ಜೋಗಿ ಬರೆದಿದ್ದಾರೆ: ವಿರಹದ ಒಂದಿಷ್ಟು ಚಿತ್ರಗಳು

img_0491 (1)1. ತೊರೆ
ಆವತ್ತು ಸಂಜೆ ಸಣ್ಣಗೆ ಮಳೆಯಾಗುತ್ತಿತ್ತು. ಮಳೆಯೆಂದರೆ ಮಳೆಯಲ್ಲ. ಮದುವೆ ಮನೆಯಲ್ಲಿ ಪರಿಮಳದ ನೀರು ಸಿಂಪಡಿಸಿದ ಹಾಗೆ. ಜಲಪಾತದಿಂದ ಧುಮ್ಮಿಕ್ಕಿದ ನೀರು ಆಷಾಢದ ಗಾಳಿಗೆ ದೂರದಲ್ಲೆಲ್ಲೋ ನಿಂತ ಹದಿಹರೆಯದ ಜೋಡಿಯ ಮೇಲಿಳಿದ ಹಾಗೆ.
ಆ ತುಂತುರು ಸೋನೆಯಾಗಿ ಮುಸಲಧಾರೆ ಆಗುತ್ತದೆ ಎಂಬ ಅನುಮಾನವಂತೂ ಇದ್ದೆ ಇತ್ತು. ಅವನು ಅವಳಿಗೋಸ್ಕರ ಕಾಯುತ್ತ ನಿಂತಿದ್ದ. ಅವಳು ಮೇಘಸಂದೇಶದಂತೆಯೋ ಮೋಡದಿಂದ ಇಳಿದ ಹನಿಯಂತೆಯೋ ನೆಗಡಿಯ ಹಾಗೋ ಜ್ವರದ ಹಾಗೋ ಬರುತ್ತಾಳೆ ಎಂದು ಕಾಯುತ್ತಿದ್ದ.
ಅವಳು ಬಂದಾಗ ಕತ್ತಲಾಗಿತ್ತು. ಮಳೆ ನಿಂತು ಚಂದ್ರ ಬೆಳದಿಂಗಳು ಚೆಲ್ಲಿದ್ದ. ಮಳೆ ಬಿದ್ದ ನೆಲದಲ್ಲಿ ಅವಳ ಪಾದದ ಗುರುತು. ಕಿರುಬೆರಳು ಮೃದುವಾಗಿ ನಡುಪಾದ ಹಿತವಾಗಿ ಹಿಮ್ಮಡಿ ಬಲವಾಗಿ ಊರಿದ ಉಬ್ಬುತಗ್ಗು ಶಿಲ್ಪ.
ಅವಳು ಮಾತಾಡಲಿಲ್ಲ. ಸುಮ್ಮನೆ ಮುತ್ತಿಕ್ಕಿದಳು. ಅವನೂ ಮಾತಾಡಲಿಲ್ಲ. ಸುಮ್ಮನೆ ನೋಡಿದ. ಇಬ್ಬರ ನಡುವೆ ಶೀತಲ ಪ್ರೇಮ ಮಂಜಿನಂತೆ ಬೆಳ್ಳಗೆ ಹಬ್ಬುತ್ತಿತ್ತು. ಅವರ ಬಿಸಿಯುಸಿರಿಗೆ ಕರಗುತ್ತಿತ್ತು.
ಅವರು ಮತ್ತೆ ಮಾತಾಡಿಕೊಂಡರು. ಅವಳು ತಣ್ಣಗೆ ತನ್ನ ನಿರ್ಧಾರ ಹೇಳಿದಳು. ಅವನು ತಣ್ಣಗೆ ಅದನ್ನು ಕೇಳಿಸಿಕೊಂಡ. ಅವಳ ಮಾತಲ್ಲಿ ತರ್ಕವಿತ್ತು. ಅವನಿಗೂ ಅದು ಅರ್ಥ ಆಗುವಂತಿತ್ತು. ಅದೇ ಕೊನೆಯ ಭೇಟಿ ಎಂಬಂತೆ ಇಬ್ಬರೂ ಒಂದಷ್ಟು ಹೊತ್ತು ಸುಮ್ಮನೆ ಕೂತಿದ್ದರು.
ನನಗೆ ಮಳೆಯೆಂದರೆ ಇಷ್ಟ. ಮಳೆ ಬೀಳುತ್ತಿರುವಾಗ  ಸಮುದ್ರ ನೋಡುತ್ತಿರಬೇಕು. ಮಳೆ ಬಿದ್ದರೂ ಹೆಚ್ಚದ,ಬಿರುಬಿಸಿಲಿಗೂ ಕುಗ್ಗದ ಸಮುದ್ರದ ಹಾಗೆ ನಿನ್ನ ಪ್ರೀತಿ’ ಅಂದಿದ್ದಳು ಆಕೆ. ಸಮುದ್ರ ಮತ್ತು ಮಳೆ ಯಾವತ್ತೂ ಹಾಗೇ ಇರುತ್ತದೆ ಅಂದುಕೊಂಡು ಆತ ಅವಳ ಕಣ್ಣುಗಳನ್ನು ನೋಡಿದ. ಅಲ್ಲೂ ಮಳೆಯಾಗುತ್ತಿತ್ತು.
ಅವಳು ಹೊರಟು ಹೋದಳು. ಬಂದ ಹೆಜ್ಜೆ ಗುರುತುಗಳ ಮೇಲೆ ಹೋದ ಹೆಜ್ಜೆಗುರುತುಗಳು. ಅವಳು ಹಾಗೇ ಸಾಗಿ ,ಕಿರುತೊರೆಯೊಂದನ್ನು ದಾಟಿ ನಡೆದುಹೋದಳು. ಅವಳು ದೂರವಾಗುತ್ತಿದ್ದಂತೆ ಅವನನ್ನು ಮತ್ತೆ ವೇದನೆ ಬಾಧಿಸಿತು. ಅವಳನ್ನು ಹಿಂಬಾಲಿಸಬೇಕು ಅಂದುಕೊಳ್ಳುವಷ್ಟರಲ್ಲಿ ತೊರೆಯಾಚೆಗೆ ಮಳೆ ಶುರುವಾಯಿತು. ಅದು ಈಚೆಗಿನ ಬಯಲಿಗೂ ಹಬ್ಬುವುದರಲ್ಲಿತ್ತು.
artwork_27ಚಿತ್ರ: ಎಂ ಎಸ್ ಮೂರ್ತಿ
ಮಳೆಗೆ ಅವಳ ಹೆಜ್ಜೆ ಗುರುತುಗಳು ಕಲಸಿ ಹೋಗಿದ್ದವು. ನೀರಲ್ಲಿ ಹೆಜ್ಜೆ ಗುರುತುಗಳನ್ನು ಹುಡುಕಲಾಗುವುದಿಲ್ಲ ಎಂದು ಅವನಿಗೆ ಗೊತ್ತಿತ್ತು. ತೊರೆಗೆ ಅವಳನ್ನು ಹೆಜ್ಜೆಗುರುತುಗಳನ್ನು ಹಿಡಿದಿಟ್ಟುಕೊಳ್ಳುವ ಉತ್ಸಾಹವೇ ಇರಲಿಲ್ಲ. ತೊರೆಯುವವರಿಗೆ ಹೆಜ್ಜೆಗುರುತುಗಳೇಕೆ ಬೇಕು?
ಅವನು ಒದ್ದೆಕೆನ್ನೆಗಳನ್ನು ಒಣಗಿಸಿಕೊಳ್ಳುತ್ತಾ ವರುಷದ ನಂತರವೂ ಅಲ್ಲೇ ನಿಂತಿದ್ದ. ಮಳೆ ದೇಶಾಂತರ ಹೋಗಿತ್ತು.
2. ಚಿಗುರು
ಬಹಳ ದಿನಗಳ ನಂತರ ಹೂವರಳಿತ್ತು. ಆ ಹೂವಿನ ಕಂಪಿಗೆ ಅಮರಳಾಗುವ ಆಶೆ ಹೊತ್ತು ಅವಳು ಹಾಗೇ ಕೂತಳು. ಅವನು ತಂದುಕೊಟ್ಟ ಸೀರೆ ಮತ್ತು ಉಂಗುರ ಕಣ್ಣೆದುರು ಮಿನುಗಿ ಒಂಥರದ ಭದ್ರತೆಯ ಭಾವ ಉಮ್ಮಳಿಸಿ ಬಂತು. ಇನ್ನು ಪರವಾಗಿಲ್ಲ, ಮುಂದಿನ ದಿನಗಳ ಗೆರೆ ಸ್ಪಷ್ಟವಾಗಿದೆ.
ಪ್ರೀತಿ ಕೊಡುವ ಅಸಂಖ್ಯಾತ ಸುಖಗಳಲ್ಲಿ ಒಳ್ಳೆಯ ಮನೆ, ದೊಡ್ಡದೊಂದು ಕಾರು, ಮೆಚ್ಚುವ, ಕರುಬುವ ಬಂಧುಮಿತ್ರರು,ಸುಖದ ಗಳಿಗೆಯ ಅನುಭವ ಕೇಳಿ ಒಳಗೊಳಗೇ ದ್ರವಿಸುವ ಗೆಳತಿಯರು ಮತ್ತು ಹಿಡಿಶಾಪಹಾಕುವ ಅತ್ತೆ, ಚಿಕ್ಕಮ್ಮ,ನಾದಿನಿಯರು ಕೂಡ ಇರುತ್ತಾರೆ ಎಂದು ಅವಳು ನಂಬಿದ್ದಳು. ಅದನ್ನೆಲ್ಲ ಒಂದೇ ಏಟಿಗೆ ಒದಗಿಸಬಲ್ಲ ವ್ಯವಸ್ಥೆಗೆ ಮದುವೆ ಅನ್ನುತ್ತಾರೆ ಎಂಬುದೂ ಅವಳಿಗೆ ಗೊತ್ತಿತ್ತು. ಪ್ರೇಮದಿಂದ ಮದುವೆಗೆ ಜಿಗಿಯುವ ಉತ್ಸಾಹ ಮತ್ತು ಪ್ರೇಮದಲ್ಲೇ ತೊಳಲಾಡುವ ಸಂಕಟ ಎರಡನ್ನೂ ಅನುಭವಿಸಿದಾಗಲೇ ಜೀವನ ಪೂರ್ಣವಾಗುತ್ತದೆ ಎಂಬ ಕಲಾತ್ಮಕ ಮನಸ್ಸನ್ನೂ ಹೊಂದಿದವಳಾದ ಆ ಭಾವುಕಿಯ ಮನಸ್ಸನ್ನು ಆವತ್ತು ಆಳುತ್ತಿದ್ದದ್ದು ಬೆಳ್ಳಗಿನ ಹಗಲು ಮತ್ತು ಆಳದ ಕತ್ತಲು.
ಅವಳನ್ನು ಮರೆಯಲಾಗದ ರಾತ್ರಿಗಳಲ್ಲಿ ಅವನು ಮಾಂಡೋವಿ’ ಓದುತ್ತಿದ್ದ. ಎಂಬತ್ತರ ಮುಸ್ಸಂಜೆಯಲ್ಲಿ ಪ್ರೀತಿಸಬಲ್ಲೆಯಾ ಎಂದು ಅವಳು ಕೇಳಿ ಅಚ್ಚರಿ ಹುಟ್ಟಿಸಿದ್ದನ್ನು ನೆನಪಿಸಿಕೊಳ್ಳುತ್ತಿದ್ದ. ಮನೆ ಮುಂದಿನ ಕೊರಡು ಮಾವಿನ ಮರ ಏಪ್ರಿಲ್ ತಿಂಗಳಲ್ಲಿ ಇದ್ದಕ್ಕಿದ್ದ ಹಾಗೆ ಚಿಗುರಿ ಅವನಲ್ಲಿ ಅಪಾರ ಪ್ರೀತಿ ಉಕ್ಕಿಸಿತ್ತು. ಅದರ ಚಿಗುರನ್ನು ಕುಕ್ಕಿ ಕುಕ್ಕಿ ತಿನ್ನುತ್ತಿದ್ದ ಕೋಗಿಲೆಯ ಮರಿಯನ್ನು ಇಷ್ಟೂ ದಿನ ಕಾಗೆಮರಿ ಅಂದುಕೊಂಡ ತನ್ನ ಅಜ್ಞಾನವನ್ನು ಹಳಿದುಕೊಳ್ಳುತ್ತಾ ಆತ ಬಿಸಿಬಿಸಿ ಕಾಫಿ ಹೀರಿದ.
ಒಳಗೆ ಬಂದು ಕನ್ನಡಿ ಮುಂದೆ ನಿಂತವನನ್ನು ಸ್ವಾಗತಿಸಿದ್ದು ಬೆಳ್ಳಗಿನ ಉದುರುಮೀಸೆಯ, ಜೋತುಬಿದ್ದ ಹುಬ್ಬುಗಳ,ಅರೆಬೋಳು ತಲೆಯ, ಗುಳಿಬಿದ್ದ ಕೆನ್ನೆಯ, ಬೊಚ್ಚುಬಾಯಿಯ, ಕಂದಿದ ಕಣ್ಣಕಾಂತಿಯ ವಯೋವೃದ್ಧ ಪ್ರೇಮಿ. ಮಾವಿನ ಮರದಂತೆ ತಾನು ಚಿಗುರುವುದಿಲ್ಲ ಎಂದು ಗೊತ್ತಿದ್ದವನಂತೆ ಅವನು ಸುಮ್ಮನೆ ಕುಳಿತ.
ಅವಳು ಬರೆದ ಪತ್ರಗಳು, ಅವಳು ಆಡಿದ ಮಾತುಗಳು ಆಕಾಶಕ್ಕೆ ಚಿಮ್ಮಿದ ದೀಪಾವಳಿಯ ರಾಕೆಟ್ಟಿನ ಹಾಗೆ ಅರೆಕ್ಷಣ ಮಿನುಗಿ ಮರೆಯಾದವು. ಅದರ ತುದಿ ಮತ್ತೆಲ್ಲೋ ಬಿದ್ದು ಕಣ್ಮರೆಯಾಯಿತು.
ಹೊರಗೆ ಬಂದು ನೋಡಿದರೆ ಕೆಂಪನೆ ಚಿಗುರು ಹೊತ್ತು ನಿಂತಿದ್ದ ಮಾವಿನ ಮರ, ಕತ್ತಲಲ್ಲಿ ಬಣ್ಣ ಕಳಕೊಂಡು ನಿಂತಿತ್ತು. ತಾನು ಚಿಗುರಿದ್ದು ಸುಳ್ಳೇನೋ ಎಂಬಂತೆ ಅವನು ಅಸ್ವಸ್ಥ ನಿಂತಿರುವ ಹೊತ್ತಿಗೆ ಅವಳು ಎಡಗೈಯ ತೋರುಬೆರಳನ್ನೂ ಹೆಬ್ಬೆರಳನ್ನೂ ಬಳಸಿಕೊಂಡು ಬಲಗೈಯ ಉಂಗುರಬೆರಳಲ್ಲಿ ಮಿರುಗುತ್ತಿದ್ದ ಉಂಗುರವನ್ನು ಸರಿಪಡಿಸಿಕೊಳ್ಳುತ್ತಿದ್ದಳು.
3.ರತ್ನಗಂಧಿ
ಅವನಿಗೆ ರತ್ನಗಂಧಿ ಹೂವೆಂದರೆ ಪ್ರಾಣ. ಆ ಹೂವಿಗಿರುವ ಸೊಬಗು ಮತ್ಯಾವ ಹೂವಿಗೂ ಇಲ್ಲ ಎಂದು ನಂಬಿದ್ದಾನೆ. ಅದಕ್ಕೆ ಕಾರಣ ಬಾಲ್ಯದಲ್ಲಿ ಅವನು ನೋಡಿದ ಹೂವು ಅದೊಂದೇ. ಬೆಳಗಾಗೆದ್ದು ಅಂಗಳಕ್ಕೆ ಕಾಲಿಟ್ಟರೆ ಬೇಲಿಯಲ್ಲಿ ಕೆಂಪಾಗಿ, ಅರೆಕೆಂಪಾಗಿ, ಸಂಜೆಗೆಂಪಾಗಿ, ಅರುಣಗೆಂಪಾಗಿ ಅರಳಿ ಕಣ್ಸಳೆಯುತ್ತಿದ್ದ ರತ್ನಗಂಧಿ. ಪರಿಮಳವಿಲ್ಲದ ಹೂವು. ಅದು ಹಳದಿಯೋ ಕೆಂಪೋ ಕೆಂಡದ ಬಣ್ಣವೋ ದೀಪದ ಜ್ವಾಲೆಯ ಬಣ್ಣವೋ ಎಂಬ ಗೊಂದಲದಲ್ಲಿರುವ ಅವನಿಗೆ ಈಗ ಐವತ್ತೂ ಅಲ್ಲ ನಲವತ್ತೂ ಅಲ್ಲ. ನಡುವಯಸ್ಸು.
ಅಂಥ ಪ್ರಖರ ಹೂವು ಕೂಡ ಬೆಳದಿಂಗಳಲ್ಲಿ ಮಂಕಾಗುತ್ತದಲ್ಲ ಎಂದು ಅವನಿಗೆ ಕುತೂಹಲ. ಬಣ್ಣವಿರುವುದು ಹೂವಿನಲ್ಲೋ ಸೂರ್ಯನಲ್ಲೋ ಎಂಬ ಅನುಮಾನ. ಸೂರ್ಯನ ಕಡೆಗೆ ಸೂರ್ಯಕಾಂತಿ ಮುಖಮಾಡಿರುತ್ತದೆ ಎಂಬ ಚೆಂದದ ಕಲ್ಪನೆಯ ಜೊತೆ ಅವನಿಗೆ ಎಲ್ಲೋ ಓದಿದ ಮತ್ತೊಂದು ಸಾಲು ನೆನಪಾಗುತ್ತದೆ. ಸೂರ್ಯನಿದ್ದಾಗ ಮಾತ್ರ ಸೂರ್ಯಕಾಂತಿ ಸೂರ್ಯನೆಡೆಗೆ ಮುಖ ಮಾಡಿರುವುದಿಲ್ಲ, ಸೂರ್ಯನಿಲ್ಲದ ಹೊತ್ತಲೂ ಅದು ಸೂರ್ಯನಿದ್ದ ದಿಕ್ಕಿಗೇ ಮುಖ ಚಾಚಿಕೊಂಡಿರುತ್ತದೆ. ಸೂರ್ಯನಿಗಾಗಿ ಕಾಯುತ್ತಾ..
ಸವೆದ ಹಾದಿ ಕ್ರಮೇಣ ಕಾಲಿಗಷ್ಟೇ ಪರಿಚಿತ, ಕಣ್ಣಿಗಲ್ಲ. ಸುಮ್ಮನೆ ಕಾಲು ಹಾಗೆ ಸಾಗುತ್ತಿದ್ದರೆ ಸುತ್ತಲಿನ ಜಗತ್ತೆಲ್ಲ ಎತ್ತೆತ್ತಲೋ ಮಾಯವಾಗಿ ನಮ್ಮದೇ ಜಗತ್ತು ಸುತ್ತಲೂ ಇಳಿಯುತ್ತದೆ. ಆ ಜಗತ್ತಿನಾಚೆ ಬಂದು ನೋಡಿದರೆ ಅಸಾಧ್ಯ ಬೆರಗು. ಬಾಲ್ಯದಲ್ಲಿ ಒಳಜಗತ್ತಿಲ್ಲ, ಬರೀ ಹೊರಜಗತ್ತೇ. ಯೌವನದಲ್ಲಿ ಒಳಗೂ ಜಗತ್ತು, ಹೊರಗೂ ಜಗತ್ತು. ನಡುವಯಸ್ಸು ದಾಟುತ್ತಿದ್ದಂತೆ ಹೊರಜಗತ್ತು ಮಂಜು ಮಂಜಾಗಿ ಒಳ ಜಗತ್ತು ಮಾತ್ರ ಸುಸ್ಪಷ್ಟ. ಆ ಲೋಕದಲ್ಲಿ ಅನುಭವ, ಅನುಭಾವ,ಅರಿವು, ಕ್ರಾಂತಿ, ಸಂಗ್ರಾಮ ಮತ್ತು ತಾಳೀಕೋಟೆ ಕದನ. ಅಲ್ಲಿ ಸಾಮ್ರಾಜ್ಯಗಳೆದ್ದು, ಸಂಸ್ಥಾನಗಳು ಬಿದ್ದು,ಅಪರಾತ್ರಿಯಲ್ಲಿ ತಣ್ಣಗೆ ಮಲಗಿದ ಘಟಸರ್ಪಕ್ಕೆ ವಿಚಿತ್ರ ಗುಂಗಿನ ಪುಂಗಿ. ಬರೀ ಬುಸುಗುಡುವ ನಾಗನಿಗೆ ಮೈಯೆಲ್ಲ ವಿಷ. ಹೆಡೆಯೆತ್ತಿದರೆ ಹಲ್ಲಲ್ಲಿ ಮಾತ್ರ ವಿಷ.
ಮತ್ತೆ ರತ್ನಗಂಧಿ ಹೂವಿಗೆ ಮರಳಿದರೆ, ಮಂದಾರ ಅದಕ್ಕಿಂತ ಸುಂದರ ಮತ್ತು ಕಮನೀಯ. ಸಂಪಿಗೆ ಅದಕ್ಕಿಂತ ಘಾಟು,ಗುಲಾಬಿ ಮತ್ತಷ್ಟು ಮೃದು. ಮಲ್ಲಿಗೆಗೆ ಮೃದುತ್ವ ಮತ್ತು ಸುವಾಸನೆ, ತಾವರೆಗೆ ನಿಗೂಢ ಕೊಳದ ಸಹವಾಸ.
ಅವಳ ಪಾಲಿಗೆ ನಾನು ಎಂದೋ ಮೆಚ್ಚಿದ ರತ್ನಗಂಧಿ.
4.   ಅರ್ಥ
ಅರ್ಥಮಾಡಿಕೊಳ್ಳುವುದು
ಎಂದರೆ
ಎಂದೋ ಮುದ್ದಿಸಿದ ನೆನಪಿಗೆ
ಜೋತುಬಿದ್ದು ಬದುಕುವುದು.
ಮತ್ತು
ಅವಳನ್ನು ಇಂದು ಮುದ್ದಿಸುತ್ತಿರುವವನ
ಬಗ್ಗೆ ಅಚ್ಚರಿ, ಕುತೂಹಲ ಮತ್ತು ಪ್ರೀತಿ
ಬೆಳೆಸಿಕೊಳ್ಳುವುದು.
ಅವಳನ್ನು ದ್ವೇಷಿಸಲಾಗದೆ,
ಮರೆಯಲಾರದೆ,
ಸೇರಲಾರದೆ
ಸಾಯುವುದು

‍ಲೇಖಕರು avadhi

October 17, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. D.M.Sagar,Dr.

  ಮಾರಾಯರೇ, ಹಾಳುಬಿದ್ದು ಹೋಗಲಿ ನಿಮ್ಮ ಗೋಳಿನ ಕಥೆ!. ಹೆಂಗಸರು ಪ್ರೀತಿಸಿದರು, ದ್ವೆಶಿಸಿದರೂ, ಅಂತಹ ಅಚ್ಚರಿ ಪಡುವ ಕಾಲ, ಗತಕಾಲದ ಗೋಳಿಗೆ ಕಟ್ಟುಬಿದ್ದು ಬದುಕನ್ನ ನೀಗಿಕೊಳ್ಲುವುದ ಕಾಲ ಗತಿಸಿಹೋಗಿದೆ. ಈಗ ನೀವೇ ಹೇಳಿ, ನಿಮ್ಮ ವ್ಯಾವಾಹಾರಿಕ ಬದುಕಿನ ಮಟ್ಟಿಗೂ ಕೂಡಾ ಈ “ಗತ-ಗೋಳಾಟ” ಮಾರಿಕೊಳ್ಳುವ ಒಂದು ಸಾಹಿತ್ಯಿಕ ಸರಕೆ ವಿನಃ ಜೀವನ-ಸತ್ಯವೇನು ಅಲ್ಲವಲ್ಲ!.
  ಭಾವುಕತೆ ಹಾಗು ಸಾಹಿತ್ಯಿಕ ಪ್ರತಿಮೆಗಳನ್ನು ಬದಿಗಿಟ್ಟು ಯೋಚಿಸಿದರೆ, ಬದುಕಿನೆಡೆಗೆ ಒಂದು ನಿರ್ಮಮ ಬದ್ಧತೆಯನ್ನು ಇಟ್ಟುಕೊಂಡು ಬದುಕುವುದೇ ಸಹ್ಯ ಬದುಕಿನ ಏಕೈಕ ಸುತ್ರವಲ್ಲವೇ?
  ಬಣ್ಣವಿರುವುದು ಹೂವಿನಲ್ಲೋ ಸೂರ್ಯನಲ್ಲೋ ಎಂಬ ಅನುಮಾನ” – ಈ ವಾಕ್ಯದ ಭಾವಾರ್ಥ ಬಹಳ ವೈಜ್ಞಾನಿಕವಾಗಿದೆ. ಪ್ರಾಕೃತಿಕ ಸತ್ಯವಾದ್ದರಿಂದ ಇಷ್ಟವಾಯಿತು. -D.M.Sagar,Dr.

  ಪ್ರತಿಕ್ರಿಯೆ
  • jogi

   ಗತಕಾಲದ ಗೋಳಿಗೆ ಕಟ್ಟುಬಿದ್ದು ಬದುಕನ್ನು ನೀಗಿಕೊಳ್ಳುವ ಕಾಲ ಗತಿಸಿಹೋಗಿದೆ ಅಂತ ನಿಮಗೆ ಅನ್ನಿಸಿರಬಹುದು, ನನಗಂತೂ ಅನ್ನಿಸಿಲ್ಲ. ನನ್ನ ವಿರಹ, ನನ್ನ ಪ್ರೀತಿ, ನನ್ನ ಹಳೆಯ ಪ್ರೇಮ, ನನ್ನ ಕಾತರ ಮತ್ತು ನನ್ನ ಉಲ್ಲಾಸಗಳಲ್ಲಿ ನಾನು ಜೀವಿಸುತ್ತೇನೆ.
   ಗತ ಗೋಳಾಟ ಮಾರಿಕೊಳ್ಳುವ ಸಾಹಿತ್ಯಿಕ ಸರಕು ಅನ್ನುವುದಂತೂ ನಿಮ್ಮ ವಿಚಿತ್ರ ಅಳಲು. ಮಾರಿಕೊಳ್ಳುವ ಸರಕಿಗೆ ನಾನು ಸೀರಿಯಲ್ಲುಗಳಿಗೆ ಬರೆಯುತ್ತೇನೆ, ಸಿನಿಮಾಗಳಿಗೆ ಬರೆಯಬಲ್ಲೆ. ಅದಕ್ಕೆ ಇಂಥ ನೆನಪುಗಳನ್ನು ಬರೆಯಬೇಕಾಗಿಲ್ಲ. ನನ್ನ ವ್ಯಾವಹಾರಿಕ ಬದುಕಿಗೂ ಈ ಬರಹಕ್ಕೂ ಸಂಬಂಧವೂ ಇಲ್ಲ. ಇವನ್ನೆಲ್ಲ ನಾನು ಸಂಬಳಕ್ಕೂ ಬರೆಯುತ್ತಿಲ್ಲ. ಇವಿಷ್ಟನ್ನು ನಿಮ್ಮ ಗಮನಕ್ಕೆ ತರಬೇಕು ಅನ್ನಿಸಿತು. ಇನ್ನು ನಿಮ್ಮಂಥ ವೈಜ್ಞಾನಿಕ ಪಂಡಿತರಿಗೆ ಉತ್ತರಿಸುವುದಕ್ಕೆ ಹೋಗುವುದಿಲ್ಲ. ಪ್ರಾಕೃತಿಕ ಸತ್ಯವಾದ್ದರಿಂದ ಇಷ್ಟವಾಯಿತು ಎಂದು ಬರೆಯುವ ನೀವು ಪುಟ್ಟ ಕಂದಮ್ಮ ಮನೆಯೊಳಗೆ ಹೊರಗೆ ಆಡಿದರೆ ಬೀಸಣಿಗೆ ಗಾಳಿ ಸುಳಿದಂತೆ ಎಂಬ ಜನಪದದ ಸಾಲನ್ನು ಹೇಗೆ ಸ್ವೀಕರಿಸುತ್ತೀರೋ ಗೊತ್ತಿಲ್ಲ. ಅದು ಪ್ರಾಕೃತಿಕ ಸತ್ಯವಲ್ಲವಲ್ಲ. ಮಗು ತೀರಿಕೊಂಡಾಗ ಹುಣ್ಣಿವಿ ಚಂದ್ರನ ಹೆಣಾ ಬಂತು ಮುಗಿಲಾಗ ತೇಲತಾ ಹಗಲ ಅಂತ ಬರೆದದ್ದು ಕೂಡ ನಿಮಗೆ ಗೋಳು ಅನ್ವಿಸಬಹುದು. ಎಷ್ಟೋ ಮಕ್ಕಳು ಸಾಯುತ್ತಾರೆ, ಎಷ್ಟೋ ಮಂದಿ ಗೋಳಾಡುತ್ತಾರೆ. ಅದರಲ್ಲೇನಿದೆ ವಿಶೇಷ ಅಂತ ಕೇಳಬಹುದು. ಹುಣ್ಣಿಮೆ ಚಂದ್ರನಿಗೆ ಜೀವವಿಲ್ಲ ಆದ್ದರಿಂದ ಹೆಣಾ ತೇಲಿ ಬರುವುದಿಲ್ಲ ಎಂದು ಕೂಡ ನಿಮ್ಮ ವೈಜ್ಞಾನಿಕ ಮನಸ್ಸು ವಾದಿಸಬಹುದು. ಏನು ಮಾಡೋಕ್ಕಾಗುತ್ತೆ.

   ಪ್ರತಿಕ್ರಿಯೆ
   • D.M.Sagar,Dr.

    ಜೋಗಿಯವರೇ,
    ತಪ್ಪು ತಿಳಿಯಬೇಡಿ, ತಮ್ಮ ಬದುಕಿನ/ಭಾವನೆಗಳ ಕುರಿತಾದ ತಮ್ಮ ವಯಕ್ತಿಕ ಶ್ರಧ್ಧೆಯನ್ನು ನಾನು ಪ್ರಶ್ನಿಸುತ್ತಿಲ್ಲ. ಬದಲಿಗೆ, ಒಂದು ಕಾಲಘಟ್ಟದಲ್ಲಿ ಕಾಡುವ ನೆನಪುಗಳಿಗೆ, ಭಾವುಕತೆಯ ಕುದುರೆಯ ಗೊರಸಿನಡಿ ಸಿಕ್ಕು ನುಚ್ಚಾಗಿ , ವ್ಯರ್ಥ-ಪ್ರಜ್ಞೆಯನ್ನು ಅನುಭವಿಸಿ “ಒಳ-ದ್ವ್ಹನಿ” ಯನ್ನು ಪ್ರಯತ್ನಪೂರ್ವಕವಾಗಿ ತುಳಿದುಹಾಕಿದ್ದೇನೆ.
    ಇನ್ನು, ಬೀಸಣಿಗೆಯ ಭಾಸವಾಗಿಸುವ ಪುಟ್ಟ ಕಂದನ ಒಳ-ಹೊರಗಿನ ಬಗ್ಗೆ – ಸಾರ್ಥಕ ಕ್ಷಣಗಳನ್ನು ಒದಗಿಸುವ ಅನುಭವಗಳಿಗೆ ಬೆಲೆ ಕಟ್ಟಲು ಸಾದ್ಯವಿಲ್ಲ ಎನ್ನುವ ಅರಿವಿದೆ, ಅಂತೆಯೇ, ಗತಿಸಿದ ಗೋಳಿನ ಬಗ್ಗೆ ಕಟ್ಟು-ಬಿದ್ದು ಬದುಕನ್ನು ನೀಗಿಕೊಲ್ಲುವುದು (ನನ್ನ ಮಟ್ಟಿಗೆ) ಅವಿವೇಕ ಎನ್ನುವುದು ನನ್ನ ವಿನಮ್ರ ಅನಿಸಿಕೆ.
    ವಯಕ್ತಿಕವಾಗಿ ತಮ್ಮ ಬರವಣಿಗೆಯ ಅಭಿಮಾನಿ ನಾನು (ಇದು ತಮಗೂ ವೇದ್ಯವಾದ ವಿಷಯ), ಆದರೆ ಭಾವುಕ-ಸತ್ಯಗಳನ್ನು ಪ್ರಜ್ಞಾಪೂರ್ವಕವಾಗಿ ತಿರಸ್ಕರಿಸುವುದನ್ನು ಕಲಿತ ಮೇಲೆಯೇ ಬದುಕು ಸಹ್ಯವಾಗಿದೆ.
    ಇನ್ನು, ವೈಜ್ಞಾನಿಕ ಪಾಂಡಿತ್ಯದ ಬಗ್ಗೆ ಮತ್ತೊಮ್ಮೆ ಚರ್ಚಿಸೋಣ ಆಗದೆ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: