ಜೋಗಿ ಬರೆಯುತ್ತಾರೆ : ಕವಿ ಒಳಗಿದ್ದಾನೆ, ಹೊರಗಿರುವವನು ಭವಿ

-ಜೋಗಿ
ನನ್ನೊಳಗಿನ ಕವಿಬೇಂದ್ರೆಗೆ ನಮಸ್ಕಾರ ಎಂದು ಅಂಬಿಕಾತನಯದತ್ತ ಬರೆದುಕೊಂಡಿದ್ದರು. ಇದನ್ನು ನಿಜಮಾಡಲು ಹೋಗಿ ಸುಮತೀಂದ್ರ ನಾಡಿಗರು ಕವಿ ಸುಮತೀಂದ್ರ ನಾಡಿಗರ ಸಂದರ್ಶನ ಮಾಡಿ ಪ್ರಕಟಿಸಿದರು.
ವೀರನಾರಾಯಣ ಕವಿ, ನಾನು ಕೇವಲ ಲಿಪಿಕಾರ ಮಾತ್ರ ಎಂದು ಕುಮಾರವ್ಯಾಸ ಬರೆದುಕೊಂಡ.
ನನ್ನ ಗುಪ್ತ ಪ್ರೇಯಸಿಗೋಸ್ಕರ ಬರೆಯುತ್ತೇನೆ ಎಂದು ಆಡೆನ್ ಘೋಷಿಸಿದ. ನನಗೆ ಜಗತ್ತು ಸಾಕಾಗಿದೆ. ಸದಾ ಅಮಲಿನಲ್ಲಿರಬೇಕು ನಾನು. ಅದಕ್ಕೋಸ್ಕರ ಬರೆಯುತ್ತಿದ್ದೇನೆ ಎಂದು ಬೋದಿಲೇರ್ ಹೇಳಿದ.
ನನಗೆ ಜಗತ್ತು ಅಸ್ಪಷ್ಟವಾಗಿ ಕಾಣಿಸುತ್ತಿದೆ. ಅದನ್ನು ಸ್ಪಷ್ಟಪಡಿಸಿಕೊಳ್ಳಲಿಕ್ಕೆ ನಾನು ಬರೆಯುತ್ತೇನೆ ಎಂದು ಗೇಬ್ರಿಯಲ್ ಗಾರ್ಸಿಯಾ ಮಾರ್ಕೆಸ್ ಹೇಳುತ್ತಾರೆ.
ಗೆಳೆಯನಿಗೋಸ್ಕರ ಬರೆದೆ ಎಂದು ಷೇಕ್ಸ್‌ಪಿಯರ್, ಅವಮಾನವನ್ನು ಮೀರುವುದಕ್ಕೆ ಬರೆದೆ ಎಂದು ಚಿನುವಾ ಅಚಿಬೆ, ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದೆ, ಬರಹಗಾರನಾದೆ ಎಂದು ಮಾರ್ಕ್ ಟ್ವೈನ್, ಭಾಷೆಯ ಜೊತೆ ಆಟ ಆಡುವುದಕ್ಕೆಂದೇ ಬರೆದೆ ಎಂದು ಆಗ್ಡನ್ ನ್ಯಾಶ್, ಮೌನ ಮುರಿಯುವುದಕ್ಕೆ ಬರೆದೆ ಎಂದು ಜಿ ಎಸ್ ಸದಾಶಿವ, ಅಪ್ಪನನ್ನು ಮೀರುವುದಕ್ಕೆಂದೇ ಬರೆದೆ ಎಂದು ಕಾಫ್ಕಾ ತಮ್ಮ
ತಮ್ಮ ಬರಹಕ್ಕೆ ಕಾರಣ ಕೊಟ್ಟುಕೊಂಡಿದ್ದಾರೆ. ಅವರವರ ಕಾರಣ ಅವರದು.ಆದರೆ ವಿನಾಕಾರಣ ಯಾರೂ ಬರೆಯುವುದಿಲ್ಲ ಅನ್ನುವುದಂತೂ ನಿಜ.

ಬರಹಕ್ಕೆ ಸ್ಪೂರ್ತಿ ಏನು? ಎಲ್ಲಿಂದ ಶುರುಮಾಡಬೇಕು?
ಯಾವುದರಿಂದ ಆರಂಭಿಸಬೇಕು? ಕತೆ ಬರೆಯಲಾ, ಕವಿತೆ ಬರೆಯಲಾ? ಕವಿತೆ ಬರೆಯುವುದಕ್ಕೆ ವಸ್ತು ಏನಿರಬೇಕು? ಬಡತನದ ಬಗ್ಗೆ ಬರೆಯುವುದು ಒಳ್ಳೆಯದಾ? ಹಳ್ಳಿ ಕತೆಗಳನ್ನು ಯಾರಾದರೂ ಓದುತ್ತಾರಾ? ಹೊಸದಾಗಿ ಬರೆಯಲು ಆರಂಭಿಸಬೇಕು ಅಂದುಕೊಂಡಿರುವ ತರುಣ ಮಿತ್ರರು ಇಂಥ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ.
ನೀವು ಹಿರಿಯ ಲೇಖಕರ ಬಗ್ಗೆ ಬರೆಯುತ್ತೀರಿ. ಅವರಿಗೆ
ಬರವಣಿಗೆ ಹೇಗೆ ಸಿದ್ಧಿಸಿತು? ಅವರು ಬರೆಯುವುದಕ್ಕೆ ಆರಂಭಿಸಿದ್ದು ಯಾಕೆ? ಆರಂಭದಲ್ಲಿ ಅವರನ್ನೂ ಇಂಥ ಪ್ರಶ್ನೆಗಳು ಕಾಡಿದ್ದುಂಟಾ ಎಂಬುದು ಮತ್ತೆ ಕೆಲವರ ಜಿಜ್ಞಾಸೆ. ಇನ್ನೊಂದಷ್ಟು ಮಂದಿ ಇನ್ನೂ ಮುಂದೆ ಹೋಗಿ ಕವಿತೆ ಬರೆಯುವುದು ಹೇಗೆ? ಯಾವುದರ ಮೇಲೆ ಬರೆಯಬೇಕು ಎಂಬ ಮೂಲಭೂತ ಪ್ರಶ್ನೆಯನ್ನೂ ಕೇಳುತ್ತಾರೆ.
ಹೀಗೆ ಪ್ರಶ್ನಿಸುವ ಎಲ್ಲರಿಗೂ ಬರ್ನಾರ್ಡ್ ಷಾ ಕೊಟ್ಟ ಸಲಹೆ ಚೆನ್ನಾಗಿದೆ. ಹೇಗೆ, ಏನು, ಯಾಕೆ, ಎಲ್ಲಿಂದ ಎಂಬ ಪ್ರಶ್ನೆಗಳನ್ನಿಟ್ಟುಕೊಂಡುವರು ದಯವಿಟ್ಟು ಬರೆಯುವ ಕೆಲಸಕ್ಕೆ ಕೈ ಹಾಕಬೇಡಿ.
ಅಂಥ ಪ್ರಶ್ನೆಗಳನ್ನು ಮೀರಿದವನು ಮಾತ್ರ ಲೇಖಕನಾಗಬಲ್ಲ. ಬರಹ ಅನ್ನುವುದು ಪ್ರಶ್ನೆಗಳಿಗೆ ಉತ್ತರಿಸುವುದಲ್ಲ, ಪ್ರಶ್ನೆಗಳನ್ನು ಮೀರುವುದು.
ಅವನಷ್ಟು ಕಠೋರವಾಗಿ ಮಾತಾಡುವುದು ಕೂಡ ಸರಿಯಲ್ಲ. ಲೇಖಕರಾಗಹೊರಟ ಹುಮ್ಮಸ್ಸಿನ ಹುಡುಗರಿಗೆ ಸಲಹೆ ಕೂಡ ಬೇಕು.
ಅಂಥ ಮಾರ್ಗದರ್ಶನವನ್ನು ಮಾತಿನ ಮೂಲಕ ಕೊಡುವುದು ಕಷ್ಟವೇ. ಹೀಗೆ’ ಬರೆಯಿರಿ ಎಂದು ಹೇಳಿ ಬರೆಸಿದ್ದು ಹಾಗೇ’ ಇರುತ್ತದೆ ಎಂದು ಹೇಳುವುದಕ್ಕಾಗುವುದಿಲ್ಲ. ಅದು ಬೇರೇನೋ ಆಗದಿದ್ದರೆ ಅಲ್ಲಿಗೆ ಕವಿಪ್ರತಿಭೆ ಸೇರಿಕೊಂಡಿಲ್ಲ ಅಂದಹಾಗಾಯಿತು.
ಅರ್ಥ ಆಗುವ ಹಾಗೆ ಬರಿ, ಅರ್ಥ ಇರುವ ಹಾಗೆ ಬರಿ ಎಂಬಿತ್ಯಾದಿ ಚರ್ಚೆಗಳೂ ನಮ್ಮಲ್ಲಿ ಆಗಿಹೋಗಿವೆ. ನಿನ್ನ ತೀವ್ರತೆಯನ್ನು ನಂಬು, ಕಸೂತಿಯ ನಡುವೆ ಹಾಡೊಂದು ಉಕ್ಕಿದರೆ ಸುಮ್ಮನೆ ಹಾಡಿಬಿಡು’ ಎಂದು ಏರುಜವ್ವನೆಯರಿಗೆ ಲಂಕೇಶ್ ಕಿವಿಮಾತು ಹೇಳಿದರು.
ಅದನ್ನು ಅರ್ಥಮಾಡಿಕೊಳ್ಳುವ ಹಂತ ತಲುಪಿದವರು ಬರೆಯುವ ಅರ್ಹತೆಯನ್ನೂ ಪಡೆದಿದ್ದಾರೆ ಎನ್ನಬಹುದು.
ಅಷ್ಟಕ್ಕೂ ಎಲ್ಲಿಂದ ಶುರುಮಾಡಬೇಕು ಎಂಬುದು ಎಲ್ಲರ ಲೇಖಕರ ಪ್ರಶ್ನೆ.
ತುಂಬ ದೊಡ್ಡ ಬರಹಗಾರರಾದವರೂ ಇಂಥದ್ದೊಂದು ಕ್ಷಣ ಎದುರಿಸಿಯೇ ಬಂದವರು. ಕುವೆಂಪು ಆರಂಭದಲ್ಲಿ ಇಂಗ್ಲಿಷಿನಲ್ಲಿ ಬರೆಯಲು ಆರಂಭಿಸಿದ್ದು, ನಂತರ ಕನ್ನಡಕ್ಕೆ ಹೊರಳಿಕೊಂಡದ್ದು ಅವರೇ ಹೇಳಿಕೊಂಡಿದ್ದಾರೆ.
ಮಾಸ್ತಿ ಭಾಷಣವೊಂದರಲ್ಲಿ ತಾನು ಬರೆಯಲು ಆರಂಭಿಸಿದ್ದಕ್ಕೆ ಅಂಥ ಯಾವ ಪ್ರೇರಣೆಯೂ ಇರಲಿಲ್ಲ. ಕತೆಗಳನ್ನು ಓದುತ್ತಿದ್ದೆ. ನಾನೂ ಇಂಥ ಕತೆಗಳನ್ನು ಬರೆಯಬಲ್ಲೆ ಅನ್ನಿಸಿತು ಎಂದಿದ್ದರು. ತುಂಬ ಒಂಟಿತನ ಅನುಭವಿಸುವವನು ಬರಹಗಾರನಾಗುತ್ತಾನೆ ಎಂಬ ನಂಬಿಕೆಯೂ ನಮ್ಮಲ್ಲಿದೆ.
ಯಾವುದಾದರೂ ಸುಂದರ ಜಾಗಕ್ಕೆ ಹೋದಾಗ, ಗುಂಪಿನಲ್ಲಿ ಕವಿಯೊಬ್ಬನಿದ್ದರೆ ಎಷ್ಟು ಚೆನ್ನಾಗಿದೆ ಜಾಗ, ನೀನೊಂದು ಕವಿತೆ ಬರೆಯಬಹುದು’ ಎನ್ನುತ್ತಾರೆ.
ಹೀಗಾಗಿ ಕವಿತೆಯೆನ್ನುವುದು ಪ್ರಕೃತಿಯ ಸುಂದರ ವರ್ಣನೆ ಎಂಬ ಸಾಮಾನ್ಯ ನಂಬಿಕೆ ಇವತ್ತಿಗೂ ವ್ಯಾಪಕವಾಗಿದೆ.
ನಿಜವಾದ ಗೊಂದಲ ಶುರುವಾಗಿರುವುದು ಬರಹ ಎನ್ನುವುದು ಸೃಜನಶೀಲತೆಯೋ ವಾದವೋ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದರಲ್ಲಿ.
ಬಡತನ, ಭ್ರಷ್ಟಾಚಾರ, ಜಾತೀಯತೆ, ಅಸಮಾನತೆ, ಕಂದಾಚಾರಗಳ ಕುರಿತು ಭಾಷಣ ಮಾಡಬಹುದೇ ಹೊರತು ಕವಿತೆ ಬರೆಯಲಾಗುವುದಿಲ್ಲ ಎಂಬುದನ್ನು ಹೊಸ ಕವಿಗಳು ಅರ್ಥಮಾಡಿಕೊಂಡಂತಿಲ್ಲ. ಹೀಗಾಗಿ ಇಲ್ಲಿ ಭಾಷಣ, ವಾಗ್ವಾದ, ಚರ್ಚೆ, ನಿಲುವು, ಪ್ರತಿಕ್ರಿಯೆ ಆಗಬಹುದಾದದ್ದು ಕವಿತೆಯ ಹೆಸರಲ್ಲಿ ಪ್ರಕಟವಾಗುತ್ತಿರುತ್ತದೆ.
ಕೆ ಎಸ್ ನರಸಿಂಹಸ್ವಾಮಿ ಬರೆದಿರುವ ಒಂದು ಪ್ರಸಿದ್ಧ ಪದ್ಯ ಸಂಭಾಷಣೆಯ ರೂಪದಲ್ಲಿದೆ. ರೈಲು ನಿಲ್ದಾಣಕ್ಕೆ ಮಗಳನ್ನು ಬಿಡಲು ಬಂದ ತಾಯಿ, ರೇಲು ಹತ್ತಿಸಿದ ನಂತರ ಮಗಳ ಜೊತೆ ಆಡುವ ಮಾತುಕತೆ ಅದು. ಎಲ್ಲಿದ್ದೀಯೇ ಮೀನಾ? ಎಂಬ ಪ್ರಶ್ನೆ, ಇಲ್ಲೇ ಇದ್ದೀನಮ್ಮ ಎಂಬ ಉತ್ತರದೊಂದಿಗೆ ಶುರುವಾಗುವ ಈ ಸಂಭಾಷಣೆ ನಿಜಕ್ಕೂ ಕವಿತೆಯಾಗುವುದು ಅದು ಸ್ಪುರಿಸುವ ಭಾವದಲ್ಲಿ.
ಇಡೀ ಕವಿತೆ ಓದಿ ಮುಗಿಸುವ ತನಕ ಅದರಲ್ಲಿ ಕವಿತ್ವ ಇದೆ ಎಂದು ನಮಗೆ ಅನ್ನಿಸುವುದಿಲ್ಲ. ಅಮ್ಮನ ಹೇಳುವ ಎಚ್ಚರಿಕೆಯ ಮಾತು, ಮಗಳ ಸಹಜ ಉತ್ತರದ ಕವಿತೆ
ಬಿಸಿನೀರಿದೆಯೇ ಮೀನಾ,
ಮಗುವಿನ ಹಾಲಿನ ಪುಡಿಗೆ?
ಬೇಕಾದಷ್ಟಿದೆಯಮ್ಮ
ಕಣ್ಣಲ್ಲೂ ಜತೆಗೆ!
ಎಂಬ ಕೊನೆಯ ಸಾಲು ತಲುಪುತ್ತಿದ್ದ ಹಾಗೆ ಝಗ್ಗನೆ ಬೆಳಗಿ, ಅಮ್ಮ ಅಕ್ಕರೆ, ಮಗಳು ಬಿಟ್ಟುಹೋಗುವಾಗಿನ ಸಂಕಟ, ಮಗಳಿಗೆ ತವರನ್ನು ತೊರೆಯಬೇಕಾದ ಅಳಲು ಎಲ್ಲವೂ ಅಲ್ಲಿ ಕಾಣಿಸಿಕೊಂಡು ಮನಸ್ಸು ಮೃದುವಾಗುತ್ತದೆ. ಈ ಕವಿತೆಯನ್ನು  ಬರಿ ಎಂದು ಹೇಗೆ ಹೇಳುತ್ತೀರಿ? ತಾಯಿ ಮಗಳಿಗೆ ವಿದಾಯ ಹೇಳಲು ರೇಲ್ವೇ ನಿಲ್ದಾಣಕ್ಕೆ ಹೋಗಿದ್ದರ ಕುರಿತು ಒಂದು ಕವಿತೆ ಬರಿ ಎಂದರೆ ಏನು ಬರೆಯಬಲ್ಲೆ ಎಂದು ಹೊಸದಾಗಿ ಬರೆಯಲು ಹೊರಟ ಕವಿ ತನ್ನನ್ನು ತಾನೇ ಕೇಳಿಕೊಳ್ಳಬೇಕು.
ಕವಿತೆಯೇ ಯಾಕಾಗಬೇಕು, ಅದರ ಕುರಿತು ಕತೆಯನ್ನೂ ಬರೆಯಬಹುದಲ್ಲ ಅನ್ನಿಸಬಹುದು. ಕತೆಯನ್ನು ಬರೆಯಲು ಹೊರಟಾಗ ಆ ಅಕ್ಕರೆಯನ್ನು ಇಷ್ಟು ಸೊಗಸಾಗಿ ಹೇಳಲಾಗುತ್ತದೋ ಇಲ್ಲವೋ? ಅದನ್ನೇ ಲಲಿತಪ್ರಬಂಧವನ್ನಾಗಿ ಮಾಡಿದಾಗ ಏನಾಗುತ್ತದೆ?
ರೇಲು ನಿಲ್ದಾಣ, ರೇಲು ಪ್ರಯಾಣ, ಅಲ್ಲಿಗೆ ಬರುವ ತರಹೇವಾರಿ ಮಂದಿ, ಅವರ ಮನಸ್ಥಿತಿ ಇವೆಲ್ಲವನ್ನೂ ಹೇಳದೇ ಪ್ರಬಂಧದ ಮೂಲಕವೋ ಕತೆಯ ಮೂಲಕವೋ ಈ ಸನ್ನಿವೇಶವನ್ನು ವಿವರಿಸಲಾಗದು.
ಆ ಮಾಧ್ಯಮ ಮತ್ತಿನ್ನೇನನ್ನೋ ಬೇಡುತ್ತವೆ. ತಾಯಿಯ ಹೆಸರೇನು, ಮಗಳ ಹೆಸರೇನು, ಮಗುವಿನ ಹೆಸರೇನು, ತಾಯಿ ಒಬ್ಬಳೇ ಯಾಕೆ ಬಂದಿದ್ದಾಳೆ, ಹಾಗಿದ್ದರೆ ಆಕೆಯ ಗಂಡ ತೀರಿಕೊಂಡಿದ್ದಾನಾ, ಮಗಳು ಯಾವ ಊರಿಗೆ ಹೋಗುತ್ತಿದ್ದಾಳೆ, ಹಾಲಿನ ಪುಡಿಯ ಹಾಲನ್ನೇ ಯಾಕೆ ಕುಡಿಸುತ್ತಾಳೆ, ತಾಯಿಗೆ ಎದೆಹಾಲಿಲ್ಲವೇ, ಅಥವಾ ಅದು ಆರೆಂಟು ವರ್ಷದ ಮಗುವೇ? ಹಾಗಿದ್ದರೆ ಅವಳು ಹೆರಿಗೆಗೆಂದು ಬಂದಿದ್ದಲ್ಲವೇ ಅಲ್ಲ.
ಮತ್ಯಾಕೆ ಒಬ್ಬಳೇ ಬಂದಳು. ಅವಳ ಗಂಡ ಯಾಕೆ ಬರಲಿಲ್ಲ. ಅವಳು ಒಬ್ಬಳೇ ಯಾಕೆ ಹೋಗುತ್ತಿದ್ದಾಳೆ. ಅಣ್ಣ ತಮ್ಮಂದಿರಿಲ್ಲವೇ.. ಹೀಗೆ ಬೇರೊಂದು ಮಾಧ್ಯಮದ ಮೂಲಕ ಹೇಳಲು ಹೊರಟಾಗ ಈ ಚಿತ್ರದ ಜಗತ್ತು ವಿಸ್ತಾರವಾಗುತ್ತಾ ಹೋಗುತ್ತದೆ.
ಕವಿತೆಯೊಂದೇ ಹಾಗೆ ಯಾವ ವಿವರಗಳನ್ನೂ ಕೇಳದೇ, ಯಾವ ಹಿನ್ನೆಲೆಯನ್ನೂ ಬಯಸದೇ, ಆ ಕ್ಷಣವನ್ನು ನಮಗೆ ಅಷ್ಟೇ ತೀವ್ರವಾಗಿ ತಲುಪುವಂತೆ ಮಾಡಬಲ್ಲದು.
ಇದನ್ನು ಇನ್ನೊಬ್ಬರಿಗೆ ವಿವರಿಸಿ ಹೇಳಿದಾಗ ಎಷ್ಟು ಅಧ್ವಾನವಾಗುತ್ತದೆ ಯೋಚಿಸಿ; ತಾಯಿ ಮಗಳು ರೇಲ್ವೇ ನಿಲ್ದಾಣಕ್ಕೆ ಹೋಗುತ್ತಾರೆ. ಅಲ್ಲಿ ತಾಯಿ ಮಗಳನ್ನು ಎಲ್ಲಿದ್ದೀಯಾ ಎಂದು ಕೇಳಿದಾಗ ಮಗಳು ಇಲ್ಲಿದ್ದೀನಿ ಎಂದು ತಾನಿರುವ ಸ್ಥಳವನ್ನು ಸೂಚಿಸುತ್ತಾಳೆ.
ಹೀಗೆ ಹಲವಾರು ಪ್ರಶ್ನೋತ್ತರಗಳು ನಡೆಯುತ್ತವೆ. ಕೊನೆಯಲ್ಲಿ ತಾಯಿ ಮಗುವಿನ ಹಾಲಿನ ಪುಡಿಗೆ ಬಿಸಿನೀರಿದೆಯಾ?’ ಎಂದು ಕೇಳಿದಾಗ ಮಗಳು ಬೇಕಾದಷ್ಟಿದೆ, ಕಣ್ಣಲ್ಲೂ ಇದೆ’ ಎಂದು ಹೇಳುತ್ತಾಳೆ.
ಹೀಗೆ ಹೇಳಿದಾಗ ಮಗಳ ಮಾತು ಕೇವಲ ಮಾತಿನ ಚಮತ್ಕಾರದಂತೆ ಭಾಸವಾಗುತ್ತದೆ.
ಆ ಅಕ್ಕರೆ, ವಿದಾಯ ದುಗುಡ ಇಲ್ಲಿ ನಮ್ಮನ್ನು ತಟ್ಟುವುದೇ ಇಲ್ಲ. ಹಾಗೆ ತಟ್ಟಬೇಕಿದ್ದರೆ, ಅದು ಕವಿತೆಯ ರೂಪ, ಲಯ, ವಿನ್ಯಾಸ ಮತ್ತು ಸಂದಿಗ್ಧತೆಯನ್ನು ಹೊಂದಿರಲೇಬೇಕು.
ಹೇಗೆ ಬರೆಯಬೇಕು ಅನ್ನುವ ಪ್ರಶ್ನೆಗೆ ಮತ್ತೊಂದು ಕವಿತೆಯನ್ನು ಮತ್ತೆ ಮತ್ತೆ ಓದುವುದು, ಆ ಕವಿತೆಯನ್ನು ತನ್ನದಾಗಿಸಿಕೊಳ್ಳುವುದು ಮುಖ್ಯ.
ಪದಸಂಪತ್ತು, ಜಾಣತನ ಕವಿತೆಯನ್ನು ಸೃಷ್ಟಿಸಲಾರದು. ಕವಿಯನ್ನು ಕೂಡ. ಹಾಗೇ, ಸಿದ್ಧಲಿಂಗಯ್ಯನವರು ಅವರ ಹೊಲೆಮಾದಿಗರ ಹಾಡು’ ಸಂಕಲನದ ಕವಿತೆಗಳ ಮೂಲಕ ಹೇಳಿದ್ದು, ಅದಕ್ಕಿಂತ ಸಮರ್ಥವಾಗಿ ಅವರ ಆತ್ಮಚರಿತ್ರೆಯಲ್ಲಿ ಮೂಡಿಬಂದಿದೆ. ಅದಕ್ಕೆ ಕಾರಣ ಕವನಗಳಲ್ಲಿ ಸಿಟ್ಟಿತ್ತು.
ಅದನ್ನು ವ್ಯಕ್ತಪಡಿಸುವ ಆತುರವೂ ಇತ್ತು. ಆತ್ಮಚರಿತ್ರೆ ಬರೆಯುವ ಹೊತ್ತಿಗೆ ಅವರು ಮಾಗಿದ್ದರು ಮತ್ತು ಅದು ಅವರ ಜೀವನದ ಕತೆಯೆಂಬಂತೆ ತಮಾಷೆಯಾಗಿ ಹೇಳುತ್ತಾ ಹೋದರು.
ಆದರೆ, ಆ ತಮಾಷೆಯೊಳಗೆ ಅಡಗಿದ ವ್ಯಂಗ್ಯ, ವಿಷಾದ ಮತ್ತು ಸಿಟ್ಟು ಎಲ್ಲರನ್ನೂ ತಟ್ಟುವಂತಿತ್ತು.
ಇವೆಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಬರಹಗಾರನಿಗೆ ಇರಬೇಕಾಗಿರುವುದು ಲೇಖಕನೆಂಬ ವ್ಯಕ್ತಿತ್ವ.
ಅದು ಹೊರರೂಪಿಗೆ, ಉಡುಗೆಗೆ, ನಡವಳಿಕೆಗೆ ಸಂಬಂಧಿಸಿದ್ದಲ್ಲ. ಬರೆಯುತ್ತಾ ಬರೆಯುತ್ತಾ ಅವನು ಪಡೆದುಕೊಳ್ಳುತ್ತಾ ಹೋಗುವ ಶರೀರ ಅದು.
ರಂಗದ ಮೇಲೆ ನಟಿಸುವ ನಟ ಬೇರೆಯೇ ಪಾತ್ರವಾಗುವ ಹಾಗೆ, ಲೇಖಕ ಕೂಡ ಬರೆಯುತ್ತಾ ಬರೆಯುತ್ತಾ ತನ್ನನ್ನೂ ಮೀರಿ ನಿಲ್ಲುತ್ತಾನೆ. ಕವಿತೆ, ಕತೆ, ಕಾದಂಬರಿ, ವಿಮರ್ಶೆ ಮುಂತಾದವುಗಳನ್ನು ಅವನು ಆ ಶರೀರದೊಳಗೆ ಕೂತು ಬರೆಯುತ್ತಾನೆ.
ಒಂದು ಪುಟ್ಟ ಉದಾಹರಣೆ ಕೊಡುವುದಿದ್ದರೆ ಕವಲು’ ಕಾದಂಬರಿ ಹೇಗಿದೆ ಎಂದು ನೀವು ನಿಮ್ಮ ಗೆಳೆಯರೂ ಆಗಿರುವ ಯಾರಾದರೂ  ವಿಮರ್ಶಕರನ್ನು ಕೇಳಿ. ಅವರು ಹೇಳಿದ್ದಕ್ಕೆ ಪ್ರತಿಯಾಗಿ ನೀವು ಇನ್ನೇನೋ ಹೇಳುತ್ತೀರಿ. ಅಲ್ಲೊಂದು ಚರ್ಚೆಯೋ ಮಾತುಕತೆಯೋ ಆಗುತ್ತದೆ.
ಯಾಕೆಂದರೆ ನಿಮ್ಮ ಜೊತೆ ಮಾತಾಡುತ್ತಿರುವುದು ವಿಮರ್ಶಕ ಅಲ್ಲ, ನಿಮ್ಮ ಗೆಳೆಯ. ಅದೇ, ಆ ಗೆಳೆಯ  ವಿಮರ್ಶಕ ಬರೆದ ವಿಮರ್ಶಾಲೇಖನವನ್ನು ಓದಿದರೆ ನಿಮ್ಮ ಅಭಿಪ್ರಾಯ ಬೇರೆಯೇ ಆಗಿರುತ್ತದೆ. ಅದನ್ನು ಓದುವ ಹೊತ್ತಿಗೆ ಆತ ವಿಮರ್ಶಕನಾಗಿರುತ್ತಾನೆ. ಕವಿಯ ವಿಚಾರದಲ್ಲೂ ಇದು ಸತ್ಯ. ಮನೆಯಲ್ಲಿ ಕೂತು ಮಗಳನ್ನು ನೋಡುತ್ತಾ ತುಂಬಭದ್ರೆ, ವರ್ಷದ ಮಗಳು’ ಎಂದರೆ ಅದಕ್ಕೆ ಮಗಳು ತುಂಗಭದ್ರೆಗ ಒಂದು ವರ್ಷ ಎಂದಷ್ಟೇ ಅರ್ಥ. ಅದನ್ನೇ ಕೆಎಸ್‌ನ ಕವಿತೆಯಾಗಿ ಬರೆದರೆ ತುಂಗಭದ್ರೆ ನದಿಯೂ ಆಗುತ್ತಾಳೆ. ವರ್ಷ ಅಂದರೆ ಮಳೆಯೂ ಆಗುತ್ತದೆ. ಹರಿಯುವ ತುಂಗಭದ್ರೆ ಮಳೆಯ ಮಗಳು ಎಂದಂತೆಯೂ ಆಗುತ್ತದೆ. ಹೀಗೆ ಇಡೀ ಜಗತ್ತೇ ಬದಲಾಗಿಬಿಡುತ್ತದೆ.
ಹಾಗಂತ ಸಾಹಿತಿಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಕಷ್ಟ.
ಅದನ್ನು ಅವನ ಬರಹಗಳೇ ಕಟ್ಟಿಕೊಡುತ್ತಾ ಹೋಗಬೇಕು. ಹಾಗೆ ರೂಪಿಸಿದ ವ್ಯಕ್ತಿತ್ವ ಕೆಲವೊಮ್ಮೆ ಓದುಗರಿಗೆ ಪ್ರಿಯವಾಗುತ್ತದೆ, ಕೆಲವೊಮ್ಮೆ ಪ್ರಿಯವಾಗದೇ ಹೋಗುತ್ತದೆ. ಅದು ಕೂಡ ಕೇವಲ ಬರಹವೊಂದನ್ನೇ ಆಧರಿಸಿದ್ದು. ಯಾಕೆಂದರೆ ದೂರದಲ್ಲಿ ಕುಳಿತು ಓದುವ ನಿಜದ ಓದುಗನಿಗೆ ಕಾಣಿಸುವುದು ಲೇಖಕನ ಆ ರೂಪ ಮಾತ್ರ.
ನನ್ನೊಳಗಿನ ಕವಿಬೇಂದ್ರೆಗೆ ಎಂದು ಬೇಂದ್ರೆ ಹೇಳಿದ್ದು ಆ ರೂಪಕ್ಕೇ ಇರಬಹುದಾ?

‍ಲೇಖಕರು avadhi

July 23, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

7 ಪ್ರತಿಕ್ರಿಯೆಗಳು

 1. sumathibk

  antarangadinda huttidare, yaavudoo yaara appaneyannoo, salaheyannoo bayasalla… .. oddukondu aache taane barutte… yaarige hegaaroo kaanisali… adu kelalla….

  aadare column goskara, illada bhaava srishti maadikondu, sullu sulle ottada tandukondu vaddaado haage ansalva nimage….

  halavaru bareyo regular column odidare, nagu barutte… avaru vishayakke hege paradaadtaare anta bhavi galla,, ananu bhavi goo gottaagutte….

  ಪ್ರತಿಕ್ರಿಯೆ
 2. nayana

  ಹಾಗಂತ ಸಾಹಿತಿಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಕಷ್ಟ.
  ಅದನ್ನು ಅವನ ಬರಹಗಳೇ ಕಟ್ಟಿಕೊಡುತ್ತಾ ಹೋಗಬೇಕು. ಹಾಗೆ ರೂಪಿಸಿದ ವ್ಯಕ್ತಿತ್ವ ಕೆಲವೊಮ್ಮೆ ಓದುಗರಿಗೆ ಪ್ರಿಯವಾಗುತ್ತದೆ, ಕೆಲವೊಮ್ಮೆ ಪ್ರಿಯವಾಗದೇ ಹೋಗುತ್ತದೆ. ಅದು ಕೂಡ ಕೇವಲ ಬರಹವೊಂದನ್ನೇ ಆಧರಿಸಿದ್ದು. ಯಾಕೆಂದರೆ ದೂರದಲ್ಲಿ ಕುಳಿತು ಓದುವ ನಿಜದ ಓದುಗನಿಗೆ ಕಾಣಿಸುವುದು ಲೇಖಕನ ಆ ರೂಪ ಮಾತ್ರ
  Mr. Jogi ,
  I agree, tell me WHY YOU WRITE? what’s kicks you to write ?
  as you said everybody has got their own reasons. WHAT ABOUT YOU?

  ಪ್ರತಿಕ್ರಿಯೆ
 3. Siddalingamurthy B G

  ಪ್ರತಿ ಭಾರಿ ನಿಮ್ಮ ಲೇಖನಗಳು ನನ್ನನ್ನು ಹೊಸ ಪ್ರಪಂಚಕ್ಕೆ ಪರಿಚಯಿಸುತ್ತವೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: