ಜೋಗಿ ಬರೆದಿದ್ದಾರೆ: ಸುತ್ತಮುತ್ತ ಸುಳೀತಾಳ ಕೈಯ ತಾನ ಎಳೀತಾಳ

ಹಾಡು ಹಳೆಯದಾದರೇನು…. ನಾನು ನವನವೀನ!
ಹಾಡುಗಳ ಪೈಕಿ ನನಗೆ ಒಂದು ಕಾಲದಲ್ಲಿ ಇಷ್ಟವಾಗುತ್ತಿದ್ದದ್ದು ಮಡೋನಾ, ಬ್ರೇಯಾನ್ ಆಡಮ್ಸ್, ಫಿಲ್ ಕೊಲಿನ್ಸ್ ಮುಂತಾದವರು. ಆಗ ನಾವೆಲ್ಲ ಕಾವ್ಯವಿರುವುದು ಓದುವುದಕ್ಕೇ ಹೊರತು ಹಾಡುವುದಕ್ಕಲ್ಲ ಎಂಬ ರಾಮಚಂದ್ರ ಶರ್ಮ ಸಿದ್ಧಾಂತದ ಆರಾಧಕರಾಗಿದ್ದೆವು. ಹೀಗಾಗಿ ಕನ್ನಡ ಭಾವಗೀತೆಗಳನ್ನು ಕೇಳುತ್ತಿರಲಿಲ್ಲ. ಚಿತ್ರಗೀತೆಗಳು ಸಿನಿಮಾದ ಒಂದು ಸಂದರ್ಭಕ್ಕೆ ಸೀಮಿತ. ಅವನ್ನು ಅದರಿಂದಾಚೆ ಕೇಳಬಾರದು ಎಂದು ನಿರ್ಧಾರ ಮಾಡಿಬಿಟ್ಟಿದ್ದೆವು. ಕರ್ನಾಟಕ ಸಂಗೀತ ಗಣಿತ ಪಾಠದಂತೆ ಬೋರು ಹೊಡೆಸುತ್ತಿತ್ತು. ಭೀಮಸೇನ ಜೋಷಿ ಪರಿಚಯ ಆಗಿರಲಿಲ್ಲ. ಆ ಕಾಲಕ್ಕೆ ಕೊಂಚ ಮಾಡರ್ನ್ ಎಂದು ತೋರಿಸಿಕೊಳ್ಳಲೆಂದೋ ಏನೋ ನಾವು ಪಾಪ್ ಸಂಗೀತದ ಮೊರೆಹೋದೆವು. ಕಂಬಾರರ ನಾಟಕದ ಹಾಡುಗಳ ಹಾಗೆ ಇಂಗ್ಲಿಷ್ ಹಾಡುಗಳಲ್ಲೂ ಕೂಡ ಗೀತಕಾರನೇ ಹಾಡಿ, ಕುಣಿಯುವ ಕ್ರಮ ಇಷ್ಟವೂ ಆಗುತ್ತಿತ್ತು.  ನಮ್ಮ ಹರಿದಾಸರೂ ಹಿಂದೆ ಹಾಗೇ ಹಾಡುತ್ತಿದ್ದರು ಎಂದೆಲ್ಲ ನಾವು ಕಲ್ಪಿಸಿಕೊಂಡು ಅದೇ ಸತ್ಯ ಎಂದು ಒಪ್ಪಿಕೊಂಡು ವಾದಿಸುತ್ತಿದ್ದೆವು.
ಆಗ ಕೇಳಿದ ನೂರಾರು ಹಾಡುಗಳ ಪೈಕಿ ಮಡೋನ್ನಾಳ  ಪ್ಲೀಸ್ ಪಾಪಾ ಡೋಂಟ್ ಪ್ರೀಚ್, ಐ ಯಾಮ್ ಎ ಮೆಟೀರಿಯಲ್ ಗರ್ಲ್, ಫಿಲ್ ಕೊಲಿನ್ಸ್‌ನ ದಿಸ್ ಈಸ್ ಅನದರ್ ಡೇ ಇನ್ ಪ್ಯಾರಡೈಸ್, ಎವರ್‌ಲಾಸ್ಟಿಂಗ್ ಲವ್ ಸಾಂಗ್ಸ್ ಕೆಸೆಟ್ಟಿನಲ್ಲಿದ್ದ  ಲವ್ ಮಿ ಟೆಂಡರ್, ಲವ್ ಮಿ ಟ್ರೂ – ಮುಂತಾದ ಹಾಡುಗಳನ್ನು ಕೇಳುತ್ತಾ ಕೇಳುತ್ತಾ ಅರ್ಥ ಮಾಡಿಕೊಳ್ಳುತ್ತಾ ಬಂದ ದಿನಗಳನ್ನು ನಾನೂ ಕುಂಟಿನಿಯೂ ಈಗಲೂ ನೆನಪಿಸಿಕೊಳ್ಳುತ್ತಾ ಇರುತ್ತೇವೆ. ನಮ್ಮಂಥ ಹಳ್ಳಿಯಿಂದ ಬಂದ ಹುಡುಗರ ಕಷ್ಟವೆಂದರೆ ಇಂಗ್ಲಿಷ್  ಪಾಪ್ ಸಾಂಗ್‌ಗಳ ಸಾಹಿತ್ಯ ತಿಳಿಯದೇ ಹೋಗುವುದು.

He walks on, doesn’t look back,
He pretends he can’t hear her,
starts to whistle as he crosses the street
Feels embarrassed to be there..
ಎಂಬ ಫಿಲ್ ಕಾಲಿನ್ಸ್ ಗೀತೆಯಲ್ಲಿ  ಬರುವ ಎಂಬರಾಸ್ಡ್’ ಪದ ನಮಗೆ ಏನು ಮಾಡಿದರೂ ತಿಳಿಯುತ್ತಲೇ ಇರಲಿಲ್ಲ.  ಅದು ಗೊತ್ತಾದಾಗ ಹಾಡಿನ ಅರ್ಥವೇ ಬದಲಾಯಿತು.
ಈ ಗೀತೆಯ ಹಿನ್ನೆಲೆ ಆಮೇಲೆ ಗೊತ್ತಾಯಿತು. ಅಮೆರಿಕಾದಲ್ಲಿರುವ ಅನಾಥರ, ದಿಕ್ಕಿಲ್ಲದವರ ಕುರಿತು ಬರೆದ ಹಾಡಿದು. ದಾರಿಯಲ್ಲಿ ಹೋಗುವ ಒಬ್ಬನನ್ನು ಆಕೆ ಕೇಳುತ್ತಾಳೆ: ನೀವು ನನಗೆ ಸಹಾಯ ಮಾಡ್ತೀರಾ, ನನಗೆ ದಿಕ್ಕಿಲ್ಲ  ದೆಸೆಯಿಲ್ಲ, ಉಳಕೊಳ್ಳೋದಕ್ಕೆ ಮನೆಯಿಲ್ಲ, ನೀವು ಸಹಾಯ ಮಾಡ್ತೀರಾ?‘. ಆತ ಸುಮ್ಮನೆ ನಡೆದುಹೋಗುತ್ತಾನೆ, ಹಿಂತಿರುಗಿ ನೋಡೋದಿಲ್ಲ. ಅವಳು ಹೇಳಿದ್ದು ಕೇಳಿಸಲಿಲ್ಲ ಎಂದು ನಟಿಸುತ್ತಾನೆ. ಅದು ಕೇಳದಿರಲಿ ಅಂತ ಸುಮ್ಮನೆ ಸಿಳ್ಳೆ ಹಾಕುತ್ತಾನೆ. ಅಲ್ಲಿರೋದಕ್ಕೆ ಅವನಿಗೆ ವಿಪರೀತ ಮುಜುಗರವಾಗುತ್ತೆ.ಅಂಥವರಿಗೆ ಸಹಾಯ ಮಾಡಿ. ಅದು ಸ್ವರ್ಗದಲ್ಲಿದ್ದ ಮತ್ತೊಂದು ದಿನ ಎಂದು ಹಾಡು ಕೊನೆಯಾಗುತ್ತದೆ. ಅದರಲ್ಲಿ ಬರುವ ಥಿಂಕ್ ಟ್ವೈಸ್ ಅನ್ನೋದನ್ನು ನಾವು ಸಿಂಗ್ ಟ್ವೈಸ್ ಅಂತಲೇ ಕೇಳಿಸಿಕೊಳ್ಳುತ್ತಿದ್ದೆವು. ಆಗೆಲ್ಲ, ಈ ಇಂಗ್ಲಿಷ್ ಕೆಸೆಟ್ಟುಗಳ ಜೊತೆ ಹಾಡಿನ ಸಾಲುಗಳನ್ನೂ ಇವರು ಯಾಕೆ ಕೊಡೋಲ್ಲ ಅಂತ ಸಿಟ್ಟು ಬರುತ್ತಿತ್ತು. ಕನಿಷ್ಟ ಆ ಹಾಡುಗಳ ಬಗ್ಗೆ ಯಾರಾದರೂ ಬರೆಯಬಾರದೇ ಅನ್ನಿಸುತ್ತಿತ್ತು. ಆಗಿನ್ನೂ ಇಂಟರ್‌ನೆಟ್ ಜಗತ್ತಿಗೆ ನಾವು ಕಾಲಿಟ್ಟಿರಲಿಲ್ಲ.
ಹೀಗಾಗಿ ಈ ಹಾಡುಗಳ ಸಾಹಿತ್ಯವನ್ನು ವಿವರಿಸುವವರು ನಮಗೆ ಸಿಗಲೇ ಇಲ್ಲ. ನಮ್ಮ ಇಂಗ್ಲಿಷ್ ಮೇಷ್ಟ್ರಿಗೆ ಅದನ್ನು  ಕೇಳಿಸಿದಾಗ ಅವರು ಆ ಹಾಡನ್ನು ಗಂಭೀರವಾಗಿ ಕೇಳಿ ಒಂದು ನಿಮಿಷ ಮೌನ ತಾಳಿ ಇಂಥ ಹಾಡುಗಳನ್ನೆಲ್ಲ ನಾವು ಕೇಳ್ತಾ ಕೇಳ್ತಾ ಅರ್ಥ ಮಾಡ್ಕೋಬೇಕು. ತುಂಬಾ ಚೆನ್ನಾಗಿದೆ ಎಂದಷ್ಟೇ ಹೇಳಿ ನಮ್ಮನ್ನು ಬೇಸ್ತು ಬೀಳಿಸಿದ್ದರು.
-೨-
ಮಣಿಕಾಂತ್ ಬರೆದಿರುವ  ಹಾಡು ಹುಟ್ಟುವ ಸಮಯ’ ಓದುತ್ತಿದ್ದರೆ ಇದೆಲ್ಲ ನೆನಪಾಯಿತು. ಮಣಿಕಾಂತ್ ನಿಜಕ್ಕೂ ಉತ್ಸಾಹ ಮತ್ತು ಲವಲವಿಕೆಯಿಂದ ಇದನ್ನು ಬರೆದಿದ್ದಾರೆ. ಕವಿಗಳನ್ನು ನಂಬುವುದು ಕಷ್ಟ. ಅದರಲ್ಲೂ ಸಿನಿಮಾ ಕವಿಗಳಿಗೆ ಕೊಂಚ ಉಡಾಫೆ ಜಾಸ್ತಿ ಎಂದು ನಂಬಿಕೊಂಡವರೂ ಕೂಡ ಓದಬಹುದಾದಂತೆ ಈ ಗೀತೆಗಳ ಹಿನ್ನೆಲೆಯನ್ನು ಕಟ್ಟಿಕೊಟ್ಟಿದ್ದಾರೆ ಮಣಿಕಾಂತ್.
ಪತ್ರಿಕೋದ್ಯಮ ಸೇರಿ, ಸಿನಿಮಾ ನೋಡುವುದು ಅನಿವಾರ್ಯ ಕರ್ಮವಾಗಿ, ವಾರಕ್ಕೆ ಎರಡು ಮೂರರಂತೆ ಸಾವಿರಾರು ಸಿನಿಮಾಗಳನ್ನು ನೋಡಿ ನಾನು ಮತ್ತು ನನ್ನ ಗೆಳೆಯ ಉದಯ ಮರಕಿಣಿಯೂ ಸುಸ್ತಾಗಿ ಕೂತ ಹೊತ್ತಲ್ಲಿ ನಮ್ಮನ್ನು ಸಂತೈಸುತ್ತಿದ್ದದ್ದು ಹಂಸಲೇಖ ಬರೆಯುತ್ತಿದ್ದ ಗೀತೆಗಳು. ಆಗೀಗ ಮನೋಹರ್ ಕೂಡ ಅದ್ಭುತ ಸಾಹಿತ್ಯದಿಂದ ಬೆಚ್ಚಿ ಬೀಳಿಸುತ್ತಿದ್ದರು. ಉದಯ್ ರಾಗ ಚೆನ್ನಾಗಿದೆ ಅಂದರೆ ನಾನು ಸಾಹಿತ್ಯಕ್ಕಾಗಿ ತಡಕಾಡುತ್ತಿದ್ದೆ. ಸಂಗೀತ ಎಂಬುದು ನನಗೆ ಸೆಕೆಂಡರಿ. ಸಾಹಿತ್ಯವೇ ಪ್ರೈಮರಿ. ಎರಡೂ ಸೇರಿ ಅದ್ಬುತವಾದ ಪರಿಣಾಮ ಮೂಡಿಸುತ್ತದೆ ಅನ್ನುವುದು ಬೇರೆ ಮಾತು.
ಹಾಗೆ ಕೇಳಿ ಮೆಚ್ಚುತ್ತಿದ್ದ ಹಾಡುಗಳು ತುಂಬಾ ಕಾಲ ನಮ್ಮನ್ನು ಕಾಡುತ್ತಿದ್ದವು. ಸಿನಿಮಾದ ಆಚೆಗೂ ಚಿತ್ರಗೀತೆಗಳು ದಾಟಿಕೊಳ್ಳಬಲ್ಲವು ಎಂಬುದನ್ನು ಹಂಸಲೇಖ, ಮನೋಹರ್, ಜಯಂತ ಕಾಯ್ಕಿಣಿ ಮುಂತಾದವರು ತೋರಿಸಿಕೊಟ್ಟಿದ್ದರು. ಅದಕ್ಕೂ ಮುಂಚೆ ಅಶ್ವತ್ಥ್ ಸಂಗೀತ ನೀಡಿದ ಎಲ್ಲಾ ಹಾಡುಗಳೂ, ಗೋಪಾಲ ವಾಜಪೇಯಿ ಬರೆದ ನಾಗಮಂಡಲದ ಗೀತೆಗಳು, ಎಚ್ ಎಸ್ ವೆಂಕಟೇಶಮೂರ್ತಿ ಬರೆದ ಚಿನ್ನಾರಿ ಮುತ್ತಾದ ಗೀತೆಗಳು ಇವೆಲ್ಲದರ ಜೊತೆಗೇ ಲಂಕೇಶರು ಬರೆದ ಕೆಂಪಾದವೋ ಎಲ್ಲಾ ಕೆಂಪಾದವೋ ಮತ್ತು ಕರಿಯವ್ವನ ಗುಡಿತಾವ ಅರಳ್ಯಾವೆ ಬಿಳಿಹೂವು ಗೀತೆ ನಮ್ಮನ್ನು ಮತ್ತೆ ಮತ್ತೆ ರೋಮಾಂಚಗೊಳಿಸುತ್ತಿತ್ತು. ಅದರೊಂದಿಗೆ ರಾಮದಾಸ ನಾಯ್ಡು ಬರೆದ ಅಪರಿಚಿತ ಚಿತ್ರದ ಸವಿನೆನಪುಗಳು ಬೇಕು ಹಗಲೂ ರಾತ್ರಿ ಕಾಡುತ್ತಿತ್ತು.
ಮಣಿಕಾಂತ್ ಈ ಹಾಡುಗಳನ್ನೆಲ್ಲ ನೆನಪಿಸಿಕೊಟ್ಟಿದ್ದಾರೆ. ಅವುಗಳ ಹಿನ್ನೆಲೆಯನ್ನು ತಿಳಿಸಿದ್ದಾರೆ.  ಒಂದಷ್ಟು ಲೇಖನಗಳನ್ನು ಓದಿದ ನಂತರ ಎಲ್ಲವೂ ಒಂದೇ ಥರ ಅನ್ನಿಸಿದರೂ, ಅಲ್ಲಿ ವೈವಿಧ್ಯಮಯ ವ್ಯಕ್ತಿಗಳು, ಸಾಹಿತಿಗಳು ಬಂದು ಹೋಗುವುದರಿಂದ ಅದಕ್ಕೊಂದು ವ್ಯಕ್ತಿವಿಶಿಷ್ಟ ಗುಣ ದಕ್ಕಿಬಿಟ್ಟಿದೆ.
ಇದನ್ನು ಓದುತ್ತಿದ್ದರೆ ತುಂಬಾ ಸುಲಭವಾಗಿ ಮಾಡಬಹುದಾದದ್ದು ಅನ್ನಿಸಿಬಿಡುತ್ತದೆ. ಆದರೆ ದಾಖಲೆಗಳೇ ಇಲ್ಲದ ಚಿತ್ರರಂಗದಲ್ಲಿ ಒಂದು ಹಾಡು ಹೇಗೆ ಹುಟ್ಟಿತು ಎಂದು ಹುಡುಕುವುದು ಕಷ್ಟದ ಕೆಲಸ.  ಆ ಸಂಗೀತ ನಿರ್ದೇಶಕ ಸಿಗಬೇಕು, ಆತ ಮಾತಾಡುವ ಹುಮ್ಮಸ್ಸಿನಲ್ಲಿರಬೇಕು, ಮಣಿಕಾಂತ್ ಬರೆಯಬಯಸುವ ಹಾಡು ವಿಶಿಷ್ಟ ಸಂದರ್ಭದಲ್ಲಿ ಮೂಡಿ ಬಂದಿರಬೇಕು, ಅದಕ್ಕೊಂದು ಐತಿಹಾಸಿಕತೆ ಪ್ರಾಪ್ತವಾಗಬೇಕು. ಹಾಗೆಲ್ಲ ಆಗದ ಹೊರತು ಅದರ ಕುರಿತು ಬರೆಯುವುದಕ್ಕೇನೂ ಇರುವುದಿಲ್ಲ. ಆ ಹುಡುಕಾಟದಲ್ಲಿ ಮಣಿಕಾಂತ್ ಗೆದ್ದಿದ್ದಾರೆ.
ಮಣಿಕಾಂತ್ ಶೈಲಿಯ ಬಗ್ಗೆ ಹೇಳಬೇಕಿಲ್ಲ. ಅವರು ಎಲ್ಲವನ್ನೂ ಕೊಂಚ ಉತ್ಪ್ರೇಕ್ಷೆ ಮಾಡುತ್ತಾರೆ ಎಂಬ ನನ್ನ ಆಕ್ಷೇಪಕ್ಕೆ ಅರ್ಥವಿಲ್ಲ. ಇದು ಉತ್ಪ್ರೇಕ್ಷೆಯ ಕಾಲ. ಟೀವಿಗಳು ಅಬ್ಬರಿಸಿ ಬೊಬ್ಬಿಡುತ್ತಿರುವ ಹೊತ್ತಿಗೆ ಬರಹಗಾರ ಕೊಂಚ ಎತ್ತರದ ದನಿಯನ್ನೇ ಮಾತಾಡಬೇಕಾಗುತ್ತದೆ. ಮಣಿಕಾಂತ್ ಅದನ್ನು ಪಾಲಿಸಿದ್ದಾರೆ.
ಹಾಡು ಹುಟ್ಟುವ ಸಮಯ’ ದ ಕುರಿತು ನನ್ನದೊಂದು ಮೆಚ್ಚುಗೆಯಿದೆ. ಒಂದೊಂದು ಹಾಡೂ ಕೂಡ ನನ್ನ ಪಾಲಿಗೆ ಒಂದೊಂದು ಘಟನೆಗಳನ್ನು ನೆನಪಿಸುತ್ತದೆ. ನನ್ನನ್ನು ಆ ದಿನಗಳಿಗೆ ಕೊಂಡೊಯ್ಯುತ್ತದೆ. ಅದು ಎಲ್ಲರ ಪಾಲಿಗೂ ಸತ್ಯ ಎಂದು ನಾನು ನಂಬಿದ್ದೇನೆ.
ಅದಕ್ಕೆ ಕಾರಣ ಇಷ್ಟೇ. ಹೇಗೆ ರಸಿಕ ಒಬ್ಬನೇ ಗುಂಡು ಹಾಕುವುದಿಲ್ಲವೋ ಹಾಗೇ, ಒಬ್ಬನೇ ಸಿನಿಮಾ ನೋಡುವುದಿಲ್ಲ. ಒಂದು ಸಿನಿಮಾ ನೋಡುವ ಹೊತ್ತಿಗೆ ಅವನ ಜೊತೆ ಗೆಳೆಯರೋ, ಗೆಳತಿಯರೋ, ಮಕ್ಕಳೋ , ಮನೆಯವರೋ, ಸಂಗಾತಿಯೋ ಇರುತ್ತಾರೆ. ಆ ಸಿನಿಮಾ ನೋಡುತ್ತಾ ನೋಡುತ್ತಾ ಅವರ ಮನಸ್ಸಿನಲ್ಲಿ ಒಂದು ಚಿತ್ರ ರೂಪುಗೊಂಡಿರುತ್ತದೆ. ಆ ಸಿನಿಮಾ ನೋಡಿದ ಕ್ಷಣ ಅಮರವಾಗುತ್ತದೆ.
ಆ ಅಮರ ಕ್ಷಣಗಳನ್ನು ಒಂದು ಹಾಡು, ಆ ಹಾಡಿನ ನೆನಪು ಕಣ್ಮುಂದೆ ತಂದು ನಿಲ್ಲಿಸುತ್ತದೆ. ಆ ದಿನಗಳು, ಕ್ಲಾಸಿಗೆ ಚಕ್ಕರ್ ಹಾಕಿ ಸಿನಿಮಾ ನೋಡಿದ್ದು, ಮೂವತ್ತು ಮೈಲಿ ಸೈಕಲ್ಲಿನಲ್ಲಿ ಹೋಗಿ ರಾತ್ರಿ ಮರಳಿದ್ದು, ಮರಳೋ ಹೊತ್ತಿಗೆ ಮರುಳು ಮಳೆಗೆ ಸಿಕ್ಕಿಹಾಕಿಕೊಂಡದ್ದು, ಅವಳು ಮುನಿಸಿಕೊಂಡು ಅರ್ಧದಿಂದ ಎದ್ದು ಹೋಗಿದ್ದು, ಪಕ್ಕದ ಸೀಟಲ್ಲಿ ಕೂತವನ ಮೈ ಬಿಸುಪಿಗೆ ಕಂಪಿಸಿದ್ದು- ಹೀಗೆ ಒಬ್ಬೊಬ್ಬರಿಗೆ ಒಂದೊಂದು ನೆನಪನ್ನು ಅದು ಮರುಕಳಿಸೀತು.
ಮತ್ತ ಮತ್ತ ನೋಡತಾಳ ಅತ್ತ ಇತ್ತ ಓಡತಾಳ
ಹುತ್ತುತ್ತು ಆಡಿದಾಂಗ ಮತ್ತಷ್ಟು ಕಾಡತಾಳ
ಸುತ್ತಮುತ್ತ ಸುಳೀತಾಳ ಕೈಯ ತಾನ ಎಳೀತಾಳ
ಮುತ್ತಿ ಮೈಯ ನಿಲ್ಲತಾಳ ಕಣ್ಣಿನಾಗ ಕೊಲ್ಲತಾಳ
ಮೆರೀತಾಳ ಸುಖ ಸುರೀತಾಳ, ಸುರೀತಾಳ ಮತ್ತ ಕರೀತಾಳ..
ಹಾಡಿನ ಕುರಿತು ಮಣಿಕಾಂತ್ ಬರೆದದ್ದು ಓದುತ್ತಿದ್ದಂತೆ ಗಿರೀಶ್ ಕಾರ್ನಾಡ್, ಶಂಕರ್‌ನಾಗ್ ಆಡಿಸಿದ ನಾಗಮಂಡಲ, ಪ್ರಕಾಶ್ ರೈ, ವನಿತಾ ವಾಸು, ನಾಗಾಭರಣ, ಅಶ್ವತ್ಥರ ಮೀನು ಸಾರಿನಂಥ ಧ್ವನಿ ಎಲ್ಲವೂ ನೆನಪಾದವು. ಮತ್ತೆ ಹತ್ತೆಂಟು ವರುಷ ಹಿಂದಕ್ಕೆ ಹೋಗಿ ಆ ಹಾಡನ್ನು ಕಣ್ಮುಂದೆ ತಂದುಕೊಳ್ಳಲು ಯತ್ನಿಸಿದೆ. ಖುಷಿಯಾಯಿತು.
ಅಂಥ ಖುಷಿಯನ್ನು ಮಣಿಕಾಂತ್ ಎಲ್ಲರಿಗೂ ಕೊಟ್ಟಿದ್ದಾರೆ. ಪಡೆದುಕೊಂಡು ಧನ್ಯರಾಗಿರಿ.

‍ಲೇಖಕರು avadhi

November 30, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

5 ಪ್ರತಿಕ್ರಿಯೆಗಳು

 1. RJ

  ಹಿಂದೊಮ್ಮೆ ‘ಈಗಲ್ಸ್’ ಬ್ಯಾಂಡ್ ನ ‘ಹೋಟೆಲ್ ಕ್ಯಾಲಿಫೋರ್ನಿಯಾ’ ಹಾಡು ಕೇಳಿದಾಗ ನಾನೂ ಹೀಗೇ ಬೇಸ್ತು ಬಿದ್ದಿದ್ದೆ.
  ಅದ್ಯಾರೋ ಹುಡುಗಿಯ ಮೇಲೆ ಬರೆದಿರುವ ಹಾಡಿದು ಅಂತ.ಆಮೇಲೆ ಗೊತ್ತಾಯಿತು ಅದೊಂದು ಹೋಟೆಲ್ ಮೇಲೆ
  ಬರೆದಿರುವ ಹಾಡೆಂದು..!
  ಇನ್ನು ಮಣಿಕಾಂತ್ ಮತ್ತು ಉತ್ಪ್ರೇಕ್ಷೆ:ತಪ್ಪೇನಿಲ್ಲ-
  ಜೋ ದಿಕ್ತಾ ಹೈ
  ವಹೀ ತೊ ಭಿಕ್ತಾ ಹೈ !
  🙂
  -RJ

  ಪ್ರತಿಕ್ರಿಯೆ
 2. Siri

  after a long time jogi back in his form.
  a clean writeup with tender sarcasam.
  we need more of this…

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: