ಮ ಗುಂಪಿನಲ್ಲಿ ಅತ್ಯಂತ ನಿಕೃಷ್ಟನೆಂದು ನಾವು ತೀರ್ಮಾನಿಸಿದ ಗಿರಿಯಣ್ಣನಿಗೆ. ಒಂದು ಸಾರಿ ವೇಣೂರಿನಿಂದ ಬರುವ ದಾರಿಯಲ್ಲಿ ಶೆಟ್ಟರ ಬೈಕು ಗಕ್.. ಗಕ್.. ’ ಎಂದು ಸದ್ದು ಮಾಡುತ್ತಾ ನಿಂತೇ ಹೋಯಿತು. ಅದನ್ನು ಅವರು ತಳ್ಳಿಕೊಂಡು ಒಂದೆರಡು ಮೈಲಿ ಸಾಗುವಷ್ಟರಲ್ಲೇ ಅದರ ಭಾರಕ್ಕೆ ಸುಸ್ತಾಗಿ, ಬೆವರಿ,ಬಳಲಿ ಅವರಿಗೆ ಕೈಕಾಲು ಬಿದ್ದೇ ಹೋದಂತಾಯಿತು. ಅವರು ಅದನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ  ಬರುವ ಹಾಗೂ ಇರಲಿಲ್ಲ. ಅಲ್ಲೆಲ್ಲೋ ಸೈಕಲ್ಲಿನಲ್ಲಿ ಹೋಗುತ್ತಿದ್ದ ಗಿರಿಯಣ್ಣನನ್ನು ಕರೆದು ಬೈಕನ್ನು ಮನೆ ತನಕ ತಳ್ಳಿಕೊಂಡು ಬರಲು ಹೇಳಿ ಶೆಟ್ಟರು ಸೈಕಲ್ ಏರಿ ಮಾಯವಾದರು.
ಗಿರಿಯಣ್ಣ ಅಪರ ವಯಸ್ಸಲ್ಲಿ ಮದುವೆಯಾದವನಂತೆ ಸಂಭ್ರಮಿಸಿದ.  ಬೈಕು ಹತ್ತಿ ಕೂತು, ಅದನ್ನು ತಬ್ಬಿಮುದ್ದಾಡಿ ಸಂತೋಷಪಟ್ಟ. ಒಂದಷ್ಟು ದೂರ ತಳ್ಳಿಕೊಂಡು ಬರುವುದು. ಆಮೇಲೆ ಅದರ ಮೇಲೆ ಕೂರುವುದು, ಮತ್ತೆ ತಳ್ಳಿಕೊಂಡು ಬರುವುದು ಹೀಗೆ ಅವನ ಸವಾರಿ ಸಾಗಿತು. ಅದನ್ನು ಶೆಟ್ಟರ ಮನೆಗೆ ತಲುಪಿಸುವಷ್ಟರಲ್ಲಿ ಅವನೂ ಸುಸ್ತಾಗಿ ಹೋಗಿದ್ದ. ಆದರೆ ಶೆಟ್ಟರ ಬೈಕನ್ನು ಹ್ಯಾಂಡಲ್ ಮಾಡಿದವನು ಎಂಬ ಖ್ಯಾತಿಯಂತೂ ಅವನ ಪಾಲಾಯಿತು. ಆಮೇಲೆ ಪೇಟೆಯಲ್ಲಿ ಅವರ ಬೈಕು ನಿಂತಿದ್ದರೆ, ಗಿರಿಯಣ್ಣ ಧೈರ್ಯವಾಗಿ ಅದರ ಪಕ್ಕದಲ್ಲಿ ನಿಂತುಕೊಳ್ಳುವಷ್ಟು ಧೈರ್ಯಸ್ತನೂ ಆದ.
ಆ ಧೈರ್ಯವೇ ಅವನ ಕಾಲು ಮುರಿಯುವುದಕ್ಕೂ ಕಾರಣವಾಯಿತು. ಒಂದು ದಿನ ನಾವೆಲ್ಲ ಸೇರಿ ಅವನನ್ನು ಚೆನ್ನಾಗಿ ಗೇಲಿ ಮಾಡಿದೆವು. ಬೈಕು ತಳ್ಳಿಕೊಂಡು ಹೋಗುವುದಷ್ಟೇ ಗೊತ್ತು. ಅದನ್ನು ಹೇಗೆ ಸ್ಟಾರ್ಟ್ ಮಾಡಬೇಕು ಅನ್ನುವ ಜ್ಞಾನ ಇಲ್ಲ ಎಂದು ರೇಗಿಸಿದೆವು. ಗಿರಿಯಣ್ಣನಿಗೆ ಸಿಟ್ಟು ಬಂದರೂ ಸುಮ್ಮನಿದ್ದ. ಮತ್ತೊಂದು ದಿನ ರಾತ್ರಿ ಶೆಟ್ಟರ ಬೈಕು ಕಂಡಾಗ ಬನ್ರೋ, ಹೇಗೆ ಸ್ಟಾರ್ಟ್ ಮಾಡಬೇಕು ತೋರಿಸ್ತೀನಿ’ ಎಂದು ಕರೆದುಕೊಂಡು ಹೋಗಿ ಕಿಕರ್‌ಗೆ ಒದ್ದ. ಅವನು ಒದ್ದಿದ್ದಕ್ಕೆ ಎರಡರಷ್ಟು ವೇಗದಲ್ಲಿ ಕಿಕರ್ ವಾಪಸ್ ಬಡಿಯಿತು. ಮೊಣಕಾಲಿಗೆ ಕಿಕರ್ ಬಡಿದ ವೇಗಕ್ಕೆ ಅವನು ಹಿಂದಕ್ಕೆ ಹಾರಿಬಿದ್ದಿದ್ದ. ಒಂದೂವರೆ ತಿಂಗಳು ಕುಂಟುತ್ತಿದ್ದ. ಇವತ್ತಿಗೂ ಅವನ ಹೆಸರು ಬುಲೆಟ್ ಗಿರಿ.
ಶ್ರೀಶ್ರೀಶ್ರೀಶ್ರೀಶ್ರೀ
ವಾಹನದ ಮೋಹವೇ ಹಾಗೆ. ಮೊನ್ನೆ ಪ್ರಕಾಶ್ ರೈ ಹೇಳುತ್ತಿದ್ದರು. ಚಿಕ್ಕಂದಿನಲ್ಲಿ ಕಾರಲ್ಲಿ ಕುಳಿತು ಸಿಗರೇಟು ಸೇದುತ್ತಾ ಹೋಗುವವರನ್ನು ಕಂಡಾಗ ಒಂದಲ್ಲ ಒಂದು ದಿನ ಹಾಗೆ ಮಾಡಬೇಕು ಅನ್ನಿಸುತ್ತಿತ್ತು. ನಾನು ಮಾರುತಿ ಕಾರು ಕೊಂಡ ತಕ್ಷಣ ಮಾಡಿದ್ದೇ ಅದನ್ನು. ಸಿಗರೇಟು ಸೇದುತ್ತಾ ಕಾರ್ ಡ್ರೈವ್ ಮಾಡಿದ್ದು. ಆಮೇಲೂ ಅಷ್ಟೇ, ಎಷ್ಟೋ ಸಾರಿ ಸಿಗರೇಟು ಸೇದುವುದಕ್ಕೆಂದೇ ಕಾರು ತಗೊಂಡು ಹೊರಡುತ್ತಿದ್ದೆ. ಎಲ್ಲಿಗೆ ಹೋಗಿದ್ದೆ ಅಂತ ಕೇಳಿದರೆ ಸಿಗರೇಟು ಸೇದೋದಕ್ಕೆ’ ಅಂತಿದ್ದೆ.  ಇಲ್ಲೇ ಸೇದಬಹುದಲ್ಲ’ ಅಂತಿದ್ದರು ಗೆಳೆಯರು. ಕಾರಲ್ಲೇ ಸೇದಿದರೇ ಗಮ್ಮತ್ತು. ಅದಕ್ಕೆಂದೇ ಒಂದು ರೌಂಡು.
ಕಾರಲ್ಲಿ ಹೆಂಡತಿಗಿಂತ ಹೆಚ್ಚು ಪ್ರೀತಿಸುವವರಿದ್ದಾರೆ. ಬೈಕನ್ನು ದಿನವೂ ಒರೆಸಿ, ಪ್ರೀತಿಯಿಂದ ನೋಡಿಕೊಳ್ಳುವವರಿದ್ದಾರೆ. ಇವತ್ತಿಗೂ ಕಾರ್ ಮ್ಯಾಗಜಿನ್‌ಗಳನ್ನು ಕೊಳ್ಳುವವರು ತರುಣ ತರುಣಿಯರೇ. ಹೆಣ್ಮಕ್ಕಳ
ರೂಮಲ್ಲಿ ವಿದೇಶಿ ಕಾರುಗಳ ಪೋಸ್ಟರುಗಳು. ಪುಷ್ಪಕ ವಿಮಾನದಂತಿರುವ, ವಿಚಿತ್ರ ಆಕಾರದ ಕಾರುಗಳನ್ನು ನೋಡುತ್ತಿದ್ದರೆ,ಏನೋ ಮೋಹ, ಯಾಕೋ ದಾಹ! ಜೇಮ್ಸ್ ಬಾಂಡ್ ಸಿನಿಮಾಗಳಲ್ಲಂತೂ ಕಾರು ಇದ್ದಕ್ಕಿದ್ದಂತೆ ಮೋಟರ್ ಬೋಟಾಗಿ,ಸಬ್‌ಮರೀನ್ ಆಗಿ, ವಿಮಾನವಾಗಿ ಬದಲಾಗುತ್ತಿರುತ್ತೆ. ಮೊಬೈಲ್ ಫೋನಿನಂಥ ಪುಟ್ಟದೊಂದು ರಿಮೋಟ್ ಕಂಟ್ರೋಲ್ ಇಟ್ಟುಕೊಂಡು ಹಿಂದಿನ ಸೀಟಲ್ಲಿ ಅಡಗಿ ಕೂತು ಅವನು ಕಾರು ಓಡಿಸುತ್ತಾನೆ. ಕಾರಿನೊಳಗಿಂದ ಏನೇನೋ ಅಸ್ತ್ರಗಳು ಹೊರಬಿದ್ದು ಶತ್ರುನಾಶ ಮಾಡುತ್ತವೆ. ಒಂದು ಕಾಲಕ್ಕೆ ಅವೇ ನಮಗೆ ಮನರಂಜನೆ.
ಇವತ್ತೂ ಅಷ್ಟೇ, ಕಾರ್ ರೇಸ್ ಅಂದರೆ ಮಕ್ಕಳಿಗೆ ಪ್ರಾಣ. ಹೀಗಾಗಿ ಸೈಬರ್ ಗೇಮ್ಸ್ ಅಂದರೆ ಕಾರು ರೇಸು. ತೆರೆಯ ಮೇಲೆ ಕಾರೋಡಿಸುವುದೂ ಖುಷಿಯೇ. ಅದೂ ಬಣ್ಣಬಣ್ಣದ ಪುಷ್ಪಕ ವಿಮಾನದಂಥ ಕಾರುಗಳು.
ಒಂದು ಸೈಕಲ್ಲಿನ ಕತೆ ಕೇಳಿ:
ಅವನಿಗೆ ಉದ್ಯೋಗವಿಲ್ಲ. ಕೊನೆಗೆ ಮಹಾನಗರಪಾಲಿಕೆ ಪೋಸ್ಟರ್ ಅಂಟಿಸುವ ಉದ್ಯೋಗ ಕೊಡುತ್ತದೆ. ಆದರೆ ಆ ಕೆಲಸಕ್ಕೆ ಸೇರುವವರಿಗೆ ಸೈಕಲ್ ಕಡ್ಡಾಯ. ಅವನು ಒಂದು ದಿನ ಪೋಸ್ಟರ್ ಅಂಟಿಸುವಾಗ ಯಾರೋ ಸೈಕಲ್ ಕದ್ದುಕೊಂಡು ಹೋಗುತ್ತಾರೆ. ಅವನೂ ಅವನ ಮಗನೂ ಸೈಕಲ್ಲಿಗೋಸ್ಕರ ಹುಡುಕಾಡುತ್ತಾರೆ. ಯಾವುದೋ ಗುಜರಿಯಲ್ಲಿ ಅದರ ಬಿಡಿಭಾಗಗಳು ಸಿಗುತ್ತವೆ. ಸೈಕಲ್ ಇಲ್ಲದಿದ್ದರೆ ಕೆಲಸ ಕಳೆದುಕೊಳ್ಳುವ ಭಯದಿಂದ ಅವನು ಸೈಕಲ್ ಕದಿಯುತ್ತಾನೆ. ಸಿಕ್ಕಿಬೀಳುತ್ತಾನೆ. ಅವನ ಬದುಕು ಏನೇನೇನೋ ಆಗುತ್ತಾ ಹೋಗುತ್ತದೆ.
ಒಂದು ಸೈಕಲ್ ಇಟ್ಟುಕೊಂಡು ಇಡೀ ಸಮಾಜದ ಅಧಃಪತನವನ್ನು ಚಿತ್ರಿಸಿದ ಕತೆ ಇದು. ಈ ಚಿತ್ರದ ಹೆಸರು ಬೈಸಿಕಲ್ ಥೀವ್ಸ್, ನಿರ್ದೇಶಿಸಿದ್ದು ವಿಟ್ಟೋರಿಯಾ ಡಿಸಿಕಾ.
ಎಲ್ಲಾ ಕಾರ್ ರೇಸ್‌ಗಳನ್ನು ಜೇಮ್ಸ್‌ಬಾಂಡ್ ಚಿತ್ರಗಳ ರೋಚಕತೆಯನ್ನೂ ಈ ಬೈಸಿಕಲ್ ಥೀವ್ಸ್ ಮರೆಸುತ್ತದೆ ಅನ್ನುವ ಕಾರಣಕ್ಕೇ, ಕಲೆ ಉಳಿದುಕೊಳ್ಳುತ್ತದೆ. ಮಿಕ್ಕಿದ್ದು ಬಂದುಹೋಗುತ್ತದೆ.

‍ಲೇಖಕರು avadhi

May 21, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. BALU

  ಜೋಗಿಯವರೇ , ಈ ಬಗ್ಗೆ ತಮಿಳಿನಲ್ಲಿ ಪೋಲ್ಲದ್ವನ್ ಅಂತ್ಥ ಒಂದು ಸಿನಿಮಾ ಬಂದಿದೆ ನಮ್ಮ ರಮ್ಯನೆ ನಾಯಕಿ ನಿಮ್ಮ ಗಮನಕ್ಕೆ -ಬಾಲು

  ಪ್ರತಿಕ್ರಿಯೆ
 2. b k sumathi

  nanganthoo magana jote car race nododu, appana jote car nalli koododu.. ashte,, ishta.. caaaru yaavudaadarenu, traffic eshtu iddarenu,, avenue road aadarenu…
  jogi taro bhaava nava navina……

  ಪ್ರತಿಕ್ರಿಯೆ
 3. ಆನೇ

  ತು೦ಬಾ ಚೆನ್ನಾಗಿ ವಾಹನ ವ್ಯಾಮೋಹದ ಬಗ್ಗೆ ಬರ್ದಿದೀರಾ ಸರ್.
  ನ೦ಗು ಹಾರ್ಲೆ ಡೇವಿಡ್ ಸನ್ ಮೋಟಾರಿನಲ್ಲಿ ಅಡ್ಡಾಡೊ ಬಯಕೆ

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ b k sumathiCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: