ನಮ್ಮ ನಡುವೆಯೇ ಇದ್ದ ಗೂಢಚಾರರನ್ನು ನಮ್ಮವರೇ ಮುಗಿಸಿಬಿಡುತ್ತಿದ್ದರು
– ಜೋಗಿ
ಬೀರೂರು-ಕಡೂರು ಪ್ರಾಂತ್ಯದ ಹಿರಿಯರಿಗೆ ಈ ಘಟನೆ ನೆನಪಿರಬಹುದು. ಮಲೆನಾಡಿನ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಬೀರೂರು ರೇಲ್ವೆ ಜಂಕ್ಷನ್ ಕೂಡ. ಅಲ್ಲಿಂದ ತಾಳಗುಪ್ಪ, ಬೆಂಗಳೂರು, ಗುಂತಕಲ್ ಕಡೆಗೆ ಹೋಗುವ ರೇಲುಗಳು ಹಾದು ಹೋಗುತ್ತವೆ. ಕಡೂರು ತಾಲೂಕಿನ ಒಂದು ಪಟ್ಟಣವಾದರೂ ಬೀರೂರಿಗೆ ಬೇರೆಯೇ ಮರ್ಯಾದೆ.
ಅದಕ್ಕೆ ಕಾರಣ ಬ್ರಿಟಿಷರು. ಚಿಕ್ಕಮಗಳೂರಿನಿಂದ ಕಾಫಿ, ಏಲಕ್ಕಿ ಮತ್ತು ಇತರ ಸಾಂಬಾರ ಪದಾರ್ಥಗಳನ್ನು ಬೆಂಗಳೂರಿಗೆ ಸಾಗಿಸುವುದಕ್ಕೆ ಅವರು ಬೀರೂರನ್ನು ಜಂಕ್ಷನ್ ಮಾಡಿಕೊಂಡಿದ್ದರು ಎಂಬಿತ್ಯಾದಿ ಕತೆಗಳಿವೆ. ಇವತ್ತಿಗೂ ಬೀರೂರಿನ ಜನಸಂಖ್ಯೆ ಇಪ್ಪತ್ತೈದು ಸಾವಿರ ದಾಟಿಲ್ಲ. ಕಡೂರನ್ನು ಬಿಟ್ಟು ಬೀರೂರನ್ನೇ ಅವರು ಯಾಕೆ ಆರಿಸಿಕೊಂಡರು ಅನ್ನುವುದು ಇನ್ನೂ ನಿಗೂಢ.
ಕಾರಣ ಕೇಳಿದರೆ ಒಂದು ಕಾಲದಲ್ಲಿ ಬೀರೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಂಬಾರ ಪದಾರ್ಥ ಮತ್ತು ಕಾಫಿಯ ಕಳ್ಳಸಾಗಾಣಿಕೆ ನಡೆಯುತ್ತಿತ್ತು ಎಂದು ಅಲ್ಲಿಯ ಹಿರಿಯರು ಕಥೆ ಹೇಳುತ್ತಾರೆ.
ಒಂದು ವಿಚಿತ್ರವಾದ ಘಟನೆಯಂತೂ ಸುಮಾರು ಎಂಬತ್ತು ವರ್ಷಗಳ ಹಿಂದೆ ಬೀರೂರಿನಲ್ಲಿ ನಡೆದುಹೋಯಿತು ಅನ್ನುವುದನ್ನು ಅಲ್ಲಿಯ ಹಿರಿಯರು ಪಿಸುಮಾತಲ್ಲಿ ಹೇಳುತ್ತಾರೆ. ಒಂದು ಕಡೆ ಪೋರ್ಚುಗೀಸರು ಮಲಬಾರ್ ಪ್ರದೇಶದ ಮೇಲೆ ಮಾತ್ರ ಹಿಡಿತ ಉಳಿಸಿಕೊಂಡು ಕೊನೆಗೆ ಗೋವಾದಲ್ಲಿ ಮಾತ್ರ ಉಸಿರು ಹಿಡಕೊಂಡಿದ್ದ ಕಾಲದಲ್ಲಿ, ಬ್ರಿಟಿಷ್ ಸಾಮ್ರಾಜ್ಯ ಭಾರತವನ್ನು ಹೆಚ್ಚೂ ಕಡಿಮೆ ತನ್ನ ಹತೋಟಿಗೆ ತೆಗೆದುಕೊಂಡಿತ್ತು. ಕೊಡಗು, ಚಿಕ್ಕಮಗಳೂರು ಮುಂತಾದ ಪ್ರದೇಶಗಳಲ್ಲಿ ಗುಟ್ಟಾಗಿ ಪೋರ್ಚುಗೀಸರು ಸಾಂಬಾರ ಪದಾರ್ಥಗಳ ಖರೀದಿಗೆ ತೊಡಗಿದ್ದಾರೆ ಅನ್ನುವ ಗುಮಾನಿಯೂ ಬ್ರಿಟಿಷರಿಗಿತ್ತು. ಬೀರೂರಿನಲ್ಲೇ ಅವರು ಬೀಡುಬಿಟ್ಟು ಗುಟ್ಟಾಗಿ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದ್ದಂತೆ ಬ್ರಿಟಿಷರು, ಮೈಸೂರಿನ ಒಬ್ಬ ಅಧಿಕಾರಿಯನ್ನು ಗೂಢಚಾರಿಕೆ ಮಾಡುವಂತೆ ಬೀರೂರಿಗೆ ಕಳುಹಿಸುತ್ತಾರೆ. ಆ ಅಧಿಕಾರಿ ಭಿಕ್ಷುಕನ ವೇಷ ಹಾಕಿಕೊಂಡು ಬೀರೂರಿನ ರೇಲ್ವೇ ಸ್ಟೇಷನ್ನು ಮತ್ತು ಟೌನ್ ಹಾಲ್ ಕಛೇರಿಯ ಮುಂದೆ ಅಡ್ಡಾಡುತ್ತಾ ಅಲ್ಲೇನು ನಡೆಯುತ್ತಿದೆ ಅನ್ನುವ ಮಾಹಿತಿ ಸಂಗ್ರಹಿಸುತ್ತಿರುತ್ತಾನೆ. ಆ ಮಾಹಿತಿಯನ್ನು ಯಥಾವತ್ತಾಗಿ ಬ್ರಿಟಿಷರಿಗೆ ತಲುಪಿಸುತ್ತಿರುತ್ತಾನೆ.
ಈ ಕತೆಯನ್ನು ನನಗೆ ಹೇಳಿದ ಹಿರಿಯರಿಗೆ ಕಾಲದ ಪರಿವೆಯೇ ಇರಲಿಲ್ಲ. ಬೀರೂರಿನಲ್ಲಿ ಮುನ್ಸಿಪಲ್ ಕಛೇರಿ ಆರಂಭವಾದದ್ದು ಅವರ ಪ್ರಕಾರ 1912ರಲ್ಲಿ. ಆಗಿನ್ನೂ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಪೋರ್ಚುಗೀಸರು ಹೆಚ್ಚೂ ಕಡಿಮೆ ಜಾಗ ಖಾಲಿ ಮಾಡಿದ್ದರು. ಮೈಸೂರಿನಿಂದ ಬಂದಿದ್ದ ಆ ಅಧಿಕಾರಿ, ತಲೆಕೆಟ್ಟ ಭಿಕ್ಷುಕನ ಥರ ವೇಷ ಹಾಕಿಕೊಂಡು ಬೀರೂರಿನಲ್ಲಿ ಯಾರೆಲ್ಲ ಕಾಫಿ ಬೀಜ, ಏಲಕ್ಕಿ, ದಾಲ್ಚಿನಿ, ಅರಿಶಿನ, ಲವಂಗದಂಥ ಪದಾರ್ಥಗಳನ್ನು ಖರೀದಿಸುತ್ತಾರೆ. ಅದನ್ನು ಎಲ್ಲಿಗೆ ಸಾಗಾಣಿಕೆ ಮಾಡುತ್ತಾರೆ ಅನ್ನುವುದನ್ನು ಪತ್ತೆಮಾಡಿ ಬ್ರಿಟಿಷರಿಗೆ ತಲುಪಿಸುತ್ತಿದ್ದ. ಬ್ರಿಟಿಷರು ಕದ್ದುಮುಚ್ಚಿ ಪೋರ್ಚುಗೀಸರ ಜೊತೆ ವ್ಯವಹರಿಸುವ ತೋಟಗಾರರನ್ನು ಬೇರೆ ಬೇರೆ ಥರ ಮಟ್ಟ ಹಾಕುತ್ತಿದ್ದರು.
ಹಾಗೆ ಪತ್ತೇದಾರಿಕೆ ಮಾಡುವುದಕ್ಕೆ ಭಿಕ್ಷುಕನ ವೇಷದಲ್ಲಿ ಬಂದ ಅಧಿಕಾರಿಯ ಸುಳಿವು ರೈತರಿಗೆ ಹೇಗೋ ಸಿಗುತ್ತದೆ. ಅವನನ್ನು ಹೇಗಾದರೂ ಮಟ್ಟ ಹಾಕಬೇಕೆಂದು ಅವರೆಲ್ಲ ತೀರ್ಮಾನಿಸುತ್ತಾರೆ. ಬೇಕಂತಲೇ ಅವನ ದಾರಿ ತಪ್ಪಿಸುವುದಕ್ಕೆ ಸುಳ್ಳು ಸುಳ್ಳೇ ಸುಳಿವುಗಳನ್ನು ನೀಡುತ್ತಾ ಹೋಗುತ್ತಾರೆ. ಕಡೂರಿನಲ್ಲಿ ಇಂತಿಂಥಾ ದಿನ ಇಂತಿಷ್ಟು ಗಂಟೆಗೆ ಒಂದು ದೊಡ್ಡ ವ್ಯವಹಾರ ಕುದುರುತ್ತದೆ ಎಂಬ ಸುಳಿವು ನೀಡುತ್ತಾರೆ. ಆತ ಅದನ್ನು ಬ್ರಿಟಿಷ್ ಅಧಿಕಾರಿಗಳ ಗಮನಕ್ಕೆ ತರುತ್ತಾನೆ. ಅಲ್ಲಿ ಆ ದಿನ ಅಂಥದ್ದೇನೂ ನಡೆಯುವುದೇ ಇಲ್ಲ. ಕ್ರಮೇಣ ಅಧಿಕಾರಿಗಳು ಆತನ ಮೇಲೆ ನಂಬಿಕೆ ಕಳಕೊಳ್ಳುತ್ತಾರೆ. ಹೀಗೆ ವಿಚಿತ್ರವಾಗಿ ಏನೇನೋ ನಡೆಸಿದ ಮಂದಿ ಕೊನೆಗೂ ಅವನನ್ನು ಮುಗಿಸಲು ತೀರ್ಮಾನಿಸುತ್ತಾರೆ. ಅದೊಂದು ಭಯಾನಕ ಕತೆ.
ತೋಟ ಇಟ್ಟುಕೊಂಡಿರುವ ಬಿಳಿಗೌಡರೂ, ಸಾಂಬಾರು ಪದಾರ್ಥಗಳ ವ್ಯವಹಾರ ಮಾಡುವ ದಲ್ಲಾಳಿಗಳೂ ಈ ಕೆಲಸ ಮಾಡುವುದಿಲ್ಲ. ಬದಲಾಗಿ, ಬೀರೂರಿನಲ್ಲೊಬ್ಬ ಭಿಕ್ಷುಕ ಬಂದಿದ್ದಾನೆ. ಅವನು ಹುಚ್ಚನ ಥರ ವರ್ತಿಸುತ್ತಿರುತ್ತಾನೆ. ಅವನು ನಿಜಕ್ಕೂ ಭಿಕ್ಷುಕ ಅಲ್ಲ. ಮಕ್ಕಳ ಕಳ್ಳ. ಸಣ್ಣ ಕೂಸುಗಳನ್ನು ಕದ್ದುಕೊಂಡು ಹೋಗಿ, ಬ್ರಿಟಿಷರು ಕಟ್ಟುತ್ತಿರುವ ಅದ್ಯಾವುದೋ ಸೇತುವೆಗೆ ಬಲಿ ಕೊಡುವುದಕ್ಕೆ ಕೊಡುತ್ತಾನೆ ಅನ್ನುವ ಸುದ್ದಿ ಹಬ್ಬಿಸುತ್ತಾರೆ. ಈಗಾಗಲೇ ಬೀರೂರಿನ ಆಸುಪಾಸದ ಹಳ್ಳಿಗಳಾದ ತರೀಕೆರೆ, ಸೊಕ್ಕೆ, ಲಿಂಗದಹಳ್ಳಿ, ಹೊಗರೆಹಳ್ಳಿ, ಚಿಕ್ಕಪಟ್ಟಣಗೆರೆ, ಶಿವಾನಿ, ದೂರ್ವಿಗೆರೆ, ಮುಗಿಲಹಳ್ಳಿ ಮುಂತಾದ ಕಡೆ ಇವನು ಹೋಗಿ ಮಕ್ಕಳನ್ನು ಅಪಹರಿಸಿದ್ದಾನೆ ಎಂದು ಕತೆ ಕಟ್ಟುತ್ತಾರೆ. ಆ ಸೇತುವೆ ನಿಲ್ಲಬೇಕಾಗಿದ್ದರೆ ನೂರೊಂದು ಮಕ್ಕಳ ಬಲಿ ಬೇಕಂತೆ ಎಂದು ವದಂತಿ ಹಬ್ಬುತ್ತದೆ. ಬಿಕ್ಷುಕರನ್ನು ಕಂಡೊಡನೆ ಜನ ಗಾಬರಿ ಬೀಳುತ್ತಾರೆ. ಒಂದು ದಿನ ಈ ಗುಪ್ತಚರನನ್ನು ಊರ ಮಂದಿಯೆಲ್ಲ ಸೇರಿ ಮಕ್ಕಳ ಕಳ್ಳನೆಂದು ಶಂಕಿಸಿ ಹಿಡಿದು ಬಡಿದು ಕೊಲ್ಲುತ್ತಾರೆ.
ಇತಿಹಾಸದ ಪುಟಗಳಲ್ಲಿ ದಾಖಲಾಗದ ಇಂಥ ಗುಪ್ತಚರರ ಕತೆಗಳು ಹುಡುಕಿದರೆ ಸಾಕಷ್ಟು ಸಿಗುತ್ತವೆ. ಮಹಾರಾಜರ ಕಾಲದಲ್ಲಿ ಪೈಲ್ವಾನರು ಗೂಢಚಾರಿಕೆ ಮಾಡುತ್ತಿದ್ದರು. ಬ್ರಾಹ್ಮಣರು, ಅದರಲ್ಲೂ ಪುರೋಹಿತ ವೃತಿಯಲ್ಲಿ ತೊಡಗಿಕೊಂಡವರು ಬೇಹುಗಾರರೂ ಆಗಿದ್ದರು. ವಿವಿಧ ವೃತ್ತಿಗಳಲ್ಲಿ ತೊಡಗಿಕೊಂಡಿದ್ದವರನ್ನು ಮಂತ್ರಿಗಳು ಗೂಢಚರರನ್ನಾಗಿ ನೇಮಿಸಿಕೊಂಡಿದ್ದರು. ದೊಡ್ಡ ಸಾಮ್ರಾಜ್ಯವನ್ನು ಕಟ್ಟುವುದಕ್ಕೆ ಗುಪ್ತವಾಗಿ ನೆರವಾಗುತ್ತಿದ್ದ ಇವರ ಬದುಕು ದುರಂತದಲ್ಲಿ ಕೊನೆಯಾಗುತ್ತಿತ್ತು. ಉದಾಹರಣೆಗೆ ಮಹಾರಾಜರು ಕೆಲವರನ್ನು ನೇರವಾಗಿ ಗುಪ್ತಚರರನ್ನಾಗಿ ನೇಮಿಸಿಕೊಳ್ಳುತ್ತಿದ್ದರು. ತನ್ನ ಸಾಮ್ರಾಜ್ಯದಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದ ಅಧಿಕಾರಿಗಳ ರಹಸ್ಯಗಳನ್ನು ಪತ್ತೆ ಹಚ್ಚುವುದು ಅವರ ಕರ್ತವ್ಯವಾಗಿತ್ತು. ಸೇನಾಪತಿ ಏನು ಮಾಡುತ್ತಾನೆ, ಸಾಮ್ರಾಜ್ಯಶಾಹಿಯ ವಿರುದ್ಧ ಕಾರ್ಯಾಚರಣೆ ಮಾಡುತ್ತಿದ್ದಾನಾ, ಶತ್ರುಪಕ್ಷದ ಮೈತ್ರಿ ಬೆಳೆಸಿದ್ದಾನಾ ಅನ್ನುವುದನ್ನು ಪತ್ತೆಹಚ್ಚುವುದಕ್ಕೆಂದೇ ಮಹಾರಾಜರಿಂದ ನೇಮಿಸಲ್ಪಟ್ಟ ಗೂಢಚರರಿರುತ್ತಿದ್ದರು. ಸೇನಾಪತಿ, ತನ್ನ ವಿರುದ್ಧ ಉಪನೇಸಾಪತಿ ಮಸಲತ್ತು ಮಾಡುತ್ತಿದ್ದಾನಾ ಎಂದು ತಿಳಿಯುವುದಕ್ಕೆ ಗೂಢಚರರನ್ನು ನೇಮಿಸುತ್ತಿದ್ದ. ರಾಜ್ಯದಲ್ಲಿ ಏನಾಗುತ್ತಿದೆ, ಕಂದಾಯ ಅದಿಕಾರಿ ಮೋಸ ಮಾಡುತ್ತಿದ್ದಾನಾ ಎಂದು ತಿಳಿಯಲು ಮಹಾಮಂತ್ರಿ ತನ್ನದೇ ಆದ ಬೇಹುಗಾರರ ಪಡೆಯನ್ನು ಇಟ್ಟುಕೊಳ್ಳುತ್ತಿದ್ದ. ಹೀಗೆ ಒಬ್ಬರ ಚಟುವಟಿಕೆಯನ್ನು ಅರಿಯಲು ಮತ್ತೊಬ್ಬರು ರಹಸ್ಯವಾಗಿ ಗುಪ್ತಚರರನ್ನು ನೇಮಿಸಿಕೊಂಡು ಪರಸ್ಪರರ ಮೇಲೆ ಹತೋಟಿ ಸಾಧಿಸಲು ಹೆಣಗಾಡುತ್ತಿದ್ದರು.
ಇಲ್ಲೂ ಕೂಡ ರಾಜನರ್ತಕಿಯರು ಪ್ರಮುಖ ಪಾತ್ರ ವಹಿಸುತ್ತಿದ್ದರು.ಮಂತ್ರಿಯ ಮುದ್ದಿನ ಪ್ರೇಯಸಿ, ಸೇನಾಪತಿಗೂ ಅಷ್ಟೇ ಆಪ್ತಳಂತೆ ವರ್ತಿಸುತ್ತಿದ್ದಳು. ಪರಸ್ಪರರ ರಹಸ್ಯಗಳನ್ನು ಪತ್ತೆ ಹಚ್ಚುವುದಾಗಿ ಹೇಳಿ ಇಬ್ಬರಿಂದಲೂ ಸಾಕಷ್ಟು ದೋಚುತ್ತಿದ್ದ ರಾಜನರ್ತಕಿಯರು ಅಂತಿಮವಾಗಿ ಕೊಲೆಯಾಗಿ ಹೋಗುತ್ತಿದ್ದರು. ಅಥವಾ ತಮ್ಮ ವೃತ್ತಿಯ ಮೇಲೇ ಜಿಗುಪ್ಸೆ ಬಂದು, ತಾವು ಸಂಪಾದಿಸಿದ್ದೆಲ್ಲವನ್ನೂ ಜನರ ಒಳಿತಿಗಾಗಿ ಬಳಸುತ್ತಿದ್ದರು. ಹೀಗೆ ಸಂಪಾದಿಸಿದ ಹಣದಿಂದ ಕೆರೆಕಟ್ಟೆ ಕಟ್ಟಿಸಿದವರೂ ಇದ್ದಾರೆ. ಚೆನ್ನಗಿರಿಯ ಸಮೀಪ ಇರುವ ಸೂಳೆಕೆರೆಯನ್ನು ಕಟ್ಟಿಸಿದ ರಾಜನರ್ತಕಿಯೂ ಆಗಿದ್ದ ವೇಶ್ಯೆಯೊಬ್ಬಳು ಕಟ್ಟಿಸಿದ್ದು ಬಹುಶಃ ಇಂಥದ್ದೇ ವೈರಾಗ್ಯದಿಂದ ಇರಬಹುದು.
ನಮ್ಮ ದೇಶದ, ನಮ್ಮ ನಾಡಿನ ಗೂಢಚಾರರ ಬಗ್ಗೆ ಹೇಳುತ್ತಾ ಹೋದರೆ ಅದೇ ಒಂದು ಪ್ರತ್ಯೇಕ ಪ್ರಸಂಗವೇ ಆಗುತ್ತದೆ. ಚಿಕ್ಕಮಗಳೂರಿನಿಂದ ಕೊಟ್ಟಿಗೆಹಾರದ ಹಾದಿಯಾಗಿ ಉಜಿರೆಯನ್ನು ಸೇರುವುದಕ್ಕಿರುವ ಹಾದಿಯಲ್ಲಿ ಚಾರ್ಮಾಡಿ ಘಾಟಿ ಸಿಗುತ್ತದೆ. ನಾಲ್ಕು ಗಿರಿಶೃಂಗಗಳು ಇರುವ ಕಾರಣ ಇದನ್ನು ಚಾರ್ಮುಡಿ ಅನ್ನುವವರಿದ್ದಾರೆ. ನಾಲ್ಕು ಪವಿತ್ರ ಕ್ಷೇತ್ರಗಳು ಈ ಘಾಟಿಯ ಆಸುಪಾಸಲ್ಲಿ ಇರುವುದರಿಂದ ಅದನ್ನು ಚಾರುಮುಡಿ ಅಂತಲೂ ಕರೆಯುತ್ತಾರೆ.
ಈ ಘಾಟಿರಸ್ತೆ ನಿರ್ಮಾಣವಾದ ಕತೆಯ ಹಿಂದೆಯೂ ಒಬ್ಬ ಗೂಢಚಾರನ ಕತೆಯಿದೆ. ಚಿಕ್ಕಮಗಳೂರಿನಿಂದ ಮಂಗಳೂರಿನ ಸರ್ವಋತು ಬಂದರಿಗೆ ಸಾಂಬಾರು ಪದಾರ್ಥಗಳನ್ನು ಸಾಗಣೆ ಮಾಡುವುದಕ್ಕೆ ಅಡ್ಡಿಯಾದದ್ದು ಚಾರ್ಮಾಡಿ ಘಾಟಿ. ಆಗಿನ್ನೂ ಅಲ್ಲಿ ರಸ್ತೆ ಇರಲಿಲ್ಲ. ಸಾಂಬಾರ ಪದಾರ್ಥಗಳನ್ನು ಒಂದೋ ಹೊತ್ತು ಸಾಗಿಸಬೇಕಾಗಿತ್ತು. ಘಾಟಿಯಿಂದ ಮಂಗಳೂರಿಗೆ ಹಾದು ಬರುವುದಕ್ಕೆ ಸರಿಯಾದ ರಸ್ತೆಯೇ ಇರಲಿಲ್ಲ. ಅಂಥ ಹೊತ್ತಲ್ಲಿ ಗೂಢಚರನೊಬ್ಬ ಕೇವಲ ಎರಡೇ ಗಂಟೆಯಲ್ಲಿ ಘಾಟಿ ಇಳಿದು ಬರುವುದನ್ನು ನೋಡಿದ ಬ್ರಿಟಿಷ್ ಅಧಿಕಾರಿ ಅವನ ಹತ್ತಿರ ರಸ್ತೆಯ ವಿವರ ಕೇಳುತ್ತಾನೆ. ಆ ಗೂಢಚರ, ನಿಗೂಢವಾದ ಚಾರ್ಮಾಡಿ ಘಾಟಿಯ ಒಳರಸ್ತೆಗಳ ವಿವರಗಳನ್ನು ಕೊಡುತ್ತಾನೆ. ರಸ್ತೆ ನಿರ್ಮಿಸಲು ಅನುಕೂಲಕರವಾದ ಪ್ರದೇಶ ಅದು ಎಂದು ತೀರ್ಮಾನಿಸುವ ಬ್ರಿಟಿಷ್ ಅಧಿಕಾರಿ, ಆ ಮಾಹಿತಿ ಕೊಟ್ಟ ಗೂಢಚರನನ್ನು ಕೊಲ್ಲಿಸುತ್ತಾನೆ. ಮತ್ತೊಂದು ಕತೆಯ ಪ್ರಕಾರ ಅವನ ಕಣ್ಣು ಕೀಳಿಸುತ್ತಾನೆ. ಆ ರಸ್ತೆಯನ್ನು ತಾನೇ ಕಂಡುಹಿಡಿದೆ ಎಂದು ಹೇಳಿ ಸರ್ಕಾರದಿಂದ ಕೈತುಂಬ ಭಕ್ಷೀಸು ಪಡೆಯುತ್ತಾನೆ. ನಂತರ ರಸ್ತೆ ನಿರ್ಮಾಣವಾಗುತ್ತದೆ.
ಈ ಕತೆಯ ಸತ್ಯಾಸತ್ಯತೆಯನ್ನು ಪ್ರಶ್ನಿಸುವಂತಿಲ್ಲ. ಆದರೆ ತುಂಬ ಜನಜನಿತವಲ್ಲದ ಈ ಕತೆಯನ್ನು ಮುಂಡಾಜೆ, ಕಕ್ಕಿಂಜೆ , ಕೊಟ್ಟಿಗೆಹಾರದ ಹಿರಿಯರು ಹೇಳುತ್ತಾರೆ.
ಇವೆಲ್ಲದರ ಮಧ್ಯೆ ನಾವು ಗೂಢಚರ ವೃತ್ತಿಗೊಂದು ವಿಚಿತ್ರ ರೋಚಕತೆ ಕೊಟ್ಟ ಲೆ ಕ್ಯೂನನ್ನು ಮರೆಯುವಂತಿಲ್ಲ. ಗೂಢಚರ ಕಾದಂಬರಿಗಳ ಜನಕ ಅವನು ಎನ್ನಬಹುದು. ಗೂಢಚಾರಿಕೆ ಆರಂಭವಾಗುವ ಮೊದಲೇ ಅವನು ಅನೇಕ ಬೇಹುಗಾರಿಕಾ ಕಾದಂಬರಿಗಳನ್ನು ಬರೆದಿದ್ದ.
ಅವನ ವಿಚಿತ್ರ ಬದುಕು, ಸಾಹಸ ಮತ್ತು ಪ್ರಣಯದ ಕತೆ ಮುಂದಿನ ವಾರ.]]>
'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...
3 ಪ್ರತಿಕ್ರಿಯೆಗಳು
Murali Krishna Maddikeri
on May 21, 2012 at 11:36 AM
ರೋಚಕ ಕಥಾನಕ.. ಕುತೂಹಲಕಾರಿಯಾದ ಸಂಗತಿಗಳು.. ಬೇಹುಗಾರಿಕೆಯ ಹೊಸದೊಂದು ಲೋಕವನ್ನೇ ತೆರೆದಿಟ್ಟಿದೆ ಇದು.. ಮೊದಲ ವಾಕ್ಯದಿಂದ ಕೊನೆಯ ವಾಕ್ಯದವರೆಗೆ ಪ್ರತಿ ಸಾಲೂ ಕುತೂಹಲ ಕೆರಳಿಸಿಕೊಂಡು ಸಾಗುತ್ತದೆ.. ನಮ್ಮ ನಡುವೆಯೂ ಗೂಢಾಚಾರರಿರುತ್ತಾರೆ.. ಒಂದು ಕಚೇರಿಯಲ್ಲೋ ಒಂದು ಕೂಡು ಕುಟುಂಬದಲ್ಲೂ ಇವರ ಹಾವಳಿ ಇರುತ್ತದೆ.. ಮೊನ್ನೆ ಬಳ್ಳಾರಿಯ ಜನಾರ್ಧನ ರೆಡ್ಡಿಯ ಬಂಧನವೂ ಹೀಗೆ ಆಗಿದ್ದು ಅಲ್ಲವೇ? ಗುಪ್ತಚರರು ಯಾವುದ್ಯಾವುದೋ ರೂಪದಲ್ಲಿ ನಮ್ಮ ಸುತ್ತಮುತ್ತಲಿರುತ್ತಾರೆ.. ಅದಕ್ಕೆ ಏನೋ ‘ಗೋಡೆಗಳಿಗೂ ಕಿವಿಗಳಿವೆ’ ಎನ್ನುವ ನುಡಿಗಟ್ಟು ಹುಟ್ಟಿಕೊಂಡಿರಬೇಕು.. ಧನ್ಯವಾದ ಗಿರೀಶ್ ರಾವ್ ಸರ್.. ಮತ್ತು ಅವಧಿ..
ರೋಚಕ ಕಥಾನಕ.. ಕುತೂಹಲಕಾರಿಯಾದ ಸಂಗತಿಗಳು.. ಬೇಹುಗಾರಿಕೆಯ ಹೊಸದೊಂದು ಲೋಕವನ್ನೇ ತೆರೆದಿಟ್ಟಿದೆ ಇದು.. ಮೊದಲ ವಾಕ್ಯದಿಂದ ಕೊನೆಯ ವಾಕ್ಯದವರೆಗೆ ಪ್ರತಿ ಸಾಲೂ ಕುತೂಹಲ ಕೆರಳಿಸಿಕೊಂಡು ಸಾಗುತ್ತದೆ.. ನಮ್ಮ ನಡುವೆಯೂ ಗೂಢಾಚಾರರಿರುತ್ತಾರೆ.. ಒಂದು ಕಚೇರಿಯಲ್ಲೋ ಒಂದು ಕೂಡು ಕುಟುಂಬದಲ್ಲೂ ಇವರ ಹಾವಳಿ ಇರುತ್ತದೆ.. ಮೊನ್ನೆ ಬಳ್ಳಾರಿಯ ಜನಾರ್ಧನ ರೆಡ್ಡಿಯ ಬಂಧನವೂ ಹೀಗೆ ಆಗಿದ್ದು ಅಲ್ಲವೇ? ಗುಪ್ತಚರರು ಯಾವುದ್ಯಾವುದೋ ರೂಪದಲ್ಲಿ ನಮ್ಮ ಸುತ್ತಮುತ್ತಲಿರುತ್ತಾರೆ.. ಅದಕ್ಕೆ ಏನೋ ‘ಗೋಡೆಗಳಿಗೂ ಕಿವಿಗಳಿವೆ’ ಎನ್ನುವ ನುಡಿಗಟ್ಟು ಹುಟ್ಟಿಕೊಂಡಿರಬೇಕು.. ಧನ್ಯವಾದ ಗಿರೀಶ್ ರಾವ್ ಸರ್.. ಮತ್ತು ಅವಧಿ..
Preetiya Jogi,
yaava subject aagali, eshtu kutuhala huttisuvante bareyutteeri..!
Naanu nimma baravaNigegaLa khaayam abhimaani aagibittiddene..
wonderfulll…..kaayuve…naa mundina kathege