ಜೋಗಿ ಬರೆಯುತ್ತಾರೆ: ಮೂಡಿಗೆರೆ ರಸ್ತೆಯಲ್ಲಿ ಒಂದು ಸಣ್ಣ ಎಡಮುರಿ ತಿರುವು

ಮೂಡಿಗೆರೆ ರಸ್ತೆಯಲ್ಲಿ ಒಂದು ಸಣ್ಣ ಎಡಮುರಿ ತಿರುವು

– ಜೋಗಿ

ಚಿತ್ರ: ಸಂಜು ಒಡೆಯರ್

ಇವತ್ತು ಮೂರು ಪುಸ್ತಕ ಕೊಂಡು ತಂದೆ. ಅದರಲ್ಲಿ ಒಂದು ಓದಿ ಮುಗಿಸಿದೆ. ಇನ್ನೆರಡು ನಾಳೆ ಓದಬೇಕು ಅಂದುಕೊಂಡಿದ್ದೇನೆ ಅಂತ ಹಿರಿಯ ಮಿತ್ರ ಬಿ. ಸುರೇಶ ಬರೆದುಕೊಳ್ಳುತ್ತಾರೆ. ಮೊನ್ನೆಮೊನ್ನೆಯಷ್ಟೇ ಅವರು ಪುಟ್ಟಕ್ಕನ ಹೈವೇ ಸಿನಿಮಾ ಮುಗಿಸಿ ಬಂದಿದ್ದಾರೆ. ಆ ಖುಷಿಗೋ ಅಷ್ಟೂ ದಿನ ತನುಮನಗಳನ್ನು ಆ ಚಿತ್ರದಲ್ಲಿ ತೊಡಗಿಸಿಕೊಂಡ ಹುರುಪಿಗೋ ಒಂದಷ್ಟು ಓದು, ಅಲ್ಲಿ ಇಲ್ಲಿ ಸುತ್ತಾಟ, ಪುಸ್ತಕ ಬಿಡುಗಡೆಯಲ್ಲಿ ಒಂದಷ್ಟು ಗೆಳೆಯರೊಂದಿಗೆ ಹರಟೆ. ಮತ್ತೆ ಹೊಸ ಚಿತ್ರಕತೆ ಮಾಡುತ್ತಾ, ಮತ್ತೊಂದು ನಾಟಕ ಬರೆಯುತ್ತಾ, ಸುರೇಂದ್ರನಾಥ್ ನಾಟಕದಲ್ಲಿ ನಟಿಸುತ್ತಾ ಸುರೇಶ್ ದಿನಗಳು ಕಳೆದುಹೋಗುತ್ತವೆ. ಬೇಂದ್ರೆ ಆಡಾಡ್ತಾ ಆಯುಷ್ಯ ಅಂದಿದ್ದು ಇದನ್ನೇ ಇರಬೇಕು. ಇಂಥವರು ನನ್ನಲ್ಲಿ ಹೊಟ್ಟೆಕಿಚ್ಚು ಹುಟ್ಟಿಸುತ್ತಾರೆ. ಕಿರಿಯ ಮಿತ್ರರಾದ ಅಪಾರ ರಘು, ಚೇತನ್ ನಾಡಿಗೇರ್ ಮುಂತಾದವರು ಇವತ್ತು ಇಂಥದ್ದೊಂದು ಸಿನಿಮಾ ನೋಡಿದೆ ಅಂತ ಹೇಳುತ್ತಲೇ ಇರುತ್ತಾರೆ. ಗೆಳೆಯರಾದ ಮಂಜುನಾಥ ಸ್ವಾಮಿ, ವಸುಧೇಂದ್ರ ಮತ್ತು ನನ್ನ ಹಿರಿಯ ಮಿತ್ರರಾದ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಮುಂತಾದವರೆಲ್ಲ ತಿಂಗಳಿಗೆ ಒಂದಾದರೂ ಪ್ರವಾಸ ಹೋಗುತ್ತಾರೆ. ಫೋನ್ ಮಾಡಿದಾಗೆಲ್ಲ ಯಾವುದೋ ಬೆಟ್ಟದಲ್ಲಿದ್ದೇವೆಂದೋ ನದಿ ತೀರದಲ್ಲಿದ್ದೇವೆಂದೋ ಹೇಳುತ್ತಲೇ ಇರುತ್ತಾರೆ. ಬಿಡುಗಡೆ ಎಷ್ಟು ಸರಳ. ಒಂದು ದಿನದ ಮಟ್ಟಿಗೆ ಫೋನ್ ಸ್ವಿಚಾಫ್ ಮಾಡಿ, ಯಾವ ಭಯವೂ ಇಲ್ಲದೇ ಒಂದು ಫಿಶಿಂಗ್ ಕ್ಯಾಂಪಿಗೋ ಮತ್ತೆಲ್ಲಿಗೋ ಹೋಗಿ ಬರುವುದು ಸಾಧ್ಯವಾದರೆ ಅಂದುಕೊಳ್ಳುತ್ತಲೇ ಕಾಲ ಕಳೆದುಹೋಗುತ್ತದೆ. ಮತ್ತದೇ ಬೆಳಗು, ಮತ್ತದೇ ಮಧ್ಯಾಹ್ನ, ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ.

ಮೊನ್ನೆ ಮೂಡಿಗೆರೆಯಲ್ಲಿರುವ ತೇಜಸ್ವಿಯವರ ಮನೆಗೆ ಹೋಗಿಬಂದಾಗ ಮನಸ್ಸು ನಿರಾಳವಾಯಿತು. ಪೂರ್ಣಚಂದ್ರ ತೇಜಸ್ವಿಯವರಿಲ್ಲದ ಮನೆ. ರಾಜೇಶ್ವರಿ ಅಮ್ಮ ಆಪ್ತವಾಗಿ ಮಾತಾಡಿಸಿದರು. ತೋಟ ತೋರಿಸಿದರು. ತೇಜಸ್ವಿಯವರು ಖುಷಿಗೆಂದು ನಿರ್ಮಿಸಿದ್ದ ಪುಟ್ಟ ಜಲಪಾತ ಈ ವರುಷದ ಮಳೆಗೆ ಹಾಳಾಗಿದ್ದನ್ನು ತೋರಿಸಿದರು. ಮನೆ ಮುಂದಿನ ಕೆರೆಯಲ್ಲಿ ಎಂದಿನಂತೆ ಹಂಸ, ಕೊಕ್ಕರೆಗಳು ಈಜುತ್ತಿದ್ದವು. ಮನೆಯೊಳಗೆ ತೇಜಸ್ವಿಯವರು ಬಳಸುತ್ತಿದ್ದ ಟೇಬಲ್ಲು ಬಟ್ಟೆ ಹೊದ್ದುಕೊಂಡು ಕೂತಿತ್ತು.

ನಮ್ಮ ಜೊತೆಗಿದ್ದವರು ಗೆಳೆಯ ಕುಂಟಿನಿ ಗೋಪಾಲಕೃಷ್ಣ, ಹಿರಿಯರಾದ ಲಕ್ಷ್ಮೀಶ ತೋಳ್ಪಾಡಿ, ಜ್ಯೋತಿ ಮತ್ತು ಖುಷಿ. ಆ ತೋಟದಲ್ಲಿ ಅಡ್ಡಾಡಿ ಬಂದ ತೋಳ್ಪಾಡಿಯವರಿಗೆ ಖುಷಿಯೋ ಖುಷಿ. ಈ ಪ್ರಯಾಣದ ಅತ್ಯಂತ ಆಹ್ಲಾದಕರ ಕ್ಷಣ ಇದು ಎಂದು ಅವರು ಖುಷಿಪಟ್ಟರು. ತೇಜಸ್ವಿಯವರೊಮ್ಮೆ ಸುಳ್ಯದಲ್ಲಿ ಯಾವುದೋ ಒಂದು ಕಾರ್ಯಕ್ರಮಕ್ಕೆ ಪತ್ನೀ ಸಮೇತರಾಗಿ ಹೋಗಿದ್ದರಂತೆ. ಆ ಕ್ಷಣವನ್ನು ನೆನಪಿಸುತ್ತಿದ್ದಂತೆ ರಾಜೇಶ್ವರಿಯವರಿಗೆ ಆ ಘಟನೆಗಳೆಲ್ಲ ನೆನಪಾದವು. ತೇಜಸ್ವಿಯವರು ಆವತ್ತು ಒಂದೂವರೆ ಗಂಟೆ ಮಾತಾಡಿದ್ದರಂತೆ. ಅದು ಹತ್ತಿಪ್ಪತ್ತು ವರುಷ ಹಿಂದಿನ ಘಟನೆ. ತೋಳ್ಪಾಡಿ ಮತ್ತು ರಾಜೇಶ್ವರಿಯವರು ಆ ಕ್ಷಣವನ್ನು ಮೆಲುಕುಹಾಕುತ್ತಾ ಆ ಕಾಲಕ್ಕೇ ಹೊರಟುಹೋದರು. ತೇಜಸ್ವಿ ಹಕ್ಕಿಗಳ ಫೋಟೋ ಹೇಗೆ ತೆಗೆಯುತ್ತಿದ್ದರು ಅನ್ನುವುದನ್ನು ರಾಜೇಶ್ವರಿ ವಿವರಿಸುತ್ತಿದ್ದರು. ಹಕ್ಕಿಗಳ ಫೋಟೋ ತೆಗೆಯುವುದಕ್ಕೂ ಮೊದಲು ಹಕ್ಕಿಗಳನ್ನು ಹತ್ತಿರ ಬರುವಂತೆ ಮಾಡುವುದು ಮುಖ್ಯ ಅನ್ನುತ್ತಿದ್ದರಂತೆ ತೇಜಸ್ವಿ. ಅದಕ್ಕೋಸ್ಕರ ಮನೆಯ ಹೊರಜಗಲಿಯಲ್ಲಿ ವಿವಿಧ ಆಕೃತಿಯ ಗೂಡುಗಳನ್ನು ಕಟ್ಟಿದ್ದರು. ಅಲ್ಲಿ ಆ ಹಕ್ಕಿಗಳು ಬಂದು ಕೂರುತ್ತಿದ್ದರೆ, ಕಿಟಕಿಗೊಂದು ಕಪ್ಪು ಪರದೆ ಕಟ್ಟಿ, ಅದರಲ್ಲಿ ಅಲ್ಲಲ್ಲಿ ತೂತು ಮಾಡಿ ಹಕ್ಕಿಗಳ ಫೋಟೋ ತೆಗೆಯುತ್ತಿದ್ದರು. ಆ ಹಕ್ಕಿಗಳಿಗೋಸ್ಕರ ಅಲ್ಲೊಂದಷ್ಟು ತಿಂಡಿಗಳನ್ನು ಇಟ್ಟಿರುತ್ತಿದ್ದರು. ಅದೊಂಥರ ಹ್ಕಕಿಗಳ ಪ್ಲೇಹೋಮ್ ಆಗಿಬಿಟ್ಟಿತ್ತು ಅನ್ನುತ್ತಾ ರಾಜೇಶ್ವರಿಯವರು ಮತ್ತೆ ನೆನಪಿಗೆ ಹೊರಳಿಕೊಂಡರು. ತೇಜಸ್ವಿಯವರ ತೋಟಕ್ಕೆ ಈಗಲೂ ಅಪರೂಪದ ಹಕ್ಕಿಗಳು ಬರುತ್ತಿರುತ್ತವಂತೆ. ಅಂಥ ಒಂದು ಹಕ್ಕಿ ಮೊನ್ನೆ ಮೊನ್ನೆ ಬಂದಿತ್ತು. ಅದು ಬರುತ್ತಲೂ ಹೇಳಬೇಕು ಅಂತ ಸೇನಾನಿ ಹೇಳಿದ್ದ. ಆ ಹಕ್ಕಿ ಬಂದಾಗ ಹೇಳಿದೆ. ಅವನು ಬಂದು ಕಾದು ಕೂತಿದ್ದೇ ಬಂತು. ಹಕ್ಕಿ ಬರಲೇ ಇಲ್ಲ. ಅವನು ಹೋದ ಮಾರನೇ ದಿನ ಮತ್ತೆ ಕಾಣಿಸಿಕೊಂಡಿತು ಎನ್ನುತ್ತಿದ್ದಂತೆ ರಾಜೇಶ್ವರಿಯವರಿಗೆ ಮತ್ತೊಂದು ನೆನಪು ಉಕ್ಕಿಬಂತು. ಅದು ಮಂಗಟ್ಟೆಹಕ್ಕಿಯದು. ಅದನ್ನು ಕರ್ನಾಟಕಕ್ಕೆ ಪರಿಚಯಿಸಿದ್ದೇ ಇವರು ಎಂದು ಒಳಕೋಣೆಗೆ ಕರೆದೊಯ್ದು ಅದರ ಮೊದಲ ಫೋಟೋ ತೋರಿಸಿದರು. ಚಪ್ಪಟೆಕೊಕ್ಕಿಲ್ಲ ಮಂಗಟ್ಟೆ ಹಕ್ಕಿಯ ಚಿತ್ರ ಫೋಟೋದಿಂದ ಎದ್ದು ಬರುವಂತಿತ್ತು. ತೇಜಸ್ವಿಯ ಗೆಳೆಯರೊಬ್ಬರು ವಿದೇಶದಿಂದ ಬರುವಾಗ ಒಂದು ಪುಟ್ಟ ಕಂಪ್ಯೂಟರ್ ತಂದುಕೊಟ್ಟಿದ್ದರಂತೆ. ಅದನ್ನು ತೇಜಸ್ವಿ ಹೆಸರಿನ ಸಂಗ್ರಹಾಲಯಕ್ಕ ಕೊಡಲಿಕ್ಕೆಂದು ಪಕ್ಕಕ್ಕೆ ಎತ್ತಿಟ್ಟಿದ್ದರು ಅಮ್ಮ. ಆ ಕಂಪ್ಯೂಟರ್ ಮನೆಗೆ ಬಂದು ಇಪ್ಪತ್ತೋ ಇಪ್ಪತ್ತೈದೋ ವರ್ಷಗಳಾಗಿರಬೇಕು. ಮೊದಲು ಅದನ್ನು ತಂದಾಗ ನನಗದು ಬೇಡವೇ ಬೇಡ ಎಂದು ಮುಖ ತಿರುಗಿಸಿ ಕೂತುಬಿಟ್ಟಿದ್ದರಂತೆ ತೇಜಸ್ವಿ. ನಂತರ ಅದಕ್ಕೆ ಕನ್ನಡ ಸಾಫ್ಟ್‌ವೇರ್ ಹಾಕಿಕೊಂಡು ಬಳಸಲು ಶುರುಮಾಡಿದ್ದು ಮತ್ತೊಂದು ಕತೆ. ಆರಂಭದ ದಿನಗಳಲ್ಲಿ ಚಾಲ್ತಿಯಲ್ಲಿದ್ದ ಪುಟ್ಟ ಮಾನಿಟರ್ ಮತ್ತು ಇಷ್ಟಗಲ ಸಿಪಿಯು ಇದ್ದ ಕಂಪ್ಯೂಟರ್ ಅದು. ಅಲ್ಲಲ್ಲಿ ತುಕ್ಕುಹಿಡಿದು ಕುಂಬಾಗುತ್ತಾ ಬಂದಿತ್ತು. ಪಕ್ಕದಲ್ಲೇ ತೇಜಸ್ವಿಯವರು ಕೊನೆಯ ದಿನಗಳಲ್ಲಿ ಮಾಡಿಟ್ಟ ಮುಖಪುಟಗಳು. ಅವರು ಅರ್ಧ ಮುಗಿಸಿದ ಪುಸ್ತಕಗಳು, ಉಳಿಸಿಹೋದ ವಸ್ತುಗಳು. ಅವನ್ನೆಲ್ಲ ಅಲ್ಲಲ್ಲೇ ಜೋಪಾನವಾಗಿ ಎತ್ತಿಟ್ಟಿದ್ದಾರೆ ರಾಜೇಶ್ವರಿ. ಅವನ್ನು ನೋಡುತ್ತಿದ್ದರೆ ಸುಮಾರು ಹನ್ನೆರಡು ವರುಷದ ಹಿಂದೆ ಬೆಂಗಳೂರು ಮೂಡಿಗೆರೆ ಬಸ್ಸು ಹತ್ತಿ, ಮಧ್ಯರಾತ್ರಿ ಹ್ಯಾಂಡ್ ಪೋಸ್ಟ್ ಎಂಬಲ್ಲಿ ಇಳಿದು, ಕಾಡುದಾರಿಯಲ್ಲಿ ಅಲೆದಾಡುತ್ತಾ ಅವರ ಮನೆ ಹುಡುಕಿಕೊಂಡು ಕೊನೆಗೂ ಮನೆ ಸೇರಿ, ಅವರ ಮನೆಯಲ್ಲಿ ಇಡೀ ರಾತ್ರಿಯನ್ನು ತೇಜಸ್ವಿಯವರ ಜೊತೆ ಕಳೆದ ನೆನಪು. ಆವತ್ತು ಅವರು ಕಂಪ್ಯೂಟರಿನೊಳಗೆ ಒಂದು ವಿಸ್ಮಯ ವಿಶ್ವವೇ ಅಡಗಿದೆ ಎನ್ನುವುದನ್ನು ತೋರಿಸಿದ್ದರು. ಅರ್ಧ ಗಂಟೆಯ ಮಟ್ಟಿಗೆ ಬಂದುಹೋಗುತ್ತೇವೆ ಎಂದ ನಾವು ಅಲ್ಲಿ ಸುಮಾರು ಮೂರು ಗಂಟೆ ಹರಟುತ್ತಾ ಸುತ್ತಾಡುತ್ತಾ ಕೂತಿದ್ದೆವು. ಪುಟ್ಟ ಕೆರೆಯಿಂದ ದೊಡ್ಡ ಕೆರೆಗೆ ಓಡಾಡುತ್ತಾ, ಅಲ್ಲಿರುವ ಮೀನುಗಳನ್ನು ನೋಡುತ್ತಾ, ಕಪ್ಪು ಬಿಳಿ ಕೊಕ್ಕರೆಗಳ ಆಟ ನೋಡುತ್ತಾ ಹೊತ್ತು ಹೋದದ್ದೇ ಗೊತ್ತಾಗುತ್ತಿರಲಿಲ್ಲ. ಮರಳಿ ಬರುವ ಮನಸ್ಸು ನಮಗ್ಯಾರಿಗೂ ಇರಲಿಲ್ಲ. ಚಾರ್ಮುಡಿ ಘಾಟಿಯ ರಸ್ತೆಯೂ ಕೆಟ್ಟು ಹೋಗಿದೆ. ರಾತ್ರಿ ಪ್ರಯಾಣ ಒಳ್ಳೆಯದಲ್ಲ ಅಂತ ಗೆಳೆಯರು ಎಚ್ಚರಿಸಿದ್ದರು. ಕೊನೆಗೂ ಅಲ್ಲಿಂದ ಹೊರಟು, ತೋಟದ ತುದಿಯಲ್ಲಿರುವ ಹಳದಿ ಗೇಟಿನ ಬಳಿ ನಿಂತು ತಿರುಗಿ ನೋಡಿದಾಗ ತೋಳ್ಪಾಡಿ ಹೇಳಿದರು. ಇಲ್ಲಿಗೆ ಬರದೇ ಹೋಗಿದ್ದರೆ ನಾವು ತುಂಬ ಕಳೆದುಕೊಳ್ಳುತ್ತಿದ್ದೆವು. ಪ್ರತಿಬಾರಿ ಮೂಡಿಗೆರೆ ದಾಟಿ ಹೋಗುವಾಗಲೂ ಹಾಗೇ ಅನ್ನಿಸುತ್ತದೆ. ಬಿಡುಗಡೆ ಎಷ್ಟು ಸರಳ.]]>

‍ಲೇಖಕರು G

September 7, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

4 ಪ್ರತಿಕ್ರಿಯೆಗಳು

 1. praveen chandra

  ತೇಜಸ್ವಿ ಬಗ್ಗೆ ಇಷ್ಟೊಂದು ಓದಿಸಿದ ಅವಧಿಗೆ ಧನ್ಯವಾದ

  ಪ್ರತಿಕ್ರಿಯೆ
 2. D.RAVI VARMA

  ತೆಜಸ್ವ್ವಿ ಒಂದು ಕಡಲು ಇದ್ದಹಾಗೆ, ಅವರು, ಅವರ ಬದುಕು, ಅವರ ಬರಹ, ಅವರ ಚಿಂತನೆ, ಹವ್ಯಾಸ, ಅವರ ಮೌನ… ಎಲ್ಲವು ಕೂಡ ನನಗೆ ಮತ್ತೆ ಮತ್ತೆ ವಿಸ್ಮಯವಾಗಿ ಕಾಡುತ್ತಿವೆ……
  ಅವರನ್ನು ಇನ್ನು ಓದಲು ಹುಚ್ಚು ಹಚ್ಚಿಸಿದ ಅವಧಿಗೆ ಮನಸಾರೆ ವಂದನೆ ತಿಳಿಸುವೆ….
  ರವಿವರ್ಮ.

  ಪ್ರತಿಕ್ರಿಯೆ
 3. bharathi bv

  Haaagondsala moodigere dikkalli hodaaga tejaswuyavranna nodbeku andukondaglella ‘naanen yavdo picnic spot enree nodakke barodikke’ antha avru sidukthidru anno maathu odiddu nenpaagi avranna nodakke hogle illa naanu . . Enthaara baydukollali anta hogbidbekittu anta eegloo kai kai hisuki koltirtini …

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: