ಜೋಗಿ ಸೀಕ್ರೆಟ್ ಡೈರಿ : ಮನೆಮನೆಯೊಳಗೂ ಬೇಹುಗಾರರು

ಮನೆಮನೆಯೊಳಗೂ ಬೇಹುಗಾರರು ಆ ಪತ್ರ ಬಂದದ್ದೆಲ್ಲಿಂದ ಎಂಬುದು ಹಾಲ್ಡೇನನಿಗೆ ಸ್ಪಷ್ಟವಿರಲಿಲ್ಲ. ಆದರೆ ಅದರಲ್ಲಿ ಬರೆದಿದ್ದ ಸಂಗತಿಗಳು ಎಂಥವನನ್ನಾದರೂ ಕಂಗೆಡಿಸುವಂತಿದ್ದವು. ಅದನ್ನು ಅವನು ನಂಬುವುದೇ ಆಗಿದ್ದರೆ, ನಂಬದೇ ಇರುವುದಕ್ಕಂತೂ ಸಾಧ್ಯವೇ ಇರಲಿಲ್ಲ, ಅವನು ತಕ್ಷಣವೇ ತನ್ನ ಸೇನೆಯನ್ನು ಚುರುಕುಗೊಳಿಸಬೇಕಿತ್ತು. ಯಾವ ಕ್ಷಣದಲ್ಲಾದರೂ ಜರ್ಮನ್ ಸೇನೆ ಲಂಡನ್ನಿನ ಆಯಕಟ್ಟಿನ ಸ್ಥಳಗಳನ್ನು ಆವರಿಸಿಕೊಳ್ಳುವ ಅಪಾಯದ ಸುಳಿವು ಆ ಪತ್ರದಲ್ಲಿತ್ತು. ಅದರ ಜೊತೆಗೇ ಮತ್ತಷ್ಟು ಮಾಹಿತಿಗಳೂ ಇದ್ದವು. ಲಂಡನ್ನಿನ ಯಾವ ಯಾವ ಭಾಗದಲ್ಲಿ ಗುಪ್ತಚರರು ಬೀಡು ಬಿಟ್ಟಿದ್ದಾರೆ. ಅವರೇನೇನು ಮಾಹಿತಿ ಸಂಗ್ರಹಿಸಿದ್ದಾರೆ. ಯಾವ ಯಾವ ಬಂದರಿನ ಮೇಲೆ ಜರ್ಮನ್ ಸೇನೆ ಮುಗಿಬೀಳಲಿದೆ ಎಂಬುದನ್ನೆಲ್ಲ ಆ ಅನಾಮಿಕ ವಿವರವಾಗಿ ಬರೆದಿದ್ದ. ಆ ಪತ್ರವನ್ನು ಎಲ್ಲಿಂದ ಕಳುಹಿಸಲಾಗಿದೆ ಎಂಬ ವಿವರಗಳು ಲಭ್ಯವಿರಲಿಲ್ಲ. ಲಂಡನ್ನಿನ ಬೇಹುಗಾರನೊಬ್ಬ ಜರ್ಮನಿಯ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಿರುವುದಾಗಿಯೂ ಅದನ್ನು ಸದ್ಯದಲ್ಲೇ ಬರೆದು ಕಳುಹಿಸುವುದಾಗಿಯೂ ಕೆಲವು ದಿನಗಳ ಮೊದಲು ಹೇಳಿದ್ದ. ತಾನಿನ್ನು ಸಂಪರ್ಕಿಸುವುದು ಸಾಧ್ಯವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ, ಅದರ ಮೊದಲು ಮಾಹಿತಿ ಕಳುಹಿಸುತ್ತೇನೆ. ನನ್ನ ಪತ್ತೆ ಅವರಿಗೆ ಸಿಕ್ಕಿದೆ. ಯಾವ ಕ್ಷಣದಲ್ಲಿ ಬೇಕಾದರೂ ನಾನು ಸಾಯಬಹುದು ಎಂದೂ ಹೇಳಿದ್ದ. ಇದನ್ನು ಅವನೇ ಕಳುಹಿಸಿರಬಹುದಾ ಅನ್ನುವ ಅನುಮಾನ ಹಾಲ್ಡೇನನನ್ನು ಕಾಡದೇ ಹೋಗಲಿಲ್ಲ. ಬೇಹುಗಾರಿಕೆ ಜಗತ್ತಿನಲ್ಲಿ ನಂಬಿದರೂ ಕಷ್ಟ, ನಂಬದಿದ್ದರೂ ಕಷ್ಟ. ಅವನು ಸಂದೇಶ ಕಳುಹಿಸುವ ಹೊತ್ತಿಗೆ ಶತ್ರುರಾಷ್ಟ್ರದ ಕೈಗೆ ಸಿಕ್ಕಿರಬಹುದು. ಅವರೇ ಅವನ ಮೂಲಕ ಮಾಹಿತಿ ಕೊಡಿಸಿರಲಿಕ್ಕೂ ಸಾಕು. ಈಗ ಅವರೇ ತನ್ನ ದಾರಿ ತಪ್ಪಿಸಲಿಕ್ಕೆ ಹೀಗೊಂದಷ್ಟು ಮಾಹಿತಿ ಚೆಲ್ಲಿರಬಹುದು. ಉತ್ತರದಿಂದ ಸೇನೆ ನುಗ್ಗುತ್ತದೆ ಎಂದುಕೊಂಡು ಅತ್ತ ಕಾಲಿಟ್ಟರೆ, ದಕ್ಷಿಣದಿಂದ ದಾಳಿ ಶುರುವಾಗಬಹುದು. ಅಷ್ಟಕ್ಕೂ ಸೇನಾಧಿಕಾರಿಗಳು ತನ್ನ ಮಾತನ್ನು ನಂಬುತ್ತಾರೆ ಎಂಬ ಯಾವ ನಂಬಿಕೆಯೂ ಅವನಿಗಿರಲಿಲ್ಲ. ಅವರು ವಿವರಗಳನ್ನು ಕೇಳುತ್ತಾರೆ. ಪ್ರತಿಯೊಂದು ವಿವರಕ್ಕೂ ದಾಖಲೆಗಳನ್ನು ನೀಡಬೇಕು. ನೀನು ಹೇಳುತ್ತಿರುವುದಕ್ಕೆ ಆಧಾರ ಏನಿದೆ ಎಂದು ಪ್ರಶ್ನಿಸಿದರೆ, ತನ್ನಲ್ಲಿ ಉತ್ತರವಿಲ್ಲ. ಯಾರೋ ಹಾರಿಸಿದ ಗಾಳಿಪಟವನ್ನು ತೋರಿಸಿ ಮಾತಾಡಿದರೆ ಮರ್ಯಾದೆ ಇರುವುದಿಲ್ಲ. ಹಾಗಂತ ಯೋಚಿಸಿ ಅವನು ಆ ಪತ್ರವನ್ನು ನಿರ್ಲಕ್ಷಿಸುವ ನಿರ್ಧಾರ ಮಾಡಿದ. ಅಲ್ಲೂ ಅಪಾಯ ಕಾದಿತ್ತು. ಆತ ಯಾರಿಗೆಲ್ಲ ಪತ್ರ ಕಳುಹಿಸಿದ್ದಾನೆ ಎಂಬುದು ಗೊತ್ತಿರಲಿಲ್ಲ. ಅದನ್ನು ತನ್ನ ಮೇಲಧಿಕಾರಿಗಳಿಗೂ ಕಳುಹಿಸಿದ್ದರೆ ದೇಶವನ್ನು ನಿರ್ಲಕ್ಷಿಸಿದ ಅಪವಾದಕ್ಕೆ ಗುರಿಯಾಗಬೇಕಾಗುತ್ತದೆ. ಹಾಗಂತ ಯೋಚಿಸಿ ಅವನು ಆ ಪತ್ರದ ಜೊತೆ ಮತ್ತೊಂದು ಪತ್ರ ಬರೆದು ಅದನ್ನು ತನ್ನ ಮೇಲಧಿಕಾರಿಗಳಿಗೆ ಕಳುಹಿಸಿಕೊಟ್ಟ. ಅದು ಅವರಿಗೆ ತಲುಪಿದ ನಂತರ ಅವನು ಮತ್ತೊಂದು ಕಿರಿಕಿರಿ ಅನುಭವಿಸಬೇಕಾಗಿ ಬಂತು. ತನ್ನ ಪತ್ರದಲ್ಲಿ ಹಾಲ್ಡೇನ್ ಹೀಗೊಂದು ಪತ್ರ ಬಂದಿದೆಯೆಂದೂ ಅದರ ಸತ್ಯಾಸತ್ಯತೆಯನ್ನು ನಿರ್ಧರಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದೂ ಬರೆದಿದ್ದ. ಸತ್ಯಾಸತ್ಯತೆಯನ್ನು ಕಂಡುಹಿಡಿಯುವುದು ಬೇಹುಗಾರಿಕೆ ಇಲಾಖೆಯ ಕರ್ತವ್ಯ ಎಂದೂ ಅದಕ್ಕೆಂದೇ ಆ ಇಲಾಖೆಯ ಮೇಲೆ ಸರ್ಕಾರ ಅಷ್ಟೊಂದು ಹಣ ಖರ್ಚು ಮಾಡುತ್ತಿದೆಯೆಂದೂ ಯಾರೋ ಕಳುಹಿಸಿದ ಬೇನಾಮಿ ಪತ್ರವನ್ನು ಕಳುಹಿಸಿಕೊಟ್ಟು ಕೈತೊಳೆದುಕೊಳ್ಳಲು ನೋಡುವುದು ಕರ್ತವ್ಯ ಚ್ಯುತಿಯೆಂದೂ ಅವನನ್ನು ಖಂಡಿಸಲಾಯಿತು. ಇದನ್ನೆಲ್ಲ ನೋಡಿದ ನಂತರ ಬೇಹುಗಾರಿಕಾ ಇಲಾಖೆ ಅಸಮರ್ಥ ಅಂತ ಕರೆಸಿಕೊಳ್ಳುವುದೇ ವಿಪರೀತ ಕಾರ್ಯತತ್ಪರವಾಗುವುದಕ್ಕಿಂತ ಮೇಲು ಅನ್ನಿಸಿ ಅವನು ತನ್ನ ಅತ್ಯುತ್ಸಾಹವನ್ನೆಲ್ಲ ಕಳಕೊಂಡು ಬಿಟ್ಟ. ಆ ಹೊತ್ತಿಗಾಗಲೇ ಯುದ್ಧ ಘೋಷಣೆಯಾಗಿ ಹೋಗಿತ್ತು. ಹಾಲ್ಡೇನ್ ಕೈಗೆ ಸಿಕ್ಕ ಪತ್ರದಲ್ಲಿದ್ದ ಕೆಲವು ಮಾಹಿತಿಗಳು ಸತ್ಯ ಎನ್ನುವುದು ಅವನಿಗೂ ಗೊತ್ತಾಯಿತು. ಆದರೆ ಅಷ್ಟರಲ್ಲಾಗಲೇ ಶತ್ರು ಸೈನ್ಯ ಸಾಕಷ್ಟು ಮುನ್ನುಗ್ಗಿಯಾಗಿತ್ತು. ಹೋರಾಟದ ಹುಮ್ಮಸ್ಸು ಮಾತ್ರ ಕಾಣುತ್ತಿತ್ತೇ ವಿನಾ, ವಿಶ್ಲೇಷಿಸುವ, ಪರಾಮರ್ಶಿಸುವ, ತರ್ಕಕ್ಕೆ ಒಡ್ಡಿಕೊಳ್ಳುವ ಉತ್ಸಾಹ ಯಾರಿಗೂ ಇದ್ದಂತಿರಲಿಲ್ಲ. ಹೀಗಾಗಿ ಬೇಹುಗಾರಿಕಾ ಇಲಾಖೆ ಕಿಂಕರ್ತವ್ಯ ವಿಮೂಢವಾಗಿ ಕುಳಿತುಕೊಳ್ಳಬೇಕಾಯಿತು. ಮತ್ತೆ ಆ ಇಲಾಖೆಯತ್ತ ಎಲ್ಲರ ಗಮನ ಹರಿದದ್ದು ಎರಡನೆಯ ಮಹಾಯುದ್ಧ ಸಮೀಪಿಸುತ್ತಿದ್ದಾಗಲೇ. ಶಾಂತಿ ನೆಲೆಸಿರುವ ಹೊತ್ತಲ್ಲಿ, ಬೇಹುಗಾರಿಕೆ ಮಾಡುವುದಕ್ಕೆ ಹಣ ಕೊಡಿ ಎಂಬ ಕೂಗನ್ನು ಆ ನಂತರವೂ ಸರ್ಕಾರ ಕೇಳಲಿಲ್ಲ. ಯುದ್ಧಾನಂತರದ ದೇಶ ತತ್ತರಿಸಿ ಹೋಗಿ ಸೈನಿಕರನ್ನು ಸಾಕಿದರೆ ಸಾಕು ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಿರುವಾಗ ಈ ಬೇಹುಗಾರರೆಂಬ ಭವಿಷ್ಯಕಾರರ ಮೇಲೆ ಹಣ ವೆಚ್ಚ ಮಾಡುವುದಕ್ಕೆ ಯಾವ ದೇಶದ ಸರ್ಕಾರಕ್ಕೂ ಮನಸ್ಸಿರಲಿಲ್ಲ. ಆದರೆ ಅದನ್ನು ಯಶಸ್ವಿಯಾಗಿ ಮಾಡಿದ್ದು ರಷ್ಯಾ ಮತ್ತು ಇಸ್ರೇಲ್. ಅದೂ ಆನಂತರದ ದಿನಗಳಲ್ಲಿ. ಉಪಸಂಹಾರ ನೀವು ಇಲ್ಲಿಯ ತನಕ ಓದಿದ್ದು ಬೇಹುಗಾರಿಕೆ ಜಗತ್ತಿನ ಆರಂಭದ ಕತೆಯನ್ನು. ಬೇಹುಗಾರರ ಬದುಕು ಮತ್ತು ಅವರು ಆಡುತ್ತಿದ್ದ ಆಟಗಳನ್ನು ಕುರಿತ ವಿಸ್ತಾರವಾದ ಪುಸ್ತಕಗಳು ಬಂದಿವೆ. ಅನೇಕ ಸಿನಿಮಾಗಳು ಬಿಡುಗಡೆಯಾಗಿವೆ. ನಾನು ಮತ್ತು ಗೆಳೆಯ ವೀರೇಶ್ ಇತ್ತೀಚೆಗೆ ಶ್ರೀಲಂಕಾಕ್ಕೆ ಹೋಗಿದ್ದಾಗ, ಅಲ್ಲಿನ ಬೇಹುಗಾರರ ಪರಿಚಯವಾಗಿತ್ತು. ಅವರಿಗೆ ಅಂತಾರಾಷ್ಟ್ರೀಯ ಸ್ಥಾನಮಾನಗಳಿರಲಿಲ್ಲ. ಆಂತರಿಕವಾಗಿ ಮಾತ್ರ ಅವರು ಕಾರ್ಯನಿರ್ವಹಿಸುತ್ತಿದ್ದರು. ಅವರ ಪ್ರಮುಖ ಉದ್ದೇಶ ಯುದ್ಧವನ್ನು ತಡೆಯುವುದೋ ಭದ್ರತೆಯನ್ನು ಕಾಪಾಡುವುದೋ ಆಗಿರಲೇ ಇಲ್ಲ. ಶ್ರೀಲಂಕಾ ಇತ್ತೀಚಿನ ಕೆಲವು ವರ್ಷಗಳಲ್ಲಿ ಪ್ರವಾಸೀ ರಾಷ್ಟ್ರವಾಗಿ ತನ್ನನ್ನು ತೋರ್ಪಡಿಸಿಕೊಳ್ಳುವ ಉತ್ಸಾಹದಲ್ಲಿತ್ತು. ಕೊಲಂಬೋ ಪ್ರದೇಶದಲ್ಲಿ ಶಾಂತಿ ನೆಲೆಸಿದ್ದರೂ ಜಾಫ್ನಾದ ಮೇಲೆ ಸರ್ಕಾರಕ್ಕೆ ಅಂಥ ನಂಬಿಕೆ ಇರಲಿಲ್ಲ. ಹೀಗಾಗಿ ವಿದೇಶಿ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ಅನುರಾಧಾಪುರದ ಆಸುಪಾಸಿನ ಬುದ್ಧವಿಹಾರಗಳಿಗೆ, ಸೀಗೀರಿಯ ಬೆಟ್ಟಕ್ಕೆ ಅಪಾಯವಾಗಬಾರದು ಮತ್ತು ಅಲ್ಲಿಗೆ ಬರುವವರಿಗೆ ತೊಂದರೆ ಆಗಬಾರದು ಎಂದು ಶ್ರೀಲಂಕಾ ಅತೀವ ಎಚ್ಚರ ವಹಿಸಿತ್ತು. ಹೀಗಾಗಿ ಆ ಪ್ರದೇಶಕ್ಕೆ ಹೋಗುವ ಪ್ರವಾಸಿಗಳ ಮೇಲೆ ಸರ್ಕಾರ ನಿಗಾ ಇಡಲು ಗೂಢಚರ ಸಂಸ್ಥೆಗೆ ವಿಶೇಷವಾಗಿ ಮಾಹಿತಿ ನೀಡಿತ್ತು. ಅನುರಾಧಾಪುರದಲ್ಲಿ ನಿಮಗೆ ಸಿಗುವ ಗೈಡುಗಳೂ, ಅಲ್ಲಿಗೆ ನಿಮ್ಮನ್ನು ಕರೆದೊಯ್ಯುವ ಟ್ಯಾಕ್ಸಿ ಚಾಲಕರು ಕೂಡ ಬೇಹುಗಾರರೇ ಆಗಿರಬೇಕು ಎಂಬ ಗುಮಾನಿಯಲ್ಲೇ ನಾವು ಓಡಾಡಬೇಕಿತ್ತು. ನಮಗೆ ಆ ಗುಮಾನಿ ಬರುವುದಕ್ಕೆ ಕಾರಣವಾದದ್ದು ನಾವಿಳಿದುಕೊಂಡ ಹೊಟೆಲು. ಅದೊಂದು ಕಾಡಿನ ನಡುವೆ ಇದ್ದಂತಿತ್ತು. ಅಲ್ಲಿಗೆ ಹೋಗುವ ಬರುವ ದಾರಿ ಕೂಡ ಸ್ಪಷ್ಟವಾಗದಂತಿತ್ತು. ನಾವು ಅಲ್ಲಿಗೆ ಹೋಗುವ ಹೊತ್ತಿಗೆ, ಒಬ್ಬಾತ ತಾನಿಲ್ಲದ ಹೊತ್ತಲ್ಲಿ ತನ್ನ ಬ್ಯಾಗುಗಳನ್ನು ತಪಾಸಣೆ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದ. ಹೊಟೆಲಿನ ಮಂದಿ ತಮಗೇನೂ ಗೊತ್ತಿಲ್ಲ ಎಂಬಂತಿದ್ದರು ಅಲ್ಲಿ ಉಳಕೊಂಡ ಎರಡನೇ ದಿನಕ್ಕೆ ನಮಗೂ ಅಂಥದ್ದೇ ಅನುಭವವಾಯ್ತು. ನಮ್ಮ ಬ್ಯಾಗುಗಳೂ ತಪಾಸಣೆಯಾದ ಅನುಭವವಾಯ್ತು. ಅದು ನಮ್ಮ ಭ್ರಮೆಯೇ ಇರಬಹುದು ಅಂತಲೂ ಅನ್ನಿಸುತ್ತಿತ್ತು. ಆ ಪ್ರದೇಶ, ಅಲ್ಲಿಯ ಮಂದಿಯ ನಿಗೂಢ ವರ್ತನೆ, ಹೊಟೆಲ್ ಮಾಲಿಕ ನಮ್ಮ ಜೊತೆಗೇ ಬಂದು ಊಟಕ್ಕೆ ಕೂರುತ್ತಿದ್ದದ್ದು, ನಾವು ನಿಜಕ್ಕೂ ಪತ್ರಕರ್ತರು ಹೌದೋ ಅಲ್ಲವೋ ಎಂದು ಕಂಡುಹಿಡಿಯಲು ಹೆಣಗಾಡುತ್ತಿದ್ದದ್ದು- ಇವೆಲ್ಲ ಗೊತ್ತಾಗುವಂತಿತ್ತು. ಅವರ ಕಾಳಜಿಯೂ ಸಹಜವಾದದ್ದೇ. ನಿನ್ನೆ ಇಲ್ಲೆಲ್ಲೋ ಸ್ಪೋಟವಾಯಿತು ಅಂತಲೋ, ಉತ್ತರದಿಂದ ಯಾರೋ ಬಂದಿದ್ದಾರೆ ಅಂತಲೋ ಮಂದಿ ಮಾತಾಡಿಕೊಳ್ಳುತ್ತಿದ್ದರು. ಇದ್ದಕ್ಕಿದ್ದ ಹಾಗೆ ಏಳು ಗಂಟೆಗೆಲ್ಲ ಆ ಪ್ರದೇಶ ನಿರ್ಜನವಾಗಿಬಿಡುತ್ತಿತ್ತು. ಲಕ್ಷಾಂತರ ಎಕರೆ ಹಬ್ಬಿದ ಆ ಪ್ರದೇಶದಲ್ಲಿ ಯಾರು ಏನು ಮಾಡುತ್ತಾರೆ, ಎಲ್ಲಿಗೆ ಹೋಗುತ್ತಾರೆ ಅನ್ನುವುದನ್ನು ಊಹಿಸಲಿಕ್ಕೂ ಸಾಧ್ಯವಿರಲಿಲ್ಲ. ಒಂದು ಮಧ್ಯಾಹ್ನ ನಾವು ಹಸಿವೆ ತಾಳಲಾರದೆ ಒದ್ದಾಡುತ್ತಿದ್ದಾಗ, ಒಬ್ಬ ಟ್ಯಾಕ್ಸಿ ಚಾಲಕ ಬನ್ನಿ ಇಲ್ಲೊಂದು ಜಾಗವಿದೆ ಎಂದು ನಮ್ಮನ್ನು ಕಾಡಿನ ನಡುವಿರುವ ಜಾಗವೊಂದಕ್ಕೆ ಕರೆದೊಯ್ದ. ನಾವು ಒಳಗೆ ಹೋಗುತ್ತಿದ್ದಂತೆ ಅಲ್ಲಿ ಕೂತಿದ್ದ ಮಂದಿಯ ಮುಖದಲ್ಲಿ ಎದ್ದು ಕಾಣುವಂಥ ಪ್ರಶ್ನಾರ್ಥಕ ಚಿನ್ಹೆಗಳು. ಟ್ಯಾಕ್ಸಿ ಡ್ರೈವರು ತಲೆಯಾಡಿಸುತ್ತಾ ಇವರು ಅಪಾಯಕಾರಿಗಳಲ್ಲ ಎಂದು ಹೇಳಲು ಯತ್ನಿಸುತ್ತಿದ್ದಂತೆ ಕಂಡಿತು. ಅದಕ್ಕಿಂತ ಅಚ್ಚರಿಯಾಗಿ ಕಂಡಿದ್ದು, ಜನರೇ ಸುಳಿಯದ ಆ ಜಾಗದಲ್ಲಿ ಅಷ್ಟು ದೊಡ್ಡ ಹೊಟೆಲು ಯಾಕಿದೆ. ಅದಕ್ಕೊಂದು ಬೋರ್ಡು ಯಾಕಿಲ್ಲ. ಮತ್ತು ಅಲ್ಲಿ ಅಷ್ಟೊಂದು ಮಂದಿ ಕುಳಿತುಕೊಂಡು ಏನು ಮಾಡುತ್ತಿದ್ದಾರೆ? ನಾವು ಹೋದ ಉದ್ದೇಶವೂ ಕೊಂಚ ಹಾಗೇ ಇದ್ದುದರಿಂದ ಇದೆಲ್ಲ ಸಹಜವಾಗಿಯೇ ಕೂತೂಹಲಕಾರಿಯಾಗಿ ಕಾಣಿಸುತ್ತಿತ್ತು. ಪ್ರತಿಯೊಂದು ದೇಶವೂ ಇವತ್ತು ಆಂತರಿಕವಾಗಿಯೂ ಹೊರಗಿನಿಂದಲೂ ಅಪಾಯವನ್ನು ಎದುರಿಸುತ್ತಲೇ ಇದೆ. ಯಾರು ಯಾವ ಹೊತ್ತಿನಲ್ಲಿ ಏನು ಮಾಡುತ್ತಾರೆ ಎಂಬ ಪ್ರಶ್ನೆಯನ್ನು ಎಲ್ಲರೂ ಕೇಳಿಕೊಳ್ಳುತ್ತಲೇ ಇರುತ್ತಾರೆ. ಎಸ್. ಸುರೇಂದ್ರನಾಥ್ ಇತ್ತೀಚಿಗೆ ಬರೆದ ಬೆಂಕಿಬಾಕರು ನಾಟಕ ಕೂಡ ಇಂಥದ್ದೇ ಸಮಸ್ಯೆಯನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬನೂ ಬೇಹುಗಾರನೇ ಆಗಬೇಕಾದ ಕಾಲದಲ್ಲಿ ನಾವಿದ್ದೇವೆ. ರೇಡಿಯೋದಲ್ಲಂತೂ ಅಪರಿಚಿತರಿಗೆ ಮನೆ ಕೊಡಬೇಡಿ, ಅಪರಿಚಿತರನ್ನು ಒಳಗೆ ಸೇರಿಸಬೇಡಿ ಎಂಬಿತ್ಯಾದಿ ಎಚ್ಚರಿಕೆಯ ಮಾತುಗಳು ಕೇಳಿಸುತ್ತಲೇ ಇರುತ್ತವೆ. ಅಂದಿನ ಬೇಹುಗಾರಿಕೆಗೂ ಇಂದಿನ ಗೂಢಚಾರಿಕೆಗೂ ಸಾಕಷ್ಟು ವ್ಯತ್ಯಾಸವಿದೆ. ಈಗ ಬೇಹುಗಾರರು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮಾತ್ರ ಕಾಣಸಿಗುತ್ತಾರೆ. ಮುಂದುವರಿದ ದೇಶಗಳು ಕಂಪ್ಯೂಟರ್ ಪರದೆಯ ಮುಂದೆ ಕುಳಿತುಕೊಂಡು ಎಲ್ಲವನ್ನೂ ನೋಡುತ್ತಿರುತ್ತವೆ. ಬರಾಕ್ ಒಬಾಮಾನ ಚಟುವಟಿಕೆಯನ್ನು ಅಮೆರಿಕಾ ನಾಲ್ಕೈದು ತಿಂಗಳುಗಳ ಕಾಲ ಗಮನಿಸುತ್ತಿತ್ತು ಅಂದರೆ ಬೇಹುಗಾರಿಕೆ ಎಷ್ಟು ಪ್ರಭಾವಶಾಲಿಯಾಗಿದೆ ಎಂದು ಊಹಿಸಿ. ಪ್ರತಿಯೊಂದು ಮನೆಯನ್ನೂ ಹಾಗೇ ಕಣ್ಗಾವಲಿನಲ್ಲಿಡುವುದು ಕೂಡ ಕಷ್ಟವೇನಲ್ಲ. ಯಾವುದೋ ದೇಶದಿಂದ ಬಂದು ಬೀಳುವ ಟೀವಿಯೊಳಗೆ ಸೆಲ್ ಫೋನಿನೊಳಗೆ ಏನೇನು ಅಡಗಿದೆಯೋ ಯಾರಿಗೆ ಗೊತ್ತು. ನಾವು ಫೋನಲ್ಲಿ ಮಾತಾಡುತ್ತಿರುವ ಹೊತ್ತಿಗೇ, ಆಡಿದ ಮಾತನ್ನೆಲ್ಲ ಮತ್ತೊಂದು ಮೂಲಕ್ಕೆ ತಲುಪಿಸುವ ವ್ಯವಸ್ಥೆ ಇರಲಾರದು ಎಂದು ನಂಬುವ ಕಾಲದಲ್ಲಿ ನಾವಿಲ್ಲ.  ]]>

‍ಲೇಖಕರು G

June 11, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This