ಜೋಗಿ ಮೆದ್ದ ‘ಜಿಲೇಬಿ’

ಸುಮ್ಮನೆ ಮೆಲ್ಲುತ್ತಾ ಹೋದ ಒಂದು ಜಿಲೇಬಿ

jogi2ಜೋಗಿ

 


ಇತ್ತೀಚೆಗೆ ಕವನ ಸಂಕಲನ ಕೈಗೆ ಬಂದ ತಕ್ಷಣ ಗಾಬರಿ ಶುರುವಾಗುತ್ತದೆ. ಪುಟಗಳನ್ನು ತೆರೆಯುತ್ತಿದ್ದಂತೆ ಆತಂಕವಾಗುತ್ತದೆ. ಒಂದೇ ಒಂದು ಕವಿತೆಯೂ ಅರ್ಥವಾಗದೇ ಹೋದರೆ ಎಂದು ಭಯವಾಗುತ್ತದೆ. ಅರ್ಥದ ಮಾತು ಹಾಗಿರಲಿಕವಿತೆ ನನ್ನ ಮೇಲೆ ಯಾವ ಪ್ರಭಾವವನ್ನೂ ಬೀರುತ್ತಿಲ್ಲವಲ್ಲ ಎಂದು ಸಂಕೋಚವಾಗುತ್ತದೆ. ಓದಿ ಮುಚ್ಚಿಟ್ಟ ನಂತರ ಒಂದೇ ಒಂದು ಸಾಲು ಕೂಡ ನೆನಪಾಗದೇ ಹೋದಾಗ ಡಿಮೆನ್ಷಿಯಾ ಶುರುವಾಗಿರಬಹುದೇ ಎಂದು ಬೆಚ್ಚಿಬಿದ್ದು ಆ ಕಾಯಿಲೆಯ ಲಕ್ಷಣಗಳನ್ನು ಓದಲು ಶುರುಮಾಡುತ್ತೇನೆ. ಇನ್ಯಾರೋ ಅದು ಡಿಮೆನ್ಷಿಯಾ ಅಲ್ಲಆಲ್‌ಜೈಮರ್ ಎಂದು ಹೊಸ ಹೆಸರು ಕೊಟ್ಟರು. ಕವಿತೆ ರುಚಿಸದೇ ಇರುವ ಕಾಯಿಲೆಗೆ ಕಾವ್ಯಜಾಡ್ಯ ಎಂದು ಕರೆಯಬಹುದೇನೋ?

ಇಂಥ ಸಂದಿಗ್ಧ ಮತ್ತು ಸಂಕಟದಲ್ಲಿರುವಾಗಲೇ ಅಂಕಿತದ ಕಂಬತ್ತಳ್ಳಿ ಪ್ರಕಾಶ್ ಜಯಂತ ಕಾಯ್ಕಿಣಿಯ ಮೂರು ಕವನ ಸಂಕಲನಗಳನ್ನು ಕೈಗಿಟ್ಟರು. ಜಿ ಎನ್ ಮೋಹನ್ ಬರೆದ ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ ಸಂಕಲನದ ನಂತರ ನಾನು ಓದಲು ಯತ್ನಿಸಿದ ಕವಿತಾ ಸಂಕಲನಗಳೆಲ್ಲ ನನ್ನಲ್ಲಿ ವಿಚಿತ್ರ ನಿರುತ್ಸಾಹವನ್ನೂ ನನ್ನ ಓದಿನ ಧಾಟಿಯೇ ಸರಿಯಿಲ್ಲ ಎಂಬ ನಂಬಿಕೆಯನ್ನೂ ನಾನು ಹಳೆಯ ತಲೆಮಾರಿಗೆ ಸೇರಿಕೊಂಡುಬಿಟ್ಟೆ ಎನ್ನುವ ವಿಷಾದವನ್ನೂ ಹುಟ್ಟಿಸಿದ್ದವು.  ಕಾವ್ಯಮೋಹಿನಿಯನ್ನು ಮತ್ತೆ ಹೇಗಾದರೂ ಒಲಿಸಿಕೊಳ್ಳಬೇಕು ಎಂಬ ಹಟದಲ್ಲಿ ನಾನು ಬೇಂದ್ರೆಗಂಗಾಧರ ಚಿತ್ತಾಲಯರ್ಮುಂಜ ರಾಮಚಂದ್ರಮ್ಯಾಥ್ಯೂ ಆರ್ನಾಲ್ಡ್ ಪದ್ಯಗಳನ್ನು ಓದಲು ಆರಂಭಿಸಿದ್ದೆ. ತಿರುಮಲೇಶರ ಮುಖಾಮುಖಿ ಕವಿತೆಯನ್ನು ಮತ್ತೆ ಮತ್ತೆ ಓದಿದಾಗ ಅದರಲ್ಲಿ ಬರುವ ಬೆಕ್ಕು ಥೇಟ್ ಕವಿತೆ ಅನ್ನಿಸತೊಡಗಿತು. ಕವಿತೆಯ ಕಣ್ಣಲ್ಲಿ ಅಂಥ ವಿಷಾದ ಇರುತ್ತದೆ ಎಂದು ನನಗೆ ಗೊತ್ತಿರಲಿಲ್ಲ ಎಂದು ತಿರುಮಲೇಶರ ಸಾಲುಗಳನ್ನು ಬದಲಾಯಿಸಿಕೊಂಡು ಓದತೊಡಗಿದ ಮೇಲೆ ಎಷ್ಟೋ ಸಮಾಧಾನವಾಯಿತು.

 

kaikini3-cover

ಜಯಂತ್ ಕಾಯ್ಕಿಣಿ ಕವನ ಸಂಕಲನ ಅಂಥ ಗಾಬರಿಯನ್ನು ಹುಟ್ಟಿಸದೇ ಇರುವುದಕ್ಕೆ ಎರಡು ಕಾರಣ. ಸಂಕಲನಕ್ಕೆ  ನಿನ್ನೆ ನಾಳೆಯ ನಡುವೆಅಂತಸ್ತಾಪವಾಸ್ತವದ ಲೆಕ್ಕಾಚಾರಮಬ್ಬಿನ ಹಾಗೆ ಕಣಿವೆಯಾಸಿಮನದ ಮರ್ಮರವೆಂಬ ಮೂಕ ಚೀತ್ಕಾರ- ಮುಂತಾದ ನಿಗೂಢದುಸ್ತರ ಶೀರ್ಷಿಕೆಯನ್ನು ಜಯಂತ್  ಕೊಟ್ಟಿರಲಿಲ್ಲ. ಮುಖಪುಟದಲ್ಲಿ ಬಣ್ಣಗಳ ವಿಚಿತ್ರ ವಿನ್ಯಾಸವಾಗಲೀ ನಿದ್ದೆಗೆಡಿಸುವಂಥ ನವ್ಯಚಿತ್ರದ ತುಣುಕಾಗಲೀ ಇರಲಿಲ್ಲ. ಕಣ್ಣಿಗೂ ಮನಸ್ಸಿಗೆ ಖುಷಿಕೊಡುವ ವರ್ಣವಿನ್ಯಾಸಬೆಳ್ಳಗಿನ ಮುಖಪುಟದ ನಡುವೆ  ಒಂದು ಜಿಲೇಬಿ ಎಂಬ ಶೀರ್ಷಿಕೆ. ಇಷ್ಟವಾಗುವಂಥ ಶೈಲಿಯಲ್ಲಿ ಜಯಂತ್ ಸ್ವತಃ ಬರೆದಿರಬೇಕು ಎಂದೆನ್ನಿಸುವಂತೆ ಬರೆದ ಜಯಂತ್ ಕಾಯ್ಕಿಣಿ ಕವಿತೆಗಳು ಎಂಬ ಮೂರು ಸಾಲು- ಸಂಕಲನದ ಪುಟಗಳನ್ನು ತೆರೆಯುವ ಧೈರ್ಯ ತುಂಬಿತು.

ಸಂಕಲನದ ಶೀರ್ಷಿಕೆಯ ಕವಿತೆಯನ್ನು ಮೊದಲು ಓದುವುದು ನನ್ನ ದುರಭ್ಯಾಸಗಳಲ್ಲಿ ಒಂದು. ಹಾಗಂತಲೇ ಒಂದು ಜಿಲೇಬಿ ಓದಲು ಆರಂಭಿಸಿದರೆ ಮತ್ತೆ ಗಾಬರಿಯಾಯಿತು. ಓದಿದ ನಂತರ ಒಂದೂ ಸಾಲು ನೆನಪಲ್ಲಿ ಉಳಿಯಲಿಲ್ಲ. ಪುಸ್ತಕ ಮುಚ್ಚಿಟ್ಟು ಮತ್ತೊಂದು ವಾರ ಸಂತೋಷದಲ್ಲಿ ಕಳೆದೆ. ನಿದ್ರೆಯಲ್ಲೂ ಜಿಲೇಬಿ ನೆನಪಾಗುತ್ತಿತ್ತು. ನನಗೆ ಡಯಾಬಿಟೀಸ್ ಶುರುವಾಗಿರಬಹುದೇ ಎಂದು ಅನುಮಾನ ಶುರುವಾಯಿತು.

ಈಗ ವಾರದ ನಂತರ ಮತ್ತೆ ಕಾಯ್ಕಿಣಿ ಕವಿತೆಗಳನ್ನು ಕೈಗೆತ್ತಿಕೊಂಡು ಕೂತೆ. ಜಿಲೇಬಿಯನ್ನು ಮರೆತು ಉಳಿದ ಕವಿತೆಗಳನ್ನು ಓದತೊಡಗಿದೆ. ಈಗಲೂ ಮೊದಲು ಕಣ್ಣಿಗೆ ಬಿದ್ದದ್ದು ಸಣ್ಣಸೊಲ್ಲು ಎಂಬ ಕವಿತೆ.

ಚಪಾತಿಯಂಥ ದೊಡ್ಡದೇಶದ

ಸಣ್ಣ ಜನ ನಾವು

ನಮ್ಮ ಸಂಕಟಗಳು ಸಣ್ಣ

ಜೀವ ಹೋದರೂ ಮಿಂಟಿಯ ರ್ರ್ಯಾಪರ್   

ಸುಲಿಯಲೇ ಆಗದಣ್ಣ.

ಇದು ಕೂಡ ನಾನು ಬಯಸಿದ ಕವಿತೆಯಲ್ಲ ಎನ್ನಿಸಿ ಮತ್ತೆ ಬೋರಾಯಿತು. ನವ್ಯ ಕವಿತೆಗಳ ಗುಂಗಿನಿಂದ ನಾನಿನ್ನೂ ಹೊರಬಂದಿಲ್ಲವೇನೋ ಅನ್ನಿಸಿತು. ಕ್ರಾಂತಿಬಂಡಾಯಒದೆಸಿಕೊಂಡ ನೋವು,ಅವಮಾನಕೀಳರಿಮೆವರ್ಗಸಂಘರ್ಷಆಗೊಮ್ಮೆ ಬುದ್ಧಈಗೊಮ್ಮೆ ಅಲ್ಲಮ- ಇದಲ್ಲದೇ ಕವಿತೆಗೆ ವಸ್ತುವಿರಲು ಸಾಧ್ಯವೇ ಎಂದು ಯೋಚಿಸುವಂತಾಯಿತು. ಕವಿತೆ ಆಳವಾಗಿರಬೇಕು ಎಂದು ಬ್ಲಾಗ್ ಓದುಗರು ಮಾಡಿದ ಕಾಮೆಂಟುಗಳು ನೆನಪಾದವು. ಸರಳವಾದ ಕವಿತೆಯನ್ನು ಮೆಚ್ಚಿಕೊಳ್ಳುವುದುಂಟೇ ಛೇ. ನನ್ನ ಅಹಂಕಾರದ ಗತಿ ಏನಾಗಬೇಡ?

ಆದರೂ ನಾನು ಹಠ ಬಿಡಲಿಲ್ಲ. ಜಿಲೇಬಿಯ ಕವಿತೆಗಳನ್ನು ಒಂದರ ಮೇಲೊಂದರಂತೆ ಓದುತ್ತಾ ಹೋದೆ. ಸಿನಿಮಾ ಹಾಡುಗಳನ್ನು ಬರೆದು ಕಾಯ್ಕಿಣಿಯೊಳಗಿನ ಕವಿ ಕಾಣೆಯಾಗಿದ್ದಾರೆ ಎಂದು ಪತ್ರಕರ್ತನ ಶೈಲಿಯಲ್ಲಿ ಚಿಂತಿಸಿದೆ. ಇಡೀ ಕವನಸಂಕಲನಕ್ಕೆ ಒಂದು ಬಂಧವಿಲ್ಲಸೈದ್ಧಾಂತಿಕ ತಳಹದಿಯಿಲ್ಲತಾತ್ವಿಕ ನೆಲೆಗಟ್ಟು ಕಾಣಿಸುತ್ತಿಲ್ಲ ಎಂದು ಪಕ್ಕಾ ವಿಮರ್ಶಕರಂತೆ ಯೋಚಿಸಲು ಆರಂಭಿಸಿದೆ. ಇವು ಭಾವಗೀತೆಗಳಂತಿವೆಯಲ್ಲ ಎಂದು ರಾಮಚಂದ್ರ ಶರ್ಮರ ಧಾಟಿಯಲ್ಲಿ ಟೀಕಿಸಬಹುದು ಎಂದುಕೊಂಡೆ.

ಕೊನೆಗೆ ಇದ್ಯಾವುದೂ ಸರಿಹೋಗುವುದಿಲ್ಲ ಎಂದುಕೊಂಡು ಆಗಷ್ಟೇ ಕವಿತೆಗಳನ್ನು ಓದಲು ಕುಳಿತೆ. ನಮ್ಮೂರಲ್ಲಿ ಕೂತು ಅವರ ರಂಗದಿಂದೊಂದಷ್ಟು ದೂರ ಸಂಕಲನದ ಪದ್ಯಗಳನ್ನು ಓದಿದ್ದನ್ನು ನೆನಪಿಸಿಕೊಂಡೆ. ಓದುವ ಕ್ರಮವನ್ನು ಮರೆತು ಸುಮ್ಮನೆ ಓದುತ್ತಾ ಹೋದೆ.

ಕೊಳ: ರಸ್ತೆ ಬದಿ ಕೂತ ಮುದಿ

ಸ್ವಾತಂತ್ರ್ಯ ಯೋಧನ ಕಣ್ಣು

ಚಂದ್ರಇರುವೆಗಳ ನಡುವೆ ಚಲಿಸುತಿರುವ

ಸ್ತಬ್ಧ ಚೂರು ರೊಟ್ಟಿ

ನದಿ: ಮನೆ ಬಿಟ್ಟೋಡಿದ ಪೋರಿಯ

ಏದುಸಿರಿನ ಜಾಡು.

 ಈ ಸಾಲಿಗೆ ತಲುಪುತ್ತಿದ್ದಂತೆ ಆಹಾಎಲ್ಲವೂ ಸರಿಹೋಯಿತು. ಅಮ್ಮ ಅಪ್ಪರನ್ನು ಅವರು ಮಗುವಾಗಿದ್ದಾಗ ನಾವು ಮುದ್ದಿಸಲೇ ಇಲ್ಲವಲ್ಲ ಎಂಬ ಸಾಲು ಕಣ್ಮುಂದೆ ಸುಳಿಯುತ್ತಿದ್ದಂತೆ ಮಗುವಿನಂತೆ ಕಾಣುವ ನಮ್ಮಮ್ಮ ನೆನಪಾದರು.  ಗುಂಡಿ ಹಾಕುತ್ತಾ ಸಂಭಾವಿತ ಲೋಕಕ್ಕೆ ಹೊರಟು ನಿಂತವರನ್ನೆಂದೂ ಅವಳು ಹಿಂದೆ ಕರೆದು ಹೆಸರು ಕೇಳುವುದಿಲ್ಲ ಎನ್ನುವುದನ್ನು ಓದುತ್ತಿದ್ದಾಗ ಅವಳು ಎರಡು ಗುಂಡಿಯ ಬ್ಲೌಸಿನೊಳಗೆ ಇಟ್ಟುಕೊಂಡ ಎಷ್ಟೊಂದು ಬಗೆಯ ಹೆಸರುಗಳು ಕಣ್ಮುಂದೆ ಸುಳಿದವು. ಮಂಗಳೂರಿನ ಕ್ವಾಲಿಟಿ ಕ್ಯಾಬರೇ ಹಾಲ್‌ನ ಜಾಹೀರಾತಿನಲ್ಲಿ ಬರುತ್ತಿದ್ದ ಲಿಲ್ಲೀಜಾಸ್ಮಿನ್ರೇಖಾ,ಮಾರ್ಗರೆಟ್ ಹೆಸರುಗಳು ನೆನಪಾದವು. ದಿನಾ ದಿನ ಅವರವರೇ ಹೆಸರು ಬದಲಾಯಿಸಿಕೊಂಡು ಬೇರೆಯವರಾಗಲು ಯತ್ನಿಸುತ್ತಾ ಕುಣಿಯುತ್ತಾರೆ ಎಂದು ನಮ್ಮೂರಿನ ಕೇಶವ ಹೇಳಿದ್ದು ನೆನಪಿಗೆ ಬಂತು.

 

ಕೊನೆಯ ತಿರುವಿನಲ್ಲಿ ನೀನೊಮ್ಮೆ

ತಿರುಗಿ ನೋಡಬೇಕಿತ್ತು

ಎಲ್ಲ ಹಾಗೇ ಉಳಿದುಹೋಗಿದೆ

ಪೇಟೆಯಲ್ಲಿ ನಿಂತವರೆಲ್ಲ ಹಠಾತ್ತನೇ

ಮನೆ ಸೇರಲು ಆರ್ತರಾಗಿದ್ದಾರೆ.

ಆಡದ ಮಾತು ಮೂಡದ ಲಿಪಿಗಳೇ ಸೇರಿ

ಸಂಜೆಯ ಬಣ್ಣಗಳನ್ನು ಪಾಕಗೊಳಿಸುತ್ತಿದೆ

ಎಂದು ಓದಿದಾಗ ಜಿಲೇಬಿಯ ರುಚಿ ಎದೆಯ ನಾಲಗೆಯನ್ನು ಮುದಗೊಳಿಸಿತು.  ಕಣ್ಣುಗಳ ನೆನೆಹಾಕಿ ಕೂತಿದೆ ರಾತ್ರಿ ಊರು. ಬಿಕೋ ನಿಲ್ದಾಣದಲ್ಲಿ ಒಬ್ಬನನ್ನೂ ಇಳಿಸದೇ ಹಾದು ಹೋಗುತ್ತಿದೆ ಇಡೀ ಒಂದು ರೈಲು- ಎಂದಾಗ ಅಕ್ಷರ ಕಲಿತದ್ದೂಹಳೆಯ ಕವಿತೆಗಳನ್ನು ಮರೆತದ್ದೂ ಸಾರ್ಥಕವಾಯಿತು ಎಂದು ಖುಷಿಯಾಯಿತು.

ಇರಾನಿ ಸಿನಿಮಾಗಳಲ್ಲಿ ಕಣ್ಮುಂದೆ ಹಾಗೇ ಸಾಗಿಹೋಗುವ ಚಿತ್ರಗಳು ಈ ಕವಿತೆಗಳಲ್ಲಿ ಸಾಲಾಗಿ ಮೂಡಿದ್ದು ಸೋಜಿಗ ತರುತ್ತಿದೆ. ರೇನ್ ಕೋಟ್ ತೊಟ್ಟ ಮುಖಹೀನ ವಿಗ್ರಹದಂತೆ ಅವನೀಗ ಚಲಿಸುತ್ತಾನೆಸಿಗ್ನಲ್ ಸಿಕ್ಕಿದ್ದೇ ದಾಟುತ್ತಾನೆ ದೊಡ್ಡ ರಸ್ತೆ ! ಆಮೇಲೆ ಹಿಡಿದು ನಿಲ್ಲಿಸಿದ್ದು ಈ ಸಾಲು:

ಇಂಥದ್ದೊಂದು ಸೆಳೆತದಲ್ಲಿ ಉಕ್ಕಿ ಬಂದರೇನೇ

ಚೊಕ್ಕವಾಗಿ ಹೊಳೆದೀತು ನಿನ್ನ ಬಿಸಿಲ ಕೋಣೆ.

ಕವಿತೆಯ ಓದೂ ಹೀಗೆ ಸೆಳೆತದಲ್ಲಿ ಉಕ್ಕಿ ಬರಬೇಕಲ್ಲ. ನಮ್ಮ ಬಿಸಿಲ ಕೋಣೆ ಚೊಕ್ಕವಾಗಿ ಹೊಳೆಯಬೇಕಲ್ಲ ಎಂದು ಬೆರಗಾಗುತ್ತಾ ಮತ್ತೆ ಒಂದು ಜಿಲೇಬಿಯತ್ತ ಕಣ್ಣು ಹಾಯಿಸಿದರೆಎಂಥ ಬದಲಾದ ಚಿತ್ರ. ಹೊಸದಾಗಿ ಕಂಡದ್ದು ನಾನೋ ಕವಿತೆಯೋತೆರೆದುಕೊಂಡದ್ದು ನನ್ನ ಮನವೋಕವಿಯ ಸಾಲೋ?

ಬಸ್ ಸ್ಟಾಂಡ್ ತನಕ ಬಿಟ್ಟು ಬಾರೋ

ಅಂದಿದ್ದಕ್ಕೆ ಯಾಕಿಷ್ಟು ಸಿಟ್ಟು ಪೋರಾ

ನಿನ್ನ ಬೇಬಕ್ಕ ಕಣೋ ಅವಳು

ಈ ಕಂದನ ಮಾಮನಪ್ಪಾ ನೀನು ಎತ್ತಿಕೊಳ್ಳೋ

ಮುದ್ದು ಮಾಡೋ..

ನಮ್ಮೂರಿನಿಂದ ಬಸ್‌ಸ್ಟಾಂಡಿಗೆ ಮೂರು ಮೈಲಿ. ಮನೆಗೆ ಬಂದ ನೆಂಟರನ್ನು ಬಸ್‌ಸ್ಟಾಂಡಿಗೆ ಬಿಟ್ಟುಬರಲು ಹಿಂದೇಟು ಹಾಕುತ್ತಿದ್ದ ದಿನಗಳು. ಅಮ್ಮ ಪುಸಲಾಯಿಸಿಅಪ್ಪ ಬೈದು ಅವರ ಜೊತೆ ಅಟ್ಟಿದರೆ ಮನಸ್ಸಿಗೆ ಮಿಜಿಮಿಜಿ.  ನಮ್ಮದೂ ಬಾಬುವಿನದ್ದೇ ಸ್ಥಿತಿ.

ಬೇಬಿಗಂತ ತಂದಿದ್ದ ಜಿಲೇಬಿಯಲ್ಲಿ ಒಂದನ್ನು

ಅವಳ ಕಂದನ ಕಣ್ಣಿಂದಲೂ ತಪ್ಪಿಸಿ ಬಚ್ಚಿಟ್ಟಿದ್ದೇನೆ

ಆ ಮೇಲೆ ಬಂದು ತಿನ್ನು

ಏಳು ಚಿನ್ನ ಹೊರಡು.

ಇಲ್ಲಿಗೆ ತಲುಪುವ ಹೊತ್ತಿಗೆ ತಡೆದಿದ್ದ ಕಣ್ಣೀರು ಹನಿಯಾಗಿ ಕೆನ್ನೆ ಒದ್ದೆಮಾಡಿತು.

ಮತ್ತೊಮ್ಮೆಮತ್ತೆ ಮತ್ತೆ ಎಲ್ಲ ಕವಿತೆಗಳನ್ನು ಸುಮ್ಮನೆ ಓದುತ್ತಾ ಇದ್ದೇನೆ.  ಬಾಯಿಗಿಟ್ಟ ತಕ್ಷಣ ಕರಗುವ ಬಿಸಿಬಿಸಿ

ಜಿಲೇಬಿಯ ಹಾಗೆ ಕವಿತೆಯೂ ಕರಗುತ್ತಿದೆ.  ರುಚಿಬಿಸುಪು ಮತ್ತು ಸಕ್ಕರೆಪಾಕದ ಸವಿ ತುಂಬ ಹೊತ್ತು ನಾಲಗೆಯಲ್ಲೂ ಮನಸ್ಸಲ್ಲೂ ನೆಲೆಗೊಂಡಂತೆ ಭಾಸವಾಗುತ್ತಿದೆ.

ಪುಸ್ತಕದಿಂದ ಕಣ್ಣೆತ್ತಿನೋಡಿದರೆ ಹೊಸಹಗಲು ಕಣ್ಣು ಕೋರೈಸುತ್ತಿದೆ. ನಲುವತ್ತರ ಚಾಳೀಸು ಕೂಡ ಅನಗತ್ಯ ಎಂದು ಕೊಂಡು ಹಾಗೇ ನೋಡುತ್ತಾ ಕೂತಿದ್ದೇನೆ.

‍ಲೇಖಕರು avadhi

January 31, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

8 ಪ್ರತಿಕ್ರಿಯೆಗಳು

 1. SWATHI

  dear sir,
  i liked this comment on jayanth sir’s poetry. This how a write up should be. telling abou a poem without using any jargons and clishe’s. Loved it.
  swathi

  ಪ್ರತಿಕ್ರಿಯೆ
 2. ಡಿ.ಎಸ್.ರಾಮಸ್ವಾಮಿ

  ಈಗಷ್ಟೇ ಬಾಣಲೆಯಿಂದ ತೆಗೆದು ಪಾಕಕ್ಕದ್ದಿ ತೆಗೆದ ಬಿಸಿ ಬಿಸಿ ಜಿಲೇಬಿ ಬಡಿಸಿದ ಹಾಗೇ ಅದರ ರುಚಿಯನ್ನು ಸವಿಯುವ ಬಗೆಯನ್ನೂ ಹೇಳಿಕೊಟ್ಟ ಜೋಗಿ, ಥ್ಯಾಂಕ್ಸ್ ಎ ಲಾಟ್!

  ಪ್ರತಿಕ್ರಿಯೆ
 3. h n eshakumar

  “ಕಿರಣ ಸೋಕಿದರೆ ಸಾಕು ಮಾಯಲಿ ಗಾಯ
  ಒಡೆಯದಿರಲಿ ಕಂಬನಿಗೆ ಎದೆಯಹಾಲು”.
  ಎಂದು ಬರೆದು ಭಾವಲೋಕದಲಿ ನಮ್ಮನು ವಿಹರಿಸಿದ ಕವಿ ಕಾಯ್ಕಿಣಿ ಚಿತ್ರ ಗೀತೆಯ ಗುಂಗಿನಲು
  ಜಿಲೆಬಿಯನು ತಿನಿಸಿ ಸವಿಯುವಂತೆ ಮಾಡಿದ್ದು ನಮ್ಮ ಖುಷಿ.
  ಜಿಲೇಬಿಯ ಸವಿಯನು ಮತ್ತೆ ಮತ್ತೆ ಚಪ್ಪರಿಸುವಂತೆ ಮಾಡಿದ ಜೋಗಿಯವರ ಬರಹಕೆ ದನ್ಯವಾದಗಳು..

  ಪ್ರತಿಕ್ರಿಯೆ
 4. basavaraja halli

  ಜಿಲೇಬಿ ಓದಿ ನೆಪ್ಪಿನಲ್ಲುಳಿದ ಕೆಲವು ಕವನದ ಸಾಲುಗಳನ್ನು ಓದುತ್ತಿದ್ದಂತೆ. ನಾನು ಜಿಲೇಬಿ ಹಿಡಿಯಬೇಕೆನಿಸಿತು
  -ಬಸವರಾಜ ಹಳ್ಳಿ

  ಪ್ರತಿಕ್ರಿಯೆ
 5. sunil

  Hello simply superb,
  Entha chendada baraha…Jilebi odalu kaaturanaaguvante maadide…..
  Thank you….
  Sunil.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: