ಜೋಗಿ ಬರೆದ ಹೊಸ ಕಥೆ: ನಿತ್ಯಾನಂದನೋ..ಗೋತಾನಂದನೋ ..?

ಬಿಟ್ಟೆನೆಂದರೆ ಬಿಡದೀ ಮಾಯೆ!
ನಂಬದಿರು ಈ ದೇಹ
ನಿತ್ಯವಲ್ಲ
ಟೀವಿಯಲ್ಲಿ ಬರೋದೆಲ್ಲ
ಸತ್ಯವಲ್ಲಾ…..
ದಾಸರ ಪದ ಕೇಳಿಕೊಂಡು ಅನುಷ್ಟುಪ್ಪು ಭಂಗಿಯಲ್ಲಿ ಕೂತಿದ್ದ ಗೋತಾನಂದರು ಖಿನ್ನರಾಗಿದ್ದರು. ಮಡದೀ ಮಾಯೆ ಬಿಟ್ಟರೂ ಬಿಡದೀ ಮಾಯೆ ಬಿಡಲಿಲ್ಲವಲ್ಲ ಎಂದು ಆತಂಕಿತರಾಗಿದ್ದರು. ಯಾವತ್ತೋ ಕೇಳಿದ ಹಾಡುಗಳೂ ಮಂತ್ರಗಳೂ ಒಂದೇ ಸಮನೆ ಕಿವಿಯೊಳಗೆ ನುಗ್ಗಿ, ಗುಗ್ಗಿ ಕಡ್ಡಿಯಂತೆ ಕಚಗುಳಿಯಿಡುತ್ತಿದ್ದವು.

ಆತ್ಮ ಮಲಿನವಾಗುವುದಿಲ್ಲ. ಅದು ಯಾವುದನ್ನೂ ಅಂಟಿಸಿಕೊಳ್ಳುವುದಿಲ್ಲ. ದೇಹಕ್ಕೆ ಕೊಳೆಯಾಗಿರಬಹುದು. ಆದರೆ ಈ ದೇಹ ನನ್ನದಲ್ಲ. ಅದು ನಾನು ಇರುವುದಕ್ಕೊಂದು ತಾಣ ಅಷ್ಟೇ. ಅದನ್ನು ಬಿಟ್ಟು ಬೇರೆ ತಾಣಕ್ಕೆ ಹೊರಟು ಹೋದರಾಯಿತು ಎಂದುಕೊಂಡು ಮನಸ್ಸನ್ನು ಸ್ಥಿಮಿತಕ್ಕೆ ತಂದುಕೊಳ್ಳಲು ಗೋತಾನಂದರು ಯತ್ನಿಸಿದರೂ ಕಣ್ಮುಂದೆ ಬಿಡದಿ ಸುಳಿದು ಮರೆಯಾಗುತ್ತಿದ್ದಳು.
ಪಾಪೋಹಂ ಪಾಪಕರ್ಮಾಹಂ
ಪಾಪಾತ್ಮಾ ಪಾಪಸಂಭವಾ
ಎಂದು ಮನಸ್ಸಿನಲ್ಲೇ ಹೇಳಿಕೊಂಡರು. ಈ ಪಾಪಗಳೂ ಕೂಡ ಪಾಪ್‌ಸಾಂಗಿನ ಹಾಗೆ ಒಂಥರ ಸಂತೋಷ ನೀಡುತ್ತವಲ್ಲ ಅನ್ನಿಸಿತು. ಪಾಪ ಮಾತ್ರವಲ್ಲ, ಪಾಪದ ಸ್ಮರಣೆಯಿಂದಲೂ ಸಂತೋಷವಾಗುತ್ತದೆ. ಯಾವುದು ತಪ್ಪು, ಆಕೆ ಸೇವೆ ಮಾಡಿದ್ದಾ, ತಾನು ಮಾಡಿಸಿಕೊಂಡದ್ದಾ, ಅದನ್ನು ಯಾರೋ ಕದ್ದು ನೋಡಿದ್ದಾ?  ಕುರುಡನ ಮಾಡಯ್ಯ ತಂದೆ, ಎಲ್ಲಾ ಡ್ರೈವರುಗಳ ಕುರುಡನ ಮಾಡಯ್ಯ ತಂದೆ ಎಂದು ಮನಸ್ಸಿನಲ್ಲೇ ಬೇಡಿಕೊಂಡರು.
ಕೊನೆಗೂ ಅವರಿಗೆ ತಾನೇನು ತಪ್ಪು ಮಾಡಿದ್ದೇನೆ ಅನ್ನುವುದು ಅರ್ಥವೇ ಆಗಲಿಲ್ಲ. ಕಾಮಾದಿ ಬಯಕೆಗಳನ್ನು ಸುಡು ಅಂದಿದ್ದರು ಗುರುಗಳು. ಸುಡುಸುಡು ಕಾಮವನ್ನು ಸುಡುವುದೇನು ಸುಡುಗಾಡು ಎಂದು ಸುಡಿಸಿಕೊಳ್ಳುತ್ತಾ ಕೂತಿರುವಾಗಲೇ ಆಶ್ರಮಕ್ಕೆ ಬೆಂಕಿ ಬೀಳಬೇಕೇ? ಒಳಗಿನ ಬೆಂಕಿ ಆರಿಸುವುದು ಸುಲಭವೋ, ಹೊರಗಿನ ಬೆಂಕಿಯೋ? ಆಶ್ರಮಕ್ಕೆ ಭಕ್ತರು ಬೆಂಕಿ ಹಚ್ಚಬಹುದು. ಗುರುಗಳು ಮಾತ್ರ ಅಗ್ನಿಯನ್ನು ಆವಾಹಿಸಿಕೊಳ್ಳಬಾರದು. ಥತ್, ಪ್ರಾರಬ್ಧವೇ. ಸಂಜೆಗೊಬ್ಬಳು ಮುದುಕಿ ಕೊನೆಯ ಕೆಂಡವ ಕೆದಕಿ ಎತ್ತಿ ಮುಡಿದಳು ತನ್ನ ಗಂಟು ಜಡೆಗೆ!’
ಗೋತಾನಂದರು ತಮ್ಮ ಖಾಸಗಿ ಲೈಬ್ರರಿಯತ್ತ ಕಣ್ಣುಹಾಯಿಸಿದರು. ಅಲ್ಲಿ ಅವರು ಎಂದೋ ಓದಿದ ಕತೆ, ಕಾದಂಬರಿಗಳ ಪುಸ್ತಕಗಳು ಕಾಣಿಸಿದವು. ಸದ್ಯಕ್ಕಂತೂ ಅವನ್ನು ಓದುವ ಆಸಕ್ತಿಯೂ ಅವರಲ್ಲಿ ಉಳಿದಿದೆ ಅನ್ನಿಸಲಿಲ್ಲ. ಎಂದೋ ಓದಿದ ಸಂಸ್ಕಾರ’ ನೆನಪಾಯಿತು. ಅದರಲ್ಲೂ ಋತ್ವಿಜರಾದ ಆಚಾರ್ಯರು ಸ್ತ್ರೀಸಂಗ ಮಾಡುತ್ತಾರಲ್ಲ, ಮಾಡಿದ ನಂತರವೂ ಶುದ್ಧರಾಗಿಯೇ ಉಳಿಯುತ್ತಾರಲ್ಲ. ಆಚಾರ್ಯರಿಗೆ ಡ್ರೈವರ್ ಇರಲಿಲ್ಲ ಮತ್ತು ಅವರು ಸಂಗಮಿಸಿದ ಸ್ತ್ರೀ ಸಿನಿಮಾ ನಟಿಯಾಗಿರಲಿಲ್ಲ ಎಂದುಕೊಂಡರು. ಸಿನಿಮಾ ನಟಿಯರ ಸಂಗ ಅಪಾಯಕಾರಿ ಎಂದುಕೊಂಡರು. ನಿಲ್ಲೇ ಪತಂಗ, ನಿಲ್ಲು ನಿಲ್ಲೇ ಪತಂಗ, ಬೇಡ ಬೇಡ ಬೆಂಕಿಯ ಸಂಗ ಎಂದು ಹಾಡಿಕೊಂಡರು. ಅದೇ ಹೊತ್ತಿಗೆ ಗಂಧರ್ವ ಲೋಕದಲ್ಲಿ ರೋಮಾಂಚ ರಾತ್ರಿ, ಮಧುಚಂದ್ರ ಮಂಚದಲ್ಲಿ ರಸಹೀನ ರಾತ್ರಿ’ ಎಂಬ ಹಾಡೂ ನೆನಪಾಯಿತು. ಮನಸ್ಸು ಬೆಂಕಿಯಾಯಿತು.
ರಮಣ ಮಹರ್ಷಿಗಳ ಮಾತನ್ನಾದರೂ ಜನ ನಂಬುವುದಿಲ್ಲ ಯಾಕೆ? ಯಾರೋ ಅವರನ್ನು ನಾನು ಲೈಂಗಿಕ ಪಾಪ ಮಾಡಿದ್ದೇನೆ, ಏನು ಮಾಡಲಿ?’ ಎಂದು ಕೇಳಿದ್ದರಂತೆ. ಅದಕ್ಕೆ ಗುರುಗಳು ನೀನು ಮಾಡಿದ್ದರೂ, ಹಾಗೆ ಮಾಡಿರುವೆ ಎಂದು ನಂತರ ವಿಚಾರ ಮಾಡದಿದ್ದರೆ ನೀನೇನೂ ಮಾಡಿಲ್ಲ. ಆತ್ಮನಿಗೆ ಯಾವ ಪಾಪದ ಅರಿವೂ ಇರುವುದಿಲ್ಲ’ ಎಂದಿದ್ದರಲ್ಲ. ನನ್ನ ಆತ್ಮಕ್ಕೆ ಆ ಪಾಪದ ಅರಿವೇ ಇಲ್ಲವಲ್ಲ. ಒಳ್ಳೆಯ ಫೋಟೋಗ್ರಾಫರ್ ಕರೆಸಿಕೊಂಡು ಆತ್ಮದ ಫೋಟೋ ತೆಗೆಸಬೇಕು ಎಂದು ಗೋತಾನಂದರು ಯೋಚಿಸುತ್ತಾ ಧ್ಯಾನಸ್ಥರಾದರು.
ಹುಬ್ಬುಗಳ ನಡುವೆ ದೃಷ್ಟಿ ನೆಟ್ಟು ಏಕಾಗ್ರತೆ ಸಾಧಿಸು ಎಂದಿದ್ದರು ಗುರುಗಳು. ತಾನೋ ಉಬ್ಬುಗಳ ಮಧ್ಯೆ ದೃಷ್ಟಿ ನೆಟ್ಟೆ. ಅದರಿಂದಲೇ ಕೆಟ್ಟೆ. ಕೆಟ್ಟಿದ್ದೇನೆ ಅನ್ನಿಸುವುದು ಕೊಡವಿದ ನಂತರ. ತಡವಿಕೊಂಡಾಗ ಚೆನ್ನಾಗಿಯೇ ಇರುತ್ತದೆ. ವಿಕಾರಕ್ಕೂ ವಿಚಾರಕ್ಕೂ ಅಂಥ ವ್ಯತ್ಯಾಸವೇನಿಲ್ಲ. ಲವ್ ಮಿ ಆರ್ ಹೇಟ್ ಮಿ, ಕಿಸ್ ಮಿ ಆರ್ ಕಿಲ್ ಮಿ ಎಂದು ಹಾಡಬೇಕೆನ್ನಿಸಿತು. ಆ ಭಾವನೆಯನ್ನೂ ಮೀರಿಸಿ ಬಂಗಾರು ಕೋಡಿ ಪೆಟ್ಟ ವಚ್ಚೆನಂದಿ, ಹೇ ಪಾಪ, ಹೇ ಪಾಪ, ಹೇ ಪಾಪಾ ಕಿವಿ ತುಂಬಿತು. ಅದರ ಬೆನ್ನಿಗೇ ಯಾರೋ ಅಪ್ ಅಪ್ ಹ್ಯಾಂಡ್ಸಪ್, ಜಿಪ್ ಜಿಪ್ ಜ್ಯಾಕ್ ಅಪ್, ಶಿಪ್ ಶಿಪ್ ಶೇಕ್ ಅಪ್ ಎಂದಂತಾಯಿತು. ಸರ್ರನೆ ಎದ್ದು ಕೂತು ಗೋತಾನಂದರು ನಿಸೂರಾದರು.
*******
ಗೋತಾನಂದರು ಏಳುವ ಹೊತ್ತಿಗೆ ಹೊರಗೆ ಚಿತ್ರಗುಪ್ತ ಕಾಯುತ್ತಿದ್ದಾನೆ ಎಂದು ಅಳಿದುಳಿದ ಶಿಷ್ಯರಲ್ಲಿ ಒಬ್ಬನಾದ ಅಂಗಾನಂದ ಹೇಳಿದ. ತನ್ನನ್ನು ಸಂದರ್ಶಿಸಲು ಯಾರೋ ಪತ್ರಕರ್ತ ಬಂದಿರಬೇಕು. ತಾನಿರುವ ಜಾಗ ಅವನಿಗೆ ಹೇಗೆ ಗೊತ್ತಾಯಿತು ಎಂದು ಗೋತಾನಂದರು ಅಚ್ಚರಿಪಡುತ್ತಾ ಕಾವಿಧಾರಿಗಳಾದರು. ಕಾವು ಅಳಿದ ಮೇಲೆ ಕಾವಿಯೋ, ಕಾವಿ ಧರಿಸಿದ ಮೇಲೆ ಕಾವೋ ಎಂಬ ಪ್ರಶ್ನೆ ಎದುರಾಯಿತು. ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ಎಂದು ಯೋಚಿಸಿದರು. ಕಣ್ಮುಂದೆ ನಟಿಯ ರೂಪು ಬಂತು. ನೋಟದಾಗೆ ನಗೆಯ ಮೀಟಿ, ಮೀಟಿದ್ದೆಲ್ಲ ಹೊಸಿಲು ದಾಟಿ, ಮೋಡಿಯ ಮಾಡಿದ್ದೆಲ್ಲ ಪರಸಂಗ ಆಯ್ತು ಎಂದುಕೊಂಡರು.
ಚಿತ್ರಗುಪ್ತ ಕಾಯುತ್ತಿದ್ದ. ಅವನು ಪತ್ರಿಕೆಯವನೂ ಅಲ್ಲ, ಟೀವಿಯವನೂ ಅಲ್ಲ ಎಂದು ಹೇಳಿದ ಮೇಲೆ ಗೋತಾನಂದರು ಕಾವಿ ತುಂಬ ಕಿವಿಯಾಗಿ ಕಾದರು. ನಾನು ಮೇಲಿನಿಂದ ಬಂದಿದ್ದೇನೆ. ನಿಮ್ಮ ಪಾಪಗಳನ್ನು ಪಟ್ಟಿ ಮಾಡಬೇಕಿದೆ ಎಂದು ಚಿತ್ರಗುಪ್ತ ದಫ್ತರು ಬಿಚ್ಚಿದ. ಅದೆಲ್ಲ ಬೇಡ, ಏನು ಕೇಳ್ತೀಯೋ ಕೇಳು ಎಂದು ಗೋತಾನಂದರು ಕಣ್ಣುಚಾಚಿ ಕೂತರು.
ಇದೇನು ಮಾಡಿದಿರಿ?’
ಆಗಿಹೋಯಿತು.
ಕರ್ತವ್ಯಭ್ರಷ್ಟರಾದಿರಲ್ಲ?’
ಒಂದು ಕರ್ತವ್ಯಕ್ಕೆ ನಿಷ್ಠನಾದ ಮೇಲೆ ಇನ್ನೊಂದು ಭ್ರಷ್ಟವಾಗಲೇ ಬೇಕಲ್ಲ.
ಅಪರಾಧ ಮಾಡಿದೆ ಅನ್ನಿಸುತ್ತಿಲ್ಲವೇ?’
ಗೋತಾನಂದರು ಅವನನ್ನೇ ದಿಟ್ಟಿಸಿನೋಡಿದರು. ನಸುನಕ್ಕರು.  ಚಿತ್ರಗುಪ್ತ ಅಚ್ಚರಿಯಿಂದ ನೋಡಿದ.
ಸೃಷ್ಟಿ, ಸ್ಥಿತಿ, ಲಯಗಳ ಸಿದ್ಧಾಂತ ಗೊತ್ತಾ ನಿನಗೆ. ಅದಕ್ಕೂ ಮುಂಚೆ ನಿನ್ನ ಕರ್ತವ್ಯಭ್ರಷ್ಟತೆಯ ಬಗ್ಗೆ ಹೇಳಲೇ? ನಾವು ಈ ಕ್ರಿಯೆಯಲ್ಲಿ ಹಲವಾರು ವರ್ಷಗಳಿಂದ ತೊಡಗಿಕೊಂಡವರು. ಆದರೆ ಅದು ನಿಮ್ಮ ಗಮನಕ್ಕೆ ಬಂದದ್ದು ಸುದ್ದಿರಾದ್ಧಾಂತ ಆದ ನಂತರ. ಅಂದರೆ ನೀವೂ ಕರ್ತವ್ಯಭ್ರಷ್ಟರೇ ಅಲ್ಲವೇ’
ಚಿತ್ರಗುಪ್ತ ತಲೆದೂಗಿದ. ನಮ್ಮಿಂದ ತಪ್ಪಾಗಿದೆ. ಆದರೆ ನೀವು, ಹುಲುಮಾನವರು, ತಪ್ಪು ಮಾಡುವ ಹಾಗಿಲ್ಲ’.
ನಾನು ಮಾಡಿದ್ದು ತಪ್ಪಲ್ಲ. ಹುಟ್ಟಿದನಿಗೆ ಸಾವು ತಪ್ಪಿದ್ದಲ್ಲ ಅಲ್ಲವೇ. ಸಾಯಿಸುವುದು ನಿಮ್ಮ ಕೆಲಸ. ಹುಟ್ಟಿಸುವುದು ಮನುಷ್ಯರ ಕೆಲಸ. ಸೃಷ್ಟಿ ತಪ್ಪಲ್ಲ ಅಂದ ಮೇಲೆ ಸೃಷ್ಟಿಕ್ರಿಯೆ ತಪ್ಪೇ?’
ಚಿತ್ರಗುಪ್ತ ಗೊಂದಲದಿಂದ ನೋಡಿದ.
ನಾವು ಹುಟ್ಟಿಸದೇ ಹೋದರೆ ನೀವು ಕೊಲ್ಲುವುದಾದರೂ ಯಾರನ್ನು?’
ಚಿತ್ರಗುಪ್ತನಿಗೆ ಉತ್ತರವೇ ಹೊಳೆಯಲಿಲ್ಲ.
ನೀವು ಮಾಡಿದರೆ ಪ್ರಮೋದ, ನಾವು ಮಾಡಿದರೆ ಪ್ರಮಾದ. ಇದನ್ನೇ ಹೇಳಲು ತಾನೇ ಬಂದಿರುವುದು ನೀನು. ಮಡದಿ ಓಕೆ, ಬಿಡದಿ ಯಾಕೆ ಎಂಬ ಪ್ರಶ್ನೆ ತಾನೇ ನಿನ್ನದು. ಚೆನ್ನಾಗಿ ಯೋಚಿಸು. ಮಡದೀ ಮಾಯೆಗಿಂತ ಬಿಡದೀ ಮಾಯೆ ಕ್ಷೇಮ. ಮಾಡು ಇಲ್ಲವೆ ಮಡಿ ಎಂದು ನಂಬಿದ ನಮ್ಮಂಥವರಿಗೆ ಮಡದಿಯಿದ್ದರೆ ಅಪಾಯ. ಮಡದಿಯಿಂದ ಮಕ್ಕಳು, ಮಕ್ಕಳಿಂದ ಮೊಮ್ಮಕ್ಕಳು, ಬಂಧುಗಳು, ಬಂಧನಗಳು, ಮಡದಿ ಬೋರಾಗಿ ಅಕ್ಕಪಕ್ಕಳು. ಇದರಿಂದ ಪಾರಾಗುವುದಕ್ಕೆ ಇರುವುದೊಂದೇ ದಾರಿ. ಬಳಸಿ ಬ್ರಹ್ಮಚಾರಿಯಾಗು, ಉಳಿಸಿ ಯೋಗಿಯಾಗು. ಪ್ರತ್ಯಕ್ಷದಲ್ಲಿ ಪರೋಕ್ಷವನ್ನೂ ಪರೋಕ್ಷದಲ್ಲಿ ಪ್ರತ್ಯಕ್ಷವನ್ನೂ ಕಾಣು.’
ಚಿತ್ರಗುಪ್ತ ಏನೂ ತೋಚದೇ ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೇ’ ಎಂದು ಗುನುಗಿದ. ಬಾಡಿ ಎಲ್ಲಿಗೂ ಹೋಗಿಲ್ಲ ಇಲ್ಲೇ ಇದೆ’ ಎಂದು ಗೋತಾನಂದರು ಕಾವಿ ಕಿತ್ತೆಸೆದರು. ಚಿತ್ರಗುಪ್ತ ಬೆರಗಾಗಿ ನೋಡುತ್ತಿದ್ದಂತೆ ಟಪ್ಪಾಂಗುಚ್ಚಿ ಶೈಲಿಯಲ್ಲಿ ಹೆಜ್ಜೆ ಹಾಕಿದರು. ಹಿಂದಿನ ರಾತ್ರಿ ಅಶ್ವತ್ಥರು ಸ್ವರ್ಗದ ದಾರಿಯಲ್ಲಿ ಹಾಡುತ್ತಾ ಹೋಗುತ್ತಿದ್ದ ಗೀತೆ ಅವನಿಗೆ ನೆನಪಾಯಿತು:
ಹಿಂದೆ ಹೇಗೆ ಚಿಮ್ಮುತ್ತಿತ್ತು...
ಮುಂದೇನು ಅನ್ನೋದು ಎಷ್ಟು ಕೆರಕೊಂಡರೂ ನೆನಪಾಗದೇ ಗೋತಾನಂದರು ವಿಷಣ್ಣರಾದರು.

‍ಲೇಖಕರು avadhi

March 18, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

9 ಪ್ರತಿಕ್ರಿಯೆಗಳು

 1. Santhosh Ananthapura

  What a punch…! suuuuuuuuuuper…..tusi great ho Jogi jahaanpana….tusi great ho….tofa kabula karo…. 😉

  ಪ್ರತಿಕ್ರಿಯೆ
 2. ರಂಜಿತ್

  >>ನೀವು ಮಾಡಿದರೆ ಪ್ರಮೋದ, ನಾವು ಮಾಡಿದರೆ ಪ್ರಮಾದ. ಇದನ್ನೇ ಹೇಳಲು ತಾನೇ ಬಂದಿರುವುದು ನೀನು. ಮಡದಿ ಓಕೆ, ಬಿಡದಿ ಯಾಕೆ ಎಂಬ ಪ್ರಶ್ನೆ ತಾನೇ ನಿನ್ನದು.<<
  😉

  ಪ್ರತಿಕ್ರಿಯೆ
 3. ಮುರಳೀಧರ ಸಜ್ಜನ.

  ಕಥೆ ಚೆನ್ನಾಗಿದೆ.ಒಳಗೊಳಗೆ ಇಂತವುಗಳನ್ನು ಮಾಡುತ್ತಿದ್ದರೆ,ತನ್ನಾತ್ಮವನ್ನು ತಾನೆ ಕೊಂದುಕೊಂಡಂತೆ. ಖಂಡಿತ ಮರುಜನ್ಮ. ನೂರು ಜನ್ಮಗಳನ್ನು ದಾಟಿದರೂ ಮುಕ್ತಿಯ ಪಥ ದೂರ ಬಹುದೂರ.

  ಪ್ರತಿಕ್ರಿಯೆ
 4. Madhu

  kathe chennagide… vyangyadalli message ide… kaavidhaarigalu innu meladru sari thappugala bagge yochane madli…

  ಪ್ರತಿಕ್ರಿಯೆ
 5. msmanjunatha

  ಗೋತಾನಂದನ ನಿತ್ಯಪುರಾಣ ತುಂಬಾ ಚೆನ್ನಾಗಿದೆ.ನಗೆಗಡಲಲ್ಲಿ ತೇಲಿಸುವಂತಹ ಬರಹ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: