ಜೋಗಿ ಬರೆಯುತ್ತಾರೆ: ಆಪ್ತ, ಅಪರಿಚಿತ ಸದಾಶಿವ

ಮೊನ್ನೆ ಮೊನ್ನೆ ನಾನು ಕತೆಯೊಂದರಲ್ಲಿ ಕತೆಗಾರ ಕೆ ಸದಾಶಿವ ಹೆಸರು ಬಳಸಿದಾಗ, ನನ್ನ ಅನೇಕ ಗೆಳೆಯರು ಯಾರವರು?’ ಎಂದು ಪ್ರಶ್ನೆಯಾದರು. ಕೆಲವು ಎಳೆಯ ಓದುಗರು ಅವರ ಒಂದೆರಡು ಕತೆಗಳನ್ನು ಓದಿದ್ದನ್ನು ನೆನಪಿಸಿಕೊಂಡರು. ಮತ್ತೆ ಮಳೆ ಹೊಯ್ಯುತಿದೆ, ಎಲ್ಲ ನೆನಪಾಗುತಿದೆ’ ಕತೆ ಬರೆದವರು ಅವರೇ ಅಲ್ವಾ, ಅದೇ ಸಾಲನ್ನಿಟ್ಟುಕೊಂಡು ಅನಂತಮೂರ್ತಿ ಒಂದು ಕವಿತೆ ಕೂಡ ಬರೆದಿದ್ದಾರೆ ಎಂದು ಮತ್ತೊಬ್ಬ ಮಿತ್ರರು ಜ್ಞಾಪಿಸಿಕೊಂಡರು. ಅನಂತಮೂರ್ತಿ ಮೊದಲೇ ಪದ್ಯ ಬರೆದಿದ್ದರು. ಅದರ ಒಂದು ಸಾಲನ್ನು ಸದಾಶಿವ ಕತೆಯ ಶೀರ್ಷಿಕೆ ಮಾಡಿದ್ದಾರೆ ಎಂದು ನಾನು ತಿದ್ದಲು ಯತ್ನಿಸಿದೆ.

ತೀರ ಸಣ್ಣ ವಯಸ್ಸಿನಲ್ಲಿ ತೀರಿಕೊಂಡವರ ಬಗ್ಗೆ ಕೊಂಚ ರೋಮ್ಯಾಂಟಿಕ್ ಆಗಿ ಬರೆಯುವುದು ಸುಲಭ. ತುಂಬ ಪ್ರತಿಭಾವಂತ, ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡ ಎಂಬ ಮಾತನ್ನು ನಾವು ಸಾರಾಸಗಟಾಗಿ ಎಂ ಎನ್ ಜೈಪ್ರಕಾಶರಿಂದ ಶಂಕರ್‌ನಾಗ್ ತನಕ ಹೇಳಿಕೊಂಡು ಬಂದಿದ್ದೇವೆ. ಅದನ್ನೂ ಅವರ ಸಾಧನೆಯೆಂಬಂತೆ ವರ್ಣಿಸುವುದು ಅನೈತಿಕ. ಹಾಗೇ,ತುಂಬ ಕಡಿಮೆ ಬರೆದರೂ, ತುಂಬಾ ಪ್ರಭಾವ ಬೀರಿದರು ಎಂದು ಮೆಚ್ಚಿಕೊಳ್ಳುವುದು ಕೂಡ ಇನ್ನೊಂದು ರೋಮ್ಯಾಂಟಿಕ್ ಶೈಲಿ. ನನ್ನ ದೃಷ್ಟಿಯಲ್ಲಿ ಅದೂ ತಪ್ಪೇ. ಒಬ್ಬ ಲೇಖಕನ ಆಯಸ್ಸು ಮತ್ತು ಬರಹಗಳ ಸಂಖ್ಯೆ ಅವನನ್ನು ದೊಡ್ಡವನ್ನಾಗಿಯೋ ಚಿಕ್ಕವನನ್ನಾಗಿಯೋ ಮಾಡಲಾರದು. ಓದಿದ ಒಂದೇ ಕತೆಯಿಂದಾಗಿ ಖಾಸನೀಸರನ್ನು ನೆನಪಿಸಿಕೊಳ್ಳುವವರು ಎಷ್ಟೊಂದು ಮಂದಿ ಇಲ್ಲ!.

ಕೆ ಸದಾಶಿವ ಇಪ್ಪತ್ತಮೂರು ಕತೆಗಳನ್ನು ಬರೆದರು. ನಲವತ್ತನಾಲ್ಕನೇ ವಯಸ್ಸಿಗೆ ತೀರಿಕೊಂಡರು. ಗೋಪಾಲಕೃಷ್ಣ ಅಡಿಗ,ಅನಂತಮೂರ್ತಿ ಮುಂತಾದವರ ಜೊತೆಗಾರನಾಗಿದ್ದ ಸದಾಶಿವ ಗೆಳೆಯರಿಂದ ಕರಿ ಸದಾಶಿವ ಎಂದು ಕರೆಸಿಕೊಳ್ಳುತ್ತಿದ್ದವರು. ಇನ್ನೊಬ್ಬ ಕತೆಗಾರ ಜಿ ಎಸ್ ಸದಾಶಿವ ಬೆಳ್ಳಗಿದ್ದುದರಿಂದ ಬಿಳಿ ಸದಾಶಿವ ಎಂದು ಕರೆಸಿಕೊಂಡವರು.

ಅಡಿಗರ ಕವಿತೆಯಷ್ಟೇ ಗಾಢವಾಗಿ ಓದಿಕೊಳ್ಳಬಹುದಾಗಿದ್ದ ಕತೆಗಳನ್ನು ಬರೆದವರು ಸದಾಶಿವ. ಅದನ್ನು ಓದಿದ ಅಡಿಗರು ಕೂಡ ಕವಿ ಮತ್ತು ಉತ್ತಮ ಕತೆಗಾರನ ನಡುವೆ ಯಾವ ವ್ಯತ್ಯಾಸವೂ  ಇಲ್ಲ ಎಂದು ಘೋಷಿಸಿಬಿಟ್ಟಿದ್ದರು. ಅದನ್ನು  ನಿಜ,ಕತೆಗಾರ ಮತ್ತು ಉತ್ತಮ ಕವಿಯ ನಡುವೆ ಯಾವ ವ್ಯತ್ಯಾಸವೂ ಇಲ್ಲ. ಇಬ್ಬರದೂ ಕೆಟ್ಟ ಗದ್ಯವೇ ಎಂದು ನವ್ಯೇತರರು ಆಡಿಕೊಂಡು ನಗುತ್ತಿದ್ದರು.

ಸದಾಶಿವ ಕತೆಗಳಲ್ಲಿ ಕಾವ್ಯವಿತ್ತು. ಅನಂತಮೂರ್ತಿ ಗದ್ಯದಲ್ಲಿ ಪದ್ಯವಿದೆ ಎನ್ನುವವರು ಸದಾಶಿವ ಗದ್ಯವನ್ನು ಅಷ್ಟೊಂದು ಪ್ರೀತಿಯಿಂದ ನೋಡಲಿಲ್ಲ. ಸದಾಶಿವ ಹಾಗೆ ತುಂಬಾ ವಿಸ್ತಾರವಾಗಿ ತೆರೆದುಕೊಂಡವರೂ ಅಲ್ಲ. ಅವರ ಗೆಳೆಯರ ಸಂಖ್ಯೆ ಸಣ್ಣದೇ. ಆನಂದ, ಚದುರಂಗ, ರಾಘವ, ಅನಂತಮೂರ್ತಿ, ಅಡಿಗರು ಹೀಗೆ ಸಣ್ಣ ಗುಂಪಿನಲ್ಲೇ ಸದಾಶಿವ ವಿರಾಜಮಾನರಾಗಿರುತ್ತಿದ್ದವರು.

ನವ್ಯ ಯುಗದ ಅರ್ಹ ಪ್ರತಿನಿಧಿಯಾಗಿ ಕಾಣಿಸುವವರು ಸದಾಶಿವ. ಅವರ ಆರಂಭದ ಕತೆಗಳನ್ನು ಪ್ರಗತಿಶೀಲ ಎಂದು ನೋಡಬಹುದೇ ಎಂದು ಗಮನಿಸಿದರೆ, ಅಲ್ಲೂ ಅದನ್ನು ಮೀರುವ ಮನೋಧರ್ಮ ಕಾಣಿಸುತ್ತದೆ. ಮತ್ತೆ ಮಳೆ ಹುಯ್ಯುತಿದೆ,ರಾಮನ ಸವಾರಿ ಸಂತೆಗೆ ಹೋದದ್ದು, ಅಪರಿಚಿತರು, ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ ಮುಂತಾದ ಕತೆಗಳೆಲ್ಲ ಆ ಕಾಲಕ್ಕೆ, ಈ ಕಾಲಕ್ಕೆ ಕೂಡ ವಿಚಿತ್ರ ಸಂತೋಷ ನೀಡುವಂಥವು. ರಾಮನ ಸವಾರಿ ಸಂತೆಗೆ ಹೋದದ್ದು ಕತೆಯಲ್ಲಿ ಕತೆಯುಂಟು, ಕತೆಯಿಲ್ಲ. ಅದೊಂದು ಕಾದಂಬರಿಯಾಗುತ್ತದೇನೋ ಅನ್ನುವ ಅನುಮಾನ ಮೂಡಿಸುತ್ತಲೇ, ಸಣ್ಣಕತೆಯಾಗಿ ಮುಕ್ತಾಯವಾಗುತ್ತದೆ. ತಾರಕಕ್ಕೇರಿದ ಜಗಳ, ಹೊಡೆದಾಟಗಳೆಲ್ಲ ರಾಮ ತಾನು ಕದ್ದ ಪೀಪಿಯನ್ನು ಮರಳಿಸಲು ನಿರ್ಧರಿಸುವಲ್ಲಿಗೆ ಕೊನೆಯಾಗುತ್ತದೆ. ರಾಮನ ಪಾಲಿಗೆ ಅದು ಅಷ್ಟೇ. ದೊಡ್ಡವರ ಪಾಲಿಗೆ ಮಾತ್ರ ಮುಗಿಯದ ರಾದ್ಧಾಂತ. ಹೀಗೆ ಎರಡು ಜಗತ್ತನ್ನು ಎದುರೆದುರು ನಿಲ್ಲಿಸಿ, ಪರಸ್ಪರ ಮೂಡುವ ಪ್ರತಿಬಿಂಬದಲ್ಲಿ ನಮ್ಮ ಕ್ರಿಯೆಯ ಅರ್ಥರಾಹಿತ್ಯವನ್ನು ತೋರಬಲ್ಲವರಾಗಿದ್ದರು ಸದಾಶಿವ.

ಅವರ ಅಪರಿಚಿತರು’ ಕತೆಯಂತೂ ಟಿಎಸ್ ಎಲಿಯಟ್ ಸಾಲಿನೊಂದಿಗೇ ಆರಂಭವಾಗುತ್ತದೆ. ಅದರ ಬೆನ್ನಿಗೇ ಸದಾಶಿವ ಅಷ್ಟೇ ವಿಕ್ಷಿಪ್ತವಾದ ಸಾಲೊಂದನ್ನು ಬರೆದು ಮತ್ತಷ್ಟು ಬೆಚ್ಚಿಬೀಳಿಸುತ್ತಾರೆ. ಕತೆ ಶುರುವಾಗುವ ಪರಿ ನೋಡಿ:

ಸತ್ತವರನ್ನು ನೋಡಿದಾಗ, ಸತ್ತ ಸುದ್ದಿ ಕೇಳಿದಾಗ, ನನ್ನ ಮನೆಯ ಮುಂದೆ ದೊಡ್ಡಕ್ಕೆ ಬೆಳೆದ ಪೇರಲೆ ಮರದ ಮೇಲೆ ಮಂಗಗಳು ಜಲ್ಲೆ ಜಗ್ಗಿಸಿ ಜಗ್ಗಿಸಿ ನೆಗೆದಾಡುವಾಗ ನನಗೆ ಹೆದರಿಕೆಯಾಗುತ್ತದೆ’ . ಇದರಲ್ಲಿ ಮೊದಲೆರಡು ಒಪ್ಪಿಗೆಯಾಗುವಂಥದ್ದೇ, ಮಂಗಗಳು ಜಲ್ಲೇ ಜಗ್ಗಿಸಿ ನೆಗೆದಾಡಿದರೆ ನಿರೂಪಕನಿಗೆ ಯಾಕೆ ಹೆದರಿಕೆ ಆಗಬೇಕು?

ಕತೆ ವಿಚಿತ್ರವಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ದೇಹಕ್ಕೆ ಪ್ರಸ್ತವಾಯಿತು, ಮನಸ್ಸಿಗೆ ಪ್ರಸ್ತವಾಗಲೇ ಇಲ್ಲ ಎನ್ನುತ್ತಾ ಕೊರಗುವ ನಿರೂಪಕ, ಹೆಂಡತಿಯನ್ನು ಕೊಂಚ ಕೊಂಚವೇ ನಿರ್ಲಕ್ಷಿಸುತ್ತಾ ಅವಳ ಗೆಳತಿ ನೇತ್ರಾವತಿಗಾಗಿ ಹಂಬಲಿಸುತ್ತಾನೆ. ಕೊನೆಗೆ ಎಲ್ಲರೂ ಒಂದೇ, ಎಲ್ಲರೂ ಅಪರಿಚಿತರೇ ಅನ್ನಿಸುತ್ತದೆ. ಅಂಥ ಅಪರಿಚಿತ ಭಾವದಲ್ಲೇ ಸುಖವಿದೆಯಾ? ಅಪರಿಚಿತರಂತೆ ಬದುಕುವುದರಲ್ಲೇ ಹಿತವಿದೆಯಾ ಎಂಬ ಪ್ರಶ್ನೆಯೊಂದಿಗೆ ಕತೆ ಮುಕ್ತಾಯವಾಗುತ್ತದೆ. ಈ ಕತೆಯಲ್ಲಿ ಹೇಳದೇ ಉಳಿದಿದ್ದನ್ನು ಸದಾಶಿವ ಮತ್ತೊಂದು ಕತೆಯಲ್ಲಿ ಹೇಳಲು ಹೊರಡುತ್ತಾರೆ. ಪೆಂಡ್ಯುಲಮ್’ ಕತೆಯಲ್ಲೂ ನೇತ್ರಾವತಿ ಬರುತ್ತಾಳೆ. ಅಲ್ಲೂ ನಿರೂಪಕನಿಗೆ ಮದುವೆಯಾಗಿ ಮಕ್ಕಳಿದ್ದಾರೆ, ನೇತ್ರಾವತಿಯತ್ತ ಮನಸ್ಸು ಹರಿದಿದೆ. ಅವಳನ್ನು ತಾನು ಯಾಕೆ ಪ್ರೀತಿಸುತ್ತಿದ್ದೇನೆ ಎಂಬ ಪ್ರಶ್ನೆಗೆ ನಿರೂಪಕನಿಗೆ ಸಿಗುವ ಉತ್ತರಗಳನ್ನೇ ನೋಡಿ: ನಿನ್ನ ಕಣ್ಣುಗಳೆಂದೆ? ನಿನ್ನ ಫ್ರೌಡತೆಯೆಂದೇ? ನಿನ್ನ ಕೆನ್ನೆಗಳೆಂದೆ? ನಿನ್ನ ಮಾತೆಂದೆ? ನಡವಳಿಕೆಯೆಂದೆ? ದೇಹವೆಂದೇ?

+++

ಕತೆಗಳಲ್ಲಿ ಕಾಣಿಸುವ ಸದಾಶಿವ ದಕ್ಷಿಣ ಕನ್ನಡದವರು. ಕತೆಗಳ ತುಂಬ ಮಂಗಳೂರಿನ ಮಾತುಗಳೇ. ಕೊಪ್ಪದಲ್ಲಿ ಹುಟ್ಟಿದ ಸದಾಶಿವ, ಮೈಸೂರಿನಲ್ಲಿ ಪ್ರಾಧ್ಯಾಪಕರಾಗಿದ್ದದ್ದು, ನವ್ಯದ ತಂಡ ಕಟ್ಟಿಕೊಂಡು ಅಲೆದಾಡಿದ್ದು, ಹುಮ್ಮಸ್ಸಿನಿಂದ ಕತೆ ಬರೆದದ್ದು, ಇವೆಲ್ಲವೂ ಒಂದು ಕಾಲದ ಲವಲವಿಕೆಗೂ ಸಾಕ್ಷಿ. ಅವರೊಳಗೆ ಅಷ್ಟೊಂದು ತಲ್ಲಣಗೊಂಡ ಜಗತ್ತೊಂದು ಅದು ಹೇಗೆ ಮನೆ ಮಾಡಿತ್ತು ಅನ್ನುವುದಕ್ಕೆ ಉತ್ತರ ಇಲ್ಲ. ಅವರ ಎಲ್ಲಾ ಕತೆಗಳಲ್ಲೂ ನೊಂದ ಮನಸ್ಸು, ಸಣ್ಣತನ, ಜಗಳ,ರಂಪರಾದ್ಧಾಂತಗಳೇ.

ಸದಾಶಿವ ಕುರಿತು ತುಂಬ ಸೊಗಸಾಗಿ ಬರೆದವರು ಅನಂತಮೂರ್ತಿ. ಅವರಿಬ್ಬರ ತಮಾಷೆ, ಸ್ನೇಹ, ಬಡತನಗಳೆಲ್ಲ ಸದಾಶಿವ ತೀರಿಕೊಂಡಾಗ ಬರೆದ ಪುಟ್ಟ ಲೇಖನದಲ್ಲಿ ಕಾಣಿಸುತ್ತದೆ. ಸದಾಶಿವರ ಕತೆಗಳನ್ನು ಕಟುವಾಗಿ ಟೀಕಿಸುತ್ತಿದ್ದ ಅನಂತಮೂರ್ತಿಯವರನ್ನೂ ನಾವು ಕಾಣಬಹುದು. ಆ ಟೀಕೆ ಮತ್ತು ಪ್ರೀತಿಯಲ್ಲೇ ಒಂದು ಕಾಲಘಟ್ಟ ನಮ್ಮೆದುರು ಜಾಜ್ವಲ್ಯಮಾನವಾಗಿ ಬೆಳಗುತ್ತದೆ.

ಅನಂತಮೂರ್ತಿ ಬರೆಯುತ್ತಾರೆ:

ಇಬ್ಬರಿಗೂ ನಲವತ್ತು ಮೀರಿದ್ದರೂ ನಾನು ಅವನಿಗೆ ಹುಡುಗ, ಅವನು ನನಗೆ ಹುಡುಗ. ತನ್ನಿಂದ ತಾನೆ ಬೆರಗಾಗಬಲ್ಲ ಲೇಖಕ. ಇಬ್ಬರೂ ಇದ್ದಾಗ ಒಬ್ಬರನ್ನೊಬ್ಬರು ಜಾಲಾಡುವುದು. ಮತ್ತೊಬ್ಬ ಸಿಕ್ಕನೆಂದರೆ ನಾವು ಪಿತೂರಿಗಾರರು. ನಾವಿಬ್ಬರೂ ಕಾಫಿ ಕುಡಿಯುತ್ತಾ ಕೂತಿದ್ದೇವೆ. ಜೊತೆಗೊಬ್ಬ ಪ್ರಗತಿಶೀಲ ಭಾವಜೀವಿಯಿದ್ದಾನೆ. ನಾನು ಇದ್ದಕ್ಕಿದ್ದಂತೆ ಆರಂಭಿಸುತ್ತೇನೆ- ಇದೊಂದು ಗುಟ್ಟು ಅನ್ನುವ ಹಾಗೆ: ಸದಾಶಿವ ನೀನು ತುಂಬ ಕಷ್ಟಪಟ್ಟಿರಬೇಕು. ಅದೇನು

ಬಿಡೋ ಮಹಾ’ ಸದಾಶಿವ ಸೂಚನೆಯನ್ನು ಎತ್ತಿಕೊಳ್ಳುತ್ತಾನೆ. ಅವನು ಮಾಣಿಯಾಗುತ್ತಾನೆ. ಗೇಟ್‌ಕೀಪರ್ ಆಗುತ್ತಾನೆ,ಸನ್ಯಾಸಿಯ ಶಿಷ್ಯ ಆಗುತ್ತಾನೆ. ಹಿಮಾಲಯಕ್ಕೆ ಹೋಗುತ್ತಾನೆ, ಪಿಕ್‌ಪಾಕೆಟ್ ಮಾಡುತ್ತಾನೆ, ಪೋಲಿಸರು ಬರೆ ಹಾಕುತ್ತಾರೆ. ಕತೆಯನ್ನು ನಿಜ ಮಾಡಲು ಕೆಲವು ಘಟನೆಗಳನ್ನು ಸದಾಶಿವ ಸುಳ್ಳೆಂದು ಉದ್ರಿಕ್ತನಾಗಿ ವಾದಿಸುತ್ತಾನೆ- ಇಲ್ಲ ಕಣೋ,ನಾನು ಬಾಂಬೆಯಲ್ಲಿ ಪಿಂಪ್ ಆಗಿರಲಿಲ್ಲ’.

ಇದಕ್ಕಿಂತ ಭಿನ್ನವಾಗಿ ಅವರನ್ನು ನೆನಪು ಮಾಡಿಕೊಂಡವರು ಅಡಿಗರು:

ನಮ್ಮ ಸದಾಶಿವ, ಕತೆಗಾರ ತಮ್ಮ ಸದಾಶಿವ

ಇಲ್ಲಿ ಇನ್ನಿಲ್ಲ. ಸ್ಟೇಷನ್ನು ಬಂತು ಇಳಿದ, ಹೊರಟಿತು ರೈಲು

ಹಿಂದಿರುಗಲೇ ಇಲ್ಲ.

ಎಂದು ಶುರುವಾಗುವ ಪದ್ಯ ಸದಾಶಿವ ಅಂತರಂಗಕ್ಕೆ ಲಗ್ಗೆ ಹಾಕುತ್ತದೆ:

ಕತೆ ಬರೆದನಂತೆ- ಕತೆಯೇನು ಮಣ್ಣು-ತನ್ನೆದೆಯ

ಖಂಡಖಂಡ ಕತ್ತರಿಸಿ ಕಿತ್ತು ಹಿಡಿದು ಹಿಂಡಿ ಹಿಂಡಿ

ಭಟ್ಟಿಯಿಳಿಸಿದ ತೊಟ್ಟು ತೊಟ್ಟು.

ಹುಟ್ಟುವಾಗಲೆ ಶಿಲುಬೆ ಹೊತ್ತು ಬಂದಿದ್ದವನೆ, ಹೋಗಿಯೇ ಬಿಟ್ಟೆ.

ಮರ್ಮಸ್ಥಳವ ಹುಡುಕಿ ಹುಡುಕಿ ಮೊಳೆ ಜಡಿಯುತ್ತಲೇ ಇತ್ತು

ಕೊನೆವರೆಗೂ.

+++

ಗಾಳಿಮರದ ಸಂದಿಯಿಂದ ತೂರಿ ಬರುವ ಗಾಳಿ ವಿಹ್ವಲವಾಗಿ ಕೂಗಿಕೊಳ್ಳುತ್ತದೆ. ನಡುರಾತ್ರಿಗಳಲ್ಲಿ ಅದು ಆರ್ತನಾದದಂತೆ ಕೇಳಿಸುತ್ತದೆ. ಮೊರೆಯುವ ಅಲೆಗಳ ಸಮುದ್ರದೆದುರು ತುಂಬ ಹೊತ್ತು ನಿಂತರೆ, ಅಲೆಗಳ ಮೊರೆತ ಕೂಡ ಆಳದ ನೋವಿನ ವೀಣಾನಾದದಂತೆ ಭಾಸವಾಗುತ್ತದೆ. ಕರುಳಿಗೆ ಆರು ತೂತು ಮಾಡಿ ಕೊಳಲೂದುವ ಕಲೆಯನ್ನು ಸದಾಶಿವ ಸಿದ್ಧಿಸಿಕೊಂಡಿದ್ದರು. ಅವರ ಎಲ್ಲಾ ಕತೆಗಳನ್ನೂ ಈ ಜಗತ್ತಿನ ಸಂಕಷ್ಟಗಳ ಮೆರವಣಿಗೆ, ಅದನ್ನು ಮೀರಿಸುವ ಒಂದು ಧನ್ಯ,ಭವ್ಯ ಗಳಿಗೆಯ ಸಾಕ್ಷಾತ್ಕಾರ. ರಾಮನ ಸವಾರಿ ಸಂತೆಗೆ ಹೋದದ್ದು’ ಕತೆಯಲ್ಲಿ ಎಲ್ಲ ಜಂಜಡಗಳ ಮಧ್ಯೆ ಜಿಂಕೆಯ ಹಿಂಡೊಂದು ಕಾಣಿಸಿಕೊಂಡು ಕಿವಿ ನಿಮಿರಿಸಿ ನಿಂತು ಕಣ್ಮರೆಯಾಗುತ್ತದೆ. ಅಂಥ ಏಕಾಗ್ರತೆಯ ಕ್ಷಣಗಳನ್ನು ಸದಾಶಿವ ಕಂಡುಕೊಳ್ಳಬಲ್ಲವರಾಗಿದ್ದರೆ?

ಯಾವುದಕ್ಕೋ ಹಂಬಲಿಸುವ ಹಾಗೆ ಕಾಣಿಸುತ್ತಲೇ, ಎಲ್ಲದರಿಂದಲೂ ದೂರವಿರುವ ಜಾಣ್ಮೆಯನ್ನು ಬಲ್ಲವರಂತೆ ನಟಿಸುತ್ತಿದ್ದ ಹಾಗೆ ನಮ್ಮ ಕಲ್ಪನೆಗೆ ನಿಲುಕುತ್ತಾರೆ ಸದಾಶಿವ. ಅವರನ್ನು ಕೇವಲ ಅವರ ಕತೆಗಳ ಮೂಲಕ, ಅವರ ಮಿತ್ರರು ಆಡುತ್ತಿದ್ದ ಮಾತುಗಳ ಮೂಲಕ, ವೈಎನ್‌ಕೆ ಹೇಳುತ್ತಿದ್ದ ಪ್ರಸಂಗಗಳ ಮೂಲಕ ಕಣ್ಮುಂದೆ ಕಟ್ಟಿಕೊಳ್ಳುವುದು ಅಂಥ ಕಷ್ಟದ ಸಂಗತಿಯೇನೂ ಆಗಿರಲಿಲ್ಲ. ಅಷ್ಟಕ್ಕೂ ನಮ್ಮ ಪ್ರೀತಿಯ ಲೇಖಕರು ನಮಗಿಷ್ಟವಾಗುವ ಹಾಗೆ, ನಮ್ಮ ಗ್ರಹಿಕೆಗೆ ಸಿಕ್ಕ ಹಾಗೆ ಒಂದು ರೂಪವನ್ನು ಆವಾಹಿಸಿಕೊಂಡು ನಮ್ಮ ಮುಂದೆ ಸುಳಿಯುತ್ತಾರೆ. ಆ ಮಟ್ಟಿಗೆ ದೇವರ ಹಾಗೆ ಇವರೂ ನಿರ್ಗುಣ,ನಿರಾಕಾರ ಸ್ವರೂಪರೇ.

ಸುಮ್ಮನೆ ಕೂತು ನೋಡುತ್ತಿದ್ದರೆ ಸದಾಶಿವ ಬರೆದ ಕತೆಗಳು ಒಂದೊಂದಾಗಿ ಮೂಡಿ ಮರೆಯಾಗುತ್ತವೆ. ನೋಡಿದೆಯ ಅಮ್ಮ ಅವಳ ಧಿಮಾಕು’, ಸರಳುಗಳ ಹಿಂದೆ, ನೆರಳು ಬೆಳಕಿನಾಟದಲ್ಲಿ ಕಂಡದ್ದೇನು? ಸೂತಕ, ಪೆಂಡ್ಯುಲಮ್- ಒಂದಲ್ಲ ಎರಡಲ್ಲ.

ಮತ್ತೆ ಮಳೆ ಹೊಯ್ಯುತಿದೆ.. ಎಲ್ಲ ನೆನಪಾಗುತಿದೆ.  ಪ್ರತಿ ಬೇಸಗೆಗೂ ಸದಾಶಿವ ನೆನಪಾಗುತ್ತಾರೆ. ದಟ್ಟವಾದ ಬೇಸಗೆಯಿಲ್ಲದ ವರ್ಷ, ಗಾಢ ಮಳೆಯೂ ಸುರಿಯುವುದಿಲ್ಲವಂತೆ. ಸದಾಶಿವರೊಳಗೆ ಸುಡುಬೇಸಗೆಯೂ ಜಡಿಮಳೆಯೂ ಇತ್ತೆಂದು ತೋರುತ್ತದೆ. ಅದಕ್ಕೇ ಇರಬೇಕು, ಅಲ್ಲಿ ಎಲ್ಲವೂ ಅಕಾಲ.

‍ಲೇಖಕರು avadhi

April 12, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

2 ಪ್ರತಿಕ್ರಿಯೆಗಳು

 1. goutam hegde

  ಎಂ.ಎನ್.ಜಯಪ್ರಕಾಶ್ ಅಂದ್ರೆ ಯಾರು ಸರ್ ? ಅವರ ಬಗ್ಗೆ ತಿಳಿದಿಲ್ಲ .ದಯವಿಟ್ಟು ಹೇಳಿ.

  ಪ್ರತಿಕ್ರಿಯೆ
 2. chetana Teerthahalli

  ಪ್ರಿಯ ಜೋಗಿ,
  ಜಯಪ್ರಕಾಶರ ಹೆಸರು ನಿಮ್ಮಿಂದ ಕೇಳಿ ತಲೆಯಲ್ಲಿ ಝಗ್ಗನೆ ಬೆಳಕು.
  ನಾನು ಕಳೆದ ಕೆಲವು ವರ್ಷಗಳಿಂದ ಅವರ ಕವನ ಸಂಕಲನ ಹುಡುಕ್ತಿದೇನೆ. ದಶಕದ ಮೇಲೆ ನಾಲ್ಕು ವರ್ಷಗಳ ಹಿಂದೆ ತುಂಗಾ ಕಾಲೇಜಿನ ಲೈಬ್ರರಿಯಲ್ಲಿ ಅದರ ದುರ್ಬಲ ಪ್ರತಿ ಓದಿದ್ದೆ. ನಾನು ಆಗ ಬಹಳ ಮೆಚ್ಚಿಕೊಂಡು ಕನವರಿಸಿದ್ದ ಕವನಗಳವು. ನನ್ನೂರಿನ ಈ ಕವಿಯ ಕವಿತೆಗಳನ್ನು ಖುದ್ದು ನಾನೇ ಪುನಃ ಮುದ್ರಿಸಬೇಕೆಂದು ಅಂದುಕೊಳ್ಳುತ್ತ ವರ್ಷ ಕಳೆಯಿತು. ದಯವಿಟ್ಟು ಅವರ ಆ ಪುಟ್ಟ ಎರಡು ಕವನ ಸಂಕಲನಗಳ ಪ್ರತಿ ನಿಮ್ಮಲ್ಲಿದ್ದರೆ ತಿಳಿಸಿ.
  ನಲ್ಮೆ,
  ಚೇತನಾ ತೀರ್ಥಹಳ್ಳಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: