ಜೋಗಿ ಬರೆಯುತ್ತಾರೆ:ಭಕ್ತಿ ಪ್ರೀತಿಯಲ್ಲೊಂದು ವಿರಾಗದ ಛಾಯೆ

-ಜೋಗಿ ಈ ನಾಲ್ಕು ಸಾಲುಗಳನ್ನು ಓದಿಕೊಳ್ಳಿ: ನಿನ್ನೊಳಿದೆ ನನ್ನ ಮನಸು – ಕವಿ ನಾ ನಿನ್ನ ಧ್ಯಾನದೊಳಿರಲು ಸದಾ – ದಾಸರು. ನನ್ನದು ಎನ್ನುವುದೆಲ್ಲವು ಸಂತತ ಚೆನ್ನಕೇಶವ ನಿನ್ನೊಳು ನಿಲಲಿ – ಕವಿ ನನ್ನೊಳು ನಾ, ನಿನ್ನೊಳು ನೀ, ಒಲಿವ ಮುನ್ನ, ನನ್ನೊಳು ನೀ ನಿನ್ನೊಳು ನಾ, ಒಲಿದ ಮೇಲೆ – ಕವಿ. ಮೊದಲನೆಯದು ಅಪ್ಪಟ ಪ್ರೀತಿಯ ಹೇಳಿಕೆ. ನಿನ್ನೊಳಿದೆ ನನ್ನ ಮನಸು ಅಂದರೆ ನಿನ್ನ ಮೇಲೆ ನನಗೆ ಮನಸ್ಸಿದೆ ಅಂತಲ್ಲ. ನಿನ್ನನ್ನು ನನ್ನ ಮನಸ್ಸು ಬಯಸುತ್ತಿದೆ ಅಂತಲೂ ಅಲ್ಲ. ಮನಸ್ಸೇ ನಿನ್ನೊಳಗಿದೆ ಅನ್ನುವುದು ಒಂದು ರೀತಿಯಲ್ಲಿ ಅದ್ವೈತ ಸ್ಥಿತಿ. ಅವಳ ಮನಸ್ಸು ಅವನೊಳಗೆ ಇದ್ದರೆ ಏನಾಗುತ್ತದೆ. ಅವನ ಮನಸ್ಸಿನಲ್ಲಿ ನಡೆಯುತ್ತಿರುವುದೆಲ್ಲ ಅವಳಿಗೆ ಗೊತ್ತಾಗುತ್ತದೆ. ಅವಳ ಮನಸ್ಸೂ ಅವನ ಮನಸ್ಸೂ ಒಂದೇ ಆಗುತ್ತದೆ. ಆಗ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಬೇಕಾಗಿಲ್ಲ. ಹೇಳದೇ ಹೋದರೂ ಅದು ತಿಳಿಯುತ್ತದೆ. ಹಾಗೆ ತಿಳಿದಾಗ ಎರಡೂ ಜೀವಗಳು ಒಂದಾಗುತ್ತವೆ.

ಹಾಗೆ ಒಂದಾಗುವುದು ತಾದಾತ್ಮ್ಯ.ಅದರಿಂದ ಏನಾಗುತ್ತದೆ? ಪ್ರೀತಿ ಸ್ಥಿರವಾಗುತ್ತದಾ? ಈ ಜಗತ್ತಿನಲ್ಲಿ ಎಲ್ಲಕ್ಕಿಂತ ಬಲವಾದದ್ದು ಸೆಲ್ಪ್ ಲವ್. ನಮ್ಮನ್ನು ನಾವು ಪ್ರೀತಿಸುವಷ್ಟು ಮತ್ಯಾರನ್ನೂ ಪ್ರೀತಿಸುವುದಿಲ್ಲ. ಮತ್ತೊಬ್ಬರನ್ನು ಪ್ರೀತಿಸುವುದು ಕೂಡ ಪ್ರೀತಿಯ ನಿರೀಕ್ಷೆಯಲ್ಲೇ. ಆ ಪ್ರೀತಿ ನಮ್ಮನ್ನು ಸಂಪನ್ನಗೊಳಿಸುತ್ತದೆ. ತುಂಬಿಕೊಳ್ಳುವಂತೆ ಮಾಡುತ್ತದೆ. ಹೆಮ್ಮೆಪಡುವಂತೆ ಮಾಡುತ್ತದೆ. ಅವಳು ನನ್ನನ್ನು ಪ್ರೀತಿಸುತ್ತಾಳೆ ಎಂಬ ಭಾವನೆಯಲ್ಲಿ ನನ್ನ ಆನಂದವಿದೆ.ನಾವು ಪ್ರೀತಿ ಕೊಡುತ್ತಲೇ ಪಡೆದುಕೊಳ್ಳುತ್ತಿರುತ್ತೇವೆ. ಸುಮ್ಮನೆ ಸಣ್ಣದೊಂದು ಪರೀಕ್ಷೆ ಮಾಡಿ ನೋಡಿ. ನೀವು ಅತ್ಯಂತ ಪ್ರೀತಿಸುವ ಜೀವದ ಪ್ರೀತಿಯನ್ನು ಮರಳಿಸದೇ ಇದ್ದು ನೋಡಿ. ಆ ಜೀವ ನೊಂದುಕೊಳ್ಳುತ್ತದೆ. ಕೊಡಲು ಕೊಳ್ಳಲು ಒಲವು ಬಿಟ್ಟು ಬೇರೆ ಉಂಟೇ ಬಾಳಲಿ ಎಂದು ಕೇಳುವುದು ಅದಕ್ಕೇ ತಾನೇ?ಇನ್ನೊಂದು ವಿಚಿತ್ರ ಕೇಳಿ. ನಮ್ಮ ಮನಸ್ಸಿನೊಳಗೆ ಮನೆ ಮಾಡಿರುವುದು ನಮ್ಮ ಆತ್ಮೀಯರಲ್ಲ, ಬದಲಾಗಿ ಶತ್ರುಗಳು. ನಾವು ಸದಾ ಶತ್ರುಗಳ ಬಗ್ಗೆ ಯೋಚಿಸುತ್ತಿರುತ್ತೇವೆ. ಅವರು ಏನು ಮಾಡುತ್ತಿರಬಹುದು, ಏನು ಯೋಚಿಸುತ್ತಿರಬಹುದು, ನಮ್ಮ ಬಗ್ಗೆ ಏನು ಸಂಚು ಮಾಡುತ್ತಿರಬಹುದು ಎನ್ನುವುದನ್ನೇ ಮನಸ್ಸು ಧ್ಯಾನಿಸುತ್ತಿರುತ್ತದೆ. ಕಂಸನ ಮನಸ್ಸು ಕೃಷ್ಣನೊಳಗಿತ್ತು. ರಾವಣನ ಮನಸ್ಸು ಸೀತೆಯ ಮೇಲಿರಲಿಲ್ಲ, ರಾಮನ ಒಳಗಿತ್ತು. ಶತ್ರುತ್ವ ಕೂಡ ಪ್ರೀತಿಯ ಹಾಗೆ. ನಮ್ಮನ್ನು ಸದಾ ಎಚ್ಚರದಲ್ಲಿಡುತ್ತದೆ. ಯಾವುದು ನಮ್ಮನ್ನು ಸದಾ ಎಚ್ಚರದಲ್ಲಿಡುತ್ತದೋ ಅದನ್ನು ನಾವು ಒಂದೋ ಪ್ರೀತಿಸುತ್ತೇವೆ ಅಥವಾ ದ್ವೇಷಿಸುತ್ತೇವೆ. ಹೀಗಾಗಿ ಪ್ರೀತಿ ಮತ್ತು ದ್ವೇಷದ ನಡುವಿನ ಗೆರೆ ತುಂಬ ತೆಳು. ದಾಸರು ಕೇಳುವ ಪ್ರಶ್ನೆಯೇ ಬೇರೆ. ನಾ ನಿನ್ನ ಧ್ಯಾನದೊಳಿರಲು ಸದಾ, ಮಿಕ್ಕ ಹೀನಮಾನವರೆಲ್ಲ ಏನು ಮಾಡುವರಯ್ಯ? ಇದು ಕತ್ತಲಿಗೆ ಎಸೆದ ಬಾಣ. ನಿರಾಕಾರಕ್ಕೆ ಒಪ್ಪಿಸಿಕೊಂಡ ರೀತಿ. ದಾಸರು ದೇವರ ಧ್ಯಾನದಲ್ಲಿರದೇ ಹೋದರೆ ಮಿಕ್ಕ ಹೀನಮಾನವರು ಏನು ಮಾಡುತ್ತಿದ್ದರು? ಮಾನವರು ಹೀನರಾದಾಗ ದೇವರು ಘನವಾಗಿ ಕಾಣಿಸುತ್ತಾರಾ? ದಾಸರ ಸಮಸ್ಯೆಯೇನಿತ್ತು ಹಾಗಿದ್ದರೆ? ಸದಾ ಎನ್ನ ಹೃದಯದಲ್ಲಿ ವಾಸ ಮಾಡೋ ಶ್ರೀಹರಿ ಅಂತ ಅವರು ಕೇಳಿಕೊಂಡಿದ್ದಾದರೂ ಯಾಕೆ? ಇವರು ಅವನ ಧ್ಯಾನದಲ್ಲಿ, ಅವನು ಇವರ ಧ್ಯಾನದಲ್ಲಿ ಇದ್ದು ಈ ಲೋಕವನ್ನು ಮರೆಯಬೇಕು ಅಂತಲೇ?ಇದನ್ನೂ ಮೀರಿದ ಮತ್ತೊಂದು ಬೇಡಿಕೆ ನನ್ನದು ಎನ್ನುವುದೆಲ್ಲವೂ ಸಂತತ ಚೆನ್ನಕೇಶವ ನಿನ್ನೊಳು ನಿಲಲಿ. ನಾನು ಶೂನ್ಯನಾಗಬೇಕು, ಕರಗಿಹೋಗಬೇಕು, ಇಲ್ಲವಾಗಬೇಕು ಎಂಬ ಆಸೆ. ಅಳಿಯುವ ಆಸೆ. ಅಳಿದೂ ಉಳಿಯುವ ಆಸೆ. ಅಳಿದ ಮೇಲೆ ಏನು ಉಳಿಯುತ್ತದೆ. ಅಳಿದೆ ಎಂಬ ಭಾವ ಉಳಿದೀತೇ? ಆ ಭಾವದಲ್ಲಿ ಸಾರ್ಥಕತೆ ಇದೆಯಾ? ಮೂಲತಃ ನಮಗೆ ಗುಲಾಮಗಿರಿಯೇ ಇಷ್ಟವೇ? ಕೃಷ್ಣನಲ್ಲಿ ಕರಗಿಹೋಗಲು ಹಪಹಪಿಸುವ ರಾಧೆ, ಗಿರಿಧರನಲ್ಲಿ ಇಂಗಿಹೋಗಲು ಹಾತೊರೆಯುವ ಮೀರಾ, ಮಲ್ಲಿಕಾರ್ಜುನನಲ್ಲಿ ಸೇರಿಹೋಗಲು ಕಾತರಿಸುವ ಮಹಾದೇವಿ ಅಕ್ಕ. ಹಾಗೆ ಕರಗಿ ಕಣ್ಮರೆಯಾಗುವುದು ಎಂದರೆ ಯೋಚಿಸುವ ಶಕ್ತಿಯನ್ನು ಕಳೆದುಕೊಳ್ಳುವುದು. ಯೋಚಿಸುವುದನ್ನು ನಿಲ್ಲಿಸಿದಾಗ ನಾವು ನಾವಾಗಿರುವುದಿಲ್ಲ. ನಾವಿರುವುದು ನಮ್ಮ ಯೋಚನೆಯಲ್ಲಿ. cogito ergo sum- I think, therefore I am.ಶರಣಾಗತಿ ಪ್ರೀತಿಯ ಭಕ್ತಿಯ ಮೂಲತತ್ವ. ಪ್ರೀತಿಯಲ್ಲಿ ಸೋಲಬೇಕು ಅಂದರೂ ಅದೇನಾ? ನಮ್ಮ ವ್ಯಕ್ತಿತ್ವವನ್ನು ಮುಚ್ಚಿಟ್ಟುಕೊಂಡು, ಬಚ್ಚಿಟ್ಟುಕೊಂಡು ನಾನೇನೂ ಅಲ್ಲ. ನನ್ನದೇನೂ ಇಲ್ಲ. ನಾನು ಎಂಬುದು ನೀನೇ. ನೀನು ರೂಪಿಸಿದ, ನೀನು ಸೃಷ್ಟಿಸಿದ ಈ ನಾನು ನಿನ್ನೊಳಗೇ ಇದ್ದೇನೆ. ನೀನಿಲ್ಲದೇ ನಾನಿಲ್ಲ. ಹಾಗಿದ್ದರೆ ನಾನು ಬರುವ ಮೊದಲು ನೀನು ಇರಲೇ ಇಲ್ಲವೇ? ಮತ್ತೆ ಕವಿ ಉತ್ತರಿಸುತ್ತಾನೆ. ನನ್ನೊಳು ನಾ, ನಿನ್ನೊಳು ನೀ, ಒಲಿವ ಮುನ್ನ ಹೀಗೆ ನೀನೂ ನಾನೂ. ನನ್ನೊಳು ನೀ ನಿನ್ನೊಳು ನಾ, ಒಲಿದ ಮೇಲೆ ಹೀಗೇ ನಾನೂ ನೀನೂ.ಎಷ್ಟೊಂದು ತತ್ಪರತೆಯನ್ನು ಬಯಸುತ್ತದೆ ಪ್ರೇಮ ಎಂದು ಅಚ್ಚರಿಯಾಗುತ್ತದೆ. ಆ ತಲ್ಲೀನತೆಯಿಂದ ನಾವು ಏನನ್ನು ನಿರೀಕ್ಷಿಸುತ್ತೇವೆ? ಬಹುಶಃ ಕಣ್ಮರೆಯಾಗುವುದನ್ನು.  ಹೊಂದಬಯಸುವ ನಾವು, ಬೇಕು ಬೇಕೆನ್ನುವ ನಾವು, ಏನೂ ಆಗಿರಬಾರದು, ಇರಲೇಬಾರದು ಅಂತ ಆಸೆಪಡುವುದು ವಿಚಿತ್ರವಾಗಿದೆ. ಹಾಗಿದ್ದರೆ ನಾವು ಅತ್ಯಂತ ಪ್ರೀತಿಸುವುದು ಸಾವನ್ನೇ ಇರಬಹುದೇ? ನನ್ನನ್ನು ನಿನ್ನ ಬಳಿಗೆ ಕರೆದುಕೋ ಅಂತಲೂ ಮುಂದೆ ಹುಟ್ಟಿಸದಿರು ಎಂತಲೂ ಈ ಜನ್ಮವೊಂದೇ ಸಾಕು ಅಂತಲೂ ವಿನಂತಿಸಿಕೊಳ್ಳುತ್ತಾರೆ ದಾಸರು. ಅದನ್ನು ನಾವೂ ಭಕ್ತಿಯಿಂದ ಹಾಡುತ್ತೇವೆ. ನಮಗದು ನಿಜಕ್ಕೂ ಬೇಕಿರುತ್ತಾ?ಇಡೀ ಪಾಶ್ಚಾತ್ಯ ತತ್ವಜ್ಞಾನ ನಿಂತಿರುವುದು- ನಾನು ಯೋಚಿಸುತ್ತೇನೆ, ಆದ್ದರಿಂದ ನಾನು ಇದ್ದೇನೆ ಎಂಬ ಸಿದ್ಧಾಂತದ ಮೇಲೆ. ಭಾರತೀಯ ತಾತ್ವಿಕತೆಯೂ ಹೆಚ್ಚು ಕಡಿಮೆ ಅದನ್ನೇ ಆಧರಿಸಿದ್ದು. ನಾನು ಯೋಚಿಸಕೂಡದು ಮತ್ತು ನಾನು ಇರಕೂಡದು ಎಂಬುದು ನಮ್ಮ ಶೂನ್ಯ ಸಿದ್ಧಾಂತ. ಅದರ ಜೊತೆಗೇ ನಾನು ಇರಬೇಕು, ಆದರೆ ನಾನು ನಾನಾಗಿರಕೂಡದು. ಅಹಂ ಬ್ರಹ್ಮಾಸ್ಮಿ ಎಂಬುದು ಒಂದು ಮಾತು, ತತ್ವಮಸಿ ಎಂಬುದು ಮತ್ತೊಂದು, ಅಯಾಮಾತ್ಮಬ್ರಹ್ಮ ಅಂತ ಇನ್ನೊಂದು. ಇವೆಲ್ಲದರ ನಡುವೆ ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತ. ನಾನೂ ನೀನೂ ಒಂದಾಗಲು ಸಾಧ್ಯವೇ ಇಲ್ಲ. ನಾನೇ ಬೇರೆ, ನೀನೇ ಬೇರೆ ಎಂಬ ವಾದ, ನಾನೂ ನಿನ್ನ ಒಂದು ಅಂಶ ಎಂಬ ಮಾತು, ನಾನೂ ನೀನೂ ಬೇರೆ, ಆದರೆ ನಾನು ನೀನಾಗಬಲ್ಲೆ ಎಂಬ ಮತ್ತೊಂದು ವಿ-ವಾದ.ಇವೆಲ್ಲದರ ನಡುವೆ ಹೊಸ ತತ್ವಜ್ಞಾನ ನೀನು ನೀನಾಗಿರು ಅನ್ನುತ್ತದೆ. ನಾನು ಹೇಗಿದ್ದೇನೋ ಹಾಗೆ ನನ್ನನ್ನು ಒಪ್ಪಿಕೋ ಎನ್ನುತ್ತದೆ. ಪ್ರೇಮಕ್ಕೂ ಇದೇ ಒಪ್ಪಿತವಾದ ಮಾತು. ನನ್ನನ್ನು ಇದ್ದಂತೆ ಸ್ವೀಕರಿಸು ಮತ್ತು ಒಪ್ಪಿಕೋ ಎಂಬ ಮಾತಲ್ಲೊಂದು ವಿಚಿತ್ರ ಹೊಳಪಿದೆ. ಅಷ್ಟೇ ಗೊಂದಲವೂ ಇಲ್ಲಿದೆ.  ಈ ಮಿಂಚು ಮತ್ತು ಗೊಂದಲದಲ್ಲಿ ನಾವು ಮುಂದೇನು ಎಂದು ತೋಚದೇ ಕೂತಿದ್ದೇವೆ. ಮತ್ತೆ ನಿನ್ನೊಳಿದೆ ನನ್ನ ಮನಸು ಎಂಬ ಮಾತಿಗೆ ಬಂದರೆ, ಮತ್ತೆ ಆತಂಕ. ಸ್ವಂತವಾಗಿ ಉಳಿಯುವ ಆಸೆ, ಸ್ವಂತಿಕೆಯ ಹಂಬಲ ಮತ್ತು ಕರಗಿಹೋಗುವ ಅದಮ್ಯ ಬಯಕೆಯ ನಡುವೆ ಮನಸ್ಸು ತುಯ್ಯುತ್ತಿರುತ್ತದೆ. ಹಳೆ ಬೇರು, ಹೊಸ ಚಿಗುರು, ರುಚಿ ಒಗರು. ಏಕಾಂತ ಕೂಡ ಇಂಥದ್ದೇ ಬಯಕೆಯನ್ನು ಹೊಮ್ಮಿಸುತ್ತದೆ. ಪಾಂಡವರು ಅಜ್ಞಾತವಾಸದಲ್ಲಿ ನಿಜಕ್ಕೂ ಅಳಿದಂತಿದ್ದರು. ಭೂಗತರಾಗಿದ್ದರು. ವೀರರು ಅಜ್ಞಾತರಾಗಿದ್ದರೆ ಅಳಿದುಹೋದಂತೆಯೇ. ಕೊಳದ ತಡಿಯಲ್ಲಿ ತೆಪ್ಪಗಿದ್ದು, ವರ್ಷಕ್ಕೊಮ್ಮೆ ಅರಳಿ, ನಾಲ್ಕು ದಿನ ಮೈತುಂಬ ಹೂ ತುಂಬಿಕೊಂಡು ಮತ್ತೆ ಅಜ್ಞಾತಕ್ಕೆ ತೆರಳುವ ಹೂವಿನ ಹಾಗೆ. ಕವಿಗಳೂ, ಕಲಾವಿದರೂ, ಸಜ್ಜನರೂ, ಸೂಕ್ಷ್ಮಜ್ಞರೂ ಅಜ್ಞಾತವಾಸಕ್ಕೆ ತೆರಳಬೇಕಾದ ಕಾಲಘಟ್ಟ ಇದು. ನಾನು ಯೋಚಿಸುತ್ತಿದ್ದೇನೆ, ಆದ್ದರಿಂದ ನಾನು ಇದ್ದೇನೆ ಎಂಬ ಸಾಲುಗಳನ್ನು ನೆನಪಿಸಿಕೊಳ್ಳುತ್ತಾ ಇರುವ ಹೊತ್ತಿಗೇ ಇಲ್ಲಿ ಯೋಚಿಸುವವರಿಗೆ ಇದು ತಕ್ಕ ನಾಡಲ್ಲ ಎಂದು ರಾಜಕಾರಣಿಗಳು ತೋರಿಸಿಕೊಡುತ್ತಿದ್ದಾರೆ. ಪ್ರಜಾಪ್ರಭುತ್ವ ನಮಗೆ ಬೇಡವಾಗಿತ್ತು ಅನ್ನಿಸುವಂತಿದೆ ಅವರ ವರ್ತನೆ. ಹಿಂದೆ ವಂಶಪಾರಂಪರ್ಯವಾಗಿ ಅಧಿಕಾರಕ್ಕೆ ಬಂದ ದೊರೆಯನ್ನು ಪ್ರಜೆಗಳು ಪ್ರೀತಿಸುತ್ತಿದ್ದರು. ಇವತ್ತು ತಾವೇ ಆರಿಸಿದ ಪ್ರಭುಗಳನ್ನು ಮತದಾರ ನಿಕೃಷ್ಟವಾಗಿ ಕಾಣುತ್ತಿದ್ದಾನೆ. ಹೀಗೆ ತನ್ನ ಘನತೆ, ಜನದ ಪ್ರೀತಿ, ಎಲ್ಲರ ಗೌರವ ಮತ್ತು ಆತ್ಮಗೌರವ ಕಳಕೊಂಡ ಕಳೇಬರಗಳು ಅಧಿಕಾರಕ್ಕೆ ಹಾತೊರೆಯುತ್ತಿವೆ.ಅವರನ್ನು ಯಾವುದೇ ಕವಿತ್ವ, ಸಂಗೀತ, ಸಿನಿಮಾ, ತತ್ವಜ್ಞಾನ ಮತ್ತು ಕಲೆ ಬದಲಾಯಿಸಲಾರದು ಎಂಬುದು ವಿಚಿತ್ರವಾಗಿ ತೋರುತ್ತಿದೆ. ಮನುಷ್ಯ ಅಂತರಾಳದಲ್ಲಿ ಎಂಥ ದಾಹಿ.  ಏಕಾಂತವೆಂಬುದು ಇಲ್ಲದವನು ಹೋರಾಡುತ್ತಲೇ ಇರುತ್ತಾನೆ. ತಾನು ಹೋರಾಡುತ್ತಿರುವುದು ತನ್ನ ಆತ್ಮದ ಜೊತೆ, ತನ್ನ ಆಯುಷ್ಯದ ಜೊತೆ ಮತ್ತು ತನ್ನ ದೇಹದ ಜೊತೆ ಎಂಬುದು ಅವನಿಗೆ ಗೊತ್ತೇ ಆಗುವುದಿಲ್ಲ. ಅಲೆಕ್ಸಾಂಡರ್‌ನ ದಂಡಯಾತ್ರೆ ಕೊನೆಗೂ ನಾಶಮಾಡಿದ್ದು ಅಲೆಂಕ್ಸಾಂಡರನನ್ನೇ ಅಲ್ಲವೇ?ನಿನ್ನೊಳಿದೆ ನನ್ನ ಮನಸು. ಅಥವಾ ಇಲ್ಲ. ನಿನ್ನೊಳಿಲ್ಲದೆ ಹೋದರೆ ನನ್ನೊಳಗೂ ಇಲ್ಲ. ಮತ್ತೆಲ್ಲಿದೆ ಎಂದು ಹುಡುಕಿದರೆ ಕವಿದ ಕತ್ತಲು ಮತ್ತು ನಿರಾಶೆ. .]]>

‍ಲೇಖಕರು avadhi

February 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

3 ಪ್ರತಿಕ್ರಿಯೆಗಳು

 1. Sharadhi

  ಮತ್ತೆಲ್ಲಿದೆ ಎಂದು ಹುಡುಕಿದರೆ ಕವಿದ ಕತ್ತಲು ಮತ್ತು ನಿರಾಶೆ – ya, I hate it.

  ಪ್ರತಿಕ್ರಿಯೆ
 2. Gourishankar M

  tume hum dhoondte he ,.
  hume dil dhoondta he.,
  na ab manjil he koi .,
  na koi raasta he.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: