ಜೋಗಿ ಬರೆಯುತ್ತಾರೆ: ಪ್ರತಿಭಾ ನಂದಕುಮಾರ್ ಎಂಬ 'ಕಾಫಿ ಹೌಸ್'

ಕಾಮ, ಕಾಫಿ ಮತ್ತು ಕಾವ್ಯ

ಜೋಗಿ

ಕಾಫಿ ಕುಡಿಯುವುದೂ ಒಂದು ಕಲೆ ಅಂತ ಯಾರು ಹೇಳಿದರು ಅಂತ ಹೇಳಬೇಕಾಗಿಲ್ಲ. ಅವನೇ ಇದ್ದಾನಲ್ಲಾ ಮಹಾ ತತ್ವಜ್ಞಾನಿ ಅವನ ಪ್ರಕಾರ ಕಾಫಿ ಕುಡಿಯುವುದೆಂದರೆ ಮೈಥುನದಂತೆ ಬಿಸಿಯಾಗಿರಬೇಕು ಆದರೂ ಗಂಟಲು ಸುಡಬಾರದು ಸಿಹಿಯಾಗಿರಬೇಕು ಆದರೂ ಅತಿಯಾಗಬಾರದು ಮಿತವಾಗಿರಬೇಕು ಆದರೂ ಸಾಲದೆನಿಸಬಾರದು ಕಾಫಿ ಮಗ್ ತುಟಿಗಿಡುವಾಗ ಅದು ನೆನಪಾಗಿ ಸಖತ್ ರೋಮಾಂಚನವಾಯಿತು. *** ಅವನ ಪ್ರಕಾರ ಮೈಥುನವೆಂದರೆ ಒಂದು ಕಲೆ ಮೈಥುನವೆಂದರೆ ಕಾಫಿ ಕುಡಿದಂತೆ ಬಿಸಿಯಾಗಿರಬೇಕು ಆದರೂ ಸುಡಬಾರದು ಸಿಹಿಯಾಗಿರಬೇಕು ಆದರೂ ಅತಿಯಾಗಬಾರದು ಮಿತವಾಗಿರಬೇಕು ಆದರೂ ಸಾಲದೆನಿಸಬಾರದು ಅವನ ಮೈಗೆ ಬಾಯಿ ಹಾಕುವಾಗ ಅದು ನೆನಪಾಗಿ ಸಖತ್ ರೋಮಾಂಚನವಾಯಿತು. ಈ ಎರಡು ಪುಟ್ಟ ಕವಿತೆಗಳನ್ನು ಓದುತ್ತಾ ಪ್ರತಿಭಾ ನಂದಕುಮಾರ್ ಕವಿತ್ವವನ್ನು ಹಿಡಿಯಲು ಹೊರಟೆ. ಇದು ಕಾವ್ಯವಲ್ಲ ಅನ್ನಿಸುವ ಹೊತ್ತಿಗೇ, ಆಧುನಿಕ ಕಾವ್ಯ ಯಾವುದು ಎಂಬ ಪ್ರಶ್ನೆ ಎದುರಾಯಿತು. ಕಾವ್ಯದ ಬಗ್ಗೆ ನಮಗೆಲ್ಲ ಎಂತೆಂಥಾ ಭ್ರಮೆಗಳಿವೆ ಎಂದು ಯೋಚಿಸಿದೆ. ಕವಿತೆಯೆಂದರೆ ಛಂದಸ್ಸಿನಲ್ಲಿ ಹೇಳಿಸಿಕೊಂಡ ಕಥನ, ಕವಿತೆಯೆಂದರೆ ಒಪ್ಪವಾದ ಭಾಷೆಯಲ್ಲಿ ಒಪ್ಪಿಸಿಕೊಂಡ ಅನುಭವ, ಕವಿತೆಯೆಂದರೆ ಮತ್ಯಾವ ಥರವೂ ಹೇಳಲಿಕ್ಕಾಗದ್ದು, ಕವಿತೆಯೆಂದರೆ ಒಳಗುಟ್ಟು, ಕವಿತೆ ಅಂದರೆ ಏಕಾಂತ, ದುಗುಡ, ದುಮ್ಮಾನ, ಆ ಕ್ಷಣ ಹುಟ್ಟಿ ಮರುಕ್ಷಣವೇ ಸಾಯುವಂಥದ್ದು, ಕವಿತೆ ಉದ್ಗಾರ, ಪ್ರತಿಭಟನೆ, ಬಂಡಾಯ, ವಿಸ್ಮಯ, ಭ್ರಾಂತಿ, ಚಾಟಿ, ಚಾಡಿ, ಚೀತ್ಕಾರ.   ಈ ಎಲ್ಲ ಭ್ರಮೆಗಳನ್ನು ಕಳೆಯಬೇಕಾದವರೂ ಕವಿಗಳೇ. ಕಾಲಕಾಲಕ್ಕೆ ಕವಿತೆಯ ವ್ಯಾಖ್ಯಾನವನ್ನು ತಿದ್ದಿ ಬರೆದದ್ದು ವಿಮರ್ಶೆಯಲ್ಲ, ಕಾವ್ಯ. ಹೀಗಾಗಿ ಕವಿಯೇ ಕವಿತೆಯ ಶಿಲ್ಪಿ ಮತ್ತು ಭಂಜಕ. ಇಲ್ಲಿರುವ ಕವಿತೆಗಳ ಮೂಲಕ ಪ್ರತಿಭಾ ಕಡೆಯುವ ಮತ್ತು ಕೆಡಹುವ ಏಕಕಾಲಕ್ಕೇ ಮಾಡಿದ್ದಾರೆ. ಕವಿತೆಯ ಕುರಿತು ನಮಗಿರುವ ತಿಳುವಳಿಕೆಯನ್ನು ಕಾಫಿಹೌಸ್ ಸಾಲುಗಳು ತಿರಸ್ಕರಿಸುತ್ತವೆ. ಇದೆಂಥಾ ಕಾವ್ಯ ಎಂಬ ಪ್ರಶ್ನೆಯನ್ನು ನಾವೇ ಕೇಳಿಕೊಳ್ಳುತ್ತೇವೆ, ಇದೂ ಕಾವ್ಯವೇ ಎಂದು ಓದಿನ ಅನುಭವ ಹೇಳುತ್ತದೆ. ಕಾಫಿ ಕುಡಿಯುವಷ್ಟೇ ಸರಳವಾಗಿ ಮತ್ತು ಸಂಕೀರ್ಣವಾಗಿ ಪ್ರತಿಭಾ ಒಂದಷ್ಟು ಪದ್ಯಗಳನ್ನು ಬರೆದಿದ್ದಾರೆ ಎಂದುಬಿಟ್ಟರೆ ಸಾಕಾಗಿತ್ತೇನೋ? ಬಲೂನಿನ ಹಾಗಿರುವ ಕವಿತೆಗೆ ಬಣ್ಣಬಣ್ಣದ ಭಾಷೆಯೇ ಸಿಪ್ಪೆ. ಅದನ್ನು ಸುಲಿಯದ ಹೊರತು ಅದು ಕೇವಲ ಬಲೂನು. ಸುಲಿದರೆ ನಿರಾಕಾರ, ಶೂನ್ಯ. ಹೀಗಿರುವ ಕವಿತೆಯನ್ನು ಬಗೆಯುವ ಬಗೆ ಹೇಗೆ? ಪ್ರತಿಭಾ ಕವಿತೆಯ ಪಂಜು ಹಿಡಕೊಂಡು ನಾಳೆಯ ಕತ್ತಲಿಗೆ ಜಿಗಿದಂತಿದೆ. ಕಾಫಿಹೌಸ್ ಎಂಬ ಕಲ್ಪನೆಯೇ ನಮಗೆ ಹೊಸದು. ಅಲ್ಲೇನು ನಡೆಯುತ್ತಿದೆ ಎಂಬುದು ಅನೇಕರಿಗೆ ವಿಸ್ಮಯ. ಗಂಟೆಗಟ್ಟಲೆ ಕುಳಿತು ಕಾಫಿ ಹೌಸುಗಳಲ್ಲಿ ಏನು ಮಾತಾಡುತ್ತಾರೆ. ಎ ಲಾಟ್ ಕೆನ್ ಹ್ಯಾಪನ್ ಓವರ್ ಕಾಫಿ. ಒಂದು ಕಾಫಿಯ ದೆಸೆಯಿಂದ ಏನೇನೋ ಆಗಿಬಿಡಬಹುದು ಎಂದು ನಂಬುವುದು ಕಷ್ಟ ಮತ್ತು ಸುಲಭ. ಪ್ರತಿಭಾ ನಂದಕುಮಾರ್ ಬರೆದ ಹಿಂದಿನ ಕವಿತೆಗಳ ಜೊತೆಗಿಟ್ಟುಕೊಂಡು ಓದಲಾಗದ, ಓದಬಾರದ ಪದ್ಯಗಳು ಈ ಸಂಕಲನದಲ್ಲಿವೆ. ಇವನ್ನು ಪದ್ಯಗಳು ಅನ್ನಬೇಕೋ ಸಾಲುಗಳ ಅನ್ನಬೇಕೋ ಎಂಬ ಅರ್ಥಪೂರ್ಣ ಗುಮಾನಿಯೊಂದಿಗೆ ಇವನ್ನು ಓದಲು ಶುರುಮಾಡಿದರೆ, ಕೊನೆಯ ಪುಟದ ತನಕ ಸರಾಗವಾಗಿ ಓದಿಸಿಕೊಂಡಿತು. ಕೊನೆಯ ಪುಟ ತಲುಪುವ ಹೊತ್ತಿಗೆ ಮೊದಲ ಪುಟದ ಸಾಲುಗಳು ಮರೆತುಹೋಗಿದ್ದವು. ಸದ್ಯವನ್ನಷ್ಟೇ ಹೇಳುವ, ಸದ್ಯವಷ್ಟೇ ಮುಖ್ಯ ಎನ್ನುವ ಕಾಫಿಡೇ, ಎವೆಯಲ್ಲಿರುವ ಕ್ಷಣವಷ್ಟೇ ತನ್ನದು ಅನ್ನುವ ಪದ್ಯ, ಇವೆರಡ ನಡುವಿನ ಸವಿಸ್ತರ ಸಖ್ಯ, ಎಲ್ಲೋ ಸಾಧ್ಯವಾಗುವ ಅನುಸಂಧಾನ, ತಿರುಗುವ ಚಕ್ರಕ್ಕೆ ಗುರಿಯಿಟ್ಟು ಎಸೆದ ಬಾಣ, ಮಧ್ಯಕ್ಕೆ ಚುಚ್ಚಿಕೊಂಡರೆ ಮೋಕ್ಷ. ಕವಿತೆಯೂ ಹಾಗೆಯೇ. ಚಕ್ರ ತಿರುಗುತ್ತಲೇ ಇರುತ್ತದೆ. ತಿರುಗುತ್ತಲೇ ಇರಬೇಕು. ಪ್ರತಿಭಾಗೆ ನಿನ್ನೆಯ ಹಂಗಿಲ್ಲ. ಹಳೆಯ ಕವಿತೆಗಳ ಗುಂಗಿನಲ್ಲಿ ಅವರು ಹೊಸ ಕವಿತೆಯ ಸಾಲುಗಳಿಗಾಗಿ ತಡಕಾಡುವುದಿಲ್ಲ. ಓದುಗನನ್ನು ಇಷ್ಟು ದಿಟ್ಟವಾಗಿ ಎದುರಿಸುವುದು ಕವಿಗೆ ತರವಲ್ಲ. ಕಾಫಿಡೇಯಲ್ಲಿ ಸಿಗುವ ಕಾಫಿಯ ಹಾಗೆ, ಮೊದಲು ನಾಲಗೆಗೆ ಒಗ್ಗದೇ, ನಂತರ ಅದೇ ರುಚಿಸುವಂತೆ ಮಾಡುವ ಪದ್ಯಗಳು ಇಲ್ಲಿ ಸಾಕಷ್ಟಿವೆ. ಇದನ್ನೊಂದು ಖಂಡಕಾವ್ಯದಂತೆ ಓದಿಕೊಳ್ಳಬೇಕಾ ಬಿಡಿಕವಿತೆಗಳೆಂದು ನೋಡಬೇಕಾ. ಆಧುನಿಕ ಕಥನವನ್ನು ಹೇಳುವುದಕ್ಕೆ ಪ್ರತಿಭಾ ಈ ಕ್ರಮವನ್ನು ಅನುಸರಿಸಿದ್ದಾರಾ. ಆಧುನಿಕ ಜನಪದ ಎಂಬುದು ನಗರ ಜನಪದಕ್ಕೆ ಸಂವಾದಿ ಎಂದು ನಾವು ಭಾವಿಸಿದ್ದರೆ ಅದು ತಪ್ಪು. ನಗರ ಜನಪದಕ್ಕೆ ನಮ್ಮ ಸಂಸ್ಕೃತಿಯ ಬಾಲ್ಯದ ನೆರಳಿರುತ್ತದೆ. ಆಧುನಿಕ ಜನಪದಕ್ಕೆ ಕಾಲದೇಶಗಳ ಹಂಗಿಲ್ಲ. ಕಾಫೀಡೇ ಹೇಗೆ ಎಲ್ಲ ದೇಶಗಳಲ್ಲೂ ಎಲ್ಲ ಖಂಡಗಳಲ್ಲೂ ಒಂದೇ ರುಚಿಯ ಕಾಫಿಯನ್ನು ಕೊಡುತ್ತದೆಯೋ ಹಾಗೆ, ಆಧುನಿಕ ಜನಪದದ ನಡಾವಳಿಗಳೂ ವ್ಯಕ್ತಿನಿಷ್ಠವೂ ಅಲ್ಲ, ಪ್ರದೇಶ ಪ್ರವೃತ್ತಿಯೂ ಅಲ್ಲ. ಅದೊಂದು ಸಾರ್ವತ್ರಿಕ ಪೀಡೆ. ಇಲ್ಲಿರುವ ಪದ್ಯಗಳನ್ನು ನೀವು ಹೇಗೆ ಬೇಕಾದರೂ ಓದಿಕೊಳ್ಳಬಹುದು. ಅದನ್ನು ಒಂದರ ಹಿಂದೊಂದರಂತೆ, ಅಧ್ಯಾಯದಂತೆ, ಆಖ್ಯಾನದಂತೆ ಓದುತ್ತಾ ಹೋದರೆ ನಿಮಗೆ ವರ್ತಮಾನದ ಚಿತ್ರ ಸಿಗುತ್ತದೆ. ಪೇಜ್ ಥ್ರೀ ಸಂಸ್ಕೃತಿಯನ್ನು ವಿಡಂಭಿಸುವ ಸಿನಿಮಾದಂತೆ, ರಸ್ತೆಯಲ್ಲಿ ಹಾದುಹೋಗುವ ಬಡಪಾಯಿಯ ಕಣ್ಣಿಗೆ ಬೀಳುವ ಸಲ್ಲಾಪ, ಜಗಳ ಮತ್ತು ಸಂಭ್ರಮದಂತೆ. ನಮಗೆ ಒಳಗೆಲ್ಲೋ ಇಷ್ಟವಾಗುವ, ಆದರೆ ನಾವಿನ್ನೂ ಒಳಗೊಳ್ಳದ ರೂಢಿಯೊಂದಕ್ಕೆ ಪ್ರತಿಕ್ರಿಯಿಸುವುದು ಕಷ್ಟ. ಯಾವ ಬಡ್ಡಿಮಕ್ಕಳೂ ಹೊಸರುಚಿಗೆ ತಯಾರಿಲ್ಲ ನಾನೇ ವಾಸಿ. ಉಡುದಾರ, ಶಿವದಾರ, ಜನಿವಾರ ಎಲ್ಲದಕ್ಕೂ ಸೈ ಅಂದಳು. ಈ ಕವಿತೆಗಳೂ ಹೊಸರುಚಿಯೇ. ಇಲ್ಲಿ ಪಾತ್ರಗಳಿದ್ದಾವೆ. ಆ ಪಾತ್ರಗಳ ಕೇಂದ್ರವಿರುವುದು ಕಾಮದಲ್ಲಿ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಆದರೆ ನಿಜವಾಗಿಯೂ ಅವುಗಳ ಸಂಕಟಗಳಿರುವುದು ವಿಘಟನೆಯಲ್ಲಿ. ತನ್ನನ್ನು ತಾನು ಗುರುತಿಸಿಕೊಳ್ಳಲಾಗದ, ಯಾವ ಸಂಬಂಧದ ಜತೆಗೂ ದೀರ್ಘಕಾಲ ಬಾಳಲಾರದ, ಸಮನ್ವಯಗೊಳ್ಳದ ಮೈಮನಸ್ಸು. ಎಲ್ಲವನ್ನೂ ನಿರಾಕರಿಸುವ ಮನಸ್ಸಿಗೆ ಶೂನ್ಯ ಕೂಡ ದಕ್ಕದೇ ಹೋದಾಗ ಎದುರಾಗುವ ವಿಹ್ವಲ ಸ್ಥಿತಿಯಲ್ಲಿರುವ ಪಾತ್ರಗಳಿವು ಅಂತ ನಮಗೆ ಥಟ್ಟನೆ ಅನ್ನಿಸಬಹುದು. ಅದು ನಮ್ಮ ಕಾಲದ ಸತ್ಯ. ತಲ್ಲಣಗಳಿಲ್ಲದೇ ಹೋದರೆ ಮನಸ್ಸು ಮಿದುವಾಗುತ್ತಾ ಹೋಗುತ್ತದೆ. ಮನಸ್ಸನ್ನು ಮೃದುವಾಗಿಸಿಕೊಂಡಷ್ಟೂ ನಾವು ಗುಲಾಮಗಿರಿಗೆ ಜಾರುತ್ತೇವೆ ಎಂದು ಈ ಕಾಲದ ಹುಡುಗರ ಭಯ. ಮಿದುವಾಗಿದ್ದೇ ಗೆದ್ದ ಗಾಂಧಿ, ಉಗ್ರವಾಗಿದ್ದೇ ಸೋತ ಹಿಟ್ಲರ್- ಇವರಿಬ್ಬರ ಮಧ್ಯಮ ಮಾರ್ಗ ನಮ್ಮ ಕಾಲ ಮುಂದೆ ತೆರೆದುಕೊಳ್ಳುತ್ತಲೇ ಇಲ್ಲ. ಒಂದು ಹೊಸಜಗತ್ತಿಗೆ ಕಟ್ಟಿದ ತೋರಣದಂತೆ ಈ ಕವಿತೆಗಳು ನಮ್ಮನ್ನು ಸ್ವಾಗತಿಸುತ್ತವೆ. ಇಂಥ ಪದ್ಯಗಳನ್ನು ಒಳಗಿಳಿಯುವಂತೆ ಮಾಡುವುದು ಹೇಗೆ ಎಂಬುದೇ ನಮ್ಮ ಮುಂದಿರುವ ಸವಾಲು. ಹಳೆಯ ಹತಾರಗಳನ್ನು ಹಿಡಿದುಕೊಂಡು ಎದುರಾದರೆ ಛಂಗನೆ ಜಿಗಿದು ಮರೆಯಾಗುವ ಈ ಪದ್ಯಗಳು, ಹೊಸ ತಲೆಮಾರಿನ ಓದುಗರ ಸಂಯಮ ಮತ್ತು ಸಡಗರದ ಮೇಲೆ ನಿಂತಿವೆ. ಕಾಫಿಡೇ ಸಾಲುಗಳಾದರೂ ಇವು ಕಾಫಿಡೇ ಮನಸ್ಥಿತಿಯ ತಾರುಣ್ಯಕ್ಕಲ್ಲ. ಒಂದು ಪದ್ಯವನ್ನು ನನಗೆ ತೋಚಿದ ಹಾಗೆ ಅರ್ಥಮಾಡಿಕೊಳ್ಳಲು ಹೋಗುತ್ತೇನೆ. ಸುಮ್ಮನೆ ಪುಟತೆರೆದಾಗ ಸಿಕ್ಕಿದ ಸಾಲುಗಳಿವು: ಅದ್ಯಾವುದೋ ಚಿತ್ರದಲ್ಲಿ ಸೈಫ್ ಆಲಿ ಖಾನ್ ಹೇಳುತ್ತಾನೆ. ಗಂಡಸರು ಯಾವಾಗಲೂ ಸುಳ್ಳು ಹೇಳುತ್ತಿರುತ್ತಾರೆ. ಹುಡುಗಿ ನೋಡಿದರೆ ಮಾತಾಡಿಸಿದಳು. ಮಾತಾಡಿಸಿದರೆ ಮುಟ್ಟಿದಳು ಮುಟ್ಟಿದರೆ ಅಪ್ಪಿದಳು ಅಪ್ಪಿದರೆ ಕಾಮಿಸಿಯೇ ಬಿಟ್ಟಳು ಅಂತ ಚಿಕ್ಕದರಲ್ಲಿ ದೊಡ್ಡ ವ್ಯಾಖ್ಯಾನ ಮಾಡುತ್ತಾರೆ. ಹುಡುಗಿಯರು ಏನು ಮಾಡುತ್ತಾರೆ ಅಂತ ಅವರಿಬ್ಬರೂ ಸೇರಿ ಚರ್ಚಿಸಿದರು ಆಫ್ ಕೋರ್ಸ್ ಅದರ ಅಪೋಸಿಟ್ ಎಂದು ಒಟ್ಟಿಗೆ ಕಿರುಚಿದರು ಇಷ್ಟು ತೀವ್ರವಾಗಿ ಕಾಮಿಸಿದ ಮೇಲೂ ಅವನು ಎದುರಿಗೆ ಬಂದರೆ ಅಪರಿಚಿತನ ಹಾಗೆ ನಡಕೊಳ್ಳಬೇಕಾಗಿರುವಾಗ ಹಾಗಲ್ಲದೇ ಬೇರೆ ಹೇಗಿರಲು ಸಾಧ್ಯ? ಕೆಎಸ್ ನರಸಿಂಹಸ್ವಾಮಿ ಅಂದರು, ಪ್ರೇಮವೆನಲು ಹಾಸ್ಯವೇ? ಬೇಂದ್ರೆ ಬರೆದರು: ನನ್ನ ನಿನ್ನ ನಂಟಿನ ಅಂಟಿನ ಕೊನೆ ಬಲ್ಲವರಾರೇ? ಅದನ್ನು ಓದಿ ಬೆಳೆದವರು ಅತ್ತಿತ್ತ ಕಣ್ಣುಹಾಯಿಸಿದರೆ ಕಾಣುವ ಚಿತ್ರವನ್ನು ಪ್ರತಿಭಾ ಕಟ್ಟಿಕೊಡುತ್ತಾರೆ. ಇದು ಕೇವಲ ನೋಟಕ್ಕಷ್ಟೇ ಸೀಮಿತವಲ್ಲ. ಅದೊಂದು ಲೈಫ್ ಸ್ಟೈಲು. ಅಂಥ ಉದ್ವಿಗ್ನತೆ, ಮುಚ್ಚುಮರೆ, ನಾಟಕ, ಹಂಗಾಮ ಮತ್ತು ರಂಪರಾಮಾಯಣದಲ್ಲಿ ಹೊಸಕಾಲದ ಪ್ರೇಮದ ರಹಸ್ಯಗಳು ಅಡಗಿದಂತಿವೆ. ರಾಧೆಯಂತಲ್ಲದ, ಮೀರಾಳಂತಲ್ಲ, ಅಕ್ಕನಂತಲ್ಲದ ಹೊಸಕಾಲದ ಅವಳಿಗೆ ಅವನ ದೇಹವೂ ಬೇಕಿಲ್ಲ, ಮನಸ್ಸೂ ಬೇಕಿಲ್ಲ. ಅವಳಿಗೆ ಬೇಕಾಗಿರುವುದು ಕೇವಲ ಅವಳ ತೀವ್ರತೆ. ಅವನಿಗೆ ಹಳೆಕಾಲದ ಅವಳೇ ಬೇಕು. ಹೊಸಗಾಲದ ಹುಡುಗನನ್ನು ಹುಡುಕುತ್ತಾ ಹೊರಟ ಹೊಸಗಾಲದ ಹುಡುಗಿಯ ಉತ್ಕಟತೆ ಕೊನೆಯಾಗುವುದು ಎಲ್ಲಿ? ಹೊಂದಾಣಿಕೆಯಲ್ಲಾ, ಹುಡುಕಾಟದಲ್ಲಾ. ಹುಡುಕಾಟ ಎಂದು ಮುಗಿಯುತ್ತದೆ. ಹೊಸರುಚಿಗೆ ಅವಳು ಹಂಬಲಿಸುವಂತೆ ಅವನೇಕೆ ಹಂಬಲಿಸುವುದಿಲ್ಲ. ಹೀಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಾ ಹೋಗುವ ಪದ್ಯ ನನಗಿಷ್ಟ. ಸುಮ್ಮನೆ ಹಳೆಯ ಶೈಲಿಯಲ್ಲೇ ಮತ್ತೊಂದಷ್ಟು ಪದ್ಯ ಬರೆದು ಎಲ್ಲಿದ್ದರೋ ಅಲ್ಲೇ ನೆಮ್ಮದಿಯಾಗಿರಬಹುದಾಗಿದ್ದ ಪ್ರತಿಭಾ ತುಂಬ ದೊಡ್ಡ ಅಪಾಯವನ್ನು ಮೈಗೆಳೆದುಕೊಂಡಿದ್ದಾರೆ. ಆಧ್ಯಾತ್ಮಿಕತೆ, ಕಾಮ, ಬಡತನ, ಜಾತೀಯತೆ, ಪ್ರತಿಭಟನೆ, ಒಳದನಿಗಳ ನಡುವೆ ಇದ್ದ ಕವಿತೆಯನ್ನು ಬೆಂಗಳೂರಿನ ಬ್ರಿಗೇಡ್ ರಸ್ತೆಗೆ ತಂದು ಬಿಟ್ಟಿದ್ದಾರೆ. ಆಶ್ಚರ್ಯವೆಂದರೆ ಆ ಗದ್ದಲದಲ್ಲಿ ಕವಿತೆ ಕಳೆದುಹೋಗಿಲ್ಲ, ಅನಾಥವಾಗಿಲ್ಲ ಮತ್ತು ಮುಗುಳ್ನಗುತ್ತಿದೆ.]]>

‍ಲೇಖಕರು G

May 2, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ...

5 ಪ್ರತಿಕ್ರಿಯೆಗಳು

 1. ಬಸೂ

  higgaagiye padya ee tanak ulidukondu bandide mundoo uliyuttade… pratibhala kavyavannu odalebeku annuva utkatateyannu jogi barah huttisitu

  ಪ್ರತಿಕ್ರಿಯೆ
 2. ಶ್ರೀಧರ ಬೇವೂರು

  ಕಾಫಿಯ ಮಾತಿಗೆ ಬಂದಾಗ:
  Coffee should be black as hell, strong as death, and as sweet as love.
  ಟರ್ಕಿ ದೇಶದ ನಾಣ್ಣುಡಿ.

  ಪ್ರತಿಕ್ರಿಯೆ
 3. sindhu

  Oh Jogi,
  ರಾಧೆಯಂತಲ್ಲದ, ಮೀರಾಳಂತಲ್ಲ, ಅಕ್ಕನಂತಲ್ಲದ ಹೊಸಕಾಲದ ಅವಳಿಗೆ ಅವನ ದೇಹವೂ ಬೇಕಿಲ್ಲ, ಮನಸ್ಸೂ ಬೇಕಿಲ್ಲ. ಅವಳಿಗೆ ಬೇಕಾಗಿರುವುದು ಕೇವಲ ಅವಳ ತೀವ್ರತೆ. ಅವನಿಗೆ ಹಳೆಕಾಲದ ಅವಳೇ ಬೇಕು. ಹೊಸಗಾಲದ ಹುಡುಗನನ್ನು ಹುಡುಕುತ್ತಾ ಹೊರಟ ಹೊಸಗಾಲದ ಹುಡುಗಿಯ ಉತ್ಕಟತೆ ಕೊನೆಯಾಗುವುದು ಎಲ್ಲಿ? ಹೊಂದಾಣಿಕೆಯಲ್ಲಾ, ಹುಡುಕಾಟದಲ್ಲಾ. ಹುಡುಕಾಟ ಎಂದು ಮುಗಿಯುತ್ತದೆ. ಹೊಸರುಚಿಗೆ ಅವಳು ಹಂಬಲಿಸುವಂತೆ ಅವನೇಕೆ ಹಂಬಲಿಸುವುದಿಲ್ಲ.
  ಹೀಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಾ ಹೋಗುವ ಪದ್ಯ ನನಗಿಷ್ಟ. ಸುಮ್ಮನೆ ಹಳೆಯ ಶೈಲಿಯಲ್ಲೇ ಮತ್ತೊಂದಷ್ಟು ಪದ್ಯ ಬರೆದು ಎಲ್ಲಿದ್ದರೋ ಅಲ್ಲೇ ನೆಮ್ಮದಿಯಾಗಿರಬಹುದಾಗಿದ್ದ ಪ್ರತಿಭಾ ತುಂಬ ದೊಡ್ಡ ಅಪಾಯವನ್ನು ಮೈಗೆಳೆದುಕೊಂಡಿದ್ದಾರೆ. ಆಧ್ಯಾತ್ಮಿಕತೆ, ಕಾಮ, ಬಡತನ, ಜಾತೀಯತೆ, ಪ್ರತಿಭಟನೆ, ಒಳದನಿಗಳ ನಡುವೆ ಇದ್ದ ಕವಿತೆಯನ್ನು ಬೆಂಗಳೂರಿನ ಬ್ರಿಗೇಡ್ ರಸ್ತೆಗೆ ತಂದು ಬಿಟ್ಟಿದ್ದಾರೆ.
  ಆಶ್ಚರ್ಯವೆಂದರೆ ಆ ಗದ್ದಲದಲ್ಲಿ ಕವಿತೆ ಕಳೆದುಹೋಗಿಲ್ಲ, ಅನಾಥವಾಗಿಲ್ಲ ಮತ್ತು ಮುಗುಳ್ನಗುತ್ತಿದೆ.
  This is marvellous.. you have captured the glimpse of Pratibha that i felt while reading. Thanks for writing this.
  I am glad there are sensible people around to appreciate her honestly.
  Thanks, Sindhu

  ಪ್ರತಿಕ್ರಿಯೆ
 4. ಲಲಿತಾ ಸಿದ್ಧಬಸವಯ್ಯ

  ನಮ್ಮ ಪ್ರತಿಭಾ ಜೋರಾಗಿ ಬೀಸುವ ಗಾಳಿಯ ಹಾಗೆ. ಅದು ಸುತ್ತಿ ಕೊಡಹುವ ಸುಂಟರಗಾಳಿಯಲ್ಲ. ಹಾಗೆಯೇ ಸುತ್ತಿ ಸುಳಿವ ತಂಗಾಳಿಯೂ ಅಲ್ಲ. ತನ್ನ ಇರುವಿಕೆಯನ್ನು ಪ್ರತಿಕ್ಷಣವೂ ಸಾಬೀತು ಮಾಡುತ್ತ ಹಾಗೆ ಇರುವುದರಿಂದ ಇನ್ನಾರದೋ ಇರುವಿಕೆಯನ್ನು ನುಂಗಿ ಹಾಕದಂತಹ ಜೋರಾಗಿ ಬೀಸುವ ಗಾಳಿ ಪ್ರತಿಭಾ. ಇಂತದ್ದೊಂದು ಗಾಳಿ ಇಲ್ಲದ ಮೇಲೆ ನಾವು ಬಿಟ್ಟದ್ದನ್ನು ನಾವೇ ಕುಡಿಯುತ್ತ ಇದ್ದು ಬಿಡಬೇಕಾಗುತ್ತದೆ. ಹಾಗಾಗದೆ ಕಾವ್ಯಕ್ಕೆ ಆಮ್ಲಜನಕ ಪೂರೈಸಲು ಪ್ರತಿಭಾ ಪದ್ಯ ಬೇಕು. ಅದು ದೇವೀ ರೂಪದಲ್ಲೊ ಕಾಫಿ ರೂಪದಲ್ಲೊ
  ಅಂತರಗಂಗಮ್ಮನಾಗೋ ಬರುತ್ತಿರಲಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: