ಜೋಗಿ ಸೀಕ್ರೆಟ್ ಡೈರಿ : ಬೇಹುಗಾರನ ಜೊತೆಗೊಬ್ಬಳು ಅರೆನಗ್ನ ಸುಂದರಿ

ಬೇಹುಗಾರನ ಜೊತೆಗೊಬ್ಬಳು ಅರೆನಗ್ನ ಸುಂದರಿ ಯಾಕಿರುತ್ತಾಳೆ ಅಂದರೆ…

– ಜೋಗಿ

ಜೇಮ್ಸ್ ಎಡ್ಮಂಡ್ಸ್ ಜರ್ಮನ್ನರು ಹೇಗೆ ಬೇಹುಗಾರಿಕೆ ಮಾಡುತ್ತಾರೆ. ಅವರ ಯೋಜನೆಗಳು ಎಷ್ಟು ಕರಾರುವಾಕ್ಕಾಗಿರುತ್ತದೆ ಅನ್ನುವುದನ್ನೆಲ್ಲ ಅಧ್ಯಯನ ಮಾಡಿಕೊಂಡು ಬಂದಿದ್ದ. ಕೆಲವೊಂದು ಮಾತುಗಳನ್ನು ಅವನು ಹೇಳಲೇಬೇಕಾಗಿತ್ತು. ಅವು ನಿಷ್ಠುರವಾದ ಮಾತುಗಳಾಗಿದ್ದರೂ ಹೇಳದೇ ವಿಧಿಯಿರಲಿಲ್ಲ. ತಾನು ಈ ಕ್ಷಣ ಆಡುವ ಮಾತಿನ ಮೇಲೆ ಬ್ರಿಟನ್ನಿನ್ನ ಗೂಢಚರ ಜಗತ್ತು ನಿಂತಿದೆ ಎಂಬುದು ಅವನಿಗೆ ಖಾತ್ರಿಯಾಗಿತ್ತು.

“ನನಗೆ ಜರ್ಮನರು ಏನು ಅನ್ನೋದು ಗೊತ್ತಿದೆ. ಅವರ ಸೈನ್ಯದಲ್ಲಿ ಕೆಲವು ಅಧಿಕಾರಿಗಳೂ ನನಗೆ ಗೊತ್ತು. ಜರ್ಮನ್ ಗೂಢಚರ ಸಂಸ್ಥೆಯ ಮುಖ್ಯಸ್ಥ ತುಂಬ ಬುದ್ಧಿವಂತ. ಅವನು ಇಡೀ ಇಂಗ್ಲೆಂಡನ್ನು ಇಪ್ಪತ್ತೋ ಮೂವತ್ತೋ ರಾಜ್ಯಗಳಾಗಿ ವಿಂಗಡಿಸಿದ್ದಾನೆ. ಪ್ರತಿ ರಾಜ್ಯಕ್ಕೂ ಒಬ್ಬ ಬೇಹುಗಾರಿಕಾ ಮುಖ್ಯಸ್ಥನನ್ನು ನೇಮಿಸಿದ್ದಾನೆ. ಪ್ರತಿಯೊಬ್ಬರ ಕೈ ಕೆಳಗೂ ಒಂದಷ್ಟು ಮಂದಿ ಏಜಂಟರಿರುತ್ತಾರೆ. ಈ ಏಜಂಟರು ಜರ್ಮನರೇ ಆಗಿರಬೇಕು ಅಂತೇನಿಲ್ಲ. ನಮ್ಮ ದೇಶದಲ್ಲಿ ನೆಲೆನಿಂತವರೂ ಆಗಿರಬಹುದು. ಬಂದು ಹೋಗುವ ಅಲೆಮಾರಿಗಳೂ ಆಗಿರಬಹುದು. ವ್ಯಾಪಾರಕ್ಕೆಂದು ಬಂದು ಹೋಗುವವರನ್ನೂ ಅವರು ಏಜಂಟರನ್ನಾಗಿ ಮಾಡಿಕೊಂಡಿದ್ದಾರೆ. ತೀರ ಸಹಜವೆಂಬ ಹಾಗೆ ಅವರು ಬಂದು ತಮಗೆ ಸಿಕ್ಕಿದ ಮಾಹಿತಿಗಳನ್ನೆಲ್ಲ ಕೊಂಡೊಯ್ಯುತ್ತಿರುತ್ತಾರೆ. ನಮ್ಮ ದೇಶದ ಭೂಪಟ, ಎಲ್ಲೆಲ್ಲಿ ಏನೇನಿದೆ ಎಂಬ ವಿವರ, ರಕ್ಷಣಾ ನೆಲೆಗಳು ಎಲ್ಲಿವೆ ಎಂಬ ಮಾಹಿತಿ ಎಲ್ಲವೂ ರವಾನೆಯಾಗುತ್ತಲೇ ಇರುತ್ತೆ. ಯುದ್ಧ ಶುರುವಾಗುತ್ತಿದ್ದಂತೆ ವೈರಿಗಳು ಮೊದಲು ದಾಳಿ ಮಾಡುವುದು ಬಂದರು, ವಿಮಾನ ನಿಲ್ದಾಣ ಮತ್ತು ರೇಲ್ವೇ ನಿಲ್ದಾಣಗಳ ಮೇಲೆ. ಅವುಗಳ ಪೂರ್ತಿ ವಿವರ ಅವರಿಗೆ ಈಗಾಗಲೇ ಸಿಕ್ಕಿರಬಹುದು. ನಮ್ಮ ಸಂಪರ್ಕ ವ್ಯವಸ್ಥೆಯನ್ನೂ ಕಡಿದುಹಾಕಲು ಪ್ರಮುಖ ಸೇತುವೆಗಳನ್ನೂ ಟೆಲಿಫೋನ್ ಎಕ್ಸ್‌ಚೇಂಜುಗಳನ್ನೂ ಅವರು ಗುರುತಿಸಿದ್ದಾರೆ.” ಇಷ್ಟು ಮಾತಾಡಿ ಎಡ್ಮಂಡ್ ಸುಮ್ಮನಾದ. ತನ್ನ ಮಾತುಗಳಿಂದ ಮುಂದೆ ಕುಳಿತವರ ಮೇಲೆ ಏನಾದರೂ ಪರಿಣಾಮ ಆಗಿದೆಯೋ ಎಂದು ಕಣ್ಣಂಚಲ್ಲೇ ಗಮನಿಸಿದ. ಅವರು ಕೊಂಚವೂ ವಿಚಲಿತರಾದಂತೆ ಅನ್ನಿಸಲಿಲ್ಲ. ಅವರನ್ನು ಒಪ್ಪಿಸಲೇಬೇಕು ಅನ್ನುವ ಧಾಟಿಯಲ್ಲಿ ಎಡ್ಮಂಡ್ ಮತ್ತಷ್ಟು ಮಾತಾಡಿದ. “ ಅಷ್ಟೇ ಅಲ್ಲ. ಜರ್ಮನರು ನಮಗಿಂತ ಬುದ್ಧಿವಂತರು. ಎಲ್ಲಾ ಆಯುಧಗಳಿಗಿಂತಲೂ ಪ್ರಬಲವಾದದ್ದು ಬೇಹುಗಾರಿಕೆ ಅನ್ನೋದು ಅವರಿಗೆ ಚೆನ್ನಾಗಿ ಗೊತ್ತು. ನಾವು ಹೀಗೇ ಇದ್ದರೆ ಫ್ರಾನ್ಸ್‌ಗೆ ಏನಾಯಿತೋ ಅದು ನಮಗೂ ಆಗುತ್ತದೆ. ಫ್ರಾನ್ಸ್ ಬೇಹುಗಾರಿಕೆಯನ್ನು ಕಡೆಗಣಿಸಿತ್ತು. ಆದರೆ ಯಾವಾಗ ಜರ್ಮನಿ ಅದರ ಮೇಲೆ ದಾಳಿ ಆರಂಭಿಸಿತೋ ಆಗ ಎದ್ದು ಬಿದ್ದೂ ಒಂದು ಮಿಲಿಯನ್ ಫ್ರಾಂಕ್ ಮಂಜೂರು ಮಾಡಿ ಬೇಹುಗಾರಿಕಾ ಸಂಸ್ಥೆಯನ್ನು ನೇಮಿಸಿಕೊಂಡಿತು. ಅದರ ಸಾರಥ್ಯ ವಹಿಸಿಕೊಂಡಿದ್ದ ಕರ್ನಲ್ ರಾಲಿನ್ ಎಷ್ಟೇ ಹಣ ಚೆಲ್ಲಿದರೂ ಏನೂ ಮಾಡಲಿಕ್ಕಾಗದು. ಬೆಂಕಿ ಬಿದ್ದ ಮೇಲೆ ಬಾವಿ ತೋಡೋ ವ್ಯಾಪಾರ ಇದಲ್ಲ. ಗುಪ್ತಚರ ಇಲಾಖೆ ಹಂತಹಂತವಾಗಿ ಬೆಳೆದುಬರಬೇಕು. ಮೂವತ್ತು ವರ್ಷಗಳ ಮುಂದಾಲೋಚನೆಯಲ್ಲಿ ನಾವು ಕೆಲಸ ಮಾಡಬೇಕು. ಇವತ್ತು ಜರ್ಮನಿಯಲ್ಲಿ ಏನಾಗುತ್ತಿದೆ ಅಂತ ತಿಳಿಯಬೇಕಿದ್ದರೆ ಕನಿಷ್ಠ ಇಪ್ಪತ್ತು ವರ್ಷಗಳ ಹಿಂದೆ ನಾವು ಅಲ್ಲಿ ಗೂಢಚರರನ್ನು ಬಿಟ್ಟಿರಬೇಕಾಗಿತ್ತು ಎಂದು ಬಿಟ್ಟ. ಜರ್ಮನರು ತಮ್ಮ ಏಜಂಟರನ್ನು ಹೇಗೆ ದುಡಿಸಿಕೊಳ್ಳುತ್ತಾರೆ ಅನ್ನುವುದೂ ನನಗೆ ಗೊತ್ತಿದೆ. ಅದರ ವಿವರಗಳು ಇಲ್ಲಿವೆ” ಎಂದು ತಾನು ತಂದಿದ್ದ ಫೈಲನ್ನು ಅವರ ಮುಂದಿಟ್ಟ, ಬೆಂಕಿಬಿದ್ದ ಮೇಲೆ ಬಾವಿ ತೋಡೋ ವ್ಯವಹಾರ ಅಲ್ಲ ಇದು ಅನ್ನುವ ಮಾತು ಮಾತ್ರ ಅಧಿಕಾರಿಗಳನ್ನು ತಟ್ಟಿತು. ಜೊತೆಗೆ ಎಡ್ಮಂಡ್ಸ್ ಕೊಟ್ಟ ಫೈಲಿನಲ್ಲಿ ಸಾಕಷ್ಟು ವಿವರಗಳಿದ್ದವು. ಏಜಂಟರನ್ನು ಜರ್ಮನರು ಹೇಗೆ ನೇಮಕ ಮಾಡುತ್ತಾರೆ. ಅವರಿಗೆ ಎಷ್ಟು ಸಂಬಳ ಕೊಡುತ್ತಾರೆ, ಏನೇನು ಸೌಲಭ್ಯ ಒದಗಿಸುತ್ತಾರೆ ಎಂಬ ವಿವರಗಳಿದ್ದವು. ಅವುಗಳನ್ನು ಜರ್ಮನ್ ಅಧಿಕಾರಿಯೊಬ್ಬರಿಂದ ತಾನು ತರಿಸಿಕೊಂಡೆ ಎಂದು ಎಡ್ಮಂಡ್ ಹೇಳಿದ್ದ. ವಾಸ್ತವದಲ್ಲಿ ಅದು ಸುಳ್ಳಾಗಿತ್ತು. ತನ್ನ ಗೂಢಚರ ಸಂಸ್ಥೆ ಹೇಗಿರಬೇಕು ಅನ್ನುವುದನ್ನು ಎಡ್ಮಂಡ್ ಯೋಚಿಸಿದ್ದ. ತನ್ನ ಏಜಂಟರಿಗೆ ಏನೇನು ಸೌಲಭ್ಯಗಳು ಬೇಕು ಅನ್ನುವುದನ್ನು ಲೆಕ್ಕ ಹಾಕಿದ್ದ. ತನ್ನ ಅನಿಸಿಕೆಯನ್ನೇ ಬರೆದು ಅಧಿಕಾರ ಮುಂದಿಟ್ಟು, ಅದು ಜರ್ಮನರಿಂದ ದೊರೆತ ವಿವರ ಅಂದಿದ್ದ. ಅದರಲ್ಲಿ ನಿಜಕ್ಕೂ ಕುತೂಹಲಕಾರಿ ವಿವರಗಳಿದ್ದವು. ಏಜಂಟರು ಯಾವ ಯಾವ ವಿಭಾಗಗಳಲ್ಲಿ ಇರಬೇಕು ಅನ್ನುವ ಮಾಹಿತಿ ಇತ್ತು. ವೈದ್ಯ, ಸರ್ಕಾರಿ ಅಧಿಕಾರಿ, ಪೊಲೀಸ್ ಅಧಿಕಾರಿ, ರೈತ, ವ್ಯಾಪಾರಿ, ಪತ್ರಕರ್ತ, ರೇಲ್ವೇ ಕೂಲಿ- ಹೀಗೆ ಬೇರೆ ಬೇರೆ ವೇಷಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಅವರು ಕಾರ್ಯನಿರ್ವಹಿಸುತ್ತಿರಬೇಕು. ವೈದ್ಯನಾದವನು ತನ್ನ ವೃತ್ತಿಗೆ ಸಂಬಂಧಿಸಿದ ಪುಸ್ತಕಗಳನ್ನು ಬಿಟ್ಟರೆ ಬೇರೆ ಯಾವ ಮಾಹಿತಿಯನ್ನೂ ಮನೆಯಲ್ಲಿಟ್ಟುಕೊಳ್ಳಕೂಡದು. ಸಿಕ್ಕ ಮಾಹಿತಿಯನ್ನೆಲ್ಲ ಬೇರೊಬ್ಬನ ಹೆಸರಿವಲ್ಲಿ ಸಂಸ್ಥೆಗೆ ಅಂಚೆ ಮುಖಾಂತರ ಕಳಿಸುತ್ತಿರಬೇಕು. ಬೆಳಗ್ಗೆ ಬೇಗ ಎದ್ದು ಕಾರ್ಯಾಚರಣೆ ಶುರುಮಾಡಬೇಕು. ಫೊಟೋಗ್ರಫಿಯಂಥ ಹವ್ಯಾಸ ಹೊಂದಿರಬೇಕು. ಎಲ್ಲಾ ದೇಶಪ್ರೇಮಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಬೇಕು. ದೇಶಪ್ರೇಮಿಯಂತೆ ನಡೆದುಕೊಳ್ಳಬೇಕು- ಹೀಗೆ ಅವನು ಹಲವಾರು ಮಾಹಿತಿಗಳನ್ನು ಕೊಟ್ಟಿದ್ದ. ಅವನ್ನು ಓದುತ್ತಿದ್ದಂತೆ ಅಧಿಕಾರಿಗಳ ಮುಖ ಅರಳಿತು. ಅವರಿಗೂ ಈ ಕುರಿತು ಮಾಹಿತಿಗಳಿದ್ದವು. ಇಂಗ್ಲೆಂಡಿನ ಹೋಟೆಲುಗಳಲ್ಲಿರುವ ಮಾಣಿಗಳೆಲ್ಲ ಜರ್ಮನ್ ಏಜಂಟರು ಎಂದು ಪುಕಾರು ಹಬ್ಬಿತ್ತು. ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸುವ ಹಾಗೇ ಇರಲಿಲ್ಲ. ಹಾಗೇ ಮತ್ತೊಂದಷ್ಟು ವದಂತಿಗಳನ್ನು ಸಂಗ್ರಹಿಸಿ ಅದು ನಿಜವೆಂಬಂತೆ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದ್ದು. ಆ ವರದಿಯಲ್ಲಿ ಇಂಗ್ಲೆಂಡಿನ ತುಂಬ 90000 ಜರ್ಮನ್ ಗೂಢಚರರಿದ್ದಾರೆ. ಅಪಾರ ಗುಂಡುಮದ್ದಿದೆ. ಎಲ್ಲಾ ಸೇತುವೆಗಳನ್ನೂ ಅವರು ಗುರುತಿಸಿದ್ದಾರೆ. ಯುದ್ಧ ಶುರುವಾಗುತ್ತಿದ್ದಂತೆ ದೇಶದ ಒಳಗಿರುವ ಮಂದಿಯೇ ಸಾಕಷ್ಟು ಹಾನಿ ಮಾಡುತ್ತಾರೆ ಎಂದೆಲ್ಲ ಬರೆಯಲಾಗಿತ್ತು. ಅದನ್ನು ಅಧಿಕಾರಿಯೊಬ್ಬ ಮೇಲದಿಕಾರಿಗಳ ಗಮನಕ್ಕೆ ತಂದಿದ್ದ. ಅವರನ್ನೆಲ್ಲ ಒದ್ದು ಹೊರಗೆ ಹಾಕೋದಕ್ಕೆ ಸಾಧ್ಯವಾ ಎಂದು ಅಧಿಕಾರಿಗಳು ಎಡ್ಮಂಡ್ಸ್ ಬಳಿ ಕೇಳಿದ್ದರು. ಎಡ್ಮಂಡ್ ಅದು ಸಾಧ್ಯವೇ ಇಲ್ಲ ಅಂದಿದ್ದ. ಯಾಕೆಂದರೆ ಅಸಂಖ್ಯಾತ ಬ್ಟಿಟಿಷರು ಜರ್ಮನಿಯನ್ನೂ ಇದ್ದರು. ಇಲ್ಲಿದ್ದವರನ್ನು ಒಧ್ದು ಹೊರಗೆ ಹಾಕುತ್ತಿದ್ದ ಹಾಗೆ, ಅಲ್ಲೂ ಅದೇ ಪ್ರಕ್ರಿಯೆ ಶುರುವಾಗುತ್ತದೆ. ಅದರಿಂದಾಗಿ ಲಕ್ಷಾಂತರ ನಿರಪರಾಧಿಗಳು ಒದ್ದಾಡುವಂತಾಗುತ್ತದೆ. ನಿಜವಾಗಿಯೂ ಗೂಢಚಾರ ಯಾರು ಎಂದು ಪತ್ತೆ ಹಚ್ಚುವ ವ್ಯವಸ್ಥೆ ಜಾರಿಗೆ ಬರದ ಹೊರತು ಏನೂ ನಡೆಯುವುದಿಲ್ಲ ಅಂತ ಎಡ್ಮಂಡ್ ಖಡಾಖಂಡಿತವಾಗಿ ಹೇಳಿಬಿಟ್ಟ. ಕೊನೆಯಲ್ಲಿ ಜರ್ಮನರು ಜಿಪುಣರಲ್ಲ. ಯಾವ ಕೆಲಸಕ್ಕೆ ಎಷ್ಟು ದುಡ್ಡು ಖರ್ಚು ಮಾಡಬೇಕು ಅನ್ನುವುದು ಅವರಿಗೆ ಗೊತ್ತಿದೆ. ಹೇಗೆ ಶಾಂತಿಯ ಸಮಯದಲ್ಲೂ ಸೈನ್ಯ ಸುಸ್ಥಿತಿಯಲ್ಲಿರುತ್ತದೋ ಹಾಗೇ, ಗೂಢಚರ ಸಂಸ್ಥೆಯೂ ಎಲ್ಲಾ ಕಾಲದಲ್ಲೂ ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ. ಅದನ್ನು ಅರ್ಥ ಮಾಡಿಕೊಂಡರೆ ದೇಶಕ್ಕೆ ಒಳ್ಳೆಯದು ಎಂದು ಮಾರ್ಮಿಕವಾಗಿ ಹೇಳಿ ಎದ್ದು ಹೋಗಿದ್ದ. ತಾನು ಹೇಳಿದ್ದನ್ನು ನಿರೂಪಿಸುವಂತೆ ಅಧಿಕಾರಿಗಳು ಕೇಳಿದ್ದರೆ, ಎಡ್ಮಂಡ್ ಸಿಕ್ಕಿಬೀಳುತ್ತಿದ್ದ. ಅವನಲ್ಲಿ ಯಾವ ಮಾಹಿತಿಯೂ ಇರಲಿಲ್ಲ. ಪುರಾವೆಗಳೂ ಇರಲಿಲ್ಲ. ಅವನ ಬಳಿ ದಂಡಿಯಾಗಿ ಇದ್ದದ್ದು ಕಲ್ಹನಾಶಕ್ತಿ. ಮುಂದೆ ಹೀಗೇ ಆಗಬಹುದು ಎಂದು ಊಹಿಸಬಲ್ಲವನಾಗಿದ್ದ ಎಡ್ಮಂಡ್ಸ್, ಗಾಳಿ ಸುದ್ದಿಗಳನ್ನು ತರ್ಕದ ಒರೆಗೆ ಹಚ್ಚಬಲ್ಲವನೂ ಆಗಿದ್ದ. ಶತ್ರು ಪ್ರಬಲನಾಗಿದ್ದಾನೆ ಎಂಬ ವಾದದ ಮೂಲಕ ನಾವು ಕೂಡ ಬಲಗೊಳ್ಳುವ ನಿರ್ಧಾರ ಕೈಗೊಳ್ಳಬಹುದು ಎಂದು ಭಾವಿಸಿದ್ದ. ಅವನ ವಾದವನ್ನು ವಿರೋಧಿಸುವ ಧೈರ್ಯ ಆ ಸಭೆಯಲ್ಲಿದ್ದ ಯಾರಿಗೂ ಇರಲಿಲ್ಲ. ಹೀಗಾಗಿ ಅವರೆಲ್ಲ ಸರ್ವಾನುಮತದಿಂದ ಬ್ರಿಟನ್ನಿಗೂ ಒಂದು ಸುಸಜ್ಜಿತ ಬೇಹುಗಾರಿಕಾ ಸಂಸ್ಥೆ ಬೇಕು ಎಂಬ ತೀರ್ಮಾನಕ್ಕೆ ಬಂದರು. ಅದಾದ ಕೆಲವು ವರ್ಷಗಳಲ್ಲೇ ಜರ್ಮನಿಯಲ್ಲಿ ನಿಕೊಲಾಯ್ ತನ್ನ ತಂಡವನ್ನು ಸುವ್ಯವಸ್ಥಿತಗೊಳಿಸಲು ಹೆಣಗಾಡುತ್ತಿದ್ದ. ಗೂಢಚರರಿಗೆ ಏನೇನು ಬೇಕು ಅನ್ನುವುದನ್ನೂ ಅವನು ಪಟ್ಟಿ ಮಾಡಿದ್ದ. ದೇಶ ಬಿಟ್ಟು ಮತ್ತೊಂದು ದೇಶಕ್ಕೆ ಗೂಢಚಾರಿಕೆಗೆ ಹೋಗುವವರ ಬಹುದೊಡ್ಡ ಸಮಸ್ಯೆ ಎಂದರೆ ಕಾಮ. ತಮ್ಮ ಕಾಮತೃಷೆಯನ್ನು ತೀರಿಸಿಕೊಳ್ಳಲು ಅವರು ವೇಶ್ಯೆಯರ ಬಳಿಗೆ ಹೋಗುತ್ತಿದ್ದರು. ಆ ವೇಶ್ಯೆಯರಲ್ಲಿ ಕೆಲವರು ಮಾಹಿತಿಗಳನ್ನು ಸಂಗ್ರಹಿಸಿ ಅದನ್ನು ಆಯಾ ದೇಶದ ಅಧಿಕಾರಿಗಳಿಗೆ ರವಾನಿಸುತ್ತಿದ್ದರು. ಹೀಗೆ ಬಾಯಿಬಿಟ್ಟದ್ದರಿಂದಲೇ ನೂರಾರು ಗೂಢಚರರು ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಿದ್ದರು. ನಿಕೊಲಾಯ್ ಹೀಗೆ ಫಕ್ಕನೆ ನಾಪತ್ತೆಯಾಗುವುದಕ್ಕೆ ಕಾರಣ ಏನಿರಬಹುದು ಎಂದು ಹುಡುಕುತ್ತಾ ಹೋದಾಗ ಅವನಿಗೆ ಗೂಢಚಾರಿಕೆ ಮತ್ತು ವೇಶ್ಯೆಯರ ನಡುವಿನ ಸಂಬಂಧ ಗೊತ್ತಾಯಿತು. ಆವತ್ತು ಕುಳಿತು ಅವನು ಮತ್ತೊಂದು ಯೋಜನೆ ರೂಪಿಸಿದ. ಜರ್ಮನ್ ವೇಶ್ಯೆಯರಿಗೆ ಕೈ ತುಂಬ ದುಡ್ಡು ಕೊಟ್ಟು, ಅವರನ್ನು ಗೂಢಚರ ಸಂಸ್ಥೆಯ ಏಜಂಟುಗಳನ್ನಾಗಿ ಮಾಡಿದ. ಪ್ರತಿಯೊಬ್ಬ ಗೂಢಚರನ ಜೊತೆ ಅವರನ್ನು ಸಹಾಯಕರನ್ನಾಗಿ ಕಳುಹಿಸಿದ. ಹಾಗೆ ಹೋದ ವೇಶ್ಯೆಯರು ಎರಡು ರೀತಿಯಲ್ಲಿ ಗೂಢಚಾರಿಕೆಗೆ ನೆರವಾದರು. ತಾವು ಸೇರಿದ ದೇಶದ ಗೂಢಚರರ ಕಾಮದಾಹವನ್ನು ಇಂಗಿಸುವ ಜೊತೆಗೇ, ಶತ್ರುರಾಷ್ಟ್ರಗಳ ಗೂಢಚರರ ಜೊತೆ ಸಂಪರ್ಕ ಬೆಳೆಸಿಕೊಂಡು ಮಹತ್ವದ ಮಾಹಿತಿಗಳನ್ನೂ ಸಂಗ್ರಹಿಸತೊಡಗಿದರು. ಹಣ, ರೋಚಕತೆ, ಪ್ರಯಾಣದ ಸುಖ, ಪ್ರಣಯಸುಖ- ಎಲ್ಲವೂ ಜೊತೆಜೊತೆಗೇ ಸಿಕ್ಕುತ್ತಿದ್ದುದರಿಂದ ಈ ವೇಶ್ಯೆಯರೇ ಗೂಢಚರರಿಗಿಂತ ಮೇಲು ಅನ್ನುವ ನಂಬಿಕೆಯನ್ನೂ ಹುಟ್ಟಿಸಿದರು. ಯುರೋಪಿಯನ್ ಸಿನಿಮಾಗಳಲ್ಲಿ ಗೂಢಚರನ ಜೊತೆ ಒಬ್ಬಳು ಸಹಾಯಕಿ ಸುಂದರಿಯೂ ಇರುವುದಕ್ಕೆ ಕಾರಣವಾದದ್ದು ಈ ಬೆಳವಣಿಗೆಯೇ.]]>

‍ಲೇಖಕರು G

May 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

3 ಪ್ರತಿಕ್ರಿಯೆಗಳು

  1. Manjunayaka

    Nice…..dubbing bagge suchitra dalli bareda lekhana odi khushiyayitu….nimage kannadada bagge iruva kalajige namma namana….kannadave satya kannadave nitya

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: