ಜೋಗಿ ಬರೆಯುತ್ತಾರೆ: ಕಾಮಕ್ಕೆ ಯೋಗೇಶ್ವರಿ, ಕ್ರೋಧಕ್ಕೆ ಮಾಹೇಶ್ವರಿ

ಸುಟ್ಟು ಹೊರತೆಗೆದ ಅಕ್ಷರಗಳಲ್ಲಿ …

-ಜೋಗಿ

ವೊದಲೇ ಹೇಳಿಬಿಡುತ್ತೇನೆ. ನಾನು ಪ್ರತಿಭಾ ಕವಿತೆಗಳ ಅಪ್ಪಟ ಅಭಿಮಾನಿ. ಹತ್ತು ಕವಿತಾ ಸಂಕಲನಗಳನ್ನು ಒಟ್ಟಿಗೆ ಇಟ್ಟರೆ ನಾನು ವೊದಲು ಎತ್ತಿಕೊಳ್ಳುವುದು ಪ್ರತಿಭಾ ಕವಿತೆಗಳನ್ನೇ. ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಅವು ಅಷ್ಟೊಂದು ಆಪ್ತವಾಗಿವೆ. ಪ್ರತಿಭಾ ಯಾವತ್ತೂ ಕಾವ್ಯಕ್ಕೆ ಕೈ ಕೊಟ್ಟಿಲ್ಲ. ಓದುಗನನ್ನೂ ವಂಚಿಸಿಲ್ಲ. ನನಗೆ ಪ್ರತಿಭಾ ಬಗ್ಗೆ ಅಸೂಯೆ ಮತ್ತು ಮೆಚ್ಚುಗೆ. ಸಂಕೀರ್ಣ ಅನ್ನಿಸಿದ್ದನ್ನು ಸರಳವಾಗಿ ಸರಾಗವಾಗಿ ಬರೆದುಬಿಡುತ್ತಾರೆ. ಹಾಗೆ ಬರೆಯುವ ಹೊತ್ತಿಗೂ ಅವರ ಕಾವ್ಯ ತೆಳುವಾಗುವುದಿಲ್ಲ. ಗದ್ಯವನ್ನು ಕಾಯಿಸಿ ಬಡಿದು ಪದ್ಯವಾಗಿಸುವುದು ಅವರಿಗೆ ಗೊತ್ತು. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಭಾ ತಾನು ಹೇಳಬಹುದಾದದ್ದನ್ನು ಮಾತ್ರ ಹೇಳುತ್ತಾರೆ. ಯಾವತ್ತೂ ಅವರು ಕವಿತೆಯನ್ನು ಎರವಲು ತಂದಿದ್ದನ್ನು ನಾನು ನೋಡಿಲ್ಲ. ಇವೆಲ್ಲ ಕಾರಣಕ್ಕೆ ಪ್ರತಿಭಾ ಕನ್ನಡದ ಏಕೈಕ ಕವಿ ಎಂದು ಕರೆದು ಉಳಿದವರ ದ್ವೇಷ ಕಟ್ಟಿಕೊಳ್ಳುವುದಕ್ಕೂ ನಾನು ಸಿದ್ಧ. ಸದ್ಯಕ್ಕೆ ನನ್ನ ಮುಂದಿರುವುದು ಪ್ರತಿಭಾ ಬರೆದ ಮುದುಕಿಯರಿಗಿದು ಕಾಲವಲ್ಲ ಕವಿತಾ ಸಂಕಲನ. ಪ್ರತಿಭಾ ಕಳೆದ ಎರಡು ಮೂರು ವರ್ಷಗಳಿಂದ ಬರೆಯುತ್ತಾ ಬಂದಿರುವ ಪದ್ಯಗಳೆಲ್ಲ ಇಲ್ಲಿ ಸೇರಿವೆ. ಅಪ್ಪಟ ಐಹಿಕ ಕವಿತೆಗಳ ಜೊತೆಗೆ ದೈವಿಕ ಕತೆಗಳೂ ಸೇರಿಕೊಂಡು ಪ್ರತಿಭಾ ಕ್ಷಣಾರ್ಧದಲ್ಲಿ ಸತಿ ಸಕ್ಕೂಬಾಯಿಯ ಥರ ಕಾಣಿಸತೊಡಗುತ್ತಾರೆ ಅಂತ ಸಂಕಲನದ ಕೊನೆಕೊನೆಯ ಪದ್ಯಗಳನ್ನು ಓದುವಾಗ ಅನ್ನಿಸಿದ್ದೂ ಉಂಟು. ಪ್ರತಿಭಾ ಭಕ್ತೆಯೋ ಅಲ್ಲವೋ ಅನ್ನುವುದು ನನಗೆ ಯಾಕೆ ಮುಖ್ಯವಾಗಬೇಕು. ಕವಿತೆ ಆಸ್ತಿಕವಾದವನ್ನೋ ನಾಸ್ತಿಕವಾದವನ್ನೋ ಪ್ರತಿಪಾದಿಸುವ ಟಿಪ್ಪಣಿ ಅಲ್ಲವಲ್ಲ. ಮುದುಕಿಯರಿಗಿದು ಕಾಲವಲ್ಲ ಅನ್ನುವ ಸಾಲು ಓದುತ್ತಿದ್ದ ಹಾಗೆ ಥಟ್ಟನೆ ನೆನಪಾದದ್ದು, ಸೈಲಿಂಗ್ ಟು ಬೈಜಾಂಟಿಯಮ್ ಕವಿತೆಯ ವೊದಲ ಸಾಲು. ಖಿhಚಿಣ is ಟಿo ಛಿouಟಿಣಡಿಥಿ ಜಿoಡಿ oಟಜ meಟಿ ಎಂದು ಶುರುವಾಗುವ ಪದ್ಯ ಮುಪ್ಪಿಲ್ಲದ ಜ್ಞಾನದ ಸ್ಮಾರಕಗಳಂತಿರುವ ಹಿರಿಯರನ್ನು ಕಿರಿಯರು ನಿಕೃಷ್ಟವಾಗಿ ಕಾಣುವುದರ ಕುರಿತಾಗಿದೆ ಎಂದು ನೆನಪು. ಪ್ರತಿಭಾ ಕವಿತೆಗಳ ಯಶಸ್ಸಿರುವುದೇ ಹುಮ್ಮಸ್ಸಿನಲ್ಲಿ. ಅವು ಯಾವತ್ತೂ ಅನುಕಂಪ ಬೇಡುವುದಿಲ್ಲ. ಸ್ವಾನುಕಂಪದಲ್ಲಿ ತೇಲಾಡುವುದಿಲ್ಲ. ಅಸೂಯೆಯಲ್ಲಿ ಅರಳುತ್ತವೆ. ಪ್ರೀತಿಯೆಂದರೆ ಪಾಪ, ಹಂಬಲಿಸಿ ನೊಂದು ಬೇಡಿದರೂ ತುಂಬ ಭಿಕ್ಷಾಪಾತ್ರೆ. ಹಾಗೇ ಸವೆದು ಕೊನೆಗೆ ಚಟ್ಟಕ್ಕೆ ಪಟ್ಟದ ರಾಣಿ ಎನ್ನುವ ಹೊತ್ತಿಗೂ ಅಲ್ಲಿ ಅವಳು ಜೀವಂತ. ಆ ಜೀವಂತಿಕೆಯಲ್ಲೇ ಸ್ವರ್ಗ ಮತ್ತು ನರಕ. ಕವಿತೆಗೆ ಹುಮ್ಮಸ್ಸೊಂದೇ ಸಾಲದು, ತೇಜಸ್ಸೂ ಬೇಕಾಗುತ್ತದೆ. ಆ ತೇಜಸ್ಸನ್ನು ಕಾವ್ಯ ಎಲ್ಲಿಂದ ಪಡಕೊಳ್ಳುತ್ತದೆ ಎಂಬುದರ ಮೇಲೆ ಅದರ ಆತ್ಮ ನಿಂತಿದೆ. ಚಳವಳಿಗಳಿಂದ, ಸ್ಲೋಗನ್ನುಗಳಿಂದ, ಗಂಡಸಿನ ಶೋಷಣೆಯನ್ನು ವಿರೋಧಿಸುವ ನೆಪದಿಂದ ಹುಟ್ಟಿದ ಕವಿತೆಯ ಉದ್ದೇಶ ತೀರ ಅಲ್ಪ. ಆಯುಷ್ಯವೂ. ಕವಿತೆ ಖಡ್ಗವಾಗಲಿ ಅನ್ನುವುದು ಸವಕಲು ಘೋಷಣೆ. ಕಾವ್ಯ ಯಾವತ್ತೂ ಖಡ್ಗವಾಗಕೂಡದು. ಪ್ರತಿಭಾ ಕವಿತೆಗಳ ತೇಜಸ್ಸು ಅವರ ಜೀವನದಲ್ಲಿದೆ. ಕೊಂಚ ವೈಯಕ್ತಿಕ ಅನ್ನಿಸಿದರೂ ಹೇಳಿಬಿಡುತ್ತೇನೆ. ನೋಡನೋಡುತ್ತಿದ್ದ ಹಾಗೆ ಪ್ರತಿಭಾ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಓಡಾಡುತ್ತಾ, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಎಂಬಂತೆ ಚಡಪಡಿಸುತ್ತಾ ತನ್ನ ನೆಲವನ್ನು ಕಂಡುಕೊಳ್ಳಲು ಹೆಣಗಾಡುತ್ತಾ ಆUಗ ಸಣ್ಣ ಸಣ್ಣ ಉದ್ವೇಗಗಳಿಗೆ ತಮ್ಮ ಸ್ವಂತಿಕೆಯನ್ನು ಅರ್ಪಿಸಿಕೊಳ್ಳುತ್ತಾ ಇದ್ದವರು. ಲಂಕೇಶರ ಅವ್ವನ ಅರ್ಬನ್ ವರ್ಷನ್‌ನಂತೆ ಕಾಣುತ್ತಿದ್ದವರು. ಗೊಣಗಾಟ, ಜಗಳ, ತಿರುಗಾಟ, ಎಲ್ಲೂ ಸ್ಥಾಪನೆಯಾಗದ ಚಾಂಚಲ್ಯ ಇವೆಲ್ಲದರ ವೊತ್ತ ಅವರು. ಕಾವ್ಯ ಬೇಕಾಗುವುದೇ ಇಂಥ ಜೀವಕ್ಕೆಂದು ಕಾಣುತ್ತದೆ. ಇದ್ದಕ್ಕಿದ್ದ ಹಾಗೆ ಅವರು ದೇವಿ ಆರಾಧನೆಗೆ ಹೊರಟು ನಿಂತರು. ಕವಿ ಹಿಡಿತಕ್ಕೆ ಸಿಗದೇ ಹೋದರೆ ಓದುಗನಿಗೆ ಲಾಭ, ವಿಮರ್ಶಕರಿಗೆ ಅಸೂಯೆ, ಓರಗೆಯ ಕವಿಗಳಿಗೆ ಕೆಂಡಕೋಪ. ಪ್ರತಿಭಾ ಯಾರ ಊಹೆಯ ಹಾದಿಯಲ್ಲೂ ಸಂಚರಿಸದೇ ಇದ್ದವರು. ತನ್ನ ಹಾದಿ ತನಗೇ ಗೊತ್ತಿಲ್ಲದ, ನಾಳೆಗಳು ವಿಸ್ಮಯ ಮತ್ತು ಭಯ ಹುಟ್ಟಿಸುತ್ತಿದ್ದ ಜಗತ್ತಿನಲ್ಲಿದ್ದವರು. ಪ್ರತಿಭಾ ಇತ್ತೀಚೆಗೆ ಪ್ರಕಟಿಸಿರುವ ಆತ್ಮಕಥನ ಮತ್ತು ಅವರ ಕವಿತೆಗಳನ್ನು ಒಟ್ಟಿಗಿಟ್ಟುಕೊಂಡು ಓದಿದರೆ ಅವುಗಳಿರುವ ಅವಿನಾಭಾವ ಸಂಬಂಧ ಗೊತ್ತಾಗುತ್ತದೆ.   -೨- ಕಾವ್ಯ ನಿಜಕ್ಕೂ ಯಾರನ್ನು ತಲುಪುತ್ತದ ಎಂಬ ಪ್ರಶ್ನೆಗೆ ಉತ್ತರವೇ ಸಿಗದ ದಿನಗಳಿವು. ಟೀವಿಯೆಂಬುದು ಸಾಹಿತ್ಯದ ವೊದಲ ಶತ್ರು. ನಾವು ಇದ್ದಕ್ಕಿದ್ದ ಹಾಗೆ ಶ್ರೋತೃಗಳಾಗಿ ಬಿಟ್ಟಿದ್ದೇವೆ. ದಿನವಿಡೀ ಎಫ್ಪೆಮು ಅರಚುತ್ತಾ, ಟೀವಿಗಳು ಬಡಕೊಳ್ಳುತ್ತಾ ನಮ್ಮಲ್ಲಿ ದಾಖಲೆಯೇ ಇಲ್ಲದ ಬಡಬಡಿಕೆಗಳು ಸೃಷ್ಟಿಯಾಗುತ್ತಿವೆ. ಅಕ್ಷರ ಕ್ಷರವಾಗಿ ಹೋಗುತ್ತಿದೆ. ಬುಡುಬುಡಿಕೆಯ ಸದ್ದು ಮಾತ್ರ ಸ್ಪಷ್ಟವಾಗಿದೆ. ಇಂಥ ಹೊತ್ತಲ್ಲಿ ಪ್ರತಿಭಾ ಆಧುನಿಕತೆಯ ತಲ್ಲಣಗಳನ್ನೂ ಅದು ಹಾಕುವ ಸವಾಲುಗಳನ್ನೂ ಮೀರುತ್ತಿರುವ ವಯಸ್ಸು, ನಶ್ವರ ಎನ್ನಿಸುತ್ತಿರುವ ಸಾಹಿತ್ಯ ಜಗತ್ತು, ಅಪರೂಪವಾಗುತ್ತಿರುವ ಓದುಗ ಬಳಗ- ಇವಿಷ್ಟನ್ನು ಮುಂದಿಟ್ಟುಕೊಂಡು ಹೇಳಲು ಹೊರಟಂತಿದೆ. ಕಾವ್ಯದ ಮೇಲಿನ ನಂಬಿಕೆ ಕಳಕೊಳ್ಳದ ಪ್ರತಿಭಾ ತನ್ನನ್ನೂ ಕವಿತೆಯನ್ನೂ ಸಮಾನವಾಗಿ ಸಂಕಷ್ಟಗಳಿಗೆ ಒಡ್ಡಿಕೊಂಡವರು. ಕಾಮಕ್ಕೆ ಯೋಗೇಶ್ವರಿ, ಕ್ರೋಧಕ್ಕೆ ಮಾಹೇಶ್ವರಿ ಲೋಭಕ್ಕೆ ವೈಷ್ಣವಿ, ಮದಕ್ಕೆ ಬ್ರಹ್ಮಾಣಿ ಮೋಹಕ್ಕೆ ಸ್ವಯಂಭು ಕಲ್ಯಾಣಿ, ಮಾತ್ಸರ್ಯಕ್ಕೆ ಇಂದ್ರಜಾ ಪೈಶುನ್ಯಕ್ಕೆ ಯಮದಂಡಭದ್ರಾ, ಅಸೂಯೆಗೆ ವಾರಾಹೀ ದೇವಿಯೆಂದರೆ ಇಚ್ಛಾಶಕ್ತಿಜ್ಞಾನಶಕ್ತಿಕ್ರಿಯಾಶಕ್ತಿ ಸ್ವರೂಪಿಣಿ. ಇದನ್ನು ಓದುತ್ತಿದ್ದಂತೆ ಥಟ್ಟನೆ ನೆನಪಾದದ್ದು ಇಚ್ಛಾಹೀನಂ ಕ್ರಿಯಾಹೀನಂ ಭಕ್ತಿಹೀನಂ ಜನಾರ್ದನಃ ಎಂಬ ಎಂದೋ ಕೇಳಿದ ಶ್ಲೋಕ. ಇವರೆಡರ ನಡುವಿನ ವ್ಯತ್ಯಾಸ ಥಟ್ಟನೆ ಹೊಳೆದರೆ ಪ್ರತಿಭಾ ಅರ್ಥವಾಗುತ್ತಾರೆ. ಅವರ ಕಾವ್ಯ ಮತ್ತೆ ನಿಮ್ಮಲ್ಲಿ ಕಾವ್ಯ ಪ್ರೀತಿಯನ್ನು ಹುಟ್ಟಿಸುತ್ತದೆ. ಪ್ರತಿಭಾ ಹೇಳುತ್ತಾರೆ- ಕಂದರ ಹಾರಲು ಯತ್ನಿಸಿ ಬಿದ್ದರೆ ಅದು ಕಂದರದ ತಪ್ಪಲ್ಲ. ಅವರ ಕಾವ್ಯ ಕೆರಳಿಸಿದರೆ, ನೋಯಿಸಿದರೆ, ಘಾಸಿಗೊಳಿಸಿದರೆ, ಒಂದೇ ಒಂದು ಎಳೆಹಿಡಿದೆಳು ಬೆತ್ತಲು ಮಾಡಿದರೆ ಅದು ಕಾವ್ಯದ ತಪ್ಪಲ್ಲ. ನಾವಿರೋದು ಹೀಗೆ. ಕವಿತೆಯಿರೋದು ಹಾಗೆ. ಗೊಂಬೆಯಾಟದ ಸೋಜಿಗ ಮೀರಿ ಲೀನವಾಗದ ಹೊರತು ಮುಕ್ತಿಯಿಲ್ಲ.    ]]>

‍ಲೇಖಕರು G

May 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

5 ಪ್ರತಿಕ್ರಿಯೆಗಳು

 1. -ರವಿ ಮುರ್ನಾಡು,ಕ್ಯಾಮರೂನ್

  ವಿಮರ್ಶೆ ಅಂದ್ರೆ ಆಳವಾಗಿ ಓದುವುದು.ಕೃತಿಗೆ ಎದುರಾಗಿ ನಿಲ್ಲುವುದು, ಅಲ್ಲಿ ಜಾಲಾಡಿ ಕೆಲವರಿಗೆ ಸಿಗದ್ದನ್ನು , ನವಿರಾಗಿ ಸಿಗದವರ ಮನಸ್ಸಿಗೆ ಹರವಿ ಬಿಡುವುದು. ಅದನ್ನು ಮಾನ್ಯ ಜೋಗಿಯವರು ಚೆನ್ನಾಗಿ ಮನದಟ್ಟು ಮಾಡಿದ್ದಾರೆ. ಕಾವ್ಯ ಅನುಭವಿಸಿದವನಿಗೆ ಮಾತ್ರ ಸಿಗುವ ಕೊಂಡುಕೊಳ್ಳುವ ಖುಷಿಯಲ್ಲಿ ದಕ್ಕಿಸಿಕೊಳ್ಳುವ ” ಸರಕು”

  ಪ್ರತಿಕ್ರಿಯೆ
 2. Uday Itagi

  ಜೋಗಿಯವರು ಪ್ರತಿಭಾರ ಬಗ್ಗೆ ಬರೆದಿದ್ದೆಲ್ಲವೂ ನಿಜ. ಆದರೆ ಪ್ರತಿಭಾ “ಲಂಕೇಶರ ಅವ್ವನ ಅರ್ಬನ್ ವರ್ಷನ್ನಂತೆ ಕಾಣುತ್ತಿದ್ದವರು.” ಎನ್ನುವದು ತೀರ ಅಭಾಸ ಎನಿಸುತ್ತದೆ. ಅಥವಾ ಇದು ಉತ್ಪ್ರೇಕ್ಷೆಯ ಪರಮಾವಧಿಯೋ?
  ಹಿಂದೆ ಒಂದು ಸಾರಿ ಪ್ರತಿಭಾ ಹೇಳಿದ್ದರು; ಇವತ್ತು ಕನ್ನಡ ಕಾವ್ಯದಲ್ಲಿ ಹೊಸತೇನಾದರು ಆಗುತ್ತಿದ್ದರೆ ಅದು ಮಹಿಳೆಯರ ಕಾವ್ಯದಲ್ಲಿ ಮಾತ್ರ ಎಂದು. ಆದರೆ ನಾನು ಹೇಳುತ್ತೇನೆ. ಅದು ಪ್ರತಿಭಾ ನಂದಕುಮಾರರ ಕಾವ್ಯದಲ್ಲಿ ಮಾತ್ರ ಎಂದು. ಬೇಕಾದರೆ ಬೇರೆ ಮಹಿಳಾ ಕವಿಗಳು ನನ್ನನ್ನು ದ್ವೇಷಿಸದರೂ ಪರ್ವಾಗಿಲ್ಲ!

  ಪ್ರತಿಕ್ರಿಯೆ
 3. lalitha siddabasavaiah

  ಜೋಗಿಗೂ ಭಯ , ಪ್ರತಿಭನ್ನ ಹೊಗಳಿದರೆ ಇತರ ಕವಿಗಳ ದ್ವೇಷ ಕಟ್ಟಿಕೊಂಡು ಬಿಡ್ತೀನಿ ಅಂತ. ಈ ಉದಯ ಇಟಗಿಗೂ ಭಯ , ಬೇರೆ ಮಹಿಳಾ ಕವಿಗಳು ಅವರನ್ನು ದ್ವೇಷಿಸಿಬಿಡ್ತಾರೆ ಪ್ರತಿಭಾ ಬಗ್ಗೆ ಹೊಸತನ ತರುವ ಕವಿ ಅಂತ ಅಂದ್ರೆ ….. ಅಯ್ಯೊ ಮಾರಾಯ್ರೆ ಇರೋದನ್ನ ಹೇಳೊಕೆ ಇಷ್ಟೊಂದು ನಿರೀಕ್ಷಣಾ ಜಾಮೀನಿನ ಅಗತ್ಯ ಇಲ್ಲ ದೇವ್ರೆ. ಪ್ರತಿಭಾ ಪ್ರತಿಭಾನೇ . ಅಪ್ಪಟ ರಾಗಭರ್ತಿ, ಭರಪೂರ ಜೀವನ ಪ್ರೀತಿ, ವಿಶಿಷ್ಟ ಧೈರ್ಯ, ಒಳ್ಳೆ ಇಡುಗಂಟು ಇಟ್ಟಂಥ ಭಾಷೆ ,ಮಿದ್ದು ಅದನ್ನು ಒಳ್ಳೆ ಬನಿಯಾದ ರೊಟ್ಟಿ ತಟ್ಟುವ ಕೌಶಲ್ಯ , ಇವೆಲ್ಲ ಸೊಗಸಾಗಿ ಮೇಳೈಸಿದ ನಮ್ಮ ಪ್ರತಿಭಾ ಬಗ್ಗೆ ನೀವೆಲ್ಲ ಮೆಚ್ಚಿ ಮಾತಾಡಿದರೆ ನಾವೆಲ್ಲ – ಅಂದರೆ ಇತರೆ ಕವಿಯಿತ್ರಿಯರೆಲ್ಲ – ಏನೇನೋ ಅಂದ್ಕೊಂಡ್ ಬಿಡ್ತೀವೀ ಅಂತಂದು ನಮ್ಮನ್ನ ಕಾಲೆಳೆಯುತ್ತಲೆ ನೀವು ಮುಗ್ಗರಿಸಿ ಬೀಳಬೇಡಿ. ಅಹ್ಹ ಅಹ್ಹ ಅಹ್ಹ ಅಹ್ಹ

  ಪ್ರತಿಕ್ರಿಯೆ
 4. -ರವಿ ಮುರ್ನಾಡು,ಕ್ಯಾಮರೂನ್

  ಇವತ್ತು ಕನ್ನಡ ಕಾವ್ಯದಲ್ಲಿ ಹೊಸತೇನಾದರು ಆಗುತ್ತಿದ್ದರೆ ಅದು ಮಹಿಳೆಯರ ಕಾವ್ಯದಲ್ಲಿ ಮಾತ್ರ ಎಂದು. ಇದು ನಿಜವಾ?
  :ಮಾನ್ಯ ಪ್ರತಿಭಾರ ಈ ವಾಕ್ಯ ಏಕೋ ಕಸಿವಿಸಿಯಾಗುತ್ತಿದೆ. ಇದು ಬೇಡವಾಗಿತ್ತು. ಕಾವ್ಯ ಯಾರದ್ದಾದರೂ ಆಸ್ವಾಧಿಸಲು ಮತ್ತು ಹಂಚಿಕೊಳ್ಳಲು ಬೇಧವಿಲ್ಲ ಅಂದುಕೊಳ್ಳುತ್ತೇನೆ. ಸಮಾನಾಗಿ ಸ್ವೀಕರಿಸುವ ಗುಣ ಇಬ್ಬರಲ್ಲೂ ಇರಬೇಕು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: