ಜೋಗಿ ಬರೆದ ಕಥೆ: ಕಿಟ್ಟಿ ಎಂಬ ಅಖಂಡ ಪ್ರೇಮಿ

ಕೃಷ್ಣಮೂರ್ತಿಯನ್ನು, ಎಲ್ಲಾ ಕಡೆ ಕರೆಯುವಂತೆ ನಮ್ಮೂರಿನಲ್ಲೂ ಕಿಟ್ಟಿ ಅಂತಲೇ ಕರೆಯುತ್ತಿದ್ದರು. ಅವನಿಗೂ ಬಾಲ್ಯದಲ್ಲಿ ಕಿಟ್ಟಿ ಎಂದು ಕರೆಸಿಕೊಳ್ಳುವುದಕ್ಕೆ ಇಷ್ಟವಾಗುತ್ತಿತ್ತು. ಆದರೆ ಬೆಳೆಯುತ್ತಾ ಬಂದ ಹಾಗೆ ಅವನಿಗೆ ತನ್ನನ್ನು ಕಿಟ್ಟಿ ಎಂದು ಕರೆದಾಗ ಕೊಂಚ ಮುಜುಗರ ಆಗುತ್ತಿತ್ತು.  ಕೃಷ್ಣಮೂರ್ತಿರಾವ್ ಎಂದು ಕರೆಸಿಕೊಳ್ಳುವುದಕ್ಕೆ ಅವನಿಗೆ ಇಷ್ಟ. ತನ್ನೆದುರೇ ತನಗಿಂತ ಕಡಿಮೆ ಸ್ಥಾನದಲ್ಲಿರುವ ಅನೇಕರು ಕೃಷ್ಣರಾವ್, ರಾಮರಾವ್, ಭೀಮರಾವ್, ಗೋವಿಂದರಾವ್ ಅಂತ ಕರೆಸಿಕೊಂಡು ವಿಸಿಟಿಂಗ್ ಕಾರ್ಡ್ ಮಾಡಿಸಿಕೊಂಡು ಓಡಾಡುವುದನ್ನು ಕಂಡಾಗ ಹೊಟ್ಟೆಯುರಿಯುತ್ತಿತ್ತು.
ಕಿಟ್ಟಿ ಮದುವೆ ಆಗಿರಲಿಲ್ಲ. ಅವನಿಗೆ ಮದುವೆ ಆಗಬೇಕು ಅಂತಲೂ ಅನ್ನಿಸಿರಲಿಲ್ಲ. ಅದರಿಂದ ಸಾಧಿಸುವುದಾಗಲೀ ಕಳೆದುಕೊಳ್ಳುವಂಥದ್ದಾಗಲೀ ಏನೂ ಇಲ್ಲ ಎಂಬುದು ತಾರುಣ್ಯದಲ್ಲಿದ್ದಾಗಲೇ ಅವನಿಗೆ ಅರ್ಥವಾಗಿತ್ತು. ಅವನ ಅಣ್ಣ ರಾಮಮೂರ್ತಿ, ವಾಸುದೇವ ಮೂರ್ತಿ ಇಬ್ಬರೂ ಮದುವೆ ಆಗಬೇಕಾದ ವಯಸ್ಸಿಗೆಲ್ಲಾ ಮದುವೆ ಮಾಡಿಕೊಂಡು ಆಮೇಲೆ ಕದ್ದು ಸಿಗರೇಟು ಸೇದುತ್ತಾ, ಮದುವೆ ಮನೆಗಳಿಗೆ ಸ್ಲೀವ್‌ಲೆಸ್ ಹಾಕಿಕೊಂಡು ಬಂದ ಚೆಂದದ ಹುಡುಗಿಯರ ತೋಳನ್ನು ದಿಟ್ಟಿಸಿ ನೋಡುತ್ತಾ, ಅಕ್ಕರೆ ತೋರುವ ನೆಪದಲ್ಲಿ ತೋಳು ಸವರಿ ನಿಟ್ಟುಸಿರು ಬಿಡುವುದನ್ನು ಅವನು ನೋಡಿದ್ದ.
ತನಗೆ ಹೆಂಡತಿಯಿಲ್ಲ ಅನ್ನುವುದನ್ನು ಕಿಟ್ಟಿ ಗೇಲಿ ಮಾಡುತ್ತಾ, ಹೆಮ್ಮೆಯಿಂದಲೇ ಹೇಳಿಕೊಂಡು ಓಡಾಡುತ್ತಿದ್ದ. ಮೂವತ್ತೈದು ದಾಟುವ ತನಕವೂ ಅವನಿಗೆ ಹೆಂಡತಿ ಇಲ್ಲ ಅನ್ನುವ ವಿಚಾರ ಅಂಥ ಗಂಭೀರ ಸಂಗತಿ ಅನ್ನಿಸಿರಲೇ ಇಲ್ಲ. ಮದುವೆ ಆದವರು ಅವನಿಗೆ ಗೇಲಿ ಮಾಡಿಸಿಕೊಳ್ಳುತ್ತಾ, ಅವನು ಮಾಡುವ ಸಣ್ಣ ಪುಟ್ಟ ಟೀಕೆಗಳನ್ನು ಮನಸಾರೆ ಸ್ವೀಕರಿಸಿ ನಗುತ್ತಾ ಖುಷಿಪಡುತ್ತಿದ್ದರು. ಎಷ್ಟೋ ಗೆಳೆಯರು ಹೆಂಡತಿಯ ಜೊತೆ ಜಗಳ ಆಡಿದ ಮುಸ್ಸಂಜೆಗಳಲ್ಲಿ ಕಿಟ್ಟಿಯ ಜೊತೆ ಅದನ್ನು ಹಂಚಿಕೊಳ್ಳುತ್ತಿದ್ದರು. ಕೆಲವೊಂದು ದಿನ ಅವರೆಲ್ಲ ಜೀವನೋತ್ಸಾಹವನ್ನೇ ಕಳಕೊಂಡಂತೆ ವರ್ತಿಸುತ್ತಿದ್ದರು. ಹೀಗಾಗಿ ಮದುವೆ ಆಗದೇ ತಾನು ಒಳ್ಳೆಯ ಕೆಲಸ ಮಾಡಿದೆ ಎಂಬುದು ಕಿಟ್ಟಿಗೆ ಖಾತ್ರಿಯಾಗುತ್ತಾ ಹೋಯಿತು.
ಒಂದು ದಿನ ಕಿಟ್ಟಿ ಕಾವೇರಿ ಬಾರ್‌ನಲ್ಲಿ ರಘುನಂದನನ ಜೊತೆ ಮಾತಾಡುತ್ತಾ ಕೂತಿರಬೇಕಾದರೆ ಒಂದು ವಿಚಿತ್ರ ನಡೆಯಿತು. ರಘುನಂದನ ಎಂದಿನಂತೆ ತನ್ನ ಆಫೀಸು, ಮನೆ, ಮಕ್ಕಳು, ಚಿಕ್ಕಪ್ಪ, ಕ್ರಿಕೆಟ್ಟು, ರೇಸು, ಸಿಗರೇಟು, ಅಮಿತಾಭನ ವೈವಿಧ್ಯ ಎಲ್ಲದರ ಬಗ್ಗೆ ಮಾತಾಡುತ್ತಿದ್ದ. ಮಾತಿನ ಮಧ್ಯೆ ಯಾರದೋ ಫೋನ್ ಬಂತೆಂದು ಎದ್ದು ಹೋದ. ಸದಾ ಯಾರ ಫೋನು ಬಂದರೂ ಲೌಡ್‌ಸ್ವೀಕರಿಗೆ ಹಾಕಿ ಮಾತಾಡುತ್ತಿದ್ದ ರಘುನಂದನ, ಆವತ್ತು ಎದ್ದು ಹೋಗಿ ಇಪ್ಪತ್ತು ನಿಮಿಷ ಮಾತಾಡಿ ಬಂದದ್ದು ನೋಡಿದಾಗ ಕಿಟ್ಟಿಗೆ ಆಶ್ಚರ್ಯವಾಯಿತು.
ತಾನು ಯಾರ ಜೊತೆ ಮಾತಾಡಿದೆ ಎಂದು ಆವತ್ತು ರಘು ಹೇಳಲಿಲ್ಲ. ಕಿಟ್ಟಿ ತಾನಾಗಿಯೇ ಕೇಳುವುದು ಸರಿಯಲ್ಲ ಅಂದುಕೊಂಡು ಸುಮ್ಮನಿದ್ದ. ಆದರೆ ಪದೇ ಪದೇ ಇದು ಮರುಕಳಿಸುತ್ತಾ ಹೋದಾಗ ಕಿಟ್ಟಿಗೆ ಆಶ್ಚರ್ಯವೂ ಬೇಸರವೂ ಆಗುತ್ತಾ ಬಂತು. ಫೋನಲ್ಲಿ ಮಾತಾಡಿ ಮರಳುವ ಹೊತ್ತಿಗೆಲ್ಲ ಒಂದೋ ಅತೀವ ಸಂತೋಷದಲ್ಲಿ ಅಥವಾ ಅಗಾಧ ದುಃಖದಲ್ಲಿರುತ್ತಿದ್ದ ರಘು. ಅವನು ಯಾರ ಜೊತೆ ಮಾತಾಡುತ್ತಾನೆ, ಏನು ಮಾತಾಡುತ್ತಾನೆ. ಹಾಗೆ ಮಾತಾಡಿದ ನಂತರ ಯಾಕೆ ಅವನ ಭಾವನೆಗಳು ಬದಲಾಗುತ್ತವೆ. ರಘು ಯಾವುದಾದರೂ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿರಬಹುದೇ ಎಂದೆಲ್ಲ ಯೋಚಿಸಿ, ಒಂದು ದಿನ ಕುತೂಹಲ ಮತ್ತು ಸಿಟ್ಟು ತಡೆಯಲಾರದೇ ಕಿಟ್ಟಿ ನೇರವಾಗಿ ರಘುವನ್ನು ಕೇಳಿಯೇ ಬಿಟ್ಟ.

ರಘು ಹೇಳಿದ್ದನ್ನು ಕೇಳಿ ಅವನಿಗೆ ಆಶ್ಚರ್ಯವಾಯಿತು. ರಘು ತನ್ನ ಫ್ಲಾಟಿನ ಪಕ್ಕದಲ್ಲಿದ್ದ ಅಲಕಾ ಎಂಬ ಹತ್ತೊಂಬತ್ತು ವರ್ಷದ ಹುಡುಗಿಯನ್ನು ಪ್ರೀತಿಸುತ್ತಿದ್ದ. ಮೂವತ್ತೆಂಟರ ರಘು ತನ್ನ ಅರ್ಧ ವಯಸ್ಸಿನ ಅಲಕಾಳನ್ನು ಹೇಗೆ ಪ್ರೀತಿಸಲು ಸಾಧ್ಯ ಎಂಬುದು ಕಿಟ್ಟಿಗೆ ಅರ್ಥವೇ ಆಗಲಿಲ್ಲ.
ರಘು ತನ್ನ ಮನೋಲಹರಿಯನ್ನು ವಿವರಿಸುತ್ತಾ ಹೋದ. ಅವಳು ತನಗೆ ಕೊಡುತ್ತಿರುವ ಸಂತೋಷ, ತಾನು ಹೊಸ ಮನುಷ್ಯನಾಗಿರುವುದು, ಇದ್ದಕ್ಕಿದ್ದಂತೆ ತನ್ನನ್ನು ಹೊಸದೊಂದು ಉಲ್ಲಾಸ ಆವರಿಸಿಕೊಂಡಿರುವುದು, ಅವಳ ಜೊತೆ ಮಾತಾಡುತ್ತಿದ್ದರೆ ಜಗತ್ತೇ ಮರೆತುಹೋಗುವುದು- ಎಲ್ಲವನ್ನೂ ಹೇಳಿದ.
ಅವಳು ನನಗೊಂದು ಹಂಬಲ, ನನಗೊಂದು ಹೊಸ ಚೈತನ್ಯ, ಹದಿನೆಂಟನೇ ವಯಸ್ಸಿನಲ್ಲಿ ನಾನು ನಿರ್ಮಲಳನ್ನು ಪ್ರೀತಿಸಿದೆ. ಅವಳೂ ನನ್ನನ್ನು ತುಂಬ ಪ್ರೀತಿಸುತ್ತಿದ್ದಳು. ಅವಳನ್ನೇ ಮದುವೆ ಆದೆ. ಅವಳೆಂದರೆ ನನಗೆ ಈಗಲೂ ಇಷ್ಟ. ನಮ್ಮಿಬ್ಬರ ಸಂಬಂಧ ಏನೂ ಹಳಸಿಲ್ಲ. ಅವಳು ನನಗೆ ಕೊಡುವ ಸಂತೋಷ ಕಡಿಮೆ ಆಗಿಲ್ಲ. ಆದರೆ ಆರಂಭದ ಪ್ರೇಮದಲ್ಲಿದ್ದ ಥ್ರಿಲ್ ಮಾತ್ರ ಹೊರಟು ಹೋಗಿತ್ತು. ಅಂಥದ್ದೊಂದು ಥ್ರಿಲ್ ಅಲಕಾಳಿಂದ ಸಿಗುತ್ತಿದೆ’ ಎಂದು ಕಿಟ್ಟಿ ಕೇಳಿಸಿಕೊಳ್ಳುತ್ತಾನೋ ಇಲ್ಲವೋ ಎಂಬ ಕಲ್ಪನೆಯೂ ಇಲ್ಲದೇ ಹೇಳಿಕೊಂಡ.
ಕಿಟ್ಟಿಗೆ ಅದೆಲ್ಲ ವಿಚಿತ್ರ ಅನ್ನಿಸುತ್ತಿತ್ತು. ಅವನು ಯಾವತ್ತೂ ಯಾರನ್ನೂ ಪ್ರೀತಿಸಿರಲೇ ಇಲ್ಲ. ಪ್ರೀತಿಯಲ್ಲಿ ಅಂಥದ್ದೊಂದು ಸುಖ, ರೋಚಕತೆ ಇದೆ ಎಂಬ ಕಲ್ಪನೆಯೂ ಅವನಿಗೆ ಇರಲಿಲ್ಲ. ಹೀಗಾಗಿ ಪ್ರೀತಿಯ ಬಗ್ಗೆ ರಘು ಹೇಳುತ್ತಿದ್ದುದೆಲ್ಲ ಕಿಟ್ಟಿಯನ್ನು ಕೇವಲ ಶಬ್ದಗಳಾಗಿ ತಲುಪುತ್ತಿದ್ದವು. ಅವುಗಳ ಅರ್ಥವಾಗಲೇ, ಸಾರ್ಥಕತೆಯಾಗಲೀ, ಧನ್ಯತೆಯಾಗಲೀ ಅವನನ್ನು ಮುಟ್ಟಲೇ ಇಲ್ಲ. ತಾನು ಓದಿದ ಅನೇಕ ಪ್ರೇಮಕತೆಗಳಿಗಿಂತ ಇದೊಂಥರ ವಿಚಿತ್ರವಾಗಿದೆ ಅಂತಷ್ಟೇ ಅವನಿಗೆ ಅನ್ನಿಸುತ್ತಿತ್ತು.
ರಘು ಅದನ್ನು ಅಲ್ಲಿಗೇ ಬಿಡಲಿಲ್ಲ. ಕಿಟ್ಟಿಯೊಂದಿಗೆ ಎಲ್ಲವನ್ನೂ ಹೇಳಿಕೊಂಡಿದ್ದರಿಂದ ಅವನೆದುರೇ ನಿರ್ಬಿಢೆಯಿಂದ ಅವಳ ಜೊತೆ ಮಾತಾಡತೊಡಗಿದ. ಇಬ್ಬರೂ ಗಂಟೆಗಟ್ಟಲೆ ಮಾತಾಡುತ್ತಿರುವುದನ್ನು ನೋಡುತ್ತಾ ನೋಡುತ್ತಾ ಕಿಟ್ಟಿಗೆ ಯಾರ ಜೊತೆಗೇ ಆದರೂ ಅಷ್ಟೊಂದು ಮಾತಾಡುವುದಿದೆಯಾ ಅನ್ನಿಸತೊಡಗಿತು. ಆ ಸಂಬಂಧದ ಸ್ವರೂಪ ಏನಿರಬಹುದು. ಅವರಿಬ್ಬರೂ ಏನನ್ನು ಹಂಚಿಕೊಳ್ಳುತ್ತಿರಬಹುದು. ಯಾವತ್ತೂ ಅಷ್ಟೊಂದು ಮಾತಾಡದ ರಘು ಯಾಕೆ ಇದ್ದಕ್ಕಿದ್ದ ಹಾಗೆ ವಾಚಾಳಿಯಾದ? ನಿರ್ಮಲೆಗೆ ಮೋಸ ಮಾಡುತ್ತಿದ್ದಾನಾ ಅವನು ಎಂಬ ಸಾಮಾಜೀವ ಜವಾಬ್ದಾರಿಯ ಪ್ರಶ್ನೆಗಳು ಇದ್ದಕ್ಕಿದ್ದಂತೆ ಮೊಳೆಯತೊಡಗಿದವು.
ಅದನ್ನೂ ಒಂದು ದಿನ ನೇರವಾಗಿ ಕೇಳಿಯೇ ಬಿಟ್ಟ ಕಿಟ್ಟಿ.  ರಘು ಅದನ್ನೆಲ್ಲ ವಿವರಿಸುವುದಕ್ಕೆ ಹೋಗದೇ ನೋಡೋ, ನೀನು ಮದುವೆ ಆಗಿಲ್ಲ, ಯಾರನ್ನೂ ಪ್ರೀತಿಸಲೂ ಇಲ್ಲ. ನಿಂಗಿದೆಲ್ಲ ಅರ್ಥ ಆಗೋಲ್ಲ’ ಅಂತ ತಳ್ಳಿಹಾಕಿದ. ಎಲ್ಲಾ ಗೊತ್ತು ಕಣೋ.. ನಾನು ಪ್ರೀತಿಸಿಲ್ಲ ಅಂತ ನಿಂಗೆ ಯಾರೋ ಹೇಳಿದ್ದು. ನಾನೂ ಒಬ್ಬಳನ್ನು ಪ್ರೀತಿಸಿದ್ದೆ ಅಂದುಬಿಟ್ಟ ಕಿಟ್ಟಿ. ಯಾರೋ ಅವಳು. ಸುಳ್ಳು ಹೇಳಬೇಡ, ನಿನ್ನನ್ನು ನಾನು ಇವತ್ತು ನೋಡ್ತಿದ್ದೀನಾ ಅಂತ ರಘು ಸವಾಲು ಹಾಕಿದ. ಪ್ರೀತಿಸ್ತಿದ್ದೀನಿ ಅಂತ ನಾನೇನೂ ನಿನ್ನ ಹಾಗೆ ಡಂಗುರ ಸಾರಿಕೊಂಡು ಬಂದಿರಲಿಲ್ಲ ಅಷ್ಟೇ. ಅದು ನನ್ನ ಖಾಸಗಿ ಸಂಗತಿ ಅಂತ ಕಿಟ್ಟಿ ವಾದಿಸಿದ. ಏನು ಅವಳ ಹೆಸರು ಹೇಳು ನೋಡೋಣ ಅಂತ ಕಿಟ್ಟಿ ತೆಳ್ಳಗೆ ನಗುತ್ತಾ ಕೇಳಿದ. ಕಿಟ್ಟಿ ಅವನಿಗೆ ಉತ್ತರಿಸಲೇಬೇಕಾದ ಭರದಲ್ಲಿ ರಾಧಿಕಾ’ ಅಂದುಬಿಟ್ಟ.
ಆವತ್ತಿಗೆ ಆ ಮಾತು ಮುಗಿದರೂ ರಘು ಅವನನ್ನು ಬಿಡಲಿಲ್ಲ. ಮಾರನೆ ದಿನ ಮಾತಿಗೆ ಕೂತಾಗ ರಾಧಿಕಾ ಬಗ್ಗೆ ಹೇಳು, ನಿನ್ನ ಪ್ರೇಮದ ಬಗ್ಗೆ ಹೇಳು ಎಂದು ಒಂದೇ ಸಮನೆ ಪೀಡಿಸತೊಡಗಿದ. ಅದು ನನ್ನ ಜೀವನದ ಮುಗಿದು ಹೋದ ಅಧ್ಯಾಯ. ನಾನು ಅದನ್ನು ನೆನಪಿಸಿಕೊಳ್ಳಲು ಇಷ್ಟಪಡೋಲ್ಲ ಅಂತ ಕಿಟ್ಟಿ ರಾಧಿಕಾಳ ಬಗ್ಗೆ ಮಾತಾಡಲು ನಿರಾಕರಿಸಿದ.
ಆದರೆ ರಘು ತನ್ನ ಹಟ ಬಿಡಲಿಲ್ಲ.
ಆವತ್ತಿನಿಂದ ಅಲಕಾಳ ಬಗ್ಗೆ ರಘು ಹೇಳುತ್ತಿದ್ದ. ರಾಧಿಕಾಳ ಬಗ್ಗೆ ಕಿಟ್ಟಿ ಹೇಳಿಕೊಳ್ಳುತ್ತಿದ್ದ. ಮೊದಲ ಸಲ ಅವಳನ್ನು ಮಾತಾಡಿಸಿದ್ದು, ಅವಳು ತನ್ನನ್ನು ಪ್ರೀತಿಸುತ್ತಿದ್ದಾಳೋ ಇಲ್ಲವೋ ಅಂತ ತಿಳಿಯಲು ಒದ್ದಾಡಿದ್ದು, ಅವಳನ್ನು ಜಾತ್ರೆಯೊಂದರಲ್ಲಿ ಭೇಟಿಯಾದದ್ದು, ಅವಳೊಂದಿಗೆ ಸುತ್ತಾಡಿದ್ದು, ಅವಳು ಕೊಟ್ಟ ನವಿಲುಗರಿಯನ್ನು ಮನೆಯಲ್ಲಿ ತಂದಿಟ್ಟುಕೊಂಡು ಸಂಭ್ರಮಿಸಿದ್ದು, ಮಾನಸ ಸರೋವರ ಸಿನಿಮಾ ನೋಡುತ್ತಾ ಜಗಳ ಆಡಿದ್ದು, ಮಾವಿನಕಾಯಿ ಉಪ್ಪಿನಕಾಯಿ ತಂದುಕೊಟ್ಟು ಅವಳನ್ನು ಮೆಚ್ಚಿಸಿದ್ದು, ಅವಳು ಒಂದಿಡೀ ರಾತ್ರಿ ತನ್ನನ್ನು ತಬ್ಬಿಕೊಂಡು ಹೊಳೆದಂಡೆಯಲ್ಲಿ ಕೂತಿದ್ದು, ಬಸ್ಸಿನಲ್ಲಿ ಬರುತ್ತಿರುವಾಗ ಅವಳ ಅಪ್ಪನ ಕೈಗೆ ಸಿಕ್ಕಿ ಹಾಕಿಕೊಂಡದ್ದು, ಬಸ್ಸು ಇಳಿಯುವ ತನಕವೂ ಅಪರಿಚಿತನಂತೆ ಅವಳ ಪಕ್ಕ ಕೂತಿದ್ದದ್ದು, ಒಂದು ದಿನ ಬೆಳಗ್ಗೆ ಅವಳು ಓಡಿ ಬಂದು ತನಗೆ ಗಂಡು ನೋಡುತ್ತಿದ್ದಾರೆ ಅಂದಿದ್ದು, ಆವತ್ತೇ ಇಬ್ಬರೂ ಎಲ್ಲಿಗೋ ಓಡಿಹೋಗಲು ನಿರ್ಧಾರ ಮಾಡಿದ್ದು, ಆವತ್ತು ರಾತ್ರಿ ಹೊಳೆಬದಿಯಲ್ಲಿ ದೋಣಿ ರೆಡಿಮಾಡಿಕೊಂಡು ಅವಳಿಗಾಗಿ ಕಾಯುತ್ತಿದ್ದದ್ದು, ಎಷ್ಟು ಹೊತ್ತಾದರೂ ಅವಳು ಬರದೇ ಇದ್ದಾಗ ಅವಳ ಮನೆಯ ಬಳಿಗೆ ಹೋದದ್ದು, ಅವಳು ತಾನೆಲ್ಲಿಗೂ ಬರೋಲ್ಲ, ತಾನು ಯಾರನ್ನೂ ಪ್ರೀತಿಸಿಲ್ಲ ಅಂತ ಹೇಳಿದ್ದು, ಅವಳು ಹಾಗೆ ಹೇಳಿದ್ದು ಮನೆಯವರ ಒತ್ತಾಯಕ್ಕೆ ಎಂದು ಗೊತ್ತಾಗಿ ತಾನು ಅತ್ತಿದ್ದು.. ಹೀಗೆ ಕಿಟ್ಟಿ ದಿನಕ್ಕೊಂದು ಪ್ರಸಂಗದಂತೆ ಹೇಳುತ್ತಾ ಹೋದ. ಹಾಗೆ ಹೇಳುತ್ತಾ ಹೋದಾಗ ಅದೂ ಒಂಥರ ಆಸಕ್ತಿ ಹುಟ್ಟಿಸುತ್ತಿದೆಯಲ್ಲ ಅನ್ನಿಸುತ್ತಿತ್ತು ಕಿಟ್ಟಿಗೆ.
ಹಾಗೆ ಹೇಳುತ್ತಾ ಹೇಳುತ್ತಾ ಹೋದ ಹಾಗೆ ರಾಧಿಕೆ ಅವಳ ಕಣ್ಮುಂದೆ ಆವಿರ್ಭವಿಸುತ್ತಾ ಹೋದಳು. ಅವನ ವರ್ಣನೆಯಲ್ಲಿ ರಾಧಿಕೆಗೆ ಕಣ್ಣು, ಮೂಗು, ಕಿವಿ, ಬಾಯಿ, ದೇಹ ಮೂಡಿತು. ಅವಳಿಗೊಂದು ಚೆಂದದ ಬಟ್ಟೆ, ಮಂಗುರುಳು, ಮನೆ, ಅಲ್ಲಿಗೆ ಹೋಗುವ ಕಣಿವೆಯ ಹಾದಿ, ಮನೆ ಮುಂದೆ ಸುಗಂಧಿ ಹೂವಿನ ಗಿಡ, ಅವಳಿಗೊಬ್ಬ ತಮ್ಮ , ಚಿಕ್ಕಮ್ಮ ಹುಟ್ಟಿಕೊಂಡರು.  ಆ ಕಲ್ಪನೆಯಲ್ಲೇ ಅವಳೊಂದಿಗೆ ಪ್ರೇಮವಾಯಿತು, ಜಗಳವಾಯಿತು, ವಿರಹವಾಯಿತು, ಮಿಲನವಾಯಿತು.
ಕಿಟ್ಟಿ ಪಾಪ,   ರಾಧಿಕಾ ಅಂತ ಒಬ್ಳಿದ್ದಳಂತೆ. ಕೈ ಕೊಟ್ಳಂತೆ.. ಕಿಟ್ಟಿ ಹುಚ್ಚ, ಅಷ್ಟೆಲ್ಲ ಪ್ರೀತಿಸದವರನ್ನು ಹಚ್ಕೋಬಾರದು. ಕಿಟ್ಟಿಯಂಥವನಿಗೇ ಮೋಸ ಮಾಡಿ ಹೋದ್ಳಲ್ಲ, ಅವಳಿಗೇನಾಗಿತ್ತು? ಈಗೆಲ್ಲಿದ್ದಾಳೆ ರಾಧಿಕಾ, ಸುಖವಾಗಿದ್ದಾಳಾ? ಅವಳೆಲ್ಲಿ ಸುಖವಾಗಿರೋಕೆ ಸಾಧ್ಯ ಅಂತ ಕಿಟ್ಟಿಯ ಗೆಳೆಯರೂ ಆಪ್ತರೂ ಅಲ್ಲಲ್ಲಿ ಮಾತಾಡಿಕೊಂಡರು.
ಒಂದು ದಿನ ಕಿಟ್ಟಿ ಗೆಳೆಯರೊಂದಿಗೆ ಇರುವ ಹೊತ್ತಿಗೆ ಪ್ರೇಮದ ಪ್ರಸ್ತಾಪ ಬಂತು. ರಘು ಆವತ್ತು ಸ್ವಲ್ಪ ಜಾಸ್ತಿಯೇ ಕುಡಿದಿದ್ದ. ಮಾತಾಡುತ್ತಾ ಆಡುತ್ತಾ ಆತ ಹೆಣ್ಮಕ್ಕಳನ್ನು ಯಾವತ್ತೂ ನಂಬಬಾರದು ಕಣ್ರೋ. ರಾಧಿಕಾ ಕಿಟ್ಟಿಗೆ ಸಕತ್ತಾಗಿ ಕೈ ಕೊಟ್ಳಂತೆ. ದರಿದ್ರದೋಳು ಎಂದು ಅವಳನ್ನು ಹೀನಾಮಾನ ಬೈಯತೊಡಗಿದ.
ಸ್ವಲ್ಪ ಹೊತ್ತು ಅನ್ಯಮನಸ್ಕನಂತೆ ಕೂತಿದ್ದ ಕಿಟ್ಟಿಗೆ ಅದೇನಾಯಿತೋ ಏನೋ ನೇರವಾಗಿ ಹೋಗಿ ರಘುವಿನ ಕಪಾಳಕ್ಕೆ ಬಾರಿಸಿ ನನ್ನ ರಾಧಿಕಾಳ ಬಗ್ಗೆ ನಿಂಗೇನೋ ಗೊತ್ತು. ಅವಳು ಮೋಸ ಮಾಡಿದ್ಳು ಅಂತ ನಾನೇ ಹೇಳೋಲ್ಲ. ನೀನು ಹೇಗೆ ಹೇಳ್ತೀಯಾ? ಅವಳ ಪರಿಸ್ಥಿತಿ ಏನಿತ್ತು ಅಂತ ನಿಮಗೇನಾದ್ರೂ ಗೊತ್ತಾ’ ಎಂದು ಅಬ್ಬರಿಸಿದ.
ಎಲ್ಲರೂ ಮೌನವಾದರು. ಕಿಟ್ಟಿ ಸ್ವಲ್ಪ ಹೊತ್ತು ಹಾಗೇ ನಂತರ ಹೊರಗೆ ಹೋಗಿ ನಿಂತು ಸಣ್ಣಗೆ ಬಿಕ್ಕಳಿಸಿದ

‍ಲೇಖಕರು avadhi

November 26, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: