ಜೋಗಿ ಬರೆಯುತ್ತಾರೆ :ಬಡ ಸಾಹಿತಿ, ವಿನಯವಂತ ಕವಿ

-ಜೋಗಿ

ನಾನು ಬಡವಿ ಆತ ಬಡವ

ಒಲವೆ ನಮ್ಮ ಬದುಕು

ಬಳಸಿಕೊಂಡೆವದನೆ ನಾವು

ಅದಕು ಇದಕು ಎದಕು.

ಹಾಗಂತ ಕವಿ ಹಾಡಿದಾಗ ನಮಗೂ ಖುಷಿಯಾಯಿತು. ನಾವು ಕೂಡ ಒಲವನ್ನು ಅದಕು ಇದಕು ಎದಕು ಬಳಸಿಕೊಳ್ಳಬಹುದೆಂದು ಯೋಚಿಸಿದೆವು. ಬಡತನವನ್ನು ಮೀರುವುದಕ್ಕೆ ಪ್ರೀತಿಯಿಂದ ಸಾಧ್ಯ ಎಂದು ತಿಳಿದುಕೊಂಡೆವು. ಅದಾಗಿ ಎಷ್ಟೋ ವರ್ಷಗಳ ನಂತರ ಸತ್ಯಾನಂದ ಪಾತ್ರೋಟರು ಬಡವನಾದರೆ ಏನು ಪ್ರಿಯೆ, ಕೈ ತುತ್ತು ತಿನಿಸುವೆ ಎಂದು ಹಾಡಿದರು. ಯೆಂಡ್ಕುಡುಕ ರತ್ನ ಬಡತನ, ಸಿರಿತನ ಏನಿದ್ದರೇನು, ಚೆಂದಾಗಿ ಬಾಳೋದು ಮುಖ್ಯ ಎಂದು ಗುನುಗಿದ್ದನ್ನೂ ನಾವು ಕೇಳಿಸಿಕೊಂಡೆವು.

ಬಡತನವನ್ನು ಬರೆಯುವ ಮೂಲಕ, ಪ್ರೀತಿಯ ಮೂಲಕ, ನಗುವುದನ್ನು ಕಲಿಯುವ ಮೂಲಕ ಮೀರಬಹುದು ಎಂಬುದನ್ನು ಹೀಗೆ ನಮ್ಮ ಕಾವ್ಯ ಬಲವಾಗಿ ಪ್ರತಿಪಾದಿಸುತ್ತಾ ಬಂದಿದೆ. ಅದನ್ನು ಬರೆದ ಸಾಹಿತಿಗಳೂ ಕೂಡ ಬಡವರಾಗಿದ್ದರು ಅನ್ನುವುದನ್ನೂ ನಾವು ನಂಬುತ್ತಾ ಬಂದಿದ್ದೇವೆ. ಸಾಹಿತಿಯ ಬಡತನದ ಕುರಿತು ಕತೆಗಳಿವೆ, ತಮಾಷೆಗಳಿವೆ. ಬಾರೇ ರಾಜಕುಮಾರಿ, ಹೋಗೋಣ ಜಂಬೂಸವಾರಿ ಎನ್ನುವ ತುಂಟಕವಿ ಬಿಆರ್ ಲಕ್ಷ್ಮಣರಾಯರ ನಾಯಕನೂ ಬಡವನೇ. ಕೆಎಸ್ ನರಸಿಂಹಸ್ವಾಮಿ ಕವಿತೆಯಲ್ಲಿ ಬರುವವನೂ ಕೂಡ ಬಡವ. ಅಷ್ಟೇ ಯಾಕೆ, ಕಾರಂತ, ಭೈರಪ್ಪ, ರಾವ್‌ಬಹಾದೂರ್, ಮಾಸ್ತಿ ಕತೆ ಕಾದಂಬರಿಗಳಲ್ಲಿ ಬರುವ ನಾಯಕರೂ ಶ್ರೀಮಂತರಲ್ಲ. ಕಾನೂರು ಹೆಗ್ಗಡಿತಿಯಲ್ಲಿ ಹೂವಯ್ಯ ಕೂಡ ಅಂಥ ಶ್ರೀಮಂತನಲ್ಲ.

ಬಡತನವನ್ನು ಒಂದು ಮೌಲ್ಯವಾಗಿ ನಮ್ಮ ಜನಪದ ಜಗತ್ತು ಮತ್ತು ಸಾಹಿತ್ಯಲೋಕ ಸ್ವೀಕರಿಸಿದೆ. ಆ ಮೂಲಕ ಬಡತನವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನಮಗೆ ಕೊಟ್ಟಿದೆ. ಕೊಡಲು ಕೊಳಲು ಒಲವು ಬಿಟ್ಟು, ಬೇರೆ ಉಂಟೆ ಬಾಳಲಿ? ಎಂಬ ಪ್ರಶ್ನೆಯಲ್ಲಿ ಉತ್ತರವೂ ಅಡಗಿದೆ ಅನ್ನುವುದನ್ನು ನಾವು ಮರೆಯಕೂಡದು.

ಶ್ರೀಮಂತ ನಾಯಕರ ಕತೆಗಳು ಅಷ್ಟಾಗಿ ನಮ್ಮನ್ನು ಆಕರ್ಷಿಸಲೇ ಇಲ್ಲ. ಬಂಗಾಲಿ ಕಾದಂಬರಿಗಳಲ್ಲಿ ಸಿರಿವಂತ ಬಾಬುಗಳ ಕತೆ ಬಂದಿತ್ತಾದರೂ, ಅವುಗಳಿಂದ ನಾವು ಸ್ವೀಕರಿಸಿದ್ದು ಪ್ರೇಮಪ್ರಸಂಗಗಳನ್ನು ಮಾತ್ರ. ದೇವದಾಸ್ ಕಾದಂಬರಿಯಲ್ಲಿ ಪ್ರೀತಿ ಕಳಕೊಂಡು ಬಡವನಾಗುವ ನಾಯಕ, ನಾಯಕಿಯರಿದ್ದಾರೆ. ನಾವು ತುಂಬ ಮೆಚ್ಚುವ ಪಾಶ್ಚಿಮಾತ್ಯ ಕೃತಿಗಳು ಕೂಡ ಬಡತನವನ್ನು ಕುರಿತಾದದ್ದೇ. ಷೇಕ್ಸ್‌ಪಿಯರ್ ಶ್ರೀಮಂತ ರಾಜರ ಕತೆಗಳನ್ನಿಟ್ಟುಕೊಂಡು ನಾಟಕ ಬರೆದ. ಅಲ್ಲಿ ಕೂಡ ಶ್ರೀಮಂತಿಕೆಯ ಪ್ರದರ್ಶನ ಇರಲಿಲ್ಲ. ಬದಲಾಗಿ ಆ ಪಾತ್ರಗಳ ಒಳತೋಟಿಯಿತ್ತು. ಹೀಗಾಗಿ ಆ ರಾಜರು ಕೂಡ ಬಡವರಂತೆಯೇ ಕಾಣುತ್ತಿದ್ದರು. ರಾಮಾಯಣ, ಮಹಾಭಾರತ ತೆಗೆದುಕೊಂಡರೂ ಅಲ್ಲಿ ಚಕ್ರವರ್ತಿಗಳು ವನವಾಸ ಅನುಭವಿಸುವ, ಎಲ್ಲವನ್ನೂ ತೊರೆದು ಹೋಗುವ ಕತೆಯೇ ಇದೆ. ಸತ್ಯ ಹರಿಶ್ಚಂದ್ರನದೂ ಅದೇ ಪಾಡು.

ಶ್ರೀಮಂತಿಕೆ ಎನ್ನುವುದು ನಮ್ಮ ಪಾಲಿಗೆ ಒಂದು ಹಂಬಲದ ಸ್ಥಿತಿ ಮಾತ್ರ. ಸುಖವೂ ಅಷ್ಟೇ. ತುಂಬ ನೊಂದು, ಬೆಂದು, ಮಾಗಿದ ಕಥಾನಕ -ಆಮೇಲೆ ಅವರು ಸುಖವಾಗಿದ್ದರು- ಎಂಬಲ್ಲಿಗೆ ಮುಗಿಯುತ್ತದೆ. ಅವರು ಸುಖವಾಗಿದ್ದರು ಎಂದು ಗೊತ್ತಾದ ನಂತರ ಅಲ್ಲಿ ಕತೆಯಿಲ್ಲ. ಕಟ್ಟಿಗೆ ಮಾರಿ ಬದುಕುವ ಬಡವನಿಗೆ ಬಂಗಾರ ಸಿಕ್ಕಿ ಆತ

ಶ್ರೀಮಂತನಾಗುವುದು ಕತೆ. ಆತ ಶ್ರೀಮಂತನಾದ ನಂತರ ಏನಾಯಿತು ಅನ್ನುವುದು ಮುಖ್ಯವಲ್ಲ.

ಹಾಗಿದ್ದರೆ, ಬಡತನ ನಿಜಕ್ಕೂ ಒಂದು ಮೌಲ್ಯವೇ? ಹಾಗಂತ ಹೇಳುವುದು ಎಷ್ಟರ ಮಟ್ಟಿಗೆ ಸರಿ. ಅಜ್ಞಾನ ಮತ್ತು ಬಡತನ ಸ್ವಯಂಕೃತ ಅಪರಾಧ ಎನ್ನುವವರ ಮಧ್ಯೆ ಈ ಮೌಲ್ಯ ಹೇಗೆ ತನ್ನದೇ ಆದ ಮಹತ್ವದ ಸ್ಥಾನ ಪಡಕೊಂಡಿತು? ನೊಂದ ನೋವನ್ನಷ್ಟೆ ಹಾಡಬೇಕೇನು? ಬೇಡವೇ ಯಾರಿಗೂ ಸಿರಿಮಲ್ಲಿಗೆ?’

***********

ಮೊನ್ನೆ ಗೆಳೆಯರೊಬ್ಬರು ಸಾಹಿತಿಗಳ ಕಷ್ಟದ ಕುರಿತು ಹೇಳಿದರು. ನಮ್ಮಲ್ಲಿ ಮಹತ್ವದ ಸಾಹಿತ್ಯ ರಚಿಸಿದ ಲೇಖಕರೆಲ್ಲ ಹೇಗೆ ಬಡತನದಲ್ಲೇ ಬಾಳಿದರು, ಅವರ ಮನೆಯವರು ಎಷ್ಟು ಕಷ್ಟಪಟ್ಟರು ಅನ್ನುವುದನ್ನು ನೋಡುತ್ತಿದ್ದರೆ ಬೇಸರವಾಗುತ್ತದೆ. ಇವತ್ತು ಒಂದು ಸಿನಿಮಾ ಹಾಡಿಗೆ ಇಪ್ಪತ್ತೈದು ಸಾವಿರ ಸಂಭಾವನೆ ಪಡೆಯುವ ಗೀತರಚನಕಾರರು ಇದ್ದಾರೆ. ಅದೇ ಒಂದು ಕವಿತೆ ಬರೆದರೆ ನೂರೋ ಇನ್ನೂರೋ ರುಪಾಯಿ ಸಿಗುತ್ತದೆ. ಹಾಗಂತ ಎಲ್ಲ ಸಾಹಿತಿಗಳೂ ಸಿನಿಮಾ ಹಾಡು ಬರೆಯಲು ಆರಂಭಿಸಬಹುದಲ್ಲ? ಒಂದು ಹಾಸ್ಯಲೇಖನಕ್ಕೆ ಐವತ್ತೋ ನೂರೋ ಸಂಭಾವನೆ ಪಡೆಯುತ್ತಿದ್ದ ಹಾಸ್ಯಸಾಹಿತಿಯೊಬ್ಬರು ಇವತ್ತು ಅರ್ಧಗಂಟೆಯ ಒಂದು ಎಪಿಸೋಡ್‌ಗೆ ಐದು ಸಾವಿರ ರುಪಾಯಿ ಪಡೆಯುತ್ತಿದ್ದಾರೆ.

ಆದರೆ, ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡ ಹಿರಿಯ ಕವಿಯೊಬ್ಬರ ಮನೆಯ ಟೆಲಿಫೋನ್ ಸಂಪರ್ಕ ಕಡಿದುಹೋಗಿ ತಿಂಗಳುಗಳೇ ಆಗಿವೆ. ಅವರಿಗೆ ಈಗ ಟೆಲಿಫೋನ್ ಬಿಲ್ ಕಟ್ಟುವುದಕ್ಕೂ ದುಡ್ಡಿಲ್ಲ. ಖಾಸನೀಸರು ಕೊನೆಯ ದಿನಗಳಲ್ಲಿ ಅತ್ಯಂತ ಕಷ್ಟದಲ್ಲಿ ಬದುಕಿದರು. ಅವರ ಆಸ್ಪತ್ರೆ ಖರ್ಚು ಭರಿಸುವುದು ಕೂಡ ಕಷ್ಟವಿತ್ತು. ತುಂಬ ಮಧುರವಾದ ದಾಂಪತ್ಯ ಗೀತೆಗಳನ್ನು ಬರೆದ ಹಿರಿಯ ಕವಿಯೊಬ್ಬರು ಕೊನೆಯ ದಿನಗಳಲ್ಲಿ ಮನೆಗೆ ಹೋದವರಿಗೆ ಒಂಚೂರು ನಶ್ಯ ತಂದುಕೊಡುತ್ತೀರಾ ಎಂದು ಕೇಳಿದ ಉದಾಹರಣೆಯಿದೆ. ಡಿವಿಜಿ ಕೂಡ ಅತ್ಯಂತ ಬಡತನದಲ್ಲಿ ಬದುಕಿದವರು. ನಮ್ಮಲ್ಲಿ ಶ್ರೀಮಂತ ಸಾಹಿತಿ ಎಂದರೆ ಆ ಕಾಲಕ್ಕೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಕುವೆಂಪು. ಅವರಂತೆಯೇ ದೊಡ್ಡ ಹುದ್ದೆಯಲ್ಲಿದ್ದ ಎಂ ಆರ್ ಶ್ರೀನಿವಾಸಮೂರ್ತಿ ಕೂಡ ತಕ್ಕಮಟ್ಟಿಗೆ ಅನುಕೂಲಸ್ಥರಾಗಿದ್ದರು. ಗೊರೂರು ರಾಮಸ್ವಾಮಿ ಅಯ್ಯಂಗಾರರಿಗೆ ಹೊಲ, ತೋಟ ಇದ್ದರೂ ಹೇಳಿಕೊಳ್ಳುವಂಥ ಶ್ರೀಮಂತಿಕೆ ಇರಲಿಲ್ಲ. ಬಸ್ಸಲ್ಲಿ ಓಡಾಡುತ್ತಾ ಸಂಸಾರ ತೂಗಿಸಿಕೊಂಡಿದ್ದವರು ಅವರು.

ಶಿವರಾಮ ಕಾರಂತರು ಒಂದಿಷ್ಟು ತೋಟ, ಸ್ವಂತ ಮನೆ ಹೊಂದಿದ್ದರೂ ಬರೆದು ಬದುಕಿದವರು. ತರಾಸು, ಅನಕೃ, ಭಾರತೀಪ್ರಿಯ, ಆಲನಹಳ್ಳಿ, ಪುತಿನ, ಗೋಪಾಲಕೃಷ್ಣ ಅಡಿಗ, ವೈಯನ್ಕೆ, ಸುಮತೀಂದ್ರ ನಾಡಿಗ, ಲಕ್ಷ್ಮೀನಾರಾಯಣ ಭಟ್ಟ, ಎಚ್ ಎಸ್ ವೆಂಕಟೇಶಮೂರ್ತಿ- ಹೀಗೆ ಅಂದಿನಿಂದ ಇಂದಿನ ತನಕದ ಬಹುತೇಕ ಸಾಹಿತಿಗಳು ಬಡತನವನ್ನು ಕಂಡುಂಡು ಬಾಳಿದವರು.

ಆ ಕಾರಣಕ್ಕೇ ಬಡತನ ಒಂದು ಮೌಲ್ಯವಾಯಿತು ಎಂದು ಭಾವಿಸಬೇಕಿಲ್ಲ. ತ ಸು ಶಾಮರಾಯರ ಮೂರು ತಲೆಮಾರು’ ಕೃತಿಯನ್ನು ಓದುತ್ತಿದ್ದರೆ, ಆ ಕಾಲಕ್ಕೆ ಶ್ರೀಮಂತಿಕೆ ಅಂಥ ಹೆಮ್ಮೆಯನ್ನು ತರುವ ಮೌಲ್ಯವೇನೂ ಆಗಿರಲಿಲ್ಲ. ಊರಲ್ಲಿ ಜಮೀನ್ದಾರರೂ, ಶಾನುಭೋಗರೂ, ಪಟೇಲರೂ ತಕ್ಕಮಟ್ಟಿಗೆ ಶ್ರೀಮಂತರಾಗಿರುತ್ತಿದ್ದರು. ಆದರೆ ಶ್ರೀಮಂತಿಕೆಯ ಅಸಹ್ಯ ಪ್ರದರ್ಶನ ಅಲ್ಲಿ ಕಾಣಿಸುತ್ತಿರಲಿಲ್ಲ. ಮೂರು ಹೊತ್ತು ಒಳ್ಳೆಯ ಊಟ, ಒಳ್ಳೆಯ ಬಟ್ಟೆ ಮತ್ತು ಬೆಚ್ಚಗಿನ ಮನೆಯಷ್ಟೇ ಶ್ರೀಮಂತಿಕೆಯ ಕುರುಹಾಗಿತ್ತು. ಶ್ರೀಮಂತಿಕೆಯ ಜೊತೆ ವಿನಯವಂತಿಕೆಯೂ ಬೆರತಂತೆ ಕಾಣುವ ಆ ಕಾಲದಲ್ಲೇ ಅತ್ಯುತ್ತಮ ಕೃತಿಗಳು ರಚನೆಯಾದವು. ಇವತ್ತೂ ನಾವು ಅವನ್ನೇ ಓದುತ್ತಿದ್ದೇವೆ. ಸಾಹಿತ್ಯ ಗುಡಿಸಲಲ್ಲಿ ಹುಟ್ಟುತ್ತದೆ, ಅರಮನೆಯಲ್ಲಿ ಸಾಯುತ್ತದೆ ಎಂದು ಧಾರಾಳವಾಗಿ ಹೇಳಬಹುದಾಗಿದ್ದ ಕಾಲ ಅದು.

ಸಾಹಿತ್ಯಕ್ಕೆ, ಸಾಹಿತಿಗಳಿಗೆ ರಾಜಾಶ್ರಯ ಇತ್ತು ಅನ್ನುವುದನ್ನೂ ನಾವು ನೋಡುತ್ತೇವೆ. ಇವತ್ತು ಅದು ಸರ್ಕಾರದ ಕೃಪೆಯಾಗಿ ಬದಲಾಗಿದೆ. ಅಕಾಡೆಮಿಗಳು ಸ್ಥಾಪನೆಯಾಗಿವೆ. ಲೇಖಕರ ಸ್ಥಿತಿಗತಿ ಸುಧಾರಿಸಿದೆ. ಸಾಹಿತಿಗಳು ಅಷ್ಟೇನೂ ಬಡವರಾಗಿ ಉಳಿದಿಲ್ಲ ಎಂದು ನಂಬುವಂಥ ಸ್ಥಿತಿ ಬಂದಿದೆ. ಮೇಲ್ನೋಟಕ್ಕೆ ಹಾಗೆ ಕಾಣಿಸಿದರೂ ಅದು ನಿಜವಲ್ಲ. ಇವತ್ತು ಕೂಡ ಔಷಧಿಗೆ ದುಡ್ಡಿಲ್ಲದ, ಮಕ್ಕಳನ್ನು ಚೆನ್ನಾಗಿ ಓದಿಸಲಾಗದ ಅಸಂಖ್ಯಾತ ಸಾಹಿತಿಗಳಿದ್ದಾರೆ. ನೂರಾರು ಕಾದಂಬರಿಗಳನ್ನು ಬರೆದ ಎಚ್.ನರಸಿಂಹಯ್ಯ ಒಂದು ಪುಟ್ಟ ಮನೆಯಲ್ಲಿ ಬದುಕುತ್ತಿದ್ದಾರೆ. ಬರೆದು ಬದುಕಬಹುದು ಎಂಬ ಭರವಸೆ ಇವತ್ತಿಗೂ ಇಲ್ಲ.

ಷೇಕ್ಸ್‌ಪಿಯರ್ ಕೂಡ ಅತ್ಯಂತ ದೈನೇಸಿ ಸ್ಥಿತಿಯಲ್ಲಿದ್ದವನು. ದುಡ್ಡು ಬೇಕಾದಾಗ ಒಂದು ನಾಟಕ ಬರೆದು ಕೊಟ್ಟು ಚಿಲ್ಲರೆ ಕಾಸು ತೆಗೆದುಕೊಳ್ಳುತ್ತಿದ್ದವನು. ಅದೇ ಇಂಗ್ಲೆಂಡಿನಲ್ಲಿ ಇವತ್ತು ಸೆಲೆಬ್ರಿಟಿ ಲೇಖಕರಿದ್ದಾರೆ. ಹ್ಯಾರಿಪಾಟರ್ ಲೇಖಕಿ ಜೆ. ಕೆ. ರಾಲಿಂಗ್ ಒಂದು ಕೃತಿ ಬರೆದು ಕೋಟ್ಯಂತರ ರುಪಾಯಿ ಸಂಪಾದಿಸುತ್ತಾಳೆ. ಸ್ಟೀಫನಿಮೆಯರ್, ಡಾನ್ ಬ್ರಾನ್ ಮುಂತಾದವರೆಲ್ಲ ಬರೆದೇ ಶ್ರೀಮಂತರಾದವರು.

***********

ಕನ್ನಡದ ಲೇಖಕ ತಾನು ಬಡವನಾಗಿಯೇ ಉಳಿಯಲು ತೀರ್ಮಾನಿಸಿದವನಂತೆ ಕಾಣಿಸುತ್ತಾನೆ. ಕನ್ನಡ ಚಿತ್ರರಂಗ ಇಲ್ಲಿ ಬರಹಗಾರರಿಲ್ಲ ಎಂದು ಬೊಬ್ಬೆ ಹಾಕುತ್ತದೆ. ಎಷ್ಟೇ ದುಡ್ಡು ಸಿಕ್ಕರೂ ನಾನು ನನ್ನ ಕೃತಿಗಳನ್ನು ಸಿನಿಮಾ ಮಾಡಲು ಬಿಡುವುದಿಲ್ಲ. ಸಿನಿಮಾಕ್ಕೆ ಚಿತ್ರಕತೆ, ಸಂಭಾಷಣೆ ಬರೆಯುವುದಿಲ್ಲ, ಟೀವಿ ಸೀರಿಯಲ್ಲುಗಳ ಸಹವಾಸ ಬೇಕಿಲ್ಲ ಎಂದು ಅನೇಕರು ನಿರ್ಧಾರ ಮಾಡಿದ್ದಾರೆ. ಜಿ. ವೆಂಕಟಸುಬ್ಬಯ್ಯ ಇವತ್ತಿಗೂ ಹಳೆಗನ್ನಡ ಸಾಹಿತ್ಯದ ಕುರಿತು ಅಧ್ಯಯನ ಮಾಡುತ್ತಾ, ಶಬ್ದದ ಬೆನ್ನಿಗೆ ಬಿದ್ದಿದ್ದಾರೆ. ಬರೆಯುವ ಪ್ರಕ್ರಿಯೆ ಕಮರ್ಷಿಯಲ್ ಆದ ತಕ್ಷಣ ತನ್ನ ಸ್ವಂತಿಕೆ ಕಳಕೊಳ್ಳುತ್ತದೆ, ಬರಹಗಾರ ತನ್ನ ಸ್ವಾತಂತ್ರ್ಯ ಕಳೆದುಕೊಳ್ಳುತ್ತಾನೆ ಎಂದು ನಂಬಿರುವ ಲೇಖಕರು ಇಲ್ಲಿ ಸಾಕಷ್ಟು ಮಂದಿ ಇದ್ದಾರೆ.

ಬಡತನ ಒಂದು ಮೌಲ್ಯ ಎಂದು ಭಾವಿಸುವುದು ಲೇಖಕರನ್ನು ದೊಡ್ಡವರನ್ನಾಗಿಸಬಹುದು. ಆದರೆ, ಅವರ ಜೊತೆಗಿರುವ ಮಂದಿ, ಅವರ ಹೆಂಡತಿ, ಮಕ್ಕಳು ಅದರಿಂದ ಅನುಭವಿಸುವ ಕಷ್ಟಗಳು ಅಷ್ಟಿಷ್ಟಲ್ಲ. ದಾನಶೂರತ್ವದ ಹಾಗೆ ಬಡತನದಲ್ಲೇ ಬದುಕಬೇಕು ಅನ್ನುವುದು ಕೂಡ ಒಂದು ತೆವಲು ಅನ್ನಿಸುವಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇಂಥ ಹೊತ್ತಲ್ಲಿ ಲೇಖಕರು ಬರೆದೇ ಬದುಕುತ್ತೇನೆ ಅನ್ನುವ ನಿರ್ಧಾರ ತೆಗೆದುಕೊಳ್ಳುವುದು ಕೂಡ ಕಷ್ಟ.

ನೆಮ್ಮದಿಯ ಸಂಗತಿಯೆಂದರೆ ಇವತ್ತು ಬರೆಯುತ್ತಿರುವ ಬಹುತೇಕ ಲೇಖಕರು ಬೇರೆ ಬೇರೆ ಹುದ್ದೆಗಳಲ್ಲಿದ್ದಾರೆ. ಬಿಡುವಿನ ವೇಳೆಯಲ್ಲಿ ಬರೆಯುತ್ತಾರೆ. ಬರವಣಿಗೆಯಿಂದ ಅವರು ಹಣವನ್ನೇನೂ ನಿರೀಕ್ಷಿಸುವುದಿಲ್ಲ. ಹೀಗಾಗಿ ಪುಸ್ತಕ ಪ್ರಕಾಶನ ಮತ್ತು ಮಾರಾಟ ಇಲ್ಲಿ ದೊಡ್ಡ ಮಟ್ಟದ ವಾಣಿಜ್ಯ ಚಟುವಟಿಕೆಯಾಗಿ ಬೆಳೆದಿಲ್ಲ. ಒಂದು ಪುಸ್ತಕವನ್ನು ಹೇಗೆ ಮಾರಾಟ ಮಾಡಬೇಕು ಅನ್ನುವುದೂ ನಮಗೆ ಗೊತ್ತಿಲ್ಲ. ಇವತ್ತೂ ಕೂಡ ಬರೆದು ಪುಸ್ತಕ ಪ್ರಕಟಿಸಿ ಕೈ ಸುಟ್ಟುಕೊಳ್ಳುವ ಲೇಖಕರಿದ್ದಾರೆ.

ಸಾಹಿತಿ ಎಂದರೆ ಬಡವ ಮತ್ತು ಅವನು ಬಡವನಾಗಿಯೇ ಇರಬೇಕು ಎಂದು ಇಚ್ಛಿಸುವವರ ಗುಂಪೂ ನಮ್ಮಲಿದೆಯಾ? ಒಮ್ಮೊಮ್ಮೆ ಹಾಗನ್ನಿಸುತ್ತದೆ. ಬೇಸರದ ಸಂಗತಿಯೆಂದರೆ ಇಲ್ಲಿ ಲೇಖಕರ ಅನುಭವಕ್ಕೆ ಬೆಲೆಯಿಲ್ಲ. ಹತ್ತಾರು ಜನಪ್ರಿಯ ಪುಸ್ತಕಗಳನ್ನು ಬರೆದ ಭೈರಪ್ಪನವರಂಥ ಹಿರಿಯರ ಹೊಸ ಕಾದಂಬರಿಯ ಬೆಲೆಯನ್ನೂ ಪುಟಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಒಬ್ಬ ಹೊಸ ಲೇಖಕನ ಕಾದಂಬರಿಗೂ ಭೈರಪ್ಪನವರ ಕಾದಂಬರಿಗೂ ಅದೇ ಬೆಲೆ. ಕುವೆಂಪು ಕಾದಂಬರಿಗೂ ಅದೇ ಬೆಲೆ.

ಪುಸ್ತಕದ ಮೌಲ್ಯವನ್ನು ಪುಟಗಳ ಆಧಾರದ ಮೇಲೆ ನಿರ್ಧರಿಸುವುದನ್ನು ಬಿಟ್ಟು ಲೇಖಕನ ಖ್ಯಾತಿ, ಅವನ

ಅನುಭವ, ಓದುಗರ ಬಳಗ ಇವುಗಳ ಆಧಾರದ ಮೇಲೆ ನಿರ್ಧರಿಸುವ ಕಾಲ ಬರುವ ತನಕ ಸಾಹಿತಿ ಬಡವನಾಗಿಯೇ ಇರುತ್ತಾನೆ. ಒಂದು ಸಣ್ಣ ಉದಾಹರಣೆ ಕೊಡುವುದಿದ್ದರೆ ಮಾರ್ಕೆಸ್‌ನ ನೂರು ಪುಟದ ಕಾದಂಬರಿಯ ಬೆಲೆ ಐನೂರು ರುಪಾಯಿ. ಅದೇ ಹೊಸ ಲೇಖಕನ ಕಾದಂಬರಿಯಾದರೆ ನೂರು ರುಪಾಯಿ.

ಅದು ಆ ಲೇಖಕನ ಪ್ರತಿಭೆಗೆ ನಾವು ಸಲ್ಲಿಸುವ ಗೌರವ ಎಂದು ನಾವೇಕೆ ಭಾವಿಸಬಾರದು?

‍ಲೇಖಕರು avadhi

July 31, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

5 ಪ್ರತಿಕ್ರಿಯೆಗಳು

 1. Chinmaya

  ಒಳ್ಳೆತನ, ಸಂಸ್ಕೃತಿ, ನ್ಯಾಯವಂತಿಕೆ ಇವುಗಳನ್ನೆಲ್ಲ ಬಡತನಕ್ಕಷ್ಟೇ ಬೆಸೆಯುವುದು ಟಿಪಿಕಲ್ ಭಾರತೀಯ ಮನಸ್ತಿತಿ. ಈ ಧಾಟಿಯ ಯೋಚನಾ ಕ್ರಮ ಭಾರತೀಯರಿಗೆ ತಲಾಂತರದಿಂದ ಬಂದ ಬಳುವಳಿ. ಶತಮಾನಗಳಿಂದ ಬಡತನವನ್ನೇ ಉಸಿರಾಡುತ್ತಾ ಬಂದ ನಮಗೆ ಶ್ರೀಮಂತಿಕೆಯ ಬಗ್ಗೆ ಅದಮ್ಯ ಆಸೆಯಿದೆ ಆದರೆ ಕಣ್ಣೆದುರಿಗಿನ ಶ್ರೀಮಂತರ ಬಗ್ಗೆ ಅಪಾರ ಅಸಹನೆ ಇದೆ. ಬಡವರ ಬಗೆಗಿನ ಅನುಕಂಪವೇ ನಮ್ಮ ಒಳ್ಳೆತನಕ್ಕೆ ಪುರಾವೆ. ಸಿನಿಮಾಗಳಲ್ಲಿ ಹೀರೊ ಶ್ರೀಮಂತನಾಗಿದ್ದು ವಿಲನ್ ಬಡವನಾಗಿದ್ದರೆ ಸಿನಿಮಾ ಓಡುವುದು ಕಷ್ಟವಾಗುತ್ತದೆ.
  ನಮ್ಮ ಸಾಹಿತಿಗಳಿಗೂ ಬಡತನದಲ್ಲಿ ಕಾಣಸಿಗುವ ಸೂಕ್ಷ್ಮ ವಿವರಗಳು, ಸಂವೇದನೆಗಳು ಸಿರಿವಂತರ ನೀರಸ(?) ಬದುಕಿನಲ್ಲಿ ಕಾಣಲಾರದೇನೊ. ಸಿಕ್ಕರೂ ಅದು ಬಡ ಓದುಗನಿಗೆ ತಟ್ಟಲಿಕ್ಕಿಲ್ಲ. ಹಾಗಾಗಿ,ನಮ್ಮ ದೇಶದಲ್ಲಿ ಇನ್ನೂ ಕೆಲಕಾಲ ಕಥೆ, ಕಾವ್ಯ, ನಾಟಕಗಳು ಜನಪ್ರಿಯವಾಗಲು ಬಡತನದಲ್ಲಿಯೇ ಹುಟ್ಟಬೇಕಾದ ಅನಿವಾರ್ಯತೆ ಇದೆ ಎಂಬುದು ನನ್ನ ಅನಿಸಿಕೆ. ಕೆಲವು ಸಾಹಿತಿಗಳಾದರೂ ಬರವಣಿಗೆಯಿಂದ ಬದುಕುವ ಸ್ತಿತಿ ನಿರ್ಮಾಣವಾಗಿದ್ದು ನೆಮ್ಮದಿಯ ಸಂಗತಿ.
  -ಚಿನ್ಮಯ

  [email protected]

  ಪ್ರತಿಕ್ರಿಯೆ
 2. vijayendra

  Jogi,

  It is not H.Narasimhaiah,it should be N.Narasimhaiah, Sherlock holms of Kannada literature who produced more than 300 detective novels in Kannada. vijayendra 944832020220

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: