ಜೋಗಿ ಬರೆಯುತ್ತಾರೆ: 'ಪಂಚರಂಗಿ' ಭಟ್ಟರಿಗೆ ನಮಸ್ಕಾರ

ಭಟ್ಟರಿಗೆ ನಮಸ್ಕಾರ
ಯೋಗರಾಜ ಭಟ್ಟರಿಗೆ ನಮಸ್ಕಾರಗಳು,
ತಮ್ಮಲ್ಲಿ ಯೋಗಕ್ಷೇಮ ವಿಚಾರಿಸುವುದೂ ಮಟನ್ ಅಂಗಡಿಯಲ್ಲಿ ಮಲ್ಲಿಗೆ ಹೂ ಕೇಳುವುದೂ ಒಂದೇ ಅಂತ ಗೊತ್ತಿದೆ. ನಿಮ್ಮ ಯೋಗವೂ ಕ್ಷೇಮವೂ ಚೆನ್ನಾಗಿಯೇ ಇದೆ. ಕಾಲಕಾಲಕ್ಕೆ ಹೊಸ ಹೊಸ ಸಿನಿಮಾಗಳನ್ನು ಮಾಡುತ್ತಾ ತಾವು ಸುಖವಾಗಿದ್ದೀರಿ ಮತ್ತು ಸಂಕಟದಲ್ಲಿದ್ದೀರಿ. ನಿಮ್ಮ ಸುಖಸಂಕಟಗಳು ಹಾಗೇ ಇರಲಿ ಎಂದು ನೀವು ನಂಬಿದ ದೇವರಲ್ಲಿ ನಮ್ಮದೂ ಒಂದು ವಿನಂತಿ.
ನಿಮ್ಮ ಮುಂಗಾರು ಮಳೆಯಲ್ಲಿ ಮಿಂದವರಿಗೆ ನಿಮ್ಮೊಳಗೆ ಇಷ್ಟೆಲ್ಲ ಸರಕಿದೆ ಎಂದು ಗೊತ್ತಿರಲಿಲ್ಲ. ತುಂಬ ಹಿಂದೆ ಟೀವಿಗೊಂದು ಸೀರಿಯಲ್ಲು ಮಾಡಬೇಕೆಂದು ಓಡಾಡುತ್ತಿದ್ದ ದಿನಗಳಲ್ಲಿ ನೀವು ಸರಳ ಸಜ್ಜನ ಜಾಣ ಬ್ರಾಹ್ಮಣನ ಹಾಗೆ ಕಾಣಿಸುತ್ತಿದ್ದಿರಿ. ಆಗಲೂ ಕತೆಯಿಲ್ಲದೆ ಸಿನಿಮಾ ಮಾಡುವ ಹುಮ್ಮಸ್ಸಿನಲ್ಲಿದ್ದಿರಿ.  ಕತೆಯಿಲ್ಲದೆ ಸಿನಿಮಾ ಮಾಡುವುದು ಸಾಧ್ಯವೇ ಇಲ್ಲ ಎಂದೂ ಕನಿಷ್ಠ ಮೂರೋ ನಾಲ್ಕು ಹೊಡೆದಾಟ, ಪ್ರೇಮದ ಕುರಿತ ಅಸ್ಖಲಿತ ಹಪಾಹಪಿ ಮತ್ತು ಒಂದು ನಾಲ್ಕೋ ಐದು ಹಾಡುಗಳನ್ನೇ ಕತೆ ಎಂದೂ ನಂಬಿದ್ದ ಗಾಂಧೀನಗರದ ಬಂಗಾರದ ಮನುಷ್ಯರಿಗೆ ನೀವು ಕತೆಯಿಲ್ಲದೇ ಸಿನಿಮಾ ಮಾಡುತ್ತೇನೆ ಎಂದಾಗ ಕಿವಿಯ ಪಕ್ಕ ಬಾಂಬು ಸಿಡಿದಂತಾಗಿರಬೇಕು.
ನಿಮ್ಮ ಮಣಿ’ ಚೆನ್ನಾಗಿತ್ತು. ಕೆಲವರು ತಮಿಳು ಸಿನಿಮಾದಂತಿದೆ ಎಂದರು. ಸೈಕಲ್ಲು ಹಿಡಕೊಂಡು ಓಡಾಡುವ ನಾಯಕ, ಸಿಗದ ಹುಡುಗಿ, ಅವನ ಹುಡುಕಾಟ, ಅಲ್ಲೊಬ್ಬ ಬೊಬ್ಬೆ ಹಾಕಿಕೊಂಡು ಓಡಾಡುವ ಅರೆಜಾಣ- ಎಲ್ಲವೂ ಸೇರಿಕೊಂಡು ಆಹಾ ಎಂಥಾ ಸೊಗಸಾಗಿದೆ ಎಂದು ಖುಷಿಪಡುವ ಹೊತ್ತಿಗೆ ಕ್ಲೈಮ್ಯಾಕ್ಸು ಬಂದುಬಿಟ್ಟಿತ್ತು. ವಧೂವರರು ಎಷ್ಟು ಸೊಗಸಾಗಿದ್ದರೆ ಏನಂತೆ, ಊಟ ಭರ್ಜರಿಯಾಗಿರಬೇಕಲ್ಲ. ಕೊನೆಯ ಪುಟ ನನ್ನದಲ್ಲ ಎಂದು ನೀವು ಗುಟ್ಟಾಗಿ ಹೇಳಿ ಕೈ ತೊಳೆದುಕೊಂಡಿರಿ.
ಮುಂಗಾರು ಮಳೆಯ ನಾಯಕ ಗಣೇಶ್ ಅಂತ ಯಾರೆಷ್ಟೇ ಹೇಳಿದರೂ ಅಲ್ಲಿ ಕಂಡದ್ದು ನೀವೇ. ನಿಮ್ಮ ಆತ್ಮಚರಿತ್ರೆಯ ಒಂದು ಅಧ್ಯಾಯದಂತಿತ್ತು ಅದು. ಹಾಗಿಲ್ಲದೇ ಹೋದರೆ ಅಷ್ಟು ಗಾಢವಾದ ವಿರಹ, ಅಷ್ಟು ಮಾರ್ದವದ ಪ್ರೀತಿಯನ್ನು ತೆರೆಯ ಮೇಲೆ ತರಲಿಕ್ಕಾಗುತ್ತಿತ್ತೇ? ನಿಮ್ಮೊಳಗಿನ ಪ್ರೀತಿಯನ್ನೆಲ್ಲ ಸುರಿದು ಮಾಡಿದ ಸಿನಿಮಾದಂತೆ ಅದು ಕಾಣಿಸುತ್ತಿತ್ತು. ನೀವು ಅಷ್ಟೊಂದು ತರಲೆ ಅಂತ ಗೊತ್ತಾದದ್ದು ಆಗಲೇ. ಗಾಳಿಪಟದ ಸೂತ್ರ ನಿಮ್ಮ ಕೈಗೆ ಸಿಕ್ಕೇಬಿಟ್ಟಿತ್ತು. ಗಣೇಶ್ ಬಾಲಂಗೋಚಿಯಂತೆ ಗೋಚರಿಸುತ್ತಿದ್ದರು. ಗಾಂಧೀನಗರದ ಬುದ್ಧಿವಂತರು ಮೊದಲ ಬಾರಿಗೆ ಜೋಗಾದ್ ಗುಂಡಿ ನೋಡಿದರು.
ಮುಂದೆ ಎಲ್ಲವೂ ನಿಮ್ಮಿಷ್ಟದಂತೆಯೇ ನಡೆಯಿತು. ನೀವು ಮನಸಾರೆ ಒಪ್ಪಿಕೊಂಡು ಮಾಡಿದ್ದನ್ನು ನಾವೂ ಮನಸಾರೆ ಸ್ವೀಕರಿಸಿದೆವು. ತರಲೆಯ ಹಾಗೆ ಮಾತಾಡುತ್ತಾ, ತುಂಟತನ ಬಿಟ್ಟುಕೊಡದಂತೆ ನಟಿಸುತ್ತಾ, ಒಳಗೊಳಗೇ ಸಿಟ್ಟಾದರೂ ತೋರಿಸಿಕೊಳ್ಳದೇ, ಮನೆ, ಮಗು, ಮಡದಿ ಮತ್ತು ಗೆಳೆಯರನ್ನು ಸಂಭಾಳಿಸುತ್ತಾ ನಡುನಡುವೆ ಕತೆಯಲ್ಲದ ಕತೆ ಬರೆಯುತ್ತಾ ಪದ್ಮನಾಭನಗರದ ಆಸುಪಾಸಲ್ಲೇ ಓಡಾಡಿಕೊಂಡಿದ್ದಿರಿ. ನೀವು ಈಗಲೂ ಎಸ್‌ಎಲ್‌ವಿಯಲ್ಲಿ ಇಡ್ಲಿ ತಿನ್ನುತ್ತೀರಂತೆ, ಗೆಳೆಯ ಹೇಳುತ್ತಿರುತ್ತಾನೆ. ಗೆದ್ದ ನಿರ್ದೇಶಕರೂ ಇಡ್ಲಿ ತಿನ್ನುತ್ತಾರೆ ಎಂದು ಶ್ರೀಸಾಮಾನ್ಯರಿಗೆ ಗೊತ್ತಾದದ್ದೇ ಆಗ. ನಮ್ಮ ಖ್ಯಾತ ನಟರು ಹೊಟ್ಟೆಗೆ ಏನು ತಿನ್ನುತ್ತಾರೆ ಎಂಬುದು ಇವತ್ತಿಗೂ ಚಿದಂಬರ ರಹಸ್ಯ.
ನೀವು ಅಸಾಧ್ಯರು ಮಾರಾಯರೇ. ಯೋಗರಾಜ ಅಲ್ಲ ರಾಜಯೋಗ ನಿಮ್ಮದು. ಈ ಮನುಷ್ಯ ಏನು ಮುಟ್ಟಿದರೂ ಚಿನ್ನ ಅಂತಿರುತ್ತಾರಂತೆ ಗಾಂಧೀನಗರದ ಮಂದಿ. ಹಾಗಂತ ಮುಟ್ಟಿಸಿಕೊಳ್ಳಲು ಅವರಿಗೆ ಇನ್ನೂ ಭಯ. ನೀವೂ ಕೂಡ ಎಲ್ಲಿ ಮುಟ್ಟಿಸಿಕೊಳ್ಳುತ್ತಾರೋ ಎಂಬ ಭಯಕ್ಕೆ ಅತ್ತ ಕಾಲಿಡುತ್ತಿಲ್ಲವಂತೆ, ಹೌದೇ..
ಮೊನ್ನೆ ಪಂಚರಂಗಿ’ ನೋಡಿದೆ. ಮಾತಿದೆ, ಕತೆಯಿಲ್ಲ ಎಂದು ಅನೇಕರು ಎಚ್ಚರಿಸಿದ್ದರು. ದಿನಾ ಬೆಳಗ್ಗೆ ಒಬ್ಬರು ನಿರ್ದೇಶಕರು ಮತ್ತೊಬ್ಬ ಹಂಚಿಕೆದಾರರಿಗೆ ಫೋನು ಮಾಡಿ ಕಲೆಕ್ಷನ್ನುಗಳು ಹೇಗಿದೆ’ ಎಂದು ವಿಚಾರಿಸಿಕೊಳ್ಳುತ್ತಾರಂತೆ. ನಿಮ್ಮ ಎಂಥಾ ಅದಮ್ಯ ಕಾಳಜಿ. ಜಗತ್ತಿಗೂ ಐದು ಬಣ್ಣ, ಎಲ್ಲವೂ ಇಲ್ಲಿ ಪಂಚರಂಗಿ.
ಎಲ್ಲಾ ತಮಾಷೆಗಳನ್ನೂ ಪಕ್ಕಕ್ಕಿಟ್ಟು ನಿಮಗೆ ನಮಸ್ಕಾರ, ಕತೆಯಿಲ್ಲದೆ ಸಿನಿಮಾ ಮಾಡಿದ್ದಕ್ಕಲ್ಲ, ಮಾತಲ್ಲೇ ಮರುಳು ಮಾಡಿದ್ದಕ್ಕೂ ಅಲ್ಲ, ಪ್ರೇಕ್ಷಕರನ್ನು ಮರಳಿ ಥೇಟರಿಗೆ ಕರೆತಂದದ್ದಕ್ಕೂ ಅಲ್ಲ, ಕಾವ್ಯಕ್ಕಷ್ಟೇ ಒಗ್ಗುವ ಭಾಷೆಯನ್ನು ತೆರೆಗೆ ಒಗ್ಗಿಸಿದ್ದಕ್ಕೂ ಅಲ್ಲ. ಅದೆಲ್ಲ ನಿಮಗೆ ಅಷ್ಟೇನೂ ಕಷ್ಟದ್ದಲ್ಲ ಎಂದು ಗೊತ್ತು. ಅದನ್ನೂ ಮೀರಿ ನೀವೊಂದು ಕೆಲಸ ಮಾಡಿದ್ದೀರಿ. ಕೋಟ್ಯಂತರ ರುಪಾಯಿ ಖರ್ಚು ಮಾಡಿದರಷ್ಟೇ ಸಿನಿಮಾ ಎಂದು ಬೀಗುವ ಮಂದಿಗೆ, ವಿದೇಶದಲ್ಲಿ ಚಿತ್ರೀಕರಣ, ನೂರಾರು ದಿನ ಶೂಟಿಂಗು, ಭಯಂಕರ ಸೆಂಟಿಮೆಂಟು, ಕರುನಾಡನ್ನು ಹೊಗಳುವ ಒಂದು ಹಾಡು, ಕೈಯಲ್ಲೊಂದು ಕತ್ತಿ, ಹೊಡೆದಾಟ ಬಲ್ಲ ನಾಯಕ- ಇವಿಷ್ಟಿಲ್ಲದೇ ಸಿನಿಮಾ ಆಗುವುದಿಲ್ಲ ಎಂದು ನಂಬಿದ ನಮಗೆ ಬೇರೊಂದು ಜಗತ್ತು ತೋರಿಸಿದ್ದಕ್ಕೆ.
ಯಾವತ್ತೋ ಎಚ್‌ಎಸ್‌ವಿ ಬರೆದ ಒಂದು ತುಂಟ ಪದ್ಯ ನಿಮ್ಮ ಸಂಭಾಷಣೆ ಕೇಳುವಾಗೆಲ್ಲ ನೆನಪಾಗುತ್ತಿತ್ತು. ಜೋತಾಡುವ ವಸ್ತುಗಳು ಎಂದು ಕವಿತೆಯ ಹೆಸರು. ಅದರ ಒಂದಷ್ಟು ಸಾಲು ಹೀಗೆ: ಮುದುಕರ ಹುಬ್ಬುಗಳು, ಹರೆಯದವರ ಉಬ್ಬುಗಳು, ಹಿಂದಿನವರ ಆಸೆಗಳು, ಇಂದಿನವರ ಮೀಸೆಗಳು- ಜೋತಾಡುವ ವಸ್ತುಗಳು. ಹೀಗೆ ಒಂದಕ್ಕೊಂದು ಸಂಬಂಧವಿಲ್ಲದ್ದನ್ನು ಅವರು ಕವಿತೆಯಲ್ಲಿ ಹಿಡಿದಿಟ್ಟು ಮಜಾ ಕೊಟ್ಟಿದ್ದರು. ಕೊಂಚ ಯೋಚಿಸಿದರೆ ಅದಕ್ಕೆ ಅರ್ಥವೂ ಇರುತ್ತಿತ್ತು.
ನೀವೂ ಅಷ್ಟೇ, ನಮ್ಮ ಸದ್ಯದ ಗೊಂದಲ, ಭಾಷೆಯ ಮೂಲಕ ಹೇಳಲಾಗದ ಪರಿತಾಪ, ಈ ರಗಳೆ, ಈ ಹಿಂಸೆ, ಹೊಟ್ಟೆಕಿಚ್ಚು,  ನಮ್ಮದಲ್ಲದ ಅಂಗಿ, ಬಟ್ಟೆ, ತಿಂಡಿ, ಊಟ, ನಮ್ಮ ವಿದ್ಯೆಗೆ ಒಗ್ಗದ ಉದ್ಯೋಗ, ಸೀರಿಯಲ್ಲು ಭರಾಟೆ, ಚಾನಲ್ಲುಗಳ ರಿಯಾಲಿಟಿ ಷೋ, ಅದದೇ ಮಾತು, ದಿಕ್ಕೆಟ್ಟ ಹಗಲು ರಾತ್ರಿ, ಕಂಗೆಟ್ಟ ರಸ್ತೆ- ಇವನ್ನೆಲ್ಲ ನೋಡಿ ಇಷ್ಟನ್ನೆಲ್ಲ ಒಟ್ಟಿಗೆ ಹೇಳುವುದು ಹೇಗೆ ಒಂದು ಗೊತ್ತಾಗದೇ ಪರದಾಡುತ್ತಿದ್ದವರಿಗೆ ಒಂದೊಳ್ಳೇ ಮಾತು ಕರುಣಿಸಿದಿರಿ. ಎಲ್ಲವೂ ಮೀಡಿಯೋಕರ್ ಆಗುತ್ತಾ,  ಅದೇ ಶ್ರೇಷ್ಠ ಎಂದು ನಂಬುತ್ತಾ, ಅದನ್ನೆ ಬಹುಪರಾಕ್ ಎಂದು ಕೊಂಡಾಡುತ್ತಿದ್ದವರನ್ನು ಕೊಂಚ ಸೈಡ್‌ವಿಂಗಿಗೆ ಕರೆದುಕೊಂಡು ಹೋಗಿ, ಬಣ್ಣ ಕಳಚಿದ್ದೀರಿ.
ಮರಳಲ್ಲಿ ಹುಗಿದು ಕೂತವನ ವಿಚಿತ್ರ ತತ್ವಜ್ಞಾನ, ಆ ಹುಡುಗನ ಉಡಾಫೆ, ಅವಳ ತರಲೆ, ವಾಸ್ತುಶಾಸ್ತ್ರಜ್ಞನ ಅಗ್ನಿಮೂಲೆಗೆ ನೀವು ಬೆಂಕಿ ಹಚ್ಚಿದ ರೀತಿ, ಎಲ್ಲರನ್ನೂ ಸುಳ್ಳೇ ಸುಳ್ಳೇ ನಂಬಿಸುತ್ತಿರುವ ಜಗದ್ಗುರುಗಳ ಕಾವಿ ಕಳಚಿದ್ದು, ಎಲ್ಲವನ್ನೂ ನೋಡುತ್ತ ನಕ್ಕೆವು. ನನ್ನ ಪುಟ್ಟ ಮಗಳೂ ಪಂಚರಂಗಿ ಪಾಂವ್ ಪಾಂವ್ ಅನ್ನುತ್ತಾಳೆ. ಅವಳಿಗೆ ಎಷ್ಟು ಅರ್ಥವಾಯಿತೋ ಗೊತ್ತಿಲ್ಲ. ನನಗೆಷ್ಟು ಅರ್ಥವಾಯಿತು ಅನ್ನುವುದೇ ಇನ್ನೂ ಸ್ಪಷ್ಟವಿಲ್ಲ.
ಮುಂದೇನು ಅಂತ ನಿಮಗೂ ಗೊತ್ತಿಲ್ಲ ಎಂದು ಗೊತ್ತು. ಯೋಚಿಸಿ ಮಾಡುವ ಸಿನಿಮಾ ಅಲ್ಲ ಅದು. ಥಟ್ಟನೆ ಏನೋ ಹೊಳೆದು, ಅದನ್ನು ಕಾರ್ಯರೂಪಕ್ಕೆ ಇಳಿಸಿ, ಸುಮ್ಮನೆ ಹೀಗಿದೆ ನೋಡಿ ಎಂದು ಮುಂದಿಡುವ ಪೈಕಿ ನೀವು ಅಂತ ಗೊತ್ತು. ನಮ್ಮೆಲ್ಲರ ದುರಂತ ಏನೆಂದರೆ, ಇಷ್ಟೆಲ್ಲ ಆದ ಮೇಲೂ ಸಿನಿಮಾ ಮಾಡ್ತೀನಿ ಅಂದರೆ ಮತ್ತೆ ಅದೇ ಪ್ರಶ್ನೆ ಕೇಳುತ್ತಾರೆ- ಕತೆ ಏನು?   ಸಿನಿಮಾ ನೋಡಿ ಖುಷಿಯಾಗಿ ಮನೆಗೆ ಹೋಗೋ ಹೊತ್ತಿಗೆ ಅದೇ ಮಾತಾಡುತ್ತಾರೆ, ಚೆನ್ನಾಗಿದೆ ಆದ್ರೆ ಕತೆಯಿಲ್ಲ. ಕತೆ ಹೇಳೋದಕ್ಕೆ ಸಿನಿಮಾ ಮಾಧ್ಯಮ ಯಾಕೆ ಬೇಕು, ಕಾದಂಬರಿ ಓದ್ಕೊಳ್ಳಿ ಹೋಗಿ ಅಂತ ಮುಖಕ್ಕೆ ಹೊಡೆದ ಹಾಗೆ ನೀವು ಹೇಳಿಬಿಟ್ಟಿದ್ದೀರಿ.
ನಿಮ್ಮ ಆರಂಭದ ದಿನಗಳ ಹುಡುಕಾಟ, ನಂತರದ ಕಳವಳ, ನಡುವೆ ಆದ ಅವಮಾನ ಎಲ್ಲವನ್ನೂ ನೀವೂ
ಮರೆತಿದ್ದೀರಿ.  ಈ ಮಧ್ಯೆ ಒಂಚೂರು ವಿನಯವಂತನ ಹಾಗೆ ನಟಿಸೋದಕ್ಕೂ ಕಲಿತಿದ್ದೀರಿ. ನಿಮ್ಮ ಆಶೀರ್ವಾದ ಅಂತ ಥೇಟ್ ಜಾಣರ ಹಾಗೂ ಮಾತಾಡ್ತೀರಿ. ಅಂಥದ್ದೇನಿಲ್ಲ ಅನ್ನೋದು ನಿಮಗೂ ಗೊತ್ತಿದೆ. ಇರ್ಲಿ ಬಿಡಿ, ಸಹಿಸ್ಕೋತೀವಿ.
ಮುಂದೇನು ಮಾಡ್ತೀರಿ ಅಂತ ಅವರೆಲ್ಲ ಕಾಯ್ತಿದ್ದಾರೆ. ಯಾರೋ ಆಗ್ಲೇ ಭಟ್ರು ಇಷ್ಟೇನೇ’ ಅಂತ ಹೇಳಿಯೂ ಬಿಟ್ಟಿದ್ದಾರೆ. ಹೌದು ಅಂತ ತಲೆಯಾಡಿಸಿ ಅಷ್ಟೇ ಅಲ್ಲ ತೋರಿಸೋದಕ್ಕೆ ನೀವೂ ತಯಾರಾಗಿದ್ದೀರಿ ಅಂತ ಗೊತ್ತು. ವಿಚಿತ್ರವಾಗಿ ಹಾಡು ಬರೀತಾ, ಯಾವುದೋ ಲಯದಲ್ಲಿ ಮಾತಾಡ್ತಾ, ಮಾತೇ ಬಂಡವಾಳ ಅಂದವರಿಗೆ ಹೌದಪ್ಪಾ ಹೌದು ಅಂತ ಹೇಳ್ತಾ, ಅದೇ ಮಾತಲ್ಲಿ ಅವರಿಗೆ ಒಂಚೂರು ಸುಖ ಕೊಡ್ತಾ ಇದ್ದೀರಿ. ಹಾಗೇ ಇರಿ, ಏನಂತೆ. ಅಷ್ಟಕ್ಕೂ ಭಟ್ಟರು ಸಾಂತ್ವನ ನೀಡೋದು ಮಾತಲ್ಲೇ ಅಲ್ವೇ. ಸಂಸ್ಕೃತದಲ್ಲಿ ಮಂತ್ರ ಹೇಳ್ತಾ ಭಕ್ತರ ಆಶಯಗಳನ್ನು ದೇವರಿಗೆ ಮುಟ್ಟಿಸ್ತಾ ಆ ಕಾಲದ ಭಟ್ಟರು ನೆಮ್ಮದಿ ನೀಡ್ತಿದ್ದರು. ನೀವೊಂಚೂರು ಮಾಡರ್ನು, ಅಚ್ಚಕನ್ನಡದಲ್ಲಿ ಅರ್ಥ ಆಗೋ ಹಾಗೆ ಮಾತಾಡ್ತಾನೇ ಖುಷಿ ಕೊಡ್ತಿದ್ದೀರಿ.
ಹೋಗ್ಲಿ ಬಿಡಿ. ಮತ್ತೇನು ವಿಶೇಷಗಳು. ಉದ್ದುದ್ದ ಮಾತುಗಳು, ಒಂಚೂರು ಕತೆಗಳು, ನಮ್ಮೆಲ್ಲರ ವ್ಯಥೆಗಳು, ತರಲೆ ಗೀತೆಗಳು, ಭಯಂಕರ ಕಲೆಕ್ಷನ್ನುಗಳು, ಹೆಣ್ಮಕ್ಕಳ ಪ್ರೇಮಗಳು,  ಹುಡುಗರ ಡ್ರೀಮುಗಳು..  ಲೆಟರು ಇಷ್ಟೇನೇ. ಯಾವಾತ್ತಾದ್ರೂ ಸಿಕ್ಕರೆ, ಮುಂದಿನ ಮಾತುಗಳು.

‍ಲೇಖಕರು avadhi

September 23, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

10 ಪ್ರತಿಕ್ರಿಯೆಗಳು

 1. rs

  ವಾವ್ ಪಂಚರಂಗಿ ಯಂತೆ ಇದೂ ತುಂಬಾನೆ ಇಷ್ಟವಾಯಿತು

  ಪ್ರತಿಕ್ರಿಯೆ
 2. anand

  ಗೆದ್ದಾಗ ಹೊಗಳಿಕೆಗಳು, ಸೋತಾಗ ಟೀಕೆಗಳು, ಗಾಂಧೀನಗರದ ಗಿಮಿಕ್ಕುಗಳು, ಪತ್ರಕರ್ತರ ಟೆಕ್ನಿಕ್ಕುಗಳು, ಕೆಲವರ ಸೋಗುಗಳು………….. list continues….

  ಪ್ರತಿಕ್ರಿಯೆ
 3. sangeethajohnson

  ನಿರ್ದೇಶಕ ಯೋಗರಾಜ ಭಟ್ಟರ ಹೆಮ್ಮೆಯ ಸಂಭಾಷಣೆ “ಗಳುಗಳು” , ಎಚ್. ಎಸ್. ವಿ .ಯವರ ಕವನದಲ್ಲಿ ಬಹಳ ಹಿಂದೆಯೇ ಬಂದಿತ್ತು ಅನ್ನುವುದನ್ನು, ಲೇಖಕ ಜೋಗಿಯವರು ಗಮನಕ್ಕೆ ತಂದ ರೀತಿ ಚೆನ್ನಾಗಿತ್ತು, ಹೀಗೆಯೇ , ಯಾರ್ ಯಾರಿಗೆ ಎಲ್ಲೆಲ್ಲಿಂದ ಸ್ಪೂರ್ತಿ ಸಿಗ್ತಾ ಇರ್ತದೆ ಅನ್ನುವುದನ್ನು ಕನ್ನಡ ನಾಡಿನ ಬಡ ಅಭಿಮಾನಿಗಳ ಗಮನಕ್ಕೆ ತರುತ್ತಿರಿ , ನಿಮ್ಮ ಲೇಖನಿ ಹರಿತವಾಗಿ ಬರೆಯುತ್ತಿರಲಿ.
  ಸಂಗೀತಾ ಜಾನ್ಸನ್.

  ಪ್ರತಿಕ್ರಿಯೆ
 4. visharada

  ಫೋಟೋದಲ್ಲಿ ಜೋಗಿ ಮೀನು ಹಿಡ್ಕೊಂಡಿದ್ದಾರಾ ಇಲ್ಲ ಮೀನೇ ಜೋಗೀನ ಹಿಡ್ಕೊಂಡಿದ್ಯಾ ಕನ್ಫ್ಯೂಸ್ ಆಯ್ತು! ಫೊಟೋ ಪಂಚ್ -ರಂಗಿ!

  ಪ್ರತಿಕ್ರಿಯೆ
 5. Vasanth

  This piece is written to praise Yograj Bhat. This is not a right kind of film criticism. I hope this article won’t be published in future compilation of Jogi’ sir book. We have better film than this. Media has played a vital role in making this a hit. Two weeks successful running is a hit now a days.

  ಪ್ರತಿಕ್ರಿಯೆ
 6. Shiva Kumar

  Yogaraj Bhat has a great coterie, to hail him all the time. And Jogi seems to be an expert in feel-good write-ups. Quite understandable, for frankness and criticism is an alien concept in a coterie. Else, things fall apart….and none will benefit…

  ಪ್ರತಿಕ್ರಿಯೆ
 7. Sunil HH

  “ಕೋಟ್ಯಂತರ ರುಪಾಯಿ ಖರ್ಚು ಮಾಡಿದರಷ್ಟೇ ಸಿನಿಮಾ ಎಂದು ಬೀಗುವ ಮಂದಿಗೆ, ವಿದೇಶದಲ್ಲಿ ಚಿತ್ರೀಕರಣ, ನೂರಾರು ದಿನ ಶೂಟಿಂಗು, ಭಯಂಕರ ಸೆಂಟಿಮೆಂಟು, ಕರುನಾಡನ್ನು ಹೊಗಳುವ ಒಂದು ಹಾಡು, ಕೈಯಲ್ಲೊಂದು ಕತ್ತಿ, ಹೊಡೆದಾಟ ಬಲ್ಲ ನಾಯಕ- ಇವಿಷ್ಟಿಲ್ಲದೇ ಸಿನಿಮಾ ಆಗುವುದಿಲ್ಲ ಎಂದು ನಂಬಿದ ನಮಗೆ ಬೇರೊಂದು ಜಗತ್ತು ತೋರಿಸಿದ್ದಕ್ಕೆ”
  Super jogi sir…

  ಪ್ರತಿಕ್ರಿಯೆ
 8. kohimavittal

  Well written on a well deserving person on one who is trying to give different direction to the Kannada movie industry

  ಪ್ರತಿಕ್ರಿಯೆ
 9. Nataraja

  ಯೋಗಿಯವರ ಕುರಿತು ಬರೆದ ಜೋಗಿಯವರಿಗೆ ಧನ್ಯವಾದಗಳು. ನೀವು ಹೇಳಿರುವುದು ಅಕ್ಷರಃ ನಿಜ. ಪಂಚರಂಗಿಯಲ್ಲಿ ಬಾಳಿನ ಹಲವು ಹತ್ತು ಬಣ್ಣಗಳಿವೆ. ಚಿತ್ರ ನಿಜವಾಗಿಯು ಒಂದರ್ಥದಲ್ಲಿ ನಿಮ್ಮ ಹೊಗಳಿಕೆಗೆ ಅರ್ಹವಾಗಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ ಸಿನಿಮಾ ಮಾತಿಲ್ಲದೆಯೂ ಗಮನ ಸೆಳೆಯಬಹುದಾದ ಮಾಧ್ಯಮ. ಅಂಥದ್ದರಲ್ಲಿ ಬರೀ ಮಾತನ್ನೇ ಬಂಡವಾಳ ಮಾಡಿಕೊಂಡು ಅದಕ್ಕಿರುವ ಅಗಾಧ ಸಾಧ್ಯತೆಗಳನ್ನು ಮೊಟಕಾಗಿಸುವುದೆಂದರೆ ಅದೊಂದು ಅಪಚಾರವೇ ಸರಿ. ಸಿನಿಮಾ ಪಾತ್ರಗಳಿಗಿಂತ ಸಿನಿಮಾ ಹೆಚ್ಚು ಮಾತಾಡುವಂತಾಗಬೇಕು. ಭಟ್ಟರು ಕನ್ನಡದ ಕೆಲವೇ ಉತ್ತಮ ನಿರ್ದೇಶಕರಲ್ಲಿ ಒಬ್ಬರು ಎನ್ನುವುದರಲ್ಲಿ ಎರಡು ಮಾತಿಲ್ಲ……. ಆದರೆ ಕುರೊಸೊವಾ ನ ಕುರಿತು ಮಾತಾಡುವ ಭಟ್ಟರು ಬರೀ “ಕಮರ್ಷಿಯಲ್” ಅಂಶಗಳನ್ನಷ್ಟೆ ಮುಟ್ಟುವಲ್ಲಿ ನಿರತರಾದರೆ ತಮಗೆ ತಾವೆ ಅಪಚಾರ ಎಸಗಿಕೊಂಡಂತೆ. ನಾವು ಭಟ್ಟರಿಂದ ನಿರೀಕ್ಷಿಸುವುದು ಬರೀ ಮುಂಗಾರು ಮಳೆ, ಗಾಳಿಪಟ ಅಥವಾ ಮನಸಾರೆ ಮಾತ್ರವಲ್ಲ………. ಮಾತು ಕಡಿಮೆ ಇದ್ದು ಪ್ರೇಕ್ಷಕರ ಮನ ಮುಟ್ಟಬಲ್ಲ ಪಂಚರಂಗಿ ಯನ್ನ. ಭಟ್ಟರು ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆಂದು ನಂಬಿರುತ್ತೇನೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: