ಜೋಗಿ ಸೀಕ್ರೆಟ್ ಡೈರಿ : ಪತ್ತೇದಾರನ ವೈರಾಗ್ಯ

ಪತ್ತೇದಾರನ ವೈರಾಗ್ಯ ಇಂಗ್ಲೆಂಡಿನಲ್ಲಿ ಹನ್ನೆರಡು ವರ್ಷಗಳಿಂದ ಕ್ಷೌರಿಕ ವೃತ್ತಿ ಮಾಡುತ್ತಿದ್ದ ಅವನ ಹೆಸರು ಹೆನ್ರಿ. ಅವನ ಕ್ಷೌರದಂಗಡಿಯ ಹೆಸರು ಬೆಕ್. ಅದು ಜರ್ಮನ್ ಹೆಸರು. ಸಿಕ್ಕಾಪಟ್ಟೆ ಮಾತಾಡುತ್ತಿದ್ದ ಹೆನ್ನಿ ತನ್ನ ಅಂಗಡಿಗೆ ಕ್ಷೌರಕ್ಕೆ ಬರುವವರ ಇತ್ಯೋಪರಿ ವಿಚಾರಿಸುತ್ತಿದ್ದ. ತುಂಬ ಓದಿಕೊಂಡಿದ್ದ. ವಿದ್ಯಾವಂತನೂ ಆಗಿದ್ದ. ಹೀಗಾಗಿ ಯಾರ ಜೊತೆ ಹೇಗೆ ಮಾತಾಡಬೇಕು ಅನ್ನುವುದು ಅವನಿಗೆ ಗೊತ್ತಿತ್ತು. ತುಂಬ ಅಚ್ಚುಕಟ್ಟಾಗಿ ಕ್ಷೌರ ಮಾಡುತ್ತಾನೆ ಅನ್ನುವ ಕಾರಣಕ್ಕೆ ಅವನ ಅಂಗಡಿಗೆ ಅನೇಕ ವಿದೇಶೀಯರೂ ಬರುತ್ತಿದ್ದರು.ಹೀಗಾಗಿ ಅವನೂ ನಾಲ್ಕೈದು ಭಾಷೆಗಳನ್ನು ಕಲಿತಿದ್ದ. ಅವನ ಅಂಗಡಿಯಲ್ಲಿ ಶ್ವೈಗರ್ ಎಂಬ ಜರ್ಮನ್ ಹುಡುಗನೊಬ್ಬ ಕೆಲಸ ಮಾಡುತ್ತಿದ್ದ. ಅನುಮಾನಾಸ್ಪದವಾಗಿ ನಡಕೊಳ್ಳುತ್ತಿದ್ದ ಶ್ವೈಗರ್ ಬಗ್ಗೆ ಅನೇಕರಿಗೆ ಅನುಮಾನಗಳಿದ್ದವು. ಅಂಗಡಿಗೆ ಬರುವ ಗಿರಾಕಿಗಳ ಹೆಸರು, ಕುಲ, ಗೋತ್ರಗಳನ್ನೆಲ್ಲ ಅವನು ಬರೆದಿಟ್ಟುಕೊಳ್ಳುತ್ತಿದ್ದ. ಅನೇಕರ ಫೋನ್ ನಂಬರ್ ತೆಗೆದುಕೊಳ್ಳುತ್ತಿದ್ದ. ಉದ್ದುದ್ದ ಕೂದಲು ಬಿಟ್ಟುಕೊಂಡು ವಿಚಿತ್ರವಾಗಿ ಕಾಣಿಸುತ್ತಿದ್ದ ಶ್ವೈಗರ್ ಅತ್ಯಂತ ವಿನಯವಂತನಂತೆ ನಟಿಸುತ್ತಿದ್ದ. ಹೆನ್ರಿಯ ಅಂಗಡಿಗೆ ಸದಾ ಬರುತ್ತಿದ್ದ ಬ್ರಿಟಿಷ್ ಇಂಟೆಲಿಜೆನ್ಸ್ ಅಧಿಕಾರಿ ಸಿಮಾಂಡ್ಸ್ ಎಂಬಾತನಿಗೆ ಹೆನ್ರಿಯ ಮೇಲೆ ಅನುಮಾನವಿತ್ತು. ಲೇ ಕ್ಯೂ ಬರೆದ ಕಾದಂಬರಿಯೊಂದನ್ನು ಮತ್ತೆ ಮತ್ತೆ ಓದಿದ್ದ ಅವನಿಗೆ, ಹೆನ್ರಿ ಮತ್ತು ಶ್ವೈಗರ್ ಬೇಹುಗಾರರೆಂಬ ಗುಮಾನಿಯಿತ್ತು. ಅದಕ್ಕೆ ಸರಿಯಾಗಿ ಒಮ್ಮೆ ಸಿಮಂಡ್ ಹೆನ್ರಿಯ ಕ್ಷೌರದಂಗಡಿಗೆ ಕಾಲಿಡುವ ಹೊತ್ತಿಗೆ ಶ್ವೈಗರ್ ತನ್ನ ಉದ್ದ ಕೂದಲ ವಿಗ್ ತೆಗೆದಿಟ್ಟು, ತಲೆ ತೊಳೆದುಕೊಳ್ಳುತ್ತಿದ್ದ. ಸಿಮಂಡ್ಸ್ಗೆ ಅವನು ಗೂಢಚಾರ ಎನ್ನುವುದರಲ್ಲಿ ಯಾವ ಅನುಮಾನವೂ ಉಳಿಯಲಿಲ್ಲ. ವಿಗ್ ಹಾಕಿಕೊಂಡು ತನ್ನ ರೂಪ ಮರೆಮಾಚಿಕೊಂಡು ಶ್ವೈಗರ್ ಬೇಹುಗಾರಿಕೆ ಮಾಡುತ್ತಿದ್ದಾನೆ ಅನ್ನುವುದು ಅವನ ಮನಸ್ಸಿನಲ್ಲಿ ನಿಂತುಹೋಯ್ತು. ಆದರೆ ಹೆನ್ರಿ ಮತ್ತು ಶ್ವೈಗರ್ ಬೇಹುಗಾರರಾಗಿರಲಿಲ್ಲ. ಲೇ ಕ್ಯೂ ಕಾದಂಬರಿಯೊಂದರಲ್ಲಿ ಇಂಗ್ಲೆಂಡಿನ ಪ್ರಮುಖ ರಸ್ತೆಯೊಂದರಲ್ಲಿ ಜರ್ಮನ್ ಗೂಢಚಾರನೊಬ್ಬ ಕ್ಷೌರದಂಗಡಿ ಇಟ್ಟುಕೊಂಡು ಇಂಗ್ಲೆಂಡಿನ ಮಾಹಿತಿಗಳನ್ನೆಲ್ಲ ಜರ್ಮನಿಗೆ ಕಳಿಸಿಕೊಡುವ ಪ್ರಸಂಗ ಇತ್ತು. ಅದು ಕೇವಲ ಕಾಲ್ಪನಿಕ ಅಂದುಕೊಂಡಿದ್ದ ಸಿಮಂಡ್ಸ್ ಕಣ್ಣಿಗೆ, ಆ ಪಾತ್ರಧಾರಿ ಕಾಣಿಸಿಕೊಂಡು ಬಿಟ್ಟಿದ್ದ. ಆವತ್ತಿನಿಂದ ಸಿಮಂಡ್ಸ್ ಅವನ ಬೆನ್ನು ಹತ್ತಿದ. ಪದೇ ಪದೇ, ಬೇರೆ ಬೇರೆ ರೂಪಾಂತರಗಳಲ್ಲಿ ವೇಷಾಂತರಗಳಲ್ಲಿ ಅವನ ಅಂಗಡಿಯ ಬಳಿ ಎಡತಾಕತೊಡಗಿದ. ಅವನ ಅಂಗಡಿಗೆ ಬಂದು ಹೋಗುವ ಗಿರಾಕಿಗಳನ್ನು ಹಿಂಬಾಲಿಸಲು ಶುರು ಮಾಡಿದ. ಸಿಮಂಡ್ಸ್ ಹೀಗೆ ಪತ್ತೇದಾರಿಕೆ ಶುರುಮಾಡಿ, ಗಿರಾಕಿಗಳನ್ನೆಲ್ಲ ಹಿಂಬಾಲಿಸಿಕೊಂಡು ಹೋಗಿ, ಅವರ ಇತ್ಯೋಪರಿಗಳನ್ನೆಲ್ಲ ಪತ್ತೆ ಮಾಡುತ್ತಿದ್ದಾಗ ಅವನಿಗೆ ವಿಚಿತ್ರ ಸತ್ಯಗಳು ಕಣ್ಣಿಗೆ ಬಿದ್ದವು. ಸಿಮಂಡ್ಸ್ ತುಂಬ ಸಭ್ಯ ಅಂದುಕೊಂಡಿದ್ದವರೆಲ್ಲ ಒಳಗೊಳಗೇ ಭ್ರಷ್ಟರೂ ಲಜ್ಜೆಗೇಡಿಗಳೂ ಆಗಿದ್ದರು. ಸಿಮಂಡ್ಸ್ ತುಂಬ ಗೌರವಿಸುತ್ತಿದ್ದ ಅಧಿಕಾರಿಯೊಬ್ಬ ರಹಸ್ಯವಾಗಿ ತನ್ನ ಸಹೋದ್ಯೋಗಿಯ ಜತೆ ಸಲಿಂಗ ಸಂಬಂಧ ಇಟ್ಟುಕೊಂಡಿದ್ದ. ಅವನ ಹೆಂಡತಿಗೆ ಜರ್ಮನ್ ಸೈನಿಕನೊಬ್ಬನ ಸಂಪರ್ಕವಿತ್ತು. ತಾಯಿ ಮತ್ತು ಮಗಳೂ ಒಬ್ಬನ ಜೊತೆಗೇ ಸುಖಿಸುತ್ತಿದ್ದರು. ಎಪ್ಪತ್ತು ದಾಟಿದ ನಿವೃತ್ತ ಅಧಿಕಾರಿಯೊಬ್ಬ ರಷ್ಯನ್ ತರುಣಿಯೊಂದಿಗೆ ಮಲಗುತ್ತಿದ್ದ. ಅವಳು ಕೇಳಿದ್ದನ್ನೆಲ್ಲ ಕೊಡುತ್ತಿದ್ದ. ಅವಳ ಗಂಡನಿಗೂ ಇದು ಗೊತ್ತಿತ್ತು. ಇಂಗ್ಲೆಂಡಿನಲ್ಲಿ ಟ್ರಾವೆಲ್ ಏಜನ್ಸಿ ಇಟ್ಟುಕೊಂಡಿದ್ದ ಅವರಿಗೆ ಯಾವ ಮಾಹಿತಿಯನ್ನಾದರೂ ಒದಗಿಸಲು ಆ ನಿವೃತ್ತ ಅಧಿಕಾರಿ ಸಿದ್ಧನಾಗಿದ್ದ. ಇದನ್ನೆಲ್ಲ ನೋಡುತ್ತಿದ್ದಂತೆ ಅವನಿಗೆ ಇಡೀ ವ್ಯವಸ್ಥೆಯ ಬಗ್ಗೆಯೇ ರೇಜಿಗೆ ಬಂದು ಹೋಯ್ತು. ಇಲ್ಲಿ ಪ್ರಾಮಾಣಿಕವಾಗಿ ಬೇಹುಗಾರಿಕೆ ಮಾಡುವುದು ಅಸಾಧ್ಯ ಅನ್ನುವುದು ಅರಿವಾಯಿತು. ಹೆಣ್ಣು, ಹಣ ಮತ್ತು ಕ್ಷಣಿಕ ಸುಖದ ಆಸೆಗೆ ದೊಡ್ಡ ದೊಡ್ಡ ಅಧಿಕಾರಿಗಳು ಕೂಡ ತಮ್ಮ ಸ್ವಂತಿಕೆ, ಘನತೆ ಎಲ್ಲವನ್ನೂ ಕಳಕೊಂಡು ಪಡಪೋಶಿಗಳ ಹಾಗೆ ವತರ್ಿಸುವುದನ್ನು ನೋಡಿದ ಅವನಿಗೆ ತನ್ನ ಉತ್ಸಾಹವೆಲ್ಲ ಇಂಗಿಹೋಗಿ ಒಂಥರದ ವೈರಾಗ್ಯ ಆವರಿಸಿಕೊಂಡಿತು. ಈ ಮಧ್ಯೆ ಆ ಕ್ಷೌರಿಕನ ಬದುಕು ಬರಬಾದ್ ಆಗಿಹೋಯ್ತು. ಸಿಮಂಡ್ಸ್ ರೂಪಾಂತರ ಮಾಡಿಕೊಂಡು ಅವನ ಅಂಗಡಿಯ ಬಳಿ ಸುಳಿಯುತ್ತಿರುವುದನ್ನು ಜರ್ಮನ್ ಗೂಢಚಾರರು ಕಂಡುಹಿಡಿದರು. ಅವರಿಗೆ ಹೆನ್ರಿ ಬ್ರಿಟಿಷ್ ಗೂಢಚಾರ ಸಂಸ್ಥೆಯ ಮಾಹಿತಿದಾರ ಎನ್ನುವುದು ಖಚಿತವಾಯಿತು. ತನ್ನಲ್ಲಿಗೆ ಬರುವ ಜರ್ಮನ್ ಗಿರಾಕಿಗಳಿಂದ ಮಾಹಿತಿ ಸಂಗ್ರಹಿಸಿ ಅದನ್ನು ಅವನು ಬ್ರಿಟಿಷರಿಗೆ ಒಪ್ಪಿಸುತ್ತಿದ್ದಾನೆ ಎಂಬ ತೀಮರ್ಾನಕ್ಕೆ ಬಂದ ಅವರು, ಹೆನ್ರಿಯನ್ನು ದೇಶದ್ರೋಹಿ ಎಂದು ಪರಿಗಣಿಸಿದರು. ಒಂದು ರಾತ್ರಿ ಅವನು ಅಂಗಡಿ ಮುಚ್ಚಿ ಮನೆಗೆ ಮರಳುತ್ತಿರುವಾಗ ಅವನನ್ನು ಅನಾಮತ್ತಾಗಿ ಎತ್ತಿಕೊಂಡು ಹೋಗಿ ಬಾಯಿಬಿಡಿಸಲು ಯತ್ನಿಸಿದರು. ಮಹಾ ವಾಚಾಳಿಯಾಗಿದ್ದ, ಅವನಿಗೆ ಇದ್ಯಾವುದರ ಪರಿವೆಯೂ ಇರಲಿಲ್ಲ. ಅವರಿಂದ ಚಿತ್ರಹಿಂಸೆಗೆ ಒಳಗಾಗಿ ತಾನು ಗೂಢಚಾರ ಅಲ್ಲ ಎಂದು ಸಾಬೀತುಪಡಿಸಿಕೊಂಡು ಮರಳಿ ಬರುವುದಕ್ಕೆ ಅವನಿಗೆ ಸಾಕುಬೇಕಾಯಿತು. ಈ ಮಧ್ಯೆ ಎಡ್ಮಂಡ್ ಕೂಡ ಗುಟ್ಟಾಗಿ ಹೆನ್ರಿಯ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದ. ಅವನು ಇದ್ದಕ್ಕಿದ್ದಂತೆ ಮಾಯವಾದದ್ದು, ಜರ್ಮನ್ ಬೇಹುಗಾರರು ಅವನನ್ನು ಕರೆದುಕೊಂಡು ಹೋದದ್ದು ಎಡ್ಮಂಡ್ಗೆ ಗೊತ್ತಾಯಿತು. ಹೆನ್ರಿ ಮರಳುವುದಕ್ಕಾಗಿ ಎಡ್ಮಂಡ್ ಕಾಯುತ್ತಿದ್ದ. ಜರ್ಮನ್ ಬೇಹುಗಾರರಿಂದ ಪಡಬಾರದ ಪಾಡು ಪಟ್ಟು ಅಂಗಡಿಗೆ ಮರಳುತ್ತಿದ್ದಂತೆ ಎಡ್ಮಂಡ್ ಕಡೆಯವರು ಅವನ ಮೇಲೆ ಮುಗಿಬಿದ್ದು ನಿಗೂಢ ಜಾಗಕ್ಕೆ ಅವನನ್ನು ಕರೆದುಕೊಂಡು ಹೋದರು. ಜರ್ಮನ್ ಬೇಹುಗಾರರು ಅವನಿಗೆ ಏನು ಮಾಡಿದರೋ ಅದನ್ನೆಲ್ಲ ಇವರೂ ಮಾಡಿದರು. ತಮ್ಮ ದೇಶದಲ್ಲಿದ್ದುಕೊಂಡೇ ಬೇಹುಗಾರಿಕೆ ಮಾಡುತ್ತಿದ್ದಾನೆ ಅನ್ನುವ ಸಿಟ್ಟಿನಿಂದ ಮತ್ತಷ್ಟು ಹಿಂಸೆ ಕೊಟ್ಟರು. ಕೊನೆಗೂ ಅವನು ನಿರಪರಾಧಿ ಎಂದು ಖಚಿತ ಮಾಡಿಕೊಂಡು ವಾಪಸ್ ಕಳಿಸಕೊಟ್ಟರು. ಹೆನ್ರಿ ಅಂಗಡಿಗೆ ಬರುವ ಹೊತ್ತಿಗೆ ಶ್ವೈಗರ್, ಅವನ ಹೆಂಡತಿಯ ಜೊತೆ ಓಡಿ ಹೋಗಿದ್ದ. ಅಂಗಡಿಯನ್ನು ಜರ್ಮನ್ ಮತ್ತು ಬ್ರಿಟಿಷ್ ಬೇಹುಗಾರರು ಅಮೂಲ್ಯ ದಾಖಲೆಗಳಿಗಾಗಿ ತಡಕಾಡಿ ಅಲ್ಲಿದ್ದ ಕನ್ನಡಿಗಳನ್ನೆಲ್ಲ ಒಡೆದುಹಾಕಿ, ಅದರ ಅಂದಗೆಡಿಸಿದ್ದರು. ಮತ್ತೆ ಅದನ್ನೆಲ್ಲ ರಿಪೇರಿ ಮಾಡಿಸಿ ಅಂಗಡಿ ಶುರುಮಾಡುವ ಉತ್ಸಾಹ ಅವನಲ್ಲಿ ಉಳಿದಿರಲಿಲ್ಲ. ಒಂದು ವೇಳೆ ಮತ್ತೆ ಅಂಗಡಿ ಶುರು ಮಾಡಿದರೂ ಗಿರಾಕಿಗಳು ಬರುತ್ತಾರೆಂಬ ಖಾತ್ರಿಯಿರಲಿಲ್ಲ. ಹೆನ್ರಿಗೆ ಅಂಗಡಿಗೆ ಹೋಗುವವರ ಮೇಲೆ ಬ್ರಿಟಿಷ್ ಬೇಹುಗಾರರೂ ಜರ್ಮನ್ ಗೂಢಚಾರರೂ ಕಣ್ಣಿಟ್ಟಿದ್ದಾರೆ ಎಂದು ಆಗಲೇ ಸುದ್ದಿಯಾಗಿತ್ತು. ಅವನು ಬೇರೆ ದಾರಿ ಕಾಣದೇ ಅಂಗಡಿ ಮುಚ್ಚಿಕೊಂಡು ಎಲ್ಲಿಗೋ ಹೊರಟು ಹೋದ. ಈ ಮಧ್ಯೆ ಲಾಭವಾದದ್ದು ಶ್ವೈಗರ್ಗೆ. ಅವನು ಅಂಗಡಿಯಲ್ಲಿದ್ದಾಗ ಅಲ್ಲಿಗೆ ಬರುತ್ತಿದ್ದ ಗಿರಾಕಿಗಳ ಫೋನ್ ನಂಬರ್,ವಿಳಾಸಗಳನ್ನು ಬರೆದಿಟ್ಟುಕೊಂಡದ್ದು ಈಗ ಅನುಕೂಲಕ್ಕೆ ಒದಗಿತು. ಅವನು ಅದನ್ನೆಲ್ಲ ಇಟ್ಟುಕೊಂಡು ಹೊಸ ಕ್ಷೌರದಂಗಡಿ ತೆರೆದ. ಇಲ್ಲಿನ ಗಿರಾಕಿಗಳನ್ನು ಅಲ್ಲಿಗೆ ಆಹ್ವಾನಿಸಿದ. ಹೆನ್ರಿಯ ಹೆಂಡತಿಯೂ ಅವನೂ ಸೇರಿಕೊಂಡು ಹೊಸ ಜೀವನ ಶುರು ಮಾಡಿದರು. ಈ ಒಟ್ಟೂ ಪ್ರಸಂಗದಲ್ಲಿ ಹೆನ್ರಿ ಸರ್ವನಾಶ ಆದ. ಸಿಮಂಡ್ಸ್ ವೈರಾಗ್ಯ ಹೊಂದಿ ತನ್ನ ಕೆಲಸಕ್ಕೇ ರಾಜೀನಾಮೆ ಕೊಟ್ಟು, ಒಂದು ಪತ್ರಿಕೆ ಸೇರಿಕೊಂಡ. ******* ಈ ಮಧ್ಯೆ ಲೇ ಕ್ಯೂ ಬರೆದ ಪುಸ್ತಕಗಳನ್ನು ಓದಿ ತಲೆಕೆಡಿಸಿಕೊಂಡ ಎಡ್ಮಂಡ್ ಅದರ ಸತ್ಯಾಸತ್ಯತೆಯನ್ನು ತಿಳಿಯಲೇಬೇಕೆಂದು ಪಣತೊಟ್ಟು ಮತ್ತೊಂದು ಥರ ಬೇಸ್ತುಬಿದ್ದ. ಮೊದಲೇ ಎಡ್ಮಂಡ್ ಕ್ಸೆನೋಫೋಬಿಯಾದಿಂದ ನರಳುತ್ತಿದ್ದ. ಅವನಿಗೆ ಅಪರಿಚಿತರನ್ನೂ ವಿದೇಶಿಯರನ್ನೂ ಕಂಡರೆ ವಿಪರೀತ ಭಯವಾಗುತ್ತಿತ್ತು. ದಾರಿಯಲ್ಲಿ ಯಾವುದೇ ಅಪರಿಚಿತ ಕಂಡರೂ ಅವನೊಬ್ಬ ಬೇಹುಗಾರನೇ ಇರಬೇಕು ಎಂದು ಭಾವಿಸುತ್ತಿದ್ದ. ಲೇ ಕ್ಯೂ ಪಾತ್ರಗಳೆಲ್ಲವೂ ಅಂಥದ್ದೇ ಗುಮಾನಿಯಿಂದ ಕೂಡಿದ್ದಾಗಿದ್ದವು. ಹೀಗಾಗಿ ಅವೆಲ್ಲ ಸತ್ಯ ಎಂದು ಎಡ್ಮಂಡ್ ಭಾವಿಸುತ್ತಾ ಹೋದ. ಎಡ್ಮಂಡ್ ಅಂಥ ವಿದೇಶಿ ಪ್ರಜೆಗಳ ಹೆಸರುಗಳನ್ನು ಮುಂದಿಟ್ಟುಕೊಂಡು ಅವರ ಬೆನ್ನುಹತ್ತಿದ. ಅವರ ಪೈಕಿ ಒಬ್ಬರೂ ಗೂಢಚಾರರಾಗಿರಲೇ ಇಲ್ಲ. ಆದರೆ ಎಡ್ಮಂಡ್ ಮನಸ್ಸು ಹೇಗೆ ಕೆಲಸ ಮಾಡುತ್ತಿತ್ತು ಅಂದರೆ, ಗೂಢಚಾರಿಕೆ ಮಾಡುತ್ತಿದ್ದಾರೆ ಎಂಬ ಸಣ್ಣ ಸುಳಿವು ಸಿಕ್ಕರೂ ಅವರನ್ನು ಬಡಿದು ಹಾಕಲು ಅವನು ಸಿದ್ಧನಾಗಿದ್ದ. ಎಡ್ಮಂಡ್ ಪಟ್ಟಿಯಲ್ಲಿದ್ದವರು ಸಾಮಾನ್ಯರೇನೂ ಆಗಿರಲಿಲ್ಲ. ಕರ್ನಲ್ ಗಿಬ್ಸನ್ ಎಂಬಾತ ಗೂಢಚಾರನೇ ಇರಬೇಕು ಎಂದು ಎಡ್ಮಂಡ್ ಗೆಳೆಯನೊಬ್ಬ ಹೇಳಿದ್ದನ್ನು ನಂಬಿ ಕೆಲ ಕಾಲ ಅವನ ಹಿಂದೆ ಬಿದ್ದ. ಅವನೂ ವಿದೇಶೀಯನೇ ಆಗಿದ್ದರಿಂದ ಎಡ್ಮಂಡನ ಅನುಮಾನ ಮತ್ತಷ್ಟು ಹೆಚ್ಚಿತ್ತು. ಕಾಬ್ಲೆಜ್ ಎಂಬ ವ್ಯಕ್ತಿಯೊಬ್ಬ ಏನೂ ಕೆಲಸ ಮಾಡುವುದಿಲ್ಲ, ಆದರೆ ಅವನಿಗೆ ವಿದೇಶದಿಂದ ಯಾರೋ ಸಿಕ್ಕಾಪಟ್ಟೆ ದುಡ್ಡು ಕಳಿಸುತ್ತಿದ್ದಾರೆ. ಅಂದಮೇಲೆ ಅವನು ಗೂಢಚಾರನೇ ಹೌದು ಎಂದು ಎಡ್ಮಂಡ್ ಪತ್ರಕರ್ತ ಮಿತ್ರನೊಬ್ಬ ಹುಳಬಿಟ್ಟ. ಹೀಗೆ ವಿದೇಶದಿಂದ ಬಂದು ನೆಲೆಸಿದ ಕ್ಷೌರಿಕ, ಬಾರ್ ಮಾಲಿಕ, ಜರ್ಮನ್ ತರುಣಿಯನ್ನು ಮದುವೆ ಆಗಿದ್ದ ನಿವೃತ್ತ ಮಿಲಿಟರಿ ಅಧಿಕಾರಿ, ಒಬ್ಬ ಪೋಸ್ಟ್ ಮಾಸ್ಟರ್ ಎಲ್ಲರೂ ಅವನ ಗುಮಾನಿಕಣ್ಣಿಗೆ ಬೇಹುಗಾರರ ಹಾಗೆ ಕಾಣಿಸುತ್ತಾ ಹೋದರು. ಇವರ ಈ ವಿಚಿತ್ರ ನಡವಳಿಕೆಗಳನ್ನೂ ನಿರಾಧಾರ ತನಿಖೆಗಳನ್ನೂ ನೋಡಿದ ಹಾಲ್ಡೇನ್ ಕಣ್ಣಿಗೆ ಇದೆಲ್ಲ ದೊಡ್ಡ ತಮಾಷೆಯಂತೆ ಕಾಣಿಸತೊಡಗಿತು. ನಿಮ್ಮ ತನಿಖೆಗೆ ಯಾವ ಬಲವಾದ ಆಧಾರವೂ ಇಲ್ಲ. ಮಕ್ಕಳಾಟದಂತೆ ಇದೆಲ್ಲ ಕಾಣಿಸುತ್ತದೆ ಎಂದು ಆತ ತನ್ನ ಕೆಳ ಆಧಿಕಾರಿಗಳನ್ನೆಲ್ಲ ಕರೆದು ಗದರಿಸಿದ. ಬಲವಾದ ಸಾಕ್ಷ್ಯ ಇಲ್ಲದ ಹೊರತು ಯಾರನ್ನೂ ಬಂಧಿಸಬಾರದು, ವಿಚಾರಣೆ ಮಾಡಬಾರದು. ಹೀಗೆ ಮಾಡುತ್ತಾ ಹೋದರೆ ನಾವು ನಗೆಪಾಟಲಿಗೆ ಗುರಿಯಾಗುತ್ತೇವೆ ಎಂದು ಎಚ್ಚರಿಸಿದ. ಆತ ಹಾಗೆ ಎಚ್ಚರಿಸಿದ ಮೂರನೇ ದಿನಕ್ಕೆ ಸ್ವತಃ ಹಾಲ್ಡೈನ್ ಕೂಡ ಈ ಬೇಹುಗಾರರ ಪಿತೂರಿಗೆ ಒಳಗಾಗಬೇಕಾದ ಪರಿಸ್ಥಿತಿ ಬಂತು. ಅದಕ್ಕೆ ಕಾರಣ ಅವನಿಗೆ ಬಂದ ಒಂದು ಅನಾಮಧೇಯ ಪತ್ರ.  ]]>

‍ಲೇಖಕರು G

June 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This