ಜೋಗಿ ಬರೆಯುತ್ತಾರೆ: ಒಂದೆ ಹೊಳೆಯ ನೀರಿನಲ್ಲಿ ಬೇರೆ ಬೇರೆ ಆಳ

-ಜೋಗಿ ಮನೆಯ ಜಗಲಿಯಲ್ಲೊಂದು ಬೆತ್ತದ ಕುರ್ಚಿ. ಅದರ ಮೇಲೆ ಆಸೀನರಾದ ಕವಿ. ಅವರ ಕಣ್ಣು ನಮಗೆ ಕಾಣದಷ್ಟು ದಪ್ಪದ ಕನ್ನಡಕ. ಪಕ್ಕದಲ್ಲಿ ಅಕ್ಕಿ ಆರಿಸುತ್ತಾ ಕೂತ ಕವಿಪತ್ನಿ ವೆಂಕಮ್ಮ. ಕಾಲದ ರಬ್ಬರು ಎಷ್ಚು ಬಾರಿ ಅಳಿಸಿದರೂ ಕಣ್ಮುಂದೆ ಇರುವ ದೃಶ್ಯ ಇದು. ಬನಶಂಕರಿ ಮೂರನೇ ಹಂತದ ಅವರ ಮನೆಗೆ ಹೋದಾಗ ಇದನ್ನು ಬಿಟ್ಟು ಬೇರೆ ದೃಶ್ಯ ಕಣ್ಣಿಗೆ ಬಿದ್ದದ್ದಿಲ್ಲ. ಬೆಳಗಾಗಲೀ ಬೈಗಾಗಲೀ ಕವಿಯ ಕೈಯಲ್ಲಿ ನಶ್ಯ, ಶೂನ್ಯದತ್ತ ನೋಟ. ಕವಿಪತ್ನಿಯ ಕಣ್ಣಲ್ಲಿ ಅಕ್ಕರೆ. ಕವಿ ಕೆಎಸ್‌ನ, ಕವಿಪತ್ನಿ ವೆಂಕಮ್ಮ. ಯಾರ ಹಂಗೂ ಇಲ್ಲದೇ ಅರ್ಥವಾದವರು ಕೆ ಎಸ್ ನರಸಿಂಹಸ್ವಾಮಿ. ಸುಮಾರು ಇಪ್ಪತ್ತಾರು ವರ್ಷಗಳ ಹಿಂದೆ ಕೊಪ್ಪ ಸಮೀಪದ ಬಸರೀಕಟ್ಟೆ ಎಂಬ ಪುಟ್ಟ ಊರಿನಲ್ಲಿರುವ ಗೆಳೆಯರಾದ ನಾಗಭೂಷಣ್ ಮನೆಗೆ ಹೋಗುತ್ತಿದ್ದ ಹಾದಿಯಲ್ಲೊಂದು ಪುಟ್ಟ ಹೊಟೆಲ್ಲು. ಮುಂಜಾನೆ ಎಂಟಕ್ಕೆಲ್ಲ ಆ ಹೊಟೆಲಿಗೆ ಕಾಲಿಟ್ಟರೆ ಅವಲಕ್ಕಿ ಮೊಸರು ಮತ್ತು ಹಿನ್ನೆಲೆಯಲ್ಲಿ ಅಲೆ ಬಂದು ಕರೆಯುವುದು ನಿನ್ನೊಲುಮೆ ಅರಮನೆಗೆ, ಒಳಗಡಲ ರತ್ನಪುರಿಗೆ’ ಎಂಬ ನವಿರು ದನಿ. ದನಿಗಿಂತ ಸೆಳೆದದ್ದು ಆ ಸಾಲು: ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ, ಒಳಗುಡಿಯ ಮೂರ್ತಿಮಹಿಮೆ’. ಅದನ್ನು ಕೇಳುತ್ತಾ ಮೈಮರೆತು ಮಾಲಿಕರನ್ನು ಕೇಳಿದರೆ ಅವರು ತೋರಿಸಿದ್ದು ಮೈಸೂರು ಮಲ್ಲಿಗೆ’ ಕೆಸೆಟ್ಟು. ಊರಿಗೆ ಬಂದ ತಕ್ಷಣ ಕೊಂಡದ್ದು ಆ ಕೆಸೆಟ್ಟು. ಅದನ್ನು ಕೊಂಡೊಯ್ದು ಪಕ್ಕದ ಮನೆಯಲ್ಲಿ ಹಾಕಿ ಕೇಳಿದರೆ ಹೊಂಬಾಳೆ ಹೂವಿನಲಿ ಹೊರಟ ಪರಿಮಳದಲ್ಲಿ ಉಯ್ಯಾಲೆ’ ಅವರ ಹೆಸರು. ಆ ಕ್ಷಣದಿಂದ ಕೆ ಎಸ್ ನರಸಿಂಹಸ್ವಾಮಿ ಅವರನ್ನು ನೋಡಬೇಕು ಅನ್ನುವ ಆಸೆ. ಅವರು ಮಂಡ್ಯದವರು, ಕಿಕ್ಕೇರಿಯವರು ಎಂದು ಗೊತ್ತಾಗಿದ್ದು ತೀರ ತಡವಾಗಿ. ಅದಕ್ಕೂ ಮುಂಚೆ ಅವರ ಮೈಸೂರ ಮಲ್ಲಿಗೆ, ದೀಪದ ಮಲ್ಲಿ, ಐರಾವತ, ಉಂಗುರ, ಇರುವಂತಿಗೆ ಎಲ್ಲವನ್ನೂ ಓದಿಯಾಗಿತ್ತು. ಆ ಗುಂಗಿನಲ್ಲಿ ಮದುವೆಯಾಗದ ಹೆಣ್ಣುಮಕ್ಕಳ ಕಷ್ಟ ನಮಗೆ ಅರ್ಥವೇ ಆಗುತ್ತಿರಲಿಲ್ಲ. ಸರಿಯಾ ಗಂಡೊದಗಿ ಹೆಣ್ಣು ಸುಖವಾಗಿರಲಿ, ತಡವಾದರೇನಂತೆ ನಷ್ಟವಿಲ್ಲ’ ಎಂದು ನಮ್ಮೂರ ಬಯಲಲ್ಲಿ ನಾವು ಗುನುಗಿಕೊಳ್ಳುತ್ತಾ ಓಡಾಡುತ್ತಿದ್ದೆವು. ನಮ್ಮೂರಲ್ಲಿ ಏನೇ ಶುಭಕಾರ್ಯ ನಡೆದರೂ ಉಸುರುವುದಕ್ಕೊಂದು ನರಸಿಂಹಸ್ವಾಮಿ ಸಾಲು ಸಿಗುತ್ತಿತ್ತು. ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರೆಳೆದು ನಲುಗಬಾರದು ನನ್ನ ದೊರೆಯೇ’, ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ ಮೈಸೂರ ಸೇರುವುದು ನಾನು ಬಲ್ಲೆ’, ಕೆರೆಯದಾರಿಯಲಿ ನೀರ ತರುತಿರಲು ಹೆಸರು ಕೇಳಿದನು ಗೊಲ್ಲನು, ಒಸಗೆಯಾಯಿತೇ ಎಂದನು’… ಒಸಗೆಯಾಗುವುದು ಎಂದರೇನು ಅನ್ನುವುದರ ಕಲ್ಪನೆಯೂ ಇರಲಿಲ್ಲ. ಅಷ್ಟು ಹೊತ್ತಿಗೆಲ್ಲ ಅಡಿಗರ ಕಾವ್ಯದ ರುಚಿಯನ್ನು ನಮ್ಮ ಮೇಷ್ಟರುಗಳು ತೋರಿಸಿಕೊಟ್ಟಿದ್ದರು. ಅಡಿಗರು ಪುಷ್ಪಕವಿಯ ಪರಾಕು’ ಕವಿತೆ ಬರೆದದ್ದು ಕೆಎಸ್‌ನ ಕುರಿತೇ ಎಂದೆಲ್ಲ ಮಾತಾಡತೊಡಗಿದ್ದರು. ಅದೇ ಹೊತ್ತಿಗೆ ಕೆಎಸ್‌ನ ಕೂಡ ಅವರನ್ನು ಸರಿಗಟ್ಟುವಂತೆ ಬರೆಯಲು ಹೊರಟಂತೆ ಕಾಣುತ್ತಿದ್ದರು. ಅಗೆವಾಗ ಸಿಕ್ಕದ್ದು ನುಣುಪು ಕುಂಕುಮ ಭೂಮಿ, ಗುದ್ದಲಿಯ ಕೆಲಸ ಅಲ್ಲಿಗೆ ನಿಂತಿದೆ’ ಎಂಬ ಸಾಲುಗಳು ನವ್ಯಕವಿಗಳ ಕುರಿತ ವ್ಯಂಗ್ಯ ಎಂದು ನಾವು ನಮ್ಮಷ್ಟಕ್ಕೇ ಭಾವಿಸಿಕೊಂಡಿರಬೇಕಾದರೆ, ಬತ್ತಿದ ಹೊಳೆ, ಅದರಾಚೆಗೆ ತಿರುಗುತ್ತಿದೆ ಗಾಣ, ಮೇಲೆತ್ತಿದ ಚಾಟಿಯಲಿದೆ ಮುದಿಯೆತ್ತಿನ ಪ್ರಾಣ’ ಎಂದು ಬರೆದು ಕೆಎಸ್‌ನ ಬೆಚ್ಚಿಬೀಳಿಸಿದರು. ನಡೆದು ಬಂದ ಕಡೆಗೆ ತಿರುಗಿಸಬೇಡ, ಕಣ್ಣ ಹೊರಳಿಸಬೇಡ’ ಎಂಬ ಅಡಿಗರ ಸಾಲುಗಳಿಗೆ ಸಂವಾದಿಯಾಗಿ ನಡೆದ ದಾರಿಯ ತಿರುಗಿ ನೋಡಬಾರದು ಏಕೆ?’ ಎಂದು ಕೆಎಸ್‌ನ ಕೇಳಿದರು ಎಂದುಕೊಂಡು ನಾವೊಂದಷ್ಟು ಮಂದಿ ಈ ಜಗಳದಲ್ಲಿ ಪರವಿರೋಧ ವಹಿಸಿಕೊಂಡು ಕಿತ್ತಾಡಿದೆವು. ಕೆಎಸ್‌ನ ಪರಿಚಯವಾದದ್ದು ಆಮೇಲೆ. ಅವರ ಮನೆಗೆ ದೀಪಾವಳಿ ವಿಶೇಷಾಂಕಕ್ಕೆ ಕವಿತೆ ಕೇಳಲು ಹೋಗಲು ಆರಂಭಿಸಿದ ಮೇಲೆ. ಅವರು ಬರೆಯುವುದನ್ನು ಬಿಟ್ಟು, ಕವಿತೆ ಹೇಳಲು ಆರಂಭಿಸಿದ್ದರು. ಅವರ ಕವಿತೆಗಳನ್ನು ಬರೆದುಕೊಳ್ಳಲು ಅವರ ಕಿರಿಯ ಮಿತ್ರರಾದ ಎಂ. ವಿ. ವೆಂಕಟೇಶಮೂರ್ತಿ ಬರುತ್ತಿದ್ದರು. ಆದರೆ ನಾನು ಕೇಳಿದ ಕವಿತೆಗಳನ್ನು ಅವರು ನನಗೇ ಬರೆದುಕೊಳ್ಳಲು ಹೇಳುತ್ತಿದ್ದರು. ಹಾಗೆ ಬರೆಸುವ ಹೊತ್ತಿಗೆ ಅವರ ಮನಸ್ಸಿನಲ್ಲಿ ಆ ಕವನ ರೂಪುಗೊಂಡಿರುತ್ತೆಂದು ಕಾಣುತ್ತದೆ. ಹೀಗಾಗಿ ಒಂದಿಷ್ಟೂ ಯೋಚಿಸದೇ, ಸರಾಗವಾಗಿ ಕವಿತೆಯನ್ನು ಡಿಕ್ಟೇಟ್’ ಮಾಡುತ್ತಿದ್ದರು. ಅಷ್ಟು ಸೊಗಸಾಗಿ ಹೇಳಿ ಬರೆಸುವ ಮತ್ತೊಬ್ಬರೆಂದರೆ ಯು ಆರ್ ಅನಂತಮೂರ್ತಿ. ಅವರು ಸುದೀರ್ಘ ಲೇಖನಗಳನ್ನು ಕೂಡ ಸರಾಗವಾಗಿ ಹೇಳುತ್ತಾ ಹೋಗುತ್ತಾರೆ. ಆಮೇಲೆ ಓದಿದರೆ, ಒಂದಕ್ಷರ ಕೂಡ ಬದಲಾಯಿಸುವ ಅಗತ್ಯ ಕಾಣಿಸುವುದಿಲ್ಲ. ಅಷ್ಟು ಕರಾರುವಾಕ್ಕು. ವೈಎನ್‌ಕೆ ಬರೆದ ಒಂದು ಪದ್ಯ ಕೆಎಸ್‌ನರಸಿಂಹ ಸ್ವಾಮಿ ಅವರ ಕುರಿತೇ ಎಂದು ನನ್ನ ಊಹೆ. ಅವರ ಸಹಜ ತಮಾಷೆಯಲ್ಲಿ ಕವಿತೆ ಹೀಗೆ: ನರಸಿಂಹರಾಯರು ಹೆಸರಾಂತ ಕವಿಗಳು ನಾವು ಬಂದಿದ್ದೇವೆ ನಾಲ್ಕು ಜೊತೆ ಕಿವಿಗಳು. ಕೊಟ್ಟರೆ ಒಳ್ಳೆಯ ಕಾಫಿ ಎಂಥ ಪದ್ಯಕ್ಕೂ ಮಾಫಿ. ಹೀಗೆ ಬರೆದ ವೈಯೆನ್ಕೆ ಅವರಿಗೆ ಕೆಎಸ್‌ನ ಅನೇಕ ಸಾಲುಗಳು ಕಂಠಪಾಠ. ಅದರಲ್ಲಿ ಅವರಿಗೆ ತುಂಬ ಇಷ್ಟವಾದದ್ದು: ಸಂಜೆಗೊಬ್ಬಳು ಮುದುಕಿ, ಕೊನೆಯ ಕೆಂಡವ ಕೆದಕಿ, ಎತ್ತಿ ಮುಡಿದಳು ತನ್ನ ಗಂಟುಜಡೆಗೆ’ ಎಂಬ ರೂಪಕ. ಹಾಗೇ, ಸಿಟ್ಟು ಬಂದಾಗಲೂ ಕೆಎಸ್‌ನ ಎಷ್ಟು ಸಂಯಮಿ ಎನ್ನುವುದನ್ನೂ ವೈಯೆನ್ಕೆ ಹೇಳಿದ್ದರು: ಜಗಳವಾಗಿ ಯಾರನ್ನಾದರೂ ಬೈದಾಗ ಕೆಎಸ್‌ನ ಹೇಳುತ್ತಿದ್ದರಂತೆ; ಅವನಿಗೊಂದು ಶವರ್‌ಬಾತ್ ಕೊಟ್ಟೆ’. ಹಾಗಂದರೆ ಆಡುಭಾಷೆಯಲ್ಲಿ ಉಗಿದೆ’ ಎಂದು ಅರ್ಥವಂತೆ. ಅಡಿಗರ ಮೇಲಿನ ಸಿಟ್ಟನ್ನು ಕೆಎಸ್‌ನ ಕೊನೆತನಕವೂ ಬಿಟ್ಟುಕೊಟ್ಟಿರಲಿಲ್ಲ. ಸಂಜೆಹಾಡು ಸಂಕಲನದ ಒಂದು ಕವಿತೆಯಲ್ಲಿ ಅವರು ಅಡಿಗ ಹಾಗೂ ತಮ್ಮ ಕಾವ್ಯವನ್ನು ತಾವೇ ವಿಶ್ಲೇಷಿಸಿಕೊಂಡಿದ್ದಾರೆ, ಅಡಿಗರ ಪ್ರಸ್ತಾಪದೊಂದಿಗೆ: ಗೋಪಾಲಕೃಷ್ಣ ಅಡಿಗರು ಒಮ್ಮೆ ಹೇಳಿದರು ನನ್ನ ಅನುಭವವೆ ತೆಳುವೆಂದು; ಒಪ್ಪುತ್ತೇನೆ. ಅವರ ದನಿ ಯಕ್ಷಗಾನದ ರೀತಿ;ನನ್ನ ದನಿ ತಂಪಾದ ಸಂಜೆಯಲಿ ಗೆಳೆಯರಿಬ್ಬರು ಕೂತು ಎತ್ತರಕ್ಕೇರದೆಯೇ ಮಾತನಾಡುವ ರೀತಿ. ಕವಿತೆಗಿಂತಲೂ ಬದುಕು ಜಟಿಲ, ಇಲ್ಲಿ ಉಟ್ಟರೂ ಬೆತ್ತಲೆ, ಉಂಡರೂ ಹಸಿವು. ******** ಮಲ್ಲಿಗೆ ಕವಿ ಪರಿಮಳವ ಬೀರಿದರೂ ಒಳಗೊಳಗೇ ನೋವುಂಡರೇ? ಅದನ್ನು ವಿಸ್ತರಿಸುವುದು ಕೊಂಚ ಅಧಿಕಪ್ರಸಂಗಿತನ. ಹಾಗಿದ್ದರೂ ಅವರ ಕವಿತೆಯೊಂದರ ಸಾಲು ಮತ್ತೆ ಮತ್ತೆ ನೆನಪಾಗುತ್ತದೆ. ನೊಂದ ಹಾಡನ್ನಷ್ಟೆ ಹಾಡಬೇಕೇನು? ಬೇಡವೇ ಯಾರಿಗೂ ಸಿರಿಮಲ್ಲಿಗೆ? ಎಂದು ಕೇಳಿದವರೇ ಮತ್ತೊಮ್ಮೆ ನುಡಿಯುತ್ತಾರೆ: ಹೊಳೆ ಬೆಟ್ಟ ಕಾನು ಹೂಬನವ ಸುತ್ತಾಡಿದೆನು ಹಣತೆಯಾರುವ ತನಕ ಹಾಡು ಹಾಡಿ. ಶಾಂತಿ ಸಿಕ್ಕಲೆ ಇಲ್ಲ ನನಗೆ ಜೀವನದಲ್ಲಿ ನಿಮಗೆ ಗೊತ್ತೆ ವಿಳಾಸ, ನನಗೆ ಹೇಳಿ. ಕೆಎಸ್‌ನ ಅವರನ್ನು ತುಂಬಾ ಹಚ್ಚಿಕೊಂಡವರು ರವಿ ಬೆಳಗೆರೆ. ನಾನು ಅವರ ಜೊತೆಗಿದ್ದಾಗಲೆಲ್ಲ ಕೆಎಸ್‌ನ ಕವಿತೆಯ ಸಾಲುಗಳನ್ನು ಒಂದರ ಮೇಲೊಂದರಂತೆ ಹೇಳುತ್ತಿದ್ದರು. ಎಸ್ ದಿವಾಕರ್ ಕೂಡ ಕೆಎಸ್‌ನ ಕವಿತೆಗಳನ್ನು ಪುಸ್ತಕದ ನೆರವಿಲ್ಲದೇ ಹೇಳುವುದನ್ನು ನಾನು ಕೇಳಿದ್ದೇನೆ. ಒಲವು ತುಂಬುವುದಿಲ್ಲ, ತುಂಬಿದರೆ ಒಲವಲ್ಲ, ಎಲ್ಲಿ ಹೋಯಿತು ಹಾಲು ಪಾತ್ರೆ ಬರಿದು’ ಕವಿತೆ ಆಪ್ತವಾದದ್ದು ದಿವಾಕರ್ ಬಾಯಿಂದ ಕೇಳಿದ ನಂತರವೇ. ಹಾಯ್‌ಬೆಂಗಳೂರು ಪತ್ರಿಕೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕೆಎಸ್‌ನ ದಂಪತಿಗಳನ್ನು ಕರೆಸಿಕೊಂಡು ಬಾಗಿನ ಕೊಟ್ಟು ಸನ್ಮಾನಿಸಿದ ಕ್ಷಣ ಅಮರ. ನಾನು ಅವರನ್ನು ವೇದಿಕೆಯ ಮೇಲೆ ನೋಡಿದ್ದು ಅದೇ ಮೊದಲು. ಬಿಡುಗಡೆ ಸಮಾರಂಭ ಮಾಡದೇ ಹೋದರೂ, ಅವರ ಕವನ ಸಂಕಲನಗಳು ಮಾರುಕಟ್ಟೆಗೆ ಬಂದ ತಕ್ಷಣ ಅದು ಹೇಗೋ ಏನೋ ಅವರನ್ನು ಮೆಚ್ಚುವವರಿಗೆ ಗೊತ್ತಾಗುತ್ತಿತ್ತು. ಕೆಲವೇ ದಿನಗಳಲ್ಲಿ ಅವು ಖರ್ಚಾಗುತ್ತಿದ್ದವು. ಮೈಸೂರ ಮಲ್ಲಿಗೆ’ ಸಂಕಲನದ ಹಕ್ಕನ್ನು ಪ್ರಕಾಶಕರಿಗೆ ಕೊಟ್ಟು ಬರಿಗೈಯಲ್ಲಿ ನಿಂತ ಕವಿ ಅವರು ಎಂದು ಜಿಎಸ್ ಸದಾಶಿವ ಆಗಾಗ ಹೇಳುತ್ತಿದ್ದರು. ಅತ್ಯಂತ ಹೆಚ್ಚು ಮುದ್ರಣ ಕಂಡ ಕವನ ಸಂಕಲನ ಅದೇ ಇರಬೇಕು. ಇನ್ನೊಂದು; ಡಿವಿಜಿಯವರ ಮಂಕುತಿಮ್ಮನ ಕಗ್ಗ. ಕೆಎಸ್‌ನ ಲಹರಿ ಕೆಲವೊಮ್ಮೆ ಬೆರಗಾಗಿಸುವ ಹಾಗೆ, ಕವಿತೆಯಾಚೆಗೂ ಜಿಗಿಯುತ್ತದೆ. ತುಂಬ ಖುಷಿಯಾದಾಗ ಅವರು ಇಂಥ ಕವಿತೆಗಳನ್ನೂ ಬರೆದಿದ್ದಾರೆ: ಏನೋ ಬಂದಳು, ಏನೋ ಅಂದಳು. ಹೊಸಕರೆಹಳ್ಳಿಯ ಹುಡುಗಿ; ಕಂಕುಳಲ್ಲಿ ಹೂ ಗೊಂಚಲ ತಂದಳು, ಕೊಡವನು ಆ ಕಡೆ ಮಡಗಿ’. ಇದಕ್ಕಿಂತ ನಗೆಯುಕ್ಕಿಸುವ ಮತ್ತೊಂದು ಕವಿತೆ ನವಿಲ ದನಿ’ ಸಂಕಲನದಲ್ಲಿದೆ: ಬೆಟ್ಟಗಳಿರುವುದು ಹತ್ತುವುದಕ್ಕೆ ಹೊಳೆಗಳು ಇರುವುದು ದಾಟುವುದಕ್ಕೆ ಆಗಸವಿರುವುದು ಹಾರುವುದಕ್ಕೆ ಕಮಲ, ಓ ಕಮಲ! ಆರಂಭದ ಕವಿತೆಗಳಲ್ಲೂ ಕೆಎಸ್‌ನ ತುಂಟತನ ಜೋರಾಗಿದೆ: ನವಿಲೂರಿನೊಳಗೆಲ್ಲ ನೀನೇ ಬಲು ಚೆಲುವೆ, ಅದಕೆ ನಮಗಿಬ್ಬರಿಗೆ ನಾಳೆಯೇ ಮದುವೆ. ಒಬ್ಬಳೇ ಮಗಳೆಂದು ನೀವೇಕೆ ಕೊರಗುವಿರಿ ಒಬ್ಬಳೇ ಮಡದಿಯೆನಗೆ, ಒಳಗೆ ಬರಲಪ್ಪಣೆಯೆ ದೊರೆಯೆ, ಬಳೆಯ ತೊಡಿಸುವುದಿಲ್ಲ ನಿಮಗೆ.. ಹೀಗೆ ಕವಿತೆಯ ನಡುವೆಯೂ ನಗೆಯುಕ್ಕಿಸುವ ಸಾಲುಗಳು ಮಿನುಗುತ್ತವೆ. ಕೆಎಸ್‌ನ ಕುರಿತ ಮೈಸೂರು ಮಲ್ಲಿಗೆ’ ನಾಟಕ, ಅವರ ಅಭಿನಂದನಾ ಗ್ರಂಥ ಚಂದನ’, ಬಾಕಿನ ಹೊರತಂದ ಅವರ ಸಮಗ್ರ ಕವಿತೆಗಳ ಸಂಕಲನ ಮಲ್ಲಿಗೆಯ ಮಾಲೆ’, ನಾಗಾಭರಣ ನಿರ್ದೇಶನದ ಮೈಸೂರು ಮಲ್ಲಿಗೆ’ ಸಿನಿಮಾ, ಅಶ್ವತ್ಥರು ಸಂಗೀತ ನೀಡಿದ ಮೂವತ್ತೋ ನಲವತ್ತೋ ಕೆಸೆಟ್ಟುಗಳು- ಹೀಗೆ ಕೆಎಸ್‌ನ ಪ್ರತಿಭೆಗೆ ನೂರು ಕನ್ನಡಿ. ಕವಿತೆಯಾಚೆಗೆ ತುಳುಕಲು ಇಷ್ಟಪಡದ ತುಂಬಿದ ಕೊಡದಂತಿದ್ದ ಕೆಎಸ್‌ನ ಮನೆಮುಂದೆ ಹಾದುಹೋಗುವಾಗೆಲ್ಲ ಮತ್ತದೇ ಹಳೆಯ ಚಿತ್ರಕ್ಕೆ ಕಣ್ಣು ಹಾಯುತ್ತದೆ. ತುಂಬಿದಿರುಳಿನ ನಡುವೆ ನಾನು ಕಿರುದೋಣಿಯಲಿ ಈಗಲೇ ಹೊರಟಿರುವೆ ಆಚೆ ದಡಕೆ, ಬದುಕಿ ಬಾಳುವ ಮಂದಿಗೆ ಅರ್ಥವಾಯಿತು ಕವಿತೆ, ಅನುಭವಗಳಾಚೆಗಿದೆ ನನ್ನ ಬದುಕೆ’ ಎಂಬ ಸಾಲು ಸುಮ್ಮನೆ ನೆನಪಾಗುತ್ತದೆ.]]>

‍ಲೇಖಕರು avadhi

August 11, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Santhosh T DCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: