ಜೋಗಿ ಬರೆದ ಕಥೆ: ಜರಾಸಂಧ

IMG_0491ಸುಮ್ಮನೆ ಗಾಳಿ ಬೀಸುತ್ತಿತ್ತು. ಮನೆ ಮುಂದಿನ ಗಾಳಿ ಮರದ ನೆರಳು ಅಲ್ಲಾಡುತ್ತಿತ್ತು. ಆಕಾಶದಲ್ಲಿ ದಟ್ಟೈಸಿದ ಮೋಡಗಳಿಗೆ ಹೆಸರೇ ಇರಲಿಲ್ಲ. ಸೂರ್ಯ ಕಣ್ಣಾಮುಚ್ಚಾಲೆ ಆಡುತ್ತಿದ್ದ. ದೇವಸ್ಥಾನದ ಅರ್ಚಕರು ಪೂಜೆ ಮುಗಿಸಿ ಬೆಟ್ಟ ಇಳಿದು ನಿಟ್ಟುಸಿರೇ ಮೈವೆತ್ತಂತೆ ನಡೆದುಕೊಂಡು ಹೋಗುತ್ತಿದ್ದರು. ಮನೆ ಹಿಂದಿನ ಹಟ್ಟಿಯಲ್ಲಿ ಕಪಿಲೆ ಒಮ್ಮೆ ಸುದೀರ್ಘ ಅಂಬಾ ಎಂದು ಸುಮ್ಮನಾದಳು.

ರಂಗನಾಥ ಕನ್ನಡಿಯ ಮುಂದೆ ಕೂತಿದ್ದ. ಆವತ್ತು ಅವನ ಕೊನೆಯ ಪ್ರದರ್ಶನವಿತ್ತು. ಮೂರು ವರುಷಗಳ ಹಿಂದೆ ಯಕ್ಷಗಾನದಿಂದ ನಿವೃತ್ತಿ ಹೊಂದಿದ ಅವನನ್ನು ಆವತ್ತು ಊರಿನ ಮಿತ್ರರೆಲ್ಲ ಸೇರಿ ಸನ್ಮಾನಿಸುವುದಾಗಿ ತೀರ್ಮಾನಿಸಿದ್ದರು. ಆ ಸನ್ಮಾನದ ಕೊನೆಗೆ ಅವನೊಂದು ಏಕವ್ಯಕ್ತಿ ಅಭಿನಯ ಮಾಡಬೇಕು ಎಂದು ಒತ್ತಾಯಿಸಿದ್ದರು. ಮತ್ತೆ ಬಣ್ಣ ಹಚ್ಚುವುದಿಲ್ಲ ಎಂದು ತೀರ್ಮಾನಿಸಿದ್ದ ರಂಗನಾಥ ಅವರೆಲ್ಲರ ಒತ್ತಾಯಕ್ಕೆ ಮಣಿದು ಬಣ್ಣ ಹಚ್ಚಿಕೊಳ್ಳಲು ತೀರ್ಮಾನಿಸಿದ್ದ.

ಮೂರು ವರುಷಗಳಿಂದ ಕೂತಲ್ಲೇ ಕೂತು ಕೈ ಕಾಲು ಜಡ್ಡುಗಟ್ಟಿತ್ತು. ಅವನ ಮೆಚ್ಚಿನ ಪಾತ್ರವೆಂದರೆ ಜರಾಸಂಧನದು. ಸೀಳಿ ಎಸೆದರೂ ಕೂಡಿಕೊಳ್ಳುವ ಜರಾಸಂಧ ಅವನಿಗೆ ವೈಯಕ್ತಿಕವಾಗಿಯೂ ಅಚ್ಚುಮೆಚ್ಚು. ಅದು ಮನಸ್ಸಿಗೆ ಸಂಕೇತ ಎಂದು ಅವನು ತಾಳಮದ್ದಲೆ ಪ್ರಸಂಗದಲ್ಲಿ ವಾದಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದ. ಆ ಪಾತ್ರ ಅವನೊಳಗೆ ಮನೆ ಮಾಡಿಕೊಂಡಿತ್ತು. ಹುಟ್ಟುತ್ತಲೇ ಎರಡು ಹೋಳಾಗಿ ಹುಟ್ಟಿದ ಜರಾಸಂಧನ ಇತಿಹಾಸವನ್ನೂ ರಂಗನಾಥ ಅಧ್ಯಯನ ಮಾಡಿದ್ದ. ಜರಾಸಂಧನ ವಂಶಕ್ಕೆ ಸೇರಿದ ಶೂರಸೇನನ ಮಗಳು ಸುಮಿತ್ರೆ. ಅವಳನ್ನು ದಶರಥ ಮದುವೆ ಆಗಿದ್ದ. ಹೀಗೆ ಜರಾಸಂಧನ ವಂಶಕ್ಕೆ ತನ್ನದೇ ಆದ ಗೌರವ ಇದೆ. ರಾಮಾವತಾರದಿಂದ ಕೃಷ್ಣಾವತಾರದ ತನಕ ಹಬ್ಬಿರುವ ವಂಶ ಅದು ಎಂದು ರಂಗನಾಥ ವಾದಿಸುವ ಮೂಲಕ ತನ್ನ ಪಾಂಡಿತ್ಯವನ್ನೂ ಪ್ರದರ್ಶಿಸುತ್ತಿದ್ದ. ಮಗಧದ ರಾಜನಾದ ಜರಾಸಂಧ ರಾಕ್ಷಸನಲ್ಲ, ಕ್ಷತ್ರಿಯ ಎನ್ನುವುದೂ ಅವನ ಮತ್ತೊಂದು ವಾದವಾಗಿತ್ತು.

baluಚಿತ್ರ: ಬಾಲು ಮಂದರ್ತಿ

ತನ್ನ ವೃತ್ತಿ ಜೀವನದ ಕೊನೆಕೊನೆಯ ದಿನಗಳು ಸಮೀಪಿಸುತ್ತಿದ್ದ ಹಾಗೇ, ಪ್ರತಿಯೊಂದು ಪ್ರದರ್ಶನದಲ್ಲೂ ಹೊಸ ಹೊಸ ಸಂಗತಿಗಳು ರಂಗನಾಥನಿಗೆ ಹೊಳೆಯುತ್ತಿದ್ದವು. ಅವನು ತನ್ನ ಅಲಂಕಾರವನ್ನು ತಾನೇ ಮಾಡಿಕೊಳ್ಳುವುದು ರೂಢಿ. ಬೇರೆ ಯಕ್ಷಗಾನದ ಕಲಾವಿದರ ಹಾಗೆ ಆತ ಕಿರೀಟ ತೊಡುತ್ತಿರಲಿಲ್ಲ. ಬದಲಾದಿ ಉದ್ದನೆ ಕೂದಲನ್ನು ಹಿಂದಕ್ಕೆ ಬಾಚಿಕೊಂಡು ಹಣೆಗೊಂದು ಕುಂಕುಮ ಇಟ್ಟುಕೊಂಡು ರಂಗಕ್ಕಿಳಿಯುತ್ತಿದ್ದ. ಬಿಡುಬೀಸಾಗಿ ಹರಿಯುವ ಮಾತಿನ ರಭಸ ಮತ್ತು ಗತ್ತಿಗೆ ಅನುಗುಣವಾಗಿ ಅವನ ಕೂದಲು ನರ್ತಿಸುತ್ತಿತ್ತು. ಜರಾಸಂಧನ ಪಾತ್ರಕ್ಕೆ ಹೊಸ ಆಯಾಮ ಕೊಟ್ಟವನು ಎಂದು ರಂಗನಾಥನನ್ನು ಅನೇಕರು ಕೊಂಡಾಡುತ್ತಿದ್ದರು. ಜರಾಸಂಧ ಎಂದಾಗೆಲ್ಲ ಎಲ್ಲರಿಗೂ ನೆನಪಾಗುತ್ತಿದ್ದದ್ದು ರಂಗನಾಥನೇ.

ರಂಗನಾಥನಿಗೂ ಜರಾಸಂಧನಿಗೂ ಒಂದು ಅನೂಹ್ಯ ಸಂಬಂಧ ಏರ್ಪಟ್ಟಿತ್ತು. ಭೀಮಾರ್ಜುನರು ಬ್ರಾಹ್ಮಣರ ವೇಷದಲ್ಲಿ ಮಗಧ ಸಂಸ್ಥಾನಕ್ಕೆ ಹಿಂಭಾಗಿಲಿನಿಂದ ಬಂದು ಜರಾಸಂಧನನ್ನು ಯುದ್ಧಕ್ಕೆಬ್ಬಿಸಿ, ಭೀಮನ ಕೈಲಿ ಜರಾಸಂಧನನ್ನು ಮಣಿಸುವುದು ಸಾಧ್ಯವಾಗದೇ ಹೋದಾಗ ಶ್ರೀಕೃಷ್ಣ ಉಪಾಯದಿಂದ ಅವನನ್ನು ಕೊಲ್ಲಿಸುವ ಪ್ರಸಂಗದಲ್ಲಿ ಕೃಷ್ಣಾರ್ಜುನರು ರಂಗನಾಥನ ಮಾತಿನ ಧಾಟಿಗೇ ಮರಣ ಹೊಂದಿರುತ್ತಿದ್ದರು. ಸತ್ತರೂ ಚಿರಸ್ಥಾಯಿಯಾಗಿ ಉಳಿಯುತ್ತಿದ್ದದ್ದು ಜರಾಸಂಧನೇ. ಸೋತೂ ಗೆಲ್ಲುವ ಸೋತೇ ಗೆಲ್ಲುವ ಸಾಧ್ಯತೆಯನ್ನು ನಿಚ್ಚಳವಾಗಿ ತೋರಿಸಿದವನೂ ಅವನೇ. ಖಳನಾಯಕನ ಪಾತ್ರದ ಮನಸ್ಥಿತಿಯನ್ನು ಬಿಂಬಿಸಿ ಆ ಪಾತ್ರದ ಬಗ್ಗೆ ಹೆಮ್ಮೆ ಗೌರವ ಮೂಡುವಂತೆ ಮಾಡಿದ ರಂಗನಾಥ ಶೈಲಿಯನ್ನು ಅನೇಕರು ಅನುಕರಿಸಲು ಆರಂಭಿಸಿದ್ದರು. ಕೃಷ್ಣ ಮತ್ತು ಭೀಮ ಇಬ್ಬರೂ ಅತ್ಯಂತ ನೀಚರೂ, ಸಮಯಸಾಧಕರೂ, ಕುಟಿಲೋಪಾಯಗಳ ಮೂಲಕ ಗೆಲ್ಲುವ ಹೇಡಿಗಳೂ ಎಂದು ಜರಾಸಂಧ ನಿರೂಪಿಸುತ್ತಿದ್ದ.

ಅದಕ್ಕೆ ಕಾರಣ ಅವನ ಮಾತು. ದಿನೇ ದಿನೇ ಹೊಸ ಹೊಸ ವಿಚಾರಗಳ ಜೊತೆ ರಂಗನಾಥ ಹಾಜರಾಗುತ್ತಿದ್ದ. ಹೀಗಾಗಿ ಅವನೊಂದಿಗೆ ವಾದಕ್ಕೆ ನಿಲ್ಲುವ ಕಲಾವಿದರು ಎಷ್ಟೇ ಸಿದ್ಥತೆ ಮಾಡಿಕೊಂಡು ಬಂದರೂ ರಂಗನಾಥನ ಹೊಸ ವಾದ ಎದುರಾದ ತಕ್ಷಣ ಸೋತು ತೆಪ್ಪಗಾಗುತ್ತಿದ್ದರು. ಅದನ್ನು ಎದುರಿಸುವ ಉಪಾಯಗಳೇ ಕಾಣದೇ ಸುಮ್ಮನಾಗುತ್ತಿದ್ದರು. ಹರಿದೆಸೆದರೂ ಕೂಡಿಕೊಳ್ಳಬಲ್ಲ ಶಕ್ತಿ ಇರುವುದು ಏಕಾಗ್ರವಾಗಿ ಬದುಕುವವನಿಗೆ ಮಾತ್ರ. ಹಾಗೆ ಏಕಾಗ್ರವಾಗಿ, ಇಡಿಯಾಗಿ ಬದುಕಿದವನಲ್ಲ ಕೃಷ್ಣ. ಅವನು ಹರಿದು ಹಂಚಿಹೋದ ಬದುಕು. ಅವನ ಶ್ರದ್ಧೆಯಲ್ಲಾಗಲೀ, ಸಂಬಂಧಗಳಲ್ಲಾಗಲೀ ಏಕಾಗ್ರತೆಯೇ ಇಲ್ಲ. ಹದಿನಾರು ಸಾವಿರದ ಎಂಟು ನಾರಿಯರ ನಡುವೆ ಹರಿದು ಹಂಚಿಹೋದ ಶೃಂಗಾರ ಜೀವನ, ಆಯುಧ ಹಿಡಿಯುವುದಿಲ್ಲ ಎಂದು ಹೇಳಿಯೂ ಭೀಷ್ಮನ ಎದುರು ಚಕ್ರಧಾರಿಯಾಗಿ ಕೊಟ್ಟ ಮಾತನ್ನು ಹರಿದು ಹಾಕಿದ ಸಾರಥ್ಯ, ಬಾಲ್ಯದಲ್ಲೂ ಅಷ್ಚೇ. ಹುಟ್ಟಿದ್ದೆಲ್ಲೋ ಬೆಳೆದದ್ದೆಲ್ಲೋ. ಯಾರೋ ತಾಯಿ, ದೇವಕಿ ಯಶೋದೆಯರ ನಡುವೆ ಹರಿದು ಹೋದ ಬಾಲ್ಯ. ಅವನಿಗೆ ಸಮಗ್ರೀಕರಣ ಬಲವೇ ಇಲ್ಲ ಎಂದು ವಾದಿಸುತ್ತಿದ್ದ ಜರಾಸಂಧನೆದುರು ಕೃಷ್ಣ ಪೀಚಲಾಗಿ ಕಾಣತೊಡಗುತ್ತಿದ್ದ.

ಅಷ್ಟೆಲ್ಲ ಮಾತುಗಳು ರಂಗನಾಥನಿಗೆ ಎಲ್ಲಿಂದ ಹೊಳೆಯುತ್ತವೆ, ಅವನು ಯಾವ ಗ್ರಂಥ ಓದುತ್ತಾನೆ ಎಂದು ಅವನ ಜೊತೆಗಿದ್ದ ಕಲಾವಿದರು ಬೆರಗಾಗುತ್ತಿದ್ದರು. ಆದರೆ ಅವರಿಗೆ ಗೊತ್ತಿಲ್ಲದ ಸಂಗತಿಯೊಂದನ್ನು ರಂಗನಾಥ ಯಾವತ್ತೂ ಬಿಟ್ಟು ಕೊಟ್ಟಿರಲಿಲ್ಲ. ರಂಗನಾಥ ಮೇಕಪ್ ಮಾಡಿಕೊಳ್ಳಲು ಕನ್ನಡಿ ಮುಂದೆ ಕೂತರೆ ಅಲ್ಲಿ ಕನ್ನಡಿಯೊಳಗೆ ಜರಾಸಂಧ ಪ್ರತ್ಯಕ್ಷನಾಗುತ್ತಿದ್ದ. ಕನ್ನಡಿಯೊಳಗಿನ ಜರಾಸಂಧನಿಗೂ ರಂಗನಾಥನಿಗೂ ಮಾತಾಗುತ್ತಿತ್ತು. ಜರಾಸಂಧ ತನಗೆ ಅನ್ನಿಸಿದ್ದನ್ನೆಲ್ಲ ರಂಗನಾಥನ ಬಳಿ ಹೇಳಿಕೊಳ್ಳುತ್ತಿದ್ದ. ತನಗೊಂದು ವ್ಯಕ್ತಿತ್ವ ರೂಪಿಸಿಕೊಟ್ಟು, ತನ್ನ ಕ್ರಿಯೆಗಳನ್ನು ಸಮರ್ಥಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ರಂಗನಾಥನ ಕಿವಿಯಲ್ಲಿ ತಾನು ಪುರಾಣಕಾಲದಿಂದಲೂ ಬಚ್ಚಿಟ್ಟುಕೊಂಡ ಸಂಗತಿಗಳನ್ನು ಹೇಳುತ್ತಿದ್ದ. ಈ ವಾಗ್ವಾದ, ಮಾತುಕತೆ, ಚರ್ಚೆ ಪ್ರತಿಬಾರಿ ಕನ್ನಡಿ ಮುಂದೆ ಕೂತಾಗಲೂ ನಡೆಯುತ್ತಿತ್ತು.

ಆದ್ದರಿಂದಲೇ ಒಮ್ಮೊಮ್ಮೆ ರಂಗನಾಥ ಇದ್ದಕ್ಕಿದ್ದ ಹಾಗೆ ಬೇರೊಂದು ವಾದ ಮಂಡಿಸುವುದೂ ಸಾಧ್ಯವಾಗುತ್ತಿತ್ತು. ನಾನು ಸಾಯುತ್ತೇನೆ ಅನ್ನೋದು ನನಗೆ ಗೊತ್ತಿದೆ. ನೀನು ನಿನ್ನ ಕುಟಿಲೋಪಾಯದಿಂದ ನನ್ನನ್ನು ಕೊಲ್ಲುತ್ತೀಯ ಎಂದೂ ನಾನು ಬಲ್ಲೆ. ಅಷ್ಟು ಗೊತ್ತಿದ್ದವನು ನಿನ್ನೊಡನೆ ವಾದಕ್ಕಾಗಲೀ ಯುದ್ಧಕ್ಕಾಗಲೀ ಇಳಿಯದೇ ಎದ್ದು ಹೋಗಿ ನನ್ನನ್ನ ಕಾಪಾಡಿಕೊಳ್ಳಬಹುದು. ನೀನು ಹಿತ್ತಲ ಬಾಗಿಲಿನಿಂದ ಬರುತ್ತಿ ಅನ್ನುವುದು ಮೊದಲೇ ಗೊತ್ತಿದ್ದ ನಾನು ಆ ದಾರಿಯನ್ನೇ ಮುಚ್ಚಿಸಿಬಿಡಬಹುದಾಗಿತ್ತು. ಆದರೆ ನಿನ್ನ ಕೈಯಲ್ಲಿ ಸಾಯುವುದು ನನಗೆ ಅನಿವಾರ್ಯ. ಈ ಸಾವು ಪದೇ ಪದೇ ಸಂಭವಿಸುತ್ತಿರಬೇಕು. ಆಗಷ್ಟೇ ನಾನು ಈ ಸಾವಿನ ಭಯವನ್ನು ಮೀರಬಲ್ಲೆ. ಪ್ರತಿಬಾರಿಯೂ ಸಾಯುತ್ತೇನೆ ಎಂದು ಗೊತ್ತಿರುವ ಈ ಜರಾಸಂಧ, ಮತ್ತೆ ಯುದ್ಧಕ್ಕೆ ಸಿದ್ಧನಾಗುವ ಉತ್ಸಾಹವನ್ನು ಎಲ್ಲಿಂದ ಪಡಕೊಳ್ಳುತ್ತಿದ್ದಾನೆ ಎಂದು ನೀವು ಯಾವತ್ತಾದರೂ ಯೋಚಿಸಿದ್ದೀಯ ಕೃಷ್ಣಾ. ಒಂದು ಅರ್ಥದಲ್ಲಿ ನನ್ನ ಭವಿಷ್ಯ ಈ ಪ್ರಸಂಗದ ಮಟ್ಟಿಗೆ ಪೂರ್ವನಿಶ್ಚಿತ. ನಾನೊಬ್ಬ ಪುರಾಣದ ಪಾತ್ರ. ನನಗೆ ವರ್ತಮಾನದಲ್ಲಿ ಬದುಕೂ ಇಲ್ಲ, ಅರ್ಥವೂ ಇಲ್ಲ. ಜೀವಂತಿಕೆಯೂ ಇಲ್ಲ. ನಿನಗೂ ಅಷ್ಟೇ. ನೀನು ಕೂಡ ಪುರಾಣದಿಂದ ಹುಟ್ಟಿದವನೇ. ನಿನಗೂ ಕೂಡ ವರ್ತಮಾನದಲ್ಲಿ ಯಾವ ಅಸ್ಥಿತ್ವವೂ ಇಲ್ಲ. ಹೀಗೆ ಈ ಕಾಲದ ಸೇರದ ನಾವಿಬ್ಬರೂ ಹೋರಾಡುತ್ತಿರುವ ನಾವು ನಮ್ಮ ಅಂತ್ಯಗಳನ್ನು ಬಲ್ಲವರೇ ಎನ್ನುವುದನ್ನು ಮರೆಯಬೇಡ’

ಹೀಗೆ ಹೇಳುವ ಮೂಲಕ ರಂಗನಾಥ ಕಲೆಯ ಚೌಕಟ್ಟನ್ನು ದಾಟುತ್ತಿದ್ದಾನೆ ಎಂದು ಅನೇಕರು ವಾದಿಸುತ್ತಿದ್ದರು. ಅವನದು ತೀರಾ ಅತಿಯಾಯ್ತು ಎಂದು ಮಾತಾಡುತ್ತಿದ್ದರು. ಆದರೆ ಆ ಅತಿಯಲ್ಲೇ ರಂಗನಾಥ ಮೆರೆಯುತ್ತಿದ್ದ. ತ್ರಿಕಾಲಗಳನ್ನು ಏಕಕಾಲಕ್ಕೆ ಸ್ಪರ್ಶಿಸುವ ಮೂಲಕ ಕಾವ್ಯದ ಸಂಕೀರ್ಣತೆಯನ್ನು ಆ ಕಲಾಪ್ರಸಂಗಕ್ಕೆ ಒದಗಿಸುತ್ತಿದ್ದ. ಹರಿದು ಹೋಗಿಯೂ ಇಡಿಯಾಗಿ ಉಳಿಯಬಲ್ಲ ಸಾಧ್ಯತೆಯನ್ನು ಪ್ರತಿಪಾದಿಸುತ್ತಿದ್ದ.

-೨-

ಆವತ್ತೂ ರಂಗನಾಥ ಕನ್ನಡಿಯ ಮುಂದೆ ಕುಳಿತು ಕಾದ. ಸನ್ಮಾನ ಸ್ವೀಕಾರಕ್ಕೆ ಜರಾಸಂಧನ ರೂಪದಲ್ಲಿ ಬರಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದರು. ಆ ರೂಪದಲ್ಲಿ ಸನ್ಮಾನ ಸ್ವೀಕರಿಸಿ ಕೆಲಕೊಂದು ಜರಾಸಂಧನ ವ್ಯಕ್ತಿತ್ವದ ಮಾತುಗಳನ್ನು ಆಡಿ, ಏಕವ್ಯಕ್ತಿ ಪ್ರದರ್ಶನದಲ್ಲಿ ಜರಾಸಂಧನನ್ನು ಕಟ್ಟಿಕೊಡಬೇಕೆಂದು ಕೇಳಿಕೊಂಡಿದ್ದರು.

ಆವತ್ತು ಎಷ್ಟು ಹೊತ್ತಾದರೂ ಜರಾಸಂಧ ಬರಲೇ ಇಲ್ಲ. ರಂಗನಾಥ ಎಷ್ಟು ಕಾದರೂ ಜರಾಸಂಧನ ಪ್ರತಿರೂಪ ಕನ್ನಡಿಯೊಳಗೆ ಕಾಣಿಸಿಕೊಳ್ಳಲಿಲ್ಲ. ಅಲ್ಲಿ ಕೇವಲ ರಂಗನಾಥನೇ ಕಾಣುತ್ತಿದ್ದ. ರಂಗನಾಥನ ಮಾತುಗಳಷ್ಟೇ ಅವನೊಳಗೆ ಪ್ರತಿಧ್ವನಿಸುತ್ತಿತ್ತು.

ಆವತ್ತು ಬೇರೇನಾದರೂ ಬೇಕು ಅಂತ ರಂಗನಾಥನಿಗೆ ಅನ್ನಿಸತೊಡಗಿತು. ಜರಾಸಂಧನಾಗಿ ತಾನು ಆಡುವ ಮಾತುಗಳೆಲ್ಲ ಮುಗಿದು ಹೋಗಿವೆ ಎಂದು ಅವನಿಗೆ ಖಾತ್ರಿಯಾಗಿತ್ತು. ಹೀಗಾಗಿ ಜರಾಸಂಧನ ಒಳತೋಟಿಯನ್ನು ಅವನಿಂದಲೇ ಕೇಳಿಸಿಕೊಳ್ಳದ ಹೊರತು ತಾನೇನೂ ಮಾತಾಡಲಾರೆ. ತಾನಾಡುವ ಮಾತುಗಳಿಗೆ ಜರಾಸಂಧನನ್ನು ಆವಾಹಿಸಿಕೊಳ್ಳುವುದು ಕಷ್ಟ. ತಾನು ಏನೇ ಹೇಳಿದರೂ ಅದು ಅಸಹಜವೂ ನಾಟಕೀಯವೂ ಆಗಿರುತ್ತದೆ. ಹೀಗಾಗಿ ಅದನ್ನು ಮೀರುವುದಕ್ಕೆ ಜರಾಸಂಧನ ನೆರವು ಬೇಕೇ ಬೇಕು ಎಂದು ರಂಗನಾಥ ಮತ್ತೆ ಮತ್ತೆ ಕನ್ನಡಿಯತ್ತಲೇ ಕಣ್ಣು ನೆಟ್ಟು ಕುಳಿತುಕೊಂಡ.

ಸುಮ್ಮನೆ ಗಾಳಿ ಬೀಸುತ್ತಿತ್ತು. ಮನೆ ಮುಂದಿನ ಗಾಳಿ ಮರದ ನೆರಳು ಅಲ್ಲಾಡುತ್ತಿತ್ತು. ಆಕಾಶದಲ್ಲಿ ದಟ್ಟೈಸಿದ ಮೋಡಗಳಿಗೆ ಹೆಸರೇ ಇರಲಿಲ್ಲ. ಸೂರ್ಯ ಕಣ್ಣಾಮುಚ್ಚಾಲೆ ಆಡುತ್ತಿದ್ದ. ದೇವಸ್ಥಾನದ ಅರ್ಚಕರು ಪೂಜೆ ಮುಗಿಸಿ ಬೆಟ್ಟ ಇಳಿದು ನಿಟ್ಟುಸಿರೇ ಮೈವೆತ್ತಂತೆ ನಡೆದುಕೊಂಡು ಹೋಗುತ್ತಿದ್ದರು. ಮನೆ ಹಿಂದಿನ ಹಟ್ಟಿಯಲ್ಲಿ ಕಪಿಲೆ ಒಮ್ಮೆ ಸುದೀರ್ಘ ಅಂಬಾ ಎಂದು ಸುಮ್ಮನಾದಳು.

ಅದರ ಬೆನ್ನಿಗೇ ಸಣ್ಣಗೆ ಮಳೆ ಹನಿಯತೊಡಗಿತು.

ಕನ್ನಡಿಯ ಮೇಲೆ ಸಣ್ಣಗೆ ಹಿಮದ ಪರದೆ ಮೂಡಿತು. ಅದರಾಚೆ ಅಸ್ಪಷ್ಟವಾಗಿ ಯುಮುನೆ ಕಾಣಿಸಿಕೊಂಡಳು.

ಇನ್ನೂ ಇದೆ…

‍ಲೇಖಕರು avadhi

September 28, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

6 ಪ್ರತಿಕ್ರಿಯೆಗಳು

  1. Santhosh Ananthapura

    ಸಾರ್, ತುಂಬಾ ತುಂಬಾನೆ ಚೆನ್ನಾಗಿದೆ…ತಾಳ ಮದ್ದಳೆಯಲ್ಲಿ ಮಿಂದು ಎದ್ದಂತಹ ಅನುಭವವಾಯ್ತು….ಜರಾಸಂಧನ ಒಳನೋಟ ಖುಷಿಯಾಯ್ತು…ಒಮ್ಮೆಗೆ ನನಗೆ ದಿ.ಶೇಣಿ ಯವರು ನೆನಪಾದರು… Thanks for the good one.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: