ಜೋಗಿ ಮನೆ : ಜೋಗಿಯ ಸೀಕ್ರೆಟ್ ಡೈರಿ!!

ಜಗತ್ತಿನ ಎರಡನೆಯ ಪುರಾತನ ವೃತ್ತಿ ಯಾವುದು?

ಉತ್ತರ ಜೋಗಿ ಹೇಳುತ್ತಾರೆ!

ಇ೦ದಿನಿ೦ದ ಅವಧಿಯಲ್ಲಿ ಪ್ರತಿ ವಾರ ಜೋಗಿಯವರ “ಸೀಕ್ರೆಟ್ ಡೈರೀಸ್”,

ವಾರಕ್ಕೊ೦ದು ಸೀಕ್ರೆಟ್ ಪುಟ, ಅವಧಿ ಓದುಗರಿಗಾಗಿ :

 

ಅದು ಜಗತ್ತಿನ ಎರಡನೆಯ ಅತ್ಯಂತ ಹಳೆಯ ವೃತ್ತಿ

       

– ಜೋಗಿ

ಆಗಂತುಕನೊಬ್ಬ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾನೆ. ಕೃಷ್ಣಶೆಟ್ಟರ ಮನೆಯಲ್ಲಿ ಠಿಕಾಣಿ ಹೂಡಿದ್ದಾನೆ. ಯಾಕೆ ಬಂದೆ ಅಂತ ಕೇಳಿದವರಿಗೆಲ್ಲ ಪಶ್ಚಿಮಘಟ್ಟದ ಬಗ್ಗೆ ಅಧ್ಯಯನ ಮಾಡಲಿಕ್ಕೆ ಬಂದಿದ್ದೇನೆ ಎಂದು ಹೇಳುತ್ತಿದ್ದಾನೆ. ಒಂದು ಕೆಮರಾ ಹೆಗಲಿಗೇರಿಸಿಕೊಂಡು, ಕೈಯಲ್ಲೊಂದು ಪುಸ್ತಕ ಪೆನ್ನು ಹಿಡಕೊಂಡು ನಿಗೂಢವಾಗಿ ಅಲೆದಾಡುತ್ತಿದ್ದಾನೆ. ಕೃಷ್ಣಶೆಟ್ಟಿಗೆ ಬುದ್ಧಿಯಿಲ್ಲ. ಅವನ ಹತ್ತಿರ ದುಡ್ಡು ತಗೊಂಡು ಇರೋದಕ್ಕೆ ಜಾಗ ಕೊಟ್ಟಿದ್ದಾನೆ. ಹಾಗೆಲ್ಲ ಎಲ್ಲಿಂದಲೋ ಬಂದವನಿಗೆ ಜಾಗ ಕೊಡೋದು ತಪ್ಪಲ್ವಾ.. ಹಾಗಂತ ನಮ್ಮೂರಿನ ಮಂದಿ ಗುಂಪು ಸೇರಿಕೊಂಡು ಮಾತಾಡುತ್ತಿದ್ದರು. ಅವನನ್ನು ನಾನು ದೇವಸ್ಥಾನದಲ್ಲಿ ನೋಡಿದೆ, ಕೆರೆಯ ಹತ್ತಿರ ನೋಡಿದೆ, ಬಾಬುವಿನ ಕ್ಷೌರದಂಗಡಿಯಲ್ಲಿ ಕೂತಿದ್ದ, ಲಕ್ಷ್ಮೀನಿವಾಸ ಹೋಟೆಲಿನಲ್ಲಿ ಕೂತು ಸಿಗರೇಟು ಸೇದುತ್ತಿದ್ದ ಅಂತ ಅವರಿವರು ಹೇಳುತ್ತಿದ್ದರು. ಅವನ ಜೊತೆ ಮಾತಾಡುವ ಧೈರ್ಯ ಮಾಡಿದ ಕೆಲವರು ಅವನು ಪರಿಸರ ಪ್ರೇಮಿ ಎಂದೂ ಪಶ್ಚಿಮಘಟ್ಟದಲ್ಲಿ ಅದ್ಯಾವುದೋ ಜಾತಿಗೆ ಸೇರಿದ ಚಿಟ್ಟೆಗಳಿವೆ ಎಂದೂ, ಅವುಗಳ ವಲಸೆ ಕ್ರಮವನ್ನು ಅಧ್ಯಯನ ಮಾಡುವುದಕ್ಕೆ ಬಂದವನೆಂದೂ ತಮಗೆ ಸಿಕ್ಕಿದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಚಿಟ್ಟೆಗಳ ವಲಸೆ ಕ್ರಮವನ್ನು ಅಧ್ಯಯನ ಮಾಡುವುದಕ್ಕೆ ಅವನಿಗೆ ದುಡ್ಡು ಯಾರು ಕೊಡುತ್ತಾರೆ. ಅದಕ್ಕೋಸ್ಕರ ಅವನು ಉಜಿರೆ, ಬೆಳ್ತಂಗಡಿ, ವೇಣೂರು, ಚಿಕ್ಕಮಗಳೂರು, ಕಾರ್ಕಳಕ್ಕೆಲ್ಲ ಯಾಕೆ ಹೋಗಿ ಬರುತ್ತಾನೆ ಎನ್ನುವ ಪ್ರಶ್ನೆಗೆ ಯಾರೂ ಉತ್ತರ ಸಿಕ್ಕಿರಲಿಲ್ಲ. ಅವನು ಯಾರು, ಅವನ ಊರು ಯಾವುದು ಅನ್ನುವುದು ಯಾರಿಗೂ ಗೊತ್ತಿರಲಿಲ್ಲ. ಎಲ್ಲರೂ ಅವನನ್ನು ಅನುಮಾನದಿಂದ ನೋಡುತ್ತಿದ್ದರು. ತುಂಬ ಚೆನ್ನಾಗಿ ಮಾತಾಡುತ್ತಾನೆ. ಸದಾ ನಗುನಗುತ್ತಾ ಇರುತ್ತಾನೆ. ಪ್ರಶ್ನೆ ಕೇಳಿ ಎಲ್ಲವನ್ನೂ ತಿಳಿದುಕೊಳ್ಳುತ್ತಾನೆ.ಅವನು ಯಾವ ಪ್ರಶ್ನೆಗೂ ಉತ್ತರಿಸುವುದಿಲ್ಲ ಎಂದೆಲ್ಲ ಅವನ ಬಗ್ಗೆ ಕತೆಗಳು ಹುಟ್ಟಿದ್ದವು. ಒಮ್ಮೆ ಬಾಬುವಿನ ಸೆಲೂನಿಗೆ ಹೋಗಿದ್ದಾಗ ಅಲ್ಲೊಬ್ಬ ಅಪರಿಚಿತ ಕೂತಿದ್ದ. ಎಲ್ಲರೂ ಮಾತಾಡುತ್ತಿರುವ ಅಪರಿಚಿತ ಅವನೇ ಇರಬೇಕೆಂದು ನನಗೆ ಅನುಮಾನ ಬಂದು ಬಾಬು ಹತ್ತಿರ ಪಿಸುಮಾತಲ್ಲಿ ಕೇಳಿದೆ. ಬಾಬು ಕಣ್ಣಲ್ಲೇ ಮಾತಾಡಬೇಡ ಎಂದು ಸೂಚಿಸಿದ. ಅಲ್ಲದೇ, ಪ್ರತಿಸಲ ಕ್ಷೌರ ಮಾಡುತ್ತಿರುವಷ್ಟು ಹೊತ್ತೂ ಮಾತಾಡುತ್ತಲೇ ಇರುವ ಬಾಬು, ಆವತ್ತು ಒಂದೂ ಮಾತಾಡದೇ ಕ್ಷೌರ ಮಾಡಿ ಮುಗಿಸಿದ್ದ. ಅಷ್ಟು ಹೊತ್ತೂ ಅವನು ಅಲ್ಲಿರುವ ಪೇಪರುಗಳನ್ನು ತಿರುವಿಹಾಕುತ್ತಾ ಸುಮ್ಮನೆ ಕೂತಿದ್ದ. ಅವನು ಯಾರು ಅನ್ನುವುದನ್ನು ಪತ್ತೆ ಮಾಡಿದ್ದು ನಮ್ಮೂರಿನಲ್ಲಿ ಬಸ್ ಏಜಂಟ್ ಆಗಿದ್ದ ನಾಯಕ್. ಅವನು ಅಂತಿಂಥವನಲ್ಲ, ಅವನ ಹತ್ರ ಹುಡುಗಾಟ ಆಡೋಕೆ ಹೋಗಬೇಡಿ. ಜಾಸ್ತಿ ಮಾತಾಡೋದಕ್ಕೂ ಹೋಗಬೇಡಿ. ಅವನು ಡಿಟೆಕ್ಟಿವ್ ಅಂತ ನಾಯಕ್ ನಮ್ಮೂರಿನ ಮಂದಿಗೆ ಹೇಳಿ ಹೆದರಿಸಿಬಿಟ್ಟಿದ್ದರು. ಅದು 1977-78ರ ಅವಧಿ. ಇಂದಿರಾಗಾಂಧಿ ಚಿಕ್ಕಮಗಳೂರು ಉಪಚುನಾವಣೆಗೆ ಸ್ಪರ್ಧಿಸುತ್ತಿದ್ದ ಕಾಲ. ರಾಯ್ ಬರೇಲಿಯಲ್ಲಿ ಸೋತಿದ್ದ ಅವರು ಗೆಲ್ಲಲೇಬೇಕಾಗಿತ್ತು. ಗೆಲ್ಲುವುದಕ್ಕೆ ಚಿಕ್ಕಮಗಳೂರು ಸರಿಯಾದ ಕ್ಷೇತ್ರ ಎಂದು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದರು. ಆ ಪ್ರದೇಶದಲ್ಲಿ ಇಂದಿರಾಗಾಂಧಿಯವರಿಗೆ ಜನಪ್ರಿಯತೆ ಇದೆಯೋ ಇಲ್ಲವೋ, ಅವರ ಬಗ್ಗೆ ಜನ ಏನು ಮಾತಾಡಿಕೊಳ್ಳುತ್ತಾರೆ, ಅವರ ವಿರೋಧಿಗಳು ಎಷ್ಟು ಮಂದಿ ಇದ್ದಾರೆ ಎಂದು ಪತ್ತೆ ಮಾಡುವುದಕ್ಕೆ ಅವನು ಬಂದಿದ್ದಾನೆ. ಸರ್ಕಾರಿ ಪತ್ತೇದಾರ ಅವನು. ಅವನ ಮುಂದೆ ಬಾಯಿಬಿಟ್ಟರೆ ಪೋಲಿಸರು ಸುಮ್ಮನೆ ಕೇಸುಹಾಕಿ ಜೈಲಿಗೆ ತಳ್ಳುತ್ತಾರೆ ಎಂದು ನಾಯಕ್ ತಾವೂ ಒಂದು ಪತ್ತೇದಾರಿ ಮಾಡಿ ಹೇಳಿದ್ದರು. ಅವನು ಎಲ್ಲೆಲ್ಲಿಗೆ ಹೋಗುತ್ತಾನೆ ಅನ್ನುವುದು ಬಸ್ ಏಜೆಂಟ್ ಆಗಿದ್ದ ಅವರಿಗೆ ಗೊತ್ತಾಗುತ್ತಿತ್ತು. ಹಾಗೇ ಅವನಿಗೆ ಬರುವ ಪಾರ್ಸೆಲುಗಳು, ಪುಸ್ತಕಗಳೂ ಅವರ ಮೂಲಕವೇ ಬರುತ್ತಿದ್ದವು. ಒಂದು ದಿನ ರಟ್ಟಿನ ಬಾಕ್ಸು ಪಾರ್ಸೆಲ್ ಬಂದಾಗ ಅದರಲ್ಲಿ ಪಿಸ್ತೂಲು ಇರಬೇಕು ಎಂದು ಸುದ್ದಿ ಮಾಡಿದವರೂ ಅವರೇ. ನಾವೆಲ್ಲ ಅವನನ್ನು ಸರಿಯಾಗಿ ನೋಡಬೇಕು ಅಂತ ನಿರ್ಧಾರ ಮಾಡಿದ್ದೆವು. ಅವನು ಎದುರಾದರೆ ತಲೆತಗ್ಗಿಸಿಕೊಂಡು ಅವನ ದೃಷ್ಟಿಗೆ ಬೀಳದೇ ಪಾರಾಗುತ್ತಿದ್ದೆವು. ಅವನು ತಿರುಗಿ ನೋಡಿದರೆ ನಮಗೆ ಗಾಬರಿ ಆಗುತ್ತಿತ್ತು. ಅವನ ಹತ್ತಿರ ಕಾಂಗ್ರೆಸ್ ಪಕ್ಷದ ವಿರುದ್ಧ ಮಾತಾಡಿದ ನಮ್ಮೂರಿನ ಒಂದಷ್ಟು ಮಂದಿ ತಲೆತಪ್ಪಿಸಿಕೊಂಡು ಓಡಡಲು ಆರಂಭಿಸಿದರು. ಅವನು ಸೊಂಟದಲ್ಲಿ ಪಿಸ್ತೂಲು ಬಚ್ಚಿಟ್ಟುಕೊಂಡಿರುತ್ತಾನೆ. ಕಾಲಿನ ಮಣಿಗಂಟಿನ ಹತ್ತಿರ ಚಾಕು ಇರುತ್ತೆ. ಕತ್ತಲ ರಾತ್ರಿಯಲ್ಲಿ ಯಾರದೋ ಮನೆಯ ಹಿಂದೆ ನಿಂತು ಏನೇನು ಮಾತಾಡುತ್ತಾರೆ ಎಂದು ಕೇಳಿಸಿಕೊಳ್ಳುತ್ತಾನೆ. ಸಿನಿಮಾ ಮಂದಿರದಲ್ಲಿ ತಲೆಗೊಂದು ಟವಲ್ ಕಟ್ಟಿಕೊಂಡು ಕೂತಿರುತ್ತಾನೆ. ಯಾರು ಏನೇನು ಮಾತಾಡುತ್ತಾನೆ ಎಂದು ಕೇಳಿಸಿಕೊಂಡು ಬರೆದಿಟ್ಟುಕೊಳ್ಳುತ್ತಾನೆ ಅಂತೆಲ್ಲ ನಾವು ಲೆಕ್ಕ ಹಾಕಿದ್ದೆವು. ಅಷ್ಟು ಹೊತ್ತಿಗಾಗಲೇ ಎನ್.. ನರಸಿಂಹಯ್ಯ, ಜಿಂದೆ ನಂಜುಂಡಸ್ವಾಮಿ ಮತ್ತು ಟಿಕೆ ರಾಮರಾವ್ ಕಾದಂಬರಿಗಳನ್ನು ಓದಲು ಶುರು ಮಾಡಿದ್ದರಿಂದ ಅವನ ಬಗ್ಗೆ ಭಯ ಗೌರವಗಳು ಹೆಚ್ಚಾಗಿದ್ದವು. ಆಗಷ್ಟೇ ತುರ್ತುಪರಿಸ್ಥಿತಿ ಮುಗಿದಿತ್ತು. ಆ ಅವಧಿಯಲ್ಲಿ ಪೊಲೀಸರು ಸರ್ಕಾರದ ವಿರುದ್ಧ ಮಾತಾಡಿದವರನ್ನೆಲ್ಲ ಎಳಕೊಂಡು ಹೋಗಿ ಅದ್ಯಾವುದೋ ಜೈಲಿಗೆ ತಳ್ಳಿದ್ದರು. ತುರ್ತುಪರಿಸ್ಥಿತಿ ಮುಗಿದ ನಂತರವೂ ನಮ್ಮೂರಿನ ಮಂದಿಗೆ ಪ್ರಜಾಪ್ರಭುತ್ವದಲ್ಲಿ ಹಾಗೆಲ್ಲ ಮಾತಾಡುವುದಕ್ಕೆ ಸಾಧ್ಯವಿಲ್ಲ ಅನ್ನುವುದು ಗೊತ್ತಿರಲಿಲ್ಲ. ಹೀಗಾಗಿ ಊರಿಗೆ ಬಂದ ಆ ಅಪರಿಚಿತನ ಬಗ್ಗೆ ಮತ್ತಷ್ಠು ಭಯಗೊಂಡು ಅನೇಕರು ಮಾತಾಡುವುದನ್ನೆ ನಿಲ್ಲಿಸಿಬಿಟ್ಟಿದ್ದರು. -2- ಈ ಪತ್ತೇದಾರಿ ಜಗತ್ತೇ ವಿಚಿತ್ರವಾದದ್ದು. ಮೊದಲ ಮತ್ತು ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ನಡೆದ ಗೂಢಚಾರಿಕೆಯ ಕತೆ ಓದಿದರೆ ಮೈ ಜುಮ್ಮೆನ್ನುತ್ತದೆ. ನಮ್ಮ ರಾಜಮಹಾರಾಜರೂ ಗೂಢಚಾರರನ್ನು ನೇಮಿಸಿಕೊಂಡು ರಾಜ್ಯದ ಮನಸ್ಥಿತಿಯನ್ನು ತಿಳಿದುಕೊಳ್ಳುತ್ತಿದ್ದರು. ಆ ಗೂಢಚಾರರೋ ವಿವಿಧ ವೇಷಗಳಲ್ಲಿ ರಾಜ್ಯದಲ್ಲಿ ಸುತ್ತುತ್ತಾ ಪ್ರಜೆಗಳ ಬಾಯಿಬಿಡಿಸಲು ಯತ್ನಿಸುತ್ತಿದ್ದರು. ಕೃಷ್ಣದೇವರಾಯನ ಗೆಲುವಿದ್ದದ್ದೇ ಆತನ ಗೂಢಚಾರರ ಜಾಲದಲ್ಲಿ. ನಮ್ಮಲ್ಲಿ ಚಂದ್ರಗುಪ್ತ-ಚಾಣಕ್ಯರ ಕಾಲದಲ್ಲೇ ಗೂಢಚಾರರಿದ್ದರು. ಅವರು ಬೇರೆ ಬೇರೆ ಉದ್ಯೋಗಗಳಲ್ಲಿ ನಿರತರಾಗಿರುತ್ತಿದ್ದರು. ಅವರು ಗೂಢಚಾರರೆಂದು ಅರಿಯುವುದೇ ಸಾಧ್ಯವಾಗುತ್ತಿರಲಿಲ್ಲ. ಆದರೆ ಮಹಾರಾಜರಿಗೋ ಅಮಾತ್ಯರಿಗೆ ತಲುಪಬೇಕಾದ ಸುದ್ದಿ ಮಾತ್ರ ತಲುಪುತ್ತಿತ್ತು. ಬಳೆಗಾರರು, ಕ್ಷೌರಿಕರು, ಪೌರೋಹಿತ್ಯ ಮಾಡುವವರು, ನಾಟಕ ಮಾಡುವವರೆಲ್ಲ ಗೂಢಚಾರಿಕೆ ಕೂಡ ಮಾಡುತ್ತಿದ್ದ ಕಾಲವೊಂದಿತ್ತು. ಗೂಢಚಾರರು ಸರಿಯಾಗಿ ವರದಿ ಮಾಡುತ್ತಾರೋ ಇಲ್ಲವೋ ತಿಳಿದುಕೊಳ್ಳಲು ಅವರ ಮೇಲೆ ಮತ್ತೊಬ್ಬ ಗೂಢಚಾರರನ್ನು ನೇಮಿಸುತ್ತಿದ್ದರು. ಅವರು ದೇಶಾದ್ಯಂತ ತುಂಬಿಕೊಂಡು ಕೆಲವೊಮ್ಮೆ ನಿಯತ್ತಿನಿಂದ ಕೆಲಸ ಮಾಡುತ್ತಾ, ಮತ್ತೆ ಕೆಲವೊಮ್ಮೆ ಜನರನ್ನು ಹೆದರಿಸುತ್ತಾ ರಾಜನಿಗಿಂತ ಶಕ್ತಿಶಾಲಿಗಳಾಗಿದ್ದೂ ಉಂಟು. ತುಂಬ ಮಹತ್ವದ ಸುದ್ದಿ ತಂದ ಗೂಢಚಾರನಿಗೆ ಸಿಗುತ್ತಿದ್ದ ಬಹುಮಾನ ಎಂದರೆ ಸಾವು. ಅವನು ಆ ಮಾಹಿತಿಯನ್ನು ಬೇರೆಯವರಿಗೆ ಹೇಳಿಯಾನು ಎಂದು ಅವನನ್ನು ಕೊಲ್ಲಿಸಲಾಗುತ್ತಿತ್ತು. ಆ ಸಂಗತಿ ಕೂಡ ಗುಟ್ಟಾಗಿಯೇ ಉಳಿಯುತ್ತಿದ್ದುದರಿಂದ ಬೇರೆ ಗೂಢಚಾರರು ಉತ್ಸಾಹದಿಂದ ಕೆಲಸ ಮಾಡುತ್ತಲೇ ಇರುತ್ತಿದ್ದರು. ಗೂಢಚಾರಿಕೆಯ ಆಳಅಗಲಗಳನ್ನು ಬಗೆಯುತ್ತಾ ಹೋದರೆ ಎದೆ ಒಡೆಯುವಂಥ ಸತ್ಯಗಳು ಗೋಚರವಾಗುತ್ತಾ ಹೋಗುತ್ತವೆ. ಅವರ ಯೋಜನೆಗಳು, ಹುನ್ನಾರಗಳು. ಜಗತ್ತಿನ ಚರಿತ್ರೆಯ ಪುಟಗಳನ್ನೇ ಬದಲಿಸಿದ ಪತ್ತೇದಾರಿ ಸತ್ಯಗಳು, ಯುದ್ಧದ ಫಲಿತಾಂಶವನ್ನೇ ತಲೆಕೆಳಗು ಮಾಡಿದ ಮಹೋನ್ನತ ಪತ್ತೇದಾರರು, ಅವರು ಪಟ್ಟ ಶ್ರಮ, ಹಿಂಸೆ, ಅಮಾನುಷ ಯಾತನೆಗಳ ವಿಚಿತ್ರ ಜಗತ್ತು ಹೊರನೋಟಕ್ಕೆ ರೋಚಕ. ಒಳಹೊಕ್ಕರೆ ಭೀಕರ. ಸಂಸ್ಥಾನಗಳು ತಮ್ಮನ್ನು ಉಳಿಸಿಕೊಳ್ಳುವುದಕ್ಕೆ ಅಸಂಖ್ಯಾತ ಪತ್ತೇದಾರರನ್ನು ನೇಮಿಸಿಕೊಳ್ಳುತ್ತಿದ್ದವು. ಒಂದು ಕಾಲಕ್ಕೆ ಜರ್ಮನಿ ಮತ್ತು ಇಂಗ್ಲೆಂಡಿನ ತುಂಬ ಬರೀ ಪತ್ತೇದಾರರೇ ತುಂಬಿದ್ದಾರೋ ಎಂದು ಅನುಮಾನವಾಗುವಷ್ಟು ಮಾಹಿತಿಗಳು ದೇಶದಿಂದ ದೇಶಕ್ಕೆ ರವಾನೆಯಾಗುತ್ತಿದ್ದವು. ಎಷ್ಟೋ ವರ್ಷಗಳಿಂದ ಆಲೂಗಡ್ಡೆ ಬೆಳೆಯುತ್ತಿದ್ದ ರೈತ, ಎಲ್ಲರ ಹಾಗೆ ಚಿಲ್ಲರೆ ವ್ಯಾಪಾರ ಮಾಡಿಕೊಂಡು ಬಡತನದಲ್ಲಿ ಬದುಕುತ್ತಿದ್ದ ವರ್ತಕ, ಪುಟ್ಟ ಪಬ್ ಇಟ್ಟುಕೊಂಡು ಜೀವಿಸುತ್ತಿದ್ದ ಮಾಲಿಕ- ಯಾರೂ ಬೇಕಾದರೂ ಗೂಢಚರ್ಯೆ ಮಾಡುತ್ತಿರಬಹುದಾಗಿತ್ತು. ಅದನ್ನು ಪತ್ತೆ ಹಚ್ಚುವುದು ಸಾಧ್ಯವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಅವರು ನಿಗೂಢವಾಗಿರುತ್ತಿದ್ದರು. ರಿವಾಲ್ವರ್ ಸೊಂಟಕ್ಕಿಟ್ಟುಕೊಂಡು ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಾ, ಸುಂದರಿಯರ ಜೊತೆ ನಲಿದಾಡುತ್ತಾ ಇರುವ ಗೂಢಚಾರರನ್ನು ನಾವು ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ ನಿಜವಾದ ಗೂಢಚಾರರ ಜಗತ್ತೇ ಬೇರೆ. ಅಲ್ಲಿ ನಿರಂತರ ಹುಡುಕಾಟ. ಅವಿರತ ಸಾಧನೆ, ಮುಗಿಯದ ಭಯ, ಸಿಕ್ಕಿಬಿದ್ದರೆ ಇಡೀ ಕುಟುಂಬಕ್ಕೇ ಸಾವು. ಯಶಸ್ವಿಯಾದರೆ ಮತ್ತೊಂದು ಕೆಲಸ ಮಾಡುವಂತೆ ಸೂಚನೆ. ಕೆಲಸ ಬಿಡುತ್ತೇನೆ ಎಂದರೆ ನೇಮಕ ಮಾಡಿಕೊಂಡವರಿಂದಲೇ ಮರಣ. ಅವರ ರಹಸ್ಯ ವರದಿ, ಕೋಡ್ ವರ್ಡ್, ಅದನ್ನು ರವಾನೆ ಮಾಡುತ್ತಿದ್ದ ರೀತಿ ಇವೆಲ್ಲದರ ಕತೆಯೇ ನಿಗೂಢ ಜಗತ್ತು. ಅಂದಹಾಗೆ ಗೂಢಚಾರಿಕೆ ಜಗತ್ತಿನ ಎರಡನೆಯ ಅತ್ಯಂತ ಹಳೆಯ ವೃತ್ತಿ. ಮೊದಲನೆಯದು ಯಾವುದು ಎಂದು ಕೇಳಿದರೆ ಚರಿತ್ರಕಾರರು ವೇಶ್ಯಾವೃತ್ತಿ ಅನ್ನುತ್ತಾರೆ. ಹಾಗೆ ನೋಡಿದರೆ ಎರಡೂ ಒಂದೇ. ಆರಂಭದಲ್ಲಿ ವೇಶ್ಯೆಯರೇ ಗೂಢಚಾರರೂ ಆಗಿದ್ದರು.]]>

‍ಲೇಖಕರು G

April 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

೧ ಪ್ರತಿಕ್ರಿಯೆ

  1. D.RAVI VARMA

    ಸರ್ ನಮಸ್ಕಾರ, ಅದು ಯಾವ ಹೊತ್ತಿನಲ್ಲಿ ನೀವು ಪೆನ್ನು ಅಥವಾ ಗನ್ನು ಹಿಡಿದಿರೋ ನನಗೆ ಗೊತ್ತಿಲ್ಲ, ನೀವು ಹಾಯ್ ಬ್ಯಾಂಗಲೋರ್ ನಲ್ಲಿ ಸುರುವು ಮಡಿದ ದಿನದಿಂದ ಇಲ್ಲಿಗೂ ನಾನು ನಿಮ್ಮ ಅಭಿಮಾನಿ ಓದುಗ ,ನಿಮ್ಮ ಪುಸ್ತಿಕೆ ಇತ್ತೀಚಿನ ಫಾಸೆಬೂಕ್ /ಮಾನಸ ಜೋಷಿ ವರೆಗೂ ಕೆಲವು ಓದಿದ್ದೇನೆ, ಕನ್ನಡ ಬ್ಲಾಗ್ಸ್ ನಲ್ಲಿ ನಿಮ್ಮ ಪುಸ್ತಿಕೆ ಜೋಕೆಸ್ ಹಾಕಿದ್ದೇನೆ, ನೀವು ಕನ್ನದಪ್ರಭಾದಲ್ಲಿದ್ದಾಗ ನೀವು ಬರೆದ ಲೇಖನಗಳು ಓದಿ,ನನ್ನ ಗೆಳೆಯರಿಗೆ ಓದಿಸಿದ್ದೇನೆ ಸುಮ್ಮನೆ ಒಮ್ಮೆ ಹೊಸಪೇಟೆಗೆ ಬನ್ನಿ ಅಲ್ಲಿ ನಿಮ್ಮ ಎಲ್ಲ ಪುಸ್ತ್ಕೆ ಪ್ರದರ್ಶನ ಹಾಗು ಒಂದು ಸಣ್ಣ ಸಂವಾದ, ಒಂದು ರೊಟ್ಟಿ ಊಟ ಮಾಡೋಣ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: