ಜೋಗಿ ಬರೆಯುತ್ತಾರೆ: ಕರ್ಣನ ನೆನಪಿನಲ್ಲಿ …


-ಜೋಗಿ
ಸುಮ್ಮನೆ, ಸುಮ್ಸುಮ್ಮನೆ ಕರ್ಣ ಕಣ್ಮುಂದೆ ಸುಳಿಯುತ್ತಾನೆ. ಕುಂತಿಯೊಡನೆ ಕೂಡಿದ ಸೂರ್ಯ ಕರ್ಣನ ತಂದೆ. ಸೂರ್ಯ ಸುಡುತ್ತಾನೆ. ಮಗನನ್ನೂ ಸುಟ್ಟಾನು. ಕುಂತಿಗೋ ಅದು ಬೇಡದ ಕೂಸು. ಕುತೂಹಲಕ್ಕೆ ಹುಟ್ಟಿದ ಕಂದ. ಅಂಥ ಕುತೂಹಲವನ್ನು ಅವಳು ತೇಲಿ ಬಿಟ್ಟದ್ದು ಗಂಗೆಯಲ್ಲಿ. ಗಂಗೆ ಬದುಕಿದವರನ್ನು ಮುಳುಗಿಸುವುದಿಲ್ಲ ಎಂದು ಹೆಸರಾದವಳು. ಅವಳು ತೇಲಿಸಿದ ಕರ್ಣನಿಗೆ ಕೊನೆಗೂ ದಕ್ಕಿದ್ದು ಕೌಂತೇಯ, ರಾಧೇಯ, ಸೂತಪುತ್ರ ಎಂಬ ಹೆಸರು ಮಾತ್ರ.
ಎಂಥ ವಿಚಿತ್ರ ಸನ್ನಿವೇಶದಲ್ಲಿ ಕರ್ಣ ಸಿಲುಕಿಹಾಕಿಕೊಂಡ ಎನ್ನುವುದನ್ನು ನೆನೆಯಿರಿ. ಕುಂತಿ ನಿರ್ಭಾವದಿಂದ ತೊರೆದ ಕರ್ಣ, ರಥಿಕನೊಬ್ಬನ ಕೈಸೇರಿ, ತನ್ನ ಉತ್ಸಾಹ ಮತ್ತು ತೀವ್ರತೆಗೋಸ್ಕರ ಬಿಲ್ವಿದ್ಯೆ ಕಲಿತು, ದ್ರೋಣರಿಂದ ಶಾಪಗ್ರಸ್ತನಾಗಿ ಆ ಶಾಪವನ್ನು ಮೀರಬಲ್ಲೆ ಎಂಬ ಹುಮ್ಮಸ್ಸಿನಲ್ಲಿ ಬದುಕಿ, ಕೌರವನ ಆಸ್ಥಾನ ಸೇರಿ, ಅವನಿಗೂ ಪ್ರಿಯಮಿತ್ರನಾಗಿ ಬದುಕಿನಲ್ಲಿ ನೆಲೆ ಕಂಡುಕೊಂಡದ್ದು ಒಂದು ರೋಚಕ ಕತೆ.

ಅವನ ಬಾಲ್ಯದ ಬಗ್ಗೆ ವಿವರಗಳೇ ಇಲ್ಲ. ಅಂಥವನ್ನು ಆ ಬಡವ ಹೇಗೆ ಬೆಳೆಸಿದ, ಕರ್ಣ ಏನೇನು ಕೇಳುತ್ತಿದ್ದ, ಏನು ಬೇಡುತ್ತಿದ್ದ, ಹೇಗೆ ಮಾತಾಡುತ್ತಿದ್ದ, ತನ್ನ ತಂದೆ ತಾಯಿ ಯಾರೆಂದು ಅವನು ಕೇಳಲೇ ಇಲ್ಲವೇ, ಅವನ ಕರ್ಣಕುಂಡಲ ಮತ್ತು ಕವಚದ ಬಗ್ಗೆ ಅವನಿಗೆ ಬೆರಗು ಮತ್ತು ಹೆಮ್ಮೆ ಇತ್ತಾ, ಅದನ್ನು ನೋಡಿದಾಗಲಾದರೂ ದ್ರೋಣನಿಗೆ ಅನುಮಾನ ಬರಲಿಲ್ಲವಾ?
ಮತ್ತೆ ನೆನಪಾಗುತ್ತಾನೆ ಭಗ್ನಪ್ರೇಮಿ ಕರ್ಣ. ಅವನು ಯಾರನ್ನು ಪ್ರೀತಿಸಿದ್ದ? ಭಾನುಮತಿಯ ಜೊತೆ ಪಗಡೆಯಾಡುತ್ತಾ ಅವಳ ಕೊರಳಹಾರಕ್ಕೆ ಕೈ ಹಾಕಿದ ಕರ್ಣನನ್ನು ಕೌರವ ಗೆಳೆಯನಂತೆ ಸ್ವೀಕರಿಸಿದ್ದು ಯಾಕೆ? ಕೌರವನಂಥ ಕೌರವನಿಗೆ ಕರ್ಣನ ಸ್ನೇಹ ಯಾತಕ್ಕೆ ಬೇಕಿತ್ತು? ಕರ್ಣನ ಶೌರ್ಯವನ್ನು ನೋಡಿ ಕೌರವ ಅವನನ್ನು ಮೆಚ್ಚಿಕೊಂಡಿದ್ದನಾ? ಸ್ನೇಹ ಹುಟ್ಟುವುದು ಮೆಚ್ಚುಗೆಯಿಂದ ಅಲ್ಲ.
ಅಭಿಮಾನಿಯಾಗಿದ್ದವನು ಗೆಳೆಯನಾಗಲಾರ. ಮೆಚ್ಚಿಕೊಳ್ಳುವವರು ಎತ್ತರದಲ್ಲಿರುತ್ತಾರೆ, ಮೆಚ್ಚಿಕೆಗೆ ಒಳಗಾದವರು ಕೊನೆಯ ಮೆಟ್ಟಿಲಲ್ಲಿ ನಿಂತಿರುತ್ತಾರೆ. ಗೆಳೆಯರ ನಡುವಿನ ಮೆಚ್ಚುಗೆಯಲ್ಲಿ ಮೆಚ್ಚಿಸಲೇಬೇಕೆಂಬ ಹಟವಿಲ್ಲ. ಮೆಚ್ಚಿಸುವುದು ಅನಿವಾರ್ಯವೂ ಅಲ್ಲ.
ಕರ್ಣನ ಕುರಿತು ಪ್ರೇಮ ಕತೆಗಳಿಲ್ಲ. ಹಾಗಿದ್ದರೂ ಅವನೊಬ್ಬ ಭಗ್ನಪ್ರೇಮಿಯಾಗಿದ್ದನೇನೋ ಅನ್ನಿಸುತ್ತದೆ. ಹಸ್ತಿನಾವತಿಯ ಅರಮನೆಯ ಆವರಣದಲ್ಲಿ ಏಕಾಂಗಿಯಾಗಿ ಅಡ್ಡಾಡುತ್ತಿದ್ದ ಕರ್ಣ ಬೇರೊಬ್ಬರ ಜೊತೆ ಆಪ್ತವಾಗಿ ಮಾತಾಡಿದ ಪ್ರಸ್ತಾಪ ಕೂಡ ಮಹಾಭಾರತದಲ್ಲಿ ಇಲ್ಲ.
ಅವನದೇನಿದ್ದರೂ ಏಕಾಂತವಾಸ. ಕೌರವ ಬಿಟ್ಟರೆ ಮತ್ಯಾರೂ ತನ್ನವರಲ್ಲ ಎಂದು ನಂಬಿದವನಂತೆ ಬಾಳಿ ಕರ್ಣ ಎಲ್ಲ ಸೈನಿಕರ ಹಾಗೆ ಬಾಳುತ್ತಿದ್ದ. ಅವನಿಗೂ ಮದುವೆಯಾಗಿ, ಮಕ್ಕಳಾದರು. ಕರ್ಣನಿಗೆ ಹಳೆಯದರ ನೆನಪಿರಲಿಲ್ಲ. ತನ್ನ ಹುಟ್ಟಿನ ಕುರಿತು ಜಿಜ್ಞಾಸೆಯೂ ಇರಲಿಲ್ಲ. ಅಪರಾತ್ರಿಗಳಲ್ಲಿ ಅವನು ಹಾಸಿಗೆಯಲ್ಲಿ ಎದ್ದು ಕೂತು ಏನನ್ನೋ ಹಂಬಲಿಸುವವನಂತೆ ಆಕಾಶದತ್ತ ನೋಡುತ್ತಿದ್ದ ಎಂಬುದು ಕರ್ಣನನ್ನು ಪ್ರೀತಿಸುವ ನನ್ನ ಊಹೆ ಮಾತ್ರ.
ಸೂರ್ಯ ಇದನ್ನೆಲ್ಲ ನೋಡುತ್ತಿದ್ದ. ಅವನಿಗೆ ಯಾವತ್ತೂ ಕರ್ಣನನ್ನು ಮಗನೆಂದು ಒಪ್ಪಿಕೊಳ್ಳುವ ಅಗತ್ಯ ಬರಲಿಲ್ಲ. ಅವನ ಪಾಲಿಗೆ ಕರ್ಣ ಮಗನಾದರೂ ಮಗನಲ್ಲ. ಅವನು ತಾನು ಕೊಟ್ಟ ವರ. ತನ್ನನ್ನು ಓಲೈಸಿದ, ಆರಾಧಿಸಿದ, ಸಂತೋಷಪಡಿಸಿದ ಕಾರಣಕ್ಕೆ ಮುನಿ ಕುಮಾರಿ ಕುಂತಿಗೆ ಕೊಟ್ಟ ಮಂತ್ರಕ್ಕಷ್ಟೇ ಅವನು ಬಂಧಿ. ಮಂತ್ರದ ಅಪ್ಪಣೆ ಇಷ್ಚೇ: ಕೇಳಿದಾಗ ಈ ಕುಮಾರಿಗೆ ವರ ಕರುಣಿಸು. ಅದರಾಚೆಗಿನ ಹೊರೆ, ಹೊಣೆ, ಅನುಕಂಪ ಮತ್ತು ಅಕ್ಕರೆಗೆ ಅಲ್ಲಿ ಜಾಗವಿಲ್ಲ. ಮುಂದಿನ ಮಾತುಗಳಿಗೆ ಅವನು ಕಿವುಡ. ಹೀಗಾಗಿ ಕರ್ಣ ಏನು ಮಾಡಿದರೂ ಅದು ಅವನದೇ ಜವಾಬ್ದಾರಿ. ಕುಂತಿ ಅವನನ್ನು ಗಂಗೆಯಲ್ಲಿ ತೇಲಿ ಬಿಟ್ಟಾಗಲೂ ಸೂರ್ಯ ಮೂಕಪ್ರೇಕ್ಷಕ.

ಇಂಥ ಕರ್ಣನನ್ನು ಸಂದಿಗ್ಧ ಕಾಡುವುದು ಕೇವಲ ಒಮ್ಮೆ. ಕೌರವರ ಪರವಾಗಿ ಹೋರಾಡಲು ಹೊರಟ ಕರ್ಣನನ್ನು ಕೃಷ್ಣ ಭೇಟಿಯಾಗುತ್ತಾನೆ. ಅವನಿಗೆ ಜನ್ಮರಹಸ್ಯ ಹೊತ್ತು. ಹುಟ್ಟಿನ ಗುಟ್ಟು ಬಲ್ಲವನು ಏನು ಬೇಕಾದರೂ ಮಾಡಬಲ್ಲ ಎಂದು ನಂಬಿದ್ದ ಕಾಲವಿರಬೇಕು ಅದು. ಆ ಗುಟ್ಟನ್ನು ಬಿಚ್ಚಿಟ್ಟು ಅವನು ಕರ್ಣನನ್ನು ಕಾಣುತ್ತಾನೆ.
ಕರ್ಣ ಆಗೇನು ಮಾಡಬೇಕಾಗಿತ್ತು?
ಯಾಕೋ ಕರ್ಣ ಕೊಂಚ ಮೆದುವಾದನೇನೋ ಅನ್ನಿಸುತ್ತದೆ. ಕರ್ಣ-ಕೃಷ್ಣರ ನಡುವೆ ಏನೇನು ಮಾತಾಯಿತು ಎನ್ನುವುದು ನಿಗೂಢ. ಕವಿ ಹೇಳಿದ್ದರೂ ಅದು ಅನೂಹ್ಯವೇ. ಅವರಿಬ್ಬರೂ ಏನೇನು ಮಾತಾಡಿರಬಹುದು ಎಂದು ಯೋಚಿಸುತ್ತಾ ಕೂತರೆ ನಮ್ಮ ನಮ್ಮ ಅನುಭವ ಮತ್ತು ಭಾವನೆಗೆ ತಕ್ಕಂತೆ ಉತ್ತರಗಳು ಹೊಳೆಯುತ್ತಾ ಹೋಗುತ್ತವೆ. ಕೃಷ್ಣ ನೀನೇ ಪಾಂಡವರಲ್ಲಿ ಹಿರಿಯವನು. ರಾಜ್ಯ ನಿನ್ನದೇ ಎಂದು ಕರೆಯುತ್ತಾನೆ. ಕರ್ಣ ಹೋಗಿದ್ದರೆ ಅವನಿಗೆ ರಾಜ್ಯ ಸಿಗುತ್ತಿತ್ತಾ? ಆ ಕ್ಷಣವೇ ಕರ್ಣ ಸೋಲುತ್ತಿದ್ದ. ಹೋಗದೇ ಸತ್ತ ಕರ್ಣ ಗೆದ್ದವನಂತೆ ಕಾಣುತ್ತಾನೆ. ಈ ಜಗತ್ತಿನಲ್ಲಿ ಆಮಿಷಗಳಿಗೆ ಬಲಿಯಾಗದವರೇ ನಮಗೆ ದೇವರಂತೆ ಕಾಣಿಸುತ್ತಾರೆ. ಟೆಂಪ್ಟೇಷನ್‌ಗಳನ್ನು ಮೆಟ್ಟಿನಿಲ್ಲುವುದೇ ಸಾಧನೆಯಾದರೆ, ಅಂಥ ಟೆಂಪ್ಟೇಷನ್ನುಗಳನ್ನು ಹುಟ್ಟುಹಾಕುವ ನಮ್ಮ ಮನಸ್ಸಿಗೇನು ಹೇಳೋಣ. ಆಮಿಷಗಳನ್ನು ಸೃಷ್ಟಿಸುವುದು ಮನಸ್ಸು, ಮೀರಲೆತ್ನಿಸುವುದೂ ಮನಸ್ಸು. ಮನಸೇ ಮನಸಿನ ಮನಸ ನಿಲ್ಲಿಸುವುದು.
ಕರ್ಣನನ್ನು ಕೃಷ್ಣ ಒಲಿಸುವ ರೀತಿ ವಿಚಿತ್ರವಾಗಿದೆ. ಅವನಿಗೆ ರಾಜ್ಯದ ಆಮಿಷ ಒಡ್ಡುತ್ತಾನೆ ಅವನು. ಜೊತೆಗೇ, ಧರ್ಮರಾಯ, ಭೀಮ, ಅರ್ಜುನರಂಥವರು ಸೇವೆಗೆ ನಿಲ್ಲುತ್ತಾರೆ ಎನ್ನುತ್ತಾನೆ. ಕರ್ಣನ ಮನಸ್ಸಿನಲ್ಲಿ ದ್ರೌಪದಿ ಸುಳಿದುಹೋಗಿರಬಹುದೇ ಎಂಬ ತುಂಟ ಅನುಮಾನವೊಂದು ಸುಮ್ಮನೆ ಸುಳಿಯುತ್ತದೆ; ದ್ರೌಪದಿಯ ಮನಸ್ಸಿನಲ್ಲಿ ಕರ್ಣನ ನೆರಳು ಹಾದು ಹೋದಹಾಗೆ. ಕರ್ಣನಿಗೆ ಅವೆಲ್ಲವನ್ನೂ ಧಿಕ್ಕರಿಸುವಂಥ ಧೀಮಂತ ಶಕ್ತಿ ಬಂದದ್ದಾದರೂ ಎಲ್ಲಿಂದ? ಕೌರವನ ಸ್ನೇಹದ ಬಲದಿಂದಲೇ? ಅಥವಾ ತಾನು ಕೌಂತೇಯ, ಕುಂತಿಯ ಮಗ, ಸೂರ್ಯನ ಮಗ ಎಂದು ಗೊತ್ತಾದ ನಂತರ ಕರ್ಣ ಗಟ್ಟಿಯಾಗುತ್ತಾ ಹೋದನೇ?
ಕೊನೆಗೂ ಕರ್ಣ ಅವನಿಗೊಂದು ಮಾತು ಕೊಡುತ್ತಾನೆ: ನಿನ್ನಯ ವೀರರೈವರ ನೋಯಿಸೆನು. ಈ ಮಾತನ್ನು ಕರ್ಣನಿಂದ ಹೊರಡಿಸುವಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾನೆ ಕೃಷ್ಣ. ಅಲ್ಲಿಗೆ ಕೌರವರ ಪಾಲಿಗೆ ಕರ್ಣ ನಿರುಪಯೋಗಿ. ಸೈನಿಕರನ್ನಷ್ಟೇ ಕೊಲ್ಲುತ್ತೇನೆ, ಪಾಂಡವರನ್ನು ಮುಟ್ಟುವುದಿಲ್ಲ ಎಂದು ಮಾತುಕೊಟ್ಟರೂ ಕೃಷ್ಣನಿಗೆ ಸಮಾಧಾನ ಇಲ್ಲ. ಅವನು ಮತ್ತೆ ಕುಂತಿಯನ್ನು ಕರ್ಣನೆಡೆಗೆ ಕಳುಹಿಸುತ್ತಾನೆ. ಕರ್ಣ ಜೀವನದ ಕರುಣಾಜನಕ ಸನ್ನಿವೇಶ ಅದು.
ಕುಮಾರವ್ಯಾಸ ನುರಿತ ಚಿತ್ರಕತೆಗಾರನಂತೆ ಆ ದೃಶ್ಯವನ್ನು ವರ್ಣಿಸುತ್ತಾನೆ. ಗಂಗಾತೀರದಲ್ಲಿ ಕರ್ಣ, ತಂದೆ ಸೂರ್ಯನ ಉಪಾಸನೆಯಲ್ಲಿರುವ ಹೊತ್ತಿಗೆ ಔದಾರ್ಯದ ಕಲ್ಪವೃಕ್ಷದಂತಿದ್ದ ಕುಂತಿ ಅಲ್ಲಿಗೆ ಬರುತ್ತಾಳೆ ಎನ್ನುವಲ್ಲಿ ಕುಮಾರವ್ಯಾಸನ ವ್ಯಂಗ್ಯ ಮೆರೆಯುತ್ತದೆ. ಕುಂತಿ ಬಂದದ್ದು ತಾನು ಹುಟ್ಟಿದ ತಕ್ಷಣವೇ ನೀರಲ್ಲಿ ತೇಲಿಬಿಟ್ಟ ಕರ್ಣನನ್ನು ಕೊಲಿಸುವುದಕ್ಕಲ್ಲವೇ?
ಅಲ್ಲಿ ಮತ್ತೊಂದು ವಿಚಿತ್ರವೂ ನಡೆಯುತ್ತದೆ. ಕುಂತಿಯನ್ನು ಕಂಡದ್ದೇ ತಡ, ಗಂಗೆ ನೀರಿನಿಂದೆದ್ದು ಬಂದು ನಿನ್ನ ಮಗನನ್ನು ನಾನು ಇಷ್ಟು ದಿನ ಕಾಪಾಡಿದೆ. ಈಗ ನಿನಗೆ ಒಪ್ಪಿಸುತ್ತಿದ್ದೇನೆ. ನೀನು ನನಗೆ ಕೊಟ್ಟ ಭಾಷೆಯನ್ನು ಉಳಿಸಿಕೊಂಡಿದ್ದೇನೆ ಎಂದು ಕರ್ಣನನ್ನು ಕುಂತಿಗೆ ಒಪ್ಪಿಸಿಹೋಗುತ್ತಾಳೆ. ಹೆತ್ತತಾಯಿ, ಪೊರೆದ ತಾಯಿ ಮತ್ತು ಆಕಾಶದಲ್ಲಿ ಹುಟ್ಟಿಸಿದ ತಂದೆ. ಈ ತ್ರಿಕೋನದ ನಡುವೆ ಏಕಾಂಗಿ ಕರ್ಣ. ಸೂರ್ಯನೂ ಆ ಕ್ಷಣ ಕರ್ಣನ ಬಳಿಗೆ ಬಂದು, ನಿಮ್ಮಮ್ಮನನ್ನು ನಂಬಬೇಡ, ಆಕೆ ಬಂದದ್ದು ನಿನ್ನ ಅಳಿವಿಗಾಗಿಯೇ ಹೊರತು, ಪ್ರೀತಿಯಿಂದಲ್ಲ ಅನ್ನುತ್ತಾನೆ. ಕರ್ಣನಿಗೆ ಪ್ರತಿಯೊಂದು ಮಾತೂ ಕರ್ಣಕಠೋರ.
ಕುಂತಿ ಕರ್ಣನನ್ನು ತನ್ನ ಜೊತೆಗೆ ಬಾ ಎಂದು ಕರೆದಾಗ ಕರ್ಣ ಹೇಳುವ ಮಾತು ಮಾರ್ಮಿಕವಾಗಿದೆ: ಇಂದೇನೋ ನಾನು ನಿನ್ನ ಮಗ ಎಂದು ನನಗೆ ಗೊತ್ತಾಯಿತು. ಆದರೆ ಇದ್ಯಾವುದೂ ಗೊತ್ತಿಲ್ಲದ ದಿನಗಳಲ್ಲಿ ನನ್ನನ್ನು ಕೌರವ ಸಲಹಿದ್ದಾನೆ. ಸ್ನೇಹಹಸ್ತ ಚಾಚಿದ್ದಾನೆ. ಅವನು ನನ್ನ ಕುಲ ನೋಡಲಿಲ್ಲ. ಅವನ್ನು ನಾನು ಬಿಟ್ಟು ಬರುವುದಿಲ್ಲ ಎನ್ನುತ್ತಾನೆ.
ಕುಂತಿ ಕೊನೆಗೂ ಕರ್ಣನಿಗೆ ಹೋದ ಬಾಣದ ಮರಳಿ ತೊಡದಿರು, ನನ್ನ ಐವರು ಮಕ್ಕಳನ್ನು ಕಾಪಾಡು’ ಎಂದು ಕೇಳಿಕೊಳ್ಳುತ್ತಾಳೆ. ಆರನೆಯ ಮಗನ ಹತ್ತಿರ ಐವರು ಮಕ್ಕಳನ್ನು ಕಾಪಾಡು ಎನ್ನುವ ಕುಂತಿಯ ಕ್ರೌರ್ಯವನ್ನು ಕೂಡ ಕರ್ಣ ಅನುಮಾನದಿಂದ ನೋಡುವುದಿಲ್ಲ. ಕರ್ಣ ನಿಜಕ್ಕೂ ನಿಷ್ಠುರನಾಗಿದ್ದರೆ? ಅವನಿಗೆ ದಾನಶೂರ ಎನ್ನಿಸಿಕೊಳ್ಳುವ ಹಂಬಲವೇ ಬಲವಾಗಿತ್ತಾ? ಕೇಳಿದ್ದನ್ನೆಲ್ಲ ಕೊಡುವುದು ಸದ್ಗುಣ ನಿಜ. ಅದು ಸದ್ಗುಣ ಎನ್ನಿಸಿಕೊಳ್ಳುವುದು ಕೇಳುವವರು ಯೋಗ್ಯರಾಗಿರುವ ತನಕ ಮಾತ್ರ. ಹಾಗಿಲ್ಲದೇ ಹೋದಾಗ ಕೊಡುವುದು ಕೊಡದಿರುವುದಕ್ಕಿಂತ ದೊಡ್ಡ ತಪ್ಪು.
ಒಮ್ಮೊಮ್ಮೆ ಹುಂಬನಂತೆ, ಮತ್ತೊಮ್ಮೆ ದಾರಿ ತಪ್ಪಿದವನಂತೆ, ಕೆಲವೊಮ್ಮೆ ಸೊರಗಿದವನಂತೆ, ಪ್ರೀತಿಗಾಗಿ ಕಾತರಿಸಿದವನಂತೆ, ಅಸಹಾಯಕನಂತೆ, ಅಬ್ಬೇಪಾರಿಯಂತೆ, ಒಳ್ಳೆಯ ಗೆಳೆಯನಂತೆ ಕಾಣಿಸುವ ಕರ್ಣ ಉದ್ದಕ್ಕೂ ತಪ್ಪುಗಳನ್ನು ಮಾಡುತ್ತಲೇ ಹೋದ. ನಿರಾಕರಿಸುವ ಶಕ್ತಿ ಕಳಕೊಂಡವನು ನಿರುಪಯುಕ್ತ ಅನ್ನಿಸುವುದು ಹೀಗೆ.
ವ್ಯಾಸರು ಸೃಷ್ಟಿಸಿದ ಪಾತ್ರಗಳ ಪೈಕಿ ಜಾಣತನ, ಕುಯುಕ್ತಿ ಇಲ್ಲದ ಬೋಳೇಸ್ವಭಾವದ ವ್ಯಕ್ತಿ ಕರ್ಣ. ಒಮ್ಮೊಮ್ಮೆ ಧರ್ಮರಾಯ ಕೂಡ ಅಧರ್ಮಿಯಂತೆ, ಸುಳ್ಳುಗಾರನಂತೆ ವರ್ತಿಸುತ್ತಾನೆ. ಕರ್ಣನೊಬ್ಬನೇ ನಮ್ಮಲ್ಲಿ ಅನುಕಂಪ ಮತ್ತು ಪ್ರೀತಿ ಉಕ್ಕಿಸುತ್ತಾನೆ.

‍ಲೇಖಕರು avadhi

September 15, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

24 ಪ್ರತಿಕ್ರಿಯೆಗಳು

 1. ಆತ್ರಾಡಿ ಸುರೇಶ ಹೆಗ್ಡೆ

  ಕರ್ಣನ ವ್ಯಕ್ತಿತ್ವದ ನೈಜ ವಿಶ್ಲೇಷಣೆ!
  ನೀವಂದಂತೆ ಬೋಳೆಸ್ವಭಾವದ ವ್ಯಕ್ತಿಯೆಂದೆನಿಸಿದರೂ, ಏಕಕಾಲದಲ್ಲಿ ನಮ್ಮೆಲ್ಲರ ಅನುಕಂಪ, ಪ್ರೀತಿ, ಮೆಚ್ಚುಗೆ ಮತ್ತು ಗೌರವಳಿಗೆ ಸಮಾನವಾಗಿ ಪಾತ್ರವಾಗುವ ಏಕಮಾತ್ರ ವ್ಯಕ್ತಿತ್ವ ಕರ್ಣನದು.

  ಪ್ರತಿಕ್ರಿಯೆ
 2. sumathibk

  jogi, very boring… enu heltaa ideeri… uddeshave artha aagolla… i am sory… heege heloke horatare mahaa bhaaratadalli paatragalu saakashtive.. yaake nimage iddakkidda haage karna nenapaada? 🙂

  ಪ್ರತಿಕ್ರಿಯೆ
 3. natesh babu

  ಬ್ರೇಕಿಂಗ್ ನ್ಯೂಸ್: ಪಂಡಿತ ಪುಟ್ಟರಾಜ …
  13 ಸೆಪ್ಟೆಂಬರ್ 2010 … ಬ್ರೇಕಿಂಗ್ ನ್ಯೂಸ್: ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಇನ್ನಿಲ್ಲ. 13 Sep 2010 Leave a Comment. by avadhi in 1. ಇಂದು ಮಧ್ಯಾನ್ಹ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪಂಡಿತ ಪುಟ್ಟರಾಜ ಕವಿ ಗವಾಯಿಗಳು …
  avadhi.wordpress.com/…/ಬ್ರೇಕಿಂಗ್-ನ್ಯೂಸ್-ಪಂಡಿತ-ಪ/ – ಸಂಗ್ರಹ
  ————–
  suLLu/tappu muchchiDodu tumba kashta sir 🙂
  full details-
  http://www.google.co.in/#hl=kn&source=hp&q=%E0%B2%AA%E0%B3%81%E0%B2%9F%E0%B3%8D%E0%B2%9F%E0%B2%B0%E0%B2%BE%E0%B2%9C+%E0%B2%97%E0%B2%B5%E0%B2%BE%E0%B2%AF%E0%B2%BF%E0%B2%97%E0%B2%B3%E0%B3%81&aq=0&aqi=g6&aql=&oq=puttar&gs_rfai=&fp=717abce41b1a5062

  ಪ್ರತಿಕ್ರಿಯೆ
 4. srinivasa ponnasamudra

  dana veera shoora karnana bagge neevu bareda abhimanada nekhana chendakinta chenda

  ಪ್ರತಿಕ್ರಿಯೆ
 5. kannadasongsdownload

  superb blog
  gud to see kannada blogs like this working from so many years 🙂
  and i want to to talk to u sir i need some help with my blog please contact me please

  ಪ್ರತಿಕ್ರಿಯೆ
 6. D.M.Sagar

  Interesting writing, though, a lot has been written on Karna already. Karna still emanates unsuppressed curiosity, probably because he merely represents ourselves since he was , confused, faulty in actions, pure in thoughts, lacked own identity, used, misused, emotional, and very much human!

  ಪ್ರತಿಕ್ರಿಯೆ
 7. Iynanda Prabhu

  ಶ್ರೀ ಜೋಗಿಯವರೇ, ಕರ್ಣನ ಕುರಿತ ನಿಮ್ಮ ಲೇಖನ ಹೃದಯವನ್ನು ತಟ್ಟಿತು. ಪಂಪ ಅರ್ಜುನನ್ನು ನಾಯಕನನ್ನಾಗಿರಿಸಿ ವಿಕ್ರಮಾರ್ಜುನ ವಿಜಯರಚಿಸಿದ. ಕುಮಾರವ್ಯಾಸ ಕೃಷ್ಣಚರಿತೆಯನ್ನು ಹೇಳಿದ. ಅವರಿಬ್ಬರೂ ಮನಕಲಕುವಂತೆ ಕರ್ಣನ ಬಗ್ಗೆ ಬರೆದಿದ್ದಾರೆ. ಆದರೆ ಕರ್ಣನನ್ನು ನಾಯಕನನ್ನಾಗಿಟ್ಟುಕೊಂಡು ಯಾರಾದರೂ ಬರೆದಿದ್ದಾರೆಯೆ, ಎನ್ನುವುದು ನನಗೆ ತಿಳಿಯದು. ಊರ್ಮಿಳೆಯನ್ನು ಕುರಿತು ರವೀಂದ್ರನಾಥ ಠಾಕೂರರು ಕಾವ್ಯ ಬರೆದಂತೆ ಕರ್ಣನನ್ನು ಕುರಿತ್ಯಾರೂ ಬರೆದಂತಿಲ್ಲ.
  ನೀವು ಇಲ್ಲಿ ಬರೆದಿರುವ ಲೇಖನ ಗಾತ್ರದಲ್ಲಿ ಚಿಕ್ಕದಾದರೂ ಮನಮುಟ್ಟುವಂತಿದೆ. ಕರ್ಣನ ಬಗ್ಗೆ ಕಲ್ಪಿಸಿಕೊಂಡದ್ದು rational ಆಗಿದ್ದು ನೈಜತೆಗೆ ಹತ್ತಿರವಾಗಿದೆ. ನನ್ಗಂತೂ ಬಹಳ ಮೆಚ್ಚಿಗೆಯಾಯಿತು. ಅಭಿನಂದನೆಗಳು.
  ಈ ನಿಮ್ಮ ಮಾತು ತುಂಬ ಸತ್ಯವಾದುದು: ‘ಮೆಚ್ಚಿಕೊಳ್ಳುವವರು ಎತ್ತರದಲ್ಲಿರುತ್ತಾರೆ, ಮೆಚ್ಚಿಕೆಗೆ ಒಳಗಾದವರು ಕೊನೆಯ ಮೆಟ್ಟಿಲಲ್ಲಿ ನಿಂತಿರುತ್ತಾರೆ.’
  ‘ನಿರಾಕರಿಸುವ ಶಕ್ತಿ ಕಳಕೊಂಡವನು ನಿರುಪಯುಕ್ತ…’ ಅಂತನ್ನುವುದೂ ನಿಜ. `No’ ಎಂದೆನ್ನುವುದು ಒ೦ದು ಕಲೆ; ಅದನ್ನು ಕರಗತ ಮಾಡಿಕೊಳ್ಳದವರು ಜೀವನದಲ್ಲಿ ಹೆಚ್ಚಿನದನ್ನು ಸಾಧಿಸಲಾರರು.

  ಪ್ರತಿಕ್ರಿಯೆ
  • ಜಿ೦ಕೆ ಸುಬ್ಬಣ್ಣ, ಪುತ್ತೂರು.

   ಕರ್ಣ ನಾಯಕನಾದ ಮಹಾರಥಿ ಕರ್ಣ ಎ೦ಬ ಯಕ್ಷಗಾನ ಪ್ರಸ೦ಗವನ್ನು ರಾತ್ರಿ ೧೦ ರಿ೦ದ ಬೆಳಗೆ ೬ ರವರೆಗೆ ೨೦-೩೦ ವರ್ಷ ಹಿ೦ದೆ, ಧರ್ಮಸ್ಠಳ ಮೇಳದವರು ಆಡುತ್ತಿದ್ದರು. ಹಲವು ದಶಕ ಪರ್ಯ೦ತ ಅವರ ಜನಪ್ರಿಯ ಪ್ರಸ೦ಗವಾಗಿತ್ತು. ಪುತ್ತೂರು ನಾರಾಯಣ ಹೆಗ್ಡೆಯವರ ಕುರುಕ್ಷೇತ್ರದ ಕರ್ಣ, ಅನೇಕ ಯಕ್ಷಗಾನ ರಸಿಕರ ಮನದಲ್ಲಿ ಇನ್ನೂ ಹಸಿರಾಗಿದೆ. ಕರ್ಣನ ವ್ಯಕ್ತಿತ್ವ ಕುರಿತು ಆಧುನಿಕ ವಿಮರ್ಶೆ ಕುತೂಹಲಕರವಾಗಿದೆ.

   ಪ್ರತಿಕ್ರಿಯೆ
  • ಜಿ೦ಕೆ ಸುಬ್ಬಣ್ಣ, ಪುತ್ತೂರು

   ಕರ್ಣನ ಬಾಲ್ಯದಿ೦ದ ಅ೦ತ್ಯದ ವರೆಗಿನ, ಯಕ್ಷಗಾನ ಪ್ರಸ೦ಗ ಮಹಾರಥಿ ಕರ್ಣ, ೨೦-೩೦ ವರ್ಷ ಹಿ೦ದೆ ಧರ್ಮಸ್ಥಳ ಮೇಳದವರ ಜನಪ್ರಿಯ ಇಡೀ ರಾತ್ರಿಯ ಸದಭಿರುಚಿಯ ಆಟ. ಪುತ್ತೂರು ನಾರಾಯಣ ಹೆಗ್ಡೆಯವರ ಕುರುಕ್ಷೇತ್ರ ಕರ್ಣ ಪಾತ್ರ ನನ್ನ೦ತಾ ಅನೇಕ ಯಕ್ಷಗಾನ ಅಭಿಮಾನಿಗಳಿಗೆ ಕಣ್ಣಿಗೆ ಕಟ್ಟುತ್ತದೆ. ಅ೦ತೆಯೇ ಸ೦ಸ್ಕೃತದಲ್ಲಿ ಕರ್ಣಭಾರಮ್, ಭಾಸನ ಪ್ರಸಿದ್ಧ ನಾಟಕ, ಇದರ ರ೦ಗ ಪ್ರಯೋಗ ನಾನು ನೋಡಿಲ್ಲ, ನಮ್ಮ ರಾಜ್ಯದಲ್ಲಿ ಖ೦ಡಿತ ಪ್ರಯೋಗವಾಗಿರಬಹುದು. ಇ೦ತಾ ಕರ್ಣನ ವ್ಯಕ್ತಿತ್ವದ ಆಧುನಿಕ ವಿಶ್ಲೇಷಣೆ ಕುತೂಹಲಕಾರಿಯಾಗಿತ್ತು.

   ಪ್ರತಿಕ್ರಿಯೆ
 8. srisri

  Dear Jogi,
  The original Vyasa Bharatha has a different story to tell about DVS (Daana Veera Shura) Karna. He was the root cause along with Shakuni in encouraging Duryodana, to have Draupadi’s Vastrapaharana done in the Kuru court. Out of 18 days of Kurukshetra battle, Karna did not take part in the war for the first 10 days, because he felt slighted by Bhisma who called him a Ardha-Rathi and vowed not to take part in the war, till Bhishma is the commander in chief of the Kaurava’s. This is the biggest let down for Duryodana, who had made him what he was. A lot has been written about Kunti abandoning Karna when he was baby and argue that this may have caused Karna to behave the way he did. But an interesting point is the same thing happened to another person, who was also abandoned at child birth by his parents, but grew up to be a Yugapurusha and Geetacharya. This is none other than Sri Krishna. But we still cling on to these misplaced notion that Karna has been wronged through out his life by everybody.

  ಪ್ರತಿಕ್ರಿಯೆ
 9. ವಸುಧೇಂದ್ರ

  ಪ್ರಿಯ ಜೋಗಿ,
  ಕರ್ಣನ ಬಗ್ಗೆ ನಿಮ್ಮ ಲೇಖನ ಆ ಪಾತ್ರದ ಬಗ್ಗೆ ಕೇವಲ ಭಾವುಕತೆಯಿಂದ ಬರೆದಂತಿದೆ. ಆದರೆ ಮೂಲಭಾರತದಲ್ಲಿ ಇಂತಹ ಚಿತ್ರಣವಿಲ್ಲ. ಕರ್ಣ ಮಹಾವೀರನೆಂಬ ಕಲ್ಪನೆಯೇ ತಪ್ಪೆನ್ನಿಸುತ್ತದೆ. ಹಲವಾರು ಬಾರಿ ಅವನು ಅರ್ಜುನನಿಂದ ಪರಾಭವಗೊಂಡ ಸನ್ನಿವೇಶಗಳು ಮಹಾಭಾರತದಲ್ಲಿ ಬರುತ್ತವೆ. (ಗೋಗ್ರಹಣ ಸನ್ನಿವೇಶ, ಗಂಧರ್ವರು ದುರ್ಯೋಧನನ್ನು ಕಟ್ಟಿಹಾಕಿದ ಸನ್ನಿವೇಶ ಕೆಲವು ಉದಾಹರಣೆಗಳು) ಬಾಲಕ ಅಭಿಮನ್ಯುವನ್ನು ಕೊಲ್ಲುವದರ ಹೊರತಾಗಿ ಅವನ ಪರಾಕ್ರಮ ಎಲ್ಲಿಯೂ ಅಷ್ಟಾಗಿ ಪ್ರಕಟವಾಗುವದಿಲ್ಲ. ಅವನನ್ನು ಭೀಷ್ಮ ಅರ್ಧರಥಿ ಎಂದು ಹೇಳುವುದೂ ಸರಿಯೆಂದು ಐರಾವತಿ ಕರ್ವೆ ಅಭಿಪ್ರಾಯ ಪಡುತ್ತಾರೆ. ಪೂರ್ಣರಥಿಯಾದವನಿಗೆ ರಥವನ್ನು ನಡೆಸುವ ವಿದ್ಯೆ ಗೊತ್ತಿರುತ್ತದೆ. ಆದರೆ ಸೂತಪುತ್ರನಾದರೂ ಕರ್ಣನಿಗೆ ರಥವಿದ್ಯೆ ತಿಳಿದಿರುವದಿಲ್ಲ. ಕೇವಲ ನಮ್ಮ ಜನಪ್ರಿಯ ಸಿನಿಮಾ, ಸಾಹಿತ್ಯದಲ್ಲಿ ಮಾತ್ರ ಕರ್ಣನನ್ನು ಮಿತಿಮೀರಿ ಹೊಗಳಿರುವುದು ಕಂಡು ಬರುತ್ತದೆ.
  ವಸುಧೇಂದ್ರ

  ಪ್ರತಿಕ್ರಿಯೆ
  • Jogi

   ಪ್ರಿಯ ವಸುಧೇಂದ್ರ,
   ನಿಮ್ಮ ದೃಷ್ಟಿಕೋನ ನನಗೆ ಅರ್ಥವಾಗುವುದಿಲ್ಲ. ನಾನು ಬರೆಯುವುದು ನನ್ನ ಕರ್ಣನ ಕುರಿತು. ಮಹಾಭಾರತದಲ್ಲಿ ಬರುವ ಕರ್ಣನ ಪಾತ್ರವನ್ನು ಹೇಗಿದೆಯೋ ಹಾಗೆ ಬರೆಯುವುದಾದರೆ, ಬರೆಯುವ ಅಗತ್ಯವೇ ಇಲ್ಲ. ಫೋಟೋಗ್ರಫಿಗೂ ಕಲಾವಿದ ಚಿತ್ರಿಸುವ ಚಿತ್ರಕ್ಕೂ ಇರುವ ವ್ಯತ್ಯಾಸ ಅದು. ನನ್ನ ಗ್ರಹಿಕೆಗೆ ಸಿಕ್ಕ ಕರ್ಣನನ್ನು ನನಗೆ ತೋರಿದಂತೆ ನಾನು ಚಿತ್ರಿಸಿಕೊಂಡಿದ್ದೇನೆ. ನಾನು ಕೇಳಿದ್ದು, ಓದಿದ್ದು, ಯಕ್ಷಗಾರದಲ್ಲಿ ಕಂಡಿದ್ದು, ನನ್ನ ಸುತ್ತ ಜನಪ್ರಿಯವಿದ್ದ ಕರ್ಣನ ವ್ಯಕ್ತಿತ್ವ, ನನ್ನೊಳಗೆ ಬದುಕಿರುವ ಕರ್ಣನ ಪಾತ್ರ ಇವೆಲ್ಲ ಸೇರಿಕೊಂಡು ಈ ಚಿತ್ರ ಸೃಷ್ಟಿಯಾಗಿದೆ. ಇದು ಪುರಾಣಕ್ಕೋ, ಇತಿಹಾಸಕ್ಕೋ ನಿಷ್ಠವಾಗಿಲ್ಲ, ನಿಷ್ಠವಾಗಿರಬೇಕಾಗಿಲ್ಲ. ನೀವು ಗೆಳೆಯನಾದ್ದರಿಂದ ಕೊಂಚ ಸಲಿಗೆ ತೆಗೆದುಕೊಂಡು ಹೇಳುತ್ತಿದ್ದೇನೆ, ಪ್ರಬಂಧ ಮತ್ತು ಕತೆಗಳನ್ನು ಸಾಯಿಸುತೆಯಷ್ಟೇ ಭಾವುಕವಾಗಿ ಬರೆಯುವ ನೀವು, ಕೆಲವೊಮ್ಮೆ ಅನಗತ್ಯವಾಗಿ ವಿಚಾರವಾದಿಯ ಹಾಗೆ ಆಡುತ್ತೀರಪ್ಪ. ಭಾವುಕತೆಯಿಂದ ಬರೆದಂತಿದೆ ಅನ್ನುವುದನ್ನು ನೀವು ಆಕ್ಷೇಪವಾಗಿ ಹೇಳಿದಂತಿದೆ, ನಾನು ಅದನ್ನು ಮೆಚ್ಚುಗೆಯೆಂದೇ ಪರಿಗಣಿಸುತ್ತೇನೆ. ಬಹುಶಃ ನಿಮಗೆ ಪಾತ್ರವೊಂದು ಒಬ್ಬ ವ್ಯಕ್ತಿಯೊಳಗೆ ಬೆಳೆಯುವ, ಬದುಕುವ ಸಂಗತಿ ಅರ್ಥವಾಗುವುದಿಲ್ಲ ಎಂದು ಕಾಣುತ್ತದೆ. ವ್ಯಾಸರ ಕೃಷ್ಣನಿಗೂ ಕುಮಾರವ್ಯಾಸನ ಕೃಷ್ಣನಿಗೂ ಭೈರಪ್ಪನವರ ಕೃಷ್ಣನಿಗೂ ಬನ್ನಂಜೆ ಗೋವಿಂದಾಚಾರ್ಯರ ಕೃಷ್ಣನಿಗೂ ನನ್ನ ಕೃಷ್ಣನಿಗೂ ಪುತಿನರ ಕೃಷ್ಣನಿಗೂ ವ್ಯತ್ಯಾಸವಿದೆ. ನನ್ನ ಮಿತಿ, ಕಲ್ಪನೆ, ಗ್ರಹಿಕೆ ಮತ್ತು ಅನುಭವಕ್ಕೆ ತಕ್ಕಂತೆ ಪುರಾಣದ ಪಾತ್ರಗಳು ನನ್ನೊಳಗೆ ಮೂಡುತ್ತಾ ಬೆಳೆಯುತ್ತಾ ಹೋಗುತ್ತವೆ. ಅಲ್ಲವೇ.

   ಪ್ರತಿಕ್ರಿಯೆ
   • ವಸುಧೇಂದ್ರ

    ಪ್ರಿಯ ಜೋಗಿ,
    ನಿಮ್ಮ ಕರ್ಣನ ಬಗ್ಗೆ ನನಗೆ ಬೇಸರವಿಲ್ಲ. ನೀವು ಹೇಳಿರುವದನ್ನೇ ನಾನು ಹೇಳಿದ್ದೆನಲ್ಲವೆ? ನಿಮ್ಮ ಕರ್ಣ ಜನಪ್ರಿಯ ಮಹಾಭಾರತದಿಂದ ಮೂಡಿದವನೆಂದು, ಆದ್ದರಿಂದಲೇ ಸ್ವಲ್ಪ ಜಾಸ್ತಿ ಭಾವುಕನಾಗಿ ಮೂಡಿರುವನೆಂದು! ಅದಕ್ಕೆ ಬೇಸರವೇಕೆ? ವ್ಯಾಸರ ಭಾರತದಲ್ಲಿ ಬರುವ ಕರ್ಣನ ಬಗ್ಗೆ ನಾನು ನಿಮಗೆ ತಿಳಿಸಿದೆ, ಅಷ್ಟೆ.
    ನನ್ನ ಪ್ರಬಂಧ ಮತ್ತು ಕತೆಗಳ ವಿಷಯ ಇಲ್ಲಿ ಬೇಡ. ವಿಷಯಾಂತರವಾಗುತ್ತದೆ. (ನಗು)
    ವಸುಧೇಂದ್ರ

    ಪ್ರತಿಕ್ರಿಯೆ
   • venkatakrishna.k.k.

    ಜೋಗಿಯವರೇ ನಿಮ್ಮ ಅಭಿಪ್ರಾಯ ನೂರಕ್ಕೆ ನೂರು ಸರಿ.
    ಮಹಾ ಕಾವ್ಯಗಳ ಯಶಸ್ಸು ಇರುವುದೇ ಅಲ್ಲಿ.
    ಎಲ್ಲರ ಒಳನೋಟಕ್ಕೂ ಅಲ್ಲಿ ಅವಕಾಶಗಳಿವೆ,ಅದು ಎಷ್ಟು ಅರ್ಥವತ್ತಾಗಿ (ಸುಂದರವಾಗಿ) ಮೂಡಿದೆ ಎನ್ನುವುದೇ ನಮಗೆ ಮುಖ್ಯವಾಗಬೇಕು.
    ಹೀಗೆಯೇ ಇರಬೇಕು ಎಂದು ಬಯಸುವುದಾದರೆ ಹೊಸ ಲೇಖನಗಳ ಅಗತ್ಯವಿಲ್ಲ.
    ಅಂತಹ ಕಟ್ಟುಪಾಡುಗಳಿಂದ ಹೊಸ ಹೊಸ ಕಲ್ಪನೆಗಳೂ… ಮೂಡಿಬರಲು ಸಾಧ್ಯವಿಲ್ಲ.
    ಮತ್ತು
    ಆ ಸ್ವಾತಂತ್ರ್ಯ ಇಲ್ಲದಿದ್ದರೆ ನಮ್ಮ ಬರಹಗಳಿಗೆ ಅರ್ಥವೂ ಉಳಿಯುವುದಿಲ್ಲ.

    ಪ್ರತಿಕ್ರಿಯೆ
   • RJ

    ಹ್ಹ ಹ್ಹ ಹ್ಹ.. ಚೆನ್ನಾಗಿದೆ ಇಬ್ಬರ ಸಂಭಾಷಣೆ.
    😉

    ಪ್ರತಿಕ್ರಿಯೆ
  • D.M.Sagar

   I fully agee with Vasudendra , furthermore, Jogi seems to be often lost himself in icons and images. The consequence is, it doesn’t give justice to the original character. Imagine, in another 50 years of far future, some other “Jogi” might appear, who has a totally different image of the contemporary Jogi!. It’s not fully imaginative, nor original either!.

   ಪ್ರತಿಕ್ರಿಯೆ
 10. ಚೈತನ್ಯ ಮಜಲುಕೋಡಿ

  ಪ್ರೋ.ಮಲ್ಲೇಪುರಂ ಸಂಪಾದಿಸಿರುವ ಶಂಬಾರವರ ಆಯ್ದ ಲೇಖನಗಳು ಅಥವಾ ಶಂಬಾ ಸಮಗ್ರ ಸಂಪುಟದಲ್ಲಿ ಅವರು ನಮ್ಮ ಮಹಾಕಾವ್ಯಗಳಲ್ಲಿ ಕರ್ಣನ ವಿವಿಧ ಚಿತ್ರಣದ ಬಗ್ಗೆ ಸವಿಸ್ತಾರವಾಗಿ ವಿವರಿಸಿದ್ದಾರೆ. ಹಾಗೆ ನೋಡಿದರೆ ವ್ಯಾಸ ಭಾರತದ ವಿವರಣೆ ಅತ್ಯಂತ ಖಡಕ್. ಅದರಲ್ಲಿ ಪ್ರಕ್ಷಿಪ್ತಗಳು ಇವೆಯಾದರೂ ಯಾವುದು ಜೊಳ್ಳು ಎಂಬುದನ್ನು ಅವುಗಳ ನಾಟಕೀಯ ನಡೆಯಿಂದ ಮನುಷ್ಯ ಸ್ವಭಾವದ ನಡುವಳಿಕೆಗಳ ಅನುಭವದಿಂದ ಊಹಿಸಬಹುದು. ವಸುಧೇಂದ್ರರ ಮಾತು ಕೂಡ ಸರಿ. ದ್ರೌಪದಿ ಸ್ವಯಂವರ, ದ್ವೈತ ವನ ಪ್ರಸಂಗ,ಗೋ ಗ್ರಹಣ ಪ್ರಸಂಗಗಳಲ್ಲಿ ಅವನು ಸೋತ. ಅರ್ಧ ರಥಿ ಎಂದು ಭೀಷ್ಮನಿಂದ ಖಂಡನೆಗೊಳಗಾದ. ಆದರೆ ಕುಂತಿಗೆ ತನ್ನೈವರು ಮಕ್ಕಳನ್ನು ಉಳಿಸುವುದು ಮುಖ್ಯ ಉದ್ದೇಶವಾಗಿತ್ತು. ಕರ್ಣನು ದುರ್ಯೋಧನನ ಜತೆ ಸೇರಿ ದುರ್ಬುದ್ಧಿ ಉಳ್ಳವನಾಗಿದ್ದಾಳೆಂದು ಅವಳು ಮಂತ್ರಾಲೋಚನೆ ಮಾಡಿದಳು. ಭೀಷ್ಮ ದ್ರೋಣರಿಗಿಂತಲೂ ಕರ್ಣನು ಅವಳಿಗೆ ತಲೆನೋವಾದನು. ಅವಳು ಕರ್ಣನ ಭೇಟಿ ಮಾಡುವ ಪ್ರಸಂಗವು ಪಂಪ ಮತ್ತು ಗದುಗಿನ ಭಾರತಕ್ಕಿಂತ ಬಹಳ ವಾಸ್ತವ. ತಂದೆ ಬರುವುದಿಲ್ಲ, ಕುಂತಿಯನ್ನಾತ ಅತಿಯಾಗಿ ಗೌರವಿಸುವುದಿಲ್ಲ. ಬಿಟ್ಟ ಬಾಣ ತೊಡುವ ವಚನವಿಲ್ಲ. ಬದಲಾಗಿ ಬಿಚ್ಚುನುಡಿಯಿಂದ ಬೈಯ್ಯುತ್ತಾನೆ. ಕೊನೆಗೆ ಹೊರಡುವಾಗಲೂ ಕುಂತಿಯು “ನಾಲ್ಕು ಜನರಿಗೆ ಅಭಯ ನೀಡಿರುವುದು ನಿನಗೆ ನೆನಪಿರಲಿ” ಎಂಬುದನ್ನೇ ಹೇಳುತ್ತಾಳೆ!!. ಗದುಗಿನ ಭಾರತದಲ್ಲಿ ಅವಳ ಮಾತನ್ನು “ಹಸಾದ” ಎಂದು ಸ್ವೀಕರಿಸುತ್ತಾನೆ. ಕೆಲವೊಂದು ಘಟನಾವಳಿಗಳಿಗೆ ಅವನು ಸಿದ್ಧನಾಗಿದ್ದ. ಕೃಷ್ಣನು ಅವನನ್ನು ಓಲೈಸುವಾಗಲೂ “ನನಗೆ ಅವೆಲ್ಲ ಗೊತ್ತು, ನನಗೆ ಉಪಕಾರ ಸ್ಮರಣೆ ಮುಖ್ಯ” ಎಂದೇ ಹೇಳಿದ. ಆದರೆ ಆತ ಆದರ್ಶದ, ನಿಷ್ಠೆಯ ಹುಚ್ಚಿನಲ್ಲಿ ವಿವೇಚನೆಯನ್ನು ಯುಗಧರ್ಮವನ್ನು ಮರೆತ. ಪಾಂಚಾಲಿಯನ್ನು ತೊಡೆಯ ಮೇಲೆ ಕುಳಿತುಕೋ ಎಂದ. ಶಲ್ಯ ಗುರಿ ಸರಿಯಿಲ್ಲ ಎಂಬುದನ್ನು ಔದಾಸೀನ್ಯದ ದುರಹಂಕಾರದಲ್ಲಿ ತಳ್ಳಿ ಹಾಕಿದ. ಮಿತ್ರನ ದುರ್ವರ್ತನೆಯನ್ನು ಕಡಿಮೆ ಮಾಡುವುದರ ಬದಲಾಗಿ ಕಣ್ಣಿಗೆ ಸೇವಾನಿಷ್ಠೆಯ ಪಟ್ಟಿ ಕಟ್ಟಿಕೊಂಡು ತಾನೂ ಕುರುಡನಾದ. ದುಷ್ಟ ಚತುಷ್ಟಯರಲ್ಲಿ ಒಬ್ಬನಾದ. ಆದ್ದರಿಂದ “ಒಮ್ಮೊಮ್ಮೆ ಹುಂಬನಂತೆ, ಮತ್ತೊಮ್ಮೆ ದಾರಿ ತಪ್ಪಿದವನಂತೆ, ಕೆಲವೊಮ್ಮೆ ಸೊರಗಿದವನಂತೆ, ” ಅಂತ ನೀವು ಹೇಳೋದು ಕೂಡಾ ಸರಿ. ಅವನು ಅರ್ಜುನನ ಮಟ್ಟದ ಮಹಾರಥಿ ಆಗಿರಲಿಲ್ಲ ಅನ್ನೋದು ಕೂಡಾ ಸರೀನೆ.
  ಸತ್ಯಕಾಮರ “ಆಹುತಿ” ಕೃತಿ ಅತ್ಯಂತ ಕ್ರಿಯಾತ್ಮಕವಾಗಿ ಅವರ ಅದ್ಭುತ ಶೈಲಿಯಿಂದ ನಮಗೆ ಹೊಸ ಅನುಭವ ಕೊಡುತ್ತದೆ. ಭಾವುಕನಾಗದೇ ನಿರಪೇಕ್ಷವಾಗಿ ಯೋಚಿಸಿದರೆ ಅವನು ಬದುಕಿನಲ್ಲಿ ಅನುಭವಿಸಿದ ಸಂಕೀರ್ಣತೆಯ ಅನುಭವ ನಮಗೆ ಆಗುತ್ತೆ. ಏನಂತೀರ ಜೋಗಿ ಮತ್ತು ವಸುಧೇಂದ್ರರವರೇ?

  ಪ್ರತಿಕ್ರಿಯೆ
  • ವಸುಧೇಂದ್ರ

   ಪ್ರಿಯ ಚೈತನ್ಯರವರೆ,
   ಹೆಚ್ಚಿನ ವಿವರಗಳನ್ನು ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು.
   ವಸುಧೇಂದ್ರ

   ಪ್ರತಿಕ್ರಿಯೆ
 11. ಸಿದ್ಧರಾಮ ಹಿರೇಮಠ

  ಪ್ರಿಯ ಜೋಗಿಯವರೆ,
  ಕರ್ಣನ ಪಾತ್ರದ ವಿವಿಧ ಮಗ್ಗುಲುಗಳನ್ನು ನಿಮ್ಮ ದೃಷ್ಟಿಯಲ್ಲಿ ವಿವರಿಸಿದ್ದೀರಿ. ಪಂಪ ಹೇಳುವಂತೆ ಕರ್ಣನ ಪಾತ್ರ ’ನನ್ನಿಯೋಳ್ ಇನತನಯಂ’ ಎಂಬಂತೆ ಸತ್ಯವಾಕ್ಯಕ್ಕೆ ತಪ್ಪದೆ ನಡೆಯುವವನು. ಹೀಗಾಗಿಯೇ ಪ್ರತಿ ಸಂದರ್ಭದಲ್ಲಿಯೂ ಕರ್ಣ ತನ್ನ ಮಾತಿಗೆ ಕಟ್ಟುಬಿದ್ದು ದುರಂತ ನಾಯಕನೆನಿಸುತ್ತಾನೆ. ವೇಷ ಹಾಕಿಕೊಂಡು ಬಂದ ಇಂದ್ರನಿಗೆ ತನ್ನ ಕವಚ, ಕುಂಡಲಗಳನ್ನು ಕೊಡುತ್ತಾನೆ, ತನ್ನ ತಾಯಿ ಕುಂತಿಗೆ ಸಹೋದರರ ಪ್ರಾಣ ಭಿಕ್ಷೆಯನ್ನೇ ಕೊಡುತ್ತಾನೆ, ವಿದ್ಯೆ ಕಲಿಯಲು ಹೋಗಿ ಪರಶುರಾಮರ ಬಳಿ ಶಾಪ ಪಡೆದು, ಯುದ್ದದ ಕೊನೆಯ ಸಂದರ್ಭದಲ್ಲಿ ಮಂತ್ರಗಳು ನೆನಪಿಗೆ ಬಾರದೇ ಬಲಿಯಾಗುತ್ತಾನೆ. ಇಲ್ಲೆಲ್ಲ ಆತನ ಸತ್ಯವಾಕ್ಯವೇ ಮುಳುವಾಗಿದೆ ಎನಿಸುವುದಿಲ್ಲವೇ? ನನಗೆನಿಸಿದಂತೆ ಕರ್ಣ ಇಡೀ ಮಹಾಭಾರತದಲ್ಲಿ ದುರಂತ ನಾಯಕನೆನಿಸಿಕೊಳ್ಳುತ್ತಾನೆ. ದುಷ್ಟಕೂಟದಲ್ಲಿ ಅವನೂ ಒಬ್ಬನಾಗಿರಬಹುದಾದರೂ ಅವನು ದುಷ್ಟನಾಗುವಂತೆ ಮಾಡಿದ್ದೇ ದುರ್ಯೋಧನ. ಗೆಳೆತನದ ನೆಪದಲ್ಲಿ ಪಾಂಡವರ ವಿರುದ್ಧ ನಿಲ್ಲಬಲ್ಲ ವೀರ ಕರ್ಣ ಎಂಬುದನ್ನು ದುರ್ಯೋಧನ ಚೆನ್ನಾಗಿಯೇ ಮನವರಿಕೆ ಮಾಡಿಕೊಂಡಿದ್ದ ಎನ್ನಿಸುತ್ತದೆ. ಗೆಳೆತನವನ್ನು ಸ್ವಾರ್ಥಕ್ಕೆ ಬಳಸಿಕೊಂಡವನು ದುರ್ಯೋಧನ. ಅವನನ್ನು ನಂಬಿ ಅಥವಾ ಗೆಳೆತನವನ್ನೇ ನಂಬಿ ಕರ್ಣ ಬಲಿಯಾದ ಎನ್ನಬಹುದೇ?

  ಪ್ರತಿಕ್ರಿಯೆ
  • ಚೈತನ್ಯ ಮಜಲುಕೋಡಿ

   ಸಿದ್ಧರಾಮರ ಮಾತು ಎರಡೂ ರೀತಿಯಲ್ಲಿ ಸರಿ. ಕೃಷ್ಣ ಮಹಾಭಾರತದ ನೈತಿಕ ಅಥವಾ ವಿವೇಚನೆಯುಳ್ಳ ರಾಜಕಾರಣಿಯಾದರೆ, ಧುರ್ಯೋಧನ ಮತ್ತು ಶಕುನಿ ಕೃತಿಮ ನಡೆಯುಳ್ಳವರು. ಕರ್ಣನು ಭಾರತದ ಬಲಿಪಶು. ಅತ್ತ ಭೀಮನು “ನೀನು ಸೂತಪುತ್ರ” ಎಂದು ಯುದ್ಧ ಕೌಶಲ ಪ್ರದರ್ಶನದಲ್ಲಿ ಅವನನ್ನು ಅವಹೇಳನ ಮಾಡಿದಾಗಲೇ ದುರ್ಯೋಧನ ಅವನ ಸಖ್ಯ ಬೆಳೆಸಿದ. ಕರ್ಣನನ್ನು ಎತ್ತಿ ಕಟ್ಟಿ ಹರಕೆಯ ಕುರಿ ಮಾಡಿದ. ಧರ್ಮರಾಯ ಬರೇ ಕಾನೂನಿನ ಪಾಲಕನಾಗಿದ್ದ. ಧರ್ಮದ್ದಲ್ಲ. ಇಲ್ಲದಿದ್ದರೆ ಅವನೇ ಕರ್ಣನನ್ನು ಸ್ವಾಗತಿಸಬೇಕಿತ್ತು. ಒಪ್ಪಿಕೊಳ್ಳಬೇಕಿತ್ತು. ಯಾರಿಗೂ ಬೇಡವಾದ ಕೂಸು ತನ್ನ ಆತ್ಮ ಸಂಘರ್ಷವನ್ನು ತಾಳದೆ ಪರಶುರಾಮರ ಬಳಿ ಸುಳ್ಳು ಹೇಳಿದ್ದು ಅವನ ತಪ್ಪಲ್ಲ. ಅದು ಆವತ್ತಿನ ಲೋಕಧರ್ಮದ ಹಿನ್ನಡೆ. ರಾಮನು ಅಗ್ನಿದಿವ್ಯದಲಿ ಪುರಸ್ಕೃತಳಾದ ಸೀತೆಯನ್ನು ಲೋಕಾಪವಾದಕ್ಕೆ ಪಕ್ಕಾಗಿ ಕಳುಹಿಸಿದಂತೆ. ದುರ್ಯೋಧನನ ಕೈಗೆ ಸಿಕ್ಕಿದ್ದು ಕರ್ಣನ ದುರಾದೃಷ್ಟ.ಅವನಿಗೆ ಕರ್ಣನೂ ಬೇಕು, ಏಕಲವ್ಯನೂ ಬೇಕು. ಶಂಬಾರವರು ಕರ್ಣನು ಸಿಕ್ಕಿಹಾಕಿಕೊಂಡದ್ದನ್ನು “ಜೋಳಿನ ಪಾಳಿ” ಎಂದು ಕರೆದಿದ್ದಾರೆ.ದ್ರೋಣ, ಕೃಪ, ಅಶ್ವತ್ಥಾಮ ಮುಂತಾದವರ ಕಥೆಯೂ ಅದೆಯೇ. ವೀರನಾದ ಕರ್ಣನಿಗೆ ದಲಿತನೆಂಬ ಶೋಷಣೆಯೂ ಜೊತೆಯಲ್ಲಿತ್ತು. ಕರ್ಣನಿಗೆ ಅಂಗರಾಜ್ಯವ ಕೊಟ್ಟು ಅವನ ಹಾರಾಟ ಹೋರಾಟವನ್ನು ತನ್ನ ನಡೆಯಾಗಿ ದುರ್ಯೋಧನ ನಡೆಸಿದ. ಬಂಡಾಯವೆದ್ದ ಸಾಹಿತಿ, ಸಮಾಜ ಸುಧಾರಕರಿಗೆ ವಿಧಾನ ಪರಿಷತ್ ಸದಸ್ಯರಾಗಿಯೋ, ಇನ್ನೇನೋ ಮಾಡಿ ಅವರ ನಾಲಗೆ ಮೊಟಕು ಮಾಡುವುದಿಲ್ಲವೇ ಹಾಗೆ……. ಕರ್ಣ ರಾಜಕೀಯದ ನಡೆಯನ್ನು ಅರಿಯದಯೇ ದುರಂತ ಅಂತ್ಯ ಕಂಡ. “ಅವನೊಬ್ಬ ಹುಚ್ಚುಖೋಡಿ” ಅಂತ ನಮ್ಮ ಸ್ನೇಹಿತರನ್ನು ನೆನೆದಂತೆ ಕರ್ಣ ನಮ್ಮೊಳಗೆ ಬರುತ್ತಾನೆ. ಸೀದಾ ಎದೆಯೊಳಗೆ ಕುಂತು ಕಿಚ್ಚು ಹಚ್ಚುತ್ತಾನೆ.

   ಪ್ರತಿಕ್ರಿಯೆ
 12. Nataraja

  ಈ ಇಬ್ಬರೂ ಲೇಖಕರು ಸಣ್ಣ ವಿಷಯವನ್ನೇ ಬೆಳೆಸಿರುವುದನ್ನು ನೋಡಿದರೆ ಇದು ಮಕ್ಕಳ ಜಗಳದಂತಿದೆ. ಇದು ಬೆಳವಣಿಗೆಯ ಲಕ್ಷಣವಲ್ಲ. ಈ ಇಬ್ಬರೂ ನಾವು ತಿಳಿದಿರುವಂತೆ ಕನ್ನಡದ ಪ್ರಮುಖ ಬರಹಗಾರರು. ಇಂಥ ಕೋಳಿ ಜಗಳವನ್ನು ಮುಂದುವರೆಸುವುದು ಬೇಡ. ಇಲ್ಲಿ ಪರಸ್ಪರ ಒಬ್ಬರಿಗೊಬ್ಬರು ಕಾರಿಕೊಂಡಿರುವುದು ಸ್ಪಷ್ಟವಿರುವುದರಿಂದ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಥ್ಯಾಂಕ್ಸ್.

  ಪ್ರತಿಕ್ರಿಯೆ
  • ಚೈತನ್ಯ

   ವಿಷಯ ಸಣ್ಣದಲ್ಲ. ಒಬ್ಬರಿಗೆ ಅದು ಸೃಜನಶೀಲತೆಯ ಪ್ರಶ್ನೆಯಾದರೆ ಇನ್ನೊಬ್ಬರಿಗೆ ತಾವು ನಂಬಿರುವ ಇತಿಹಾಸದ ಹೇಳಿಕೆ ಮತ್ತು ಪಾತ್ರ ಪೋಷಣೆಯ ಪ್ರಶ್ನೆ. ಅಷ್ಟಕ್ಕೂ ಅವರೇನು ಬಡಿದಾಡಿಕೊಳ್ಳಲಿಲ್ಲ. ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ವಿರೋಧಿಸಿದವರ ಆಕ್ಷೇಪಣೆಯನ್ನೂ ಗೌರವದಿಂದ ತೆಗೆದುಕೊಂಡಿದ್ದಾರೆ. ಅದರಲ್ಲಿ ಕಾರಿಕೊಳ್ಳುವುದೇನೂ ಇಲ್ಲ. ಸ್ಪಷ್ಟನೆಯಲ್ಲಿ ಅವಹೇಳನೆಯಿದ್ದರೆ ಅದು ಕಾರಿಕೊಳ್ಳುವುದು. ಅವರ ಕ್ಷೇತ್ರಪ್ರಜ್ಞೆ ಅವರಲ್ಲಿದುದರಿಂದಲೇ ನಕ್ಕು ಸುಮ್ಮನಾಗಿದ್ದಾರೆ. ತಮ್ಮ ಅಸ್ಮಿತೆಯನ್ನು ವ್ಯಕ್ತಪಡಿಸುವುದರ ಜೊತೆಗೆ ಎದುರಿನವರ ಅಭಿಪ್ರಾಯವನ್ನೂ ಕೇಳಿದ್ದಾರೆ. ಬರಹಗಾರನ ತಾಳ್ಮೆ ಮತ್ತು ಸ್ವೀಕಾರ ಮನೋಭಾವ ಇಬ್ಬರಲ್ಲೂ ಚೆನ್ನಾಗಿಯೇ ವ್ಯಕ್ತವಾಗಿದೆ. ನನಗಂತೂ ಏನೂ ಜಗಳ ಕಾಣಲಿಲ್ಲ. ಭಿನ್ನಾಭಿಪ್ರಾಯ ಸಹಜ ಮತ್ತು ಅಗತ್ಯ ಕೂಡ. ಆದರೆ ಅದು ಮನಸ್ತಾಪಕ್ಕೆ ತಿರುಗಬಾರದು. ಇಲ್ಲಿ ಅಂತದ್ದೇನೂ ನಡೆದಿಲ್ಲ. ಇದು ಅವರಿಬ್ಬರ ಸ್ನೇಹಶೀಲ ಮನೋಧರ್ಮವನ್ನು ತೋರಿಸುತ್ತದೆ. ಆರೋಗ್ಯಕರ ಚರ್ಚೆ ಯಾವತ್ತೂ ಮತ್ತೂ ಹೆಚ್ಚಿನದನ್ನು ತಿಳಿಸುತ್ತದೆ.

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: