ಜೋಗಿ ಬರೆವ ರೂಪ ರೇಖೆ: ವಿಶ್ವಾಮಿತ್ರ ಮೇನಕೆ ಡಾನ್ಸ್ ನೋಡೋದು ಏನಕೆ?

ವಿಶ್ವಾಮಿತ್ರ
ಮೇನಕೆ
ಡಾನ್ಸ್ ನೋಡೋದು
ಏನಕೆ?
ಆಸ್ಕ್ ಮಿಸ್ಟರ್
ವೈಯೆನ್ಕೆ!
ಹೀಗೆ ಪದ್ಯ ಬರೆದು ಅವನ್ನು ‘ಕವಿ-ತೆಗಳು’ ಎಂದು ಕರೆದವರು ವೈಯೆನ್ಕೆ. ಇದನ್ನೋದಿದ ಕುತೂಹಲಿಗಳಿಗೆ ಅಂಥ ಮತ್ತಷ್ಟು ಪದ್ಯಗಳು ಕಾದಿದ್ದವು. ‘ಶಂಕರಲಿಂಗೇಗೌಡರು ಹಚ್ಕೊಂಡಿದ್ರು ಪೌಡರು’, ‘ದೂರವಿರು ದೂರ್ವಾಸನೆ, ಬರುತಲಿದೆ ದುರ್ವಾಸನೆ’, ‘ಕಪಿಲವಸ್ತುವಿನ ರಾಜ ಶುದ್ಧೋದನ, ಅವನ ಮಗ ರಾತ್ರೋರಾತ್ರಿ ಎದ್ದೋದನ’- ಮುಂತಾದ ಎರಡೇ ಸಾಲುಗಳ ಕವಿತೆಗಳು. ಈ ಕವಿತೆಗಳ ಸಂಕಲನಕ್ಕ ಅವರಿಟ್ಟ ಹೆಸರು- ಪದ್ಯ ಇಷ್ಟು ಲೈಟಾದರೆ ಹೇಗೆ ಸ್ವಾಮಿ?. ಅದಾದ ನಂತರ ಬಂತು ‘ತೀರ್ಥ-ರೂಪ’. ಅದಕ್ಕೊಂದು ಉಪಶೀರ್ಷಿಕೆ- ‘ಮದ್ಯ ಇಷ್ಟು ಟೈಟಾದರೆ ಹೇಗೆ ಸ್ವಾಮಿ?’ ಅದರಲ್ಲೂ ಪುಟ್ಟ ಪುಟ್ಟ ಪದ್ಯ- ‘ಬೆಳಗ್ಗೆ ಸಂಜೆ ಮಧ್ಯಾಹ್ನ, ಕುಡೀತೀನ್ ನಾನು ಮದ್ಯಾನ, ಪೆಗ್ಗಲ್ ಅಳೀತೀನಿ ಜೀವ್ನಾನ.’

ಚಿತ್ರ: ನಗೆನಗಾರಿ ಡಾಟ್ ಕಾಂ

ವೈಯೆನ್ಕೆ ಇದ್ದಿದ್ದೂ ಹಾಗೆಯೇ. ಒಮ್ಮೆ ನಮ್ಮ ಒತ್ತಾಯದ ಮೇರೆಗೆ ಪುತ್ತೂರಿಗೆ ಬಂದಿದ್ದರು ಅವರು. ಎಲ್ಲೇ ಇರಲಿ, ಹೇಗೆ ಇರಲಿ ಏಳು ಗಂಟೆಗೆಲ್ಲ ಅವರು ಹೊರಟುಬಿಡಬೇಕು- ಪಿಎಚ್ಡಿ ಮಾಡುವುದಕ್ಕೆ. ಪಿಎಚ್ಡಿ ಅಂದರೆ Precious hour of drinking. ಅವರು ತಮ್ಮನ್ನು ‘ಸನ್ ಡೌನರ್’ ಎಂದು ಕರೆದುಕೊಳ್ಳುತ್ತಿದ್ದರು. ಅಂದರೆ ಸನ್ ಡೌನ್ ಆಗುತ್ತಿದ್ದಂತೆ ಶುರುವಾಗಬೇಕು ಪಿಎಚ್ಡಿ. ಪುತ್ತೂರಲ್ಲಿ ಯಾರೋ ಕೊಂಚ ಹೊತ್ತು ಜಾಸ್ತಿ ಮಾತಾಡಿದ್ದರು. ಆಗಲೇ ಏಳು ಗಂಟೆಯಾಗಿತ್ತು. ವೈಯೆನ್ಕೆ ಮಾತಾಡುತ್ತಾರೆ ಎಂದು ಘೋಷಿಸಿದ್ದೇ ತಡ, ಎರಡೇ ಎರಡು ಮಾತಾಡಿ ‘ಎಲ್ಲಿ ಕುಂಟಿನಿ?’ ಎಂದು ಕರೆದು ಹೊರಟೇ ಬಿಟ್ಟಿದ್ದರು. ಭಾಷಣದ ಮುಂದಿನ ಭಾಗ ‘ಹೊಟೆಲ್ ರಾಮ’ದಲ್ಲಿ. ವೈಯೆನ್ಕೆಗೆ ಇಷ್ಟವಾಗುವ ಆರಾಮದಲ್ಲಿ. ಜೊತೆಗೆ ದ.ಕ.ದವರಿಗೆ ಟೈಮ್ ಸೆನ್ಸ್ ಇಲ್ಲ ಎಂಬ ಕಂಪ್ಲೇಂಟು.
ಅವರ ಸಮಯಪ್ರಜ್ಞೆಗೆ ನಾನು ಸಂಪೂರ್ಣ ವಿರೋಧಿ. ಏಳು ಗಂಟೆಗೆ ಎಂದರೆ ನಾನು ಎಂಟೂವರೆಗೆ ಹೋಗುತ್ತಿದ್ದೆ. ಆಗೆಲ್ಲ ವೈಯೆನ್ಕೆ ಬೈಯುತ್ತಿದ್ದರು; ನೀವು ಎಲ್ಲಾದರಲ್ಲೂ ಲೇಟು, ಸಾಯೋದೂ ಲೇಟು. ಅದು ಬೈಗಳೋ ಆಶೀರ್ವಾದವೋ ಇವತ್ತಿಗೂ ಅರ್ಥವಾಗಿಲ್ಲ.
ಅವರನ್ನು ಅರ್ಥ ಮಾಡಿಕೊಳ್ಳುವುದು ಸುಲಭದ ಸಂಗತಿಯಾಗಿರಲಿಲ್ಲ. ಅವರು ಯಾವ ಮಾತನ್ನೂ ಪೂರ್ತಿಯಾಗಿ ಆಡಿದ್ದಿಲ್ಲ. ಮೊದಲ ಸಲ ಭೇಟಿಯಾದಾಗ ಅದನ್ನು ಅರ್ಥಮಾಡಿಕೊಳ್ಳುವುದಕ್ಕೆ ನನಗೆ ದುಭಾಷಿ ಬೇಕಾಯಿತು. ಅವರ ಮನೆಗೆ ನನ್ನನ್ನು ಕರೆದುಕೊಂಡು ಕೊಂಡ ಕೆ. ಸತ್ಯನಾರಾಯಣ ಅವರೇನು ಹೇಳಿದರು ಅನ್ನುವುದನ್ನು ಆಮೇಲೆ ಹೇಳಿದರು. ಆರೆಂಟು ಬಾರಿ ಅವರ ಮಾತು ಕೇಳಿದ ನಂತರ ನನ್ನ ಕಿವಿ ಒಂದು ಹದಕ್ಕೆ ಬಂತು. ಹಾಗಂತ ಅರ್ಥವಾಗಲಿಲ್ಲ ಎಂದು ಮತ್ತೊಮ್ಮೆ ಕೇಳಿದಿರೋ ಬೈಗಳು ಖಾತ್ರಿ. ಒಂದು ಸಲ ಹೇಳೋದಕ್ಕೆ ಅವರಿಗೇ ರೇಜಿಗೆ. ಅದನ್ನೇ ಮತ್ತೆ ಹೇಳಬೇಕು ಅಂದರೆ ಊಹಿಸಿ.
********
‘ಸಂಸ್ಕಾರ’ ಚಿತ್ರಕ್ಕೆ ಪೂರ್ವಸಂಸ್ಕಾರ ಆದದ್ದು ವೈಯೆನ್ಕೆ ಮನೆಯಲ್ಲಿ. ವಿಷ್ಣುವರ್ಧನ್ ‘ವಂಶವೃಕ್ಷ’ದಲ್ಲಿ ನಟಿಸುವುದಕ್ಕೆ ವೈಯೆನ್ಕೆ ಕಾರಣ. ಲಂಕೇಶ್ ಒಂದು ಕವನಕ್ಕೆ ಧೈರ್ಯವಾಗಿ ‘ದೇಶಭಕ್ತ ಸೂಳೇಮಗನ ಗದ್ಯಗೀತೆ’ ಎಂದು ಹೆಸರಿಟ್ಟದ್ದಕ್ಕೆ ವೈಯೆನ್ಕೆ ಬೆಂಬಲ ಕಾರಣ. ನಿಸಾರರ ಸಂಕಲನಕ್ಕೆ ‘ಮನಸು ಗಾಂಧೀಬಜಾರು’ ಎಂದು ಶೀರ್ಷಿಕೆ ಕೊಟ್ಟದ್ದು ವೈಯೆನ್ಕೆ, ಶರ್ಮರ ಪದ್ಯವನ್ನು ಪ್ರೋತ್ಸಾಹಿಸಿದ್ದೂ ಅವರೇ. ಬಿವಿ ಕಾರಂತರ ರಂಗವಿಹಾರ ಆರಂಭವಾಗಿದ್ದು ವೈಯೆನ್ಕೆ ಮನೆಯಲ್ಲಿ…
ಹೀಗೆ ಗಿರೀಶ್ ಕಾರ್ನಾಡ್, ಸಿಆರ್ ಸಿಂಹ, ಅನಂತಮೂರ್ತಿ, ಲಂಕೇಶ್, ರಾಘವ, ರಾಮಾನುಜನ್, ಶರ್ಮ, ಅಯ್ಯರ್, ನಾಡಿಗ- ಹೀಗೆ ಎಲ್ಲರೂ ವೈಯೆನ್ಕೆ ಪ್ರೀತಿಗೆ ಮತ್ತು ತುಂಟಾಟಕ್ಕೆ ತುತ್ತಾದವರೇ. ಒಮ್ಮೊಮ್ಮೆ ಇದ್ದಕ್ಕಿದ್ದ ಹಾಗೆ ‘ನಡೀರಿ, ನಾಡಿಗರ ಮನೆಗೆ ಹೋಗೋಣ’ ಅಂತ ಬೈಕು ಹತ್ತುತ್ತಿದ್ದರು. ಹೋಗುವಾಗ ನಾಡಿಗರ ಮೇಲೊಂದು ಹಾಡು ಬೇರೆ: ‘ನಾಡಿಗಾ.. ನೀನು ಹೋಗುವುದು ಕಾಡಿಗಾ.. ಸುಡುಗಾಡಿಗಾ..’  ಕಾರಂತರ ‘ಸತ್ತವರ ನೆರಳು’ ನೋಡಿದ ನಂತರದ ಕೆಲವು ದಿನ ಯಾರೇ ಫೋನ್ ಮಾಡಿದರೂ ವೈಯೆನ್ಕೆ ‘ಹಲೋ’ ಅನ್ನುತ್ತಿರಲಿಲ್ಲ. ‘ಗೋವಿಂದ ವಿಠ್ಠಲಾ, ಹರಿಹರಿ ವಿಠ್ಠಾಲ’ ಅನ್ನುತ್ತಿದ್ದರು.
ವೈಯೆನ್ಕೆಗೆ ಅವರದೇ ಆದ ಗೆಳೆಯರ ಬಳಗ ಅನ್ನೋದಿರಲಿಲ್ಲ. ಆ ರಾತ್ರಿಗೆ ಪಿಎಚ್ಡಿಗೆ ಯಾರು ಜೊತೆಯಾಗುತ್ತಿದ್ದರೋ ಅವರು ಅಂದಿನ ಗೆಳೆಯರು. ಗೆಳೆತನ ಎನ್ನುವುದು ಅವರಿಗೆ ಆ ಕ್ಷಣದ ಸತ್ಯ. ದ್ವೇಷ ಮಾತ್ರ ನಿತ್ಯಸತ್ಯ. ಕೆಲವೊಬ್ಬರನ್ನು ಅವರು ಯಾವತ್ತೂ ಹತ್ತಿರ ಬಿಟ್ಟುಕೊಂಡವರೇ ಅಲ್ಲ. ಅವರು ಸಹಿಸಿದ ಎರಡು ಸಂಗತಿಗಳೆಂದೆರೆ; ನೀಚತನ ಮತ್ತು ವಂಚನೆ. ಅವರನ್ನು ಕಂಡರೆ ಆಗದಿದ್ದವರು- ಗುಂಡು ಹಾಕೇ ಇದ್ದರೆ ಅದು ‘ನೀಚತನ’, ಅವರಿಗೆ ಗುಂಡು ಕೊಡಿಸದೇ ಹೋದರೆ ಅದು ‘ವಂಚನೆ’ ಎಂದು ತಮಾಷೆಯಾಗಿ ಮಾತಾಡಿಕೊಳ್ಳುತ್ತಿದ್ದರು. ಅದು ವೈಯೆನ್ಕೆಗೆ ಗೊತ್ತಾದಾಗ ಅವರು ‘ಹೇಳೋರ್ ಹೇಳ್ಕೊಳ್ಳಲಿ. ಡಿ ಕೆ ಬೋಸ್’ ಅಂದಿದ್ದರು. ವೈಯೆನ್ಕೆಗೆ ಇಷ್ಟವಾದ ಬೈಗಳು ಅದು. ಡಿಕೆ ಬೋಸ್ ಅಂದರೆ ಬೋಸುಡೀಕೆ ಅಂತ ಕೆಲವರಿಗಷ್ಟೇ ಗೊತ್ತಿತ್ತು.
ಅವರ ಜೊತೆ ಅರ್ಧ ಗಂಟೆ ಕಳೆದರೆ ವಿಶ್ವ ಸುತ್ತಿ ಬಂದ ಅನುಭವವಾಗುತ್ತಿತ್ತು. ನಾವೊಂದು ಹೇಳಿದರೆ, ಅವರು ಹತ್ತು ಹೇಳುತ್ತಿದ್ದರು. ಹೀಗೊಂದು ಕತೆ ಬರೆದಿದ್ದೇನೆ ಎಂದು ಶುರುಮಾಡುವ ಹೊತ್ತಿಗೆ ‘ಹೆನ್ರಿ ಜೇಮ್ಸ್ ಓದಿದ್ದೀಯಾ, ನೈಪಾಲ್ ಕೆಟ್ಟ ರೈಟರ್, ಐರಿಶ್ ಬರ್ನಾಡ್ ಷಾ ಬೆಸ್ಟು, ಐಯ್ಯರಿಶ್ ಕೈಲಾಸಂ ಕೂಡ ಬೆಸ್ಟು, ಸಂಸ್ಕಾರ ಕಾದಂಬರಿ ಚೆನ್ನಾಗಿದೆ, ಕಮೂನ ಪ್ಲೇಗ್ಗಿಂತಲೂ ಚೆನ್ನಾಗಿದೆ’ ಎಂದು ಹಲವರ ಬಗ್ಗೆ ತಿಳಿಸಿಕೊಡುತ್ತಿದ್ದರು. ಕವಿತೆಗಳೂ ನಾಟಕಗಳ ಸಾಲುಗಳೂ ಅವರಿಗೆ ಕಂಠಪಾಠ. ಪ್ರೆಂಚ್ ಪದ್ಯವೊಂದನ್ನು ಅವರು ಕಲಿತು ಹಾಡುತ್ತಿದ್ದರು.
ಜೇಮ್ಸ್ ಬಾಂಡ್  ಸಿನಿಮಾ, ಕಳ್ಳರ ಸಂತೆ, ಠಕ್ಕರ ತರಲೆ, ವಿಚಿತ್ರ ತಿರುವುಗಳಿರುವ ಕಾದಂಬರಿ, ಚಂದದ ದುಬಾರಿ ಕಾರು, ಇಂಗ್ಲಿಷ್ ಸುಂದರಿಯರು, ಪಾಪ್ ಸಂಗೀತ ಎಲ್ಲವನ್ನೂ ಮೆಚ್ಚುತ್ತಿದ್ದರು ವೈಯೆನ್ಕೆ. ಗಂಭೀರ ವಿಮರ್ಷೆಯ ವಿರೋಧಿ ಅವರು. ಗಂಭೀರ ಕಾವ್ಯವೆಂದರೂ ಅವರಿಗೆ ವೈಯಕ್ತಿಕವಾಗಿ ಅಷ್ಟಕ್ಕಷ್ಟೇ. ಆದರೆ ನವ್ಯಕಾವ್ಯ ಬಂದಾಗ ಅದನ್ನು ತೋರಣ ಕಟ್ಟಿ ಕೊಂಬು ಕಹಳೆಗಳೊಂದಿಗೆ ಸ್ವಾಗತಿಸಿದವರು ವೈಯೆನ್ಕೆ. ಅವರಿಗೆ ತುಂಬ ಮೆಚ್ಚುಗೆಯಾದವರು ಸುಬ್ಬಣ್ಣ ರಂಗನಾಥ ಎಕ್ಕುಂಡಿ. ‘ಕುಳಿತರಿಲ್ಲಿ ಮತ್ಯ್ಸಗಂಧಿ, ಉಟ್ಟುಕೊಂಡು ಹರಕುಚಿಂದಿ’ ಎಂಬ ಸಾಲನ್ನಂತೂ ಮತ್ತೆ ಮತ್ತೆ ಹೇಳುತ್ತಿದ್ದರು. ಹಡಗುಗಳ್ಳರ ಕತೆಗಳೆಂದೆರೆ ಅವರಿಗೆ ಪಂಚಪ್ರಾಣ. ಅಂಥ ಸಿನಿಮಾಗಳನ್ನು ನೋಡುತ್ತಿದ್ದರು. ಜ್ಯಾಕ್ ಲಂಡನ್ ಅವರ ಆದರ್ಶನಾಯಕ. ಖುಷಿಯಾದಾಗ ಗುನುಗುತ್ತಿದ್ದದ್ದು:
Oh my darling, Oh my darling, Oh my darling Valentine.
Met a miner, Fortyniner, And his daughter Valentine
ಎಂಬ ಹಾಡನ್ನು.
**********
ವೈಯೆನ್ಕೆ ನವ್ಯಕಾವ್ಯಕ್ಕೇನು ಮಾಡಿದರು, ತಾನಿದ್ದ ಪತ್ರಿಕೆಯ ಜೊತೆ ಸೇರಿ ಹೇಗೆ ಹೊಸ ಕವಿಗಳಿಗೊಂದು ವೇದಿಕೆ ಕಲ್ಪಿಸಿಕೊಟ್ಟರು, ಲಂಕೇಶರ ಅಂಕಣ ಪ್ರಕಟಿಸಿದರು, ಸಿನಿಮಾ ವಿಮರ್ಷೆ  ಬರೆಸಿದರು, ಸಿನಿಮಾ ಮಾಡಿಸಿದರು ಎಂಬುದೆಲ್ಲ ಬಹುತೇಕರಿಗೆ ಗೊತ್ತಿರುವ ಸಂಗತಿಗಳೇ. ಅವರ ಕುರಿತು ಬರೆದದ್ದನ್ನು ಓದುತ್ತಿದ್ದರೆ ಅವರೊಬ್ಬ ಹಾಸ್ಯಲೇಖನ, ಹನಿಗವಿ ಎಂಬ ಭಾವನೆ ಉಕ್ಕುವಂಥ ಅನೇಕ ಲೇಖನಗಳು ಬಂದಿವೆ. ಅವರ ಪನ್-ಪಾಂಡಿತ್ಯವನ್ನೇ ಎಲ್ಲರೂ ಪ್ರಧಾನವಾಗಿಟ್ಟುಕೊಂಡು ಮಾತಾಡುತ್ತಾರೆ.
ಅವರ ವೈಯಕ್ತಿಕ ಜೀವನದ ಕುರಿತು ಅವರ ಆತ್ಮೀಯರಿಗೂ ಗೊತ್ತಿದ್ದಂತಿಲ್ಲ. ಯಳಂದೂರಿನಲ್ಲಿ ಹುಟ್ಟಿದ ವೈಯೆನ್ಕೆ ಅವರನ್ನು ಪುಟ್ಟು ಅಂತ ಕರೆಯುತ್ತಿದ್ದರು. ಅವರ ಜೊತೆಗಿದ್ದವರು ಕಿಟ್ಟು. ಈ ಕಿಟ್ಟುಪುಟ್ಟು ಹೇಗೆ ಬೇರೆಯಾದರು? ವೈಯೆನ್ಕೆ ಯೌವನದ ದಿನಗಳಲ್ಲಿ ಯಾರನ್ನೋ ಪ್ರೀತಿಸಿದ್ದು ನಿಜವಾ? ಭಗ್ನಪ್ರೇಮ ಅವರ ಬ್ರಹ್ಮಚರ್ಯಕ್ಕೆ ಕಾರಣವಾ? ಇವನ್ನೆಲ್ಲ ಅವರ ಹತ್ತಿರ ಕೇಳುವ ಹಾಗೆಯೇ ಇರಲಿಲ್ಲ. ಹಾಗಂತ ಇಡೀ ದಿನ ಸಾಹಿತ್ಯದ ಕುರಿತು ಮಾತಾಡುತ್ತಾ ಕೂತರೂ ಅವರಿಗೆ ಸಿಟ್ಟು ಬರುತ್ತಿತ್ತು. ‘ಸಾಹಿತ್ಯದ ಜೀವನದ ಐದು ಪರ್ಸೆಂಟ್  ಇರಬೇಕು ಅಷ್ಟೇ. ಅದನ್ನೇ ಇಡೀ ದಿನ ಹೇಳಿಕೊಂಡು ಓಡಾಡಬಾರದು’ ಅನ್ನುತ್ತಿದ್ದರು. ಗಾಂಧೀಬಜಾರಿನಲ್ಲಿ ಸುಬ್ಬಮ್ಮನ ಅಂಗಡಿಯಲ್ಲಿ ಚಟ್ನಿಪುಡಿ ಚೆನ್ನಾಗಿ ಸಿಗುತ್ತೆ. ಕೋರಮಂಗಲದಲ್ಲಿ ಹತ್ತಿರ ಶರ್ಲಾಕ್ ಹೋಮ್ಸ್ ಅಂತ ಒಂದು ಬಾರಿದೆಯಂತೆ, ನಡೀರಿ ನೋಡ್ಕೊಂಡು ಬರೋಣ. ಯೂಜಿ ಕೃಷ್ಣಮೂರ್ತಿ ಬಂದಿದ್ದಾರೆ ಹೋಗೋಣ. ಅಂಬರೀಷ ವರ್ಮ ಅಂತ ಗುರು ಒಬ್ಬರಿದ್ದಾರೆ. ಅವರಿಗೆ ಮನೆಯ ಅವಶೇಷಗಳ ಅಡಿಯಲ್ಲಿ ಚಕ್ರ ಸಿಕ್ಕಿದೆಯಂತೆ. ಹೀಗೆ ಏನೇನೇನೋ ಆಸಕ್ತಿಗಳು. ಅವನ್ನೆಲ್ಲ ಎಲ್ಲರಿಗೂ ಹಂಚುವ ತವಕ.
ನಮ್ಮ ಗೆಳೆಯನೊಬ್ಬ ಆಗಷ್ಟೇ ಮದುವೆಯಾಗಿದ್ದ. ಒಂದು ರಾತ್ರಿ ಅವರ ಮನೆಯಲ್ಲಿ  ಊಟ ಎಂದು ಗೊತ್ತಾಗಿತ್ತು. ಒಂದಷ್ಟು ಗೆಳೆಯರು, ವೈಯೆನ್ಕೆ; ಜೊತೆಗೆ ಬ್ಲೆನ್ಡರ್ಸ್ ಪ್ರೈಡ್’. ಪಿಎಚ್ಡಿ ಮುಗಿದ ನಂತರ ಊಟ. ದಕ್ಷಿಣ ಕನ್ನಡದ ಅಡುಗೆ ಮಾತ್ರ ಗೊತ್ತಿದ್ದ ಅವನ ಮನೆಯಾಕೆ, ಸಾರು, ಪಲ್ಯ, ಹುಳಿ, ಮೊಸರು ಮಾಡಿಟ್ಟಿದ್ದಳು. ಊಟ ಮಾಡುತ್ತಾ ವೈಯೆನ್ಕೆ ‘ನೋ.. ನೋ… ದ.ಕ.ದವರಿಗೆ ಸಾರು ಮಾಡೋಕೆ ಬರೋಲ್ಲ ಅಂದು ಹೇಗೆ ಸಾರು ಮಾಡಬೇಕು ಅಂತ ಪುಟ್ಟ ಭಾಷಣ ಕೊಟ್ಟರು. ಹುಳಿ ಮಾಡೋದು ಹೀಗಲ್ಲ, ನಾಳೆ ಮನೆಗೆ ಬನ್ನಿ ಶ್ರೀಪತಿ ಹೇಳಿಕೊಡ್ತಾನೆ ಅಂದರು. ಮೊಸರು ಮಾಡೋದು ಹೀಗಲ್ಲ. ಹಾಲು ತಂದು ಕೆನೆಗಟ್ಟುವಂತೆ ಕಾಯಿಸಬೇಕು. ನಂತರ ಅದನ್ನು ಮುಚ್ಚಳ ತೆಗೆದಿಟ್ಟು ಆರಲು ಬಿಡಬೇಕು. ಬಿಸಿಯಾರಿದ ನಂತರ ಎರಡು ಚಮಚ ಮಜ್ಜಿಗೆ ಹಾಕಿ ಒಂದು ಮಣೆಯ ಮೇಲಿಡಬೇಕು. ಅದಕ್ಕೊಂದು ಬಟ್ಟೆ ಸುತ್ತಬೇಕು. ಅದಾಗಿ ಏಳು ಗಂಟೆ ನಂತರ ಎತ್ತಿಕೊಂಡು ಹೋಗಿ ಫ್ರಿಜ್ನಲ್ಲಿಡಬೇಕು. ದಕದವರಿಗೆ ಗೊತ್ತಾಗಲ್ಲ’ ಅಂದಿದ್ದರು. ನಾನು ನೀವೇ ಎಲ್ಲರಿಗಿಂತ ದೊಡ್ಡ ದ.ಕ.; ಸಂಪಾ-ದ.ಕ. ಅಂದಿದ್ದೆ.
ವೈಯೆನ್ಕೆಗೆ ಎಲ್ಲೆಲ್ಲೂ. ಎಲ್ಲೆಲ್ಲೋ ಗೆಳೆಯರಿದ್ದರು. ಗೆಳೆಯರು ಕಾರು ಕೊಂಡಾಗ, ಮನೆ ಕಟ್ಟಿದಾಗ ಅವರಿಗೆ ಖುಷಿ. ಎಲ್ಲ ಸಂಭ್ರಮಕ್ಕೂ ಒಂದು ಪಾರ್ಟಿ ಆಗಲೇಬೇಕು. ಚೌಕ ರೂಮು ‘ಗುಂಡು’ ರೂಮು ಆದಾಗಲೇ ಅವರಿಗೆ ತೃಪ್ತಿ. ಕುಡಿಯದೇ ಇದ್ದವರ ಬಗ್ಗೆ ಅವರಿಗೆ ಅಲರ್ಜಿಯೇನೂ ಇರಲಿಲ್ಲ. ಆದರೆ ಅಂಥವರ ಸಂಗ ಅವರಿಗೆ ಇಷ್ಟವಾಗುತ್ತಿರಲಿಲ್ಲ.
ನನ್ನನ್ನು ಕತೆ ಬರೆಯುವಂತೆ, ಅಂಕಣ ಬರೆಯುವಂತೆ ಪ್ರೇರೇಪಿಸಿದ್ದೇ ಅವರು. ನಾನು ಬೆಂಗಳೂರಿಗೆ ಕಾಲಿಟ್ಟ ದಿನಗಳಲ್ಲಿ ವೈಯೆನ್ಕೆ ಹೆಸರು ಸಾಹಿತ್ಯಜಗತ್ತಿಗೆ ಪಾಸ್ಪರ್ಟ್  ಮತ್ತು ಪರ್ಮನೆಂಟ್ ವೀಸಾ. ಇಡೀ ದಿನವನ್ನು ಪುಸ್ತಕ, ಸಿನಿಮಾ, ನಾಟಕ, ಗೆಳೆಯರು, ರೇಸು, ಮದ್ಯ ಮತ್ತು ನಿಗೂಢ ಸಂಗತಿಗಳ ಕುರಿತ ವಂಡರ್ನೊಂದಿಗೆ ಕಳೆಯುತ್ತಿದ್ದವರು
ಅವರು. ಬೆಳಗ್ಗೆ ಹೋದರೆ ಶೇವ್ ಮಾಡಿಕೊಳ್ಳುತ್ತಲೇ ಇಂಗ್ಲಿಷ್ ಪತ್ರಿಕೆಯ ಕ್ರಾಸ್ವರ್ಡ್ ತುಂಬುತ್ತಾ, ಮಧ್ಯಾಹ್ನ ಹೋದರೆ ಯಾವುದೋ ಪುಸ್ತಕ ಓದುತ್ತಾ, ರಾತ್ರಿ ಹೋದರೆ ‘ಬ್ರಾಹ್ಮಿನ್ಸ್ ಬೇಕರಿ’ಯ ಕಾಂಗ್ರೆಸ್ ಕಡ್ಲೆಬೀಜ ಮತ್ತು ಚೀಸ್ನೊಂದಿಗೆ ‘ಡಿಂಪಲ್’ ಎಂಬ ಸೊಗಸಾದ ಬಾಟಲಿಯಲ್ಲಿರುವ ವಿಸ್ಕಿ ಹೀರುತ್ತಾ ಕೂತಿರುತ್ತಿದ್ದ ವೈಯೆನ್ಕೆ ಮನೆ ನಮ್ಮ ಅನೇಕರ ಪಾಲಿಗೆ ಜಗತ್ತಿನೊಂದು ಕಿಟಕಿಯಾಗಿತ್ತು.
ವೈಯೆನ್ಕೆ ಹುಟ್ಟಿದ್ದು ಮೇ 16. ಅವರನ್ನು ಕೇಳಿದರೆ May or May not  ಅನ್ನುತ್ತಿದ್ದರು. ಆದರೆ ಮನೆ ಮುಂದೆ ಮೇಫ್ಲವರ್ ಗಿಡ ನೆಟ್ಟಿದ್ದರು. ಅವರ ಮನೆಯ ಹೊರಗಿರುವ ನಾಮಫಲಕದಲ್ಲಿ ವೈ ಎನ್ ಕೃಷ್ಣಮೂರ್ತಿ ಅಂತಿತ್ತು. ಅದರ ಕೆಳಗೆ In ಮತ್ತು outಅಂತಲೂ ಅದನ್ನು ಅತ್ತಿತ್ತ ಸರಿಸುವುದಕ್ಕೊಂದು ಹಲಗೆಯೂ ಇತ್ತು. ವೈಯೆನ್ಕೆ ಸದಾ ಅದನ್ನು ಇನ್ ಮತ್ತು ಔಟ್ ಗಳ ಮಧ್ಯೆ ಇಟ್ಟಿರುತ್ತಿದ್ದರು. ಕೇಳಿದರೆ ‘ಗುಂಡು ಇನ್ ಆಗುತ್ತೆ, ನಾನು ಔಟ್ ಆಗಲ್ಲ’ ಅಂತ ತಮಾಷಿ ಮಾಡುತ್ತಿದ್ದರು.

‍ಲೇಖಕರು avadhi

May 23, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: