ಜೋಗಿ ಬರೆದ ಕಥೆ: ಕಾರಣ

images
ನಮ್ಮ ಮನೆಯಲ್ಲಿ ಏನೂ ನಡೀತಿಲ್ಲ.
ತುಂಬ ವರ್ಷದಿಂದ ಹೀಗೇ ಬದುಕ್ತಾ ಇದ್ದೀವಿ. ಅಪ್ಪ ಬೆಳಗ್ಗೆ ಎದ್ದು ಬ್ಯಾಂಕಿಗೆ ಹೋಗ್ತಾರೆ. ಅಮ್ಮ ಬೆಳಗ್ಗೆ ಬೇಗ ಎದ್ದು ಸ್ನಾನ ಮುಗಿಸಿ, ಅಡುಗೆ ಮಾಡಿ ಅಪ್ಪನಿಗೆ ಬುತ್ತಿ ಕಟ್ಟಿ ಕೊಡುತ್ತಾರೆ. ತಂಗಿ ಒಂಬತ್ತೂವರೆಗೆ ಸ್ಕೂಲಿಗೆ ಹೋಗುತ್ತಾಳೆ. ನಾನು ಆಫೀಸಿಗೆ ಹೊರಡುತ್ತೇನೆ. ಅಮ್ಮ ಸ್ನಾನ ಮುಗಿಸಿ, ಊಟ ಮಾಡಿ ಅಪ್ಪನ ಬಟ್ಟೆಗಳಿಗೆ ಇಸ್ತ್ರಿ ಮಾಡಿ, ಪಕ್ಕದ ಮನೆಯ ನಿರ್ಮಲಕ್ಕನನ್ನು ಮಾತಾಡಿಸಿ, ಸಣ್ಣಗೆ ನಿದ್ದೆ ಮಾಡಿ, ಮೂರೂವರೆ ಹೊತ್ತಿಗೆ ಮಹಡಿ ಮೇಲೆ ಆರಿಸಿದ ಬಟ್ಟೆಗಳನ್ನೆಲ್ಲ ತಂದು ಮಡಿಚಿ ಕಪಾಟಿನಲ್ಲಿಟ್ಟು, ಮೈದಾ ಹಿಟ್ಟು ಕಲಸಿ ಪೂರಿ ಮಾಡುವುದಕ್ಕೆ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಟ್ಟುಕೊಂಡು ನಾನೂ ತಂಗಿ ಅಪ್ಪ ಬರುವುದಕ್ಕೆ ಕಾಯುತ್ತಿರುತ್ತಾಳೆ. ನಾನೂ ಆರೂವರೆಗೆ ಮನೆಗೆ ಹೋಗುತ್ತೇನೆ. ತಂಗಿ ಐದೂವರೆಗೆಲ್ಲ ಬಂದಿರುತ್ತಾಳೆ. ಅಪ್ಪ ಏಳು ಗಂಟೆಗೆ ಮನೆಗೆ ಬರುತ್ತಾರೆ. ಒಬ್ಬೊಬ್ಬರು ಬರುತ್ತಿದ್ದ ಹಾಗೆ ಅಮ್ಮ ಬಿಸಿಬಿಸಿಯಾಗಿ ಪೂರಿ ಮಾಡಿ ಕೊಡುತ್ತಾಳೆ. ತಂಗಿ ಅದಕ್ಕೆ ಪೈನಾಪಲ್ ಜಾಮ್ ನೆಂಚಿಕೊಂಡು ತಿನ್ನುತ್ತಾಳೆ. ನಾನು ಆಲೂಗಡ್ಡೆ ಪಲ್ಯ ಹಾಕಿಕೊಳ್ಳುತ್ತೇನೆ. ಅಪ್ಪ ಮಧ್ಯಾಹ್ನದ ಅವರೇಕಾಳು ಹುಳಿಯೋ ಮತ್ತೊಂದೋ ಇದ್ದರೆ ಅದನ್ನೇ ಬೆರೆಸಿಕೊಂಡು ಪೂರಿ ತಿನ್ನುತ್ತಾ ಲೋಕಾಭಿರಾಮದ ಮಾತಾಡುತ್ತಾರೆ. ಆಮೇಲೆ ತಂಗಿ ಟ್ಯೂಷನ್ ಕ್ಲಾಸಿಗೆ ಹೋಗುತ್ತಾಳೆ. ನಾನು ಹೊರಗೆ ಸುತ್ತಾಡಲು ಹೋಗುತ್ತೇನೆ. ಅಪ್ಪ ಮೂಲೆಮನೆಯ ರೆಡ್ಡಿಯ ಜೊತೆ ಅವರ ಮನೆ ಜಗಲಿಯಲ್ಲಿ ಕೂತು ಮಾತಾಡುತ್ತಿರುತ್ತಾರೆ.
ಎಂಟೂವರೆಗೆ ಎಲ್ಲರೂ ಮನೆ ಸೇರುತ್ತೇವೆ. ನಂತರ ಎಲ್ಲರೂ ಕೂತು ಭಗವದ್ಗೀತೆ ಓದುತ್ತೇವೆ. ತುಂಬ ಬೇಸರವಾದ ದಿನ ಚೌಕಾಬಾರಾ ಆಡುತ್ತೇವೆ.. ಹತ್ತೂವರೆಗೆ ಮೊಸರನ್ನ ಊಟ ಮಾಡಿ ಮಲಗುತ್ತೇವೆ. ರಾತ್ರಿ ಎಷ್ಟೋ ಹೊತ್ತಿಗೆ ತಂಗಿ ಎದ್ದು ಫ್ಯಾನ್ ಆಫ್ ಮಾಡಿರುತ್ತಾಳೆ. ನಾನು ಎಚ್ಚರಾದರೆ ಮತ್ತೆ ಫ್ಯಾನ್ ಹಾಕುತ್ತೇನೆ. ಬೆಳಗ್ಗೆ ಏಳುವ ಹೊತ್ತಿಗೆ ತಂಗಿ ಆಗಲೇ ಎದ್ದು ಹಾಲು ತರಲು ಹೋಗಿರುತ್ತಾಳೆ. ಹೀಗೆ ನಾನು ಇಪ್ಪತ್ತಾರು ವರುಷಗಳಿಂದ, ತಂಗಿ ಹದಿನೇಳು ವರ್ಷಗಳಿಂದ, ಅಪ್ಪ ಐವತ್ತೆಂಟು ವರ್ಷದಿಂದ , ಅಮ್ಮ ಐವತ್ತೆರಡು ವರ್ಷಗಳಿಂದ ಬದುಕಿಕೊಂಡು ಬಂದಿದ್ದೇವೆ. ಯಾರಿಗೂ ಸಾಯಬೇಕು ಅನ್ನಿಸಿಲ್ಲ,. ಯಾರೂ ಕಣ್ಣೀರು ಹಾಕಿಲ್ಲ, ಅಪ್ಪ ಅಮ್ಮ ಯಾವತ್ತೂ ಜಗಳ ಆಡಿಲ್ಲ. ನಾನೂ ತಂಗಿ ಕೂಡ ಎಂದೂ ಹೊಡೆದಾಡಿಕೊಂಡಿಲ್ಲ. ಅಪ್ಪ ನನಗೆ ಯಾವತ್ತೂ ಬೈಯಲಿಲ್ಲ. ತಂಗಿ ಹುಡುಗರು ತಿವಿಯೋ ಹಾಗೆ ನೋಡ್ತಾರೆ ಅಂತ
ಎಂದೂ ದೂರಿಲ್ಲ.
E512~Bleu-II-Posters
ನೀವೆಲ್ಲ ಜಾಣರು. ನಿಮ್ಮನೆಯಲ್ಲಿ ಸುಖ ನಲಿದಾಡುತ್ತಿದೆ ಅಂತ ಬಂದುಹೋದವರೆಲ್ಲ ಹೇಳುತ್ತಾರೆ. ನಮ್ಮಪ್ಪ ಯಾರ ಜೊತೆಗೂ ಜಗಳ ಆಡಿದ್ದನ್ನು ಯಾರೂ ನೋಡಿಲ್ಲ. ಸಂಬಳದ ದಿನ ಅಷ್ಟೂ ಸಂಬಳ ತಂದು ಅಮ್ಮನ ಕೈಗೆ ಕೊಡುತ್ತಾರೆ. ಅಮ್ಮ ಅದನ್ನು ಹಾಲಿನವನಿಗೆ, ಪೇಪರಿನವನಿಗೆ, ತರಕಾರಿ ಅಂಗಡಿಗೆ, ದಿನಸಿ ಅಂಗಡಿಗೆ ಹಂಚುತ್ತಾಳೆ. ಉಳಿದ ಹಣವನ್ನು ದೇವರ ಮನೆಯಲ್ಲಿರುವ ಪೆಟ್ಟಿಗೆಯಲ್ಲಿ ಹಾಕಿಡುತ್ತಾಳೆ. ಮುಂದಿನ ತಿಂಗಳ ಸಂಬಳ ಬಂದ ನಂತರ ಅದನ್ನು ಅಮ್ಮನೇ ತೆಗೆದುಕೊಂಡು ಹೋಗಿ ಬ್ಯಾಂಕಿಗೆ ಜಮಾ ಮಾಡಿ ಬರುತ್ತಾಳೆ. ಹೀಗೆ ಕೂಡಿಟ್ಟ ದುಡ್ಡು ಎರಡೋ ಮೂರೋ ಲಕ್ಷ ಇರಬಹುದು. ಅದು ತಂಗಿಯ ಮದುವೆಗೆ ಎಂದು ಅಪ್ಪ ಅಮ್ಮ ಆಗಾಗ ಹೇಳುತ್ತಿರುತ್ತಾರೆ. ತಂಗಿ ಆಗೆಲ್ಲ ಕಿವಿಯನ್ನು ನೆಟ್ಟಗಾಗಿಸಿಕೊಂಡು ಅಮ್ಮನ ಮಾತು ಕೇಳುತ್ತಾ ಕೂತಿರುತ್ತಾಳೆ. ಅದರ ಬಗ್ಗೆ ಅವಳಿಗೆ ಯಾವ ಭಾವನೆಯೂ ಇದ್ದಂತೆ ಅನ್ನಿಸುವುದಿಲ್ಲ.
ವರುಷಕ್ಕೆ ಎರಡು ಬಾರಿ ಅಮ್ಮ ಎಲ್ಲರಿಗೂ ಹೊಸ ಬಟ್ಟೆ ತರುತ್ತಾಳೆ. ಒಮ್ಮೊಮ್ಮೆ ಅವಳೊಂದಿಗೆ ತಂಗಿಯೂ ಹೋಗಿ ಬರುತ್ತಾಳೆ. ಹಾಗೆ ತಂದ ಬಟ್ಟೆಯನ್ನು ನಾವು ದೀಪಾವಳಿಯ ದಿನ ಮತ್ತು ಯುಗಾದಿಯ ದಿನ ಹಾಕಿಕೊಳ್ಳುತ್ತೇವೆ. ಆವತ್ತು ಮನೆಯಲ್ಲಿ ಸಿಹಿತಿಂಡಿ ಮಾಡುತ್ತಾರೆ. ಅಪ್ಪ ಪೂಜೆ ಮಾಡುತ್ತಾರೆ.
ಇತ್ತೀಚೆಗೆ ನಾನು ಇದರ ಬಗ್ಗೆಯೇ ಯೋಚಿಸುತ್ತಿದ್ದೇನೆ. ಎಲ್ಲರ ಮನೆಯೂ ನಮ್ಮ ಮನೆಯ ಹಾಗೇ ಇರುತ್ತದಾ ಎಂಬ ಪ್ರಶ್ನೆ ನನ್ನನ್ನು ಆಗಾಗ ಕಾಡುತ್ತದೆ. ಪಕ್ಕದ ಮನೆಯ ಸತ್ಯವತಿ ಮತ್ತು ಶ್ರೀಕಾಂತ ಅಪರಾತ್ರಿಯಲ್ಲಿ ಜೋರಾಗಿ ಜಗಳ ಆಡುವುದನ್ನು ನಾನು ಕೇಳಿಸಿಕೊಂಡಿದ್ದೇನೆ. ಒಂದೊಂದು ಸಾರಿ ರಾತ್ರೋರಾತ್ರಿ, ಸತ್ಯವತಿ ನಮ್ಮ ಮನೆಗೆ ಬರುತ್ತಾಳೆ. ನಮ್ಮ ಮನೆಯಲ್ಲೇ ಮಲಗುತ್ತಾಳೆ. ಬೆಳಗ್ಗೆ ನಾನು ಏಳುವ ಹೊತ್ತಿಗೆ ಹೊರಟು ಹೋಗಿರುತ್ತಾಳೆ. ಆಮೇಲೆ ಸತ್ಯವತಿ ಮತ್ತು ಶ್ರೀಕಾಂತ ಇಬ್ಬರೂ ನಗು ನಗುತ್ತಾ ಹೊರಗೆ ಹೋಗುತ್ತಾರೆ. ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಹೀಗಾಗಿ ಅವರದು ಶ್ರೀಮಂತ ಕುಟುಂಬ ಎಂದು ಅಕ್ಕಪಕ್ಕದವರು ಮಾತಾಡುವುದು ನನ್ನ ಕಿವಿಗೂ ಬಿದ್ದಿದೆ. ಶ್ರೀಮಂತರಾದ್ದರಿಂದಲೋ ಏನೋ ಅವರೊಂದು ಒಳ್ಳೆಯ ಜಾತಿಯ ನಾಯಿ ಸಾಕಿದ್ದಾರೆ. ಅವರು ಆಫೀಸಿಗೆ ಹೊರಟು ಹೋದ ನಂತರ ಅದು ತುಂಬ ಹೊತ್ತು  ಮನೆಯೊಳಗೇ ಬೊಗಳುತ್ತಿರುತ್ತದೆ.
ನಾವು ತುಂಬ ಒಳ್ಳೆಯವರು ಎಂದು ನನಗೆ ಅನ್ನಿಸಲಿಕ್ಕೆ ಶುರುವಾಗಿದೆ. ನಮ್ಮಪ್ಪನಿಗೆ ಯಾವ ದುಶ್ಚಟವೂ ಇಲ್ಲ..ಅವರು ಯಾವತ್ತೂ ಸಿಗರೇಟು ಸೇದಿಲ್ಲ. ಕುಡಿದಿಲ್ಲ. ಯಾವತ್ತೂ ಇನ್ನಷ್ಟು ಬೇಕೆಂದು ಆಶೆಪಟ್ಟಿಲ್ಲ. ನಮ್ಮಮ್ಮನ ಹತ್ತಿರ ಒಂದು ಸಲವೂ ಜಗಳ ಆಡಿಲ್ಲ. ಊಟ ಸರಿಯಿಲ್ಲ, ಅನ್ನ ಬಿಸಿಯಿಲ್ಲ, ಹೊರಟದ್ದು ತಡವಾಯಿತು, ನೀನು ನನ್ನನ್ನು ಪ್ರೀತಿಸ್ತಿಲ್ಲ, ನಿಂದ್ಯಾಕೋ ಅತಿಯಾಯ್ತು, ರಗಳೆ ಮಾಡಬೇಡ, ನಿಮ್ಮಮ್ಮ ಮನೆಗೆ ಹೋಗಿ ಕೂತ್ಕೋಬೇಡ ಅಂತ ಯಾವತ್ತೂ ಬೈದಿಲ್ಲ. ನಮ್ಮಮ್ಮನೂ ಅಷ್ಟೇ, ಯಾವತ್ತೂ ಬಂಗಾರ ಕೊಡಿಸಿಲ್ಲ, ಸೀರೆ ತಂದುಕೊಟ್ಟಿಲ್ಲ, ಬಳೆ ಮಾಡಿಸಿಲ್ಲ, ಪಕ್ಕದ ಮನೆಯವರು ಟೀವಿ ತಂದರು, ನಮ್ಮಲ್ಲಿ ಫ್ರಿಜ್ ಇಲ್ಲ ಅಂತ ಯಾವತ್ತೂ ಕೇಳಿಲ್ಲ. ನನ್ನ ತಂಗಿಯೂ ಅಷ್ಟೇ. ಅವಳ ಗೆಳತಿಯರು ಜೀನ್ಸ್ ಪ್ಯಾಂಟ್ ಹಾಕಿಕೊಂಡು ಸ್ಕೂಟಿಯಲ್ಲಿ ಓಡಾಡುತ್ತಿದ್ದರೂ ಯಾವತ್ತೂ ಅದಕ್ಕೆ ಆಸೆಪಟ್ಟಿಲ್ಲ. ಪಿಕ್ನಿಕ್‌ಗೆ ಹೋಗ್ಲಾ ಅಂತ ಅಪ್ಪನ ಹತ್ತಿರ ಕೇಳಿದವಳೇ ಅಲ್ಲ. ನಾಳೆ ನನ್ನ ಫ್ರೆಂಡ್ಸ್ ಎಲ್ಲಾ ಟೂರ್ ಹೋಗ್ತಿದ್ದಾರೆ ಅಂತ ಹೇಳಿದಾಗ ಅಪ್ಪನೇ ನೀನೂ ಹೋಗು ಅಂದರೆ ಹೋಗುತ್ತಾಳೆ. ಏನೂ ಮಾತಾಡದೇ ಇದ್ದರೆ ಸುಮ್ಮನಿರುತ್ತಾಳೆ.
ನಾನೂ ಅಷ್ಟೇ. ಸ್ನೇಹಿತರ ಜೊತೆ ವಿಪರೀತ ಸುತ್ತಾಡುವುದಿಲ್ಲ. ಒಬ್ಬನೇ ಸಿನಿಮಾಕ್ಕೆ ಹೋಗುವುದಿಲ್ಲ. ನನ್ನ ಕ್ಲಾಸಲ್ಲೇ ಓದುವ ಶರ್ಮಿಳಾ ನನಗೊಂದು ದಿನ ಒಂದು ಕಾಗದ ಕೊಟ್ಟಳು. ನಾನು ಅದನ್ನು ಓದುವುದಕ್ಕೂ ಹೋಗಲಿಲ್ಲ. ಎಲ್ಲರೂ ಮೊಬೈಲ್ ಕೊಂಡಾಗ ನಾನು ಅಪ್ಪನನ್ನು ಮೊಬೈಲ್ ಕೊಡಿಸಿ ಎಂದು ಕೇಳುವುದಕ್ಕೂ ಹೋಗಲಿಲ್ಲ. ಅದರಿಂದ ಏನು ಉಪಯೋಗ ಎಂದು ನಾನೇ ಯೋಚಿಸಿ ಸುಮ್ಮನಾಗಿದ್ದೆ.
ಹೀಗೆ ನಾವೆಲ್ಲ ಸುಖವಾಗಿ, ಸಂತೋಷವಾಗಿ ಇರುವುದಕ್ಕೆ ಕಾರಣ ಏನು ಎಂದು ಹಲವರು ಆಶ್ಚರ್ಯಪಟ್ಟಿದ್ದಾರೆ. ಪಕ್ಕದ ಮನೆಯವರಿಗೆ ಕಾಯಿಲೆ, ಮತ್ಯಾರಿಗೋ ಶುಗರ್, ಇನ್ಯಾರಿಗೋ ಬೀಪಿ, ಮತ್ತೊಬ್ಬರ ಮನೆಯಲ್ಲಿ ಜಾಂಡೀಸ್- ಹೀಗೆ ಕಾಯಿಲೆಗಳು ಬರುತ್ತಿದ್ದರೆ ನಾವೆಲ್ಲ ಆರೋಗ್ಯವಾಗಿದ್ದೆವು. ಅದಕ್ಕೆ ಕಾರಣ ನಮ್ಮ ಸಂಯಮ. ನಾವು ಯಾವತ್ತೂ ಬಾಯಿರುಚಿಗೆ ಅಂತ ತಿನ್ನುವುದಕ್ಕೆ ಹೋಗಲಿಲ್ಲ. ಐಸ್‌ಕ್ರೀಮ್ ಹೇಗಿದೆ ಅಂತ ನನ್ನ ತಂಗಿ ಇನ್ನೂ ರುಚಿ ನೋಡಿಲ್ಲ. ಪಾನಿಪೂರಿ ನಮ್ಮ ಬೀದಿಯಲ್ಲೇ ಸಿಗುತ್ತದೆ ಅಂತ ಗೆಳೆಯರು ಹೇಳುತ್ತಾರೆ. ಆ ಅಂಗಡಿಯತ್ತ ನಾನು ತಲೆ ಹಾಕಿಲ್ಲ. ಮನೆಯಲ್ಲಿ ಮಾಡುವ ಅಡುಗೆ ಬಿಟ್ಟು ಬೇರೆ ಏನನ್ನೂ ನಾವು ಯಾವತ್ತೂ ತಿಂದಿಲ್ಲ.
ನಮ್ಮಪ್ಪನಿಗೆ ಹೇಳಿಕೊಳ್ಳುವಷ್ಟೇನೂ ಸಂಬಳ ಬರುವುದಿಲ್ಲ. ಬರುವ ಸಂಬಳದಲ್ಲೇ
ನಾವು ಸುಖವಾಗಿದ್ದೇವೆ. ಅಪ್ಪ ಯಾರ ಬಳಿಯೂ ಸಾಲಮಾಡಿಲ್ಲ. ಯಾರಿಗೂ ಸಾಲ ಕೊಟ್ಟಿಲ್ಲ. ಹೀಗೆ ನಾವು ಸುಖವಾಗಿರುವುದಕ್ಕೆ ಕಾರಣ ನಾವು ನಂಬಿಕೊಂಡು ಬಂದ ತತ್ವ. ಯಾವತ್ತೂ ಇನ್ನೊಬ್ಬರನ್ನು ನೋಡಿ ಕರುಬಬಾರದು. ತನ್ನದಲ್ಲದ್ದಕ್ಕೆ ಆಸೆ ಪಡಬಾರದು. ಇದ್ದದ್ದರಲ್ಲೇ ತೃಪ್ತಿ ಪಡಬೇಕು. ಯಾರ ಜೊತೆಗೂ ಜಗಳ ಆಡಬಾರದು. ಮನಸ್ಸನ್ನು ಸಂತೋಷವಾಗಿ ಇಟ್ಟುಕೊಳ್ಳಬೇಕು. ಅಸೂಯೆ ಪಡಬಾರದು. ಎಲ್ಲರನ್ನು ಅಣ್ಣತಮ್ಮಂದಿರಂತೆ ಕಾಣಬೇಕು. ಸ್ವಾರ್ಥ ಒಳ್ಳೆಯದಲ್ಲ, ಯಾರನ್ನೂ ದ್ವೇಷಿಸಬಾರದು ಎಂದು ನಂಬಿಕೊಂಡು ಬಂದಿದ್ದೇವೆ. ಅದನ್ನು ಆಚರಿಸುತ್ತಿದ್ದೇವೆ.
ಹೀಗಿರುತ್ತಾ ನಮ್ಮ ಮನೆಗೆ ದುಬೈಯಿಂದ ಬಂದ ನಮ್ಮ ತಾಯಿಯವರ ತಮ್ಮ ಒಂದು ಟೀವಿ ತಂದುಕೊಟ್ಟರು.. ಅದನ್ನು ತೆಗೆದುಕೊಳ್ಳಲು ನಮ್ಮಪ್ಪ ಏನು ಮಾಡಿದರೂ ಒಪ್ಪಲಿಲ್ಲ. ಮತ್ತೊಬ್ಬರ ಸೊತ್ತು ನಮ್ಮದಲ್ಲ ಎಂದು ನಂಬಿಕೊಂಡು ಬಂದವರು ಅವರು. ಆದರೆ ನಮ್ಮ ಮಾವ ತುಂಬಾ ಒತ್ತಾಯಿಸಿ, ಅದನ್ನು ತೆಗೆದುಕೊಳ್ಳದೇ ಹೋದರೆ ಮನಸ್ಸಿಗೆ ತೀರಾ ಬೇಸರವಾಗುತ್ತೆ ಅಂತ ಹೇಳಿದ ಮೇಲೆ ಅದನ್ನು ನಮ್ಮ ಮನೆಯಲ್ಲಿಟ್ಟು ಹೋದರು.
ಅವರು ಮಾರನೆಯ ವರುಷ ದುಬೈಯಿಂದ ಬರುವ ಹೊತ್ತಿಗೂ ಆ ಟೀವಿಯನ್ನು ನಾವು ಬಿಚ್ಚಿರಲಿಲ್ಲ. ಅದನ್ನು ನೋಡಿ ಮಾವನಿಗೆ ಸಿಟ್ಟು ಬಂತು. ಅಷ್ಟು ಸಣ್ಣ ವಿಚಾರಕ್ಕೆ ಸಿಟ್ಟು ಬಂದದ್ದು ನೋಡಿ, ನಮ್ಮಪ್ಪನಿಗೆ ನಮ್ಮಮ್ಮನಿಗೆ ಆಶ್ಚರ್ಯವಾಯಿತು. ಮಾವ ಸಿಟ್ಟಿನಲ್ಲಿ ಥಕಥೈ ಕುಣಿದಾಡಿ ಟೀವಿಯನ್ನು ಬಿಚ್ಚಿ ಡ್ರಾಯಿಂಗ್ ರೂಮಿನಲ್ಲಿಟ್ಟು, ಪಕ್ಕದ ಬೀದಿಗೆ ಹೋಗಿ ಒಂದು ಸೆಟ್ ಟಾಪ್ ಬಾಕ್ಸ್ ತಂದು ಅದನ್ನು ಟೀವಿಗೆ ಜೋಡಿಸಿಯೇ ಬಿಟ್ಟರು. ಆವತ್ತು ಒಂಬತ್ತು ಗಂಟೆಗೆ ನಾವೆಲ್ಲ ಕೂತು ಒಂದು ಸಿನಿಮಾ ನೋಡಿದೆವು. ಮಾವ ಮೂರು ದಿನ ನಮ್ಮನೆಯಲ್ಲಿದ್ದು ಇಡೀ ದಿನ ನಮ್ಮನ್ನೂ ಟೀವಿ ಮುಂದೆ ಕೂರಿಸಿ, ಸೀರಿಯಲ್‌ಗಳನ್ನೂ ಸಿನಿಮಾಗಳನ್ನೂ ತೋರಿಸಿದರು. ಸಿನಿಮಾ ನೋಡಿ ಅತ್ತು, ನಕ್ಕು, ಕುಣಿದಾಡಿದರು. ಜಗತ್ತಿನಲ್ಲಿ ಎಂತೆಂಥಾ ಜನರಿದ್ದಾರೆ ಅಂತ ನಮಗೆ ಆಶ್ಚರ್ಯವಾಯಿತು.
ಜನ ಸಣ್ಣ ಪುಟ್ಟ ಕಾರಣಕ್ಕೆ ಜಗಳ ಆಡುತ್ತಿದ್ದರು, ವಾದ ಮಾಡುತ್ತಿದ್ದರು. ದುಡ್ಡಿಗಾಗಿ ಏನೇನೋ ಮಾಡುತ್ತಿದ್ದರು. ಕೊಲೆ ನಡೆಯುತ್ತಿತ್ತು. ಮೋಸ ಆಗುತ್ತಿತ್ತು. ಅಣ್ಣ ತಂಗಿ ಭೀಕರವಾಗಿ ಹೊಡೆದಾಡುತ್ತಿದ್ದರು, ಅಪ್ಪ ಮಗಳನ್ನು ದಬದಬ ಬಡಿಯುತ್ತಿದ್ದ. ಹೆಂಡತಿ ಗಂಡನ ಮೂತಿಗೆ ತಿವಿದು ನಂಗೇನು ಸುಖ ಕೊಟ್ಟಿದ್ದೀಯೋ ಬೋಳಿಮಗನೇ ಎಂದು ಕಿರುಚುತ್ತಿದ್ದಳು. ಅಪ್ಪ ರಾತ್ರಿ ಕುಡಿದು ಬಂದು ಹೆಂಡತಿಗೆ ದಬದಬ ಬಡಿಯುತ್ತಿದ್ದ. ಮಗಳು ಇದನ್ನೆಲ್ಲ ಬಾಯ್‌ಫ್ರೆಂಡಿನ ಹತ್ತಿರ ಹೇಳಿಕೊಂಡು ಅವನನ್ನು ತಬ್ಬಿಕೊಂಡು ಅಳುತ್ತಿದ್ದಳು. ಆ ಬಾಯ್‌ಫ್ರೆಂಡ್ ತನ್ನ ಅಕ್ಕನ ಮಗಳನ್ನು ಮುದ್ದಾಡುತ್ತಾ ನಾವೇ ಸುಖಿಗಳು ಕಣೇ, ಒಂದೊಂದು ಮನೆಯಲ್ಲಿ ಏನೆಲ್ಲ ಜಗಳ ಆಗ್ತಿರುತ್ತೆ ಗೊತ್ತಾ ಎಂದು ಕತೆ ಹೇಳುತ್ತಿದ್ದ. ಮಗ ಇದನ್ನೆಲ್ಲ ನೋಡಿ ಹಿಂಸೆಯಾಗಿ ರೇಜಿಗೆಯಾಗಿ ಪಕ್ಕದ ಬೀದಿಯಲ್ಲಿರುವ ಬಾರಿನಲ್ಲಿ ಕೂತು ಕಂಠಪೂರ್ತಿ ಕುಡಿದು ತೂರಾಡಿಕೊಂಡು ಮನೆಗೆ ಬರುತ್ತಿದ್ದ. ಬೈಯುವ ಅಪ್ಪನ ಕಪಾಳಕ್ಕೆ ಬಿಗಿಯುತ್ತಿದ್ದ.
******
ಅಪ್ಪ ಆವತ್ತು ಲೇಟಾಗಿ ಬಂದಿದ್ದರು. ಅಮ್ಮ ಅವಳ ಹತ್ತಿರ ಜಗಳಕ್ಕೆ ನಿಂತಳು. ಅಪ್ಪ ಅಮ್ಮನ ಕಪಾಳಕ್ಕೆ ಬೀಸಿದರು. ತಂಗಿ ಅದನ್ನು ಪಕ್ಕದ ಮನೆಯ ಶಿವಶಂಕರನ ಹತ್ತಿರ ಹೇಳಿಕೊಂಡು ಅವನನ್ನು ತಬ್ಬಿಕೊಂಡು ಅತ್ತಳು. ಶಿವಶಂಕರ ಆವತ್ತು ರಾತ್ರಿ ತನ್ನ ಅಕ್ಕನ ಮಗಳು ಸರೋಜಿನಿಯ ಮುಂದೆ ಇದನ್ನೆಲ್ಲ ಹೇಳಿಕೊಂಡು ಅವಳಿಗೆ ಮುತ್ತಿಟ್ಟ.
ಆವತ್ತು ರಾತ್ರಿ ನಾನು ಒಂಚೂರು ಕುಡಿದು, ಒಂದೇ ಒಂದು ಸಿಗರೇಟು ಸೇದಿ ಹನ್ನೆರಡೂವರೆಗೆ ಮನೆಗೆ ಬರುವ ಹೊತ್ತಿಗೆ ಅಪ್ಪ ಬಾಗಿಲಲ್ಲೇ ಕೂತಿದ್ದರು. ಯಾಕೋ ಲೇಟು ಎಂದು ಗದರಿಸಿದರು. ನಾನು ಉತ್ತರಿಸದೇ ಒಳಗೆ ಹೋಗುತ್ತಿದ್ದರೆ ನನ್ನ ಕತ್ತಿನ ಪಟ್ಟಿ ಹಿಡಿದು ಕುಡಿತೀಯೇನೋ ಬೇವರ್ಸಿ ಅಂತ ಬೈದರು. ನನಗೆ ಪಿತ್ಥ ನೆತ್ತಿಗೇರಿ ಅಪ್ಪನನ್ನು ಜಾಡಿಸಿ ಒದ್ದೆ. ಮುದ್ದೆಯಾಗಿ ಮೂಲೆಯಲ್ಲಿ ಬಿದ್ದರು. ಹುಟ್ಟಿಸಿದ ಅಪ್ಪನ ಮೇಲೆ ಕೈ ಮಾಡ್ತೀಯೇನೋ ಪಾಪಿ. ನಿನ್ನ ಕೈ ಸೇದಿಹೋಗ ಅಂತ ಅಮ್ಮ ಬೈದಳು. ತಂಗಿ ಅಡುಗೆ ಮನೆಯ ಕತ್ತಲಲ್ಲಿ ನಿಂತುಕೊಂಡು ಶಿವಶಂಕರನ ಜೊತೆ ಫೋನಲ್ಲಿ ಪಿಸುಮಾತಾಡುತ್ತಿದ್ದಳು

‍ಲೇಖಕರು avadhi

June 20, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

10 ಪ್ರತಿಕ್ರಿಯೆಗಳು

 1. malathi S

  hahahahahaha..what extremes……….was about to delcare’what a boring family’ when the ending had me in splits
  so ‘T.V from dubai’ is the demon hanh???
  🙂
  malathi S

  ಪ್ರತಿಕ್ರಿಯೆ
  • ಕೇಶವ

   ಜೋಗಿ,
   ಟಿವಿ, ಇಂಟರ್ನೆಟ್, ಮೊಬೈಲ್ – ಮನುಷ್ಯನನ್ನು ಪಾಶ್ಚಾತೀಕರಣದತ್ತ, ಬಂಡವಾಳಶಾಹಿತ್ವದತ್ತ, ಸ್ವಕೇಂದ್ರೀಕರಣದತ್ತ ನಮಗೆ ಗೊತ್ತಾಗುವ ಮೊದಲೇ ತಂದೊಯ್ದು ನಿಲ್ಲಿಸಿಬಿಟ್ಟಿದೆ. ನಿಮ್ಮ ಈ ಚಿಕ್ಕ ಕತೆ ಅದರ ಒಂದು ಪುಟ್ಟ ಭಾಗವನ್ನು, ದುಬೈ ಮತು ಟಿವಿಗಳ ರೂಪಕಗಳ ಮೂಲಕ ಚೆನ್ನಾಗಿ ಹಿಡಿದಿದೆ. ಆದರೆ ಇದಕ್ಕೆ ಪರಿಹಾರವೇ ಇಲ್ಲವೇ!

   ಪ್ರತಿಕ್ರಿಯೆ
 2. ಶ್ರೀ

  ಗುಲಾಬಿ ಟಾಕೀಸು ಕೂಡ ಇದ್ನೇ ಹೇಳುತ್ತೆ.. ಮೂರ್ಖರ ಪೆಟ್ಟಿಗೆ ಮತ್ತು ಮುರ್ಕು ಬಾಗಿಲಿನ ಮನೆಯ ಕಥೆಯಾ? 🙂

  ಪ್ರತಿಕ್ರಿಯೆ
 3. suptadeepti

  Unnecessary exposure is the demon, I guess.
  ಮನುಷ್ಯ ಸುಖಿಯಾಗಿರಲು ಏನು ಬೇಕು, ಏನು ಬೇಡ ಎನ್ನುವುದರ ಸರಳ ನಿರೂಪಣೆ ಈ ಕಥೆ.
  -ಜ್ಯೋತಿ ಮಹಾದೇವ್.

  ಪ್ರತಿಕ್ರಿಯೆ
 4. shivu.k

  ಒಂದು ಟಿ.ವಿ. ಮನೆಯ ವಾತಾರವಣವನ್ನು ಇಷ್ಟೆಲ್ಲಾ ಬದಲಾಯಿಸುತ್ತಾ…
  ನೇರ, ಸರಳ ನಿರೂಪಣೆಯಿಂದ ಸೊಗಸಾಗಿ ಮೂಡಿಬಂದಿದೆ ಕತೆ…
  ಶಿವು.ಕೆ ARPS.

  ಪ್ರತಿಕ್ರಿಯೆ
 5. geetha

  “ಕಾರಣ” ಅನ್ನೋದಕ್ಕಿಂತ “ಉತ್ಪ್ರೇಕ್ಷೆ” ಅನ್ನೋ ಹೆಸರು ಚೆನ್ನಾಗಿ ಹೊಂದುತ್ತೆ ಈ ಕತೆಗೆ

  ಪ್ರತಿಕ್ರಿಯೆ
 6. ಶೆಟ್ಟರು (Shettaru)

  ಜೋಗಿಯವರೆ,
  ಕಥೆ ಎನೋ ಹೇಳುತ್ತೆ, ನಾವು ನಮಗೆ ತಿಳಿದಿದ್ದೂ ತಿಳಿದಿಲ್ಲ ಎಂದುಕೊಂಡು ಅದೇ ಸುಖಕ್ಕೆ ಬೆನ್ನು ಹತ್ತಿದ್ದೆವೆ ಅಷ್ಟೆ.
  ಪ್ರೀತಿಯಿರಲಿ
  ಶೆಟ್ಟರು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: