ಜೋಗಿ ಬರೆದ ಕಥೆ: ಜರಾಸಂಧ ಭಾಗ – 2

img_0491ಯುಮನೆಯ ನೆನಪು ಆವರಿಸಿಕೊಳ್ಳುತ್ತಿದ್ದಂತೆ ಕನ್ನಡಿಯೊಳಗೆ ಇನ್ನೇನು ಪ್ರತ್ಯಕ್ಷನಾಗುವುದರಲ್ಲಿದ್ದ ಜರಾಸಂಧ ಕಣ್ಮರೆಯಾದ. ರಂಗನಾಥನಿಗೆ ಈ ಬಾರಿ ತನಗೆ ಪ್ರದರ್ಶನ ಕೊಡುವುದಕ್ಕೆ ಸಾಧ್ಯವಿಲ್ಲ ಅನ್ನಿಸಿತು. ಒಂದು ಕಾಲದಲ್ಲಿ ಯಮುನೆ ಕಣ್ಮುಂದೆ ಸುಳಿದಾಗ ರಂಗನಾಥ ಅದ್ಭುತವಾಗಿ ಅಭಿನಯಿಸುತ್ತಿದ್ದ. ತನ್ನ ಮುಂದಿದ್ದ ಪ್ರೇಕ್ಷಕರೆಲ್ಲ ಮಾಯವಾಗಿ ಕೇವಲ ಯಮುನೆ ಒಬ್ಬಳೇ ಕಣ್ಣೆದುರು ಉಳಿಯುತ್ತಿದ್ದಳು. ಅವಳಿಗೋಸ್ಕರ ತಾನು ನಟಿಸುತ್ತಿದ್ದೇನೆ ಅನ್ನಿಸುತ್ತಿತ್ತು. ಅವಳೊಬ್ಬಳು ನೋಡಿದರೆ ಸಾಕು ಎಂಬ ಧನ್ಯತೆಯಲ್ಲಿ ರಂಗನಾಥ, ತನ್ನೆಲ್ಲ ಅಂತಃಸತ್ವವನ್ನೂ ಮೊಗೆ ಮೊಗೆದು ಜರಾಸಂಧನಾಗುತ್ತಿದ್ದ.
ಯಮುನೆ ಕೂಡ ಅವನ ಪ್ರದರ್ಶನಗಳನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಬೀರೂರು, ಕಡೂರು, ಚಿಕ್ಕಜಾಜೂರು ಮುಂತಾದ ಕಡೆ ಪ್ರದರ್ಶನ ಇದ್ದಾಗ ಕೂಡ ಅದು ಹೇಗೋ ಅವಳು ಹಾಜರಾಗುತ್ತಿದ್ದಳು. ಆಗಿನ್ನೂ ಯಮುನೆಯ ಜೊತೆ ರಂಗನಾಥ ಮಾತಾಡಲು ಆರಂಭಿಸಿರಲಿಲ್ಲ. ಹತ್ತಾರು ಪ್ರದರ್ಶನಗಳಲ್ಲಿ ಅವಳನ್ನು ನೋಡಿದ್ದರೂ ರಂಗನಾಥನಿಗೆ ಏನೂ ಅನ್ನಿಸಿರಲಿಲ್ಲ.
ಹೆಗ್ಗೋಡಿನಲ್ಲಿ ಒಂದು ವಿಶೇಷ ಪ್ರದರ್ಶನ ಏರ್ಪಾಡಾದಾಗ ಕ್ಷಣಾರ್ಧದಲ್ಲಿ ನಡೆದುಹೋದ ಒಂದು ಘಟನೆ ತನ್ನನ್ನು ಜೀವನ ಪೂರ್ತಿ ಕಾಡುತ್ತದೆ ಅನ್ನುವ ಕಲ್ಪನೆಯೂ ರಂಗನಾಥನಿಗೆ ಇರಲಿಲ್ಲ. ಆವತ್ತು ಎಂದಿನಂತೆ ರಂಗನಾಥ ಚೌಕಿಮನೆಯಲ್ಲಿ ಕೂತು ಜರಾಸಂಧನಾಗಿ ರೂಪಾಂತರ ಹೊಂದುತ್ತಿದ್ದ. ಆಗಷ್ಟೇ ಜರಾಸಂಧನ ಜೊತೆ ಪರಕಾಯ ಪ್ರವೇಶಕ್ಕೆ ಕಾಯುತ್ತಾ ಕನ್ನಡಿಯನ್ನೇ ನೋಡುತ್ತಿದ್ದ ರಂಗನಾಥನ ಮೂಗಿಗೆ ಅಪರೂಪದ ಸುಗಂಧವೊಂದು ಅಡರಿತು. ಬಣ್ಣದ ಕಮಟು, ತೊಟ್ಟು ತೊಟ್ಟು ಬೆವರು ಮೆತ್ತಿಕೊಂಡು ಗೋಣಿಚೀಲದಂತೆ ನಾರುತ್ತಿದ್ದ ಬಟ್ಟೆಗಳ ಜಗತ್ತಿನೊಳಗೆ ಅಂಥ ಪರಿಮಳ ಎಲ್ಲಿಂದ ಹಾದು ಬಂತು ಎಂದು ರಂಗನಾಥ ಬೆರಗಾದ. ಒಂದು ಕ್ಷಣ ಜಗತ್ತನ್ನೇ ಮರೆಸುವಂತೆ ಹಬ್ಬಿದ ಸುಗಂಧಕ್ಕೆ ಮರುಳಾಗಿ ತನ್ನನ್ನು ತಾನೇ ಮರೆಯುತ್ತಿರುವ ರಂಗನಾಥನ ಎದುರಿದ್ದ ಕನ್ನಡಿಯಲ್ಲಿ ನಗುವೊಂದು ಕಾಣಿಸಿಕೊಂಡಿತು. ಆ ನಗುವಿಗೆ ಕ್ರಮೇಣ ಮುಂಗುರುಳು, ಕಣ್ಣು, ಮೂಗು, ತುಟಿ, ಕೆನ್ನೆ ಬಾಯಿಗಳು ಮೂಡಿದವು. ರಂಗನಾಥ ತಿರುಗಿ ನೋಡಿದ.
Fullscreen capture 1072009 15131 PMಚಿತ್ರ: ಬಾಲು ಮಂದರ್ತಿ
ಹಾಗೆ ತಿರುಗಿ ಅವಳನ್ನು ಕಂಡ ಘಳಿಗೆ ರಂಗನಾಥನಿಗೆ ಮತ್ತೆ ಮತ್ತೆ ನೆನಪಾಗಿದೆ. ಹಾಗೆ ನೆನಪಾದಾಗೆಲ್ಲ ರಂಗನಾಥ ಕಿಂಕರ್ತವ್ಯ ಮೂಢನಾಗಿ ಕೂತುಬಿಟ್ಟಿದ್ದಾನೆ. ಅವಳು ತನ್ನ ಕಣ್ಣಿಗೆ ಕಾಣಿಸದೇ ಹೋದರೆ ಚೆನ್ನಾಗಿರುತ್ತಿತ್ತು ಎಂದು ಎಷ್ಟೋ ಸಾರಿ ಅವನಿಗೆ ಅನ್ನಿಸಿದೆ. ಹಾಗೇ, ಅವಳು ಕೂಡ ತನ್ನೊಳಗೆ ಜರಾಸಂಧನ ಹಾಗೆ ಬೆಳೆಯುತ್ತಿದ್ದಾಳೆ ಎಂದೂ ಅವನಿಗೆ ಪದೇ ಪದೇ ಅನ್ನಿಸುತ್ತಿತ್ತು.
ಅದರ ಸ್ಪಷ್ಟ ಸೂಚನೆ ಸಿಕ್ಕಿದ್ದು ರಂಗದ ಮೇಲೆಯೇ. ಯುಮುನೆ ಆವತ್ತು ನೀವು ನಂಗಿಷ್ಟ, ತುಂಬಾ ಚೆನ್ನಾಗಿ ನಟಿಸುತ್ತೀರಿ. ನಿಮ್ಮ ಎಲ್ಲಾ ಪ್ರದರ್ಶನಗಳನ್ನೂ ನೋಡಿದ್ದೀನಿ. ನನ್ನ ಹೆಸರು ಯಮುನಾ. ನಿಮ್ಮದೊಂದು ಆಟೋಗ್ರಾಫ್ ಬೇಕು ಎಂದಷ್ಟೇ ಹೇಳಿ ಯಮುನೆ ನೋಟ್ ಬುಕ್ ಮುಂದೆ ಚಾಚಿದ್ದಳು. ಅದರ ಮೇಲೆ ಸುಮ್ಮನೆ ಕಣ್ಣಾಡಿಸಿದ್ದ. ಮುದ್ದಾದ ಅಕ್ಷರಗಳಲ್ಲಿ ಯುಮನಾ ಟಿ ಎಸ್, ಎರಡನೇ ಬಿಎ, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಶೃಂಗೇರಿ ಎಂದು ಬರೆದದ್ದನ್ನು ಓದುತ್ತಲೇ ಆಟೋಗ್ರಾಫ್ ಹಾಕಿ ಕೊಟ್ಟಿದ್ದ. ಅವಳು ಹೋದ ನಂತರವೂ ಆ ಸುಗಂಧ ಮಾಸಿರಲಿಲ್ಲ.
ಆವತ್ತಿನ ನಂತರ ಜರಾಸಂಧ ಬೇರೆಯೇ ರೂಪದಲ್ಲಿ ವಿಜೃಂಭಿಸಿದ್ದ. ರಂಗನಾಥನೊಳಗಿನ ತಾರುಣ್ಯದ ಕಲ್ಪನೆಗಳೆಲ್ಲ ಆಚೆ ಬಂದುಬಿಟ್ಟಿದ್ದವು. ಜರಾಸಂಧ ಆವತ್ತು ಯೌವನಕ್ಕೆ ಮರಳಿದ್ದ. ತನ್ನ ಮುಂದೆ ಕೂತ ಭೀಮಾರ್ಜುನ ಕೃಷ್ಣರನ್ನು ಜರಾಸಂಧ ಯುದ್ಧಕ್ಕೆ ಆಹ್ವಾನಿಸಲೇ ಇಲ್ಲ. ಎಂಬತ್ತಾರು ಸಾವಿರ ರಾಜಕುಮಾರರನ್ನು ಸೆರೆಯಲ್ಲಿಟ್ಟು ತಪ್ಪು ಮಾಡಿದ್ದೀಯಾ, ನೀನು ನಮ್ಮೊಡನೆ ಯುದ್ಧ ಮಾಡಬೇಕು ಎಂದು ಕೃಷ್ಣ ಎಷ್ಟು ಹೇಳಿದರೂ ಜರಾಸಂಧ ಅದರತ್ತ ಕಿವಿಗೊಟ್ಟಿರಲೇ ಇಲ್ಲ. ಊರಾಚೆಯ ನಗಾರಿ ಬಾರಿಸಿ ಯುದ್ಧಕ್ಕೆ ಆಹ್ವಾನಿಸಿದ ಬಗ್ಗೆ ಮಾತಾಡಲಿಲ್ಲ. ಹಿಂಬಾಗಿಲಿನಿಂದ
ಪ್ರವೇಶ ಮಾಡಿದ್ದರ ಬಗ್ಗೆ ತಕರಾರೂ ಎತ್ತಲಿಲ್ಲ. ಬ್ರಾಹ್ಮಣರ ವೇಷಾಂತರದಲ್ಲಿ ಬಂದವರು ಕ್ಷತ್ರಿಯರೇ ಎಂದು ತನಗೆ ಗೊತ್ತಾಗಿದೆ ಎಂದು ಹೇಳಲಿಲ್ಲ. ತನ್ನೆದುರು ಕುಳಿತ ಪಾತ್ರಧಾರಿಗಳು ನಿಬ್ಬೆರಗಾಗುವಂತೆ ಆ ಪ್ರಸಂಗಕ್ಕೆ ಸಂಬಂಧವಿಲ್ಲದ ಸಂಗತಿಗಳ ಕುರಿತೇ ಮಾತಾಡಲು ಆರಂಭಿಸಿದ್ದ. ಆ ಮಾತುಗಳು ರಂಗನಾಥನಿಗೆ ಇನ್ನೂ ನೆನಪಿವೆ:
ಕೃಷ್ಣಾ, ನನ್ನ ದಿಗ್ವಿಜಯದ ಕತೆ ಎಲ್ಲಿರಿಗೂ ಗೊತ್ತು. ನನ್ನ ಶೌರ್ಯ ಪರಾಕ್ರಮಗಳು ಗೊತ್ತು. ನಾನು ಅಜೇಯ ಎನ್ನುವುದು ಗೊತ್ತು. ನೀನು ಕೂಡ ನನ್ನ ಕಾಟ ತಡೆಯಲಾರದೆ ನನ್ನನ್ನು ಕೊಲ್ಲಲಾರದೆ ದ್ವಾರಕೆಗೆ ಹೋಗಿ ಕುಳಿತೆ. ನನ್ನನ್ನು ಸಂಹರಿಸುವುದು ನಿನಗೂ ಸಾಧ್ಯವಾಗಲಿಲ್ಲ. ನಿನ್ನ ತಂತ್ರ ಕುತಂತ್ರಗಳು ನನ್ನ ಮುಂದೆ ನಡೆಯಲಿಲ್ಲ. ನನ್ನ ಮಕ್ಕಳಾದ ಆಸ್ತಿ, ಪ್ರಾಸ್ತಿಯರನ್ನು ಮದುವೆಯಾಗಿ ನನ್ನ ಅಳಿಯನಾಗಿದ್ದ ಕಂಸನನ್ನು ನೀನು ಕೊಂದೆ. ಕಂಸ ನಿನಗೆ ಸೋದರಮಾವ, ನನಗೆ ಅಳಿಯ. ಹೀಗೊಂದು ಸಂಬಂಧ ನಮ್ಮ ಮಧ್ಯೆ ಇದ್ದರೂ ನೀನು ನನ್ನನ್ನು ಬೇಟೆಯಾಡಲು ಬಂದೆ. ಅದಕ್ಕೆ ಕಾರಣ ನಾನು ದುಷ್ಟ ಅನ್ನುವುದಲ್ಲ. ನಾನು ಕ್ಷತ್ರಿಯ ಕುಲಕ್ಕೆ ಸೇರಿದವನು ಎಂಬ ಅಸಹನೆ. ಯಾಕೆಂದರೆ ನೀನು ಗೊಲ್ಲನೆಂಬ ಕೀಳರಿಮೆ ನಿನ್ನನ್ನು ಕಾಡುತ್ತಿತ್ತು. ಬಲಾಢ್ಯನಾಗುವ ಮೂಲಕ, ತಂತ್ರಗಾರನಾಗುವ ಮೂಲಕ ನಿನ್ನನ್ನು ನೀನು ವೈಭವೀಕರಿಸಿಕೊಳ್ಳಲು ಯತ್ನಿಸಿದೆ’
ಹಾಗಂತ ಜರಾಸಂಧ ಮಾತಾಡುತ್ತಿದ್ದರೆ, ಆ ಕಾಲದ ಮಹಾಪಂಡಿತ, ಜನಪ್ರಿಯ ಅರ್ಥಧಾರಿ ಸದಾನಂದ ಶೆಟ್ಟಿ ಕೂಡ ಮಾತಿಲ್ಲದೇ ಕೂತು ಬಿಟ್ಟಿದ್ದ. ಭೀಮನ ಪಾತ್ರ ಮಾಡುತ್ತಿದ್ದ ಕೃಷ್ಣ ಹೊಳ್ಳ ನಡುನಡುವೆ ಮಾತಾಡಿ ರಂಗನಾಥನನ್ನು ವಿಷಯಕ್ಕೆಳೆಯಲು ಯತ್ನಿಸಿದ್ದೂ ಸಫಲವಾಗಲಿಲ್ಲ.
ಜರಾಸಂಧ, ಹಳೆಯ ಕತೆಗಳನ್ನು ಹೇಳಿ ವೃಥಾ ಸಮಯ ವ್ಯರ್ಥ ಮಾಡಬೇಡ. ನಿನ್ನ ಕೊನೆಗಾಲ ಸಮೀಪಿಸಿದೆ ಎಂದು ತಿಳಿ’ ಎಂದು ಭೀಮ ಅಬ್ಬರಿಸಿದಾಗ ಜರಾಸಂಧ ತಣ್ಣಗೆ ಹೇಳಿದ್ದ:
ಗೊತ್ತಿದೆ ಮಗೂ. ಅವಸರ ಮಾಡಬೇಡ, ಕೊಲ್ಲುವುದಕ್ಕೆಂದೇ ಬಂದಿದ್ದೀಯ. ಕೊಲ್ಲುತ್ತೀಯ ಅನ್ನುವುದೂ ಗೊತ್ತು. ಸಾಯುವುದಕ್ಕೆ ಸಿದ್ಧನಾಗೇ ಬಂದಿದ್ದೇನೆ. ಆದರೆ ನನ್ನನ್ನು ಜೀವಂತವಾಗಿಟ್ಟ, ನಾನು ನೆನಪಿಟ್ಟುಕೊಂಡ ಕೆಲವು ಕ್ಷಣಗಳನ್ನು ಮತ್ತೆ ನೆನಪಿಸಿಕೊಳ್ಳಬೇಕಾಗಿದೆ. ಅಂಥ ಅಮೃತ ಘಳಿಗೆಗಳನ್ನು ನಾನು ನೆನಪಿಸಿಕೊಂಡಾಗ ನನ್ನ ಆಯಸ್ಸು ವೃದ್ಧಿಯಾಗುತ್ತದೆ. ಆ ಕ್ಷಣವನ್ನೂ ಈ ಕ್ಷಣವನ್ನೂ ಏಕಕಾಲದಲ್ಲಿ ಬದುಕುತ್ತಿರುತ್ತೇನೆ ನಾನು. ಎರಡು ಕಾಲಗಳನ್ನು ಏಕತ್ರವಾಗಿಸಿ ಬದುಕಬಲ್ಲ ಶಕ್ತಿಯನ್ನು ಸಂಪಾದಿಸಿದವನು ನಾನು. ನಿಮ್ಮ ಪಾಲಿಗೆ ಕಾಲ ಸೀಳಿಹೋದ, ಹೋಳಾದ ಸಂಗತಿ. ಆದರೆ ನನ್ನ ಪಾಲಿಗೆ ಹಾಗಲ್ಲ. ಸೀಳಿಹೋದ ಕಾಲವನ್ನು ಏಕವಾಗಿಸುವ ಶಕ್ತಿ ಈ ಜರಾಸಂಧನಿಗಿದೆ. ಆದ್ದರಿಂದಲೇ ಹೇಳುತ್ತೇನೆ ಕೇಳು. ನನ್ನ ಪ್ರೇಮದ ಕತೆಯನ್ನು’ ಎಂದು ರಂಗನಾಥ ಇದ್ದಕ್ಕಿದ್ದ ಹಾಗೆ ಜರಾಸಂಧನ ಪ್ರೇಮಪ್ರಸಂಗವನ್ನು ಅವರ ಮುಂದೆ ನಿವೇದಿಸುತ್ತಿದ್ದ.
ಆಶ್ಚರ್ಯವೆಂದರೆ ಅದನ್ನು ಪ್ರೇಕ್ಷಕರು ಮೆಚ್ಚಿಕೊಂಡುಬಿಟ್ಟರು. ಕ್ರಮೇಣ ಜರಾಸಂಧ ತನ್ನ ಹಾಗೂ ಯಮುನೆಯ ಪ್ರೇಮದ ಘಳಿಗೆಗಳನ್ನು ಜರಾಸಂಧನಾಗಿ ವಿವರಿಸುತ್ತಲೇ ಹೋದ. ಒಂದು ದಿನ ಖಿನ್ನನಾಗಿ ಮತ್ತೊಂದು ದಿನ ವಿರಹೋತ್ಕಟತೆಯಿಂದ ಮತ್ತೊಂದು ದಿನ ಪ್ರೇವೋತ್ಸವದ ತುತ್ತುತುದಿಗೆ ತಲುಪಿ ಜರಾಸಂಧ ಪ್ರೇಮಪ್ರಸಂಗದಲ್ಲಿ ತಲ್ಲೀನನಾಗುತ್ತಿದ್ದ. ಜರಾಸಂಧ ಎಷ್ಟೋ ರಾತ್ರಿಗಳಲ್ಲಿ ಸಾಯುತ್ತಲೇ ಇರಲಿಲ್ಲ. ಪ್ರೇಮ ನನ್ನನ್ನು ಬದುಕಿಸಿತು, ನಿಮ್ಮನ್ನು ಕೊಲ್ಲುವ ಪಾಪದಿಂದ ಮುಕ್ತಗೊಳಿಸಿತು. ನನ್ನ ಸಾವಿನಿಂದ ಸಿಗುವುದಕ್ಕಿಂತ ಹೆಚ್ಚಿನ ಸಂತೋಷ ಈ ಪ್ರೇಮಪಾರಾಯಣದಿಂದ ಸಿಕ್ಕಿತು ಎಂದು ನಾನು ಭಾವಿಸುತ್ತೇನೆ ಎಂದು ಜರಾಸಂಧ ಕೃಷ್ಣಾರ್ಜುನರಿಗೂ ಭೀಮನಿಗೂ ಹೇಳುತ್ತಿದ್ದ. ಅಷ್ಟರಲ್ಲಿ ಬೆಳಗಾಗಿರುತ್ತಿತ್ತು. ಜನ ಹೊಸದೊಂದು ಪ್ರಸಂಗ ಕೇಳಿದ ಉತ್ಸಾಹದಲ್ಲಿ ಮರಳುತ್ತಿದ್ದರು.
+++
ಅಷ್ಟರಲ್ಲಾಗಲೇ ಯಮುನೆ ಪದವಿ ಮುಗಿಸಿದ್ದಳು. ಯಾವುದೋ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿದ್ದಳು. ನಿತ್ಯ ಅವನ ಯಕ್ಷಗಾನ ಪ್ರಸಂಗಗಳಿಗೆ ಹಾಜರಾಗುತ್ತಿದ್ದವಳು, ಕ್ರಮೇಣ ಕಡಿಮೆ ಮಾಡಿದಳು. ಯುಮುನೆಗೆ ಬೆಳಗ್ಗೆ ಹೊತ್ತು ತರಗತಿ ಇರುತ್ತಿತ್ತು. ರಾತ್ರಿ ಹೊತ್ತು ರಂಗನಾಥ ರಂಗದ ಮೇಲಿರುತ್ತಿದ್ದ. ನಿದ್ದೆಗೆಟ್ಟು ಪಾಠ
ಮಾಡೋದು ಕಷ್ಟವಾಗುತ್ತೆ ಎಂಬ ನೆಪ ಅವರಿಬ್ಬರನ್ನು ದೂರ ಮಾಡುತ್ತಾ ಬಂತು.
ರಂಗನಾಥ ಕೂಡ ಪ್ರೇಮದ ಕತೆಗಳಿಂದ ವಿರಹಕ್ಕೆ, ವಿರಹದಿಂದ ನೋವಿಗೆ, ನೋವಿನಿಂದ ಯಾತನೆಗೆ ರೂಪಾಂತರ ಹೊಂದುತ್ತಾ ಬಂದ. ಅವನ ಪ್ರಸಂಗದ ಆಸಕ್ತಿಯನ್ನು ಪ್ರೇಕ್ಷಕರೂ ಕಳಕೊಂಡರು. ಮತ್ತೆ ಜರಾಸಂಧ ಎಂದಿನ ಸ್ಥಿತಿಗೆ ಮರಳಿ, ಅವನ ಪಾತ್ರಕ್ಕೊಂದು ಅದ್ಬುತವಾದ ತಾತ್ವಿಕತೆಯನ್ನು ಕೊಟ್ಟು ಗೆಲ್ಲತೊಡಗಿದ.
ಈ ಮಧ್ಯೆ ಯಮುನೆಯ ಮದುವೆಯಾಯಿತು. ರಂಗನಾಥನಿಗೆ ಗೊತ್ತೇ ಆಗದಂತೇನೂ ಅದು ನಡೆದು ಹೋಗಲಿಲ್ಲ. ನಾನು ಪ್ರೀತಿಸಿದ್ದು ಮೆಚ್ಚಿದ್ದು ನಿನ್ನನ್ನಲ್ಲ, ಜರಾಸಂಧನನ್ನು. ನಿನ್ನ ಕಲೆಯನ್ನು. ಅದನ್ನು ನಾನು ಇವತ್ತಿಗೂ ಆರಾಧಿಸುತ್ತೇನೆ. ನಿನ್ನನ್ನು ಮದುವೆಯಾಗಿ ಆ ಕಲೆಯ ಮೇಲಿರುವ ನನ್ನ ವ್ಯಾಮೋಹವನ್ನೂ ನೀಗಿಕೊಳ್ಳಲು ನಾನು ಸಿದ್ಧಳಿಲ್ಲ ಅಂತೇನೋ ಕಾರಣ ಕೊಟ್ಟಿದ್ದಳು ಯಮುನೆ. ಆದು ರಂಗನಾಥನಿಗೆ ಪೂರ್ತಿಯಾಗಿ ಕೇಳಿಸಿರಲಿಲ್ಲ.
ಆಮೇಲೆ ರಂಗನಾಥ ವೃತ್ತಿ ಜೀವನಕ್ಕೆ ವಿದಾಯ ಹೇಳಿದ. ಜನಪ್ರಿಯತೆಯ ತುತ್ತತುದಿಯಲ್ಲಿದ್ದಾಗಲೇ ನಿವೃತ್ತಿ ಘೋಷಿಸಿದ. ಪ್ರೇಮಭಂಗವೇ ಅದಕ್ಕೆ ಕಾರಣ ಎಂದು ಅವನ ಯಮುನೆಯ ಸಾಂಗತ್ಯ ಬಲ್ಲವರು ಮಾತಾಡಿಕೊಂಡರು. ಅದರಿಂದ ಹೊರಬರುವಂತೆ ಅನೇಕರು ಅವನಿಗೆ ಬುದ್ಧಿವಾದ ಹೇಳಿದರು. ಆದರೆ ರಂಗನಾಥ ಅವರ ಕೈಗೆ ಸಿಗದ ಹಾಗೆ ದೂರ ಉಳಿದುಬಿಟ್ಟ.
+++
ಕೊನೆಗೂ ಅವನ ಅಭಿಮಾನಿಗಳು ರಂಗನಾಥನನ್ನು ಹಿಡಿದು ಅಭಿನಂದನಾ ಸಮಾರಂಭಕ್ಕೆ ಬರುವಂತೆ ಒಪ್ಪಿಸಿದ್ದರು. ಅಲ್ಲಿ ರಂಗನಾಥ ಮತ್ತೆ ಜರಾಸಂಧನಾಗಿ ಕಾಣಿಸಿಕೊಳ್ಳುತ್ತಾನೆ ಎಂದು ಪ್ರಚಾರ ಮಾಡಿದ್ದರು. ರಂಗನಾಥ ಕೂಡ ಮತ್ತೆ ಜರಾಸಂಧನನ್ನು ಆವಾಹಿಸಿಕೊಳ್ಳುವ ಉತ್ಸಾಹದಲ್ಲಿ ಒಪ್ಪಿಕೊಂಡಿದ್ದ.
ಕನ್ನಡಿ ಮುಂದೆ ಕೂತಾಗ ಜರಾಸಂಧ ಕಾಣಿಸದೇ ಯಮುನೆಯೇ ಕಾಣಿಸಿಕೊಂಡು ಕೊಂಚ ಕಂಗಾಲಾಗಿದ್ದ ರಂಗನಾಥ ಆರೂವರೆಯ ಹೊತ್ತಿಗೆ ರಂಗಮಂದಿರಕ್ಕೆ ಹೋದರೆ ಅಲ್ಲಿ ಸಾವಿರಾರು ಮಂದಿ ನೆರೆದಿದ್ದರು. ರಂಗಮುಂದಿರದಲ್ಲಿ ನೂಕು ನುಗ್ಗಲು. ಹೊರಗೆ ನಿಂತವರಿಗೆ ಅನುಕೂಲ ಆಗಲೆಂದು ಮೂರೋ ನಾಲ್ಕೋ ಟೀವಿಗಳನ್ನೂ ಹಾಕಿದ್ದರು. ಒಳಗೆ ನಡೆಯುತ್ತಿದ್ದುದನ್ನೂ ಅಲ್ಲೂ ಕಾಣಬಹುದಾಗಿತ್ತು.
ರಂಗನಾಥ ರಂಗ ಏರಿದ. ಜರಾಸಂಧನನ್ನು ಆವಾಹಿಸಿಕೊಂಡ. ಅವನಿಗೆ ಅಚ್ಚರಿಯಾಗುವಂತೆ ಅವನ ಜೊತೆಗೆ ಭೀಮ, ಕೃಷ್ಣಾರ್ಜುನರ ಪಾತ್ರ ಮಾಡಿದವರು ಆವತ್ತೂ ಅದೇ ಪಾತ್ರದಲ್ಲಿ ಬಂದಿದ್ದರು. ಅದು ಏಕವ್ಯಕ್ತಿ ಪ್ರದರ್ಶನ ಅಂದುಕೊಂಡಿದ್ದ ರಂಗನಾಥ ಅವಾಕ್ಕಾದ. ಸಂಘಟಕರು ಮೀಸೆಯಡಿಯಲ್ಲಿ ಸಣ್ಣಗೆ ನಕ್ಕು, ತಮ್ಮ ಯೋಜನೆ ಯಶಸ್ವಿಯಾದದ್ದಕ್ಕೆ ಖುಷಿಪಟ್ಟರು.
ಜರಾಸಂಧ ಎಂದಿನಂತೆ ವಿಜೃಂಭಿಸಿದ. ಭೀಮನಿಗೆ ಯುದ್ಧ ಆರಂಭಿಸುವುದಕ್ಕೇ ಅವಕಾಶ ಕೊಡಲಿಲ್ಲ. ಮಾತಲ್ಲೇ ಅವರನ್ನು ಹಿಡಿದಿಟ್ಟು ರಾತ್ರಿಯನ್ನು ಬೆಳಗು ಮಾಡುವ ಉತ್ಸಾಹದಲ್ಲಿದ್ದ. ಸಂಘಟಕರಿಗೂ ಅದೇ ಬೇಕಿತ್ತು.
ನನಗೆ ಸಾವಿಲ್ಲ. ನೀನು ನನ್ನನ್ನು ಸೀಳಿ ಎಸೆಯಲಾರೆ. ಹೇಗೆ ಸೀಳಿ ಎಸೆದರೂ ನಾನು ಕೂಡಿಕೊಳ್ಳಬಲ್ಲೆ. ಯಾಕೆಂದರೆ ನಾನು ಜರಾಸಂಧ. ನಿನಗೆ ಕೃಷ್ಣ ಹೇಳಿಕೊಡುವ ತಂತ್ರ ಕೂಡ ಒಂದು ಕ್ಷುಲ್ಲಕ ಆಲೋಚನೆ. ನೀಚ ಜಾಣತನ’ ಎಂದು ಜರಾಸಂಧ ಹೇಳುತ್ತಿದ್ದಂತೆ ಅವನ ಮೂಗಿಗೆ ಅದೇ ಸುಗಂಧ ಅಡರಿತು. ಜರಾಸಂಧ ಸಭೆಯತ್ತ ನೋಡಿದ. ಎದುರು ಸಾಲಲ್ಲಿ ಖಾಲಿಯಿದ್ದ ಎರಡು ಕುರ್ಚಿಗಳಲ್ಲಿ ಯಮುನೆ ಮತ್ತು ಅವಳ ಗಂಡ ಕುಳಿತುಕೊಂಡರು. ಅಕ್ಕಪಕ್ಕ ಕುಳಿತವರು ಎದ್ದು ನಿಂತು ಗೌರವ ಸೂಚಿಸಿದರು. ಡಿ. ಸಿ. ಸಾಹೇಬರು ಎಂದು ಭಾಗವತ ಯಾರದೋ ಕಿವಿಯಲ್ಲಿ ಪಿಸುಗುಟ್ಟಿದ್ದು ರಂಗನಾಥನಿಗೂ ಕೇಳಿಸಿತು.
ರಂಗನಾಥ ಮೌನವಾದ. ಅವನ ಮಾತಿಗೆ ಕಾಯುತ್ತಿದ್ದ ಭೀಮನ ಹತ್ತಿರ ಎತ್ತಿಕೋ ನಿನ್ನ ಗದೆಯನ್ನು, ಅಖಾಡಕ್ಕೆ ಇಳಿ, ನೋಡೇ ಬಿಡೋಣ’ ಎಂದು ತಣ್ಣಗಿನ ದನಿಯಲ್ಲಿ ಹೇಳಿದ. ಆ ಅಚಾನಕ್ ನಿರುತ್ಸಾಹವನ್ನು ಊಹಿಸದೇ ಇದ್ದ ಭೀಮ, ಮೊದಲು ಮಾತಿನ ಯುದ್ಧ, ಆಮೇಲೆ ಮಲ್ಲಯುದ್ಧ ಎಂದು ಮತ್ತೆ ಅವನನ್ನು
ಮಾತಿಗೆಳೆಯಲು ನೋಡಿದ.
ರಂಗನಾಥ ಗದೆಯೆತ್ತಿಕೊಂಡು ಎದ್ದು ನಿಂತೇ ಬಿಟ್ಟ. ಭೀಮನೂ ಬೇರೆ ದಾರಿಯಿಲ್ಲದೇ ಗದೆಯೆತ್ತಿಕೊಂಡ.
ಮೂರು ನಿಮಿಷಗಳ ನಂತರ ಭೀಮ, ಜರಾಸಂಧನನ್ನು ಎರಡು ಹೋಳಾಗಿ ಸೀಳಿ ಎಸೆದ.
ತನ್ನನ್ನು ಸೀಳಿ ಎಸೆದದ್ದು ಕೃಷ್ಣನ ಕುತಂತ್ರವೋ ಭೀಮನ ಬಲವೋ ಯುಮುನೆಯ ಫಲಿಸದ ಒಲವೋ ಎಂದು ಯೋಚಿಸುತ್ತಾ ಜರಾಸಂಧ ಕಣ್ಮುಚ್ಚಿದ.

‍ಲೇಖಕರು avadhi

October 7, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: