ಜೋಗಿ ಸೀಕ್ರೆಟ್ ಡೈರಿ : ಅವನು ನಿಕೋಲಾಯ್

ಭಿಕಾರಿಗಳ ಹಾಗಿದ್ದ ಗೂಢಚರರ ಬದುಕು ಬದಲಾದದ್ದು ಹೇಗೆ ಗೊತ್ತಾ…?

ಹಾಗೆ ನೋಡಿದರೆ ಮಾತಾಹರಿ ಸರ್ಕಾರದಿಂದ ನೇಮಿಸಲ್ಪಟ್ಟ ಗೂಢಚಾರಿಣಿ ಅಲ್ಲ. ಆಕೆ ಮಾಹಿತಿ ನೀಡದೇ ಇದ್ದಲ್ಲಿ ಅವಳ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೂ ಅವಳನ್ನು ನೇಮಿಸಿಕೊಂಡವರಿಗೆ ಅಧಿಕಾರ ಇರಲಿಲ್ಲ. ಆದರೆ ಕ್ರಮೇಣ ಸರ್ಕಾರವೇ ಗೂಢಚರರನ್ನು ನೇಮಕ ಮಾಡಿ ಅವರನ್ನು ಬೇರೆ ಬೇರೆ ದೇಶಗಳ ಮೇಲೆ ಛೂ ಬಿಡಲು ಆರಂಭಿಸಿತು.

ಇವತ್ತು ಜರ್ಮನ್ ಗೂಢಚಾರರ ಬಗ್ಗೆ ಎಲ್ಲ ದೇಶಗಳ ಗುಪ್ತಚರ ಸಂಸ್ಥೆಗಳಿಗೂ ವಿಶೇಷ ಗೌರವವಿದೆ. ಜರ್ಮನ್ ಗುಪ್ತಚರರು ಅತೀ ಮೇಧಾವಿಗಳೆಂದೂ ಬುದ್ಧಿವಂತರೆಂದೂ ಹೇಗಾದರೂ ಮಾಡಿ ಮಾಹಿತಿ ಕಲೆ ಹಾಕುವುದರಲ್ಲಿ ನಿಪುಣರೆಂದೂ ಭಾವಿಸುತ್ತಾರೆ. ಜರ್ಮನರಷ್ಟು ಸಮರ್ಥವಾಗಿ ಗೂಢಚರರನ್ನು ಆಯುಧವಾಗಿ ಬಳಸಿಕೊಂಡವರು ಬೇರೊಬ್ಬರಿಲ್ಲ ಎನ್ನುತ್ತಾರೆ. ಶಾಂತಿ ನೆಲೆಸಿರುವ ದಿನಗಳಲ್ಲಿ ಯಾರಿಗೂ ಗೊತ್ತಾಗದ ಹಾಗೆ ಮಾಹಿತಿಯನ್ನು ಕಲೆ ಹಾಕಿ, ಅದನ್ನು ಆಯಾ ಇಲಾಖೆಗಳಿಗೆ ಕಳುಹಿಸಿ, ರಕ್ಷಣಾ ಅಧಿಕಾರಿಗಳಿಗೆ ಆ ಮಾಹಿತಿ ಉಪಯುಕ್ತವಾಗುವಂತೆ ಮಾಡುವುದರಲ್ಲಿ ಅವರು ಮಹಾ ನಿಪುಣರು ಎಂದು ವಾದಿಸುತ್ತಾರೆ. ಆದರೆ ಮೊದಲ ಮಹಾಯುದ್ಧಕ್ಕೆ ಮುನ್ನ ಪರಿಸ್ಥಿತಿ ಬೇರೆಯೇ ಇತ್ತು. ಯುದ್ಧ ಭೀತಿಯಿದ್ದ ಬಹುತೇಕ ದೇಶಗಳು ಒಂದಿಲ್ಲೊಂದು ಗೂಢಚರ ಸಂಸ್ಥೆಯನ್ನು ಕಟ್ಟಿಕೊಂಡಿದ್ದವು. ಅವುಗಳ ಮುಖ್ಯಕೆಲಸ ರಕ್ಷಣಾ ಇಲಾಖೆಗೆ ನೆರವಾಗುವುದು. ಜರ್ಮನಿಯ ಮಿಲಿಟರಿ ಇಂಟೆಲಿಜೆನ್ಸ್ ಸಂಸ್ಥೆ ಎನ್‌ಡಿ. ಹಾಗೆಯೇ, ಬ್ರಿಟನ್, ಫ್ರಾನ್ಸ್, ಸೋವಿಯಟ್ ಯೂನಿಯನ್, ಯುರೋಪಿನ ಸಣ್ಣಪುಟ್ಟ ರಾಷ್ಟ್ರಗಳೆಲ್ಲ ತಮ್ಮದೇ ಆದ ಗೂಢಚರ ಸಂಸ್ಥೆಯನ್ನು ಸ್ಥಾಪಿಸಿಕೊಂಡು ಕೈಲಾದ ಮಾಹಿತಿ ಸಂಗ್ರಹಿಸುವುದಕ್ಕೆ ಮುಂದಾಗಿದ್ದವು. ದೇಶದಲ್ಲಿ ಶಾಂತಿ ನೆಲೆಸಿರುವ ಹೊತ್ತಿಗೆ ಇವುಗಳನ್ನು ಕೇಳುವವರೂ ಗತಿಯಿರುತ್ತಿರಲಿಲ್ಲ. ಆ ಸಂಸ್ಥೆಗಳ ಗೂಢಚಾರರಿಗೆ ಓಡಾಡುವುದಕ್ಕಾಗಲೀ, ಪತ್ತೇದಾರಿಕೆ ಮಾಡುವುದಕ್ಕಾಗಲೀ ದುಡ್ಡು ಕೊಡುವವರೂ ಇರುತ್ತಿರಲಿಲ್ಲ. ಹಾಗಂತ ಅವರು ಸುಮ್ಮನೆ ಕೂರುವ ಹಾಗೂ ಇರಲಿಲ್ಲ. ಪ್ರಯಾಣ ಭತ್ಯೆ ಸಿಗದ ಪತ್ರಕರ್ತರು, ಬೇರೆ ಪತ್ರಿಕೆಗಳನ್ನೂ ಇಂಟರ್‌ನೆಟ್ ಮೂಲಗಳನ್ನು ಜಾಲಾಡಿ ಸುದ್ದಿ ಬರೆಯುವ ಹಾಗೆ, ಅವರೂ ಸಿಕ್ಕಸಿಕ್ಕವರನ್ನೆಲ್ಲ ಅವಲಂಬಿಸಿ ವರದಿ ತಯಾರಿಸಬೇಕಾಗಿತ್ತು. ರಾಯಭಾರ ಕಚೇರಿ, ರಕ್ಷಣಾ ಇಲಾಖೆಯ ಅಧಿಕಾರಿಗಳು, ಪತ್ರಕರ್ತರು ಅವರ ಪಾಲಿಗೆ ಮಹತ್ವದ ಸುದ್ದಿಮೂಲವಾಗಿ ಒದಗಿಬರುತ್ತಿದ್ದರು. ಇಪ್ಪತ್ತನೇ ಶತಮಾನದ ಮೊದಲ ಮಹಾಯುದ್ಧ ಎಂದೇ ಕರೆಯಲಾಗುವ ರಷಿಯಾ- ಜಪಾನ್ ಯುದ್ಧ ಶುರುವಾದದ್ದು ಫೆಬ್ರವರಿ 8, 1904ರಲ್ಲಿ. ಅದು ಸುಮಾರು ಏಳು ತಿಂಗಳುಗಳ ಕಾಲ ಎರಡೂ ದೇಶಗಳು ಮಂಚೂರಿಯಾ ಮತ್ತು ಕೊರಿಯಾದ ಮೇಲೆ ಹಿಡಿತ ಸಾಧಿಸಲಿಕ್ಕೆ ಕಾದಾಡಿದವು. ಜಪಾನ್ ಟಾರ್ಪೆಡೋ ದಾಳಿಗೆ ರಷಿಯಾದ ಯುದ್ಧನೌಕೆಗಳು ನುಜ್ಜುಗುಜ್ಜಾಗಿ ಕೊನೆಗೂ ಯುದ್ಧದಲ್ಲಿ ರಷಿಯಾ ಸೋಲೊಪ್ಪಿಕೊಳ್ಳಬೇಕಾಯಿತು. ಇದಾಗುತ್ತಿದ್ದಂತೆ ಜರ್ಮನಿ ರಷ್ಯಾ ಮತ್ತು ರಷ್ಯಾದ ಮಿತ್ರದೇಶವಾದ ಫ್ರಾನ್ಸ್‌ನ ರಕ್ಷಣಾಬಲಗಳ ಬಗ್ಗೆ ವಿಪುಲವಾದ ಮಾಹಿತಿ ಸಂಗ್ರಹಿಸಲು ಆರಂಭಿಸಿತು. ವಾಲ್ಟರ್ ನಿಕೊಲಾಯ್ ಎಂಬ ಅಧಿಕಾರಿಯನ್ನು ವಿಶೇಷವಾಗಿ ಈ ಕೆಲಸಕ್ಕೆ ನೇಮಿಸಿತು. ಅಧಿಕಾರ ವಹಿಸಿಕೊಂಡ ನಿಕೊಲಾಯ್ ಇಂಟೆಲಿಜೆನ್ಸ್ ಇಲಾಖೆಯ ಅವಸ್ಥೆ ನೋಡಿ ಕಂಗಾಲಾಗಿ ಹೋದ. ಗೂಢಚರ ಸಂಸ್ಥೆಗೆ ಮಂಜೂರಾಗಿದ್ದ ವಾರ್ಷಿಕ ಬಜೆಟ್ಟು ಕೇವಲ 12500 ಡಾಲರ್. ಆ ಹಣದಲ್ಲಿ ರಷ್ಯಾದ ಮಾಹಿತಿ ಹಾಗಿರಲಿ, ಪಕ್ಕದೂರಿನಲ್ಲಿ ಗೂಢಚರ್ಯೆ ಮಾಡುವುದೂ ಸಾಧ್ಯವಿಲ್ಲ ಎಂಬುದು ಅವನಿಗೆ ಮನವರಿಕೆಯಾಯಿತು. ಆಗ ಗೂಢಚರ ಸಂಸ್ಥೆಯಲ್ಲಿದ್ದವರು ಕೇವಲ ನಾಲ್ಕು ಮಂದಿ ಏಜಂಟರು. ಅವರೂ ಕೂಡ ಬಹಳ ದಿನದಿಂದ ಕೆಲಸವಿಲ್ಲದೇ ಬಿದ್ದುಕೊಂಡು ಜಡ್ಡುಗಟ್ಟಿ ಹೋಗಿದ್ದರು. ಗೂಢಚಾರಿಕೆ ಮಾಡಲು ಬೇಕಾದ ಹುಮ್ಮಸ್ಸಾಗಲೀ, ಚಾಣಾಕ್ಷತನವಾಗಲೀ ಅವರಲ್ಲಿ ಇದ್ದಂತೆ ನಿಕೊಲಾಯ್‌ಗೆ ಕಾಣಲಿಲ್ಲ. ಅಲ್ಲದೇ ಅವರು ಗೂಢಚರ್ಯೆ ಮಾಡುವುದು ದೇಶಪ್ರೇಮ ಎಂದಾಗಲೀ, ನಿಯತ್ತಿನ ಕೆಲಸ ಎಂದಾಗಲೀ ಭಾವಿಸಿರಲೇ ಇಲ್ಲ. ಅವರ ಪಾಲಿಗೆ ಅದೊಂದು ಸಂಬಳ ತರುವ ವೃತ್ತಿ ಅಷ್ಟೇ. ಒಂಚೂರು ಜಾಸ್ತಿ ದುಡ್ಡು ಕೊಟ್ಟರೆ, ರಷಿಯಾ ಪರವಾಗಿ ಗೂಢಚಾರಿಕೆ ಮಾಡಲೂ ಅವರು ಸಿದ್ಧರಿದ್ದರು. ಈ ಅವಸ್ಥೆಯನ್ನು ನೋಡಿ ಬೇಜಾರಾಗಿ ನಿಕೊಲಾಯ್ ಕೆಲಸಕ್ಕೇ ರಾಜೀನಾಮೆ ಕೊಟ್ಟು ಹೊರಟು ಹೋದ. ಎಂಟು ವರ್ಷಗಳ ನಂತರ ಜರ್ಮನಿ ಆತನನ್ನೇ ಎನ್‌ಡಿಯ ಮುಖ್ಯಸ್ಥನನ್ನಾಗಿ ನೇಮಿಸಿತು. ಒಂದೇ ವರ್ಷದಲ್ಲಿ ನಿಕೊಲಾಯ್ ಆ ಸಂಸ್ಥೆಯನ್ನು ದಕ್ಷತೆಯ ಹಳಿಗೆ ತರುವಲ್ಲಿ ಯಶಸ್ವಿಯಾದ. ಸೀಮಿತ ಉದ್ದೇಶಗಳನ್ನು ಹೊಂದಿದ್ದ ಸಂಸ್ಥೆಯ ಏಕೈಕ ಉದ್ದೇಶ ರಷ್ಯಾ ಮತ್ತು ಫ್ರಾನ್ಸಿಗೆ ಸಂಬಂಧಪಟ್ಟ ಮಾಹಿತಿಗಳು ಸಂಗ್ರಹಿಸುವುದಷ್ಟೇ ಆಗಿತ್ತು. ಬ್ರಿಟನ್ನಿನಿಂದ ಬರಬಹುದಾದ ಅಪಾಯವೇನಿದ್ದರೂ ಸಮುದ್ರದ ಮೂಲಕವೇ ಬರಬೇಕಾದ್ದರಿಂದ, ನೌಕಾದಳ ಬ್ರಿಟನ್ನಿನ ತುಂಬ ಗೂಢಚರರನ್ನು ಬಿಟ್ಟಿತ್ತು. ಅವರಿಗೂ ಸರ್ಕಾರ ಮೂರು ಕಾಸು ಕೊಡುತ್ತಿದ್ದುದರಿಂದ ಅಲ್ಲಿಯ ಏಜಂಟರೂ ಸೋತುಹೋಗಿದ್ದರು. ಅನೇಕರು ಹಸಿವು, ಕಾಯಿಲೆಗಳಿಂದ ಬಳಲುತ್ತಿದ್ದರು. ಬ್ರಿಟನ್ ಗೂಢಚಾರಿಕೆಯನ್ನೂ ನೌಕಾದಳದ ಕೈಯಿಂದ ಪಾರು ಮಾಡಿ, ತಾನೇ ನೋಡಿಕೊಳ್ಳಲು ನಿಕೊಲಾಯ್ ನಿರ್ಧರಿಸಿದ. ತನ್ನ ಏಜೆಂಟುಗಳನ್ನು ಬ್ರಿಟನ್ನಿನ ತುಂಬ ಹರಿಯಬಿಟ್ಟ. 1914ರಲ್ಲಿ ಬ್ರಿಟನ್, ಜರ್ಮನಿಯ ಮೇಲೆ ಯುದ್ಧ ಸಾರಿಯೇ ಬಿಟ್ಟಿತು. ಅಷ್ಟರಲ್ಲಾಗಲೇ ಬ್ರಿಟನ್ ಜರ್ಮನಿಗೆ ಸೇರಿದ 21 ಗೂಢಚರರನ್ನು ಬಂಧಿಸಿತ್ತು. ಬ್ರಿಟನ್ನಿಗೆ ಹೋಲಿಸಿದರೆ ಅದು ಲೆಕ್ಕಕ್ಕೇ ಇಲ್ಲದ ಗೂಢಚರ್ಯೆ. ವಿಲಿಯಮ್ ಲೀ ಕಾಕ್ಸ್ ಎಂಬ ಪತ್ರಕರ್ತ ಮತ್ತು ಬರಹಗಾರ ಹೇಳುವಂತೆ ಇಂಗ್ಲೆಂಡಿನ ಐದು ಸಾವಿರ ಮಂದಿ ಗೂಢಚರರ ಮುಂದೆ ಇವರು ಧೂಳಿಗೆ ಸಮ. ಈ ವಿಲಿಯಮ್ ಲೀ ಕಾಕ್ಸ್ ಕತೆಯೂ ಅಷ್ಟೇ ರೋಚಕವಾಗಿದೆ. ಅವನು ಪತ್ರಕರ್ತ, ಬರಹಗಾರ, ಅಲೆಮಾರಿ ಎಲ್ಲವೂ ಆಗಿದ್ದ. ಜರ್ಮನ್ ಮೇಲೆ ಇಂಗ್ಲೆಂಡ್ ಯುದ್ಧ ಸಾರಿದ್ದರಲ್ಲಿ ತನ್ನ ಪಾತ್ರವೂ ಇದೆ ಎಂದು ಭಾವಿಸಿಕೊಂಡವನು. ಅವನು ಯುದ್ಧದ ಕುರಿತು ಬರೆದ ಪುಸ್ತಕಗಳು ಇಂದಿಗೂ ಜಗತ್ಪ್ರಸಿದ್ಧ. ಅವನು ಯುದ್ಧಕಾಲದಲ್ಲಿ ಡೇಲಿ ಮೇಲ್ ಪತ್ರಿಕೆಗೆ ಅಂಕಣ ಬರೆಯುತ್ತಿದ್ದ. ಅದರಿಂದಾಗಿಯೇ ಪತ್ರಿಕೆಯ ಪ್ರಸಾರ ಹಿಗ್ಗಾಮುಗ್ಗಾ ಏರಿತ್ತು. ಅವನ ರೋಚಕ ಬದುಕಿನದು ಮತ್ತೊಂದು ಕುತೂಹಲಕಾರಿ ಕತೆ. ಬ್ರಿಟನ್ ತಾನು ಸೆರೆಹಿಡಿದ 21 ಮಂದಿ ಜರ್ಮನ್ ಗೂಢಚಾರರನ್ನು ನೋಡಿ ಗಹಗಹಿಸಿ ನಕ್ಕಿತ್ತು. ಅವರು ಗೂಢಚಾರರ ಹಾಗೇ ಕಾಣುತ್ತಿರಲಿಲ್ಲ.ಸುತ್ತಿ ಸುಳಿದು ಅಲೆದು ಬಳಲಿ ಭಿಕಾರಿಗಳ ಥರ ಕಾಣುತ್ತಿದ್ದರು. ಅವರಿಗೆ ಮಾಹಿತಿ ಸಂಗ್ರಹಿಸುವ ಯಾವ ಶಕ್ತಿಯೂ ಇದ್ದಂತೆ ಕಾಣಿಸಲಿಲ್ಲ. ಕೊನೆಗೆ ಅವರನ್ನು ಬ್ರಿಟಿಷ್ ಸರ್ಕಾರ ಕೋರ್ಟಿಗೂ ಹಾಜರು ಪಡಿಸಲಿಲ್ಲ. ಹಾಗೊಂದು ವೇಳೆ ಕೋರ್ಟಿಗೆ ಹಾಜರುಪಡಿಸಿದರೆ, ವಿಚಾರಣೆಯ ವೇಳೆ ಅವರನ್ನು ಹೇಗೆ ಪತ್ತೆ ಹಚ್ಚಲಾಯಿತು ಎಂದು ಹೇಳಬೇಕಾಗುತ್ತದೆ. ಅದರಿಂದಾಗಿ ಬ್ರಿಟನ್ ಗೂಢಚರ ಸಂಸ್ಥೆಯ ಕಾರ್ಯವಿಧಾನಗಳೂ ರಹಸ್ಯ ಕಾರ್ಯಾಚರಣೆಗಳೂ ಎಲ್ಲರಿಗೂ ಗೊತ್ತಾಗುತ್ತವೆ. ಅದು ಗೊತ್ತಾದರೆ ಮುಂದೆ ಗೂಢಚರ್ಯೆ ಮಾಡುವುದು ಕಷ್ಟವಾಗುತ್ತದೆ ಎಂದು ಬ್ರಿಟಿಷ್ ಅಧಿಕಾರಿಗಳು ಲೆಕ್ಕ ಹಾಕಿದ್ದರು. ಅವರನ್ನು ಹೇಗೆ ಹಿಡಿಯಲಾಯಿತು ಅನ್ನುವ ಗುಟ್ಟನ್ನು ಕೊನೆಯವರೆಗೂ ಬ್ರಿಟನ್ ಬಿಟ್ಟುಕೊಡಲೇ ಇಲ್ಲ. ಯಾವ ಗೂಢಚಾರಿಕೆಯನ್ನೂ ಮಾಡದೇ, ಪಡಪೋಶಿಗಳ ಹಾಗೆ ತಿರುಗಾಡಿಕೊಂಡಿದ್ದ ಅವರನ್ನು ಬ್ರಿಟನ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾದರೂ ಹೇಗೆ ಎಂಬ ಚಿದಂಬರ ರಹಸ್ಯ ಜರ್ಮನಿಯನ್ನೂ ನಿಕೊಲಾಯನ್ನೂ ಕೊನೆ ತನಕವೂ ಕಾಡಿತು. ಇದರ ಹಿಂದೆ ಇನ್ನೊಂದು ಅಂಶವೂ ಕೆಲಸ ಮಾಡಿತ್ತು. ಬ್ರಿಟಿಷ್ ಅಧಿಕಾರಿಗಳು ಪರದೇಸಿಗಳಿಗೆ ಬರುವ ಪತ್ರಗಳನ್ನೂ ಟೆಲಿಗ್ರಾಮುಗಳನ್ನೂ ಪೂರ್ತಿ ಜಾಲಾಡುತ್ತಿದ್ದರು. ಹಾಗೆ ಜಾಲಾಡಿದಾಗಲೇ ಈ ಇಪ್ಪತ್ತೊಂದು ಮಂದಿಯ ರಹಸ್ಯ ಹೊರಬಿದ್ದದ್ದು. ಅವರನ್ನು ಬಂಧಿಸಿದ ಸುದ್ದಿ, ಬಂಧಿತರ ಹೆಸರುಗಳು ಮಾರನೇ ದಿನದ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿತ್ತು. ಅವರನ್ನೆಲ್ಲ ಯಾಕೆ ಬಂಧಿಸಿದ್ದೀರಿ ಎಂದು ನ್ಯಾಯಾಲಯ ಕೇಳಿದರೆ, ಉತ್ತರಿಸುವುದು ಅಧಿಕಾರಿಗಳಿಗೆ ಕಷ್ಟವಾಗುತ್ತಿತ್ತು. ಅವರು ಗೂಢಚಾರರೆಂಬುದಕ್ಕೆ ಯಾವ ಸಾಕ್ಷಿಗಳೂ ಇರಲಿಲ್ಲ. ಗೂಢಚರ್ಯೆಯಿಂದ ದೇಶಕ್ಕಾದ ಹಾನಿ ಏನು ಎಂದು ಕೇಳಿದರೆ ಉತ್ತರಿಸುವ ಸ್ಥಿತಿಯಲ್ಲೂ ಅಧಿಕಾರಿಗಳಿರಲಿಲ್ಲ. ಅವರು ನಿಜಕ್ಕೂ ಗೂಢಚರ್ಯೆ ಮಾಡಿರಲೇ ಇಲ್ಲ. ಮುಂದೆಂದೋ ಮಾಡಬಹುದಾದ ಅಪರಾಧಕ್ಕಾಗಿ ಅವರು ಶಿಕ್ಷೆ ಅನುಭವಿಸಬೇಕಾಯಿತು. ಕೊಂಚ ಹಿಂದಕ್ಕೆ ಹೋಗಿ ನೋಡಿದರೆ ಬ್ರಿಟನ್ ಹೇಗೆ ಗೂಢಚಾರಿಕೆಯನ್ನು ಗಂಭೀರವಾಗಿ ಪರಿಗಣಿಸಿತ್ತು ಅನ್ನುವುದು ಗೊತ್ತಾಗುತ್ತದೆ. 1909ರಲ್ಲೇ ಬ್ರಿಟನ್ನಿನಲ್ಲಿ ವಿದೇಶಿ ಗೂಢಚಾರರು ಸೇರಿಕೊಂಡಿದ್ದಾರೆ. ಅವರನ್ನು ಬಂಧಿಸಬೇಕು ಎಂಬ ನಿರ್ಧಾರದೊಂದಿಗೆ ಸಭೆಸೇರಿದ ಬ್ರಿಟಿಷ್ ಅಧಿಕಾರಿಗಳ ಪಟ್ಟಿಯಲ್ಲಿ ಗಣ್ಯಾತಿಗಣ್ಯರಿದ್ದರು. ರಕ್ಷಣಾ ಕಾರ್ಯದರ್ಶಿ ಆರ್ ಬಿ ಹಾಲ್ಡೇನ್, ಗೃಹ ಕಾರ್ಯದರ್ಶಿ, ಅಡ್ಮಿರಲ್ ಜನರಲ್, ಪೋಸ್ಟ್ ಮಾಸ್ಟರ್ ಜನರಲ್, ಪೊಲಿಸ್ ಕಮಿಷನರ್, ಸೇನಾ ಕಾರ್ಯಾಚರಣೆಯ ನಿರ್ದೇಶಕ, ನೌಕಾಪಡೆಯ ಗೂಢಚರ ವಿಭಾಗದ ಮುಖ್ಯಸ್ಥ. ಆವತ್ತು ಉತ್ತರ ಕೊಡಬೇಕಾದ ಜಾಗದಲ್ಲಿ ನಿಂತಿದ್ದವನು ಜೇಮ್ಸ್ ಎಡ್ಮಂಡ್ಸ್. ಅವನು ಮಿಲಿಟರಿ ಕಾರ್ಯಾಚರಣೆಯ ಕೌಂಟರ್ ಆಪರೇಷನ್ ಮುಖ್ಯಸ್ಥ. ಅವನ ಏಕೈಕ ಗುರಿ ಬ್ರಿಟನ್ನಿನ ತುಂಬ ಹಬ್ಬಿಕೊಂಡಿರುವ ವಿದೇಶಿ ಗೂಢಚರರನ್ನು ತಡವುವುದು ಮತ್ತು ತದುಕುವುದಾಗಿತ್ತು. ಆದರೆ ಅವನು ಆ ಕೆಲಸಕ್ಕೆ ಕೈ ಹಾಕಿರಲೇ ಇಲ್ಲ. ಅದಕ್ಕೆ ಅವನ ಸೋಮಾರಿತನವೋ ನಿರ್ಲಕ್ಷ್ಯವೋ ಕಾರಣ ಅಲ್ಲ. ಅವನಿಗೆ ಮಂಜೂರಾದ ಬಜೆಟ್ಟು 200 ಪೌಂಡು. ಅವನ ಜೊತೆಗಿದ್ದವರು ಕೇವಲ ಇಬ್ಬರು ಸಹಾಯಕರು. ಇಂಥ ದೈನೇಸಿ ಸ್ಥಿತಿಯಲ್ಲಿ ಅವನು ರಕ್ಷಣಾ ಕಾರ್ಯದರ್ಶಿಯ ಮುಂದೆ ಪೆಕರು ಮುಖ ಹಾಕಿಕೊಂಡು ಕೂತಿದ್ದ. ಬ್ರಿಟನ್ ಗೂಢಚರ್ಚೆಯ ದಿಕ್ಕು ಬದಲಾಯಿಸಲು ಕಾರಣ ಆದದ್ದು ಅವನು ಆ ಸಭೆಯಲ್ಲಿ ಆಡಿದ ಮಾತು.]]>

‍ಲೇಖಕರು G

May 8, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This