ಜೋಗಿ ಬರೆಯುತ್ತಾರೆ: ಹೊಸ ಓದಿನ ಖುಷಿ ಮತ್ತು ಸಣ್ಣ ಬೇಸರದ ಕುರಿತು…

-ಜೋಗಿ ಹೊಸ ಓದಿನ ಖುಷಿ ಮತ್ತು ಸಣ್ಣ ಬೇಸರದ ಕುರಿತು ಸಮಗ್ರ ಸಂಪುಟ ಕಂಡರೆ ಇತ್ತೀಚಿಗೆ ಗಾಬರಿ ಶುರುವಾಗುತ್ತದೆ. ಒಂದೋ ಲೇಖಕ ಯಾವುದೋ ಪ್ರಶಸ್ತಿಗೆ ಹೊಂಚು ಹಾಕುತ್ತಿದ್ದಾನೆ ಅಥವಾ ಅವನಿಗೆ ಆಗಲೇ ಯಾವುದೋ ಪ್ರಶಸ್ತಿ ಬಂದಿದೆ ಎನ್ನುವುದರ ಸೂಚನೆಯೇ ಈ ಸಮಗ್ರ ಸಂಕಲನ. ಇಲ್ಲಿವರೆಗಿನ ಎಲ್ಲಾ ಬರಹಗಳನ್ನು ಒಟ್ಟಾಗಿ ಮುದ್ರಿಸುವ ಷೋಕಿ ಶುರುವಾದದ್ದು ಇತ್ತೀಚಿನ ವರ್ಷಗಳಲ್ಲಿ. ಕೆಲವು ವರ್ಷಗಳ ಹಿಂದೆ ಒಂದಿಬ್ಬರು ಲೇಖಕರ ಸಮಗ್ರ ಸಾಹಿತ್ಯದ ಸಾವಿರಾರು ಪುಟಗಳನ್ನು ಪ್ರಕಾಶನ ಸಂಸ್ಥೆಯೊಂದು ಪ್ರಕಟಿಸಿತ್ತು. ಅವರ ಆಯ್ದ ಬರಹಗಳನ್ನು ಪ್ರಕಟಿಸುವುದಕ್ಕೆ ಸಾಧ್ಯವಿಲ್ಲದೇ ಆ ಸಂಸ್ಥೆ ಹಾಗೆ ಮಾಡಿದ್ದು ಎಂದು ಗೆಳೆಯರು ತಮಾಷೆ ಮಾಡಿದ್ದರು. ಇದಕ್ಕೆ ಅಪವಾದ ಎಂಬಂತೆ ಡಾ. ಕೆ ವಿ. ನಾರಾಯಣ ಅವರ ಸಮಗ್ರಬರಹಗಳ ಸಂಪುಟವನ್ನು ಬರಹ ಪಬ್ಲಿಷಿಂಗ್ ಹೌಸ್ ಹೊರತಂದಿದೆ. ಸುಮಾರು ಮುನ್ನೂರು ನಾನ್ನೂರು ಪುಟಗಳ ಒಂಬತ್ತು ಸಂಪುಟಗಳನ್ನು ಅಚ್ಚುಕಟ್ಟಾಗಿ ಮುದ್ರಿಸಿ ಅಷ್ಟೂ ಪುಸ್ತಕವನ್ನು ಒಂದು ಸೂಟ್‌ಕೇಸಿನಲ್ಲಿಟ್ಟು ಓದುಗರಿಗೆ ತಲುಪಿಸಿದೆ. ಗೆಳೆಯರನ್ನು ಅಪಾರವಾಗಿ ಪ್ರೀತಿಸುವ, ಯಾರನ್ನೂ ನೋಯಿಸದ, ವಿಮರ್ಶೆಯಲ್ಲಿ ಕಟುವಾಗುವ ಹೊತ್ತಿಗೂ ಮಾನವೀಯವಾಗಿ ಉಳಿಯಬಲ್ಲ ಕೆ ವಿ ನಾರಾಯಣರ ಜೊತೆ ಕೆಲವು ದಿನಗಳನ್ನು ನಾವೊಂದಷ್ಟು ಮಂದಿ ಕಳೆದಿದ್ದೆವು.

ಅವರೊಂದು ಕಥಾಕಮ್ಮಟಕ್ಕೆ ನಿರ್ದೇಶಕರಾಗಿ ಬಂದಿದ್ದರು. ಅವರ ಅಸಂಖ್ಯಾತ ಶಿಷ್ಯರ ಪಟ್ಟಿಯಲ್ಲಿ ಕನ್ನಡದ ಅನೇಕ ಒಳ್ಳೆಯ ಕವಿಗಳೂ ಕತೆಗಾರರೂ ಇದ್ದಾರೆ. ಸುಮ್ಮನೆ ಬರೆಯುವ, ವಿನಾಕಾರಣ ಟೀಕಿಸುವ, ತನಗೆ ಸಂಬಂಧವಿಲ್ಲದ ಸಂಗತಿಗಳ ಕುರಿತು ಹೇಳಿಕೆ ಕೊಡುವ, ಪದೇ ಪದೇ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವ ಲಾಲಸೆಯಿಂದ ಮುಕ್ತರಾದವರು ಕೆವಿಎನ್. ಯಾವುದೇ ಕೃತಿಯ ಬಗ್ಗೆ ಅವರನ್ನು ಕೇಳಿದರೆ, ವಸ್ತುನಿಷ್ಠ ಅಭಿಪ್ರಾಯ ಸಿಗುತ್ತದೆ. ಶರ್ಮರ ಕವಿತೆಗಳ ಬಗ್ಗೆ ಬರೆಯುತ್ತಾ ಅವರು ಶರ್ಮರದು ಕಣ್ಣಿನ ಲೋಕ. ಕಣ್ಣಿಗೆ ದಕ್ಕಿದ್ದನ್ನು ಕವಿತೆಯ ಲೋಕದ ಅರ್ಥಭಾರದಲ್ಲಿ ಅಳವಡಿಸುವ ಲೋಕ. ಹೀಗಾಗಿ ಇಲ್ಲಿ ಕವಿತೆಯ ಅರ್ಥ ಲೋಕ ದೃಶ್ಯಗಳ ಸಂಬಂಧದಲ್ಲಿ ಮೈತಳೆಯುವುದಿಲ್ಲ’ ಎನ್ನುತ್ತಾರೆ. ಶರ್ಮರ ಕವಿತೆಗಳನ್ನು ಓದುತ್ತಾ ಹೋದಾಗ ಈ ಮಾತು ಎಷ್ಟು ಸತ್ಯ ಅನ್ನಿಸುತ್ತದೆ. ಹಾಗೇ ಭುಜಂಗಯ್ಯನ ದಶಾವತಾರಗಳು, ಬೇನ್ಯಾದ ಕುರಿತ ಒಳನೋಟಗಳು, ಮುಸ್ಸಂಜೆಯ ಕಥಾಪ್ರಸಂಗ ಮತ್ತು ಪರ್ವಕ್ಕೆ ಮಾಡಿಕೊಂಡ ಟಿಪ್ಪಣಿಗಳೆಲ್ಲ ಕುತೂಹಲಕಾರಿಯಾಗಿವೆ. ಈ ಸಂಕಲನಕ್ಕೆ ಅವರು ತೊಂಡುಮೇವು ಎಂದು ಹೆಸರು ಕೊಟ್ಟಿದ್ದಾರೆ. ಅದರಲ್ಲೇ ಅವರ ವಿಸ್ತಾರ ಮತ್ತು ವಿನಯ ಎರಡೂ ಕಾಣಿಸುತ್ತದೆ. ******** ಕನ್ನಡದಲ್ಲಿ ಹೊಸತೇನು ಬರುತ್ತಿದೆ ಎಂದು ಬಹಳ ದಿನಗಳಿಂದ ಗಮನಿಸಿರಲಿಲ್ಲ. ಅಲ್ಲಲ್ಲಿ ಬರುವ ಕತೆಗಳನ್ನೂ ಗೆಳೆಯರು ಕಳುಹಿಸಿದ ಕತೆಗಳನ್ನೂ ಬಿಟ್ಟರೆ ಬೇರೆ ಏನನ್ನೂ ಓದಿರಲೂ ಇಲ್ಲ. ಇಂಗ್ಲಿಷ್ ಕಾದಂಬರಿಗಳನ್ನೋ, ಜೀವನಚರಿತ್ರೆಗಳನ್ನೋ, ಚರಿತ್ರೆ ಮತ್ತು ಪ್ರವಾಸಕ್ಕೆ ಸಂಬಂಧಿಸಿದ ಪುಸ್ತಕಗಳನ್ನೋ ಓದುತ್ತಾ ಕೂತರೆ ಮರಳಿ ಬರುವ ಮನಸ್ಸಾಗುವುದಿಲ್ಲ. ಮೊನ್ನೆ ಚಿತ್ರದುರ್ಗದ ಕುಮಾರ್ ಥ್ರೀ ಕಪ್ಸ್ ಆಫ್ ಟೀ’ ಎಂಬ ಪುಸ್ತಕವನ್ನು ಕಳುಹಿಸಿ ಓದುವಂತೆ ಸೂಚಿಸಿದರು. ಒಂದು ಭಾನುವಾರ ಪುಸ್ತಕದಂಗಡಿಯಲ್ಲಿ ಕಳೆದ ಪರಿಣಾಮ ಒಂದಷ್ಟು ಹಳೆಯ ಪುಸ್ತಕಗಳೂ ಹೊಸ ಪುಸ್ತಕಗಳೂ ಸಿಕ್ಕವು. ಕನ್ನಡದಲ್ಲೂ ಅನೇಕ ಹೊಸ ಪುಸ್ತಕಗಳು ಬಂದಿವೆ. ಮಿತ್ರಾ ವೆಂಕಟ್ರಾಜ್ ದಕ್ಷಿಣ ಕನ್ನಡದ ಮೂರು ತಲೆಮಾರುಗಳನ್ನು ಇಟ್ಟುಕೊಂಡು ಸೊಗಸಾದ ಕಾದಂಬರಿ ಬರೆದಿದ್ದಾರೆ. ಪಾಚಿ ಕಟ್ಟಿದ ಪಾಗಾರ ಅನ್ನುವುದು ಒಂದು ರೂಪಕ ಕೂಡ ಆಗಬಲ್ಲದು. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದ ಮನೆಗಳ ಸುತ್ತ ಕಟ್ಟಿದ ಕಲ್ಲಿನ ಪಾಗಾರಕ್ಕೆ ಮಳೆಗಾಲದಲ್ಲಿ ಪಾಚಿ ಕಟ್ಟಿಕೊಂಡು ಕಣ್ಸಳೆಯುವ ಹಸಿರು ಬಣ್ಣದ ಚಿತ್ರ ಮೂಡುತ್ತದೆ. ಶ್ರಾವಣ ಕೊನೆಯಾಗುತ್ತಿದ್ದಂತೆ ಆ ಪಾಗಾರ ಒಂದು ಕಲಾಕೃತಿಯಂತೆ ಕಾಣಿಸತೊಡಗುತ್ತದೆ. ಮತ್ತೊಂದು ಕಾದಂಬರಿ ತಲೆಗಳಿ’. ಅಕ್ಷರ ಪ್ರಕಾಶನ ಪ್ರಕಟಿಸಿರುವ ಈ ಕಾದಂಬರಿಯ ಲೇಖಕರು ಕಾಲವಾಗಿದ್ದಾರೆ. ಹವ್ಯಕ ಭಾಷೆಯಲ್ಲಿರುವ ಈ ಕಾದಂಬರಿಯನ್ನು ಓದಲು ಶುರು ಮಾಡುವುದು ಕಷ್ಟ. ಓದುತ್ತಾ ಹೋದರೆ ಅದರ ರುಚಿ ಹತ್ತುತ್ತಾ ಹೋಗುತ್ತದೆ. ಈ ಮಧ್ಯೆ ರಾಜೀವ್ ತಾರಾನಾಥರ ಜೀವನ ಚರಿತ್ರೆಯನ್ನು ಸುಮಂಗಲಾ ಬರೆದಿದ್ದಾರೆ. ನಮ್ಮ ನಡುವೆ ಇರುವ ಪ್ರತಿಭಾವಂತರ ಪೈಕಿ ನಮಗೆ ಕಡಿಮೆ ಗೊತ್ತಿರುವವರು ತಾರಾನಾಥರು. ನವ್ಯ ಸಂದರ್ಭದಲ್ಲಿ ಒಳ್ಳೆಯ ವಿಮರ್ಶೆ ಬರೆದ ತಾರಾನಾಥ್ ಅನೇಕ ಚಿತ್ರಗಳಿಗೆ ಸಂಗೀತ ಕೂಡ ನೀಡಿದವರು. ಅವರಷ್ಟೇ ಕಡಿಮೆ ಗೊತ್ತಿರುವ ಇನ್ನೊಬ್ಬರು ಗಿರೀಶ್ ಕಾರ್ನಾಡ್. ಅವರ ಗೆಳೆಯರು ಯಾರು, ಅವರು ಏನು ಓದುತ್ತಿದ್ದಾರೆ, ಯಾವ ನಾಟಕದ ಸಿದ್ಧತೆಯಲ್ಲಿದ್ದಾರೆ. ಬಿಡುವಿನ ಹೊತ್ತಲ್ಲಿ ಏನು ಮಾಡುತ್ತಾರೆ ಎಂಬುದು ನಿಗೂಢ. ಹಾಗೇ ಅವರ ಬಾಲ್ಯ, ಯೌವನದ ವಿವರಗಳೂ ನಮಗೆ ಗೊತ್ತಿಲ್ಲ. ಅವರು ಕೂಡ ಆತ್ಮಚರಿತ್ರೆ ಬರೆಯಲು ಆರಂಭಿಸಿದ್ದಾರೆ. ಆಡಾಡ್ತಾ ಆಯುಷ್ಯ ಎಂಬ ಹೆಸರೇ ಅವರ ಜೀವನಪ್ರೀತಿಯನ್ನು ತೋರುತ್ತದೆ. ಈಗಾಗಲೇ ಅದರ ಎರಡು ಅಧ್ಯಾಯಗಳು ದೇಶಕಾಲ’ದಲ್ಲಿ ಪ್ರಕಟಗೊಂಡಿವೆ. ಅವು ಉಳಿದ ಭಾಗಗಳ ಕುರಿತು ಕುತೂಹಲ ಮೂಡಿಸಿವೆ. ಇವೆಲ್ಲದರ ನಡುವೆ ನಿಜಕ್ಕೂ ಅತ್ಯಂತ ಕುತೂಹಲ ಮೂಡಿಸಿದ್ದು ಕುಂ. ವೀರಭದ್ರಪ್ಪನವರ ಆತ್ಮಚರಿತ್ರೆ ಗಾಂಧಿಕ್ಲಾಸು. ಅದು ಕತೆಯೋ ಆತ್ಮಕತೆಯೋ ಎಂದು ಅನುಮಾನ ಮೂಡಿಸುವಂತಿದೆ ಎಂದು ಬೆನ್ನುಡಿಯಲ್ಲಿ ಸಿ ಎನ್ ರಾಮಚಂದ್ರನ್ ಬರೆದಿದ್ದಾರೆ. ಆ ಮಾತು ಸುಳ್ಳಲ್ಲ ಎನ್ನುವುದು ಗಾಂಧಿಕ್ಲಾಸ್ ಓದುತ್ತಿದ್ದರೆ ಅನುಭವಕ್ಕೆ ಬರುತ್ತದೆ. ಆತ್ಮಚರಿತ್ರೆಯಲ್ಲಿ ಇಂಥದ್ದೇ ಇರಬೇಕು, ಇಂಥದ್ದಿರಬಾರದು ಎಂದೇನಿಲ್ಲ. ಆದರೆ ಅದನ್ನು ರೋಚಕವಾಗಿಸಲು ಮತ್ತೊಬ್ಬರ ವ್ಯಕ್ತಿತ್ವವನ್ನು ಘಾಸಿಗೊಳಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡುತ್ತದೆ. ಕುಂ. ವೀರಭದ್ರಪ್ಪ ತಮ್ಮ ಜೀವನದ ಘಟನೆಗಳನ್ನು ಒಟ್ಟಾರೆಯಾಗಿ ದಾಖಲಿಸುತ್ತಾ ಹೋಗಿದ್ದಾರೆ. ಅವರ ಬಡತನ, ತಂದೆಯ ಅಲೆಮಾರಿ ಜೀವನ, ಅವರ ಪ್ರಣಯ ಪ್ರಸಂಗಗಳು ಎಲ್ಲವನ್ನೂ ಓದುತ್ತಾ ಹೋದ ಹಾಗೆ ಕುಂವೀ ಬಗ್ಗೆ ಗೌರವ ಮೂಡುತ್ತದೆ. ತನಗೆ ಇಂಗ್ಲಿಷ್ ಗೊತ್ತಿಲ್ಲ ಎನ್ನುವುದನ್ನೂ ಅವರು ಸರಳವಾಗಿ ಹೇಳುತ್ತಾರೆ. ಅಮೆರಿಕಾದ ಅಕ್ಕ ಸಮ್ಮೇಳನಕ್ಕೆ ಹೋದದ್ದು ಅಲ್ಲಿ ಅನುಭವಿಸಿದ ಪಡಿಪಾಟಲು, ಕತೆ ಬರದೇ ಹೆಸರು ಮಾಡಿದ್ದು, ಸಿನಿಮಾಗಳಿಗೆ ಕತೆ ಸಂಭಾಷಣೆ ಬರೆದದ್ದು ಮುಂತಾದ ಘಟನೆಗಳು ಚೆನ್ನಾಗಿವೆ. ಇಂಥ ಘಟನೆಗಳನ್ನು ಓದುತ್ತಾ ಓದುತ್ತಾ ಅವರನ್ನು ಮತ್ತಷ್ಟು ಪ್ರೀತಿಸುವ ಹೊತ್ತಿಗೇ, ಅವರು ಬೇಸರ ಮೂಡಿಸುವಂಥ ಒಂದು ಘಟನೆಯನ್ನೂ ದಾಖಲಿಸುತ್ತಾರೆ. ಅದು ವೈಎನ್‌ಕೆಯವರಿಗೆ ಸಂಬಂಧಿಸಿದ್ದು. ವೈಎನ್‌ಕೆ ಬಳ್ಳಾರಿಗೆ ಬಂದಾಗ ನಡೆದ ಒಂದು ಘಟನೆಯನ್ನು ಅವರು ಹೇಳುವ ಅಗತ್ಯವೇ ಇರಲಿಲ್ಲ. ಅದಕ್ಕೂ ಅವರಿಗೂ ಅಂಥ ಸಂಬಂಧವೂ ಇಲ್ಲ. ಅದು ಸತ್ಯವೋ ಸುಳ್ಳೋ ಎಂದು ಹೇಳುವುದಕ್ಕೂ ವೈಎನ್‌ಕೆ ಈಗಿಲ್ಲ. ಹಾಗಿದ್ದರೂ ವೈಎನ್‌ಕೆ ಅವರ ಖಾಸಗಿ ಬದುಕಿನ ಘಟನೆಯೊಂದನ್ನು ಹೇಳುವ ಮೂಲಕ ಕುಂವೀ ಗೌರವ ಕಳೆದುಕೊಳ್ಳುತ್ತಾರೆ. ಆತ್ಮಚರಿತ್ರೆ ಬರೆಯುವ ಹೊತ್ತಿಗೆ ಅದನ್ನು ಆಕರ್ಷಕವೂ ರೋಚಕವೂ ಆಗಿಸುವ ತೆವಲು ಹುಟ್ಟಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಆ ಘಟನೆಯನ್ನು ಕುಂವೀ ದಾಖಲಿಸಿದ್ದೇ ಸಾಕ್ಷಿ. ಈ ಮಧ್ಯೆ ಪ್ರೇಮಾ ಕಾರಂತರ ಜೀವನಕತೆ ಹೊರಬಂದಿದೆ. ಅದರಲ್ಲಿ ಹೊಸತೇನೂ ಇದ್ದಂತಿಲ್ಲ. ವಿಭಾ ಪ್ರಕರಣವನ್ನೂ ಅವರು ತುಂಬ ನಾಜೂಕಾಗಿ ನಿರ್ವಹಿಸಿದ್ದಾರೆ. ಕಾರಂತರ ವಿಕ್ಷಿಪ್ತತೆ ಮತ್ತು ಪ್ರತಿಭೆಯ ಪ್ರಖರ ಪ್ರಸಂಗಗಳನ್ನು ಈಗಾಗಲೇ ವೈದೇಹಿ ಬರೆದಿದ್ದಾರೆ. ಹೀಗಾಗಿ ಪ್ರೇಮಾ ಕಾರಂತರ ಬದುಕಿನ ಪುಟಗಳು ಅಷ್ಟಾಗಿ ಆಸಕ್ತಿ ಮೂಡಿಸುವುದಿಲ್ಲ. ನಾಗತಿಹಳ್ಳಿ ಚಂದ್ರಶೇಖರ್ ಅವರ ನಲವತ್ತೊಂದು ಕತೆಗಳ ಸಂಕಲನ ಕಥಾಯಾತ್ರೆ’ ಹೊರಬಂದಿದೆ. ತಮ್ಮ ನೂರಕ್ಕೂ ಹೆಚ್ಚು ಕತೆಗಳನ್ನು ಅವರೇ ಆಯ್ದು ನಲವತ್ತೊಂದಕ್ಕೆ ಇಳಿಸಿದ್ದಾರೆ. ಇವತ್ತು ಮಧ್ಯವಯಸ್ಸು ತಲುಪಿರುವ ಅನೇಕರನ್ನು ಯೌವನದ ದಿನಗಳಲ್ಲಿ ಬೆಚ್ಚಗಿರಿಸಿದ ಖ್ಯಾತಿ ನಾಗತಿಹಳ್ಳಿ ಕತೆಗಳಿವೆ. ಕೊಂಚ ನಾಟಕೀಯ ಶೈಲಿ ಮತ್ತು ತೀವ್ರ ಪ್ರೇಮವನ್ನು ಆವಾಹಿಸಿಕೊಂಡು ನಾಗತಿಹಳ್ಳಿ ಕತೆ ಬರೆಯುತ್ತಾರೆ. ಅವರ ಕತೆಗಳ ನಿಜವಾದ ಶತ್ರು ಮತ್ತು ಮಿತ್ರ ಅವರಿಗೆ ಸಿದ್ಧಿಸಿರುವ ವ್ಯಂಗ್ಯ. ಅದು ಒಮ್ಮೊಮ್ಮೆ ಕತೆಯೊಳಗೆ ಇಳಿಯುವ ಹೊತ್ತಿಗೆ ನಮ್ಮನ್ನು ಆಚೆಗೆಳೆಯುತ್ತದೆ. ಯಾವುದರಲ್ಲೂ ಓದುಗ ಪೂರ್ತಿಯಾಗಿ ಮುಳುಗಬಾರದು. ವಾಸ್ತವದ ಪ್ರಜ್ಞೆ ಮತ್ತು ಅರಿವು ಇಟ್ಟುಕೊಂಡೇ ಕಲೆಯನ್ನು ಆಸ್ವಾದಿಸಬೇಕು ಎಂಬ ಬ್ರೆಕ್ಟ್ ಸಿದ್ದಾಂತವನ್ನು ಒಪ್ಪುವವರಿಗೆ ನಾಗತಿಹಳ್ಳಿಯ ಈ ತಂತ್ರ ಇಷ್ಟವಾಗಬಹುದು. ಅರುವತ್ತು ಮತ್ತು ಎಪ್ಪತ್ತರ ದಶಕದ ತರುಣ ತರುಣಿಯರ ತಹತಹ ಮತ್ತು ಕಾತರಗಳು ನಾಗತಿಹಳ್ಳಿ ಕತೆಗಳಲ್ಲಿವೆ. ಅವರು ಇವತ್ತಿನ ತರುಣ ತರುಣಿಯರ ಕುರಿತೂ ಅಷ್ಟೇ ತವಕದಿಂದ ಬರೆಯಬಲ್ಲರೇ ಎಂಬ ಕುತೂಹಲವನ್ನು ಕಥಾಯಾತ್ರೆ ಹುಟ್ಟುಹಾಕುತ್ತದೆ. ಕತೆ, ಕಾದಂಬರಿಗಳನ್ನು ಒತ್ತಟ್ಟಿಗಿಟ್ಟು ಕವಿತೆಗಳತ್ತ ಕಣ್ಣು ಹಾಯಿಸಿದರೆ ಅಲ್ಲಿ ನಿರಾಶೆ ಕಾದಿದೆ. ಆ ನಡುವೆಯೇ ಒಂದಷ್ಟು ಹೊಳಪಿನ ಕವಿತೆಗಳನ್ನು ತರುಣ ಕವಿಗಳು ಬರೆಯುತ್ತಿದ್ದಾರೆ.]]>

‍ಲೇಖಕರು avadhi

October 12, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

7 ಪ್ರತಿಕ್ರಿಯೆಗಳು

 1. m subbanna

  sadyada kannada kalaravagala sundara noota. idee prathama barige
  illi oodide. sada hosadanna koduttiri
  dhanyavadagalu

  ಪ್ರತಿಕ್ರಿಯೆ
 2. chandamaamaa

  Jogiyavare…
  Odugarannu mattashtu magadashtu oduva tavaka huttisuva intha lekhanagala agatyate bahala..
  Nimma lekhanagalu hosa hosa aayaamagala kadege saahityaasaktara gamanaseleyuvalli pramukha paatra vahisuttave.
  Pl keep writing sir

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: