ಜೋಗಿ ಬರೆಯುತ್ತಾರೆ- ನೆಲೆಗಟ್ಟಿನವರು, ಮೊಲೆಗಟ್ಟಿನವರು, ತಲೆಗಟ್ಟಿನವರು…

jogi21ಜೋಗಿ

ತಾತ್ವಿಕ ನೆಲೆಗಟ್ಟು ಎಂಬ ತುತ್ತೂರಿಯೂ..ಸುಡುಗಾಡು ಸಾಹಿತ್ಯವೂ….

ನನ್ನಂಥ ಕವಿಯಿಲ್ಲ, ನನ್ನ ಕವಿತೆಗಳನ್ನು ಅರ್ಥ ಮಾಡಿಕೊಳ್ಳುವವರಿಲ್ಲ ಎಂದು ಕೊರಗುವ ಕವಿ ಪುಂಗವರಿಗೇನೂ ನಮ್ಮಲ್ಲಿ ಕೊರತೆಯಿಲ್ಲ. ಅಂಥದ್ದೇ ಆಕ್ಷೇಪವನ್ನು ಆಗಗ ಕತೆಗಾರರೂ, ಕಾದಂಬರಿಕಾರರೂ ವ್ಯಕ್ತಪಡಿಸಿ ತೃಪ್ತರಾಗುವುದುಂಟು. ಶಿವರಾಮ ಕಾರಂತ, ತೇಜಸ್ವಿ, ಗಂಗಾಧರ ಚಿತ್ತಾಲ, ಖಾಸನೀಸರಂಥ ಕೆಲವರನ್ನು ಬಿಟ್ಟರೆ ಬಹುತೇಕ ಮಂದಿ ವಿಮರ್ಶೆಗಾಗಿ ಹಾತೊರೆಯುವ ಮಿಡುಕು ಜೀವಿಗಳೇ.

image52

ಹನ್ನೆರಡು ಮಂದಿ ವಿಮರ್ಶಕರೂ ಆವರನ್ನ ಉಘೇ ಉಘೇ ಅನ್ನುವ ಮತ್ತೊಂದಿಪ್ಪತ್ತೆರಡು ಮಂದಿ ಸಹವಾಸಿಗಳೂ ಸೇರಿದರೆ ಸಾಹಿತ್ಯ ಲೋಕ ಸಂಪನ್ನವಾಗುತ್ತದೆ ಎಂಬ ನಂಬಿಕೆಯೇ ಈ ಕೊರಗುವಿಕೆಗೆ ಮೂಲ. ಇವತ್ತು ಬರೆಯುತ್ತಿರುವ, ಓದಿಸಿಕೊಳ್ಳುತ್ತಿರುವ ಲೇಖಕರ ಪಟ್ಟಿಯನ್ನೇ ತೆಗೆದು ನೋಡಿ: ವಸುಧೇಂದ್ರನಿಂದ ಹಿಡಿದು ರವಿ ಬೆಳಗೆರೆಯ ತನಕ, ವಿವೇಕ ಶಾನಭಾಗರಿಂದ ಹಿಡಿದು ಕೆ. ಎನ್. ಗಣೇಶಯ್ಯನ ತನಕ ಯಾರೊಬ್ಬರ ಕೃತಿಯನ್ನೂ ಓದುಗರು ವಿಮರ್ಶಕರ ಮಾತನ್ನು ನೆಚ್ಚಿಕೊಂಡು ಕೊಂಡುಕೊಂಡಿಲ್ಲ. ಅವರ ಕತೆಗಳೂ ಬರಹಗಳೂ ಚೆನ್ನಾಗಿದ್ದವು. ಹೀಗಾಗಿ ಅವು ಸ್ವಂತ ಶಕ್ತಿಯಿಂದ ಓದುಗರನ್ನು ಹುಡುಕಿಕೊಂಡವು. ವಿಮರ್ಶಕರು ಅವುಗಳ ಬಗ್ಗೆ ಬರೆದಿದ್ದರೆ ಬಹುಶಃ ಮಾರಾಟ ಕಡಿಮೆ ಆಗುತ್ತಿತ್ತೋ ಏನೋ?

ಈ ಮಧ್ಯೆ ಮಾರಾಟವಾಗುವುದು, ಟಾಪ್ ಟೆನ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದೇ ಅಪರಾಧ ಎಂದು ಭಾವಿಸುವ ಬುದ್ದಿವಂತರೂ ನಮ್ಮಲ್ಲಿದ್ದಾರೆ. ಪುಸ್ತಕ ಬರೆಯುವುದೂ, ಅದು ಮಾರಾಟವಾಗುವುದೂ, ಪ್ರಕಾಶಕ ಹಣ ಮಾಡುವುದೂ ಟಾಪ್ ಟೆನ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದೂ ಘೋರ ಅಪರಾಧ ಎಂಬಂತೆ ಬ್ಲಾಗುಗಳಲ್ಲಿ ಬರೆಯುವವರಿದ್ದಾರೆ. ಇನ್ನೊಬ್ಬ ಲೇಖಕನ ಬಗ್ಗೆ ಮೆಚ್ಚುಗೆಯ ಮಾತಾಡಿದರೆ ಅದನ್ನು ಪರಸ್ಪರ ಬೆನ್ನು ತಟ್ಟಿಕೊಳ್ಳುವ ಗುಣ ಎಂದು ವರ್ಣಿಸಲಾಗುತ್ತದೆ. ವಿಮರ್ಶಕರು ಹಳೆಯ ಮಾನದಂಡಗಳನ್ನಿಟ್ಟುಕೊಂಡು ವಿಮರ್ಶೆ ಮಾಡುತ್ತಾರೆ ಎಂದು ಕೊರಗತೊಡಗುತ್ತಾರೆ. ಇಂಥವರ ಕನಸಿನಲ್ಲಿ ಪದೇ ಪದೇ ಡಿ. ಆರ್. ನಾಗರಾಜ್ ಪ್ರತ್ಯಕ್ಷರಾಗುತ್ತಾರೆ.

ಈ ಪಂಗಡದಲ್ಲಿ ಕಾಣಿಸಿಕೊಳ್ಳುವ ಪ್ರತಿಭಾವಂತರ ಗುಣ ಲಕ್ಷಣಗಳನ್ನಿಲ್ಲಿ ಪಟ್ಟಿಮಾಡಲಾಗಿದೆ. ಸಹೃದಯ ಓದುಗರು ಈ ಪ್ರಬೇಧಕ್ಕೆ ಸೇರಿದ ಜೀವಿಗಳಿಂದ ದೂರ ಇರುವಂತೆ ಕೋರಲಾಗಿದೆ.

ನೆಲೆಗಟ್ಟಿನವರು:

ಇವರು ಜನಸಂಖ್ಯೆ ಕಡಿಮೆ ಇರುವ ಕವಿಗೋಷ್ಠಿಗಳಲ್ಲಿ ಕಾಣ ಸಿಗುತ್ತಾರೆ. ಕವಿತೆಗಳಿಗೆ ಹೇಗೆ ಪ್ರತಿಕ್ರಿಯೆ ಬರುತ್ತದೆ ಎಂದು ಕಾಯುತ್ತಾ ಕೂರುತ್ತಾರೆ. ಕವಿತೆಗಳನ್ನು ಅಲ್ಲಿಗೆ ಬಂದ ಮಂದಿ ಮೆಚ್ಚಿಕೊಂಡರೆ ನಿರಾಶರಾಗುತ್ತಾರೆ. ಕವಿತೆ ಎಲ್ಲರಿಗೂ ಅರ್ಥವಾಗಿ, ಸಂತೋಷ ಹುಟ್ಟಿಸಿ, ನಗು ತರಿಸಿದರೆ ಅದು ಅಪರಾಧ ಎಂಬುದನ್ನು ಇವರು ಬಲ್ಲರು.

ತಾತ್ವಿಕ ನೆಲೆಗಟ್ಟು ಎಂಬುದುಇವರಿಗೆ ಪ್ರಿಯವಾದ ಪದ. ಅದನ್ನು ಹೆಬ್ಬೆರಳಿನ ಹಾಗೆ ಚೀಪುತ್ತಾ ಇರುವ ಇವರು ಯಾವುದಕ್ಕೂ ತಾತ್ವಿಕ ನೆಲೆಗಟ್ಟನ್ನು ಅನ್ವಯಿಸಿಕೊಂಡು ಮಾತಾಡಬಲ್ಲರು. ಎಲ್ಲರೂ ಹಸಿವಾದಾಗ ಇಡ್ಲಿ ತಯಾರಾದ ಕ್ರಮವನ್ನು ಯೋಚಿಸುತ್ತಾ ಇಡ್ಲಿ ತಿನ್ನುತ್ತಾರೆ. ಇಡ್ಲಿಯನ್ನು ಚಟ್ನಿಯ ಜೊತೆ ತಿನ್ನಬೇಕೋ ಸಾಂಬಾರಿನ ಜೊತೆಗೋ ಎಂಬ ಬಗ್ಗೆ ತಮ್ಮ ಹಿರಿಯ ತಲೆಮಾರಿನ ಚಿಂತಕರು ಹೇಳಿದ ಮಾತನ್ನು ಆಗಾಗ ಹೇಳುತ್ತಿರುತ್ತಾರೆ.

ಯಾವುದು ಮಾರಾಟವಾಗುತ್ತದೋ ಅದು ಕಳಪೆ ಸಾಹಿತ್ಯ ಎಂಬ ತೀರ್ಮಾನಕ್ಕೆ ಇವರು ಹಿಂದಿನ ಜನ್ಮದಲ್ಲೇ ಬಂದಾಗಿರುತ್ತದೆ. ಮುಂದಿನ ಜನ್ಮದ ತನಕ ತಾತ್ವಿಕ ನೆಲೆಗಟ್ಟಿನ ಬಗ್ಗೆ ಮಾತಾಡುವುದೆಂದು ನಿರ್ಧಾರ ಮಾಡಿಕೊಂಡಿರುತ್ತಾರೆ. ಉದ್ಯೋಗ ಯಾವುದೇ ಆಗಿರಲಿ, ಖಾಸಗಿ ಚಿಂತನೆ ಬೇರೆ ಎಂದು ನಂಬಿರುವ ಇವರು ಹಗಲು ನಿದ್ರೆ ಮಾಡುತ್ತಾರೆ, ರಾತ್ರಿ ಮಾತನಾಡುತ್ತಾರೆ. ಅದಕ್ಕೆ ಯಾರ ಕನಸಾದರೂ ಚಿಂತೆಯಿಲ್ಲ. ಆದರೆ ಕನಸನ್ನು ಕನಸು ಎಂದು ಕರೆಯುವದಕ್ಕೆ ಇವರ ಪ್ರಬಲ ವಿರೋಧವಿದೆ.

ಮೊಲೆಗಟ್ಟಿನವರು:

ಇವರದು ಏಕೈಕ ಸಿದ್ಧಾಂತ. ಜಗತ್ತಿನ ಅತ್ಯಂತ ಶ್ರೇಷ್ಠ ಕವಿ ಬೋಧಿಲೇರ ಎಂದು ನಂಬಿದ ಜನಾಂಗ ಇದು. ದುರದೃಷ್ಟವಶಾತ್ ಬೋಧಿಲೇರನ ಒಂದಾದರೂ ಸಂಕಲನವನ್ನು ಲಂಕೇಶ್ ಅನುವಾದಿಸಿಕೊಟ್ಟು ದಿವಂಗತರಾದ್ದರಿಂದ ಇವರ ಪಾಲಿಗೆ ಪವಿತ್ರ ಗ್ರಂಥವೊಂದು ಲಭ್ಯವಾದಂತಾಯಿತು. ಕನ್ನಡ ಸಾಹಿತ್ಯದ ಅದೃಷ್ಟವೆಂದರೆ ಬೋಧಿಲೇರ್ ಜಾಸ್ತಿ ಬರೆಯಲು ಹೋಗಲಿಲ್ಲ. ಲಂಕೇಶರೂ ಲಂಕೇಶರು ಜಾಸ್ತಿ ಅನುವಾದಿಸಲಿಲ್ಲ.

ಇವರ ಮೊಲೆಗಟ್ಟು ಸಿದ್ಧಾಂತದ ಪ್ರಕಾರ ಎಲ್ಲವೂ ಇಂದ್ರಿಯ ಗಮ್ಯ. ಬರೆಯುವದಕ್ಕೂ ಆಚರಣೆಗೂ ಸಂಬಂಧ ಇರಬೇಕಾಗಿಲ್ಲ. ಹೇರಳವಾಗಿ ಅಂಗಾಂಗಗಳನ್ನು ವರ್ಣಿಸುವುದು ಕಡ್ಡಾಯ ಮತ್ತು ಅದನ್ನು ಕೇವಲ ಅಂಗಾಂಗದ ವರ್ಣನೆ ಎಂದು ಭಾವಿಸುವುದು ಅಪರಾಧ. ಅಂಗಾಂಗವನ್ನು ಕೆತ್ತಿ, ಕಡೆದು, ಗುದ್ದಿ, ತಡವಿ ರಚಿಸಿದ ಕಾವ್ಯ ಆದ್ದರಿಂದ ಅವು ಕೇವಲ ಸಂಕೇತಗಳಷ್ಟೇ.

ಈ ಪಂಗಡದಲ್ಲಿ ಮಹಿಳೆಯರ ಸಂಖ್ಯೆಯೂ ಸಾಕಷ್ಟಿದೆ. ಆದರೆ ಅವರನ್ನು ಮಹಿಳೆಯರು ಎಂದು ಕರೆದರೆ ಅವರ ಪ್ರತಿಭೆಗೆ ಅನ್ಯಾಯ ಮಾಡಿದಂತಾಗುತ್ತದೆ. ಹೀಗಾಗಿ ಅನ್ಯ ಅಭಿವ್ಯಕ್ತಿ ಎಂದು ಹೊಸ ಹೆಸರಿನಲ್ಲಿ ಕರೆಯಬೇಕೆಂದು ಸಾಹಿತ್ಯ ಜಗತ್ತನ್ನು ವಿನಂತಿಸಿಕೊಳ್ಳಲಾಗುತ್ತಿದೆ.

ತಲೆಗಟ್ಟಿನವರು:

ಪತ್ರಿಕೆಗಳನ್ನೂ ಮಾಧ್ಯಮಗಳನ್ನೂ ದೂಷಿಸುತ್ತಾ ಬದುಕುವ ಉಪ ಸಾಹಿತ್ಯ ಜೀವಿಗಳ ಪಂಗಡವೊಂದು ಹುಟ್ಟಿಕೊಂಡಿದೆ. ಇವರು ಹೇಳಿಕೆ ವೀರರೆಂದೂ ಕರೆಸಿಕೊಂಡವರು. ಪತ್ರಿಕೆಗಳಲ್ಲಿ ಹೇಳಿಕೆ ಬರುವುದಕ್ಕಾಗಿ ಏನನ್ನು ಬೇಕಾದರೂ ಮಾಡಬಲ್ಲವರು. ಮಾಧ್ಯಮಗಳನ್ನು ದೂಷಿಸುವುದು ಕೂಡ ಇವರ ಪ್ರಚಾರದ ಒಂದು ವಿಧಾನ.

ಸಾಪ್ತಾಹಿಕ ಪುರವಣಿಗಳಲ್ಲಿ ಬರುವುದು ವಿಮರ್ಶೆ ಅಲ್ಲ ಎಂಬುದು ಇವರ ಇತ್ತೀಚಿನ ಸಂಶೋಧನೆ. ಅವುಗಳನ್ನು ವಿಮರ್ಶೆ ಎಂದು ಕರೆದರು ಎಂಬುದಿನ್ನೂ ನಿರ್ಧಾರ ಆಗಬೇಕಿದೆ. ಅಂಥ ವಿಮರ್ಶಕರನ್ನು ಬಹಿಷ್ಕರಿಸಲು ಇವರು ಕರೆ ನೀಡಿದ್ದಾರೆ. ಹೊಸ ಪುಸ್ತಕ ಬಂದದ್ದು ಹೊರ ಜಗತ್ತಿಗೆ ಕನಿಷ್ಠ ಗೊತ್ತಾಗುವ ಹಾಗಾದರೂ ಆಗಲಿ ಎಂದು ಒದ್ದಾಡುತ್ತಿರುವ ಹೊತ್ತಲ್ಲಿ, ಪ್ರಚಾರ ತಪ್ಪು ಎನ್ನುವ ಈ ತಲೆಗಟ್ಟಿನ ಮಂದಿ, ಸಾಹಿತ್ಯ ಎಲ್ಲರಿಗೂ ಅಲ್ಲ ಎನ್ನುತ್ತಾ ಆ ಗುಂಪು ಕ್ರಮೇಣ ಕ್ಷೀಣಿಸುವುದನ್ನು ನೋಡುತ್ತಾ ಸಂಭ್ರಮಿಸುತ್ತಿದ್ದಾರೆ.

ಇವರು ಕೂಡ ನೆಲೆಗಟ್ಟು ಮತ್ತು ಮೊಲೆಗಟ್ಟು ಸಂಘದ ಅಜೀವ ಸದಸ್ಯರು. ಇವರಲ್ಲದೇ ಇನ್ನೊಂದಷ್ಟು ಅಂತಾರಾಷ್ಟ್ರೀಯ ಮನೋಸಂಸ್ಥೆಗಳೂ ನಮ್ಮಲ್ಲಿವೆ. ಅಲ್ಲಿ ಬರಾಕ್ ಒಬಾಮ್ ಅಧ್ಯಕ್ಷನಾದರೆ ಇಲ್ಲಿ ಬಾದಾಮಿ ಹಾಲು ಕುಡಿಯುವ ವರ್ಗದವರಿದ್ದಾರೆ. ಅಲಿ ಬುಷ್ ಮೇಲೆ ಚಪ್ಪಲಿ ಎಸೆದರೆ ಇಲ್ಲಿ ಬರಿಗಾಲಲ್ಲಿ ಓಡಾಡುವ ಉತ್ಸಾಹಿಗಳಿದ್ದಾರೆ. ಹಿಂದೆ ರಷ್ಯಾದಲ್ಲಿ ಆಲೂಗಡ್ಡೆ ತಿಂದರೆ ಇಂಡಿಯಾದಲ್ಲಿ ‘ಗ್ಯಾಸೆಕ್ಸ್’ ಮಾತ್ರೆ ತೆಗೆದುಕೊಳ್ಳುವ ಎಡಪಂಥೀಯರಿದ್ದರಂತೆ. ಅಂಥವರ ಪಂಗಡಕ್ಕೆ ಸೇರ್ಪಡೆಯಾಗುತ್ತಿರುವ ತಳಿ ಇದು.

* * * * * * * *

ಗಟ್ಟಿಗಿತ್ತಿ ಹೆಣ್ಣು ರಮಾಭಾಯಿ, ಹೇತ್ಲಾಂಡಿ ಹುಲಿಕುಂಟಿಯನ್ನು ನಿಭಾಯಿಸಿಕೊಂಡು ಸಂಸಾರ ತೂಗಿಸುತ್ತಾ ಸದಾ ಬೈಗಳು ಮಳೆ ಸುರಿಸುತ್ತಾ, ಈ ಸನ್ಯಾಸಿ ಗಂಡಸಿಗೆ ಅದೇನು ಹೂ ಮುಡುಕೊಳ್ಳೋ ಹುಚ್ಚೋ ಎಂದು ರಾಘವೇಂದ್ರ ಸ್ವಮಿಯನ್ನೇ ಕಿಚಾಯಿಸುತ್ತಾ ಬದುಕುತ್ತಿದ್ದಾರೆ. ಆಕೆ ಅಣ್ಣನ ಮಗಳ ಮದುವೆಗೆಂದು ತಿರುಪತಿಗೆ ಹೊರಟು ನಿಲ್ಲುತ್ತಾಳೆ. ಕದ್ದ ಸೀಳು ಲೋಟವನ್ನು ತಿರುಪತಿಯ ಹುಂಡಿಗೆ ಮಗನ ಕೈಯಿಂದ ಹಾಕಿಸುತ್ತಾಳೆ.

ತನ್ನ ವಸ್ತು ತನ್ನಗೆ ಸಿಕ್ಕಿದಕ್ಕೆ ಗರ್ಭಗುಡಿಯಲ್ಲಿ ವೆಂಕಟರಮಣ ಸ್ವಾಮಿ ಸಮಾಧಾನದ ನಿಟ್ಟುಸಿರು ಬಿಡುತ್ತಾನೆ.

ವಸುಧೇಂದ್ರರ ‘ಹಂಪಿ ಎಕ್ಸ್ಪ್ರೆಸ್’ ಸಂಕಲನದ ಮೊದಲ ಕತೆ ಹೀಗೆ ವಿಚಿತ್ರವಾಗಿ ಬೆಚ್ಚಿಬೀಳಿಸುತ್ತದೆ. ಕಳ್ಳಕಾಣಿಕೆ ಒಪ್ಪಿಸೋದಕ್ಕೆಂದು ಕದಿಯುವ ತಂದೆ ಮಗ, ನಿಜವಾಗಿಯೂ ಕಳ್ಳತನದ ಅಪವಾದ ಹೊತ್ತು ನಿಲ್ಲುವ ತಂದೆ, ಅವನನ್ನು ಕಾಪಾಡಿಕೊಳ್ಳುವ ರಮಾಭಾಯಿ, ಕಡ ತಂದ ಬಳೆಯನ್ನು ಅಡವಿಡುವ ದುಸ್ತರ, ಅದನ್ನು ಬಿಡಿಸಿಕೊಡುವ ಅಣ್ಣನ ಸಹಾನುಭೂತಿ- ಹೀಗೆ ಕತೆಯೊಂದು ಮುನುಕುಲದ ಚರಿತ್ರೆಯ ಹಗೆ ಕಣ್ಮುಂದೆ ಏನೇನನ್ನೋ ತರುತ್ತದೆ. ಎಲ್ಲೋ ಶುರುವಾಗಿ ಹೇಗೋ ಮುಗಿಯುವ ‘ಸೀಳುಲೋಟ’ ಇತ್ತೀಚಿನ ವರ್ಷಗಳಲ್ಲಿ ನಾನು ಓದಿದ ಅತ್ಯತ್ತಮ ಕತೆ. ಅದಕ್ಕಿಂತ ‘ಕೆಂಪುಗಿಣಿ’ ಸೊಗಸಾಗಿದೆ ಎಂದು ಅನೇಕರು ವಾದಿಸುತ್ತಾರಾದರೂ ನನಗೆ ‘ಕೆಂಪುಗಿಣಿ’ಯ ಕೊನೆಯಲ್ಲಿ ಬರುವ ಚಿತ್ರಣ ಅತಿ ಎನಿಸುತ್ತದೆ. ಭೂಮಿಯಲ್ಲಿ ಆಗುವ ಮಾಪರ್ಾಡುಗಳು ನನ್ನನ್ನು ಅಷ್ಟಾಗಿ ಕಂಗೆಡಿಸದೇ ಇರುವುದೂ ಅದಕ್ಕೆ ಕಾರಣ ಇರಬಹುದು.

ನಾನು ಮೆಚ್ಚಿಕೊಂಡ ಮತ್ತೊಂದು ಕತೆ ‘ಕ್ಷಮೆಯಿಲ್ಲದೂರಿನಲ್ಲಿ’. ನಮ್ಮ ಜಗತ್ತಿನ ಸಂಗತಿಗಳನ್ನು ಕಥೆಯಾಗಿಸುವ ಶೈಲಿ ಮತ್ತು ಪರಿಣತಿಗೆ ಇದು ಅತ್ಯುತ್ತಮ ಉದಾಹರಣೆ. ಕೊಎನಕೊನೆಗೆ ಇದೂ ಕೂಡ ಅತಿಯಾಯಿತು ಅನ್ನಿಸಿದರೂ ಆ ಅತಿಯಲ್ಲೂ ಒಂದು ಎಚ್ಚರಿಕೆಯಿದೆ. ತಾವು ತಲುಪಬಹುದಾದ ಪಾತಾಳದ ಅರಿವನ್ನೂ ಈ ಕತೆ ಮೂಡಿಸುತ್ತದೆ.

ಓದಬೇಕು, ಓದಲೇಬೇಕು, ಅದೇನು ಬರೆದಿದ್ದಾರೋ ನೋಡೇಬಿಡೋಣ-ಎಂಬ ಕುತೂಹಲ ಮೂಡಿಸುತ್ತಾ ಬರೆಯುತ್ತಿರುವ ಐದಾರು ಲೇಖಕರ ಪಟ್ಟಿಯಲ್ಲಿ ವಸುಧೇಂದ್ರ ಕೂಡ ಇದ್ದಾರೆ. ಅವರ ಪುಸ್ತಕ ಪ್ರೀತಿ ಈ ಕಥನ ಪ್ರೀತಿಯನ್ನೂ ಮೀರಿದ್ದು.

‘ಹಂಪಿ ಎಕ್ಸ್ಪ್ರೆಸ್’ ನಾವೆಲ್ಲರೂ ಪ್ರಯಾಣ ಮಾಡಬಹುದಾದ, ಪಯಣದ ನೆನಪನ್ನು ಸದಾಕಾಲ ಸ್ಮರಿಸಿಕೊಳ್ಳಬಹುದಾದ, ನಮ್ಮ ದೂರಗಳಿಗೆ ತಲುಪಬಹುದಾದ ಯಾನವಿಮಾನ.

‍ಲೇಖಕರು avadhi

February 9, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

15 ಪ್ರತಿಕ್ರಿಯೆಗಳು

 1. ಸಂದೀಪ್ ಕಾಮತ್

  “ವಸುಧೇಂದ್ರನಿಂದ ಹಿಡಿದು ರವಿ ಬೆಳಗೆರೆಯ ತನಕ, ವಿವೇಕ ಶಾನಭಾಗರಿಂದ ಹಿಡಿದು ಕೆ. ಎನ್. ಗಣೇಶಯ್ಯನ ತನಕ ಯಾರೊಬ್ಬರ ಕೃತಿಯನ್ನೂ ಓದುಗರು ವಿಮರ್ಶಕರ ಮಾತನ್ನು ನೆಚ್ಚಿಕೊಂಡು ಕೊಂಡುಕೊಂಡಿಲ್ಲ”

  100% True 🙂

  ಪ್ರತಿಕ್ರಿಯೆ
 2. ಪಾರ್ಥ

  ವಸುಧೇಂದ್ರನಿಂದ ಹಿಡಿದು ರವಿ ಬೆಳಗೆರೆ ಮತ್ತು ವಿವೇಕ ಶಾನಭಾಗರಿಂದ ಕೆ. ಎನ್. ಗಣೇಶಯ್ಯರವರೆಗೆ… ಅಂತ ಬರೆದಿದ್ದೀರಲ್ಲ, ಈ ನಡುವಿನವರನ್ನು ಹೆಸರಿಸಿರುವಿರಾದರೆ ಅನುಕೂಲ. ಇವರೆಲ್ಲ ನಿಮ್ಮ ಆಪ್ತರು ಅಂತಲೆ? ಚನ್ನಾಗಿ ಬರೆಯುವರು ಅಂತಲೆ? ಇವರಿಗೆ ವಿಮರ್ಶಕರು ಬೇಡ ಅಂತಲೆ? ಇನ್ನಷ್ಟು ವೇದ್ಯವಾದೀತು. ಅಲ್ಲದೆ ನಿಮ್ಮ ದೃಷ್ಟಿಯಲ್ಲಿ ಈ ನಡುವಿನವರು ಯಾರು ಅಂತ ಗೊತ್ತಾದರೆ ಅವರುಗಳನ್ನು ಓದಿ ತಿಳಿಯಬಹುದೇನೋ!

  ಪ್ರತಿಕ್ರಿಯೆ
 3. JOGI

  ಹೆಸರುಗಳು ನೆಪಮಾತ್ರ ಅಂದುಕೊಂಡಿದ್ದೇನೆ. ಅವರ ಮಧ್ಯೆ ಆ ಕೆಟಗರಿಗೆ ಬರುವ ಎಲ್ಲರೂ ಬರುತ್ತಾರೆ. ಸಾಹಿತ್ಯದ ಕುರಿತು ಬರೆಯುವಾಗ ಆಪ್ತರು ಅನ್ನುವುದೆಲ್ಲ ಸುಳ್ಳು. ಕೆ ಎನ್ ಗಣೇಶಯ್ಯ ಸಾಹಿತ್ಯಕ್ಕೆ ಹೊಸ ಎಂಟ್ರಿ. ಅಪಾರ ಓದುಗರಿದ್ದಾರೆ. ವಿವೇಕ್ ಶಾನುಭಾಗರ ಕಾದಂಬರಿ ಕಳೆದ ವರುಷ ಸಿಕ್ಕಾಪಟ್ಟೆ ಮಾರಾಟವಾಗಿದೆ. ವಸುಧೇಂದ್ರರ ಹಂಪಿ ಎಕ್ಸ್ ಪ್ರೆಸ್ ಬಿಡುಗಡೆಯಾದ ಮೂರೇ ವಾರಕ್ಕೆ ಸಾವಿರ ಪ್ರತಿ ಮಾರಾಟವಾಗಿ ಮತ್ತೆ ಮುದ್ರಿಸಿಕೊಳ್ಳಲು ಸಿದ್ಧವಾಗುತ್ತಿದೆ. ಇವರ ಮಧ್ಯೆ ಸೂರಿ, ಜಿ ಎನ್ ಮೋಹನ್, ನಾನು, ನೀವು ಎಲ್ಲರೂ ಇದ್ದೇವೆ. ಯಾರಿರಬೇಕು ಅಂತ ಓದುಗರೇ ನಿರ್ಧಾರ ಮಾಡಬೇಕು, ನಾನಲ್ಲ.

  ಪ್ರತಿಕ್ರಿಯೆ
 4. ಕೇಶವ

  ಜೋಗಿಯವರೇ,
  ನೆಲಗಟ್ಟು-ಮೊಲೆಗಟ್ಟು-ತಲೆಗಟ್ಟು ಓದಿ ಮಣ್ಮುಕ್ಕ-ಬಾಯ್ಮುಕ್ಕ-ಹಾಲ್ಮುಕ್ಕ ಎಂಬ ಹಳೆ ನಾನ್-ವೆಜ್ ಜೋಕು ನೆನಪಾಯಿತು!
  -ಕೇಶವ

  ಪ್ರತಿಕ್ರಿಯೆ
 5. ಮಾನಿ

  ಲೇಖನ ಓದಿದೆ. ನಮ್ಮ ಸಾಹಿತ್ಯ ಜಗತ್ತನ್ನು ಕಲುಶಿತಗೊಳಿಸಿ, ಓದುಗರನ್ನು ಹೆದರಿಸಿದ್ದು ಇಂಥ ವಾದಗಳೇ. ಈ ವಿಮರ್ಶಕರ ಮಾತು ನಂಬಿಕೊಂಡು ಲೇಖಕರೂ ಅದೇ ಥರದ ಕತೆಗಳನ್ನು ಬರೆಯಲಾರಂಬಿಸಿದರು. ಅವನ್ನು ಓದಲಿಕ್ಕಾಗದೇ ನಾವು ಹಿಂಸೆ ಪಡುವಂಥಾಗಿದೆ.
  ಕಣ್ತೆರೆಸುವ ಲೇಖನಕ್ಕೆ ಥ್ಯಾಂಕ್ಸ್.

  ಪ್ರತಿಕ್ರಿಯೆ
 6. sunil

  Namste Sir,
  naanu “Hampi Express” odidini….tumba ishtavaadaddu satya,jotege tamma lekhana kooda 🙂 but nange idannella odidmele hosa anumaana shuruvaagide….nange kathe odoke..artha maadokolloke barode illaveno anta..:)
  Thanks for the writing,
  Sunil.

  ಪ್ರತಿಕ್ರಿಯೆ
 7. santhosh

  ಸತ್ಯ ಮೇವ ಜಯತೇ…???
  — ಸಂತೋಷ್ ಅನಂತಪುರ

  ಪ್ರತಿಕ್ರಿಯೆ
 8. nagnamuny

  ಜನಪ್ರಿಯತೆಯ ಬಲದಿಂದ ಪ್ರಗತಿಪರರನ್ನು ಹತ್ತಿಕ್ಕುವ ಕೆಲಸ ಮಾಡಬೇಡಿ ಜೋಗಿ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾದ ಕಾಲ ಇದು. ಒಳ್ಳೆಯ ಕೆಲಸ ಮಾಡುವವರನ್ನು ವ್ಯಂಗ್ಯವಾಡಿ ಗಳಿಸಿಕೊಳ್ಳುವ ಅನ್ನ ಅನ್ನವಲ್ಲ, ಅಮೇಧ್ಯ.
  ನಗ್ನಮುನಿ

  ಪ್ರತಿಕ್ರಿಯೆ
 9. gopikavallabha

  ಮಹಿಳೆಯರ ಮೇಲೆ ಹಲ್ಲೆ, ದಲಿತರ ಮೇಲಿನ ದೌರ್ಜನ್ಯ ಇತ್ಯಾದಿಗಳ ವಿರುದ್ಧ ಮಾತಾಡುವವರು ‘ನೆಲೆಗಟ್ಟಿನವರ’ಂತೆಯೂ, ಕನ್ನಡ ಸಾಹಿತ್ಯಕ್ಕೆ ಅಪ್ಪಟ ಹೊಸ ಸಂವೇದನೆಯನ್ನು ನೀಡಿದ ವಿ.ಎಂ.ಮಂಜುನಾಥ್, ಕಾರ್ಪೆಂಟರ್ ಮೊದಲಾದವರು ‘ಮೊಲೆಗಟ್ಟಿನವರ’ಂತೆಯೂ, ಪತ್ರಿಕೆಗಳ ವಿಮರ್ಶೆ ಬರಿ ಬೂಸಿಯಾಗುತ್ತಿದೆ ಎಂಬುದನ್ನು ‘ಕನ್ನಪ್ರಭ’ದ ಉದಾಹರಣೆಗಳ ಮೂಲಕ ಸಾಧಾರ ಎತ್ತಿ ತೋರಿಸುತ್ತಿರುವವರು ‘ತಲೆಗಟ್ಟಿನವರ’ಂತೆಯೂ ಜೋಗಿಯವರ ಕಣ್ಣಿಗೆ ಕಾಣಿಸುತ್ತಿರಬೇಕು. ಕನ್ನಡದ ಓದುಗರ ಮೂಲಕ ಜನಪ್ರಿಯತೆ, ಹಣ ಪಡೆದ ಜೋಗಿ ಈಗ ವಿಮರ್ಶಕರನ್ನು ತೆಗಳಿ ಇನ್ನಷ್ಟು ಜನಪ್ರಿಯರಾಗಲು ಹವಣಿಸುತ್ತಿದ್ದಾರೆ. ಅಂದು ಭೈರಪ್ಪನವರನ್ನು ಟೀಕಿಸಿದಿರಿ, ಇಂದು ವಿಮರ್ಶಕರನ್ನು. ಅಂತೂ ಅಗ್ಗದ ಪಾಪ್ಯುಲಾರಿಟಿ ಗಳಿಸುವ ಯಾವ ಅವಕಾಶವನ್ನೂ ನೀವು ಬಿಡುವುದಿಲ್ಲ.ಹೀಗೇ ಇರಿ ಜೋಗಿ. ನಿಮ್ಮ ಬಣ್ಣ ಯಾವತ್ತೋ ಬಯಲಾಗಿದೆ.
  -ಗೋಪಿಕಾವಲ್ಲಭ

  ಪ್ರತಿಕ್ರಿಯೆ
 10. ರಂಜಿತ್

  ವಸುಧೇಂದ್ರ ರ ಹಂಪಿ ಎಕ್ಸ್ ಪ್ರೆಸ್ ಬಗೆಗಿನ ವಿಮರ್ಶೆ ನೇರವಾಗಿ ಚೆನ್ನಾಗಿ ಮಾಡಿದಿರಿ.

  ಸಾಹಿತಿಗಳ ವರ್ಗೀಕರಣದ ಬಗ್ಗೆ ಬರೆಯುವ ಅಗತ್ಯವಿದ್ದಿರಲಿಲ್ಲ ಅನಿಸಿತು.

  ಪ್ರತಿಕ್ರಿಯೆ
 11. Mahesh

  Jogi cleverly avoids writing about writers
  like S L Bhairappa whose books are sold
  in tens of thousands.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: