ಜೋಗಿ ಬರೆದಿದ್ದಾರೆ: ಶೆಣೈ ಹೋಟೆಲಿನ ಅವಲಕ್ಕಿ ಸ್ವಾದ ಕಳಕೊಂಡಿದೆ

ಎಂದೋ ಕೇಳಿದ ಒಂದು ಹಾಡಿನ ನೆನಪಲ್ಲಿ…


ನಂಗೆ ಟಿ ಕೆ ರಾಮರಾವ್ ಇಷ್ಟ, ಎನ್ ಟಿ ರಾಮರಾವ್ ಸಿನಿಮಾ ಇಷ್ಟ, ಜೋಸೈಮನ್ ಇಷ್ಟ, ಜಿಂದೆ ನಂಜುಂಡಸ್ವಾಮಿ ಎಂದರೆ ಪ್ರಾಣ, ಮುಸ್ಸಂಜೆಯ ಕಥಾಪ್ರಸಂಗ ಮತ್ತೆ ಮತ್ತೆ ಓದಬೇಕೆನ್ನಿಸುತ್ತೆ, ಪರಸಂಗದ ಗೆಂಡೆತಿಮ್ಮನ ಬೀದಿ ಕಣ್ಮುಂದೆ ಸುಳಿದರೆ ಸಂತೋಷವಾಗುತ್ತದೆ. ಭುಜಂಗಯ್ಯನ ದಶಾವತಾರಗಳು ಎಂಬ ಟೈಟಲ್ಲೂ ಮೆಚ್ಚುಗೆ.  ನಮ್ಮೂರಿನಲ್ಲಿದ್ದ ಪುಟ್ಟ ಹೊಟೆಲಿನಲ್ಲಿ  ಸಿಗುತ್ತಿದ್ದ ಕೇಟಿ ಮತ್ತು ಮೊಸರವಲಕ್ಕಿ ಇಷ್ಟ.

ಹಾಗಂತ ಇವತ್ತಿಗೂ ನಾನು ಅಂದುಕೊಂಡಿದ್ದೇನೆ. ಅದು ನಿಜಕ್ಕೂ ನನಗಿಷ್ಟ ಎಂದು ನಾನು ಮೊನ್ನೆ ಮೊನ್ನೆಯವರೆಗೂ ನಂಬಿದ್ದೆ. ಅದೇ ಹುಮ್ಮಸ್ಸಿನಲ್ಲಿ ಎನ್ ಟಿ ರಾಮರಾವ್ ಸಿನಿಮಾ ನೋಡಲು ಯತ್ನಿಸಿದೆ. ಐದು ನಿಮಿಷ ನೋಡುವಷ್ಟರಲ್ಲಿ ಯಾಕೋ ಹಿಂಸೆಯಾಗತೊಡಗಿತು. ಮತ್ತೊಂದು ದಿನ ಟಿ ಕೆ ರಾಮರಾವ್ ಕಾದಂಬರಿ ಓದಲು ಕುಳಿತೆ. ಮೂರು ಪುಟ ಮುಗಿಸುವ ಹೊತ್ತಿಗೆ ಸಾಕಾಗಿಹೋಯಿತು.ಜಿಂದೆ ನಂಜುಂಡಸ್ವಾಮಿ ಕಾದಂಬರಿಯನ್ನು ಕೈಗೆತ್ತಿಕೊಳ್ಳಲಾಗಲೇ ಇಲ್ಲ.  ಭುಜಂಗಯ್ಯನ ದಶಾವತಾರಗಳು ಯಾಕೋ ಹಿಂದಿನ ಹುಮ್ಮಸ್ಸು ತುಂಬಲಿಲ್ಲ. ನಮ್ಮೂರಿನ ಪುಟ್ಟ ಶೆಣೈ ಹೋಟೆಲಿನ ಅವಲಕ್ಕಿ ಮೊಸರು ಸ್ವಾದ ಕಳಕೊಂಡಿದೆ ಅನ್ನಿಸತೊಡಗಿತು.
ಆಮೇಲೆ ಯೋಚಿಸಿದೆ; ನಿಜಕ್ಕೂ ಕೆಟ್ಟಿರುವುದು ನನ್ನ ಬಾಯಿರುಚಿಯೋ, ಶೆಣೈ ಹೊಟೆಲ್ಲಿನ ಮೊಸರವಲಕ್ಕಿಯ ರುಚಿಯೋ?

ಹಿಂದೆಂದೋ ಸುಳಿದಾಡಿದ, ಜೀವಿಸಿದ ಜಾಗಗಳಿಗೆ ಮತ್ತೆ ಮತ್ತೆ ಹೋಗಬೇಕು ಅನ್ನಿಸುವುದು ನಮ್ಮ ಮನಸ್ಸಿನ ಅದಮ್ಯ ಆಶೆಗಳಲ್ಲಿ ಒಂದು. ಸಾಹಿತ್ಯದಲ್ಲಿ ಅದನ್ನು ಪ್ರತ್ಯಭಿಜ್ಞಾನ ಅನ್ನುತ್ತಾರಾ? ನನಗೆ ಗೊತ್ತಿಲ್ಲ, ಪ್ರತ್ಯಬಿಜ್ಞಾನ ಅಂದರೆ ಗೊತ್ತಿದ್ದದ್ದನ್ನು ಮತ್ತೆ ತಿಳಿದುಕೊಳ್ಳುವುದು. ಹಾಗೆ ನಮಗೆ ಗೊತ್ತಿರುವುದು, ನಮಗೆ ಪ್ರಿಯವಾಗಿರುವುದು ಕ್ರಮೇಣ ನಮ್ಮ ಮನಸ್ಸಿನಲ್ಲಿ ಶಾಶ್ವತವಾದ ಸ್ಥಾನವೊಂದನ್ನು ಪಡೆದುಕೊಳ್ಳುತ್ತದೆ. ಆ ನಲ್ದಾಣದಲ್ಲಿ ಮತ್ತೆ ಮತ್ತೆ ಹೋಗಬೇಕು ಎಂದು ಮನಸ್ಸು ಆಶಿಸುತ್ತದೆ. ಹಾಗೆ ಹೋದಾಗ ಅಲ್ಲಿ ನಮಗೆ ಸಿಗುವ ಸ್ವಾಗತ, ಸಂತೋಷ ಮತ್ತು ಖುಷಿಯ ಹೇಗಿರುತ್ತದೆ. ನಾವು ನಿಜಕ್ಕೂ ಅದನ್ನೆಲ್ಲ ಸವಿಯುತ್ತೇವಾ?
ಬಹುಶಃ ಇಲ್ಲ. ನಮ್ಮ ಅನುಭವದ ಒಂದು ಭಾಗವಾಗಿರುವ ಸಂಗತಿಗಳೆಲ್ಲ ಕೇವಲ ಮನಸ್ಸಿನಲ್ಲಿದ್ದಾಗಷ್ಟೇ ಸಂತೋಷಕೊಡುತ್ತವೆ. ನಾವು ಬದಲಾಗಿರುತ್ತೇವೆ. ನಮ್ಮ ವಯಸ್ಸು ಮತ್ತು ಅನುಭವ ನಮ್ಮನ್ನು ಮಾಗಿಸಿ ಮತ್ತೆಲ್ಲೋ ತಂದು ನಿಲ್ಲಿಸಿರುತ್ತವೆ. ವರ್ತಮಾನದ ಗಳಿಗೆಗಳನ್ನು ನಮ್ಮ ನೋಟವನ್ನು ಬದಲಾಯಿಸಿರುತ್ತವೆ. ಈ ಕ್ಷಣವನ್ನು ನಿರಾಕರಿಸಲು ಹೊರಡುವ ನಾವು, ಹಿಂದೆ ಎಂದೋ ಸವಿದದ್ದು ಸೊಗಸಾಗಿತ್ತು ಎಂದುಕೊಳ್ಳುತ್ತಿರುತ್ತೇವೆ. ಅದನ್ನೆ ಮತ್ತೊಮ್ಮೆ ಸವಿಯುವುದಕ್ಕೆ ಮನಸ್ಸು ಹಾತೊರೆಯುತ್ತದೆ. ಆದರೆ ಆ ಹಾತೊರೆಯುವಿಕೆಗೆ ಸ್ಥಾನ ಇರುವುದು ಕೇವಲ ಮನಸ್ಸಿನಲ್ಲಿ ಮಾತ್ರ.
ಬದಲಾಗಿರುವುದು ಶೆಣೈ ಹೊಟೆಲ್ಲಿನ ಅವಲಕ್ಕಿಯ ರುಚಿಯಲ್ಲ. ನಮ್ಮ ನಾಲಗೆ ರುಚಿ. ರುಚಿಕೆಡಿಸಿಕೊಂಡು ಕೂತ ನಮಗೆ ಎಂದೋ ತಿಂದ ಅವಲಕ್ಕಿಯೇ ಸೊಗಸಾಗಿರಬಹುದು ಅನ್ನಿಸಿರುತ್ತದೆ. ಅದು ಕೂಡ ಕೇವಲ ಮನೋವ್ಯಾಪಾರ. ತುಂಬಾ ಕಾಡಿದ ಅವಳ ಕಣ್ಣೋಟ, ಮನಸ್ಸಲ್ಲಿ ನಾವು ಗುನುಗುವ ಹಳೆಯ ಹಾಡು, ನಾವು ಸುತ್ತಾಡಿದ ತಾಣ, ನಮ್ಮ ಹಳೆಯ ಸ್ಕೂಲುಗಳೆಲ್ಲ ಎಲ್ಲೀ ತನಕ ನಮ್ಮ ನೆನಪುಗಳಲ್ಲಿ ಮಾತ್ರ ಎದುರಾಗುತ್ತದೆಯೋ ಅಲ್ಲೀ ತನಕ ಸೊಗಸಾಗಿರುತ್ತದೆ. ಅದನ್ನು ನಾವು ಮತ್ತೆ ಕಂಡಾಗ ಅದು ಅಷ್ಟೊಂದು ಖುಷಿ ಕೊಡುವುದಿಲ್ಲ. ಅದು ಮನಸ್ಸಿಗಿರುವ ಶಕ್ತಿ, ಮಿತಿ ಮತ್ತು ನಮ್ಮ ಅತ್ಯಂತ ದೊಡ್ಡ ಯಾತನೆ.
ಅದನ್ನೇ ಮುಂದಿಟ್ಟುಕೊಂಡು ನಾನೇನನ್ನು ಮೆಚ್ಚುತ್ತೇನೆ ಎಂದು ನೋಡುತ್ತಾ ಕುಳಿತೆ. ಸದ್ಯಕ್ಕೆ ನಾನು ಮೆಚ್ಚುವ ಕತೆ
ಹೇಗಿರಬೇಕು, ನಾನು ಮೆಚ್ಚುವ ಹಾಡು ಯಾರದ್ದು, ಇವತ್ತಿಗೂ ಕೆ ಎಸ್ ನರಸಿಂಹಸ್ವಾಮಿಯ ಹಾಡನ್ನೇ ನಾನೇಕೆ ಮೆಚ್ಚುತ್ತಿದ್ದೇನೆ, ನನ್ನ  ತರುಣ ಮಿತ್ರರಿಗೆ ಯಾಕೆ ಕೆ ಎಸ್‌ನರಸಿಂಹಸ್ವಾಮಿ ಇಷ್ಟವಾಗುವುದಿಲ್ಲ. ಇಷ್ಟವಾದರೂ ಯಾಕೆ ಕೆಎಸ್‌ನ ಅವರ ಸಹಜ ಆಯ್ಕೆಯಲ್ಲ. ರಾಜ್‌ಕುಮಾರ್ ನಟಿಸಿದ ’ಮಯೂರ’, ಶಂಕರ್ ಗುರು ಸಿನಿಮಾಗಳು ನನ್ನನ್ನು ಆವರಿಸಿದಷ್ಟು ಆಪ್ತವಾಗಿ ಅವರನ್ನೇಕೆ ಆವರಿಸಿಕೊಂಡಿಲ್ಲ ಎಂದೆಲ್ಲ ಯೋಚಿಸಿದೆ. ನಾನು ಅದ್ಬುತ ಎಂದು ವರ್ಣಿಸಿದ ಶಂಕರ್‌ಗುರು ಸಿನಿಮಾ ನೋಡುತ್ತಾ ನನ್ನ ಯುವ ಮಿತ್ರನೊಬ್ಬ ಆಕಳಿಸತೊಡಗಿದ.
ಆದರೆ, ಅವನಿಗೆ ಕುವೆಂಪು ಕಾದಂಬರಿ ಮಲೆಗಳಲ್ಲಿ ಮದುಮಗಳು’ ಮೆಚ್ಚುಗೆಯಾಯಿತು, ರಾಶೋಮನ್ ಸಿನಿಮಾ ಇಷ್ಟವಾಯಿತು. ಕ್ಲಾಸಿಕ್ ಮತ್ತು ಜನಪ್ರಿಯತೆಗೆ ಇರುವ ವ್ಯತ್ಯಾಸ ಇದೇ ಇರಬಹುದಾ ಎಂಬ ಗುಮಾನಿ ನನ್ನಲ್ಲಿ ಮೊಳೆಯಲು ಆರಂಭಿಸಿದ್ದೇ ಆಗ.
ಜನಪ್ರಿಯ ಸಂಗತಿಯೊಂದು ಆಯಾ ಕಾಲದಲ್ಲಿ, ಆಯಾ ದೇಶದಲ್ಲಿ ಎಲ್ಲರಿಗೂ ಮೆಚ್ಚುಗೆಯಾಗಿರುತ್ತದೆ. ಫ್ಯಾಷನ್ನಿನಂತೆ ಅದು ನಮ್ಮನ್ನು ಮುದಗೊಳಿಸಿರುತ್ತದೆ. ಆಗ ನಮ್ಮನ್ನು ಸಂತೋಷಗೊಳಿಸಿದ ಆ ಕೃತಿ ಕೊನೆಯವರೆಗೂ ನಮ್ಮ ಮನಸ್ಸಿನ ಅಂಗಳದಲ್ಲಿ ಹೂ ಬಿಟ್ಟ ಸುಂದರ ವೃಕ್ಷವಾಗಿಯೇ ಉಳಿದಿರುತ್ತದೆ. ಹತ್ತಾರು ವರ್ಷಗಳ ನಂತರವೂ ನಾವು ನಮ್ಮ ಮನಸ್ಸಿನಲ್ಲಿ ಹಿಂದಕ್ಕೆ ಹೋಗಿ ಆ ಮಾಧುರ್ಯವನ್ನು ಸವೆಯಬಲ್ಲವರಾಗಿರುತ್ತೇವೆ. ಆದರೆ, ನಮಗಿಂತ ಕಿರಿಯರಾದವರ ಪಾಲಿಗೆ ಅಂಥ ಮಾಧುರ್ಯವನ್ನು ನೀಡುವ ಸಂಗತಿ ಮತ್ತೇನೋ ಆಗಿರುತ್ತದೆ. ಪ್ರತಿಯೊಬ್ಬನೂ ತನ್ನ ಪರಿಸರ ಮತ್ತು ಸಂಭ್ರಮಕ್ಕೆ ಒಪ್ಪುವಂಥ ಒಂದು ಖುಷಿಯ ಸೆಲೆಯನ್ನು ಕಂಡುಕೊಂಡಿರುತ್ತಾನೆ.
ಇದು ನಮ್ಮ ವರ್ತಮಾನದ ಅಭಿರುಚಿಯನ್ನೂ ನಿರ್ಧಾರ ಮಾಡುತ್ತದೆ ಅಂದುಕೊಂಡಿದ್ದೇನೆ. ಹದಿನೆಂಟನೇ ವಯಸ್ಸಿಗೆ ಟಾಲ್‌ಸ್ಟಾಯ್ ಇಷ್ಟವಾಗುವುದಿಲ್ಲ, ಕಾನೂರು ಹೆಗ್ಗಡಿತಿ ಅಷ್ಟಾಗಿ ಪಥ್ಯವಾಗುವುದಿಲ್ಲ. ಕುಮಾರವ್ಯಾಸನನ್ನು ಓದಬೇಕು ಅನ್ನಿಸುವುದಿಲ್ಲ. ಆದರೆ, ಮತ್ತೊಂದು ಹಂತ ತಲುಪುತ್ತಿದ್ದಂತೆ ಎಲ್ಲವೂ ಬದಲಾಗಿರುತ್ತದೆ ಎಂದು ನಮಗೇ ಅನ್ನಿಸತೊಡಗುತ್ತದೆ.
ಸುಬ್ರಾಯ ಚೊಕ್ಕಾಡಿ ಬರೆದ ಎಂಥಾ ದಿನಗಳವು, ಮರೆಯಾಗಿ ಹೋದವು, ಮಿಂಚಂಥ ದಿನಗಳವು ಇನ್ನೆಂದೂ ಬಾರವು..ಎನ್ನುವ ಕವಿತೆಯನ್ನು ಓದಿದಾಗ ಅನ್ನಿಸುವುದು ಅದೇ ಆದರೆ, ಆ ಮಿಂಚಂಥಾ ದಿನಗಳ ಮಿಂಚು ನಮ್ಮ ತರುಣ ಮಿತ್ರರನ್ನೂ ಸ್ಪರ್ಶಿಸುತ್ತದೆಯಾ ಎನ್ನುವುದಷ್ಟೇ ಪ್ರಶ್ನೆ. ಅದು ಎಂದಿಗೂ ಅವರನ್ನು ಮುಟ್ಟಲಾರದು ಎಂಬ ಸತ್ಯದಲ್ಲೇ ಸಾತತ್ಯವಿದೆ, ಬೆಳವಣಿಗೆಯಿದೆ. ಹೊಸತನವಿದೆ ಮತ್ತು ಯೌವನವಿದೆ.
+++
ಈ ವಾರ ನಿಜಕ್ಕೂ ನಾನು ಬರೆಯಲು ಹೊರಟದ್ದು ಯೇಟ್ಸ್ ಕವಿತೆಗಳ ಕುರಿತು. ಯು ಆರ್ ಅನಂತಮೂರ್ತಿಯವರ ಉಜ್ವಲ ಅನುವಾದದಲ್ಲಿ ಅವು ಹೊಸ ಹೊಳಪು ಪಡಕೊಂಡಿವೆ. ಅದರ ಪೈಕಿ ವೃದ್ದಾಪ್ಯಕ್ಕೊಂದು ಪ್ರಾರ್ಥನೆ ಕವಿತೆ, ವೃದ್ದಾಪ್ಯದ ಕುರಿತು ಹೊಸ ಹೊಳಹೊಂದನ್ನು ನೀಡುವಂತಿದೆ. ನನ್ನನ್ನು ಪ್ರಬುದ್ದನಾದ ಚಿಂತನೆಗಳು ತುಂಬಿದ ಗಾಢವಾದ ವಿಚಾರಧಾರೆಗಳಿರುವ ಮುದುಕನನ್ನಾಗಿ ಮಾಡಬೇಡ.  ಹುಂಬತನ ಮತ್ತು ವ್ಯಾಮೋಹ ಇನ್ನೂ ಹಾಗೇ ಉಳಿದಿರುವ ಮುದುಕನಾಗಿ ಉಳಿಸು ಎಂದು ಯೇಟ್ಸ್ ಕೇಳಿಕೊಳ್ಳುತ್ತಾನೆ.
ನನಗೆ ಅಂಥ ಮುದುಕರು ಇಷ್ಟ, ಅದೇ ಕಾರಣಕ್ಕೆ ಖುಷ್‌ವಂತ್ ಸಿಂಗ್ ಇಷ್ಟ. ಎಪ್ಪತ್ತು ದಾಟುತ್ತಿದ್ದರೂ ಉಲ್ಲಾಸದಿಂದ ಓಡಾಡುವ, ನಮ್ಮ ಓರಗೆಯವರೇ ಅನ್ನಿಸುವ, ಯಾವುದೋ ಜಗತ್ತಿನಲ್ಲಿದ್ದಾರೆ ಅನ್ನಿಸದ, ನಮ್ಮಂತೆಯೇ ಯೋಚಿಸುವ, ಅವರ ಕಾಲದ ಬಗ್ಗೆ ಮತಾಡಿ ಬೋರು ಹೊಡೆಸದ ತುಂಟ ವೃದ್ಧರ ಪಟ್ಟಿಯಲ್ಲಿ ಎ ಎಸ್ ಮೂರ್ತಿ, ಸುಬ್ರಾಯ ಚೊಕ್ಕಾಡಿ ಮುಂತಾದವರಿದ್ದಾರೆ. ಅನಂತಮೂರ್ತಿಯವರನ್ನು ನೋಡುತ್ತಿದ್ದರೆ, ಅವರಿಗೆ ಅಷ್ಟು ವಯಸ್ಸಾಗಿದೆ
ಎಂದು ಅನ್ನಿಸುವುದೇ ಇಲ್ಲ. ಕೆಲವರು ನಮ್ಮ ಕಣ್ಣಮುಂದೆ, ನಮ್ಮ ಕಲ್ಪನೆಯಲ್ಲಿ ಹರೆಯದವರಾಗಿಯೇ ಇರುತ್ತಾರೆ. ಬಿ ಆರ್ ಲಕ್ಷ್ಮಣರಾವ್ ಅವರಿಗೆ ಅರವತ್ತಮೂರು ವಯಸ್ಸು ಎಂದು ಯಾರಾದರೂ ಹೇಳಿದರೆ, ಅದನ್ನು ಒಪ್ಪಿಕೊಳ್ಳಲು ಮನಸ್ಸು ನಿರಾಕರಿಸುತ್ತದೆ. ನಮಗಿನ್ನೂ ಅವರು ಜಾಲಿಬಾರಿನಲ್ಲಿ ಕೂತ ಪೋಲಿ ಗೆಳೆಯರಲ್ಲೊಬ್ಬರಾಗಿಯೇ ಕಾಣಿಸುತ್ತಾರೆ. ಮಹಡಿಯಲ್ಲಿ ನಿಂತ ಸುಂದರಿಯ ಮಿಂಚುವ ಮೀನ ಖಂಡಗಳನ್ನು ನೋಡಿ ಚಕಿತವಾಗುವ ಕಣ್ಣುಗಳಷ್ಟೇ ನಮ್ಮ ಪ್ರಜ್ಞೆಯಲ್ಲಿ ದಾಖಲಾಗಿರುತ್ತದೆ.
ವಯಸ್ಸು ಮತ್ತು ಅನುಭವ ಹೀಗೆ ನಮ್ಮನ್ನು ಮಾಗಿಸುತ್ತಾ ಹೋದ ಹಾಗೇ, ನಮ್ಮ ಸ್ಮೃತಿಯಲ್ಲಿ ಯೌವನದ ಕಂಪು, ಹೊಳಪು, ಉಲ್ಲಾಸ, ತೀವ್ರತೆ ಮತ್ತು ಬಿರುಸನ್ನು ಹಾಗೇ ಉಳಿಸಿರುತ್ತದೆ. ಅದೇ ನಮ್ಮನ್ನು ಜೀವಂತವಾಗಿ ಇಡುವ ಶಕ್ತಿ ಎಂದು ನಾನು ನಂಬಿದ್ದೇನೆ.
ಇಲ್ಲದೇ ಹೋದರೆ, ನಾವು ಹುತ್ತಗಟ್ಟಿದ, ಹೊರದಾರಿಗಳಿಲ್ಲದ ಕೋಟೆಯಲ್ಲಿ ಬಂದಿಗಳಾಗಿ ಉಳಿದೇ ಬಿಡುತ್ತೇವೇನೋ          ?
ಇದೂ ಒಂದು ಭ್ರಮೆಯೇ ಇರಬಹುದು. ಬದುಕನ್ನು ಪ್ರೀತಿಸುವ ರೀತಿ ಇರಬಹುದು. ಅಥವಾ ಬದುಕನ್ನು ನಾನು ತೀವ್ರವಾಗಿ ಪ್ರೀತಿಸುತ್ತಿದ್ದೇನೆ ಎಂದು ನಂಬಲು ನಾನು ಕಂಡುಕೊಂಡ ಒಂದು ಮಾರ್ಗವೂ ಇರಬಹುದು.


‍ಲೇಖಕರು avadhi

February 2, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

ಚಂಪಾ ಶೆಟ್ಟಿ । ಕಳೆದ ವಾರದಿಂದ । ಸಿನೆಮಾ ಮಾಡಬೇಕೆಂದಕೂಡಲೇ ಅನೇಕರಿಂದ ಬಂದದ್ದು ಒಂದೇ ಪ್ರಶ್ನೆ " ನಿಮ್ಮದು ಆರ್ಟ್ ಮೂವಿನಾ? ಕಮರ್ಷಿಯಲ್...

10 ಪ್ರತಿಕ್ರಿಯೆಗಳು

 1. ಶೆಟ್ಟರು (Shettaru)

  ಜೋಗಿ,
  “ಈ ಕ್ಷಣವನ್ನು ನಿರಾಕರಿಸಲು ಹೊರಡುವ ನಾವು, ಹಿಂದೆ ಎಂದೋ ಸವಿದದ್ದು ಸೊಗಸಾಗಿತ್ತು ಎಂದುಕೊಳ್ಳುತ್ತಿರುತ್ತೇವೆ” ಈ ಸಾಲು ನಮ್ಮ ಮನಸ್ಸಿಗೆ ಕನ್ನಡಿ ಹಿಡಿಯುತ್ತದೆ.
  ಇಂತಹ ಸಾಲಿಗೆ ಮತ್ತು ಈ ಸಾಲು ಕೊಟ್ಟ ನಿಮಗೆ ಧನ್ಯವಾದಗಳು
  -ಶೆಟ್ಟರು

  ಪ್ರತಿಕ್ರಿಯೆ
 2. aashiq moula

  htanna anubavavannu naviraagi niroopisiddhare.ee manassu ondu adbutha mayaa jagathu aagide.

  ಪ್ರತಿಕ್ರಿಯೆ
 3. ದಿವ್ಯ

  ಜೋಗಿರವರೆ,,
  ನೀವು ಹೇಳಿದಂತೆಯೇ.. ಮನಸ್ಸು ಹಿಂದಿದ್ದೇ ಬಯಸುತ್ತದೆ.. ಆದರೆ.. ಅಸ್ಸೆಪ್ಟ್ ಮಾಡಲ್ಲ..
  “ಜನ ಮಾತ್ರ ಚೇಂಜ್ ಕೇಳೋದಲ್ಲ.. ನಾವೂ ನಮ್ಮನ್ನೂ ಕೇಳ್ಲ್ಕೋತೀವಿ” ಅಂತ ಆಯ್ತು..!!

  ಪ್ರತಿಕ್ರಿಯೆ
 4. ಶಿವ

  ಸರ್, ಯೇಟ್ಸ್ , ಟೆನ್ನಿಸನ್ ಎಲ್ಲಾ ಬೇಡ ನಮ್ಗೆ..

  ಪ್ರತಿಕ್ರಿಯೆ
 5. hvvenugopal

  ನಿಮ್ಮ ಮೇಲಿನ ಬರಹದಲ್ಲಿ ’ಪ್ರತ್ಯಬಿಜ್ಞಾನ ಅಂದರೆ ಗೊತ್ತಿದ್ದದ್ದನ್ನು ಮತ್ತೆ ತಿಳಿದುಕೊಳ್ಳುವುದು.’ ಎಂದು ತಿಳಿಸಿದ್ದೀರಿ. ಆದರೆ ನಾನು ಓದಿಕೊಂಡಂತೆ ಪ್ರತ್ಯಭಿಜ್ಞಾನ ಎಂದರೆ ಒಂದು (ಭೌತಿಕ) ವಸ್ತುವಿನ ಮೂಲಕ ಮನುಷ್ಯನನ್ನು ಗುರುತು ಹಿಡಿಯುವುದು ಎಂದರ್ಥ. ಈ ಪದ ಕಾಳಿದಾಸನ ’ಅಭಿಜ್ಞಾನ ಶಾಕುಂತಲಮ್’ ಎಂಬ ನಾಟಕದ ಹೆಸರಿನಲ್ಲಿರುವ ಅಭಿಜ್ಞಾನ ಎಂಬ ಪದದಲ್ಲಿ ಕಾಣಬಹುದು. ಆಭಿಜ್ಞಾನ ಎಂದರೆ ಗುರುತಿನ ಉಂಗುರದ ಮೂಲಕ ಎಂದರ್ಥ, ಹಾಗೆ ನೆನಪಾದವಳು ಶಕುಂತಲೆ ಎಂದು ನಾಟಕದ ಅರ್ಥ ತಿಳಿವು. ಇದರ ಇನ್ನಷ್ಟು ವಿವರಣೆಯನ್ನು ತಾವು ’ಕುರ್ತುಕೋಟಿ’ಯವರ ಇದೇ ನಾಟಕದ ಬಗೆಗೆ ಬರೆದ ವಿಮರ್ಶಾ ಲೇಖನವಾದ ’ಪ್ರತ್ಯಭಿಜ್ಞಾನ’ ವನ್ನು ಓದಿಕೊಳ್ಳಬಹುದು.
  …………………ಡಾ.ಹೆಚ್.ವಿ.ವೇಣುಗೋಪಾಲ್

  ಪ್ರತಿಕ್ರಿಯೆ
  • ಜೋಗಿ

   ಅಭಿಜ್ಞಾನದಲ್ಲಿ ಉಂಗುರ ಇಲ್ಲ. ಅದರ ಸಾಮಾನ್ಯ ಅರ್ಥ ತಿಳುವಳಿಕೆ, ಸಾಂದರ್ಭಿಕ ಅರ್ಥ ಜ್ಞಾನಸಾಧನವಾದ ಗುರುತು. ಅಭಿಜ್ಞ ಅಂದರೆ ಪಂಡಿತ, ತಿಳಿದವನು. ಆ ತಿಳುವಳಿಕೆಗೆ ಕಾರಣವಾಗುವುದು ಅಭಿಜ್ಞಾನ ಇರಬಹುದು. ಪ್ರತ್ಯಭಿಜ್ಞಾನ ಎಂದರೆ ಗೊತ್ತಿದ್ದದ್ದನ್ನೇ ಮತ್ತೆ ಮತ್ತೆ ತಿಳಿದುಕೊಳ್ಳುವುದು . ಕುರ್ತಕೋಟಿಯವರೂ ಇದನ್ನೇ ಹೇಳಿದ್ದಾರೆ ಎಂದು ನೆನಪು. ನನ್ನ ಪುಸ್ತಕದ ಕಪಾಟಿನಲ್ಲಿ ಪ್ರತ್ಯಜ್ಞಿಜ್ಞಾನ ಇದೆ. ಕೈಗೆ ಸಿಗುತ್ತಿಲ್ಲ. ಒಂದೆರಡು ದಿನಗಳಲ್ಲಿ ಹುಡುಕಿ ಬರೆಯುವೆ.

   ಪ್ರತಿಕ್ರಿಯೆ
 6. ವೆಂಕಟಕೃಷ್ಣ.ಕೆ.ಕೆ. ಶಾರದಾ ಬುಕ್ ಹೌಸ್ ಪುತ್ತೂರು (ದ .ಕ )

  ಎಲ್ಲವು ಬದಲಾಗುತ್ತಿರುವ ಈ ಜಗತ್ತಲ್ಲಿ ಅದು ಹೇಗೆ ನಮ್ಮ ಯೋಚನೆ/ರುಚಿ ಮಾತ್ರ ಬದಲಾಗದೆ ಇರಲು ಸಾಧ್ಯ?
  ಅಂದಿಗೆ ಅದು ಸರಿ(ರುಚಿ)ಇಂದಿಗೆ ಇದುಸರಿ(ರುಚಿ)
  ಇದನ್ನು ಅರಿತರೆ ಜೀವನ ಯಾವತ್ತೂ ಸಿಹಿ.
  ಅಂತ ನಿಮಗೆ ಅನಿಸೂದಿಲ್ವೇ ಜೋಗಿಯವರೇ?

  ಪ್ರತಿಕ್ರಿಯೆ
 7. RJ

  ಇದು ನಮ್ಮ ವರ್ತಮಾನದ ಅಭಿರುಚಿಯನ್ನೂ ನಿರ್ಧಾರ ಮಾಡುತ್ತದೆ ಅಂದುಕೊಂಡಿದ್ದೇನೆ. ಹದಿನೆಂಟನೇ ವಯಸ್ಸಿಗೆ ಟಾಲ್‌ಸ್ಟಾಯ್ ಇಷ್ಟವಾಗುವುದಿಲ್ಲ,
  ಕಾನೂರು ಹೆಗ್ಗಡಿತಿ ಅಷ್ಟಾಗಿ ಪಥ್ಯವಾಗುವುದಿಲ್ಲ. ಕುಮಾರವ್ಯಾಸನನ್ನು ಓದಬೇಕು ಅನ್ನಿಸುವುದಿಲ್ಲ. ಆದರೆ, ಮತ್ತೊಂದು ಹಂತ ತಲುಪುತ್ತಿದ್ದಂತೆ
  ಎಲ್ಲವೂ ಬದಲಾಗಿರುತ್ತದೆ ಎಂದು ನಮಗೇ ಅನ್ನಿಸತೊಡಗುತ್ತದೆ.
  *
  ಖಂಡಿತವಾಗಿಯೂ ಒಪ್ಪುವ ಮಾತು.ಇಲ್ಲದಿದ್ದರೆ ಎಲ್ಕೇಜಿಯಲ್ಲಿ ರೈಮ್ಸ್ ಹೇಳುವ ಹುಡುಗ ಮುಂದಿನ ಒಂದೆರಡು ವರ್ಷದೊಳಗೆ ಮನೆಯಲ್ಲಿ ನಡೆಯುವ
  ಭಜನೆಯಲ್ಲಿ ದೇವರನಾಮ ಹೇಳುತ್ತಾನೆ.ಕಾಲೇಜಿಗೆ ಸೇರುತ್ತಲೇ ರಾಕ್ ಉಲಿಯುತ್ತಾನೆ.ಜೊತೆಗೇ ಬಾಲಿವುಡ್ ಸಂಗೀತ.ಮುಂದಕ್ಕೆ ಸಾಗಿದಂತೆ
  ಕನ್ನಡದ ಭಾವಗಿತೆಗಳು,ಶಾಸ್ತ್ರೀಯ ಸಂಗೀತ ಇತ್ಯಾದಿ ಇತ್ಯಾದಿ…
  ಇದೊಂಥರ cycle!
  ಹೊಳೆದಂಡೆ ಮೇಲೆ ಹೆಂಗಳೆಯರ ಸೀರೆ ಕದ್ದು ಮರವನೇರಿ ಕುಳಿತ ತುಂಟ ಕೃಷ್ಣ,
  ಮುಂದೆ ಇನ್ಯಾವುದೋ ಹೆಂಗಸಿಗಾಗಿ ನೂರಾರು ಸೀರೆಗಳನ್ನು ಸೃಷ್ಟಿಸಿದ್ದು-
  ಏನನ್ನು ಬಿಂಬಿಸುತ್ತದೆ?
  Jogi sir,fantastic.
  -RJ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: